ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾಜಿ ದಬ್ಬಾಳಿಕೆಯ ಎದುರಿನಲ್ಲೂ ನಂಬಿಗಸ್ತರು ಹಾಗೂ ನಿರ್ಭೀತರು

ನಾಜಿ ದಬ್ಬಾಳಿಕೆಯ ಎದುರಿನಲ್ಲೂ ನಂಬಿಗಸ್ತರು ಹಾಗೂ ನಿರ್ಭೀತರು

ನಾಜಿ ದಬ್ಬಾಳಿಕೆಯ ಎದುರಿನಲ್ಲೂ ನಂಬಿಗಸ್ತರು ಹಾಗೂ ನಿರ್ಭೀತರು

ಇಸವಿ 1946ರ ಜೂನ್‌ 17ರಂದು, ನೆದರ್ಲೆಂಡ್ಸ್‌ನ ರಾಣಿ ವಿಲ್‌ಹೆಲ್ಮಿನಳು, ಆಮ್‌ಸ್ಟರ್‌ಡ್ಯಾಮ್‌ನಲ್ಲಿದ್ದ ಯೆಹೋವನ ಸಾಕ್ಷಿಗಳ ಒಂದು ಕುಟುಂಬಕ್ಕೆ ಸಂತಾಪ ಸೂಚಕ ಸಂದೇಶವೊಂದನ್ನು ಕಳುಹಿಸಿದಳು. ಆ ಕುಟುಂಬದ ಪುತ್ರನಾಗಿದ್ದು, IIನೆಯ ಲೋಕ ಯುದ್ಧದ ಸಮಯದಲ್ಲಿ ನಾಜಿಗಳಿಂದ ಹತ್ಯೆಗೊಳಗಾಗಿದ್ದ ಯಾಕೊಪ್‌ ವನ್‌ ಬೆನಕೋಮ್‌ನ ಬಗ್ಗೆ ಮೆಚ್ಚಿಕೆಯನ್ನು ವ್ಯಕ್ತಪಡಿಸುವುದೇ ಆ ಸಂದೇಶದ ಉದ್ದೇಶವಾಗಿತ್ತು. ಕೆಲವು ವರ್ಷಗಳ ಹಿಂದೆ, ನೆದರ್ಲೆಂಡ್ಸ್‌ನ ಪೂರ್ವ ಭಾಗದಲ್ಲಿರುವ ಡ್ಯೂಟಿಕಮ್‌ ಪಟ್ಟಣದ ಪುರಸಭೆಯು, ಅದರ ಒಂದು ಬೀದಿಗೆ ಬರ್ನಾರ್ಟ್‌ ಪೋಲ್ಮನ್‌ರವರ ಹೆಸರನ್ನಿಡಲು ನಿರ್ಧರಿಸಿತು. ಇವರು ಸಹ ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿದ್ದು, ಯುದ್ಧದ ಸಮಯದಲ್ಲಿ ಹತಿಸಲ್ಪಟ್ಟಿದ್ದರು.

ಎರಡನೆಯ ಲೋಕ ಯುದ್ಧದ ಸಮಯದಲ್ಲಿ, ನೆದರ್ಲೆಂಡ್ಸ್‌ನಲ್ಲಿದ್ದ ಯಾಕೊಪ್‌ ಮತ್ತು ಬರ್ನಾರ್ಟ್‌ ಹಾಗೂ ಇನ್ನಿತರ ಯೆಹೋವನ ಸಾಕ್ಷಿಗಳ ವಿರುದ್ಧ ನಾಜಿಗಳು ಏಕೆ ತಿರುಗಿಬಿದ್ದರು? ಮತ್ತು ಈ ಸಾಕ್ಷಿಗಳು ಅನೇಕ ವರ್ಷಗಳ ವರೆಗೆ ಕ್ರೂರ ಹಿಂಸೆಯ ಕೆಳಗೆ ನಂಬಿಗಸ್ತರಾಗಿ ಉಳಿಯುವಂತೆ ಹಾಗೂ ಕಟ್ಟಕಡೆಗೆ ತಮ್ಮ ಸ್ವದೇಶದವರ ಮತ್ತು ರಾಣಿಯ ಗೌರವವನ್ನೂ ಪ್ರಶಂಸೆಯನ್ನೂ ಪಡೆದುಕೊಳ್ಳುವಂತೆ ಯಾವುದು ಶಕ್ತರನ್ನಾಗಿ ಮಾಡಿತು? ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲಿಕ್ಕಾಗಿ, ಯೆಹೋವನ ಸಾಕ್ಷಿಗಳ ಒಂದು ಚಿಕ್ಕ ಗುಂಪು ಹಾಗೂ ಅತಿ ದೊಡ್ಡದಾದ ನಾಜಿ ರಾಜಕೀಯ ಹಾಗೂ ಮಿಲಿಟರಿ ವ್ಯವಸ್ಥಾಪನೆಯ ನಡುವೆ ಉಂಟಾದ ದಾವೀದ ಮತ್ತು ಗೊಲ್ಯಾತರಂತಹ ಹೋರಾಟಕ್ಕೆ ಕಾರಣವಾದ ಕೆಲವು ಘಟನೆಗಳನ್ನು ನಾವು ಪುನರ್ವಿಮರ್ಶಿಸೋಣ.

ನಿಷೇಧವಿದ್ದರೂ ಹಿಂದೆಂದಿಗಿಂತಲೂ ಹೆಚ್ಚು ಕ್ರಿಯಾಶೀಲರು

1940ರ ಮೇ 10ರಂದು, ಇದ್ದಕ್ಕಿದ್ದಂತೆ ನಾಜಿ ಸೈನ್ಯವು ನೆದರ್ಲೆಂಡ್ಸ್‌ನ ಮೇಲೆ ಆಕ್ರಮಣಮಾಡಿತು. ಯೆಹೋವನ ಸಾಕ್ಷಿಗಳಿಂದ ವಿತರಿಸಲ್ಪಟ್ಟ ಸಾಹಿತ್ಯವು ನಾಜಿಗಳ ದುಷ್ಕೃತ್ಯಗಳನ್ನು ಬಯಲುಮಾಡಿ, ದೇವರ ರಾಜ್ಯವನ್ನು ಸಮರ್ಥಿಸಿದ್ದರಿಂದ, ತತ್‌ಕ್ಷಣವೇ ನಾಜಿಗಳು ಸಾಕ್ಷಿಗಳ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸಿಬಿಡಲು ಪ್ರಯತ್ನಿಸಿದರು. ನಾಜಿಗಳು ನೆದರ್ಲೆಂಡ್ಸ್‌ನ ಮೇಲೆ ಆಕ್ರಮಣಮಾಡಿ ಮೂರು ವಾರಗಳು ಕಳೆಯುವಷ್ಟರಲ್ಲಿ, ಯೆಹೋವನ ಸಾಕ್ಷಿಗಳ ಕೆಲಸವನ್ನು ನಿಷೇಧಿಸುವ ಗುಪ್ತ ಆಜ್ಞೆಯನ್ನು ಜಾರಿಗೆ ತಂದರು. 1941ರ ಮಾರ್ಚ್‌ 10ರಂದು, “ಎಲ್ಲ ಸರಕಾರ ಹಾಗೂ ಚರ್ಚ್‌ ಸಂಸ್ಥೆಗಳ ವಿರುದ್ಧ” ಸಾಕ್ಷಿಗಳು ಚಳವಳಿಯನ್ನು ನಡೆಸುತ್ತಿದ್ದಾರೆ ಎಂದು ಆಪಾದಿಸುತ್ತಾ, ವಾರ್ತಾ ವರದಿಯು ಆ ನಿಷೇಧವನ್ನು ಬಹಿರಂಗಪಡಿಸಿತು. ಇದರ ಫಲಿತಾಂಶವಾಗಿ, ಸಾಕ್ಷಿಗಳಿಗಾಗಿರುವ ಹುಡುಕಾಟವು ಇನ್ನೂ ತೀವ್ರಗೊಂಡಿತು.

ಕುಖ್ಯಾತ ಗೆಸ್ಟಪೊಗಳು ಅಥವಾ ಗುಪ್ತ ಪೊಲೀಸರು ಎಲ್ಲ ಚರ್ಚುಗಳ ಮೇಲೆ ಕಣ್ಗಾವಲಿಟ್ಟಿದ್ದರಾದರೂ, ಒಂದೇ ಒಂದು ಕ್ರೈಸ್ತ ಸಂಸ್ಥೆಯನ್ನು ಮಾತ್ರ ಬಹಳವಾಗಿ ಹಿಂಸಿಸಿದರು ಎಂಬುದು ಆಸಕ್ತಿಕರ ಸಂಗತಿಯಾಗಿದೆ. “ಮರಣದ ವರೆಗಿನ ಹಿಂಸೆಯು ಕೇವಲ ಒಂದು ಧಾರ್ಮಿಕ ಗುಂಪಿನ ಮೇಲೆ ತಂದೊಡ್ಡಲ್ಪಟ್ಟಿತು” ಎಂದು ಡಚ್‌ ಇತಿಹಾಸಕಾರನಾದ ಡಾ. ಲೂಯೀ ಡ ಯಾಂಗ್‌ ತಿಳಿಸುತ್ತಾನೆ.—ಹೆಟ್‌ ಕೊನಿಂಕ್‌ರಿಕ್‌ ಡೆರ್‌ ನೆಡರ್‌ಲ್ಯಾಂಡನ್‌ ಇನ್‌ ಡ ಟ್ವೇಡ ವೇರಲ್‌ಡೊರ್‌ಲೊಕ್‌ (ಎರಡನೆಯ ಲೋಕ ಯುದ್ಧದ ಸಮಯದಲ್ಲಿ ನೆದರ್ಲೆಂಡ್ಸ್‌ ರಾಜ್ಯ).

ಸಾಕ್ಷಿಗಳನ್ನು ಕಂಡುಹಿಡಿದು, ಅವರನ್ನು ಬಂಧಿಸುವುದರಲ್ಲಿ ಗೆಸ್ಟಪೊಗಳಿಗೆ ಡಚ್‌ ಪೊಲೀಸರು ಸಹಕಾರ ನೀಡಿದರು. ಇದಕ್ಕೆ ಕೂಡಿಸಿ, ಈ ಮುಂಚೆ ಒಬ್ಬ ಸಂಚರಣ ಮೇಲ್ವಿಚಾರಕನಾಗಿದ್ದರೂ, ಕಾಲಕ್ರಮೇಣ ನಾಜಿಗಳಿಗೆ ಹೆದರಿ ಧರ್ಮಭ್ರಷ್ಟನಾಗಿ ಪರಿಣಮಿಸಿದ್ದ ಒಬ್ಬ ವ್ಯಕ್ತಿಯು, ತನ್ನ ಮಾಜಿ ಜೊತೆ ವಿಶ್ವಾಸಿಗಳ ಕುರಿತಾದ ಮಾಹಿತಿಯನ್ನು ನಾಜಿಗಳಿಗೆ ಒದಗಿಸಿದನು. 1941ರ ಏಪ್ರಿಲ್‌ ತಿಂಗಳ ಕೊನೆಯಷ್ಟಕ್ಕೆ, 113 ಮಂದಿ ಸಾಕ್ಷಿಗಳು ಬಂಧಿಸಲ್ಪಟ್ಟಿದ್ದರು. ಅವರ ಈ ಆಕ್ರಮಣವು ಸಾರುವ ಚಟುವಟಿಕೆಗಳನ್ನು ನಿಲ್ಲಿಸಿಬಿಟ್ಟಿತೊ?

1941ರ ಏಪ್ರಿಲ್‌ನಲ್ಲಿ ಜರ್ಮನ್‌ ಸಿಕರ್‌ಹೈಟ್ಸ್‌ಪೋಲಿಟ್ಸೈಯು (ಭದ್ರತಾ ಪೊಲೀಸು) ಸಿದ್ಧಪಡಿಸಿದ ಒಂದು ವರ್ಗೀಕೃತ ದಾಖಲೆಪತ್ರವಾದ ಮೆಲ್‌ಡಂಜನ್‌ ಔಸ್‌ ಡೆನ್‌ ನೇಡರ್‌ಲ್ಯಾಂಡನ್‌ (ನೆದರ್ಲೆಂಡ್ಸ್‌ನಿಂದ ವರದಿಗಳು)ನಲ್ಲಿ ಇದಕ್ಕೆ ಉತ್ತರವು ಸಿಗುತ್ತದೆ. ಯೆಹೋವನ ಸಾಕ್ಷಿಗಳ ಕುರಿತು ಆ ವರದಿಯು ಹೇಳುವುದು: “ಈ ನಿಷಿದ್ಧ ಪಂಥವು, ‘ದೇವರ ಸಾಕ್ಷಿಗಳನ್ನು ಹಿಂಸಿಸುವುದು ಒಂದು ಅಪರಾಧ’ ಮತ್ತು ‘ಯೆಹೋವನು ಹಿಂಸಕರನ್ನು ನಿತ್ಯನಾಶನದ ಮೂಲಕ ದಂಡಿಸುವನು’ ಎಂಬಂತಹ ಘೋಷಣೆಗಳಿರುವ ಕರಪತ್ರಗಳನ್ನು ಅಂಟಿಸುತ್ತಾ, ಇಡೀ ದೇಶದಲ್ಲೆಲ್ಲ ತನ್ನ ಹುರುಪಿನ ಚಟುವಟಿಕೆಯನ್ನು ಮುಂದುವರಿಸುತ್ತಿದೆ.” ಎರಡು ವಾರಗಳ ನಂತರ, “ಬೈಬಲ್‌ ವಿದ್ಯಾರ್ಥಿಗಳ ಚಟುವಟಿಕೆಗಳ ವಿರುದ್ಧ ಭದ್ರತಾ ಪೊಲೀಸರು ತೆಗೆದುಕೊಳ್ಳುತ್ತಿರುವ ಕಟ್ಟುನಿಟ್ಟಾದ ಕ್ರಮಗಳು ತೀವ್ರಗೊಳ್ಳುತ್ತಿರುವುದಾದರೂ, ಅವರ ಚಟುವಟಿಕೆಗಳು ಅಧಿಕಗೊಳ್ಳುತ್ತಾ ಇವೆ” ಎಂದು ಅದೇ ಮೂಲವು ವರದಿಸಿತು. ಹೌದು, ಸೆರೆಹಿಡಿಯಲ್ಪಡುವ ಅಪಾಯವಿರುವುದಾದರೂ, 1941ರಲ್ಲಿ 3,50,000ಕ್ಕಿಂತಲೂ ಹೆಚ್ಚು ಸಾಹಿತ್ಯದ ಪ್ರತಿಗಳನ್ನು ಸಾರ್ವಜನಿಕರಿಗೆ ನೀಡುವ ಮೂಲಕ ಸಾಕ್ಷಿಗಳು ತಮ್ಮ ಕೆಲಸವನ್ನು ಮುಂದುವರಿಸಿದರು!

ಚಿಕ್ಕದಾದರೂ ಅಭಿವೃದ್ಧಿಹೊಂದುತ್ತಿರುವ ನೂರಾರು ಸಾಕ್ಷಿಗಳ ಈ ಗುಂಪು, ತಮ್ಮ ಕ್ರೂರ ವಿರೋಧಿಗಳ ವಿರುದ್ಧ ಧೈರ್ಯದಿಂದ ನಿಲ್ಲುವಂತೆ ಅವರಿಗೆ ಯಾವುದು ಸಹಾಯ ಮಾಡಿತು? ಪುರಾತನ ಕಾಲದ ನಂಬಿಗಸ್ತ ಪ್ರವಾದಿಯಾದ ಯೆಶಾಯನಂತೆ, ಸಾಕ್ಷಿಗಳು ಮನುಷ್ಯರಿಗಲ್ಲ ಬದಲಾಗಿ ದೇವರಿಗೆ ಭಯಪಟ್ಟರು. ಏಕೆ? ಏಕೆಂದರೆ “ನಾನೇ, ನಾನೇ ನಿನ್ನನ್ನು ಸಂತೈಸುವವನಾಗಿರುವಲ್ಲಿ ಮರ್ತ್ಯಮನುಷ್ಯನಿಗೆ, ಹುಲ್ಲಿನ ಗತಿಗೆ ಬರುವ ನರಜನ್ಮದವನಿಗೆ ಭಯಪಡುವ ನೀನು ಎಂಥವನು?” ಎಂದು ಯೆಹೋವನು ಯೆಶಾಯನಿಗೆ ನುಡಿದ ಆಶ್ವಾಸನೆದಾಯಕ ಮಾತುಗಳಲ್ಲಿ ಅವರಿಗೆ ಬಲವಾದ ನಂಬಿಕೆಯಿತ್ತು.—ಯೆಶಾಯ 51:12.

ನಿರ್ಭೀತಿಯಿಂದಿರುವುದು ಗೌರವವನ್ನು ಕೇಳಿಕೊಳ್ಳುತ್ತದೆ

1941ರ ಅಂತ್ಯದಷ್ಟಕ್ಕೆ, ಸೆರೆಹಿಡಿಯಲ್ಪಟ್ಟಿದ್ದ ಸಾಕ್ಷಿಗಳ ಸಂಖ್ಯೆಯು 241ಕ್ಕೆ ಏರಿತ್ತು. ಆದರೂ, ಕೆಲವರು ಮನುಷ್ಯರ ಭಯಕ್ಕೆ ಒಳಗಾದರು. ಜರ್ಮನ್‌ ಗುಪ್ತ ಪೊಲೀಸ್‌ ದಳದ ಕುಪ್ರಸಿದ್ಧ ಸದಸ್ಯನಾಗಿದ್ದ ವಿಲೀ ಲಾಗಸ್‌, “ಯೆಹೋವನ ಸಾಕ್ಷಿಗಳಲ್ಲಿ 90 ಪ್ರತಿಶತ ಮಂದಿ ಯಾವುದೇ ವಿಷಯವನ್ನು ತಿಳಿಸಲು ಸಿದ್ಧರಿರಲಿಲ್ಲ, ಆದರೆ ಇನ್ನಿತರ ಧಾರ್ಮಿಕ ಗುಂಪುಗಳಲ್ಲಿ ಈ ರೀತಿಯಲ್ಲಿ ಬಾಯಿಬಿಡದೆ ಸುಮ್ಮನಿರಲು ಕೇವಲ ಕೊಂಚ ಮಂದಿಗೆ ಮಾತ್ರ ಸಾಧ್ಯವಿತ್ತು” ಎಂದು ಹೇಳಿದನೆಂಬುದಾಗಿ ಉಲ್ಲೇಖಿಸಲಾಗಿದೆ. ಕೆಲವು ಸಾಕ್ಷಿಗಳೊಂದಿಗೆ ಬಂಧಿಸಲ್ಪಟ್ಟಿದ್ದ ಯೋಹಾನಸ್‌ ಜೆ. ಬ್ಯೂಸ್ಕಸ್‌ ಎಂಬ ಡಚ್‌ ಪಾದ್ರಿಯು ನೀಡಿದ ಹೇಳಿಕೆಯು ಲಾಗಸ್‌ನ ಮಾತುಗಳನ್ನು ದೃಢೀಕರಿಸುತ್ತದೆ. 1951ರಲ್ಲಿ ಬ್ಯೂಸ್ಕಸ್‌ ಬರೆದುದು:

“ದೇವರಲ್ಲಿ ಅವರಿಗಿದ್ದ ಭರವಸೆ ಹಾಗೂ ನಂಬಿಕೆಯ ಶಕ್ತಿಯನ್ನು ನೋಡಿ, ನಾನು ಅವರ ಬಗ್ಗೆ ತುಂಬ ಗೌರವವನ್ನು ಬೆಳೆಸಿಕೊಂಡೆ. ಹಿಟ್ಲರನ ಹಾಗೂ ಮೂರನೆಯ ಸಾಮ್ರಾಜ್ಯದ ಪತನವನ್ನು ಮುಂತಿಳಿಸಿದ ಕರಪತ್ರಗಳನ್ನು ವಿತರಿಸಿದ್ದ ಆ ಯುವಕನನ್ನು ನಾನೆಂದಿಗೂ ಮರೆಯಲಾರೆ—ಬಹುಶಃ ಆ ಹುಡುಗನು 19ಕ್ಕಿಂತಲೂ ಚಿಕ್ಕ ಪ್ರಾಯದವನಾಗಿದ್ದನು. . . . ಒಂದುವೇಳೆ ಅವನು ಅಂತಹ ಚಟುವಟಿಕೆಯನ್ನು ನಿಲ್ಲಿಸುವ ಮಾತುಕೊಡುತ್ತಿದ್ದಲ್ಲಿ, ಅರ್ಧ ವರ್ಷದೊಳಗೆ ಅವನು ಸೆರೆಯಿಂದ ಬಿಡುಗಡೆಹೊಂದಸಾಧ್ಯವಿತ್ತು. ಹಾಗೆ ಮಾಡಲು ಅವನು ಸ್ಪಷ್ಟವಾಗಿ ನಿರಾಕರಿಸಿದನು ಮತ್ತು ಅನಿಶ್ಚಿತ ಸಮಯದ ವರೆಗೆ ಜರ್ಮನಿಯಲ್ಲಿರುವ ಕಾರ್ಮಿಕರ ಶಿಬಿರಕ್ಕೆ ಕಳುಹಿಸಲ್ಪಟ್ಟನು. ಅಲ್ಲಿಗೆ ಹೋಗುವುದರ ಪರಿಣಾಮ ಏನಾಗುವುದೆಂದು ನಮಗೆ ಚೆನ್ನಾಗಿ ಗೊತ್ತಿತ್ತು. ಮರುದಿನ ಬೆಳಗ್ಗೆ ಅವನನ್ನು ಅಲ್ಲಿಗೆ ಕರೆದೊಯ್ಯುತ್ತಿದ್ದಾಗ, ನಾವು ಅವನಿಗೆ ವಿದಾಯ ಹೇಳಿದೆವು. ಆಗ, ನಾವು ನಿನ್ನನ್ನು ನೆನಸಿಕೊಳ್ಳುತ್ತೇವೆ ಮತ್ತು ನಿನಗೋಸ್ಕರ ಪ್ರಾರ್ಥಿಸುತ್ತೇವೆ ಎಂದು ನಾನು ಅವನಿಗೆ ಹೇಳಿದೆ. ಅದಕ್ಕೆ ಅವನು ಕೊಟ್ಟ ಉತ್ತರವು ಹೀಗಿತ್ತು: ‘ನನ್ನ ಕುರಿತು ಚಿಂತಿಸಬೇಡಿ. ದೇವರ ರಾಜ್ಯವು ಖಂಡಿತವಾಗಿಯೂ ಬರುವುದು.’ ಯೆಹೋವನ ಸಾಕ್ಷಿಗಳ ಬೋಧನೆಗಳ ಬಗ್ಗೆ ನಿಮಗೆ ಎಷ್ಟೇ ಆಕ್ಷೇಪಣೆಯಿರುವುದಾದರೂ, ಇಂತಹ ಒಂದು ಸಂಗತಿಯನ್ನು ನೀವೆಂದೂ ಮರೆಯಲು ಸಾಧ್ಯವಿಲ್ಲ.”

ಕ್ರೂರವಾದ ಹಿಂಸೆಯು ಕೊಡಲ್ಪಟ್ಟರೂ, ಸಾಕ್ಷಿಗಳ ಸಂಖ್ಯೆ ಮಾತ್ರ ದಿನೇ ದಿನೇ ಹೆಚ್ಚುತ್ತಿತ್ತು. ಎರಡನೆಯ ಲೋಕ ಯುದ್ಧಕ್ಕೆ ಸ್ವಲ್ಪ ಮುಂಚೆ ಸುಮಾರು 300 ಸಾಕ್ಷಿಗಳಿದ್ದರೂ, 1943ರಷ್ಟಕ್ಕೆ ಅವರ ಸಂಖ್ಯೆಯು 1,379ಕ್ಕೆ ಏರಿತ್ತು. ಅದೇ ವರ್ಷದ ಕೊನೆಯಷ್ಟಕ್ಕೆ, ಬಂಧಿಸಲ್ಪಟ್ಟಿದ್ದ 350ಕ್ಕಿಂತಲೂ ಹೆಚ್ಚಿನ ಸಾಕ್ಷಿಗಳಲ್ಲಿ 54 ಮಂದಿ, ಬೇರೆ ಬೇರೆ ಕೂಟಶಿಬಿರಗಳಲ್ಲಿ ಮೃತಪಟ್ಟಿದ್ದರು ಎಂಬುದು ದುಃಖಕರ ಸಂಗತಿಯಾಗಿತ್ತು. 1944ರಷ್ಟಕ್ಕೆ, ಬೇರೆ ಬೇರೆ ಕೂಟಶಿಬಿರಗಳಲ್ಲಿ ನೆದರ್ಲೆಂಡ್ಸ್‌ನ 141 ಮಂದಿ ಯೆಹೋವನ ಸಾಕ್ಷಿಗಳು ಬಂಧಿಸಲ್ಪಟ್ಟಿದ್ದರು.

ನಾಜಿ ಹಿಂಸೆಯ ಕೊನೆಯ ವರ್ಷ

1944ರ ಜೂನ್‌ 6ರ ನಂತರ, ಸಾಕ್ಷಿಗಳು ತಮ್ಮ ಹಿಂಸೆಯ ಕೊನೆಯ ವರ್ಷವನ್ನು ಮುಟ್ಟಿದ್ದರು. ಅಂದು ಅಮೆರಿಕ ಹಾಗೂ ಬ್ರಿಟಿಷ್‌ ಸೈನ್ಯಗಳು ಫ್ರಾನ್ಸ್‌ನ ನಾರ್ಮೆಂಡಿಗೆ ಆಗಮಿಸಿದವು. ಮಿಲಿಟರಿ ಸನ್ನಿವೇಶದ ಬಗ್ಗೆ ಹೇಳುವಲ್ಲಿ, ನಾಜಿಗಳು ಮತ್ತು ಅವರ ಸಹಯೋಗಿಗಳು ಸೋಲನ್ನು ಎದುರಿಸುತ್ತಿದ್ದರು. ಇಂಥ ಸನ್ನಿವೇಶದಲ್ಲಿ ನಾಜಿಗಳು ಅಮಾಯಕ ಕ್ರೈಸ್ತರ ಬೆನ್ನಟ್ಟುವಿಕೆಯನ್ನು ನಿಲ್ಲಿಸಬಹುದು ಎಂದು ಒಬ್ಬನು ನೆನಸಸಾಧ್ಯವಿತ್ತು. ಆದರೂ, ಆ ವರ್ಷದಲ್ಲಿ, ಇನ್ನೂ 48 ಸಾಕ್ಷಿಗಳು ಬಂಧಿಸಲ್ಪಟ್ಟರು ಮತ್ತು ಸೆರೆಹಿಡಿಯಲ್ಪಟ್ಟಿದ್ದ ಇನ್ನೂ 68 ಸಾಕ್ಷಿಗಳು ಸಾವನ್ನಪ್ಪಿದರು. ಆರಂಭದಲ್ಲಿ ತಿಳಿಸಲ್ಪಟ್ಟಿದ್ದ ಯಾಕೊಪ್‌ ವನ್‌ ಬೆನಕೋಮ್‌ ಅವರಲ್ಲಿ ಒಬ್ಬನಾಗಿದ್ದನು.

1941ರಲ್ಲಿ ಯೆಹೋವನ ಸಾಕ್ಷಿಗಳೋಪಾದಿ ದೀಕ್ಷಾಸ್ನಾನ ಪಡೆದುಕೊಂಡಿದ್ದ 580 ಜನರಲ್ಲಿ 18 ವರ್ಷ ಪ್ರಾಯದ ಯಾಕೊಪ್‌ ಸಹ ಒಬ್ಬನಾಗಿದ್ದನು. ಸ್ವಲ್ಪ ಸಮಯದ ಬಳಿಕ, ಅವನ ಉದ್ಯೋಗವು ಕ್ರೈಸ್ತ ತಾಟಸ್ಥ್ಯವನ್ನು ರಾಜಿಮಾಡಿಕೊಳ್ಳುವುದನ್ನು ಅಗತ್ಯಪಡಿಸಿದ್ದರಿಂದ, ಅವನು ಒಳ್ಳೇ ಸಂಪಾದನೆ ಮಾಡಬಹುದಾಗಿದ್ದ ಉದ್ಯೋಗವನ್ನು ಬಿಟ್ಟುಬಿಟ್ಟನು. ಅವನು ಒಬ್ಬ ಸಂದೇಶವಾಹಕನೋಪಾದಿ ಕೆಲಸಮಾಡಲಾರಂಭಿಸಿದನು ಮತ್ತು ಪೂರ್ಣ ಸಮಯದ ಶುಶ್ರೂಷಕನೋಪಾದಿ ಸೇವೆಮಾಡತೊಡಗಿದನು. ಬೈಬಲ್‌ ಸಾಹಿತ್ಯವನ್ನು ರವಾನಿಸುತ್ತಿದ್ದಾಗ ಅವನನ್ನು ಹಿಡಿದು ಸೆರೆಮನೆಗೆ ಹಾಕಲಾಯಿತು. 1944ರ ಆಗಸ್ಟ್‌ ತಿಂಗಳಿನಲ್ಲಿ, 21 ವರ್ಷ ಪ್ರಾಯದವನಾಗಿದ್ದ ಯಾಕೊಪ್‌, ರಾಟರ್‌ಡ್ಯಾಮ್‌ ಪಟ್ಟಣದಲ್ಲಿದ್ದ ಸೆರೆಮನೆಯೊಂದರಿಂದ ತನ್ನ ಕುಟುಂಬಕ್ಕೆ ಈ ಪತ್ರವನ್ನು ಬರೆದನು:

“ನಾನು ಚೆನ್ನಾಗಿದ್ದೇನೆ ಮತ್ತು ತುಂಬ ಸಂತೋಷದಿಂದಿದ್ದೇನೆ. . . . ಇಷ್ಟರೊಳಗೆ ನಾನು ನಾಲ್ಕು ಬಾರಿ ವಿಚಾರಣೆಗೊಳಗಾಗಿದ್ದೇನೆ. ಮೊದಲ ಎರಡು ವಿಚಾರಣೆಗಳು ತುಂಬ ಕಠಿನವಾಗಿದ್ದವು ಮತ್ತು ನನ್ನನ್ನು ಸಿಕ್ಕಾಬಟ್ಟೆ ಹೊಡೆದರು. ಆದರೂ, ಕರ್ತನ ಅಪಾತ್ರ ದಯೆ ಮತ್ತು ಬಲದಿಂದಾಗಿ ಇಷ್ಟರ ತನಕ ನಾನು ಯಾವ ವಿಷಯವನ್ನೂ ಬಾಯಿಬಿಟ್ಟಿಲ್ಲ. . . . ಈಗಾಗಲೇ ಇಲ್ಲಿ ಒಟ್ಟು ಆರು ಭಾಷಣಗಳನ್ನು ಕೊಡಲು ನನಗೆ ಸಾಧ್ಯವಾಗಿದೆ; ಸುಮಾರು 102 ಮಂದಿ ಇದಕ್ಕೆ ಕಿವಿಗೊಟ್ಟಿದ್ದಾರೆ. ಇವರಲ್ಲಿ ಕೆಲವರು ತುಂಬ ಆಸಕ್ತಿ ತೋರಿಸುತ್ತಿದ್ದಾರೆ ಮತ್ತು ತಾವು ಇಲ್ಲಿಂದ ಬಿಡುಗಡೆಹೊಂದಿದ ಕೂಡಲೆ ಈ ಆಸಕ್ತಿಯನ್ನು ಮುಂದುವರಿಸಿಕೊಂಡು ಹೋಗುತ್ತೇವೆ ಎಂದು ಅವರು ಮಾತುಕೊಟ್ಟಿದ್ದಾರೆ.”

1944ರ ಸೆಪ್ಟೆಂಬರ್‌ 14ರಂದು, ಆ್ಯಮರ್ಸ್‌ಫೂರ್ಟ್‌ನ ಡಚ್‌ ಪಟ್ಟಣದಲ್ಲಿರುವ ಕೂಟಶಿಬಿರವೊಂದಕ್ಕೆ ಯಾಕೊಪ್‌ನನ್ನು ಕರೆದೊಯ್ಯಲಾಯಿತು. ಅಲ್ಲಿಯೂ ಅವನು ಸಾರುವುದನ್ನು ಮುಂದುವರಿಸಿದನು. ಹೇಗೆ? ಒಬ್ಬ ಜೊತೆಸೆರೆವಾಸಿಯು ಜ್ಞಾಪಿಸಿಕೊಂಡದ್ದು: “ಸೆರೆಮನೆಯ ಗಾರ್ಡ್‌ಗಳು ಸೇದಿ ಎಸೆಯುತ್ತಿದ್ದ ಸಿಗರೇಟ್‌ ತುಂಡುಗಳನ್ನು ಸೆರೆವಾಸಿಗಳು ಎತ್ತಿಟ್ಟುಕೊಳ್ಳುತ್ತಿದ್ದರು ಮತ್ತು ಬೈಬಲಿನ ಪುಟಗಳನ್ನು ಸಿಗರೇಟ್‌ ಪೇಪರ್‌ಗಳಾಗಿ ಉಪಯೋಗಿಸಿಕೊಳ್ಳುತ್ತಿದ್ದರು. ಕೆಲವೊಮ್ಮೆ ಯಾಕೊಪ್‌ ಸಿಗರೇಟನ್ನು ಸುತ್ತಲಿಕ್ಕಾಗಿ ಉಪಯೋಗಿಸಲ್ಪಡಲಿದ್ದ ಬೈಬಲ್‌ ಪುಟದಿಂದ ಕೆಲವೊಂದು ಶಬ್ದಗಳನ್ನು ಓದಿಕೊಳ್ಳುತ್ತಿದ್ದನು. ಆ ಕೂಡಲೆ ಅವನು ನಮಗೆ ಸಾರಲಿಕ್ಕಾಗಿ ಈ ಮಾತುಗಳನ್ನು ಆಧಾರವಾಗಿ ಉಪಯೋಗಿಸುತ್ತಿದ್ದನು. ಸ್ವಲ್ಪ ಸಮಯದೊಳಗೆ ನಾವು ಯಾಕೊಪ್‌ನಿಗೆ ‘ಬೈಬಲ್‌ ಮ್ಯಾನ್‌’ ಎಂಬ ಅಡ್ಡಹೆಸರಿಟ್ಟೆವು.”

1944ರ ಅಕ್ಟೋಬರ್‌ ತಿಂಗಳಿನಲ್ಲಿ, ಶತ್ರು ವಾಹನಗಳನ್ನು ಹಳ್ಳಕ್ಕೆ ಕೆಡವಲಿಕ್ಕಾಗಿ ಗುಪ್ತ ಕಂದಕಗಳನ್ನು ತೋಡುವಂತೆ ಹೊರಡಿಸಲ್ಪಟ್ಟ ಆಜ್ಞೆಗೆ ಒಳಗಾದ ಸೆರೆವಾಸಿಗಳ ದೊಡ್ಡ ಗುಂಪಿನಲ್ಲಿ ಯಾಕೊಪ್‌ನೂ ಒಬ್ಬನಾಗಿದ್ದನು. ಯುದ್ಧದ ಕೆಲಸವನ್ನು ಬೆಂಬಲಿಸಲು ಯಾಕೊಪ್‌ನ ಮನಸ್ಸಾಕ್ಷಿಯು ಅನುಮತಿಸಲಿಲ್ಲವಾದ್ದರಿಂದ, ಅವನು ಆ ಕೆಲಸವನ್ನು ಮಾಡಲು ನಿರಾಕರಿಸಿದನು. ಸತತವಾಗಿ ಗಾರ್ಡ್‌ಗಳು ಅವನಿಗೆ ಬೆದರಿಕೆಯನ್ನೊಡ್ಡಿದರು, ಆದರೂ ಅವನು ಮಣಿಯಲಿಲ್ಲ. ಅಕ್ಟೋಬರ್‌ 13ರಂದು ಅಧಿಕಾರಿಯೊಬ್ಬನು ಯಾಕೊಪ್‌ನನ್ನು ಒಂಟಿಸೆರೆಯಿಂದ ಹೊರತಂದು, ಕಂದಕವನ್ನು ತೋಡುವ ಸ್ಥಳಕ್ಕೆ ಪುನಃ ಕರೆದೊಯ್ದನು. ಆದರೂ, ಯಾಕೊಪ್‌ ತನ್ನ ನಿರ್ಧಾರವನ್ನು ಬದಲಿಸಲಿಲ್ಲ. ಕೊನೆಗೆ, ತನ್ನ ಸಮಾಧಿಯನ್ನು ತಾನೇ ಅಗೆಯುವಂತೆ ಯಾಕೊಪ್‌ನಿಗೆ ಆಜ್ಞೆನೀಡಿ, ಅವನನ್ನು ಗುಂಡಿಕ್ಕಿ ಕೊಲ್ಲಲಾಯಿತು.

ಸಾಕ್ಷಿಗಳಿಗಾಗಿ ಬೇಟೆಯು ಮುಂದುವರಿಯುತ್ತದೆ

ಯಾಕೊಪ್‌ನ ಮತ್ತು ಇನ್ನಿತರರ ಕೆಚ್ಚೆದೆಯ ನಿಲುವು, ನಾಜಿಗಳನ್ನು ಇನ್ನೂ ಕೋಪೋದ್ರಿಕ್ತಗೊಳಿಸಿತು ಮತ್ತು ಪುನಃ ಸಾಕ್ಷಿಗಳ ಬೇಟೆಯನ್ನು ಆರಂಭಿಸುವಂತೆ ಮಾಡಿತು. ಅವರ ಬೇಟೆಗೆ ಬಲಿಯಾದ ಅನೇಕರಲ್ಲಿ 18 ವರ್ಷ ಪ್ರಾಯದ ಎವರ್ಟ್‌ ಕೆಟಲಾರೇ ಸಹ ಒಬ್ಬನಾಗಿದ್ದನು. ಆರಂಭದಲ್ಲಿ ಎವರ್ಟ್‌ ಓಡಿಹೋಗಿ ತಲೆಮರೆಸಿಕೊಳ್ಳಲು ಶಕ್ತನಾದರೂ, ಸಮಯಾನಂತರ ಅವನನ್ನು ಸೆರೆಹಿಡಿಯಲಾಯಿತು ಮತ್ತು ಇತರ ಸಾಕ್ಷಿಗಳ ಕುರಿತಾದ ಮಾಹಿತಿಯನ್ನು ಕೊಡುವಂತೆ ಮಾಡಲಿಕ್ಕಾಗಿ ಅವನನ್ನು ಕ್ರೂರ ರೀತಿಯಲ್ಲಿ ಹೊಡೆಯಲಾಯಿತು. ಅವನು ನಿರಾಕರಿಸಿದ್ದಕ್ಕಾಗಿ ಅವನನ್ನು ಜರ್ಮನಿಯಲ್ಲಿರುವ ಕಾರ್ಮಿಕ ಶಿಬಿರಕ್ಕೆ ಕಳುಹಿಸಲಾಯಿತು.

ಅದೇ ತಿಂಗಳಿನಲ್ಲಿ, ಅಂದರೆ 1944ರ ಅಕ್ಟೋಬರ್‌ ತಿಂಗಳಿನಲ್ಲಿ ಪೊಲೀಸರು ಎವರ್ಟ್‌ನ ಭಾವನಾಗಿದ್ದ ಬರ್ನಾರ್ಟ್‌ ಲ್ಯೂಮಸ್‌ನನ್ನು ಬೆನ್ನಟ್ಟತೊಡಗಿದರು. ಅವನು ಅವರ ಕೈಗೆ ಸಿಕ್ಕಿದಾಗ, ಅವನ ಜೊತೆಯಲ್ಲಿ ಆಂಟೋನೀ ರೇಮೇಯರ್‌ ಮತ್ತು ಆಲ್ಬ್‌ರ್ಟ್ಯೂಸ್‌ ಬೋಸ್‌ ಎಂಬ ಇನ್ನೂ ಇಬ್ಬರು ಸಾಕ್ಷಿಗಳಿದ್ದರು. ಈಗಾಗಲೇ ಆಲ್ಬ್‌ರ್ಟ್ಯೂಸ್‌ ಕೂಟ ಶಿಬಿರದಲ್ಲಿ 14 ತಿಂಗಳುಗಳನ್ನು ಕಳೆದಿದ್ದನು. ಆದರೂ, ತನ್ನ ಬಿಡುಗಡೆಯಾದ ಕೂಡಲೆ ಅವನು ಅತ್ಯಂತ ಹುರುಪಿನಿಂದ ಸಾರುವ ಕೆಲಸವನ್ನು ಪುನಃ ಆರಂಭಿಸಿದ್ದನು. ಮೊದಲು ನಾಜಿಗಳು ಈ ಮೂವರನ್ನು ನಿಷ್ಕಾರುಣ್ಯವಾಗಿ ಹೊಡೆದರು, ಆ ಮೇಲೆ ಅವರನ್ನು ಗುಂಡಿಕ್ಕಿ ಕೊಂದರು. ಯುದ್ಧವು ಕೊನೆಗೊಂಡ ಮೇಲೆಯೇ ಇವರ ಶವಗಳು ಸಿಕ್ಕಿದವು ಮತ್ತು ಅವುಗಳ ಶವಸಂಸ್ಕಾರವನ್ನು ಮಾಡಲಾಯಿತು. ಯುದ್ಧವು ಮುಗಿದ ಸ್ವಲ್ಪ ಸಮಯದ ನಂತರ, ಅನೇಕ ವಾರ್ತಾಪತ್ರಿಕೆಗಳು ಈ ಹತ್ಯೆಯ ಕುರಿತು ವರದಿಸಿದವು. ನಾಜಿಗಳಿಗೋಸ್ಕರ ದೇವರ ನಿಯಮಕ್ಕೆ ವಿರುದ್ಧವಾದ ಯಾವುದೇ ಕೆಲಸವನ್ನು ಮಾಡಲು ಈ ಮೂವರು ಸಾಕ್ಷಿಗಳು ಪಟ್ಟುಹಿಡಿದು ನಿರಾಕರಿಸಿದರು ಎಂಬುದಾಗಿ ಒಂದು ವಾರ್ತಾಪತ್ರಿಕೆಯು ಬರೆಯಿತು. ಮತ್ತು ಅದು ಕೂಡಿಸಿದ್ದು: “ಇದಕ್ಕಾಗಿ ಅವರು ತಮ್ಮ ಪ್ರಾಣವನ್ನೇ ತೆರಬೇಕಾಯಿತು.”

ಈ ಮಧ್ಯೆ, 1944ರ ನವೆಂಬರ್‌ 10ರಂದು, ಈ ಮುಂಚೆ ತಿಳಿಸಲ್ಪಟ್ಟಿರುವ ಬರ್ನಾರ್ಟ್‌ ಪೋಲ್ಮನ್‌ರನ್ನು ಸೆರೆಹಿಡಿದು, ಒಂದು ಮಿಲಿಟರಿ ಕಾರ್ಯಯೋಜನೆಯಲ್ಲಿ ಕೆಲಸಮಾಡಲು ಕಳುಹಿಸಲಾಯಿತು. ಕಡ್ಡಾಯವಾಗಿ ಸೇರಿಸಿಕೊಂಡಿದ್ದ ಕಾರ್ಮಿಕರಲ್ಲಿ ಇವರೊಬ್ಬರೇ ಯೆಹೋವನ ಸಾಕ್ಷಿಗಳಾಗಿದ್ದರು ಮತ್ತು ಇವರು ಮಾತ್ರ ಆ ಕೆಲಸವನ್ನು ಮಾಡಲು ನಿರಾಕರಿಸಿದರು. ಈ ವಿಚಾರದಲ್ಲಿ ಬರ್ನಾರ್ಟ್‌ ರಾಜಿಮಾಡಿಕೊಳ್ಳುವಂತೆ ಮಾಡಲಿಕ್ಕಾಗಿ ಗಾರ್ಡ್‌ಗಳು ಬೇರೆ ಬೇರೆ ತಂತ್ರಗಳನ್ನು ಪ್ರಯತ್ನಿಸಿ ನೋಡಿದರು. ಅವರಿಗೆ ಯಾವುದೇ ಆಹಾರವು ಕೊಡಲ್ಪಡಲಿಲ್ಲ. ದೊಣ್ಣೆಗಳಿಂದ, ಗುದ್ದಲಿಯಿಂದ ಮತ್ತು ರೈಫಲ್‌ನ ದಪ್ಪ ತುದಿಯಿಂದ ಅವರಿಗೆ ನಿಷ್ಕಾರುಣ್ಯವಾಗಿ ಹೊಡೆಯಲಾಯಿತು. ಅಷ್ಟುಮಾತ್ರವಲ್ಲ, ಮೊಣಕಾಲಿನಷ್ಟು ಆಳವಿದ್ದ ತಣ್ಣೀರಿನ ಮೂಲಕ ನಡೆದುಹೋಗುವಂತೆ ಅವರನ್ನು ಬಲಾತ್ಕರಿಸಲಾಯಿತು ಮತ್ತು ತೇವವಾಗಿದ್ದ ನೆಲಮಾಳಿಗೆಯಲ್ಲಿ ಅವರನ್ನು ಬಂಧಿಸಿಡಲಾಯಿತು; ಅಲ್ಲಿ ಅವರು ಒದ್ದೆ ಬಟ್ಟೆಯಲ್ಲೇ ರಾತ್ರಿಯನ್ನು ಕಳೆಯಬೇಕಾಯಿತು. ಆದರೂ ಬರ್ನಾರ್ಟ್‌ ರಾಜಿಮಾಡಿಕೊಳ್ಳಲು ಒಪ್ಪಲಿಲ್ಲ.

ಆ ಸಮಯದಲ್ಲಿ, ಬರ್ನಾರ್ಟ್‌ರ ಇಬ್ಬರು ಸಹೋದರಿಯರಿಗೆ—ಇವರು ಯೆಹೋವನ ಸಾಕ್ಷಿಗಳಾಗಿರಲಿಲ್ಲ—ಇವರನ್ನು ಭೇಟಿಮಾಡುವಂತೆ ಅನುಮತಿ ನೀಡಲಾಯಿತು. ಮನಸ್ಸು ಬದಲಾಯಿಸುವಂತೆ ಅವರು ಬರ್ನಾರ್ಟ್‌ರನ್ನು ಪ್ರಚೋದಿಸಿದರೂ, ಅವರು ತಮ್ಮ ನಿರ್ಧಾರವನ್ನು ಬದಲಾಯಿಸಲಿಲ್ಲ. ಅವರಿಗೆ ತಾವೇನಾದರೂ ಸಹಾಯಮಾಡಸಾಧ್ಯವಿದೆಯೋ ಎಂದು ಅವರು ಬರ್ನಾರ್ಟ್‌ರನ್ನು ಕೇಳಿದಾಗ, ನೀವು ಮನೆಗೆ ಹೋಗಿ ಬೈಬಲನ್ನು ಅಭ್ಯಾಸಿಸಿರಿ ಎಂದು ಅವರು ಸಲಹೆ ನೀಡಿದರು. ತದನಂತರ ಬರ್ನಾರ್ಟ್‌ರ ಗರ್ಭಿಣಿ ಪತ್ನಿಯು ಅವರನ್ನು ಭೇಟಿಮಾಡುವಂತೆ ಹಿಂಸಕರು ಏರ್ಪಾಡನ್ನು ಮಾಡಿದರು. ಯಾಕೆಂದರೆ ಬರ್ನಾರ್ಟ್‌ರ ಪ್ರತಿರೋಧವನ್ನು ಪತ್ನಿಯು ನಿಲ್ಲಿಸಬಹುದೆಂದು ಅವರು ನಿರೀಕ್ಷಿಸಿದ್ದರು. ಆದರೆ ಅವರ ಪತ್ನಿಯ ಭೇಟಿ ಮತ್ತು ಧೈರ್ಯದ ಮಾತುಗಳು, ದೇವರಿಗೆ ನಂಬಿಗಸ್ತರಾಗಿ ಉಳಿಯುವ ಬರ್ನಾರ್ಟ್‌ರ ದೃಢನಿರ್ಧಾರವನ್ನು ಇನ್ನಷ್ಟು ಬಲಗೊಳಿಸಿದವು. 1944ರ ನವಂಬರ್‌ 17ರಂದು, ಕಡ್ಡಾಯವಾಗಿ ಸೇರಿಸಿಕೊಂಡಿದ್ದ ಕಾರ್ಮಿಕರೆಲ್ಲರ ಕಣ್ಣೆದುರಿಗೇ, ಬರ್ನಾರ್ಟ್‌ರ ಹಿಂಸಕರಲ್ಲಿ ಐದು ಮಂದಿ ಅವರನ್ನು ಗುಂಡಿಕ್ಕಿ ಕೊಂದರು. ಬರ್ನಾರ್ಟ್‌ರು ಪ್ರಾಣಬಿಟ್ಟ ಬಳಿಕವೂ, ಅವರ ಶವಕ್ಕೆ ಗುಂಡುಗಳ ಸುರಿಮಳೆ ಹರಿಸಲಾಯಿತು. ಅಲ್ಲಿ ಮೇಲ್ವಿಚಾರಣೆ ನಡೆಸುತ್ತಿದ್ದ ಅಧಿಕಾರಿಯು ಎಷ್ಟು ರೋಷಾವೇಶಗೊಂಡಿದ್ದನೆಂದರೆ, ಅವನು ತನ್ನ ಬಂದೂಕನ್ನು ತೆಗೆದುಕೊಂಡು, ಬರ್ನಾರ್ಟ್‌ರ ಎರಡೂ ಕಣ್ಣುಗಳಿಗೂ ಗುಂಡುಹಾರಿಸಿದನು.

ಹತ್ಯೆಯ ಕುರಿತು ಕೇಳಿಸಿಕೊಂಡ ಸಾಕ್ಷಿಗಳಿಗೆ ಈ ಮೃಗೀಯ ಚಿತ್ರಹಿಂಸೆಯು ಆಘಾತವನ್ನು ಉಂಟುಮಾಡಿತಾದರೂ, ಅವರು ನಂಬಿಗಸ್ತರೂ ನಿರ್ಭೀತರೂ ಆಗಿ ಉಳಿದರು ಮತ್ತು ತಮ್ಮ ಕ್ರೈಸ್ತ ಚಟುವಟಿಕೆಯನ್ನು ಮುಂದುವರಿಸಿದರು. ಬರ್ನಾರ್ಟ್‌ರ ಕೊಲೆಯಾಗಿದ್ದ ಕ್ಷೇತ್ರದಲ್ಲಿದ್ದ ಯೆಹೋವನ ಸಾಕ್ಷಿಗಳ ಒಂದು ಚಿಕ್ಕ ಸಭೆಯು, ಹತ್ಯೆಯಾದ ಸ್ವಲ್ಪ ಸಮಯ ಕಳೆದ ಬಳಿಕ ಹೀಗೆ ವರದಿಸಿತು: “ಈ ತಿಂಗಳು, ನಮ್ಮ ಹಾದಿಯಲ್ಲಿ ಸೈತಾನನು ಬರಮಾಡಿರುವ ಪ್ರತಿಕೂಲ ಪರಿಸ್ಥಿತಿಗಳು ಹಾಗೂ ಕಷ್ಟತೊಂದರೆಗಳ ಎದುರಿನಲ್ಲೂ ನಾವು ನಮ್ಮ ಚಟುವಟಿಕೆಯನ್ನು ಅಧಿಕಗೊಳಿಸಲು ಶಕ್ತರಾಗಿದ್ದೇವೆ. ಕ್ಷೇತ್ರ ಸೇವೆಯಲ್ಲಿ ಕಳೆದ ತಾಸುಗಳ ಸಂಖ್ಯೆಯು 429ರಿಂದ 765ಕ್ಕೆ ಏರಿತು. . . . ಸಾರುತ್ತಿರುವಾಗ, ಸಹೋದರನೊಬ್ಬನು ಒಬ್ಬ ವ್ಯಕ್ತಿಯನ್ನು ಸಂಧಿಸಿದನು ಮತ್ತು ಅವನಿಗೆ ಒಂದು ಒಳ್ಳೆಯ ಸಾಕ್ಷಿಯನ್ನು ಕೊಡಲು ಶಕ್ತನಾದನು. ಯಾವ ವ್ಯಕ್ತಿಯನ್ನು ಗುಂಡಿಕ್ಕಿ ಕೊಲ್ಲಲಾಯಿತೋ ಆ ವ್ಯಕ್ತಿಯ ಧರ್ಮವೂ ಇದೇ ಆಗಿತ್ತೋ ಎಂದು ಆ ವ್ಯಕ್ತಿಯು ಕೇಳಿದನು. ಹೌದು ಎಂಬ ಉತ್ತರವನ್ನು ಕೇಳಿಸಿಕೊಂಡಾಗ ಅವನು ಉದ್ಗರಿಸಿದ್ದು: ‘ಎಂತಹ ಮನುಷ್ಯ, ಎಂಥ ನಂಬಿಕೆ! ಅಂಥವರನ್ನೇ ನಾನು ನಂಬಿಕೆಯ ನಾಯಕರೆಂದು ಕರೆಯುತ್ತೇನೆ!’”

ಯೆಹೋವನಿಂದ ಜ್ಞಾಪಿಸಿಕೊಳ್ಳಲ್ಪಡುತ್ತಾರೆ

1945ರ ಮೇ ತಿಂಗಳಿನಲ್ಲಿ ನಾಜಿಗಳು ಸೋಲಿಸಲ್ಪಟ್ಟರು ಮತ್ತು ನೆದರ್ಲೆಂಡ್ಸ್‌ನಿಂದ ಓಡಿಸಲ್ಪಟ್ಟರು. ಯುದ್ಧದ ಸಮಯದಲ್ಲಿ ನಿರಂತರವಾಗಿ ಹಿಂಸಿಸಲ್ಪಟ್ಟಿದ್ದರೂ, ಯೆಹೋವನ ಸಾಕ್ಷಿಗಳ ಸಂಖ್ಯೆಯು ಕೆಲವು ನೂರುಗಳಿಂದ 2,000ಕ್ಕೇರಿತ್ತು. ಯುದ್ಧಕಾಲದ ಸಾಕ್ಷಿಗಳ ಕುರಿತು ಮಾತಾಡುತ್ತಾ, ಇತಿಹಾಸಕಾರನಾದ ಡಾ. ಡ ಯಾಂಗ್‌ ಒಪ್ಪಿಕೊಳ್ಳುವುದು: “ಅವರಲ್ಲಿ ಅತ್ಯಧಿಕ ಮಂದಿ, ಬೆದರಿಕೆಗಳು ಹಾಗೂ ಚಿತ್ರಹಿಂಸೆಗಳ ಎದುರಿನಲ್ಲಿಯೂ ತಮ್ಮ ನಂಬಿಕೆಯನ್ನು ಬಿಟ್ಟುಕೊಡಲು ನಿರಾಕರಿಸಿದರು.”

ಆದುದರಿಂದ, ನಾಜಿ ಆಳ್ವಿಕೆಯ ಎದುರಿನಲ್ಲೂ ಯೆಹೋವನ ಸಾಕ್ಷಿಗಳು ತೆಗೆದುಕೊಂಡ ಕೆಚ್ಚೆದೆಯ ನಿಲುವಿನ ಕಾರಣದಿಂದಾಗಿ, ಕೆಲವು ಐಹಿಕ ಅಧಿಕಾರಿಗಳು ಅವರನ್ನು ಜ್ಞಾಪಿಸಿಕೊಂಡಿದ್ದಾರೆ. ಆದರೆ ಅದಕ್ಕಿಂತಲೂ ಪ್ರಾಮುಖ್ಯವಾಗಿ, ಯುದ್ಧಕಾಲದ ಈ ಸಾಕ್ಷಿಗಳ ಯಥಾರ್ಥವಾದ ದಾಖಲೆಯನ್ನು ಯೆಹೋವನು ಹಾಗೂ ಯೇಸು ಜ್ಞಾಪಿಸಿಕೊಳ್ಳುವರು. (ಇಬ್ರಿಯ 6:10) ಸನ್ನಿಹಿತವಾಗುತ್ತಿರುವ ಯೇಸು ಕ್ರಿಸ್ತನ ಸಹಸ್ರ ವರ್ಷದಾಳಿಕೆಯ ಸಮಯದಲ್ಲಿ, ದೇವರ ಸೇವೆಯಲ್ಲಿ ತಮ್ಮ ಜೀವಗಳನ್ನು ತೆತ್ತಿರುವ ಈ ನಂಬಿಗಸ್ತ ಹಾಗೂ ನಿರ್ಭೀತ ಸಾಕ್ಷಿಗಳು, ಪ್ರಮೋದವನ ಭೂಮಿಯಲ್ಲಿ ಸದಾಕಾಲ ಜೀವಿಸುವ ಪ್ರತೀಕ್ಷೆಗಳೊಂದಿಗೆ ಸ್ಮಾರಕ ಸಮಾಧಿಗಳಿಂದ ಎಬ್ಬಿಸಲ್ಪಡುವರು!—ಯೋಹಾನ 5:28, 29.

[ಪುಟ 24ರಲ್ಲಿರುವ ಚಿತ್ರ]

ಯಾಕೊಪ್‌ ವನ್‌ ಬೆನಕೋಮ್‌

[ಪುಟ 26ರಲ್ಲಿರುವ ಚಿತ್ರ]

ಯೆಹೋವನ ಸಾಕ್ಷಿಗಳ ಮೇಲೆ ಬರಮಾಡಲ್ಪಟ್ಟ ನಿಷೇಧದ ಆಜ್ಞೆಯ ಕುರಿತು ವಾರ್ತಾಪತ್ರಿಕೆಯಿಂದ ಕತ್ತರಿಸಿ ತೆಗೆದ ಲೇಖನ

[ಪುಟ 27ರಲ್ಲಿರುವ ಚಿತ್ರಗಳು]

ಬಲಭಾಗದಲ್ಲಿ: ಬರ್ನಾರ್ಟ್‌ ಲ್ಯೂಮಸ್‌; ಕೆಳಗೆ: ಆಲ್ಬ್‌ರ್ಟ್ಯೂಸ್‌ ಬೊಸ್‌ (ಎಡಭಾಗದಲ್ಲಿ) ಮತ್ತು ಆಂಟೋನೀ ರೇಮೇಯರ್‌; ಕೆಳಗೆ: ಹೀಮ್‌ಸ್ಟೀಡ್‌ನಲ್ಲಿರುವ ಸೊಸೈಟಿಯ ಆಫೀಸು