ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಓ ದೇವರೇ, ನಿನ್ನ ಬೆಳಕನ್ನು ಕಳುಹಿಸು’

‘ಓ ದೇವರೇ, ನಿನ್ನ ಬೆಳಕನ್ನು ಕಳುಹಿಸು’

‘ಓ ದೇವರೇ, ನಿನ್ನ ಬೆಳಕನ್ನು ಕಳುಹಿಸು’

“ನಿನ್ನ ಸತ್ಯವನ್ನು ಮತ್ತು ನಿನ್ನ ಬೆಳಕನ್ನು ಕಳುಹಿಸು. ಅವೇ ನನ್ನನ್ನು ನಡೆಸಲಿ.”—ಕೀರ್ತನೆ 43:3, NW.

1. ಯೆಹೋವನು ತನ್ನ ಉದ್ದೇಶಗಳನ್ನು ಹೇಗೆ ಪ್ರಕಟಪಡಿಸುತ್ತಾನೆ?

ಯೆಹೋವನು ತನ್ನ ಸೇವಕರಿಗೆ ತನ್ನ ಉದ್ದೇಶಗಳ ಕುರಿತು ತಿಳಿಯಪಡಿಸುವ ರೀತಿಯ ಕುರಿತು ಬಹಳ ಜಾಗ್ರತೆವಹಿಸುತ್ತಾನೆ. ಪ್ರಕಾಶಮಾನವಾದ ಬೆಳಕು ಒಮ್ಮಿಂದೊಮ್ಮೆಲೆ ನಮ್ಮ ಮೇಲೆ ಹಾಯಿಸಲ್ಪಟ್ಟಾಗ ಅದು ನಮ್ಮ ಕಣ್ಣನ್ನು ಕುರುಡಾಗಿಸುವುದರಿಂದ ಆತನು ಸತ್ಯದ ಎಲ್ಲ ಅಂಶಗಳನ್ನು ಒಮ್ಮೆಲೆ ಪ್ರಕಟಪಡಿಸುವುದಿಲ್ಲ. ಅದಕ್ಕೆ ಬದಲಾಗಿ ಆತನು ಸತ್ಯದ ಬೆಳಕನ್ನು ಪ್ರಗತಿಪರವಾಗಿ ಪ್ರಕಾಶಿಸುತ್ತಾನೆ. ಜೀವಕ್ಕೆ ನಡೆಸುವ ಹಾದಿಯಲ್ಲಿನ ನಮ್ಮ ಪ್ರಯಾಣವನ್ನು ದೀರ್ಘಸಂಚಾರ ಮಾಡುವ ಪಾದಯಾತ್ರಿಗೆ ಹೋಲಿಸಬಹುದು. ಅವನು ನಸುಕಿನಲ್ಲೇ ಹೊರಡುತ್ತಾನೆ, ಆಗ ಎಲ್ಲವೂ ಅಸ್ಪಷ್ಟವಾಗಿ ಕಾಣುತ್ತಿರುತ್ತದೆ. ಸೂರ್ಯನು ಮೆಲ್ಲನೇ ಮೇಲೇರುತ್ತಾ ಹೋದಂತೆ, ಪಾದಯಾತ್ರಿಯು ತನ್ನ ಸುತ್ತಮುತ್ತಲಿರುವ ಕೆಲವು ರೂಪಗಳನ್ನು ಕಾಣಶಕ್ತನಾಗುತ್ತಾನೆ. ಉಳಿದದ್ದೆಲ್ಲವೂ ಅವನಿಗೆ ಮೊಬ್ಬಾಗಿ ಕಾಣುತ್ತದೆ. ಆದರೆ ಸೂರ್ಯನು ಇನ್ನೂ ಮೇಲೇರುತ್ತಾ ಹೋದಂತೆ ಅವನು ಬಹುದೂರದ ವರೆಗೂ ಕಾಣಶಕ್ತನಾಗುತ್ತಾನೆ. ದೇವರು ಒದಗಿಸುವ ಆತ್ಮಿಕ ಬೆಳಕು ಸಹ ಇದೇ ರೀತಿಯದ್ದಾಗಿದೆ. ಒಂದು ಸಮಯಕ್ಕೆ ಕೆಲವು ವಿಷಯಗಳನ್ನು ಮಾತ್ರವೇ ನಾವು ವಿವೇಚಿಸುವಂತೆ ಆತನು ಅನುಮತಿಸುತ್ತಾನೆ. ದೇವರ ಮಗನಾದ ಯೇಸು ಕ್ರಿಸ್ತನು ಸಹ ತದ್ರೀತಿಯಲ್ಲಿಯೇ ಆತ್ಮಿಕ ಜ್ಞಾನೋದಯವನ್ನು ಒದಗಿಸಿದನು. ಯೆಹೋವನು ಪ್ರಾಚೀನ ಸಮಯದಲ್ಲಿ ತನ್ನ ಜನರಿಗೆ ಹೇಗೆ ಜ್ಞಾನೋದಯವನ್ನು ನೀಡಿದನು ಮತ್ತು ಆತನು ಅದನ್ನು ಇಂದು ಹೇಗೆ ನೀಡುತ್ತಿದ್ದಾನೆ ಎಂಬುದನ್ನು ನಾವು ಈಗ ಪರಿಗಣಿಸೋಣ.

2. ಕ್ರೈಸ್ತಪೂರ್ವ ಸಮಯಗಳಲ್ಲಿ ಯೆಹೋವನು ಜ್ಞಾನೋದಯವನ್ನು ಹೇಗೆ ಒದಗಿಸಿದನು?

2ಕೀರ್ತನೆ 43ನೇ ಅಧ್ಯಾಯವನ್ನು ರಚಿಸಿದವರು ಪ್ರಾಯಶಃ ಕೋರಹನ ಪುತ್ರರಾಗಿದ್ದರು. ಇವರು ಲೇವಿಯರಾಗಿದ್ದುದರಿಂದ, ಜನರಿಗೆ ದೇವರ ಧರ್ಮಶಾಸ್ತ್ರವನ್ನು ಕಲಿಸುವ ಸುಯೋಗವನ್ನು ಹೊಂದಿದ್ದರು. (ಮಲಾಕಿಯ 2:7) ನಿಜ, ಯೆಹೋವನು ಅವರ ಮಹಾ ಉಪದೇಶಕನಾಗಿದ್ದನು ಮತ್ತು ಸಕಲ ವಿವೇಕದ ಮೂಲನೆಂದು ಅವರು ಆತನ ಕಡೆಗೆ ನೋಡುತ್ತಿದ್ದರು. (ಯೆಶಾಯ 30:20) ಕೀರ್ತನೆಗಾರನು ಪ್ರಾರ್ಥಿಸಿದ್ದು: “ಓ ದೇವರೇ, . . . ನಿನ್ನ ಸತ್ಯವನ್ನು ಮತ್ತು ನಿನ್ನ ಬೆಳಕನ್ನು ಕಳುಹಿಸು. ಅವೇ ನನ್ನನ್ನು ನಡೆಸಲಿ.” (ಕೀರ್ತನೆ 43:1, 3, NW) ಇಸ್ರಾಯೇಲ್ಯರು ಎಷ್ಟರವರೆಗೆ ಆತನಿಗೆ ನಂಬಿಗಸ್ತರಾಗಿ ಉಳಿದರೋ, ಅಷ್ಟರವರೆಗೆ ಯೆಹೋವನು ಅವರಿಗೆ ತನ್ನ ಮಾರ್ಗಗಳನ್ನು ಕಲಿಸಿದನು. ಶತಮಾನಗಳ ನಂತರ, ಯೆಹೋವನು ಹೆಚ್ಚು ಗಮನಾರ್ಹವಾದ ರೀತಿಯ ಸತ್ಯ ಮತ್ತು ಬೆಳಕನ್ನು ನೀಡುವ ಮೂಲಕ ಅವರನ್ನು ಆಶೀರ್ವದಿಸಿದನು. ಇದನ್ನು ದೇವರು ತನ್ನ ಮಗನನ್ನು ಭೂಮಿಗೆ ಕಳುಹಿಸಿದಾಗ ಮಾಡಿದನು.

3. ಯೇಸುವಿನ ಬೋಧನೆಯಿಂದ ಯೆಹೂದ್ಯರು ಯಾವ ವಿಧದಲ್ಲಿ ಪರೀಕ್ಷೆಗೊಳಪಡಿಸಲ್ಪಟ್ಟರು?

3 ದೇವರ ಮಗನಾಗಿದ್ದ ಯೇಸು ಕ್ರಿಸ್ತನು ಮನುಷ್ಯನಾಗಿರುವಾಗ ನಿಜವಾಗಿಯೂ ‘ಲೋಕಕ್ಕೆ ಬೆಳಕಾಗಿದ್ದನು.’ (ಯೋಹಾನ 8:12) ಅವನು ಜನರಿಗೆ “ಸಾಮ್ಯರೂಪವಾಗಿ ಅನೇಕ ಸಂಗತಿಗಳನ್ನು” ಅಂದರೆ ಹೊಸ ಸಂಗತಿಗಳನ್ನು ಕಲಿಸಿದನು. (ಮಾರ್ಕ 4:2) ಅವನು ಪೊಂತ್ಯ ಪಿಲಾತನಿಗೆ, “ನನ್ನ ರಾಜ್ಯವು ಈ ಲೋಕದ್ದಲ್ಲ” ಎಂದು ಹೇಳಿದನು. (ಯೋಹಾನ 18:36) ಒಬ್ಬ ರೋಮನ್‌ ವ್ಯಕ್ತಿಗೆ ಮತ್ತು ರಾಷ್ಟ್ರೀಯ ಮನೋಭಾವವಿದ್ದ ಯೆಹೂದ್ಯರಿಗೆ ಇದು ಒಂದು ಹೊಸ ವಿಷಯವಾಗಿತ್ತು. ಯಾಕೆಂದರೆ ಮೆಸ್ಸೀಯನು ರೋಮನ್‌ ಸಾಮ್ರಾಜ್ಯವನ್ನು ಸೋಲಿಸಿ, ಇಸ್ರಾಯೇಲನ್ನು ಅದರ ಹಿಂದಿನ ವೈಭವಕ್ಕೆ ಪುನಃಸ್ಥಾಪಿಸುವನೆಂದು ಅವರು ನೆನಸುತ್ತಿದ್ದರು. ಯೇಸುವು ಯೆಹೋವನಿಂದ ಬಂದ ಸತ್ಯದ ಬೆಳಕನ್ನು ಪ್ರತಿಬಿಂಬಿಸುತ್ತಿದ್ದನು. ಆದರೂ ಅವನ ಮಾತುಗಳಿಂದ ಯೆಹೂದಿ ಮುಖಂಡರಿಗೆ ಸಂತೋಷವಾಗಲಿಲ್ಲ. ಇವರಿಗೆ ‘ದೇವರಿಂದ ಬರುವ ಮಾನಕ್ಕಿಂತ ಮನುಷ್ಯರಿಂದ ಬರುವ ಮಾನವೇ ಇಷ್ಟವಾಗಿತ್ತು.’ (ಯೋಹಾನ 12:42, 43) ಅನೇಕ ಜನರು ತಮ್ಮ ಮಾನವ ಸಂಪ್ರದಾಯಗಳಿಗೆ ಅಂಟಿಕೊಳ್ಳುವುದನ್ನು ಆರಿಸಿಕೊಂಡರೇ ಹೊರತು ದೇವರಿಂದ ಬಂದ ಆತ್ಮಿಕ ಬೆಳಕು ಮತ್ತು ಸತ್ಯವನ್ನು ಸ್ವೀಕರಿಸಲಿಲ್ಲ.—ಕೀರ್ತನೆ 43:3; ಮತ್ತಾಯ 13:15.

4. ಯೇಸುವಿನ ಶಿಷ್ಯರು ತಿಳುವಳಿಕೆಯಲ್ಲಿ ಬೆಳೆಯುತ್ತಾ ಹೋಗುವರೆಂಬ ವಿಷಯವು ನಮಗೆ ಹೇಗೆ ಗೊತ್ತಾಗುತ್ತದೆ?

4 ಆದಾಗ್ಯೂ, ಕೆಲವು ಪ್ರಾಮಾಣಿಕ ಹೃದಯದ ಸ್ತ್ರೀಪುರುಷರು ಯೇಸು ಕಲಿಸಿದ ಸತ್ಯವನ್ನು ಸಂತೋಷದಿಂದ ಸ್ವೀಕರಿಸಿದರು. ಇವರು ದೇವರ ಉದ್ದೇಶಗಳ ಕುರಿತು ತಮಗಿದ್ದ ತಿಳುವಳಿಕೆಯಲ್ಲಿ ತಡೆಯಿಲ್ಲದೆ ಪ್ರಗತಿಯನ್ನು ಮಾಡಿದರು. ಅವರ ಬೋಧಕನ ಭೂಜೀವಿತದ ಅವಧಿಯು ಮುಕ್ತಾಯಗೊಳ್ಳುವ ಸಮಯ ಹತ್ತಿರ ಬರುತ್ತಿದ್ದರೂ ಅವರಿಗೆ ಇನ್ನೂ ಕಲಿಯಲು ಬಹಳಷ್ಟು ವಿಷಯಗಳು ಇದ್ದವು. ಯೇಸು ಅವರಿಗೆ ಹೇಳಿದ್ದು: “ನಾನು ನಿಮಗೆ ಹೇಳಬೇಕಾದದ್ದು ಇನ್ನೂ ಬಹಳ ಉಂಟು; ಆದರೆ ಸದ್ಯಕ್ಕೆ ಅದನ್ನು ಹೊರಲಾರಿರಿ.” (ಯೋಹಾನ 16:12) ಹೌದು, ಶಿಷ್ಯರು ದೇವರ ಸತ್ಯದ ತಿಳುವಳಿಕೆಯಲ್ಲಿ ಬೆಳೆಯುತ್ತಾ ಮುಂದುವರಿಯಲಿದ್ದರು.

ಸತ್ಯದ ಬೆಳಕು ಪ್ರಕಾಶಿಸುತ್ತಾ ಮುಂದುವರಿಯುತ್ತದೆ

5. ಯಾವ ಪ್ರಶ್ನೆಯು ಪ್ರಥಮ ಶತಮಾನದಲ್ಲಿ ಎಬ್ಬಿಸಲ್ಪಟ್ಟಿತು, ಮತ್ತು ಅದನ್ನು ಇತ್ಯರ್ಥಗೊಳಿಸುವ ಜವಾಬ್ದಾರಿಯು ಯಾರಿಗಿತ್ತು?

5 ಯೇಸುವಿನ ಮರಣ ಮತ್ತು ಪುನರುತ್ಥಾನದ ನಂತರ, ದೇವರಿಂದ ಹೊರಟ ಸತ್ಯದ ಬೆಳಕು ಹಿಂದೆಂದಿಗಿಂತಲೂ ಹೆಚ್ಚು ಉಜ್ವಲವಾಗಿ ಪ್ರಕಾಶಿಸಲಾರಂಭಿಸಿತು. ಪೇತ್ರನಿಗೆ ಕೊಡಲಾದ ದರ್ಶನದಲ್ಲಿ, ಸುನ್ನತಿಯಾಗದಿದ್ದ ಅನ್ಯರು ಸಹ ಇನ್ನು ಮುಂದೆ ಕ್ರಿಸ್ತನ ಹಿಂಬಾಲಕರಾಗಬಹುದು ಎಂಬುದನ್ನು ಯೆಹೋವನು ಪ್ರಕಟಪಡಿಸಿದನು. (ಅ. ಕೃತ್ಯಗಳು 10:9-17) ಅದು ಒಂದು ಪ್ರಕಟನೆಯಾಗಿತ್ತು! ಹಾಗಿದ್ದರೂ, ಅನಂತರ ಒಂದು ಪ್ರಶ್ನೆಯು ಎಬ್ಬಿಸಲ್ಪಟ್ಟಿತು. ಅದೇನೆಂದರೆ ಕ್ರೈಸ್ತರಾದ ಮೇಲೆ ಈ ಅನ್ಯರು ಸುನ್ನತಿಯನ್ನು ಮಾಡಿಸಿಕೊಳ್ಳಬೇಕೆಂದು ಯೆಹೋವನು ಅಪೇಕ್ಷಿಸಿದನೋ? ಈ ಪ್ರಶ್ನೆಗೆ ಉತ್ತರವು ಪೇತ್ರನಿಗಾದ ದರ್ಶನದಲ್ಲಿ ಕೊಡಲ್ಪಟ್ಟಿರಲಿಲ್ಲ ಮತ್ತು ಇದು ಕ್ರೈಸ್ತರ ಮಧ್ಯೆ ತೀಕ್ಷ್ಣ ವಾಗ್ವಾದವನ್ನು ಉಂಟುಮಾಡಿತು. ಈ ಸಮಸ್ಯೆಯು ಬಗೆಹರಿಸಲ್ಪಡಲೇಬೇಕಿತ್ತು, ಇಲ್ಲದಿದ್ದರೆ ಅವರ ಅಮೂಲ್ಯವಾದ ಐಕ್ಯತೆಯು ಹಾಳಾಗುತ್ತಿತ್ತು. ಆದುದರಿಂದ, ಯೆರೂಸಲೇಮಿನಲ್ಲಿ “ಅಪೊಸ್ತಲರೂ ಸಭೆಯ ಹಿರಿಯರೂ ಈ ವಿಷಯವನ್ನು ಕುರಿತು ಆಲೋಚಿಸುವದಕ್ಕೆ ಕೂಡಿ” ಬಂದರು.—ಅ. ಕೃತ್ಯಗಳು 15:1, 2, 6.

6. ಸುನ್ನತಿಯ ಕುರಿತಾದ ಪ್ರಶ್ನೆಯನ್ನು ಪರಿಗಣಿಸುವಾಗ ಅಪೊಸ್ತಲರು ಮತ್ತು ಹಿರಿಯರು ಯಾವ ವಿಧಾನವನ್ನು ಅನುಸರಿಸಿದರು?

6 ಆ ಸಭೆಯಲ್ಲಿ ಹಾಜರಿದ್ದವರು, ವಿಶ್ವಾಸಿ ಅನ್ಯರಿಗಾಗಿ ದೇವರ ಚಿತ್ತವೇನಾಗಿದೆಯೆಂಬುದನ್ನು ಹೇಗೆ ನಿರ್ಧರಿಸಬಹುದಿತ್ತು? ಅಲ್ಲಿ ನಡೆಯುತ್ತಿದ್ದ ಚರ್ಚೆಗಳಲ್ಲಿ ಮಾರ್ಗದರ್ಶನೆಯನ್ನು ಕೊಡಲು ಯೆಹೋವನು ಒಬ್ಬ ದೇವದೂತನನ್ನು ಕಳುಹಿಸಲಿಲ್ಲ ಅಥವಾ ಹಾಜರಾದವರಿಗೆ ದರ್ಶನವನ್ನೂ ಕೊಡಲಿಲ್ಲ. ಆದರೂ, ಅಪೊಸ್ತಲರು ಮತ್ತು ಹಿರಿಯರು ಯಾವುದೇ ಮಾರ್ಗದರ್ಶನವಿಲ್ಲದೇ ಬಿಡಲ್ಪಡಲಿಲ್ಲ. ದೇವರು ಸುನ್ನತಿಹೊಂದಿರದ ಅನ್ಯಜನಾಂಗದವರ ಮೇಲೆ ಪವಿತ್ರಾತ್ಮವನ್ನು ಸುರಿಸುತ್ತಾ, ಅನ್ಯಜನಾಂಗದವರೊಂದಿಗೆ ಹೇಗೆ ವ್ಯವಹರಿಸಲು ಆರಂಭಿಸಿದನೆಂಬುದನ್ನು ನೋಡಿದ ಕೆಲವು ಯೆಹೂದಿ ಕ್ರೈಸ್ತರ ಸಾಕ್ಷ್ಯವನ್ನು ಅವರು ಪರಿಗಣಿಸಿದರು. ಅವರು ಮಾರ್ಗದರ್ಶನಕ್ಕಾಗಿ ಶಾಸ್ತ್ರವಚನಗಳಲ್ಲಿ ಸಹ ಹುಡುಕಿದರು. ಇದರ ಫಲಿತಾಂಶವಾಗಿ, ಶಿಷ್ಯ ಯಾಕೋಬನು ಜ್ಞಾನೋದಯವನ್ನು ನೀಡುವ ವಚನವನ್ನು ಆಧಾರಿಸಿ ಒಂದು ಸಲಹೆಯನ್ನು ಕೊಟ್ಟನು. ಅವರು ಸಾಕ್ಷ್ಯದ ಕುರಿತು ತುಂಬ ಪರ್ಯಾಲೋಚಿಸಿದಾಗ, ದೇವರ ಚಿತ್ತವು ಸ್ಪಷ್ಟವಾಯಿತು. ಅದೇನೆಂದರೆ, ಅನ್ಯಜನಾಂಗದವರು ಯೆಹೋವನ ಮೆಚ್ಚಿಗೆಯನ್ನು ಗಳಿಸಬೇಕಾದರೆ ಸುನ್ನತಿಯನ್ನು ಮಾಡಿಕೊಳ್ಳುವ ಆವಶ್ಯಕತೆಯಿಲ್ಲ ಎಂಬುದೇ. ಈ ನಿರ್ಣಯದಿಂದ ಜೊತೆ ಕ್ರೈಸ್ತರಿಗೆ ಮಾರ್ಗದರ್ಶನವು ಸಿಗಸಾಧ್ಯವಾಗುವಂತೆ ಅಪೊಸ್ತಲರು ಮತ್ತು ಹಿರಿಯರು ಅದನ್ನು ತಡಮಾಡದೆ ಬರೆದು ಕಳುಹಿಸಿದರು.—ಅ. ಕೃತ್ಯಗಳು 15:12-29; 16:4.

7. ಪ್ರಥಮ ಶತಮಾನದ ಕ್ರೈಸ್ತರು ಯಾವ ವಿಧದಲ್ಲಿ ಪ್ರಗತಿಪರರಾಗಿದ್ದರು?

7 ತಮ್ಮ ಪೂರ್ವಜರ ಸಂಪ್ರದಾಯಗಳಿಗೆ ಅಂಟಿಕೊಂಡಿದ್ದ ಯೆಹೂದಿ ಧಾರ್ಮಿಕ ಮುಖಂಡರಂತಿರದೆ, ಅನೇಕ ಯೆಹೂದಿ ಕ್ರೈಸ್ತರು ಅನ್ಯಜನಾಂಗಗಳ ಕುರಿತು ದೇವರ ಉದ್ದೇಶದ ಮಹತ್ತರವಾದ ಹೊಸ ತಿಳುವಳಿಕೆಯನ್ನು ಸ್ವೀಕರಿಸಿದರು. ಇದು ಸಾಮಾನ್ಯವಾಗಿ ಅನ್ಯರ ಕುರಿತು ಅವರಲ್ಲಿದ್ದ ದೃಷ್ಟಿಕೋನವನ್ನು ಬದಲಾಯಿಸಬೇಕಾದದ್ದನ್ನು ಅವಶ್ಯಪಡಿಸಿತಾದರೂ, ಅವರದನ್ನು ಮಾಡಲು ಬಹಳ ಸಂತೋಷಪಟ್ಟರು. ಯೆಹೋವನು ಅವರ ದೀನ ಮನೋಭಾವವನ್ನು ಆಶೀರ್ವದಿಸಿದನು ಮತ್ತು “ಸಭೆಗಳು ಕ್ರಿಸ್ತನಂಬಿಕೆಯಲ್ಲಿ ದೃಢವಾಗುತ್ತಾ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚುತ್ತಾ ಬಂದವು.”—ಅ. ಕೃತ್ಯಗಳು 15:31; 16:5.

8. (ಎ) ಪ್ರಥಮ ಶತಮಾನವು ಕೊನೆಗೊಂಡ ನಂತರ ಹೆಚ್ಚಿನ ಸತ್ಯದ ಬೆಳಕನ್ನು ನಿರೀಕ್ಷಿಸಸಾಧ್ಯವಿತ್ತೆಂದು ನಮಗೆ ಹೇಗೆ ಗೊತ್ತಾಗುತ್ತದೆ? (ಬಿ) ಯಾವ ಸಂಬಂಧಿತ ಪ್ರಶ್ನೆಗಳನ್ನು ನಾವು ಪರಿಗಣಿಸಲಿರುವೆವು?

8 ಆತ್ಮಿಕ ಬೆಳಕು ಪ್ರಥಮ ಶತಮಾನದಲ್ಲೆಲ್ಲಾ ಪ್ರಕಾಶಿಸುತ್ತಾ ಮುಂದುವರಿಯಿತು. ಆದರೂ ಯೆಹೋವನು ಆ ಆದಿ ಕ್ರೈಸ್ತರಿಗೆ ತನ್ನ ಉದ್ದೇಶಗಳ ಪ್ರತಿಯೊಂದು ಅಂಶವನ್ನು ಪ್ರಕಟಪಡಿಸಲಿಲ್ಲ. ಅಪೊಸ್ತಲ ಪೌಲನು ಪ್ರಥಮ ಶತಮಾನದ ಜೊತೆ ವಿಶ್ವಾಸಿಗಳಿಗೆ ಹೀಗಂದನು: “ಈಗ ಕಂಚಿನ ದರ್ಪಣದಲ್ಲಿ ಕಾಣಿಸುವಂತೆ ನಮಗೆ ಮೊಬ್ಬಾಗಿ ಕಾಣಿಸುತ್ತದೆ.” (1 ಕೊರಿಂಥ 13:12) ಇಂತಹ ಒಂದು ದರ್ಪಣವು ಉತ್ತಮವಾದ ಪ್ರತಿಬಿಂಬವನ್ನು ಕೊಡುತ್ತಿರಲಿಲ್ಲ. ಹಾಗಾದರೆ, ಮೊದಮೊದಲು ಆತ್ಮಿಕ ಬೆಳಕಿನ ತಿಳುವಳಿಕೆಯು ಸೀಮಿತವಾಗಿರಲಿತ್ತು. ಅಪೊಸ್ತಲರ ಮರಣದ ನಂತರ, ಈ ಬೆಳಕು ಕೆಲವು ಕಾಲಗಳ ವರೆಗೆ ಮಂದವಾಯಿತು. ಆದರೆ ಇತ್ತೀಚೆಗಿನ ಸಮಯಗಳಲ್ಲಿ ಆತ್ಮಿಕ ಜ್ಞಾನವು ಹೇರಳವಾಗುತ್ತಿದೆ. (ದಾನಿಯೇಲ 12:4) ಯೆಹೋವನು ಇಂದು ತನ್ನ ಜನರನ್ನು ಹೇಗೆ ಜ್ಞಾನೋದಯಗೊಳಿಸುತ್ತಿದ್ದಾನೆ? ಶಾಸ್ತ್ರವಚನಗಳ ಕುರಿತು ನಮಗಿರುವ ತಿಳುವಳಿಕೆಯನ್ನು ಆತನು ಹೆಚ್ಚಿಸುವಾಗ ನಾವು ಹೇಗೆ ಪ್ರತಿಕ್ರಿಯಿಸಬೇಕು?

ಆತ್ಮಿಕ ಬೆಳಕು ಪ್ರಗತಿಪರವಾಗಿ ಪ್ರಕಾಶಮಾನವಾಗುತ್ತದೆ

9. ಆರಂಭದ ಬೈಬಲ್‌ ವಿದ್ಯಾರ್ಥಿಗಳಿಂದ ಬೈಬಲ್‌ ಅಭ್ಯಾಸದ ಯಾವ ವಿಶಿಷ್ಟ ಮತ್ತು ಪರಿಣಾಮಕಾರಿ ವಿಧಾನವನ್ನು ಉಪಯೋಗಿಸಲಾಯಿತು?

9 ಆಧುನಿಕ ಸಮಯಗಳಲ್ಲಿ ಅಂದರೆ 19ನೇ ಶತಮಾನದ ಕೊನೆಯ ಭಾಗದಲ್ಲಿ ಕ್ರೈಸ್ತ ಸ್ತ್ರೀಪುರುಷರ ಗುಂಪೊಂದು ಶಾಸ್ತ್ರವಚನಗಳ ಶ್ರದ್ಧಾಪೂರ್ವಕ ಅಧ್ಯಯನವನ್ನು ಆರಂಭಿಸಿದಾಗ ಸತ್ಯದ ಬೆಳಕಿನ ಪ್ರಥಮ ಕಿರಣವು ಕಾಣಿಸಿಕೊಳ್ಳಲು ಆರಂಭಿಸಿತು. ಬೈಬಲ್‌ ಅಭ್ಯಾಸಕ್ಕಾಗಿ ಒಂದು ಪ್ರಾಯೋಗಿಕ ವಿಧಾನವನ್ನು ಅವರು ವಿಕಸಿಸಿದರು. ಯಾರಾದರೊಬ್ಬರು ಒಂದು ಪ್ರಶ್ನೆಯನ್ನು ಎಬ್ಬಿಸುತ್ತಿದ್ದರು. ಆಮೇಲೆ ಆ ಗುಂಪಿನಲ್ಲಿರುವವರು ಆ ಪ್ರಶ್ನೆಗೆ ಸಂಬಂಧಿಸಿದ ಎಲ್ಲ ಶಾಸ್ತ್ರವಚನಗಳನ್ನು ಪರಿಶೀಲಿಸುತ್ತಿದ್ದರು. ಒಂದು ಬೈಬಲ್‌ ವಚನವು ಇನ್ನೊಂದು ವಚನದೊಂದಿಗೆ ಪರಸ್ಪರ ತದ್ವಿರುದ್ಧವಾಗಿರುವಂತೆ ತೋರಿಬರುವಾಗ, ಈ ಪ್ರಾಮಾಣಿಕ ಕ್ರೈಸ್ತರು ಆ ಎರಡೂ ವಚನಗಳನ್ನು ಪರಸ್ಪರ ಹೊಂದಿಸಲು ಪ್ರಯತ್ನಿಸುತ್ತಿದ್ದರು. ಆ ದಿನಗಳಲ್ಲಿದ್ದ ಧಾರ್ಮಿಕ ಮುಖಂಡರಂತಿರದೆ, ಬೈಬಲ್‌ ವಿದ್ಯಾರ್ಥಿಗಳು (ಆಗ ಯೆಹೋವನ ಸಾಕ್ಷಿಗಳನ್ನು ಹೀಗೆಂದು ಕರೆಯಲಾಗುತ್ತಿತ್ತು) ಯಾವುದೇ ಸಂಪ್ರದಾಯ ಅಥವಾ ಮಾನವ ರಚಿತ ಬೋಧನೆಗಳು ತಮ್ಮನ್ನು ಮಾರ್ಗದರ್ಶಿಸುವಂತೆ ಅನುಮತಿಸುವ ಬದಲು, ಪವಿತ್ರ ಶಾಸ್ತ್ರವಚನಗಳು ತಮ್ಮನ್ನು ಮಾರ್ಗದರ್ಶಿಸುವಂತೆ ಅನುಮತಿಸುವ ದೃಢಸಂಕಲ್ಪವನ್ನು ಮಾಡಿದ್ದರು. ಲಭ್ಯವಿರುವ ಎಲ್ಲ ಶಾಸ್ತ್ರೀಯ ಪುರಾವೆಗಳನ್ನು ಅವರು ಪರಿಗಣಿಸಿದ ನಂತರ, ತಮ್ಮ ತರ್ಕಸರಣಿಯ ಫಲಿತಾಂಶಗಳ ಒಂದು ದಾಖಲೆಯನ್ನು ಅವರು ಮಾಡಿಟ್ಟರು. ಈ ರೀತಿಯಲ್ಲಿ ಅನೇಕ ಮೂಲಭೂತ ಬೈಬಲ್‌ ಬೋಧನೆಗಳ ಕುರಿತಾದ ಅವರ ತಿಳುವಳಿಕೆಯು ಸ್ಪಷ್ಟವಾಯಿತು.

10. ಚಾರ್ಲ್ಸ್‌ ಟೇಸ್‌ ರಸಲರು ಯಾವ ಉಪಯೋಗಕಾರಿ ಬೈಬಲ್‌ ಅಭ್ಯಾಸದ ಸಹಾಯಕಗಳನ್ನು ಬರೆದರು?

10 ಚಾರ್ಲ್ಸ್‌ ಟೇಸ್‌ ರಸಲರು ಬೈಬಲ್‌ ವಿದ್ಯಾರ್ಥಿಗಳಲ್ಲಿಯೇ ಎದ್ದುಕಾಣುವ ವಿದ್ಯಾರ್ಥಿಯಾಗಿದ್ದರು. ಅವರು ಸ್ಟಡೀಸ್‌ ಇನ್‌ ದ ಸ್ಕ್ರಿಪ್ಚರ್ಸ್‌ ಎಂಬ ಶೀರ್ಷಿಕೆಯ ಆರು ಉಪಯೋಗಕಾರಿ ಬೈಬಲ್‌ ಸಹಾಯಕಗಳ ಸರಣಿಯನ್ನು ಬರೆದರು. ಸಹೋದರ ರಸಲರು ಯೆಹೆಜ್ಕೇಲ ಮತ್ತು ಪ್ರಕಟನೆಯ ಬೈಬಲ್‌ ಪುಸ್ತಕಗಳನ್ನು ವಿವರಿಸುವ ಏಳನೆಯ ಸಂಪುಟವನ್ನು ಬರೆಯಲು ಉದ್ದೇಶಿಸಿದ್ದರು. ಅವರು ಹೇಳಿದ್ದು: “ನನಗೆ ಆ ವಿಷಯದಲ್ಲಿ ವಿವರಣೆಯು ಸಿಗುವಾಗ ನಾನು ಏಳನೆಯ ಸಂಚಿಕೆಯನ್ನು ಬರೆಯುವೆನು.” ಹೀಗಿದ್ದರೂ, ಅವರು ಕೂಡಿಸಿದ್ದು: “ಕರ್ತನು ವಿವರಣೆಯನ್ನು ಬೇರೆ ಯಾರಿಗಾದರೂ ಕೊಡುವುದಾದರೆ ಅವರು ಅದನ್ನು ಬರೆಯಬಹುದು.”

11. ಸಮಯ ಮತ್ತು ದೇವರ ಉದ್ದೇಶಗಳ ಕುರಿತಾದ ನಮ್ಮ ತಿಳುವಳಿಕೆಯ ನಡುವೆ ಯಾವ ಸಂಬಂಧವು ಇದೆ?

11 ಸಿ. ಟಿ. ರಸಲರ ಈ ಮೇಲಿನ ಮಾತುಗಳು ನಿರ್ದಿಷ್ಟ ಬೈಬಲ್‌ ಭಾಗಗಳನ್ನು ಅರ್ಥಮಾಡಿಕೊಳ್ಳುವ ನಮ್ಮ ಸಾಮರ್ಥ್ಯದಲ್ಲಿ ಸಮಯವು ಒಂದು ಬಹುಮುಖ್ಯ ಅಂಶವಾಗಿದೆ ಎಂಬುದನ್ನು ಸೂಚಿಸುತ್ತವೆ. ಸೂರ್ಯನು ತನ್ನ ನಿಯಮಿತ ಸಮಯಕ್ಕೆ ಮುಂಚೆ ಉದಯಿಸುವಂತೆ ಒಬ್ಬ ಕಾತುರವುಳ್ಳ ಪಾದಯಾತ್ರಿಯು ಅದನ್ನು ಹೇಗೆ ಪುಸಲಾಯಿಸಸಾಧ್ಯವಿಲ್ಲವೋ, ಹಾಗೆಯೇ ಪ್ರಕಟನೆ ಪುಸ್ತಕದ ಮೇಲೆ ಸತ್ಯದ ಬೆಳಕು ಚೆಲ್ಲುವಂತೆ ತಾವು ಒತ್ತಾಯಿಸಸಾಧ್ಯವಿಲ್ಲವೆಂದು ಸಹೋದರ ರಸಲರಿಗೆ ಗೊತ್ತಿತ್ತು.

ದೇವರ ತಕ್ಕ ಸಮಯದಲ್ಲಿಯೇ ಪ್ರಕಟಿಸಲ್ಪಟ್ಟದ್ದು

12. (ಎ) ಬೈಬಲ್‌ ಪ್ರವಾದನೆಯು ಯಾವಾಗ ಹೆಚ್ಚು ಉತ್ತಮವಾಗಿ ಅರ್ಥವಾಗುತ್ತದೆ? (ಬಿ) ಬೈಬಲ್‌ ಪ್ರವಾದನೆಗಳನ್ನು ಅರ್ಥಮಾಡಿಕೊಳ್ಳುವ ನಮ್ಮ ಸಾಮರ್ಥ್ಯವು ದೇವರ ಕಾಲತಖ್ತೆಯ ಮೇಲೆ ಹೊಂದಿಕೊಂಡಿದೆ ಎಂಬುದನ್ನು ಯಾವ ಉದಾಹರಣೆಯು ತೋರಿಸುತ್ತದೆ? (ಪಾದಟಿಪ್ಪಣಿಯನ್ನು ನೋಡಿರಿ.)

12 ಮೆಸ್ಸೀಯನ ಕುರಿತಾದ ಅನೇಕ ಪ್ರವಾದನೆಗಳು, ಯೇಸುವಿನ ಮರಣ ಮತ್ತು ಪುನರುತ್ಥಾನದ ನಂತರವೇ ಅಪೊಸ್ತಲರಿಗೆ ಅರ್ಥವಾಯಿತು. ಹಾಗೆಯೇ ಇಂದು ಸಹ ಕ್ರೈಸ್ತರು ಬೈಬಲ್‌ ಪ್ರವಾದನೆಗಳನ್ನು ಅವುಗಳ ನೆರವೇರಿಕೆಯ ನಂತರವೇ ಅತಿ ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳುತ್ತಾರೆ. (ಲೂಕ 24:15, 27; ಅ. ಕೃತ್ಯಗಳು 1:15-21; 4:26, 27) ಪ್ರಕಟನೆ ಪುಸ್ತಕವು ಒಂದು ಪ್ರವಾದನ ಪುಸ್ತಕವಾಗಿದೆ. ಆದುದರಿಂದ ಅದರಲ್ಲಿ ವರ್ಣಿಸಲಾಗಿರುವ ಘಟನೆಗಳು ನೆರವೇರುತ್ತಾ ಹೋದಂತೆ, ಅವುಗಳನ್ನು ಹೆಚ್ಚು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವುದನ್ನು ನಾವು ನಿರೀಕ್ಷಿಸಬೇಕು. ಉದಾಹರಣೆಗೆ, ಪ್ರಕಟನೆ 17:9-11ರಲ್ಲಿ ತಿಳಿಸಲಾಗಿರುವ ಸಾಂಕೇತಿಕ ರಕ್ತವರ್ಣದ ಕಾಡುಮೃಗದ ಸರಿಯಾದ ಅರ್ಥವನ್ನು ಸಿ. ಟಿ. ರಸಲರಿಗೆ ತಿಳಿದುಕೊಳ್ಳಲು ಸಾಧ್ಯವಿರುತ್ತಿರಲಿಲ್ಲ. ಯಾಕೆಂದರೆ ಆ ಮೃಗವು ಪ್ರತಿನಿಧಿಸುವ ಸಂಯುಕ್ತ ಸಂಘ ಮತ್ತು ವಿಶ್ವ ಸಂಸ್ಥೆಯು ಅವರ ಮರಣವಾದ ನಂತರವೇ ಅಸ್ತಿತ್ವಕ್ಕೆ ಬಂದವು. *

13. ಒಂದು ನಿರ್ದಿಷ್ಟ ಬೈಬಲ್‌ ವಿಷಯದ ಮೇಲೆ ಬೆಳಕು ಪ್ರಕಾಶಿಸಲ್ಪಟ್ಟಾಗ ಕೆಲವೊಮ್ಮೆ ಏನು ಸಂಭವಿಸಬಹುದು?

13 ಸುನ್ನತಿಹೊಂದಿರದ ಅನ್ಯಜನರು ಸಹ ಜೊತೆ ವಿಶ್ವಾಸಿಗಳಾಗಸಾಧ್ಯವಿದೆ ಎಂಬುದು ಆದಿ ಕ್ರೈಸ್ತರಿಗೆ ತಿಳಿದುಬಂದಾಗ, ಈ ಬದಲಾವಣೆಯು ಅನ್ಯಜನಾಂಗದವರು ಸುನ್ನತಿಯನ್ನು ಮಾಡಿಸಿಕೊಳ್ಳುವ ಅಗತ್ಯವಿದೆಯೋ ಎಂಬ ವಿಷಯದಲ್ಲಿ ಹೊಸ ಪ್ರಶ್ನೆಯು ಏಳುವಂತೆ ಮಾಡಿತು. ಇದು ಸುನ್ನತಿಯ ಇಡೀ ವಾದಾಂಶವನ್ನು ಪುನಃ ಪರಿಶೀಲಿಸುವಂತೆ ಅಪೊಸ್ತಲರನ್ನು ಮತ್ತು ಹಿರಿಯರನ್ನು ಪ್ರೇರಿಸಿತು. ಅದೇ ನಮೂನೆಯು ಇಂದು ಸಹ ಅನ್ವಯಿಸುತ್ತದೆ. ಕೆಲವೊಮ್ಮೆ ಒಂದು ಬೈಬಲ್‌ ವಿಷಯದ ಮೇಲಿನ ಬೆಳಕಿನ ತೇಜೋಮಯವಾದ ಪ್ರಕಾಶವು, ದೇವರ ಅಭಿಷಿಕ್ತ ಸೇವಕರಾಗಿರುವ “ನಂಬಿಗಸ್ತನೂ ವಿವೇಕಿಯೂ ಆದ ಆಳು,” ಸಂಬಂಧಿತ ವಿಷಯಗಳನ್ನು ಪುನಃ ಪರಿಶೀಲಿಸುವಂತೆ ಮಾಡುತ್ತದೆ. ಮತ್ತು ಇದನ್ನು, ಇತ್ತೀಚಿನ ಈ ಕೆಳಗಿನ ಉದಾಹರಣೆಯು ಚಿತ್ರಿಸುತ್ತದೆ.—ಮತ್ತಾಯ 24:45.

14-16. ಆತ್ಮಿಕ ಆಲಯದ ಕುರಿತು ನಮ್ಮ ದೃಷ್ಟಿಕೋನದಲ್ಲಿ ಮಾಡಲಾದ ಸರಿಹೊಂದಿಸುವಿಕೆಯು, ಯೆಹೆಜ್ಕೇಲ 40ರಿಂದ 48ನೆಯ ಅಧ್ಯಾಯಗಳ ಕುರಿತಾದ ನಮ್ಮ ತಿಳುವಳಿಕೆಯ ಮೇಲೆ ಹೇಗೆ ಪ್ರಭಾವ ಬೀರಿತು?

14 ಇಸವಿ 1971ರಲ್ಲಿ ಯೆಹೆಜ್ಕೇಲ ಪ್ರವಾದನೆಯ ವಿವರಣೆಯು, “ನಾನು ಯೆಹೋವನೆಂದು ಜನಾಂಗಗಳಿಗೆ ಗೊತ್ತಾಗುವುದು—ಹೇಗೆ?” (ಇಂಗ್ಲಿಷ್‌) ಎಂಬ ಶೀರ್ಷಿಕೆಯುಳ್ಳ ಪುಸ್ತಕದಲ್ಲಿ ಕೊಡಲಾಗಿತ್ತು. ಆ ಪುಸ್ತಕದ ಒಂದು ಅಧ್ಯಾಯವು ದೇವಾಲಯದ ಕುರಿತು ಯೆಹೆಜ್ಕೇಲನಿಗೆ ಕೊಡಲಾದ ದರ್ಶನವನ್ನು ಚುಟುಕಾಗಿ ಚರ್ಚಿಸಿತು. (ಯೆಹೆಜ್ಕೇಲ, ಅಧ್ಯಾಯಗಳು 40-48) ಆ ಸಮಯದಲ್ಲಿ, ಯೆಹೆಜ್ಕೇಲನ ದೇವಾಲಯ ದರ್ಶನವು ಹೊಸ ಲೋಕದಲ್ಲಿ ಹೇಗೆ ನೆರವೇರುವುದು ಎಂಬ ವಿಷಯದ ಮೇಲೆಯೇ ಮುಖ್ಯವಾಗಿ ಗಮನವನ್ನು ಕೇಂದ್ರೀಕರಿಸಲಾಗಿತ್ತು.—2 ಪೇತ್ರ 3:13.

15 ಹೀಗಿದ್ದರೂ, ಡಿಸೆಂಬರ್‌ 1, 1972ರಲ್ಲಿ ದ ವಾಚ್‌ಟವರ್‌ ಪತ್ರಿಕೆಯಲ್ಲಿ ಪ್ರಕಾಶಿಸಲಾದ ಎರಡು ಲೇಖನಗಳು ಯೆಹೆಜ್ಕೇಲನ ದರ್ಶನದ ಕುರಿತ ನಮ್ಮ ತಿಳುವಳಿಕೆಯನ್ನು ಪ್ರಭಾವಿಸಿದವು. ಈ ಲೇಖನಗಳು ಅಪೊಸ್ತಲ ಪೌಲನು ಇಬ್ರಿಯ 10ನೆಯ ಅಧ್ಯಾಯದಲ್ಲಿ ವರ್ಣಿಸಿದ ಮಹಾ ಆತ್ಮಿಕ ದೇವಾಲಯದ ಕುರಿತು ಚರ್ಚಿಸಿದವು. ಆತ್ಮಿಕ ದೇವಾಲಯದ ಪರಿಶುದ್ಧ ಸ್ಥಾನ ಮತ್ತು ಒಳಗಣ ಪ್ರಾಕಾರವು, ಅಭಿಷಿಕ್ತರು ಇನ್ನೂ ಭೂಮಿಯ ಮೇಲೆ ಇರುವಾಗ ಅವರ ಸ್ಥಿತಿಯನ್ನು ಸೂಚಿಸುತ್ತದೆ ಎಂದು ದ ವಾಚ್‌ಟವರ್‌ ಪತ್ರಿಕೆಯು ವಿವರಿಸಿತು. ಯೆಹೆಜ್ಕೇಲ ಪುಸ್ತಕದ 40ರಿಂದ 48ರ ವರೆಗಿನ ಅಧ್ಯಾಯಗಳನ್ನು ವರ್ಷಗಳ ನಂತರ ಪುನರ್ವಿಮರ್ಶಿಸಿದಾಗ, ಆತ್ಮಿಕ ಆಲಯವು ಇಂದು ಹೇಗೆ ಕಾರ್ಯನಡಿಸುತ್ತಿದೆಯೋ ಹಾಗೆಯೇ ಯೆಹೆಜ್ಕೇಲನು ದರ್ಶನದಲ್ಲಿ ಕಂಡ ದೇವಾಲಯವು ಸಹ ಇಂದು ಕಾರ್ಯನಡಿಸುತ್ತಿರಬೇಕೆಂಬುದನ್ನು ಗ್ರಹಿಸಲಾಯಿತು. ಅದು ಹೇಗೆ?

16 ಯೆಹೆಜ್ಕೇಲನ ದರ್ಶನದಲ್ಲಿ ಯಾಜಕರು, ದೇವಾಲಯದ ಪ್ರಾಕಾರದೊಳಗೆ ಅತ್ತಿತ್ತ ತಿರುಗಾಡುತ್ತಾ ಯಾಜಕರಲ್ಲದ ಗೋತ್ರಗಳಿಗೆ ಸೇವೆಸಲ್ಲಿಸುತ್ತಿರುವುದನ್ನು ನೋಡಬಹುದು. ಈ ಯಾಜಕರು ಸ್ಪಷ್ಟವಾಗಿಯೇ “ರಾಜವಂಶಸ್ಥರಾದ ಯಾಜಕ”ರನ್ನು ಅಂದರೆ ಯೆಹೋವನ ಅಭಿಷಿಕ್ತ ಸೇವಕರನ್ನು ಪ್ರತಿನಿಧಿಸುತ್ತಾರೆ. (1 ಪೇತ್ರ 2:9) ಆದಾಗ್ಯೂ, ಇವರು ಕ್ರಿಸ್ತನ ಸಾವಿರ ವರ್ಷದ ಆಳ್ವಿಕೆಯಾದ್ಯಂತ ದೇವಾಲಯದ ಭೂಮಿಯ ಮೇಲಿನ ಪ್ರಾಕಾರದಲ್ಲಿ ಸೇವೆಸಲ್ಲಿಸುವುದಿಲ್ಲ. (ಪ್ರಕಟನೆ 20:4) ಬದಲಿಗೆ ಆ ಸಾವಿರ ವರ್ಷದ ಆಳ್ವಿಕೆಯ ಮುಂಚೆಯೇ ಎಲ್ಲ ಅಭಿಷಿಕ್ತರು ಸ್ವರ್ಗದಲ್ಲಿರುವಲ್ಲಿ, ಆ ಇಡೀ ಅವಧಿಯಲ್ಲಿ ಅವರು ಆತ್ಮಿಕ ದೇವಾಲಯದ ಅತಿ ಪವಿತ್ರಸ್ಥಾನವಾಗಿರುವ “ಪರಲೋಕದಲ್ಲಿಯೇ” ದೇವರಿಗೆ ಸೇವೆ ಸಲ್ಲಿಸುವರು. (ಇಬ್ರಿಯ 9:24) ಯೆಹೆಜ್ಕೇಲನ ದೇವಾಲಯದ ಪ್ರಾಕಾರದಲ್ಲಿ ಯಾಜಕರು ಅತ್ತಿತ್ತ ತಿರುಗಾಡುತ್ತಿರುವುದು ತೋರಿಸಲ್ಪಟ್ಟಿರುವುದರಿಂದ, ಇಂದು ಅಭಿಷಿಕ್ತರಲ್ಲಿ ಕೆಲವರು ಇನ್ನೂ ಭೂಮಿಯ ಮೇಲೆ ಇರುವಾಗಲೇ ಆ ದರ್ಶನವು ನೆರವೇರುತ್ತಿರಬೇಕು. ಅದರಂತೆ, ಇದೇ ಪತ್ರಿಕೆಯ ಮಾರ್ಚ್‌ 1, 1999ರ ಸಂಚಿಕೆಯು ಈ ವಿಷಯದ ಮೇಲೆ ಸರಿಹೊಂದಿಸಲ್ಪಟ್ಟ ಒಂದು ಅಭಿಪ್ರಾಯವನ್ನು ಕೊಟ್ಟಿತು. ಹೀಗೆ, ಈ 20ನೇ ಶತಮಾನದ ಅಂತ್ಯದ ವರೆಗೂ ಯೆಹೆಜ್ಕೇಲನ ಪ್ರವಾದನೆಯ ಮೇಲೆ ಆತ್ಮಿಕ ಬೆಳಕು ಪ್ರಕಾಶಿಸಲ್ಪಟ್ಟಿದೆ.

ನಿಮ್ಮ ದೃಷ್ಟಿಕೋನವನ್ನು ಸರಿಹೊಂದಿಸಲು ಸಿದ್ಧರಾಗಿರಿ

17. ನಿಮಗೆ ಸತ್ಯದ ಜ್ಞಾನವು ಸಿಕ್ಕಿದಂದಿನಿಂದ ನಿಮ್ಮ ವೈಯಕ್ತಿಕ ದೃಷ್ಟಿಕೋನದಲ್ಲಿ ಯಾವ ಸರಿಹೊಂದಿಸುವಿಕೆಗಳನ್ನು ನೀವು ಮಾಡಿದ್ದೀರಿ, ಮತ್ತು ಅವು ನಿಮಗೆ ಹೇಗೆ ಪ್ರಯೋಜನವನ್ನು ತಂದಿವೆ?

17 ಸತ್ಯದ ಜ್ಞಾನಕ್ಕೆ ಬರಲು ಬಯಸುವ ಒಬ್ಬ ವ್ಯಕ್ತಿಯು, ತನ್ನ “ಎಲ್ಲಾ ಯೋಚನೆಗಳನ್ನು ಕ್ರಿಸ್ತನಿಗೆ ವಿಧೇಯವಾಗುವಂತೆ ಸೆರೆಹಿಡಿ”ಯಲು ಸಿದ್ಧನಾಗಿರಬೇಕು. (2 ಕೊರಿಂಥ 10:5) ಇದು ಯಾವಾಗಲೂ ಸುಲಭವಾಗಿರುವುದಿಲ್ಲ. ವಿಶೇಷವಾಗಿ ದೃಷ್ಟಿಕೋನಗಳು ಬಲವಾಗಿ ಬೇರೂರಿದಾಗಲಂತೂ ಇದು ತುಂಬ ಕಷ್ಟ. ಉದಾಹರಣೆಗೆ, ದೇವರ ಕುರಿತಾದ ಸತ್ಯವನ್ನು ಕಲಿತುಕೊಳ್ಳುವ ಮುಂಚೆ, ನೀವು ಕೆಲವು ಧಾರ್ಮಿಕ ಹಬ್ಬಗಳನ್ನು ನಿಮ್ಮ ಕುಟುಂಬದೊಂದಿಗೆ ಆಚರಿಸುವುದರಲ್ಲಿ ಆನಂದಿಸುತ್ತಿದ್ದಿರಬಹುದು. ಆದರೆ ನೀವು ಬೈಬಲನ್ನು ಅಭ್ಯಾಸಿಸಲು ಆರಂಭಿಸಿದ ಮೇಲೆ, ಈ ಆಚರಣೆಗಳಿಗೆ ನಿಜವಾಗಿಯೂ ವಿಧರ್ಮಿ ಮೂಲವಿದೆ ಎಂಬುದನ್ನು ನೀವು ಮನಗಂಡಿರಿ. ಮೊದಮೊದಲು, ಕಲಿಯುತ್ತಿರುವ ವಿಷಯಗಳನ್ನು ನೀವು ಅನ್ವಯಿಸಲು ಹಿಂಜರಿದಿರಬಹುದು. ಹಾಗಿದ್ದರೂ, ಕೊನೆಯಲ್ಲಿ, ದೇವರ ಕಡೆಗಿರುವ ನಿಮ್ಮ ಪ್ರೀತಿಯು ಧಾರ್ಮಿಕ ಅಭಿಪ್ರಾಯಕ್ಕಿಂತಲೂ ಹೆಚ್ಚು ಶಕ್ತಿಶಾಲಿಯಾಗಿ ರುಜುವಾಯಿತು ಮತ್ತು ದೇವರನ್ನು ಅಪ್ರಸನ್ನಗೊಳಿಸುವ ಆಚರಣೆಗಳಲ್ಲಿ ಒಳಗೂಡುವುದನ್ನು ನೀವು ನಿಲ್ಲಿಸಿದಿರಿ. ನೀವು ಮಾಡಿದ ಈ ನಿರ್ಣಯವನ್ನು ಯೆಹೋವನು ಆಶೀರ್ವದಿಸಲಿಲ್ಲವೋ?—ಇಬ್ರಿಯ 11:25ನ್ನು ಹೋಲಿಸಿರಿ.

18. ಬೈಬಲ್‌ ಸತ್ಯದ ಕುರಿತಾದ ನಮ್ಮ ತಿಳುವಳಿಕೆಯು ಸ್ಪಷ್ಟೀಕರಿಸಲ್ಪಟ್ಟಾಗ ನಾವು ಹೇಗೆ ಪ್ರತಿಕ್ರಿಯಿಸಬೇಕು?

18 ದೇವರ ಮಾರ್ಗಕ್ಕನುಸಾರ ಕ್ರಿಯೆಗೈಯುವುದರಿಂದ ನಾವು ಯಾವಾಗಲೂ ಪ್ರಯೋಜನವನ್ನು ಪಡೆಯುತ್ತೇವೆ. (ಯೆಶಾಯ 48:17, 18) ಬೈಬಲಿನ ಒಂದು ನಿರ್ದಿಷ್ಟ ಭಾಗದ ಕುರಿತಾದ ನಮ್ಮ ದೃಷ್ಟಿಕೋನವು ಸ್ಪಷ್ಟೀಕರಿಸಲ್ಪಟ್ಟಾಗ, ಸತ್ಯವನ್ನು ಅರ್ಥಮಾಡಿಕೊಳ್ಳುವುದರಲ್ಲಿ ಪ್ರಗತಿಯಾಗುತ್ತಿರುವುದಕ್ಕಾಗಿ ನಾವು ಸಂತೋಷಿಸೋಣ! ಹೌದು, ನಮಗೆ ಜ್ಞಾನೋದಯವಾಗುತ್ತಾ ಇರುವುದು, ನಾವು ಸರಿಯಾದ ಮಾರ್ಗದಲ್ಲಿ ಇದ್ದೇವೆಂಬುದನ್ನು ದೃಢೀಕರಿಸುತ್ತದೆ. “ನೀತಿವಂತರ ಮಾರ್ಗವು” ತಾನೇ “ಮಧ್ಯಾಹ್ನದ ವರೆಗೂ ಹೆಚ್ಚುತ್ತಾ ಬರುವ ಬೆಳಗಿನ ಬೆಳಕಿನಂತಿದೆ.” (ಜ್ಞಾನೋಕ್ತಿ 4:18) ನಿಜ, ಸದ್ಯಕ್ಕೆ ದೇವರ ಉದ್ದೇಶಗಳ ಕೆಲವು ಅಂಶಗಳು ನಮಗೆ “ಮೊಬ್ಬಾಗಿ” ತೋರುತ್ತವೆ. ಆದರೆ ದೇವರ ತಕ್ಕ ಸಮಯವು ಬರುವಾಗ, ಸತ್ಯವು ಅದರ ಎಲ್ಲ ಸೌಂದರ್ಯದೊಂದಿಗೆ ನಮಗೆ ಗೋಚರವಾಗುವುದು. ಆದರೆ ಈಗ ಮಾತ್ರ ನಮ್ಮ ಪಾದಗಳನ್ನು ನಾವು ಆ “ಮಾರ್ಗ”ದಲ್ಲಿ ದೃಢವಾಗಿ ಬೇರೂರಿಸಬೇಕು. ಈ ಮಧ್ಯೆ, ಯೆಹೋವನು ನಮಗೆ ಸ್ಪಷ್ಟೀಕರಿಸಿರುವ ಸತ್ಯಗಳಲ್ಲಿ ನಾವು ಸಂತೋಷಿಸೋಣ. ಮತ್ತು ಅದೇ ಸಮಯದಲ್ಲಿ ಇನ್ನೂ ಸ್ಪಷ್ಟವಾಗಿ ಅರ್ಥವಾಗಿರದ ವಿಷಯಗಳ ಜ್ಞಾನೋದಯಕ್ಕಾಗಿ ಕಾಯುತ್ತಿರೋಣ.

19. ನಾವು ಸತ್ಯವನ್ನು ಪ್ರೀತಿಸುತ್ತೇವೆಂಬುದನ್ನು ತೋರಿಸುವ ಒಂದು ವಿಧವು ಯಾವುದು?

19 ಸತ್ಯಕ್ಕಾಗಿರುವ ನಮ್ಮ ಒಲವನ್ನು ನಾವು ವ್ಯಾವಹಾರಿಕ ರೀತಿಯಲ್ಲಿ ಹೇಗೆ ತೋರಿಸಬಲ್ಲೆವು? ಒಂದು ವಿಧವು, ದೇವರ ವಾಕ್ಯವನ್ನು ಕ್ರಮವಾಗಿ, ಸಾಧ್ಯವಿರುವುದಾದರೆ ಪ್ರತಿದಿನವೂ ಅದನ್ನು ಓದುವುದರ ಮೂಲಕವೇ. ಬೈಬಲ್‌ ವಾಚನದ ಒಂದು ಕ್ರಮಬದ್ಧವಾದ ಕಾರ್ಯಕ್ರಮವನ್ನು ನೀವು ಅನುಸರಿಸುತ್ತಿದ್ದೀರೋ? ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳು ಆನಂದಿಸಲಿಕ್ಕಾಗಿ ಹೇರಳವಾದ ಹಿತಕರ ಆತ್ಮಿಕ ಆಹಾರವನ್ನು ನಮಗೆ ಒದಗಿಸುತ್ತವೆ. ನಮ್ಮ ಪ್ರಯೋಜನಕ್ಕಾಗಿ ತಯಾರಿಸಲಾಗಿರುವ ಪುಸ್ತಕಗಳು, ಬ್ರೋಷರುಗಳು ಮತ್ತು ಇತರ ಪ್ರಕಾಶನಗಳನ್ನು ಸಹ ಪರಿಗಣಿಸಿರಿ. ಯೆಹೋವನ ಸಾಕ್ಷಿಗಳ ವರ್ಷಪುಸ್ತಕದಲ್ಲಿ (ಇಂಗ್ಲಿಷ್‌) ಪ್ರಕಾಶಿಸಲಾಗುವ ರಾಜ್ಯ ಸಾರುವಿಕೆಯ ಚಟುವಟಿಕೆಗಳ ಉತ್ತೇಜನದಾಯಕ ವರದಿಗಳ ಕುರಿತೇನು?

20. ಯೆಹೋವನಿಂದ ಬರುವ ಸತ್ಯ ಮತ್ತು ಬೆಳಕು ಹಾಗೂ ಕ್ರೈಸ್ತ ಕೂಟಗಳಲ್ಲಿನ ನಮ್ಮ ಹಾಜರಿಯ ಮಧ್ಯೆ ಯಾವ ಸಂಬಂಧವಿದೆ?

20 ಹೌದು, ಕೀರ್ತನೆ 43:3ರಲ್ಲಿ ವ್ಯಕ್ತಪಡಿಸಲಾದ ಪ್ರಾರ್ಥನೆಯನ್ನು ಯೆಹೋವನು ಅದ್ಭುತಕರವಾದ ವಿಧದಲ್ಲಿ ಉತ್ತರಿಸಿದ್ದಾನೆ. ಆ ವಚನದಲ್ಲಿ ನಾವು ಓದುವುದು: “[ನಿನ್ನ ಸತ್ಯ ಮತ್ತು ನಿನ್ನ ಬೆಳಕು] ನಿನ್ನ ಪರಿಶುದ್ಧಪರ್ವತಕ್ಕೆ ನನ್ನನ್ನು ಕರೆದುಕೊಂಡು ಹೋಗಿ ನಿನ್ನ ನಿವಾಸಕ್ಕೆ ಸೇರಿಸಲಿ.” ಒಂದು ದೊಡ್ಡ ಜನಸಮೂಹದೊಂದಿಗೆ ಯೆಹೋವನನ್ನು ಆರಾಧಿಸಲು ನೀವು ಎದುರುನೋಡುತ್ತಿದ್ದೀರೋ? ನಮ್ಮ ಕೂಟಗಳಲ್ಲಿ ನೀಡಲಾಗುವ ಆತ್ಮಿಕ ಉಪದೇಶವು ಇಂದು ಯೆಹೋವನು ನಮಗೆ ಜ್ಞಾನೋದಯವನ್ನು ಒದಗಿಸುವ ಅತ್ಯಂತ ಪ್ರಾಮುಖ್ಯ ವಿಧವಾಗಿದೆ. ಕ್ರೈಸ್ತ ಕೂಟಗಳಿಗಾಗಿ ನಮ್ಮ ಗಣ್ಯತೆಯನ್ನು ಇನ್ನೂ ಹೆಚ್ಚಿಸಲಿಕ್ಕಾಗಿ ನಾವೇನು ಮಾಡಬಹುದು? ಈ ವಿಷಯವು ಮುಂದಿನ ಲೇಖನದಲ್ಲಿ ಪರಿಗಣಿಸಲ್ಪಡುವಾಗ ಪ್ರಾರ್ಥನಾಪೂರ್ವಕ ಗಮನವನ್ನು ಕೊಡುವಂತೆ ನಾವು ನಿಮ್ಮನ್ನು ವಿನಂತಿಸುತ್ತೇವೆ.

[ಪಾದಟಿಪ್ಪಣಿಗಳು]

^ ಪ್ಯಾರ. 12 ಸಿ. ಟಿ. ರಸಲರ ಮರಣದ ನಂತರ, ಸ್ಟಡೀಸ್‌ ಇನ್‌ ದ ಸ್ಕ್ರಿಪ್ಚರ್ಸ್‌ನ ಏಳನೇ ಸಂಪುಟವೆಂದು ಗೊತ್ತುಮಾಡಲ್ಪಟ್ಟಿದ್ದ ಒಂದು ಪ್ರಕಾಶನವು ಯೆಹೆಜ್ಕೇಲ ಮತ್ತು ಪ್ರಕಟನೆಯ ಪುಸ್ತಕಗಳ ಕುರಿತು ವಿವರಣೆಯನ್ನು ಕೊಡುವ ಪ್ರಯತ್ನದಲ್ಲಿ ತಯಾರಿಸಲ್ಪಟ್ಟಿತ್ತು. ಈ ಸಂಪುಟವು ಭಾಗಶಃ, ಈಗಾಗಲೇ ಆ ಬೈಬಲ್‌ ಪುಸ್ತಕಗಳ ಮೇಲೆ ರಸಲರು ಮಾಡಿದ ಹೇಳಿಕೆಗಳ ಮೇಲೆ ಆಧರಿಸಲ್ಪಟ್ಟಿತ್ತು. ಹಾಗಿದ್ದರೂ, ಆ ಪ್ರವಾದನೆಗಳ ಅರ್ಥವನ್ನು ಪ್ರಕಟಪಡಿಸುವ ಸಮಯವು ಇನ್ನೂ ಬಂದಿರಲಿಲ್ಲ. ಮತ್ತು ಸ್ಟಡೀಸ್‌ ಇನ್‌ ದ ಸ್ಕ್ರಿಪ್ಚರ್ಸ್‌ನ ಆ ಸಂಪುಟದಲ್ಲಿ ನೀಡಲಾದ ವಿವರಣೆಯು ಅಸ್ಪಷ್ಟವಾಗಿತ್ತು. ಮುಂದಿನ ವರ್ಷಗಳಲ್ಲಿ, ಯೆಹೋವನ ಅಪರಿಮಿತ ದಯೆ ಮತ್ತು ಲೋಕ ರಂಗದಲ್ಲಾಗುತ್ತಿದ್ದ ಬೆಳವಣಿಗೆಗಳು ಆ ಪ್ರವಾದನಾ ಪುಸ್ತಕಗಳ ಅರ್ಥವನ್ನು ಹೆಚ್ಚು ಸ್ಪಷ್ಟವಾಗಿ ವಿವೇಚಿಸಿ ತಿಳಿದುಕೊಳ್ಳಲು ಕ್ರೈಸ್ತರಿಗೆ ಸಾಧ್ಯಮಾಡಿವೆ.

ನೀವು ಉತ್ತರಿಸಬಲ್ಲಿರೋ?

ಯಾವ ಕಾರಣಕ್ಕಾಗಿ ಯೆಹೋವನು ತನ್ನ ಉದ್ದೇಶಗಳನ್ನು ಪ್ರಗತಿಪರವಾಗಿ ಪ್ರಕಟಿಸುತ್ತಾನೆ?

ಯೆರೂಸಲೇಮಿನಲ್ಲಿರುವ ಅಪೊಸ್ತಲರು ಮತ್ತು ಹಿರಿಯರು ಸುನ್ನತಿಯ ವಿವಾದಾಂಶವನ್ನು ಹೇಗೆ ಇತ್ಯರ್ಥಗೊಳಿಸಿದರು?

ಆರಂಭದ ಬೈಬಲ್‌ ವಿದ್ಯಾರ್ಥಿಗಳು ಬೈಬಲ್‌ ಅಭ್ಯಾಸದ ಯಾವ ವಿಧಾನವನ್ನು ಅನುಸರಿಸಿದರು ಮತ್ತು ಅದು ವಿಶಿಷ್ಟವಾಗಿತ್ತೇಕೆ?

ದೇವರ ತಕ್ಕ ಸಮಯದಲ್ಲಿ ಆತ್ಮಿಕ ಬೆಳಕು ಹೇಗೆ ಪ್ರಕಟಪಡಿಸಲಾಗುತ್ತದೆ ಎಂಬುದನ್ನು ದೃಷ್ಟಾಂತಿಸಿರಿ.

[ಅಧ್ಯಯನ ಪ್ರಶ್ನೆಗಳು]

[ಪುಟ 12ರಲ್ಲಿರುವ ಚಿತ್ರ]

ದೇವರ ತಕ್ಕ ಸಮಯದಲ್ಲಿ ಪ್ರಕಟನೆ ಪುಸ್ತಕದ ಮೇಲೆ ಬೆಳಕು ಪ್ರಕಾಶಿಸಲ್ಪಡುವುದು ಎಂದು ಚಾರ್ಲ್ಸ್‌ ಟೇಸ್‌ ರಸಲರಿಗೆ ಗೊತ್ತಿತ್ತು