ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ತಡಮಾಡುವುದಿಲ್ಲ

ಯೆಹೋವನು ತಡಮಾಡುವುದಿಲ್ಲ

ಯೆಹೋವನು ತಡಮಾಡುವುದಿಲ್ಲ

“ತಡವಾದರೂ ಅದಕ್ಕೆ [ದರ್ಶನಕ್ಕೆ] ಕಾದಿರು; ಅದು ಬಂದೇ ಬರುವದು, ತಾಮಸವಾಗದು.”—ಹಬಕ್ಕೂಕ 2:3.

1. ಯೆಹೋವನ ಜನರು ಯಾವ ದೃಢನಿರ್ಧಾರವನ್ನು ಮಾಡಿದ್ದಾರೆ, ಮತ್ತು ಇದು ಏನು ಮಾಡುವಂತೆ ಅವರನ್ನು ಪ್ರಚೋದಿಸಿದೆ?

“ನನ್ನ ಕೋವರದಲ್ಲಿ ನಿಂತುಕೊಳ್ಳುವೆನು.” ಇದು ದೇವರ ಪ್ರವಾದಿಯಾದ ಹಬಕ್ಕೂಕನ ನಿರ್ಧಾರವಾಗಿತ್ತು. (ಹಬಕ್ಕೂಕ 2:1) 20ನೆಯ ಶತಮಾನದ ಯೆಹೋವನ ಜನರು ಸಹ ಅಂತಹದ್ದೇ ದೃಢನಿರ್ಧಾರವನ್ನು ಮಾಡಿದ್ದಾರೆ. ಆದುದರಿಂದ, 1922ರ ಸೆಪ್ಟೆಂಬರ್‌ನಲ್ಲಿ ನಡೆದ ಒಂದು ಐತಿಹಾಸಿಕ ಅಧಿವೇಶನದಲ್ಲಿ ಈ ಮುಂದಿನ ಕರೆಯು ಕೊಡಲ್ಪಟ್ಟಾಗ, ಅವರು ತುಂಬ ಹುರುಪಿನಿಂದ ಪ್ರತಿಕ್ರಿಯಿಸಿದ್ದಾರೆ: “ಇದು ಎಲ್ಲಾ ದಿನಗಳ ದಿನವಾಗಿದೆ. ನೋಡಿರಿ, ರಾಜನು ಆಳುತ್ತಾನೆ! ನೀವು ಅವನ ಪ್ರಚಾರ ಕಾರ್ಯದ ನಿಯೋಗಿಗಳು. ಆದಕಾರಣ ರಾಜನನ್ನೂ ಅವನ ರಾಜ್ಯವನ್ನೂ ಪ್ರಕಟಪಡಿಸಿರಿ, ಪ್ರಕಟಪಡಿಸಿರಿ, ಪ್ರಕಟಪಡಿಸಿರಿ.”

2. ಒಂದನೆಯ ಲೋಕ ಯುದ್ಧದ ಬಳಿಕ ಅಭಿಷಿಕ್ತ ಕ್ರೈಸ್ತರು ಪುನಃ ಹುರುಪಿನ ಚಟುವಟಿಕೆಯನ್ನು ಆರಂಭಿಸಿದಾಗ, ಅವರು ಏನನ್ನು ಪ್ರಕಟಿಸಲು ಶಕ್ತರಾದರು?

2 ಒಂದನೆಯ ಲೋಕ ಯುದ್ಧದ ಬಳಿಕ ಯೆಹೋವನು ನಂಬಿಗಸ್ತ ಅಭಿಷಿಕ್ತ ಉಳಿಕೆಯವರನ್ನು ಹುರುಪಿನ ಚಟುವಟಿಕೆಯ ಒಂದು ಸ್ಥಿತಿಗೆ ಪುನಸ್ಸ್ಥಾಪಿಸಿದನು. ಹಬಕ್ಕೂಕನಂತೆ ಅವರಲ್ಲಿ ಪ್ರತಿಯೊಬ್ಬರೂ ಹೀಗೆ ಪ್ರಕಟಿಸಲು ಶಕ್ತರಾದರು: “ನನ್ನ ಕೋವರದಲ್ಲಿ ನಿಂತುಕೊಳ್ಳುವೆನು, ಬುರುಜಿನ ಮೇಲೆ ನೆಲೆಯಾಗಿರುವೆನು, [“ಕಾವಲು ಇಡುವೆನು,” NW] ಯೆಹೋವನು ನನಗೆ ಏನು ಹೇಳುವನೋ . . . ಎಂದು ಎದುರುನೋಡುವೆನು.” “ಎದುರುನೋಡು” ಮತ್ತು “ಕಾವಲು” ಎಂಬುದಾಗಿ ತರ್ಜುಮೆಮಾಡಲಾದ ಹೀಬ್ರು ಪದಗಳು ಅನೇಕ ಪ್ರವಾದನೆಗಳಲ್ಲಿ ಪುನರಾವರ್ತಿಸಲ್ಪಟ್ಟಿವೆ.

“ತಾಮಸವಾಗದು”

3. ನಾವು ಏಕೆ ಎಚ್ಚರವಾಗಿರಬೇಕು?

3 ಯೆಹೋವನ ಸಾಕ್ಷಿಗಳು ಇಂದು ದೇವರ ಎಚ್ಚರಿಕೆಯ ಸಂದೇಶವನ್ನು ತಿಳಿಸುತ್ತಾ ಮುಂದುವರಿದಂತೆ, ಯೇಸುವಿನ ಮಹಾ ಪ್ರವಾದನೆಯ ಮುಕ್ತಾಯದ ಮಾತುಗಳಿಗೆ ಕಿವಿಗೊಡಲು ತುಂಬ ಜಾಗರೂಕರಾಗಿರಬೇಕು: “ಮನೇಯಜಮಾನನು ಸಂಜೆಯಲ್ಲೋ ಸರುಹೊತ್ತಿನಲ್ಲೋ ಕೋಳಿ ಕೂಗುವಾಗಲೋ ಮುಂಜಾನೆಯಲ್ಲೋ ಯಾವಾಗ ಬರುತ್ತಾನೋ ನಿಮಗೆ ಗೊತ್ತಿಲ್ಲದ ಕಾರಣ ಎಚ್ಚರವಾಗಿರಿ; ಅವನು ಏಕಾಏಕಿ ಬಂದು ನೀವು ನಿದ್ದೆ ಮಾಡುವದನ್ನು ಕಂಡಾನು. ನಾನು ನಿಮಗೆ ಹೇಳಿದ್ದನ್ನು ಎಲ್ಲರಿಗೂ ಹೇಳುತ್ತೇನೆ. ಎಚ್ಚರವಾಗಿರಿ.” (ಮಾರ್ಕ 13:35-37) ಹಬಕ್ಕೂಕನಂತೆ, ಮತ್ತು ಯೇಸುವಿನ ಮಾತುಗಳಿಗನುಸಾರ ನಾವು ಸಹ ಎಚ್ಚರವಾಗಿರಬೇಕು!

4. ಸುಮಾರು ಸಾ.ಶ.ಪೂ. 628ರಲ್ಲಿ ಹಬಕ್ಕೂಕನ ದಿನದಲ್ಲಿದ್ದ ಸನ್ನಿವೇಶಕ್ಕೂ ನಮ್ಮ ಸನ್ನಿವೇಶಕ್ಕೂ ಹೇಗೆ ಹೋಲಿಕೆಯಿದೆ?

4 ಹಬಕ್ಕೂಕನು ತನ್ನ ಪುಸ್ತಕವನ್ನು ಸುಮಾರು ಸಾ.ಶ.ಪೂ. 628ರಲ್ಲಿ, ಅಂದರೆ ಬಾಬೆಲ್‌ ಒಂದು ಪ್ರಧಾನ ಲೋಕ ಶಕ್ತಿಯಾಗುವುದಕ್ಕೆ ಮುಂಚೆಯೇ ಬರೆದು ಮುಗಿಸಿದ್ದಿರಬಹುದು. ಧರ್ಮಭ್ರಷ್ಟ ಯೆರೂಸಲೇಮಿನ ಮೇಲೆ ಬರಲಿದ್ದ ಯೆಹೋವನ ನ್ಯಾಯತೀರ್ಪಿನ ಕುರಿತಾದ ಎಚ್ಚರಿಕೆಯು ಅನೇಕ ವರ್ಷಗಳಿಂದ ಕೊಡಲ್ಪಡುತ್ತಾ ಇತ್ತು. ಆದರೂ, ಆ ನ್ಯಾಯತೀರ್ಪು ಯಾವಾಗ ಜಾರಿಗೊಳಿಸಲ್ಪಡುವುದು ಎಂಬುದರ ಬಗ್ಗೆ ಸ್ಪಷ್ಟವಾದ ಯಾವುದೇ ಸೂಚನೆಯು ಕೊಡಲ್ಪಟ್ಟಿರಲಿಲ್ಲ. ಅದು ಇನ್ನೂ 21 ವರ್ಷಗಳ ನಂತರ ನಡೆಯಲಿತ್ತೆಂದು ಮತ್ತು ಬಾಬೆಲ್‌ ಯೆಹೋವನ ವಧಕಾರನಾಗಿ ಕಾರ್ಯನಡಿಸಲಿಕ್ಕಿತ್ತೆಂದು ಯಾರು ತಾನೇ ನಂಬಸಾಧ್ಯವಿತ್ತು? ತದ್ರೀತಿಯಲ್ಲಿ ಇಂದು ನಮಗೆ ಈ ವ್ಯವಸ್ಥೆಯ ಅಂತ್ಯಕ್ಕಾಗಿ ನಿಗದಿಪಡಿಸಲ್ಪಟ್ಟಿರುವ ‘ಆ ದಿನ ಮತ್ತು ಗಳಿಗೆಯ’ ವಿಷಯವಾಗಿ ಏನೂ ತಿಳಿದಿಲ್ಲ. ಆದರೆ ಯೇಸು ನಮಗೆ ಈ ಮುನ್ನೆಚ್ಚರಿಕೆಯನ್ನು ಕೊಟ್ಟಿದ್ದಾನೆ: “ಆದಕಾರಣ ನೀವು ಸಹ ಸಿದ್ಧವಾಗಿರ್ರಿ; ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ.”—ಮತ್ತಾಯ 24:36, 44.

5. ಹಬಕ್ಕೂಕ 2:2, 3ರಲ್ಲಿ ದಾಖಲಿಸಲ್ಪಟ್ಟಿರುವ ದೇವರ ಪ್ರವಾದನ ನುಡಿಗಳ ವಿಷಯದಲ್ಲಿ ಯಾವುದು ವಿಶೇಷವಾಗಿ ಉತ್ತೇಜನದಾಯಕವಾಗಿದೆ?

5 ಸಕಾರಣದಿಂದಲೇ, ಯೆಹೋವನು ಹಬಕ್ಕೂಕನಿಗೆ ಈ ಪ್ರೋತ್ಸಾಹದಾಯಕ ನಿಯೋಗವನ್ನು ಕೊಟ್ಟನು: “ನಿನಗಾದ ದರ್ಶನವನ್ನು ಬರೆ; ಓದುವವರು ಶೀಘ್ರವಾಗಿ ಓದುವಂತೆ ಹಲಿಗೆಗಳ ಮೇಲೆ ಅದನ್ನು ಕೆತ್ತು. ಅದು ಕ್ಲುಪ್ತಕಾಲದಲ್ಲಿ ನೆರವೇರತಕ್ಕದ್ದು, ಆದರೆ ಪರಿಣಾಮಕ್ಕೆ ತ್ವರೆಪಡುತ್ತದೆ, ಮೋಸ ಮಾಡದು; ತಡವಾದರೂ ಅದಕ್ಕೆ ಕಾದಿರು; ಅದು ಬಂದೇ ಬರುವದು, ತಾಮಸವಾಗದು.” (ಹಬಕ್ಕೂಕ 2:2, 3) ಇಂದು, ಭೂಮಿಯಾದ್ಯಂತ ದುಷ್ಟತನ ಮತ್ತು ಹಿಂಸಾಚಾರವು ತುಂಬಿತುಳುಕುತ್ತಿದೆ; ಇದು ನಾವು ‘ಯೆಹೋವನ ಆಗಮನದ ಭಯಂಕರವಾದ ಮಹಾದಿನದ’ ಹೊಸ್ತಿಲಲ್ಲೇ ನಿಂತಿದ್ದೇವೆ ಎಂಬುದನ್ನು ಸೂಚಿಸುತ್ತದೆ. (ಯೋವೇಲ 2:31) “ಅದು ತಾಮಸವಾಗದು” ಎಂಬ ಯೆಹೋವನ ಆಶ್ವಾಸನೆಯ ಮಾತುಗಳು ನಿಜವಾಗಿಯೂ ಉತ್ತೇಜನದಾಯಕವಾಗಿವೆ!

6. ಬರಲಿಕ್ಕಿರುವ ನ್ಯಾಯತೀರ್ಪಿನ ದಿನದಿಂದ ನಾವು ಹೇಗೆ ಪಾರಾಗಿ ಉಳಿಯಬಹುದು?

6 ಹಾಗಾದರೆ, ಬರಲಿಕ್ಕಿರುವ ಆ ನ್ಯಾಯತೀರ್ಪಿನ ದಿನದಿಂದ ನಾವು ಹೇಗೆ ಪಾರಾಗಿ ಉಳಿಯಬಹುದು? ನೀತಿವಂತರ ಹಾಗೂ ಅನೀತಿವಂತರ ನಡುವಿನ ವ್ಯತ್ಯಾಸವನ್ನು ತೋರಿಸುವ ಮೂಲಕ ಯೆಹೋವನು ಉತ್ತರಿಸುತ್ತಾನೆ: “ಇಗೋ, ಆ ದುಷ್ಟನ ಅಂತರಾತ್ಮವು ಉಬ್ಬಿಕೊಂಡಿದೆ, ಯಥಾರ್ಥವಲ್ಲ; ನೀತಿವಂತನೋ ತನ್ನ ನಂಬಿಕೆಯಿಂದಲೇ ಬದುಕುವನು.” (ಹಬಕ್ಕೂಕ 2:4) ಅಹಂಕಾರಿಗಳೂ ಲೋಭಿಗಳೂ ಆದ ಅರಸರು ಮತ್ತು ಜನರು, ವಿಶೇಷವಾಗಿ ಎರಡು ಲೋಕ ಯುದ್ಧಗಳು ಮತ್ತು ಕುಲಸಂಬಂಧಿತ ರಕ್ತಪಾತಗಳ ಮೂಲಕ, ಲಕ್ಷಗಟ್ಟಲೆ ನಿರಪರಾಧಿಗಳ ರಕ್ತದಿಂದ ಆಧುನಿಕ ಇತಿಹಾಸದ ಪುಟಗಳನ್ನು ತೋಯಿಸಿದ್ದಾರೆ. ಇದಕ್ಕೆ ತದ್ವಿರುದ್ಧವಾಗಿ, ದೇವರ ಶಾಂತಿಪ್ರಿಯ ಅಭಿಷಿಕ್ತ ಸೇವಕರು ನಂಬಿಗಸ್ತಿಕೆಯಿಂದ ತಾಳಿಕೊಂಡಿದ್ದಾರೆ. ಅವರು “ಧರ್ಮಸತ್ಯಗಳನ್ನು ಕೈಕೊಳ್ಳುವ ಜನಾಂಗ”ವಾಗಿದ್ದಾರೆ. ಈ ಜನಾಂಗ ಮತ್ತು ಅದರ ಸಂಗಾತಿಗಳಾಗಿರುವ “ಬೇರೆ ಕುರಿ”ಗಳು, ಈ ಬುದ್ಧಿವಾದಕ್ಕನುಸಾರವಾಗಿ ನಡೆದುಕೊಳ್ಳುತ್ತಾರೆ: “ಯೆಹೋವನಲ್ಲಿ ಸದಾ ಭರವಸವಿಡಿರಿ; ಯಾಹುಯೆಹೋವನು ಶಾಶ್ವತವಾಗಿ ಆಶ್ರಯಗಿರಿಯಾಗಿದ್ದಾನೆ.”—ಯೆಶಾಯ 26:2-4; ಯೋಹಾನ 10:16.

7. ಹಬಕ್ಕೂಕ 2:4ರ ಮಾತುಗಳನ್ನು ಪೌಲನು ಉಪಯೋಗಿಸಿದ್ದಕ್ಕೆ ಹೊಂದಿಕೆಯಲ್ಲಿ, ನಾವು ಏನು ಮಾಡತಕ್ಕದ್ದು?

7 ಅಪೊಸ್ತಲ ಪೌಲನು ಇಬ್ರಿಯ ಕ್ರೈಸ್ತರಿಗೆ ಪತ್ರವನ್ನು ಬರೆಯುವಾಗ ಹಬಕ್ಕೂಕ 2:4ನ್ನು ಉದ್ಧರಿಸುತ್ತಾ ಯೆಹೋವನ ಜನರಿಗೆ ಹೀಗೆ ಹೇಳಿದನು: “ದೇವರ ಚಿತ್ತವನ್ನು ನೆರವೇರಿಸಿ ವಾಗ್ದಾನದ ಫಲವನ್ನು ಹೊಂದಬೇಕಾದರೆ ನಿಮಗೆ ತಾಳ್ಮೆ ಬೇಕು. ಬರುವಾತನು ಇನ್ನು ಸ್ವಲ್ಪಕಾಲದಲ್ಲಿ ಬರುವನು, ತಡಮಾಡುವದಿಲ್ಲ; ಆದರೆ ನನ್ನವನಾಗಿರುವ ನೀತಿವಂತನು ನಂಬಿಕೆಯಿಂದಲೇ ಬದುಕುವನು; ಅವನು ಹಿಂದೆಗೆದರೆ ಅವನಲ್ಲಿ ನನಗೆ ಸಂತೋಷವಿರುವದಿಲ್ಲ.” (ಇಬ್ರಿಯ 10:36-38) ನಮ್ಮ ಕಾರ್ಯವನ್ನು ನಿಧಾನಗೊಳಿಸುವುದಕ್ಕಾಗಲಿ ಇಲ್ಲವೆ ಪ್ರಾಪಂಚಿಕತೆ ಮತ್ತು ಸೈತಾನನ ಲೋಕದ ಭೋಗಾಸಕ್ತ ರೀತಿನೀತಿಗಳಿಂದ ತಪ್ಪು ದಾರಿಯನ್ನು ಹಿಡಿಯುವುದಕ್ಕಾಗಲಿ ಸಮಯವು ಇದಾಗಿರುವುದಿಲ್ಲ. ಉಳಿದಿರುವ “ಸ್ವಲ್ಪಕಾಲದಲ್ಲಿ” ನಾವು ಏನು ಮಾಡಬೇಕು? ಪೌಲನಂತೆ, ಯೆಹೋವನ ಪವಿತ್ರ ಜನಾಂಗದವರಾದ ನಾವು ‘ಮುಂದಿನವುಗಳನ್ನು ಹಿಡಿಯುವದಕ್ಕೆ ಎದೆಬೊಗ್ಗಿದವರಾಗಿ’ ನಿತ್ಯಜೀವದ ಗುರಿಯನ್ನು ಸಾಧಿಸಲು ಪ್ರಯತ್ನಿಸಬೇಕು. (ಫಿಲಿಪ್ಪಿ 3:13, 14) ಅಷ್ಟುಮಾತ್ರವಲ್ಲ, ಯೇಸುವಿನಂತೆ ನಾವು ಸಹ ‘ನಮ್ಮ ಮುಂದೆ ಇಟ್ಟಿರುವ ಸಂತೋಷಕ್ಕೋಸ್ಕರ . . . ಎಲ್ಲವನ್ನೂ ಸಹಿಸಿಕೊಳ್ಳಬೇಕು.’—ಇಬ್ರಿಯ 12:2.

8. ಹಬಕ್ಕೂಕ 2:5ರಲ್ಲಿ ತಿಳಿಸಲ್ಪಟ್ಟಿರುವ “ಮನುಷ್ಯನು” ಯಾರಾಗಿದ್ದಾನೆ, ಮತ್ತು ಅವನು ಏಕೆ ಸಫಲನಾಗುವುದೇ ಇಲ್ಲ?

8 ‘ಒಬ್ಬ ಗಟ್ಟಿಮುಟ್ಟಾದ ಮನುಷ್ಯನ’ ಕುರಿತು ಹಬಕ್ಕೂಕ 2:5 (NW) ವರ್ಣಿಸುತ್ತದೆ. ಇವನು ಯೆಹೋವನ ಸೇವಕರಿಗೆ ವ್ಯತಿರಿಕ್ತವಾಗಿದ್ದು, “ತನ್ನ ಪ್ರಾಣವನ್ನು ಪಾತಾಳದಷ್ಟು ವಿಶಾಲಮಾಡಿ”ಕೊಂಡಿದ್ದರೂ, ತನ್ನ ಗುರಿಯನ್ನು ಸಾಧಿಸುವುದರಲ್ಲಿ ವಿಫಲನಾಗಿದ್ದಾನೆ. ‘ತೃಪ್ತಿಯೇ ಇಲ್ಲದ’ ಈ ಮನುಷ್ಯನು ಯಾರಾಗಿದ್ದಾನೆ? ಹಬಕ್ಕೂಕನ ಸಮಯದ ಅತ್ಯಾಶೆಯುಳ್ಳ ಬಾಬೆಲಿನಂತೆ, ಫ್ಯಾಸಿಸ್ಟರು, ನಾಸಿಗಳು, ಕಮ್ಯೂನಿಸ್ಟರು ಅಥವಾ ನಾಮಮಾತ್ರದ ಪ್ರಜಾಪ್ರಭುತ್ವಗಳೂ ಆಗಿರಬಹುದಾದ ರಾಜಕೀಯ ಶಕ್ತಿಗಳಿಂದ ಉಂಟಾಗಿರುವ ಈ ಸಂಘಟಿತ “ಮನುಷ್ಯನು,” ತನ್ನ ದೇಶಗಳನ್ನು ವಿಸ್ತರಿಸಲಿಕ್ಕಾಗಿ ಯುದ್ಧಗಳನ್ನು ಮಾಡುತ್ತಾನೆ. ಅಷ್ಟುಮಾತ್ರವಲ್ಲ, ಅವನು ಪಾತಾಳ ಇಲ್ಲವೆ ಸಮಾಧಿಯನ್ನು ನಿರಪರಾಧಿಗಳಿಂದ ತುಂಬಿಸುತ್ತಾನೆ. ಆದರೆ ಸೈತಾನನ ಲೋಕದ ಈ ಮೋಸಕರ ಸಂಘಟಿತ “ಮನುಷ್ಯನು” ಆತ್ಮಭರವಸೆಯಿಂದ ಮತ್ತೇರಿದವನಾಗಿದ್ದರೂ, ‘ಸಕಲ ಜನರನ್ನು ಎಳೆದುಕೊಳ್ಳುವುದರಲ್ಲಿ, ಸಮಸ್ತ ಜನಾಂಗಗಳನ್ನು ರಾಶಿಮಾಡಿಕೊಳ್ಳುವುದರಲ್ಲಿ’ ಸಫಲನಾಗುವುದೇ ಇಲ್ಲ. ಯೆಹೋವ ದೇವರು ಮಾತ್ರ ಸಕಲ ಮಾನವಕುಲವನ್ನು ಐಕ್ಯಗೊಳಿಸಬಲ್ಲನು, ಮತ್ತು ತನ್ನ ಮೆಸ್ಸೀಯ ರಾಜ್ಯದ ಮುಖಾಂತರ ಈ ಕೆಲಸವನ್ನು ಪೂರೈಸುವನು.—ಮತ್ತಾಯ 6:9, 10.

ಐದು ನಾಟಕೀಯ ವಿಪತ್ತುಗಳಲ್ಲಿ ಮೊದಲನೆಯದ್ದು

9, 10. (ಎ) ತದನಂತರ ಹಬಕ್ಕೂಕನ ಮೂಲಕ ಯೆಹೋವನು ಏನನ್ನು ಪ್ರಕಟಿಸಿದನು? (ಬಿ) ಅನೀತಿಯ ಲಾಭದ ವಿಷಯದಲ್ಲಿ ಇಂದಿನ ಸನ್ನಿವೇಶವು ಹೇಗಿದೆ?

9 ತನ್ನ ಪ್ರವಾದಿಯಾದ ಹಬಕ್ಕೂಕನ ಮೂಲಕ ಯೆಹೋವನು ಅನುಕ್ರಮವಾಗಿ ಐದು ವಿಪತ್ತುಗಳನ್ನು ಪ್ರಕಟಿಸುತ್ತಾನೆ. ಇವು ಭೂಮಿಯನ್ನು, ದೇವರ ನಂಬಿಗಸ್ತ ಆರಾಧಕರ ನಿವಾಸಕ್ಕಾಗಿ ಸಿದ್ಧಗೊಳಿಸುವ ಉದ್ದೇಶದಿಂದ ಕಾರ್ಯರೂಪಕ್ಕೆ ತರಲ್ಪಡಬೇಕಾದ ನ್ಯಾಯತೀರ್ಪುಗಳಾಗಿವೆ. ಅಂತಹ ಪ್ರಾಮಾಣಿಕ ಹೃದಯದ ಜನರು ಯೆಹೋವನು ಸಾದರಪಡಿಸುವ “ಪ್ರಸ್ತಾಪ”ವನ್ನು ಎತ್ತುತ್ತಾರೆ. ಹಬಕ್ಕೂಕ 2:6ರಲ್ಲಿ ನಾವು ಓದುವುದು: “ಅಯ್ಯೋ, ತನ್ನದಲ್ಲದ್ದನ್ನು ಹೆಚ್ಚೆಚ್ಚಾಗಿ ಕೂಡಿಸಿಕೊಂಡು ಅಡವುಗಳನ್ನು ಹೊರೆಹೊರೆಯಾಗಿ ಇಟ್ಟುಕೊಳ್ಳುವವನ ಗತಿಯನ್ನು ಏನು ಹೇಳಲಿ! ಅವನು ಎಷ್ಟು ಕಾಲ ಹೀಗೆ ಮಾಡಾನು!”

10 ಇಲ್ಲಿ ಅನೀತಿಯ ಲಾಭದ ಮೇಲೆ ಹೆಚ್ಚು ಒತ್ತನ್ನು ಹಾಕಲಾಗಿದೆ. ನಮ್ಮ ಸುತ್ತಲೂ ಇರುವ ಲೋಕದಲ್ಲಿ, ಶ್ರೀಮಂತರು ಇನ್ನೂ ಹೆಚ್ಚು ಶ್ರೀಮಂತರಾಗುತ್ತಾರೆ ಮತ್ತು ಬಡವರು ಮತ್ತಷ್ಟೂ ಬಡವರಾಗುತ್ತಾರೆ. ಅಮಲೌಷಧ ವ್ಯಾಪಾರಿಗಳು ಮತ್ತು ವಂಚಕರು ಬಹಳಷ್ಟು ಸ್ವತ್ತನ್ನು ಕೂಡಿಸಿಕೊಳ್ಳುವಾಗ, ಜನಸಾಮಾನ್ಯರಲ್ಲಿ ಹೆಚ್ಚಿನವರು ಹೊಟ್ಟೆಗಿಲ್ಲದೆ ಸಾಯುತ್ತಿದ್ದಾರೆ. ಲೋಕದ ಜನಸಂಖ್ಯೆಯ ನಾಲ್ಕನೇ ಒಂದು ಭಾಗದಷ್ಟು ಜನರು ಕಡುಬಡತನದ ಬೇಗೆಯಲ್ಲಿ ಬೇಯುತ್ತಿದ್ದಾರೆಂದು ಹೇಳಲಾಗುತ್ತದೆ. ಅನೇಕ ದೇಶಗಳಲ್ಲಿ ಜೀವನ ಪರಿಸ್ಥಿತಿಗಳು ತುಂಬ ಎದೆಗುಂದಿಸುವಂತಿವೆ. ಭೂಮಿಯ ಮೇಲೆ ನೀತಿಗಾಗಿ ಹಾತೊರೆಯುವ ಜನರು ಹೀಗೆ ಘೋಷಿಸುತ್ತಾರೆ: ಈ ಅನ್ಯಾಯಗಳು “ಎಷ್ಟು ಕಾಲ”ದಿಂದ ಹೆಚ್ಚುತ್ತಾ ಇವೆ! ಆದರೆ, ಅಂತ್ಯವು ತೀರ ಸಮೀಪವಿದೆ! ಖಂಡಿತವಾಗಿಯೂ ದರ್ಶನವು “ತಾಮಸವಾಗದು.”

11. ಮಾನವ ರಕ್ತವನ್ನು ಸುರಿಸುವುದರ ಕುರಿತು ಹಬಕ್ಕೂಕನು ಏನು ಹೇಳಿದನು, ಮತ್ತು ಇಂದು ಸಹ ಭೂಮಿಯಲ್ಲಿ ತುಂಬ ರಕ್ತಾಪರಾಧವು ನಡೆಯುತ್ತಿದೆ ಎಂದು ನಾವೇಕೆ ಹೇಳಸಾಧ್ಯವಿದೆ?

11 ಪ್ರವಾದಿಯು ದುಷ್ಟನಿಗೆ ಹೇಳುವುದು: “ನೀನು ಬಹು ಜನಾಂಗಗಳನ್ನು ಕೊಳ್ಳೆಹೊಡೆದು ಮನುಷ್ಯರ ರಕ್ತವನ್ನು ಸುರಿಸಿ ದೇಶವನ್ನೂ ಪುರವನ್ನೂ ಅವುಗಳ ನಿವಾಸಿಗಳೆಲ್ಲರನ್ನೂ ಹಿಂಸಿಸಿದ ಕಾರಣ ಜನಾಂಗಗಳಲ್ಲಿ ಉಳಿದವರೆಲ್ಲರು ನಿನ್ನನ್ನು ಕೊಳ್ಳೆಹೊಡೆಯುವರು.” (ಹಬಕ್ಕೂಕ 2:8) ಇಂದು ಭೂಮಿಯಲ್ಲಿ ರಕ್ತದ ಹೊನಲೇ ಹರಿಯುತ್ತಿದೆ! ಯೇಸು ಸ್ಪಷ್ಟವಾಗಿ ತಿಳಿಸಿದ್ದು: “ಕತ್ತಿಯನ್ನು ಹಿಡಿದವರೆಲ್ಲರು ಕತ್ತಿಯಿಂದ ಸಾಯುವರು.” (ಮತ್ತಾಯ 26:52) ಆದರೂ, ಈ 20ನೆಯ ಶತಮಾನದಲ್ಲೇ, ರಕ್ತಾಪರಾಧಿ ರಾಷ್ಟ್ರಗಳು ಮತ್ತು ಕುಲಸಂಬಂಧಿತ ಗುಂಪುಗಳು ನೂರು ಕೋಟಿಗಿಂತಲೂ ಹೆಚ್ಚು ಜನರ ಕಗ್ಗೊಲೆಗೆ ಕಾರಣವಾಗಿವೆ. ಈ ರಕ್ತಪಾತಗಳಲ್ಲಿ ಒಳಗೂಡುತ್ತಿರುವವರ ಮೇಲೆ ಎಂತಹ ವಿಪತ್ತು ಬಂದೆರಗಲಿದೆ!

ಎರಡನೆಯ ವಿಪತ್ತು

12. ಹಬಕ್ಕೂಕನಿಂದ ದಾಖಲಿಸಲ್ಪಟ್ಟ ಎರಡನೆಯ ವಿಪತ್ತು ಯಾವುದು, ಮತ್ತು ಅಪ್ರಾಮಾಣಿಕ ಲಾಭದಿಂದ ಯಾವ ಪ್ರಯೋಜನವೂ ಸಿಗುವುದಿಲ್ಲ ಎಂಬ ವಿಷಯದಲ್ಲಿ ನಾವು ಹೇಗೆ ಖಾತ್ರಿಯಿಂದಿರಸಾಧ್ಯವಿದೆ?

12 ಎರಡನೆಯ ವಿಪತ್ತು ಹಬಕ್ಕೂಕ 2:9-11ರಲ್ಲಿ ದಾಖಲಿಸಲ್ಪಟ್ಟಿದ್ದು, ಇದು “ತನ್ನ ಗೂಡನ್ನು ಎತ್ತರದಲ್ಲಿ ಕಟ್ಟಿ ಕೇಡಿನೊಳಗಿಂದ ತಪ್ಪಿಸಿಕೊಳ್ಳಬೇಕೆಂದು ತನ್ನ ಕುಲಕ್ಕೆ ಆಸ್ತಿಯನ್ನು ಅನ್ಯಾಯವಾಗಿ ದೋಚಿಕೊಳ್ಳುವವನ” ಮೇಲೆ ಬಂದೆರಗಲಿದೆ. ಮೋಸಕರ ಲಾಭದಿಂದ ಯಾವ ಪ್ರಯೋಜನವೂ ಸಿಗುವುದಿಲ್ಲ. ಇದನ್ನು ಕೀರ್ತನೆಗಾರನು ಸ್ಪಷ್ಟಪಡಿಸುತ್ತಾನೆ: “ಒಬ್ಬನ ಐಶ್ವರ್ಯವೂ ಗೃಹವೈಭವವೂ ವೃದ್ಧಿಯಾದಾಗ ಕಳವಳಿಸಬೇಡ. ಅವನು ಸಾಯುವಾಗ ಏನೂ ತೆಗೆದುಕೊಂಡು ಹೋಗಲಾರನಷ್ಟೆ; ಅವನ ವೈಭವವು ಅವನೊಡನೆ ಹೋಗುವದಿಲ್ಲ.” (ಕೀರ್ತನೆ 49:16, 17) ಗಮನಾರ್ಹವಾಗಿಯೇ, ಪೌಲನ ವಿವೇಕಯುತವಾದ ಸಲಹೆಯು ಹೀಗಿದೆ: “ಇಹಲೋಕವಿಷಯದಲ್ಲಿ ಐಶ್ವರ್ಯವುಳ್ಳವರು ಅಹಂಕಾರಿಗಳಾಗಿರದೆ ಅಸ್ಥಿರವಾದ ಐಶ್ವರ್ಯದ ಮೇಲೆ ನಿರೀಕ್ಷೆಯನ್ನಿಡದೆ ನಮ್ಮ ಅನುಭೋಗಕ್ಕೋಸ್ಕರ ನಮಗೆ ಎಲ್ಲವನ್ನೂ ಹೇರಳವಾಗಿ ದಯಪಾಲಿಸುವ ದೇವರ ಮೇಲೆ ನಿರೀಕ್ಷೆಯನ್ನಿಡಬೇಕೆಂತಲೂ . . . ಅವರಿಗೆ ಆಜ್ಞಾಪಿಸು.”—1 ತಿಮೊಥೆಯ 6:17.

13. ದೇವರ ಎಚ್ಚರಿಕೆಯ ಸಂದೇಶವನ್ನು ನಾವೇಕೆ ಸಾರುತ್ತಾ ಇರಬೇಕು?

13 ಇಂದು ದೇವರ ನ್ಯಾಯತೀರ್ಪಿನ ಸಂದೇಶಗಳನ್ನು ಸಾರುವುದು ಎಷ್ಟು ಪ್ರಾಮುಖ್ಯವಾದದ್ದಾಗಿದೆ! ಜನಸಮೂಹಗಳು ಯೇಸುವನ್ನು ನೋಡಿ ‘ಯೆಹೋವನ ಹೆಸರಿನಲ್ಲಿ ಬರುವ ಅರಸನಿಗೆ ಆಶೀರ್ವಾದ’ ಎಂದು ಕೊಂಡಾಡುತ್ತಿದ್ದಾಗ ಅಲ್ಲಿದ್ದ ಫರಿಸಾಯರು ಅದನ್ನು ಆಕ್ಷೇಪಿಸಿದರು. ಆಗ ಯೇಸು ಹೇಳಿದ್ದು: “ಇವರು ಸುಮ್ಮನಾದರೆ ಈ ಕಲ್ಲುಗಳೇ ಕೂಗುವವು ಎಂದು ನಿಮಗೆ ಹೇಳುತ್ತೇನೆ.” (ಲೂಕ 19:38-40) ತದ್ರೀತಿಯಲ್ಲಿ, ಈ ಲೋಕದಲ್ಲಿ ಅಸ್ತಿತ್ವದಲ್ಲಿರುವ ದುಷ್ಟತನವನ್ನು ಬಯಲುಪಡಿಸುವುದರಲ್ಲಿ ಇಂದು ದೇವಜನರು ವಿಫಲರಾದರೆ, “ಗೋಡೆಯೊಳಗಿಂದ ಕಲ್ಲು [ನಿನ್ನ ಮೇಲೆ ತಪ್ಪು ಹೊರಿಸಿ] ಕೂಗುವದು.” (ಹಬಕ್ಕೂಕ 2:11) ಆದುದರಿಂದ ನಾವು ದೇವರ ಎಚ್ಚರಿಕೆಯನ್ನು ನಿರಂತರವಾಗಿ ಸಾರುತ್ತಾ ಇರೋಣ!

ಮೂರನೆಯ ವಿಪತ್ತು ಮತ್ತು ರಕ್ತಾಪರಾಧದ ವಿವಾದಾಂಶ

14. ಲೋಕದ ಧರ್ಮಗಳು ಯಾವ ರಕ್ತಾಪರಾಧಕ್ಕೆ ಕಾರಣವಾಗಿವೆ?

14 ಹಬಕ್ಕೂಕನ ಮೂಲಕ ಪ್ರಕಟಿಸಲ್ಪಟ್ಟ ಮೂರನೆಯ ವಿಪತ್ತು ರಕ್ತಾಪರಾಧದ ವಿವಾದಾಂಶವನ್ನು ಉಲ್ಲೇಖಿಸುತ್ತದೆ. ಹಬಕ್ಕೂಕ 2:12 ಹೀಗೆ ಹೇಳುತ್ತದೆ: “ಅಯ್ಯೋ, ಪಟ್ಟಣವನ್ನು ನರಹತ್ಯದಿಂದ ಕಟ್ಟಿ ಊರನ್ನು ಅನ್ಯಾಯದಿಂದ ಸ್ಥಾಪಿಸುವವನ ಗತಿಯನ್ನು ಏನು ಹೇಳಲಿ!” ಈ ವಿಷಯಗಳ ವ್ಯವಸ್ಥೆಯಲ್ಲಿ ಅನೀತಿ ಮತ್ತು ರಕ್ತಾಪರಾಧವು ಏಕಕಾಲದಲ್ಲಿ ನಡೆಯುತ್ತಿದೆ. ಇತಿಹಾಸದ ಅತ್ಯಂತ ಹೇಯವಾದ ರಕ್ತಪಾತಗಳಿಗೆ ಲೋಕದ ಧರ್ಮಗಳೇ ಕಾರಣವಾಗಿವೆ ಎಂಬುದು ಗಮನಾರ್ಹ. ಇವುಗಳಲ್ಲಿ ಕೆಲವೊಂದು, ಕ್ರೈಸ್ತರನ್ನು ಮುಸ್ಲಿಮರ ವಿರುದ್ಧ ನಿಲ್ಲಿಸಿದ ಧರ್ಮಯುದ್ಧಗಳು, ಸ್ಪೆಯ್ನ್‌ ಮತ್ತು ಲ್ಯಾಟಿನ್‌ ಅಮೆರಿಕದಲ್ಲಿ ನಡೆದ ಕ್ಯಾತೊಲಿಕ್‌ ನ್ಯಾಯವಿಚಾರಣೆಗಳು, ಯೂರೋಪಿನ ಪ್ರಾಟೆಸ್ಟಂಟರು ಮತ್ತು ಕ್ಯಾತೊಲಿಕರ ಮಧ್ಯೆ ನಡೆದ ಮೂವತ್ತು ವರ್ಷಗಳ ಯುದ್ಧ, ಮತ್ತು ಇವೆಲ್ಲವುಗಳಿಗಿಂತಲೂ ಹೆಚ್ಚು ರಕ್ತಮಯವಾಗಿದ್ದು, ಕ್ರೈಸ್ತಪ್ರಪಂಚದ ಕ್ಷೇತ್ರದಲ್ಲಿ ಆರಂಭವಾದ ನಮ್ಮ ಶತಮಾನದ ಎರಡು ಲೋಕ ಯುದ್ಧಗಳು ಆಗಿವೆ.

15. (ಎ) ಚರ್ಚಿನ ಬೆಂಬಲ ಅಥವಾ ಸಮ್ಮತಿಯಿಂದ ಜನಾಂಗಗಳು ಏನು ಮಾಡುವುದನ್ನು ಮುಂದುವರಿಸುತ್ತಿವೆ? (ಬಿ) ಈ ಲೋಕದ ಶಸ್ತ್ರಾಸ್ತ್ರಗಳನ್ನು ವಿಶ್ವ ಸಂಸ್ಥೆಯು ಸಂಪೂರ್ಣವಾಗಿ ತೆಗೆದುಹಾಕಬಲ್ಲದೊ?

15 ಎರಡನೆಯ ಲೋಕ ಯುದ್ಧದ ಅತ್ಯಂತ ದುಷ್ಟ ವೈಶಿಷ್ಟ್ಯಗಳಲ್ಲಿ ಒಂದು, ನಾಸಿ ಸಾಮೂಹಿಕ ಕಗ್ಗೊಲೆಯಾಗಿತ್ತು. ಇದು ಲಕ್ಷಗಟ್ಟಲೆ ಯೆಹೂದ್ಯರನ್ನು ಮತ್ತು ಯೂರೋಪಿನ ಇತರ ನಿರ್ದೋಷಿಗಳನ್ನು ಸಂಪೂರ್ಣವಾಗಿ ಧ್ವಂಸಮಾಡಿಬಿಟ್ಟಿತ್ತು. ನೂರಾರು ಸಾವಿರ ಜನರನ್ನು ನಾಸಿ ಸಾವು ಕೋಣೆಗಳಿಗೆ ಬಲಿಗಳಾಗಿ ಕಳುಹಿಸುವುದನ್ನು ತಡೆಯಲು ತಪ್ಪಿಹೋದೆವು ಎಂಬುದನ್ನು ಫ್ರಾನ್ಸಿನ ರೋಮನ್‌ ಕ್ಯಾತೊಲಿಕ್‌ ಪುರೋಹಿತ ವರ್ಗವು ಇತ್ತೀಚೆಗಷ್ಟೇ ಒಪ್ಪಿಕೊಂಡಿತು. ಆದರೂ, ಜನಾಂಗಗಳು ಚರ್ಚಿನ ಬೆಂಬಲ ಅಥವಾ ಸಮ್ಮತಿಯಿಂದ ರಕ್ತ ಸುರಿಸುವುದನ್ನು ಮುಂದುವರಿಸುತ್ತಾ ಇವೆ. ರಷ್ಯದ ಆರ್ತೊಡಾಕ್ಸ್‌ ಚರ್ಚಿನ ಕುರಿತು ಮಾತಾಡುತ್ತಾ, ಟೈಮ್‌ ಪತ್ರಿಕೆ (ಅಂತಾರಾಷ್ಟ್ರೀಯ ಮುದ್ರಣ)ಯು ಇತ್ತೀಚೆಗೆ ಹೇಳಿದ್ದು: “ಪುನಃ ಅಸ್ತಿತ್ವಕ್ಕೆ ಬಂದಿರುವ ಚರ್ಚು, ಈ ಮೊದಲು ಯೋಚಿಸಲು ಅಸಾಧ್ಯವಾಗಿದ್ದಂತಹ ಒಂದು ಕ್ಷೇತ್ರದಲ್ಲಿ ವಿಶೇಷವಾದ ಪ್ರಭಾವವನ್ನು ಬೀರುತ್ತದೆ. . . . ಜೆಟ್‌ ಫೈಟರ್‌ಗಳನ್ನು ಮತ್ತು ಸಿಪಾಯಿ ವಾಸಸ್ಥಾನಗಳನ್ನು ಆಶೀರ್ವದಿಸುವುದು ಹೆಚ್ಚುಕಡಿಮೆ ಸರ್ವಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ನವೆಂಬರ್‌ ತಿಂಗಳಿನಲ್ಲಿ, ರಷ್ಯನ್‌ ಬಿಷಪರ ವಾಸಸ್ಥಾನವಾಗಿರುವ ಮಾಸ್ಕೋದ ಡ್ಯಾನಿಲೊವ್‌ಸ್ಕೀ ಮಠದಲ್ಲಿ, ರಷ್ಯದ ಅಣು ಶಸ್ತ್ರಾಗಾರವನ್ನು ಪವಿತ್ರಗೊಳಿಸುವಷ್ಟರ ಮಟ್ಟಿಗೂ ಚರ್ಚು ಮುಂದುವರಿಯಿತು.” ಈ ಲೋಕವನ್ನು ಪೈಶಾಚಿಕ ಯುದ್ಧಸಾಧನಗಳಿಂದ ಶಸ್ತ್ರಸಜ್ಜಿತವಾಗಿ ಮಾಡುವ ಕೆಲಸವನ್ನು ವಿಶ್ವ ಸಂಸ್ಥೆಯು ನಿಲ್ಲಿಸಬಲ್ಲದೊ? ಖಂಡಿತವಾಗಿಯೂ ಇಲ್ಲ! ಇಂಗ್ಲೆಂಡಿನ ಲಂಡನ್‌ನ ದ ಗಾರ್ಡಿಯನ್‌ ಎಂಬ ವಾರ್ತಾಪತ್ರಿಕೆಗನುಸಾರ, ನೋಬೆಲ್‌ ಶಾಂತಿ ಪಾರಿತೋಷಕ ವಿಜೇತನೊಬ್ಬನು ಹೀಗೆ ಹೇಳಿದನು: “ವಿಶ್ವ ಸಂಸ್ಥೆಯ ಭದ್ರತಾ ಸಭೆಯ ಶಾಶ್ವತವಾದ ಐದು ಸದಸ್ಯ ರಾಷ್ಟ್ರಗಳೇ, ಜಗತ್ತಿನಲ್ಲೇ ಹೆಚ್ಚು ಶಸ್ತ್ರಾಸ್ತ್ರಗಳನ್ನು ಸರಬರಾಜುಮಾಡುವ ಪ್ರಮುಖ ದೇಶಗಳಾಗಿವೆ ಎಂಬುದೇ ತೀರ ಕಳವಳವನ್ನು ಉಂಟುಮಾಡುವ ಸಂಗತಿಯಾಗಿದೆ.”

16. ಯುದ್ಧವನ್ನು ಕೆರಳಿಸುವ ರಾಷ್ಟ್ರಗಳಿಗೆ ಯೆಹೋವನು ಏನು ಮಾಡುವನು?

16 ಯುದ್ಧವನ್ನು ಕೆರಳಿಸುವ ರಾಷ್ಟ್ರಗಳ ಮೇಲೆ ಯೆಹೋವನು ನ್ಯಾಯತೀರ್ಪನ್ನು ಬರಮಾಡುವನೊ? ಹಬಕ್ಕೂಕ 2:13 ಹೇಳುವುದು: “ಜನಗಳು ದುಡಿದದ್ದು ಬೆಂಕಿಗೆ ತುತ್ತಾಗುವದು, ಜನಾಂಗಗಳು ಪಟ್ಟ ಪರಿಶ್ರಮವು ವ್ಯರ್ಥವಾಗುವದು. ಆಹಾ, ಇದೆಲ್ಲಾ ಸೇನಾಧೀಶ್ವರನಾದ ಯೆಹೋವನಿಂದಲೇ ಸಂಭವಿಸುವದಷ್ಟೆ.” “ಸೇನಾಧೀಶ್ವರನಾದ ಯೆಹೋವನು”! ಹೌದು, ಯೆಹೋವನಿಗೆ ಸ್ವರ್ಗೀಯ ದೇವದೂತ ಸೇನೆಗಳಿವೆ. ಅವುಗಳನ್ನು ಉಪಯೋಗಿಸಿ ದೇವರು ಯುದ್ಧಕ್ಕಾಗಿ ಸಿದ್ಧರಾಗಿರುವ ಜನರನ್ನು ಹಾಗೂ ರಾಷ್ಟ್ರಗಳನ್ನು ಸಂಪೂರ್ಣವಾಗಿ ಸೋಲಿಸಿಬಿಡುವನು!

17. ಯೆಹೋವನು ಹಿಂಸಾತ್ಮಕ ರಾಷ್ಟ್ರೀಯ ಗುಂಪುಗಳ ಮೇಲೆ ನ್ಯಾಯತೀರ್ಪನ್ನು ಬರಮಾಡಿದ ಬಳಿಕ, ಆತನ ಜ್ಞಾನವು ಎಷ್ಟರ ಮಟ್ಟಿಗೆ ಈ ಭೂಮಿಯಲ್ಲಿ ತುಂಬಿಕೊಳ್ಳುವುದು?

17 ಆ ಹಿಂಸಾತ್ಮಕ ರಾಷ್ಟ್ರೀಯ ಗುಂಪುಗಳ ಮೇಲೆ ಯೆಹೋವನು ನ್ಯಾಯತೀರ್ಪನ್ನು ಬರಮಾಡಿದ ಬಳಿಕ ಏನು ಸಂಭವಿಸುವುದು? ಹಬಕ್ಕೂಕ 2:14 ಇದಕ್ಕೆ ಉತ್ತರವನ್ನು ಕೊಡುತ್ತದೆ: “ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಮಹಿಮೆಯ ಜ್ಞಾನವು ತುಂಬಿಕೊಂಡಿರುವದು.” ಎಂತಹ ಮಹಾನ್‌ ಪ್ರತೀಕ್ಷೆ! ಯೆಹೋವನ ಪರಮಾಧಿಕಾರವು ಅರ್ಮಗೆದೋನಿನಲ್ಲಿ ಸದಾಕಾಲಕ್ಕೂ ನಿರ್ದೋಷೀಕರಿಸಲ್ಪಡುವುದು. (ಪ್ರಕಟನೆ 16:16) ‘ತನ್ನ ಪಾದಸನ್ನಿಧಿಯನ್ನು,’ ಅಂದರೆ ನಾವು ಜೀವಿಸುತ್ತಿರುವಂತಹ ಈ ಭೂಮಿಯನ್ನು ‘ತಾನು ವೈಭವಪಡಿಸುವೆನು’ ಎಂದು ಆತನು ನಮಗೆ ಆಶ್ವಾಸನೆ ಕೊಡುತ್ತಾನೆ. (ಯೆಶಾಯ 60:13) ಇಡೀ ಮಾನವಕುಲವು ದೇವರ ಜೀವನ ಮಾರ್ಗದಲ್ಲಿ ಶಿಕ್ಷಣವನ್ನು ಪಡೆದುಕೊಳ್ಳುವುದು. ಹೀಗೆ, ಯೆಹೋವನ ಮಹಿಮಾಭರಿತ ಉದ್ದೇಶಗಳ ಕುರಿತಾದ ಜ್ಞಾನವು, ಆಳಗಳನ್ನು ತುಂಬುವ ಮಹಾಸಾಗರಗಳ ನೀರಿನಂತೆ ಭೂಮಿಯಲ್ಲಿ ತುಂಬಿಕೊಳ್ಳುವುದು.

ನಾಲ್ಕನೆಯ ಮತ್ತು ಐದನೆಯ ವಿಪತ್ತುಗಳು

18. ಹಬಕ್ಕೂಕನ ಮೂಲಕ ಪ್ರಕಟಿಸಲ್ಪಟ್ಟ ನಾಲ್ಕನೆಯ ವಿಪತ್ತು ಯಾವುದು, ಮತ್ತು ಇಂದಿನ ಲೋಕದ ನೈತಿಕ ಸ್ಥಿತಿಗತಿಯಲ್ಲಿ ಇದು ಹೇಗೆ ಪ್ರತಿಬಿಂಬಿಸಲ್ಪಡುತ್ತದೆ?

18ಹಬಕ್ಕೂಕ 2:15ರಲ್ಲಿ ಈ ಮಾತುಗಳಲ್ಲಿ ನಾಲ್ಕನೆಯ ವಿಪತ್ತು ವರ್ಣಿಸಲ್ಪಟ್ಟಿದೆ: “ಅಯ್ಯೋ, ನಿನ್ನ ರೋಷವನ್ನು ಪಾನಕಕ್ಕೆ ಬೆರಸಿ ನಿನ್ನ ನೆರೆಯವರಿಗೆ ಕುಡಿಸಿ ಅವರ ಬೆತ್ತಲೆತನವನ್ನು ನೋಡಬೇಕೆಂದು ಅವರನ್ನು ಅಮಲೇರಿಸಿದವನೇ, ನಿನ್ನ ಗತಿಯನ್ನು ಏನು ಹೇಳಲಿ!” ಇದು ಆಧುನಿಕ ಲೋಕದ ಸ್ವೇಚ್ಛಾಚಾರದ, ಹಠಮಾರಿ ಸ್ಥಿತಿಯನ್ನು ಸೂಚಿಸುತ್ತದೆ. ಸ್ವೇಚ್ಛಾಚಾರಿ ಧಾರ್ಮಿಕ ಸಂಘಟನೆಗಳಿಂದ ಬೆಂಬಲಿಸಲ್ಪಡುವ ಅದರ ಅನೈತಿಕತೆಯು ತುಂಬ ಕೀಳ್ಮಟ್ಟಕ್ಕೆ ಇಳಿದಿದೆ. ಏಡ್ಸ್‌ ಮತ್ತು ಇತರ ರತಿರವಾನಿತ ರೋಗಗಳಂತಹ ವ್ಯಾಧಿಗಳು ಭೂವ್ಯಾಪಕವಾಗಿ ಎಲ್ಲೆಲ್ಲಿಯೂ ಹರಡಿಕೊಂಡಿವೆ. “ಯೆಹೋವನ ಮಹಿಮೆ”ಯನ್ನು ಪ್ರತಿಬಿಂಬಿಸುವ ಬದಲು, ನಾನು-ಮೊದಲು ಎಂಬ ಧೋರಣೆಯುಳ್ಳ ಸಂತತಿಯು ಮತ್ತಷ್ಟು ದುಷ್ಟತನಕ್ಕೆ ಇಳಿದಿದೆ ಮಾತ್ರವಲ್ಲ, ದೇವರ ನ್ಯಾಯತೀರ್ಪಿನ ಕಡೆಗೆ ಸಾಗುತ್ತಿದೆ. ‘ಮಾನವನ್ನಲ್ಲ, ಅವಮಾನವನ್ನು ತುಂಬಾ ಅನುಭವಿಸುವ’ ಈ ತಪ್ಪಿತಸ್ಥ ಲೋಕವು, ಯೆಹೋವನ ರೌದ್ರದ ಪಾತ್ರೆಯಿಂದ ಬೇಗನೆ ಕುಡಿಯಲಿದೆ. ರೌದ್ರದ ಪಾತ್ರೆಯು, ಈ ಲೋಕದ ಕಡೆಗಿರುವ ಆತನ ಚಿತ್ತವನ್ನು ಸೂಚಿಸುತ್ತದೆ. ಆಗ ‘ಅವಮಾನವು ಅದರ ಮಾನವನ್ನು ಮುತ್ತಿಬಿಡುವುದು.’—ಹಬಕ್ಕೂಕ 2:16.

19. ಹಬಕ್ಕೂಕನಿಂದ ಪ್ರಕಟಿಸಲ್ಪಟ್ಟ ಐದನೆಯ ವಿಪತ್ತಿನ ಪೀಠಿಕೆಯು ಯಾವುದಕ್ಕೆ ಸಂಬಂಧಿಸಿದ್ದಾಗಿದೆ, ಮತ್ತು ಇಂದಿನ ಲೋಕದಲ್ಲಿ ಇಂತಹ ಮಾತುಗಳು ಏಕೆ ವಿಶೇಷಾರ್ಥವನ್ನು ಹೊಂದಿವೆ?

19 ಐದನೆಯ ವಿಪತ್ತಿನ ಪೀಠಿಕೆಯು, ಕೈಯಿಂದ ಕೆತ್ತಿದ ಮೂರ್ತಿಗಳನ್ನು ಆರಾಧಿಸುವುದರ ವಿರುದ್ಧ ಕಠೋರವಾದ ಎಚ್ಚರಿಕೆಯನ್ನು ಕೊಡುತ್ತದೆ. ಈ ಶಕ್ತಿಶಾಲಿ ಮಾತುಗಳನ್ನು ಘೋಷಿಸುವಂತೆ ಯೆಹೋವನು ತನ್ನ ಪ್ರವಾದಿಯನ್ನು ಪ್ರೇರಿಸುತ್ತಾನೆ: “ಮರಕ್ಕೆ ಎಚ್ಚತ್ತುಕೋ, ಜಡವಾದ ಕಲ್ಲಿಗೆ ಎದ್ದೇಳು ಎಂದು ಅಪ್ಪಣೆಕೊಡುವವನ ಗತಿಯನ್ನು ಅಯ್ಯೋ, ಏನು ಹೇಳಲಿ! ಇಂಥ ಬೊಂಬೆಯು ಬೋಧಿಸೀತೇ? ಇಗೋ, ಅದಕ್ಕೆ ಬೆಳ್ಳಿಬಂಗಾರವು ಹೊದಗಿಸಿದೆ, ಅದರೊಳಗೆ ಶ್ವಾಸವೇನೂ ಇಲ್ಲ.” (ಹಬಕ್ಕೂಕ 2:19) ಇಂದಿನ ವರೆಗೂ ಕ್ರೈಸ್ತಪ್ರಪಂಚ ಮತ್ತು ವಿಧರ್ಮಿಗಳೆಂದು ಕರೆಯಲ್ಪಡುವವರು ತಮ್ಮ ಶಿಲುಬೆಗಳಿಗೆ, ಮರಿಯಳ ಮೂರ್ತಿಗಳಿಗೆ, ಪ್ರತಿಮೆಗಳಿಗೆ ಮತ್ತು ಮನುಷ್ಯ ಹಾಗೂ ಪ್ರಾಣಿಗಳನ್ನು ಹೋಲುವ ವಿಗ್ರಹಗಳಿಗೆ ಅಡ್ಡಬಿದ್ದು ಅವುಗಳನ್ನು ಆರಾಧಿಸುತ್ತಾರೆ. ಯೆಹೋವನು ನ್ಯಾಯತೀರ್ಪನ್ನು ಬರಮಾಡುವಾಗ ಇವುಗಳಲ್ಲಿ ಒಂದೂ ತಮ್ಮ ಆರಾಧಕರನ್ನು ರಕ್ಷಿಸಲು ಸಾಧ್ಯವಿಲ್ಲ. ನಿತ್ಯತೆಯ ದೇವರಾದ ಯೆಹೋವನ ವೈಭವ ಮತ್ತು ಆತನ ಸಜೀವ ಸೃಷ್ಟಿಜೀವಿಗಳ ಮಹಿಮೆಗೆ ಹೋಲಿಸುವಾಗ, ಅವುಗಳ ಮೇಲೆ ಲೇಪಿಸಿರುವ ಬೆಳ್ಳಿಬಂಗಾರಗಳು ಸಂಪೂರ್ಣವಾಗಿ ವ್ಯರ್ಥವಾಗಿವೆ. ಆತನ ಅಸಮಾನ ಹೆಸರನ್ನು ನಾವು ಸದಾಕಾಲಕ್ಕೂ ಕೊಂಡಾಡೋಣ!

20. ಯಾವ ಆಲಯದ ಏರ್ಪಾಡಿನಲ್ಲಿ ನಾವು ಆರಾಧಿಸುವ ಸುಯೋಗವನ್ನು ಪಡೆದವರಾಗಿದ್ದೇವೆ?

20 ಹೌದು, ನಮ್ಮ ದೇವರಾದ ಯೆಹೋವನು ಸ್ತುತ್ಯರ್ಹನು. ಆತನಿಗಾಗಿ ಆಳವಾದ ಪೂಜ್ಯಭಾವವನ್ನು ತೋರಿಸುತ್ತಾ, ವಿಗ್ರಹಾರಾಧನೆಯ ವಿರುದ್ಧ ಕೊಡಲ್ಪಟ್ಟಿರುವ ಕಠೋರವಾದ ಎಚ್ಚರಿಕೆಗೆ ನಾವು ಕಿವಿಗೊಡೋಣ. ಆದರೆ ಆಲಿಸಿರಿ! ಯೆಹೋವನು ಇನ್ನೂ ಮಾತಾಡುತ್ತಿದ್ದಾನೆ: “ಯೆಹೋವನೋ ತನ್ನ ಪರಿಶುದ್ಧಮಂದಿರದಲ್ಲಿದ್ದಾನೆ; ಭೂಲೋಕವೆಲ್ಲಾ ಆತನ ಮುಂದೆ ಮೌನವಾಗಿರಲಿ.” (ಹಬಕ್ಕೂಕ 2:20) ಪ್ರವಾದಿಯ ಮನಸ್ಸಿನಲ್ಲಿ ಯೆರೂಸಲೇಮಿನ ಆಲಯವಿತ್ತು ಎಂಬುದರಲ್ಲಿ ಸಂದೇಹವಿಲ್ಲ. ಆದರೂ, ಇಂದು ನಾವು ಅದಕ್ಕಿಂತಲೂ ಮಹೋನ್ನತವಾದ ಆತ್ಮಿಕ ಆಲಯದ ಏರ್ಪಾಡಿನಲ್ಲಿ ಆರಾಧಿಸುವ ಸುಯೋಗವನ್ನು ಪಡೆದವರಾಗಿದ್ದೇವೆ. ಆ ಏರ್ಪಾಡಿನಲ್ಲಿ ನಮ್ಮ ಕರ್ತನಾದ ಯೇಸು ಕ್ರಿಸ್ತನು ಮಹಾ ಯಾಜಕನಾಗಿ ಪ್ರತಿಷ್ಠಾಪಿಸಲ್ಪಟ್ಟಿದ್ದಾನೆ. ಯೆಹೋವನ ಮಹಿಮಾಭರಿತ ಹೆಸರಿಗೆ ಸಲ್ಲತಕ್ಕ ಗೌರವವನ್ನು ನೀಡುತ್ತಾ, ಆ ಆಲಯದ ಭೂಅಂಗಣದಲ್ಲಿ, ನಾವು ಕೂಡಿಬರುತ್ತೇವೆ, ಸೇವೆಸಲ್ಲಿಸುತ್ತೇವೆ ಮತ್ತು ಪ್ರಾರ್ಥಿಸುತ್ತೇವೆ. ಪ್ರೀತಿಪೂರ್ಣನಾದ ನಮ್ಮ ಸ್ವರ್ಗೀಯ ತಂದೆಗೆ ಹೃತ್ಪೂರ್ವಕವಾದ ಆರಾಧನೆಯನ್ನು ಸಲ್ಲಿಸುವುದರಲ್ಲಿ ನಾವೆಷ್ಟು ಆನಂದವನ್ನು ಕಂಡುಕೊಳ್ಳುತ್ತೇವೆ!

ನೀವು ಜ್ಞಾಪಿಸಿಕೊಳ್ಳುವಿರೋ?

• “ಅದು . . . ತಾಮಸವಾಗದು” ಎಂಬ ಯೆಹೋವನ ಮಾತುಗಳನ್ನು ನೀವು ಹೇಗೆ ಪರಿಗಣಿಸುತ್ತೀರಿ?

• ಹಬಕ್ಕೂಕನ ಮೂಲಕ ಪ್ರಕಟಿಸಲ್ಪಟ್ಟ ವಿಪತ್ತುಗಳಿಗೆ ಪ್ರಚಲಿತ ದಿನದಲ್ಲಿ ಯಾವ ವಿಶೇಷಾರ್ಥವಿದೆ?

• ಯೆಹೋವನ ಎಚ್ಚರಿಕೆಯ ಸಂದೇಶವನ್ನು ನಾವು ಏಕೆ ಸಾರುತ್ತಾ ಇರಬೇಕು?

• ಯಾವ ಆಲಯದ ಅಂಗಣದಲ್ಲಿ ಸೇವೆಮಾಡುವ ಸುಯೋಗವನ್ನು ನಾವು ಹೊಂದಿದ್ದೇವೆ?

[ಅಧ್ಯಯನ ಪ್ರಶ್ನೆಗಳು]

[ಪುಟ 15ರಲ್ಲಿರುವ ಚಿತ್ರಗಳು]

ಹಬಕ್ಕೂಕನಿಗೆ ಗೊತ್ತಿದ್ದಂತೆಯೇ, ಯೆಹೋವನು ತಡಮಾಡುವುದಿಲ್ಲ ಎಂಬುದು ದೇವರ ಪ್ರಚಲಿತ ದಿನದ ಸೇವಕರಿಗೆ ಗೊತ್ತಿದೆ

[ಪುಟ 18ರಲ್ಲಿರುವ ಚಿತ್ರಗಳು]

ಯೆಹೋವನ ಆತ್ಮಿಕ ಆಲಯದ ಅಂಗಣದಲ್ಲಿ ಆತನನ್ನು ಆರಾಧಿಸುವ ಸುಯೋಗವನ್ನು ನೀವು ಗಣ್ಯಮಾಡುತ್ತೀರೋ?

[ಪುಟ 16ರಲ್ಲಿರುವ ಚಿತ್ರ ಕೃಪೆ]

U.S. Army photo