ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಪ್ರವಾದನ ವಾಕ್ಯಕ್ಕೆ ಗಮನಕೊಡಿರಿ

ದೇವರ ಪ್ರವಾದನ ವಾಕ್ಯಕ್ಕೆ ಗಮನಕೊಡಿರಿ

ದೇವರ ಪ್ರವಾದನ ವಾಕ್ಯಕ್ಕೆ ಗಮನಕೊಡಿರಿ

“ಪ್ರವಾದನವಾಕ್ಯವು ನಮಗೆ ಮತ್ತೂ ದೃಢವಾಗಿದೆ . . . ಅದಕ್ಕೆ ಲಕ್ಷ್ಯಕೊಡುವದೇ ಒಳ್ಳೇದು.”2 ಪೇತ್ರ 1:19.

1, 2. ಯಾವ ಸುಳ್ಳು ಮೆಸ್ಸೀಯನೊಬ್ಬನ ಉದಾಹರಣೆಯನ್ನು ನೀವು ತಿಳಿಸಸಾಧ್ಯವಿದೆ?

ಅನೇಕ ಶತಮಾನಗಳಿಂದಲೂ ಸುಳ್ಳು ಮೆಸ್ಸೀಯರು ಭವಿಷ್ಯವಾಣಿಗಳನ್ನು ನುಡಿಯಲು ಪ್ರಯತ್ನಿಸಿದ್ದಾರೆ. ಸಾ.ಶ. ಐದನೆಯ ಶತಮಾನದಲ್ಲಿ, ತಾನು ಮೋಸಸ್‌ ಆಗಿದ್ದೇನೆಂದು ಹೇಳಿಕೊಳ್ಳುತ್ತಿದ್ದ ಒಬ್ಬ ವ್ಯಕ್ತಿಯು, ಕ್ರೀಟ್‌ ದ್ವೀಪದಲ್ಲಿದ್ದ ಯೆಹೂದ್ಯರಿಗೆ ತಾನೇ ಮೆಸ್ಸೀಯನೆಂದು ಮತ್ತು ಅವರನ್ನು ದಬ್ಬಾಳಿಕೆಯಿಂದ ಬಿಡಿಸುವವನೆಂದು ಮನವೊಪ್ಪಿಸಿದನು. ತಮ್ಮ ಬಿಡುಗಡೆಯ ದಿನವೆಂದು ನಿರ್ಧರಿಸಲ್ಪಟ್ಟ ದಿನದಂದು ಅವರು ಅವನನ್ನು ಹಿಂಬಾಲಿಸುತ್ತಾ, ಭೂಮಧ್ಯ ಸಮುದ್ರವನ್ನು ನೋಡಸಾಧ್ಯವಿದ್ದ ಒಂದು ಉನ್ನತ ಶಿಖರವನ್ನೇರಿದರು. ಅವರು ಸಮುದ್ರದೊಳಗೆ ಧುಮುಕಿದರೆ ಸಾಕು, ಅದು ಅವರ ಮುಂದೆಯೇ ಇಬ್ಭಾಗವಾಗುವುದೆಂದು ಅವನು ಅವರಿಗೆ ಹೇಳಿದನು. ಸಮುದ್ರದೊಳಗೆ ಧುಮುಕಿದ ಅನೇಕ ಜನರು ಜಲಸಮಾಧಿಯಾದರು ಮತ್ತು ಆ ಸುಳ್ಳು ಮೆಸ್ಸೀಯನು ಅಲ್ಲಿಂದ ಪರಾರಿಯಾದನು.

2 ಹನ್ನೆರಡನೆಯ ಶತಮಾನದಲ್ಲಿ, ಮತ್ತೊಬ್ಬ “ಮೆಸ್ಸೀಯನು” ಯೆಮೆನ್‌ ದೇಶದಲ್ಲಿ ಕಾಣಿಸಿಕೊಂಡನು. ತನ್ನ ಮೆಸ್ಸೀಯತನವನ್ನು ರುಜುಪಡಿಸುವ ಸೂಚನೆಯೊಂದನ್ನು ತೋರಿಸುವಂತೆ ಅಲ್ಲಿಯ ಕಲೀಫ್‌ ಅಥವಾ ಅರಸನು ಅವನಿಗೆ ಕೇಳಿದನು. ಆಗ ತನ್ನ ಶಿರಚ್ಛೇದನ ಮಾಡಿಸುವಂತೆ ಈ “ಮೆಸ್ಸೀಯನು” ಕಲೀಫನಿಗೆ ಹೇಳಿದನು. ತತ್‌ಕ್ಷಣವೇ ತನ್ನ ಪುನರುತ್ಥಾನವಾಗುವುದು, ಮತ್ತು ಇದೇ ಒಂದು ಸೂಚನೆಯಾಗಿರುವುದೆಂದು ಅವನು ಭವಿಷ್ಯನುಡಿದನು. ಕಲೀಫನು ಈ ಯೋಜನೆಗೆ ಒಪ್ಪಿಕೊಂಡನು—ಮತ್ತು ಇದೇ ಆ “ಮೆಸ್ಸೀಯನ” ಜೀವನದ ಅಂತ್ಯವಾಗಿತ್ತು.

3. ನಿಜ ಮೆಸ್ಸೀಯನು ಯಾರು, ಮತ್ತು ಅವನ ಶುಶ್ರೂಷೆಯು ಏನನ್ನು ರುಜುಪಡಿಸಿತು?

3 ಸುಳ್ಳು ಮೆಸ್ಸೀಯರು ವಿಫಲರಾಗಿದ್ದಾರೆ ಮತ್ತು ಅವರ ಪ್ರವಾದನೆಗಳು ಸಂಪೂರ್ಣವಾಗಿ ನೆಲಕಚ್ಚಿವೆ, ಆದರೆ ದೇವರ ಪ್ರವಾದನ ವಾಕ್ಯಕ್ಕೆ ನಾವು ಲಕ್ಷ್ಯಕೊಡುವುದು ಎಂದಿಗೂ ನಿರಾಶೆಗೆ ನಡೆಸದು. ನಿಜ ಮೆಸ್ಸೀಯನಾದ ಯೇಸು ಕ್ರಿಸ್ತನು, ಅನೇಕ ಬೈಬಲ್‌ ಪ್ರವಾದನೆಗಳ ಜೀವಂತ ನೆರವೇರಿಕೆಯಾಗಿದ್ದನು. ಉದಾಹರಣೆಗಾಗಿ, ಯೆಶಾಯನ ಪ್ರವಾದನೆಯನ್ನು ಉಲ್ಲೇಖಿಸುತ್ತಾ ಸುವಾರ್ತಾ ಲೇಖಕನಾದ ಮತ್ತಾಯನು ಬರೆದುದು: “ಜೆಬುಲೋನ್‌ ಸೀಮೆ ಮತ್ತು ನೆಫ್ತಲೀಮ್‌ ಸೀಮೆ, ಯೊರ್ದನಿನ ಆಚೆ, ಸಮುದ್ರದ ಕಡೆಗಿರುವ ಸೀಮೆ, ಅನ್ಯಜನಗಳಿರುವ ಗಲಿಲಾಯ ಸೀಮೆ, ಕತ್ತಲಲ್ಲಿ ವಾಸಿಸಿದ ಈ ಸೀಮೆಗಳ ಜನರಿಗೆ ದೊಡ್ಡ ಬೆಳಕು ಕಾಣಿಸಿತು; ಕಾರ್ಗತ್ತಲಾದ ದೇಶದಲ್ಲಿದ್ದವರಿಗೆ ಸೂರ್ಯೋದಯವಾಯಿತು . . . ಅಂದಿನಿಂದ ಯೇಸು—ಪರಲೋಕರಾಜ್ಯವು ಸಮೀಪಿಸಿತು; ದೇವರ ಕಡೆಗೆ ತಿರುಗಿಕೊಳ್ಳಿರಿ ಎಂದು ಸಾರಿ ಹೇಳುವದಕ್ಕೆ ಪ್ರಾರಂಭಿಸಿದನು.” (ಮತ್ತಾಯ 4:15-17; ಯೆಶಾಯ 9:1, 2) ಯೇಸು ಕ್ರಿಸ್ತನು ತಾನೇ ಆ “ದೊಡ್ಡ ಬೆಳಕು” ಆಗಿದ್ದನು ಮತ್ತು ಮೋಶೆಯು ಮುಂತಿಳಿಸಿದ್ದಂತಹ ಪ್ರವಾದಿಯು ಅವನೇ ಎಂಬುದನ್ನು ಅವನ ಶುಶ್ರೂಷೆಯು ರುಜುಪಡಿಸಿತು. ಯೇಸುವಿನ ಮಾತಿಗೆ ಕಿವಿಗೊಡದವರು ನಾಶವಾಗಲಿದ್ದರು.—ಧರ್ಮೋಪದೇಶಕಾಂಡ 18:18, 19; ಅ. ಕೃತ್ಯಗಳು 3:22, 23.

4. ಯೇಸು ಯೆಶಾಯ 53:12ನ್ನು ಹೇಗೆ ನೆರವೇರಿಸಿದನು?

4 ಯೇಸು, ಯೆಶಾಯ 53:12ರ ಪ್ರವಾದನಾ ಮಾತುಗಳನ್ನು ಸಹ ನೆರವೇರಿಸಿದನು: “ಇವನು . . . ತನ್ನ ಪ್ರಾಣವನ್ನು ಧಾರೆಯೆರೆದು ಮರಣಹೊಂದಿ ದ್ರೋಹಿಗಳೊಂದಿಗೆ ತನ್ನನ್ನೂ ಎಣಿಸಿಕೊಂಡು ಬಹು ಜನ ದ್ರೋಹಿಗಳ ಪಾಪವನ್ನು ಹೊರುತ್ತಾ ಅವರಿಗಾಗಿ ವಿಜ್ಞಾಪನೆಮಾಡಿದನಲ್ಲಾ.” ಶೀಘ್ರದಲ್ಲೇ ತನ್ನ ಮಾನವ ಜೀವವನ್ನು ಪ್ರಾಯಶ್ಚಿತ್ತವಾಗಿ ಅರ್ಪಿಸುವೆನೆಂಬುದು ಯೇಸುವಿಗೆ ಗೊತ್ತಿದ್ದುದ್ದರಿಂದ, ಅವನು ತನ್ನ ಶಿಷ್ಯರ ನಂಬಿಕೆಯನ್ನು ಬಲಪಡಿಸಿದನು. (ಮಾರ್ಕ 10:45) ಇದನ್ನು ಅವನು ರೂಪಾಂತರದ ಮೂಲಕ ಗಮನಾರ್ಹವಾದ ವಿಧದಲ್ಲಿ ಮಾಡಿದನು.

ರೂಪಾಂತರವು ನಂಬಿಕೆಯನ್ನು ಬಲಪಡಿಸುತ್ತದೆ

5. ರೂಪಾಂತರವನ್ನು ನೀವು ನಿಮ್ಮ ಸ್ವಂತ ಮಾತುಗಳಲ್ಲಿ ಹೇಗೆ ವರ್ಣಿಸುವಿರಿ?

5 ರೂಪಾಂತರವು ಒಂದು ಪ್ರವಾದನ ಘಟನೆಯಾಗಿತ್ತು. ಯೇಸು ಹೇಳಿದ್ದು: “ಮನುಷ್ಯಕುಮಾರನು ತನ್ನ ತಂದೆಯ ಪ್ರಭಾವದೊಡನೆ ತನ್ನ ದೂತರ ಸಮೇತವಾಗಿ ಬರುವನು; . . . ನಿಮಗೆ ನಿಜವಾಗಿ ಹೇಳುತ್ತೇನೆ, ಇಲ್ಲಿ ನಿಂತವರೊಳಗೆ ಕೆಲವರು, ಮನುಷ್ಯಕುಮಾರನು ತನ್ನ ರಾಜ್ಯದಲ್ಲಿ ಬರುವದನ್ನು ನೋಡುವ ತನಕ ಮರಣಹೊಂದುವದಿಲ್ಲ.” (ಮತ್ತಾಯ 16:27, 28) ಅವನ ಅಪೊಸ್ತಲರಲ್ಲಿ ಕೆಲವರು ಯೇಸು ತನ್ನ ರಾಜ್ಯದಲ್ಲಿ ಬರುವುದನ್ನು ನಿಜವಾಗಿಯೂ ನೋಡಿದರೊ? ಮತ್ತಾಯ 17:1-7 ತಿಳಿಸುವುದು: “ಆರು ದಿವಸಗಳಾದ ಮೇಲೆ ಯೇಸು ಪೇತ್ರನನ್ನೂ ಯಾಕೋಬನನ್ನೂ ಇವನ ತಮ್ಮನಾದ ಯೋಹಾನನನ್ನೂ ಮಾತ್ರ ವಿಂಗಡವಾಗಿ ಕರಕೊಂಡು ಎತ್ತರವಾದ ಬೆಟ್ಟಕ್ಕೆ ಹೋದನು. ಅಲ್ಲಿ ಅವರ ಕಣ್ಣ ಮುಂದೆ ಆತನ ರೂಪ ಬೇರೆಯಾಯಿತು.” ಎಂತಹ ಒಂದು ಕೌತುಕಭರಿತ ಘಟನೆ! “ಆತನ ಮುಖವು ಸೂರ್ಯನ ಹಾಗೆ ಪ್ರಕಾಶಿಸಿತು; ಆತನ ವಸ್ತ್ರಗಳು ಬೆಳಕಿನಂತೆ ಬೆಳ್ಳಗಾದವು. ಇದಲ್ಲದೆ ಮೋಶೆಯೂ ಎಲೀಯನೂ ಆತನ ಸಂಗಡ ಮಾತಾಡುತ್ತಾ ಅವರಿಗೆ ಕಾಣಿಸಿಕೊಂಡರು.” ಅಷ್ಟುಮಾತ್ರವಲ್ಲದೆ, “ಕಾಂತಿಯುಳ್ಳ ಮೋಡವು ಅವರ ಮೇಲೆ ಕವಿಯಿತು.” ಮತ್ತು ದೇವರ ಸ್ವಂತ ವಾಣಿಯು ಹೀಗೆ ಹೇಳುವುದನ್ನು ಕೇಳಿಸಿಕೊಂಡರು: “ಈತನು ಪ್ರಿಯನಾಗಿರುವ ನನ್ನ ಮಗನು; ಈತನನ್ನು ನಾನು ಮೆಚ್ಚಿದ್ದೇನೆ; ಈತನ ಮಾತನ್ನು ಕೇಳಿರಿ. . . . ಶಿಷ್ಯರು ಇದನ್ನು ಕೇಳಿ ಬಹಳವಾಗಿ ಹೆದರಿ ಬೋರಲಬಿದ್ದರು. ಆದರೆ ಯೇಸು ಹತ್ತರಕ್ಕೆ ಬಂದು ಅವರನ್ನು ಮುಟ್ಟಿ—ಏಳಿರಿ, ಹೆದರಬೇಡಿರಿ ಅಂದನು.”

6. (ಎ) ಯೇಸು ರೂಪಾಂತರವನ್ನು ಏಕೆ ಒಂದು ದರ್ಶನವೆಂದು ಕರೆದನು? (ಬಿ) ರೂಪಾಂತರವು ಯಾವುದರ ಮುನ್ನೋಟವಾಗಿತ್ತು?

6 ಈ ಭಯಚಕಿತಗೊಳಿಸುವ ಘಟನೆಯು, ಯೇಸು ಮತ್ತು ಅವನ ಮೂವರು ಅಪೊಸ್ತಲರು ಬಹುಶಃ ಆ ರಾತ್ರಿ ತಂಗಿದ್ದ ಹರ್ಮೋನ್‌ ಬೆಟ್ಟದ ಸಮತಟ್ಟಾದ ಪ್ರದೇಶದಲ್ಲಿ ನಡೆದಿರಬೇಕು. ಈ ರೂಪಾಂತರವು ರಾತ್ರಿಯ ವೇಳೆಯಲ್ಲಿ ನಡೆದಿರಬಹುದು, ಆದುದರಿಂದಲೇ ಅದು ಮತ್ತಷ್ಟೂ ಸುಸ್ಪಷ್ಟವಾಗಿತ್ತು. ಯೇಸು ಅದನ್ನು ಒಂದು “ದರ್ಶನ”ವೆಂದು ಕರೆಯಲು ಇದು ಒಂದು ಕಾರಣವಾಗಿದೆ: ಬಹಳ ಸಮಯದ ಹಿಂದೆಯೇ ಮೃತರಾಗಿದ್ದ ಮೋಶೆ ಮತ್ತು ಎಲೀಯರು ಅಕ್ಷರಾರ್ಥವಾಗಿ ಅಲ್ಲಿ ಉಪಸ್ಥಿತರಿರಲಿಲ್ಲ. ವಾಸ್ತವದಲ್ಲಿ ಕೇವಲ ಕ್ರಿಸ್ತನು ಮಾತ್ರ ಅಲ್ಲಿ ನಿಜವಾಗಿಯೂ ಉಪಸ್ಥಿತನಿದ್ದನು. (ಮತ್ತಾಯ 17:8, 9) ಆ ಕಣ್ಣುಕುಕ್ಕುವಂತಹ ಪ್ರದರ್ಶನವು, ಪೇತ್ರ, ಯಾಕೋಬ ಮತ್ತು ಯೋಹಾನರಿಗೆ ರಾಜ್ಯಾಧಿಕಾರದಲ್ಲಿ ಯೇಸುವಿನ ಮಹಿಮಾಭರಿತ ಸಾನ್ನಿಧ್ಯದ ಪ್ರೇಕ್ಷಣೀಯ ಮುನ್ನೋಟವನ್ನು ಕೊಟ್ಟಿತು. ಮೋಶೆ ಮತ್ತು ಎಲೀಯರು, ಯೇಸುವಿನ ಅಭಿಷಿಕ್ತ ಜೊತೆ ಬಾಧ್ಯಸ್ಥರನ್ನು ಚಿತ್ರಿಸಿದರು. ಮತ್ತು ಆ ದರ್ಶನವು, ಯೇಸುವಿನ ರಾಜ್ಯದ ಹಾಗೂ ಅವನ ಭಾವೀ ರಾಜತ್ವದ ಕುರಿತು ಅವನು ನೀಡಿದ ಸಾಕ್ಷ್ಯವನ್ನು ಪ್ರಬಲವಾಗಿ ದೃಢಪಡಿಸಿತು.

7. ಪೇತ್ರನಿಗೆ ಆ ರೂಪಾಂತರವು ಸ್ಪಷ್ಟವಾಗಿ ನೆನಪಿತ್ತೆಂದು ನಮಗೆ ಹೇಗೆ ತಿಳಿದುಬರುತ್ತದೆ?

7 ಕ್ರೈಸ್ತ ಸಭೆಯಲ್ಲಿ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದ ಆ ಮೂವರು ಅಪೊಸ್ತಲರ ನಂಬಿಕೆಯನ್ನು ಬಲಪಡಿಸಲು ಈ ರೂಪಾಂತರವು ಸಹಾಯ ಮಾಡಿತು. ತೇಜೋಮಯವಾಗಿ ಪ್ರಜ್ವಲಿಸುತ್ತಿದ್ದ ಯೇಸುವಿನ ಮುಖ, ಹೊಳೆಯುತ್ತಿದ್ದ ಅವನ ಉಡುಪು, ಮತ್ತು ಯೇಸು ತನ್ನ ಪ್ರಿಯ ಪುತ್ರನೆಂದು ಹಾಗೂ ಅವನಿಗೆ ಅವರು ಕಿವಿಗೊಡಬೇಕೆಂದು ಹೇಳಿದ ದೇವರ ಸ್ವಂತ ವಾಣಿ, ಇವೆಲ್ಲವೂ ದರ್ಶನದ ಉದ್ದೇಶವನ್ನು ಅತ್ಯಂತ ಪರಿಣಾಮಕಾರಿಯಾದ ರೀತಿಯಲ್ಲಿ ಪೂರೈಸಿದವು. ಆದರೆ ಯೇಸುವಿನ ಪುನರುತ್ಥಾನವಾಗುವ ವರೆಗೂ ಅಪೊಸ್ತಲರು ಈ ದರ್ಶನದ ಬಗ್ಗೆ ಯಾರಿಗೂ ಹೇಳಬಾರದಿತ್ತು. ಸುಮಾರು 32 ವರ್ಷಗಳ ನಂತರವೂ, ಈ ರೂಪಾಂತರದ ದರ್ಶನವು ಪೇತ್ರನ ಮನಸ್ಸಿನಲ್ಲಿ ಇನ್ನೂ ಅಚ್ಚಳಿಯದೇ ಉಳಿದಿತ್ತು. ಆ ದರ್ಶನ ಮತ್ತು ಅದರ ಮಹತ್ವದ ಕುರಿತು ತಿಳಿಸುತ್ತಾ ಅವನು ಬರೆದುದು: “ನಮ್ಮ ಕರ್ತನಾದ ಯೇಸು ಕ್ರಿಸ್ತನ ಶಕ್ತಿಯನ್ನೂ ಪ್ರತ್ಯಕ್ಷತೆಯನ್ನೂ ನಿಮಗೆ ತಿಳಿಯಪಡಿಸಿದ್ದರಲ್ಲಿ ಚಮತ್ಕಾರದಿಂದ ಕಲ್ಪಿಸಿದ ಕಥೆಗಳನ್ನು ನಾವು ಅನುಸರಿಸುವವರಾಗಿರಲಿಲ್ಲ. ಆತನ ಮಹತ್ತನ್ನು ಕಣ್ಣಾರೆ ಕಂಡವರಾಗಿಯೇ ತಿಳಿಯಪಡಿಸಿದೆವು. ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ಮೆಚ್ಚಿದ್ದೇನೆ ಎಂಬಂಥ ವಾಣಿಯು ಸರ್ವೋತ್ಕೃಷ್ಟಪ್ರಭಾವದಿಂದ ಆತನಿಗೆ ಉಂಟಾದದ್ದರಲ್ಲಿ ಆತನು ತಂದೆಯಾದ ದೇವರಿಂದ ಘನಮಾನಗಳನ್ನು ಹೊಂದಿದನಲ್ಲವೇ. ನಾವು ಪರಿಶುದ್ಧಪರ್ವತದ ಮೇಲೆ ಆತನ ಸಂಗಡ ಇದ್ದಾಗ ಆಕಾಶದಿಂದ ಬಂದ ಆ ವಾಣಿಯನ್ನು ನಾವೇ ಕೇಳಿದೆವು.”—2 ಪೇತ್ರ 1:16-18.

8. (ಎ) ದೇವರು ತನ್ನ ಪುತ್ರನ ಕುರಿತಾಗಿ ಮಾಡಿದ ಘೋಷಣೆಯು ಯಾವುದರ ಮೇಲೆ ಗಮನವನ್ನು ಕೇಂದ್ರೀಕರಿಸಿತು? (ಬಿ) ರೂಪಾಂತರದಲ್ಲಿ ಕಂಡುಬಂದ ಮೋಡವು ಏನನ್ನು ಸೂಚಿಸಿತು?

8 ಅತಿ ಪ್ರಾಮುಖ್ಯ ಸಂಗತಿಯು ದೇವರ ಈ ಘೋಷಣೆಯೇ ಆಗಿತ್ತು: “ಈತನು ಪ್ರಿಯನಾಗಿರುವ ನನ್ನ ಮಗನು; ಈತನನ್ನು ನಾನು ಮೆಚ್ಚಿದ್ದೇನೆ; ಈತನ ಮಾತನ್ನು ಕೇಳಿರಿ.” ಈ ಹೇಳಿಕೆಯು, ದೇವರಿಂದ ಸಿಂಹಾಸನಾರೂಢನಾಗಿರುವ ಅರಸನಾದ ಯೇಸುವಿನ ಮೇಲೆ ಗಮನವನ್ನು ಕೇಂದ್ರೀಕರಿಸುತ್ತದೆ. ಈತನಿಗೆ ಸರ್ವ ಸೃಷ್ಟಿಯೂ ವಿಧೇಯತೆಯನ್ನು ತೋರಿಸಬೇಕು. ಕವಿದಿದ್ದ ಮೋಡವು, ಈ ದರ್ಶನದ ನೆರವೇರಿಕೆಯು ಅದೃಶ್ಯವಾಗಿರುವುದೆಂಬುದನ್ನು ಸೂಚಿಸಿತು. ಆದರೆ ರಾಜ್ಯಾಧಿಕಾರದಲ್ಲಿ ಯೇಸುವಿನ ಅದೃಶ್ಯ ಸನ್ನಿಧಿಯ “ಸೂಚನೆ”ಯನ್ನು ಗ್ರಹಿಸಬಲ್ಲವರ ತಿಳುವಳಿಕೆಯ ಕಣ್ಣುಗಳಿಗೆ ಮಾತ್ರ ಅದು ಗೋಚರವಾಗಿರಲಿತ್ತು. (ಮತ್ತಾಯ 24:3) ವಾಸ್ತವದಲ್ಲಿ, ತಾನು ಸತ್ತವರಿಂದ ಎಬ್ಬಿಸಲ್ಪಡುವ ವರೆಗೆ ಈ ದರ್ಶನವನ್ನು ಯಾರಿಗೂ ಹೇಳಬೇಡಿ ಎಂದು ಯೇಸು ಅವರಿಗೆ ಕೊಟ್ಟ ಸೂಚನೆಯು, ಅವನ ಪುನರುತ್ಥಾನದ ನಂತರವೇ ಅವನು ಉನ್ನತಕ್ಕೇರಿಸಲ್ಪಡುವನು ಮತ್ತು ವೈಭವೀಕರಿಸಲ್ಪಡುವನು ಎಂಬುದನ್ನು ತೋರಿಸುತ್ತದೆ.

9. ರೂಪಾಂತರವು ನಮ್ಮ ನಂಬಿಕೆಯನ್ನು ಏಕೆ ಬಲಪಡಿಸಬೇಕು?

9 ರೂಪಾಂತರವನ್ನು ಸೂಚಿಸಿ ಮಾತಾಡಿದ ಬಳಿಕ ಪೇತ್ರನು ತಿಳಿಸಿದ್ದು: “ಇದಲ್ಲದೆ ಪ್ರವಾದನವಾಕ್ಯವು ನಮಗೆ ಮತ್ತೂ ದೃಢವಾಗಿದೆ. ನಿಮ್ಮ ಹೃದಯದೊಳಗೆ ಬೆಳ್ಳಿಯು ಮೂಡಿ ಅರುಣೋದಯವಾಗುವ ಪರ್ಯಂತರ ಅದನ್ನು ಕತ್ತಲೆಯಾದ ಸ್ಥಳದಲ್ಲಿ ಪ್ರಕಾಶಿಸುವ ದೀಪವೆಂದೆಣಿಸಿ ಅದಕ್ಕೆ ಲಕ್ಷ್ಯಕೊಡುವದೇ ಒಳ್ಳೇದು. ಶಾಸ್ತ್ರದಲ್ಲಿರುವ ಯಾವ ಪ್ರವಾದನವಾಕ್ಯವೂ ಕೇವಲ ಮಾನುಷಬುದ್ಧಿಯಿಂದ ವಿವರಿಸತಕ್ಕಂಥದಲ್ಲವೆಂಬದನ್ನು ಮುಖ್ಯವಾಗಿ ತಿಳಿದುಕೊಳ್ಳಿರಿ. ಯಾಕಂದರೆ ಯಾವ ಪ್ರವಾದನೆಯೂ ಎಂದೂ ಮನುಷ್ಯರ ಚಿತ್ತದಿಂದ ಉಂಟಾಗಲಿಲ್ಲ; ಮನುಷ್ಯರು ಪವಿತ್ರಾತ್ಮ ಪ್ರೇರಿತರಾಗಿ ದೇವರಿಂದ ಹೊಂದಿದ್ದನ್ನೇ ಮಾತಾಡಿದರು.” (2 ಪೇತ್ರ 1:19-21) ಯೇಸುವಿನ ರೂಪಾಂತರವು ಯೆಹೋವನ ಪ್ರವಾದನ ವಾಕ್ಯದ ವಿಶ್ವಾಸಾರ್ಹತೆಯನ್ನು ದೃಢಪಡಿಸುತ್ತದೆ. ನಾವು ಆ ವಾಕ್ಯಕ್ಕೆ ಗಮನಕೊಡಬೇಕೇ ಹೊರತು, ದೈವಿಕ ಬೆಂಬಲ ಅಥವಾ ಸಮ್ಮತಿ ಇಲ್ಲದಿರುವ “ಚಮತ್ಕಾರದಿಂದ ಕಲ್ಪಿಸಿದ ಕಥೆ”ಗಳಿಗಲ್ಲ. ಯೇಸುವಿನ ಮಹಿಮೆ ಮತ್ತು ರಾಜ್ಯಾಧಿಕಾರದ ಆ ದಾರ್ಶನಿಕ ಮುನ್ನೋಟವು, ಈಗ ವಾಸ್ತವಿಕ ಸಂಗತಿಯಾಗಿ ಪರಿಣಮಿಸಿರುವುದರಿಂದ ಪ್ರವಾದನ ವಾಕ್ಯದಲ್ಲಿರುವ ನಮ್ಮ ನಂಬಿಕೆಯು ಆ ರೂಪಾಂತರದಿಂದಾಗಿ ಹೆಚ್ಚು ಬಲಗೊಳಿಸಲ್ಪಡಬೇಕು. ಹೌದು, ಯೇಸು ಇಂದು ಒಬ್ಬ ಶಕ್ತಿಶಾಲಿ ಸ್ವರ್ಗೀಯ ರಾಜನಾಗಿ ಉಪಸ್ಥಿತನಾಗಿದ್ದಾನೆ ಎಂಬುದಕ್ಕೆ ನಮ್ಮ ಬಳಿ ನಿರಾಕರಿಸಲಾಗದಂತಹ ರುಜುವಾತಿದೆ.

ಬೆಳ್ಳಿಯು ಮೂಡಿಬರುವ ರೀತಿ

10. ಪೇತ್ರನು ತಿಳಿಸಿರುವ ‘ಬೆಳ್ಳಿಯು’ ಯಾರು ಅಥವಾ ಅದು ಏನಾಗಿದೆ, ಮತ್ತು ನೀವು ಹೀಗೆ ಉತ್ತರಿಸಲು ಕಾರಣವೇನು?

10 ಪೇತ್ರನು ಬರೆದುದು: “ಬೆಳ್ಳಿಯು ಮೂಡಿ ಅರುಣೋದಯವಾಗುವ ಪರ್ಯಂತರ ಅದನ್ನು ಕತ್ತಲೆಯಾದ ಸ್ಥಳದಲ್ಲಿ ಪ್ರಕಾಶಿಸುವ ದೀಪವೆಂದೆಣಿಸಿ [ಪ್ರವಾದನ ವಾಕ್ಯಕ್ಕೆ] ಲಕ್ಷ್ಯಕೊಡುವದೇ ಒಳ್ಳೇದು.” ಈ “ಬೆಳ್ಳಿಯು” ಯಾರು ಅಥವಾ ಏನಾಗಿದೆ? “ಬೆಳ್ಳಿ” ಎಂಬ ಈ ಪದವು ಬೈಬಲಿನಲ್ಲಿ ಒಮ್ಮೆ ಮಾತ್ರ ಕಂಡುಬರುತ್ತದೆ, ಮತ್ತು ಅದರ ಅರ್ಥ ‘ಉದಯ ನಕ್ಷತ್ರಕ್ಕೆ’ ಸಮಾನವಾಗಿದೆ. ಪ್ರಕಟನೆ 22:16, ಯೇಸು ಕ್ರಿಸ್ತನನ್ನು “ಉದಯಸೂಚಕವಾದ ಪ್ರಕಾಶವುಳ್ಳ ನಕ್ಷತ್ರ”ವೆಂದು ಕರೆಯುತ್ತದೆ. ವರ್ಷದ ಕೆಲವು ಋತುಗಳ ಸಮಯದಲ್ಲಿ, ಇಂತಹ ನಕ್ಷತ್ರಗಳು ಬೇರೆ ಎಲ್ಲ ನಕ್ಷತ್ರಗಳಿಗಿಂತ ಕೊನೆಯದಾಗಿ ಪೂರ್ವದಿಕ್ಕಿನ ಬಾನಂಚಿನಲ್ಲಿ ಮೂಡಿಬರುತ್ತವೆ. ಅವು ಸೂರ್ಯನು ಆಗಸದಲ್ಲಿ ಕಾಣಿಸಿಕೊಳ್ಳುವುದಕ್ಕೆ ಸ್ವಲ್ಪ ಮುಂಚೆ ಉದಯಿಸುತ್ತವೆ ಮತ್ತು ಹೀಗೆ, ಅವು ಒಂದು ಹೊಸ ದಿನದ ಆರಂಭವನ್ನು ಸೂಚಿಸುತ್ತವೆ. ರಾಜ್ಯಾಧಿಕಾರವನ್ನು ಪಡೆದುಕೊಂಡ ನಂತರ ಯೇಸುವನ್ನು ಸೂಚಿಸಲಿಕ್ಕಾಗಿಯೇ ಪೇತ್ರನು “ಬೆಳ್ಳಿ” ಎಂಬ ಪದವನ್ನು ಉಪಯೋಗಿಸಿದನು. ಆ ಸಮಯದಲ್ಲಿ ಯೇಸುವು ನಮ್ಮ ಭೂಮಿಯನ್ನು ಸೇರಿಸಿ ವಿಶ್ವದಲ್ಲೆಲ್ಲಾ ಉದಯಿಸಿದನು! ಮೆಸ್ಸೀಯ ಬೆಳ್ಳಿಯಾಗಿ, ವಿಧೇಯ ಮಾನವಕುಲಕ್ಕಾಗಿ ಉದಯಿಸಲಿರುವ ಒಂದು ಹೊಸ ದಿನವನ್ನು, ಇಲ್ಲವೆ ಯುಗವನ್ನು ಅವನು ಮುನ್‌ಸೂಚಿಸುತ್ತಾನೆ.

11. (ಎ) ಎರಡನೆಯ ಪೇತ್ರ 1:19, ‘ಬೆಳ್ಳಿಯು’ ವಾಸ್ತವವಾಗಿ ಮಾನವ ಹೃದಯಗಳಲ್ಲಿ ಉದಯಿಸುತ್ತದೆಂಬುದನ್ನು ಅರ್ಥೈಸುವುದಿಲ್ಲವೇಕೆ? (ಬಿ) ನೀವು 2 ಪೇತ್ರ 1:19ನ್ನು ಹೇಗೆ ವಿವರಿಸುವಿರಿ?

11ಎರಡನೆಯ ಪೇತ್ರ 1:19ರಲ್ಲಿ ದಾಖಲಿಸಲ್ಪಟ್ಟಿರುವ ಅಪೊಸ್ತಲ ಪೇತ್ರನ ಮಾತುಗಳು ಒಬ್ಬ ವ್ಯಕ್ತಿಯ ಅಕ್ಷರಾರ್ಥ ಹೃದಯವನ್ನು ಸೂಚಿಸುತ್ತವೆಂಬ ವಿಚಾರಕ್ಕೆ ಅನೇಕ ಬೈಬಲ್‌ ಭಾಷಾಂತರಗಳು ಇಂಬುಕೊಡುತ್ತವೆ. ಒಬ್ಬ ವಯಸ್ಕನ ಹೃದಯದ ತೂಕವು 250ರಿಂದ 300 ಗ್ರ್ಯಾಮ್‌ಗಳಷ್ಟಿರುತ್ತದೆ. ಹೀಗಿರುವಾಗ, ಈಗ ಸ್ವರ್ಗದಲ್ಲಿ ಒಬ್ಬ ಮಹಿಮಾಭರಿತ ಅಮರ ಆತ್ಮ ಜೀವಿಯಾಗಿರುವ ಯೇಸು ಕ್ರಿಸ್ತನು, ಈ ಚಿಕ್ಕ ಮಾನವ ಅಂಗಗಳಲ್ಲಿ ಹೇಗೆ ಉದಯಿಸಸಾಧ್ಯವಿದೆ? (1 ತಿಮೊಥೆಯ 6:16) ಖಂಡಿತವಾಗಿಯೂ ಈ ವಿಷಯದಲ್ಲಿ ನಮ್ಮ ಸಾಂಕೇತಿಕ ಹೃದಯಗಳು ಒಳಗೂಡಿವೆ, ಏಕೆಂದರೆ ಅವುಗಳ ಮೂಲಕವೇ ನಾವು ದೇವರ ಪ್ರವಾದನ ವಾಕ್ಯಕ್ಕೆ ಗಮನ ಕೊಡುತ್ತೇವೆ. ಆದರೆ ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಬೈಬಲಿನಲ್ಲಿ, 2 ಪೇತ್ರ 1:19ನ್ನು ಜಾಗರೂಕತೆಯಿಂದ ನೋಡಿದರೆ, “ಅಂಟಿಲ್‌ ಡೇ ಡಾನ್ಸ್‌ ಆ್ಯಂಡ್‌ ಅ ಡೇಸ್ಟಾರ್‌ ರೈಸಸ್‌” (ಬೆಳ್ಳಿಯು ಮೂಡಿ ಅರುಣೋದಯವಾಗುವ ಪರ್ಯಂತರ) ಎಂಬ ವಾಕ್ಸರಣಿಯನ್ನು ವಚನದ ಹಿಂದಿನ ಅಭಿವ್ಯಕ್ತಿಗಳಿಂದ ಮತ್ತು “ಇನ್‌ ಯುವರ್‌ ಹಾರ್ಟ್ಸ್‌” (ನಿಮ್ಮ ಹೃದಯದಲ್ಲಿ) ಎಂಬ ವಾಕ್ಸರಣಿಯಿಂದ ಬೇರ್ಪಡಿಸಲು ವಿರಾಮಚಿಹ್ನೆಗಳನ್ನು ಉಪಯೋಗಿಸಲಾಗಿದೆ. ಈ ವಚನವನ್ನು ಹೀಗೆ ವ್ಯಕ್ತಪಡಿಸಬಹುದು: ‘ಪ್ರವಾದನವಾಕ್ಯವು ನಮಗೆ ಮತ್ತೂ ದೃಢವಾಗಿದೆ. ಮತ್ತು ಬೆಳ್ಳಿಯು ಮೂಡಿ ಅರುಣೋದಯವಾಗುವ ಪರ್ಯಂತರ ಅದನ್ನು ಕತ್ತಲೆಯಾದ ಸ್ಥಳದಲ್ಲಿ, ಅಂದರೆ ನಿಮ್ಮ ಹೃದಯಗಳಲ್ಲಿ ಪ್ರಕಾಶಿಸುವ ದೀಪವೆಂದೆಣಿಸಿ ಅದಕ್ಕೆ ಲಕ್ಷ್ಯಕೊಡುವದೇ ಒಳ್ಳೇದು.’

12. ಸರ್ವಸಾಮಾನ್ಯವಾಗಿ ಮಾನವ ಹೃದಯಗಳ ಸ್ಥಿತಿ ಹೇಗಿದೆ, ಆದರೆ ನಿಜ ಕ್ರೈಸ್ತರ ಸ್ಥಿತಿಯೇನಾಗಿದೆ?

12 ಸರ್ವಸಾಮಾನ್ಯವಾಗಿ ಪಾಪಪೂರ್ಣ ಮಾನವಕುಲದ ಸಾಂಕೇತಿಕ ಹೃದಯಗಳ ಸ್ಥಿತಿಯು ಹೇಗಿದೆ? ಅವು ಆತ್ಮಿಕ ಅಂಧಕಾರದಲ್ಲಿವೆ! ಆದರೆ ನಾವು ಸತ್ಕ್ರೈಸ್ತರಾಗಿರುವಲ್ಲಿ, ನಮ್ಮ ಹೃದಯಗಳಲ್ಲಿ ಒಂದು ದೀಪವು ಉರಿಯುತ್ತಿದೆಯೊ ಎಂಬಂತೆ ಇದೆ. ಒಂದು ವೇಳೆ ನಾವು ಸತ್ಕ್ರೈಸ್ತರಾಗಿರದಿದ್ದಲ್ಲಿ ನಮ್ಮ ಹೃದಯದಲ್ಲಿ ಕತ್ತಲಿರುತ್ತಿತ್ತು. ಪೇತ್ರನ ಮಾತುಗಳಲ್ಲಿ ಸೂಚಿಸಲ್ಪಟ್ಟಿರುವಂತೆ ದೇವರ ಪ್ರಕಾಶಮಾನವಾದ ಪ್ರವಾದನ ವಾಕ್ಯಕ್ಕೆ ಲಕ್ಷ್ಯಕೊಡುವ ಮೂಲಕವೇ, ಸತ್ಯ ಕ್ರೈಸ್ತರು ಒಂದು ಹೊಸ ದಿನವು ಉದಯಿಸುವ ವಿಷಯದಲ್ಲಿ ಎಚ್ಚೆತ್ತವರೂ, ಜ್ಞಾನೋದಯಗೊಳಿಸಲ್ಪಟ್ಟವರೂ ಆಗಿರಬಲ್ಲರು. ಆ ಬೆಳ್ಳಿಯು ಶಾರೀರಿಕ ಮಾನವ ಹೃದಯಗಳಲ್ಲಿ ಅಲ್ಲ, ಬದಲಾಗಿ ಎಲ್ಲ ಸೃಷ್ಟಿಯ ಮುಂದೆ ಉದಯಿಸಿತ್ತೆಂಬ ವಾಸ್ತವಾಂಶದ ಅರಿವು ಅವರಿಗಿರುವುದು.

13. (ಎ) ಬೆಳ್ಳಿಯು ಈಗಾಗಲೇ ಮೂಡಿಬಂದಿದೆಯೆಂದು ನಾವು ಏಕೆ ಖಾತ್ರಿಯಿಂದಿರಬಲ್ಲೆವು? (ಬಿ) ಯೇಸು ನಮ್ಮ ದಿನಗಳಿಗಾಗಿ ಮುಂತಿಳಿಸಿದ ಕಷ್ಟಕರ ಪರಿಸ್ಥಿತಿಗಳನ್ನು ಕ್ರೈಸ್ತರು ಏಕೆ ತಾಳಿಕೊಳ್ಳಬಲ್ಲರು?

13 ಬೆಳ್ಳಿಯು ಈಗಾಗಲೇ ಮೂಡಿಬಂದಿದೆ! ತನ್ನ ಸಾನ್ನಿಧ್ಯದ ಕುರಿತಾದ ಯೇಸುವಿನ ಮಹಾ ಪ್ರವಾದನೆಗೆ ಗಮನಕೊಡುವುದರ ಮೂಲಕ ನಾವು ಇದರ ಕುರಿತು ನಿಶ್ಚಿತರಾಗಿರಬಲ್ಲೆವು. ಹಿಂದೆಂದೂ ನಡೆದಿರದಷ್ಟು ಯುದ್ಧಗಳು, ಬರಗಾಲಗಳು, ಭೂಕಂಪಗಳಂತಹ ಘಟನೆಗಳಲ್ಲಿ, ಮತ್ತು ಲೋಕವ್ಯಾಪಕವಾಗಿ ಸುವಾರ್ತೆಯನ್ನು ಸಾರುವ ಕೆಲಸದಲ್ಲಿ ಆ ಪ್ರವಾದನೆಯು ಇಂದು ನೆರವೇರುತ್ತಿರುವುದನ್ನು ನಾವು ನೋಡುತ್ತಿದ್ದೇವೆ. (ಮತ್ತಾಯ 24:3-14) ಯೇಸು ಕ್ರಿಸ್ತನು ಮುಂತಿಳಿಸಿದಂತಹ ಕಷ್ಟಕರ ಪರಿಸ್ಥಿತಿಗಳು ಕ್ರೈಸ್ತರಾಗಿರುವ ನಮ್ಮನ್ನೂ ಬಾಧಿಸುತ್ತವಾದರೂ, ನಾವು ಅದನ್ನು ಸಮಾಧಾನದಿಂದ ಹಾಗೂ ಹೃದಯೋಲ್ಲಾಸದಿಂದ ತಾಳಿಕೊಳ್ಳಲು ಶಕ್ತರಾಗಿದ್ದೇವೆ. ಏಕೆ? ಏಕೆಂದರೆ ನಾವು ದೇವರ ಪ್ರವಾದನ ವಾಕ್ಯಕ್ಕೆ ಗಮನಕೊಡುತ್ತೇವೆ ಮತ್ತು ಭವಿಷ್ಯತ್ತಿಗಾಗಿ ಆತನು ಮಾಡಿರುವ ವಾಗ್ದಾನಗಳಲ್ಲಿ ನಮಗೆ ನಂಬಿಕೆಯಿದೆ. ಈಗ ನಾವು, ಅತ್ಯಂತ ಉತ್ತಮ ಸಮಯಗಳ ಹೊಸ್ತಿಲಿನಲ್ಲಿದ್ದೇವೆ, ಏಕೆಂದರೆ ನಾವು ‘ಅಂತ್ಯಕಾಲದ’ ಕಡೇ ಭಾಗದಲ್ಲಿದ್ದೇವೆಂಬುದು ನಮಗೆ ತಿಳಿದಿದೆ! (ದಾನಿಯೇಲ 12:4) ಯೆಶಾಯ 60:2ರಲ್ಲಿ ಮುಂತಿಳಿಸಲ್ಪಟ್ಟಿರುವಂತೆ ಲೋಕವು ವಿಷಮ ಸ್ಥಿತಿಯಲ್ಲಿ ಇದೆ: “ಇಗೋ, ಕತ್ತಲು ಭೂಮಿಯನ್ನು ಆವರಿಸಿದೆ, ಕಾರ್ಗತ್ತಲು ಜನಾಂಗಗಳನ್ನು ಮುಚ್ಚಿದೆ.” ಈ ಅಂಧಕಾರದಲ್ಲಿ ಒಬ್ಬನು ಹೇಗೆ ತಾನೇ ಮಾರ್ಗವನ್ನು ಕಂಡುಕೊಳ್ಳಸಾಧ್ಯವಿದೆ? ಒಬ್ಬ ವ್ಯಕ್ತಿಯು, ಕಾಲ ಮಿಂಚಿಹೋಗುವುದಕ್ಕೆ ಮುಂಚೆ, ಅಂದರೆ ಈಗಲೇ ದೀನಭಾವದಿಂದ ದೇವರ ಪ್ರವಾದನ ವಾಕ್ಯಕ್ಕೆ ಗಮನಕೊಡಬೇಕು. ಪ್ರಾಮಾಣಿಕ ಹೃದಯದ ವ್ಯಕ್ತಿಗಳು, ಜೀವ ಮತ್ತು ಬೆಳಕಿನ ಉಗಮನಾಗಿರುವ ಯೆಹೋವನ ಕಡೆಗೆ ತಿರುಗಬೇಕು. (ಕೀರ್ತನೆ 36:9; ಅ. ಕೃತ್ಯಗಳು 17:28) ಹೀಗೆ ಮಾಡುವುದಾದರೆ ಮಾತ್ರ, ಒಬ್ಬನಿಗೆ ನಿಜವಾದ ಜ್ಞಾನೋದಯ ಮತ್ತು ನಂಬಿಗಸ್ತ ಮಾನವಕುಲಕ್ಕೆ ಒಂದು ಅದ್ಭುತಕರವಾದ ಭವಿಷ್ಯತ್ತನ್ನು ಆನಂದಿಸುವ ನಿರೀಕ್ಷೆ ಇರಸಾಧ್ಯವಿದೆ.—ಪ್ರಕಟನೆ 21:1-5.

‘ಬೆಳಕು ಲೋಕಕ್ಕೆ ಬಂದಿದೆ’

14. ಬೈಬಲಿನ ಅದ್ಭುತಕರ ಪ್ರವಾದನೆಗಳ ನೆರವೇರಿಕೆಯನ್ನು ಅನುಭವಿಸಬೇಕಾದರೆ ನಾವೇನು ಮಾಡಬೇಕು?

14 ಯೇಸು ಕ್ರಿಸ್ತನು ಈಗ ಒಬ್ಬ ರಾಜನೋಪಾದಿ ಆಳುತ್ತಿದ್ದಾನೆ ಎಂಬುದನ್ನು ಶಾಸ್ತ್ರಗಳು ಸ್ಪಷ್ಟವಾಗಿ ತಿಳಿಸುತ್ತವೆ. 1914ರಲ್ಲಿ ಅವನು ಅಧಿಕಾರಕ್ಕೆ ಬಂದಿರುವುದರಿಂದ, ಅದ್ಭುತಕರವಾದ ಪ್ರವಾದನೆಗಳು ಇನ್ನೂ ನೆರವೇರಲಿವೆ. ಇವುಗಳ ನೆರವೇರಿಕೆಯನ್ನು ಅನುಭವಿಸಲಿಕ್ಕಾಗಿ, ನಾವು ಯೇಸು ಕ್ರಿಸ್ತನಲ್ಲಿ ನಂಬಿಕೆಯನ್ನು ಪ್ರದರ್ಶಿಸುವ ನಮ್ರ ಜನರೆಂಬುದನ್ನು ರುಜುಪಡಿಸಿ, ಅಜ್ಞಾನದಿಂದ ಗೈದಿರುವ ಪಾಪಪೂರ್ಣ ಕ್ರಿಯೆಗಳು ಹಾಗೂ ತಪ್ಪುಗಳಿಗಾಗಿ ಪಶ್ಚಾತ್ತಾಪಪಡಬೇಕು. ಆದರೆ ಅಂಧಕಾರವನ್ನು ಪ್ರೀತಿಸುವವರು ಖಂಡಿತವಾಗಿಯೂ ನಿತ್ಯಜೀವವನ್ನು ಪಡೆಯಲಾರರು. ಯೇಸು ಹೇಳಿದ್ದು: “ಆ ತೀರ್ಪು ಏನಂದರೆ—ಬೆಳಕು ಲೋಕಕ್ಕೆ ಬಂದಿದ್ದರೂ ಮನುಷ್ಯರ ಕೃತ್ಯಗಳು ಕೆಟ್ಟವುಗಳಾಗಿರುವದರಿಂದ ಅವರು ಬೆಳಕಿಗಿಂತ ಕತ್ತಲೆಯನ್ನೇ ಹೆಚ್ಚಾಗಿ ಪ್ರೀತಿಸಿದರು. ಕೆಟ್ಟದ್ದನ್ನು ಮಾಡುವವರು ಬೆಳಕನ್ನು ಸಹಿಸುವದಿಲ್ಲ, ತಮ್ಮ ಕೃತ್ಯಗಳು ದುಷ್ಕೃತ್ಯಗಳಾಗಿ ತೋರಿಬಂದಾವೆಂದು ಬೆಳಕಿಗೆ ಬರುವದಿಲ್ಲ; ಆದರೆ ಸತ್ಯವನ್ನು ಅನುಸರಿಸಿ ನಡೆಯುವವನು ತಾನು ದೇವರಿಂದ ನಡಿಸಿಕೊಂಡು ತನ್ನ ಕೃತ್ಯಗಳನ್ನು ಮಾಡಿದ್ದೇನೆಂದು ತೋರಿಬರುವಂತೆ ಬೆಳಕಿಗೆ ಬರುತ್ತಾನೆ.”—ಯೋಹಾನ 3:19-21.

15. ದೇವರು ತನ್ನ ಮಗನ ಮೂಲಕ ಸಾಧ್ಯಗೊಳಿಸಿರುವ ರಕ್ಷಣೆಯನ್ನು ನಾವು ಅಲಕ್ಷಿಸುವಲ್ಲಿ ಏನು ಸಂಭವಿಸುವುದು?

15 ಯೇಸುವಿನ ಮೂಲಕವೇ ಆತ್ಮಿಕ ಬೆಳಕು ಈ ಲೋಕಕ್ಕೆ ಬಂದಿದೆ. ಹೀಗಿರುವುದರಿಂದ ಅವನಿಗೆ ಕಿವಿಗೊಡುವುದು ಅತ್ಯಾವಶ್ಯಕ. ಪೌಲನು ಬರೆದುದು: “ಪುರಾತನಕಾಲದಲ್ಲಿ ನಮ್ಮ ಪಿತೃಗಳ ಸಂಗಡ ಪ್ರವಾದಿಗಳ ಬಾಯಿಂದ ಭಾಗಭಾಗವಾಗಿಯೂ ವಿಧವಿಧವಾಗಿಯೂ ಮಾತಾಡಿದ ದೇವರು ಈ ಅಂತ್ಯದಿನಗಳಲ್ಲಿ ನಮ್ಮ ಸಂಗಡ ಮಗನ ಮುಖಾಂತರ ಮಾತಾಡಿದ್ದಾನೆ. ಈತನನ್ನು ಎಲ್ಲಕ್ಕೂ ಬಾಧ್ಯನನ್ನಾಗಿ ನೇಮಿಸಿದನು.” (ಇಬ್ರಿಯ 1:1, 2) ದೇವರು ತನ್ನ ಪುತ್ರನ ಮೂಲಕ ಸಾಧ್ಯಗೊಳಿಸಿರುವ ರಕ್ಷಣೆಯನ್ನು ನಾವು ಕಡೆಗಣಿಸುವುದಾದರೆ ಏನು ಸಂಭವಿಸುವುದು? ಪೌಲನು ಮುಂದುವರಿಸುತ್ತಾ ಹೇಳಿದ್ದು: “ದೇವದೂತರ ಮೂಲಕ ಹೇಳಲ್ಪಟ್ಟ ವಾಕ್ಯವು ಸ್ಥಿರವಾಗಿದ್ದು ಅದನ್ನು ಮೀರಿ ಮಾಡಿದ ಪ್ರತಿಯೊಂದು ತಪ್ಪಿಗೂ ಅವಿಧೇಯತ್ವಕ್ಕೂ ನ್ಯಾಯವಾದ ಪ್ರತಿಫಲವುಂಟಾದ ಮೇಲೆ [ನಮ್ಮ ಮುಂದಿಟ್ಟಿರುವ] ಈ ಅತ್ಯಂತ ವಿಶೇಷ ರಕ್ಷಣೆಯನ್ನು ನಾವು ಅಲಕ್ಷ್ಯಮಾಡಿದರೆ ತಪ್ಪಿಸಿಕೊಳ್ಳುವದು ಹೇಗೆ? ಇದು ಕರ್ತನಿಂದ ಮೊದಲು ಹೇಳಲ್ಪಟ್ಟಿತು; ಆತನಿಂದ ಕೇಳಿದವರು ಇದನ್ನು ನಮಗೆ ಸ್ಥಿರಪಡಿಸಿದರು; ಮತ್ತು ದೇವರು ಅವರ ಕೈಯಿಂದ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ನಾನಾ ವಿಧವಾದ ಮಹತ್ಕಾರ್ಯಗಳನ್ನೂ ನಡಿಸಿ ಪವಿತ್ರಾತ್ಮವರಗಳನ್ನು ತನ್ನ ಚಿತ್ತಾನುಸಾರವಾಗಿ ಅವರಿಗೆ ಅನುಗ್ರಹಿಸಿ ಅವರ ಮಾತಿಗೆ ಸಾಕ್ಷಿಕೊಡುತ್ತಿದ್ದನು.” (ಇಬ್ರಿಯ 2:2-4) ಹೌದು, ಪ್ರವಾದನ ವಾಕ್ಯದ ಘೋಷಣೆಯಲ್ಲಿ ಯೇಸುವಿನ ಪಾತ್ರವು ಬಹಳ ಪ್ರಾಮುಖ್ಯವಾದದ್ದಾಗಿದೆ.—ಪ್ರಕಟನೆ 19:10.

16. ಯೆಹೋವ ದೇವರ ಎಲ್ಲ ಪ್ರವಾದನೆಗಳಲ್ಲಿ ನಮಗೆ ಏಕೆ ಸಂಪೂರ್ಣ ನಂಬಿಕೆಯಿರಸಾಧ್ಯವಿದೆ?

16 ನಾವು ಈಗಾಗಲೇ ನೋಡಿರುವಂತೆ ಪೇತ್ರನು ಹೇಳಿದ್ದು: “ಶಾಸ್ತ್ರದಲ್ಲಿರುವ ಯಾವ ಪ್ರವಾದನವಾಕ್ಯವೂ ಕೇವಲ ಮಾನುಷಬುದ್ಧಿಯಿಂದ ವಿವರಿಸತಕ್ಕಂಥದಲ್ಲ.” ಮನುಷ್ಯರು ತಮ್ಮ ಸ್ವಂತ ಸಾಮರ್ಥ್ಯದಿಂದ ಎಂದಿಗೂ ನಿಜವಾದ ಪ್ರವಾದನೆಯನ್ನು ನುಡಿಯಸಾಧ್ಯವಿಲ್ಲ. ಆದರೆ, ದೇವರ ಎಲ್ಲ ಪ್ರವಾದನೆಗಳಲ್ಲಿ ನಮಗೆ ಪೂರ್ಣವಾದ ಭರವಸೆಯಿರಸಾಧ್ಯವಿದೆ! ಏಕೆಂದರೆ, ಅವು ಸ್ವತಃ ಯೆಹೋವ ದೇವರಿಂದಲೇ ಬರುತ್ತವೆ. ಬೈಬಲ್‌ ಪ್ರವಾದನೆಗಳು ಹೇಗೆ ನೆರವೇರುತ್ತಿವೆಯೆಂಬುದನ್ನು ಅರ್ಥಮಾಡಿಕೊಳ್ಳಲು ಆತನು ಪವಿತ್ರಾತ್ಮದ ಮೂಲಕ ತನ್ನ ಸೇವಕರನ್ನು ಶಕ್ತಗೊಳಿಸಿದ್ದಾನೆ. 1914ರಂದಿನಿಂದ, ನಾವು ಅಂತಹ ಅನೇಕ ಪ್ರವಾದನೆಗಳ ನೆರವೇರಿಕೆಯನ್ನು ನೋಡಿರುವುದರಿಂದ, ನಾವು ಯೆಹೋವನಿಗೆ ವಿಶೇಷವಾಗಿ ಕೃತಜ್ಞರಾಗಿದ್ದೇವೆ. ಮತ್ತು ಈ ದುಷ್ಟ ಲೋಕದ ಅಂತ್ಯದ ಕುರಿತಾದ ಆತನ ಉಳಿದ ಪ್ರವಾದನೆಗಳೆಲ್ಲವೂ ಖಂಡಿತವಾಗಿಯೂ ನೆರವೇರುವವೆಂಬ ಪೂರ್ಣ ಖಾತ್ರಿ ನಮಗಿದೆ. ಈಗಲೂ ನಮ್ಮ ಬೆಳಕನ್ನು ಪ್ರಕಾಶಿಸುತ್ತಿರುವಾಗ, ನಾವು ದೈವಿಕ ಭವಿಷ್ಯನುಡಿಗಳಿಗೆ ಶ್ರದ್ಧಾಪೂರ್ವಕವಾದ ಗಮನವನ್ನು ಕೊಡುತ್ತಾ ಇರುವುದು ಅತ್ಯಾವಶ್ಯಕ. (ಮತ್ತಾಯ 5:16) ಇಂದು ಭೂಮಿಯಲ್ಲಿ ಸಂಪೂರ್ಣವಾಗಿ ಆವರಿಸಿರುವ ‘ದಟ್ಟವಾದ ಅಂಧಕಾರದಲ್ಲಿ’ ಯೆಹೋವನು ‘ನಮಗಾಗಿ ಬೆಳಕನ್ನು ಪ್ರಕಾಶಿಸುತ್ತಿರುವುದಕ್ಕಾಗಿ’ ನಾವು ಆತನಿಗೆಷ್ಟು ಕೃತಜ್ಞರು!—ಯೆಶಾಯ 58:10.

17. ನಮಗೆ ದೇವರ ಆತ್ಮಿಕ ಬೆಳಕು ಏಕೆ ಬೇಕಾಗಿದೆ?

17 ನೈಸರ್ಗಿಕ ಬೆಳಕಿನಿಂದ ನಾವು ನೋಡಲು ಶಕ್ತರಾಗಿದ್ದೇವೆ. ನಮಗೆ ವೈವಿಧ್ಯಮಯವಾದ ಆಹಾರವನ್ನು ಕೊಡುವ ಪೈರುಗಳ ಬೆಳವಣಿಗೆಗೂ ಅದು ಸಹಾಯಕಾರಿಯಾಗಿದೆ. ನೈಸರ್ಗಿಕ ಬೆಳಕಿಲ್ಲದೆ ನಾವು ಜೀವಿಸಲು ಸಾಧ್ಯವೇ ಇಲ್ಲ. ಆತ್ಮಿಕ ಬೆಳಕಿನ ವಿಷಯದಲ್ಲೇನು? ಅದು ನಮಗೆ ಮಾರ್ಗದರ್ಶನವನ್ನು ಕೊಟ್ಟು, ದೇವರ ವಾಕ್ಯವಾದ ಬೈಬಲಿನಲ್ಲಿ ಮುಂತಿಳಿಸಲ್ಪಟ್ಟಿರುವ ಭವಿಷ್ಯತ್ತಿನ ಕಡೆಗೆ ಕೈ ತೋರಿಸುತ್ತದೆ. (ಕೀರ್ತನೆ 119:105) ಯೆಹೋವ ದೇವರು ಪ್ರೀತಿಪೂರ್ವಕವಾಗಿ ‘ತನ್ನ ಬೆಳಕು ಮತ್ತು ಸತ್ಯವನ್ನು ಕಳುಹಿಸುತ್ತಾನೆ.’ (ಕೀರ್ತನೆ 43:3, NW) ಅಂತಹ ಒದಗಿಸುವಿಕೆಗಳಿಗಾಗಿ ನಾವು ಖಂಡಿತವಾಗಿಯೂ ಆಳವಾದ ಗಣ್ಯತೆಯನ್ನು ತೋರಿಸಬೇಕು. ಆದುದರಿಂದ ‘ದೇವಪ್ರಭಾವಜ್ಞಾನದ’ ಬೆಳಕು ನಮ್ಮ ಹೃದಯವನ್ನು ಬೆಳಗಿಸುವಂತೆ ಅದನ್ನು ಹೀರಿಕೊಳ್ಳಲು ನಾವು ನಮ್ಮಿಂದ ಸಾಧ್ಯವಾದುದೆಲ್ಲವನ್ನೂ ಮಾಡೋಣ.—2 ಕೊರಿಂಥ 4:6; ಎಫೆಸ 1:18.

18. ಯೆಹೋವನ ಬೆಳ್ಳಿಯು ಈಗ ಏನನ್ನು ಮಾಡಲು ಸಿದ್ಧವಾಗಿದೆ?

18 ಇಸವಿ 1914ರಲ್ಲಿ, ಬೆಳ್ಳಿಯಾಗಿರುವ ಯೇಸು ಕ್ರಿಸ್ತನು ಇಡೀ ವಿಶ್ವದಲ್ಲೇ ಮೂಡಿಬಂದು, ಆ ರೂಪಾಂತರ ದರ್ಶನವನ್ನು ನೆರವೇರಿಸಲು ಪ್ರಾರಂಭಿಸಿದ್ದಾನೆಂಬುದನ್ನು ನಾವು ತಿಳಿದುಕೊಂಡಿರುವುದಕ್ಕಾಗಿ ನಾವೆಷ್ಟು ಧನ್ಯರು! ಯೆಹೋವನ ಬೆಳ್ಳಿಯು ಈಗ ಉಪಸ್ಥಿತನಿದ್ದು, ರೂಪಾಂತರದ ದರ್ಶನವನ್ನು ಇನ್ನೂ ಮುಂದಕ್ಕೆ ನೆರವೇರಿಸುತ್ತಾ, ದೇವರ ಉದ್ದೇಶವನ್ನು ಕಾರ್ಯರೂಪಕ್ಕೆ ತರಲು ಸಿದ್ಧನಾಗಿದ್ದಾನೆ. ಅದು “ಸರ್ವಶಕ್ತನಾದ ದೇವರ ಮಹಾದಿನದಲ್ಲಾಗುವ ಯುದ್ಧ”ವೇ ಆಗಿದೆ. (ಪ್ರಕಟನೆ 16:14, 16) ಈ ಹಳೆಯ ವ್ಯವಸ್ಥೆಯು ಅಳಿದುಹೋದ ನಂತರ, “ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ” ತರುವ ತನ್ನ ವಾಗ್ದಾನವನ್ನು ಯೆಹೋವನು ನೆರವೇರಿಸಲಿರುವನು. ಅಲ್ಲಿ, ನಾವು ಆತನನ್ನು ಈ ವಿಶ್ವದ ಪರಮಾಧಿಕಾರಿ ಕರ್ತನೋಪಾದಿ ಮತ್ತು ಸತ್ಯ ಪ್ರವಾದನೆಯ ದೇವರೋಪಾದಿ ಎಂದೆಂದಿಗೂ ಸ್ತುತಿಸಿ, ಘನಪಡಿಸಬಹುದು. (2 ಪೇತ್ರ 3:13) ಆ ಭವ್ಯ ದಿನದ ವರೆಗೆ, ನಾವು ದೇವರ ಪ್ರವಾದನ ವಾಕ್ಯಕ್ಕೆ ಗಮನಕೊಡುವ ಮೂಲಕ ದೈವಿಕ ಬೆಳಕಿನಲ್ಲಿ ನಡೆಯುತ್ತಾ ಇರೋಣ.

ನೀವು ಹೇಗೆ ಉತ್ತರಿಸುವಿರಿ?

• ಯೇಸುವಿನ ರೂಪಾಂತರವನ್ನು ನೀವು ಹೇಗೆ ವರ್ಣಿಸುವಿರಿ?

• ರೂಪಾಂತರವು ನಂಬಿಕೆಯನ್ನು ಹೇಗೆ ಬಲಪಡಿಸುತ್ತದೆ?

• ಯೆಹೋವನ ಬೆಳ್ಳಿಯು ಯಾರು ಅಥವಾ ಅದು ಏನಾಗಿದೆ, ಮತ್ತು ಅದು ಯಾವಾಗ ಮೂಡಿಬಂತು?

• ನಾವು ದೇವರ ಪ್ರವಾದನ ವಾಕ್ಯಕ್ಕೆ ಏಕೆ ಗಮನಕೊಡಬೇಕು?

[ಅಧ್ಯಯನ ಪ್ರಶ್ನೆಗಳು]

[ಪುಟ 13ರಲ್ಲಿರುವ ಚಿತ್ರ]

ರೂಪಾಂತರದ ಸೂಚಿತಾರ್ಥವನ್ನು ನೀವು ವಿವರಿಸಬಲ್ಲಿರೊ?

[ಪುಟ 15ರಲ್ಲಿರುವ ಚಿತ್ರ]

ಬೆಳ್ಳಿಯು ಈಗಾಗಲೇ ಮೂಡಿಬಂದಿದೆ. ಅದು ಹೇಗೆ ಮತ್ತು ಯಾವಾಗ ಎಂಬುದು ನಿಮಗೆ ತಿಳಿದಿದೆಯೊ?