ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ನಮ್ಮನ್ನು ಹೇಗೆ ನಡೆಸುತ್ತಿದ್ದಾನೆ?

ಯೆಹೋವನು ನಮ್ಮನ್ನು ಹೇಗೆ ನಡೆಸುತ್ತಿದ್ದಾನೆ?

ಯೆಹೋವನು ನಮ್ಮನ್ನು ಹೇಗೆ ನಡೆಸುತ್ತಿದ್ದಾನೆ?

“ನನ್ನನ್ನು ಸಮವಾದ ದಾರಿಯಲ್ಲಿ ನಡಿಸು.”—ಕೀರ್ತನೆ 27:11.

1, 2. (ಎ) ಯೆಹೋವನು ಇಂದು ತನ್ನ ಜನರನ್ನು ಹೇಗೆ ನಡೆಸುತ್ತಿದ್ದಾನೆ? (ಬಿ) ಕೂಟಗಳಿಂದ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುವುದರಲ್ಲಿ ಏನೆಲ್ಲಾ ಒಳಗೂಡಿದೆ?

ನಮ್ಮ ಹಿಂದಿನ ಲೇಖನದಲ್ಲಿ ನಾವು ಕಲಿತಿರುವಂತೆ, ಯೆಹೋವನು ಬೆಳಕು ಮತ್ತು ಸತ್ಯದ ಮೂಲನಾಗಿದ್ದಾನೆ. ಸಮವಾದ ದಾರಿಯಲ್ಲಿ ನಾವು ಮುಂದೆ ಸಾಗಿದಂತೆ, ಆತನ ವಾಕ್ಯವು ನಮ್ಮ ದಾರಿಯನ್ನು ಬೆಳಗಿಸುತ್ತದೆ. ಆತನ ಮಾರ್ಗಗಳ ಕುರಿತು ನಮಗೆ ಉಪದೇಶಿಸುವ ಮೂಲಕ ಯೆಹೋವನು ನಮ್ಮನ್ನು ನಡೆಸುತ್ತಾನೆ. (ಕೀರ್ತನೆ 119:105) ಪ್ರಾಚೀನ ಕಾಲದ ಕೀರ್ತನೆಗಾರನಂತೆ, ನಾವು ಯೆಹೋವನ ನಡೆಸುವಿಕೆಗೆ ಗಣ್ಯತಾಪೂರ್ವಕವಾಗಿ ಪ್ರತಿಕ್ರಿಯಿಸುತ್ತೇವೆ ಮತ್ತು ಹೀಗೆ ಪ್ರಾರ್ಥಿಸುತ್ತೇವೆ: “ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ಬೋಧಿಸು; . . . ನನ್ನನ್ನು ಸಮವಾದ ದಾರಿಯಲ್ಲಿ ನಡಿಸು.”—ಕೀರ್ತನೆ 27:11.

2 ಇಂದು ಯೆಹೋವನು ನಮಗೆ ಉಪದೇಶವನ್ನು ನೀಡುವ ಒಂದು ವಿಧವು ಕ್ರೈಸ್ತ ಕೂಟಗಳಾಗಿವೆ. (1) ಕ್ರಮವಾಗಿ ಹಾಜರಾಗುವ ಮೂಲಕ, (2) ಕಾರ್ಯಕ್ರಮಕ್ಕೆ ಹೆಚ್ಚು ಗಮನಕೊಟ್ಟು ಆಲಿಸುವ ಮೂಲಕ ಮತ್ತು (3) ಸಭಿಕರು ಭಾಗವಹಿಸುವುದನ್ನು ಕೇಳಿಕೊಳ್ಳುವ ಭಾಗಗಳಲ್ಲಿ ಸಿದ್ಧಮನಸ್ಸಿನಿಂದ ಭಾಗವಹಿಸುವ ಮೂಲಕ, ನಾವು ಈ ಪ್ರೀತಿಯ ಒದಗಿಸುವಿಕೆಯ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದೇವೋ? ಇನ್ನೂ ಹೆಚ್ಚಾಗಿ, “ಸಮವಾದ ದಾರಿಯಲ್ಲಿ” ಸದಾ ಉಳಿಯಲು ನಮಗೆ ಸಹಾಯಮಾಡುವ ಸಲಹೆ-ಸೂಚನೆಗಳನ್ನು ಪಡೆದುಕೊಳ್ಳುವಾಗ, ಅದನ್ನು ಕೃತಜ್ಞತೆಯಿಂದ ಸ್ವೀಕರಿಸುತ್ತೇವೋ?

ಕೂಟಗಳಿಗೆ ಹಾಜರಾಗುವ ವಿಷಯದ ಕುರಿತೇನು?

3. ಒಬ್ಬ ಪೂರ್ಣ ಸಮಯದ ಶುಶ್ರೂಷಕನು ಕೂಟಗಳಿಗೆ ಕ್ರಮವಾಗಿ ಹಾಜರಾಗುವ ಉತ್ತಮ ಅಭ್ಯಾಸವನ್ನು ಹೇಗೆ ಬೆಳೆಸಿಕೊಂಡನು?

3 ರಾಜ್ಯ ಪ್ರಚಾರಕರಾಗಿರುವವರಲ್ಲಿ ಕೆಲವರು ಬಾಲ್ಯದಿಂದಲೂ ಕೂಟಗಳಿಗೆ ಕ್ರಮವಾಗಿ ಹಾಜರಾಗುತ್ತಿದ್ದಾರೆ. ಯೆಹೋವನ ಸಾಕ್ಷಿಗಳ ಒಬ್ಬ ಪೂರ್ಣ ಸಮಯದ ಶುಶ್ರೂಷಕಿಯು ಜ್ಞಾಪಿಸಿಕೊಳ್ಳುವುದು: “1930ರಲ್ಲಿ ನಾನು ಮತ್ತು ನನ್ನ ಅಕ್ಕಂದಿರು ದೊಡ್ಡವರಾಗುತ್ತಿದ್ದ ಸಮಯದಲ್ಲಿ, ನಾವು ಇವತ್ತು ಕೂಟಕ್ಕೆ ಹೋಗುತ್ತಿದ್ದೇವೊ ಎಂದು ನಮ್ಮ ಹೆತ್ತವರಿಗೆ ಕೇಳುವ ಅಗತ್ಯವಿರಲಿಲ್ಲ. ನಾವು ಅಸೌಖ್ಯವಾಗಿದ್ದರೆ ಮಾತ್ರ ಹೋಗುತ್ತಿರಲಿಲ್ಲ, ಇಲ್ಲದಿದ್ದಲ್ಲಿ ನಾವು ಖಂಡಿತವಾಗಿಯೂ ಕೂಟಗಳಿಗೆ ಹೋಗಲಿದ್ದೇವೆಂಬುದು ನಮಗೆ ಗೊತ್ತಿತ್ತು. ನಮ್ಮ ಕುಟುಂಬವು ಕೂಟಗಳನ್ನು ತಪ್ಪಿಸಿಕೊಂಡಿದ್ದೇ ಇಲ್ಲ.” ಪ್ರವಾದಿನಿ ಅನ್ನಳಂತೆ, ಈ ಸಹೋದರಿಯು ಯೆಹೋವನ ಆರಾಧನೆಯ ಸ್ಥಳದಿಂದ “ಎಂದೂ ತಪ್ಪಿಸಿಕೊಳ್ಳುತ್ತಿರಲಿಲ್ಲ.”—ಲೂಕ 2:36, 37, NW.

4-6. (ಎ) ಕೆಲವು ರಾಜ್ಯ ಪ್ರಚಾರಕರು ಕೂಟಗಳನ್ನು ಯಾಕೆ ತಪ್ಪಿಸಿಕೊಳ್ಳುತ್ತಾರೆ? (ಬಿ) ಕೂಟಗಳನ್ನು ಹಾಜರಾಗುವುದು ಯಾಕೆ ತುಂಬ ಪ್ರಾಮುಖ್ಯವಾಗಿದೆ?

4 ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಾಗುವವರಲ್ಲಿ ನೀವೂ ಒಬ್ಬರಾಗಿದ್ದೀರೋ ಅಥವಾ ಅಪರೂಪವಾಗಿ ಹೋಗುವವರಾಗಿಬಿಟ್ಟಿದ್ದೀರೋ? ತಾವು ಕೂಟಗಳಿಗೆ ಕ್ರಮವಾಗಿ ಹಾಜರಾಗುತ್ತಿದ್ದೇವೆಂದು ನೆನಸುತ್ತಿದ್ದ ಕೆಲವು ಕ್ರೈಸ್ತರು ಇದನ್ನು ಖಚಿತಪಡಿಸಿಕೊಳ್ಳಲು ನಿರ್ಣಯಿಸಿದರು. ಕೆಲವು ವಾರಗಳವರೆಗೆ, ಅವರು ಹಾಜರಾಗುವ ಪ್ರತಿಯೊಂದು ಕೂಟದ ಕುರಿತು ಬರೆದಿಟ್ಟುಕೊಂಡರು. ನಿಗದಿತ ಅವಧಿಯ ನಂತರ ಅವರು ಆ ದಾಖಲೆಯನ್ನು ಪರಿಶೀಲಿಸಿದಾಗ, ತಾವು ತಪ್ಪಿಸಿಕೊಂಡಿದ್ದ ಕೂಟಗಳ ಸಂಖ್ಯೆಯನ್ನು ನೋಡಿ ಅವರಿಗೇ ಆಶ್ಚರ್ಯವಾಯಿತು.

5 ಕೆಲವರು ಹೀಗೆ ಹೇಳಬಹುದು: ‘ಅದಕ್ಕೇನು ಆಶ್ಚರ್ಯಪಡಬೇಕಾಗಿಲ್ಲ. ಅದೇನು ದೊಡ್ಡ ಸಂಗತಿಯಲ್ಲ. ಇಂದು ಜನರಿಗೆ ಎಷ್ಟೊಂದು ಒತ್ತಡವಿದೆಯೆಂದರೆ, ಕೂಟಗಳಿಗೆ ಕ್ರಮವಾಗಿ ಹಾಜರಾಗುವುದು ಅವರಿಗೆ ಸುಲಭವಾಗಿರುವುದಿಲ್ಲ.’ ಹೌದು, ನಾವು ಒತ್ತಡಭರಿತ ಸಮಯಗಳಲ್ಲಿ ಜೀವಿಸುತ್ತಿದ್ದೇವೆಂಬುದು ಸತ್ಯ. ಅಷ್ಟುಮಾತ್ರವಲ್ಲ, ಈ ಒತ್ತಡವು ನಿಸ್ಸಂದೇಹವಾಗಿಯೂ ದಿನೇ ದಿನೇ ಹೆಚ್ಚುವುದು. (2 ತಿಮೊಥೆಯ 3:13) ಆದರೆ ಈ ವಾಸ್ತವಾಂಶವು ತಾನೇ ನಾವು ಕೂಟಗಳಿಗೆ ಕ್ರಮವಾಗಿ ಹಾಜರಾಗುವುದನ್ನು ಅತೀ ಪ್ರಾಮುಖ್ಯವಾದದ್ದಾಗಿ ಮಾಡುತ್ತದಲ್ಲವೊ? ನಮ್ಮನ್ನು ಪೋಷಿಸಿಕೊಳ್ಳಲು ಹಿತಕರವಾದ ಆತ್ಮಿಕ ಆಹಾರದ ಕ್ರಮವಾದ ಪಥ್ಯವಿಲ್ಲದಿರುವಾಗ ಈ ವ್ಯವಸ್ಥೆಯು ನಮ್ಮ ಮೇಲೆ ಹೇರುವ ಒತ್ತಡವನ್ನು ನಾವು ಎದುರಿಸಿನಿಲ್ಲುವೆವು ಎಂದು ನಿರೀಕ್ಷಿಸಸಾಧ್ಯವಿಲ್ಲ. ಅಷ್ಟೇ ಏಕೆ, ಸಹೋದರರೊಂದಿಗೆ ಕ್ರಮವಾಗಿ ಸಹವಾಸ ಮಾಡದಿದ್ದರೆ “ಸಮವಾದ ದಾರಿಯನ್ನು” ಸಂಪೂರ್ಣವಾಗಿ ತ್ಯಜಿಸಿಬಿಡುವಂತೆಯೂ ನಾವು ಶೋಧಿಸಲ್ಪಡಬಹುದು! (ಜ್ಞಾನೋಕ್ತಿ 4:18) ನಿಜ, ದಿನವಿಡೀ ಕೆಲಸಮಾಡಿ ದಣಿದು ಮನೆಗೆ ಬರುವಾಗ, ನಮಗೆ ಕೂಟಕ್ಕೆ ಹಾಜರಾಗಲು ಯಾವಾಗಲೂ ಮನಸ್ಸಾಗಲಿಕ್ಕಿಲ್ಲ. ಹಾಗಿದ್ದರೂ, ನಮ್ಮ ಆಯಾಸದ ಮಧ್ಯೆಯೂ ನಾವು ತಪ್ಪದೇ ಹಾಜರಾಗುವಾಗ, ಸ್ವತಃ ನಾವು ಪ್ರಯೋಜನವನ್ನು ಹೊಂದುತ್ತೇವೆ ಮತ್ತು ರಾಜ್ಯ ಸಭಾಗೃಹದಲ್ಲಿ ನಮ್ಮ ಜೊತೆ ಕ್ರೈಸ್ತರನ್ನು ಸಹ ಉತ್ತೇಜಿಸುತ್ತೇವೆ.

6 ಕೂಟಗಳಿಗೆ ಕ್ರಮವಾಗಿ ಹಾಜರಾಗುವುದು ಏಕೆ ಪ್ರಾಮುಖ್ಯವಾಗಿದೆ ಎಂಬುದಕ್ಕೆ ಇನ್ನೊಂದು ಮುಖ್ಯ ಕಾರಣವನ್ನು ಇಬ್ರಿಯ 10:25 ತಿಳಿಸುತ್ತದೆ. ‘ಆ ದಿನವು ಸಮೀಪಿಸುತ್ತಾ ಬರುವುದನ್ನು ನೋಡುವುದರಿಂದ’ ಒಟ್ಟಾಗಿ ಕೂಡಿಬರುವುದನ್ನು ‘ಮತ್ತಷ್ಟು ಮಾಡಬೇಕೆಂದು’ ಅಪೊಸ್ತಲ ಪೌಲನು ಆ ವಚನದಲ್ಲಿ ಜೊತೆ ಕ್ರೈಸ್ತರನ್ನು ಉತ್ತೇಜಿಸುತ್ತಾನೆ. ಹೌದು, ‘ಯೆಹೋವನ ದಿನವು’ ಹತ್ತಿರವಾಗುತ್ತಿದೆ ಎಂಬ ನಿಜತ್ವವನ್ನು ನಾವು ಎಂದೂ ಮರೆಯಬಾರದು. (2 ಪೇತ್ರ 3:12, NW) ಈ ವ್ಯವಸ್ಥೆಯ ಅಂತ್ಯವು ಬಹಳ ದೂರದಲ್ಲಿದೆಯೆಂಬ ತೀರ್ಮಾನಕ್ಕೆ ನಾವು ಬರುವುದಾದರೆ, ಆಗ ಕೂಟದ ಹಾಜರಿಯಂತಹ ಆವಶ್ಯಕ ಆತ್ಮಿಕ ಚಟುವಟಿಕೆಗಳ ಸ್ಥಾನವನ್ನು ವೈಯಕ್ತಿಕ ಬೆನ್ನಟ್ಟುವಿಕೆಗಳು ಆಕ್ರಮಿಸುವಂತೆ ನಾವು ಬಿಡಬಹುದು. ಆಗ ಯೇಸು ಎಚ್ಚರಿಸಿದಂತೆ, ‘ಆ ದಿವಸವು ನಮ್ಮ ಮೇಲೆ ಉರ್ಲಿನಂತೆ ಫಕ್ಕನೆ ಬಂದೀತು.’—ಲೂಕ 21:34.

ಚೆನ್ನಾಗಿ ಕಿವಿಗೊಡುವವರಾಗಿರಿ

7. ಮಕ್ಕಳು ಕೂಟಗಳಲ್ಲಿ ಗಮನ ಕೊಡುವುದು ಏಕೆ ಪ್ರಾಮುಖ್ಯವಾಗಿದೆ?

7 ಕೇವಲ ಕೂಟಗಳಿಗೆ ಹಾಜರಾಗುವುದು ಮಾತ್ರ ಸಾಕಾಗದು. ನಾವು ಚೆನ್ನಾಗಿ ಕಿವಿಗೊಡುವವರಾಗಿಯೂ ಇರಬೇಕು, ಅಂದರೆ ಕೂಟಗಳಲ್ಲಿ ಏನು ಹೇಳಲಾಗುತ್ತದೊ ಅದಕ್ಕೆ ಗಮನವನ್ನು ಕೊಡಬೇಕು. (ಜ್ಞಾನೋಕ್ತಿ 7:24) ಇದು ನಮ್ಮ ಮಕ್ಕಳಿಗೂ ಅನ್ವಯಿಸುತ್ತದೆ. ಒಂದು ಮಗುವು ಶಾಲೆಗೆ ಹೋಗುವಾಗ, ಒಂದು ನಿರ್ದಿಷ್ಟ ವಿಷಯವು ಅವನಿಗೆ ಇಷ್ಟವಿಲ್ಲದಿದ್ದರೆ ಅಥವಾ ಅವನಿಗೆ ಅರ್ಥವಾಗುವುದು ಕಷ್ಟಕರವಾಗಿರುವಂತೆ ಕಂಡರೂ ಅವನು ತನ್ನ ಶಿಕ್ಷಕನಿಗೆ ಗಮನಕೊಡುವಂತೆ ನಿರೀಕ್ಷಿಸಲಾಗುತ್ತದೆ. ಮಗುವು ಗಮನ ಕೊಡಲು ಪ್ರಯತ್ನಿಸುವುದಾದರೆ ಅವನು ಆ ಪಾಠದಿಂದ ಸ್ವಲ್ಪವಾದರೂ ಪ್ರಯೋಜನವನ್ನು ಪಡೆಯುವನೆಂಬುದು ಶಿಕ್ಷಕನಿಗೆ ಗೊತ್ತಿರುತ್ತದೆ. ಹಾಗಾದರೆ, ಶಾಲೆಗೆ ಹೋಗುವ ಮಕ್ಕಳು ಕೂಟವು ಆರಂಭವಾದಂತೆ ನಿದ್ರೆಮಾಡಲು ಬಿಡುವುದರ ಬದಲು ಸಭಾ ಕೂಟಗಳಲ್ಲಿ ನೀಡಲಾಗುವ ಉಪದೇಶಕ್ಕೆ ಗಮನ ಕೊಡುವಂತೆ ನಿರೀಕ್ಷಿಸುವುದು ಸಮಂಜಸವಾಗಿರುವುದಿಲ್ಲವೋ? ಬೈಬಲಿನಲ್ಲಿ ಕಂಡುಬರುವ ಅಮೂಲ್ಯ ಸತ್ಯಗಳಲ್ಲಿ “ಕೆಲವು ಮಾತುಗಳು ತಿಳಿಯುವದಕ್ಕೆ ಕಷ್ಟವಾಗಿವೆ” ಎಂಬುದು ನಿಜವೇ. (2 ಪೇತ್ರ 3:16) ಆದರೆ ನಾವು ಒಂದು ಮಗುವಿನ ಕಲಿಯುವ ಸಾಮರ್ಥ್ಯವನ್ನು ಅಲ್ಪವಾಗಿ ಎಣಿಸಬಾರದು. ದೇವರು ಹಾಗೆ ಎಣಿಸುವುದಿಲ್ಲ. ಬೈಬಲ್‌ ಸಮಯಗಳಲ್ಲಿ, ದೇವರ ಯುವ ಸೇವಕರು ‘ಕಿವಿಗೊಡಲು ಮತ್ತು ಕಲಿಯಲು ಹಾಗೂ ಯೆಹೋವನಿಗೆ ಭಯಪಡಲು ಮತ್ತು ಧರ್ಮಶಾಸ್ತ್ರದ ಎಲ್ಲಾ ನಿಯಮಗಳನ್ನು ಅನುಸರಿಸಿ ಅದರ ಪ್ರಕಾರವೇ ನಡೆಯುವಂತೆ’ ಆಜ್ಞಾಪಿಸಲ್ಪಟ್ಟಿದ್ದರು. ಈ ಧರ್ಮಶಾಸ್ತ್ರದಲ್ಲಿದ್ದ ಕೆಲವು ವಿಚಾರಗಳು ನಿಸ್ಸಂದೇಹವಾಗಿ ಮಕ್ಕಳಿಗೆ ಅರ್ಥಮಾಡಿಕೊಳ್ಳಲು ಕಷ್ಟವಾಗಿದ್ದರೂ ಅವರು ಕಿವಿಗೊಡಬೇಕಿತ್ತು. (ಧರ್ಮೋಪದೇಶಕಾಂಡ 31:12, NW; ಯಾಜಕಕಾಂಡ 18:1-30ನ್ನು ಹೋಲಿಸಿರಿ.) ಇಂದು ಸಹ ಯೆಹೋವನು ಮಕ್ಕಳಿಂದ ಅದನ್ನೇ ಅಪೇಕ್ಷಿಸುವುದಿಲ್ಲವೇ?

8. ಕೂಟಗಳಲ್ಲಿ ತಮ್ಮ ಮಕ್ಕಳು ಚೆನ್ನಾಗಿ ಗಮನಕೊಡುವಂತೆ ಸಹಾಯಮಾಡಲು ಕೆಲವು ಹೆತ್ತವರು ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳುತ್ತಾರೆ?

8 ತಮ್ಮ ಮಕ್ಕಳ ಆತ್ಮಿಕ ಅಗತ್ಯಗಳು, ಅವರು ಕೂಟಗಳಲ್ಲಿ ಕಲಿಯುತ್ತಿರುವ ವಿಷಯಗಳಿಂದ ಆಂಶಿಕವಾಗಿ ಪೂರೈಸಲ್ಪಡುತ್ತವೆ ಎಂಬುದನ್ನು ಕ್ರೈಸ್ತ ಹೆತ್ತವರು ಮನಗಾಣುತ್ತಾರೆ. ಆದುದರಿಂದ, ಕೆಲವು ಹೆತ್ತವರು ತಮ್ಮ ಮಕ್ಕಳು ಕೂಟಗಳಿಗೆ ಹೋಗುವ ಮುಂಚೆ ಸ್ವಲ್ಪ ಹೊತ್ತು ನಿದ್ರಿಸುವಂತೆ ಮಾಡುತ್ತಾರೆ. ಹೀಗೆ ಈ ಮಕ್ಕಳು ರಾಜ್ಯ ಸಭಾಗೃಹಕ್ಕೆ ಬರುವಾಗ ಉಲ್ಲಾಸಕರವಾಗಿಯೂ, ಕಲಿಯಲು ಸಿದ್ಧರಾಗಿ ಇರುವಂತೆಯೂ ಸಾಧ್ಯವಾಗುತ್ತದೆ. ಇನ್ನೂ ಕೆಲವು ಹೆತ್ತವರು ಕೂಟದ ರಾತ್ರಿಗಳಂದು ತಮ್ಮ ಮಕ್ಕಳು ಟೆಲಿವಿಷನ್‌ ಅನ್ನು ವೀಕ್ಷಿಸುವುದನ್ನು ಕಟ್ಟುನಿಟ್ಟಾಗಿ ಮಿತಗೊಳಿಸುತ್ತಾರೆ ಅಥವಾ ಆ ರಾತ್ರಿ ಅದನ್ನು ವೀಕ್ಷಿಸಲೇಬಾರದೆಂಬ ವಿವೇಕಯುತ ನಿರ್ಣಯವನ್ನೂ ಮಾಡುತ್ತಾರೆ. (ಎಫೆಸ 5:15, 16) ಮತ್ತು ಇಂತಹ ಹೆತ್ತವರು ಕೂಟಗಳಲ್ಲಿ ಮಕ್ಕಳನ್ನು ಅಪಕರ್ಷಿಸುವ ಸಂಗತಿಗಳನ್ನು ಕಡಿಮೆಗೊಳಿಸುತ್ತಾ, ತಮ್ಮ ಮಕ್ಕಳು ಅವರವರ ಪ್ರಾಯ ಮತ್ತು ಸಾಮರ್ಥ್ಯಕ್ಕೆ ಅನುಸಾರವಾಗಿ ಕಿವಿಗೊಡುವಂತೆ ಮತ್ತು ಕಲಿಯುವಂತೆ ಉತ್ತೇಜಿಸುತ್ತಾರೆ.—ಜ್ಞಾನೋಕ್ತಿ 8:32.

9. ಕಿವಿಗೊಡುವ ನಮ್ಮ ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ನಮಗೆ ಯಾವುದು ಸಹಾಯ ಮಾಡಬಲ್ಲದು?

9 ಯೇಸು ವಯಸ್ಕರೊಂದಿಗೆ ಮಾತಾಡುತ್ತಿದ್ದಾಗ ಹೀಗೆ ಹೇಳಿದನು: “ನೀವು ಹೇಗೆ ಕಿವಿಗೊಡಬೇಕೋ ನೋಡಿಕೊಳ್ಳಿರಿ.” (ಲೂಕ 8:18) ನಮ್ಮ ದಿನಗಳಲ್ಲಿ ಅನೇಕವೇಳೆ ಇದನ್ನು ಮಾಡುವುದಕ್ಕಿಂತ ಹೇಳುವುದೇ ಹೆಚ್ಚು ಸುಲಭ. ಕ್ರಿಯಾಶೀಲವಾಗಿ ಕಿವಿಗೊಡುವುದು ಕಷ್ಟದ ಕೆಲಸ ಎಂಬುದು ಒಪ್ಪತಕ್ಕ ಮಾತೇ. ಆದರೆ ಕಿವಿಗೊಡುವ ಸಾಮರ್ಥ್ಯವನ್ನು ನಾವು ಬೆಳೆಸಿಕೊಳ್ಳಬಹುದು. ನೀವು ಒಂದು ಬೈಬಲ್‌ ಭಾಷಣ ಅಥವಾ ಒಂದು ಕೂಟದ ಭಾಗಕ್ಕೆ ಕಿವಿಗೊಡುತ್ತಿರುವಾಗ, ಮುಖ್ಯ ವಿಷಯಗಳನ್ನು ಪ್ರತ್ಯೇಕಿಸಲು ಪ್ರಯತ್ನಿಸಿರಿ. ಭಾಷಣಕರ್ತನು ಮುಂದೆ ಏನನ್ನು ಹೇಳಲಿಕ್ಕಿದ್ದಾನೆಂಬುದನ್ನು ಎದುರುನೋಡಿರಿ. ನಿಮ್ಮ ಶುಶ್ರೂಷೆಯಲ್ಲಿ ನೀವು ಉಪಯೋಗಿಸಬಹುದಾದ ಅಥವಾ ನಿಮ್ಮ ಜೀವನದಲ್ಲಿ ನೀವು ಅನ್ವಯಿಸಸಾಧ್ಯವಿರುವ ವಿಷಯಗಳಿಗಾಗಿ ನೋಡಿರಿ. ವಿಷಯಗಳು ಪರಿಗಣಿಸಲ್ಪಡುವಾಗ ಅದನ್ನು ನಿಮ್ಮ ಮನಸ್ಸಿನಲ್ಲೇ ಪುನರ್ವಿಮರ್ಶಿಸಿರಿ. ಚುಟುಕಾದ ಟಿಪ್ಪಣಿಗಳನ್ನು ಬರೆದುಕೊಳ್ಳಿ.

10, 11. ಉತ್ತಮವಾಗಿ ಕಿವಿಗೊಡುವವರಾಗುವಂತೆ ಕೆಲವು ಹೆತ್ತವರು ತಮ್ಮ ಮಕ್ಕಳಿಗೆ ಹೇಗೆ ಸಹಾಯಮಾಡಿದ್ದಾರೆ, ಮತ್ತು ಯಾವ ವಿಧಾನಗಳನ್ನು ನೀವು ಸಹಾಯಕಾರಿಯಾಗಿ ಕಂಡುಕೊಂಡಿದ್ದೀರಿ?

10 ಚೆನ್ನಾಗಿ ಕಿವಿಗೊಡುವ ಹವ್ಯಾಸಗಳನ್ನು ಚಿಕ್ಕ ಪ್ರಾಯದಲ್ಲೇ ಉತ್ತಮವಾಗಿ ಕಲಿತುಕೊಳ್ಳಬಹುದು. ಇನ್ನೂ ಶಾಲೆಗೆ ಹೋಗಲು ಆರಂಭಿಸಿರದ ಕೆಲವು ಪುಟಾಣಿಗಳು ಸಹ ಓದುಬರಹವನ್ನು ಕಲಿತುಕೊಳ್ಳುವ ಮುಂಚೆಯೇ ಕೂಟಗಳ ಸಮಯದಲ್ಲಿ “ನೋಟ್ಸ್‌” ಬರೆದುಕೊಳ್ಳುವಂತೆ ತಮ್ಮ ಹೆತ್ತವರಿಂದ ಉತ್ತೇಜಿಸಲ್ಪಡುತ್ತಾರೆ. “ಯೆಹೋವ,” “ಯೇಸು,” ಅಥವಾ “ರಾಜ್ಯ” ಮುಂತಾದ ಚಿರಪರಿಚಿತ ಪದಗಳು ಕೂಟದಲ್ಲಿ ಉಪಯೋಗಿಸಲ್ಪಡುವಾಗಲೆಲ್ಲ ಅವರು ಒಂದು ಕಾಗದದ ತುಂಡಿನ ಮೇಲೆ ಗುರುತನ್ನು ಹಾಕಿಡುತ್ತಾರೆ. ಈ ರೀತಿಯಲ್ಲಿ, ವೇದಿಕೆಯಿಂದ ಹೇಳಲಾಗುವ ವಿಷಯದ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಲು ಮಕ್ಕಳು ಕಲಿಯಬಲ್ಲರು.

11 ಕೆಲವೊಮ್ಮೆ ದೊಡ್ಡ ಮಕ್ಕಳಿಗೂ ಗಮನಕೊಡುವಂತೆ ಮಾಡಲು ಉತ್ತೇಜನದ ಅಗತ್ಯವಿರುತ್ತದೆ. ಒಂದು ಕ್ರೈಸ್ತ ಅಧಿವೇಶನದ ಸಮಯದಲ್ಲಿ ತನ್ನ 11 ವರ್ಷ ಪ್ರಾಯದ ಮಗನು ಹಗಲುಗನಸು ಕಾಣುತ್ತಿದ್ದಾನೆಂದು ಗಮನಿಸಿದ ಒಂದು ಕುಟುಂಬದ ಶಿರಸ್ಸು ಆ ಹುಡುಗನ ಕೈಯಲ್ಲಿ ಒಂದು ಬೈಬಲನ್ನು ಕೊಟ್ಟು, ಭಾಷಣಕರ್ತರು ವಚನಗಳನ್ನು ಉಲ್ಲೇಖಿಸುವಾಗ ಅವುಗಳನ್ನು ಆ ಬೈಬಲಿನಲ್ಲಿ ತೆರೆಯುವಂತೆ ಹೇಳಿದನು. ಟಿಪ್ಪಣಿಗಳನ್ನು ಬರೆಯುತ್ತಿದ್ದ ತಂದೆಯು, ತನ್ನ ಮಗನು ಕೈಯಲ್ಲಿ ಹಿಡಿದಿದ್ದ ಬೈಬಲಿನಿಂದಲೇ ವಚನವನ್ನು ಓದುತ್ತಿದ್ದನು. ತದನಂತರ, ಹುಡುಗನು ಅಧಿವೇಶನದ ಕಾರ್ಯಕ್ರಮವನ್ನು ಇನ್ನೂ ಹೆಚ್ಚು ಉತ್ಸಾಹದಿಂದ ಕಿವಿಗೊಟ್ಟನು.

ನಿಮ್ಮ ಧ್ವನಿಯು ಗಟ್ಟಿಯಾಗಿ ಕೇಳಿಸಲ್ಪಡುವಂತಾಗಲಿ

12, 13. ಸಭಾ ಹಾಡುವಿಕೆಯಲ್ಲಿ ಭಾಗವಹಿಸುವುದು ಯಾಕೆ ಪ್ರಾಮುಖ್ಯವಾಗಿದೆ?

12 ರಾಜ ದಾವೀದನು ಹಾಡಿದ್ದು: “ಯೆಹೋವನೇ, . . . ನಿನ್ನ ಅದ್ಭುತಕೃತ್ಯವರ್ಣನೆಯ ಪದಗಳನ್ನು ಹಾಡುತ್ತಾ [“ಗಟ್ಟಿಯಾಗಿ ಹೇಳುತ್ತಾ,” NW] ನಿನ್ನ ಯಜ್ಞವೇದಿಯನ್ನು ಪ್ರದಕ್ಷಿಣೆಮಾಡುವೆನು.” (ಕೀರ್ತನೆ 26:6, 7) ನಮ್ಮ ನಂಬಿಕೆಯನ್ನು ಗಟ್ಟಿದನಿಯಲ್ಲಿ ವ್ಯಕ್ತಪಡಿಸಲು ಯೆಹೋವನ ಸಾಕ್ಷಿಗಳ ಕೂಟಗಳು ಅತ್ಯುತ್ತಮ ಅವಕಾಶಗಳನ್ನು ಒದಗಿಸುತ್ತವೆ. ನಾವು ನಮ್ಮ ನಂಬಿಕೆಯನ್ನು ಗಟ್ಟಿದನಿಯಲ್ಲಿ ವ್ಯಕ್ತಪಡಿಸಬಹುದಾದ ಒಂದು ವಿಧವು, ಸಭೆಯಲ್ಲಿ ಗೀತೆಗಳನ್ನು ಹಾಡುವಾಗ ಭಾಗವಹಿಸುವ ಮೂಲಕವೇ. ಇದು ನಮ್ಮ ಆರಾಧನೆಯ ಅತಿಮುಖ್ಯ ಭಾಗವಾಗಿದ್ದರೂ ಇದನ್ನು ಸುಲಭವಾಗಿ ನಿರ್ಲಕ್ಷಿಸುವ ಸಾಧ್ಯತೆಯಿದೆ.

13 ಓದಲು ಬರದಿರುವ ಕೆಲವು ಮಕ್ಕಳು, ಪ್ರತಿವಾರ ಕೂಟಗಳಲ್ಲಿ ಉಪಯೋಗಿಸಲಿರುವ ರಾಜ್ಯ ಗೀತೆಗಳನ್ನು ಕಂಠಪಾಠ ಮಾಡಿ ಹಾಡುತ್ತಾರೆ. ದೊಡ್ಡವರೊಂದಿಗೆ ಹಾಡಲು ಸಾಧ್ಯವಾಗುವುದರಿಂದ ಅವರು ರೋಮಾಂಚಿತಗೊಳ್ಳುತ್ತಾರೆ. ಹೀಗಿದ್ದರೂ, ಮಕ್ಕಳು ಸ್ವಲ್ಪ ದೊಡ್ಡವರಾಗಿ ಬೆಳೆಯುತ್ತಾ ಹೋದಂತೆ, ರಾಜ್ಯ ಗೀತೆಗಳನ್ನು ಒಟ್ಟುಗೂಡಿ ಹಾಡಲು ಮನಸ್ಸಿಲ್ಲದವರಾಗಬಹುದು. ಕೆಲವು ವಯಸ್ಕರು ಸಹ ಕೂಟಗಳಲ್ಲಿ ಗೀತೆಗಳನ್ನು ಹಾಡಲು ಬಹಳ ನಾಚಿಕೆಪಡುತ್ತಾರೆ. ಆದರೆ, ಕ್ಷೇತ್ರಸೇವೆಯು ನಮ್ಮ ಆರಾಧನೆಯ ಭಾಗವಾಗಿರುವಂತೆಯೇ ಹಾಡುವುದು ಸಹ ನಮ್ಮ ಆರಾಧನೆಯ ಭಾಗವಾಗಿದೆ. (ಎಫೆಸ 5:19) ಕ್ಷೇತ್ರ ಸೇವೆಯಲ್ಲಿ ಯೆಹೋವನನ್ನು ಸ್ತುತಿಸುವುದಕ್ಕೆ ನಾವು ನಮ್ಮಿಂದ ಸಾಧ್ಯವಿರುವಷ್ಟು ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತೇವೆ. ಹಾಗೆಯೇ, ನಮ್ಮ ಕಂಠವು ಮಧುರವಾಗಿರಲಿ ಅಥವಾ ಮಧುರವಾಗಿರದೇ ಇರಲಿ, ಹೃತ್ಪೂರ್ವಕ ಸ್ತುತಿಗೀತೆಗಳನ್ನು ಗಟ್ಟಿಯಾಗಿ ಹಾಡುವುದರ ಮೂಲಕ ನಾವು ಆತನನ್ನು ಮಹಿಮೆಪಡಿಸಲಾರೆವೋ?—ಇಬ್ರಿಯ 13:15.

14. ಸಭಾ ಕೂಟಗಳಲ್ಲಿ ನಾವು ಅಭ್ಯಾಸಿಸುವ ವಿಷಯವನ್ನು ಜಾಗರೂಕತೆಯಿಂದ ಮುಂಚಿತವಾಗಿಯೇ ತಯಾರಿಸುವುದು ಯೋಗ್ಯವಾಗಿದೆ ಏಕೆ?

14 ಸಭಿಕರು ಭಾಗವಹಿಸಬಹುದಾದ ಕೂಟದ ಭಾಗಗಳಲ್ಲಿ ಇತರರನ್ನು ಬಲಪಡಿಸುವ ಹೇಳಿಕೆಗಳನ್ನು ನೀಡುವ ಮೂಲಕವೂ ನಾವು ದೇವರಿಗೆ ಸ್ತುತಿಯನ್ನು ತರುತ್ತೇವೆ. ಇದಕ್ಕೆ ತಯಾರಿಯು ಆವಶ್ಯಕ. ದೇವರ ವಾಕ್ಯದ ಹೆಚ್ಚು ಆಳವಾದ ವಿಷಯಗಳ ಕುರಿತು ಚಿಂತನೆ ಮಾಡಲು ಸಮಯವು ಬೇಕಾಗುತ್ತದೆ. ಶಾಸ್ತ್ರವಚನಗಳ ಹುರುಪಿನ ವಿದ್ಯಾರ್ಥಿಯಾಗಿದ್ದ ಅಪೊಸ್ತಲ ಪೌಲನು ಇದನ್ನು ಮನಗಂಡಿದ್ದನು. ಅವನು ಬರೆದದ್ದು: “ಆಹಾ, ದೇವರ ಐಶ್ವರ್ಯವೂ ಜ್ಞಾನವೂ ವಿವೇಕವೂ ಎಷ್ಟೋ ಅಗಾಧ!” (ರೋಮಾಪುರ 11:33) ಕುಟುಂಬದ ಶಿರಸ್ಸುಗಳೇ, ನೀವು ಕುಟುಂಬದ ಪ್ರತಿಯೊಬ್ಬ ಸದಸ್ಯನಿಗೆ ಶಾಸ್ತ್ರವಚನಗಳಲ್ಲಿ ಪ್ರಕಟಿಸಲಾದ ದೇವರ ವಿವೇಕವನ್ನು ಕಂಡುಹಿಡಿಯಲು ಸಹಾಯಮಾಡುವುದು ಬಹಳ ಪ್ರಾಮುಖ್ಯವಾಗಿದೆ. ಕುಟುಂಬ ಬೈಬಲ್‌ ಅಭ್ಯಾಸವನ್ನು ನಡೆಸುತ್ತಿರುವಾಗ, ಕಷ್ಟಕರ ವಿಷಯಗಳನ್ನು ವಿವರಿಸಲು ಮತ್ತು ಕೂಟಗಳಿಗೆ ತಯಾರಿಸಲು ನಿಮ್ಮ ಕುಟುಂಬಕ್ಕೆ ಸಹಾಯಮಾಡಲು ಸ್ವಲ್ಪ ಸಮಯವನ್ನು ಬದಿಗಿರಿಸಿರಿ.

15. ಕೂಟಗಳಲ್ಲಿ ಹೇಳಿಕೆ ನೀಡಲು ಯಾವ ಸಲಹೆಗಳು ಸಹಾಯಮಾಡಬಲ್ಲವು?

15 ಕೂಟಗಳಲ್ಲಿ ನೀವು ಇನ್ನೂ ಹೆಚ್ಚಿನ ಹೇಳಿಕೆಗಳನ್ನು ನೀಡಲು ಬಯಸುವುದಾದರೆ, ನೀವು ಏನನ್ನು ಹೇಳಲು ಬಯಸುತ್ತೀರೊ ಅದನ್ನು ಮುಂಚಿತವಾಗಿ ಯಾಕೆ ತಯಾರಿಸಬಾರದು? ಉದ್ದುದ್ದ ಉತ್ತರಗಳನ್ನು ನೀಡುವ ಆವಶ್ಯಕತೆಯಿಲ್ಲ. ಒಂದು ತಕ್ಕದಾದ ಬೈಬಲ್‌ ವಚನವನ್ನು ಮನವರಿಕೆಯಿಂದ ಓದುವುದು ಅಥವಾ ಉತ್ತಮವಾಗಿ ಆರಿಸಲ್ಪಟ್ಟಿರುವ ಕೆಲವೊಂದು ಮಾತುಗಳನ್ನು ಹೃದಯದಾಳದಿಂದ ಹೇಳುವುದನ್ನು ಗಣ್ಯಮಾಡಲಾಗುತ್ತದೆ. ನಿರ್ದಿಷ್ಟ ಪ್ಯಾರಗ್ರಾಫ್‌ನ ಮೊದಲ ಉತ್ತರವನ್ನು ಹೇಳುವ ಅವಕಾಶವನ್ನು ತಮಗೆ ಕೊಡುವಂತೆ ಕೆಲವು ಪ್ರಚಾರಕರು ಅಭ್ಯಾಸ ಚಾಲಕನನ್ನು ಮುಂಚಿತವಾಗಿಯೇ ಕೇಳಿಕೊಳ್ಳುತ್ತಾರೆ. ಹೀಗೆ, ಅವರು ತಮ್ಮ ನಂಬಿಕೆಯನ್ನು ವ್ಯಕ್ತಪಡಿಸುವ ಅವಕಾಶದಿಂದ ವಂಚಿತರಾಗುವುದಿಲ್ಲ.

ಬುದ್ಧಿಹೀನನನ್ನು ವಿವೇಕಿಯನ್ನಾಗಿಸುತ್ತದೆ

16, 17. ಒಬ್ಬ ಹಿರಿಯನು ಶುಶ್ರೂಷಾ ಸೇವಕನೊಬ್ಬನಿಗೆ ಯಾವ ಸಲಹೆಯನ್ನು ಕೊಟ್ಟನು ಮತ್ತು ಅದು ಪರಿಣಾಮಕಾರಿಯಾಗಿತ್ತೇಕೆ?

16 ಯೆಹೋವನ ಸಾಕ್ಷಿಗಳ ಕೂಟಗಳಲ್ಲಿ, ನಾವು ದೇವರ ವಾಕ್ಯವನ್ನು ಪ್ರತಿದಿನವೂ ಓದುವಂತೆ ನಮಗೆ ಅನೇಕ ಸಲ ಜ್ಞಾಪಕಹುಟ್ಟಿಸಲಾಗುತ್ತದೆ. ಹೀಗೆ ಮಾಡುವುದು ಚೈತನ್ಯದಾಯಕವಾಗಿರುತ್ತದೆ. ವಿವೇಕಯುತ ನಿರ್ಣಯಗಳನ್ನು ಮಾಡಲು, ವ್ಯಕ್ತಿತ್ವದ ಕುಂದುಕೊರತೆಗಳನ್ನು ತಿದ್ದಿಕೊಳ್ಳಲು, ಶೋಧನೆಗಳನ್ನು ಎದುರಿಸಲು ಮತ್ತು ನಾವು ತಪ್ಪಾದ ದಿಕ್ಕಿನಲ್ಲಿ ಹೆಜ್ಜೆಯನ್ನು ಇಟ್ಟಿರುವುದಾದರೆ, ನಮ್ಮ ಆತ್ಮಿಕ ಸಮತೋಲನವನ್ನು ಪುನಃ ಪಡೆದುಕೊಳ್ಳುವಂತೆ ಅದು ನಮಗೆ ಸಹಾಯಮಾಡುತ್ತದೆ.—ಕೀರ್ತನೆ 19:7.

17 ಅನುಭವಸ್ಥ ಸಭಾ ಹಿರಿಯರು ನಮ್ಮ ಅಗತ್ಯಗಳಿಗೆ ಹೊಂದಿಕೊಳ್ಳುವ ಆತ್ಮಿಕ ಸಲಹೆಯನ್ನು ಒದಗಿಸಲು ಸದಾ ಸಿದ್ಧರಾಗಿರುತ್ತಾರೆ. ನಾವು ಮಾಡಬೇಕಾಗಿರುವುದು ಇಷ್ಟೇ: ಅವರ ಬೈಬಲ್‌-ಆಧಾರಿತ ಸಲಹೆಯನ್ನು ಕೋರುವ ಮೂಲಕ, ಅದನ್ನು “ಸೇದ”ಬೇಕು. (ಜ್ಞಾನೋಕ್ತಿ 20:5) ಒಂದು ದಿನ ಒಬ್ಬ ಉತ್ಸಾಹಿ ಯುವ ಶುಶ್ರೂಷಾ ಸೇವಕನು ತಾನು ಸಭೆಯಲ್ಲಿ ಹೆಚ್ಚು ಉಪಯುಕ್ತನಾಗಿರಲು ಏನು ಮಾಡಬೇಕೆಂಬುದರ ಕುರಿತು ಕೆಲವು ಸೂಚನೆಗಳನ್ನು ಕೊಡುವಂತೆ ಒಬ್ಬ ಹಿರಿಯನಲ್ಲಿ ಕೇಳಿದನು. ಈ ಯುವ ವ್ಯಕ್ತಿಯ ಒಳ್ಳೇ ಪರಿಚಯವಿದ್ದ ಆ ಹಿರಿಯನು ಬೈಬಲಿನ 1ನೇ ತಿಮೊಥೆಯ 3:3ನೇ ವಚನವನ್ನು ಅವನಿಗೆ ತೆರೆದು ತೋರಿಸಿದನು. ಅಲ್ಲಿ ನೇಮಿತ ಪುರುಷರು “ವಿವೇಚನೆಯುಳ್ಳವರು,” (NW) ಆಗಿರಬೇಕೆಂದು ತಿಳಿಸುತ್ತದೆ. ಆ ಯುವ ವ್ಯಕ್ತಿಯು ಇತರರೊಂದಿಗಿನ ತನ್ನ ಸಂಬಂಧಗಳಲ್ಲಿ ವಿವೇಚನೆಯನ್ನು ಯಾವೆಲ್ಲಾ ವಿಧಗಳಲ್ಲಿ ತೋರಿಸಸಾಧ್ಯವಿದೆ ಎಂಬುದನ್ನು ದಯಾಪರವಾಗಿ ಅವನಿಗೆ ತೋರಿಸಿದನು. ಯುವ ಸಹೋದರನಿಗೆ ಸಿಕ್ಕಿದ ನೇರ ಸಲಹೆಯಿಂದ ಅವನ ಮನಸ್ಸಿಗೆ ನೋವಾಯಿತೊ? ಇಲ್ಲವೇ ಇಲ್ಲ! ಅವನು ವಿವರಿಸುವುದು, “ಆ ಹಿರಿಯನು ಬೈಬಲನ್ನು ಉಪಯೋಗಿಸಿದ್ದರಿಂದ ಆ ಸಲಹೆಯು ಯೆಹೋವನಿಂದ ಬರುತ್ತಿದೆ ಎಂಬುದನ್ನು ನಾನು ಅರಿತುಕೊಂಡೆನು.” ಆ ಶುಶ್ರೂಷಾ ಸೇವಕನು ಸಲಹೆಯನ್ನು ಕೃತಜ್ಞತೆಯೊಂದಿಗೆ ಪಾಲಿಸಿದನು ಮತ್ತು ಈಗ ಉತ್ತಮ ಪ್ರಗತಿಯನ್ನು ಮಾಡುತ್ತಿದ್ದಾನೆ.

18. (ಎ) ಶಾಲೆಯಲ್ಲಿ ಶೋಧನೆಯನ್ನು ಎದುರಿಸಲು ಒಬ್ಬ ಯುವ ಕ್ರೈಸ್ತಳಿಗೆ ಯಾವುದು ಸಹಾಯಮಾಡಿತು? (ಬಿ) ಶೋಧನೆಯನ್ನು ಎದುರಿಸುವಾಗ ನೀವು ಯಾವ ಬೈಬಲ್‌ ವಚನಗಳನ್ನು ನೆನಪುಮಾಡಿಕೊಳ್ಳುತ್ತೀರಿ?

18 ತಮ್ಮ ‘ಯೌವನದ ಇಚ್ಛೆಗಳಿಗೆ ದೂರವಾಗಿರಲು’ ಸಹ ಯುವ ಜನರಿಗೆ ದೇವರ ವಾಕ್ಯವು ಸಹಾಯಮಾಡುತ್ತದೆ. (2 ತಿಮೊಥೆಯ 2:22) ಹೈಸ್ಕೂಲಿನಿಂದ ಇತ್ತೀಚೆಗಷ್ಟೆ ಉತ್ತೀರ್ಣಳಾಗಿರುವ ಯೆಹೋವನ ಯುವ ಸಾಕ್ಷಿಯೊಬ್ಬಳು, ಕೆಲವು ಬೈಬಲ್‌ ವಚನಗಳನ್ನು ಮನನಮಾಡುವ ಮೂಲಕ ಮತ್ತು ಅನ್ವಯಿಸುವ ಮೂಲಕ ಆಕೆಯು ಶಾಲೆಯಲ್ಲಿದ್ದ ವರ್ಷಗಳಲ್ಲೆಲ್ಲ ಶೋಧನೆಯನ್ನು ಎದುರಿಸಲು ಶಕ್ತಳಾದಳು. ಅವಳು ಜ್ಞಾನೋಕ್ತಿ 13:20ರಲ್ಲಿ ದಾಖಲಾದ ಸಲಹೆಯ ಕುರಿತು ಯಾವಾಗಲೂ ಯೋಚಿಸುತ್ತಿದ್ದಳು: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು.” ಅದಕ್ಕನುಸಾರವಾಗಿ, ಶಾಸ್ತ್ರೀಯ ಮೂಲತತ್ವಗಳನ್ನು ಆಳವಾಗಿ ಗೌರವಿಸುವವರೊಂದಿಗೆ ಮಾತ್ರವೇ ಸ್ನೇಹವನ್ನು ಬೆಳೆಸಿಕೊಳ್ಳುವಂತೆ ಅವಳು ಜಾಗರೂಕಳಾಗಿದ್ದಳು. ಅವಳು ತರ್ಕಿಸಿದ್ದು: “ನಾನು ಇತರರಿಗಿಂತಲೂ ಮೇಲಾದವಳಲ್ಲ. ನಾನು ತಪ್ಪುದಾರಿಯಲ್ಲಿ ನಡೆಯುತ್ತಿರುವ ಗುಂಪಿನೊಂದಿಗೆ ಸೇರುವುದಾದರೆ ನನ್ನ ಸ್ನೇಹಿತರನ್ನು ಮೆಚ್ಚಿಸಲು ಬಯಸುವೆನು ಮತ್ತು ಇದು ನನ್ನನ್ನು ತೊಂದರೆಯಲ್ಲಿ ಸಿಕ್ಕಿಹಾಕಬಲ್ಲದು.” 2 ತಿಮೊಥೆಯ 1:8ರಲ್ಲಿ ದಾಖಲಿಸಲ್ಪಟ್ಟಿರುವ ಪೌಲನ ಸಲಹೆಯು ಸಹ ಅವಳಿಗೆ ಸಹಾಯಮಾಡಿತು. ಅವನು ಬರೆದದ್ದು: “ನೀನು ನಮ್ಮ ಕರ್ತನನ್ನು ಕುರಿತು ಹೇಳುವ ಸಾಕ್ಷಿಯ ವಿಷಯದಲ್ಲಾಗಲಿ . . . ನಾಚಿಕೆಪಡದೆ ದೇವರ ಬಲವನ್ನು ಆಶ್ರಯಿಸಿ . . . ಸುವಾರ್ತೆಗೋಸ್ಕರ ಶ್ರಮೆಯನ್ನನುಭವಿಸು.” ಈ ಸಲಹೆಗೆ ಹೊಂದಿಕೆಯಲ್ಲಿ, ಅವಳು ತನ್ನ ಬೈಬಲ್‌ ಆಧಾರಿತ ನಂಬಿಕೆಗಳ ಕುರಿತು ಪ್ರತಿಯೊಂದು ತಕ್ಕ ಸಂದರ್ಭದಲ್ಲೂ ತನ್ನ ಸಹಪಾಠಿಗಳಿಗೆ ಧೈರ್ಯದಿಂದ ಹೇಳುತ್ತಿದ್ದಳು. ತನ್ನ ತರಗತಿಗೆ ಮೌಖಿಕ ವರದಿಯನ್ನು ಸಾದರಪಡಿಸುವ ನೇಮಕ ಸಿಕ್ಕಿದಾಗಲೆಲ್ಲಾ, ದೇವರ ರಾಜ್ಯದ ಕುರಿತು ಜಾಣ್ಮೆಯಿಂದ ಸಾಕ್ಷಿಯನ್ನು ಕೊಡಲು ಅನುಮತಿಸುವ ವಿಷಯವನ್ನು ಅವಳು ಆರಿಸುತ್ತಿದ್ದಳು.

19. ಈ ಲೋಕದ ಒತ್ತಡಗಳನ್ನು ಎದುರಿಸಲು ಒಬ್ಬ ಯುವ ವ್ಯಕ್ತಿಗೆ ಸಾಧ್ಯವಾಗಲಿಲ್ಲವೇಕೆ, ಆದರೆ ಯಾವುದು ಅವನಿಗೆ ಆತ್ಮಿಕ ಬಲವನ್ನು ಕೊಟ್ಟಿತು?

19 ಒಂದು ವೇಳೆ ನಾವು “ನೀತಿವಂತರ ಮಾರ್ಗ”ದಿಂದ ದಾರಿತಪ್ಪುವುದಾದರೆ, ಆಗಲೂ ದೇವರ ವಾಕ್ಯವು ನಮ್ಮ ಹೆಜ್ಜೆಗಳನ್ನು ಸರಿಪಡಿಸಿಕೊಳ್ಳಲು ನಮಗೆ ಸಹಾಯಮಾಡಬಲ್ಲದು. (ಜ್ಞಾನೋಕ್ತಿ 4:18) ಆಫ್ರಿಕದಲ್ಲಿ ವಾಸಿಸುತ್ತಿದ್ದ ಒಬ್ಬ ಯುವ ವ್ಯಕ್ತಿಯು ಇದನ್ನು ಸ್ವತಃ ಅನುಭವಿಸಿದನು. ಯೆಹೋವನ ಸಾಕ್ಷಿಗಳಲ್ಲಿ ಒಬ್ಬನು ಅವನನ್ನು ಭೇಟಿಯಾದಾಗ ಅವನು ಒಂದು ಬೈಬಲ್‌ ಅಭ್ಯಾಸವನ್ನು ಸ್ವೀಕರಿಸಿದನು. ತಾನು ಕಲಿಯುತ್ತಿದ್ದ ವಿಷಯಗಳಲ್ಲಿ ಅವನು ಆನಂದಿಸಿದನು. ಆದರೆ ಸ್ವಲ್ಪ ಸಮಯದ ನಂತರ ಶಾಲೆಯಲ್ಲಿದ್ದ ಕೆಟ್ಟ ಸಹವಾಸಿಗಳೊಂದಿಗೆ ಸೇರಲು ಆರಂಭಿಸಿದನು. ಕೊನೆಗೆ ಅವನು ಒಂದು ಅನೈತಿಕ ಜೀವನದಲ್ಲಿ ಬಿದ್ದುಹೋದನು. ಅವನು ಒಪ್ಪಿಕೊಳ್ಳುವುದು: “ನನ್ನ ಮನಸ್ಸಾಕ್ಷಿಯು ನನ್ನನ್ನು ಕಾಡಿಸುತ್ತಾ ಇತ್ತು ಮತ್ತು ಇದರಿಂದಾಗಿ ಕೂಟಗಳಿಗೆ ಹಾಜರಾಗುವುದನ್ನು ನಾನು ನಿಲ್ಲಿಸಬೇಕಾಯಿತು.” ನಂತರ, ಅವನು ಪುನಃ ಒಮ್ಮೆ ಕೂಟಗಳಿಗೆ ಹಾಜರಾಗಲು ಆರಂಭಿಸಿದನು. ಈ ಯುವ ವ್ಯಕ್ತಿಯು ಈ ಸತ್ಯವಾದ ಹೇಳಿಕೆಯನ್ನು ನೀಡಿದನು: “ಇದಕ್ಕೆಲ್ಲಾ ಮುಖ್ಯ ಕಾರಣವು, ನಾನು ಆತ್ಮಿಕವಾಗಿ ಉಪವಾಸವಿದ್ದದ್ದೇ ಆಗಿತ್ತು ಎಂಬುದನ್ನು ನಾನು ಕಂಡುಕೊಂಡೆ. ನಾನು ವೈಯಕ್ತಿಕ ಅಭ್ಯಾಸವನ್ನು ಮಾಡುತ್ತಿರಲೇ ಇಲ್ಲ. ಆದುದರಿಂದ ನನಗೆ ಶೋಧನೆಯನ್ನು ಎದುರಿಸಲು ಸಾಧ್ಯವಾಗಲಿಲ್ಲ. ಕೆಲವು ಸಮಯದ ನಂತರ ನಾನು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಓದಲು ಆರಂಭಿಸಿದೆ. ಮೆಲ್ಲಮೆಲ್ಲನೆ ನಾನು ಆತ್ಮಿಕ ಬಲವನ್ನು ಪುನಃ ಪಡೆದುಕೊಂಡೆ ಮತ್ತು ನನ್ನ ಜೀವನದಲ್ಲಿ ತುಂಬಿಕೊಂಡಿದ್ದ ಕೊಳಕನ್ನು ತೆಗೆದುಹಾಕಿದೆ. ನಾನು ಮಾಡಿದ ಬದಲಾವಣೆಗಳನ್ನು ನೋಡಿದವರೆಲ್ಲರಿಗೂ ಇದೊಂದು ಉತ್ತಮ ಸಾಕ್ಷಿಯಾಗಿತ್ತು. ನಾನು ದೀಕ್ಷಾಸ್ನಾನವನ್ನು ಪಡೆದುಕೊಂಡೆ ಮತ್ತು ಈಗ ನಾನು ಸಂತೋಷದಿಂದಿದ್ದೇನೆ.” ಈ ಶಾರೀರಿಕ ಬಲಹೀನತೆಗಳನ್ನು ಜಯಿಸಲು ಈ ಯುವ ವ್ಯಕ್ತಿಗೆ ಯಾವುದು ಬಲವನ್ನು ಒದಗಿಸಿತು? ಕ್ರಮವಾದ, ವೈಯಕ್ತಿಕ ಬೈಬಲ್‌ ಅಭ್ಯಾಸದ ಮೂಲಕ ಅವನು ತನ್ನ ಆತ್ಮಿಕ ಬಲವನ್ನು ಪುನಃ ಪಡೆದುಕೊಂಡನು.

20. ಒಬ್ಬ ಯುವ ವ್ಯಕ್ತಿಯು ಸೈತಾನನ ದಾಳಿಗಳನ್ನು ಹೇಗೆ ಎದುರಿಸಬಲ್ಲನು?

20 ಕ್ರೈಸ್ತ ಯುವ ಜನರೇ, ನೀವು ಇಂದು ಆಕ್ರಮಣದ ಕೆಳಗಿದ್ದೀರಿ! ಸೈತಾನನ ದಾಳಿಗಳನ್ನು ನೀವು ಪ್ರತಿರೋಧಿಸಬೇಕಾದರೆ, ನೀವು ಆತ್ಮಿಕ ಆಹಾರವನ್ನು ಕ್ರಮವಾಗಿ ತೆಗೆದುಕೊಳ್ಳಬೇಕು. ಸ್ವತಃ ಒಬ್ಬ ಯುವ ವ್ಯಕ್ತಿಯಾಗಿದ್ದಿರಬಹುದಾದ ಕೀರ್ತನೆಗಾರನು ಇದನ್ನು ಅರ್ಥಮಾಡಿಕೊಂಡಿದ್ದನು. “ಯೌವನಸ್ಥನು ತನ್ನ ನಡತೆಯನ್ನು ಶುದ್ಧಪಡಿಸಿಕೊಳ್ಳು”ವಂತೆ ಸಾಧ್ಯಮಾಡುವುದಕ್ಕೆ ಯೆಹೋವನು ತನ್ನ ವಾಕ್ಯವನ್ನು ಒದಗಿಸಿದ್ದಕ್ಕಾಗಿ ಅವನು ದೇವರಿಗೆ ಕೃತಜ್ಞನಾಗಿದ್ದನು.—ಕೀರ್ತನೆ 119:9.

ದೇವರು ನಡೆಸುವಲ್ಲೆಲ್ಲಾ ನಾವು ಹಿಂಬಾಲಿಸುವೆವು

21, 22. ಸತ್ಯದ ಹಾದಿಯು ತುಂಬ ಕಷ್ಟಕರವಾದದ್ದು ಎಂಬ ತೀರ್ಮಾನಕ್ಕೆ ನಾವು ಬರಬಾರದೇಕೆ?

21 ಯೆಹೋವನು ಇಸ್ರಾಯೇಲ್ಯ ಜನಾಂಗವನ್ನು ಐಗುಪ್ತದಿಂದ ಹೊರತಂದು ವಾಗ್ದಾತ್ತ ದೇಶಕ್ಕೆ ನಡೆಸಿದನು. ಆತನು ಅವರಿಗಾಗಿ ಆರಿಸಿದ ಮಾರ್ಗವನ್ನು ಮಾನವ ದೃಷ್ಟಿಯಿಂದ ನೋಡುವಾಗ, ಅದು ಅನಾವಶ್ಯಕವಾದ ಕಷ್ಟದ ಹಾದಿಯಾಗಿರುವಂತೆ ತೋರುತ್ತಿದ್ದಿರಬಹುದು. ಸುಲಭವಾಗಿರುವಂತೆ ತೋರುತ್ತಿದ್ದ, ಮೆಡಿಟರೇನಿಯನ್‌ ಸಮುದ್ರದ ಉದ್ದಕ್ಕೂ ಹಾದುಹೋಗುವ ಹೆಚ್ಚು ನೇರವಾದ ಮಾರ್ಗದ ಬದಲು, ಯೆಹೋವನು ತನ್ನ ಜನರನ್ನು ಮರುಭೂಮಿಯ ಪ್ರಯಾಸಕರವಾದ ಮಾರ್ಗದಲ್ಲಿ ನಡೆಸಿದನು. ಆದರೆ ಇದು ದೇವರ ದಯೆಯೇ ಆಗಿತ್ತೆಂಬುದು ನಿಜ. ಈ ಸಮುದ್ರ ಮಾರ್ಗದ ಹಾದಿಯು ಹೆಚ್ಚು ಹತ್ತಿರವಾದದ್ದಾಗಿದ್ದರೂ, ಇಸ್ರಾಯೇಲ್ಯರು ತಮ್ಮ ವಿರೋಧಿಗಳಾಗಿದ್ದ ಫಿಲಿಷ್ಟಿಯರ ದೇಶವನ್ನು ಹಾದುಹೋಗಬೇಕಾಗುತ್ತಿತ್ತು. ಯೆಹೋವನು ಬೇರೊಂದು ಮಾರ್ಗವನ್ನು ಆರಿಸಿಕೊಳ್ಳುವ ಮೂಲಕ ತನ್ನ ಜನರು ಫಿಲಿಷ್ಟಿಯರನ್ನು ಸಮಯಕ್ಕೆ ಮುಂಚೆಯೇ ಎದುರುಗೊಳ್ಳುವುದನ್ನು ತಪ್ಪಿಸಿದನು.

22 ತದ್ರೀತಿಯಲ್ಲಿ, ಇಂದು ಸಹ ದೇವರು ನಮ್ಮನ್ನು ನಡೆಸುವ ದಾರಿಯು ಕೆಲವೊಮ್ಮೆ ನಮಗೆ ಕಷ್ಟಕರವಾಗಿ ತೋರಬಹುದು. ಪ್ರತಿವಾರ ನಮಗೆ ಸಭಾ ಕೂಟಗಳು, ವೈಯಕ್ತಿಕ ಅಭ್ಯಾಸ ಮತ್ತು ಕ್ಷೇತ್ರ ಸೇವೆಯನ್ನು ಒಳಗೊಂಡಿರುವ ಕ್ರೈಸ್ತ ಚಟುವಟಿಕೆಗಳಿಂದ ತುಂಬಿರುವ ಕಾರ್ಯಮಗ್ನ ಶೆಡ್ಯೂಲ್‌ ಇದೆ. ಬೇರೆ ದಾರಿಗಳು ನಮಗೆ ಸುಲಭವಾಗಿ ತೋರಬಹುದು. ಆದರೆ ದೇವರು ನಡೆಸುವಲ್ಲೆಲ್ಲಾ ನಾವು ಹಿಂಬಾಲಿಸಿದರೆ ಮಾತ್ರ, ನಾವು ಯಾವ ಗಮ್ಯಸ್ಥಾನವನ್ನು ತಲುಪಲು ಇಷ್ಟೊಂದು ಪ್ರಯಾಸಪಡುತ್ತಿದ್ದೇವೊ ಅಲ್ಲಿಗೆ ಮುಟ್ಟುವೆವು. ಆದುದರಿಂದ, ಯೆಹೋವನಿಂದ ಬರುವ ಅತಿ ಪ್ರಾಮುಖ್ಯ ಬೋಧನೆಯನ್ನು ಸ್ವೀಕರಿಸುತ್ತಾ ಮುಂದುವರಿಯೋಣ ಮತ್ತು ನಿತ್ಯಕ್ಕೂ “ಸಮವಾದ ದಾರಿಯಲ್ಲಿ” ಉಳಿಯೋಣ.—ಕೀರ್ತನೆ 27:11.

ನೀವು ವಿವರಿಸಬಲ್ಲಿರೋ?

ಕ್ರೈಸ್ತ ಕೂಟಗಳನ್ನು ನಾವು ಕ್ರಮವಾಗಿ ಹಾಜರಾಗುವ ವಿಶೇಷ ಅಗತ್ಯವಿದೆ ಏಕೆ?

ತಮ್ಮ ಮಕ್ಕಳು ಕೂಟಗಳಲ್ಲಿ ಗಮನವಿಟ್ಟು ಕಿವಿಗೊಡುವಂತೆ ಸಹಾಯಮಾಡಲು ಹೆತ್ತವರು ಏನನ್ನು ಮಾಡಬಹುದು?

ಚೆನ್ನಾಗಿ ಕಿವಿಗೊಡುವುದರಲ್ಲಿ ಏನು ಒಳಗೂಡಿದೆ?

ಕೂಟಗಳಲ್ಲಿ ಹೇಳಿಕೆ ನೀಡಲು ನಮಗೆ ಯಾವುದು ಸಹಾಯಮಾಡಬಲ್ಲದು?

[ಅಧ್ಯಯನ ಪ್ರಶ್ನೆಗಳು]

[ಪುಟ 16, 17ರಲ್ಲಿರುವ ಚಿತ್ರ]

ಕ್ರೈಸ್ತ ಕೂಟಗಳಿಗೆ ಹಾಜರಾಗುವುದು ಯೆಹೋವನ ದಿನವನ್ನು ನಮ್ಮ ಮನಸ್ಸಿನಲ್ಲಿ ಇಡುವಂತೆ ನಮಗೆ ಸಹಾಯ ಮಾಡುತ್ತದೆ

[ಪುಟ 18ರಲ್ಲಿರುವ ಚಿತ್ರಗಳು]

ಕ್ರೈಸ್ತ ಕೂಟಗಳಲ್ಲಿ ಯೆಹೋವನನ್ನು ಸ್ತುತಿಸುವ ಬೇರೆ ಬೇರೆ ಮಾರ್ಗಗಳು ಇವೆ