ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುನ್ನೆಚ್ಚರಿಕೆಗೆ ಕಿವಿಗೊಡಿರಿ!

ಮುನ್ನೆಚ್ಚರಿಕೆಗೆ ಕಿವಿಗೊಡಿರಿ!

ಮುನ್ನೆಚ್ಚರಿಕೆಗೆ ಕಿವಿಗೊಡಿರಿ!

ಢಮಾರ್‌! 1991ರ ಜೂನ್‌ 3ರಂದು ಜಪಾನಿನಲ್ಲಿರುವ ಫೂಗೆನ್‌ ಪರ್ವತವು ಗುಡುಗುಟ್ಟುತ್ತ, ಜ್ವಾಲಾಮುಖಿ ಅನಿಲವನ್ನು ಮತ್ತು ಬೂದಿಯನ್ನು ರಭಸದಿಂದ ಕಾರಿತು. ಕೊತಕೊತನೆ ಕುದಿಯುವ ಈ ಮಿಶ್ರಣವು ಇಳಿಜಾರಿನಲ್ಲಿ ಹರಿಯುತ್ತಾ ಬಂತು. ಈ ಸ್ಫೋಟವು ಸುಮಾರು 43 ಜನರನ್ನು ನುಂಗಿಹಾಕಿತು. ಬದುಕಿ ಉಳಿದವರು ಭೀಕರವಾದ ರೀತಿಯಲ್ಲಿ ಸುಟ್ಟುಗಾಯವನ್ನು ಅನುಭವಿಸಿದರು. ಕೆಲವರು “ನೀರು, ನೀರು” ಎಂದು ಕೂಗುತ್ತಿದ್ದರು. ಅಗ್ನಿಶಾಮಕ ದಳದವರು ಮತ್ತು ಪೊಲೀಸರು ಸಹಾಯಮಾಡಲು ಧಾವಿಸಿದರು.

ಸುಮಾರು ಎರಡು ವಾರಗಳಿಗೆ ಮುಂಚಿತವಾಗಿಯೇ ಫೂಗೆನ್‌ ಪರ್ವತದ ತುತ್ತತುದಿಯಲ್ಲಿ ಲಾವಾದ ಗುಮ್ಮಟವನ್ನು ನೋಡಲಾಗಿತ್ತು. ಅಷ್ಟುಮಾತ್ರವಲ್ಲದೆ, ಅಧಿಕಾರಿಗಳಿಗೆ ಮತ್ತು ಅಲ್ಲಿನ ಜನರಿಗೆ ಅಪಾಯದ ಅರಿವಿತ್ತು. ಈ ದುರ್ಘಟನೆಯಾಗುವುದಕ್ಕೆ ಸುಮಾರು ಒಂದು ವಾರಕ್ಕಿಂತ ಮುಂಚೆ, ಆ ಸ್ಥಳವನ್ನು ಖಾಲಿಮಾಡಬೇಕೆಂಬ ಸಲಹೆಯನ್ನು ನೀಡಲಾಗಿತ್ತು. ಆ ಸ್ಫೋಟವಾಗುವ ಒಂದು ದಿನಕ್ಕೆ ಮುಂಚೆ, ಪತ್ರಿಕೋದ್ಯಮದ ಸದಸ್ಯರಿಗೆ ನಿಷೇಧಿಸಲ್ಪಟ್ಟ ಆ ಸ್ಥಳಕ್ಕೆ ಹೋಗಬಾರದೆಂದು ಹೇಳಲಾಗಿತ್ತು. ಇಷ್ಟೆಲ್ಲ ಮಾಹಿತಿಯನ್ನು ನೀಡಿದ್ದರೂ, ಆ ಕರಾಳ ದಿನದ ಮಧ್ಯಾಹ್ನದಂದು ಸುಮಾರು 43 ಜನರು ಅಪಾಯದ ಕ್ಷೇತ್ರದಲ್ಲಿದ್ದರು.

ಅಷ್ಟೊಂದು ಜನರು ಆ ಕ್ಷೇತ್ರಕ್ಕೆ ಹೋಗಲು ಏಕೆ ಸಾಹಸಮಾಡಿದರು ಅಥವಾ ಏಕೆ ಅಲ್ಲಿದ್ದರು? ತಮ್ಮ ಮನೆಗಳನ್ನು ಬಿಟ್ಟುಹೋಗಿದ್ದ ರೈತರು, ತಮ್ಮ ಹೊಲಗದ್ದೆ ಮತ್ತು ಸೊತ್ತುಗಳಿಗೆ ಏನಾಗಿದೆಯೋ ಎಂದು ನೋಡಲು ಹಿಂದಿರುಗಿದರು. ಮೂವರು ಜ್ವಾಲಾಮುಖಿ ಶಾಸ್ತ್ರಜ್ಞರು ತಮ್ಮ ಪಾಂಡಿತ್ಯಾಭಿರುಚಿಗಳನ್ನು ತಣಿಸಿಕೊಳ್ಳಲು ಸಾಧ್ಯವಾದಷ್ಟು ಹತ್ತಿರಕ್ಕೆ ಹೋಗಲು ಪ್ರಯತ್ನಿಸುತ್ತಿದ್ದರು. ಅನೇಕ ವರದಿಗಾರರು ಮತ್ತು ಫೋಟೋಗ್ರಾಫರ್‌ಗಳು ಗಡಿರೇಖೆಯನ್ನು ದಾಟಿ ಹೋಗಲು ಧೈರ್ಯಮಾಡಿದರು. ಏಕೆಂದರೆ, ಜ್ವಾಲಾಮುಖಿಯ ಕುರಿತ ವರದಿಯನ್ನು ನೀಡಲು ಮತ್ತು ಫೋಟೋವನ್ನು ತೆಗೆಯಲು ಅವರು ಉತ್ಸುಕರಾಗಿದ್ದರು. ಈ ಪತ್ರಿಕೋದ್ಯಮಿಗಳಿಂದ ಬಾಡಿಗೆಗೆ ತೆಗೆದುಕೊಳ್ಳಲ್ಪಟ್ಟ ಮೂವರು ಟ್ಯಾಕ್ಸಿ ಡ್ರೈವರುಗಳು ಸಹ ಅಲ್ಲಿದ್ದರು. ಪೊಲೀಸ್‌ ಮತ್ತು ಸ್ವಯಂಸೇವಕ ಅಗ್ನಿಶಾಮಕ ದಳದವರು ಅಲ್ಲಿ ಕರ್ತವ್ಯದ ಮೇಲಿದ್ದರು. ಆ ಅಪಾಯ ಕ್ಷೇತ್ರದೊಳಕ್ಕೆ ಕಾಲಿಡಲು ಪ್ರತಿಯೊಬ್ಬರಿಗೂ ತಮ್ಮದೇ ಆದ ಕಾರಣವಿತ್ತು. ಆದರೆ ಇದರ ಪರಿಣಾಮವು, ಪ್ರತಿಯೊಬ್ಬನೂ ತನ್ನ ಪ್ರಾಣವನ್ನು ತೆರುವುದಾಗಿತ್ತು.

ನೀವು ಅಪಾಯದ ಕ್ಷೇತ್ರದಲ್ಲಿದ್ದೀರೋ?

ನಮ್ಮಲ್ಲಿ ಎಲ್ಲರೂ ಕ್ರಿಯಾಶೀಲವಾಗಿರುವ ಜ್ವಾಲಾಮುಖಿಯ ಹತ್ತಿರದಲ್ಲಿ ಜೀವಿಸುತ್ತಿಲ್ಲದಿರಬಹುದು. ಆದರೆ, ಇಡೀ ವಿಶ್ವವನ್ನು ಸೇರಿಸಿ ನಮ್ಮೆಲ್ಲರನ್ನೂ ಅಪಾಯದ ಕ್ಷೇತ್ರದಲ್ಲಿರಿಸುವ ವಿಶ್ವವಿಪ್ಲವವನ್ನು ನಾವು ಎದುರಿಸುವುದಾದರೆ ಆಗೇನು? ಪ್ರವಾದನೆಯ ಕುರಿತು ಭರವಸಾರ್ಹವಾದ ಮಾಹಿತಿಯನ್ನು ನೀಡುವ ಪುಸ್ತಕವೊಂದು ಬರಲಿರುವ ಲೋಕವ್ಯಾಪಕ ವಿಪತ್ತಿನ ಕುರಿತು ಎಚ್ಚರಿಸುತ್ತಾ, ಅದನ್ನು ಈ ರೀತಿಯಲ್ಲಿ ವರ್ಣಿಸುತ್ತದೆ: “ಸೂರ್ಯನು ಕತ್ತಲಾಗಿಹೋಗುವನು, ಚಂದ್ರನು ಬೆಳಕುಕೊಡದೆ ಇರುವನು, ನಕ್ಷತ್ರಗಳು ಆಕಾಶದಿಂದ ಉದುರುವವು, ಆಕಾಶದ ಶಕ್ತಿಗಳು ಕದಲುವವು. . . . ಆಗ ಭೂಲೋಕದಲ್ಲಿರುವ ಎಲ್ಲಾ ಕುಲದವರು ಎದೆಬಡಕೊಳ್ಳುವರು.” (ಮತ್ತಾಯ 24:29, 30) ಇಡೀ ವಿಶ್ವದಲ್ಲಾಗುವ ಆಕಾಶಕಾಯ ಘಟನೆಗಳನ್ನು, ಅವು ‘ಭೂಲೋಕದಲ್ಲಿರುವ ಎಲ್ಲಾ ಕುಲದವರನ್ನು’ ಬಾಧಿಸುವಂಥವುಗಳು ಎಂದು ವರ್ಣಿಸಲಾಗಿದೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ನಮ್ಮಲ್ಲಿ ಪ್ರತಿಯೊಬ್ಬರನ್ನೂ ಬಾಧಿಸಲಿರುವ ವಿಶ್ವವಿಪ್ಲವಕ್ಕೆ ಈ ಪ್ರವಾದನೆಯು ಕೈತೋರಿಸುತ್ತದೆ.

ಭರವಸಾರ್ಹ ಪ್ರವಾದನೆಯ ಈ ಗ್ರಂಥವು ಬೈಬಲ್‌ ಆಗಿದೆ. ಆಸಕ್ತಿಕರವಾದ ವಿಷಯವೇನೆಂದರೆ, ಮೇಲೆ ತಿಳಿಸಲ್ಪಟ್ಟಿರುವ ಶಾಸ್ತ್ರವಚನದ ಹಿಂದಿನ ಹಾಗೂ ಮುಂದಿನ ವಚನಗಳು, ಭೌಗೋಲಿಕ ವಿಪತ್ತಿಗೆ ನಡೆಸುವ ವಿಷಯಗಳ ಕುರಿತು ಸವಿವರವನ್ನು ನೀಡುತ್ತವೆ. ಲಾವಾ ಗುಮ್ಮಟ ಮತ್ತು ಜ್ವಾಲಾಮುಖಿಯ ಇತರ ಸೂಚನೆಗಳು ಆ ಅಪಾಯ ಕ್ಷೇತ್ರವನ್ನು ಗುರುತಿಸುವುದಕ್ಕಾಗಿ ಶೀಮಾಬಾರಾದ ನಗರಾಧಿಕಾರಿಗಳಿಗೆ ಕಾರಣಗಳನ್ನು ನೀಡಿದಂತೆ, ಎಚ್ಚೆತ್ತವರಾಗಿದ್ದು, ಬದುಕಿ ಉಳಿಯುವುದಕ್ಕಾಗಿ ನಮ್ಮನ್ನು ಸಿದ್ಧಪಡಿಸಿಕೊಳ್ಳುತ್ತಿರಬೇಕು ಎಂಬುದಕ್ಕಾಗಿ ಬೈಬಲು ನಮಗೆ ಕಾರಣಗಳನ್ನು ನೀಡುತ್ತದೆ. ಆದುದರಿಂದ, ನಾವು ಫೂಗೆನ್‌ ಪರ್ವತದಲ್ಲಾದ ದುರಂತದಿಂದ ಪಾಠವನ್ನು ಕಲಿತುಕೊಳ್ಳಸಾಧ್ಯವಿದೆ ಮತ್ತು ಮುಂದೇನು ಕಾದಿದೆ ಎಂಬ ವಿಷಯದ ಮಹತ್ತ್ವವನ್ನು ವಿವೇಚಿಸಿ ತಿಳಿದುಕೊಳ್ಳಸಾಧ್ಯವಿದೆ.

[ಪುಟ 2ರಲ್ಲಿರುವ ಚಿತ್ರ ಕೃಪೆ]

COVER: Yomiuri/Orion Press/Sipa Press

[ಪುಟ 3ರಲ್ಲಿರುವ ಚಿತ್ರ ಕೃಪೆ]

Yomiuri/Orion Press/Sipa Press