ಪ್ರಾರ್ಥನೆಗಿರುವ ಬಲ
ಪ್ರಾರ್ಥನೆಗಿರುವ ಬಲ
ನಾಹೋರನು ವಾಸಿಸುತ್ತಿದ್ದ ಮಧ್ಯಪೂರ್ವದ ಊರಿನಲ್ಲಿ ಸೂರ್ಯನು ಅಸ್ತಮಿಸುತ್ತಿದ್ದಾನೆ. ಆಗ ಸಿರಿಯದ ಎಲೀಯೆಜರನೆಂಬ ಪುರುಷನು ಹತ್ತು ಒಂಟೆಗಳ ಸಾಲುಗಳ ಸಮೇತ ಆ ಊರಿನ ಹೊರಗಿರುವ ಬಾವಿಯ ಬಳಿ ಬರುತ್ತಾನೆ. ಅವನು ನಿಜವಾಗಿಯೂ ದಣಿದು ಬಾಯಾರಿದ್ದನು. ಆದರೂ, ಎಲೀಯೆಜರನು ಇತರರ ಅಗತ್ಯಗಳ ಕುರಿತು ಹೆಚ್ಚು ಚಿಂತಿತನಾಗಿದ್ದಾನೆ. ತನ್ನ ಧಣಿಯ ಮಗನಿಗೆ ಒಂದು ಹೆಣ್ಣನ್ನು ಹುಡುಕಲು ಅವನು ಪರದೇಶದಿಂದ ಬಂದಿದ್ದಾನೆ. ಅದೂ ಅಲ್ಲದೆ, ಆ ಹೆಣ್ಣನ್ನು ತನ್ನ ಧಣಿಯ ಬಂಧುಗಳಲ್ಲೇ ಅವನು ಹುಡುಕಬೇಕಿತ್ತು. ಈ ಕಷ್ಟದ ಕೆಲಸವನ್ನು ಅವನು ಹೇಗೆ ಪೂರೈಸಲಿದ್ದನು?
ಪ್ರಾರ್ಥನೆಗಿರುವ ಬಲದಲ್ಲಿ ಎಲೀಯೆಜರನಿಗೆ ನಂಬಿಕೆಯಿದೆ. ಅವನು ಗಮನಾರ್ಹವಾದ ರೀತಿಯಲ್ಲಿ, ಮಗುವಿನಂಥ ನಂಬಿಕೆಯಿಂದ, ಈ ದೀನ ವಿನಂತಿಯನ್ನು ಮಾಡುತ್ತಾನೆ: “ನನ್ನ ದಣಿಯಾದ ಅಬ್ರಹಾಮನ ದೇವರಾಗಿರುವ ಯೆಹೋವನೇ, ಈ ಹೊತ್ತು ನಾನು ಬಂದ ಕಾರ್ಯವನ್ನು ನೀನು ಅನುಕೂಲಪಡಿಸಿ ನನ್ನ ದಣಿಯಾದ ಅಬ್ರಹಾಮನಿಗೆ ಉಪಕಾರಮಾಡಬೇಕೆಂದು ಬೇಡುತ್ತೇನೆ. ಇಗೋ, ನೀರಿನ ಬುಗ್ಗೆಯ ಬಳಿಯಲ್ಲಿ ನಿಂತಿದ್ದೇನೆ; ಈ ಊರಿನ ಹೆಣ್ಣುಮಕ್ಕಳು ನೀರಿಗೆ ಬರುತ್ತಾರೆ. ನಾನು ಯಾವ ಹುಡುಗಿಗೆ—ನೀನು ದಯವಿಟ್ಟು ನಿನ್ನ ಕೊಡವನ್ನು ಇಳಿಸಿ ನನಗೆ ಕುಡಿಯುವದಕ್ಕೆ ಕೊಡು ಎಂದು ಹೇಳುವಾಗ—ನೀನು ಕುಡಿಯಬಹುದು, ಮತ್ತು ನಿನ್ನ ಒಂಟೆಗಳಿಗೂ ನೀರುಕೊಡುತ್ತೇನೆ ಅನ್ನುವಳೋ, ಅವಳೇ ನಿನ್ನ ದಾಸನಾದ ಇಸಾಕನಿಗೆ ನೀನು ನೇಮಿಸಿರುವ ಕನ್ಯೆಯಾಗಲಿ. ನನ್ನ ದಣಿಯ ಮೇಲೆ ನಿನ್ನ ದಯವದೆ ಎಂದು ಇದರಿಂದ ನನಗೆ ಗೊತ್ತಾಗುವದು.”—ಆದಿಕಾಂಡ 24:12-14.
ಪ್ರಾರ್ಥನೆಗಿರುವ ಬಲದಲ್ಲಿ ಎಲೀಯೆಜರನಿಗಿದ್ದ ಭರವಸೆಯು ವ್ಯರ್ಥವಾಗಿ ಹೋಗಲಿಲ್ಲ. ಏಕೆಂದರೆ, ಬಾವಿಯ ಬಳಿ ಬರುವ ಮೊದಲ ಹೆಣ್ಣೇ ಅಬ್ರಹಾಮನ ತಮ್ಮನ ಮೊಮ್ಮಗಳಾಗಿದ್ದಳು! ಅವಳ ಹೆಸರು ರೆಬೆಕ್ಕ ಎಂದಾಗಿತ್ತು ಮತ್ತು ಅವಳು ಅವಿವಾಹಿತಳಾಗಿದ್ದಳು ಮಾತ್ರವಲ್ಲ, ಸುಶೀಲೆಯೂ ಸುಂದರಿಯೂ ಆಗಿದ್ದಳು. ಅವಳು ಎಲೀಯೆಜರನಿಗೆ ಮಾತ್ರವಲ್ಲ, ಅವನ ಎಲ್ಲ ಒಂಟೆಗಳ ಬಾಯಾರಿಕೆಯನ್ನು ತಣಿಸಲು ದಯಾಪೂರ್ಣಳಾಗಿ ನೀರನ್ನು ಕೊಟ್ಟದ್ದು ಅಸಾಧಾರಣವಾದ ಕೃತ್ಯವಾಗಿತ್ತು. ತದನಂತರ, ಅವಳ ಕುಟುಂಬದವರೊಂದಿಗೆ ಮಾತುಕತೆಯಾದ ಬಳಿಕ, ರೆಬೆಕ್ಕಳು ಅಬ್ರಹಾಮನ ಮಗನಾದ ಇಸಾಕನ ಹೆಂಡತಿಯಾಗಲು ದೂರದ ದೇಶಕ್ಕೆ ಎಲೀಯೆಜರನೊಂದಿಗೆ ಹೋಗಲು ಸ್ವಇಚ್ಛೆಯಿಂದ ಒಪ್ಪಿಕೊಳ್ಳುತ್ತಾಳೆ. ದೇವರು ಒಮ್ಮೊಮ್ಮೆ ಅದ್ಭುತಕರವಾಗಿ ವಿಶೇಷ ಘಟನೆಗಳಲ್ಲಿ ಕೈಹಾಕುತ್ತಿದ್ದ ಆ ಸಮಯದಲ್ಲಿ ಇದು ಎಲೀಯೆಜರನ ಪ್ರಾರ್ಥನೆಗೆ ಎಂತಹ ಮನಮುಟ್ಟುವ ಮತ್ತು ಸ್ಪಷ್ಟವಾದ ಉತ್ತರವಾಗಿತ್ತು!
ಎಲೀಯೆಜರನ ಪ್ರಾರ್ಥನೆಯಿಂದ ನಾವು ಬಹಳಷ್ಟನ್ನು ಕಲಿತುಕೊಳ್ಳಬಲ್ಲೆವು. ಅದು ಅವನ ಆದರ್ಶ ನಂಬಿಕೆ, ದೀನತೆ ಮತ್ತು ಇತರರ ಅಗತ್ಯಗಳ ಕಡೆಗೆ ನಿಸ್ವಾರ್ಥವಾದ ಚಿಂತೆಯನ್ನು ತೋರಿಸಿತು. ಎಲೀಯೆಜರನ ಪ್ರಾರ್ಥನೆಯು ಮಾನವಕುಲದೊಂದಿಗೆ ವ್ಯವಹರಿಸುವ ಯೆಹೋವನ ಮಾರ್ಗಕ್ಕೆ ಅವನ ಅಧೀನತೆಯನ್ನು ಸಹ ತೋರಿಸಿತು. ಅಬ್ರಹಾಮನೊಂದಿಗೆ ದೇವರಿಗಿದ್ದ ವಿಶೇಷ ಒಲವಿನ ಕುರಿತು ಮಾತ್ರವಲ್ಲ, ಅಬ್ರಹಾಮನ ವಂಶದ ಮೂಲಕ ಇಡೀ ಮಾನವಕುಲಕ್ಕೆ ಭವಿಷ್ಯತ್ತಿನಲ್ಲಿ ಸಿಗಲಿರುವ ಆಶೀರ್ವಾದಗಳ ಕುರಿತ ದೇವರ ವಾಗ್ದಾನವು ಸಹ ಅವನಿಗೆ ತಿಳಿದಿತ್ತೆಂಬುದರಲ್ಲಿ ಯಾವುದೇ ಸಂದೇಹವಿಲ್ಲ. (ಆದಿಕಾಂಡ 12:3) ಆದುದರಿಂದಲೇ, ಎಲೀಯೆಜರನು ತನ್ನ ಪ್ರಾರ್ಥನೆಯನ್ನು, “ನನ್ನ ದಣಿಯಾದ ಅಬ್ರಹಾಮನ ದೇವರಾಗಿರುವ ಯೆಹೋವನೇ” ಎಂಬ ಮಾತುಗಳೊಂದಿಗೆ ಆರಂಭಿಸಿದನು.
ಸಕಲ ವಿಧೇಯ ಮಾನವಕುಲದ ಆಶೀರ್ವಾದಕ್ಕೆ ಕಾರಣನಾಗಿರುವ ಯೇಸು ಕ್ರಿಸ್ತನು ಅಬ್ರಹಾಮನ ವಂಶದವನಾಗಿದ್ದನು. (ಆದಿಕಾಂಡ 22:18) ಇಂದು ನಮ್ಮ ಪ್ರಾರ್ಥನೆಗಳು ದೇವರಿಂದ ಉತ್ತರಿಸಲ್ಪಡಬೇಕಾದರೆ, ತನ್ನ ಮಗನ ಮೂಲಕವಾಗಿ ಮಾನವಕುಲದೊಂದಿಗೆ ವ್ಯವಹರಿಸುವ ದೇವರ ಮಾರ್ಗವನ್ನು ನಾವು ದೀನತೆಯಿಂದ ಅಂಗೀಕರಿಸುವ ಆವಶ್ಯಕತೆ ಇದೆ. ಯೇಸು ಕ್ರಿಸ್ತನು ಹೇಳಿದ್ದು: “ನೀವು ನನ್ನಲ್ಲಿಯೂ ನನ್ನ ವಾಕ್ಯಗಳು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ಏನು ಬೇಕಾದರೂ ಬೇಡಿಕೊಳ್ಳಿರಿ, ಅದು ನಿಮಗೆ ದೊರೆಯುವದು.”—ಯೋಹಾನ 15:7.
ಯೇಸುವಿನ ಈ ಮಾತುಗಳ ಸತ್ಯತೆಯನ್ನು ಕ್ರಿಸ್ತನ ಹಿಂಬಾಲಕರಲ್ಲಿ ಒಬ್ಬನಾಗಿದ್ದ ಅಪೊಸ್ತಲ ಪೌಲನು ಅನುಭವಿಸಿದ್ದನು. ಪ್ರಾರ್ಥನೆಗಿರುವ ಬಲದಲ್ಲಿ ಅವನಿಗಿದ್ದ ನಂಬಿಕೆಯು ನಿಶ್ಚಯವಾಗಿಯೂ ವ್ಯರ್ಥವಾಗಿ ಹೋಗಲಿಲ್ಲ. ಅವನು ತನ್ನ ಜೊತೆ ಕ್ರೈಸ್ತರಿಗೆ, ತಮ್ಮ ಎಲ್ಲ ಚಿಂತೆಗಳನ್ನು ಪ್ರಾರ್ಥನೆಯ ಮೂಲಕ ದೇವರ ಬಳಿ ಕೊಂಡೊಯ್ಯುವಂತೆ ಉತ್ತೇಜಿಸುತ್ತಾನೆ ಮತ್ತು ಅದನ್ನು ಈ ಕೆಳಗಿನ ಮಾತುಗಳಿಂದ ದೃಢೀಕರಿಸುತ್ತಾನೆ: “ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ.” (ಫಿಲಿಪ್ಪಿ 4:6, 7, 13) ಪೌಲನು ದೇವರಿಗೆ ಮಾಡಿದ ಎಲ್ಲ ಪ್ರಾರ್ಥನಾಪೂರ್ವಕ ವಿನಂತಿಗಳು ಉತ್ತರಿಸಲ್ಪಟ್ಟವೆಂಬುದು ಇದರ ಅರ್ಥವೋ? ನಾವದನ್ನು ನೋಡೋಣ.
ಎಲ್ಲ ವಿನಂತಿಗಳಿಗೆ ಉತ್ತರವು ಕೊಡಲ್ಪಡುವುದಿಲ್ಲ
ಪೌಲನು ತನ್ನ ನಿಸ್ವಾರ್ಥ ಶುಶ್ರೂಷೆಯಲ್ಲಿ ಯಾವುದನ್ನು ‘ಶರೀರದಲ್ಲಿ ನಾಟಿಕೊಂಡಿದ್ದ ಒಂದು ಶೂಲ’ವೆಂದು ವರ್ಣಿಸಿದನೋ ಅದರಿಂದ ಕಷ್ಟವನ್ನು ಅನುಭವಿಸಿದನು. (2 ಕೊರಿಂಥ 12:7) ಇದು ವಿರೋಧಿಗಳಿಂದ ಮತ್ತು ‘ಸುಳ್ಳು ಸಹೋದರರಿಂದ’ ಉಂಟಾದ ಮಾನಸಿಕ ಮತ್ತು ಭಾವನಾತ್ಮಕ ನೋವಾಗಿದ್ದಿರಬಹುದು. (2 ಕೊರಿಂಥ 11:26; ಗಲಾತ್ಯ 2:4) ಅಥವಾ ದೀರ್ಘಕಾಲದ ಕಣ್ಣಿನ ಬಾಧೆಯಿಂದಾದ ಶಾರೀರಿಕ ತೊಂದರೆಯಾಗಿದ್ದಿರಬಹುದು. (ಗಲಾತ್ಯ 4:15) ವಿಷಯವು ಏನೇ ಆಗಿರಲಿ, ಈ ‘ಶರೀರದಲ್ಲಿ ನಾಟಿಕೊಂಡಿದ್ದ ಒಂದು ಶೂಲವು’ ಪೌಲನನ್ನು ಬಲಹೀನಗೊಳಿಸುವಷ್ಟು ಪ್ರಭಾವವನ್ನು ಬೀರಿತ್ತು. ಅವನು ಬರೆದುದು: ‘ಈ ಪೀಡೆಯು ನನ್ನನ್ನು ಬಿಟ್ಟುಹೋಗಬೇಕೆಂದು ಮೂರು ಸಾರಿ ಕರ್ತನನ್ನು ಬೇಡಿಕೊಂಡೆನು.’ ಹೀಗಿದ್ದರೂ, ಪೌಲನ ವಿನಂತಿಗೆ ಉತ್ತರವು ಕೊಡಲ್ಪಡಲಿಲ್ಲ. ದೇವರಿಂದ ಈಗಾಗಲೇ ಪಡೆದುಕೊಂಡಿದ್ದ ಆತ್ಮಿಕ ಪ್ರಯೋಜನಗಳು ಅಂದರೆ, ಸಂಕಷ್ಟಗಳನ್ನು ಸಹಿಸಿಕೊಳ್ಳುವ ಬಲವೇ ಪೌಲನಿಗೆ ಸಾಕಾಗಿದೆ ಎಂಬುದಾಗಿ ಅವನಿಗೆ ವಿವರಿಸಲಾಗಿತ್ತು. ಇದರೊಂದಿಗೆ, ದೇವರು ಹೇಳಿದ್ದು: “ಬಲಹೀನತೆಯಲ್ಲಿಯೇ ಬಲವು ಪೂರ್ಣಸಾಧಕವಾಗುತ್ತದೆ.”—2 ಕೊರಿಂಥ 12:8, 9.
ಎಲೀಯೆಜರ ಮತ್ತು ಪೌಲನ ಉದಾಹರಣೆಗಳಿಂದ ನಾವು ಏನನ್ನು ಕಲಿತುಕೊಳ್ಳುತ್ತೇವೆ? ತನ್ನನ್ನು ಸೇವಿಸುವುದಕ್ಕಾಗಿ ದೀನತೆಯಿಂದ ಹುಡುಕುವವರ ಪ್ರಾರ್ಥನೆಗಳನ್ನು ಯೆಹೋವ ದೇವರು ನಿಶ್ಚಯವಾಗಿಯೂ ಆಲಿಸುತ್ತಾನೆ. ಆದರೆ ಇದರ ಅರ್ಥ, ಆತನು ಯಾವಾಗಲೂ ಅವರ ವಿನಂತಿಗಳನ್ನು ದಯಪಾಲಿಸುತ್ತಾನೆಂದಲ್ಲ, ಯಾಕೆಂದರೆ ವಿಷಯಗಳು ದೀರ್ಘಕಾಲದಲ್ಲಿ ಹೇಗೆ ಬಾಧಿಸುವವೆಂಬ ವೀಕ್ಷಣೆಯು ದೇವರಿಗಿರುತ್ತದೆ. ನಮ್ಮ ಹಿತಾಸಕ್ತಿಯನ್ನು ಮನಸ್ಸಿನಲ್ಲಿಟ್ಟುಕೊಂಡವನಾಗಿ ಯಾವುದು ಒಳ್ಳೇ ಫಲಿತಾಂಶಗಳನ್ನು ತರುವುದೆಂಬುದನ್ನು ನಮಗಿಂತ ಹೆಚ್ಚು ಉತ್ತಮವಾಗಿ ಆತನಿಗೆ ತಿಳಿದಿದೆ. ಹೆಚ್ಚು ಪ್ರಾಮುಖ್ಯವಾಗಿ, ಆತನು ಯಾವಾಗಲೂ ಬೈಬಲಿನಲ್ಲಿ ದಾಖಲಾದ ಆತನ ಪ್ರಕಟಿತ ಉದ್ದೇಶಕ್ಕೆ ಹೊಂದಿಕೆಯಲ್ಲಿ ಕ್ರಿಯೆಗೈಯುತ್ತಾನೆ.
ಆತ್ಮಿಕವಾಗಿ ಗುಣಪಡಿಸುವ ಒಂದು ಸಮಯ
ಭೂಮಿಯ ಮೇಲೆ ದೇವರ ಮಗನು ತನ್ನ ಸಾವಿರ ವರ್ಷದ ಆಳ್ವಿಕೆಯ ಅವಧಿಯಲ್ಲಿ, ಎಲ್ಲಾ ರೀತಿಯ ಶಾರೀರಿಕ, ಮಾನಸಿಕ ಮತ್ತು ಭಾವನಾತ್ಮಕ ಬೇನೆಗಳಿಂದ ಮಾನವಕುಲವನ್ನು ಗುಣಪಡಿಸುವನೆಂದು ದೇವರು ಭರವಸೆಯನ್ನೀಡಿದ್ದಾನೆ. (ಪ್ರಕಟನೆ 20:1-3; 21:3-5) ಇದನ್ನೆಲ್ಲಾ ಒಂದು ವಾಸ್ತವಿಕ ಸಂಗತಿಯಾಗಿ ಮಾಡಸಾಧ್ಯವಿರುವ ದೇವರ ಬಲದಲ್ಲಿ ಪೂರ್ಣ ನಂಬಿಕೆಯುಳ್ಳವರಾಗಿ ಪ್ರಾಮಾಣಿಕ ಕ್ರೈಸ್ತರು ಈ ವಾಗ್ದಾನಿತ ಭವಿಷ್ಯತ್ತಿಗಾಗಿ ತವಕದಿಂದ ಕಾಯುತ್ತಾರೆ. ಅದ್ಭುತಕರವಾದ ರೀತಿಯಲ್ಲಿ ವಾಸಿಯಾಗುವುದನ್ನು ಅವರು ನಿರೀಕ್ಷಿಸುವುದಿಲ್ಲವಾದರೂ, ಸಂಕಷ್ಟಗಳನ್ನು ನಿಭಾಯಿಸುವುದಕ್ಕಾಗಿ ಸಾಂತ್ವನ ಮತ್ತು ಬಲಕ್ಕಾಗಿ ಅವರು ದೇವರಲ್ಲಿ ಪ್ರಾರ್ಥಿಸುತ್ತಾರೆ. (ಕೀರ್ತನೆ 55:22) ಅವರು ಅಸ್ವಸ್ಥರಾಗುವಾಗ, ತಮ್ಮ ಆರ್ಥಿಕ ಸಾಮರ್ಥ್ಯದೊಳಗೆ ಲಭ್ಯವಿರುವ ಅತ್ಯುತ್ತಮ ವೈದ್ಯಕೀಯ ಆರೈಕೆಯನ್ನು ಪಡೆದುಕೊಳ್ಳಲು ಸಾಧ್ಯವಾಗುವಂತೆ ಸಹ ದೇವರ ಮಾರ್ಗದರ್ಶನೆಗಾಗಿ ಪ್ರಾರ್ಥಿಸಬಹುದು.
ಯೇಸು ಮತ್ತು ಅವನ ಅಪೊಸ್ತಲರು ಮಾಡಿದ ಅದ್ಭುತಕರವಾದ ಗುಣಪಡಿಸುವಿಕೆಯನ್ನು ಸೂಚಿಸುತ್ತಾ, ಇಂದು ತಮ್ಮ ಕಾಯಿಲೆಗಳು ಅದೇ ರೀತಿಯಲ್ಲಿ ಗುಣವಾಗಲು ಪ್ರಾರ್ಥಿಸುವಂತೆ ಕೆಲವು ಧರ್ಮಗಳು ಜನರನ್ನು ಪ್ರೇರಿಸುತ್ತವೆ. ಆದರೆ ಅಂತಹ ಅದ್ಭುತಗಳು ಒಂದು ವಿಶೇಷ ಉದ್ದೇಶಕ್ಕಾಗಿ ಮಾಡಲ್ಪಟ್ಟಿದ್ದವು. ಯೇಸು ಕ್ರಿಸ್ತನು ನಿಜವಾದ ಮೆಸ್ಸೀಯನೆಂದು ಮತ್ತು ದೇವರ ಅನುಗ್ರಹವು ಯೆಹೂದಿ ಜನಾಂಗದಿಂದ ಆಗ ತಾನೆ ಬೆಳೆಯುತ್ತಿದ್ದ ಕ್ರೈಸ್ತ ಸಭೆಗೆ ಸ್ಥಾನಾಂತರಿಸಲ್ಪಟ್ಟಿತ್ತೆಂಬ ರುಜುವಾತನ್ನು ಆ ಅದ್ಭುತಗಳು ಕೊಟ್ಟವು. ಆ ಸಮಯದಲ್ಲಿ, ಹೊಸದಾಗಿ ಸ್ಥಾಪಿಸಲ್ಪಟ್ಟಿರುವ ಕ್ರೈಸ್ತ ಸಭೆಯ ನಂಬಿಕೆಯನ್ನು ಬಲಪಡಿಸಲು ಅದ್ಭುತಕರವಾದ ವರಗಳು ಬೇಕಾಗಿದ್ದವು. ಶಿಶುವಿನಂತಿದ್ದ ಕ್ರೈಸ್ತ ಸಭೆಯು ದೃಢವಾದ ಸ್ಥಿತಿಯಲ್ಲಿದೆಯೋ ಎಂಬಂತ್ತಿತ್ತು ಮತ್ತು ನಂತರ ಬಲಿತ ಸಭೆಯಾಯಿತು, ಆಗಲೇ ಈ ಅದ್ಭುತಕರವಾದ ವರಗಳು “ನಿಂತು”ಹೋದವು.—1 ಕೊರಿಂಥ 13:8, 11.
ಇಂಥ ಒಂದು ನಿರ್ಣಾಯಕ ಸಮಯದಲ್ಲಿ, ಆತ್ಮಿಕ ಗುಣಪಡಿಸುವಿಕೆಯ ಅತಿ ಪ್ರಾಮುಖ್ಯ ಕೆಲಸದಲ್ಲಿ ಯೆಹೋವ ದೇವರು ತನ್ನ ಆರಾಧಕರನ್ನು ಮಾರ್ಗದರ್ಶಿಸುತ್ತಿದ್ದಾನೆ. ಜನರಿಗೆ ಇನ್ನೂ ಸಮಯವಿರುವಾಗಲೇ, ಅವರು ತುರ್ತಾಗಿ ಈ ಮನವಿಗೆ ಪ್ರತಿಕ್ರಿಯಿಸಬೇಕು: “ಯೆಹೋವನು ಸಿಕ್ಕುವ ಕಾಲದಲ್ಲಿ ಆತನನ್ನು ಆಶ್ರಯಿಸಿರಿ, ಆತನು ಸಮೀಪದಲ್ಲಿರುವಾಗ ಆತನಿಗೆ ಬಿನ್ನಹಮಾಡಿರಿ. ದುಷ್ಟನು ತನ್ನ ದುರ್ಮಾರ್ಗವನ್ನು ಬಿಡಲಿ, ಕೆಡುಕನು ತನ್ನ ದುರಾಲೋಚನೆಗಳನ್ನು ತ್ಯಜಿಸಲಿ; ಯೆಹೋವನ ಕಡೆಗೆ ತಿರುಗಿಕೊಂಡು ಬರಲಿ, ಆತನು ಅವನನ್ನು ಕರುಣಿಸುವನು; ನಮ್ಮ ದೇವರನ್ನು ಆಶ್ರಯಿಸಲಿ, ಆತನು ಮಹಾಕೃಪೆಯಿಂದ ಕ್ಷಮಿಸುವನು.”—ಯೆಶಾಯ 55:6, 7.
ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ಮೂಲಕ ಪಶ್ಚಾತ್ತಾಪಪಡುವ ಪಾಪಿಗಳ ಈ ಆತ್ಮಿಕ ಗುಣಪಡಿಸುವಿಕೆಯು ನೆರವೇರಿಸಲ್ಪಡುತ್ತಿದೆ. (ಮತ್ತಾಯ 24:14) ಈ ಜೀವಸಂರಕ್ಷಕ ಕೆಲಸವನ್ನು ಮುಂದುವರಿಸಿಕೊಂಡು ಹೋಗಲು ತನ್ನ ಸೇವಕರನ್ನು ಬಲಗೊಳಿಸುವ ಮೂಲಕ, ಯೆಹೋವನು ಎಲ್ಲಾ ಜನಾಂಗಗಳಿಂದ ಬರುತ್ತಿರುವ ಲಕ್ಷಾಂತರ ಜನರು ತಮ್ಮ ಪಾಪಗಳಿಗೆ ಪಶ್ಚಾತ್ತಾಪಪಡುವಂತೆ ಮತ್ತು ಈ ದುಷ್ಟ ವಿಷಯ ವ್ಯವಸ್ಥೆಯ ಅಂತ್ಯವು ಬರುವ ಮುಂಚೆ ಆತನೊಂದಿಗೆ ಅನುಗ್ರಹದ ಸಂಬಂಧದೊಳಗೆ ಬರುವಂತೆ ಸಹಾಯಮಾಡುತ್ತಿದ್ದಾನೆ. ಇಂತಹ ಆತ್ಮಿಕ ಗುಣಪಡಿಸುವಿಕೆಗಾಗಿ ಮತ್ತು ಈ ಗುಣಪಡಿಸುವಿಕೆಯ ಕೆಲಸವನ್ನು ಮಾಡಲು ಸಹಾಯಕ್ಕಾಗಿ ಯಥಾರ್ಥವಾಗಿ ಪ್ರಾರ್ಥಿಸುವವರೆಲ್ಲರ ಪ್ರಾರ್ಥನೆಗಳು ಖಂಡಿತವಾಗಿಯೂ ಉತ್ತರಿಸಲ್ಪಡುತ್ತವೆ.
[ಪುಟ 3ರಲ್ಲಿರುವ ಚಿತ್ರ ಕೃಪೆ]
ಎಲಿಯೆಜರ್ ಮತ್ತು ರೆಬೆಕ್ಕ/The Doré Bible Illustrations/Dover Publications