ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ರೋಮಾಪುರ 12:19ರಲ್ಲಿ (NW) ಅಪೊಸ್ತಲ ಪೌಲನು “ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸಬೇಡಿರಿ. ಆದರೆ ಕೋಪಕ್ಕೆ ಅವಕಾಶ ಕೊಡಿರಿ,” ಎಂದು ಹೇಳಿದಾಗ ಕ್ರೈಸ್ತರು ಕೋಪಗೊಳ್ಳಬಾರದೆಂದು ಸೂಚಿಸಿದನೋ?

ನೇರವಾಗಿ ಹೇಳುವುದಾದರೆ ಇದರ ಉತ್ತರವು ಇಲ್ಲವೆಂದಾಗಿದೆ. ಅಪೊಸ್ತಲ ಪೌಲನು ಇಲ್ಲಿ ದೇವರ ಕೋಪದ ಕುರಿತು ಸೂಚಿಸಿ ಬರೆಯುತ್ತಿದ್ದನು. ನಿಜ, ಕ್ರೈಸ್ತರು ಸಿಟ್ಟುಗೊಳ್ಳಲಿ ಅಥವಾ ಸಿಟ್ಟುಗೊಳ್ಳದಿರಲಿ, ಅದು ಯಾವ ವ್ಯತ್ಯಾಸವನ್ನೂ ಉಂಟುಮಾಡುವುದಿಲ್ಲವೆಂಬುದು ಇದರ ಅರ್ಥವಲ್ಲ. ಕೋಪಿಷ್ಠರಾಗದಿರುವುದರ ಕುರಿತು ಬೈಬಲು ಸ್ಪಷ್ಟ ಸಲಹೆಯನ್ನು ಕೊಡುತ್ತದೆ. ದೈವಿಕ ಸಲಹೆಯ ಕೆಲವು ನಮೂನೆಗಳನ್ನು ಇಲ್ಲಿ ಪರಿಗಣಿಸಿರಿ.

“ಕೋಪವನ್ನು ಅಣಗಿಸಿಕೋ; ರೋಷವನ್ನು ಬಿಡು. ಉರಿಗೊಳ್ಳಬೇಡ; ಕೆಡುಕಿಗೆ ಕಾರಣವಾದೀತು.” (ಕೀರ್ತನೆ 37:8) “ತನ್ನ ಸಹೋದರನ ಮೇಲೆ ಸಿಟ್ಟುಗೊಳ್ಳುವ ಪ್ರತಿ ಮನುಷ್ಯನು ನ್ಯಾಯವಿಚಾರಣೆಗೆ ಗುರಿಯಾಗುವನು.” (ಮತ್ತಾಯ 5:22) “ಶರೀರಭಾವದ ಕರ್ಮಗಳು ಪ್ರಸಿದ್ಧವಾಗಿಯೇ ಅವೆ; ಯಾವವಂದರೆ—ಜಾರತ್ವ ಬಂಡುತನ ನಾಚಿಕೆಗೇಡಿತನ ವಿಗ್ರಹಾರಾಧನೆ ಮಾಟ ಹಗೆತನ ಜಗಳ ಹೊಟ್ಟೇಕಿಚ್ಚು ಸಿಟ್ಟು . . . ಇಂಥವುಗಳೇ.” (ಗಲಾತ್ಯ 5:19, 20) “ಎಲ್ಲಾ ದ್ವೇಷ ಕೋಪ ಕ್ರೋಧ ಕಲಹ ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನವನ್ನೂ ನಿಮ್ಮಿಂದ ದೂರಮಾಡಿರಿ.” (ಎಫೆಸ 4:31) “ಪ್ರತಿಯೊಬ್ಬನು ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ ಇರಲಿ. ಕೋಪಿಸುವದರಲ್ಲಿಯೂ ನಿಧಾನವಾಗಿರಲಿ.” (ಯಾಕೋಬ 1:19) ಇನ್ನೂ ಹೆಚ್ಚಾಗಿ, ಕೋಪಕ್ಕೆ ಅವಕಾಶಕೊಡುವ ಅಥವಾ ಸಣ್ಣಪುಟ್ಟ ತಪ್ಪುಗಳು ಮತ್ತು ಮಾನವ ದೋಷಗಳಿಗಾಗಿ ಸಿಟ್ಟುಗೊಳ್ಳುವುದರ ವಿರುದ್ಧ ಜ್ಞಾನೋಕ್ತಿ ಪುಸ್ತಕವು ನಮಗೆ ಪುನಃ ಪುನಃ ಸಲಹೆಯನ್ನು ಕೊಡುತ್ತದೆ.—ಜ್ಞಾನೋಕ್ತಿ 12:16; 14:17, 29; 15:1; 16:32; 17:14; 19:11, 19; 22:24; 25:28; 29:22.

ರೋಮಾಪುರ 12:19ರ ಪೂರ್ವಾಪರ ವಚನಗಳು ಇಂತಹ ಸಲಹೆಗೆ ಹೊಂದಿಕೆಯಲ್ಲಿವೆ ಎಂಬುದನ್ನು ತೋರಿಸುತ್ತವೆ. ನಮ್ಮ ಪ್ರೀತಿಯು ನಿಷ್ಕಪಟವಾಗಿರಬೇಕೆಂದು, ನಮ್ಮನ್ನು ಹಿಂಸಿಸುವವರನ್ನು ಆಶೀರ್ವದಿಸಬೇಕೆಂದು, ಇತರರ ಕುರಿತು ಒಳ್ಳೇದನ್ನು ಚಿಂತಿಸಲು ಪ್ರಯತ್ನಿಸಬೇಕೆಂದು, ಕೇಡಿಗೆ ಕೇಡು ಮಾಡಬಾರದೆಂದು ಮತ್ತು ಎಲ್ಲರೊಂದಿಗೆ ಸಮಾಧಾನದಿಂದಿರಲು ಪ್ರಯತ್ನಿಸಬೇಕೆಂದು ಪೌಲನು ಸಲಹೆಯನ್ನು ಕೊಟ್ಟಿದ್ದಾನೆ. ಇದಾದ ನಂತರ ಅವನು ಉತ್ತೇಜಿಸಿದ್ದು: “ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸಬೇಡಿರಿ, ಆದರೆ ಕೋಪಕ್ಕೆ ಅವಕಾಶಕೊಡಿರಿ. ಯಾಕಂದರೆ ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ. ನಾನೇ ಪ್ರತಿಫಲವನ್ನು ಕೊಡುವೆನು ಎಂದು ಯೆಹೋವನು ಹೇಳುತ್ತಾನೆಂಬುದಾಗಿ ಬರೆದದೆ.”—ರೋಮಾಪುರ 12:9, 14, 16-19, NW.

ಹೌದು, ಪ್ರತೀಕಾರದ ಉದ್ದೇಶದಿಂದ ಸೇಡುತೀರಿಸಿಕೊಳ್ಳುವಷ್ಟರ ಮಟ್ಟಿಗೆ ಕೋಪವನ್ನು ನೀವು ಅನುಮತಿಸಬೇಡಿರಿ. ಸನ್ನಿವೇಶಗಳ ಕುರಿತು ನಮಗಿರುವ ತಿಳುವಳಿಕೆ ಮತ್ತು ನಮ್ಮ ನ್ಯಾಯ ಪ್ರಜ್ಞೆಯು ಅಪರಿಪೂರ್ಣವಾಗಿದೆ. ಕೋಪವು, ನಾವು ಮುಯ್ಯಿಗೆ ಮುಯ್ಯಿ ತೀರಿಸುವ ಕೃತ್ಯಗಳನ್ನು ಮಾಡುವಂತೆ ಬಿಡುವುದಾದರೆ, ನಾವು ಅನೇಕವೇಳೆ ತಪ್ಪು ಮಾಡುವೆವು. ಇದು ದೇವರ ವಿರೋಧಿಯಾದ ಪಿಶಾಚನ ಉದ್ದೇಶವನ್ನು ಪೂರೈಸುವುದು. ಪೌಲನು ಇನ್ನೊಂದು ಕಡೆಯಲ್ಲಿ ಹೀಗೆ ಬರೆದಿದ್ದಾನೆ: “ಕೋಪಮಾಡಬೇಕಾದರೂ ಪಾಪ ಮಾಡಬೇಡಿರಿ; ಸೂರ್ಯನು ಮುಳುಗುವದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ; ಸೈತಾನನಿಗೆ ಅವಕಾಶಕೊಡಬೇಡಿರಿ.”—ಎಫೆಸ 4:26, 27.

ಪ್ರತೀಕಾರವನ್ನು ಯಾವಾಗ ಮತ್ತು ಯಾರ ಮೇಲೆ ತರಬೇಕೆಂಬ ನಿರ್ಧಾರವನ್ನು ದೇವರಿಗೆ ಬಿಟ್ಟುಕೊಡುವುದು ಅತ್ಯುತ್ತಮವೂ, ವಿವೇಕಯುತವೂ ಆದ ಮಾರ್ಗವಾಗಿದೆ. ಆತನು ನಿಜಾಂಶಗಳ ಪೂರ್ಣ ಅರಿವಿನೊಂದಿಗೆ ಪ್ರತೀಕಾರವನ್ನು ತೀರಿಸಬಲ್ಲನು ಮತ್ತು ಆತನು ತೆಗೆದುಕೊಳ್ಳುವ ಪ್ರತೀಕಾರದ ಯಾವುದೇ ಕ್ರಮವು ಆತನ ಪರಿಪೂರ್ಣ ನ್ಯಾಯವನ್ನು ಪ್ರತಿಬಿಂಬಿಸುವುದು. ಪೌಲನು ಧರ್ಮೋಪದೇಶಕಾಂಡ 32:35, 41ನ್ನು ಉಲ್ಲೇಖಿಸಿ ರೋಮಾಪುರ 12:19ನ್ನು ಬರೆದಾಗ, ಪೌಲನ ಮನಸ್ಸಿನಲ್ಲಿ ಇದೇ ವಿಷಯವು ಇತ್ತೆಂಬುದನ್ನು ನಾವು ತಿಳಿದುಕೊಳ್ಳಬಹುದು. ಅಲ್ಲಿ ನಾವು ಈ ಮಾತುಗಳನ್ನು ಕಂಡುಕೊಳ್ಳುತ್ತೇವೆ: “ಪ್ರತೀಕಾರಮಾಡಿ ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ.” (ಇಬ್ರಿಯರಿಗೆ 10:30ನ್ನು ಹೋಲಿಸಿರಿ) ಹೀಗೆ ಗ್ರೀಕ್‌ ಮೂಲಪಾಠದಲ್ಲಿ “ದೇವರ” ಎಂಬ ಪದವು ಇಲ್ಲದಿದ್ದರೂ, ಆಧುನಿಕ ತರ್ಜುಮೆಗಾರರ ಅನೇಕ ವಚನಗಳಲ್ಲಿ ರೋಮಾಪುರ 12:19ರಲ್ಲಿ ಆ ಪದವನ್ನು ಹಾಕಿದ್ದಾರೆ. ಹಾಗಾಗಿ ನಾವು ಇಂತಹ ಕೆಲವು ಉಲ್ಲೇಖಗಳನ್ನು ನೋಡುತ್ತೇವೆ: “ದೇವರೇ ಮುಯ್ಯಿ ತೀರಿಸಲಿ” (ದ ಕಂಟೇಪರರಿ ಇಂಗ್ಲಿಷ್‌ ವರ್ಶನ್‌); “ದೇವರು ತನ್ನ ಕೋಪದಿಂದ ಅವರನ್ನು ದಂಡಿಸುವುದಕ್ಕೆ ಅವಕಾಶಕೊಡಿ” (ಅಮೆರಿಕನ್‌ ಸ್ಟಾಂಡರ್ಡ್‌ ವರ್ಷನ್‌); “ದೇವರು ಬಯಸಿದರೆ ಅವರನ್ನು ಶಿಕ್ಷಿಸಲಿ” (ದ ನ್ಯೂ ಟೆಸ್ಟಮೆಂಟ್‌ ಇನ್‌ ಮಾಡರ್ನ್‌ ಇಂಗ್ಲಿಷ್‌); “ದೈವಿಕ ದಂಡನೆಗೆ ಅವಕಾಶಕೊಡಿರಿ.”—ದ ನ್ಯೂ ಇಂಗ್ಲಿಷ್‌ ಬೈಬಲ್‌.

ಸತ್ಯದ ವಿರೋಧಿಗಳಿಂದ ನಾವು ನಿಂದಿಸಲ್ಪಟ್ಟಾಗ ಅಥವಾ ಹಿಂಸಿಸಲ್ಪಟ್ಟಾಗಲೂ, ಮೋಶೆಯು ಯೆಹೋವ ದೇವರ ಕುರಿತು ಕೇಳಿಸಿಕೊಂಡ ವರ್ಣನೆಯಲ್ಲಿ ನಾವು ಭರವಸೆಯನ್ನಿಡಬಲ್ಲೆವು: “ಯೆಹೋವ, ಯೆಹೋವ ಕರುಣಾಭರಿತನೂ ದಯೆಯೂ ಉಳ್ಳ ದೇವರು; ಕೋಪಿಸುವುದರಲ್ಲಿ ನಿಧಾನಿಯೂ ಪ್ರೀತಿದಯೆಯಲ್ಲಿ ಸಮೃದ್ಧನೂ, ಸಾವಿರಾರು ತಲೆಗಳ ವರೆಗೂ ಪ್ರೀತಿದಯೆ ತೋರಿಸುವವನು; ದೋಷಾಪರಾಧಪಾಪಗಳನ್ನು ಕ್ಷಮಿಸುವವನು; ಆದರೂ ಅಪರಾಧಗಳನ್ನು ಶಿಕ್ಷಿಸದೆ ಬಿಡದವನು.”—ವಿಮೋಚನಕಾಂಡ 34:6, 7, NW.