ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿನಯಶೀಲತೆ—ಸಮಾಧಾನವನ್ನು ಹೆಚ್ಚಿಸುವ ಒಂದು ಗುಣ

ವಿನಯಶೀಲತೆ—ಸಮಾಧಾನವನ್ನು ಹೆಚ್ಚಿಸುವ ಒಂದು ಗುಣ

ವಿನಯಶೀಲತೆಸಮಾಧಾನವನ್ನು ಹೆಚ್ಚಿಸುವ ಒಂದು ಗುಣ

ಪ್ರತಿಯೊಬ್ಬರೂ ವಿನಯಶೀಲರಾಗಿರುತ್ತಿದ್ದರೆ, ಈ ಲೋಕವು ಎಷ್ಟು ಮನೋಹರವಾದ ಸ್ಥಳವಾಗಿರುತ್ತಿತ್ತು! ಆಗ ಜನರು ಇತರರಿಂದ ಹೆಚ್ಚನ್ನು ಅಪೇಕ್ಷಿಸುತ್ತಿರಲಿಲ್ಲ, ಕುಟುಂಬದ ಸದಸ್ಯರು ಕಚ್ಚಾಡುತ್ತಿರಲಿಲ್ಲ, ವೃತ್ತಿಸಂಘಗಳು ಇಷ್ಟು ಪೈಪೋಟಿಗಿಳಿಯುತ್ತಿರಲಿಲ್ಲ ಮತ್ತು ರಾಷ್ಟ್ರಗಳು ಯುದ್ಧ ಹೂಡುತ್ತಿರಲಿಲ್ಲ. ಇಂತಹ ವಾತಾವರಣದಲ್ಲಿ ಜೀವಿಸಲು ನೀವು ಇಷ್ಟಪಡುತ್ತೀರೊ?

ಯೆಹೋವ ದೇವರ ನಿಜ ಸೇವಕರು ಆತನ ವಾಗ್ದತ್ತ ಹೊಸ ಲೋಕಕ್ಕಾಗಿ ಸಿದ್ಧತೆಗಳನ್ನು ಮಾಡುತ್ತಿದ್ದಾರೆ. ಆ ಲೋಕದಲ್ಲಿ ವಿಶ್ವವ್ಯಾಪಕವಾಗಿ ವಿನಯಶೀಲತೆಯನ್ನು ಒಂದು ಬಲಹೀನತೆಯಾಗಿ ಅಲ್ಲ, ಒಂದು ಸದ್ಗುಣ ಹಾಗೂ ಸಾಮರ್ಥ್ಯವಾಗಿ ಪರಿಗಣಿಸಲಾಗುವುದು. (2 ಪೇತ್ರ 3:13) ವಾಸ್ತವದಲ್ಲಿ ಈ ಜನರು ವಿನಯಶೀಲತೆಯ ಗುಣವನ್ನು ಈಗಲೇ ಬೆಳೆಸಿಕೊಳ್ಳುತ್ತಿದ್ದಾರೆ. ಏಕೆ? ಏಕೆಂದರೆ, ಯೆಹೋವನು ಅವರಿಂದ ಇದನ್ನೇ ಕೇಳಿಕೊಳ್ಳುತ್ತಾನೆ. ಆತನ ಪ್ರವಾದಿಯಾದ ಮೀಕನು ಬರೆದುದು: “ಮನುಷ್ಯನೇ, ಒಳ್ಳೆಯದು ಇಂಥದೇ ಎಂದು ಯೆಹೋವನು ನಿನಗೆ ತೋರಿಸಿದ್ದಾನಷ್ಟೆ; ನ್ಯಾಯವನ್ನು ಆಚರಿಸುವದು, ಕರುಣೆಯಲ್ಲಿ ಆಸಕ್ತನಾಗಿರುವದು, ನಿನ್ನ ದೇವರಿಗೆ ನಮ್ರವಾಗಿ [“ವಿನಯಶೀಲನಾಗಿ,” NW] ನಡೆದುಕೊಳ್ಳುವದು, ಇಷ್ಟನ್ನೇ ಹೊರತು ಯೆಹೋವನು ನಿನ್ನಿಂದ ಇನ್ನೇನು ಅಪೇಕ್ಷಿಸುವನು?”—ಮೀಕ 6:8.

ವಿನಯಶೀಲತೆಗೆ ಹಲವಾರು ಅರ್ಥಗಳಿವೆ. ಅವುಗಳಲ್ಲಿ, ಹೆಮ್ಮೆ ಇಲ್ಲವೆ ದುರಭಿಮಾನ ತೋರಿಸದೇ ಇರುವುದು, ಮತ್ತು ತನ್ನ ಸಾಮರ್ಥ್ಯಗಳು, ಸಾಧನೆಗಳು ಹಾಗೂ ಸ್ವತ್ತುಗಳ ಬಗ್ಗೆ ಜಂಬಕೊಚ್ಚಿಕೊಳ್ಳದೇ ಇರುವುದು ಕೆಲವು ಅರ್ಥಗಳಾಗಿವೆ. ಒಂದು ಆಧಾರಗ್ರಂಥಕ್ಕನುಸಾರ, ವಿನಯಶೀಲತೆಯ ಅರ್ಥ, “ಮೇರೆಯೊಳಗೆ ಇರುವುದು” ಎಂದೂ ಆಗಿರುತ್ತದೆ. ವಿನಯಶೀಲನಾದ ವ್ಯಕ್ತಿಯು ಸುನಡತೆಯ ಮೇರೆಯೊಳಗೇ ಇರುತ್ತಾನೆ. ತಾನು ಮಾಡಬೇಕಾದ ಮತ್ತು ಮಾಡಶಕ್ತನಾಗಿರುವ ಕೆಲಸಗಳಿಗೆ ಇತಿಮಿತಿಗಳಿರುವುದನ್ನು ಸಹ ಅವನು ಅಂಗೀಕರಿಸುತ್ತಾನೆ. ಕೆಲವೊಂದು ವಿಷಯಗಳಿಗೆ ತಾನು ಅರ್ಹನಾಗಿಲ್ಲ ಎಂಬುದೂ ಅವನಿಗೆ ತಿಳಿದಿದೆ. ಇಂತಹ ವಿನಯಶೀಲ ವ್ಯಕ್ತಿಗಳ ಕಡೆಗೆ ನಾವು ಖಂಡಿತವಾಗಿಯೂ ಆಕರ್ಷಿತರಾಗುತ್ತೇವೆ. “ನಿಜವಾದ ವಿನಯಶೀಲತೆಗಿಂತಲೂ ಹೆಚ್ಚು ಸೌಜನ್ಯವಾದದ್ದು ಬೇರಾವುದೂ ಇಲ್ಲ,” ಎಂಬುದಾಗಿ ಇಂಗ್ಲಿಷ್‌ ಕವಿ ಜೋಸಫ್‌ ಆ್ಯಡಿಸನ್‌ ಬರೆದರು.

ಅಪರಿಪೂರ್ಣ ಮಾನವರಲ್ಲಿ ವಿನಯಶೀಲತೆಯು ಒಂದು ಹುಟ್ಟುಗುಣವಾಗಿರುವುದಿಲ್ಲ. ಅದನ್ನು ಬೆಳೆಸಿಕೊಳ್ಳಲು ನಾವು ಪ್ರಯಾಸಪಡಬೇಕು. ನಮ್ಮ ಉತ್ತೇಜನಕ್ಕಾಗಿ ದೇವರ ವಾಕ್ಯವು ವಿನಯಶೀಲತೆಯ ವಿವಿಧ ರೂಪಗಳನ್ನು ದೃಷ್ಟಾಂತಿಸುವ ಘಟನೆಗಳನ್ನು ವಿವರಿಸುತ್ತದೆ.

ಇಬ್ಬರು ವಿನಯಶೀಲ ಅರಸರು

ಯೆಹೋವನ ಅತ್ಯಂತ ನಿಷ್ಠಾವಂತ ಸೇವಕರಲ್ಲಿ ದಾವೀದನೂ ಒಬ್ಬನಾಗಿದ್ದನು. ಅವನು ಇಸ್ರಾಯೇಲಿನ ಭಾವೀ ರಾಜನಾಗಿ ಅಭಿಷೇಕಿಸಲ್ಪಟ್ಟಾಗ ಇನ್ನೂ ಯುವಕನಾಗಿದ್ದನು. ಆ ಸಮಯದಲ್ಲಿ ರಾಜ್ಯವನ್ನಾಳುತ್ತಿದ್ದ ರಾಜ ಸೌಲನು ಅವನನ್ನು ಕೊಲ್ಲಲು ಪ್ರಯತ್ನಿಸಿದನು. ಮತ್ತು ಈ ಕಾರಣ ದಾವೀದನು ತಲೆತಪ್ಪಿಸಿಕೊಂಡು ಜೀವಿಸುವಂತೆ ಒತ್ತಾಯಿಸಲ್ಪಟ್ಟನು.—1 ಸಮುವೇಲ 16:1, 11-13; 19:9, 10; 26:2, 3.

ಅಂತಹ ಪರಿಸ್ಥಿತಿಗಳಲ್ಲಿಯೂ, ತನ್ನ ಜೀವವನ್ನು ರಕ್ಷಿಸಿಕೊಳ್ಳಲು ತಾನು ಮಾಡಬಹುದಾದ ವಿಷಯಗಳಿಗೆ ಇತಿಮಿತಿಗಳಿವೆಯೆಂಬುದನ್ನು ದಾವೀದನು ಗ್ರಹಿಸಿದನು. ಒಮ್ಮೆ ಅರಣ್ಯದಲ್ಲಿ ನಿದ್ರಿಸುತ್ತಿದ್ದ ರಾಜ ಸೌಲನನ್ನು ಕೊಂದುಹಾಕಲು ಅಬೀಷೈ ದಾವೀದನಿಂದ ಅನುಮತಿ ಪಡೆಯಲಿಚ್ಛಿಸಿದಾಗ, ಅವನು ಹೀಗೆ ಹೇಳುವ ಮೂಲಕ ನಿರಾಕರಿಸಿದನು: “ಯೆಹೋವನ ದೃಷ್ಟಿಕೋನದಿಂದ, ಯೆಹೋವನ ಅಭಿಷಿಕ್ತನ ಮೇಲೆ ಕೈಮಾಡುವುದು ನನಗೆ ಯೋಚಿಸಲಸಾಧ್ಯವಾದ ವಿಷಯವಾಗಿದೆ!” (1 ಸಮುವೇಲ 26:8-11, NW) ಸೌಲನನ್ನು ರಾಜನ ಸ್ಥಾನದಿಂದ ಕೆಳಗುರುಳಿಸುವುದು ತನ್ನ ಕೆಲಸವಲ್ಲವೆಂದು ದಾವೀದನಿಗೆ ಗೊತ್ತಿತ್ತು. ಹೀಗೆ ಸದ್ವರ್ತನೆಯ ಮೇರೆಯೊಳಗೆ ಇರುವ ಮೂಲಕ, ದಾವೀದನು ಈ ಸಂದರ್ಭದಲ್ಲೂ ವಿನಯಶೀಲತೆಯನ್ನು ಪ್ರದರ್ಶಿಸಿದನು. ತದ್ರೀತಿಯಲ್ಲಿ, ಮಾನವ ಜೀವವು ಅಪಾಯದಲ್ಲಿರುವಾಗಲೂ, “ಯೆಹೋವನ ದೃಷ್ಟಿಕೋನಕ್ಕನುಸಾರ” ಕೆಲವೊಂದು ಕೆಲಸಗಳನ್ನು ತಾವು ಮಾಡಲು ಸಾಧ್ಯವೇ ಇಲ್ಲ ಎಂಬುದು ದೇವರ ಪ್ರಚಲಿತ ದಿನದ ಸೇವಕರಿಗೆ ಗೊತ್ತಿದೆ.—ಅ. ಕೃತ್ಯಗಳು 15:28, 29; 21:25.

ಅರಸ ದಾವೀದನ ಮಗನಾದ ಸೊಲೊಮೋನನು ಸಹ ಯುವ ಪುರುಷನಾಗಿದ್ದಾಗ ವಿನಯಶೀಲತೆಯನ್ನು ಪ್ರದರ್ಶಿಸಿದನು, ಆದರೆ ಒಂದಿಷ್ಟು ಭಿನ್ನವಾದ ರೀತಿಯಲ್ಲಿ. ಸೊಲೊಮೋನನು ಸಿಂಹಾಸನವನ್ನೇರಿದಾಗ, ಒಬ್ಬ ಅರಸನ ಭಾರಿ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಸಾಮರ್ಥ್ಯ ತನ್ನಲ್ಲಿಲ್ಲವೆಂದೆಣಿಸಿದನು. ಅವನು ಪ್ರಾರ್ಥಿಸಿದ್ದು: “ನನ್ನ ದೇವರಾದ ಯೆಹೋವನೇ, ನನ್ನ ತಂದೆಗೆ ಬದಲಾಗಿ ನಿನ್ನಿಂದ ಅರಸನಾಗಿ ನೇಮಿಸಲ್ಪಟ್ಟ ನಿನ್ನ ಸೇವಕನಾದ ನಾನು ಇನ್ನೂ ಚಿಕ್ಕವನು; ವ್ಯವಹಾರಜ್ಞಾನವಿಲ್ಲದವನು.” ತನ್ನಲ್ಲಿ ಸಾಮರ್ಥ್ಯ ಹಾಗೂ ಅನುಭವದ ಕೊರತೆ ಇರುವುದನ್ನು ಸೊಲೊಮೋನನು ಅರಿತವನಾಗಿದ್ದನು ಎಂಬುದು ತೀರ ಸ್ಪಷ್ಟ. ಅವನು ಯಾವುದೇ ರೀತಿಯಲ್ಲಿ ಹೆಮ್ಮೆ ಇಲ್ಲವೆ ದುರಭಿಮಾನವನ್ನು ತೋರಿಸದೆ ಆಗ ವಿನಯಶೀಲನಾಗಿದ್ದನು. ಯೆಹೋವನು ತನಗೆ ವಿವೇಕವನ್ನು ದಯಪಾಲಿಸುವಂತೆ ಸೊಲೊಮೋನನು ಕೇಳಿಕೊಂಡನು, ಮತ್ತು ಅವನಿಗೆ ಅದು ನೀಡಲ್ಪಟ್ಟಿತು.—1 ಅರಸು 3:4-12.

ಮೆಸ್ಸೀಯನು ಮತ್ತು ಅವನ ಮುನ್‌ಸೂಚಕನು

ಸೊಲೊಮೋನನ ದಿನವು ಕಳೆದು ಸುಮಾರು 1,000 ವರ್ಷಗಳು ಗತಿಸಿದ ಬಳಿಕ, ಸ್ನಾನಿಕನಾದ ಯೋಹಾನನು ಮೆಸ್ಸೀಯನಿಗಾಗಿ ದಾರಿಯನ್ನು ಸಿದ್ಧಪಡಿಸುವ ಕೆಲಸದಲ್ಲಿ ತೊಡಗಿದನು. ಅಭಿಷಿಕ್ತನ ಮುನ್‌ಸೂಚಕನಾಗಿ ಯೋಹಾನನು ಬೈಬಲ್‌ ಪ್ರವಾದನೆಯನ್ನು ನೆರವೇರಿಸುತ್ತಿದ್ದನು. ತನಗೆ ದೊರೆತಿದ್ದ ಈ ಸುಯೋಗದ ವಿಷಯದಲ್ಲಿ ಅವನು ಜಂಬಕೊಚ್ಚಿಕೊಳ್ಳಬಹುದಿತ್ತು. ಯೋಹಾನನು ಮೆಸ್ಸೀಯನ ರಕ್ತಸಂಬಂಧಿಯಾಗಿದ್ದ ಕಾರಣ, ಹೆಚ್ಚಿನ ಗೌರವವನ್ನು ಸ್ವತಃ ಪಡೆದುಕೊಳ್ಳಲು ಅವನು ಪ್ರಯತ್ನಿಸಬಹುದಿತ್ತು. ಆದರೆ, ತಾನು ಯೇಸುವಿನ ಪಾದರಕ್ಷೆಗಳನ್ನು ಬಿಚ್ಚುವದಕ್ಕೂ ಯೋಗ್ಯನಲ್ಲವೆಂದು ಯೋಹಾನನು ಇತರರಿಗೆ ಹೇಳಿದನು. ಮತ್ತು ಯೇಸು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದಕ್ಕಾಗಿ ಯೊರ್ದನ್‌ ಹೊಳೆಗೆ ಬಂದಾಗ ಯೋಹಾನನು ಹೇಳಿದ್ದು: “ನಾನು ನಿನ್ನಿಂದ ಸ್ನಾನಮಾಡಿಸಿಕೊಳ್ಳತಕ್ಕವನಾಗಿರುವಲ್ಲಿ ನೀವು ನನ್ನ ಬಳಿಗೆ ಬರುವದೇನು”? ಯೋಹಾನನು ಜಂಬಕೊಚ್ಚಿಕೊಳ್ಳುವವನಾಗಿರಲಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಅವನೊಬ್ಬ ವಿನಯಶೀಲ ವ್ಯಕ್ತಿಯಾಗಿದ್ದನು.—ಮತ್ತಾಯ 3:14; ಮಲಾಕಿಯ 4:5, 6; ಲೂಕ 1:13-17; ಯೋಹಾನ 1:26, 27.

ಯೇಸು ದೀಕ್ಷಾಸ್ನಾನ ಪಡೆದ ನಂತರ, ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಪೂರ್ಣ ಸಮಯದ ಶುಶ್ರೂಷೆಯನ್ನು ಆರಂಭಿಸಿದನು. ಅವನೊಬ್ಬ ಪರಿಪೂರ್ಣ ಮಾನವನಾಗಿದ್ದರೂ ಹೀಗೆ ಹೇಳಿದನು: “ನನ್ನಷ್ಟಕ್ಕೆ ನಾನೇ ಏನೂ ಮಾಡಲಾರೆನು; . . . ಸ್ವಂತ ಚಿತ್ತ ನೆರವೇರಬೇಕೆಂದು ಅಪೇಕ್ಷಿಸದೆ ನನ್ನನ್ನು ಕಳುಹಿಸಿದಾತನ ಚಿತ್ತ ನೆರವೇರಬೇಕೆಂದು ಅಪೇಕ್ಷಿಸು”ತ್ತೇನೆ. ಅಲ್ಲದೆ, ಯೇಸು ಮನುಷ್ಯರಿಂದ ಮಾನವನ್ನು ಅಂಗೀಕರಿಸದೆ, ತಾನು ಮಾಡಿದ ಎಲ್ಲ ಕಾರ್ಯಗಳಿಗಾಗಿ ಯೆಹೋವನಿಗೇ ಮಹಿಮೆಯನ್ನು ಸಲ್ಲಿಸಿದನು. (ಯೋಹಾನ 5:30, 41-44) ಎಂತಹ ವಿನಯಶೀಲತೆ!

ಸ್ಪಷ್ಟವಾಗಿಯೇ, ದಾವೀದ, ಸೊಲೊಮೋನ, ಸ್ನಾನಿಕನಾದ ಯೋಹಾನ, ಮತ್ತು ಪರಿಪೂರ್ಣ ಮಾನವನಾದ ಯೇಸು ಕ್ರಿಸ್ತನಂತಹ ಯೆಹೋವನ ನಿಷ್ಠಾವಂತ ಸೇವಕರು ವಿನಯಶೀಲತೆಯನ್ನು ಪ್ರದರ್ಶಿಸಿದರು. ಅವರು ಜಂಬಕೊಚ್ಚಿಕೊಳ್ಳದೆ, ಹೆಮ್ಮೆ ಇಲ್ಲವೆ ದುರಭಿಮಾನವನ್ನೂ ತೋರಿಸದೆ ಸರಿಯಾದ ಮೇರೆಯೊಳಗೆ ತಮ್ಮನ್ನು ಇರಿಸಿಕೊಂಡರು. ಹೀಗೆ, ಯೆಹೋವನ ಆಧುನಿಕ ದಿನದ ಸೇವಕರು ವಿನಯಶೀಲತೆಯನ್ನು ಬೆಳೆಸಿಕೊಳ್ಳುವುದಕ್ಕೆ ಮತ್ತು ವ್ಯಕ್ತಪಡಿಸುವುದಕ್ಕೆ ಅವರ ಮಾದರಿಗಳು ಸಾಕಷ್ಟು ಕಾರಣಗಳನ್ನು ನೀಡುತ್ತವೆ. ಆದರೆ ಅದೂ ಅಲ್ಲದೆ, ಇನ್ನೂ ಬೇರೆ ಕಾರಣಗಳು ಸಹ ಇವೆ.

ಮಾನವಕುಲದ ಇತಿಹಾಸದ ಈ ಗೊಂದಲಮಯ ಸಮಯದಲ್ಲಿ, ನಿಜ ಕ್ರೈಸ್ತರಿಗೆ ವಿನಯಶೀಲತೆಯು ಒಂದು ಅಮೂಲ್ಯ ಗುಣವಾಗಿದೆ. ಒಬ್ಬನು ಯೆಹೋವ ದೇವರೊಂದಿಗೆ, ಜೊತೆ ಮಾನವರೊಂದಿಗೆ ಮತ್ತು ಸ್ವತಃ ತನ್ನೊಂದಿಗೆ ಸಮಾಧಾನದಿಂದಿರುವಂತೆ ಅದು ಸಹಾಯ ಮಾಡುತ್ತದೆ.

ಯೆಹೋವ ದೇವರೊಂದಿಗೆ ಸಮಾಧಾನ

ಯೆಹೋವನು ಸತ್ಯಾರಾಧನೆಗಾಗಿ ಸ್ಥಾಪಿಸಿರುವ ಮೇರೆಗಳೊಳಗೆ ನಾವು ಇದ್ದರೆ ಮಾತ್ರ ನಾವು ಆತನೊಂದಿಗೆ ಸಮಾಧಾನದಿಂದ ಇರಸಾಧ್ಯವಿದೆ. ನಮ್ಮ ಪ್ರಥಮ ಹೆತ್ತವರಾದ ಆದಾಮಹವ್ವರು ದೇವರಿಟ್ಟಿದ್ದ ಇತಿಮಿತಿಗಳನ್ನು ಮೀರಿದಾಗ, ಅವರು ಉದ್ಧಟತನಕ್ಕೆ ಬಲಿಯಾದವರಲ್ಲಿ ಮೊದಲಿಗರಾದರು. ಯೆಹೋವನೊಂದಿಗೆ ತಮಗಿದ್ದ ಒಳ್ಳೆಯ ನಿಲುವನ್ನು, ತಮ್ಮ ಮನೆ, ಭವಿಷ್ಯತ್ತು ಹಾಗೂ ಜೀವಗಳನ್ನು ಸಹ ಅವರು ಕಳೆದುಕೊಂಡರು. (ಆದಿಕಾಂಡ 3:1-5, 16-19) ಅವರೆಂತಹ ಭಾರೀ ಬೆಲೆಯನ್ನು ತೆತ್ತರು!

ಸತ್ಯಾರಾಧನೆಯು ನಮ್ಮ ಕ್ರಿಯೆಗಳ ಮೇಲೆ ಇತಿಮಿತಿಗಳನ್ನಿಡುವುದರಿಂದ, ನಾವು ಆದಾಮಹವ್ವರ ತಪ್ಪಿನಿಂದ ಒಂದು ಪಾಠವನ್ನು ಕಲಿತುಕೊಳ್ಳೋಣ. ಉದಾಹರಣೆಗೆ, “ಜಾರರು ವಿಗ್ರಹಾರಾಧಕರು ವ್ಯಭಿಚಾರಿಗಳು ವಿಟರು ಪುರುಷಗಾಮಿಗಳು ಕಳ್ಳರು ಲೋಭಿಗಳು ಕುಡಿಕರು ಬೈಯುವವರು ಸುಲುಕೊಳ್ಳುವವರು ಇವರೊಳಗೆ ಒಬ್ಬರಾದರೂ ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ” ಎಂದು ಬೈಬಲ್‌ ತಿಳಿಸುತ್ತದೆ. (1 ಕೊರಿಂಥ 6:9, 10) ಯೆಹೋವನು ನಮ್ಮ ಒಳಿತಿಗಾಗಿಯೇ ಈ ಇತಿಮಿತಿಗಳನ್ನಿಡುತ್ತಾನೆ, ಮತ್ತು ಅವುಗಳ ಮೇರೆಯೊಳಗಿರುವ ಮೂಲಕ ನಾವು ವಿವೇಕವನ್ನು ಪ್ರದರ್ಶಿಸುವವರಾಗಿದ್ದೇವೆ. (ಯೆಶಾಯ 48:17, 18) ಜ್ಞಾನೋಕ್ತಿ 11:2 (NW) ನಮಗೆ ಹೇಳುವುದು: “ವಿವೇಕವು ವಿನಯಶೀಲರಲ್ಲಿದೆ.”

ಈ ಇತಿಮಿತಿಗಳನ್ನು ಮೀರಿ ನಡೆದರೂ, ನಾವು ದೇವರೊಂದಿಗೆ ಸಮಾಧಾನದಿಂದಿರಲು ಸಾಧ್ಯವೆಂದು ಒಂದು ಧಾರ್ಮಿಕ ಸಂಸ್ಥೆಯು ಹೇಳಿದರೆ ಆಗೇನು? ಆ ಸಂಸ್ಥೆಯು ನಮ್ಮನ್ನು ತಪ್ಪುದಾರಿಗೆಳೆಯಲು ಪ್ರಯತ್ನಿಸುತ್ತಿದೆ. ಆದರೆ ಮತ್ತೊಂದು ಕಡೆಯಲ್ಲಿ, ನಾವು ಯೆಹೋವ ದೇವರೊಂದಿಗೆ ಒಂದು ಆಪ್ತ ಸಂಬಂಧವನ್ನು ಬೆಳೆಸಿಕೊಳ್ಳುವಂತೆ ವಿನಯಶೀಲತೆಯು ಸಹಾಯ ಮಾಡುತ್ತದೆ.

ಜೊತೆ ಮಾನವರೊಂದಿಗೆ ಸಮಾಧಾನ

ಇತರರೊಂದಿಗೂ ಸಮಾಧಾನದಿಂದ ಇರುವಂತೆ ವಿನಯಶೀಲತೆಯು ನಮಗೆ ಸಹಾಯ ಮಾಡುತ್ತದೆ. ಉದಾಹರಣೆಗೆ, ಮೂಲಭೂತ ಆವಶ್ಯಕತೆಗಳೊಂದಿಗೆ ಸಂತೃಪ್ತರಾಗಿರುವ ಮತ್ತು ಆತ್ಮಿಕ ವಿಷಯಗಳಿಗೆ ಆದ್ಯತೆಯನ್ನು ನೀಡುವ ವಿಷಯದಲ್ಲಿ ಹೆತ್ತವರು ಮಾದರಿಯನ್ನು ಇಡುವಾಗ, ಅವರ ಮಕ್ಕಳು ಸಹ ಅದೇ ಮನೋಭಾವವನ್ನು ಪಡೆದಿರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆಗ, ತಾವು ಬಯಸಿದ್ದನ್ನು ಯಾವಾಗಲೂ ಪಡೆದುಕೊಳ್ಳದಿದ್ದರೂ, ಇರುವುದರಲ್ಲೇ ಸಂತೃಪ್ತಿಯನ್ನು ಕಂಡುಕೊಳ್ಳುವುದು ಈ ಎಳೆಯರಿಗೆ ಹೆಚ್ಚು ಸುಲಭವಾಗಿರುತ್ತದೆ. ಅವರು ಆಡಂಬರವಿಲ್ಲದೆ ಜೀವಿಸಲು ಇದು ಸಹಾಯ ಮಾಡುವುದರಿಂದ, ಕುಟುಂಬ ಜೀವನವು ಹೆಚ್ಚು ಸಮಾಧಾನಕರವಾಗಿರುತ್ತದೆ.

ಮೇಲ್ವಿಚಾರಕರಾಗಿರುವವರು ಕೂಡ ವಿನಯಶೀಲರಾಗಿದ್ದು, ತಮಗಿರುವ ಅಧಿಕಾರವನ್ನು ದುರುಪಯೋಗಿಸದಂತೆ ಎಚ್ಚರವಹಿಸಬೇಕು. ಉದಾಹರಣೆಗೆ, ‘ಶಾಸ್ತ್ರದಲ್ಲಿ ಬರೆದಿರುವದನ್ನು ಮೀರಿಹೋಗಬಾರದೆಂದು’ ಕ್ರೈಸ್ತರಿಗೆ ಹೇಳಲಾಗಿದೆ. (1 ಕೊರಿಂಥ 4:6) ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಮತ್ತೊಬ್ಬರ ಮೇಲೆ ಹೊರಿಸಲು ಪ್ರಯತ್ನಿಸಬಾರದೆಂಬುದನ್ನು ಸಭೆಯ ಹಿರಿಯರು ಗ್ರಹಿಸುತ್ತಾರೆ. ಬದಲಿಗೆ, ನಡತೆ, ಉಡುಗೆ-ತೊಡುಗೆ, ಕೇಶಾಲಂಕಾರ, ಇಲ್ಲವೆ ಮನೋರಂಜನೆಯ ವಿಷಯದಲ್ಲಿ ಒಳ್ಳೆಯ ಕ್ರಮವನ್ನು ಅನುಸರಿಸುವಂತೆ ಉತ್ತೇಜನ ನೀಡುವಾಗ, ಅವರು ದೇವರ ವಾಕ್ಯವನ್ನು ಆಧಾರವಾಗಿಟ್ಟುಕೊಳ್ಳುತ್ತಾರೆ. (2 ತಿಮೊಥೆಯ 3:14-17) ಹಿರಿಯರು ಶಾಸ್ತ್ರೀಯ ಮೇರೆಗಳೊಳಗೆ ಇರುವುದನ್ನು ಸಭೆಯ ಸದಸ್ಯರು ಗಮನಿಸುವಾಗ, ಈ ಪುರುಷರಿಗಾಗಿ ಅವರಲ್ಲಿ ಗೌರವವು ಹೆಚ್ಚುತ್ತದೆ ಮತ್ತು ಇದು ಸಭೆಯಲ್ಲಿ ಆದರಣೀಯ, ಪ್ರೀತಿಪರ ಹಾಗೂ ಸಮಾಧಾನಕರ ವಾತಾವರಣಕ್ಕೆ ನೆರವು ನೀಡುತ್ತದೆ.

ನಮ್ಮಲ್ಲೇ ಸಮಾಧಾನ

ವಿನಯಶೀಲರಾಗಿರುವವರು ಆಂತರಿಕ ಸಮಾಧಾನವನ್ನು ಸಹ ಅನುಭವಿಸುತ್ತಾರೆ. ಒಬ್ಬ ವಿನಯಶೀಲ ವ್ಯಕ್ತಿಯು ಮಹತ್ವಾಕಾಂಕ್ಷಿಯಾಗಿರುವುದಿಲ್ಲ. ಇದರರ್ಥ ಅವನಿಗೆ ವೈಯಕ್ತಿಕ ಗುರಿಗಳು ಇರುವುದೇ ಇಲ್ಲವೆಂದಲ್ಲ. ಉದಾಹರಣೆಗೆ, ಅವನು ಹೆಚ್ಚಿನ ಸೇವಾ ಸುಯೋಗಗಳನ್ನು ಬಯಸಬಹುದಾದರೂ, ಯೆಹೋವನ ಮೇಲೆ ಆತುಕೊಂಡಿರುತ್ತಾನೆ. ಮತ್ತು ಅವನಿಗೆ ಸಿಗುವಂತಹ ಯಾವುದೇ ಕ್ರೈಸ್ತ ಸುಯೋಗಗಳಿಗಾಗಿ ಅವನು ಯೆಹೋವನಿಗೆ ಕೀರ್ತಿಯನ್ನು ಸಲ್ಲಿಸುತ್ತಾನೆ. ಅವುಗಳನ್ನು ಅವನು ತನ್ನ ವೈಯಕ್ತಿಕ ಸಾಧನೆಗಳಾಗಿ ಪರಿಗಣಿಸುವುದಿಲ್ಲ. ಇದು ಆ ವಿನಯಶೀಲ ವ್ಯಕ್ತಿಯನ್ನು “ಶಾಂತಿದಾಯಕನಾದ ದೇವರ” ಬಳಿಗೆ ಇನ್ನೂ ನಿಕಟವಾಗಿ ಸೆಳೆಯುವುದು.—ಫಿಲಿಪ್ಪಿ 4:9.

ಜನರು ನಮ್ಮನ್ನು ಕಡೆಗಣಿಸುತ್ತಿದ್ದಾರೆಂದು ಕೆಲವೊಮ್ಮೆ ನಮಗನಿಸಬಹುದೆಂಬುದನ್ನು ಊಹಿಸಿಕೊಳ್ಳಿ. ನಾವು ಉದ್ಧಟತನದಿಂದ ನಮ್ಮ ಕಡೆಗೆ ಗಮನವನ್ನು ಸೆಳೆದುಕೊಳ್ಳುವ ಬದಲು, ವಿನಯಶೀಲರಾಗಿರುವುದರಿಂದ ಕಡೆಗಣಿಸಲ್ಪಡುವುದು ಹೆಚ್ಚು ಉತ್ತಮವಲ್ಲವೊ? ವಿನಯಶೀಲರಲ್ಲಿ ಅತಿಯಾದ ಮಹತ್ವಾಕಾಂಕ್ಷೆ ಇರುವುದಿಲ್ಲ. ಆದುದರಿಂದ ಅವರು ತಮ್ಮೊಳಗೇ ಸಮಾಧಾನದಿಂದಿರುತ್ತಾರೆ. ಇದು ಭಾವನಾತ್ಮಕ ಹಾಗೂ ಶಾರೀರಿಕ ಸುಕ್ಷೇಮಕ್ಕೆ ಪ್ರಯೋಜನಕರವಾಗಿದೆ.

ವಿನಯಶೀಲತೆಯನ್ನು ಬೆಳೆಸಿಕೊಂಡು, ಅದನ್ನು ಕಾಪಾಡಿಕೊಳ್ಳುವುದು

ಆದಾಮಹವ್ವರು ಉದ್ಧಟತನಕ್ಕೆ ಬಲಿಯಾದರು. ಈ ಗುಣವನ್ನು ಅವರು ತಮ್ಮ ಮಕ್ಕಳಿಗೂ ಸಾಗಿಸಿದರು. ನಮ್ಮ ಪ್ರಥಮ ಹೆತ್ತವರು ಮಾಡಿದಂತಹ ಅದೇ ತಪ್ಪನ್ನು ನಾವು ಮಾಡದಿರುವಂತೆ ನಮಗೆ ಯಾವುದು ಸಹಾಯ ಮಾಡಬಲ್ಲದು? ನಾವು ವಿನಯಶೀಲತೆ ಎಂಬ ಉತ್ತಮ ಗುಣವನ್ನು ಹೇಗೆ ಬೆಳೆಸಿಕೊಳ್ಳಬಲ್ಲೆವು?

ಪ್ರಥಮವಾಗಿ, ಈ ವಿಶ್ವದ ಸೃಷ್ಟಿಕರ್ತನಾಗಿರುವ ಯೆಹೋವನಿಗೆ ಹೋಲಿಸುವಾಗ ನಮ್ಮ ಸ್ಥಾನವೇನು ಎಂಬುದರ ಕುರಿತಾದ ನಿಷ್ಕೃಷ್ಟ ತಿಳುವಳಿಕೆಯು ನಮಗೆ ಸಹಾಯ ಮಾಡುವುದು. ನಮ್ಮ ಯಾವ ವೈಯಕ್ತಿಕ ಸಾಧನೆಗಳು ದೇವರ ಸಾಧನೆಗಳಿಗೆ ಸರಿಸಮವಾಗಿವೆಯೆಂದು ನಾವು ಹೇಳಿಕೊಳ್ಳಬಹುದು? ಯೆಹೋವನು ತನ್ನ ನಂಬಿಗಸ್ತ ಸೇವಕನಾದ ಯೋಬನನ್ನು ಕೇಳಿದ್ದು: “ನಾನು ಲೋಕಕ್ಕೆ ಅಸ್ತಿವಾರಹಾಕಿದಾಗ ನೀನು ಎಲ್ಲಿದ್ದಿ? ನೀನು ಜ್ಞಾನಿಯಾಗಿದ್ದರೆ ಹೇಳು.” (ಯೋಬ 38:4) ಯೋಬನಿಗೆ ಉತ್ತರಿಸಲಾಗಲಿಲ್ಲ. ಅಂತೆಯೇ, ನಾವು ಕೂಡ ಜ್ಞಾನ, ಸಾಮರ್ಥ್ಯ ಮತ್ತು ಅನುಭವದ ವಿಷಯದಲ್ಲಿ ಕೊರತೆಯುಳ್ಳವರಾಗಿಲ್ಲವೊ? ನಾವು ನಮ್ಮ ಇತಿಮಿತಿಗಳನ್ನು ಅಂಗೀಕರಿಸುವುದು ಪ್ರಯೋಜನಕರವಾಗಿರಲಾರದೊ?

ಇದಲ್ಲದೆ ಬೈಬಲ್‌ ನಮಗೆ ಹೇಳುವುದು: “ಭೂಮಿಯೂ ಅದರಲ್ಲಿರುವ ಸಮಸ್ತವೂ ಯೆಹೋವನದು; ಲೋಕವೂ ಅದರ ನಿವಾಸಿಗಳೂ ಆತನವೇ.” ಇದು “ಕಾಡಿನಲ್ಲಿರುವ ಸರ್ವಮೃಗಗಳೂ ಗುಡ್ಡಗಳಲ್ಲಿರುವ ಸಾವಿರಾರು ಪಶುಗಳ”ನ್ನೂ ಒಳಗೊಳ್ಳುತ್ತದೆ. “ಬೆಳ್ಳಿಯೆಲ್ಲಾ ನನ್ನದು, ಬಂಗಾರವೆಲ್ಲಾ ನನ್ನದು” ಎಂಬುದಾಗಿ ಯೆಹೋವನು ಹೇಳಬಲ್ಲನು. (ಕೀರ್ತನೆ 24:1; 50:10; ಹಗ್ಗಾಯ 2:8) ಯೆಹೋವನ ಸ್ವತ್ತುಗಳಿಗೆ ಹೋಲುವಂತಹ ಯಾವ ಸ್ವತ್ತುಗಳನ್ನು ನಾವು ಪ್ರದರ್ಶಿಸಬಲ್ಲೆವು? ಭೂಮಿಯಲ್ಲಿರುವ ಅತ್ಯಂತ ಶ್ರೀಮಂತನಿಗೂ ತನ್ನಲ್ಲಿರುವಂತಹ ಸ್ವತ್ತುಗಳ ಬಗ್ಗೆ ಜಂಬಕೊಚ್ಚಿಕೊಳ್ಳಲು ಯಾವುದೇ ಕಾರಣವಿಲ್ಲ! ಆದುದರಿಂದ, ರೋಮಾಪುರದಲ್ಲಿದ್ದ ಕ್ರೈಸ್ತರಿಗೆ ಅಪೊಸ್ತಲ ಪೌಲನು ನೀಡಿದ ಪ್ರೇರಿತ ಸಲಹೆಯನ್ನು ಅನುಸರಿಸುವುದು ಒಳ್ಳೆಯದು: “ದೇವರು ನನಗೆ ಕೃಪೆಮಾಡಿದ ಸೇವೆಯನ್ನು ನಡಿಸಿ ನಿಮ್ಮಲ್ಲಿ ಒಬ್ಬೊಬ್ಬನಿಗೂ ಹೇಳುವದೇನಂದರೆ ಯಾರೂ ತನ್ನ ಯೋಗ್ಯತೆಗೆ ಮೀರಿ ತನ್ನನ್ನು ಭಾವಿಸಿಕೊಳ್ಳದೆ . . . ನ್ಯಾಯವಾದ ಅಭಿಪ್ರಾಯದಿಂದ ತನ್ನನ್ನು ಭಾವಿಸಿಕೊಳ್ಳಬೇಕು.”—ರೋಮಾಪುರ 12:3.

ವಿನಯಶೀಲತೆಯನ್ನು ಬೆಳೆಸಿಕೊಳ್ಳಲು ಇಚ್ಛಿಸುವ ದೇವರ ಸೇವಕರೋಪಾದಿ, ಪ್ರೀತಿ, ಸಂತೋಷ, ಸಮಾಧಾನ, ದೀರ್ಘಶಾಂತಿ, ದಯೆ, ಉಪಕಾರ, ನಂಬಿಕೆ, ಸಾಧುತ್ವ ಮತ್ತು ಶಮೆದಮೆಯಂತಹ ಆತ್ಮದ ಫಲಗಳನ್ನು ಬೆಳೆಸಿಕೊಳ್ಳಲು ನಾವು ಪ್ರಾರ್ಥಿಸಬೇಕು. (ಲೂಕ 11:13; ಗಲಾತ್ಯ 5:22, 23) ಏಕೆ? ಏಕೆಂದರೆ, ನಾವು ವಿನಯಶೀಲರಾಗಿರುವಂತೆ ಈ ಎಲ್ಲ ಗುಣಗಳು ನಮಗೆ ಸಹಾಯ ಮಾಡುವವು. ಉದಾಹರಣೆಗೆ, ಜೊತೆ ಮಾನವರಿಗಾಗಿ ನಮ್ಮಲ್ಲಿರುವ ಪ್ರೀತಿಯು, ಜಂಬಕೊಚ್ಚಿಕೊಳ್ಳುವ ಇಲ್ಲವೆ ಹೆಮ್ಮೆಪಟ್ಟುಕೊಳ್ಳುವ ಪ್ರವೃತ್ತಿಗಳ ವಿರುದ್ಧ ಹೋರಾಡುವಂತೆ ನಮಗೆ ಸಹಾಯ ಮಾಡುವುದು. ಮತ್ತು ಉದ್ಧಟತನದಿಂದ ವರ್ತಿಸುವ ಮೊದಲು ಸ್ವಲ್ಪ ಯೋಚಿಸುವಂತೆ ಶಮೆದಮೆ ಎಂಬ ಗುಣವು ಸಹಾಯ ಮಾಡುವುದು.

ನಾವು ಎಚ್ಚರದಿಂದಿರೋಣ! ಉದ್ಧಟತನವು ಒಡ್ಡುವ ಅಪಾಯಗಳಿಗೆ ನಾವು ಸದಾ ಎಚ್ಚೆತ್ತುಕೊಂಡಿರುವವರಾಗಿರಬೇಕು. ಈ ಮುಂಚೆ ಉಲ್ಲೇಖಿಸಲ್ಪಟ್ಟ ಅರಸರಲ್ಲಿ ಇಬ್ಬರು ಎಲ್ಲ ಸಂದರ್ಭಗಳಲ್ಲೂ ವಿನಯಶೀಲರಾಗಿರಲಿಲ್ಲ. ರಾಜ ದಾವೀದನು ಯೆಹೋವನ ಚಿತ್ತಕ್ಕೆ ವಿರುದ್ಧವಾಗಿ ಇಸ್ರಾಯೇಲಿನಲ್ಲಿ ಜನಗಣತಿಯನ್ನು ನಡೆಸುವ ಮೂಲಕ ದುಡುಕಿ ಕ್ರಿಯೆಗೈದನು. ರಾಜ ಸೊಲೊಮೋನನು ಎಷ್ಟರ ಮಟ್ಟಿಗೆ ಉದ್ಧಟತನದಿಂದ ವರ್ತಿಸಿದನೆಂದರೆ, ಅವನು ಸುಳ್ಳು ದೇವತೆಗಳ ಆರಾಧನೆಯಲ್ಲೂ ಭಾಗವಹಿಸಿದನು.—2 ಸಮುವೇಲ 24:1-10; 1 ಅರಸು 11:1-13.

ಈ ಭಕ್ತಿಹೀನ ವಿಷಯಗಳ ವ್ಯವಸ್ಥೆಯು ಮುಂದುವರಿಯುವ ತನಕ, ನಾವು ವಿನಯಶೀಲರಾಗಿರಲು ಸದಾ ಎಚ್ಚರವಹಿಸಬೇಕು. ಹಾಗಿದ್ದರೂ, ನಾವು ಪಡುವ ಪ್ರಯಾಸವು ಸಾರ್ಥಕವಾಗಿರುತ್ತದೆ. ದೇವರ ನೂತನ ಲೋಕದಲ್ಲಿ, ಮಾನವ ಸಮಾಜವು ಎಲ್ಲೆಡೆಯೂ ವಿನಯಶೀಲ ಜನರಿಂದ ತುಂಬಿರುವುದು. ಅವರು ವಿನಯಶೀಲತೆಯನ್ನು ಬಲಹೀನತೆಯಾಗಿ ಅಲ್ಲ, ಒಂದು ಸಾಮರ್ಥ್ಯವಾಗಿ ಪರಿಗಣಿಸುವರು. ಹೀಗೆ, ವಿನಯಶೀಲತೆಯಿಂದ ಬರುವಂತಹ ಸಮಾಧಾನದಿಂದ ಎಲ್ಲ ವ್ಯಕ್ತಿಗಳೂ ಕುಟುಂಬಗಳೂ ಆಶೀರ್ವದಿಸಲ್ಪಡುವಾಗ, ಅದೆಷ್ಟು ಅದ್ಭುತಕರವಾಗಿರುವುದು!

[ಪುಟ 23ರಲ್ಲಿರುವ ಚಿತ್ರ]

ಯೇಸು ತಾನು ಮಾಡಿದ ಎಲ್ಲ ಕಾರ್ಯಗಳಿಗೆ ವಿನಯಶೀಲತೆಯಿಂದ ಯೆಹೋವನಿಗೇ ಕೀರ್ತಿಯನ್ನು ಸಲ್ಲಿಸಿದನು