ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾನವಕುಲಕ್ಕೆ ಒಬ್ಬ ಸಹಾಯಕನ ಅಗತ್ಯವಿದೆ ಏಕೆ?

ಮಾನವಕುಲಕ್ಕೆ ಒಬ್ಬ ಸಹಾಯಕನ ಅಗತ್ಯವಿದೆ ಏಕೆ?

ಮಾನವಕುಲಕ್ಕೆ ಒಬ್ಬ ಸಹಾಯಕನ ಅಗತ್ಯವಿದೆ ಏಕೆ?

‘ನಾನೊಬ್ಬ ಕ್ರೂರ ಹಿಂಸಕನಾಗಿದ್ದೆ’ ಎಂದು ಒಂದು ಸಮಯದಲ್ಲಿ ಅಹಂಕಾರಿಯೂ ಹಿಂಸಾತ್ಮಕನೂ ಆಗಿದ್ದ ಒಬ್ಬ ವ್ಯಕ್ತಿಯು ಒಪ್ಪಿಕೊಂಡನು. ಅವನೊಬ್ಬ ದೂಷಕನಾಗಿದ್ದು, ಯೇಸು ಕ್ರಿಸ್ತನ ಹಿಂಬಾಲಕರನ್ನು ನಿರ್ದಯವಾಗಿ ಪೀಡಿಸಿ, ಅವರ ಮೇಲೆ ದಾಳಿಮಾಡಿದ್ದನು. ಆದರೂ, “ನನ್ನ ಮೇಲೆ ಕರುಣೆ ತೋರಿಸಲಾಯಿತು” ಎಂದವನು ಕೃತಜ್ಞತಾಪೂರ್ವಕವಾಗಿ ಹೇಳಿದನು. ಇದನ್ನು ನಂಬುವುದು ಕಷ್ಟಕರವಾಗಿ ತೋರಿದರೂ, ಈ ಉಗ್ರ ಹಿಂಸಕನು ಕಾಲಾನಂತರ ನಂಬಿಗಸ್ತ ಕ್ರೈಸ್ತ ಅಪೊಸ್ತಲನಾದ ಪೌಲನಾಗಿ ಪರಿಣಮಿಸಿದನು.—1 ತಿಮೊಥೆಯ 1:12-16, NW; ಅ. ಕೃತ್ಯಗಳು 9:1-19.

ಎಲ್ಲರೂ ಪೌಲನಂತೆ ಕ್ರೂರಿಗಳಾಗಿ ನಡೆದುಕೊಳ್ಳುವುದಿಲ್ಲ. ಆದರೂ, ನಾವೆಲ್ಲರೂ ದೇವರ ಮಟ್ಟಗಳಿಗನುಸಾರ ನಡೆದುಕೊಳ್ಳಲು ತಪ್ಪುತ್ತೇವೆ. ಏಕೆ? ಏಕೆಂದರೆ ‘ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದೇವೆ.’ (ರೋಮಾಪುರ 3:23) ಅಲ್ಲದೆ, ನಾವು ದೇವರ ಕರುಣೆಗೆ ಪಾತ್ರರಾಗುವಷ್ಟು ಯೋಗ್ಯರಲ್ಲವೆಂದು ಭಾವಿಸಿಕೊಂಡು, ಹತಾಶೆಯ ಹಳ್ಳದಲ್ಲಿ ಹೂತುಹೋಗುವುದು ತೀರ ಸುಲಭ. ತನ್ನ ಪಾಪಪೂರ್ಣ ಪ್ರವೃತ್ತಿಗಳ ಕುರಿತು ಯೋಚಿಸುತ್ತಾ, ಸ್ವತಃ ಪೌಲನೇ ಉದ್ಗರಿಸಿದ್ದು: “ಅಯ್ಯೊ, ನಾನು ಎಂಥ ದುರವಸ್ಥೆಯಲ್ಲಿ ಬಿದ್ದ ಮನುಷ್ಯನು! ಇಂಥ ಮರಣಕ್ಕೆ ಒಳಗಾದ ಈ ದೇಹದಿಂದ ನನ್ನನ್ನು ಬಿಡಿಸುವವನು ಯಾರು?” ತನ್ನ ಪ್ರಶ್ನೆಗೆ ತಾನೇ ಉತ್ತರ ನೀಡುತ್ತಾ ಅವನು ಬರೆದುದು: “ಬಿಡಿಸುವವನು ಇದ್ದಾನೆಂಬದಕ್ಕಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ತೋತ್ರ.”—ರೋಮಾಪುರ 7:24, 25.

ಒಬ್ಬ ನೀತಿವಂತ ಸೃಷ್ಟಿಕರ್ತನು ಪಾಪಿಗಳೊಂದಿಗೆ ಹೇಗೆ ವ್ಯವಹರಿಸಸಾಧ್ಯವಿತ್ತು? (ಕೀರ್ತನೆ 5:4) ಪೌಲನು ಹೇಳಿದ ವಿಷಯವನ್ನು ಗಮನಿಸಿರಿ: “ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರಿಗೆ ಸ್ತೋತ್ರ.” (ಓರೆ ಅಕ್ಷರಗಳು ನಮ್ಮವು.) ದೇವರ ಕರುಣೆಗೆ ಪಾತ್ರನಾದ ಮತ್ತೊಬ್ಬನು ವಿವರಿಸಿ ಹೇಳಿದ್ದು: “ಯಾವನಾದರೂ ಪಾಪಮಾಡಿದರೆ ತಂದೆಯ ಬಳಿಯಲ್ಲಿ ನೀತಿವಂತನಾದ ಯೇಸು ಕ್ರಿಸ್ತನೆಂಬ ಸಹಾಯಕನು ನಮಗಿದ್ದಾನೆ. ಆತನು ನಮ್ಮ ಪಾಪಗಳನ್ನು ನಿವಾರಣಮಾಡುವ ಯಜ್ಞವಾಗಿದ್ದಾನೆ; ನಮ್ಮ ಪಾಪಗಳನ್ನು ಮಾತ್ರವಲ್ಲದೆ, ಸಮಸ್ತ ಲೋಕದ ಪಾಪಗಳನ್ನು ಸಹ ನಿವಾರಣಮಾಡುತ್ತಾನೆ.”—1 ಯೋಹಾನ 2:1, 2.

ಯೇಸು ಕ್ರಿಸ್ತನನ್ನು ‘ತಂದೆಯ ಬಳಿಯಲ್ಲಿರುವ ಸಹಾಯಕನೆಂದು’ ಏಕೆ ಕರೆಯಲಾಗಿದೆ? ಮತ್ತು ಯೇಸು ಯಾವ ವಿಧದಲ್ಲಿ ಪಾಪಗಳನ್ನು “ನಿವಾರಣಮಾಡುವ ಯಜ್ಞವಾಗಿದ್ದಾನೆ”?

ಒಬ್ಬ ಸಹಾಯಕನ ಅಗತ್ಯವಿದೆ ಏಕೆ?

ಯೇಸು ‘ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡು [“ಪ್ರಾಯಶ್ಚಿತ್ತ,” NW] ಕೊಡುವದಕ್ಕೆ’ ಭೂಮಿಗೆ ಬಂದನು. (ಮತ್ತಾಯ 20:28) ಪ್ರಾಯಶ್ಚಿತ್ತವು, ಒಂದು ವಸ್ತುವನ್ನು ಇಲ್ಲವೆ ವ್ಯಕ್ತಿಯನ್ನು ಪುನಃ ಖರೀದಿಸಲು ಅಥವಾ ಬಿಡಿಸಿಕೊಳ್ಳಲು ತೆರಲಾಗುವ ಬೆಲೆಯಾಗಿದೆ. “ಪ್ರಾಯಶ್ಚಿತ್ತ” ಎಂದು ತರ್ಜುಮೆ ಮಾಡಲ್ಪಟ್ಟಿರುವ ಹೀಬ್ರು ಪದದ ಕ್ರಿಯಾರೂಪವು, ಪಾಪಗಳನ್ನು ಮುಚ್ಚುವ ಅಥವಾ ಪರಿಹಾರವನ್ನು ಕೊಡುವ ಅರ್ಥವನ್ನು ಹೊಂದಿದೆ. (ಕೀರ್ತನೆ 78:38) ಮತ್ತಾಯ 20:28ರಲ್ಲಿ ಕಂಡುಕೊಳ್ಳಲ್ಪಡುವಂತಹ ಗ್ರೀಕ್‌ ಪದವು, ಯುದ್ಧದ ಕೈದಿಗಳನ್ನು ಇಲ್ಲವೆ ಗುಲಾಮರನ್ನು ಬಿಡಿಸಲಿಕ್ಕಾಗಿ ತೆರಲಾಗುತ್ತಿದ್ದ ಬೆಲೆಯನ್ನು ಸೂಚಿಸಲು ಬಳಸಲ್ಪಟ್ಟಿತು. ನ್ಯಾಯದ ತಕ್ಕಡಿಗಳನ್ನು ಸರಿದೂಗಿಸಲು, ಒಂದು ವಸ್ತುವನ್ನು ಪಡೆದುಕೊಳ್ಳಲಿಕ್ಕಾಗಿ ಅದರಷ್ಟೇ ಮೌಲ್ಯದ ಇನ್ನೊಂದು ವಸ್ತುವನ್ನು ಕೊಡಲಾಗುತ್ತದೆ.

ದೇವರ ವಿರುದ್ಧವಾಗಿ ಮೊದಲ ಮನುಷ್ಯನು ದಂಗೆಯೆದ್ದಾಗ ಮಾನವಕುಲವು ದಾಸತ್ವಕ್ಕೆ ಒಳಗಾಯಿತು. ಆದಿಕಾಂಡದ 3ನೆಯ ಅಧ್ಯಾಯದಲ್ಲಿ ತೋರಿಸಲ್ಪಟ್ಟಂತೆ, ಪರಿಪೂರ್ಣ ಮಾನವನಾದ ಆದಾಮನು ಯೆಹೋವ ದೇವರಿಗೆ ಅವಿಧೇಯನಾಗಿ ನಡೆದುಕೊಳ್ಳುವ ಆಯ್ಕೆಮಾಡಿದನು. ಹೀಗೆ ಮಾಡುವ ಮೂಲಕ, ಅವನು ತನ್ನನ್ನು ಮತ್ತು ಇನ್ನೂ ಜನಿಸದಿದ್ದ ತನ್ನ ಸಂತತಿಯನ್ನು ಪಾಪಮರಣಗಳ ದಾಸತ್ವಕ್ಕೆ ಮಾರಿಬಿಟ್ಟನು. ಹೀಗೆ ಆದಾಮನು, ತಾನೂ ತನ್ನ ಸಂತತಿಯೂ ಪರಿಪೂರ್ಣ ಮಾನವ ಜೀವದ ಕೊಡುಗೆಯನ್ನು ಕಳೆದುಕೊಳ್ಳುವಂತೆ ಮಾಡಿದನು.—ರೋಮಾಪುರ 5:12, 18, 19; 7:14.

ಪುರಾತನ ಇಸ್ರಾಯೇಲಿನಲ್ಲಿ, ಜನರ ಪಾಪಪರಿಹಾರಕ್ಕಾಗಿ ಅಥವಾ ಪಾಪಗಳನ್ನು ಮುಚ್ಚಲಿಕ್ಕಾಗಿ ದೇವರು ಪ್ರಾಣಿಗಳ ಯಜ್ಞಗಳನ್ನು ಅರ್ಪಿಸುವಂತೆ ಏರ್ಪಾಡು ಮಾಡಿದ್ದನು. (ಯಾಜಕಕಾಂಡ 1:4; 4:20, 35) ಹೀಗೆ, ಪಾಪಮಾಡುವ ವ್ಯಕ್ತಿಯ ಜೀವದ ಬದಲು ಯಜ್ಞವಾಗಿ ಅರ್ಪಿಸಲಾಗುತ್ತಿದ್ದ ಪ್ರಾಣಿಯ ಜೀವವನ್ನು ತೆರಲಾಗುತ್ತಿತ್ತು. (ಯಾಜಕಕಾಂಡ 17:11) ಆದಕಾರಣ, “ಸರ್ವದೋಷಪರಿಹಾರಕ ದಿನ”ವನ್ನು “ಪ್ರಾಯಶ್ಚಿತ್ತಗಳ ದಿನ”ವೆಂದು ಸಹ ಸಂಬೋಧಿಸಸಾಧ್ಯವಿತ್ತು.—ಯಾಜಕಕಾಂಡ 23:26-28.

ಆದರೆ ಪ್ರಾಣಿಗಳು ಮನುಷ್ಯರಿಗಿಂತ ಕೆಳಮಟ್ಟದವುಗಳಾಗಿದ್ದುದರಿಂದ, “ಹೋರಿಗಳ ಮತ್ತು ಹೋತಗಳ ರಕ್ತದಿಂದ ಪಾಪಗಳು [ಸಂಪೂರ್ಣವಾಗಿ] ಪರಿಹಾರವಾಗುವದು ಅಸಾಧ್ಯ”ವಾಗಿತ್ತು. (ಇಬ್ರಿಯ 10:1-4) ಒಂದು ಯಜ್ಞಕ್ಕೆ ಪಾಪಗಳನ್ನು ಶಾಶ್ವತವಾಗಿ ತೆಗೆದುಹಾಕಲು ಇಲ್ಲವೆ ಪರಿಹರಿಸಲು ಸಾಕಾಗುವಷ್ಟು ಮೌಲ್ಯವಿರಬೇಕಾದರೆ, ಅದು ಆದಾಮನು ಏನನ್ನು ಕಳೆದುಕೊಂಡನೊ ಅದರ ಮೌಲ್ಯಕ್ಕೆ ಸರಿಸಮವಾದದ್ದಾಗಿರಲೇಬೇಕಿತ್ತು. ಪರಿಪೂರ್ಣ ಮಾನವನಾದ (ಆದಾಮನು) ಕಳೆದುಕೊಂಡದ್ದನ್ನು ಸರಿದೂಗಿಸಲು, ನ್ಯಾಯದ ತಕ್ಕಡಿಗಳು ಮತ್ತೊಬ್ಬ ಪರಿಪೂರ್ಣ ಮಾನವನನ್ನು (ಯೇಸು ಕ್ರಿಸ್ತನನ್ನು) ಅಗತ್ಯಪಡಿಸಿದವು. ತಮ್ಮ ಪ್ರಥಮ ತಂದೆಯಾದ ಆದಾಮನು ತನ್ನ ಸಂತಾನದವರನ್ನು ಯಾವ ದಾಸತ್ವಕ್ಕೆ ಮಾರಿಬಿಟ್ಟಿದ್ದನೊ, ಅದರಿಂದ ಅವರನ್ನು ಬಿಡಿಸುವಂತಹ ಪ್ರಾಯಶ್ಚಿತ್ತ ಬೆಲೆಯನ್ನು, ಒಂದು ಪರಿಪೂರ್ಣ ಮಾನವ ಜೀವವು ಮಾತ್ರ ಕೊಡಸಾಧ್ಯವಿತ್ತು. ‘ಪ್ರಾಣಕ್ಕೆ ಪ್ರತಿಯಾಗಿ ಪ್ರಾಣ’ವನ್ನು ಕೊಡುವುದರಿಂದ ಮಾತ್ರ ನಿಜವಾದ ನ್ಯಾಯದ ಆವಶ್ಯಕತೆಗಳು ಪೂರೈಸಲ್ಪಡಲಿದ್ದವು.—ವಿಮೋಚನಕಾಂಡ 21:23-25.

ಆದಾಮನು ಪಾಪಮಾಡಿ ಮರಣದಂಡನೆಗೆ ಒಳಗಾದಾಗ, ಇನ್ನೂ ಜನಿಸದಿದ್ದ ಅವನ ಸಂತಾನವು ಅವನಲ್ಲಿತ್ತು ಮತ್ತು ಹೀಗೆ ಅದು ಕೂಡ ಅವನೊಂದಿಗೆ ಮಡಿಯಿತು. “ಕಡೇ ಆದಾಮ”ನಾಗಿದ್ದ ಪರಿಪೂರ್ಣ ಮಾನವನಾದ ಯೇಸು, ಸ್ವಇಚ್ಛೆಯಿಂದಲೇ ಒಂದು ಕುಟುಂಬವನ್ನು ಬೆಳೆಸಲಿಲ್ಲ. (1 ಕೊರಿಂಥ 15:45) ಅವನು ಪರಿಪೂರ್ಣ ಮಾನವ ಯಜ್ಞದೋಪಾದಿ ಮರಣಪಟ್ಟಾಗ, ಅವನಲ್ಲಿ ಜನಿಸದಿದ್ದ ಸಂತಾನವಿತ್ತು. ಆದುದರಿಂದ, ಅವನಲ್ಲಿದ್ದ ಭಾವಿ ಮಾನವಕುಲವು ಅವನೊಂದಿಗೆ ಮಡಿಯಿತು ಎಂಬುದಾಗಿ ಹೇಳಬಹುದಾಗಿದೆ. ಆದಾಮನ ಪಾಪಪೂರ್ಣ, ಮಡಿಯುತ್ತಿರುವ ಕುಟುಂಬವನ್ನು ಯೇಸು ತನ್ನದಾಗಿಸಿಕೊಂಡನು. ತನ್ನ ಸ್ವಂತ ಕುಟುಂಬವನ್ನು ಬೆಳೆಸುವ ಹಕ್ಕನ್ನು ಅವನು ತೊರೆದುಬಿಟ್ಟನು. ತನ್ನ ಪರಿಪೂರ್ಣ ಮಾನವ ಜೀವವನ್ನು ಬಲಿಯಾಗಿ ಅರ್ಪಿಸುವ ಮೂಲಕ, ಆದಾಮನಿಂದ ಬಂದ ಸರ್ವ ಮಾನವಕುಲವನ್ನು ಯೇಸು ಪುನಃ ಖರೀದಿಸಿದನು. ಹೀಗೆ ಅವರು ಅವನ ಕುಟುಂಬದವರಾಗಸಾಧ್ಯವಿತ್ತು ಮತ್ತು ಅವನು ಅವರ “ನಿತ್ಯನಾದ ತಂದೆ”ಯಾಗಸಾಧ್ಯವಿತ್ತು.—ಯೆಶಾಯ 9:6, 7.

ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಮುಖಾಂತರ, ವಿಧೇಯ ಮಾನವಕುಲವು ದೇವರ ಕರುಣೆಗೆ ಪಾತ್ರವಾಗಿ, ನಿತ್ಯಜೀವವನ್ನು ಪಡೆದುಕೊಳ್ಳಸಾಧ್ಯವಾಯಿತು. ಆದಕಾರಣ, ಅಪೊಸ್ತಲ ಪೌಲನು ಬರೆದುದು: “ಯಾಕಂದರೆ ಪಾಪವು ಕೊಡುವ ಸಂಬಳ ಮರಣ; ದೇವರ ಉಚಿತಾರ್ಥ ವರವು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ನಿತ್ಯಜೀವ.” (ರೋಮಾಪುರ 6:23) ಯೆಹೋವನು ತನಗೂ ತನ್ನ ಪ್ರಿಯ ಪುತ್ರನಿಗೂ ಆದ ಮಹತ್ತರವಾದ ಬೆಲೆಯನ್ನು ಲೆಕ್ಕಿಸದೆ ಒದಗಿಸಿದ ಪ್ರಾಯಶ್ಚಿತ್ತದ ಮೂಲಕ ನಮಗೆ ತೋರಿಸಿರುವ ಪ್ರೀತಿ ಹಾಗೂ ಸಹಾನುಭೂತಿಗಾಗಿ ನಾವು ಆತನನ್ನು ಸ್ತುತಿಸದಿರಲು ಸಾಧ್ಯವೇ ಇಲ್ಲ. (ಯೋಹಾನ 3:16) ಮತ್ತು ಯೇಸು ಸ್ವರ್ಗೀಯ ಜೀವಿತಕ್ಕೆ ಪುನರುತ್ಥಿತನಾಗಿ, ಸ್ವರ್ಗದಲ್ಲಿ ದೇವರ ಮುಂದೆ ತನ್ನ ಪ್ರಾಯಶ್ಚಿತ್ತ ಯಜ್ಞದ ಮೌಲ್ಯವನ್ನು ಸಾದರಪಡಿಸಿದಾಗ, ನಿಜವಾಗಿಯೂ ‘ತಂದೆಯ ಬಳಿಯಲ್ಲಿರುವ ಸಹಾಯಕನಾಗಿ’ ರುಜುವಾದನು. * (ಇಬ್ರಿಯ 9:11, 12, 24; 1 ಪೇತ್ರ 3:18) ಆದರೆ ಯೇಸು ಕ್ರಿಸ್ತನು ಸ್ವರ್ಗದಲ್ಲಿ ಈಗ ನಮ್ಮ ಸಹಾಯಕನಾಗಿರುವುದು ಹೇಗೆ?

[ಪಾದಟಿಪ್ಪಣಿಗಳು]

^ ಪ್ಯಾರ. 12 ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕದ 4ನೆಯ ಹಾಗೂ 7ನೆಯ ಅಧ್ಯಾಯಗಳನ್ನು ನೋಡಿರಿ.

[ಪುಟ 4ರಲ್ಲಿರುವ ಚಿತ್ರ]

ಯೇಸುವಿನ ಪರಿಪೂರ್ಣ ಮಾನವ ಜೀವವು ಆದಾಮನ ಸಂತಾನವನ್ನು ಬಿಡಿಸಲು ಕೊಡಬೇಕಾಗಿದ್ದ ಬೆಲೆಯಾಗಿ ಪರಿಣಮಿಸಿತು