ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತಿದ್ದುಪಾಟನ್ನು ಸ್ವೀಕರಿಸಿದ ಒಬ್ಬ ಆದರ್ಶ ಪುರುಷ

ತಿದ್ದುಪಾಟನ್ನು ಸ್ವೀಕರಿಸಿದ ಒಬ್ಬ ಆದರ್ಶ ಪುರುಷ

ತಿದ್ದುಪಾಟನ್ನು ಸ್ವೀಕರಿಸಿದ ಒಬ್ಬ ಆದರ್ಶ ಪುರುಷ

“ಸಾಂಬಿಯದ ಮೊಸಳೆಗಳು ತಿಂಗಳಿಗೆ 30 ಜನರನ್ನು ಕೊಂದು ತಿನ್ನುತ್ತವೆ.” ಹೀಗೆಂದು, ಕೆಲವು ವರ್ಷಗಳ ಹಿಂದೆ ಆಫ್ರಿಕದ ವಾರ್ತಾಪತ್ರಿಕೆಯೊಂದು ವರದಿಸಿತು. ಈ ಸರೀಸೃಪಗಳ ಅಧ್ಯಯನ ನಡೆಸಲಿಕ್ಕಾಗಿ ಅವುಗಳನ್ನು ಸೆರೆಹಿಡಿದ ಒಬ್ಬ ಪ್ರಾಣಿಶಾಸ್ತ್ರಜ್ಞನು ಹೇಳಿದ್ದೇನೆಂದರೆ, “ಒಂದು ಮೊಸಳೆಯನ್ನು ಹಿಡಿದುಕೊಳ್ಳಲು 12 ಮಂದಿ ಪುರುಷರು ಬೇಕಾದರು.” ಶಕ್ತಿಯುತವಾದ ಬಾಲ ಹಾಗೂ ಬಲಿಷ್ಠವಾದ ದವಡೆಗಳುಳ್ಳ ಮೊಸಳೆಯು ಒಂದು ಭಯಾನಕ ಪ್ರಾಣಿಯೆಂಬುದರಲ್ಲಿ ಸಂದೇಹವೇ ಇಲ್ಲ!

ಮೊಸಳೆಯನ್ನು “ಲಿವ್ಯಾತಾನ್‌” ಎಂದು ಸಂಬೋಧಿಸುತ್ತಾ, ಸೃಷ್ಟಿಕರ್ತನು ತನ್ನ ಸೇವಕನಾದ ಯೋಬನಿಗೆ ಒಂದು ಮಹತ್ವಪೂರ್ಣ ಪಾಠವನ್ನು ಕಲಿಸಲು, “ಸೊಕ್ಕಿದ್ದ ಮೃಗಗಳಿಗೆಲ್ಲಾ ರಾಜನಾಗಿರುವ” ಈ ಪ್ರಾಣಿಯನ್ನು ಉಪಯೋಗಿಸಿದನು. (ಯೋಬ 41:1, 34, BSI ಪಾದಟಿಪ್ಪಣಿ) ಇದು ಸುಮಾರು 3,500 ವರ್ಷಗಳ ಹಿಂದೆ, ಪ್ರಾಯಶಃ ಉತ್ತರ ಅರೇಬಿಯದಲ್ಲೆಲ್ಲೊ ಇರುವ ಊಚ್‌ ಎಂಬ ದೇಶದಲ್ಲಿ ನಡೆಯಿತು. ಈ ಜೀವಿಯನ್ನು ವರ್ಣಿಸುತ್ತಾ, ದೇವರು ಯೋಬನಿಗೆ ಹೇಳಿದ್ದು: “ಅದನ್ನು ಕೆಣಕಲು ಧೈರ್ಯಗೊಳ್ಳುವಷ್ಟು ಉಗ್ರತೆಯು ಯಾರಲ್ಲಿಯೂ ಇಲ್ಲ; ಹೀಗಿರಲು ನನ್ನ ಮುಂದೆ ನಿಲ್ಲಬಲ್ಲವರು ಯಾರು?” (ಯೋಬ 41:10) ಇದೆಷ್ಟು ಸತ್ಯ! ನಾವು ಮೊಸಳೆಗೇ ಇಷ್ಟೊಂದು ಭಯಪಟ್ಟರೆ, ಅದನ್ನು ಸೃಷ್ಟಿಸಿದಾತನ ವಿರುದ್ಧ ಮಾತಾಡಲು ಇನ್ನೆಷ್ಟು ಹೆಚ್ಚು ಭಯಪಟ್ಟುಕೊಳ್ಳಬೇಕು! ತನ್ನ ತಪ್ಪನ್ನು ಒಪ್ಪಿಕೊಳ್ಳುವ ಮೂಲಕ ಯೋಬನು ಈ ಪಾಠಕ್ಕೆ ಗಣ್ಯತೆಯನ್ನು ವ್ಯಕ್ತಪಡಿಸಿದನು.—ಯೋಬ 42:1-6.

ಯೋಬನ ವಿಷಯದಲ್ಲಿ ಉಲ್ಲೇಖಿಸಲ್ಪಡುವಾಗ, ನಂಬಿಗಸ್ತಿಕೆಯಿಂದ ಸಂಕಷ್ಟಗಳನ್ನು ತಾಳಿಕೊಂಡ ಮನುಷ್ಯನ ನಂಬಿಗಸ್ತ ಮಾದರಿಯು ನಮ್ಮ ಕಣ್ಣೆದುರಿಗೆ ಮೂಡಿಬರುತ್ತದೆ. (ಯಾಕೋಬ 5:11) ಆದರೆ ವಾಸ್ತವದಲ್ಲಿ, ಯೋಬನ ನಂಬಿಕೆಯು ತೀವ್ರವಾಗಿ ಪರೀಕ್ಷಿಸಲ್ಪಡುವ ಮುಂಚೆಯೇ ಯೆಹೋವನು ಅವನನ್ನು ಮೆಚ್ಚಿಕೊಂಡಿದ್ದನು. “ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ ಯಥಾರ್ಥಚಿತ್ತನೂ ಆಗಿದ್ದಾನೆ. ಅವನಿಗೆ ಸಮಾನನು ಭೂಲೋಕದಲ್ಲಿ ಎಲ್ಲಿಯೂ ಸಿಕ್ಕುವದಿಲ್ಲ” ಎಂಬುದಾಗಿ ದೇವರು ಅವನ ಬಗ್ಗೆ ಅಭಿಪ್ರಾಯಪಟ್ಟನು. (ಯೋಬ 1:8) ಆದುದರಿಂದ, ನಾವು ಯೋಬನ ಬಗ್ಗೆ ಹೆಚ್ಚಿನ ವಿಷಯಗಳನ್ನು ಕಲಿತುಕೊಳ್ಳುವಂತೆ ಇದು ನಮ್ಮನ್ನು ಪ್ರಚೋದಿಸಬೇಕು. ಏಕೆಂದರೆ ಹಾಗೆ ಮಾಡುವುದರಿಂದ, ನಾವು ಸಹ ದೇವರನ್ನು ಹೇಗೆ ಮೆಚ್ಚಿಸಸಾಧ್ಯವಿದೆ ಎಂಬುದನ್ನು ತಿಳಿದುಕೊಳ್ಳಲು ನಮಗೆ ಸಹಾಯಸಿಗುವುದು.

ದೇವರೊಂದಿಗಿನ ಸಂಬಂಧಕ್ಕೆ ಪ್ರಥಮ ಸ್ಥಾನ

ಯೋಬನು ಐಶ್ವರ್ಯವಂತನಾಗಿದ್ದನು. ಚಿನ್ನದ ಜೊತೆಗೆ ಅವನಲ್ಲಿ 7,000 ಕುರಿಗಳು, 3,000 ಒಂಟೆಗಳು, 500 ಹೆಣ್ಣು ಕತ್ತೆಗಳು, 500 ಜೋಡಿ ಎತ್ತುಗಳು ಮತ್ತು ಅನೇಕಾನೇಕ ಸೇವಕರೂ ಇದ್ದರು. (ಯೋಬ 1:3) ಹಾಗಿದ್ದರೂ, ಯೋಬನು ತನ್ನ ಐಶ್ವರ್ಯದ ಮೇಲಲ್ಲ, ಬದಲಾಗಿ ಯೆಹೋವನ ಮೇಲೆ ಭರವಸೆಯಿಟ್ಟನು. ಅವನು ವಿವೇಚಿಸಿದ್ದು: “ಒಂದು ವೇಳೆ ನಾನು ಬಂಗಾರದಲ್ಲಿ ಭರವಸವಿಟ್ಟು ಅಪರಂಜಿಗೆ ನಿನ್ನನ್ನೇ ನಂಬಿದ್ದೇನೆ ಎಂದು ಹೇಳಿದ್ದರೆ ನನ್ನ ಆಸ್ತಿ ದೊಡ್ಡದೆಂದೂ ನನ್ನ ಕೈಯೇ ಬಹು ಸಂಪತ್ತನ್ನು ಪಡೆಯಿತೆಂದೂ ಹೆಚ್ಚಳಪಟ್ಟಿದ್ದರೆ . . . , ಇದು ಸಹ ನ್ಯಾಯಾಧಿಪತಿಗಳ ದಂಡನೆಗೆ ಯೋಗ್ಯವಾದದ್ದು, ಮೇಲಣ ಲೋಕದ ದೇವರಿಗೆ ದ್ರೋಹಿಯಾದಂತಾಯಿತು.” (ಯೋಬ 31:24-28) ಯೋಬನಂತೆ ನಾವು ಕೂಡ, ಭೌತಿಕ ವಸ್ತುಗಳಿಗಿಂತಲೂ ಯೆಹೋವ ದೇವರೊಂದಿಗಿನ ಆಪ್ತ ಸಂಬಂಧವನ್ನೇ ಅಮೂಲ್ಯವೆಂದೆಣಿಸಬೇಕು.

ಜೊತೆ ಮಾನವರೊಂದಿಗೆ ನ್ಯಾಯವಾದ ವ್ಯವಹಾರ

ಯೋಬನು ತನ್ನ ಸೇವಕರೊಂದಿಗೆ ಹೇಗೆ ನಡೆದುಕೊಂಡನು? ಅವರ ಪಾಲಿಗೆ ಅವನು ನಿಷ್ಪಕ್ಷಪಾತಿಯೂ ಸ್ನೇಹಮಯಿಯೂ ಆಗಿದ್ದನೆಂಬುದು, ಯೋಬನ ಮಾತುಗಳಿಂದಲೇ ತಿಳಿದುಬರುತ್ತದೆ: “ಒಂದು ವೇಳೆ ನನಗೂ ನನ್ನ ದಾಸನಿಗೂ ಇಲ್ಲವೆ ದಾಸಿಗೂ ವ್ಯಾಜ್ಯವಾದಾಗ ನಾನು ಅವರ ನ್ಯಾಯವನ್ನು ಅಲಕ್ಷ್ಯಮಾಡಿದ್ದರೆ ದೇವರು [ನ್ಯಾಯಸ್ಥಾಪನೆಗೆ] ಏಳುವಾಗ ನಾನು ಏನು ಮಾಡೇನು? ಆತನು ವಿಚಾರಿಸುವಾಗ ಯಾವ ಉತ್ತರ ಕೊಟ್ಟೇನು?” (ಯೋಬ 31:13, 14) ಯೋಬನು ಯೆಹೋವನ ಕರುಣೆಗೆ ಮಹತ್ವ ನೀಡಿದ್ದರಿಂದ, ತನ್ನ ಸೇವಕರೊಂದಿಗೆ ಕರುಣೆಯಿಂದ ವ್ಯವಹರಿಸಿದನು. ಇದು ವಿಶೇಷವಾಗಿ ಕ್ರೈಸ್ತ ಸಭೆಯಲ್ಲಿ ಮೇಲ್ವಿಚಾರಣೆಯನ್ನು ಮಾಡುವವರಿಗೆ ಎಂತಹ ಒಂದು ಉತ್ತಮ ಮಾದರಿಯಾಗಿದೆ! ಅವರು ಕೂಡ, ನ್ಯಾಯಪರರು, ನಿಷ್ಪಕ್ಷಪಾತಿಗಳು ಮತ್ತು ಸ್ನೇಹಮಯಿಗಳಾಗಿರಬೇಕು.

ಯೋಬನು ತನ್ನ ಪರಿವಾರದ ಸದಸ್ಯರಲ್ಲದವರ ವಿಷಯದಲ್ಲೂ ಆಸಕ್ತಿ ವಹಿಸಿದನು. ಇತರರ ವಿಷಯದಲ್ಲಿ ತನಗಿರುವ ಚಿಂತೆಯನ್ನು ಪ್ರಕಟಿಸುತ್ತಾ ಅವನಂದದ್ದು: “ನಾನು ಬಡವರ ಇಷ್ಟವನ್ನು ಭಂಗಪಡಿಸಿ ವಿಧವೆಯನ್ನು ಕಂಗೆಡಿಸಿದೆನೋ? . . . ನ್ಯಾಯಸ್ಥಾನದಲ್ಲಿ ನನಗೆ ಸಹಾಯ ಉಂಟೆಂದು ಅನಾಥನ ಮೇಲೆ ಕೈಮಾಡಿದೆನೋ? ಹೀಗಿದ್ದರೆ ನನ್ನ ಹೆಗಲಿನ ಕೀಲು ತಪ್ಪಲಿ! ತೋಳು ಸಂದಿನಿಂದ ಮುರಿದು ಬೀಳಲಿ.” (ಯೋಬ 31:16-22) ನಮ್ಮ ಸಭೆಯಲ್ಲಿ ಇಂತಹ ಕಷ್ಟತೊಂದರೆಗಳನ್ನು ಅನುಭವಿಸುತ್ತಿರುವವರ ಕಡೆಗೆ ನಾವು ಅಷ್ಟೇ ದಯಾಪರರಾಗಿರೋಣ.

ಯೋಬನಿಗೆ ತನ್ನ ಜೊತೆಮಾನವರ ಬಗ್ಗೆ ನಿಸ್ವಾರ್ಥ ಚಿಂತೆಯಿದ್ದ ಕಾರಣ, ಅವನು ಅಪರಿಚಿತರಿಗೂ ಅತಿಥಿಸತ್ಕಾರವನ್ನು ತೋರಿಸಿದನು. ಆದುದರಿಂದಲೇ, “ಪರಸ್ಥಳದವನು ಬೈಲಿನಲ್ಲಿ ಇಳಿದುಕೊಳ್ಳಲಿಲ್ಲವಲ್ಲಾ, ದಾರಿಗೆ ನನ್ನ ಮನೇಬಾಗಲುಗಳನ್ನು ತೆರೆದಿದ್ದೆನಷ್ಟೆ” ಎಂಬುದಾಗಿ ಅವನು ಹೇಳಸಾಧ್ಯವಿತ್ತು. (ಯೋಬ 31:32) ಇಂದಿನ ದೇವರ ಸೇವಕರಿಗೆ ಇದೆಂತಹ ಉತ್ತಮ ಮಾದರಿಯಾಗಿದೆ! ಬೈಬಲ್‌ ಸತ್ಯದಲ್ಲಿ ಆಸಕ್ತರಾಗಿರುವ ಹೊಸಬರು ರಾಜ್ಯ ಸಭಾಗೃಹಕ್ಕೆ ಬರುವಾಗ, ನಾವು ಅವರನ್ನು ಆದರದಿಂದ ಬರಮಾಡಿಕೊಳ್ಳುವುದು ಅವರ ಆತ್ಮಿಕ ಪ್ರಗತಿಗೆ ಸಹಾಯಮಾಡಬಹುದು. ಸಂಚರಣ ಮೇಲ್ವಿಚಾರಕರು ಮತ್ತು ಇತರ ಕ್ರೈಸ್ತರಿಗೂ ನಾವು ಪ್ರೀತಿಪರ ಅತಿಥಿಸತ್ಕಾರವನ್ನು ತೋರಿಸಬೇಕಾಗಿದೆ.—1 ಪೇತ್ರ 4:9; 3 ಯೋಹಾನ 5-8.

ಯೋಬನಿಗೆ ತನ್ನ ವೈರಿಗಳ ಕಡೆಗೂ ಸರಿಯಾದ ಮನೋಭಾವವಿತ್ತು. ತನ್ನನ್ನು ದ್ವೇಷಿಸಿದವರಿಗೆ ಕೇಡು ಸಂಭವಿಸಿದಾಗ ಅವನು ಸಂತೋಷಿಸಲಿಲ್ಲ. (ಯೋಬ 31:29, 30) ಬದಲಿಗೆ, ಅಂತಹವರಿಗೆ ಒಳಿತನ್ನು ಮಾಡಲು ಅವನು ಸಿದ್ಧನಾಗಿದ್ದನು. ಇದು, ಸಂತಾಪ ಸೂಚಿಸಲು ಬಂದಿದ್ದ ಆ ಮೂವರು ಸುಳ್ಳು ಸ್ನೇಹಿತರಿಗಾಗಿ ಅವನು ಪ್ರಾರ್ಥಿಸಲು ಸಿದ್ಧನಾಗಿದ್ದನೆಂಬ ವಿಷಯದಿಂದಲೇ ಸ್ಪಷ್ಟವಾಗುತ್ತದೆ.—ಯೋಬ 16:2; 42:8, 9; ಹೋಲಿಸಿ ಮತ್ತಾಯ 5:43-48.

ಲೈಂಗಿಕ ವಿಷಯದಲ್ಲಿ ಶುದ್ಧನು

ಯೋಬನು ತನ್ನ ವಿವಾಹ ಸಂಗಾತಿಗೆ ನಿಷ್ಠಾವಂತನಾಗಿದ್ದು, ಮತ್ತೊಬ್ಬ ಸ್ತ್ರೀಗಾಗಿ ತನ್ನ ಮನಸ್ಸಿನಲ್ಲಿ ಅಯೋಗ್ಯವಾದ ಒಲವನ್ನು ಎಂದೂ ಬೆಳೆಸಿಕೊಂಡಿರಲಿಲ್ಲ. ಯೋಬನು ಹೇಳಿದ್ದು: “ನನ್ನ ಕಣ್ಣುಗಳೊಡನೆ ನಿಬಂಧನೆಯನ್ನು ಮಾಡಿಕೊಂಡಿದ್ದೇನೆ, ಯುವತಿಯ ಮೇಲೆ ಹೇಗೆ ಕಣ್ಣಿಟ್ಟೇನು? ಒಂದು ವೇಳೆ ನನ್ನ ಹೃದಯವು ಪರಸ್ತ್ರೀಯಲ್ಲಿ ಮರುಳುಗೊಂಡು ನಾನು ನೆರೆಯವನ ಬಾಗಿಲಲ್ಲಿ ಹೊಂಚಿದ್ದರೆ ನನ್ನ ಹೆಂಡತಿಯು ಮತ್ತೊಬ್ಬನಿಗೆ ಧಾನ್ಯ ಬೀಸುವ ದಾಸಿಯಾಗಲಿ, ಇತರರು ಆಕೆಯನ್ನು ಸಂಗಮಿಸಲಿ! [ನಾನು ಹೀಗೆ ಮಾಡಿದ್ದರೆ] ಅದು ದುಷ್ಕಾರ್ಯವೇ ಸರಿ, ಆ ಅಪರಾಧವು ನ್ಯಾಯಾಧಿಪತಿಗಳ ದಂಡನೆಗೆ ಯೋಗ್ಯವಾದದ್ದು.”—ಯೋಬ 31:1, 9-11.

ಅನೈತಿಕ ಬಯಕೆಗಳು ತನ್ನ ಮನಸ್ಸನ್ನು ಕೆಡಿಸುವಂತೆ ಯೋಬನು ಬಿಡಲಿಲ್ಲ. ಬದಲಿಗೆ ಅವನು ನೀತಿಯ ಜೀವನಕ್ರಮವನ್ನು ಅನುಸರಿಸಿದನು. ಅನೈತಿಕ ಆಕರ್ಷಣೆಗಳ ವಿರುದ್ಧ ಹೋರಾಡಿದ ಇಂತಹ ನಂಬಿಗಸ್ತನಲ್ಲಿ ಯೆಹೋವ ದೇವರು ಆನಂದಿಸಿದ್ದು ಆಶ್ಚರ್ಯಕರವೇನೂ ಅಲ್ಲ!—ಮತ್ತಾಯ 5:27-30.

ಕುಟುಂಬದ ಆತ್ಮಿಕತೆಯ ಬಗ್ಗೆ ಚಿಂತಿಸುವವನು

ಕೆಲವೊಮ್ಮೆ ಯೋಬನ ಪುತ್ರರು ಔತಣಗಳನ್ನು ಏರ್ಪಡಿಸುತ್ತಿದ್ದರು ಮತ್ತು ಆಗ ಅವನ ಎಲ್ಲ ಪುತ್ರಪುತ್ರಿಯರು ಅಲ್ಲಿರುತ್ತಿದ್ದರು. ಆ ಔತಣಗಳಲ್ಲಿ ತನ್ನ ಮಕ್ಕಳು ತಮಗೆ ಗೊತ್ತಿಲ್ಲದಂತೆ ಯೆಹೋವನ ವಿರುದ್ಧ ಪಾಪಮಾಡಿರಬಹುದೊ ಎಂಬುದರ ಬಗ್ಗೆ ಯೋಬನು ತುಂಬ ಚಿಂತಿತನಾಗಿರುತ್ತಿದ್ದನು. ಆದುದರಿಂದ ಯೋಬನು ಅಗತ್ಯವಾದ ಕ್ರಮವನ್ನು ತೆಗೆದುಕೊಂಡನು. ಆ ಶಾಸ್ತ್ರೀಯ ವೃತ್ತಾಂತವು ಹೇಳುವುದು: “ಔತಣಸರದಿ ತೀರಿದನಂತರ ಯೋಬನು ತನ್ನ ಮಕ್ಕಳು ಒಂದು ವೇಳೆ ಹೃದಯದಲ್ಲಿ ದೇವರನ್ನು ದೂಷಿಸಿ ಪಾಪಮಾಡಿರಬಹುದು ಎಂದು ಅವರನ್ನು ಕರೆಸಿ ಶುದ್ಧಿಪಡಿಸಿ ಬೆಳಿಗ್ಗೆ ಎದ್ದು ಅವರ ಸಂಖ್ಯೆಗೆ ತಕ್ಕಂತೆ ಹೋಮಗಳನ್ನು ಅರ್ಪಿಸುತ್ತಿದ್ದನು.” (ಯೋಬ 1:4, 5) ತನ್ನ ಕುಟುಂಬದವರಿಗೆ ಯೆಹೋವನ ಕುರಿತಾದ ಪೂಜ್ಯಭಾವನೆಯ ಭಯವಿದ್ದು, ಅವರು ಆತನ ಮಾರ್ಗಗಳಿಗನುಸಾರ ನಡೆಯಬೇಕೆಂಬ ವಿಷಯದಲ್ಲಿ ಯೋಬನಿಗಿದ್ದ ಆಸಕ್ತಿಯು, ಅವರ ಮೇಲೆ ಭಾರಿ ಪ್ರಭಾವವನ್ನು ಬೀರಿದ್ದಿರಬೇಕು!

ಇಂದು, ಕ್ರೈಸ್ತ ಕುಟುಂಬದ ತಲೆಗಳು ದೇವರ ವಾಕ್ಯವಾದ ಬೈಬಲನ್ನು ಉಪಯೋಗಿಸಿ ತಮ್ಮ ಕುಟುಂಬಗಳಿಗೆ ಉಪದೇಶವನ್ನು ನೀಡತಕ್ಕದ್ದು. (1 ತಿಮೊಥೆಯ 5:8) ಇದರೊಂದಿಗೆ, ಕುಟುಂಬದ ಸದಸ್ಯರಿಗಾಗಿ ಪ್ರಾರ್ಥಿಸುವುದು ಯೋಗ್ಯವಾದದ್ದು ಎಂಬುದರಲ್ಲಿ ಸಂದೇಹವೇ ಇಲ್ಲ.—ರೋಮಾಪುರ 12:12.

ಪರೀಕ್ಷೆಯ ಕೆಳಗೆ ನಂಬಿಗಸ್ತಿಕೆಯಿಂದ ತಾಳಿಕೊಂಡದ್ದು

ಯೋಬನು ಎದುರಿಸಬೇಕಾಗಿದ್ದ ತೀವ್ರವಾದ ಪರೀಕ್ಷೆಗಳ ಕುರಿತು ಹೆಚ್ಚಿನ ಬೈಬಲ್‌ ಓದುಗರಿಗೆ ಗೊತ್ತಿದೆ. ಕಷ್ಟತೊಂದರೆಗಳಿಗೆ ಗುರಿಮಾಡಲ್ಪಟ್ಟಾಗ ಯೋಬನು ದೇವರನ್ನು ದೂಷಿಸುವನೆಂದು ಪಿಶಾಚನಾದ ಸೈತಾನನು ದೃಢವಾಗಿ ಹೇಳಿದ್ದನು. ಯೆಹೋವನು ಈ ಸವಾಲನ್ನು ಸ್ವೀಕರಿಸಿದ ಕೂಡಲೇ, ಸೈತಾನನು ಯೋಬನ ಮೇಲೆ ಕೇಡನ್ನು ಬರಮಾಡಿದನು. ಯೋಬನು ತನ್ನೆಲ್ಲ ಜಾನುವಾರುಗಳನ್ನು ಕಳೆದುಕೊಂಡನು. ತನ್ನ ಎಲ್ಲ ಮಕ್ಕಳು ಮೃತ್ಯುವಿಗೆ ತುತ್ತಾದಾಗ ಅವನು ಮತ್ತಷ್ಟೂ ಕೇಡಿಗೆ ಗುರಿಯಾದನು. ಇದಾದ ಸ್ವಲ್ಪದರಲ್ಲೇ, ಸೈತಾನನು ಯೋಬನ ಅಂಗಾಲಿನಿಂದ ನಡುನೆತ್ತಿಯ ವರೆಗೂ ಕೆಟ್ಟ ಕುರುಗಳನ್ನು ಬರಮಾಡಿದನು.—ಯೋಬ, ಅಧ್ಯಾಯಗಳು 1, 2.

ಇದರ ಪರಿಣಾಮವು ಏನಾಗಿತ್ತು? ದೇವರನ್ನು ದೂಷಿಸುವಂತೆ ಯೋಬನ ಪತ್ನಿ ಅವನಿಗೆ ಸಲಹೆ ನೀಡಿದಾಗ ಅವನಂದದ್ದು: “ಮೂರ್ಖಳು ಮಾತಾಡಿದಂತೆ ನೀನು ಮಾತಾಡುತ್ತೀ; ದೇವರ ಹಸ್ತದಿಂದ ನಾವು ಒಳ್ಳೇದನ್ನು ಹೊಂದುತ್ತೇವಷ್ಟೆ; ಕೆಟ್ಟದ್ದನ್ನು ಹೊಂದಬಾರದೋ.” ಆ ಬೈಬಲ್‌ ದಾಖಲೆಯು ಮುಂದುವರಿಸಿ ಹೇಳುವುದು, “ಈ ಸಂದರ್ಭದಲ್ಲಿಯೂ ಪಾಪದ ಮಾತೊಂದೂ ಅವನ ತುಟಿಗಳಿಂದ ಹೊರಡಲಿಲ್ಲ.” (ಯೋಬ 2:10) ಹೌದು, ಯೋಬನು ನಂಬಿಗಸ್ತಿಕೆಯಿಂದ ತಾಳಿಕೊಂಡನು ಮತ್ತು ಹೀಗೆ ಪಿಶಾಚನನ್ನು ಒಬ್ಬ ಸುಳ್ಳುಗಾರನೆಂದು ರುಜುಪಡಿಸಿದನು. ನಾವು ಕೂಡ ತದ್ರೀತಿಯಲ್ಲಿ ಸಂಕಷ್ಟಗಳನ್ನು ತಾಳಿಕೊಂಡು, ಯೆಹೋವನಿಗಾಗಿ ನಾವು ಸಲ್ಲಿಸುವ ಸೇವೆಯು ನಮ್ಮಲ್ಲಿರುವ ನಿಷ್ಕಳಂಕ ಪ್ರೀತಿಯಿಂದಲೇ ಪ್ರಚೋದಿಸಲ್ಪಟ್ಟಿದೆ ಎಂಬುದನ್ನು ರುಜುಪಡಿಸೋಣ.—ಮತ್ತಾಯ 22:36-38.

ದೀನತೆಯಿಂದ ತಿದ್ದುಪಾಟನ್ನು ಅಂಗೀಕರಿಸಿದನು

ಯೋಬನು ಹಲವಾರು ವಿಷಯಗಳಲ್ಲಿ ಆದರ್ಶಪ್ರಾಯನಾಗಿದ್ದರೂ, ಅವನೊಬ್ಬ ಪರಿಪೂರ್ಣ ಮಾನವನಾಗಿರಲಿಲ್ಲ. ಅವನೇ ಹೇಳಿದ್ದು: “ಅಶುದ್ಧದಿಂದ ಶುದ್ಧವು ಉಂಟಾದೀತೇ? ಎಂದಿಗೂ ಇಲ್ಲ.” (ಯೋಬ 14:4; ರೋಮಾಪುರ 5:12) ಆದುದರಿಂದ ಯೋಬನು ನಿರ್ದೋಷಿಯಾಗಿದ್ದನೆಂದು ದೇವರು ಹೇಳಿದಾಗ, ತನ್ನ ಅಪರಿಪೂರ್ಣ ಹಾಗೂ ಪಾಪಭರಿತ ಮಾನವ ಸೇವಕರಿಂದ ತಾನು ಅಪೇಕ್ಷಿಸುವ ಮಟ್ಟಕ್ಕನುಸಾರ ಯೋಬನು ಜೀವಿಸುವವನಾಗಿದ್ದನು ಎಂಬುದನ್ನೇ ದೇವರು ಅರ್ಥೈಸಿದನು. ಇದೆಷ್ಟು ಉತ್ತೇಜನದಾಯಕವಾಗಿದೆ!

ಯೋಬನು ಎಲ್ಲ ಸಂಕಷ್ಟಗಳನ್ನು ತಾಳಿಕೊಂಡನಾದರೂ, ಅವನಲ್ಲಿದ್ದ ಒಂದು ಕುಂದನ್ನು ಅವು ತೋರ್ಪಡಿಸಿದವು. ಅವನು ಅನುಭವಿಸಿದ್ದ ಕೇಡಿನ ಕುರಿತು ಕೇಳಿಸಿಕೊಂಡ ಅವನ ಮೂವರು ನಾಮಮಾತ್ರದ ಸ್ನೇಹಿತರು ಸಂತಾಪ ಸೂಚಿಸಲಿಕ್ಕಾಗಿ ಅವನನ್ನು ಭೇಟಿಮಾಡಿದರು. (ಯೋಬ 2:11-13) ಯೋಬನು ಗಂಭೀರವಾದ ಪಾಪಗಳನ್ನು ಮಾಡಿರುವುದರಿಂದಲೇ ಯೆಹೋವನು ಅವನನ್ನು ದಂಡಿಸುತ್ತಿರಬಹುದೆಂದು ಅವರು ಆಪಾದಿಸಿದರು. ಈ ಸುಳ್ಳು ಆಪಾದನೆಗಳನ್ನು ಕೇಳಿ ಸ್ವಾಭಾವಿಕವಾಗಿಯೇ ಯೋಬನ ಮನಸ್ಸಿಗೆ ತುಂಬ ನೋವಾಯಿತು, ಮತ್ತು ಅವನು ಆತ್ಮರಕ್ಷಣೆಯನ್ನು ಮಾಡಿಕೊಳ್ಳಲು ಬಹಳವಾಗಿ ಪ್ರಯತ್ನಿಸಿದನು. ಆದರೆ ಇಂತಹ ಆತ್ಮಸಮರ್ಥನೆಯನ್ನು ಮಾಡಿಕೊಳ್ಳುತ್ತಿರುವಾಗ ಅವನು ಸಮತೂಕವನ್ನು ಕಳೆದುಕೊಂಡನು. ತಾನು ದೇವರಿಗಿಂತಲೂ ಹೆಚ್ಚು ನೀತಿವಂತನೆಂದು ಹೇಳಿಕೊಳ್ಳುವ ಮಟ್ಟಿಗೆ ಅವನು ಮುಂದುವರಿದನು!—ಯೋಬ 35:2, 3.

ದೇವರಿಗೆ ಯೋಬನ ಮೇಲೆ ಪ್ರೀತಿಯಿದ್ದ ಕಾರಣ, ಯೋಬನ ತಪ್ಪನ್ನು ತೋರಿಸಿಕೊಡಲು ಒಬ್ಬ ಯುವ ಪುರುಷನನ್ನು ಆತನು ಉಪಯೋಗಿಸಿದನು. ಆ ವೃತ್ತಾಂತವು ಹೇಳುವುದು: “ಎಲೀಹುವಿಗೆ ಸಿಟ್ಟೇರಿತು; ಯೋಬನು ದೇವರಿಗಿಂತಲೂ ತಾನೇ ನ್ಯಾಯವಂತನೆಂದು ಎಣಿಸಿಕೊಂಡದರಿಂದ ಅವನ ಮೇಲೆ ಎಲೀಹುವಿಗೆ ಸಿಟ್ಟುಹತ್ತಿತ್ತು.” “ಯೋಬನು—ನಾನು ನೀತಿವಂತನು, ದೇವರು ನನ್ನ ನ್ಯಾಯವನ್ನು ತಪ್ಪಿಸಿದ್ದಾನೆ” ಎಂಬುದಾಗಿ ಹೇಳಿದ್ದನ್ನು ಎಲೀಹು ಗಮನಿಸಿದನು. (ಯೋಬ 32:2; 34:5) ಹಾಗಿದ್ದರೂ, ದೇವರು ಯೋಬನನ್ನು ಅವನ ಪಾಪಗಳಿಗಾಗಿ ದಂಡಿಸುತ್ತಿದ್ದನೆಂದು ತಪ್ಪಾಗಿ ತೀರ್ಮಾನಿಸಿದ ಆ ಮೂವರು ‘ಸಂತಾಪ ಸೂಚಕರ’ ಜೊತೆಗೆ ಎಲೀಹು ಸೇರಿಕೊಳ್ಳಲಿಲ್ಲ. ಬದಲಿಗೆ, ಎಲೀಹು ಯೋಬನ ನಂಬಿಗಸ್ತಿಕೆಯಲ್ಲಿ ಭರವಸೆಯನ್ನು ವ್ಯಕ್ತಪಡಿಸುತ್ತಾ ಅವನಿಗೆ ಸಲಹೆಯಿತ್ತದ್ದು: “ನನ್ನ ವ್ಯಾಜ್ಯವು [ಯೆಹೋವನ] ಮುಂದೆ ಬಿದ್ದೇ ಇದೆ, ಆತನನ್ನು ಕಾದಿರುತ್ತೇನೆ ಎಂದು ನೀನು ಹೇಳಿದರೆ ಆತನು ಕೇಳಾನೇ?” ಹೌದು, ತನ್ನ ಸಮರ್ಥನೆಯನ್ನು ಮಾಡಿಕೊಳ್ಳುತ್ತಾ ದುಡುಕಿ ಮಾತಾಡುವ ಬದಲು ಯೋಬನು ಯೆಹೋವನ ಮೇಲೆ ಆತುಕೊಳ್ಳಬೇಕಿತ್ತು. ಎಲೀಹು ಯೋಬನಿಗೆ ಆಶ್ವಾಸನೆಯಿತ್ತದ್ದು: “[ದೇವರು] ನ್ಯಾಯವನ್ನಾಗಲಿ ಪರಿಪೂರ್ಣ ಧರ್ಮವನ್ನಾಗಲಿ ಕುಂದಿಸುವದಿಲ್ಲ.”—ಯೋಬ 35:14; 37:23.

ಯೋಬನ ಆಲೋಚನೆಯನ್ನು ತಿದ್ದಬೇಕಾಗಿತ್ತು. ಆದುದರಿಂದ, ದೇವರ ಮಹೋನ್ನತೆಗೆ ಹೋಲಿಸುವಾಗ ಮಾನವನು ಎಷ್ಟು ಅಲ್ಪನೆಂಬ ವಿಷಯದಲ್ಲಿ ಯೆಹೋವನು ಅವನಿಗೊಂದು ಪಾಠವನ್ನು ಕಲಿಸಿದನು. ಭೂಮಿ, ಸಮುದ್ರ, ನಕ್ಷತ್ರಗಳಿಂದ ತುಂಬಿರುವ ಆಕಾಶ, ಪ್ರಾಣಿಗಳು ಮತ್ತು ಸೃಷ್ಟಿಯ ಇನ್ನೂ ಅನೇಕ ಅದ್ಭುತಗಳ ಕುರಿತು ಯೆಹೋವನು ಮಾತಾಡಿದನು. ಕೊನೆಗೆ, ಯೆಹೋವನು ಲಿವ್ಯಾತಾನ್‌, ಅಂದರೆ ಮೊಸಳೆಯ ಬಗ್ಗೆ ತಿಳಿಸಿದನು. ಯೋಬನು ದೀನಭಾವದಿಂದ ತಿದ್ದುಪಾಟನ್ನು ಸ್ವೀಕರಿಸಿ, ಈ ವಿಷಯದಲ್ಲೂ ಉತ್ತಮ ಮಾದರಿಯನ್ನಿಟ್ಟನು.

ನಾವು ಯೆಹೋವನ ಸೇವೆಯನ್ನು ಉತ್ತಮ ರೀತಿಯಲ್ಲಿ ಮಾಡುತ್ತಿರುವಾಗಲೂ, ತಪ್ಪುಗಳನ್ನು ಮಾಡುತ್ತಿರಬಹುದು. ಅದೊಂದು ಗಂಭೀರ ತಪ್ಪಾಗಿದ್ದರೆ, ಯೆಹೋವನು ಹೇಗಾದರೂ ನಮ್ಮನ್ನು ತಿದ್ದುವನು. (ಜ್ಞಾನೋಕ್ತಿ 3:11, 12) ನಮ್ಮ ಮನಸ್ಸಾಕ್ಷಿಯನ್ನು ಚುಚ್ಚುವಂತಹ ವಚನವೊಂದು ನಮ್ಮ ನೆನಪಿಗೆ ಬರಬಹುದು. ಕಾವಲಿನಬುರುಜು ಪತ್ರಿಕೆ ಇಲ್ಲವೆ ವಾಚ್‌ ಟವರ್‌ ಸೊಸೈಟಿಯ ಯಾವುದಾದರೊಂದು ಪ್ರಕಾಶನವು, ನಮಗೆ ನಮ್ಮ ತಪ್ಪಿನ ಅರಿವನ್ನು ಮೂಡಿಸುವಂತಹ ವಿಷಯವನ್ನು ತಿಳಿಸಬಹುದು. ಅಥವಾ ನಾವು ಬೈಬಲಿನ ಒಂದು ಸಿದ್ಧಾಂತವನ್ನು ಅನ್ವಯಿಸಲು ತಪ್ಪಿದ್ದೇವೆಂದು ಒಬ್ಬ ಜೊತೆ ಕ್ರೈಸ್ತನು ನಮಗೆ ದಯಾಪೂರ್ವಕವಾಗಿ ತಿಳಿಸಬಹುದು. ಆ ರೀತಿಯ ತಿದ್ದುಪಾಟಿಗೆ ನಾವು ಹೇಗೆ ಪ್ರತಿಕ್ರಿಯಿಸುವೆವು? “ಆದಕಾರಣ [ನಾನು ಆಡಿದ್ದನ್ನು] ತಿರಸ್ಕರಿಸಿ ಧೂಳಿಯಲ್ಲಿಯೂ ಬೂದಿಯಲ್ಲಿಯೂ ಕುಳಿತು ಪಶ್ಚಾತ್ತಾಪಪಡುತ್ತೇನೆ” ಎಂದು ಹೇಳುತ್ತಾ, ಯೋಬನು ಪಶ್ಚಾತ್ತಾಪಿ ಮನೋಭಾವವನ್ನು ವ್ಯಕ್ತಪಡಿಸಿದನು.—ಯೋಬ 42:6.

ಯೆಹೋವನಿಂದ ಬಹುಮಾನಿಸಲ್ಪಟ್ಟದ್ದು

ತನ್ನ ಸೇವಕನಾದ ಯೋಬನು ಇನ್ನೂ 140 ವರ್ಷಗಳ ತನಕ ಬದುಕುವಂತೆ ಅನುಮತಿಸುವ ಮೂಲಕ ಯೆಹೋವನು ಅವನಿಗೆ ಬಹುಮಾನ ನೀಡಿದನು. ಆ ಸಮಯದಲ್ಲಿ ಅವನು ಕಳೆದುಕೊಂಡಿದ್ದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮತ್ತೆ ಪಡೆದುಕೊಂಡನು. ಮತ್ತು ಕೊನೆಗೆ ಯೋಬನು ಮರಣಪಟ್ಟನಾದರೂ, ದೇವರ ಹೊಸ ಲೋಕದಲ್ಲಿ ಅವನು ಖಂಡಿತವಾಗಿಯೂ ಪುನರುತ್ಥಾನಹೊಂದುವನು.—ಯೋಬ 42:12-17; ಯೆಹೆಜ್ಕೇಲ 14:14; ಯೋಹಾನ 5:28, 29; 2 ಪೇತ್ರ 3:13.

ನಾವು ಯೆಹೋವನನ್ನು ನಿಷ್ಠೆಯಿಂದ ಸೇವಿಸಿ, ನಮಗೆ ಸಿಗುವಂತಹ ಎಲ್ಲ ಬೈಬಲ್‌ ಆಧಾರಿತ ತಿದ್ದುಪಾಟನ್ನು ಸ್ವೀಕರಿಸಿದರೆ, ನಮಗೂ ದೇವರ ಅನುಗ್ರಹ ಮತ್ತು ಆಶೀರ್ವಾದ ಸಿಗುವುದರಲ್ಲಿ ಸಂದೇಹವಿಲ್ಲ. ಫಲಸ್ವರೂಪವಾಗಿ, ದೇವರ ಹೊಸ ವಿಷಯಗಳ ವ್ಯವಸ್ಥೆಯಲ್ಲಿ ಜೀವಿಸುವ ನಿರೀಕ್ಷೆ ನಮಗೆ ಖಂಡಿತವಾಗಿಯೂ ಇರುವುದು. ಇದಕ್ಕಿಂತಲೂ ಹೆಚ್ಚಾಗಿ, ನಾವು ದೇವರನ್ನು ಘನಪಡಿಸುವೆವು. ನಮ್ಮ ನಂಬಿಗಸ್ತ ನಡತೆಗೆ ಪ್ರತಿಫಲವು ಸಿಗುವುದು ಮತ್ತು ದೇವರ ಜನರು ಆತನನ್ನು ಸ್ವಾರ್ಥ ಕಾರಣಗಳಿಗಾಗಿ ಅಲ್ಲ, ಬದಲಿಗೆ ಹೃತ್ಪೂರ್ವಕ ಪ್ರೀತಿಯಿಂದ ಸೇವಿಸುತ್ತಾರೆಂಬ ಪ್ರಮಾಣಕ್ಕೆ ಇದು ಹೆಚ್ಚನ್ನು ಕೂಡಿಸುವುದು. ತಿದ್ದುಪಾಟನ್ನು ದೀನತೆಯಿಂದ ಸ್ವೀಕರಿಸಿದ ನಂಬಿಗಸ್ತ ಯೋಬನಂತೆ, ಯೆಹೋವನ ಹೃದಯವನ್ನು ಸಂತೋಷಪಡಿಸುವ ಎಂತಹ ಸುಯೋಗ ನಮಗಿದೆ!—ಜ್ಞಾನೋಕ್ತಿ 27:11.

[ಪುಟ 26ರಲ್ಲಿರುವ ಚಿತ್ರಗಳು]

ಅನಾಥರು, ವಿಧವೆಯರು, ಮತ್ತು ಇತರರಿಗಾಗಿ ಯೋಬನು ಪ್ರೀತಿಪರ ಚಿಂತೆಯನ್ನು ವ್ಯಕ್ತಪಡಿಸಿದನು

[ಪುಟ 28ರಲ್ಲಿರುವ ಚಿತ್ರಗಳು]

ದೀನತೆಯಿಂದ ತಿದ್ದುಪಾಟನ್ನು ಸ್ವೀಕರಿಸಿದ್ದಕ್ಕಾಗಿ ಯೋಬನು ಬಹಳವಾಗಿ ಬಹುಮಾನಿಸಲ್ಪಟ್ಟನು