ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಕ್ರಿಸ್ತನ ಮನಸ್ಸನ್ನು’ ತಿಳಿದುಕೊಳ್ಳುವುದು

‘ಕ್ರಿಸ್ತನ ಮನಸ್ಸನ್ನು’ ತಿಳಿದುಕೊಳ್ಳುವುದು

‘ಕ್ರಿಸ್ತನ ಮನಸ್ಸನ್ನು’ ತಿಳಿದುಕೊಳ್ಳುವುದು

“ಕರ್ತನ [“ಯೆಹೋವನ,” NW] ಮನಸ್ಸನ್ನು ತಿಳುಕೊಂಡು ಆತನಿಗೆ ಉಪದೇಶಿಸುವವನಾರು ಎಂದು ಬರೆದದೆಯಲ್ಲಾ. ನಮಗಾದರೋ ಕ್ರಿಸ್ತನ ಮನಸ್ಸು ದೊರಕಿತು.”—1 ಕೊರಿಂಥ 2:16.

1, 2. ಯೆಹೋವನು ತನ್ನ ವಾಕ್ಯದಲ್ಲಿ ಯೇಸುವಿನ ಕುರಿತು ಯಾವ ವಿಷಯವನ್ನು ತಿಳಿಯಪಡಿಸುವುದನ್ನು ಸೂಕ್ತವಾದದ್ದಾಗಿ ಕಂಡುಕೊಂಡನು?

ಯೇಸು ನೋಡಲು ಹೇಗಿದ್ದನು? ಅವನ ಕೂದಲು, ಚರ್ಮ, ಮತ್ತು ಕಣ್ಣುಗಳ ಬಣ್ಣ ಹೇಗಿತ್ತು? ಅವನು ಎಷ್ಟು ಎತ್ತರವಿದ್ದನು? ಅವನ ತೂಕ ಎಷ್ಟಿತ್ತು? ಶತಮಾನಗಳಿಂದಲೂ ಬಿಡಿಸಲ್ಪಟ್ಟಿರುವ ಯೇಸುವಿನ ಚಿತ್ರಗಳಲ್ಲಿ ಕೆಲವು ಸರಿಯಾಗಿದ್ದರೆ, ಕೆಲವು ನಿಜವಾಗಿರಲು ಸಾಧ್ಯವೇ ಇಲ್ಲದಂತಹ ಚಿತ್ರಗಳಾಗಿವೆ. ಕೆಲವರು ಅವನನ್ನು ಪುರುಷತ್ವವುಳ್ಳ ಹಾಗೂ ಲವಲವಿಕೆಯಿಂದ ಕೂಡಿದ ವ್ಯಕ್ತಿಯೋಪಾದಿ ಚಿತ್ರಿಸಿದ್ದರೆ, ಇನ್ನೂ ಕೆಲವರು ಅವನನ್ನು ಬಲಹೀನನಾಗಿ ತ್ರಾಣವಿಲ್ಲದ ವ್ಯಕ್ತಿಯೋಪಾದಿ ಚಿತ್ರಿಸಿದ್ದಾರೆ.

2 ಬೈಬಲಾದರೋ ಯೇಸುವಿನ ಹೊರತೋರಿಕೆಗೆ ಹೆಚ್ಚಿನ ಗಮನವನ್ನು ನೀಡುವುದಿಲ್ಲ. ಬದಲಿಗೆ, ಅದಕ್ಕಿಂತಲೂ ಹೆಚ್ಚು ಮಹತ್ವವುಳ್ಳ ವಿಷಯವನ್ನು, ಅಂದರೆ ಯೇಸು ಯಾವ ರೀತಿಯ ವ್ಯಕ್ತಿಯಾಗಿದ್ದನೆಂಬುದನ್ನು ತಿಳಿಯಪಡಿಸುವುದೇ ಸೂಕ್ತವಾದದ್ದೆಂದು ಯೆಹೋವನಿಗೆ ಅನಿಸಿತು. ಸುವಾರ್ತೆಯ ವೃತ್ತಾಂತಗಳು ಯೇಸು ಹೇಳಿದಂತಹ ಮತ್ತು ಮಾಡಿದಂತಹ ವಿಷಯಗಳನ್ನು ಮಾತ್ರವಲ್ಲ, ಅವನ ನಡೆನುಡಿಗಳಲ್ಲಿ ಗೋಚರವಾದ ಸಹಾನುಭೂತಿಯನ್ನು ಮತ್ತು ಯೋಚಿಸುವ ರೀತಿಯನ್ನು ಸಹ ಪ್ರಕಟಪಡಿಸುತ್ತವೆ. ಈ ನಾಲ್ಕು ಪ್ರೇರಿತ ವೃತ್ತಾಂತಗಳು, ಅಪೊಸ್ತಲ ಪೌಲನು ಸೂಚಿಸಿದಂತಹ “ಕ್ರಿಸ್ತನ ಮನಸ್ಸ”ನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ. (1 ಕೊರಿಂಥ 2:16) ನಾವು ಯೇಸುವಿನ ವಿಚಾರಗಳು, ಭಾವನೆಗಳು, ಮತ್ತು ವ್ಯಕ್ತಿತ್ವದೊಂದಿಗೆ ಚಿರಪರಿಚಿತರಾಗುವುದು ಪ್ರಾಮುಖ್ಯವಾಗಿದೆ. ಏಕೆ? ಅದಕ್ಕೆ ಕಡಿಮೆಪಕ್ಷ ಎರಡು ಕಾರಣಗಳಾದರೂ ಇವೆ.

3. ಕ್ರಿಸ್ತನ ಮನಸ್ಸಿನೊಂದಿಗೆ ಚಿರಪರಿಚಿತರಾಗುವುದರಿಂದ ನಮಗೆ ಯಾವುದರ ಒಳನೋಟವು ಸಿಗುತ್ತದೆ?

3 ಮೊದಲ ಕಾರಣವೇನೆಂದರೆ, ಕ್ರಿಸ್ತನ ಮನಸ್ಸು ನಮಗೆ ಯೆಹೋವ ದೇವರ ಮನಸ್ಸಿನ ನಸುನೋಟವನ್ನು ನೀಡುತ್ತದೆ. ಯೇಸು ತನ್ನ ತಂದೆಯೊಂದಿಗೆ ಎಷ್ಟು ಆಪ್ತನಾಗಿದ್ದನೆಂದರೆ, ಅವನು ಈ ಕೆಳಗಿನಂತೆ ಹೇಳಸಾಧ್ಯವಿತ್ತು: “ಮಗನು ಇಂಥವನೆಂದು ತಂದೆಯೇ ಹೊರತು ಇನ್ನಾವನೂ ತಿಳಿದವನಲ್ಲ; ತಂದೆ ಇಂಥವನೆಂದು ಮಗನೇ ಹೊರತು ಇನ್ನಾವನೂ ತಿಳಿದವನಲ್ಲ; ಮತ್ತು ಮಗನು ತಂದೆಯನ್ನು ಯಾರಿಗೆ ಪ್ರಕಟಿಸುವದಕ್ಕೆ ಮನಸ್ಸುಳ್ಳವನಾಗಿದ್ದಾನೋ ಅವನೂ ಆತನನ್ನು ತಿಳಿದವನಾಗಿದ್ದಾನೆ.” (ಲೂಕ 10:22) ‘ಯೆಹೋವನು ಯಾವ ರೀತಿಯ ವ್ಯಕ್ತಿಯೆಂಬುದನ್ನು ನೀವು ತಿಳಿದುಕೊಳ್ಳಲು ಬಯಸುವುದಾದರೆ, ನನ್ನನ್ನು ನೋಡಿರಿ’ ಎಂಬುದಾಗಿ ಯೇಸು ಹೇಳುತ್ತಿರುವಂತೆ ಇದು ಇದೆ. (ಯೋಹಾನ 14:9) ಹೀಗೆ ನಾವು ಯೇಸು ಯೋಚಿಸಿದ ಮತ್ತು ಭಾವಿಸಿದಂತಹ ರೀತಿಯ ಕುರಿತು ಸುವಾರ್ತೆಯ ವೃತ್ತಾಂತಗಳಲ್ಲಿ ಅಭ್ಯಾಸಿಸುವಾಗ, ಯೆಹೋವನು ಹೇಗೆ ಯೋಚಿಸುತ್ತಾನೆ ಮತ್ತು ಭಾವಿಸುತ್ತಾನೆ ಎಂಬುದನ್ನೇ ಕಲಿತುಕೊಳ್ಳುತ್ತೇವೆ. ದೇವರ ಸಮೀಪಕ್ಕೆ ಬರಲು ಇಂತಹ ಜ್ಞಾನವು ನಮಗೆ ಸಹಾಯ ಮಾಡುತ್ತದೆ.—ಯಾಕೋಬ 4:8.

4. ನಾವು ಕ್ರಿಸ್ತನಂತೆ ವರ್ತಿಸಬೇಕಾದರೆ, ಮೊದಲಾಗಿ ಏನನ್ನು ಕಲಿತುಕೊಳ್ಳಬೇಕು ಮತ್ತು ಏಕೆ?

4 ಎರಡನೆಯ ಕಾರಣವೇನೆಂದರೆ, ಕ್ರಿಸ್ತನ ಮನಸ್ಸನ್ನು ತಿಳಿದುಕೊಳ್ಳುವುದರಿಂದ ‘ಅವನ ಹೆಜ್ಜೆಯ ಜಾಡಿನಲ್ಲಿ ನಡೆಯಲು’ ನಮಗೆ ಸಾಧ್ಯವಾಗುತ್ತದೆ. (1 ಪೇತ್ರ 2:21) ಯೇಸುವನ್ನು ಅನುಸರಿಸುವುದು, ಕೇವಲ ಅವನ ಮಾತುಗಳನ್ನು ಪುನರುಚ್ಚರಿಸಿ ಅವನು ಮಾಡಿದ್ದನ್ನೇ ಮಾಡುವುದಲ್ಲ. ಯೋಚನೆಗಳು ಮತ್ತು ಭಾವನೆಗಳು ಒಬ್ಬನ ನಡೆನುಡಿಗಳನ್ನು ಪ್ರಭಾವಿಸುವುದರಿಂದ, ಕ್ರಿಸ್ತನನ್ನು ಅನುಸರಿಸುವುದರ ಅರ್ಥ, ನಾವು ಅವನಲ್ಲಿದ್ದಂತಹ “ಮನೋಭಾವ”ವನ್ನೇ (NW) ಬೆಳೆಸಿಕೊಳ್ಳುವುದಾಗಿದೆ. (ಫಿಲಿಪ್ಪಿ 2:5) ಬೇರೆ ಮಾತುಗಳಲ್ಲಿ ಹೇಳುವುದಾದರೆ, ನಾವು ಕ್ರಿಸ್ತನಂತೆಯೇ ಕ್ರಿಯೆಗೈಯಬೇಕಾದರೆ, ಅಪರಿಪೂರ್ಣ ಮಾನವರೋಪಾದಿ ನಮ್ಮಿಂದ ಸಾಧ್ಯವಾಗುವಷ್ಟರ ಮಟ್ಟಿಗೆ ಅವನಂತೆ ಯೋಚಿಸಲು ಮತ್ತು ಭಾವಿಸಲು ಕಲಿತುಕೊಳ್ಳಬೇಕು. ಆದಕಾರಣ ಸುವಾರ್ತೆಯ ಬರಹಗಾರರ ಸಹಾಯದಿಂದ ನಾವು ಕ್ರಿಸ್ತನ ಮನಸ್ಸಿನೊಳಕ್ಕೆ ಇಣಿಕಿನೋಡೋಣ. ಮೊದಲನೆಯದಾಗಿ, ಯೇಸು ಯೋಚಿಸಿದ ಮತ್ತು ಭಾವಿಸಿದ ರೀತಿಯನ್ನು ಯಾವ ಅಂಶಗಳು ಪ್ರಭಾವಿಸಿದವು ಎಂಬುದನ್ನು ಚರ್ಚಿಸೋಣ.

ಅವನ ಮಾನವಪೂರ್ವ ಅಸ್ತಿತ್ವ

5, 6. (ಎ) ನಮ್ಮ ನಿಕಟವರ್ತಿಗಳು ನಮ್ಮ ಮೇಲೆ ಯಾವ ರೀತಿಯ ಪ್ರಭಾವವನ್ನು ಬೀರಬಲ್ಲರು? (ಬಿ) ದೇವರ ಜ್ಯೇಷ್ಠಪುತ್ರನು ಭೂಮಿಗೆ ಬರುವ ಮೊದಲು ಸ್ವರ್ಗದಲ್ಲಿ ಯಾವ ರೀತಿಯ ಸಹವಾಸವನ್ನು ಅನುಭವಿಸಿದನು, ಮತ್ತು ಇದು ಅವನ ಮೇಲೆ ಯಾವ ಪರಿಣಾಮವನ್ನು ಬೀರಿತು?

5 ನಮ್ಮ ಯೋಚನೆಗಳು, ಭಾವನೆಗಳು ಮತ್ತು ಕ್ರಿಯೆಗಳ ಮೇಲೆ ನಮ್ಮ ನಿಕಟವರ್ತಿಗಳು ಒಳ್ಳೆಯ ಇಲ್ಲವೆ ಕೆಟ್ಟ ಪ್ರಭಾವವನ್ನು ಬೀರಬಲ್ಲರು. * (ಜ್ಞಾನೋಕ್ತಿ 13:20) ಭೂಮಿಗೆ ಬರುವ ಮೊದಲು ಯೇಸು ಸ್ವರ್ಗದಲ್ಲಿ ಅನುಭವಿಸಿದ ಸಹವಾಸದ ಕುರಿತು ತುಸು ಯೋಚಿಸಿರಿ. ಯೋಹಾನನ ಸುವಾರ್ತೆಯು ಯೇಸುವಿನ ಮಾನವಪೂರ್ವ ಅಸ್ತಿತ್ವಕ್ಕೆ ಗಮನಸೆಳೆಯುತ್ತಾ, ಯೇಸುವನ್ನು “ವಾಕ್ಯ” ಇಲ್ಲವೆ ದೇವರ ವದನಕನಾಗಿ ಸೂಚಿಸುತ್ತದೆ. ಯೋಹಾನನು ಹೇಳುವುದು: “ಆದಿಯಲ್ಲಿ ವಾಕ್ಯವಿತ್ತು; ಆ ವಾಕ್ಯವು ದೇವರ ಬಳಿಯಲ್ಲಿತ್ತು; ಆ ವಾಕ್ಯವು ದೇವರಾಗಿತ್ತು. ಆ ವಾಕ್ಯವೆಂಬವನು ಆದಿಯಲ್ಲಿ ದೇವರ ಬಳಿಯಲ್ಲಿದ್ದನು.” (ಯೋಹಾನ 1:1, 2) ಯೆಹೋವನಿಗೆ ಆದಿಯಿಲ್ಲದಿರುವುದರಿಂದ, ವಾಕ್ಯವು “ಆದಿ”ಯಿಂದಲೂ ದೇವರ ಬಳಿಯಲ್ಲಿತ್ತೆಂಬುದು ದೇವರ ಸೃಷ್ಟಿಕಾರ್ಯಗಳ ಆರಂಭಕ್ಕೆ ಸೂಚಿಸುತ್ತಿದ್ದಿರಬೇಕು. (ಕೀರ್ತನೆ 90:2) ಯೇಸು “ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರ”ನಾಗಿದ್ದಾನೆ. ಅದರರ್ಥ, ಬೇರೆಲ್ಲ ಆತ್ಮಜೀವಿಗಳು ಮತ್ತು ಈ ಭೌತಿಕ ವಿಶ್ವವು ಸೃಷ್ಟಿಸಲ್ಪಡುವ ಮುಂಚೆಯೇ ಅವನು ಅಸ್ತಿತ್ವದಲ್ಲಿದ್ದನು.—ಕೊಲೊಸ್ಸೆ 1:15; ಪ್ರಕಟನೆ 3:14.

6 ನಮ್ಮ ಭೌತಿಕ ವಿಶ್ವವು ಸುಮಾರು 12 ಶತಕೋಟಿ ವರ್ಷಗಳಿಂದಲೂ ಅಸ್ತಿತ್ವದಲ್ಲಿದೆಯೆಂದು ಕೆಲವು ವೈಜ್ಞಾನಿಕ ಅಂದಾಜುಗಳು ತಿಳಿಸುತ್ತವೆ. ಈ ಅಂದಾಜುಗಳು ಒಂದುವೇಳೆ ಸರಿಯಾಗಿದ್ದರೆ, ದೇವರ ಜ್ಯೇಷ್ಠಪುತ್ರನು ಆದಾಮನ ಸೃಷ್ಟಿಯ ಮೊದಲು ತನ್ನ ತಂದೆಯೊಂದಿಗೆ ಅಗಣಿತ ವರ್ಷಗಳಷ್ಟು ನಿಕಟ ಸಂಬಂಧವನ್ನು ಅನುಭವಿಸಿದ್ದಾನೆ. (ಮೀಕ 5:2ನ್ನು ಹೋಲಿಸಿರಿ.) ಹೀಗೆ ಅವರಿಬ್ಬರ ನಡುವೆ ಕೋಮಲವಾದ ಮತ್ತು ಗಾಢವಾದ ಸಂಬಂಧವು ಬೆಳೆದಿತ್ತು. ವಿವೇಕದ ಸಾಕಾರವಾಗಿರುವ ಈ ಜ್ಯೇಷ್ಠಪುತ್ರನು, ಮಾನವಪೂರ್ವ ಅಸ್ತಿತ್ವದಲ್ಲಿರುವಾಗ ಹೀಗೆ ಹೇಳಿರುವುದಾಗಿ ದಾಖಲಿಸಲಾಗಿದೆ: “ನಾನು [ಯೆಹೋವನ] ಹತ್ತಿರ ಶಿಲ್ಪಿಯಾಗಿದ್ದುಕೊಂಡು ಪ್ರತಿದಿನವೂ ಆನಂದಿಸುತ್ತಾ ಯಾವಾಗಲೂ ಆತನ ಮುಂದೆ ವಿನೋದಿಸುತ್ತಾ” ಇದ್ದೆನು. (ಜ್ಞಾನೋಕ್ತಿ 8:30) ಪ್ರೀತಿಯ ಮೂಲನಾಗಿರುವಾತನ ನಿಕಟ ಸಂಬಂಧದಲ್ಲಿ ಅಸಂಖ್ಯಾತ ಯುಗಗಳ ವರೆಗೆ ಇದ್ದುದರಿಂದ, ದೇವಕುಮಾರನ ಮೇಲೆ ಅಗಾಧವಾದ ಪ್ರಭಾವವು ಬೀರಲ್ಪಟ್ಟಿತೆಂಬುದರಲ್ಲಿ ಸಂದೇಹವೇ ಇಲ್ಲ! (1 ಯೋಹಾನ 4:8) ಈ ಪುತ್ರನು ಬೇರೆ ಯಾರಿಂದಲೂ ಸಾಧ್ಯವಾಗದ ರೀತಿಯಲ್ಲಿ ತನ್ನ ತಂದೆಯ ಆಲೋಚನೆಗಳು, ಭಾವನೆಗಳು ಮತ್ತು ರೀತಿನೀತಿಗಳನ್ನು ತಿಳಿದುಕೊಂಡು, ಅವುಗಳನ್ನು ಪ್ರತಿಬಿಂಬಿಸಿದನು.—ಮತ್ತಾಯ 11:27.

ಭೂಜೀವನ ಮತ್ತು ಅದರ ಪ್ರಭಾವಗಳು

7. ದೇವರ ಜ್ಯೇಷ್ಠಪುತ್ರನು ಭೂಮಿಗೆ ಬರಬೇಕಾಗಿದ್ದ ಕಾರಣಗಳಲ್ಲಿ ಒಂದು ಯಾವುದಾಗಿತ್ತು?

7 ದೇವಕುಮಾರನು ಇನ್ನೂ ಹೆಚ್ಚು ವಿಷಯಗಳನ್ನು ಕಲಿಯಬೇಕಾಗಿತ್ತು. ಏಕೆಂದರೆ, ತನ್ನ ಮಗನು “ನಮ್ಮ ನಿರ್ಬಲಾವಸ್ಥೆಯನ್ನು ಕುರಿತು ಅನುತಾಪ”ಪಡಲು ಶಕ್ತನಾಗುವಂತಹ ಸಹಾನುಭೂತಿಯುಳ್ಳ ಮಹಾಯಾಜಕನಾಗಿ ಕಾರ್ಯನಡಿಸಬೇಕೆಂಬುದೇ ಯೆಹೋವನ ಉದ್ದೇಶವಾಗಿತ್ತು. (ಇಬ್ರಿಯ 4:15) ಮಗನು ಈ ಭೂಮಿಗೆ ಮಾನವನೋಪಾದಿ ಬಂದ ಅನೇಕ ಕಾರಣಗಳಲ್ಲಿ, ಈ ಪಾತ್ರವನ್ನು ನಿರ್ವಹಿಸಲು ಬೇಕಾದ ಅರ್ಹತೆಗಳನ್ನು ಪಡೆಯುವುದು ಒಂದಾಗಿತ್ತು. ಮಾನವನಾಗಿ ಇಲ್ಲಿಗೆ ಬಂದಿದ್ದ ಯೇಸು, ತಾನು ಈ ಮೊದಲು ಸ್ವರ್ಗದಿಂದ ಕೇವಲ ನೋಡಿದ್ದ ಪರಿಸ್ಥಿತಿಗಳಿಗೆ ಮತ್ತು ಪ್ರಭಾವಗಳಿಗೆ ಅಧೀನನಾದನು. ಈಗ ಅವನು ಮಾನವ ಅನಿಸಿಕೆಗಳನ್ನು ಮತ್ತು ಭಾವನೆಗಳನ್ನು ಪ್ರತ್ಯಕ್ಷವಾಗಿ ಅನುಭವಿಸಲಿದ್ದನು. ಅವನು ಕೆಲವೊಮ್ಮೆ ದಣಿದು ನಿತ್ರಾಣನಾಗಿ, ಹಸಿವು ಬಾಯಾರಿಕೆಗಳನ್ನೂ ಅನುಭವಿಸಿದನು. (ಮತ್ತಾಯ 4:2; ಯೋಹಾನ 4:6, 7) ಅಷ್ಟುಮಾತ್ರವಲ್ಲದೆ, ಅವನು ಎಲ್ಲ ರೀತಿಯ ಕಷ್ಟಕಾರ್ಪಣ್ಯಗಳನ್ನು ತಾಳಿಕೊಂಡನು. ಹೀಗೆ ಅವನು “ವಿಧೇಯತೆಯನ್ನು ಕಲಿತುಕೊಂಡನು” ಮತ್ತು ಮಹಾಯಾಜಕನೋಪಾದಿ ತನ್ನ ಪಾತ್ರಕ್ಕೆ ಸಂಪೂರ್ಣವಾಗಿ ಯೋಗ್ಯನಾದನು.—ಇಬ್ರಿಯ 5:8-10.

8. ಭೂಮಿಯ ಮೇಲಿನ ಯೇಸುವಿನ ಬಾಲ್ಯಾವಸ್ಥೆಯ ಬಗ್ಗೆ ನಮಗೆ ತಿಳಿದಿರುವ ವಿಷಯವೇನು?

8 ಭೂಮಿಯ ಮೇಲಿದ್ದಾಗ ಯೇಸುವಿನ ಬಾಲ್ಯಾವಸ್ಥೆಯ ಅನುಭವಗಳ ಕುರಿತು ಏನು ಹೇಳಸಾಧ್ಯವಿದೆ? ಅವನ ಬಾಲ್ಯಾವಸ್ಥೆಯ ದಾಖಲೆಯು ತೀರ ಸಂಕ್ಷಿಪ್ತವಾಗಿದೆ. ವಾಸ್ತವದಲ್ಲಿ, ಮತ್ತಾಯ ಮತ್ತು ಲೂಕರು ಮಾತ್ರ ಅವನ ಜನನಕ್ಕೆ ಸಂಬಂಧಿಸಿದ ಘಟನೆಗಳನ್ನು ವರದಿಸಿದರು. ಯೇಸು ಭೂಮಿಗೆ ಬರುವ ಮೊದಲು ಸ್ವರ್ಗದಲ್ಲಿ ಜೀವಿಸಿದ್ದನೆಂದು ಸುವಾರ್ತೆಯ ಬರಹಗಾರರಿಗೆ ಗೊತ್ತಿತ್ತು. ಬೇರೆ ಎಲ್ಲ ವಿಷಯಗಳಿಗಿಂತಲೂ ಮಿಗಿಲಾಗಿ, ಆ ಮಾನವಪೂರ್ವ ಅಸ್ತಿತ್ವವು ತಾನೇ ಅವನು ಯಾವ ರೀತಿಯ ವ್ಯಕ್ತಿಯಾಗಿ ಪರಿಣಮಿಸಿದನೆಂಬುದನ್ನು ವಿವರಿಸುತ್ತದೆ. ಹಾಗಿದ್ದರೂ, ಯೇಸು ಪೂರ್ತಿ ಮಾನವನಾಗಿದ್ದನು. ಅವನು ಪರಿಪೂರ್ಣನಾಗಿದ್ದರೂ, ಸದಾ ಹೊಸ ವಿಷಯಗಳನ್ನು ಕಲಿಯುತ್ತಾ ಶೈಶವಾವಸ್ಥೆಯಿಂದ ಬಾಲ್ಯಾವಸ್ಥೆಗೆ, ತದನಂತರ ತಾರುಣ್ಯಕ್ಕೆ ಕಾಲಿಡಬೇಕಾಗಿತ್ತು. (ಲೂಕ 2:51, 52) ಯೇಸುವಿನ ಮೇಲೆ ಭಾರಿ ಪ್ರಭಾವವನ್ನು ಬೀರಿದ ಅವನ ಬಾಲ್ಯಾವಸ್ಥೆಯ ಕೆಲವು ವಿಷಯಗಳ ಕುರಿತು ಬೈಬಲ್‌ ಹೇಳುತ್ತದೆ.

9. (ಎ) ಯೇಸು ಒಂದು ಬಡ ಕುಟುಂಬದಲ್ಲಿ ಜನಿಸಿದನೆಂಬುದನ್ನು ಯಾವುದು ಸೂಚಿಸುತ್ತದೆ? (ಬಿ) ಯಾವ ರೀತಿಯ ಪರಿಸ್ಥಿತಿಗಳಲ್ಲಿ ಯೇಸು ಬೆಳೆದು ದೊಡ್ಡವನಾದನು?

9 ಯೇಸು ಒಂದು ಬಡ ಕುಟುಂಬದಲ್ಲಿ ಜನಿಸಿದನೆಂಬುದು ಸುವ್ಯಕ್ತ. ಇದು ಅವನು ಜನಿಸಿದ 40 ದಿನಗಳ ತರುವಾಯ ಯೋಸೇಫನು ಮತ್ತು ಮರಿಯಳು ದೇವಾಲಯಕ್ಕೆ ತಂದ ಬಲಿಯರ್ಪಣೆಯಿಂದ ತಿಳಿದುಬರುತ್ತದೆ. ಹೋಮಬಲಿಗಾಗಿ ಒಂದು ಎಳೆಯ ಕುರಿಯನ್ನು ಮತ್ತು ಪಾಪಬಲಿಗಾಗಿ ಬೆಳವಕ್ಕಿಯನ್ನು ಇಲ್ಲವೆ ಪಾರಿವಾಳದ ಮರಿಯನ್ನು ತರುವ ಬದಲು, ಅವರು ‘ಜೋಡಿ ಬೆಳವಕ್ಕಿಯನ್ನು ಇಲ್ಲವೆ ಎರಡು ಪಾರಿವಾಳದ ಮರಿಗಳನ್ನು’ ತಂದರು. (ಲೂಕ 2:24) ಮೋಶೆಯ ಧರ್ಮಶಾಸ್ತ್ರಕ್ಕನುಸಾರ ಈ ಅರ್ಪಣೆಯು ಬಡವರಿಗಾಗಿ ಮಾಡಲ್ಪಟ್ಟಿದ್ದ ಏರ್ಪಾಡಾಗಿತ್ತು. (ಯಾಜಕಕಾಂಡ 12:6-8) ಸಕಾಲದಲ್ಲಿ ಈ ಬಡ ಕುಟುಂಬವು ದೊಡ್ಡದಾಯಿತು. ಯೇಸುವಿನ ಅದ್ಭುತಕರ ಜನನದ ತರುವಾಯ, ಯೋಸೇಫ ಮತ್ತು ಮರಿಯರಿಗೆ ಸ್ವಾಭಾವಿಕ ರೀತಿಯಲ್ಲಿ ಜನಿಸಿದ ಕಡಿಮೆಪಕ್ಷ ಬೇರೆ ಆರು ಮಂದಿ ಮಕ್ಕಳಿದ್ದರು. (ಮತ್ತಾಯ 13:55, 56) ಹೀಗೆ, ಯೇಸು ಅಷ್ಟೇನೂ ಸುಖಸೌಕರ್ಯಗಳಿಲ್ಲದ ಒಂದು ದೊಡ್ಡ ಕುಟುಂಬದಲ್ಲಿ ಬೆಳೆದನು.

10. ಮರಿಯ ಮತ್ತು ಯೋಸೇಫರು ದೇವಭಯವುಳ್ಳ ಜನರೆಂಬುದನ್ನು ಯಾವುದು ತೋರಿಸುತ್ತದೆ?

10 ಯೇಸು ಪರಾಮರಿಕೆಮಾಡುವಂತಹ ದೇವಭಯವುಳ್ಳ ಹೆತ್ತವರಿಂದ ಬೆಳೆಸಲ್ಪಟ್ಟನು. ಅವನ ತಾಯಿಯಾದ ಮರಿಯಳು ವಿಶಿಷ್ಟ ವ್ಯಕ್ತಿತ್ವವಿದ್ದ ಸ್ತ್ರೀಯಾಗಿದ್ದಳು. ಅವಳನ್ನು ಅಭಿವಂದಿಸುವಾಗ ಗಬ್ರಿಯೇಲ ದೇವದೂತನು, “ದೇವರ ದಯೆ ಹೊಂದಿದವಳೇ, ನಿನಗೆ ಶುಭವಾಗಲಿ; ಕರ್ತನು [“ಯೆಹೋವನು,” NW] ನಿನ್ನ ಸಂಗಡ ಇದ್ದಾನೆ” ಎಂದು ಹೇಳಿದನೆಂಬುದನ್ನು ಜ್ಞಾಪಿಸಿಕೊಳ್ಳಿರಿ. (ಲೂಕ 1:28) ಯೋಸೇಫನು ಕೂಡ ದೇವಭಕ್ತಿಯುಳ್ಳ ಮನುಷ್ಯನಾಗಿದ್ದನು. ಪ್ರತಿ ವರ್ಷ ಅವನು ತಪ್ಪದೇ ಪಸ್ಕಕ್ಕಾಗಿ ಯೆರೂಸಲೇಮಿಗೆ 150 ಕಿಲೊಮೀಟರುಗಳ ಪ್ರಯಾಣವನ್ನು ಮಾಡುತ್ತಿದ್ದನು. ಅಲ್ಲಿಗೆ ಪುರುಷರು ಮಾತ್ರ ಹೋಗಬೇಕಿತ್ತಾದರೂ, ಮರಿಯಳು ಕೂಡ ಹಾಜರಾಗುತ್ತಿದ್ದಳು. (ವಿಮೋಚನಕಾಂಡ 23:17; ಲೂಕ 2:41) ಇಂತಹ ಒಂದು ಸಂದರ್ಭದಲ್ಲೇ ಯೋಸೇಫನು ಮತ್ತು ಮರಿಯಳು ಯೇಸುವಿಗಾಗಿ ಬಹಳಷ್ಟು ಹುಡುಕಾಟವನ್ನು ನಡೆಸಿ, 12 ವರ್ಷ ಪ್ರಾಯದ ಯೇಸುವನ್ನು ದೇವಾಲಯದಲ್ಲಿ ಬೋಧಕರ ಮಧ್ಯೆ ಕಂಡುಕೊಂಡರು. ಚಿಂತಾಗ್ರಸ್ತರಾಗಿದ್ದ ತನ್ನ ಹೆತ್ತವರಿಗೆ ಯೇಸು ಹೇಳಿದ್ದು: “ನಾನು ನನ್ನ ತಂದೆಯ ಮನೆಯಲ್ಲಿ ಇರಬೇಕಾದದ್ದು ನಿಮಗೆ ತಿಳಿಯಲಿಲ್ಲವೇ?” (ಲೂಕ 2:49) “ತಂದೆ” ಎಂಬ ಆ ಪದವು ಯುವ ಯೇಸುವಿಗೆ ಆದರಣೀಯ ಹಾಗೂ ಸಕಾರಾತ್ಮಕ ಅರ್ಥವುಳ್ಳದ್ದಾಗಿದ್ದಿರಬೇಕು. ಒಂದು ಕಾರಣವೇನೆಂದರೆ, ಅವನ ನಿಜವಾದ ತಂದೆ ಯೆಹೋವನೆಂದು ಬಹುಶಃ ಅವನಿಗೆ ಹೇಳಲಾಗಿತ್ತು. ಅದೂ ಅಲ್ಲದೆ, ಯೋಸೇಫನು ಒಬ್ಬ ಒಳ್ಳೆಯ ಸಾಕುತಂದೆಯಾಗಿದ್ದಿರಬೇಕು. ತನ್ನ ಪ್ರಿಯ ಮಗನನ್ನು ಬೆಳೆಸಲು ಯೆಹೋವನು ಕಠೋರನಾದ ಇಲ್ಲವೆ ಕ್ರೂರಿಯಾದ ಒಬ್ಬ ವ್ಯಕ್ತಿಯನ್ನು ಖಂಡಿತವಾಗಿಯೂ ಆರಿಸಿಕೊಳ್ಳುತ್ತಿರಲಿಲ್ಲ!

11. ಯಾವ ಕೆಲಸವನ್ನು ಯೇಸು ಕಲಿತುಕೊಂಡನು, ಮತ್ತು ಬೈಬಲ್‌ ಸಮಯಗಳಲ್ಲಿ ಈ ಕೆಲಸವನ್ನು ಮಾಡುವುದರಲ್ಲಿ ಏನು ಒಳಗೂಡಿತ್ತು?

11 ನಜರೇತಿನಲ್ಲಿ ಯೇಸು ದೊಡ್ಡವನಾಗುತ್ತಿದ್ದಾಗ, ಬಹುಶಃ ತನ್ನ ಸಾಕುತಂದೆಯಾದ ಯೋಸೇಫನಿಂದ ಬಡಗಿಯ ಕೆಲಸವನ್ನು ಕಲಿತುಕೊಂಡನು. ಆ ಕೆಲಸದಲ್ಲಿ ಅವನು ಎಷ್ಟು ನಿಪುಣನಾಗಿದ್ದನೆಂದರೆ, ಜನರು ಅವನನ್ನು “ಬಡಗಿ” ಎಂದೇ ಕರೆಯುತ್ತಿದ್ದರು. (ಮಾರ್ಕ 6:3) ಬೈಬಲ್‌ ಸಮಯಗಳಲ್ಲಿ, ಮನೆಗಳನ್ನು ಕಟ್ಟಲು, ಪಿಠೋಪಕರಣಗಳನ್ನು ತಯಾರಿಸಲು (ಮೇಜು, ಸ್ಟೂಲ್‌ಗಳು, ಮತ್ತು ಬೆಂಚುಗಳನ್ನು ಸೇರಿಸಿ) ಮತ್ತು ವ್ಯವಸಾಯಕ್ಕೆ ಸಂಬಂಧಿಸಿದ ಉಪಕರಣಗಳನ್ನು ತಯಾರಿಸಲು ಬಡಗಿಗಳನ್ನು ಕೆಲಸಕ್ಕೆ ಇಟ್ಟುಕೊಳ್ಳಲಾಗುತ್ತಿತ್ತು. ಟ್ರೈಫೋವಿನೊಂದಿಗೆ ಮಾತುಕತೆ (ಇಂಗ್ಲಿಷ್‌) ಎಂಬ ಪುಸ್ತಕದಲ್ಲಿ, ಸಾ.ಶ. ಎರಡನೆಯ ಶತಮಾನದ ಜಸ್ಟಿನ್‌ ಮಾರ್ಟರ್‌ ಯೇಸುವಿನ ಕುರಿತು ಬರೆದುದು: “ಅವನು ಮನುಷ್ಯರ ಮಧ್ಯೆಯಿದ್ದಾಗ, ಬಡಗಿಯ ಕೆಲಸವನ್ನು ಮಾಡುತ್ತಾ ನೇಗಿಲುಗಳನ್ನು ಮತ್ತು ನೊಗಗಳನ್ನು ತಯಾರಿಸಿದನು.” ಅಂತಹ ಕೆಲಸವು ಸುಲಭವಾಗಿರಲಿಲ್ಲ, ಏಕೆಂದರೆ ಪುರಾತನ ಕಾಲದ ಬಡಗಿಯು ಮರವನ್ನು ಖರೀದಿಸಲು ಸಾಧ್ಯವಿರಲಿಲ್ಲವೆಂದು ತೋರುತ್ತದೆ. ಅವನು ಬಹುಶಃ ಕಾಡಿಗೆ ಹೋಗಿ, ಅಲ್ಲೊಂದು ಮರವನ್ನು ಆರಿಸಿ, ತನ್ನ ಕೊಡಲಿಯಿಂದ ಅದನ್ನು ಕಡಿದು ಮನೆಗೆ ತರಬೇಕಾಗಿತ್ತು. ಆದಕಾರಣ, ಜೀವನೋಪಾಯಕ್ಕಾಗಿ ದುಡಿಯುವ, ಗ್ರಾಹಕರೊಂದಿಗೆ ವ್ಯವಹರಿಸುವ ಮತ್ತು ಮನೆಯ ಖರ್ಚನ್ನು ನಿಭಾಯಿಸುವುದರಲ್ಲಿ ಏನೆಲ್ಲ ಒಳಗೂಡಿದೆ ಎಂಬುದು ಯೇಸುವಿಗೆ ಗೊತ್ತಿದ್ದಿರಬಹುದು.

12. ಯೋಸೇಫನು ಯೇಸುವಿಗಿಂತ ಮೊದಲೇ ಮರಣಹೊಂದಿದನೆಂದು ಹೇಗೆ ತಿಳಿದುಬರುತ್ತದೆ, ಮತ್ತು ಇದು ಯೇಸುವಿಗೆ ಏನನ್ನು ಅರ್ಥೈಸಿತು?

12 ಯೇಸು ಮರಣಹೊಂದುವ ಮೊದಲೇ ಯೋಸೇಫನು ಮೃತಪಟ್ಟಿದ್ದನೆಂದು ತಿಳಿದುಬರುವುದರಿಂದ, ಮನೆಯ ಹಿರಿಯ ಮಗನೋಪಾದಿ ಕುಟುಂಬದ ಪರಾಮರಿಕೆಯಲ್ಲಿ ಯೇಸು ಬಹುಶಃ ಸಹಾಯಮಾಡಿದನು. * ಜನವರಿ 1, 1900ರ ಸೈಎನ್ಸ್‌ ವಾಚ್‌ ಟವರ್‌ ಪತ್ರಿಕೆಯು ಹೇಳಿದ್ದು: “ಯೇಸು ಇನ್ನೂ ಚಿಕ್ಕವನಾಗಿದ್ದಾಗಲೇ ಯೋಸೇಫನು ಮರಣಹೊಂದಿದನೆಂದು ಹೇಳಲಾಗುತ್ತದೆ. ಹೀಗೆ ಯೇಸು ಬಡಗಿಯ ಕೆಲಸವನ್ನು ಮುಂದುವರಿಸಿ, ಮನೆಯನ್ನು ನೋಡಿಕೊಂಡನು. ಸ್ವತಃ ಯೇಸು ಒಬ್ಬ ಬಡಗಿಯಾಗಿದ್ದನೆಂಬುದಕ್ಕೆ ಶಾಸ್ತ್ರೀಯ ಪುರಾವೆಯಿದೆ, ಮತ್ತು ಶಾಸ್ತ್ರಗಳಲ್ಲಿ ಅವನ ತಾಯಿ ಹಾಗೂ ಸಹೋದರರ ಉಲ್ಲೇಖವಿದೆಯಾದರೂ ಯೋಸೇಫನ ಉಲ್ಲೇಖವಿಲ್ಲ. (ಮಾರ್ಕ 6:3) . . . ಹಾಗಾದರೆ, ನಮ್ಮ ಪ್ರಭುವಿನ ಜೀವಿತದ ಹದಿನೆಂಟು ವರ್ಷಗಳ ದೀರ್ಘ ಅವಧಿಯು, ಅಂದರೆ [ಲೂಕ 2:41-49ರಲ್ಲಿ ದಾಖಲಿಸಲ್ಪಟ್ಟ] ಘಟನೆಯಿಂದ ಹಿಡಿದು ಅವನ ದೀಕ್ಷಾಸ್ನಾನದ ಸಮಯದ ವರೆಗಿನ ಸಮಯವು, ಅನುದಿನದ ಸಾಧಾರಣ ಚಟುವಟಿಕೆಗಳಲ್ಲೇ ಕಳೆದಿದ್ದಿರಬಹುದು.” ಒಬ್ಬ ಪ್ರಿಯ ಪತಿ ಮತ್ತು ತಂದೆಯು ಮರಣಹೊಂದುವಾಗ, ಅದರಿಂದ ಆಗುವ ವೇದನೆಯನ್ನು ಬಹುಶಃ ಮರಿಯ ಮತ್ತು ಯೇಸುವಿನೊಂದಿಗೆ ಅವಳ ಮಕ್ಕಳೆಲ್ಲರೂ ಅನುಭವಿಸಿದರು.

13. ಯೇಸು ತನ್ನ ಶುಶ್ರೂಷೆಯನ್ನು ಆರಂಭಿಸಿದಾಗ, ಅದು ಬೇರೆ ಯಾವ ವ್ಯಕ್ತಿಯೂ ಪಡೆದಿರಲು ಅಸಾಧ್ಯವಾಗಿದ್ದ ಜ್ಞಾನ, ಒಳನೋಟ, ಮತ್ತು ಸಹಾನುಭೂತಿಯಿಂದ ಏಕೆ ಕೂಡಿತ್ತು?

13 ಯೇಸು ಐಷಾರಾಮವಾಗಿ ಜೀವಿಸುತ್ತಿದ್ದಂತಹ ಒಂದು ಕುಟುಂಬದಲ್ಲಿ ಜನಿಸಲಿಲ್ಲವೆಂಬುದು ಸ್ಪಷ್ಟ. ಬದಲಿಗೆ ಅವನು ಸಾಧಾರಣ ಜನರ ಪಾಡನ್ನು ಸ್ವತಃ ಅನುಭವಿಸಿದನು. ತರುವಾಯ ಸಾ.ಶ. 29ರಲ್ಲಿ, ಯೇಸು ತನಗೆ ವಹಿಸಲ್ಪಟ್ಟಿದ್ದ ದೈವಿಕ ನೇಮಕವನ್ನು ಪೂರೈಸುವ ಸಮಯವು ಬಂದಿತ್ತು. ಆ ವರ್ಷದ ಶರತ್ಕಾಲದಲ್ಲಿ ಅವನು ನೀರಿನಲ್ಲಿ ದೀಕ್ಷಾಸ್ನಾನ ಪಡೆದು, ದೇವರ ಆತ್ಮಜನಿತ ಪುತ್ರನಾದನು. ಆಗ “ಆಕಾಶವು ತೆರೆಯಿತು,” ಅಂದರೆ ಅವನು ಸ್ವರ್ಗದಲ್ಲಿನ ತನ್ನ ಮಾನವಪೂರ್ವ ಜೀವಿತವನ್ನು ಮತ್ತು ಈ ಮೊದಲು ತನಗಿದ್ದ ಆಲೋಚನೆಗಳು ಹಾಗೂ ಭಾವನೆಗಳನ್ನು ಸ್ಮರಿಸಿಕೊಳ್ಳಬಹುದಿತ್ತೆಂದು ಇದು ಅರ್ಥೈಸಿತು. (ಲೂಕ 3:21, 22) ಹೀಗೆ, ಯೇಸು ತನ್ನ ಶುಶ್ರೂಷೆಯನ್ನು ಆರಂಭಿಸಿದಾಗ, ಅದು ಬೇರೆ ಯಾವ ವ್ಯಕ್ತಿಯೂ ಪಡೆದಿರಲು ಸಾಧ್ಯವಿರದಂತಹ ಜ್ಞಾನ, ಒಳನೋಟ ಮತ್ತು ಆಳವಾದ ಭಾವನೆಯೊಂದಿಗೆ ಕೂಡಿತ್ತು. ಆದುದರಿಂದಲೇ ಸುವಾರ್ತೆಯ ಬರಹಗಾರರು ತಮ್ಮ ಬರವಣಿಗೆಯಲ್ಲಿ ಹೆಚ್ಚಿನದ್ದನ್ನು ಯೇಸುವಿನ ಶುಶ್ರೂಷೆಗೆ ಸಂಬಂಧಿಸಿದ ಘಟನೆಗಳಿಗೆ ಮೀಸಲಾಗಿಟ್ಟರು. ಹಾಗಿದ್ದರೂ, ಅವನು ಹೇಳಿದಂತಹ ಮತ್ತು ಮಾಡಿದಂತಹ ಸಕಲ ವಿಷಯಗಳನ್ನೂ ದಾಖಲಿಸಲು ಅವರಿಂದ ಸಾಧ್ಯವಾಗಲಿಲ್ಲ. (ಯೋಹಾನ 21:25) ಆದರೆ ಅವರು ಏನನ್ನು ದಾಖಲಿಸುವಂತೆ ಪ್ರೇರಿಸಲ್ಪಟ್ಟರೋ ಅದು, ಜೀವಿಸಿರುವವರಲ್ಲಿ ಅತ್ಯಂತ ಮಹಾನ್‌ ಪುರುಷನ ಮನಸ್ಸಿನೊಳಕ್ಕೆ ಇಣಿಕಿನೋಡಲು ನಮಗೆ ಸಹಾಯ ಮಾಡುತ್ತದೆ.

ಒಬ್ಬ ಮಾನವನಾಗಿದ್ದಾಗ ಯೇಸು ಹೇಗಿದ್ದನು?

14. ಯೇಸು ಸ್ನೇಹಪರನು ಮತ್ತು ಸಹಾನುಭೂತಿಯುಳ್ಳವನೂ ಎಂಬುದನ್ನು ಸುವಾರ್ತೆಯ ವೃತ್ತಾಂತಗಳು ಹೇಗೆ ಚಿತ್ರಿಸುತ್ತವೆ?

14 ಸುವಾರ್ತೆಗಳಲ್ಲಿ ಕಾಣಸಿಗುವ ಯೇಸುವಿನ ವ್ಯಕ್ತಿತ್ವವು, ಅವನನ್ನು ಸ್ನೇಹಪರನಾದ ಮತ್ತು ಸಹಾನುಭೂತಿಯುಳ್ಳ ವ್ಯಕ್ತಿಯಾಗಿ ಚಿತ್ರಿಸುತ್ತದೆ. ಅವನ ಭಾವನಾತ್ಮಕ ಪ್ರತಿಕ್ರಿಯೆಗಳು ವೈವಿಧ್ಯಮಯವಾಗಿದ್ದವು: ಒಬ್ಬ ಕುಷ್ಠರೋಗಿಗಾಗಿ ಕನಿಕರ (ಮಾರ್ಕ 1:40, 41); ಅಲಕ್ಷಿಸಲ್ಪಟ್ಟಿದ್ದ ಜನರಿಗಾಗಿ ಮರುಕ (ಲೂಕ 19:41, 42); ಲೋಭಿಗಳಾದ ಚಿನಿವಾರರ ಕಡೆಗೆ ಉಚಿತ ಕೋಪ. (ಯೋಹಾನ 2:13-17) ಸಹಾನುಭೂತಿಯುಳ್ಳ ಯೇಸು ತನ್ನ ಭಾವನೆಗಳನ್ನು ಮುಚ್ಚಿಡದೆ, ಕೆಲವೊಮ್ಮೆ ಕಣ್ಣೀರನ್ನೂ ಸುರಿಸಿದನು. ತನ್ನ ಪ್ರಿಯ ಮಿತ್ರನಾದ ಲಾಜರನು ಮರಣಹೊಂದಿದಾಗ, ಲಾಜರನ ಸಹೋದರಿಯಾದ ಮರಿಯಳು ಅಳುವುದನ್ನು ನೋಡಿ ಯೇಸು ಎಷ್ಟು ಸಂಕಟಪಟ್ಟನೆಂದರೆ, ಅವನು ಕೂಡ ಎಲ್ಲರ ಮುಂದೆ ಅತ್ತುಬಿಟ್ಟನು.—ಯೋಹಾನ 11:32-36.

15. ಯೇಸು ಇತರರನ್ನು ವೀಕ್ಷಿಸಿದ ಮತ್ತು ಉಪಚರಿಸಿದ ರೀತಿಯಿಂದ ಅವನ ಕೋಮಲ ಭಾವನೆಗಳು ಹೇಗೆ ಸ್ಪಷ್ಟವಾಗಿ ಕಂಡುಬಂದವು?

15 ಯೇಸು ಇತರರನ್ನು ಪರಿಗಣಿಸಿದ ಮತ್ತು ಉಪಚರಿಸಿದ ರೀತಿಯಿಂದ, ಅವನಲ್ಲಿದ್ದ ಕೋಮಲ ಭಾವನೆಗಳು ತೀರ ಸ್ಪಷ್ಟವಾಗಿ ತೋರಿಬಂದವು. ಅವನು ದೀನದಲಿತರೊಂದಿಗೆ ನಿಕಟವಾದ ಸಂಬಂಧವನ್ನಿಟ್ಟುಕೊಂಡು, ಅವರು ‘ತಮ್ಮ ಪ್ರಾಣಗಳಿಗೆ ವಿಶ್ರಾಂತಿಯನ್ನು’ ಕಂಡುಕೊಳ್ಳುವಂತೆ ಸಹಾಯ ಮಾಡಿದನು. (ಮತ್ತಾಯ 11:4, 5, 28-30) ಅವನು ಸಂಕಟಕ್ಕೀಡಾದವರ ಕರೆಗಳಿಗೆ ಓಗೊಡಲು ಸಾಧ್ಯವಾಗದಷ್ಟು ಕಾರ್ಯಮಗ್ನನಾಗಿರಲಿಲ್ಲ, ತನ್ನ ವಸ್ತ್ರಗಳನ್ನು ಹಿಂದಿನಿಂದ ಮುಟ್ಟಿದ ರಕ್ತಸ್ರಾವದಿಂದ ಕಷ್ಟಾನುಭವಿಸುತ್ತಿದ್ದ ಸ್ತ್ರೀಯೇ ಆಗಿರಲಿ, ಇಲ್ಲವೆ ಬಿಡದೆ ಕೂಗುತ್ತಿದ್ದ ಕುರುಡು ಭಿಕ್ಷುಕನೇ ಆಗಿರಲಿ, ಅವನು ಎಲ್ಲರಿಗೂ ಸಹಾಯ ಹಸ್ತವನ್ನು ಚಾಚಿದನು. (ಮತ್ತಾಯ 9:20-22; ಮಾರ್ಕ 10:46-52) ಯೇಸು ಇತರರಲ್ಲಿ ತಾನು ಕಂಡುಕೊಂಡ ಒಳ್ಳೆಯ ಗುಣಗಳಿಗಾಗಿ ಅವರನ್ನು ಶ್ಲಾಘಿಸಿದನಾದರೂ, ಅಗತ್ಯವಿದ್ದಾಗ ಗದರಿಕೆಯನ್ನು ನೀಡಲೂ ಅವನು ಸಿದ್ಧನಾಗಿದ್ದನು. (ಮತ್ತಾಯ 16:23; ಯೋಹಾನ 1:47; 8:44) ಸ್ತ್ರೀಯರು ಕೆಲವೇ ಹಕ್ಕುಗಳನ್ನು ಅನುಭವಿಸಿದ ಸಮಯದಲ್ಲೂ, ಯೇಸು ಅವರಿಗೆ ಸಾಕಷ್ಟು ಘನತೆ ಗೌರವವನ್ನು ನೀಡಿದನು. (ಯೋಹಾನ 4:9, 27) ಆದುದರಿಂದ ಕೆಲವು ಸ್ತ್ರೀಯರು ಸ್ವಇಚ್ಛೆಯಿಂದ ತಮ್ಮಲ್ಲಿದ್ದ ವಸ್ತುಗಳಿಂದಲೇ ಅವನಿಗೆ ಸೇವೆಮಾಡಿದರು.—ಲೂಕ 8:3.

16. ಯೇಸುವಿಗೆ ಜೀವಿತದ ಹಾಗೂ ಪ್ರಾಪಂಚಿಕ ವಸ್ತುಗಳ ಬಗ್ಗೆ ಸಮತೂಕ ನೋಟವಿತ್ತೆಂಬುದನ್ನು ಯಾವುದು ತೋರಿಸುತ್ತದೆ?

16 ಜೀವನದ ಬಗ್ಗೆ ಯೇಸುವಿಗೆ ಸಮತೂಕ ನೋಟವಿತ್ತು. ಅವನು ಪ್ರಾಪಂಚಿಕ ವಸ್ತುಗಳಿಗೆ ಹೆಚ್ಚಿನ ಪ್ರಮುಖತೆಯನ್ನು ನೀಡಲಿಲ್ಲ. ಭೌತಿಕ ವಸ್ತುಗಳು ಅವನಲ್ಲಿ ಹೆಚ್ಚೇನೂ ಇರಲಿಲ್ಲ. ತನಗೆ “ತಲೆಯಿಡುವಷ್ಟು ಸ್ಥಳವೂ ಇಲ್ಲ”ವೆಂದು ಅವನು ಹೇಳಿದನು. (ಮತ್ತಾಯ 8:20) ಆದರೆ ಅದೇ ಸಮಯದಲ್ಲಿ, ಯೇಸು ಇತರರಿಗೆ ಸಂತೋಷವನ್ನು ಉಂಟುಮಾಡಿದನು. ಸಂಗೀತ, ಹಾಡು ಮತ್ತು ಹರ್ಷೋಲ್ಲಾಸದಿಂದ ಕೂಡಿದ್ದ ಒಂದು ವಿವಾಹೋತ್ಸವಕ್ಕೆ ಅವನು ಹಾಜರಾದಾಗ, ಆ ಸಂತೋಷದ ಸಂದರ್ಭಕ್ಕೆ ತಣ್ಣೀರೆರಚಲು ಅವನಲ್ಲಿರಲಿಲ್ಲವೆಂಬುದು ಸ್ಪಷ್ಟ. ಅದರ ಬದಲು ಯೇಸು ತನ್ನ ಪ್ರಥಮ ಅದ್ಭುತಕಾರ್ಯವನ್ನು ಅಲ್ಲೇ ನಡೆಸಿದನು. ದ್ರಾಕ್ಷಾರಸವು ಮುಗಿದುಹೋದಾಗ, ಅವನು ನೀರನ್ನು “ಹೃದಯಾನಂದಕರ” ಪಾನೀಯವಾಗಿ, ಅಂದರೆ ಉತ್ತಮ ಗುಣಮಟ್ಟದ ದ್ರಾಕ್ಷಾರಸವನ್ನಾಗಿ ಮಾಡಿದನು. (ಕೀರ್ತನೆ 104:15; ಯೋಹಾನ 2:1-11) ಹೀಗೆ ಆ ಸಮಾರಂಭಕ್ಕೆ ತಡೆಯುಂಟಾಗಲಿಲ್ಲ ಮತ್ತು ವಧೂವರರು ಪೇಚಾಟದಿಂದ ಪಾರಾದರು. ಯೇಸು ತನ್ನ ಸಮತೂಕವನ್ನು ಕಾಪಾಡಿಕೊಂಡನೆಂಬುದು, ಅವನು ಶುಶ್ರೂಷೆಯಲ್ಲಿ ದೀರ್ಘ ಸಮಯದ ವರೆಗೆ ಪ್ರಯಾಸಪಟ್ಟ ಇನ್ನೂ ಅನೇಕ ಸಂದರ್ಭಗಳಿಂದ ನಮಗೆ ತಿಳಿದುಬರುತ್ತದೆ.—ಯೋಹಾನ 4:34.

17. ಯೇಸು ಒಬ್ಬ ನಿಪುಣ ಬೋಧಕನಾಗಿದ್ದದ್ದು ಏಕೆ ಆಶ್ಚರ್ಯಕರವಲ್ಲ, ಮತ್ತು ಅವನ ಬೋಧನೆಗಳು ಏನನ್ನು ಪ್ರತಿಬಿಂಬಿಸಿದವು?

17 ಯೇಸು ಒಬ್ಬ ನಿಪುಣ ಬೋಧಕನಾಗಿದ್ದನು. ಅವನು ಬೋಧಿಸುವಾಗ, ತನಗೆ ಚಿರಪರಿಚಿತವಾಗಿದ್ದ ಅನುದಿನದ ನೈಜತೆಗಳನ್ನೇ ಅವನು ಅನೇಕ ವೇಳೆ ತಿಳಿಯಪಡಿಸಿದನು. (ಮತ್ತಾಯ 13:33; ಲೂಕ 15:8) ಸ್ಪಷ್ಟವೂ, ಸರಳವೂ, ವ್ಯಾವಹಾರಿಕವೂ ಆಗಿದ್ದ ಅವನ ಬೋಧಿಸುವ ವಿಧಾನವು ಸರಿಸಾಟಿಯಿಲ್ಲದ್ದಾಗಿತ್ತು. ಇದಕ್ಕಿಂತಲೂ ಹೆಚ್ಚು ಮಹತ್ವವಾದದ್ದು ಅವನು ಕಲಿಸಿದ ವಿಷಯಗಳೇ. ತನ್ನ ಕೇಳುಗರಿಗೆ ಯೆಹೋವನ ಆಲೋಚನೆಗಳು, ಭಾವನೆಗಳು ಮತ್ತು ರೀತಿನೀತಿಗಳನ್ನೇ ತಿಳಿಸಿಕೊಡಬೇಕೆಂಬ ಅವನ ಹೃತ್ಪೂರ್ವಕ ಬಯಕೆಯನ್ನು ಅವನ ಬೋಧನೆಯು ಪ್ರತಿಬಿಂಬಿಸಿತು.—ಯೋಹಾನ 17:6-8.

18, 19. (ಎ) ಯಾವ ವಿವರಣಾತ್ಮಕ ಮಾತುಗಳಿಂದ ಯೇಸು ತನ್ನ ತಂದೆಯನ್ನು ಬಣ್ಣಿಸಿದನು? (ಬಿ) ಮುಂದಿನ ಲೇಖನದಲ್ಲಿ ಯಾವ ವಿಷಯವನ್ನು ಚರ್ಚಿಸಲಾಗುವುದು?

18 ಅನೇಕ ವೇಳೆ ದೃಷ್ಟಾಂತಗಳನ್ನು ಉಪಯೋಗಿಸುತ್ತಾ ಯೇಸು ತನ್ನ ತಂದೆಯನ್ನು ಪ್ರಕಟಪಡಿಸಿದನು. ಅವನು ಉಪಯೋಗಿಸಿದಂತಹ ವಿವರಣಾತ್ಮಕ ಭಾಷೆಯನ್ನು ಸುಲಭವಾಗಿ ಮರೆಯಲು ಸಾಧ್ಯವಿರಲಿಲ್ಲ. ದೇವರ ಕರುಣೆಯ ಬಗ್ಗೆ ಸಾಧಾರಣವಾಗಿ ಮಾತಾಡುವುದು ಒಂದು ವಿಷಯವಾಗಿದೆ. ಆದರೆ ಮನೆಗೆ ಹಿಂದಿರುಗುತ್ತಿರುವ ಮಗನನ್ನು ನೋಡಿ, ‘ಓಡಿಬಂದು ಅವನ ಕೊರಳನ್ನು ಅಪ್ಪಿಕೊಂಡು ಅವನನ್ನು ಬಹಳವಾಗಿ ಮುದ್ದಿಸಿದ’ ಕ್ಷಮಾಶೀಲ ತಂದೆಗೆ ಯೆಹೋವನನ್ನು ಹೋಲಿಸುವುದು ಬೇರೊಂದು ವಿಷಯವಾಗಿದೆ. (ಲೂಕ 15:11-24) ಜನಸಾಮಾನ್ಯರನ್ನು ತುಚ್ಛವಾಗಿ ಕಾಣುತ್ತಿದ್ದ ಧಾರ್ಮಿಕ ಮುಖಂಡರ ಕಠಿನ ಸಂಸ್ಕೃತಿಯನ್ನು ತಿರಸ್ಕರಿಸುತ್ತಾ, ಜಂಬಕೊಚ್ಚಿಕೊಳ್ಳುವ ಫರಿಸಾಯನ ಜಂಬದ ಪ್ರಾರ್ಥನೆಗಿಂತಲೂ ದೀನನಾದ ಒಬ್ಬ ಸುಂಕ ವಸೂಲಿಗಾರನ ಬೇಡಿಕೆಗಳಿಗೆ ಕಿವಿಗೊಡಲು ಇಚ್ಛಿಸುವ ತನ್ನ ತಂದೆಯು ಸ್ನೇಹಪರನೆಂದು ಯೇಸು ವಿವರಿಸಿದನು. (ಲೂಕ 18:9-14) ಯೆಹೋವನು ಕಾಳಜಿವಹಿಸುವ ದೇವರೆಂದೂ ಒಂದು ಚಿಕ್ಕ ಗುಬ್ಬಿ ನೆಲಕ್ಕೆ ಬೀಳುವುದು ಸಹ ಆತನ ಗಮನಕ್ಕೆ ಬರುತ್ತದೆಂದೂ ಯೇಸು ತಿಳಿಸಿದನು. ಯೇಸು ತನ್ನ ಶಿಷ್ಯರಿಗೆ ಆಶ್ವಾಸನೆ ನೀಡಿದ್ದು: “ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು.” (ಮತ್ತಾಯ 10:29, 31) ಹೀಗೆ, ಜನರು ಯೇಸುವಿನ ‘ಬೋಧನಾ ವಿಧಾನಕ್ಕೆ’ (NW) ಆಶ್ಚರ್ಯಪಟ್ಟು, ಅವನ ಕಡೆಗೆ ಆಕರ್ಷಿತರಾದುದರಲ್ಲಿ ಆಶ್ಚರ್ಯವೇನೂ ಇಲ್ಲ. (ಮತ್ತಾಯ 7:28, 29) ಒಂದು ಸಂದರ್ಭದಲ್ಲಿ “ಒಂದು ದೊಡ್ಡ ಜನಸಮೂಹವು” (NW) ಅವನೊಂದಿಗೆ ಊಟವೇ ಇಲ್ಲದೆ ಮೂರು ದಿನ ಉಳಿದಿತ್ತು!—ಮಾರ್ಕ 8:1, 2.

19 ಯೆಹೋವನು ತನ್ನ ವಾಕ್ಯದಲ್ಲಿ ಕ್ರಿಸ್ತನ ಮನಸ್ಸನ್ನು ಪ್ರಕಟಪಡಿಸಿರುವುದಕ್ಕೆ ನಾವು ಆಭಾರಿಗಳಾಗಿರಸಾಧ್ಯವಿದೆ! ಆದರೆ, ನಾವು ಕ್ರಿಸ್ತನ ಮನಸ್ಸನ್ನು ಬೆಳೆಸಿಕೊಂಡು, ಇತರರೊಂದಿಗೆ ವ್ಯವಹರಿಸುವಾಗ ಅದನ್ನು ಹೇಗೆ ಪ್ರದರ್ಶಿಸಬಲ್ಲೆವು? ಇದು ಮುಂದಿನ ಲೇಖನದಲ್ಲಿ ಚರ್ಚಿಸಲ್ಪಡುವುದು.

[ಪಾದಟಿಪ್ಪಣಿಗಳು]

^ ಪ್ಯಾರ. 5 ಆತ್ಮಜೀವಿಗಳು ಸಹ ಸಹವಾಸದ ಪ್ರಭಾವಕ್ಕೆ ಒಳಗಾಗಸಾಧ್ಯವೆಂಬುದು ಪ್ರಕಟನೆ 12:3, 4ರಿಂದ ತಿಳಿದುಬರುತ್ತದೆ. ಅಲ್ಲಿ “ಮಹಾ ಘಟಸರ್ಪ”ನೋಪಾದಿ ಚಿತ್ರಿಸಲ್ಪಟ್ಟಿರುವ ಸೈತಾನನು ಇತರ “ನಕ್ಷತ್ರ”ಗಳ ಮೇಲೆ, ಅಂದರೆ ಆತ್ಮಪುತ್ರರ ಮೇಲೆ ತನ್ನ ಪ್ರಭಾವವನ್ನು ಬೀರಿ, ಅವರು ಕೂಡ ದಂಗೆಯಲ್ಲಿ ತನ್ನ ಜೊತೆಗೂಡುವಂತೆ ಮಾಡಿದನು.—ಹೋಲಿಸಿ ಯೋಬ 38:7.

^ ಪ್ಯಾರ. 12 ಯೋಸೇಫನ ಅಂತಿಮ ಉಲ್ಲೇಖವು, 12 ವರ್ಷ ಪ್ರಾಯದ ಯೇಸು ದೇವಾಲಯದಲ್ಲಿ ಕಂಡುಕೊಳ್ಳಲ್ಪಟ್ಟ ಘಟನೆಗೆ ಸಂಬಂಧಿಸಿದೆ. ಯೇಸುವಿನ ಶುಶ್ರೂಷೆಯ ಆರಂಭದಲ್ಲಿ, ಕಾನಾದಲ್ಲಿ ನಡೆದ ವಿವಾಹೋತ್ಸವಕ್ಕೆ ಯೋಸೇಫನು ಬಂದಿದ್ದರ ಬಗ್ಗೆ ಯಾವುದೇ ಉಲ್ಲೇಖವಿಲ್ಲ. (ಯೋಹಾನ 2:1-3) ಸಾ.ಶ. 33ರಲ್ಲಿ ಯಾತನಾ ಕಂಭಕ್ಕೇರಿಸಲ್ಪಟ್ಟ ಯೇಸು, ಮರಿಯಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ತನ್ನ ಪ್ರಿಯ ಅಪೊಸ್ತಲನಾದ ಯೋಹಾನನಿಗೆ ವಹಿಸಿದನು. ಯೋಸೇಫನು ಇನ್ನೂ ಜೀವಂತನಾಗಿ ಇದ್ದಿದ್ದರೆ, ಯೇಸು ಖಂಡಿತವಾಗಿಯೂ ಹಾಗೆ ಮಾಡುತ್ತಿರಲಿಲ್ಲ.—ಯೋಹಾನ 19:26, 27.

ನಿಮಗೆ ಜ್ಞಾಪಕವಿದೆಯೇ?

• ‘ಯೇಸುವಿನ ಮನಸ್ಸಿನ’ ಬಗ್ಗೆ ನಾವು ತಿಳಿದುಕೊಳ್ಳುವುದು ಏಕೆ ಪ್ರಾಮುಖ್ಯವಾಗಿದೆ?

• ಯೇಸು ತನ್ನ ಮಾನವಪೂರ್ವ ಅಸ್ತಿತ್ವದಲ್ಲಿ ಯಾವ ಸಹವಾಸವನ್ನು ಅನುಭವಿಸಿದನು?

• ತನ್ನ ಭೂಜೀವಿತದಲ್ಲಿ, ಯೇಸು ಯಾವ ಪರಿಸ್ಥಿತಿಗಳನ್ನು ಮತ್ತು ಪ್ರಭಾವಗಳನ್ನು ಸ್ವತಃ ಅನುಭವಿಸಿದನು?

• ಸುವಾರ್ತೆಯ ವೃತ್ತಾಂತಗಳು ಯೇಸುವಿನ ವ್ಯಕ್ತಿತ್ವದ ಬಗ್ಗೆ ಏನನ್ನು ತಿಳಿಯಪಡಿಸುತ್ತವೆ?

[ಅಧ್ಯಯನ ಪ್ರಶ್ನೆಗಳು]

[ಪುಟ 10ರಲ್ಲಿರುವ ಚಿತ್ರ]

ಯೇಸು ಅಷ್ಟೇನೂ ಸುಖಸೌಕರ್ಯಗಳಿಲ್ಲದ ಒಂದು ದೊಡ್ಡ ಕುಟುಂಬದಲ್ಲಿ ಬೆಳೆದನು

[ಪುಟ 12ರಲ್ಲಿರುವ ಚಿತ್ರಗಳು]

ಹನ್ನೆರಡು ವರ್ಷ ಪ್ರಾಯದ ಯೇಸುವಿನ ತಿಳುವಳಿಕೆ ಹಾಗೂ ಉತ್ತರಗಳಿಂದ ಧಾರ್ಮಿಕ ಬೋಧಕರು ಆಶ್ಚರ್ಯಪಟ್ಟರು