ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇಹ ಚಿಕ್ಕದಾದರೂ, ಮನಸ್ಸು ದೊಡ್ಡದು

ದೇಹ ಚಿಕ್ಕದಾದರೂ, ಮನಸ್ಸು ದೊಡ್ಡದು

ದೇಹ ಚಿಕ್ಕದಾದರೂ, ಮನಸ್ಸು ದೊಡ್ಡದು

ಒಂದುವೇಳೆ ನೀವು ಕೇವಲ 76 ಸೆಂಟಿಮೀಟರ್‌ಗಳಷ್ಟು ಎತ್ತರವಿರುತ್ತಿದ್ದಲ್ಲಿ, ದೇವರ ರಾಜ್ಯದ ಕುರಿತು ಅಪರಿಚಿತರೊಂದಿಗೆ ಮಾತಾಡಲು ನಿಮಗೆ ಹೇಗನಿಸುತ್ತಿತ್ತು? ಇದರ ಬಗ್ಗೆ ಲಾರಾ ತನ್ನ ಅನುಭವವನ್ನು ಹೇಳಬಲ್ಲಳು. ಈಗ 33 ವರ್ಷ ಪ್ರಾಯದವಳಾಗಿದ್ದರೂ, ಅವಳು ಕೇವಲ 76 ಸೆಂಟಿಮೀಟರ್‌ಗಳಷ್ಟೇ ಎತ್ತರವಿದ್ದಾಳೆ. ಇವಳ ತಂಗಿಯಾದ ಮಾರೀಆ 24 ವರ್ಷ ಪ್ರಾಯದವಳಾಗಿದ್ದು, 86 ಸೆಂಟಿಮೀಟರ್‌ಗಳಷ್ಟು ಎತ್ತರವಿದ್ದಾಳೆ. ಇವರಿಬ್ಬರೂ ಎಕ್ವಡಾರ್‌ನ ಕೀಟೋ ಎಂಬಲ್ಲಿ ವಾಸಿಸುತ್ತಿದ್ದಾರೆ. ಅವರು ತಮ್ಮ ಕ್ರೈಸ್ತ ಶುಶ್ರೂಷೆಯಲ್ಲಿ ಎದುರಿಸುವಂತಹ ತೊಂದರೆಗಳನ್ನು ತಾವೇ ವಿವರಿಸಲಿ.

“ನಮ್ಮ ಸಾರುವ ಟೆರಿಟೊರಿಗೆ ಮತ್ತು ಕ್ರೈಸ್ತ ಕೂಟಗಳಿಗೆ ಹೋಗಲಿಕ್ಕಾಗಿ ಬಸ್ಸನ್ನು ಹಿಡಿಯಲು ನಾವು ಸುಮಾರು ಅರ್ಧ ಕಿಲೊಮೀಟರ್‌ ನಡೆಯುತ್ತೇವೆ. ಬಸ್ಸಿನಿಂದ ಇಳಿದ ಮೇಲೆ ಇನ್ನೊಂದು ಬಸ್ಸನ್ನು ಹಿಡಿಯಲಿಕ್ಕಾಗಿ ಇನ್ನೂ ಅರ್ಧ ಕಿಲೊಮೀಟರ್‌ ದೂರ ನಾವು ನಡೆಯುತ್ತೇವೆ. ಈ ದಾರಿಯಲ್ಲಿ ಐದು ಕ್ರೂರ ನಾಯಿಗಳಿವೆ ಎಂಬುದು ತುಂಬ ಭಯಾನಕ ಸಂಗತಿಯಾಗಿದೆ. ನಾಯಿಗಳನ್ನು ಕಂಡರೆ ನಮಗೆ ತುಂಬ ಭಯ, ಏಕೆಂದರೆ ಅವು ಗಾತ್ರದಲ್ಲಿ ಕುದುರೆಗಳಷ್ಟು ದೊಡ್ಡವುಗಳಾಗಿ ನಮಗೆ ಕಾಣುತ್ತವೆ. ಅವುಗಳನ್ನು ಓಡಿಸಲಿಕ್ಕಾಗಿ ನಾವು ನಮ್ಮೊಂದಿಗೆ ಒಂದು ದೊಣ್ಣೆಯನ್ನು ಕೊಂಡೊಯ್ಯುತ್ತೇವೆ. ನಾವು ಮನೆಗೆ ಹಿಂದಿರುಗುವಾಗ ಈ ದೊಣ್ಣೆಯು ನಮ್ಮ ಕೈಗೆ ಸುಲಭವಾಗಿ ಸಿಗುವಂತೆ ಅದನ್ನು ನಾವು ರಸ್ತೆಯ ಬದಿಯಲ್ಲಿ ಅಡಗಿಸಿಡುತ್ತೇವೆ.

“ಬಸ್ಸಿಗೆ ಹತ್ತುವುದಂತೂ ನಮಗೆ ಒಂದು ದೊಡ್ಡ ಕೆಲಸ. ಬಸ್‌ ಸ್ಟಾಪ್‌ನಲ್ಲಿ ಹೆಚ್ಚು ಸುಲಭವಾಗಿ ಬಸ್ಸನ್ನು ಹತ್ತಲು ನಾವು ಒಂದು ಕಸದ ದಿಣ್ಣೆಯ ಮೇಲೆ ನಿಂತುಕೊಳ್ಳುತ್ತೇವೆ. ಕೆಲವು ಡ್ರೈವರ್‌ಗಳು ಬಸ್ಸನ್ನು ಈ ದಿಣ್ಣೆಯ ತನಕ ತಂದು ನಿಲ್ಲಿಸುತ್ತಾರಾದರೂ ಇನ್ನಿತರರು ಹಾಗೆ ಮಾಡುವುದಿಲ್ಲ. ದಿಣ್ಣೆಯ ತನಕ ಬಸ್‌ ಬರದಿದ್ದಲ್ಲಿ, ನಮ್ಮಿಬ್ಬರಲ್ಲಿ ಸ್ವಲ್ಪ ಎತ್ತರವಿರುವವರು ಕುಳ್ಳಗಿರುವವರಿಗೆ ಬಸ್ಸನ್ನು ಹತ್ತಲು ಸಹಾಯ ಮಾಡುತ್ತೇವೆ. ಎರಡನೆಯ ಬಸ್ಸನ್ನು ಹಿಡಿಯಲಿಕ್ಕಾಗಿ ನಾವು ಜನರಿಂದ ಕಿಕ್ಕಿರಿದಿರುವ ಒಂದು ಹೆದ್ದಾರಿಯನ್ನು ದಾಟಬೇಕಾಗುತ್ತದೆ. ನಮ್ಮ ಪುಟ್ಟ ಕಾಲುಗಳಿಂದ ಹೆದ್ದಾರಿಯನ್ನು ದಾಟುವುದು ಖಂಡಿತವಾಗಿಯೂ ಒಂದು ದೊಡ್ಡ ಸಾಧನೆಯಾಗಿದೆ. ನಮಗೆ ತುಂಬ ಗಿಡ್ಡವಾದ ದೇಹಾಕೃತಿ ಇರುವುದರಿಂದ, ಭಾರವಾದ ಬುಕ್‌ಬ್ಯಾಗನ್ನು ತೆಗೆದುಕೊಂಡುಹೋಗುವುದು ಒಂದು ದೊಡ್ಡ ಸವಾಲನ್ನು ಒಡ್ಡುತ್ತದೆ. ನಮ್ಮ ಬ್ಯಾಗನ್ನು ಹಗುರಗೊಳಿಸಲಿಕ್ಕಾಗಿ ನಾವು ಪಾಕೆಟ್‌-ಸೈಸ್‌ ಬೈಬಲನ್ನು ಉಪಯೋಗಿಸುತ್ತೇವೆ ಮತ್ತು ಮಿತವಾದ ಸಾಹಿತ್ಯವನ್ನು ಮಾತ್ರವೇ ಕೊಂಡೊಯ್ಯುತ್ತೇವೆ.

“ಬಾಲ್ಯದಿಂದಲೇ ನಾವಿಬ್ಬರೂ ತುಂಬ ಸಂಕೋಚ ಸ್ವಭಾವದವರಾಗಿದ್ದೇವೆ. ಅಪರಿಚಿತರೊಂದಿಗೆ ಮಾತಾಡುವುದು ಯಾವಾಗಲೂ ನಮಗೆ ಭಯಹುಟ್ಟಿಸುವಂತಹ ಒಂದು ಅನುಭವವಾಗಿದೆ ಎಂಬುದು ನಮ್ಮ ನೆರೆಹೊರೆಯವರಿಗೆ ಗೊತ್ತಿದೆ. ಆದುದರಿಂದ, ನಾವು ಅವರ ಮನೆಬಾಗಿಲುಗಳನ್ನು ತಟ್ಟುವುದನ್ನು ನೋಡಿ ಅವರು ಆಶ್ಚರ್ಯಪಡುತ್ತಾರೆ ಮಾತ್ರವಲ್ಲ, ಪ್ರಭಾವಿತರೂ ಆಗುತ್ತಾರೆ. ಅಷ್ಟುಮಾತ್ರವಲ್ಲ ನಮ್ಮ ಸಂದೇಶಕ್ಕೂ ಕಿವಿಗೊಡುತ್ತಾರೆ. ಆದರೆ ನಾವು ಅಪರಿಚಿತರಾಗಿರುವಂತಹ ಸ್ಥಳಗಳಲ್ಲಿ ಜನರು ನಮ್ಮನ್ನು ಕೇವಲ ಗಿಡ್ಡಮನುಷ್ಯರೋಪಾದಿ ನೋಡುತ್ತಾರೆ; ಆದುದರಿಂದ ಅವರು ನಮ್ಮ ಸಂದೇಶಕ್ಕೆ ಯೋಗ್ಯವಾದ ಗಮನವನ್ನು ಕೊಡುವುದೇ ಇಲ್ಲ. ಆದರೂ, ಯೆಹೋವನ ಪ್ರೀತಿಯನ್ನು ನಾವು ಅರಿತಿರುವುದರಿಂದ, ಸೌವಾರ್ತಿಕ ಕೆಲಸದಲ್ಲಿ ಮುಂದುವರಿಯುತ್ತಾ ಇರುವಂತೆ ಇದು ನಮ್ಮನ್ನು ಪ್ರಚೋದಿಸುತ್ತದೆ. ಜ್ಞಾನೋಕ್ತಿ 3:5, 6ರಲ್ಲಿರುವ ವಚನಗಳ ಕುರಿತು ಮನನಮಾಡುವುದು ಸಹ ನಮಗೆ ತುಂಬ ಧೈರ್ಯವನ್ನು ಕೊಡುತ್ತದೆ.”

ಲಾರಾ ಮತ್ತು ಮಾರೀಆರ ಅನುಭವವು ತೋರಿಸುವಂತೆ, ಶಾರೀರಿಕ ಅಡಚಣೆಗಳ ಎದುರಿನಲ್ಲಿಯೂ ಪಟ್ಟುಹಿಡಿದು ಮುಂದುವರಿಯುವುದು ದೇವರಿಗೆ ಮಹಿಮೆಯನ್ನು ತರಬಲ್ಲದು. ಅಪೊಸ್ತಲ ಪೌಲನು ‘ಶರೀರದಲ್ಲಿ ನಾಟಿರುವ ಶೂಲ’ವನ್ನು ತೆಗೆಯುವಂತೆ, ಅಂದರೆ ಪ್ರಾಯಶಃ ಅವನಿಗಿದ್ದ ಶಾರೀರಿಕ ನೋವನ್ನು ಗುಣಪಡಿಸುವಂತೆ ದೇವರಿಗೆ ಪ್ರಾರ್ಥಿಸಿದನು. ಆದರೆ ದೇವರು ಅವನಿಗೆ ಹೇಳಿದ್ದು: “ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ಬಲವು ಪೂರ್ಣಸಾಧಕವಾಗುತ್ತದೆ.” ಹೌದು, ನಾವು ದೇವರ ಸೇವೆಮಾಡಲು ಶಕ್ತರಾಗಲು ನಮ್ಮಲ್ಲಿರುವ ಒಂದು ಶಾರೀರಿಕ ನ್ಯೂನತೆಯನ್ನು ಆತನು ತೆಗೆದುಹಾಕಬೇಕೆಂದೇನಿಲ್ಲ. ನಾವು ದೇವರ ಮೇಲೆ ಸಂಪೂರ್ಣವಾಗಿ ಆತುಕೊಳ್ಳುವುದು, ನಮ್ಮ ಪರಿಸ್ಥಿತಿಗಳಿಂದ ಆದಷ್ಟೂ ಪ್ರಯೋಜನವನ್ನು ಪಡೆದುಕೊಳ್ಳುವಂತೆ ನಮಗೆ ಸಹಾಯ ಮಾಡಬಲ್ಲದು. ಪೌಲನು ‘ಶರೀರದಲ್ಲಿ ನಾಟಿರುವ ಶೂಲ’ವನ್ನು ಈ ರೀತಿಯಲ್ಲಿ ಪರಿಗಣಿಸಿದ್ದರಿಂದ, “ನಾನು ಯಾವಾಗ ನಿರ್ಬಲನಾಗಿದ್ದೇನೋ ಆವಾಗಲೇ ಬಲವುಳ್ಳವನಾಗಿದ್ದೇನೆ” ಎಂದು ಹೇಳಶಕ್ತನಾದನು. (2 ಕೊರಿಂಥ 12:7, 9, 10) ಕೆಲವು ವರ್ಷಗಳ ಬಳಿಕ ಪೌಲನು ಬರೆದುದು: “ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ.”—ಫಿಲಿಪ್ಪಿ 4:13.

ಆಧುನಿಕ ಸಮಯಗಳಲ್ಲಿ, ದೇವರಿಗೆ ಪೂರ್ಣ ಭಕ್ತಿಯನ್ನು ತೋರಿಸುವಂತಹ ಸ್ತ್ರೀಪುರುಷರು ಮತ್ತು ಮಕ್ಕಳ ಮೂಲಕ ದೇವರು ಒಂದು ಮಹತ್ಕಾರ್ಯವನ್ನು ಸಾಧಿಸುತ್ತಿದ್ದಾನೆ. ಅವರಲ್ಲಿ ಅನೇಕರು ಒಂದಲ್ಲ ಒಂದು ವಿಧದಲ್ಲಿ ಅಂಗವಿಕಲರಾಗಿದ್ದಾರೆ. ಅವರೆಲ್ಲರೂ ದೇವರ ರಾಜ್ಯದ ಕೆಳಗೆ ಆತನಿಂದ ಗುಣಮುಖರಾಗಲು ನಿರೀಕ್ಷಿಸುತ್ತಿದ್ದಾರಾದರೂ, ಆತನ ಸೇವೆಯಲ್ಲಿ ಏನನ್ನಾದರೂ ಮಾಡುವ ಮೊದಲು ದೇವರು ತಮ್ಮ ಸಮಸ್ಯೆಗಳನ್ನು ಬಗೆಹರಿಸಲಿ ಎಂದು ಕಾಯುತ್ತಾ ಕುಳಿತುಕೊಂಡಿಲ್ಲ.

ನೀವು ಸಹ ಶಾರೀರಿಕ ದೌರ್ಬಲ್ಯದಿಂದ ನರಳುತ್ತಿದ್ದೀರೊ? ಧೈರ್ಯ ತಂದುಕೊಳ್ಳಿರಿ! ನಿಮ್ಮ ನಂಬಿಕೆಯ ಮೂಲಕ ನೀವು ಸಹ ಪೌಲ, ಲಾರಾ, ಮತ್ತು ಮಾರೀಆರಂಥವರಲ್ಲಿ ಒಬ್ಬರಾಗಿರಸಾಧ್ಯವಿದೆ. ಪುರಾತನ ಸಮಯದಲ್ಲಿದ್ದ ಸ್ತ್ರೀಪುರುಷರ ವಿಷಯದಲ್ಲಿ ಹೇಳಸಾಧ್ಯವಿರುವಂತೆಯೇ, “ನಿರ್ಬಲರಾಗಿದ್ದು [ಅವರು] ಬಲಿಷ್ಠರಾದರು” ಎಂದು ಇವರ ವಿಷಯದಲ್ಲಿಯೂ ಹೇಳಸಾಧ್ಯವಿದೆ.—ಇಬ್ರಿಯ 11:34.

[ಪುಟ 8ರಲ್ಲಿರುವ ಚಿತ್ರ]

ಮಾರೀಆ

ಲಾರಾ

[ಪುಟ 9ರಲ್ಲಿರುವ ಚಿತ್ರ]

ಬಸ್ಸನ್ನು ಹತ್ತಲಿಕ್ಕಾಗಿ ಮಾರೀಆ ಲಾರಾಳಿಗೆ ಸಹಾಯ ಮಾಡುತ್ತಾಳೆ

[ಪುಟ 9ರಲ್ಲಿರುವ ಚಿತ್ರ]

“ನಾಯಿಗಳನ್ನು ಕಂಡರೆ ನಮಗೆ ತುಂಬ ಭಯ, ಏಕೆಂದರೆ ಅವು ಗಾತ್ರದಲ್ಲಿ ಕುದುರೆಗಳಷ್ಟು ದೊಡ್ಡವುಗಳಾಗಿ ನಮಗೆ ಕಾಣುತ್ತವೆ”

ಕೆಳಗೆ: ಲಾರಾ ಮತ್ತು ಮಾರೀಆ ಹಾಗೂ ಅವರೊಂದಿಗೆ ಬೈಬಲ್‌ ಅಭ್ಯಾಸ ಮಾಡಿದವರು