ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ನನ್ನ ಆಶ್ರಯದುರ್ಗವೂ ಬಲವೂ ಆಗಿದ್ದಾನೆ

ಯೆಹೋವನು ನನ್ನ ಆಶ್ರಯದುರ್ಗವೂ ಬಲವೂ ಆಗಿದ್ದಾನೆ

ಜೀವನ ಕಥೆ

ಯೆಹೋವನು ನನ್ನ ಆಶ್ರಯದುರ್ಗವೂ ಬಲವೂ ಆಗಿದ್ದಾನೆ

ಮಾರ್ಸೆಲ್‌ ಫಿಲ್ಟೋ ಅವರಿಂದ ಹೇಳಲ್ಪಟ್ಟಂತೆ

“ನೀನು ಅವನನ್ನು ಮದುವೆಯಾದರೆ ಖಂಡಿತವಾಗಿ ಜೈಲಿಗೆ ಹೋಗುವಿ,” ಎಂದು ನಾನು ಮದುವೆಯಾಗಲು ಯೋಜಿಸುತ್ತಿದ್ದ ಸ್ತ್ರೀಗೆ ಜನರು ಹೇಳುತ್ತಿದ್ದರು. ಆದರೆ ಜನರು ಹೀಗೇಕೆ ಹೇಳುತ್ತಿದ್ದರೆಂಬುದನ್ನು ನಾನು ನಿಮಗೆ ವಿವರಿಸುವೆ.

ನಾನು 1927ರಲ್ಲಿ ಹುಟ್ಟಿದಾಗ, ಕೆನಡದ ಕ್ವಿಬೆಕ್‌ ಪ್ರಾಂತ್ಯವು ಕ್ಯಾತೋಲಿಕ್‌ ಧರ್ಮದ ದುರ್ಗವಾಗಿತ್ತು. ನಾಲ್ಕು ವರ್ಷಗಳ ಬಳಿಕ, ಯೆಹೋವನ ಸಾಕ್ಷಿಗಳ ಪೂರ್ಣ ಸಮಯದ ಶುಶ್ರೂಷಕಿಯಾಗಿದ್ದ ಸೇಸಿಲ್‌ ಡ್ಯೂಫೂರ್‌ ಎಂಬುವರು ಮಾಂಟ್ರೀಯಲ್‌ ನಗರದಲ್ಲಿದ್ದ ನಮ್ಮ ಮನೆಗೆ ಕ್ರಮವಾಗಿ ಭೇಟಿಕೊಡುತ್ತಿದ್ದರು. ಇದಕ್ಕಾಗಿಯೇ, ನಮ್ಮ ನೆರೆಹೊರೆಯವರು ಅವರನ್ನು ಅನೇಕ ವೇಳೆ ಬೆದರಿಸುತ್ತಿದ್ದರು. ವಾಸ್ತವದಲ್ಲಿ, ಬೈಬಲಿನ ಸಂದೇಶವನ್ನು ಸಾರುತ್ತಿದ್ದುದಕ್ಕಾಗಿ ಅವರನ್ನು ಅನೇಕ ಬಾರಿ ದಸ್ತಗಿರಿಮಾಡಿ ದುರುಪಚರಿಸಲಾಗಿತ್ತು. ಹೀಗಾಗಿ ನಾವು ಯೇಸುವಿನ ಈ ಮಾತುಗಳ ಸತ್ಯತೆಯನ್ನು ಬಲು ಬೇಗನೆ ಕಲಿತುಕೊಂಡೆವು: “ನಿಮ್ಮನ್ನು ಉಪದ್ರವಕ್ಕೆ ಒಪ್ಪಿಸಿ ಕೊಲ್ಲುವರು; ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲಾ ಜನಾಂಗಗಳವರು ಹಗೆಮಾಡುವರು.”—ಮತ್ತಾಯ 24:9.

ಆ ಸಮಯದಲ್ಲಿ, ಒಂದು ಫ್ರೆಂಚ್‌ ಕೆನೇಡಿಯನ್‌ ಕುಟುಂಬವು ತಮ್ಮ ಕ್ಯಾತೊಲಿಕ್‌ ಧರ್ಮವನ್ನು ತೊರೆಯುವುದು ಯೋಚಿಸಲಸಾಧ್ಯವಾದ ವಿಷಯವಾಗಿತ್ತೆಂದು ಅನೇಕರು ಭಾವಿಸುತ್ತಿದ್ದರು. ನನ್ನ ಹೆತ್ತವರೆಂದೂ ದೀಕ್ಷಾಸ್ನಾನ ಪಡೆದುಕೊಂಡ ಸಾಕ್ಷಿಗಳಾಗಲಿಲ್ಲವಾದರೂ, ಕ್ಯಾತೋಲಿಕ್‌ ಚರ್ಚು ಕಲಿಸುವ ಬೋಧನೆಗಳು ಬೈಬಲಿನೊಂದಿಗೆ ಹೊಂದಿಕೆಯಲ್ಲಿಲ್ಲ ಎಂಬುದನ್ನು ಬೇಗನೆ ಕಂಡುಕೊಂಡರು. ಹೀಗಾಗಿ ಸಾಕ್ಷಿಗಳಿಂದ ಪ್ರಕಾಶಿಸಲ್ಪಡುವ ಸಾಹಿತ್ಯವನ್ನು ಓದುವಂತೆ ಅವರು ತಮ್ಮ ಎಂಟು ಮಂದಿ ಮಕ್ಕಳಿಗೆ ಉತ್ತೇಜನವನ್ನು ನೀಡಿದರು ಮತ್ತು ಬೈಬಲ್‌ ಸತ್ಯಕ್ಕಾಗಿ ತಮ್ಮ ನಿಲುವನ್ನು ತೆಗೆದುಕೊಂಡ ನಮ್ಮಂಥವರಿಗೆ ಬೆಂಬಲವನ್ನು ನೀಡಿದರು.

ಕಷ್ಟಕರ ಸಮಯಗಳಲ್ಲೂ ನಿಲುವನ್ನು ತೆಗೆದುಕೊಳ್ಳುವುದು

ಇಸವಿ 1942ರಲ್ಲಿ, ನಾನು ಇನ್ನೂ ಶಾಲೆಯಲ್ಲಿರುವಾಗಲೇ ಬೈಬಲ್‌ ಅಭ್ಯಾಸದಲ್ಲಿ ನಿಜವಾದ ಆಸಕ್ತಿಯನ್ನು ತೆಗೆದುಕೊಳ್ಳಲು ಆರಂಭಿಸಿದೆ. ಯೆಹೋವನ ಸಾಕ್ಷಿಗಳ ಚಟುವಟಿಕೆಗಳು ಆಗ ಕೆನಡದಲ್ಲಿ ನಿಷೇಧಿಸಲ್ಪಟ್ಟಿದ್ದವು, ಯಾಕೆಂದರೆ ಅವರು ಆದಿ ಕ್ರೈಸ್ತರ ಮಾದರಿಯನ್ನು ಅನುಸರಿಸುತ್ತಿದ್ದರು ಮತ್ತು ರಾಷ್ಟ್ರಗಳ ಯುದ್ಧಗಳಲ್ಲಿ ಭಾಗವಹಿಸುತ್ತಿರಲಿಲ್ಲ. (ಯೆಶಾಯ 2:4; ಮತ್ತಾಯ 26:52) ನನ್ನ ಅಣ್ಣನಾಗಿದ್ದ ರೋಲಂಡ್‌, ಆಗ ನಡೆಯುತ್ತಿದ್ದ ಲೋಕ ಯುದ್ಧದಲ್ಲಿ ಶಸ್ತ್ರಾಸ್ತ್ರಗಳನ್ನು ಎತ್ತಲು ನಿರಾಕರಿಸಿದ್ದರಿಂದ ದುಡಿಮೆಯ ಶಿಬಿರದಲ್ಲಿ ಹಾಕಲ್ಪಟ್ಟನು.

ಆ ಸಮಯದಷ್ಟಕ್ಕೆ, ಆ್ಯಡಾಲ್ಫ್‌ ಹಿಟ್ಲರನ ಮಿಲಿಟರಿ ಕಾರ್ಯಾಚರಣೆಯನ್ನು ಬೆಂಬಲಿಸಲು ನಿರಾಕರಿಸಿದ್ದರಿಂದ ಜರ್ಮನ್‌ ಸಾಕ್ಷಿಗಳ ಮೇಲೆ ಬಂದೆರಗಿದ ಸಂಕಷ್ಟಗಳನ್ನು ವಿವರಿಸಿದ ಫ್ರೆಂಚ್‌ ಭಾಷೆಯಲ್ಲಿರುವ ಪುಸ್ತಕವೊಂದನ್ನು ತಂದೆಯವರು ನನಗೆ ಕೊಟ್ಟರು. * ಸಮಗ್ರತೆಯ ಇಂತಹ ಧೈರ್ಯದ ಉದಾಹರಣೆಗಳೊಂದಿಗೆ ನನ್ನನ್ನು ಗುರುತಿಸಿಕೊಳ್ಳುವಂತೆ ನಾನು ಉತ್ತೇಜಿಸಲ್ಪಟ್ಟೆ ಮತ್ತು ಒಂದು ಖಾಸಗಿ ಮನೆಯಲ್ಲಿ ನಡೆಸಲಾಗುತ್ತಿದ್ದ ಯೆಹೋವನ ಸಾಕ್ಷಿಗಳ ಕೂಟಕ್ಕೆ ಹಾಜರಾಗಲು ನಾನು ಆರಂಭಿಸಿದೆ. ಸ್ವಲ್ಪ ಸಮಯದಲ್ಲಿ, ನನಗೆ ಸಾರುವಿಕೆಯ ಕೆಲಸದಲ್ಲಿ ಭಾಗವಹಿಸುವ ಆಮಂತ್ರಣವನ್ನು ನೀಡಲಾಯಿತು. ನಾನು ಅದರಲ್ಲಿ ಭಾಗವಹಿಸಿದರೆ ದಸ್ತಗಿರಿಯಾಗಿ ಜೈಲಿಗೆ ತಳ್ಳಲ್ಪಡಬಲ್ಲೆ ಎಂಬ ಪೂರ್ಣ ತಿಳಿವಳಿಕೆಯಿಂದ ನಾನು ಆ ಆಮಂತ್ರಣಕ್ಕೆ ಓಗೊಟ್ಟೆ.

ಬಲಕ್ಕಾಗಿ ಪ್ರಾರ್ಥಿಸಿದ ನಂತರ, ನಾನು ಮೊದಲ ಮನೆಯ ಬಾಗಿಲನ್ನು ತಟ್ಟಿದೆ. ದಯಾಪೂರ್ಣಳಾದ ಸ್ತ್ರೀಯೊಬ್ಬಳು ಬಾಗಿಲನ್ನು ತೆರೆದಳು. ನನ್ನನ್ನು ಅವಳಿಗೆ ಪರಿಚಯಿಸಿಕೊಂಡ ಬಳಿಕ, ನಾನು ಅವಳಿಗೆ 2 ತಿಮೊಥೆಯ 3:16ರ ಮಾತುಗಳನ್ನು ಓದಿದೆ: “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು . . . ಉಪಯುಕ್ತವಾಗಿದೆ.”

“ಬೈಬಲಿನ ಕುರಿತು ಹೆಚ್ಚಿನ ವಿಷಯಗಳನ್ನು ನೀವು ಕಲಿತುಕೊಳ್ಳಲು ಬಯಸುವಿರೋ?” ಎಂದು ನಾನು ಅವಳನ್ನು ಕೇಳಿದೆ.

ಆ ಸ್ತ್ರೀ ಅದಕ್ಕೆ “ಹೌದು” ಎಂದು ಉತ್ತರಿಸಿದಳು.

ಬೈಬಲಿನ ಕುರಿತು ನನಗಿಂತಲೂ ಉತ್ತಮವಾಗಿ ತಿಳಿದಿರುವ ಸ್ತ್ರೀಯನ್ನು ಮುಂದಿನ ವಾರ ನಿಮ್ಮಲ್ಲಿಗೆ ಕರೆದುಕೊಂಡು ಬರುವೆನೆಂದು ನಾನು ಅವಳಿಗೆ ಹೇಳಿದೆ. ಆ ಮೊದಲನೆಯ ಅನುಭವದ ಬಳಿಕ, ನನಗೆ ಹೆಚ್ಚಿನ ಆತ್ಮವಿಶ್ವಾಸವು ಉಂಟಾಯಿತು ಮತ್ತು ಶುಶ್ರೂಷೆಯನ್ನು ನಾವು ನಮ್ಮ ಸ್ವಂತ ಬಲದಿಂದಲೇ ನಿರ್ವಹಿಸುವುದಿಲ್ಲವೆಂಬುದನ್ನು ನಾನು ಕಲಿತುಕೊಂಡೆ. ಅಪೊಸ್ತಲ ಪೌಲನು ಹೇಳಿದಂತೆ, ನಾವದನ್ನು ಯೆಹೋವನ ಸಹಾಯದಿಂದ ಮಾಡುತ್ತೇವೆ. ನಿಜ, “ಬಲಾಧಿಕ್ಯವು ದೇವರದೇ ಹೊರತು ನಮ್ಮೊಳಗಿಂದ ಬಂದದ್ದಲ್ಲವೆಂದು” ನಾವು ತಿಳಿದುಕೊಳ್ಳುವುದು ಬಹಳ ಪ್ರಾಮುಖ್ಯ.—2 ಕೊರಿಂಥ 4:7.

ಇದಾದ ನಂತರ, ಸಾರುವ ಕೆಲಸವು ನನ್ನ ಜೀವಿತದ ಅವಿಭಾಜ್ಯ ಭಾಗವಾಯಿತು ಹಾಗೂ ದಸ್ತಗಿರಿ ಮತ್ತು ಜೈಲುಶಿಕ್ಷೆಯು ಸಹ ನನ್ನ ಜೀವನ ಕ್ರಮವಾಯಿತು. “ನೀನು ಅವನನ್ನು ಮದುವೆಯಾದರೆ ಖಂಡಿತವಾಗಿ ಜೈಲಿಗೆ ಹೋಗುವಿ,” ಎಂದು ನನ್ನ ಭಾವೀ ವಧುವಿಗೆ ಜನರು ಹೇಳುತ್ತಿದ್ದುದರಲ್ಲಿ ಯಾವ ಆಶ್ಚರ್ಯವೂ ಇರಲಿಲ್ಲ! ಹೀಗಿದ್ದರೂ, ಇಂತಹ ಅನುಭವಗಳು ನಿಜವಾಗಿಯೂ ಅಷ್ಟೇನೂ ಕಷ್ಟಕರವಾಗಿರಲಿಲ್ಲ. ಜೈಲಿನಲ್ಲಿ ಒಂದು ರಾತ್ರಿಯನ್ನು ಕಳೆದ ಬಳಿಕ ಸಾಮಾನ್ಯವಾಗಿ, ಒಬ್ಬ ಜೊತೆ ಸಾಕ್ಷಿಯು ನನ್ನನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸುತ್ತಿದ್ದನು.

ಪ್ರಾಮುಖ್ಯ ನಿರ್ಣಯಗಳು

ಏಪ್ರಿಲ್‌ 1943ರಲ್ಲಿ, ನಾನು ಯೆಹೋವನಿಗೆ ನನ್ನನ್ನು ಸಮರ್ಪಿಸಿಕೊಂಡೆ ಮತ್ತು ಅದನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸಂಕೇತಿಸಿದೆ. ಅನಂತರ, ಆಗಸ್ಟ್‌ 1944ರಲ್ಲಿ, ನಾನು ಕೆನಡದ ಗಡಿಯ ಸಮೀಪದಲ್ಲಿರುವ ಅಮೆರಿಕದ ನ್ಯೂ ಯಾರ್ಕಿನ ಬಫಲೊದಲ್ಲಿ ಪ್ರಥಮ ದೊಡ್ಡ ಅಧಿವೇಶನವನ್ನು ಹಾಜರಾದೆ. ಅಲ್ಲಿ 25,000 ಮಂದಿ ಹಾಜರಿದ್ದರು, ಮತ್ತು ಪಯನೀಯರರೆಂದು ಕರೆಯಲ್ಪಡುತ್ತಿದ್ದ ಯೆಹೋವನ ಸಾಕ್ಷಿಗಳ ಪೂರ್ಣ ಸಮಯದ ಶುಶ್ರೂಷಕನಾಗುವ ನನ್ನ ಅಪೇಕ್ಷೆಯನ್ನು ಈ ಕಾರ್ಯಕ್ರಮವು ಪ್ರಚೋದಿಸಿತು. ಕೆನಡದಲ್ಲಿರುವ ಯೆಹೋವನ ಸಾಕ್ಷಿಗಳ ಕೆಲಸದ ಮೇಲೆ ಹಾಕಲಾದ ನಿಷೇಧವು, ಮೇ 1945ರಲ್ಲಿ ತೆಗೆಯಲ್ಪಟ್ಟಿತು ಮತ್ತು ಮುಂದಿನ ತಿಂಗಳೇ ನಾನು ಪಯನೀಯರ್‌ ಸೇವೆಯನ್ನು ಆರಂಭಿಸಿದೆ.

ಶುಶ್ರೂಷೆಯಲ್ಲಿ ಹೆಚ್ಚೆಚ್ಚು ಭಾಗವಹಿಸಿದಷ್ಟೂ ಸೆರೆಮನೆ ವಾಸವೂ ಹೆಚ್ಚೆಚ್ಚಾಯಿತು. ಒಮ್ಮೆ ನಾನು, ಯೆಹೋವನ ದೀರ್ಘಸಮಯದ ನಂಬಿಗಸ್ತ ಸೇವಕನಾಗಿದ್ದ ಮೈಕ್‌ ಮಿಲ್ಲರ್‌ ಎಂಬುವರೊಂದಿಗೆ ಬಂದಿಖಾನೆಗೆ ಹಾಕಲ್ಪಟ್ಟೆ. ನಾವು ಸಿಮೆಂಟ್‌ ನೆಲದ ಮೇಲೆ ಕುಳಿತುಕೊಂಡು ಮಾತಾಡುತ್ತಿದ್ದೆವು. ನಮ್ಮ ಮಧ್ಯೆ ನಡೆಯುತ್ತಿದ್ದ ಈ ಬಲವರ್ಧಕ ಆತ್ಮಿಕ ಸಂಭಾಷಣೆಗಳು ನನ್ನನ್ನು ಬಹಳವಾಗಿ ಬಲಪಡಿಸಿದವು. ‘ನಮ್ಮಿಬ್ಬರ ಮಧ್ಯೆ ತಪ್ಪಭಿಪ್ರಾಯವು ಉಂಟಾಗಿ, ಒಬ್ಬರಿಗೊಬ್ಬರು ಮಾತಾಡದೇ ಇರುತ್ತಿದ್ದರೆ ಏನಾಗುತ್ತಿತ್ತು?’ ಎಂಬ ಪ್ರಶ್ನೆಯು ನನ್ನ ಮನಸ್ಸಿನಲ್ಲಿ ಹಾದುಹೋಯಿತು. ಈ ಪ್ರಿಯ ಸಹೋದರನೊಂದಿಗೆ ಜೈಲಿನಲ್ಲಿ ವ್ಯಯಿಸಿದ ಸಮಯವು ನನಗೆ ನನ್ನ ಜೀವಿತದಲ್ಲಿ ಬಹಳ ಅತ್ಯುತ್ತಮವಾದ ಪಾಠವನ್ನು ಕಲಿಸಿತು. ನಮಗೆ ಸಹೋದರರ ಅಗತ್ಯವಿದೆ ಆದುದರಿಂದ ನಾವು ಕ್ಷಮಿಸುವವರಾಗಿರಬೇಕು ಮತ್ತು ಒಬ್ಬರಿನ್ನೊಬ್ಬರೊಂದಿಗೆ ದಯಾಭಾವದಿಂದ ವರ್ತಿಸಬೇಕು ಎಂಬ ಪಾಠವೇ ಅದಾಗಿತ್ತು. ಇಲ್ಲದಿದ್ದರೆ, ಅಪೊಸ್ತಲ ಪೌಲನು ಬರೆದಂತೆ, “ನೀವು ಒಬ್ಬರನ್ನೊಬ್ಬರು ಕಚ್ಚಿ ಹರಕೊಂಡು ನುಂಗುವವರಾದರೆ ಒಬ್ಬರಿಂದೊಬ್ಬರು ನಾಶವಾದೀರಿ, ನೋಡಿರಿ.”—ಗಲಾತ್ಯ 5:15.

ಸೆಪ್ಟೆಂಬರ್‌ 1945ರಲ್ಲಿ, ಕೆನಡದ ಟೊರಾಂಟೋದಲ್ಲಿರುವ ವಾಚ್‌ ಟವರ್‌ ಸೊಸೈಟಿಯ ಬ್ರಾಂಚ್‌ ಆಫೀಸಿನಲ್ಲಿ ಅಂದರೆ, ಬೆತೆಲಿನಲ್ಲಿ ಕೆಲಸಮಾಡುವಂತೆ ನಾನು ಆಮಂತ್ರಿಸಲ್ಪಟ್ಟೆ. ಅಲ್ಲಿನ ಆತ್ಮಿಕ ಕಾರ್ಯಕ್ರಮವು ನಿಜವಾಗಿಯೂ ಭಕ್ತಿವರ್ಧಕವೂ ನಂಬಿಕೆಯನ್ನು ಬಲಪಡಿಸುವಂತಹದ್ದೂ ಆಗಿತ್ತು. ಮುಂದಿನ ವರ್ಷ, ಬ್ರಾಂಚ್‌ ಆಫೀಸಿನಿಂದ ಸುಮಾರು 40 ಕಿಲೋಮೀಟರ್‌ ಉತ್ತರದಲ್ಲಿರುವ ಬೆತೆಲಿನ ಫಾರ್ಮಿನಲ್ಲಿ ಕೆಲಸಮಾಡುವ ನೇಮಕವನ್ನು ನನಗೆ ಕೊಡಲಾಯಿತು. ಯುವತಿ ಆ್ಯನ್‌ ವಾಲಿನೆಕ್‌ಳೊಂದಿಗೆ ಸ್ಟ್ರಾಬೆರಿ ಹಣ್ಣುಗಳನ್ನು ಕೀಳುತ್ತಿದ್ದಂತೆ ನಾನು ಕೇವಲ ಅವಳ ದೈಹಿಕ ಸೌಂದರ್ಯವನ್ನು ಮಾತ್ರವೇ ಗಮನಿಸಲಿಲ್ಲ, ಅದರ ಜೊತೆಗೆ ಯೆಹೋವನ ಕಡೆಗೆ ಅವಳಿಗಿರುವ ಪ್ರೀತಿ ಮತ್ತು ಶ್ರದ್ಧೆಯನ್ನು ಸಹ ಗಮನಿಸಿದೆ. ನಮ್ಮಿಬ್ಬರ ಮಧ್ಯೆ ಪ್ರೀತಿಯು ಬೆಳೆಯಿತು ಮತ್ತು ನಾವು ಜನವರಿ 1947ರಲ್ಲಿ ಮದುವೆಯಾದೆವು.

ಮುಂದಿನ ಎರಡೂವರೆ ವರ್ಷಗಳ ವರೆಗೆ ನಾವು ಆಂಟೇರಿಯೊದ ಲಂಡನ್ನಿನಲ್ಲಿ ಪಯನೀಯರ್‌ ಸೇವೆ ಮಾಡಿದೆವು ಮತ್ತು ಇದಾದ ನಂತರ ಕೇಪ್‌ ಬ್ರಿಟನ್‌ ದ್ವೀಪದಲ್ಲಿ ಒಂದು ಸಭೆಯನ್ನು ಸ್ಥಾಪಿಸಲು ಸಹಾಯಮಾಡಿದೆವು. ಅನಂತರ 1949ರಲ್ಲಿ, ನಾವು ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನ 14ನೇ ಕ್ಲಾಸಿಗೆ ಹಾಜರಾಗುವಂತೆ ಆಮಂತ್ರಿಸಲ್ಪಟ್ಟೆವು ಮತ್ತು ಇಲ್ಲಿ ನಮಗೆ ಮಿಷನೆರಿಗಳಾಗುವುದಕ್ಕೆ ತರಬೇತಿಯನ್ನು ನೀಡಲಾಯಿತು.

ಕ್ವಿಬೆಕ್‌ನಲ್ಲಿ ಮಿಷನೆರಿ ಕೆಲಸ

ಗಿಲ್ಯಡ್‌ನ ಹಿಂದಿನ ತರಗತಿಗಳಿಂದ ಪದವಿಯನ್ನು ಪಡೆದುಕೊಂಡ ಕೆನಡದ ಪದವೀಧರರಿಗೆ ಕ್ವಿಬೆಕ್‌ನಲ್ಲಿ ಸಾರುವ ಕೆಲಸವನ್ನು ಪ್ರಾರಂಭಿಸುವ ನೇಮಕವು ಸಿಕ್ಕಿತ್ತು. 1950ರಲ್ಲಿ, ನಮ್ಮ 14ನೇ ಕ್ಲಾಸಿನ ಇತರ 25 ಮಂದಿಯೊಂದಿಗೆ ನಾವು ಸಹ ಅವರನ್ನು ಸೇರಿಕೊಂಡೆವು. ಈ ಹೆಚ್ಚಿಸಲ್ಪಟ್ಟ ಮಿಷನೆರಿ ಕೆಲಸವು ರೋಮನ್‌ ಕ್ಯಾತೋಲಿಕ್‌ ಚರ್ಚಿನ ಮುಖಂಡರಿಂದ ಕೆರಳಿಸಲ್ಪಟ್ಟ ಉಗ್ರರೂಪದ ಹಿಂಸೆ ಮತ್ತು ದೊಂಬಿ ಹಿಂಸೆಯನ್ನು ನಮ್ಮ ಮೇಲೆ ತಂದಿತು.

ನಮ್ಮ ಪ್ರಥಮ ಮಿಷನೆರಿ ನೇಮಕವನ್ನು ಪೂರೈಸಲು ರೂಅನ್‌ ನಗರಕ್ಕೆ ಬಂದು ತಲಪಿದ ಎರಡು ದಿನಗಳ ನಂತರ, ಆ್ಯನ್‌ ಅನ್ನು ದಸ್ತಗಿರಿಮಾಡಿ ಪೋಲೀಸ್‌ ಕಾರಿನ ಹಿಂದುಗಡೆಯಲ್ಲಿ ಹಾಕಲಾಯಿತು. ಇದು ಅವಳಿಗೆ ಹೊಸ ಅನುಭವವಾಗಿತ್ತು, ಯಾಕೆಂದರೆ ಪೋಲೀಸರನ್ನು ತೀರ ಅಪರೂಪವಾಗಿ ಕಾಣುತ್ತಿದ್ದ ಕೆನಡದ ಮ್ಯಾನಿಟೋಬ ಪ್ರಾಂತದ ಒಂದು ಸಣ್ಣ ಹಳ್ಳಿಯಿಂದ ಅವಳು ಬಂದವಳಾಗಿದ್ದಳು. ಸ್ವಾಭಾವಿಕವಾಗಿಯೇ ಅವಳು ಬಹಳ ಹೆದರಿದ್ದಳು ಮತ್ತು ಆಗ ಅವಳು “ನೀನು ಅವನನ್ನು ಮದುವೆಯಾದರೆ ಖಂಡಿತವಾಗಿ ಜೈಲಿಗೆ ಹೋಗುವಿ” ಎಂಬ ಮಾತುಗಳನ್ನು ಜ್ಞಾಪಿಸಿಕೊಂಡಳು. ಹೀಗಿದ್ದರೂ, ಅಲ್ಲಿಂದ ಹೋಗುವ ಮುಂಚೆ, ಪೋಲಿಸರು ನನ್ನನ್ನು ಸಹ ಕಂಡುಹಿಡಿದು ಆ್ಯನಳೊಂದಿಗೆ ಕಾರಿನಲ್ಲಿ ಹಾಕಿದರು. ಅವಳು ಉದ್ಗರಿಸಿದ್ದು, “ನೀವು ಸಹ ಇಲ್ಲಿ ಇರುವುದು ನನಗೆ ಬಹಳ ಸಂತೋಷವನ್ನು ತರುತ್ತದೆ!” ಆದರೂ, ಅವಳು ತೀರ ಶಾಂತಳಾಗಿದ್ದು “ಯೇಸುವಿನ ಕುರಿತು ಸಾರಿದ್ದರಿಂದ ಅಪೊಸ್ತಲರಿಗೂ ಇದೇ ರೀತಿಯಾಗಿತ್ತು” ಎಂದು ಹೇಳಿದಳು. (ಅ. ಕೃತ್ಯಗಳು 4:1-3; 5:17, 18) ಅದೇ ದಿನ ನಮಗೆ ಜಾಮೀನಿನ ಮೇಲೆ ಬಿಡುಗಡೆಯಾಯಿತು.

ಈ ಘಟನೆಯಾಗಿ ಸುಮಾರು ಒಂದು ವರ್ಷದ ಬಳಿಕ, ಮಾಂಟ್ರಿಯಲ್‌ನಲ್ಲಿ ಹೋಗಿ ಸೇವೆಮಾಡುವ ಹೊಸ ನೇಮಕವು ನಮಗೆ ಸಿಕ್ಕಿತು. ಅಲ್ಲಿ ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ತೊಡಗಿದ್ದಾಗ, ಕೋಪಗೊಂಡಿದ್ದ ಜನರ ಗುಂಪೊಂದು ಕಲ್ಲುಗಳನ್ನು ತೂರುತ್ತ ಬೀದಿಯಲ್ಲಿ ಗಲಭೆ ಮಾಡುತ್ತಿರುವುದನ್ನು ನಾನು ನೋಡಿದೆ. ಆ್ಯನ್‌ ಮತ್ತು ಅವಳ ಸಂಗಡಿಗರಿಗೆ ಸಹಾಯಮಾಡಲು ನಾನು ಅಲ್ಲಿಗೆ ಹೋದಾಗ, ಪೋಲೀಸರು ಆ ಸ್ಥಳಕ್ಕೆ ಬಂದರು. ದೊಂಬಿಯನ್ನು ಮಾಡುತ್ತಿದ್ದ ಗುಂಪಿನ ಸದಸ್ಯರನ್ನು ದಸ್ತಗಿರಿ ಮಾಡುವ ಬದಲು, ಪೋಲೀಸರು ಆ್ಯನ್‌ ಮತ್ತು ಅವಳ ಸಂಗಡಿಗಳನ್ನು ದಸ್ತಗಿರಿ ಮಾಡಿದರು! ಸೆರೆಮನೆಯಲ್ಲಿರುವಾಗ ಆ್ಯನ್‌ ಈ ಹೊಸ ಸಾಕ್ಷಿಗೆ, ಯೇಸುವಿನ ಮಾತುಗಳ ನೈಜತೆಯನ್ನು ತಾವು ಅನುಭವಿಸುತ್ತಿದ್ದೇವೆಂಬುದನ್ನು ಹೀಗೆ ನೆನಪು ಹುಟ್ಟಿಸಿದಳು: “ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲರೂ ಹಗೆಮಾಡುವರು.”—ಮತ್ತಾಯ 10:22.

ಒಂದು ಸಮಯದಲ್ಲಿ, ಯೆಹೋವನ ಸಾಕ್ಷಿಗಳ ವಿರುದ್ಧ ಸುಮಾರು 1,700 ಕೇಸುಗಳು ಕ್ವಿಬೆಕ್‌ನಲ್ಲಿ ವಿಚಾರಣೆಗೆ ಬಾಕಿಯಿದ್ದವು. ಸಾಮಾನ್ಯವಾಗಿ, ನಾವು ರಾಜದ್ರೋಹದ ಸಾಹಿತ್ಯಗಳನ್ನು ಹಂಚುತ್ತಿದ್ದೇವೆ ಅಥವಾ ಪತ್ರಿಕೆಗಳನ್ನು ಯಾವುದೇ ಲೈಸನ್ಸ್‌ ಇಲ್ಲದೆ ಹಂಚುತ್ತಿದ್ದೇವೆ ಎಂಬ ಆರೋಪವನ್ನು ನಮ್ಮ ಮೇಲೆ ಹೊರಿಸಲಾಗುತ್ತಿತ್ತು. ಇದರ ಫಲಿತಾಂಶವಾಗಿ, ವಾಚ್‌ ಟವರ್‌ ಸೊಸೈಟಿಯ ಲೀಗಲ್‌ ಡಿಪಾರ್ಟ್‌ಮೆಂಟ್‌ ಕ್ವಿಬೆಕ್‌ ಸರಕಾರದ ವಿರುದ್ಧ ಮೊಕದ್ದಮೆ ಹೂಡಿತು. ಅನೇಕ ವರ್ಷಗಳ ಕಾನೂನುಬದ್ಧ ಹೋರಾಟದಲ್ಲಿ, ಕೆನಡದ ಸರ್ವೋಚ್ಚ ನ್ಯಾಯಾಲಯದಲ್ಲಿ ಎರಡು ದೊಡ್ಡ ವಿಜಯಗಳನ್ನು ಯೆಹೋವನು ನಮಗೆ ಕೊಟ್ಟನು. ಡಿಸೆಂಬರ್‌ 1950ರಲ್ಲಿ, ನಮ್ಮ ಸಾಹಿತ್ಯವು ಸರಕಾರದ ವಿರುದ್ಧವಾಗಿದೆ ಎಂಬ ಆರೋಪವು ತೆಗೆದುಹಾಕಲ್ಪಟ್ಟಿತು ಮತ್ತು ಅಕ್ಟೋಬರ್‌ 1953ರಲ್ಲಿ ಬೈಬಲ್‌ ಸಾಹಿತ್ಯವನ್ನು ಲೈಸನ್ಸ್‌ ಇಲ್ಲದೆ ಹಂಚುವ ನಮ್ಮ ಹಕ್ಕನ್ನು ಎತ್ತಿಹಿಡಿಯಲಾಯಿತು. ಹೀಗೆ ಯೆಹೋವನು ನಿಜವಾಗಿಯೂ “ನಮಗೆ ಆಶ್ರಯದುರ್ಗವಾಗಿದ್ದಾನೆ; ಆತನು ಇಕ್ಕಟ್ಟಿನಲ್ಲಿ ನಮಗೆ ವಿಶೇಷಸಹಾಯಕನು” ಆಗಿದ್ದಾನೆಂಬುದನ್ನು ನಾವು ಕಣ್ಣಾರೆ ನೋಡಿದೆವು.—ಕೀರ್ತನೆ 46:1.

ಕ್ವಿಬೆಕ್‌ನಲ್ಲಿ ಸಾಕ್ಷಿಗಳ ಸಂಖ್ಯೆಯು ಗಮನಾರ್ಹವಾಗಿ ಹೆಚ್ಚಿದೆ. ನಾನು ಅಲ್ಲಿ ಪಯನೀಯರ್‌ ಸೇವೆಯನ್ನು ಆರಂಭಿಸಿದಾಗ, ಅಂದರೆ 1945ರಲ್ಲಿ ಸುಮಾರು 356 ಸಾಕ್ಷಿಗಳಿದ್ದರು, ಆದರೆ ಈಗ ಅಲ್ಲಿ 24,000ಕ್ಕಿಂತಲೂ ಹೆಚ್ಚಿನ ಸಾಕ್ಷಿಗಳಿದ್ದಾರೆ! ಇದು ಮುಂತಿಳಿಸಲಾದ ಬೈಬಲ್‌ ಪ್ರವಾದನೆಯಂತೆಯೇ ನಿಜವಾಗಿ ನೆರವೇರಿದೆ: “ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು; ನ್ಯಾಯವಿಚಾರಣೆಯಲ್ಲಿ ನಿನಗೆ ವಿರುದ್ಧವಾಗಿ ಏಳುವ ಪ್ರತಿಯೊಂದು ನಾಲಿಗೆಯನ್ನು ದೋಷಿಯೆಂದು ನೀನು ಖಂಡಿಸುವಿ.”—ಯೆಶಾಯ 54:17.

ಫ್ರಾನ್ಸ್‌ನಲ್ಲಿ ನಮ್ಮ ಕೆಲಸ

ಸೆಪ್ಟೆಂಬರ್‌ 1959ರಲ್ಲಿ, ಆ್ಯನ್‌ ಮತ್ತು ನಾನು ಫ್ರಾನ್ಸ್‌ನ ಪ್ಯಾರಿಸ್‌ ಬೆತೆಲಿನಲ್ಲಿ ಸೇವೆಮಾಡಲು ಆಮಂತ್ರಿಸಲ್ಪಟ್ಟೆವು ಮತ್ತು ಇಲ್ಲಿ ನನಗೆ ಮುದ್ರಣದ ಮೇಲ್ವಿಚಾರಣೆ ಮಾಡುವ ನೇಮಕವು ಸಿಕ್ಕಿತು. 1960ರ ಜನವರಿಯಲ್ಲಿ ನಾವು ಇಲ್ಲಿ ಬಂದೆವು. ಅದಕ್ಕೆ ಮುಂಚೆ, ಪ್ರಿಂಟಿಂಗ್‌ ಅನ್ನು ವ್ಯಾಪಾರೀ ಪ್ರೆಸ್ಸಿನಲ್ಲಿ ಮಾಡಲಾಗುತ್ತಿತ್ತು. ಆಗಿನ ಸಮಯದಲ್ಲಿ ವಾಚ್‌ಟವರ್‌ ಪತ್ರಿಕೆಯು ಫ್ರಾನ್ಸಿನಲ್ಲಿ ನಿಷೇಧಿಸಲ್ಪಟ್ಟಿದ್ದ ಕಾರಣ, ನಾವು ಪ್ರತಿ ತಿಂಗಳು ಆ ಪತ್ರಿಕೆಯನ್ನು 64 ಪುಟದ ಪುಸ್ತಿಕೆಯ ರೂಪದಲ್ಲಿ ಮುದ್ರಿಸುತ್ತಿದ್ದೆವು. ಈ ಪುಸ್ತಿಕೆಯು ಯೆಹೋವನ ಸಾಕ್ಷಿಗಳ ಆಂತರಿಕ ಪ್ರಕಟನೆ ಎಂದು ಕರೆಯಲ್ಪಟ್ಟಿತು ಮತ್ತು ಪ್ರತಿ ತಿಂಗಳು ಸಭೆಗಳಲ್ಲಿ ಅಭ್ಯಾಸಕ್ಕಾಗಿ ಬೇಕಾಗಿದ್ದ ಲೇಖನಗಳು ಅದರಲ್ಲಿ ಇರುತ್ತಿದ್ದವು. 1960ರಿಂದ 1967ರವರೆಗೆ, ಫ್ರಾನ್ಸಿನಲ್ಲಿ ಸಾರುವ ಕೆಲಸದಲ್ಲಿ ಭಾಗವಹಿಸುವವರ ಸಂಖ್ಯೆಯು ವೃದ್ಧಿಯಾಗಿ, ಒಂದು ಸಮಯದಲ್ಲಿ 15,439ರಷ್ಟು ಇದ್ದ ಸಂಖ್ಯೆಯು 26,250ರಷ್ಟಕ್ಕೆ ಬೆಳೆಯಿತು.

ಕ್ರಮೇಣ, ಹೆಚ್ಚಿನ ಮಿಷನೆರಿಗಳಿಗೆ ಬೇರೆ ಕ್ಷೇತ್ರಗಳಲ್ಲಿ ಕೆಲಸಮಾಡುವ ಮರುನೇಮಕವು ಸಿಕ್ಕಿತು. ಕೆಲವರನ್ನು ಆಫ್ರಿಕದ ಫ್ರೆಂಚ್‌ ಮಾತನಾಡುವ ದೇಶಗಳಿಗೆ ಕಳುಹಿಸಲಾಯಿತು ಮತ್ತು ಇನ್ನೂ ಕೆಲವರು ಕ್ವಿಬೆಕ್‌ಗೆ ಹಿಂದೆರಳಿದರು. ಆ್ಯನ್‌ಳಿಗೆ ಸೌಖ್ಯವಿಲ್ಲದಿದ್ದುದರಿಂದ ಮತ್ತು ಅವಳಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದುದರಿಂದ, ನಾವು ಕ್ವಿಬೆಕ್‌ಗೆ ಹಿಂದಿರುಗಿದೆವು. ಮೂರು ವರುಷಗಳ ವೈದ್ಯಕೀಯ ಆರೈಕೆಯ ನಂತರ, ಆ್ಯನ್‌ಳ ಆರೋಗ್ಯದಲ್ಲಿ ಸುಧಾರಣೆಯಾಯಿತು. ಆಮೇಲೆ ಆತ್ಮಿಕ ಉತ್ತೇಜನವನ್ನು ಕೊಡಲು, ಪ್ರತಿ ವಾರ ಬೇರೆ ಬೇರೆ ಸಭೆಗಳನ್ನು ಸಂದರ್ಶಿಸುವ ಸರ್ಕಿಟ್‌ ಕೆಲಸದ ನೇಮಕ ನನಗೆ ಸಿಕ್ಕಿತು.

ಆಫ್ರಿಕದಲ್ಲಿ ಮಿಷನೆರಿ ಕೆಲಸ

ಕೆಲವು ವರ್ಷಗಳ ನಂತರ, ಅಂದರೆ 1981ರಲ್ಲಿ, ನಮಗೆ ಸಾಯಿರ್‌ನಲ್ಲಿ ಅಂದರೆ ಈಗಿನ ಡೆಮೊಕ್ರ್ಯಾಟಿಕ್‌ ರಿಪಬ್ಲಿಕ್‌ ಆಫ್‌ ಕಾಂಗೊದಲ್ಲಿ ಮಿಷನೆರಿಗಳಾಗಿ ಸೇವೆಸಲ್ಲಿಸುವ ಹೊಸ ನೇಮಕವು ದೊರೆತಾಗ ನಾವು ಸಂತೋಷಿಸಿದೆವು. ಅಲ್ಲಿ ಜನರು ಬಡವರಾಗಿದ್ದರು ಮತ್ತು ಅವರು ಅನೇಕ ಕಷ್ಟದೆಸೆಗಳನ್ನು ಅನುಭವಿಸುತ್ತಿದ್ದರು. ನಾವು ಅಲ್ಲಿ ಬಂದಾಗ ಕೇವಲ 25,753 ಸಾಕ್ಷಿಗಳು ಅಲ್ಲಿದ್ದರು. ಆದರೆ ಇಂದು ಅದೇ ಸಂಖ್ಯೆಯು 1,13,000ಕ್ಕಿಂತಲೂ ಹೆಚ್ಚಾಗಿದೆ ಮತ್ತು 1999ರ ಕ್ರಿಸ್ತನ ಮರಣದ ಜ್ಞಾಪಕಾಚರಣೆಗೆ ಅಲ್ಲಿ 4,46,362 ಮಂದಿ ಹಾಜರಾಗಿದ್ದರು!

ಇಸವಿ 1984ರಲ್ಲಿ ಒಂದು ಹೊಸ ಬ್ರಾಂಚ್‌ ಆಫೀಸನ್ನು ಕಟ್ಟುವ ಉದ್ದೇಶದಿಂದ ನಾವು ಸರಕಾರದಿಂದ ಸುಮಾರು 500 ಎಕರೆ ಜಮೀನನ್ನು ಪಡೆದುಕೊಂಡೆವು. ಅನಂತರ, ಡಿಸೆಂಬರ್‌ 1985ರಲ್ಲಿ, ರಾಜಧಾನಿ ನಗರವಾದ ಕಿನ್‌ಶಾಸದಲ್ಲಿ ಒಂದು ಅಂತಾರಾಷ್ಟ್ರೀಯ ಅಧಿವೇಶನವು ಜರುಗಿತು ಮತ್ತು ಲೋಕದ ಅನೇಕ ಭಾಗಗಳಿಂದ 32,000 ಪ್ರತಿನಿಧಿಗಳು ಇದಕ್ಕೆ ಹಾಜರಾಗಿದ್ದರು. ಇದಾದ ನಂತರ, ಪಾದ್ರಿಗಳಿಂದ ಉದ್ರೇಕಿಸಲ್ಪಟ್ಟ ವಿರೋಧವು ಸಾಯಿರ್‌ನಲ್ಲಿ ನಾವು ಮಾಡುತ್ತಿದ್ದ ಕೆಲಸವನ್ನು ನಿಲ್ಲಿಸಿತು. ಮಾರ್ಚ್‌ 12, 1986ರಂದು, ಸಾಯಿರ್‌ನ ಯೆಹೋವನ ಸಾಕ್ಷಿಗಳ ಒಕ್ಕೂಟವು ಕಾನೂನುಬಾಹಿರವಾಗಿದೆ ಎಂಬುದಾಗಿ ಘೋಷಿಸಿದ ಪತ್ರವೊಂದನ್ನು ಜವಾಬ್ದಾರಿಯುತ ಸಹೋದರರಿಗೆ ನೀಡಲಾಯಿತು. ನಮ್ಮ ಎಲ್ಲ ಚಟುವಟಿಕೆಗಳ ಮೇಲೆ ಹೇರಲಾದ ನಿಷೇಧವು ಆ ದೇಶದ ಆಗಿನ ಅಧ್ಯಕ್ಷರಾಗಿದ್ದ ಮಾಜಿ ಮಬೂಟೂ ಸೇಸೇ ಸೇಕೋ ಎಂಬುವರಿಂದ ಸಹಿ ಮಾಡಲ್ಪಟ್ಟಿತ್ತು.

ಈ ಕ್ಷಿಪ್ರ ಬೆಳವಣಿಗೆಗಳ ಕಾರಣದಿಂದಾಗಿ, ನಮಗೆ ಬೈಬಲಿನ ಈ ಸಲಹೆಯನ್ನು ಅನ್ವಯಿಸಬೇಕಾಗಿ ಬಂತು: “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು.” (ಜ್ಞಾನೋಕ್ತಿ 22:3) ನಮ್ಮ ಪ್ರಕಾಶನಗಳನ್ನು ಕಿನ್‌ಶಾಸ ಭಾಷೆಯಲ್ಲಿ ಮುದ್ರಿಸಬೇಕೆಂಬ ಉದ್ದೇಶದಿಂದ ನಾವು ಕಾಗದ, ಶಾಯಿ, ಫಿಲ್ಮ್‌, ಮುದ್ರಣ ಮಾಡುವ ಪ್ಲೇಟುಗಳನ್ನು ಮತ್ತು ಕೆಮಿಕಲ್ಸ್‌ಗಳನ್ನು ಹೊರದೇಶದಿಂದ ತರುವುದಕ್ಕೆ ಮಾರ್ಗಗಳನ್ನು ಹುಡುಕಿದೆವು. ಪತ್ರಿಕೆಗಳನ್ನು ಸ್ವಂತವಾಗಿ ವಿತರಿಸುವ ಹೊಸ ವಿಧಾನವನ್ನು ಸಹ ನಾವು ಆರಂಭಿಸಿದೆವು. ಒಮ್ಮೆ ಸಂಘಟಿಸಲ್ಪಟ್ಟ ನಂತರ, ನಮ್ಮ ವ್ಯವಸ್ಥೆಯು ಸರಕಾರಿ ಅಂಚೆ ಸೇವೆಯ ಸೌಲಭ್ಯಕ್ಕಿಂತಲೂ ಎಷ್ಟೋ ಉತ್ತಮವಾಗಿ ಕಾರ್ಯನಡೆಸಿತು!

ಸಾವಿರಾರು ಸಾಕ್ಷಿಗಳು ಸೆರೆಮನೆಗೆ ಹಾಕಲ್ಪಟ್ಟರು ಮತ್ತು ಅನೇಕರಿಗೆ ಕ್ರೂರವಾದ ರೀತಿಯಲ್ಲಿ ಚಿತ್ರಹಿಂಸೆ ನೀಡಲಾಯಿತು. ಹೀಗಿದ್ದರೂ, ಕೆಲವರನ್ನು ಬಿಟ್ಟು ಹೆಚ್ಚಿನವರು ಇಂತಹ ಕ್ರೂರ ಉಪಚಾರದ ಎದುರು ಅಚಲವಾಗಿ ನಿಂತರು ಮತ್ತು ತಮ್ಮ ನಂಬಿಗಸ್ತಿಕೆಯನ್ನು ಕಾಪಾಡಿಕೊಂಡರು. ನನಗೂ ದಸ್ತಗಿರಿಯಾಯಿತು ಮತ್ತು ನಮ್ಮ ಸಹೋದರರು ಜೈಲಿನಲ್ಲಿ ಅನುಭವಿಸುತ್ತಿದ್ದ ಕಠೋರ ಸ್ಥಿತಿಯನ್ನು ನಾನು ಕಣ್ಣಾರೆ ನೋಡಿದೆ. ಅನೇಕ ಸಲ ಗುಪ್ತ ಪೋಲೀಸರಿಂದ ಮತ್ತು ಅಧಿಕಾರಿಗಳಿಂದ ನಾವು ಪ್ರತಿಯೊಂದು ವಿಧದಲ್ಲಿಯೂ ಸಂಕಷ್ಟವನ್ನು ಅನುಭವಿಸಿದೆವು, ಆದರೆ ಯೆಹೋವನು ನಮಗೆ ಯಾವಾಗಲೂ ಬಿಡುಗಡೆಯ ದಾರಿಯನ್ನು ತೋರಿಸುತ್ತಿದ್ದನು.—2 ಕೊರಿಂಥ 4:8.

ವ್ಯಾಪಾರಸ್ಥನೊಬ್ಬನ ಉಗ್ರಾಣದಲ್ಲಿ ಸಾಹಿತ್ಯದ ಸುಮಾರು 3,000 ಕಾರ್ಟನ್‌ಗಳನ್ನು ನಾವು ಅಡಗಿಸಿಟ್ಟಿದ್ದೆವು. ಹೀಗಿದ್ದರೂ, ಕ್ರಮೇಣ, ಅವನ ಕೆಲಸಗಾರರಲ್ಲಿ ಒಬ್ಬನು, ಗುಪ್ತ ಪೋಲಿಸ್‌ರಿಗೆ ಮಾಹಿತಿಯನ್ನು ಕೊಟ್ಟನು ಮತ್ತು ಹಾಗಾಗಿ ಪೋಲಿಸರು ಆ ವ್ಯಾಪಾರಸ್ಥನನ್ನು ದಸ್ತಗಿರಿ ಮಾಡಿದರು. ಸೆರೆಮನೆಗೆ ಹೋಗುವ ದಾರಿಯಲ್ಲಿ, ಇವರು ಅನಿರೀಕ್ಷಿತವಾಗಿ ಕಾರಿನಲ್ಲಿ ಹೋಗುತ್ತಿದ್ದ ನನ್ನನ್ನು ಸಂಧಿಸಿದರು. ಸಾಹಿತ್ಯವನ್ನು ದಾಸ್ತಾನುಮಾಡುವ ಏರ್ಪಾಡನ್ನು ಮಾಡಿದವನು ನಾನೇ ಎಂದು ಆ ವ್ಯಾಪಾರಸ್ಥನು ನನ್ನ ಬಗ್ಗೆ ಅವರಿಗೆ ಈಗಾಗಲೇ ತಿಳಿಸಿದ್ದನು. ಆದುದರಿಂದ, ಪೋಲಿಸರು ನನ್ನನ್ನು ನಿಲ್ಲಿಸಿ, ಅದರ ಕುರಿತು ಪ್ರಶ್ನೆಗಳನ್ನು ಕೇಳಲು ಆರಂಭಿಸಿದರು ಮತ್ತು ಈ ವ್ಯಕ್ತಿಯ ಉಗ್ರಾಣದಲ್ಲಿ ಕಾನೂನುಬಾಹಿರ ಸಾಹಿತ್ಯವನ್ನು ದಾಸ್ತಾನು ಮಾಡಿಟ್ಟಿದ್ದೆನೆಂಬ ಆರೋಪವನ್ನು ನನ್ನ ಮೇಲೆ ಹೊರಿಸಿದರು.

“ನಿಮ್ಮಲ್ಲಿ ಯಾವುದಾದರೂ ಒಂದು ಪುಸ್ತಕವಿದೆಯೋ?” ಎಂದು ನಾನು ಅವರನ್ನು ಕೇಳಿದೆ.

“ಹೌದು, ನಿಶ್ಚಯವಾಗಿಯೂ ಇದೆ,” ಎಂದು ಅವರು ಉತ್ತರಿಸಿದರು.

“ನಾನು ಅದನ್ನು ನೋಡಬಹುದೋ?” ಎಂದು ನಾನು ಕೇಳಿದೆ.

ಅವರು ನನಗೆ ಒಂದು ಪ್ರತಿಯನ್ನು ಕೊಟ್ಟರು ಮತ್ತು ಒಳಪುಟದಲ್ಲಿರುವ ಈ ವಾಕ್ಯವನ್ನು ನಾನು ಅವರಿಗೆ ತೋರಿಸಿದೆ: “ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟು, ಅಮೆರಿಕದಲ್ಲಿ ಮುದ್ರಿಸಲ್ಪಟ್ಟಿದೆ.”

“ನಿಮ್ಮ ಕೈಯಲ್ಲಿರುವುದು ಅಮೆರಿಕಕ್ಕೆ ಸೇರಿದ್ದಾಗಿದೆಯೇ ಹೊರತು ಸಾಯಿರ್‌ಗೆ ಸಂಬಂಧಪಟ್ಟದ್ದಲ್ಲ” ಎಂಬುದನ್ನು ನಾನು ಅವರ ಜ್ಞಾಪಕಕ್ಕೆ ತಂದೆ. “ನಿಮ್ಮ ಸರಕಾರವು ಸಾಯಿರ್‌ನ ಯೆಹೋವನ ಸಾಕ್ಷಿಗಳ ಮಂಡಲಿಯ ಶಾಸನಬದ್ಧ ಸಂಸ್ಥೆಯ ಮೇಲೆ ನಿಷೇಧವನ್ನು ಹೇರಿದೆಯೇ ಹೊರತು ಅಮೆರಿಕದ ವಾಚ್‌ ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯ ಮೇಲಲ್ಲ. ಆದುದರಿಂದ ನೀವು ಈ ಪ್ರಕಾಶನಗಳೊಂದಿಗೆ ಏನು ಮಾಡುತ್ತೀರೆಂಬುದರ ಕುರಿತು ಬಹಳ ಜಾಗರೂಕರಾಗಿರುವುದು ಒಳ್ಳೆಯದು.”

ನನ್ನನ್ನು ಹೋಗಲು ಅವರು ಅನುಮತಿಸಿದರು, ಯಾಕೆಂದರೆ ನನ್ನ ದಸ್ತಗಿರಿಗೆ ಅವರಲ್ಲಿ ಯಾವುದೇ ಕೋರ್ಟ್‌ ಆರ್ಡರ್‌ ಇರಲಿಲ್ಲ. ಆ ರಾತ್ರಿ ಉಗ್ರಾಣಕ್ಕೆ ಎರಡು ಟ್ರಕ್ಕುಗಳನ್ನು ತೆಗೆದುಕೊಂಡು ಹೋಗಿ, ಅಲ್ಲಿರುವ ಸಾಹಿತ್ಯವನ್ನು ಅದರಲ್ಲಿ ತುಂಬಿಸಿದೆವು. ಅಧಿಕಾರಿಗಳು ಮುಂದಿನ ದಿನ ಅಲ್ಲಿಗೆ ಬಂದಾಗ, ಆ ಸ್ಥಳವು ಬರಿದಾಗಿರುವುದನ್ನು ನೋಡಿ ತುಂಬ ಕ್ಷೋಭೆಗೊಂಡರು. ಅಷ್ಟರೊಳಗೆ ಅವರು ನನ್ನನ್ನು ಹುಡುಕುತ್ತಿದ್ದರು ಯಾಕೆಂದರೆ ಈಗ ಅವರಲ್ಲಿ ನನ್ನನ್ನು ದಸ್ತಗಿರಿ ಮಾಡಲು ಕೋರ್ಟ್‌ ಆರ್ಡರ್‌ ಇತ್ತು. ಅವರು ನನ್ನನ್ನು ಕಂಡುಹಿಡಿದರು, ಆದರೆ ಅವರ ಬಳಿ ಕಾರು ಇಲ್ಲದಿದ್ದ ಕಾರಣ ನಾನೇ ಅವರನ್ನು ನನ್ನ ಕಾರಿನಲ್ಲಿ ಸೆರೆಮನೆಗೆ ಕರೆದೊಯ್ದೆ! ನನ್ನ ಕಾರನ್ನು ವಶಪಡಿಸಿಕೊಳ್ಳುವ ಮುಂಚೆ ಅದನ್ನು ಅಲ್ಲಿಂದ ಹಿಂದೆ ತೆಗೆದುಕೊಂಡು ಹೋಗುವಂತೆ ಮತ್ತೊಬ್ಬ ಸಾಕ್ಷಿಯು ನನ್ನೊಂದಿಗೆ ಜೊತೆಗೂಡಿದ್ದನು.

ಎಂಟು ತಾಸಿನ ವಿಚಾರಣೆಯ ಬಳಿಕ, ಅವರು ನನ್ನನ್ನು ಗಡೀಪಾರುಮಾಡಲು ನಿರ್ಧರಿಸಿದರು. ಸದ್ಯಕ್ಕೆ ನಿಷೇಧಿಸಲಾಗಿರುವ ಸಾಯಿರ್‌ನ ಯೆಹೋವನ ಸಾಕ್ಷಿಗಳ ಸಂಸ್ಥೆಯ ಆಸ್ತಿಯನ್ನು ನೋಡಿಕೊಳ್ಳುವ ನನ್ನ ನೇಮಕವನ್ನು ದೃಢೀಕರಿಸುವ ಸರಕಾರಿ ಪತ್ರದ ಒಂದು ನಕಲು ಪ್ರತಿಯನ್ನು ನಾನು ಅವರಿಗೆ ತೋರಿಸಿದೆ. ಹೀಗೆ ಬೆತೆಲಿನಲ್ಲಿ ನನ್ನ ಚಟುವಟಿಕೆಯನ್ನು ಮುಂದುವರಿಸುವುದಕ್ಕೆ ನನಗೆ ಅನುಮತಿಯು ಸಿಕ್ಕಿತು.

ಸಾಯಿರ್‌ನಲ್ಲಿ ನಿಷೇಧದ ಒತ್ತಡದ ಕೆಳಗೆ ನಾಲ್ಕು ವರ್ಷಗಳ ವರೆಗೆ ಸೇವೆಸಲ್ಲಿಸಿದ ನಂತರ, ಜೀವಕ್ಕೆ ಅಪಾಯವನ್ನು ಉಂಟುಮಾಡುವಂತಹ ಆಂತರಿಕ ರಕ್ತಸ್ರಾವದ ಹೊಟ್ಟೆಯ ಅಲ್ಸರ್‌ ರೋಗವು ತಗಲಿತು. ನಾನು ಸಾಯಿರ್‌ನ್ನು ಬಿಟ್ಟು ದಕ್ಷಿಣ ಆಫ್ರಿಕಕ್ಕೆ ಹೋಗಿ ಅಲ್ಲಿ ವೈದ್ಯಕೀಯ ಆರೈಕೆಯನ್ನು ಪಡೆದುಕೊಳ್ಳಬೇಕೆಂದು ನಿರ್ಣಯಿಸಲಾಯಿತು ಮತ್ತು ಇಲ್ಲಿ ಬ್ರಾಂಚ್‌ ನನ್ನ ಉತ್ತಮ ಆರೈಕೆಯನ್ನು ಮಾಡಿತು ಮತ್ತು ನಾನು ಚೇತರಿಸಿಕೊಂಡೆ. ಸಾಯಿರ್‌ನಲ್ಲಿ ಎಂಟು ವರ್ಷಗಳ ವರೆಗೆ ಸೇವೆಸಲ್ಲಿಸಿ, ನಿಜವಾಗಿಯೂ ಚಿರಸ್ಮರಣೀಯವೂ ಆನಂದದಾಯಕವೂ ಆದ ಅನುಭವವನ್ನು ಪಡೆದ ಬಳಿಕ, ನಾವು 1989ರಲ್ಲಿ ದಕ್ಷಿಣ ಆಫ್ರಿಕದ ಬ್ರಾಂಚ್‌ಗೆ ಸ್ಥಳಾಂತರಿಸಿದೆವು. 1998ರಲ್ಲಿ ನಾವು ನಮ್ಮ ಸ್ವದೇಶಕ್ಕೆ ಮರಳಿದೆವು ಮತ್ತು ಅಂದಿನಿಂದ ಹಿಡಿದು ನಾವು ಪುನಃ ಒಮ್ಮೆ ಕೆನಡದ ಬೆತೆಲಿನಲ್ಲಿ ಸೇವೆಸಲ್ಲಿಸುತ್ತಾ ಇದ್ದೇವೆ.

ಸೇವೆಗಾಗಿ ಕೃತಜ್ಞರು

ನನ್ನ 54 ವರ್ಷಗಳ ಪೂರ್ಣ ಸಮಯದ ಶುಶ್ರೂಷೆಯನ್ನು ಗಮನಿಸುವಾಗ, ನನ್ನ ಯೌವನದ ಚೈತನ್ಯವನ್ನು ಯೆಹೋವನ ಅಮೂಲ್ಯವಾದ ಸೇವೆಯಲ್ಲಿ ವ್ಯಯಿಸಿದ್ದೇನೆಂಬುದಕ್ಕೆ ನಾನು ದೇವರಿಗೆ ಬಹಳ ಉಪಕಾರಸಲ್ಲಿಸುತ್ತೇನೆ. ಈ ಸಮಯಗಳಲ್ಲಿ ಅನೇಕ ಪರೀಕ್ಷೆಗಳನ್ನು ಆ್ಯನ್‌ ಎದುರಿಸಬೇಕಾಗಿತ್ತಾದರೂ, ಅವಳು ಯಾವುದೇ ಆಕ್ಷೇಪಣೆಯನ್ನು ಮಾಡದೆ ನಮ್ಮ ಎಲ್ಲ ಚಟುವಟಿಕೆಗಳಿಗೆ ಉತ್ತಮ ಬೆಂಬಲವನ್ನು ಕೊಟ್ಟಿದ್ದಾಳೆ. ಅನೇಕರು ಯೆಹೋವನನ್ನು ತಿಳಿದುಕೊಳ್ಳುವಂತೆ ಸಹಾಯಮಾಡುವ ಸುಯೋಗವು ನಮಗಿತ್ತು ಮತ್ತು ಸಹಾಯಪಡೆದುಕೊಂಡವರಲ್ಲಿ ಅನೇಕರು ಪೂರ್ಣ ಸಮಯದ ಶುಶ್ರೂಷೆಯಲ್ಲಿ ಈಗಲೂ ಇದ್ದಾರೆ. ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಸಹ ನಮ್ಮ ಮಹಾನ್‌ ದೇವರಾಗಿರುವ ಯೆಹೋವನನ್ನು ಸೇವಿಸುವುದನ್ನು ಕಾಣುವುದು ಎಂತಹ ಸಂತೋಷವನ್ನು ತರುತ್ತದೆ!

ಈ ಲೋಕದಲ್ಲಿರುವ ಯಾವುದೇ ವಿಷಯವು ಯೆಹೋವನು ನಮಗೆ ಕೊಟ್ಟಿರುವ ಸುಯೋಗಗಳಿಗೆ ಮತ್ತು ಆಶೀರ್ವಾದಗಳಿಗೆ ಸರಿಸಾಟಿಯಾಗಿರುವುದಿಲ್ಲ ಎಂಬುದನ್ನು ನಾನು ದೃಢವಾಗಿ ನಂಬಿದ್ದೇನೆ. ನಾವು ಅನೇಕ ಸಂಕಷ್ಟಗಳನ್ನು ಸಹಿಸಿಕೊಂಡಿದ್ದೇವೆಂಬುದು ನಿಜ, ಆದರೆ ಈ ಎಲ್ಲ ಅನುಭವಗಳಿಂದ ಯೆಹೋವನಲ್ಲಿರುವ ನಮ್ಮ ನಂಬಿಕೆ ಮತ್ತು ವಿಶ್ವಾಸವು ಇನ್ನೂ ದೃಢವಾಗಿದೆ. ಆತನು ಬಲದ ಕೋಟೆಯಾಗಿ, ಆಶ್ರಯದುರ್ಗವಾಗಿ ಮತ್ತು ಸಂಕಷ್ಟದ ಸಮಯದಲ್ಲಿ ಸಹಾಯಹಸ್ತವನ್ನು ನೀಡುವವನಾಗಿ ಪರಿಣಮಿಸಿದ್ದಾನೆಂಬುದು ಖಂಡಿತ.

[ಪಾದಟಿಪ್ಪಣಿಗಳು]

^ ಪ್ಯಾರ. 9 ಕ್ರಾಯ್‌ಟ್ಸ್‌ಟ್ಸು ಕಗೀಗನ್‌ ಡಾಸ್‌ ಕ್ರಿಸ್ಟನ್‌ಟುಮ್‌ (ಕ್ರೈಸ್ತತ್ವದ ವಿರುದ್ಧ ಆಂದೋಲನ) ಎಂಬ ಪುಸ್ತಕವು ಮೂಲತಃ ಜರ್ಮನ್‌ ಭಾಷೆಯಲ್ಲಿ ಪ್ರಕಾಶಿಸಲ್ಪಟ್ಟಿತ್ತು. ಈ ಪುಸ್ತಕವನ್ನು ಫ್ರೆಂಚ್‌ ಮತ್ತು ಪೊಲೀಷ್‌ ಭಾಷೆಗಳಲ್ಲಿ ತರ್ಜುಮೆ ಮಾಡಲಾಯಿತೇ ಹೊರತು ಇಂಗ್ಲಿಷ್‌ ಭಾಷೆಯಲ್ಲಿ ಮಾಡಲಾಗಲಿಲ್ಲ.

[ಪುಟ 26ರಲ್ಲಿರುವ ಚಿತ್ರಗಳು]

ಇಸವಿ 1947ರಲ್ಲಿ ಒಟ್ಟಿಗೆ ಪಯನೀಯರ್‌ ಸೇವೆಯನ್ನು ಮಾಡುತ್ತಿರುವುದು; ಇಂದು ಆ್ಯನ್‌ ಜೊತೆಗೆ

[ಪುಟ 29ರಲ್ಲಿರುವ ಚಿತ್ರ]

ಸಾಯಿರ್‌ನಲ್ಲಿ ನಾವು ಭೇಟಿಯಾದ ಜನರು ಬೈಬಲಿನ ಸತ್ಯವನ್ನು ಪ್ರೀತಿಸುತ್ತಾರೆ