ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರು ಪ್ರಾರ್ಥನೆಗಳಿಗೆ ಖಂಡಿತವಾಗಿಯೂ ಉತ್ತರ ಕೊಡುತ್ತಾನೆ

ದೇವರು ಪ್ರಾರ್ಥನೆಗಳಿಗೆ ಖಂಡಿತವಾಗಿಯೂ ಉತ್ತರ ಕೊಡುತ್ತಾನೆ

ದೇವರು ಪ್ರಾರ್ಥನೆಗಳಿಗೆ ಖಂಡಿತವಾಗಿಯೂ ಉತ್ತರ ಕೊಡುತ್ತಾನೆ

ಕೊರ್ನೇಲ್ಯನೆಂಬುವನು ಪದೇ ಪದೇ ಹಾಗೂ ಹೃದಯದಾಳದ ಪ್ರಾರ್ಥನೆಗಳಿಂದ ದೇವರ ಅನುಗ್ರಹವನ್ನು ಕೋರಿದ ಒಬ್ಬ ವ್ಯಕ್ತಿಯಾಗಿದ್ದನು. ಅಷ್ಟು ಮಾತ್ರವಲ್ಲ, ಸೈನ್ಯಾಧಿಕಾರಿಯಾಗಿ ಅವನು ತನ್ನ ಅಧಿಕಾರದ ಒಳ್ಳೇ ಉಪಯೋಗವನ್ನು ಮಾಡಿಕೊಂಡನು. ಬೈಬಲಿಗನುಸಾರವಾಗಿ, ಅವನು ಅಗತ್ಯದಲ್ಲಿದ್ದ ‘ಜನರಿಗೆ ಬಹಳವಾಗಿ ದಾನಧರ್ಮಮಾಡುತ್ತಿದ್ದನು.’—ಅ. ಕೃತ್ಯಗಳು 10:1, 2.

ಆ ಸಮಯದಲ್ಲಿ, ಕ್ರೈಸ್ತ ಸಭೆಯು ವಿಶ್ವಾಸಿ ಯೆಹೂದ್ಯರು, ಮತಾವಲಂಬಿಗಳು ಮತ್ತು ಸಮಾರ್ಯದವರಿಂದ ರಚಿತವಾಗಿತ್ತು. ಕೊರ್ನೇಲ್ಯನು ಸುನ್ನತಿ ಹೊಂದಿರದ ಅನ್ಯನಾಗಿದ್ದು, ಕ್ರೈಸ್ತ ಸಭೆಯ ಭಾಗವಾಗಿರಲಿಲ್ಲ. ಹಾಗಾದರೆ ಅವನ ಪ್ರಾರ್ಥನೆಗಳು ವ್ಯರ್ಥವಾಗಿದ್ದವು ಎಂಬುದು ಇದರ ಅರ್ಥವಾಗಿತ್ತೋ? ಇಲ್ಲ. ಯೆಹೋವ ದೇವರು ಕೊರ್ನೇಲ್ಯನನ್ನು ಮತ್ತು ಅವನ ಪ್ರಾರ್ಥನಾಪೂರ್ವಕವಾದ ಕಾರ್ಯಗಳನ್ನು ಗಮನಕ್ಕೆ ತಂದುಕೊಂಡನು.—ಅ. ಕೃತ್ಯಗಳು 10:4.

ದೇವದೂತನ ಮಾರ್ಗದರ್ಶನದ ಮೂಲಕ, ಕೊರ್ನೇಲ್ಯನು ಕ್ರೈಸ್ತ ಸಭೆಯ ಸಂಪರ್ಕಕ್ಕೆ ತರಲ್ಪಟ್ಟನು. (ಅ. ಕೃತ್ಯಗಳು 10:30-33) ಇದರ ಫಲಿತಾಂಶವಾಗಿ, ಅವನು ಮತ್ತು ಅವನ ಮನೆಯವರು ಕ್ರೈಸ್ತ ಸಭೆಯೊಳಗೆ ಸ್ವೀಕರಿಸಲ್ಪಟ್ಟ ಸುನ್ನತಿ ಹೊಂದಿರದ ಅನ್ಯರಲ್ಲಿ ಮೊದಲಿಗರಾಗುವ ಸುಯೋಗವನ್ನು ಪಡೆದುಕೊಂಡರು. ಬೈಬಲಿನ ದಾಖಲೆಯಲ್ಲಿ ಕೊರ್ನೇಲ್ಯನ ವೈಯಕ್ತಿಕ ಅನುಭವವು ಸೇರಿಸಲ್ಪಡುವುದು ತಕ್ಕದ್ದೆಂದು ಯೆಹೋವ ದೇವರು ಪರಿಗಣಿಸಿದನು. ತನ್ನ ಜೀವಿತವನ್ನು ದೇವರ ಮಟ್ಟಕ್ಕನುಸಾರ ಪೂರ್ಣವಾಗಿ ಹೊಂದಿಸಿಕೊಳ್ಳಲು ಅವನು ಅನೇಕ ಬದಲಾವಣೆಗಳನ್ನು ಮಾಡಿದನೆಂಬುದರಲ್ಲಿ ಸಂದೇಹವಿಲ್ಲ. (ಯೆಶಾಯ 2:2-4; ಯೋಹಾನ 17:16) ಇಂದು ದೇವರ ಅನುಗ್ರಹವನ್ನು ಪಡೆದುಕೊಳ್ಳಲು ಬಯಸುವ ಎಲ್ಲ ಜನಾಂಗದವರಿಗೆ ಕೊರ್ನೇಲ್ಯನ ಅನುಭವವು ಬಹಳ ಉತ್ತೇಜನವನ್ನು ಕೊಡತಕ್ಕದ್ದು. ಕೆಲವು ಉದಾಹರಣೆಗಳನ್ನು ಪರಿಗಣಿಸಿರಿ.

ಆಧುನಿಕ ದಿನದ ಉದಾಹರಣೆಗಳು

ಭಾರತದಲ್ಲಿರುವ ಒಬ್ಬ ಯುವ ಸ್ತ್ರೀಗೆ ಸಾಂತ್ವನದ ಅಗತ್ಯವು ತೀವ್ರವಾಗಿತ್ತು. ಇಪ್ಪತ್ತೊಂದನೆಯ ವಯಸ್ಸಿನಲ್ಲಿ ಮದುವೆಯಾಗಿದ್ದ ಅವಳಿಗೆ ಇಬ್ಬರು ಮಕ್ಕಳಿದ್ದರು. ಆದರೆ ಎರಡನೇ ಮಗುವಿನ ಜನನದ ಸ್ವಲ್ಪ ಸಮಯದೊಳಗೆ, ಅವಳ ಗಂಡನು ತೀರಿಕೊಂಡನು. ಹೀಗೆ ಇದ್ದಕ್ಕಿದ್ದಂತೆ, ಎರಡು ತಿಂಗಳ ಮಗಳು ಮತ್ತು 22 ತಿಂಗಳಿನ ಮಗನೊಂದಿಗೆ, 24 ವರ್ಷ ಪ್ರಾಯದವಳಾಗಿದ್ದ ಅವಳು ವಿಧವೆಯಾದಳು. ಅವಳಿಗೆ ಸಾಂತ್ವನದ ಅಗತ್ಯವಿತ್ತೆಂಬುದರಲ್ಲಿ ಆಶ್ಚರ್ಯವೇ ಇಲ್ಲ! ಅವಳು ಯಾರ ಕಡೆಗೆ ತಿರುಗಸಾಧ್ಯವಿತ್ತು? ಒಂದು ರಾತ್ರಿ, ಆಳವಾಗಿ ವ್ಯಥೆಗೊಂಡಿದ್ದ ಅವಳು ಹೀಗೆ ಹೇಳುತ್ತಾ ಪ್ರಾರ್ಥಿಸಿದಳು, “ಸ್ವರ್ಗೀಯ ತಂದೆಯೇ, ನಿನ್ನ ವಾಕ್ಯದ ಮೂಲಕ ನನ್ನನ್ನು ದಯವಿಟ್ಟು ಸಂತೈಸು.”

ಮರುದಿನ ಬೆಳಗ್ಗೆ, ಅವಳ ಮನೆಗೆ ಒಬ್ಬ ವ್ಯಕ್ತಿಯು ಭೇಟಿಯಾದನು. ಅವನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿದ್ದನು. ಆ ದಿನ ಅವನಿಗೆ ಮನೆಯಿಂದ ಮನೆಯ ಶುಶ್ರೂಷೆಯು ಕಷ್ಟಕರವಾಗಿತ್ತು, ಯಾಕೆಂದರೆ ಕೆಲವರು ಮಾತ್ರ ಅವನ ಸಂದೇಶಕ್ಕೆ ಕಿವಿಗೊಟ್ಟಿದ್ದರು. ಆಯಾಸಗೊಂಡವನಾಗಿ ಆದರೆ ವಾಸ್ತವದಲ್ಲಿ ನಿರುತ್ಸಾಹಗೊಂಡವನಾಗಿದ್ದ ಅವನು ಮನೆಗೆ ಹಿಂದಿರುಗಬೇಕೆಂದಿದ್ದನು. ಆದರೆ, ಇನ್ನೂ ಒಂದೇ ಒಂದು ಮನೆಯನ್ನು ಸಂದರ್ಶಿಸಬೇಕೆಂಬ ಅನಿಸಿಕೆಯು ಅವನನ್ನು ಬಹಳವಾಗಿ ಒತ್ತಾಯಿಸಿತು. ಅಲ್ಲಿಯೇ ಅವನು ಈ ಯುವ ವಿಧವೆಯನ್ನು ಭೇಟಿಯಾದನು. ಅವಳು ಅವನನ್ನು ಒಳಗೆ ಆಮಂತ್ರಿಸಿದಳು ಮತ್ತು ಬೈಬಲನ್ನು ವಿವರಿಸಿದ ಒಂದು ಪ್ರಕಾಶನವನ್ನು ಸ್ವೀಕರಿಸಿದಳು. ಆ ಪ್ರಕಾಶನವನ್ನು ಓದಿದ ನಂತರ ಮತ್ತು ಸಾಕ್ಷಿಯೊಂದಿಗೆ ಚರ್ಚೆ ನಡೆಸಿದ ನಂತರ ಆ ಸ್ತ್ರೀಗೆ ಬಹಳ ಸಾಂತ್ವನವು ಸಿಕ್ಕಿತು. ಸತ್ತವರನ್ನು ಎಬ್ಬಿಸುವ ದೇವರ ವಾಗ್ದಾನದ ಕುರಿತು ಮಾತ್ರವಲ್ಲ, ಶೀಘ್ರದಲ್ಲೇ ಭೂಮಿಯನ್ನು ಒಂದು ಪರದೈಸವಾಗಿ ಮಾಡಲಿರುವ ದೇವರ ರಾಜ್ಯದ ಕುರಿತು ಸಹ ಅವಳು ಕಲಿತುಕೊಂಡಳು. ಇನ್ನೂ ಮುಖ್ಯವಾಗಿ, ಅವಳು ತನ್ನ ಪ್ರಾರ್ಥನೆಯನ್ನು ಆಲಿಸಿದ ಒಬ್ಬನೇ ಸತ್ಯ ದೇವರಾದ ಯೆಹೋವನನ್ನು ತಿಳಿದುಕೊಂಡಳು ಮತ್ತು ಪ್ರೀತಿಸತೊಡಗಿದಳು.

ದಕ್ಷಿಣ ಆಫ್ರಿಕದ ಜಾರ್ಜ್‌ ಪಟ್ಟಣದಲ್ಲಿ ವಾಸಿಸುವ ನೋರಾ ಎಂಬುವಳು ಪೂರ್ಣ ಸಮಯದ ಶುಶ್ರೂಷೆಯ ಕೆಲಸದಲ್ಲಿ ಭಾಗವಹಿಸಲು ಒಂದು ತಿಂಗಳನ್ನು ಅದಕ್ಕಾಗಿಯೇ ಬದಿಗಿರಿಸಿದಳು. ಅದನ್ನು ಆರಂಭಿಸುವ ಮೊದಲು, ಬೈಬಲನ್ನು ಅಭ್ಯಾಸಿಸಲು ನಿಜವಾಗಿಯೂ ಆಸಕ್ತರಾಗಿರುವ ಯಾರಾದರೊಬ್ಬರನ್ನು ಕಂಡುಕೊಳ್ಳುವಂತೆ ಅವಳು ಸಹಾಯಕ್ಕಾಗಿ ಯೆಹೋವನಿಗೆ ಶ್ರದ್ಧೆಯಿಂದ ಪ್ರಾರ್ಥಿಸಿದಳು. ನೋರಾ ಯಾವ ಕ್ಷೇತ್ರದಲ್ಲಿ ಕೆಲಸಮಾಡುವಂತೆ ನೇಮಿಸಲ್ಪಟ್ಟಿದ್ದಳೋ ಅಲ್ಲಿ ತನ್ನೊಂದಿಗೆ ಈ ಮೊದಲು ಬಹಳ ಒರಟಾಗಿ ವರ್ತಿಸಿದ್ದ ಒಬ್ಬ ವ್ಯಕ್ತಿಯ ಮನೆಯು ಸಹ ಇತ್ತು. ಧೈರ್ಯದಿಂದ ನೋರಾ ಆ ಮನೆಯನ್ನು ಪುನಃ ಭೇಟಿಮಾಡಿದಳು. ಅವಳ ಆಶ್ಚರ್ಯಕ್ಕೆ, ನೋಲಿನ್‌ ಎಂಬ ಹೆಸರಿನ ಹೊಸ ಸ್ತ್ರೀಯನ್ನು ಅವಳು ಆ ಮನೆಯಲ್ಲಿ ಕಂಡುಕೊಂಡಳು. ಅಷ್ಟೇ ಅಲ್ಲದೆ, ನೋಲಿನ್‌ ಮತ್ತು ಅವಳ ತಾಯಿ ಬೈಬಲನ್ನು ಅರ್ಥಮಾಡಿಕೊಳ್ಳಲು ಸಹಾಯಮಾಡುವಂತೆ ದೇವರಿಗೆ ಪ್ರಾರ್ಥಿಸುತ್ತಿದ್ದರು. ನೋರಾ ವಿವರಿಸುವುದು: “ನಾನು ಒಂದು ಬೈಬಲ್‌ ಅಭ್ಯಾಸವನ್ನು ಅವರಿಗೆ ನೀಡಿದಾಗ, ಅವರು ಆನಂದಿತರಾದರು.” ನೋಲಿನ್‌ ಮತ್ತು ಅವಳ ತಾಯಿ ತ್ವರಿತವಾಗಿ ಪ್ರಗತಿ ಮಾಡಿದರು. ಸಮಯಾನಂತರ, ಅವರಿಬ್ಬರೂ ಆತ್ಮಿಕ ವಾಸಿಮಾಡುವಿಕೆಯ ಕೆಲಸದಲ್ಲಿ ಭಾಗವಹಿಸಲು ಆರಂಭಿಸಿದರು.

ದಕ್ಷಿಣ ಆಫ್ರಿಕದ ಜೊಹ್ಯಾನೆಸ್‌ಬರ್ಗ್‌ನ ಪಟ್ಟಣದಲ್ಲಿ ವಾಸಿಸುತ್ತಿದ್ದ ದಂಪತಿಯ ಇನ್ನೊಂದು ಉದಾಹರಣೆಯು ಪ್ರಾರ್ಥನೆಗಿರುವ ಬಲವನ್ನು ತೋರಿಸುತ್ತದೆ. ಇಸವಿ 1996ರ ಶನಿವಾರ ರಾತ್ರಿಯಂದು, ಡೆನಿಸ್‌ ಮತ್ತು ಕ್ಯಾರೆಲ್‌ರವರ ವಿವಾಹವು ಮುರಿಯುವ ಹಂತವನ್ನು ಮುಟ್ಟಿತು. ಸಹಾಯಕ್ಕಾಗಿ ದೇವರಿಗೆ ಪ್ರಾರ್ಥನೆ ಮಾಡುವುದೇ ಉಳಿದಿರುವ ಕೊನೆಯ ಮಾರ್ಗವೆಂದು ಅವರು ನಿರ್ಧರಿಸಿದರು ಮತ್ತು ಆ ರಾತ್ರಿ ಅವರು ಬಹಳ ಹೊತ್ತಿನವರೆಗೂ ಪುನಃ ಪುನಃ ಪ್ರಾರ್ಥಿಸಿದರು. ಮರುದಿನ ಬೆಳಗ್ಗೆ 11 ಗಂಟೆಗೆ, ಯೆಹೋವನ ಸಾಕ್ಷಿಗಳಲ್ಲಿ ಇಬ್ಬರು ಅವರ ಮನೆಯ ಬಾಗಿಲನ್ನು ತಟ್ಟಿದರು. ಡೆನಿಸ್‌ ಬಾಗಿಲನ್ನು ತೆರೆದನು ಮತ್ತು ತನ್ನ ಹೆಂಡತಿಯನ್ನು ಕರೆಯುವ ತನಕ ಅಲ್ಲೇ ಕಾಯುವಂತೆ ಅವರಿಗೆ ಹೇಳಿದನು. ಸಾಕ್ಷಿಗಳನ್ನು ಒಳಗೆ ಕರೆದರೆ ಅವರನ್ನು ಮತ್ತೆ ಹೊರಕಳುಹಿಸುವುದು ಕಷ್ಟ ಎಂಬುದಾಗಿ ಡೆನಿಸ್‌ ಕ್ಯಾರೆಲ್‌ಗೆ ಎಚ್ಚರಿಸಿದನು. ಸಹಾಯಕ್ಕಾಗಿ ಅವರು ಪ್ರಾರ್ಥಿಸಿದ್ದನ್ನು ಮತ್ತು ಇದು ಅವರ ಪ್ರಾರ್ಥನೆಗಳಿಗೆ ದೇವರ ಉತ್ತರವಾಗಿರಬಹುದೆಂದು ಕ್ಯಾರೆಲ್‌ ಡೆನಿಸ್‌ಗೆ ನೆನಪು ಹುಟ್ಟಿಸಿದಳು. ಆದುದರಿಂದ ಸಾಕ್ಷಿಗಳನ್ನು ಒಳಗೆ ಬರುವಂತೆ ಆಮಂತ್ರಿಸಲಾಯಿತು ಮತ್ತು ನಿತ್ಯ ಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕದಿಂದ ಒಂದು ಬೈಬಲ್‌ ಅಭ್ಯಾಸವು ಆರಂಭಿಸಲ್ಪಟ್ಟಿತು. ಡೆನಿಸ್‌ ಮತ್ತು ಕ್ಯಾರೆಲ್‌, ತಾವು ಕಲಿಯುತ್ತಿದ್ದ ವಿಷಯದಿಂದ ರೋಮಾಂಚಿತಗೊಂಡರು. ಅದೇ ಮಧ್ಯಾಹ್ನದಂದು ಅವರು ಯೆಹೋವನ ಸಾಕ್ಷಿಗಳ ಸ್ಥಳಿಕ ರಾಜ್ಯ ಸಭಾಗೃಹದಲ್ಲಿ ಮೊದಲನೆಯ ಬಾರಿ ಕೂಟಕ್ಕೆ ಹಾಜರಾದರು. ಬೈಬಲಿನಿಂದ ತಾವು ಕಲಿತಿದ್ದ ಜ್ಞಾನವನ್ನು ಅನ್ವಯಿಸುವ ಮೂಲಕ ಡೆನಿಸ್‌ ಮತ್ತು ಕ್ಯಾರೆಲ್‌ ತಮ್ಮ ವೈವಾಹಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಂಡರು. ಅವರು ಈಗ ದೀಕ್ಷಾಸ್ನಾನ ಪಡೆದುಕೊಂಡಿರುವ ಯೆಹೋವನ ಹರ್ಷಭರಿತ ಸ್ತುತಿಗಾರರಾಗಿದ್ದಾರೆ ಮತ್ತು ತಮ್ಮ ನೆರೆಹೊರೆಯವರೊಂದಿಗೆ ಬೈಬಲ್‌ ಆಧಾರಿತ ನಂಬಿಕೆಗಳನ್ನು ಕ್ರಮವಾಗಿ ಹಂಚಿಕೊಳ್ಳುತ್ತಿದ್ದಾರೆ.

ಪ್ರಾರ್ಥನೆ ಮಾಡಲು ನೀವು ಅಯೋಗ್ಯರೆಂದು ನೆನಸುವುದಾದರೆ ಆಗೇನು?

ಕೆಲವು ಯಥಾರ್ಥ ವ್ಯಕ್ತಿಗಳು ತಮ್ಮ ಕೆಟ್ಟ ಜೀವನ ಮಾರ್ಗದ ಕಾರಣದಿಂದಾಗಿ ಪ್ರಾರ್ಥಿಸಲು ತಾವು ಅಯೋಗ್ಯರೆಂದು ಭಾವಿಸಿಕೊಳ್ಳಬಹುದು. ಇಂತಹ ಒಬ್ಬ ವ್ಯಕ್ತಿಯ ಕುರಿತು, ಅಂದರೆ ಕಡೆಗಣಿಸಲ್ಪಟ್ಟಿದ್ದ ಸುಂಕ ವಸೂಲಿಗಾರನ ಕುರಿತು ಯೇಸು ಕ್ರಿಸ್ತನು ಒಂದು ಕಥೆಯನ್ನು ಹೇಳಿದ್ದನು. ದೇವಾಲಯದ ಪ್ರಾಕಾರವನ್ನು ಪ್ರವೇಶಿಸುತ್ತಾ, ಈ ಮನುಷ್ಯನು ಪ್ರಾರ್ಥನೆ ಮಾಡುವ ಸಾಂಪ್ರದಾಯಿಕ ಸ್ಥಳಕ್ಕೆ ಬರಲು ಸಹ ತನ್ನನ್ನು ಅಯೋಗ್ಯನೆಂದೆಣಿಸಿದನು. [ಅವನು] “ದೂರದಲ್ಲಿ ನಿಂತು . . . ಎದೆಯನ್ನು ಬಡುಕೊಳ್ಳುತ್ತಾ—ದೇವರೇ, ಪಾಪಿಯಾದ ನನ್ನನ್ನು ಕರುಣಿಸು ಅಂದನು.” (ಲೂಕ 18:13) ಯೇಸುವಿನ ಪ್ರಕಾರ, ಈ ಮನುಷ್ಯನಿಗೆ ತಕ್ಕ ಉತ್ತರವು ಸಿಕ್ಕಿತು. ಯೆಹೋವ ದೇವರು ನಿಜವಾಗಿಯೂ ಕರುಣಾಮಯಿಯೂ ಯಥಾರ್ಥವಾಗಿ ಪಶ್ಚಾತ್ತಾಪಪಡುವ ಪಾಪಿಗಳಿಗೆ ಸಹಾಯನೀಡಲು ಬಯಸುವವನೂ ಆಗಿದ್ದಾನೆಂದು ಇದು ರುಜುಪಡಿಸುತ್ತದೆ.

ದಕ್ಷಿಣ ಆಫ್ರಿಕದಲ್ಲಿ ವಾಸಿಸುವ ಪೌಲನೆಂಬ ಹೆಸರಿನ ಒಬ್ಬ ಯುವ ಪುರುಷನ ಉದಾಹರಣೆಯನ್ನು ಗಮನಿಸಿರಿ. ಚಿಕ್ಕ ಹುಡುಗನಾಗಿರುವಾಗಲೇ, ಪೌಲನು ತನ್ನ ತಾಯಿಯೊಂದಿಗೆ ಕ್ರೈಸ್ತ ಕೂಟಗಳಿಗೆ ಹಾಜರಾಗುತ್ತಿದ್ದನು. ಆದರೆ ಅವನು ಹೈಸ್ಕೂಲಿನಲ್ಲಿ ಕಲಿಯುತ್ತಿದ್ದಾಗ, ದೇವರ ಮಾರ್ಗಗಳನ್ನು ಅನುಸರಿಸದ ಯುವ ಜನರೊಂದಿಗೆ ಸಹವಾಸವನ್ನು ಮಾಡತೊಡಗಿದನು. ಶಾಲಾ ಶಿಕ್ಷಣವನ್ನು ಮುಗಿಸಿದ ನಂತರ, ಅವನು ದಕ್ಷಿಣ ಆಫ್ರಿಕದ ಹಿಂದಿನ ವರ್ಣಭೇದ ನೀತಿಯ ಸರಕಾರದ ಸೈನ್ಯದಲ್ಲಿ ಸೇವೆ ಸಲ್ಲಿಸಿದನು. ಅನಂತರ ಅನಿರೀಕ್ಷಿತವಾಗಿ, ಅವನ ಪ್ರೇಯಸಿಯು ಅವರಿಬ್ಬರ ನಡುವೆ ಇದ್ದ ಸಂಬಂಧವನ್ನು ಮುರಿದುಬಿಟ್ಟಳು. ಈ ಅಸಂತೃಪ್ತ ಜೀವನ ಮಾರ್ಗವು ಪೌಲನನ್ನು ಬಹಳ ಖಿನ್ನನನ್ನಾಗಿಸಿತು. ಅವನು ಜ್ಞಾಪಿಸಿಕೊಳ್ಳುವುದು: “ಒಂದು ಸಂಜೆ, ನಾನು ಯೆಹೋವನಿಗೆ ಪ್ರಾರ್ಥಿಸಿದೆ ಮತ್ತು ವರ್ಷಗಳಿಂದಲೂ ದೇವರನ್ನು ಮನಃಪೂರ್ವಕವಾಗಿ ಸಮೀಪಿಸದಿದ್ದರೂ ಸಹ, ಆ ದಿನ ನಾನು ಆತನ ಸಹಾಯಕ್ಕಾಗಿ ಬೇಡಿಕೊಂಡೆ.”

ಈ ಪ್ರಾರ್ಥನೆಯನ್ನು ಮಾಡಿ ಬಹಳ ಸಮಯವಾಗಿರಲಿಲ್ಲ. ಅಷ್ಟರಲ್ಲಿ ಪೌಲನ ತಾಯಿಯು ಕ್ರಿಸ್ತನ ಮರಣದ ವಾರ್ಷಿಕ ಜ್ಞಾಪಕಾಚರಣೆಗೆ ಹಾಜರಾಗಲು ಅವನನ್ನು ಆಮಂತ್ರಿಸಿದಳು. (ಲೂಕ 22:19) ತಾಯಿಯು ಈ ರೀತಿ ತನ್ನನ್ನು ಆಮಂತ್ರಿಸಿದ್ದು ಪೌಲನಿಗೆ ವಿಚಿತ್ರವಾಗಿ ತೋರಿತು, ಯಾಕೆಂದರೆ ಅವನು ತಪ್ಪುದಾರಿಗೆ ಇಳಿದಿದ್ದನು ಮತ್ತು ಬೈಬಲಿನಲ್ಲಿ ಕಿಂಚಿತ್ತೂ ಆಸಕ್ತಿಯನ್ನು ತೋರಿಸುತ್ತಿರಲಿಲ್ಲ. “ಈ ಆಮಂತ್ರಣವು ನನ್ನ ಪ್ರಾರ್ಥನೆಗೆ ಯೆಹೋವನ ಉತ್ತರವಾಗಿ ಬಂದಿದೆ ಮತ್ತು ಅಲ್ಲಿಗೆ ಹೋಗಬೇಕೆಂದು ನನಗನಿಸಿತು.” ಆ ಸಮಯದಂದಿನಿಂದ, ಪೌಲನು ಎಲ್ಲ ಕ್ರೈಸ್ತ ಕೂಟಗಳಿಗೆ ಹಾಜರಾಗಲು ಆರಂಭಿಸಿದನು. ನಾಲ್ಕು ತಿಂಗಳುಗಳ ಕಾಲ ನಡೆದ ಬೈಬಲ್‌ ಅಭ್ಯಾಸದ ನಂತರ, ಅವನು ದೀಕ್ಷಾಸ್ನಾನಕ್ಕೆ ಅರ್ಹನಾದನು. ಅಷ್ಟೇ ಅಲ್ಲದೆ, ಅವನು ತನ್ನ ಇಂಜಿನಿಯರಿಂಗ್‌ ಶಿಕ್ಷಣವನ್ನು ನಿಲ್ಲಿಸಿದನು ಮತ್ತು ಪೂರ್ಣ ಸಮಯದ ಸೌವಾರ್ತಿಕ ಕೆಲಸದಲ್ಲಿ ಭಾಗವಹಿಸುವ ಆಯ್ಕೆಯನ್ನು ಮಾಡಿದನು. ಇಂದು, ಪೌಲನು ಒಬ್ಬ ಸಂತೋಷಿತ ವ್ಯಕ್ತಿಯಾಗಿದ್ದಾನೆ, ತನ್ನ ಹಿಂದಿನ ಜೀವನದ ಕುರಿತು ಅವನಿಗೆ ಯಾವುದೇ ಬೇಸರವಿಲ್ಲ. ಕಳೆದ 11 ವರ್ಷಗಳಿಂದಲೂ, ಅವನು ದಕ್ಷಿಣ ಆಫ್ರಿಕದ ವಾಚ್‌ ಟವರ್‌ ಸೊಸೈಟಿಯ ಬ್ರಾಂಚ್‌ ಆಫೀಸಿನಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ.

ನಿಜ, ಯೆಹೋವನು ಪ್ರಾರ್ಥನೆಗಳಿಗೆ ದಯೆಯಿಂದ ಉತ್ತರ ಕೊಡುತ್ತಾನೆ ಮತ್ತು “ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ.” (ಇಬ್ರಿಯ 11:6) ಬೇಗನೇ ಯೆಹೋವನ ಮಹಾ ದಿನವು ಎಲ್ಲ ದುಷ್ಟತನಕ್ಕೆ ಅಂತ್ಯವನ್ನು ತರಲಿರುವುದು. ಈ ಮಧ್ಯೆ, ಸಾಕ್ಷಿಕಾರ್ಯದ ಪ್ರಮುಖ ಕೆಲಸದಲ್ಲಿ ದೇವರ ಜನರು ಹುರುಪಿನಿಂದ ಮುಂದುವರಿಯುತ್ತಿದ್ದಂತೆ, ಬಲಕ್ಕಾಗಿ ಮತ್ತು ಮಾರ್ಗದರ್ಶನಕ್ಕಾಗಿ ಅವರು ಮಾಡುವ ಪ್ರಾರ್ಥನೆಗಳನ್ನು ಆತನು ಉತ್ತರಿಸುತ್ತಿದ್ದಾನೆ. ಹೀಗೆ ಎಲ್ಲಾ ಜನಾಂಗಗಳಿಂದಲೂ ಲಕ್ಷಾಂತರ ಜನರು ಕ್ರೈಸ್ತ ಸಭೆಯ ಸಹವಾಸದೊಳಗೆ ತರಲ್ಪಡುತ್ತಿದ್ದಾರೆ ಮತ್ತು ನಿತ್ಯ ಜೀವಕ್ಕೆ ನಡೆಸುವ ಬೈಬಲ್‌ ಜ್ಞಾನದಿಂದ ಆಶೀರ್ವದಿಸಲ್ಪಡುತ್ತಿದ್ದಾರೆ.—ಯೋಹಾನ 17:3.

[ಪುಟ 5ರಲ್ಲಿರುವ ಚಿತ್ರ]

ಕೊರ್ನೇಲ್ಯನ ಮನಃಪೂರ್ವಕ ಪ್ರಾರ್ಥನೆಯು, ಅಪೊಸ್ತಲ ಪೇತ್ರನಿಂದ ಅವನಿಗೆ ಭೇಟಿಯು ದೊರಕುವಂತೆ ನಡಿಸಿತು

[ಪುಟ 6ರಲ್ಲಿರುವ ಚಿತ್ರಗಳು]

ಪ್ರಾರ್ಥನೆಯು ಅನೇಕರಿಗೆ ಸಂಕಷ್ಟಗಳ ಸಮಯದಲ್ಲಿ ಸಹಾಯಮಾಡಿದೆ

[ಪುಟ 7ರಲ್ಲಿರುವ ಚಿತ್ರಗಳು]

ಬೈಬಲನ್ನು ಅರ್ಥಮಾಡಿಕೊಳ್ಳಲು ಸಹಾಯಕ್ಕಾಗಿ ಪ್ರಾರ್ಥನೆ ಮಾಡುವುದು ಒಳ್ಳೇದು

ವಿವಾಹಿತ ದಂಪತಿಗಳು ತಮ್ಮ ಮದುವೆಯನ್ನು ಬಲಪಡಿಸಿಕೊಳ್ಳಲು ಸಹಾಯಕ್ಕಾಗಿ ಪ್ರಾರ್ಥನೆಯನ್ನು ಮಾಡಬಹುದು