ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಪಾಯ ಕ್ಷೇತ್ರದಿಂದ ದೂರವಿರಿ!

ಅಪಾಯ ಕ್ಷೇತ್ರದಿಂದ ದೂರವಿರಿ!

ಅಪಾಯ ಕ್ಷೇತ್ರದಿಂದ ದೂರವಿರಿ!

ಅವಲೋಕನೆಗಳನ್ನು ಮಾಡಿ, ಪುರಾವೆಯನ್ನು ಕಂಡುಹಿಡಿದು, ಮುಂದಾಗುವ ಜ್ವಾಲಾಮುಖಿ ಸ್ಫೋಟಗಳ ಕುರಿತು ಜನರಿಗೆ ಎಚ್ಚರಿಕೆ ನೀಡುವುದು ಜ್ವಾಲಾಮುಖಿಶಾಸ್ತ್ರಜ್ಞರ ಕೆಲಸವಾಗಿದೆ. (ಫೂಗೆನ್‌ ಪರ್ವತವು ಸ್ಫೋಟಗೊಂಡ ಕೂಡಲೇ, ಆ ಅಪಾಯ ಕ್ಷೇತ್ರದಿಂದ ಜನರನ್ನು ದೂರವಿಡುವುದು ಪೊಲೀಸರ ಕೆಲಸವಾಗಿತ್ತು.) ಅದೇ ರೀತಿಯಲ್ಲಿ, ಬೈಬಲ್‌ ವಿದ್ಯಾರ್ಥಿಗಳು ‘ವಿಷಯಗಳ ವ್ಯವಸ್ಥೆಯ ಸಮಾಪ್ತಿಯ’ (NW) ಕುರಿತ ಸೂಚನೆಯನ್ನು ಅವಲೋಕಿಸಿ, ತಲೆಯ ಮೇಲೆ ತೂಗಾಡುತ್ತಿರುವ ಅಪಾಯದ ಕುರಿತು ಇತರರಿಗೆ ಎಚ್ಚರಿಕೆಯನ್ನು ನೀಡುತ್ತಾರೆ.—ಮತ್ತಾಯ 24:3.

ಸನ್ನಿಹಿತವಾಗಿರುವ ಭೌಗೋಲಿಕ ವಿಪ್ಲವದ ಕುರಿತು ಎಚ್ಚರಿಸುವ ಬೈಬಲಿನ ಅದೇ ಅಧ್ಯಾಯದಲ್ಲಿ, ಆರಂಭದ ವಿಕಸನಗಳ ಕುರಿತ ಈ ವರ್ಣನೆಯನ್ನು ನಾವು ಓದಸಾಧ್ಯವಿದೆ. ಅದು ಹೇಳುವುದು: “ಜನಕ್ಕೆ ವಿರೋಧವಾಗಿ ಜನವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು; ಮತ್ತು ಅಲ್ಲಲ್ಲಿ ಬರಗಳು ಬರುವವು, ಭೂಕಂಪಗಳು ಆಗುವವು. . . . ಬಹುಮಂದಿ ಸುಳ್ಳುಪ್ರವಾದಿಗಳು ಸಹ ಎದ್ದು ಅನೇಕರನ್ನು ಮೋಸಗೊಳಿಸುವರು. ಇದಲ್ಲದೆ ಅಧರ್ಮವು ಹೆಚ್ಚಾಗುವದರಿಂದ ಬಹು ಜನರ ಪ್ರೀತಿಯು ತಣ್ಣಗಾಗಿಹೋಗುವದು. . . . ಇದಲ್ಲದೆ ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು; ಆಗ ಅಂತ್ಯವು ಬರುವದು.”—ಮತ್ತಾಯ 24:7-14.

ಈ ಪ್ರವಾದನೆಯ ಸದ್ಯದ ನೆರವೇರಿಕೆಯನ್ನು ವಿವೇಚಿಸಿ ತಿಳಿದುಕೊಳ್ಳಲು ನಾವು ವಾರ್ತಾ ಪರೀಕ್ಷಕರಾಗಿರುವ ಅಗತ್ಯವಿಲ್ಲ. ವಿಶೇಷವಾಗಿ 1914ರಿಂದ ನಾವು ಅದನ್ನು ಅನುಭವಿಸಿದ್ದೇವೆ. ಈ ಶತಮಾನವು ಎರಡು ವಿಶ್ವ ಯುದ್ಧಗಳನ್ನು, ಅಸಂಖ್ಯಾತ ಅಂತರ್ಯುದ್ಧಗಳನ್ನು, ಸ್ಥಳಿಕ ಕಾದಾಟಗಳನ್ನು ಮತ್ತು ಕುಲವಾದ ಹಾಗೂ ಧಾರ್ಮಿಕ ಹೋರಾಟಗಳನ್ನು ನೋಡಿದೆ. ನೈಸರ್ಗಿಕ ವಿಪತ್ತುಗಳಿಂದಾಗುವ ಕೊರತೆಗಳಿಗೆ ಕೂಡಿಸಿ ಇಂತಹ ಯುದ್ಧಗಳಿಂದಾಗಿಯೂ ಮಾನವಕುಲವು ಆಹಾರದ ಅಭಾವವನ್ನು ಅನುಭವಿಸಿದೆ. ಭೂಕಂಪಗಳು ಅನೇಕ ಜನರನ್ನು ತಮ್ಮ ಒಡಲಿಗೆ ಸೇರಿಸಿಕೊಂಡಿವೆ. ಸಂದೇಹಾಸ್ಪದ ಮುಖಂಡರುಗಳೊಂದಿಗಿನ ಕುಪಂಥಗಳು ಮತ್ತು ಮತಭ್ರಾಂತ ಹಿಂಬಾಲಕರು ನಾಯಿಕೊಡೆಗಳಂತೆ ಎಲ್ಲೆಲ್ಲೂ ಹಬ್ಬಿದ್ದಾರೆ. ‘ಅಧರ್ಮದ ಹೆಚ್ಚಾಗುವಿಕೆಯು’ ಜನರು ಪ್ರೀತಿಯನ್ನು ತೋರಿಸದಿರುವಂತೆ ಮಾಡಿದೆ. ಮತ್ತು ನೆರೆಹೊರೆಯ ಸ್ನೇಹ ಅನ್ನುವ ಮಾತೇ ಈಗ ಇಲ್ಲವಾಗಿದೆ.

ಈ ಸೂಚನೆಯ ಮತ್ತೊಂದು ಅಂಶವಾದ ಲೋಕವ್ಯಾಪಕ ಸಾರುವ ಕೆಲಸವು ಖಂಡಿತವಾಗಿಯೂ ಪೂರೈಸಲ್ಪಡುತ್ತಿದೆ. ಈ ಪತ್ರಿಕೆಯ ಮುಖಪುಟವನ್ನು ನೋಡಿರಿ, ಅಲ್ಲಿ ನೀವು ಶೀರ್ಷಿಕೆಯ ಒಂದು ಭಾಗವಾಗಿ “ಯೆಹೋವನ ರಾಜ್ಯವನ್ನು ಪ್ರಕಟಿಸುವುದು” ಎಂಬ ಈ ನುಡಿಗಳನ್ನು ಕಂಡುಕೊಳ್ಳುವಿರಿ. ಕಾವಲಿನಬುರುಜು ಪತ್ರಿಕೆಯು ಸುಮಾರು 132 ಭಾಷೆಗಳಲ್ಲಿ ಪ್ರಕಾಶಿಸಲ್ಪಡುತ್ತದೆ ಮತ್ತು 2.2 ಕೋಟಿಗಳಿಗಿಂತಲೂ ಹೆಚ್ಚು ಪತ್ರಿಕೆಗಳು ಮುದ್ರಣವಾಗುತ್ತವೆ. ಇದು ಭೂಮ್ಯಾದ್ಯಂತ ‘ಪರಲೋಕ ರಾಜ್ಯದ ಈ ಸುವಾರ್ತೆಯನ್ನು’ ಸಾರುವವರೆಲ್ಲರಿಗೂ ಮುಖ್ಯ ಸಾಧನವಾಗಿದೆ. ಈ ಸುವಾರ್ತೆಯು ವಿಶ್ವದ ಸೃಷ್ಟಿಕರ್ತನಾದ ಯೆಹೋವ ದೇವರು ಸ್ವರ್ಗೀಯ ರಾಜ್ಯವನ್ನು ಸ್ಥಾಪಿಸಿದ್ದಾನೆ ಮತ್ತು ಇದು ವಿಷಯಗಳ ಈ ದುಷ್ಟ ವ್ಯವಸ್ಥೆಯನ್ನು ನಾಶಮಾಡಿ, ಭೂಮಿಯಲ್ಲಿ ಒಂದು ಪ್ರಮೋದವನವನ್ನು ತರುವುದು ಎಂಬ ಸಂದೇಶವನ್ನು ಒಳಗೊಳ್ಳುತ್ತದೆ. ದೇವರು ಬಲು ಬೇಗನೆ ಕ್ರಿಯೆಗೈಯುವನು ಎಂಬ ಸೂಚನೆಯನ್ನು ನಾವೀಗ ನೋಡಸಾಧ್ಯವಿದೆ. ಅಷ್ಟುಮಾತ್ರವಲ್ಲದೆ, ವಿಷಯಗಳ ಈ ವ್ಯವಸ್ಥೆಯಲ್ಲಿ ಜನರ ಜೀವಿತಗಳು ನಿಜವಾಗಿಯೂ ಅಪಾಯದಲ್ಲಿವೆ.—ಹೋಲಿಸಿ 2 ತಿಮೊಥೆಯ 3:1-5; 2 ಪೇತ್ರ 3:3, 4; ಪ್ರಕಟನೆ 6:1-8.

ಯೆಹೋವನ ಭಯಪ್ರೇರಕ ದಿನ

ಯೆಹೋವ ದೇವರ ನ್ಯಾಯತೀರ್ಪಿನ ಕಾಲವು ಪರಿಪಕ್ವವಾದಾಗ ಏನಾಗುವುದು? ಆಗ ಏನು ಸಂಭವಿಸುವುದು ಎಂಬುದರ ಕುರಿತಾದ ಚಿತ್ರಾತ್ಮಕವಾದ ಆತನ ಸ್ವಂತ ವರ್ಣನೆಯನ್ನು ಕೇಳಿಸಿಕೊಳ್ಳಿರಿ. ಅದು ಹೇಳುವುದು: “ಯೆಹೋವನ ಆಗಮನದ ಭಯಂಕರವಾದ ಮಹಾದಿನವು ಬರುವದಕ್ಕೆ ಮುಂಚೆ ಭೂಮ್ಯಾಕಾಶಗಳಲ್ಲಿ ರಕ್ತ ಬೆಂಕಿ ಧೂಮಸ್ತಂಭ ಈ ಉತ್ಪಾತಗಳನ್ನು ಉಂಟುಮಾಡುವೆನು; ಸೂರ್ಯನು ಕತ್ತಲಾಗುವನು, ಚಂದ್ರನು ರಕ್ತವಾಗುವನು.”—ಯೋವೇಲ 2:30, 31.

ಯಾವುದೇ ಜ್ವಾಲಾಮುಖಿ ಸ್ಫೋಟ ಅಥವಾ ಭೂಕಂಪಕ್ಕಿಂತಲೂ ಅತ್ಯಂತ ಭೀತಿಕಾರಕವೂ ವಿನಾಶಕಾರಿಯೂ ಆಗಿರುವಂತಹ ಆ ದಿನವು ಸನ್ನಿಹಿತವಾಗಿದೆ. ಪ್ರವಾದಿಯಾದ ಚೆಫನ್ಯನು ಹೇಳುವುದು: “ಯೆಹೋವನ ಮಹಾದಿನವು ಹತ್ತಿರವಾಯಿತು, ಸಮೀಪಿಸಿತು, ಬಹು ತ್ವರೆಯಾಗಿ ಬರುತ್ತಿದೆ. . . . ಆತನ ರೋಷಾಗ್ನಿಯು ದೇಶವನ್ನೆಲ್ಲಾ ನುಂಗಿಬಿಡುವದು; ಆತನು ದೇಶನಿವಾಸಿಗಳೆಲ್ಲರನ್ನೂ ಕೊನೆಗಾಣಿಸುವನು, ಹೌದು, ಘೋರವಾಗಿ ನಿರ್ಮೂಲಮಾಡುವನು.” ‘ಯೆಹೋವನ ರೌದ್ರದ ದಿನದಲ್ಲಿ ಅವರ ಬೆಳ್ಳಿಬಂಗಾರಗಳು ಕೂಡಾ ಅವರನ್ನು ರಕ್ಷಿಸದೇ’ ಹೋಗುವುದಾದರೂ, ಆ ಭಯಪ್ರೇರಕ ದಿನವನ್ನು ಪಾರಾಗಿ ಉಳಿಯಲಿಕ್ಕೆ ಒಂದು ಮಾರ್ಗವಿದೆ.—ಚೆಫನ್ಯ 1:14-18.

ಆ ಮಾರ್ಗವು ಯಾವುದಾಗಿದೆ ಎಂಬುದನ್ನು ತೋರಿಸುತ್ತಾ, ಚೆಫನ್ಯನು ಹೇಳುವುದು: “ಯೆಹೋವನ ಉಗ್ರಕೋಪವು ನಿಮ್ಮ ಮೇಲೆ ಬರುವದಕ್ಕೆ ಮುಂಚೆ, ಯೆಹೋವನ ಸಿಟ್ಟಿನ ದಿನವು ನಿಮ್ಮನ್ನು ಮುಟ್ಟುವದಕ್ಕೆ ಮೊದಲು ಸೇರಿಬನ್ನಿರಿ, ಕೂಡಿಕೊಳ್ಳಿರಿ. ಯೆಹೋವನ ನಿಯಮವನ್ನು ಕೈಕೊಂಡ ಲೋಕದ ದೀನರೇ, ನೀವೆಲ್ಲರೂ ಯೆಹೋವನನ್ನು ಆಶ್ರಯಿಸಿರಿ [“ಹುಡುಕಿರಿ,” NW], ಸದ್ಧರ್ಮವನ್ನು ಅಭ್ಯಾಸಿಸಿರಿ, ದೈನ್ಯವನ್ನು ಹೊಂದಿಕೊಳ್ಳಿರಿ; ಯೆಹೋವನ ಸಿಟ್ಟಿನ ದಿನದಲ್ಲಿ ಒಂದುವೇಳೆ ಮರೆಯಾಗುವಿರಿ.” (ಚೆಫನ್ಯ 2:1-3) ‘ಯೆಹೋವನನ್ನು ಹುಡುಕುತ್ತಾ, ಸದ್ಧರ್ಮವನ್ನು ಅಭ್ಯಾಸಿಸುತ್ತಾ, ಮತ್ತು ದೈನ್ಯವನ್ನು ಹೊಂದಿಕೊಳ್ಳುತ್ತಾ’ ನಾವು ಆಶ್ರಯವನ್ನು ಪಡೆದುಕೊಳ್ಳಸಾಧ್ಯವಿದೆ. ಆದರೆ ಇಂದು ಯೆಹೋವನನ್ನು ಯಾರು ಹುಡುಕುತ್ತಿದ್ದಾರೆ?

ಅವರ ಸಾರುವ ಕಾರ್ಯದ ಕಾರಣದಿಂದಾಗಿ “ಯೆಹೋವ” ಎಂಬ ಪದವನ್ನು ನೀವು ಯೆಹೋವನ ಸಾಕ್ಷಿಗಳಿಗೆ ಜೋಡಿಸುವಿರಿ ಎಂಬುದಂತೂ ಖಂಡಿತ. ಅವರಲ್ಲಿ ಒಬ್ಬರಿಂದ ನೀವು ಈ ಪತ್ರಿಕೆಯನ್ನು ಪಡೆದುಕೊಂಡಿದ್ದಿರಬಹುದು. ಮತ್ತು ಅವರು ಪ್ರಾಮಾಣಿಕವಾದ ರೀತಿಯಲ್ಲಿ ಜೀವಿಸುತ್ತಾ ಒಳ್ಳೆಯ ನಾಗರಿಕರಾಗಿ ಪ್ರಸಿದ್ಧರಾಗಿದ್ದಾರೆ. ದೀನಭಾವದ ವಿಕಸನೆಯನ್ನು ಸಹ ಒಳಗೂಡುವಂತಹ “ನೂತನಸ್ವಭಾವವನ್ನು” ಧರಿಸಿಕೊಳ್ಳಲು ಅವರು ಪ್ರಯತ್ನಿಸುತ್ತಿದ್ದಾರೆ. (ಕೊಲೊಸ್ಸೆ 3:8-10) ಭೂಮ್ಯಾದ್ಯಂತ ಯೆಹೋವನ ಸಾಕ್ಷಿಗಳ ಸಭೆಗಳಿಂದ ಸ್ಥಳಿಕವಾಗಿ ಪ್ರತಿನಿಧಿಸಲ್ಪಡುವ ಯೆಹೋವನ ದೃಶ್ಯ ಸಂಸ್ಥೆಯಿಂದ ಶಿಕ್ಷಣವನ್ನು ಪಡೆದುಕೊಳ್ಳುವುದರಿಂದ ಇದು ಸಾಧ್ಯವಾಗುತ್ತದೆ ಎಂಬುದನ್ನು ಇವರು ಒಪ್ಪಿಕೊಳ್ಳುತ್ತಾರೆ. ಲೋಕದಾದ್ಯಂತವಿರುವ ಯೆಹೋವನ ಸಾಕ್ಷಿಗಳ ‘ಸಹೋದರರ ಇಡೀ ಒಕ್ಕೂಟದೊಂದಿಗೆ’ (NW) ನೀವು ಸಹ ಆಶ್ರಯವನ್ನು ಪಡೆದುಕೊಳ್ಳಸಾಧ್ಯವಿದೆ.—1 ಪೇತ್ರ 5:9.

ಇಂದು ಆಶ್ರಯವನ್ನು ಪಡೆದುಕೊಳ್ಳಿರಿ

ಯೆಹೋವನನ್ನು ಹುಡುಕುತ್ತಾ ಆಶ್ರಯವನ್ನು ಪಡೆದುಕೊಳ್ಳಬೇಕಾದರೆ, ನಾವು ಆತನ ಸ್ನೇಹಿತರಾಗಿರತಕ್ಕದ್ದು. ಅದು ಏನನ್ನು ಒಳಗೂಡುತ್ತದೆ? ಬೈಬಲು ಇದಕ್ಕೆ ಉತ್ತರಿಸುವುದು: “ಇಹಲೋಕಸ್ನೇಹವು ದೇವವೈರವೆಂದು ನಿಮಗೆ ತಿಳಿಯದೋ? ಲೋಕಕ್ಕೆ ಸ್ನೇಹಿತನಾಗಬೇಕೆಂದಿರುವವನು ತನ್ನನ್ನು ದೇವರಿಗೆ ವಿರೋಧಿಯನ್ನಾಗಿ ಮಾಡಿಕೊಳ್ಳುತ್ತಾನೆ.” (ಯಾಕೋಬ 4:4) ದೇವರೊಂದಿಗೆ ಸ್ನೇಹಿತರಾಗಿರಬೇಕಾದರೆ, ದೇವರ ಕಡೆಗೆ ದಂಗೆಕೋರ ಮನೋಭಾವವನ್ನು ಬೆಳೆಸಿಕೊಂಡಿರುವ ಸದ್ಯದ ದುಷ್ಟ ಲೋಕದೊಂದಿಗೆ ಯಾವುದೇ ಭಾವನಾತ್ಮಕ ಒಲವನ್ನು ಹೊಂದಿರಕೂಡದು.

ಬೈಬಲು ನಮಗೆ ಬುದ್ಧಿವಾದ ನೀಡುವುದು: “ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ. ಯಾವನಾದರೂ ಲೋಕವನ್ನು ಪ್ರೀತಿಸಿದರೆ ತಂದೆಯ ಮೇಲಣ ಪ್ರೀತಿಯು ಅವನಲ್ಲಿಲ್ಲ. ಲೋಕದಲ್ಲಿರುವ ಶರೀರದಾಶೆ ಕಣ್ಣಿನಾಶೆ ಬದುಕುಬಾಳಿನ ಡಂಬ ಈ ಮೊದಲಾದವುಗಳೆಲ್ಲವು ತಂದೆಯಿಂದ ಹುಟ್ಟದೆ ಲೋಕದಿಂದ ಹುಟ್ಟಿದವುಗಳಾಗಿವೆ. ಲೋಕವೂ ಅದರ ಆಶೆಯೂ ಗತಿಸಿ ಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.” (1 ಯೋಹಾನ 2:15-17) ಇಂದು ಅನೇಕ ಜನರು ಶಾರೀರಿಕ ಅಭಿಲಾಷೆಗಳಿಂದ ಅಂದರೆ, ಕಾಮಪಿಪಾಸೆ, ಧನದಾಹ ಮತ್ತು ಅಧಿಕಾರದ ಅಪಪ್ರಯೋಗದಿಂದ ಪ್ರಚೋದಿಸಲ್ಪಟ್ಟಿದ್ದಾರೆ. ಆದರೆ ಯೆಹೋವನ ಪಕ್ಷದಲ್ಲಿರಲು ಬಯಸುವವರು ಇಂತಹ ಅಭಿಲಾಷೆಗಳ ಮೇಲೆ ಜಯಸಾಧಿಸಬೇಕು.—ಕೊಲೊಸ್ಸೆ 3:5-8.

ಈ ಪತ್ರಿಕೆಯನ್ನು ನೀವು ಆಗಿಂದಾಗ್ಗೆ ಓದಿದ್ದಿರಬಹುದು, ಅಷ್ಟುಮಾತ್ರವಲ್ಲ ಇದು ಬೈಬಲ್‌ ಪ್ರವಾದನೆಗಳು ನೆರವೇರುವವು ಎಂಬುದನ್ನು ಎತ್ತಿತೋರಿಸುವುದನ್ನು ನೀವು ಒಪ್ಪಿಕೊಳ್ಳಲೂಬಹುದು. ಆದರೂ, ಯೆಹೋವನ ಸಾಕ್ಷಿಗಳೊಂದಿಗೆ ಒಡನಾಟ ಮಾಡುವುದರ ವಿಷಯದಲ್ಲಿ ಹೆಜ್ಜೆಯನ್ನು ತೆಗೆದುಕೊಳ್ಳಲು ನೀವು ಹಿಂದುಮುಂದು ನೋಡಬಹುದು. ಆದರೆ ನಾವೇನಾದರೂ ವಿಪತ್ತಿಗೊಳಗಾಗುವುದಾದರೆ, ಎಚ್ಚರಿಕೆಯನ್ನು ಕೇಳಿಸಿಕೊಳ್ಳುವುದಷ್ಟೇ ಸಾಕೋ? ನಾವು ಫೂಗೆನ್‌ ಪರ್ವತದ ಸ್ಫೋಟದ ವಿಷಯದಲ್ಲಿ ಗಮನಿಸಿದಂತೆ, ನಾವು ಎಚ್ಚರಿಕೆಗೆ ತಕ್ಕ ಕ್ರಿಯೆಯನ್ನು ಕೈಗೊಳ್ಳಬೇಕು. ಇದನ್ನು ಜ್ಞಾಪಿಸಿಕೊಳ್ಳಿರಿ, ಮಾಹಿತಿಯನ್ನು ಸಂಗ್ರಹಿಸುವ ಉದ್ದೇಶದೊಂದಿಗೆ ಅಲ್ಲಿಗೆ ಹೋದ ಕಡಿಮೆಪಕ್ಷ 15 ವಾರ್ತಾ ವರದಿಗಾರರು ಮತ್ತು ಕ್ಯಾಮರಾಮೆನ್‌ ತಮ್ಮ ಜೀವಗಳನ್ನು ಕಳೆದುಕೊಂಡರು. ಒಬ್ಬ ಫೋಟೋಗ್ರಾಫರನಂತೂ ತನ್ನ ಕ್ಯಾಮರಾದ ಬಟನ್‌ ಮೇಲೆ ಬೆರಳನ್ನಿಟ್ಟಂತೆ ಮೃತನಾಗಿದ್ದನು. “ಸಾವೇನಾದರೂ ನನ್ನ ಮನೆಯ ಬಾಗಿಲನ್ನು ತಟ್ಟಿದರೆ, ಆಗ ನಾನು ಜ್ವಾಲಾಮುಖಿಯ ಮಡಿಲಲ್ಲಿಯೇ ಪ್ರಾಣಬಿಡಲು ಇಷ್ಟಪಡುತ್ತೇನೆ” ಎಂದು ಹೇಳಿದ್ದ ಒಬ್ಬ ಜ್ವಾಲಾಮುಖಿಶಾಸ್ತ್ರಜ್ಞನು, ಅವನಿಚ್ಛೆಯಂತೆಯೇ ಪ್ರಾಣಬಿಟ್ಟನು. ಇವರೆಲ್ಲರೂ ತಮ್ಮ ಕೆಲಸಕ್ಕಾಗಿ ಮತ್ತು ಬೆನ್ನಟ್ಟುವಿಕೆಗಳಿಗಾಗಿ ತಮ್ಮನ್ನೇ ಸಮರ್ಪಿಸಿಕೊಂಡಿದ್ದರು. ಆದರೂ ಇವರು ತಮ್ಮ ಜೀವಗಳನ್ನು ತೆರಬೇಕಾಯಿತು. ಇದು ಎಚ್ಚರಿಕೆಯನ್ನು ತಳ್ಳಿಹಾಕಿದ್ದರ ಬೆಲೆಯಾಗಿತ್ತು.

ವಿಷಯಗಳ ಈ ದುಷ್ಟ ವ್ಯವಸ್ಥೆಯನ್ನು ದೇವರು ನಾಶಮಾಡುತ್ತಾನೆ ಎಂಬುದರ ಸಂದೇಶವನ್ನು ಇಂದು ಅನೇಕರು ಕೇಳಿಸಿಕೊಳ್ಳುತ್ತಾರೆ ಮತ್ತು ಒಂದಷ್ಟರ ಮಟ್ಟಿಗೆ, ಆ ಎಚ್ಚರಿಕೆಗೆ ದೃಢ ಆಧಾರವನ್ನು ವಿವೇಚಿಸಿ ತಿಳಿದುಕೊಳ್ಳುತ್ತಾರೆ. ‘ಅದು ಬಂದೇ ಬರುತ್ತದೆ, ಆದರೆ ಅದು ಈ ದಿವಸವಂತೂ ಅಲ್ಲ’ ಎಂದು ಅವರು ತರ್ಕಿಸಬಹುದು. ಈ ಕ್ಷಣಕ್ಕೆ ಅವರ ಕಣ್ಣಿಗೆ ಯಾವುದು ತುಂಬ ಮುಖ್ಯವೆಂದೆಣಿಸುತ್ತದೋ ಅದನ್ನು ಬಿಟ್ಟುಕೊಡದೇ ಇರಲಿಕ್ಕಾಗಿ ತಮ್ಮ ಅನುಕೂಲಕ್ಕೆ ತಕ್ಕಂತೆ ಯೆಹೋವನ ದಿನವನ್ನು ಇವರು ಮುಂದೆಹಾಕುತ್ತಾರೆ.

ಬಾರೂಕನಿಗೆ ಇಂತಹದ್ದೇ ಒಂದು ಸಮಸ್ಯೆಯಿತ್ತು. ಪ್ರವಾದಿಯಾದ ಯೆರೆಮೀಯನ ಕಾರ್ಯದರ್ಶಿಯಾಗಿದ್ದ ಬಾರೂಕನು, ಯೆರೂಸಲೇಮಿನ ಮೇಲೆ ಆಗಲಿದ್ದ ದಂಡನೆಯ ಕುರಿತು ಇಸ್ರಾಯೇಲ್ಯರಿಗೆ ಧೈರ್ಯದಿಂದ ಎಚ್ಚರಿಕೆಯನ್ನು ನೀಡಿದನು. ಆದರೆ ಒಂದು ಸಂದರ್ಭದಲ್ಲಿ, ಅವನು ತನ್ನ ನೇಮಕದಿಂದ ಬೇಸತ್ತುಹೋದನು. ಆಗ, ಯೆಹೋವನು ಈ ಮಾತುಗಳಿಂದ ಅವನನ್ನು ತಿದ್ದಿದನು: “ಮಹಾಪದವಿಯನ್ನು ನಿರೀಕ್ಷಿಸಿಕೊಳ್ಳುತ್ತೀಯೋ? ನಿರೀಕ್ಷಿಸ ಬೇಡ.” ಧನಕನಕವಾಗಿರಲಿ, ಖ್ಯಾತಿಯಾಗಿರಲಿ, ಇಲ್ಲವೇ ಆರ್ಥಿಕ ಭದ್ರತೆಯಾಗಿರಲಿ ಬಾರೂಕನು ‘ತನಗಾಗಿ ಮಹಾಪದವಿಯನ್ನು ನಿರೀಕ್ಷಿಸಬಾರದಿತ್ತು.’ ಅವನು ಒಂದೇ ಒಂದು ವಿಷಯದಲ್ಲಿ ಆಸಕ್ತನಾಗಿರಬೇಕಿತ್ತು. ಅದೇನೆಂದರೆ, ದೇವರ ಪಕ್ಷದಲ್ಲಿರುವಂತೆ ಜನರಿಗೆ ಸಹಾಯಮಾಡುವುದರ ಮೂಲಕ ದೇವರ ಚಿತ್ತವನ್ನು ಮಾಡುವಂತಹದ್ದೇ ಆಗಿತ್ತು. ಹೀಗೆ, ಅವನು ‘ಪ್ರಾಣವೊಂದನ್ನೇ ಬಾಚಿಕೊಂಡು ಹೋಗಸಾಧ್ಯವಿತ್ತು.’ (ಯೆರೆಮೀಯ 45:1-5) ಅದೇ ರೀತಿಯಲ್ಲಿ, ‘ನಮಗಾಗಿ ಮಹಾಪದವಿಯನ್ನು ನಿರೀಕ್ಷಿಸುವುದಕ್ಕೆ’ ಬದಲಾಗಿ, ನಾವು ಯೆಹೋವನನ್ನು ಹುಡುಕಬೇಕು. ಏಕೆಂದರೆ, ಇದು ನಮ್ಮ ಸ್ವಂತ ಜೀವಗಳನ್ನು ಉಳಿಸಿಕೊಳ್ಳಲಿಕ್ಕೆ ಸಹಾಯಮಾಡುತ್ತದೆ.

ಕೊತಕೊತನೆ ಕುದಿಯುವ ಜ್ವಾಲಾಮುಖಿಯು ಕೆಲವು ಪೊಲೀಸರನ್ನು ಮತ್ತು ಸ್ವಯಂಸೇವಕ ಅಗ್ನಿಶಾಮಕದಳದವರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಾಗ, ಅವರೆಲ್ಲರೂ ಫೂಗೆನ್‌ ಪರ್ವತದಲ್ಲಿ ಕರ್ತವ್ಯದ ಮೇಲಿದ್ದರು. ಅವರು ಅಪಾಯದಲ್ಲಿ ಸಿಕ್ಕಿಬಿದ್ದಿದ್ದ ಜನರಿಗೆ ಸಹಾಯಮಾಡಲು ಮತ್ತು ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದರು. ಈ ಲೋಕವನ್ನು ಸುಧಾರಿಸುವುದರಲ್ಲಿ ತಮ್ಮನ್ನೇ ಮುಡಿಪಾಗಿಟ್ಟುಕೊಂಡಿರುವ ಸದುದ್ದೇಶವುಳ್ಳ ಸ್ತ್ರೀಪುರುಷರು ಇವರಾಗಿದ್ದರು. ಅವರ ಹೇತುಗಳು ಉದಾತ್ತವಾಗಿದ್ದಿರಬಹುದಾದರೂ, “ವಕ್ರವಾದದ್ದನ್ನು ಸರಿಮಾಡುವದು ಅಸಾಧ್ಯ.” (ಪ್ರಸಂಗಿ 1:15) ವಿಷಯಗಳ ಈ ವಕ್ರವಾದ ವ್ಯವಸ್ಥೆಯನ್ನು ಸರಿಪಡಿಸಸಾಧ್ಯವಿಲ್ಲ. ಹಾಗಾದರೆ, ದೇವರು ನಾಶಮಾಡಲು ನಿರ್ಧರಿಸಿರುವ ಲೋಕ ವ್ಯವಸ್ಥೆಯನ್ನು ಕಾಪಾಡಲು ಪ್ರಯತ್ನಿಸುತ್ತಾ ‘ಲೋಕಕ್ಕೆ ಸ್ನೇಹಿತನಾಗುವುದು’ ತರ್ಕಸಮ್ಮತವಾಗಿದೆಯೋ?

ಒಮ್ಮೆ ಪಲಾಯನಗೈದ ಮೇಲೆ ಅದರಿಂದ ದೂರ ಉಳಿಯಿರಿ

ಅಪಾಯದ ಸನ್ನಿವೇಶದಿಂದ ಪಲಾಯನಗೈಯುವುದು ಒಂದು ವಿಷಯವಾದರೆ, “ಸಹೋದರರ ಇಡೀ ಒಕ್ಕೂಟದ” (NW) ಭದ್ರವಾದ ಸ್ಥಳದಲ್ಲಿ ಉಳಿಯುವುದು ಇನ್ನೊಂದು ವಿಷಯವಾಗಿದೆ. (1 ಪೇತ್ರ 2:17) ಫೂಗೆನ್‌ ಪರ್ವತದಿಂದ ಹೊರಹೋದ ನಂತರ, ತಮ್ಮ ಹೊಲಗದ್ದೆಗಳಿಗೆ ಏನಾಗಿದೆಯೋ ಎಂಬುದನ್ನು ನೋಡಲು ಪುನಃ ಹಿಂದಿರುಗಿದ ರೈತರ ಬಗ್ಗೆ ಮರೆಯದಿರೋಣ. ಈ ಹಿಂದೆ ನಡೆಸುತ್ತಿದ್ದಂತಹ “ಸಾಮಾನ್ಯ” ಜೀವಿತಕ್ಕೆ ಹಿಂದಿರುಗಲು ಅವರು ಕಾತುರರಾಗಿದ್ದಿರಬಹುದು. ಹಿಂದಿರುಗಿ ಹೋಗುವುದಕ್ಕೆ ಅವರು ಮಾಡಿದ ನಿರ್ಧಾರವು ನಿಜವಾಗಿಯೂ ಅವಿವೇಕತನದ್ದಾಗಿತ್ತು ಎಂಬುದನ್ನು ನೀವು ಸಹ ಅರ್ಥಮಾಡಿಕೊಳ್ಳುತ್ತೀರಿ. ಆ ಅಪಾಯ ಕ್ಷೇತ್ರದೊಳಕ್ಕೆ ಕಾಲಿಡಲು ಪ್ರಯತ್ನಪಟ್ಟದ್ದು ಅದೇ ಮೊದಲ ಸಲ ಅಲ್ಲದೇ ಇದ್ದಿರಬಹುದು. ಸ್ವಲ್ಪ ಸಮಯದ ವರೆಗೆ ಅವರು ಅಪಾಯದ ಕ್ಷೇತ್ರದೊಳಕ್ಕೆ ಪ್ರವೇಶಿಸಿದ್ದಿರಬಹುದು ಮತ್ತು ಆಗ ಏನೂ ಸಂಭವಿಸಿದ್ದಿರಲಿಕ್ಕಿಲ್ಲ. ಮುಂದಿನ ಸಲ ಅವರು ಇನ್ನೂ ಸ್ವಲ್ಪ ಸಮಯದ ವರೆಗೆ ಅಲ್ಲಿಯೇ ಉಳಿದಿರಸಾಧ್ಯವಿದೆ ಮತ್ತು ಆಗ ಸಹ ಏನೂ ಸಂಭವಿಸಿದ್ದಿರಲಿಕ್ಕಿಲ್ಲ. ಹೀಗೆ ಬಲು ಬೇಗನೆ, ಅವರು ಸುರಕ್ಷಾ ರೇಖೆಯನ್ನು ದಾಟಿಹೋಗುವುದಕ್ಕೆ ಒಗ್ಗಿಕೊಂಡು, ಅಪಾಯ ಕ್ಷೇತ್ರದಲ್ಲಿಯೇ ಸುಳಿದಾಡುತ್ತಾ ಇರಲು ಧೈರ್ಯವನ್ನು ಒಟ್ಟುಗೂಡಿಸಿಕೊಂಡರು.

‘ವಿಷಯಗಳ ವ್ಯವಸ್ಥೆಯ ಸಮಾಪ್ತಿಯಲ್ಲಿ’ (NW) ಆಗುವ ತದ್ರೀತಿಯ ಸನ್ನಿವೇಶಕ್ಕೆ ಯೇಸು ಕ್ರಿಸ್ತನು ಸೂಚಿಸಿದನು. ಅವನು ಹೇಳಿದ್ದು: “ನೋಹನು ನಾವೆಯಲ್ಲಿ ಸೇರಿದ ದಿನದ ತನಕ ಜನರು ಉಣ್ಣುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಮಾಡಿಕೊಡುತ್ತಾ ಇದ್ದು ಪ್ರಳಯದ ನೀರು ಬಂದು ಎಲ್ಲರನ್ನು ಬಡುಕೊಂಡುಹೋಗುವ ತನಕ ಏನು ತಿಳಿಯದೇ ಇದ್ದರಲ್ಲಾ. ಅದರಂತೆ ಮನುಷ್ಯಕುಮಾರನು ಪ್ರತ್ಯಕ್ಷನಾಗುವ ಕಾಲದಲ್ಲಿಯೂ ಇರುವದು.”—ಮತ್ತಾಯ 24:3, 38, 39.

ತಿನ್ನುವುದು, ಕುಡಿಯುವುದು ಮತ್ತು ಮದುವೆಮಾಡಿಕೊಳ್ಳುವುದರ ಕುರಿತಾಗಿ ಯೇಸು ಹೇಳಿದ್ದನ್ನು ಗಮನಿಸಿರಿ. ಇವುಗಳಲ್ಲಿ ಯಾವುದೂ ಯೆಹೋವನ ದೃಷ್ಟಿಯಲ್ಲಿ ತಪ್ಪಾಗಿರುವುದಿಲ್ಲ. ಹಾಗಾದರೆ ಯಾವುದು ತಪ್ಪಾಗಿತ್ತು? ನೋಹನ ದಿನದಲ್ಲಿದ್ದ ಜನರು ‘ಏನೂ ತಿಳಿಯದೇ ಇದ್ದರು.’ ಅಂದರೆ, ಅವರು ತಮ್ಮ ದಿನಚರಿಯ ಸುತ್ತಲೂ ಕೇಂದ್ರೀಕರಿಸಿದ ಜೀವಿತವನ್ನು ನಡೆಸುವುದರಲ್ಲಿ ತಲ್ಲೀನರಾಗಿದ್ದರು. ಅಪಾಯದ ಸಂದರ್ಭದಲ್ಲಿ, ಒಬ್ಬನು “ಸಾಮಾನ್ಯ” ಜೀವಿತವನ್ನು ಜೀವಿಸಸಾಧ್ಯವಿಲ್ಲ. ದುರ್ಗತಿಯಲ್ಲಿರುವ ಸದ್ಯದ ಲೋಕದಿಂದ ಒಮ್ಮೆ ಪಲಾಯನಗೈದ ಅಥವಾ ಅದರಿಂದ ನಿಮ್ಮನ್ನು ಬೇರ್ಪಡಿಸಿಕೊಂಡ ಅನಂತರ, ಅದರಿಂದ ಸಿಗುವ ಯಾವುದೇ ಪ್ರಾಪಂಚಿಕತೆಯ ಲಾಭವನ್ನು ಗಿಟ್ಟಿಸಿಕೊಳ್ಳಲು ಹಿಂದಿರುಗಿ ಹೋಗುವಂತೆ ಮಾಡುವ ಯಾವುದೇ ಪ್ರಚೋದನೆಯ ವಿರುದ್ಧ ಹೋರಾಡತಕ್ಕದ್ದು. (1 ಕೊರಿಂಥ 7:31) ನೀವು ಆತ್ಮಿಕವಾಗಿ ಸುರಕ್ಷಿತವಾಗಿರುವ ಕ್ಷೇತ್ರದಿಂದ ಹೊರಹೋಗಿ ಅಲೆದಾಡಸಾಧ್ಯವಿರಬಹುದು. ಮತ್ತು ಅದನ್ನು ಯಾರೂ ಗಮನಿಸದ ರೀತಿಯಲ್ಲಿ ಯಾವುದೇ ಹಾನಿಯನ್ನು ಅನುಭವಿಸದೆ ನೀವು ಹಿಂದಿರುಗಿ ಬರಲೂಬಹುದು. ಆದರೆ, ಇದು ನಿಮಗೆ ಒಂದು ರೀತಿಯಲ್ಲಿ ಧೈರ್ಯವನ್ನು ಕೊಡುವುದು ಮಾತ್ರವಲ್ಲ, ಇನ್ನೂ ಸ್ವಲ್ಪ ಕಾಲ ಅಲ್ಲಿಲ್ಲಿ ಸುಳಿದಾಡುತ್ತಾ ಪುನಃ ಲೋಕಕ್ಕೆ ಹಿಂದಿರುಗುವಂತೆ ನಿಮ್ಮನ್ನು ನಡೆಸುವುದು. ಬೇಗನೆ, “ಈ ದಿವಸವಂತೂ ಅಂತ್ಯವು ಬರುವುದಿಲ್ಲ” ಎಂಬಂತಹ ಮನೋಭಾವವು ನಿಮ್ಮಲ್ಲಿ ಬೆಳೆಯಸಾಧ್ಯವಿದೆ.

ಜ್ವಾಲಾಮುಖಿಯು ಸುಳಿಸುತ್ತುತ್ತ ಇಳಿಜಾರಿನಿಂದ ಹರಿದುಬರುತ್ತಿದ್ದ ಸಮಯದಲ್ಲಿ, ವಾರ್ತಾ ವರದಿಗಾರರು ಮತ್ತು ಕ್ಯಾಮರಾಮೆನ್‌ಗಾಗಿ ಕಾಯುತ್ತಾ ನಿಂತಿದ್ದಾಗ ತಮ್ಮ ಜೀವವನ್ನು ಕಳೆದುಕೊಂಡ ಆ ಮೂವರು ಟ್ಯಾಕ್ಸಿ ಡ್ರೈವರುಗಳ ಬಗ್ಗೆ ಸಹ ಯೋಚಿಸಿರಿ. ಲೋಕಕ್ಕೆ ಪುನಃ ಹಿಂದಿರುಗಲು ಸಾಹಸಮಾಡುವ ಇತರರೊಂದಿಗೆ ಇಂದು ಕೆಲವರು ಜೊತೆಗೂಡಬಹುದು. ಕಾರಣವೇನೇ ಆಗಿರಲಿ, ಅಪಾಯಕಾರಿಯಾದ ಕ್ಷೇತ್ರದೊಳಕ್ಕೆ ಹಿಂದಿರುಗಿ ಹೋಗುವುದಕ್ಕೆ ಪುಸಲಾಯಿಸಲ್ಪಡುವುದರಿಂದ ಅಪಾಯವು ಕಟ್ಟಿಟ್ಟ ಬುತ್ತಿಯಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

ಫೂಗೆನ್‌ ಪರ್ವತದ ಸ್ಫೋಟದಲ್ಲಿ ಜೀವವನ್ನು ತೆತ್ತ ಎಲ್ಲರೂ ಸುರಕ್ಷಾ ರೇಖೆಯನ್ನು ದಾಟಿ, ಅಪಾಯದ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಆ ಪರ್ವತವು ಯಾವುದಾದರೊಂದು ದಿನ ಸ್ಫೋಟಗೊಳ್ಳುತ್ತದೆ ಎಂಬುದನ್ನು ಅವರು ಎದುರುನೋಡಿದ್ದರಾದರೂ, ಅದು ಅಂದೇ ಆಗಿರುವುದೆಂದು ಅವರಲ್ಲಿ ಯಾರೊಬ್ಬರೂ ನೆನಸಿರಲಿಲ್ಲ. ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಸೂಚನೆಯನ್ನು ಅವಲೋಕಿಸುವ ಮೂಲಕ, ಯೆಹೋವನ ದಿನವು ಯಾವುದೋ ಒಂದು ಸಮಯದಲ್ಲಿ ಬರಲಿಕ್ಕಿದೆಯಾದರೂ ಅದು ಇಷ್ಟು ಬೇಗ ಬರಲಿಕ್ಕಿಲ್ಲ ಎಂದು ಅನೇಕರು ನಿರೀಕ್ಷಿಸುತ್ತಾರೆ. ಆ ದಿವಸವು “ಇಂದೇ” ಆಗಿರಸಾಧ್ಯವಿಲ್ಲ ಎಂದು ಸಹ ಕೆಲವರು ನೆನಸುತ್ತಾರೆ. ಅಂತಹ ಒಂದು ಮನೋಭಾವವು ನಿಜವಾಗಿಯೂ ಗಂಡಾಂತರಕ್ಕೀಡು ಮಾಡುವಂತಹದ್ದಾಗಿದೆ.

“ಕರ್ತನ [“ಯೆಹೋವನು,” NW] ದಿನವು ಕಳ್ಳನು ಬರುವಂತೆ ಬರುತ್ತದೆ” ಎಂದು ಅಪೊಸ್ತಲ ಪೇತ್ರನು ಎಚ್ಚರಿಕೆಯನ್ನು ನೀಡಿದನು. “ದೇವರ [“ಯೆಹೋವನು,” NW] ದಿನದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ ಹಾರೈಸುತ್ತಾ . . . ಶಾಂತರಾಗಿದ್ದು ಆತನೆದುರಿನಲ್ಲಿ ನಿರ್ಮಲರಾಗಿಯೂ ನಿರ್ದೋಷಿಗಳಾಗಿಯೂ ಕಾಣಿಸಿಕೊಳ್ಳುವದಕ್ಕೆ ಪ್ರಯಾಸ”ಪಡುತ್ತಾ, ನಾವು ಎಚ್ಚರವಾಗಿರಬೇಕಾಗಿದೆ. (2 ಪೇತ್ರ 3:10-14) ವಿಷಯಗಳ ಸದ್ಯದ ದುಷ್ಟ ವ್ಯವಸ್ಥೆಯು ನಾಶಗೊಂಡ ಅನಂತರ, ದೇವರ ರಾಜ್ಯದ ಕೆಳಗೆ ಒಂದು ಭೂಪ್ರಮೋದವನವು ಬರಲಿಕ್ಕಿದೆ. ನಮ್ಮ ಮನಸ್ಸು ಯಾವುದೇ ಕಾರಣವನ್ನು ಕೊಡಲಿ, ಅಪಾಯದ ಕ್ಷೇತ್ರದೊಳಕ್ಕೆ ಕಾಲಿಡುವ ಪ್ರೇರಣೆಗೆ ನಾವೆಂದಿಗೂ ಬಲಿಯಾಗದಿರೋಣ. ಏಕೆಂದರೆ, ಲೋಕದೊಳಕ್ಕೆ ಹಿಂದಿರುಗಿದ ದಿನವೇ ಯೆಹೋವನ ದಿನವಾಗಿರಸಾಧ್ಯವಿದೆ.

ಯೆಹೋವನ ಜನರೊಂದಿಗೆ ಆಶ್ರಯವನ್ನು ಪಡೆದುಕೊಂಡು, ಅವರೊಂದಿಗೆ ಅಲ್ಲಿಯೇ ನೆಲೆನಿಲ್ಲಿರಿ.

[ಪುಟ 7ರಲ್ಲಿರುವ ಚಿತ್ರಗಳು]

ಯೆಹೋವನ ಜನರೊಂದಿಗೆ ಆಶ್ರಯವನ್ನು ಪಡೆದುಕೊಂಡು, ಅವರೊಂದಿಗೆ ಅಲ್ಲಿಯೇ ನೆಲೆನಿಲ್ಲಿರಿ

[ಪುಟ 4ರಲ್ಲಿರುವ ಚಿತ್ರ ಕೃಪೆ]

Iwasa/Sipa Press