ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೆನಿಗಲ್‌ನಲ್ಲಿ ಕ್ರೈಸ್ತ ನಿರೀಕ್ಷೆಯನ್ನು ಹಂಚುವುದು

ಸೆನಿಗಲ್‌ನಲ್ಲಿ ಕ್ರೈಸ್ತ ನಿರೀಕ್ಷೆಯನ್ನು ಹಂಚುವುದು

ನಾವಾದರೋ ನಂಬುವವ ರಾಗಿದ್ದೇವೆ

ಸೆನಿಗಲ್‌ನಲ್ಲಿ ಕ್ರೈಸ್ತ ನಿರೀಕ್ಷೆಯನ್ನು ಹಂಚುವುದು

ಪುರಾತನ ಕಾಲದಿಂದಲೂ ಮೀನು ಒಂದು ಮುಖ್ಯ ಆಹಾರಪದಾರ್ಥವಾಗಿದೆ. ಸಾವಿರಾರು ವರ್ಷಗಳಿಂದ ಜನರು ಸಮುದ್ರಗಳಲ್ಲಿ, ಹೊಳೆಗಳಲ್ಲಿ ಮತ್ತು ನದಿಗಳಲ್ಲಿ ಮೀನು ಹಿಡಿದಿದ್ದಾರೆ. ಯೇಸು ಕ್ರಿಸ್ತನ ಅಪೊಸ್ತಲರಲ್ಲಿ ಕೆಲವರು ಗಲಿಲಾಯ ಸಮುದ್ರದಲ್ಲಿ ಮೀನು ಹಿಡಿಯುವವರಾಗಿದ್ದರು. ಆದರೆ ಯೇಸು ಇವರಿಗೆ ಮತ್ತೊಂದು ರೀತಿಯ ಮೀನು ಹಿಡಿಯುವಿಕೆಯನ್ನು ಕಲಿಸಿಕೊಟ್ಟನು. ಇದು ಆತ್ಮಿಕ ಮೀನು ಹಿಡಿಯುವಿಕೆಯಾಗಿದ್ದು, ಬೆಸ್ತರಿಗೆ ಮಾತ್ರವಲ್ಲ ಮೀನಿಗೂ ಪ್ರಯೋಜನವನ್ನು ತರಲಿತ್ತು.

ಈ ಆತ್ಮಿಕ ಮೀನು ಹಿಡಿಯುವಿಕೆಯ ಕುರಿತು, ಬೆಸ್ತನಾಗಿದ್ದ ಪೇತ್ರನಿಗೆ ಯೇಸು ಹೇಳಿದ್ದು: “ಇಂದಿನಿಂದ ನೀನು ಮನುಷ್ಯರನ್ನು ಹಿಡಿಯುವವನಾಗಿರುವಿ.” (ಲೂಕ 5:10) ಈ ರೀತಿಯ ಮೀನು ಹಿಡಿಯುವಿಕೆಯು, ಸೆನಿಗಲ್‌ ಅನ್ನು ಸೇರಿಸಿ 230ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ ಇಂದು ನಡೆಯುತ್ತಿದೆ. (ಮತ್ತಾಯ 24:14) ಸೆನಿಗಲ್‌ನಲ್ಲಿರುವ ಆಧುನಿಕ ದಿನದ ‘ಮನುಷ್ಯರನ್ನು ಹಿಡಿಯುವ ಬೆಸ್ತರು’ ತಮ್ಮ ಕ್ರೈಸ್ತ ನಿರೀಕ್ಷೆಯನ್ನು ಧೈರ್ಯದಿಂದ ಇತರರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.—ಮತ್ತಾಯ 4:19.

ಆಫ್ರಿಕದ ಪಶ್ಚಿಮ ದಿಕ್ಕಿನ ತುತ್ತತುದಿಯಲ್ಲಿ ಸೆನಿಗಲ್‌ ದೇಶವಿದೆ. ಇದು ಉತ್ತರದಲ್ಲಿರುವ ಸಹಾರಾ ಮರುಭೂಮಿಯ ಗಡಿಯಲ್ಲಿರುವ ಮರಳಿನ ಕ್ಷೇತ್ರಗಳಿಂದ ಹಿಡಿದು ದಕ್ಷಿಣದಲ್ಲಿರುವ ಕಾಸಾಮಾನ್ಸ್‌ ಕ್ಷೇತ್ರದ ತೇವಾಂಶವುಳ್ಳ ಕಾಡುಗಳ ವರೆಗೆ ಹರಡಿಕೊಂಡಿದೆ. ಸೆನಿಗಲ್‌ನಲ್ಲಿ ಮರುಭೂಮಿಯ ಬಿಸಿಗಾಳಿಯು ಮತ್ತು ಅಟ್ಲಾಂಟಿಕ್‌ ಸಾಗರದ ತಂಪಾದ, ಚೈತನ್ಯದಾಯಕ ಗಾಳಿಯು ಬಿರುಸಾಗಿ ಬೀಸುತ್ತದೆ. ಇಲ್ಲಿ 90 ಲಕ್ಷಕ್ಕಿಂತಲೂ ಹೆಚ್ಚು ಜನರು ವಾಸಿಸುತ್ತಾರೆ. ಈ ದೇಶದ ನಿವಾಸಿಗಳು ಅತಿಥಿಸತ್ಕಾರಕ್ಕೆ ಹೆಸರುವಾಸಿಯಾಗಿದ್ದಾರೆ. ಅವರಲ್ಲಿ ಹೆಚ್ಚಿನವರು ಕ್ರೈಸ್ತ ಧರ್ಮಕ್ಕೆ ಸೇರಿದವರಲ್ಲ. ಅನೇಕರು ಕುರುಬರಾಗಿದ್ದಾರೆ, ಇತರರು ದನಕರುಗಳನ್ನು, ಒಂಟೆಗಳನ್ನು ಮತ್ತು ಆಡುಗಳನ್ನು ಸಾಕುವವರಾಗಿದ್ದಾರೆ. ಇವರೊಂದಿಗೆ, ನೆಲಗಡಲೆ, ಹತ್ತಿ ಮತ್ತು ಭತ್ತವನ್ನು ಬೆಳೆಸುವ ರೈತರೂ ಇದ್ದಾರೆ. ಮತ್ತು ಅಟ್ಲಾಂಟಿಕ್‌ ಸಾಗರದಿಂದ ಹಾಗೂ ದೇಶವನ್ನು ಸುತ್ತುಬಳಸಿ ಹರಿಯುವ ಹಲವಾರು ದೊಡ್ಡ ನದಿಗಳಿಂದ ಬಲೆತುಂಬ ಮೀನನ್ನು ಹಿಡಿದು ತರುವ ಬೆಸ್ತರೂ ಇದ್ದಾರೆ. ಸೆನಿಗಲ್‌ನ ಆರ್ಥಿಕತೆಯಲ್ಲಿ, ಮೀನುಗಾರಿಕೆಯು ಪ್ರಧಾನ ಪಾತ್ರವನ್ನು ವಹಿಸುತ್ತದೆ. ವಾಸ್ತವದಲ್ಲಿ, ಆ ದೇಶದ ಚಿಬ್‌ ಜೆನ್‌ ಎಂಬ ಹೆಸರಿನ ಜನಪ್ರಿಯ ಊಟವು, ಅಕ್ಕಿ, ಮೀನು ಮತ್ತು ತರಕಾರಿಗಳ ಒಂದು ರುಚಿಕರವಾದ ಭೋಜನವಾಗಿದೆ.

‘ಮನುಷ್ಯರನ್ನು ಹಿಡಿಯುವ ಬೆಸ್ತರು’

ದೇವರ ರಾಜ್ಯವನ್ನು ಹುರುಪಿನಿಂದ ಸಾರುವ 863 ಮಂದಿ ಸೌವಾರ್ತಿಕರು ಸೆನಿಗಲ್‌ನಲ್ಲಿದ್ದಾರೆ. ಆತ್ಮಿಕ ಮೀನು ಹಿಡಿಯುವ ಕೆಲಸವು ಇಲ್ಲಿ 1950ರ ಆದಿಭಾಗದಲ್ಲಿ ಆರಂಭವಾಯಿತು. 1965ರಲ್ಲಿ ವಾಚ್‌ ಟವರ್‌ ಸೊಸೈಟಿಯ ಬ್ರಾಂಚ್‌ ಆಫೀಸು ಇದರ ರಾಜಧಾನಿ ನಗರವಾದ ಡಕಾರ್‌ನಲ್ಲಿ ತೆರೆಯಲ್ಪಟ್ಟಿತು. ದೂರದ ದೇಶಗಳಿಂದ ಮಿಷನೆರಿ ‘ಬೆಸ್ತರು’ ಬರಲಾರಂಭಿಸಿದರು. ಹೀಗೆ ಸೆನಿಗಲ್‌ನಲ್ಲಿ ‘ಮೀನು ಹಿಡಿಯುವ’ ಕೆಲಸವು ಆರಂಭವಾಯಿತು, ಮತ್ತು ಕ್ರೈಸ್ತ ನಿರೀಕ್ಷೆಯನ್ನು ಹಂಚಿಕೊಳ್ಳುವ ಈ ಕಾರ್ಯವು ಒಂದೇ ಸಮನೆ ಮುಂದುವರಿಯಿತು. ತದನಂತರ, ಹೊಸ ಬ್ರಾಂಚ್‌ ಕಟ್ಟಡವನ್ನು ಡಕಾರ್‌ನ ಹೊರವಲಯದಲ್ಲಿರುವ ಆಲ್‌ಮಾಡೈಸ್‌ ಎಂಬ ಕ್ಷೇತ್ರದಲ್ಲಿ ಕಟ್ಟಲಾಯಿತು, ಮತ್ತು ಜೂನ್‌ 1999ರಲ್ಲಿ ಅದನ್ನು ಯೆಹೋವನಿಗೆ ಸಮರ್ಪಿಸಲಾಯಿತು. ಅದೆಂತಹ ಉಲ್ಲಾಸಕರ ಸಮಯವಾಗಿತ್ತು!

ಸತ್ಯವನ್ನು ಅಂಗೀಕರಿಸುವ ಪಂಥಾಹ್ವಾನ

ಬೇರೆ ಬೇರೆ ಹಿನ್ನೆಲೆಗಳಿಂದ ಬಂದ ಜನರನ್ನು ಕ್ರಮವಾಗಿ ಸಂದರ್ಶಿಸಲಾಗುತ್ತಿದೆ, ಮತ್ತು ಇವರಲ್ಲಿ ಕೆಲವರು ದೇವರ ವಾಕ್ಯದಲ್ಲಿರುವ ನಿರೀಕ್ಷೆಯ ಸಂದೇಶಕ್ಕೆ ಒಳ್ಳೆಯ ಪ್ರತಿಕ್ರಿಯೆಯನ್ನೂ ತೋರಿಸಿದ್ದಾರೆ. ಹೆಚ್ಚಿನವರಿಗೆ ಬೈಬಲಿನ ಜ್ಞಾನವಿರದಿದ್ದರೂ, ಯೆಹೋವ ದೇವರು ಗತಕಾಲದ ನಂಬಿಗಸ್ತ ಪ್ರವಾದಿಗಳಿಗೆ ಮಾಡಿರುವ ವಾಗ್ದಾನಗಳು ಬೇಗನೆ ನೆರವೇರಲಿವೆ ಎಂಬುದನ್ನು ತಿಳಿದು ಅವರು ಬಹಳವಾಗಿ ಆನಂದಿಸುತ್ತಾರೆ.

ವಿಶೇಷವಾಗಿ ಕುಟುಂಬದ ಸಂಪ್ರದಾಯಗಳು ಮತ್ತು ಪದ್ಧತಿಗಳು ಒಳಗೂಡಿರುವಾಗ, ಕ್ರೈಸ್ತ ತತ್ವಗಳ ವಿಷಯದಲ್ಲಿ ದೃಢವಾದ ನಿಲುವನ್ನು ತೆಗೆದುಕೊಳ್ಳುವುದು ಅಷ್ಟೇನೂ ಸುಲಭವಾಗಿರುವುದಿಲ್ಲ, ಅದಕ್ಕೆ ಧೈರ್ಯವು ಬೇಕಾಗಿದೆ. ಉದಾಹರಣೆಗೆ, ಸೆನಿಗಲ್‌ನಲ್ಲಿ ಬಹುಪತ್ನಿತ್ವವು ಸರ್ವಸಾಮಾನ್ಯವಾಗಿದೆ. ಬೈಬಲಿನ ಅಧ್ಯಯನವನ್ನು ಆರಂಭಿಸಿದಾಗ ಇಬ್ಬರು ಪತ್ನಿಯರಿದ್ದ ಒಬ್ಬ ಮನುಷ್ಯನ ಅನುಭವವನ್ನು ತೆಗೆದುಕೊಳ್ಳಿ. ಕ್ರೈಸ್ತ ಸತ್ಯವನ್ನು ಸ್ವೀಕರಿಸಿ, ಏಕಪತ್ನಿಯುಳ್ಳವನಾಗಿರಬೇಕೆಂಬ ಶಾಸ್ತ್ರೀಯ ಆವಶ್ಯಕತೆಗೆ ಹೊಂದಿಕೊಳ್ಳುವ ಧೈರ್ಯ ಅವನಲ್ಲಿತ್ತೊ? (1 ತಿಮೊಥೆಯ 3:2) ತನ್ನ ಯೌವನದ ಪತ್ನಿಯನ್ನು, ಅಂದರೆ ತಾನು ಪ್ರಥಮವಾಗಿ ವಿವಾಹವಾದ ಸ್ತ್ರೀಯನ್ನು ಅವನು ತನ್ನ ಬಳಿ ಇಟ್ಟುಕೊಳ್ಳುವನೊ? ಅವನು ಇದನ್ನೇ ಮಾಡಿದನು, ಮತ್ತು ಈಗ ಅವನು ಡಕಾರ್‌ ಕ್ಷೇತ್ರದಲ್ಲಿರುವ ದೊಡ್ಡ ಸಭೆಗಳಲ್ಲೊಂದರಲ್ಲಿ ಹುರುಪಿನಿಂದ ಒಬ್ಬ ಹಿರಿಯನಾಗಿ ಸೇವೆಸಲ್ಲಿಸುತ್ತಿದ್ದಾನೆ. ಅವನ ಮೊದಲ ಪತ್ನಿಯೂ, ಒಟ್ಟು 12 ಮಂದಿ ಮಕ್ಕಳೂ—10 ಮಂದಿ ಮಕ್ಕಳು ತನ್ನ ಮೊದಲ ಪತ್ನಿಯಿಂದ ಮತ್ತು ಇಬ್ಬರು ಮಕ್ಕಳು ತನ್ನ ಹಿಂದಿನ ಎರಡನೆಯ ಪತ್ನಿಯಿಂದ—ಸತ್ಯವನ್ನು ಅಂಗೀಕರಿಸಿದ್ದಾರೆ.

ಕ್ರೈಸ್ತ ನಿರೀಕ್ಷೆಯನ್ನು ಸ್ವೀಕರಿಸಲು ಅನಕ್ಷರತೆಯು ಮತ್ತೊಂದು ಅಡ್ಡಿಯಾಗಿರಬಹುದು. ಅಂದರೆ, ಒಬ್ಬ ಅನಕ್ಷರಸ್ಥನು ಸತ್ಯವನ್ನು ಅಂಗೀಕರಿಸಿ, ಅದಕ್ಕನುಸಾರ ಜೀವಿಸಲು ಸಾಧ್ಯವಿಲ್ಲವೆಂಬುದು ಇದರ ಅರ್ಥವೊ? ಖಂಡಿತವಾಗಿಯೂ ಇಲ್ಲ. ಎಂಟು ಮಂದಿ ಚಿಕ್ಕ ಮಕ್ಕಳಿರುವ ಮಾರಿಯಳ ಉದಾಹರಣೆಯನ್ನು ತೆಗೆದುಕೊಳ್ಳಿ. ಇವಳು ಕಷ್ಟಪಟ್ಟು ದುಡಿಯುತ್ತಾಳೆ. ಪ್ರತಿ ದಿನ ಬೆಳಗ್ಗೆ, ಮಕ್ಕಳು ಶಾಲೆಗೆ ಹೋಗುವ ಮುಂಚೆ ಮತ್ತು ತಾನು ಕೆಲಸಕ್ಕೆ ಹೊರಡುವ ಮುಂಚೆ, ಬೈಬಲ್‌ ವಚನವನ್ನು ಚರ್ಚಿಸುವುದರ ಮಹತ್ವವನ್ನು ಆಕೆ ಮನಗಂಡಳು. ಆದರೆ ಅವಳು ಅನಕ್ಷರಸ್ಥೆಯಾಗಿದ್ದದ್ದರಿಂದ ಇದನ್ನು ಹೇಗೆ ಮಾಡಸಾಧ್ಯವಿತ್ತು? ಪ್ರತಿ ದಿನ ಮುಂಜಾನೆ ಅವಳು ಪ್ರತಿನಿತ್ಯ ಶಾಸ್ತ್ರಗಳನ್ನು ಪರೀಕ್ಷಿಸುವುದು ಎಂಬ ಪುಸ್ತಿಕೆಯನ್ನು ಕೈಯಲ್ಲಿ ಹಿಡಿದು, ತನ್ನ ಮನೆಬಾಗಿಲಿನ ಮುಂದಿರುವ ಮರಳಿನ ಬೀದಿಯಲ್ಲಿ ನಿಂತುಕೊಳ್ಳುತ್ತಿದ್ದಳು. ಹಾದುಹೋಗುತ್ತಿರುವ ಜನರನ್ನು ನಿಲ್ಲಿಸಿ, ಅವರಿಗೆ ಓದಲು ಬರುತ್ತದೊ ಎಂದು ಕೇಳುತ್ತಿದ್ದಳು. ಓದಲು ಬರುತ್ತದೆಂದು ಯಾರಾದರೂ ಹೇಳಿದಾಗ, ಅವರ ಕೈಯಲ್ಲಿ ಆ ಪುಸ್ತಿಕೆಯನ್ನಿತ್ತು, “ನನಗೆ ಓದಲು ಬರುವುದಿಲ್ಲ, ದಯವಿಟ್ಟು ಈ ಭಾಗವನ್ನು ನನಗಾಗಿ ಓದಿ ಹೇಳುವಿರೊ?” ಎಂದು ತೀವ್ರಾಸಕ್ತಿಯಿಂದ ಕೇಳುತ್ತಿದ್ದಳು. ಓದಲ್ಪಡುತ್ತಿರುವ ವಿಷಯಕ್ಕೆ ಲಕ್ಷ್ಯಕೊಡುತ್ತಿದ್ದಳು. ನಂತರ ಓದಿದ ವ್ಯಕ್ತಿಗೆ ಧನ್ಯವಾದ ಹೇಳಿ, ಬೇಗನೆ ಮನೆಯೊಳಗೆ ಓಡಿ, ಮಕ್ಕಳು ಶಾಲೆಗೆ ಹೋಗುವ ಮುಂಚೆ ಅವರೊಂದಿಗೆ ಆ ವಚನದ ಸ್ವಾರಸ್ಯಕರ ಚರ್ಚೆಯನ್ನು ನಡೆಸುತ್ತಿದ್ದಳು!

ಎಲ್ಲ ರೀತಿಯ ಜನರು ಪ್ರತಿಕ್ರಿಯಿಸುತ್ತಾರೆ

ಸೆನಿಗಲ್‌ನಲ್ಲಿ ಜನರು ಬೀದಿಗಳಲ್ಲಿ ಮೀನು, ತರಕಾರಿಗಳನ್ನು ಮಾರುತ್ತಾ, ಇಲ್ಲವೆ ಮಾರುಕಟ್ಟೆಯಲ್ಲಿ ಹಣ್ಣುಹಂಪಲುಗಳನ್ನು ಮಾರುತ್ತಾ, ಅಥವಾ ದೊಡ್ಡ ಬಾಒಬ್ಯಾಬ್‌ ವೃಕ್ಷದ ಕೆಳಗೆ ಅಟಾಯಾ ಎಂಬ ಕಹಿಯಾದ ಹಸಿರು ಚಹಾ ಹೀರುತ್ತಾ ಕುಳಿತಿರುವುದನ್ನು ನೀವು ನೋಡಬಹುದು. ತಾವು ಭೇಟಿಯಾಗುವ ಎಲ್ಲರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳುವ ಉದ್ದೇಶದಿಂದ, ಇಬ್ಬರು ಸಹೋದರರು ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ ಒಬ್ಬ ಅಂಗವಿಕಲನೊಂದಿಗೆ ಮಾತಾಡಿದರು. ಅವನಿಗೆ ವಂದಿಸಿದ ಬಳಿಕ ಅವರು ಹೇಳಿದ್ದು: “ಅನೇಕರು ನಿನಗೆ ಹಣವನ್ನು ಕೊಟ್ಟರೂ, ನಿನ್ನೊಂದಿಗೆ ಮಾತಾಡುವುದಿಲ್ಲ, ಅಲ್ಲವೇ? ನಾವು ನಿನ್ನ ಭವಿಷ್ಯತ್ತಿನ ಕುರಿತು ತೀರ ಪ್ರಾಮುಖ್ಯವಾದೊಂದು ವಿಷಯವನ್ನು ನಿನ್ನೊಂದಿಗೆ ಮಾತಾಡಲು ಬಂದಿದ್ದೇವೆ.” ಭಿಕ್ಷುಕನಿಗೆ ಆಶ್ಚರ್ಯವಾಯಿತು. “ಒಂದು ಪ್ರಶ್ನೆಯನ್ನು ಕೇಳಲು ಬಯಸುತ್ತೇವೆ” ಎಂದು ಸಹೋದರರು ತಮ್ಮ ಸಂಭಾಷಣೆಯನ್ನು ಮುಂದುವರಿಸಿದರು. “ಲೋಕದಲ್ಲಿ ಇಷ್ಟೊಂದು ಕಷ್ಟಾನುಭವ ಏಕಿದೆ ಎಂದು ನೀನು ನೆನಸುತ್ತೀ?” “ಅದು ದೇವರ ಚಿತ್ತ” ಎಂದು ಆ ಭಿಕ್ಷುಕನು ಉತ್ತರಿಸಿದನು.

ತರುವಾಯ ಸಹೋದರರು ಅವನೊಂದಿಗೆ ಶಾಸ್ತ್ರವಚನಗಳಿಂದ ತರ್ಕಿಸಿ, ಪ್ರಕಟನೆ 21:4ರ ವಿವರಣೆಯನ್ನು ನೀಡಿದರು. ಆ ಭಿಕ್ಷುಕನು ಈ ನಿರೀಕ್ಷೆಯ ಸಂದೇಶದಿಂದ ಮತ್ತು ತನ್ನೊಂದಿಗೆ ಬೈಬಲಿನ ವಿಷಯವನ್ನು ಹೇಳುವಷ್ಟರ ಮಟ್ಟಿಗೆ ಇವರು ತನ್ನ ಬಗ್ಗೆ ಆಸಕ್ತಿಯನ್ನು ತೋರಿಸಿದ್ದಾರೆ ಎಂಬ ನಿಜತ್ವದಿಂದ ಎಷ್ಟು ಪ್ರಭಾವಿತನಾದನೆಂದರೆ, ಅವನ ಕಣ್ಣಲ್ಲಿ ನೀರು ತುಂಬಿಕೊಂಡಿತು. ಸಹೋದರರಿಂದ ಹಣ ಬೇಡುವ ಬದಲು, ತನ್ನ ಬಳಿಯಿದ್ದ ಎಲ್ಲ ನ್ಯಾಣಗಳನ್ನು ಅವರು ತೆಗೆದುಕೊಂಡು ಹೋಗುವಂತೆ ಒತ್ತಾಯಿಸತೊಡಗಿದನು. ಅವನು ಎಷ್ಟು ಒತ್ತಾಯಿಸುತ್ತಿದ್ದನೆಂದರೆ, ಅಲ್ಲಿ ಹಾದುಹೋಗುತ್ತಿದ್ದವರು ಇವರನ್ನೇ ನೋಡತೊಡಗಿದರು. ಅವನ ಹಣವನ್ನು ಅವನೇ ಇಟ್ಟುಕೊಳ್ಳುವಂತೆ ಮನವೊಪ್ಪಿಸುವುದರೊಳಗೆ ಸಹೋದರರಿಗೆ ಸಾಕಾಯಿತು. ಅವನು ಕೊನೆಗೆ ಒಪ್ಪಿಕೊಂಡನಾದರೂ, ಅವರು ಅವನನ್ನು ಪುನಃ ಭೇಟಿಮಾಡುವಂತೆ ಕೇಳಿಕೊಂಡನು.

ಡಕಾರ್‌ನ ದೊಡ್ಡ ವಿಶ್ವವಿದ್ಯಾನಿಲಯವು ಸಹ, ಈ ಆತ್ಮಿಕ ಬಲೆಗೆ ಹೆಚ್ಚಿನ ಮೀನನ್ನು ಕೂಡಿಸುತ್ತಿದೆ. ಅಲ್ಲಿ ಷಾನ್‌ ಲವೀ ಎಂಬ ಮೆಡಿಕಲ್‌ ವಿದ್ಯಾರ್ಥಿಯು ಬೈಬಲ್‌ ಅಧ್ಯಯನವನ್ನು ಆರಂಭಿಸಿದನು. ಅವನು ಸತ್ಯವನ್ನು ಬೇಗನೆ ಸ್ವೀಕರಿಸಿ, ತನ್ನ ಜೀವಿತವನ್ನು ಯೆಹೋವನಿಗೆ ಸಮರ್ಪಿಸಿ, ದೀಕ್ಷಾಸ್ನಾನ ಪಡೆದುಕೊಂಡನು. ಅವನು ಪೂರ್ಣ ಸಮಯದ ಪಯನೀಯರನಾಗಿ ದೇವರಿಗೆ ಸೇವೆಸಲ್ಲಿಸಲು ಬಯಸಿದನಾದರೂ, ತನ್ನ ವೈದ್ಯಕೀಯ ಶಿಕ್ಷಣದಲ್ಲೂ ಅವನಿಗೆ ಆಸಕ್ತಿಯಿತ್ತು. ತನ್ನ ಸ್ವದೇಶದೊಂದಿಗೆ ಮಾಡಿದ್ದ ಒಂದು ಒಪ್ಪಂದದ ಕಾರಣ, ಅವನು ತನ್ನ ಶಿಕ್ಷಣವನ್ನು ಪೂರೈಸಲೇಬೇಕಿತ್ತು. ಆದರೂ, ಶಿಕ್ಷಣದ ಜೊತೆಗೆ ಅವನು ಆಕ್ಸಿಲಿಯರಿ ಪಯನೀಯರನಾಗಿ ಸೇವೆಮಾಡುವುದನ್ನೂ ಆರಂಭಿಸಿದನು. ತನ್ನ ಶಿಕ್ಷಣವನ್ನು ಮುಗಿಸಿ, ಡಿಪ್ಲೊಮಾ ಪಡೆದ ಮೇಲೆ, ಅವನು ಆಫ್ರಿಕದ ಒಂದು ದೊಡ್ಡ ಬೆತೆಲ್‌ ಕುಟುಂಬದ ವೈದ್ಯನಾಗಿ ಸೇವೆಸಲ್ಲಿಸುವಂತೆ ಆಮಂತ್ರಿಸಲ್ಪಟ್ಟನು. ಡಕಾರ್‌ ವಿಶ್ವವಿದ್ಯಾನಿಲಯದಲ್ಲಿ ಭೇಟಿಮಾಡಲ್ಪಟ್ಟ ಮತ್ತೊಬ್ಬ ಯುವಕನು ಸಹ, ತನ್ನ ಸ್ವದೇಶದಲ್ಲಿರುವ ಬೆತೆಲ್‌ನಲ್ಲಿ ಈಗ ಸೇವೆಸಲ್ಲಿಸುತ್ತಿದ್ದಾನೆ.

ಸೆನಿಗಲ್‌ನಲ್ಲಿ ಆತ್ಮಿಕ ಮೀನು ಹಿಡಿಯುವ ಕೆಲಸವು ನಿಜವಾಗಿಯೂ ಪ್ರತಿಫಲದಾಯಕವಾಗಿದೆ. ಯೆಹೋವನ ಸಾಕ್ಷಿಗಳ ಬೈಬಲ್‌ ಸಾಹಿತ್ಯವನ್ನು ಜನರು ಬಹಳವಾಗಿ ಮೆಚ್ಚಿಕೊಳ್ಳುತ್ತಾರೆ, ಮತ್ತು ಈಗ ಅದು ಸ್ಥಳೀಯ ವುಲುಫ್‌ ಭಾಷೆಯಲ್ಲೂ ಲಭ್ಯವಿದೆ. ಸುವಾರ್ತೆಯನ್ನು ತಮ್ಮ ಮಾತೃಭಾಷೆಯಲ್ಲಿ ಕೇಳಿಸಿಕೊಂಡಿರುವುದರಿಂದಾಗಿ ಅನೇಕ ಸಹೃದಯಿಗಳು ಒಳ್ಳೆಯ ಪ್ರತಿಕ್ರಿಯೆಯನ್ನು ತೋರಿಸಿದ್ದಾರೆ. ಸೆನಿಗಲ್‌ನ ಹುರುಪುಳ್ಳ ‘ಮನುಷ್ಯರನ್ನು ಹಿಡಿಯುವ ಬೆಸ್ತರು’ ನಂಬಿಕೆ ಹಾಗೂ ಧೈರ್ಯದಿಂದ ಕ್ರೈಸ್ತ ನಿರೀಕ್ಷೆಯನ್ನು ನಿರಂತರವಾಗಿ ಹಂಚುತ್ತಿರುವಾಗ, ಯೆಹೋವನ ಆಶೀರ್ವಾದದಿಂದ ಇನ್ನೂ ಅನೇಕ ಸಾಂಕೇತಿಕ ಮೀನುಗಳು ಹಿಡಿಯಲ್ಪಡುವವು ಎಂಬುದರಲ್ಲಿ ಸಂದೇಹವೇ ಇಲ್ಲ.

[ಪುಟ 31ರಲ್ಲಿರುವ ಭೂಪಟ/ಚಿತ್ರ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಸೆನಿಗಲ್‌

[ಚಿತ್ರ]

ಸೆನಿಗಲ್‌ನಲ್ಲಿ ಕ್ರೈಸ್ತ ನಿರೀಕ್ಷೆಯನ್ನು ಹಂಚುತ್ತಿರುವುದು

[ಕೃಪೆ]

Mountain High Maps® Copyright © 1997 Digital Wisdom, Inc.