ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

“ಕ್ರಿಸ್ತನ ಮನಸ್ಸು” ನಿಮ್ಮಲ್ಲಿದೆಯೊ?

“ಕ್ರಿಸ್ತನ ಮನಸ್ಸು” ನಿಮ್ಮಲ್ಲಿದೆಯೊ?

“ಕ್ರಿಸ್ತನ ಮನಸ್ಸು” ನಿಮ್ಮಲ್ಲಿದೆಯೊ?

“ಆ ಸ್ಥಿರಚಿತ್ತವನ್ನೂ ಆದರಣೆಯನ್ನೂ ಕೊಡುವ ದೇವರು ನೀವು ಕ್ರಿಸ್ತ ಯೇಸುವನ್ನು ಅನುಸರಿಸಿ ಒಂದೇ ಮನಸ್ಸುಳ್ಳವರಾಗಿರುವಂತೆ ನಿಮಗೆ ದಯಪಾಲಿಸಲಿ.”—ರೋಮಾಪುರ 15:5.

1. ಕ್ರೈಸ್ತಪ್ರಪಂಚದ ಹಲವಾರು ಚಿತ್ರಗಳಲ್ಲಿ ಯೇಸು ಹೇಗೆ ಚಿತ್ರಿಸಲ್ಪಟ್ಟಿದ್ದಾನೆ, ಮತ್ತು ಇದು ಏಕೆ ಯೇಸುವಿನ ಕುರಿತಾದ ಸರಿಯಾದ ವರ್ಣನೆಯಾಗಿರುವುದಿಲ್ಲ?

“ಅವನು ನಗುವುದನ್ನು ಯಾರೂ ಎಂದೂ ನೋಡಿರಲಿಲ್ಲ.” ಹೀಗೆಂದು ಯೇಸುವಿನ ಕುರಿತು ಒಂದು ದಾಖಲೆಯು ವಿವರಿಸುತ್ತದೆ. ಈ ದಾಖಲೆಯನ್ನು ತಾನೇ ಬರೆದೆನೆಂದು ಒಬ್ಬ ಪುರಾತನ ರೋಮನ್‌ ಅಧಿಕಾರಿಯು ಹೇಳಿಕೊಳ್ಳುತ್ತಾನೆ. 11ನೇ ಶತಮಾನದಿಂದಲೂ ಅಸ್ತಿತ್ವದಲ್ಲಿದ್ದ ಈ ದಾಖಲೆಯು, ಅನೇಕ ಚಿತ್ರಗಾರರನ್ನು ಪ್ರಭಾವಿಸಿತೆಂದು ಸಹ ಹೇಳಲಾಗಿದೆ. * ಹಲವಾರು ಚಿತ್ರಗಳಲ್ಲಿ, ಯೇಸುವನ್ನು ಒಬ್ಬ ದುಃಖಿತನಾದ, ಎಂದೂ ಮಂದಹಾಸ ಬೀರದ ವ್ಯಕ್ತಿಯೋಪಾದಿ ಚಿತ್ರಿಸಲಾಗಿದೆ. ಆದರೆ, ಈ ರೀತಿಯ ಚಿತ್ರಣವು ನಿಜವಾದದ್ದಲ್ಲ, ಏಕೆಂದರೆ ಸುವಾರ್ತೆಯ ವೃತ್ತಾಂತಗಳಲ್ಲಿ ಅವನು ಸ್ನೇಹಪರ ಹಾಗೂ ಸಹಾನುಭೂತಿಯುಳ್ಳ ಸಹೃದಯಿಯಾಗಿ ವರ್ಣಿಸಲ್ಪಟ್ಟಿದ್ದಾನೆ.

2. ‘ಕ್ರಿಸ್ತ ಯೇಸುವನ್ನು ಅನುಸರಿಸಿ ಅದೇ ಮನಸ್ಸನ್ನು’ ನಾವು ಹೇಗೆ ಬೆಳೆಸಿಕೊಳ್ಳಸಾಧ್ಯವಿದೆ, ಮತ್ತು ಇದನ್ನು ಮಾಡಲು ನಮಗೆ ಯಾವುದು ಸಹಾಯ ಮಾಡುವುದು?

2 ನಾವು ಯೇಸುವಿನ ನಿಜವಾದ ಸ್ವರೂಪವನ್ನು ತಿಳಿದುಕೊಳ್ಳಬೇಕೆಂದಿದ್ದರೆ, ಅವನು ಭೂಮಿಯಲ್ಲಿದ್ದಾಗ ಯಾವ ರೀತಿಯ ವ್ಯಕ್ತಿಯಾಗಿದ್ದನೆಂಬುದರ ಸ್ಪಷ್ಟ ತಿಳುವಳಿಕೆಯನ್ನು ನಮ್ಮ ಹೃದಮನಗಳಲ್ಲಿ ತುಂಬಿಸಬೇಕು. ಆದುದರಿಂದ ‘ಕ್ರಿಸ್ತನ ಮನಸ್ಸಿನ’ ಬಗ್ಗೆ, ಅಂದರೆ ಅವನ ಭಾವನೆಗಳು, ಗ್ರಹಿಕೆಗಳು, ವಿಚಾರಗಳು ಮತ್ತು ತರ್ಕಗಳ ಕುರಿತು ಒಳನೋಟ ನೀಡುವಂತಹ ಕೆಲವು ಸುವಾರ್ತೆಯ ವೃತ್ತಾಂತಗಳನ್ನು ನಾವು ಪರಿಶೀಲಿಸೋಣ. (1 ಕೊರಿಂಥ 2:16) ಈ ರೀತಿಯಲ್ಲಿ ಚರ್ಚಿಸುವಾಗ, ‘ಕ್ರಿಸ್ತ ಯೇಸುವನ್ನು ಅನುಸರಿಸಿ ಒಂದೇ ಮನಸ್ಸನ್ನು’ ನಾವು ಹೇಗೆ ಬೆಳೆಸಿಕೊಳ್ಳಬಹುದೆಂಬುದನ್ನು ಪರಿಗಣಿಸೋಣ. (ರೋಮಾಪುರ 15:5) ಹೀಗೆ ಮಾಡುವ ಮೂಲಕ, ನಾವು ಯೇಸುವಿಟ್ಟ ಮಾದರಿಯನ್ನು ಸ್ವತಃ ನಮ್ಮ ಜೀವಿತಗಳಲ್ಲಿ ಮತ್ತು ಇತರರೊಂದಿಗೆ ನಾವು ವ್ಯವಹರಿಸುವ ರೀತಿಯಲ್ಲಿ ಅದನ್ನು ಅನುಸರಿಸಲು ಸಿದ್ಧರಾಗಿರಬಹುದು.—ಯೋಹಾನ 13:15.

ಸುಲಭವಾಗಿ ಸಮೀಪಿಸಸಾಧ್ಯವಿರುವ ವ್ಯಕ್ತಿ

3, 4. (ಎ) ಮಾರ್ಕ 10:13-16ರಲ್ಲಿ ದಾಖಲಿಸಲ್ಪಟ್ಟಿರುವ ವೃತ್ತಾಂತದ ಹಿನ್ನೆಲೆಯೇನು? (ಬಿ) ತನ್ನ ಶಿಷ್ಯರು ಚಿಕ್ಕ ಮಕ್ಕಳನ್ನು ತನ್ನಿಂದ ತಡೆಯುತ್ತಿದ್ದಾಗ ಯೇಸು ಹೇಗೆ ಪ್ರತಿಕ್ರಿಯಿಸಿದನು?

3 ಜನರು ಯೇಸುವಿನ ಕಡೆಗೆ ಆಕರ್ಷಿತರಾದರು. ಹಲವಾರು ಸಂದರ್ಭಗಳಲ್ಲಿ, ಬೇರೆ ಬೇರೆ ವಯೋಮಾನಗಳ ಹಾಗೂ ಹಿನ್ನೆಲೆಗಳ ಜನರು ನಿರಾತಂಕವಾಗಿ ಅವನನ್ನು ಸಮೀಪಿಸಿದರು. ಮಾರ್ಕ 10:13-16ರಲ್ಲಿ ದಾಖಲಿಸಲಾಗಿರುವ ಘಟನೆಯನ್ನು ಪರಿಗಣಿಸಿರಿ. ಇದು ಅವನ ಶುಶ್ರೂಷೆಯ ಕೊನೆಯ ಅವಧಿಯಲ್ಲಿ, ಅಂದರೆ ಅವನು ಯೆರೂಸಲೇಮಿನಲ್ಲಿ ವೇದನಾಮಯ ಮರಣವನ್ನು ಅನುಭವಿಸಲು ಕೊನೆಯ ಬಾರಿ ಅಲ್ಲಿಗೆ ಹೋಗುತ್ತಿದ್ದಾಗ ನಡೆಯಿತು.—ಮಾರ್ಕ 10:32-34.

4 ಆ ದೃಶ್ಯವನ್ನು ನಿಮ್ಮ ಮನಃಪಟಲದ ಮೇಲೆ ಚಿತ್ರಿಸಿಕೊಳ್ಳಿ. ಯೇಸುವಿನ ಆಶೀರ್ವಾದವನ್ನು ಪಡೆದುಕೊಳ್ಳಲಿಕ್ಕಾಗಿ ಜನರು ಅವನಲ್ಲಿಗೆ ತಮ್ಮ ಮಕ್ಕಳನ್ನು ಹಾಗೂ ಶಿಶುಗಳನ್ನು ಸಹ ಕರೆದುಕೊಂಡು ಬರುತ್ತಿದ್ದಾರೆ. * ಆದರೆ ಶಿಷ್ಯರು ಅವರನ್ನು ತಡೆಯುತ್ತಿದ್ದಾರೆ. ಈ ಸಂದಿಗ್ಧ ವಾರಗಳಲ್ಲಾದರೂ ಯೇಸು ಈ ಮಕ್ಕಳ ಕಾಟದಿಂದ ದೂರವಿರಲು ಬಯಸುತ್ತಿದ್ದಿರಬಹುದೆಂದು ಅವರು ನೆನಸುತ್ತಾರೆ. ಆದರೆ ಅವರ ಆಲೋಚನೆಯು ಬಹಳ ತಪ್ಪಾಗಿದೆ. ಶಿಷ್ಯರು ಹೀಗೆ ಮಾಡುತ್ತಿರುವುದನ್ನು ಯೇಸು ಕಂಡಾಗ ಅವನು ಕೋಪಗೊಳ್ಳುತ್ತಾನೆ. ಅವನು ಮಕ್ಕಳನ್ನು ತನ್ನ ಬಳಿಗೆ ಕರೆದು ಹೇಳುವುದು: “ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಗೊಡಿಸಿರಿ; ಅವುಗಳಿಗೆ ಅಡ್ಡಿಮಾಡಬೇಡಿರಿ.” (ಮಾರ್ಕ 10:14) ತರುವಾಯ ಯೇಸುವಿನ ಒಂದು ಚಿಕ್ಕ ಕ್ರಿಯೆಯು ಅವನ ಕೋಮಲವಾದ ಹಾಗೂ ಪ್ರೀತಿಪೂರ್ವಕವಾದ ವ್ಯಕ್ತಿತ್ವವನ್ನು ಪ್ರಕಟಪಡಿಸುತ್ತದೆ. ಆ ವೃತ್ತಾಂತವು ಹೇಳುವುದು: “ಅವುಗಳನ್ನು ಅಪ್ಪಿಕೊಂಡು ಅವುಗಳ ಮೇಲೆ ಕೈಯಿಟ್ಟು ಆಶೀರ್ವದಿಸಿದನು.” (ಮಾರ್ಕ 10:16) ಯೇಸು ಆ ಮಕ್ಕಳನ್ನು ತನ್ನ ತೋಳುಗಳಿಂದ ಬಳಸಿಕೊಂಡಾಗ ಅವರಿಗೆ ಹಾಯಾದ ಅನಿಸಿಕೆಯಾಗುತ್ತದೆ.

5. ಯೇಸು ಯಾವ ರೀತಿಯ ವ್ಯಕ್ತಿಯಾಗಿದ್ದನೆಂಬುದರ ಕುರಿತು ಮಾರ್ಕ 10:13-16ರಲ್ಲಿರುವ ವೃತ್ತಾಂತವು ಏನನ್ನು ತಿಳಿಯಪಡಿಸುತ್ತದೆ?

5 ಯೇಸು ಯಾವ ರೀತಿಯ ವ್ಯಕ್ತಿಯಾಗಿದ್ದನೆಂಬುದರ ಕುರಿತು ಈ ಸಂಕ್ಷಿಪ್ತ ವೃತ್ತಾಂತವು ಬಹಳಷ್ಟನ್ನು ತಿಳಿಸುತ್ತದೆ. ಜನರು ಅವನನ್ನು ಸಮೀಪಿಸಸಾಧ್ಯವಿತ್ತು ಎಂಬುದನ್ನು ಗಮನಿಸಿರಿ. ಅವನಿಗೆ ಸ್ವರ್ಗದಲ್ಲಿ ಒಂದು ಉನ್ನತ ಸ್ಥಾನವಿತ್ತಾದರೂ, ಅವನು ಅಪರಿಪೂರ್ಣ ಮಾನವರನ್ನು ಬೆದರಿಸಲಿಲ್ಲ ಅಥವಾ ತುಚ್ಛರೆಂದೆಣಿಸಲಿಲ್ಲ. (ಯೋಹಾನ 17:5) ಮಕ್ಕಳಿಗೂ ಅವನನ್ನು ಕಂಡಾಗ ಹೆದರಿಕೆಯಾಗುತ್ತಿರಲಿಲ್ಲವೆಂಬುದು ಮಹತ್ವದ ವಿಷಯವಲ್ಲವೊ? ಯಾವ ಭಾವನೆಗಳೂ ಇಲ್ಲದ ಹಾಗೂ ಎಂದಿಗೂ ಮಂದಹಾಸ ಬೀರದ ಒಬ್ಬ ಆನಂದರಹಿತ ವ್ಯಕ್ತಿಯ ಕಡೆಗೆ ಅವರು ನಿಜವಾಗಿಯೂ ಆಕರ್ಷಿತರಾಗುತ್ತಿರಲಿಲ್ಲ ಎಂಬುದರಲ್ಲಿ ಸಂದೇಹವೇ ಇಲ್ಲ! ಎಲ್ಲ ವಯೋಮಾನದ ಜನರು ಯೇಸುವನ್ನು ಸಮೀಪಿಸಿದರು, ಏಕೆಂದರೆ ಅವನೊಬ್ಬ ಸ್ನೇಹಪರ ಹಾಗೂ ಕಾಳಜಿವಹಿಸುವ ವ್ಯಕ್ತಿಯೆಂಬುದನ್ನು ಅವರು ತಿಳಿದುಕೊಂಡಿದ್ದರು ಮತ್ತು ಅವನೆಂದೂ ತಮ್ಮನ್ನು ನಿರಾಶೆಗೊಳಿಸಲಾರನೆಂಬ ಭರವಸೆ ಅವರಿಗಿತ್ತು.

6. ತಮ್ಮನ್ನು ಸುಲಭವಾಗಿ ಸಮೀಪಿಸಸಾಧ್ಯವಾಗುವಂತೆ ಹಿರಿಯರು ಏನು ಮಾಡಸಾಧ್ಯವಿದೆ?

6 ಈ ವೃತ್ತಾಂತದ ಕುರಿತು ಮೆಲುಕುಹಾಕುತ್ತಾ, ನಾವು ಹೀಗೆ ಸ್ವತಃ ಕೇಳಿಕೊಳ್ಳಸಾಧ್ಯವಿದೆ: ‘ನನ್ನಲ್ಲಿ ಕ್ರಿಸ್ತನ ಮನಸ್ಸಿದೆಯೊ? ನನ್ನನ್ನು ಜನರು ನಿರಾತಂಕವಾಗಿ ಸಮೀಪಿಸಸಾಧ್ಯವಿದೆಯೊ?’ ಈ ಕಠಿನ ಕಾಲಗಳಲ್ಲಿ, ದೇವರ ಕುರಿಗಳಿಗೆ “ಗಾಳಿಯಲ್ಲಿ ಮರೆಯಂತೆ” ಇರುವ ಪುರುಷರು, ಅಂದರೆ ನಿರಾತಂಕವಾಗಿ ಸಮೀಪಿಸಸಾಧ್ಯವಿರುವ ಕುರುಬರ ಅಗತ್ಯವಿದೆ. (ಯೆಶಾಯ 32:1, 2; 2 ತಿಮೊಥೆಯ 3:1) ಹಿರಿಯರೇ, ನಿಮ್ಮ ಸಹೋದರರಿಗಾಗಿ ನೀವು ನಿಜವಾದ ಹೃತ್ಪೂರ್ವಕ ಆಸಕ್ತಿಯನ್ನು ಬೆಳೆಸಿಕೊಂಡು, ಅವರಿಗಾಗಿ ನಿಮ್ಮನ್ನು ಕೊಟ್ಟುಕೊಳ್ಳಲು ಸಿದ್ಧರಾಗಿರುವುದಾದರೆ, ನೀವು ವಹಿಸುವ ಕಾಳಜಿಯನ್ನು ಅವರು ಗ್ರಹಿಸುವರು. ಅದನ್ನು ಅವರು ನಿಮ್ಮ ಮುಖಭಾವನೆಯಿಂದ, ನೀವು ಮಾತಾಡುವ ರೀತಿಯಿಂದ, ಮತ್ತು ನೀವು ವ್ಯವಹರಿಸುವ ರೀತಿಯಿಂದಲೇ ತಿಳಿದುಕೊಳ್ಳುವರು. ಇಂತಹ ಪ್ರಾಮಾಣಿಕವಾದ ಸ್ನೇಹ ಹಾಗೂ ಕಾಳಜಿಯು ನಿಮ್ಮ ಮಧ್ಯೆ ನಂಬಿಕೆಯ ವಾತಾವರಣವನ್ನು ಉಂಟುಮಾಡಿ, ಮಕ್ಕಳನ್ನು ಸೇರಿಸಿ ಇತರರೂ ನಿಮ್ಮನ್ನು ನಿರಾತಂಕವಾಗಿ ಸಮೀಪಿಸುವಂತೆ ಸಹಾಯಮಾಡುವುದು. ಒಬ್ಬ ನಿರ್ದಿಷ್ಟ ಹಿರಿಯನಿಗೆ ತನ್ನ ಮನದ ಅಳಲನ್ನು ತಿಳಿಯಪಡಿಸಲು ತಾನು ಏಕೆ ಶಕ್ತಳಾದೆನೆಂಬುದನ್ನು ತಿಳಿಸುತ್ತಾ, ಒಬ್ಬಾಕೆ ಕ್ರೈಸ್ತ ಸ್ತ್ರೀ ಹೇಳಿದ್ದು: “ಅವರು ನನ್ನೊಂದಿಗೆ ಕೋಮಲಭಾವದಿಂದ ಹಾಗೂ ಸಹಾನುಭೂತಿಯಿಂದ ಮಾತಾಡಿದರು. ಇಲ್ಲದಿದ್ದಲ್ಲಿ, ನಾನು ಬಹುಶಃ ಏನನ್ನೂ ಹೇಳುತ್ತಲೇ ಇರಲಿಲ್ಲ. ಅವರು ನನ್ನಲ್ಲಿ ಭದ್ರತೆಯ ಭಾವನೆಯನ್ನು ಮೂಡಿಸಿದರು.”

ಇತರರ ಕಡೆಗೆ ವಿಚಾರಪರತೆ

7. (ಎ) ಯೇಸು ಇತರರ ವಿಷಯದಲ್ಲಿ ತಾನು ವಿಚಾರಪರನಾಗಿದ್ದನೆಂಬುದನ್ನು ಹೇಗೆ ತೋರಿಸಿದನು? (ಬಿ) ಯೇಸು ಒಬ್ಬ ಕುರುಡನ ದೃಷ್ಟಿದೋಷವನ್ನು ಹಂತಹಂತವಾಗಿ ಏಕೆ ಗುಣಪಡಿಸಿದನು?

7 ಯೇಸು ವಿಚಾರಪರನಾಗಿದ್ದನು. ಇತರರ ಭಾವನೆಗಳನ್ನು ಅವನು ಅರ್ಥಮಾಡಿಕೊಂಡನು. ಸಂಕಟಪಡುತ್ತಿದ್ದವರನ್ನು ನೋಡಿ ಅವನೆಷ್ಟು ನೊಂದುಕೊಂಡನೆಂದರೆ, ಅವರ ನರಳಾಟವನ್ನು ಹೊಗಲಾಡಿಸಲು ಅವನು ಕೂಡಲೆ ಕ್ರಿಯೆಗೈದನು. (ಮತ್ತಾಯ 14:14) ಇತರರ ಇತಿಮಿತಿಗಳು ಹಾಗೂ ಆವಶ್ಯಕತೆಗಳ ಕುರಿತೂ ಅವನು ತಿಳಿದವನಾಗಿದ್ದನು. (ಯೋಹಾನ 16:12) ಒಮ್ಮೆ, ಜನರು ಯೇಸುವಿನ ಬಳಿಗೆ ಒಬ್ಬ ಕುರುಡನನ್ನು ಕರೆತಂದು, ಅವನನ್ನು ಗುಣಪಡಿಸುವಂತೆ ಬೇಡಿಕೊಂಡರು. ಯೇಸು ಆ ಮನುಷ್ಯನಿಗೆ ದೃಷ್ಟಿಸಾಮರ್ಥ್ಯವನ್ನು ಪುನಃ ನೀಡಿದನಾದರೂ, ಅದನ್ನು ಹಂತಹಂತವಾಗಿ ಮಾಡಿದನು. ಮೊದಮೊದಲು ಆ ಮನುಷ್ಯನು ವ್ಯಕ್ತಿಗಳನ್ನು ಅಸ್ಪಷ್ಟವಾಗಿ ನೋಡಿದನು, ಅಂದರೆ “ಅವರು ಮರಗಳಂತೆ ಕಾಣಿಸಿದರೂ ತಿರುಗಾಡುತ್ತಾ” ಇರುವಂತೆ ಅವನಿಗೆ ಕಂಡಿತು. ತದನಂತರ, ಯೇಸು ಅವನ ದೃಷ್ಟಿದೋಷವನ್ನು ಸಂಪೂರ್ಣವಾಗಿ ಗುಣಪಡಿಸಿದನು. ಯೇಸು ಅವನನ್ನು ಹಂತಹಂತವಾಗಿ ಏಕೆ ಗುಣಪಡಿಸಿದನು? ಕತ್ತಲೆಗೆ ಬಹಳವಾಗಿ ಒಗ್ಗಿಕೊಂಡಿದ್ದ ಒಬ್ಬ ವ್ಯಕ್ತಿಯು ಒಂದು ಪ್ರಕಾಶಮಾನವಾದ ಜಟಿಲ ಲೋಕವನ್ನು ಒಮ್ಮೆಲೇ ನೋಡುವುದರಿಂದ ಉಂಟಾಗುವ ಧಕ್ಕೆಗೆ ಹೊಂದಿಕೊಳ್ಳಲು ಸಾಧ್ಯವಾಗುವಂತೆ ಯೇಸು ಹೀಗೆ ಮಾಡಿದ್ದಿರಬಹುದು.—ಮಾರ್ಕ 8:22-26.

8, 9. (ಎ) ಯೇಸು ಮತ್ತು ಅವನ ಶಿಷ್ಯರು ದೆಕಪೊಲಿ ಕ್ಷೇತ್ರದೊಳಗೆ ಆಗಮಿಸಿದ ಕೂಡಲೇ ಏನು ಸಂಭವಿಸಿತು? (ಬಿ) ಯೇಸು ಕಿವುಡನನ್ನು ಹೇಗೆ ಗುಣಪಡಿಸಿದನೆಂಬುದನ್ನು ವಿವರಿಸಿರಿ.

8 ಸಾ.ಶ. 32ರ ಪಸ್ಕ ಹಬ್ಬದ ನಂತರ ಸಂಭವಿಸಿದ ಘಟನೆಯನ್ನೂ ಪರಿಗಣಿಸಿರಿ. ಯೇಸು ಮತ್ತು ಅವನ ಶಿಷ್ಯರು ಗಲಿಲಾಯ ಸಮುದ್ರದ ಪೂರ್ವದಿಕ್ಕಿನಲ್ಲಿರುವ ದೆಕಪೊಲಿ ಕ್ಷೇತ್ರಕ್ಕೆ ಆಗಮಿಸಿದರು. ಜನರು ಗುಂಪುಗುಂಪಾಗಿ ಅವನನ್ನು ಹುಡುಕಿಕೊಂಡು ಬಂದರಲ್ಲದೆ, ತಮ್ಮೊಂದಿಗೆ ಅಸ್ವಸ್ಥರನ್ನು ಮತ್ತು ಅಂಗವಿಕಲರನ್ನು ಕರೆತಂದರು. ಮತ್ತು ಅವರನ್ನೆಲ್ಲ ಯೇಸು ಗುಣಪಡಿಸಿದನು. (ಮತ್ತಾಯ 15:29, 30) ಅಲ್ಲಿ ಯೇಸು, ಒಬ್ಬ ವ್ಯಕ್ತಿಗೆ ವಿಶೇಷ ಗಮನವನ್ನು ನೀಡಿದನು. ಈ ಘಟನೆಯ ಕುರಿತು ದಾಖಲಿಸಿದ ಏಕೈಕ ಸುವಾರ್ತೆಯ ಬರಹಗಾರನಾದ ಮಾರ್ಕನು, ಅಲ್ಲಿ ನಡೆದುದನ್ನು ವರದಿಸುತ್ತಾನೆ.—ಮಾರ್ಕ 7:31-35.

9 ಈ ಮನುಷ್ಯನು ಕಿವುಡನಾಗಿದ್ದನಲ್ಲದೆ, ಬಹಳ ಕಷ್ಟಪಟ್ಟು ಮಾತಾಡುತ್ತಿದ್ದನು. ಯೇಸು ಈ ಮನುಷ್ಯನಲ್ಲಿದ್ದ ಭಯ ಇಲ್ಲವೆ ಪೇಚಾಟವನ್ನು ಗುರುತಿಸಿದ್ದಿರಬಹುದು. ತರುವಾಯ, ಒಂದಿಷ್ಟು ವಿಚಿತ್ರವಾಗಿ ತೋರುವಂತಹ ವಿಷಯವನ್ನು ಯೇಸು ಮಾಡಿದನು. ಅವನು ಆ ಮನುಷ್ಯನನ್ನು ಜನರ ಗುಂಪಿನಿಂದ ದೂರವಿದ್ದ ಒಂದು ಏಕಾಂತ ಸ್ಥಳಕ್ಕೆ ಕರೆದುಕೊಂಡು ಹೋದನು. ತಾನು ಮಾಡಲಿರುವ ವಿಷಯಗಳನ್ನು ಕೆಲವೊಂದು ಹಾವಭಾವಗಳಿಂದ ಯೇಸು ಅವನಿಗೆ ತಿಳಿಯಪಡಿಸಿದನು. ಅವನು “ತನ್ನ ಬೆರಳುಗಳನ್ನು ಅವನ ಕಿವಿಗಳಲ್ಲಿ ಇಟ್ಟು ಉಗುಳಿ ಅವನ ನಾಲಿಗೆಯನ್ನು ಮುಟ್ಟಿ”ದನು. (ಮಾರ್ಕ 7:33) ನಂತರ ಯೇಸು ಆಕಾಶದ ಕಡೆಗೆ ನೋಡಿ ಪ್ರಾರ್ಥನಾಪೂರ್ವಕ ನಿಟ್ಟುಸಿರನ್ನು ಬಿಟ್ಟನು. ‘ನಾನು ಏನನ್ನು ಮಾಡಲಿದ್ದೇನೊ ಅದು ದೇವರ ಶಕ್ತಿಯಿಂದಲೇ ಸಾಧ್ಯ’ ಎಂಬುದಾಗಿ ಯೇಸುವಿನ ಈ ಪ್ರದರ್ಶನಾತ್ಮಕ ಕ್ರಿಯೆಗಳು ಆ ಮನುಷ್ಯನಿಗೆ ಹೇಳಲಿದ್ದವು. ಕೊನೆಯದಾಗಿ ಯೇಸು, “ತೆರೆಯಲಿ” ಎಂದು ಹೇಳಿದನು. (ಮಾರ್ಕ 7:34) ಕೂಡಲೇ ಆ ಮನುಷ್ಯನ ಕಿವಿಗಳು ತೆರೆದುಕೊಂಡವು ಮತ್ತು ಅವನು ಮಾತಾಡಲು ಶಕ್ತನಾದನು.

10, 11. ಸಭೆಯಲ್ಲಿ ಮತ್ತು ಕುಟುಂಬದಲ್ಲಿರುವ ಇತರರ ಭಾವನೆಗಳಿಗೆ ನಾವು ಹೇಗೆ ಪರಿಗಣನೆಯನ್ನು ತೋರಿಸಬಹುದು?

10 ಯೇಸು ಇತರರ ವಿಷಯದಲ್ಲಿ ಎಷ್ಟು ವಿಚಾರಪರನಾಗಿದ್ದನು! ಇತರರ ಭಾವನೆಗಳನ್ನು ಅವನು ಅರ್ಥಮಾಡಿಕೊಂಡನು, ಮತ್ತು ಸಹಾನುಭೂತಿಯ ಇಂತಹ ಗುಣದ ಕಾರಣ ಅವನ ಕ್ರಿಯೆಗಳು ಇತರರ ಭಾವನೆಗಳಿಗೆ ಪರಿಗಣನೆಯನ್ನು ತೋರಿಸಿದವು. ಕ್ರೈಸ್ತರೋಪಾದಿ ನಾವು ಈ ವಿಷಯದಲ್ಲಿ ಕ್ರಿಸ್ತನ ಮನಸ್ಸನ್ನು ಬೆಳೆಸಿಕೊಂಡು, ಆ ಭಾವನೆಯನ್ನು ತೋರ್ಪಡಿಸುವುದು ಒಳ್ಳೆಯದು. ಬೈಬಲು ನಮಗೆ ಬುದ್ಧಿವಾದ ನೀಡುವುದು: “ನೀವೆಲ್ಲರೂ ಏಕಮನಸ್ಸುಳ್ಳವರಾಗಿರಿ; ಪರರ ಸುಖದುಃಖಗಳಲ್ಲಿ ಸೇರುವವರಾಗಿರಿ; ಅಣ್ಣತಮ್ಮಂದಿರಂತೆ ಒಬ್ಬರನ್ನೊಬ್ಬರು ಪ್ರೀತಿಸಿರಿ; ಕರುಣೆಯೂ ದೀನಭಾವವೂ ಉಳ್ಳವರಾಗಿರಿ.” (1 ಪೇತ್ರ 3:8) ಖಂಡಿತವಾಗಿಯೂ ಇದು ಇತರರ ಭಾವನೆಗಳಿಗೆ ಪರಿಗಣನೆಯನ್ನು ತೋರಿಸುವಂತಹ ರೀತಿಯಲ್ಲಿ ನಾವು ಮಾತಾಡುವುದನ್ನು ಮತ್ತು ಕ್ರಿಯೆಗೈಯುವುದನ್ನು ಕೇಳಿಕೊಳ್ಳುತ್ತದೆ.

11 ಸಭೆಯಲ್ಲಿ ಇತರರಿಗೆ ಗೌರವವನ್ನು ನೀಡುವ ಮೂಲಕ, ನಾವು ಹೇಗೆ ಉಪಚರಿಸಲ್ಪಡಬೇಕೆಂದು ಬಯಸುತ್ತೇವೊ ಅದೇ ರೀತಿಯಲ್ಲಿ ಅವರನ್ನು ಉಪಚರಿಸುವ ಮೂಲಕ, ಅವರ ಭಾವನೆಗಳಿಗೆ ಪರಿಗಣನೆಯನ್ನು ತೋರಿಸಸಾಧ್ಯವಿದೆ. (ಮತ್ತಾಯ 7:12) ಇದರರ್ಥ, ನಾವು ಏನನ್ನು ಹೇಳುತ್ತೇವೊ ಮತ್ತು ಅದನ್ನು ಹೇಗೆ ಹೇಳುತ್ತೇವೊ ಅದರ ಬಗ್ಗೆ ಜಾಗರೂಕರಾಗಿರಬೇಕು. (ಕೊಲೊಸ್ಸೆ 4:6) ‘ದುಡುಕಿ ಮಾತಾಡುವ ಪದಗಳು ಕತ್ತಿಯಂತೆ ತಿವಿಯಬಲ್ಲವು’ ಎಂಬುದನ್ನು ಜ್ಞಾಪಕದಲ್ಲಿ ಇಟ್ಟುಕೊಳ್ಳಿರಿ. (ಜ್ಞಾನೋಕ್ತಿ 12:18, NW) ಹಾಗಾದರೆ ಕುಟುಂಬದ ವಿಷಯದಲ್ಲೇನು? ಒಬ್ಬರನ್ನೊಬ್ಬರು ಬಹಳವಾಗಿ ಪ್ರೀತಿಸುವ ಪತಿಪತ್ನಿಯರು ತಮ್ಮ ಭಾವನೆಗಳನ್ನು ಪರಸ್ಪರ ಅರ್ಥಮಾಡಿಕೊಳ್ಳುತ್ತಾರೆ. (ಎಫೆಸ 5:33) ಅವರು ಕಠೋರವಾದ ಪದಗಳು, ನಿರಂತರವಾದ ಟೀಕೆ, ಮತ್ತು ತೀಕ್ಷ್ಣವಾದ ಕೆಣುಕುನುಡಿಯಿಂದ ದೂರವಿರುತ್ತಾರೆ, ಏಕೆಂದರೆ ಇವುಗಳು ಉಂಟುಮಾಡುವ ಮನೋವ್ಯಥೆಯನ್ನು ಬೇಗನೆ ಗುಣಪಡಿಸಲು ಸಾಧ್ಯವಿಲ್ಲ. ಮಕ್ಕಳಿಗೂ ಭಾವನೆಗಳುಂಟು, ಮತ್ತು ಪ್ರೀತಿಪರ ಹೆತ್ತವರು ಇವುಗಳನ್ನು ಪರಿಗಣಿಸುತ್ತಾರೆ. ಮಕ್ಕಳನ್ನು ತಿದ್ದಬೇಕಾದಾಗ, ಇಂತಹ ಹೆತ್ತವರು ಮಕ್ಕಳ ಘನತೆಯನ್ನು ಗೌರವಿಸುತ್ತಾ, ಅವರಿಗೆ ಅನಾವಶ್ಯಕವಾದ ಪೇಚಾಟವಾಗದಂತೆ ನೋಡಿಕೊಳ್ಳುತ್ತಾರೆ. * (ಕೊಲೊಸ್ಸೆ 3:21) ಹೀಗೆ ನಾವು ಇತರರ ಬಗ್ಗೆ ವಿಚಾರಪರರಾಗಿರುವಲ್ಲಿ, ನಮಗೆ ಕ್ರಿಸ್ತನ ಮನಸ್ಸಿದೆ ಎಂಬುದನ್ನು ತೋರಿಸುತ್ತೇವೆ.

ಇತರರನ್ನು ನಂಬಲು ಸಿದ್ಧನು

12. ಯೇಸುವಿಗೆ ತನ್ನ ಶಿಷ್ಯರ ಬಗ್ಗೆ ಯಾವ ಸಮತೂಕದ ಹಾಗೂ ವಾಸ್ತವಿಕವಾದ ನೋಟವಿತ್ತು?

12 ಯೇಸುವಿಗೆ ತನ್ನ ಶಿಷ್ಯರ ಬಗ್ಗೆ ಸಮತೂಕದ ಹಾಗೂ ವಾಸ್ತವಿಕವಾದ ನೋಟವಿತ್ತು. ಅವರು ಪರಿಪೂರ್ಣರಲ್ಲವೆಂಬುದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಎಷ್ಟೆಂದರೂ, ಅವನು ಮಾನವ ಹೃದಯಗಳನ್ನು ಓದಬಲ್ಲವನಾಗಿದ್ದನು. (ಯೋಹಾನ 2:24, 25) ಹಾಗಿದ್ದರೂ, ಅವನು ಅವರಲ್ಲಿದ್ದ ಅಪರಿಪೂರ್ಣತೆಯನ್ನು ಮಾತ್ರವಲ್ಲ, ಅವರ ಒಳ್ಳೆಯ ಗುಣಗಳನ್ನು ಸಹ ನೋಡಿದನು. ಯೆಹೋವನು ಆರಿಸಿಕೊಂಡಿದ್ದ ಈ ಪುರುಷರಲ್ಲಿನ ಸಾಮರ್ಥ್ಯವನ್ನು ಕೂಡ ಅವನು ಮನಗಂಡನು. (ಯೋಹಾನ 6:44) ಯೇಸುವಿಗೆ ತನ್ನ ಶಿಷ್ಯರ ಬಗ್ಗೆ ಸಕಾರಾತ್ಮಕ ನೋಟವಿತ್ತೆಂಬುದು, ಅವರೊಂದಿಗೆ ಅವನು ವ್ಯವಹರಿಸಿದ ಹಾಗೂ ಅವರನ್ನು ಉಪಚರಿಸಿದ ರೀತಿಯಿಂದ ತಿಳಿದುಬರುತ್ತದೆ. ಒಂದು ವಿಷಯವೇನೆಂದರೆ, ಅವರನ್ನು ನಂಬಲು ಯೇಸು ಸದಾ ಸಿದ್ಧನಾಗಿದ್ದನು.

13. ಶಿಷ್ಯರಲ್ಲಿ ತನಗಿದ್ದ ಭರವಸೆಯನ್ನು ಯೇಸು ಹೇಗೆ ವ್ಯಕ್ತಪಡಿಸಿದನು?

13 ಯೇಸು ಈ ನಂಬಿಕೆಯನ್ನು ಹೇಗೆ ವ್ಯಕ್ತಪಡಿಸಿದನು? ಭೂಮಿಯನ್ನು ಬಿಟ್ಟು ಹೋಗುವಾಗ, ಅವನು ತನ್ನ ಅಭಿಷಿಕ್ತ ಶಿಷ್ಯರಿಗೆ ಒಂದು ದೊಡ್ಡ ಜವಾಬ್ದಾರಿಯನ್ನು ವಹಿಸಿದನು. ತನ್ನ ರಾಜ್ಯದ ಲೋಕವ್ಯಾಪಕ ಅಭಿರುಚಿಗಳನ್ನು ನೋಡಿಕೊಳ್ಳುವ ಹೊಣೆಯನ್ನು ಅವನು ಅವರಿಗೆ ಒಪ್ಪಿಸಿದನು. (ಮತ್ತಾಯ 25:14, 15; ಲೂಕ 12:42-44) ಯೇಸು ತನ್ನ ಶುಶ್ರೂಷೆಯ ಸಮಯದಲ್ಲಿ, ಚಿಕ್ಕಪುಟ್ಟ ವಿಷಯಗಳಲ್ಲಿ ಹಾಗೂ ಪರೋಕ್ಷವಾಗಿ ಅವರ ಮೇಲೆ ತನಗಿರುವ ನಂಬಿಕೆಯನ್ನು ವ್ಯಕ್ತಪಡಿಸಿದನು. ಜನಸಮೂಹಕ್ಕೆ ಆಹಾರವನ್ನು ಒದಗಿಸುವ ಉದ್ದೇಶದಿಂದ ಅವನು ಅದ್ಭುತಕರವಾಗಿ ಅದರ ಪ್ರಮಾಣವನ್ನು ಹೆಚ್ಚಿಸಿದಾಗ, ಆಹಾರವನ್ನು ವಿತರಿಸುವ ಜವಾಬ್ದಾರಿಯನ್ನು ತನ್ನ ಶಿಷ್ಯರಿಗೇ ವಹಿಸಿದನು.—ಮತ್ತಾಯ 14:15-21; 15:32-37.

14. ಮಾರ್ಕ 4:35-41ರಲ್ಲಿ ದಾಖಲಿಸಲಾದ ವೃತ್ತಾಂತವನ್ನು ನೀವು ಹೇಗೆ ಸಾರಾಂಶಿಸುವಿರಿ?

14ಮಾರ್ಕ 4:35-41ರಲ್ಲಿ ದಾಖಲಿಸಲಾಗಿರುವ ವೃತ್ತಾಂತವನ್ನೂ ಪರಿಗಣಿಸಿರಿ. ಈ ಸಂದರ್ಭದಲ್ಲಿ ಯೇಸು ಮತ್ತು ಅವನ ಶಿಷ್ಯರು ಒಂದು ದೋಣಿಯನ್ನೇರಿ, ಗಲಿಲಾಯ ಸಮುದ್ರದಾಚೆ ಪೂರ್ವದಿಕ್ಕಿಗೆ ಹೋಗುತ್ತಾರೆ. ಅವರು ದಡವನ್ನು ಬಿಟ್ಟಕೂಡಲೇ, ಯೇಸು ದೋಣಿಯ ಹಿಂಭಾಗಕ್ಕೆ ಹೋಗಿ ಅಲ್ಲಿ ಮಲಗಿಬಿಡುತ್ತಾನೆ. ಆದರೆ, ಬೇಗನೆ ಒಂದು ‘ದೊಡ್ಡ ಬಿರುಗಾಳಿಯು ಏಳುತ್ತದೆ.’ ಗಲಿಲಾಯ ಸಮುದ್ರದಲ್ಲಿ ಇಂತಹ ಬಿರುಗಾಳಿಯು ಸರ್ವಸಾಮಾನ್ಯವಾಗಿತ್ತು. ಅದು (ಸಮುದ್ರ ಮಟ್ಟಕ್ಕಿಂತಲೂ ಸುಮಾರು 700 ಅಡಿಗಳಷ್ಟು) ಕೆಳಗಿರುವುದರಿಂದ, ಸುತ್ತಮುತ್ತಲಿನ ಪ್ರದೇಶದ ಗಾಳಿಗಿಂತಲೂ ಅಲ್ಲಿರುವ ಗಾಳಿಯು ಹೆಚ್ಚು ಬೆಚ್ಚಗಿದ್ದು ವಾತಾವರಣದಲ್ಲಿ ಏರುಪೇರನ್ನು ಉಂಟುಮಾಡುತ್ತದೆ. ಅದೂ ಅಲ್ಲದೆ, ಉತ್ತರದಲ್ಲಿರುವ ಹೆರ್ಮೊನ್‌ ಪರ್ವತದ ಯೋರ್ದನ್‌ ಕಣಿವೆಯಿಂದ ಬಿರುಸಾದ ಗಾಳಿಯು ರಭಸದಿಂದ ಬೀಸುತ್ತದೆ. ಒಂದು ಕ್ಷಣದ ಪ್ರಶಾಂತತೆಯು ಮರುಕ್ಷಣವೇ ಅತ್ಯುಗ್ರವಾದ ಬಿರುಗಾಳಿಯಾಗಿ ಪರಿಣಮಿಸಬಲ್ಲದು. ಈ ವಿಷಯದ ಬಗ್ಗೆ ತುಸು ಯೋಚಿಸಿರಿ: ಯೇಸು ಗಲಿಲಾಯದಲ್ಲೇ ಬೆಳೆದು ದೊಡ್ಡವನಾಗಿದ್ದ ಕಾರಣ, ಇಂತಹ ಬಿರುಗಾಳಿಯ ಬಗ್ಗೆ ಅವನಿಗೆ ತಿಳಿದಿತ್ತು. ಆದರೂ ಅವನು ನಿಶ್ಚಿಂತನಾಗಿ ಮಲಗಿದ್ದನು, ಏಕೆಂದರೆ ಬೆಸ್ತರಾಗಿದ್ದ ಅವನ ಕೆಲವು ಶಿಷ್ಯರ ಕೌಶಲಗಳಲ್ಲಿ ಅವನಿಗೆ ಪೂರ್ಣ ನಂಬಿಕೆಯಿತ್ತು.—ಮತ್ತಾಯ 4:18, 19.

15. ತನ್ನ ಶಿಷ್ಯರಲ್ಲಿ ನಂಬಿಕೆಯಿಡಲು ಯೇಸುವಿಗಿದ್ದ ಸಿದ್ಧಮನಸ್ಸನ್ನು ನಾವು ಹೇಗೆ ಅನುಕರಿಸಬಲ್ಲೆವು?

15 ತನ್ನ ಶಿಷ್ಯರಲ್ಲಿ ನಂಬಿಕೆಯಿಡಲು ಸಿದ್ಧನಾಗಿದ್ದ ಯೇಸುವನ್ನು ನಾವು ಅನುಕರಿಸಬಲ್ಲೆವೊ? ಇತರರಿಗೆ ಜವಾಬ್ದಾರಿಗಳನ್ನು ವಹಿಸಿಕೊಡುವುದು ಕೆಲವರಿಗೆ ಕಷ್ಟದ ಕೆಲಸವಾಗಿರುತ್ತದೆ. ಎಲ್ಲವೂ ತಮ್ಮ ಕೈಯಲ್ಲೇ ಇರಬೇಕೆಂದು ಅವರಿಗನಿಸುತ್ತದೆ. ‘ಯಾವುದೇ ವಿಷಯವನ್ನು ಸರಿಯಾಗಿ ಮಾಡಬೇಕಾಗಿದ್ದರೆ, ಅದನ್ನು ನಾನೇ ಮಾಡಬೇಕು!’ ಎಂದವರು ನೆನಸಬಹುದು. ಆದರೆ ಎಲ್ಲವನ್ನೂ ನಾವೇ ಮಾಡಿದರೆ, ನಾವು ಬೇಗನೆ ಬಳಲಿಹೋಗಬಹುದು ಮತ್ತು ನಮ್ಮ ಕುಟುಂಬಕ್ಕೆ ಬೇಕಾದ ಸಮಯವನ್ನು ಕೊಡಲು ಸಾಧ್ಯವಾಗದಿರಬಹುದು. ಅಲ್ಲದೆ, ನಾವು ಸೂಕ್ತವಾದ ಕೆಲಸಗಳನ್ನು ಮತ್ತು ಜವಾಬ್ದಾರಿಗಳನ್ನು ಇತರರಿಗೆ ವಹಿಸಿಕೊಡದೇ ಇರುವಲ್ಲಿ, ಅವರಿಗೆ ಬೇಕಾದ ಅನುಭವ ಹಾಗೂ ತರಬೇತಿಯನ್ನು ನಾವು ಅವರಿಂದ ಕಸಿದುಕೊಳ್ಳುತ್ತಿರಬಹುದು. ಇತರರಿಗೆ ಜವಾಬ್ದಾರಿಗಳನ್ನು ವಹಿಸಿಕೊಡುತ್ತಾ, ಅವರನ್ನು ನಂಬಲು ಕಲಿತುಕೊಳ್ಳುವುದು ವಿವೇಕಯುತವಾಗಿರುವುದು. ಈ ವಿಷಯದಲ್ಲಿ ನಾವು ಪ್ರಾಮಾಣಿಕವಾದ ಆತ್ಮಪರೀಕ್ಷೆಯನ್ನು ಮಾಡಿಕೊಳ್ಳುವುದು ಒಳ್ಳೆಯದು, ‘ಈ ವಿಷಯದಲ್ಲಿ ನನಗೆ ಕ್ರಿಸ್ತನ ಮನಸ್ಸಿದೆಯೊ? ನಾನು ಸಿದ್ಧಮನಸ್ಸಿನಿಂದ ಇತರರಿಗೆ ಕೆಲವು ಕೆಲಸಗಳನ್ನು ವಹಿಸಿಕೊಟ್ಟು, ಅವರು ತಮ್ಮಿಂದ ಸಾಧ್ಯವಾದಷ್ಟು ಅತ್ಯುತ್ತಮವಾದದ್ದನ್ನೇ ಮಾಡುವರೆಂಬ ನಂಬಿಕೆಯುಳ್ಳವನಾಗಿರುತ್ತೇನೊ?’

ಅವನು ತನ್ನ ಶಿಷ್ಯರಲ್ಲಿ ನಂಬಿಕೆಯನ್ನು ವ್ಯಕ್ತಪಡಿಸಿದನು

16, 17. ಯೇಸುವಿನ ಭೂಜೀವಿತದ ಕೊನೆಯ ರಾತ್ರಿಯಂದು ಅಪೊಸ್ತಲರು ತನ್ನನ್ನು ತೊರೆಯಲಿದ್ದರೆಂದು ಅವನಿಗೆ ಗೊತ್ತಿದ್ದರೂ, ಯಾವ ಆಶ್ವಾಸನೆಯನ್ನು ಅವರಿಗೆ ನೀಡಿದನು?

16 ಯೇಸು ತನ್ನ ಶಿಷ್ಯರ ಬಗ್ಗೆ ತನಗಿದ್ದ ಸಕಾರಾತ್ಮಕ ದೃಷ್ಟಿಕೋನವನ್ನು ಮತ್ತೊಂದು ಪ್ರಮುಖವಾದ ವಿಧದಲ್ಲಿ ವ್ಯಕ್ತಪಡಿಸಿದನು. ತನಗೆ ಅವರಲ್ಲಿ ಭರವಸೆಯಿತ್ತೆಂಬುದನ್ನು ಅವನು ತಿಳಿಯಪಡಿಸಿದನು. ತನ್ನ ಭೂಜೀವಿತದ ಕೊನೆಯ ರಾತ್ರಿಯಂದು ತನ್ನ ಅಪೊಸ್ತಲರಿಗೆ ಅವನು ನುಡಿದ ಆಶ್ವಾಸನೆಯ ಮಾತುಗಳಿಂದ ಇದು ತಿಳಿದುಬರುತ್ತದೆ. ಅಲ್ಲಿ ಏನು ನಡೆಯಿತೆಂಬುದನ್ನು ಪರಿಗಣಿಸಿರಿ.

17 ಆ ದಿನದ ಸಂಜೆಯಂದು ಯೇಸು ತೀರ ಕಾರ್ಯಮಗ್ನನಾಗಿದ್ದನು. ಅವನು ತನ್ನ ಅಪೊಸ್ತಲರ ಪಾದಗಳನ್ನು ತೊಳೆಯುವ ಮೂಲಕ ಅವರಿಗೆ ದೀನತೆಯ ಕುರಿತು ಒಂದು ಪಾಠವನ್ನು ಕಲಿಸಿದನು. ತದನಂತರ, ತನ್ನ ಮರಣದ ಸ್ಮಾರಕವಾಗಿರಲಿದ್ದ ಸಂಧ್ಯಾ ಭೋಜನವನ್ನು ಅವನು ಆರಂಭಿಸಿದನು. ಆಗ ಅಪೊಸ್ತಲರು ತಮ್ಮಲ್ಲಿ ಯಾವನು ದೊಡ್ಡವನೆಂಬ ವಾಗ್ವಾದವನ್ನು ಪುನಃ ಆರಂಭಿಸಿದರು. ತಾಳ್ಮೆಯ ಮೂರ್ತಿಯಾಗಿದ್ದ ಯೇಸು ಅವರನ್ನು ಕಡೆಗಣಿಸಲಿಲ್ಲ ಬದಲಿಗೆ ಅವರೊಂದಿಗೆ ತರ್ಕಿಸಿದನು. ಮುಂದೆ ಏನು ನಡೆಯಲಿದೆ ಎಂಬುದನ್ನು ಅವನು ಅವರಿಗೆ ಹೇಳಿದನು: “ನೀವೆಲ್ಲರೂ ಈ ರಾತ್ರಿ ನನ್ನ ವಿಷಯದಲ್ಲಿ ದಿಗಿಲುಪಟ್ಟು ಹಿಂಜರಿಯುವಿರಿ. ಕುರುಬನನ್ನು ಹೊಡೆಯುವೆನು; ಹಿಂಡಿನ ಕುರಿಗಳು ಚದರಿಹೋಗುವವು ಎಂದು ಬರೆದದೆಯಲ್ಲಾ.” (ಮತ್ತಾಯ 26:31; ಜೆಕರ್ಯ 13:7) ಅಗತ್ಯದ ಗಳಿಗೆಯಲ್ಲಿ ತನ್ನ ಆಪ್ತ ಸಂಗಡಿಗರು ತನ್ನನ್ನು ಬಿಟ್ಟು ಓಡಿಹೋಗುವರೆಂದು ಅವನಿಗೆ ಗೊತ್ತಿತ್ತು. ಹಾಗಿದ್ದರೂ, ಅವನು ಅವರನ್ನು ಖಂಡಿಸಲಿಲ್ಲ. ಅದರ ಬದಲು, ಅವನು ಅವರಿಗೆ ಹೇಳಿದ್ದು: “ಆದರೆ ನಾನು ಜೀವಿತನಾಗಿ ಎದ್ದ ಮೇಲೆ ನಿಮ್ಮ ಮುಂದೆ ಗಲಿಲಾಯಕ್ಕೆ ಹೋಗುವೆನು.” (ಮತ್ತಾಯ 26:32) ಹೌದು, ಅವರು ತನ್ನನ್ನು ತೊರೆದರೂ, ತಾನು ಅವರನ್ನು ತೊರೆಯಲಾರೆನೆಂಬ ಆಶ್ವಾಸನೆಯನ್ನು ಯೇಸು ನೀಡಿದನು. ಈ ಸಂದಿಗ್ಧ ಕಾಲವು ಗತಿಸಿದ ನಂತರ, ಅವನು ಮತ್ತೊಮ್ಮೆ ಅವರನ್ನು ಭೇಟಿಯಾಗಲಿದ್ದನು.

18. ಯೇಸು ಗಲಿಲಾಯದಲ್ಲಿ ತನ್ನ ಶಿಷ್ಯರಿಗೆ ಯಾವ ದೊಡ್ಡ ನೇಮಕವನ್ನು ವಹಿಸಿದನು, ಮತ್ತು ಅಪೊಸ್ತಲರು ಆ ನೇಮಕವನ್ನು ಹೇಗೆ ಪೂರೈಸಿದರು?

18 ಯೇಸು ತನ್ನ ಮಾತಿಗನುಸಾರ ನಡೆದುಕೊಂಡನು. ಗಲಿಲಾಯದಲ್ಲಿ ಆ 11 ಮಂದಿ ನಂಬಿಗಸ್ತ ಅಪೊಸ್ತಲರು ಇತರ ಅನೇಕರೊಂದಿಗೆ ಕೂಡಿಬಂದಿದ್ದಾಗ, ಪುನರುತ್ಥಿತ ಯೇಸು ಅವರಿಗೆ ಕಾಣಿಸಿಕೊಂಡನು. (ಮತ್ತಾಯ 28:16, 17; 1 ಕೊರಿಂಥ 15:6) ಅಲ್ಲಿ ಯೇಸು ಅವರಿಗೊಂದು ದೊಡ್ಡ ನೇಮಕವನ್ನು ವಹಿಸಿದನು: “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ.” (ಮತ್ತಾಯ 28:19, 20) ಆ ನೇಮಕವನ್ನು ಅಪೊಸ್ತಲರು ಪೂರೈಸಿದರೆಂಬುದಕ್ಕೆ ಅಪೊಸ್ತಲರ ಕೃತ್ಯಗಳ ಪುಸ್ತಕವು ಸ್ಪಷ್ಟವಾದ ಪ್ರಮಾಣವನ್ನು ನೀಡುತ್ತದೆ. ಅವರು ಪ್ರಥಮ ಶತಮಾನದಲ್ಲಿ ಸುವಾರ್ತೆ ಸಾರುವ ಕೆಲಸದಲ್ಲಿ ಮುಂದಾಳತ್ವ ವಹಿಸಿ, ಅದನ್ನು ನಂಬಿಗಸ್ತಿಕೆಯಿಂದ ಪೂರೈಸಿದರು.—ಅ. ಕೃತ್ಯಗಳು 2:41, 42; 4:33; 5:27-32.

19. ಪುನರುತ್ಥಾನದ ನಂತರ ಯೇಸು ಮಾಡಿದ ವಿಷಯಗಳು ಕ್ರಿಸ್ತನ ಮನಸ್ಸಿನ ಬಗ್ಗೆ ನಮಗೆ ಏನನ್ನು ತಿಳಿಯಪಡಿಸುತ್ತವೆ?

19 ಒಳನೋಟವನ್ನು ನೀಡುವಂತಹ ಈ ದಾಖಲೆಯು ನಮಗೆ ಕ್ರಿಸ್ತನ ಮನಸ್ಸಿನ ಬಗ್ಗೆ ಏನನ್ನು ಕಲಿಸುತ್ತದೆ? ಯೇಸು ತನ್ನ ಅಪೊಸ್ತಲರ ತೀರ ಬಲಹೀನಾವಸ್ಥೆಯನ್ನು ನೋಡಿದ್ದರೂ, “ಕೊನೆಯ ವರೆಗೂ ಅವರನ್ನು ಪ್ರೀತಿಸಿದನು.” (ಯೋಹಾನ 13:1, NW) ಅವರ ಕುಂದುಕೊರತೆಗಳ ಮಧ್ಯೆಯೂ ತನಗೆ ಅವರಲ್ಲಿ ನಂಬಿಕೆಯಿದೆ ಎಂಬುದನ್ನು ಅವನು ತೋರಿಸಿಕೊಟ್ಟನು. ಯೇಸುವಿಗಿದ್ದ ಭರವಸೆಯು ವ್ಯರ್ಥವಾಗಲಿಲ್ಲ. ಅವರ ವಿಷಯದಲ್ಲಿ ಅವನು ವ್ಯಕ್ತಪಡಿಸಿದ್ದ ಭರವಸೆ ಹಾಗೂ ನಂಬಿಕೆಯು, ಅವನು ಆಜ್ಞಾಪಿಸಿದ್ದ ಕೆಲಸವನ್ನು ಪೂರೈಸಬೇಕೆಂಬ ನಿರ್ಧಾರಕ್ಕೆ ಹೆಚ್ಚಿನ ಒತ್ತಾಸೆಯನ್ನು ನೀಡಿತೆಂಬುದರಲ್ಲಿ ಸಂದೇಹವೇ ಇಲ್ಲ.

20, 21. ನಮ್ಮ ಜೊತೆ ವಿಶ್ವಾಸಿಗಳ ಬಗ್ಗೆ ಸಕಾರಾತ್ಮಕ ನೋಟವನ್ನು ನಾವು ಹೇಗೆ ಪ್ರದರ್ಶಿಸಬಲ್ಲೆವು?

20 ಈ ವಿಷಯದಲ್ಲಿ ನಾವು ಕ್ರಿಸ್ತನ ಮನಸ್ಸನ್ನು ಹೇಗೆ ಪ್ರದರ್ಶಿಸಸಾಧ್ಯವಿದೆ? ಜೊತೆ ವಿಶ್ವಾಸಿಗಳ ಬಗ್ಗೆ ಟೀಕಾತ್ಮಕರಾಗಿರಬೇಡಿರಿ. ನೀವು ಕೆಟ್ಟದ್ದನ್ನೇ ಯೋಚಿಸಿದರೆ, ನಿಮ್ಮ ನಡೆನುಡಿಗಳು ಬಹುಶಃ ಅದನ್ನೇ ಪ್ರತಿಬಿಂಬಿಸುವವು. (ಲೂಕ 6:45) ಆದರೆ, ಪ್ರೀತಿಯು “ಎಲ್ಲವನ್ನೂ ನಂಬುತ್ತದೆ” ಎಂಬುದಾಗಿ ಬೈಬಲು ನಮಗೆ ಹೇಳುತ್ತದೆ. (1 ಕೊರಿಂಥ 13:7) ಪ್ರೀತಿ ನಕಾರಾತ್ಮಕವಾಗಿರದೆ ಸಕಾರಾತ್ಮಕವಾಗಿದೆ. ಅದು ಕೆಡವಿ ಹಾಕುವುದರ ಬದಲು ಕಟ್ಟಿ ಬಲಪಡಿಸುತ್ತದೆ. ಜನರು ಬೆದರಿಕೆಗಿಂತಲೂ ಹೆಚ್ಚಾಗಿ ಪ್ರೀತಿ ಹಾಗೂ ಉತ್ತೇಜನಕ್ಕೆ ಪ್ರತಿಕ್ರಿಯಿಸುತ್ತಾರೆ. ನಾವು ಇತರರಲ್ಲಿ ಭರವಸೆಯನ್ನು ವ್ಯಕ್ತಪಡಿಸುವ ಮೂಲಕ ಅವರನ್ನು ಬಲಪಡಿಸಿ ಉತ್ತೇಜಿಸಬಹುದು. (1 ಥೆಸಲೊನೀಕ 5:11) ಕ್ರಿಸ್ತನಂತೆ ನಮಗೆ ನಮ್ಮ ಸಹೋದರರ ಬಗ್ಗೆ ಸಕಾರಾತ್ಮಕವಾದ ಮನೋಭಾವವಿರುವಲ್ಲಿ, ನಾವು ಅವರನ್ನು ಬಲಪಡಿಸುವಂತಹ ರೀತಿಯಲ್ಲಿ ಉಪಚರಿಸಿ, ಅವರಲ್ಲಿರುವ ಅತ್ಯುತ್ತಮ ಗುಣಗಳನ್ನು ಹೊರತರುವೆವು.

21 ಕ್ರಿಸ್ತನ ಮನಸ್ಸನ್ನು ಬೆಳೆಸಿಕೊಂಡು, ಅದನ್ನು ಪ್ರದರ್ಶಿಸುವುದು, ಯೇಸು ಮಾಡಿದ ಕೆಲವೊಂದು ವಿಷಯಗಳನ್ನು ಅನುಕರಿಸುವುದಕ್ಕಿಂತಲೂ ಹೆಚ್ಚಿನದ್ದನ್ನು ಕೇಳಿಕೊಳ್ಳುತ್ತದೆ. ಹಿಂದಿನ ಲೇಖನವು ಈಗಾಗಲೇ ತಿಳಿಸಿದಂತೆ, ನಾವು ಯೇಸುವಿನಂತೆಯೇ ಕ್ರಿಯೆಗೈಯಲು ಬಯಸಿದರೆ, ಅವನು ವಿಷಯಗಳನ್ನು ಹೇಗೆ ವೀಕ್ಷಿಸಿದನೆಂಬುದನ್ನು ನಾವು ಮೊದಲು ಕಲಿತುಕೊಳ್ಳಬೇಕು. ಯೇಸುವಿನ ವ್ಯಕ್ತಿತ್ವದ ಮತ್ತೊಂದು ಅಂಶ, ಅಂದರೆ ತನಗೆ ನೇಮಕವಾದ ಕೆಲಸದ ಕುರಿತು ಅವನಿಗಿದ್ದ ಅಭಿಪ್ರಾಯ ಹಾಗೂ ಭಾವನೆಗಳ ಬಗ್ಗೆ ತಿಳಿದುಕೊಳ್ಳಲು ಸುವಾರ್ತೆಯ ವೃತ್ತಾಂತಗಳು ನಮಗೆ ಸಹಾಯ ಮಾಡುತ್ತವೆ. ಮುಂದಿನ ಲೇಖನವು ಇದನ್ನು ಚರ್ಚಿಸುವುದು.

[ಪಾದಟಿಪ್ಪಣಿಗಳು]

^ ಪ್ಯಾರ. 1 ಆ ದಾಖಲೆಯನ್ನು ಬರೆದ ಸುಳ್ಳುಗಾರನು, ಯೇಸುವಿನ ಕೂದಲು, ಗಡ್ಡ ಹಾಗೂ ಕಣ್ಣಿನ ಬಣ್ಣವನ್ನು ಮಾತ್ರವಲ್ಲ, ಅವನ ಶಾರೀರಿಕ ತೋರಿಕೆಯನ್ನೂ ವರ್ಣಿಸುತ್ತಾನೆ. ಈ ಸುಳ್ಳು ದಾಖಲೆಯು, “ಯೇಸುವಿನ ತೋರಿಕೆಯ ಬಗ್ಗೆ ಚಿತ್ರಗಾರರ ಕೈಪಿಡಿಗಳಲ್ಲಿದ್ದ ವರ್ಣನೆಯನ್ನು ಸರ್ವಸಾಮಾನ್ಯವಾಗಿ ಅಂಗೀಕರಿಸುವಂತೆ ರಚಿಸಲ್ಪಟ್ಟಿತ್ತು” ಎಂದು ಬೈಬಲ್‌ ಭಾಷಾಂತರಕಾರರಾದ ಎಡ್ಗರ್‌ ಜೆ. ಗುಡ್‌ಸ್ಪೀಡ್‌ ವಿವರಿಸುತ್ತಾರೆ.

^ ಪ್ಯಾರ. 4 ಈ ಮಕ್ಕಳು ಒಂದೇ ಪ್ರಾಯದವರಾಗಿರಲಿಲ್ಲ ಎಂಬುದು ಸ್ಪಷ್ಟ. ‘ಚಿಕ್ಕ ಮಕ್ಕಳು’ ಎಂಬುದಾಗಿ ತರ್ಜುಮೆಮಾಡಲ್ಪಟ್ಟಿರುವ ಅದೇ ಪದವನ್ನು ಯಾಯೀರನ 12 ವರ್ಷ ಪ್ರಾಯದ ಮಗಳಿಗೂ ಉಪಯೋಗಿಸಲಾಗಿದೆ. (ಮಾರ್ಕ 5:39, 42; 10:13) ಆದರೆ ಇದೇ ವೃತ್ತಾಂತವನ್ನು ಲೂಕನು ಬರೆದಾಗ, ಕೂಸುಗಳಿಗಾಗಿ ಉಪಯೋಗಿಸಲ್ಪಡುವ ಒಂದು ಪದವನ್ನು ಅವನು ಬಳಸಿದನು.—ಲೂಕ 1:41; 2:12; 18:15.

^ ಪ್ಯಾರ. 11 ಏಪ್ರಿಲ್‌ 1, 1998ರ ಕಾವಲಿನಬುರುಜು ಸಂಚಿಕೆಯಲ್ಲಿ, “ನೀವು ಅವರ ಘನತೆಯನ್ನು ಗೌರವಿಸುತ್ತೀರೊ?” ಎಂಬ ಲೇಖನವನ್ನು ನೋಡಿರಿ.

ನೀವು ವಿವರಿಸಬಲ್ಲಿರೊ?

• ಮಕ್ಕಳು ಯೇಸುವಿನ ಬಳಿಗೆ ಹೋಗುವುದನ್ನು ಶಿಷ್ಯರು ತಡೆದಾಗ, ಅವನು ಹೇಗೆ ಪ್ರತಿಕ್ರಿಯಿಸಿದನು?

• ಯಾವ ರೀತಿಯಲ್ಲಿ ಯೇಸು ಇತರರಿಗೆ ಪರಿಗಣನೆಯನ್ನು ತೋರಿಸಿದನು?

• ತನ್ನ ಶಿಷ್ಯರಲ್ಲಿ ನಂಬಿಕೆಯಿಡಲು ಯೇಸುವಿಗಿದ್ದ ಸಿದ್ಧಮನಸ್ಸನ್ನು ನಾವು ಹೇಗೆ ಅನುಕರಿಸಬಲ್ಲೆವು?

• ಯೇಸು ತನ್ನ ಅಪೊಸ್ತಲರಲ್ಲಿ ವ್ಯಕ್ತಪಡಿಸಿದಂತಹ ಭರವಸೆಯನ್ನು ನಾವು ಹೇಗೆ ಅನುಕರಿಸಬಲ್ಲೆವು?

[ಅಧ್ಯಯನ ಪ್ರಶ್ನೆಗಳು]

[ಪುಟ 16ರಲ್ಲಿರುವ ಚಿತ್ರ]

ಯೇಸುವಿನ ಸಹವಾಸದಲ್ಲಿ ಮಕ್ಕಳು ನಿರಾತಂಕರಾಗಿದ್ದರು

[ಪುಟ 17ರಲ್ಲಿರುವ ಚಿತ್ರ]

ಯೇಸು ಇತರರನ್ನು ಸಹಾನುಭೂತಿಯಿಂದ ಉಪಚರಿಸಿದನು

[ಪುಟ 18ರಲ್ಲಿರುವ ಚಿತ್ರ]

ಸಮೀಪಿಸಸಾಧ್ಯವಿರುವ ಹಿರಿಯರು ಒಂದು ಆಶೀರ್ವಾದವಾಗಿದ್ದಾರೆ