ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗೌರವವನ್ನು ಕೊಡುವುದು—ಒಂದು ಕ್ರೈಸ್ತ ಆವಶ್ಯಕತೆ

ಗೌರವವನ್ನು ಕೊಡುವುದು—ಒಂದು ಕ್ರೈಸ್ತ ಆವಶ್ಯಕತೆ

ಗೌರವವನ್ನು ಕೊಡುವುದು—ಒಂದು ಕ್ರೈಸ್ತ ಆವಶ್ಯಕತೆ

ಮಾನ್ಯತೆಗೆ ಅರ್ಹನಾಗಿರುವವನಿಗೆ ವಿಶೇಷವಾದ ಗಮನವನ್ನು ಇಲ್ಲವೆ ಗೌರವವನ್ನು ತೋರಿಸುವುದು, ಒಬ್ಬ ವ್ಯಕ್ತಿಗೆ ಮತ್ತು ಅವನ ಗುಣಗಳು, ಸಾಧನೆಗಳು, ಸ್ಥಾನಮಾನ, ಇಲ್ಲವೆ ಅಧಿಕಾರಕ್ಕೆ ಮನ್ನಣೆಯನ್ನು ಮತ್ತು ಯೋಗ್ಯವಾದ ಗಣ್ಯತೆಯನ್ನು ಕೊಡುವುದು, ಇದೆಲ್ಲವೂ ಗೌರವ ತೋರಿಸುವುದರಲ್ಲಿ ಒಳಗೂಡಿದೆ. ಮೂಲ ಭಾಷೆಯ ಬೈಬಲುಗಳಲ್ಲಿ ಗೌರವಕ್ಕೆ ಸಂಬಂಧಿಸಿದ ಪದಗಳು, ಇತರರಿಗೆ ಮರ್ಯಾದೆಯನ್ನು ತೋರಿಸುವ ಇಲ್ಲವೆ ಹಿತಕರವಾದ ಭಯವನ್ನು ತೋರಿಸುವ ಅರ್ಥವನ್ನೂ ಹೊಂದಿವೆ. ಗೌರವವನ್ನು ತೋರಿಸುವುದು ಒಂದು ಕ್ರೈಸ್ತ ಹಂಗಾಗಿದೆ ಎಂಬುದನ್ನು ಶಾಸ್ತ್ರವಚನಗಳು ಸ್ಪಷ್ಟಪಡಿಸುತ್ತವೆ. ಆದರೆ ಗೌರವವನ್ನು ಯಾರಿಗೆ ಸಲ್ಲಿಸಬೇಕು?

ಯೆಹೋವನಿಗೆ ಗೌರವವನ್ನು ತೋರಿಸುವುದು

ಯೆಹೋವ ದೇವರು ಸೃಷ್ಟಿಕರ್ತನಾಗಿರುವುದರಿಂದ, ಆತನು ತನ್ನೆಲ್ಲ ಬುದ್ಧಿವಂತ ಜೀವಿಗಳಿಂದ ಶ್ರೇಷ್ಠವಾದ ಘನತೆಯನ್ನೂ ಅತ್ಯಧಿಕ ಗೌರವವನ್ನೂ ಪಡೆದುಕೊಳ್ಳುವುದಕ್ಕೆ ಅರ್ಹನಾಗಿದ್ದಾನೆ. (ಪ್ರಕಟನೆ 4:11) ಜನರು ನಂಬಿಗಸ್ತಿಕೆಯಿಂದ ಆತನಿಗೆ ವಿಧೇಯರಾಗಬೇಕೆಂಬುದು ಇದರ ಅರ್ಥ. ಈ ವಿಧೇಯತೆಯು ಆತನಿಗಾಗಿರುವ ಪ್ರೀತಿಯ ಮೇಲೆ ಮತ್ತು ನಮಗಾಗಿ ಆತನು ಮಾಡಿರುವಂತಹ ವಿಷಯಗಳಿಗಾಗಿರುವ ಗಣ್ಯತೆಯ ಮೇಲೆ ಆಧಾರಿತವಾಗಿದೆ. (1 ಯೋಹಾನ 5:3) “ನಾನು ತಂದೆಯಾಗಿರಲು ನನಗೆ ಸಲ್ಲುವ ಮಾನವೆಲ್ಲಿ; ದಣಿಯಾಗಿರಲು ನನಗೆ ತೋರಿಸುವ ಭಯಭಕ್ತಿಯೆಲ್ಲಿ” ಎಂದು ಯೆಹೋವನು ಇಸ್ರಾಯೇಲ್‌ ಜನಾಂಗವನ್ನು ಕೇಳಿದನು. ಯೆಹೋವನಿಗೆ ತೋರಿಸಲ್ಪಡುವ ಘನತೆಯಲ್ಲಿ, ಆತನನ್ನು ಅಪ್ರಸನ್ನಗೊಳಿಸುವ ಪೂಜ್ಯಭಾವನೆಯಿಂದ ಕೂಡಿದ ದೈವಿಕ ಭಯವು ಸಹ ಸೇರಿದೆ ಎಂಬುದನ್ನು ಇದು ಸೂಚಿಸುತ್ತದೆ.—ಮಲಾಕಿಯ 1:6.

ಮಹಾ ಯಾಜಕನಾದ ಏಲಿಯನ ಪುತ್ರರಾದ ಹೊಫ್ನಿ ಮತ್ತು ಫೀನೆಹಾಸರು, ಇಂತಹ ದೈವಿಕ ಭಯವನ್ನು ತೋರಿಸಲಿಲ್ಲ. ತಮ್ಮ ಮಹಾ ಯಜಮಾನನಾದ ಯೆಹೋವನ ನಿಯಮಕ್ಕೆ ಅವಿಧೇಯತೆಯನ್ನು ತೋರಿಸುತ್ತಾ, ಅವರು ಆತನ ಆರಾಧನಾಲಯದಲ್ಲಿ ಅರ್ಪಿಸುತ್ತಿದ್ದ ಪ್ರತಿಯೊಂದು ಬಲಿಯ ಉತ್ತಮ ಭಾಗವನ್ನೇ ಕಸಿದುಕೊಳ್ಳುತ್ತಿದ್ದರು. ಸೃಷ್ಟಿಕರ್ತನಿಗೆ ಸೇರಬೇಕಾದುದನ್ನು ಒಬ್ಬನು ಸ್ವತಃ ತೆಗೆದುಕೊಳ್ಳುವುದಾದರೆ, ಅವನು ಖಂಡಿತವಾಗಿಯೂ ಪವಿತ್ರ ವಿಷಯಗಳಿಗೆ ಗೌರವವನ್ನು ತೋರಿಸುವವನಾಗಿರುವುದಿಲ್ಲ. ಹೀಗೆ ನಡೆದುಕೊಳ್ಳುತ್ತಿದ್ದ ತನ್ನ ಪುತ್ರರನ್ನು ಖಂಡಿಸದೆ ಬಿಟ್ಟ ಏಲಿಯು, ಯೆಹೋವನಿಗಿಂತಲೂ ಅವರಿಗೇ ಹೆಚ್ಚಿನ ಮನ್ನಣೆಯನ್ನು ನೀಡಿದನು. ಯೆಹೋವನಿಗೆ ಸಲ್ಲತಕ್ಕ ಗೌರವವನ್ನು ಸಲ್ಲಿಸಲು ತಪ್ಪಿಹೋದ ಕಾರಣ, ಏಲಿಯನ ಕುಟುಂಬವು ಘೋರವಾದ ಪರಿಣಾಮಗಳನ್ನು ಎದುರಿಸಿತು.—1 ಸಮುವೇಲ 2:12-17, 27-29; 4:11, 18-21.

ನಂಬಿಗಸ್ತ ವಿಧೇಯತೆ ಹಾಗೂ ಪೂಜ್ಯಭಾವನೆಯ ಭಯದಿಂದ ಯೆಹೋವ ದೇವರಿಗೆ ತೋರಿಸಲ್ಪಡುವ ಗೌರವದಲ್ಲಿ, ವೈಯಕ್ತಿಕ ಸ್ವತ್ತುಗಳು ಸಹ ಸೇರಿವೆ. ನಾವು ಜ್ಞಾನೋಕ್ತಿ 3:9ರಲ್ಲಿ (NW) ಓದುವುದು: “ನಿನ್ನ ಅಮೂಲ್ಯ ಸ್ವತ್ತುಗಳಿಂದ ಯೆಹೋವನನ್ನು ಸನ್ಮಾನಿಸು.” ಹೀಗೆ ವ್ಯಕ್ತಿಯೊಬ್ಬನ ಸಮಯ, ಶಕ್ತಿ ಹಾಗೂ ಪ್ರಾಪಂಚಿಕ ಸ್ವತ್ತುಗಳನ್ನು ಯೆಹೋವನ ಆರಾಧನೆಯನ್ನು ವರ್ಧಿಸುವ ಉದ್ದೇಶಕ್ಕಾಗಿ ಬಳಸಸಾಧ್ಯವಿದೆ.

ಗತಕಾಲದ ಹಾಗೂ ಆಧುನಿಕ ದಿನದ ದೇವರ ಪ್ರತಿನಿಧಿಗಳಿಗೆ ಗೌರವವನ್ನು ತೋರಿಸುವುದು

ಯೆಹೋವನ ವದನಕರಾಗಿ ಕಾರ್ಯನಡೆಸುತ್ತಿದ್ದ ಪ್ರವಾದಿಗಳು ಗೌರವಕ್ಕೆ ಅರ್ಹರಾಗಿದ್ದರು. ಆದರೆ, ಅವರನ್ನು ಗೌರವಿಸುವ ಬದಲು, ಇಸ್ರಾಯೇಲ್ಯರು ಮಾತಿನಲ್ಲಿ ಮತ್ತು ಶಾರೀರಿಕ ರೂಪದಲ್ಲಿ ಅವರಿಗೆ ಹಾನಿಯನ್ನು ಉಂಟುಮಾಡುತ್ತಿದ್ದರು. ಈ ಶಾರೀರಿಕ ಹಾನಿಯು, ಕೆಲವೊಮ್ಮೆ ಮರಣಕ್ಕೂ ನಡೆಸುತ್ತಿತ್ತು. ಅವರು ದೇವರ ಮಗನನ್ನು ಕೊಂದುಹಾಕಿದಾಗ, ಯೆಹೋವನ ಪ್ರತಿನಿಧಿಗಳ ಕಡೆಗಿನ ಅವರ ಅಗೌರವವು ತುತ್ತತುದಿಯನ್ನು ಮುಟ್ಟಿತು. ಯೇಸು ಹೀಗೆ ಹೇಳಿದ್ದನು: “ಮಗನಿಗೆ ಮಾನಕೊಡದವನು ಅವನನ್ನು ಕಳುಹಿಸಿದ ತಂದೆಗೂ ಮಾನಕೊಡದವನಾಗಿದ್ದಾನೆ.” (ಯೋಹಾನ 5:23) ಹೀಗೆ, ಅಗೌರವವನ್ನು ಅತಿಯಾಗಿ ತೋರಿಸಿದ್ದಕ್ಕಾಗಿ, ಸಾ.ಶ. 70ರಲ್ಲಿ ಯೆಹೋವನು ಅಪನಂಬಿಗಸ್ತ ಯೆರೂಸಲೇಮಿಗೆ ಮುಯ್ಯಿತೀರಿಸಿದನು.—ಮಾರ್ಕ 12:1-9.

ಕ್ರೈಸ್ತ ಸಭೆಯಲ್ಲಿ ಬೋಧಕರಾಗಿ ವಿಶೇಷ ಜವಾಬ್ದಾರಿಗಳನ್ನು ವಹಿಸಿಕೊಂಡಿರುವವರು, ಜೊತೆ ವಿಶ್ವಾಸಿಗಳ ಬೆಂಬಲ ಹಾಗೂ ಗೌರವಕ್ಕೆ ಪಾತ್ರರಾಗಿದ್ದರು. (ಇಬ್ರಿಯ 13:7, 17) ಮೇಲ್ವಿಚಾರಕರು “ಇಮ್ಮಡಿಯಾದ ಮಾನಕ್ಕೆ ಯೋಗ್ಯರೆಂದು” ಅಪೊಸ್ತಲ ಪೌಲನು ತಿಮೊಥೆಯನಿಗೆ ಬರೆದು ತಿಳಿಸಿದನು. ಸಭೆಯ ಪರವಾಗಿ ಅವರು ಪಡುವ ಪ್ರಯಾಸಕ್ಕೆ ಸ್ವಯಂಪ್ರೇರಿತ ಭೌತಿಕ ನೆರವನ್ನು ಸಹ ಇದು ಒಳಗೊಳ್ಳುವುದು. (1 ತಿಮೊಥೆಯ 5:17, 18) ಹಾಗಿದ್ದರೂ, ಎಲ್ಲ ಕ್ರೈಸ್ತರು ಜೊತೆ ವಿಶ್ವಾಸಿಗಳ ಗೌರವಕ್ಕೆ ಅರ್ಹರಾಗಿದ್ದರು. ಪೌಲನು ಮತ್ತೆ ಸಲಹೆ ನೀಡಿದ್ದು: “ಮಾನಮರ್ಯಾದೆಯನ್ನು ತೋರಿಸುವದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ.” (ರೋಮಾಪುರ 12:10) ಪ್ರತಿಯೊಬ್ಬ ಕ್ರೈಸ್ತನಿಗೆ ತನ್ನ ಕುಂದುಕೊರತೆಗಳ ಬಗ್ಗೆ ಜೊತೆ ವಿಶ್ವಾಸಿಗಳಿಗಿಂತಲೂ ಚೆನ್ನಾಗಿ ಗೊತ್ತಿರುವುದರಿಂದ, ಅವನು ಇತರರನ್ನು ತನಗಿಂತಲೂ ಶ್ರೇಷ್ಠರೆಂದೆಣಿಸಿ, ಎಲ್ಲ ಸಮಯಗಳಲ್ಲಿ ಅವರನ್ನು ಅಮೂಲ್ಯರೆಂದೆಣಿಸುತ್ತಾ ಗೌರವವನ್ನು ತೋರಿಸಬೇಕಾದದ್ದು ತೀರ ಯೋಗ್ಯವಾದದ್ದು.—ಫಿಲಿಪ್ಪಿ 2:1-4.

ಕುಟುಂಬದ ಸದಸ್ಯರು ಒಬ್ಬರನ್ನೊಬ್ಬರು ಗೌರವಿಸುತ್ತಾರೆ

ಪತ್ನಿಯು ಕುಟುಂಬದ ತಲೆಯಾಗಿರುವ ತನ್ನ ಪತಿಗೆ ಹಿತಕರವಾದ ಭಯ ಇಲ್ಲವೆ ಅತ್ಯಧಿಕ ಗೌರವವನ್ನು ತೋರಿಸಬೇಕಾದದ್ದು ಯೋಗ್ಯವಾಗಿದೆ. (ಎಫೆಸ 5:33) ಇದು ದೇವರ ಏರ್ಪಾಡಿನಲ್ಲಿ ಪುರುಷನಿಗೆ ಕೊಡಲ್ಪಟ್ಟಿರುವ ಶ್ರೇಷ್ಠ ಸ್ಥಾನಕ್ಕೆ ಹೊಂದಿಕೆಯಲ್ಲಿದೆ. ಏಕೆಂದರೆ ಸ್ತ್ರೀಯಲ್ಲ ಪುರುಷನೇ ಪ್ರಥಮವಾಗಿ ಸೃಷ್ಟಿಸಲ್ಪಟ್ಟನು ಮತ್ತು ಅವನು “ದೇವರ ಪ್ರತಿರೂಪವೂ ಪ್ರಭಾವವೂ” ಆಗಿದ್ದಾನೆ. (1 ಕೊರಿಂಥ 11:7-9; 1 ತಿಮೊಥೆಯ 2:11-13) ತನ್ನ ಪತಿಗೆ ಅತ್ಯಧಿಕ ಗೌರವವನ್ನು ತೋರಿಸಿದ ವಿಷಯದಲ್ಲಿ ಸಾರಳು ಎದ್ದುಕಾಣುವ ಮಾದರಿಯಾಗಿದ್ದಾಳೆ. ಅವಳ ಗೌರವವು ಹೃದಯದಾಳದಿಂದ ಬಂತು, ಏಕೆಂದರೆ ಅವಳು ಕೇವಲ ಜನರ ಮುಂದೆಯಲ್ಲ, “ತನ್ನೊಳಗೆ” ಕೂಡ ತನ್ನ ಪತಿಯನ್ನು “ಯಜಮಾನ”ನೆಂದು ಕರೆದಳು.—1 ಪೇತ್ರ 3:1, 2, 5, 6; ಆದಿಕಾಂಡ 18:12.

ಮತ್ತೊಂದು ಕಡೆಯಲ್ಲಿ, ಗಂಡಂದಿರಿಗೆ ಹೀಗೆ ಬುದ್ಧಿವಾದ ನೀಡಲಾಗಿದೆ: “ಅದೇ ರೀತಿಯಾಗಿ ಪುರುಷರೇ, ಸ್ತ್ರೀಯು ಪುರುಷನಿಗಿಂತ ಬಲಹೀನಳೆಂಬದನ್ನು ಜ್ಞಾಪಕಮಾಡಿಕೊಂಡು ನಿಮ್ಮ ಹೆಂಡತಿಯರ ಸಂಗಡ ವಿವೇಕದಿಂದ ಒಗತನಮಾಡಿರಿ. ಅವರು ಜೀವವರಕ್ಕೆ ನಿಮ್ಮೊಂದಿಗೆ ಬಾಧ್ಯರಾಗಿದ್ದಾರೆಂದು ತಿಳಿದು ಅವರಿಗೆ ಮಾನವನ್ನು ಸಲ್ಲಿಸಿರಿ.” (1 ಪೇತ್ರ 3:7) ಹೀಗೆ, ಕ್ರಿಸ್ತನ ಸಹಬಾಧ್ಯಸ್ಥರಾಗಿರುವ ವಿಷಯದಲ್ಲಿ ತಮ್ಮ ಪತ್ನಿಯರಿಗೂ ತಮಗೂ ಸಮಾನವಾದ ನಿಲುವಿದೆ ಎಂಬುದನ್ನು ಆತ್ಮಾಭಿಷಿಕ್ತ ಕ್ರೈಸ್ತ ಗಂಡಂದಿರು ತಿಳಿದುಕೊಳ್ಳಬೇಕಿತ್ತು. ಮತ್ತು ಸ್ತ್ರೀಯರು ಪುರುಷರಿಗಿಂತ ಕಡಿಮೆ ಬಲವುಳ್ಳವರಾಗಿರುವುದರಿಂದ ಅವರಿಗೆ ಮಾನವನ್ನು ಸಲ್ಲಿಸಬೇಕೆಂಬುದನ್ನು ಅವರು ಗ್ರಹಿಸಿಕೊಳ್ಳಬೇಕಾಗಿತ್ತು.—ಗಲಾತ್ಯ 3:28.

ಮಕ್ಕಳ ವಿಷಯದಲ್ಲಾದರೊ, ಹೆತ್ತವರು ದೇವರ ಪ್ರತಿನಿಧಿಗಳಾಗಿದ್ದು, ಅವರಿಗೆ ತರಬೇತಿ, ಶಿಸ್ತು, ಮತ್ತು ಮಾರ್ಗದರ್ಶನವನ್ನು ನೀಡುವ ಅಧಿಕಾರವನ್ನು ಪಡೆದುಕೊಂಡಿದ್ದಾರೆ. ಆದುದರಿಂದ ಹೆತ್ತವರು ಮರ್ಯಾದೆಗೆ ಇಲ್ಲವೆ ಗೌರವಕ್ಕೆ ಅರ್ಹರಾಗಿದ್ದಾರೆ. (ಎಫೆಸ 6:1-3) ಇದು ಬಾಲ್ಯಾವಸ್ಥೆಯಲ್ಲಿ ಮಾತ್ರ ತೋರಿಸಲ್ಪಡುವ ವಿಧೇಯತೆ ಹಾಗೂ ಗೌರವಕ್ಕೆ ಸೀಮಿತವಾಗಿರದೆ, ಅಗತ್ಯವಾದಲ್ಲಿ ತದನಂತರದ ಜೀವಿತದಲ್ಲಿ ಹೆತ್ತವರಿಗೆ ಬೇಕಾದ ಪ್ರೀತಿಪರ ಆರೈಕೆಯನ್ನು ನೀಡುವುದನ್ನು ಸಹ ಒಳಗೂಡಿದೆ. ಕ್ರೈಸ್ತ ಸಭೆಯಲ್ಲಿರುವ ಒಬ್ಬನು, ತನ್ನ ವೃದ್ಧ ಹಾಗೂ ಅಗತ್ಯದಲ್ಲಿರುವ ಹೆತ್ತವರಿಗೆ ಬೇಕಾದುದನ್ನು ಒದಗಿಸದೆ ಇರುವ ಮೂಲಕ ಅಗೌರವವನ್ನು ತೋರಿಸುವಲ್ಲಿ, ಅವನು ನಂಬಿಕೆಯಿಲ್ಲದ ವ್ಯಕ್ತಿಗಿಂತಲೂ ಕೀಳಾಗಿ ಪರಿಗಣಿಸಲ್ಪಟ್ಟನು. (1 ತಿಮೊಥೆಯ 5:8) ಅಪೊಸ್ತಲ ಪೌಲನು ತಿಮೊಥೆಯನಿಗೆ ಬರೆದು ತಿಳಿಸಿದಂತೆ, ಒಬ್ಬ ವಿಧವೆಗೆ ಪ್ರಾಪಂಚಿಕ ನೆರವನ್ನು ನೀಡಲು ಶಕ್ತರಾಗಿರುವ ಮಕ್ಕಳು ಇಲ್ಲವೆ ಮೊಮ್ಮಕ್ಕಳು ಇರುವುದಾದರೆ, ಸಭೆಯು ಅವಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಿಲ್ಲ.—1 ತಿಮೊಥೆಯ 5:4.

ಅಧಿಕಾರಿಗಳಿಗೆ ಮತ್ತು ಹೊರಗಿನವರಿಗೆ ಗೌರವವನ್ನು ತೋರಿಸುವುದು

ಸರಕಾರದಲ್ಲಿ ಉಚ್ಚ ಸ್ಥಾನಮಾನಗಳಲ್ಲಿರುವ ಪುರುಷರಿಗೂ ಘನತೆ ಇಲ್ಲವೆ ಗೌರವವು ತೋರಿಸಲ್ಪಡಬೇಕು. ಒಬ್ಬ ಕ್ರೈಸ್ತನು ಸ್ವಪ್ರಯೋಜನಕ್ಕಾಗಿ ಇಂತಹ ಗೌರವವನ್ನು ತೋರಿಸದೆ, ದೇವರ ಚಿತ್ತವಾಗಿರುವುದರಿಂದಲೇ ಅದನ್ನು ತೋರಿಸುತ್ತಾನೆ. ಈ ಪುರುಷರು ಭ್ರಷ್ಟರಾಗಿರಬಹುದು. (ಹೋಲಿಸಿ ಅ. ಕೃತ್ಯಗಳು 24:24-27.) ಆದರೆ, ಅವರು ವಹಿಸಿಕೊಂಡಿರುವ ಅಧಿಕಾರದ ಸ್ಥಾನಮಾನಕ್ಕಾಗಿ ಅವರಿಗೆ ಗೌರವವು ಸಲ್ಲತಕ್ಕದ್ದು. (ರೋಮಾಪುರ 13:1, 2, 7; 1 ಪೇತ್ರ 2:13, 14) ತದ್ರೀತಿಯಲ್ಲಿ, ಆಳುಗಳು ತಮ್ಮ ಧಣಿಗಳಿಗೆ ಪೂರ್ಣ ಗೌರವವನ್ನು ಸಲ್ಲಿಸುವವರಾಗಿದ್ದು, ತಮಗೆ ನೇಮಿಸಲ್ಪಟ್ಟ ಕೆಲಸವನ್ನು ಗೌರವದಿಂದ ಮಾಡಿಮುಗಿಸುವುದರ ಜೊತೆಗೆ, ದೇವರ ಹೆಸರಿನ ಮೇಲೆ ಯಾವ ಕಾರಣಕ್ಕೂ ಕಳಂಕವನ್ನು ತರದಂತೆ ನೋಡಿಕೊಳ್ಳಬೇಕು.—1 ತಿಮೊಥೆಯ 6:1.

ಕ್ರೈಸ್ತನೊಬ್ಬನು ತನ್ನಲ್ಲಿರುವ ನಿರೀಕ್ಷೆಗೆ ಕಾರಣವನ್ನು ಕೊಡುವಂತೆ ಜನರಿಂದ ಒತ್ತಾಯಿಸಲ್ಪಡುವಾಗ, ಅವನು “ಸಾತ್ವಿಕತ್ವದಿಂದಲೂ ಮನೋಭೀತಿಯಿಂದಲೂ” ಉತ್ತರಿಸುವನು. ಪ್ರಶ್ನೆಗಳು ಗೇಲಿಮಾಡುವ ರೀತಿಯಲ್ಲಿ ಕೇಳಲ್ಪಟ್ಟರೂ, ಕಿರಿಕಿರಿಗೊಳ್ಳದೆ, ಕೋಪಗೊಳ್ಳದೆ, ಇಲ್ಲವೆ ಸಿಟ್ಟಿನಿಂದ ಉತ್ತರಿಸುವುದಕ್ಕೆ ಬದಲಾಗಿ, ಕ್ರೈಸ್ತನೊಬ್ಬನು ಶಾಂತವಾಗಿ ಉತ್ತರಿಸಬೇಕು. ಅವನು ಮನುಷ್ಯರ ಭಯಕ್ಕೆ ಒಳಗಾಗದಿದ್ದರೂ, ತಾನು ಯೆಹೋವ ದೇವರು ಮತ್ತು ಕರ್ತನಾದ ಯೇಸು ಕ್ರಿಸ್ತನ ಸಮ್ಮುಖದಲ್ಲಿದ್ದಾನೊ ಎಂಬಂತೆ ಅತ್ಯಧಿಕ ಗೌರವವನ್ನು ವ್ಯಕ್ತಪಡಿಸುವನು.—1 ಪೇತ್ರ 3:14, 15.

ಗೌರವವನ್ನು ತೋರಿಸುವುದು ಪ್ರತಿಫಲದಾಯಕವಾಗಿದೆ

ಯೆಹೋವನು ದೈವಿಕ ಗೌರವವನ್ನು ತೋರಿಸುವವರನ್ನು ಗಣ್ಯಮಾಡುತ್ತಾ, ಅವರನ್ನು ಆಶೀರ್ವದಿಸಿ, ಅವರಿಗೆ ಪ್ರತಿಫಲ ನೀಡುವ ಮೂಲಕ ಸನ್ಮಾನಿಸುತ್ತಾನೆ. ಆತನು ಹೇಳುವುದು: “ನನ್ನನ್ನು ಸನ್ಮಾನಿಸುವವರನ್ನು ಸನ್ಮಾನಿಸುವೆನು.” (1 ಸಮುವೇಲ 2:30) ರಾಜನಾದ ದಾವೀದನು ತನ್ನ ಜೀವ ಹಾಗೂ ಬಲದೊಂದಿಗೆ ಯೆಹೋವನನ್ನು ನಂಬಿಗಸ್ತಿಕೆಯಿಂದ ಘನಪಡಿಸಿದನಲ್ಲದೆ, ಸತ್ಯಾರಾಧನೆಗಾಗಿ ತನ್ನ ಅಮೂಲ್ಯ ವಸ್ತುಗಳನ್ನು ಸಹ ದಾನವಾಗಿ ಕೊಟ್ಟನು. ಯೆಹೋವನು ದಾವೀದನ ನಂಬಿಗಸ್ತ ಜೀವನಕ್ರಮವನ್ನು ಗೌರವಿಸಿ, ಅವನೊಂದಿಗೆ ರಾಜ್ಯದ ಒಡಂಬಡಿಕೆಯನ್ನು ಮಾಡುವ ಮೂಲಕ ಪ್ರತಿಫಲವನ್ನು ನೀಡಿದನು.—2 ಸಮುವೇಲ 7:1-16.

ಕ್ರೈಸ್ತ ಸಭೆಯಲ್ಲಿರುವ ದೇವರ ಪ್ರತಿನಿಧಿಗಳನ್ನು ಗೌರವಿಸುವವರು, ಪ್ರೀತಿಪರ ಕುರಿಪಾಲನೆಯಿಂದ ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ ಮಾತ್ರವಲ್ಲ, ಈ ಮೇಲ್ವಿಚಾರಕರು ತಮ್ಮ ಕುರಿತು ‘ಸಂತೋಷದಿಂದ ಲೆಕ್ಕ ಒಪ್ಪಿಸುವರೆಂಬ’ ಆಶ್ವಾಸನೆಯನ್ನೂ ಹೊಂದಿರುವವರಾಗಿರುತ್ತಾರೆ. (ಇಬ್ರಿಯ 13:17) ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸಿರುವ ಬಡ ವಿಧವೆಯರು, ಸಭೆಯಲ್ಲಿ ಗೌರವಿಸಲ್ಪಡುತ್ತಾರೆ ಮತ್ತು ಅಗತ್ಯವಾದಲ್ಲಿ ಸಭೆಯಿಂದ ಐಹಿಕ ನೆರವನ್ನೂ ಪಡೆದುಕೊಳ್ಳುತ್ತಾರೆ. (1 ತಿಮೊಥೆಯ 5:3, 9, 10) ಪರಸ್ಪರ ಗೌರವಿಸುವ ಪತಿಪತ್ನಿಯರು ಸಂತೋಷದ ಹಾಗೂ ಫಲದಾಯಕ ವಿವಾಹವನ್ನು ಅನುಭವಿಸುತ್ತಾರಲ್ಲದೆ, ಅವರ ಮಕ್ಕಳು ದೇವರ ಹಾಗೂ ಮಾನವರ ಸಮ್ಮತಿಯನ್ನು ಪಡೆದುಕೊಳ್ಳುವ ಗೌರವಪೂರ್ಣ ವ್ಯಕ್ತಿಗಳಾಗುತ್ತಾರೆ. (ಲೂಕ 2:51, 52) ಅಧಿಕಾರಿಗಳನ್ನು ಮತ್ತು ವಿರೋಧಿಗಳನ್ನು ಸಹ ಗೌರವಿಸುವ ಕ್ರೈಸ್ತನಿಗೆ ಒಳ್ಳೆಯ ಮನಸ್ಸಾಕ್ಷಿಯಿರುತ್ತದೆ ಮತ್ತು ಇದು ಯೆಹೋವನ ಹೆಸರಿಗೆ ಘನತೆಯನ್ನು ತರುತ್ತದೆ. ಎಲ್ಲಕ್ಕಿಂತಲೂ ಮಿಗಿಲಾಗಿ, ತಮ್ಮ ಮಹಾನ್‌ ಸೃಷ್ಟಿಕರ್ತನ ಚಿತ್ತ ಹಾಗೂ ಉದ್ದೇಶಗಳಿಗಾಗಿ ಅತ್ಯಧಿಕ ಗೌರವವನ್ನು ತೋರಿಸುವ ಎಲ್ಲ ವಿಧೇಯ ಜನರಿಗೆ, ಪರಿಪೂರ್ಣವಾದ ಪರಿಸ್ಥಿತಿಗಳಲ್ಲಿ ಅನಂತ ಕಾಲದ ವರೆಗೆ ಯೆಹೋವನ ಸೇವೆಮಾಡುವ ಅವಕಾಶವು ಕಾದಿರುತ್ತದೆ.