ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲಿನಲ್ಲಿ ಗುಪ್ತವಾದ ಸಂಕೇತ ಭಾಷೆಯಿದೆಯೊ?

ಬೈಬಲಿನಲ್ಲಿ ಗುಪ್ತವಾದ ಸಂಕೇತ ಭಾಷೆಯಿದೆಯೊ?

ಬೈಬಲಿನಲ್ಲಿ ಗುಪ್ತವಾದ ಸಂಕೇತ ಭಾಷೆಯಿದೆಯೊ?

ಇಸವಿ 1995ರಲ್ಲಿ ಇಸ್ರೇಲಿನ ಪ್ರಧಾನ ಮಂತ್ರಿಯಾಗಿದ್ದ ಯಿಶಾಕ್‌ ರಬಿನ್‌ನ ಹತ್ಯೆಯಾಯಿತು. ಇದಾಗಿ ಸುಮಾರು ಎರಡು ವರ್ಷಗಳು ಕಳೆದ ಬಳಿಕ, ಕಂಪ್ಯೂಟರ್‌ ತಂತ್ರಜ್ಞಾನದ ಸಹಾಯದಿಂದ, ಮೂಲ ಹೀಬ್ರು ಬೈಬಲ್‌ ಗ್ರಂಥಪಾಠದಲ್ಲಿ ನಿಗೂಢವಾಗಿರಿಸಲ್ಪಟ್ಟಿದ್ದ ಆ ಘಟನೆಯ ಕುರಿತಾದ ಭವಿಷ್ಯವಾಣಿಯನ್ನು ತಾನು ಕಂಡುಹಿಡಿದಿದ್ದೇನೆಂದು ಒಬ್ಬ ಪತ್ರಕರ್ತನು ಹೇಳಿಕೊಂಡನು. ಮೈಕಲ್‌ ಡ್ರಾಸ್‌ನಿನ್‌ ಎಂಬ ಹೆಸರಿನ ಈ ಪತ್ರಕರ್ತನು, ಹತ್ಯೆ ನಡೆಯುವ ಒಂದು ವರ್ಷಕ್ಕೆ ಮುಂಚೆಯೇ ತಾನು ಆ ಪ್ರಧಾನ ಮಂತ್ರಿಗೆ ಎಚ್ಚರಿಕೆ ನೀಡಲು ಪ್ರಯತ್ನಿಸಿದ್ದೆನಾದರೂ, ಅದರಿಂದ ಪ್ರಯೋಜನವಾಗಲಿಲ್ಲ ಎಂದು ಬರೆದನು.

ಈ ಗುಪ್ತ ಸಂಕೇತ ಭಾಷೆಯು, ಬೈಬಲು ದೇವರ ಪ್ರೇರಿತ ಗ್ರಂಥವೆಂಬುದಕ್ಕೆ ಸಂಪೂರ್ಣ ರುಜುವಾತನ್ನು ನೀಡುತ್ತದೆ ಎಂದು ಪ್ರತಿಪಾದಿಸುವಂತಹ ಇತರ ಅನೇಕ ಪುಸ್ತಕಗಳು ಹಾಗೂ ಲೇಖನಗಳು ಈಗ ಪ್ರಕಾಶಿಸಲ್ಪಟ್ಟಿವೆ. ಆದರೆ ಅಂತಹ ಸಂಕೇತ ಭಾಷೆಯು ಬೈಬಲಿನಲ್ಲಿದೆಯೊ? ಬೈಬಲು ದೇವರಿಂದ ಪ್ರೇರಿಸಲ್ಪಟ್ಟ ಗ್ರಂಥವಾಗಿದೆ ಎಂಬುದನ್ನು ನಂಬಲು ಈ ಗುಪ್ತ ಸಂಕೇತ ಭಾಷೆಯು ಒಂದು ಮೂಲಾಧಾರವಾಗಿರಬೇಕೊ?

ಇದು ಒಂದು ಹೊಸ ವಿಚಾರವೊ?

ಬೈಬಲ್‌ ಗ್ರಂಥಪಾಠದಲ್ಲಿ ಗುಪ್ತ ಸಂಕೇತ ಭಾಷೆಯಿದೆ ಎಂಬ ವಿಚಾರವು ಹೊಸದೇನಲ್ಲ. ಏಕೆಂದರೆ ಇದು ಕಬಾಲದ ಅಥವಾ ಸಾಂಪ್ರದಾಯಿಕ ಯೆಹೂದಿ ರಹಸ್ಯವಾದದ ಅತಿ ಪ್ರಮುಖ ಸಿದ್ಧಾಂತವಾಗಿದೆ. ಯೆಹೂದ್ಯರ ಸಾಂಪ್ರದಾಯಿಕ ಬೋಧಕರಿಗನುಸಾರ, ಬೈಬಲ್‌ ಗ್ರಂಥಪಾಠದಲ್ಲಿರುವ ಸರಳ ಅರ್ಥವು ಅದರ ನಿಜವಾದ ಅರ್ಥವಲ್ಲ. ಹೀಬ್ರು ಬೈಬಲ್‌ ಗ್ರಂಥಪಾಠದ ಒಂದೊಂದು ಅಕ್ಷರಗಳನ್ನೂ ದೇವರು ಚಿಹ್ನೆಗಳಾಗಿ ಉಪಯೋಗಿಸಿದನು ಮತ್ತು ಇದನ್ನು ಸರಿಯಾಗಿ ಅರ್ಥಮಾಡಿಕೊಂಡರೆ ಮಾತ್ರ ಹೆಚ್ಚು ಮಹತ್ತರವಾದ ಸತ್ಯವು ಬಯಲಾಗುತ್ತದೆ ಎಂದು ಅವರು ನಂಬುತ್ತಾರೆ. ಅವರ ದೃಷ್ಟಿಕೋನದಲ್ಲಿ, ದೇವರು ಒಂದು ನಿರ್ದಿಷ್ಟ ಉದ್ದೇಶವನ್ನು ಮನಸ್ಸಿನಲ್ಲಿಟ್ಟುಕೊಂಡು ಪ್ರತಿಯೊಂದು ಹೀಬ್ರು ಅಕ್ಷರ ಮತ್ತು ಬೈಬಲಿನ ಗ್ರಂಥಪಾಠದಲ್ಲಿ ಅದಕ್ಕಿರುವ ಸ್ಥಾನವನ್ನು ಮೊದಲೇ ನಿರ್ಧರಿಸಿಟ್ಟಿದ್ದಾನೆ.

ಬೈಬಲ್‌ ಸಂಕೇತದ ಸಂಶೋಧಕನಾದ ಜೆಫ್ರಿ ಸಾಟಿನೋವರ್‌ಗನುಸಾರ, ಆದಿಕಾಂಡ ಪುಸ್ತಕದಲ್ಲಿ ಸೃಷ್ಟಿಯ ವೃತ್ತಾಂತವನ್ನು ದಾಖಲಿಸಲಿಕ್ಕಾಗಿ ಉಪಯೋಗಿಸಲ್ಪಟ್ಟಿರುವ ಹೀಬ್ರು ಅಕ್ಷರಗಳಲ್ಲಿ, ನಂಬಲಸಾಧ್ಯವಾದ ನಿಗೂಢ ಶಕ್ತಿಯಿದೆ ಎಂದು ಈ ಯೆಹೂದಿ ಗೋಪ್ಯವಾದಿಗಳು ನಂಬುತ್ತಾರೆ. ಅವನು ಬರೆಯುವುದು: “ಸಾರಾಂಶವಾಗಿ ಹೇಳುವಾಗ, ಆದಿಕಾಂಡವು ಕೇವಲ ಒಂದು ವರ್ಣನೆಯಾಗಿಲ್ಲ; ಬದಲಿಗೆ ಇದು ಸೃಷ್ಟಿಕ್ರಿಯೆಯ ಮೂಲ ಸಾಧನವಾಗಿದೆ, ಅಂದರೆ ದೇವರ ಮನಸ್ಸಿನಲ್ಲಿರುವ ಒಂದು ನೀಲಿಪ್ರತಿಯು ಭೌತಿಕ ರೂಪದಲ್ಲಿ ವ್ಯಕ್ತಪಡಿಸಲ್ಪಟ್ಟಿದೆ.”

13ನೆಯ ಶತಮಾನದ ಕಬಾಲದ ರಬ್ಬಿಯಾಗಿದ್ದ ಸ್ಪೆಯ್ನ್‌ನ ಸಾರಗೋಸದ ಬಾಕ್ಯಾ ಬೆನ್‌ ಆಶೆರನು, ಆದಿಕಾಂಡ ಪುಸ್ತಕದ ಒಂದು ಭಾಗದಲ್ಲಿ ಪ್ರತಿ 42ನೆಯ ಅಕ್ಷರವನ್ನು ಓದಿದಾಗ ತನಗೆ ಪ್ರಕಟವಾದ ಒಂದು ಗುಪ್ತ ಮಾಹಿತಿಯ ಕುರಿತು ಬರೆದನು. ಗುಪ್ತ ಸಂದೇಶವನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ, ಒಂದು ನಿರ್ದಿಷ್ಟ ಅನುಕ್ರಮಕ್ಕೆ ಅನುಸಾರವಾಗಿ ಅಕ್ಷರಗಳನ್ನು ಬಿಟ್ಟು ಓದುವಂತಹ ಈ ವಿಧಾನವು, ಆಧುನಿಕ ದಿನದ ಬೈಬಲ್‌ ಸಂಕೇತ ಭಾಷೆಯ ಕಲ್ಪನೆಗೆ ಒಂದು ಆಧಾರವಾಗಿದೆ.

ಕಂಪ್ಯೂಟರ್‌ಗಳು ಸಂಕೇತ ಭಾಷೆಯನ್ನು “ಬಯಲುಮಾಡುತ್ತವೆ”

ಕಂಪ್ಯೂಟರ್‌ ಯುಗಕ್ಕೆ ಮುಂಚೆ, ಈ ರೀತಿಯಲ್ಲಿ ಬೈಬಲನ್ನು ಪರಿಶೋಧಿಸುವ ಮನುಷ್ಯನ ಸಾಮರ್ಥ್ಯವು ಸೀಮಿತವಾಗಿತ್ತು. ಆದರೂ, 1994ರ ಆಗಸ್ಟ್‌ ತಿಂಗಳಿನಲ್ಲಿ, ಸ್ಟ್ಯಾಟಿಸ್ಟಿಕಲ್‌ ಸೈಯನ್ಸ್‌ ಎಂಬ ಪತ್ರಿಕೆಯು ಒಂದು ಲೇಖನವನ್ನು ಪ್ರಕಾಶಿಸಿತು. ಅದರಲ್ಲಿ ಯೆರೂಸಲೇಮ್‌ನ ಹೀಬ್ರು ವಿಶ್ವವಿದ್ಯಾನಿಲಯದ ಎಲೀಯಾಹು ರಿಪ್ಸ್‌ ಹಾಗೂ ಅವನ ಜೊತೆ ಸಂಶೋಧಕರು ಬೆರಗಾಗುವಂತಹ ಕೆಲವು ಪ್ರತಿಪಾದನೆಗಳನ್ನು ಮಾಡಿದರು. ಹೀಬ್ರು ಭಾಷೆಯಲ್ಲಿರುವ ಆದಿಕಾಂಡ ಪುಸ್ತಕದಲ್ಲಿ ಅಕ್ಷರಗಳ ಮಧ್ಯೆಯಿರುವ ಅಂತರವನ್ನು ತೆಗೆದುಹಾಕುವ ಮೂಲಕ ಮತ್ತು ಅಕ್ಷರಗಳ ಮಧ್ಯೆ ಸಮಾನ ಅಂತರವನ್ನು ಬಿಡುತ್ತಾ ಓದುವ ಕ್ರಮವನ್ನು ಅನುಸರಿಸುವ ಮೂಲಕ, ಆ ಮೂಲಪಾಠದಲ್ಲಿ ಸಂಕೇತ ಭಾಷೆಯಲ್ಲಿದ್ದ 34 ಪ್ರಸಿದ್ಧ ರಬ್ಬಿಗಳ ಹೆಸರುಗಳನ್ನು ತಾವು ಕಂಡುಹಿಡಿದಿದ್ದೇವೆಂದು ಅವರು ವಿವರಿಸಿದರು. ಅಷ್ಟುಮಾತ್ರವಲ್ಲ, ಅವರ ಹೆಸರುಗಳ ಹತ್ತಿರದಲ್ಲೇ ಇದ್ದ ಅವರ ಜನನ ಹಾಗೂ ಮರಣದ ತಾರೀಖುಗಳಂತಹ ಇನ್ನಿತರ ಮಾಹಿತಿಯನ್ನೂ ಕಂಡುಹಿಡಿದಿದ್ದೇವೆಂದು ಅವರು ಹೇಳಿದರು. * ಪುನಃ ಪುನಃ ಪರೀಕ್ಷೆಯನ್ನು ಮಾಡಿದ ಬಳಿಕ, ಆದಿಕಾಂಡ ಪುಸ್ತಕದಲ್ಲಿ ಸಂಕೇತ ಭಾಷೆಯಲ್ಲಿಡಲ್ಪಟ್ಟಿದ್ದ ಮಾಹಿತಿಯು ಒಂದು ಆಕಸ್ಮಿಕ ಸಂಗತಿಯಾಗಿರಲಿಲ್ಲ, ಬದಲಾಗಿ ಅದು ಸಾವಿರಾರು ವರ್ಷಗಳ ಹಿಂದೆಯೇ ಆದಿಕಾಂಡ ಪುಸ್ತಕದಲ್ಲಿ ಉದ್ದೇಶಪೂರ್ವಕವಾಗಿ ಸಂಕೇತ ಭಾಷೆಯಲ್ಲಿ ಗುಪ್ತವಾಗಿಡಲ್ಪಟ್ಟಿದ್ದ ಪ್ರೇರಿತ ಮಾಹಿತಿಗೆ ರುಜುವಾತಾಗಿತ್ತು ಎಂಬ ತಮ್ಮ ಅನಿಸಿಕೆಯನ್ನು ಸಂಶೋಧಕರು ಪ್ರಕಾಶಿಸಿದರು.

ಈ ವಿಧಾನವನ್ನು ಉಪಯೋಗಿಸುತ್ತಾ, ಪತ್ರಕರ್ತನಾದ ಡ್ರಾಸ್‌ನಿನ್‌ ತನ್ನದೇ ಆದ ಪರೀಕ್ಷೆಗಳನ್ನು ನಡೆಸಿದನು. ಹೀಬ್ರು ಬೈಬಲಿನ ಮೊದಲ ಐದು ಪುಸ್ತಕಗಳಲ್ಲಿ ಗುಪ್ತ ಸಂದೇಶಕ್ಕಾಗಿ ಹುಡುಕಾಟ ನಡೆಸಿದನು. ಡ್ರಾಸ್‌ನಿನ್‌ಗನುಸಾರ, ಪ್ರತಿ 4,772 ಅಕ್ಷರಗಳ ಅನುಕ್ರಮವನ್ನು ಅನುಸರಿಸುವ ಮೂಲಕ, ಬೈಬಲಿನಲ್ಲಿ ಗುಪ್ತ ಸಂಕೇತ ಭಾಷೆಯಲ್ಲಿ ಯಿಶಾಕ್‌ ರಬಿನ್‌ರ ಹೆಸರು ಇದ್ದದ್ದನ್ನು ಅವನು ಕಂಡುಕೊಂಡನು. ಬೈಬಲ್‌ ಗ್ರಂಥಪಾಠವನ್ನು ಪ್ರತಿಯೊಂದು ಸಾಲಿನಲ್ಲಿ 4,772 ಅಕ್ಷರಗಳಂತೆ ಜೋಡಿಸಿ, ರಬಿನ್‌ನ ಹೆಸರನ್ನು (ಮೇಲಿಂದ ಕೆಳಗೆ ಓದಿದಾಗ) ಅವನು ಕಂಡುಕೊಂಡನು. ಈ ಹೆಸರು “ಕೊಲ್ಲಲಿರುವ ಹಂತಕನು” ಎಂದು ಡ್ರಾಸ್‌ನಿನ್‌ ಭಾಷಾಂತರಿಸಿದ ಒಂದು ಸಾಲನ್ನು (ಧರ್ಮೋಪದೇಶಕಾಂಡ 4:42, ಬಲದಿಂದ ಎಡಕ್ಕೆ ಓದಿದಾಗ) ಛೇದಿಸುತ್ತಿತ್ತು.

ವಾಸ್ತವದಲ್ಲಿ, ಧರ್ಮೋಪದೇಶಕಾಂಡ 4:42ನೆಯ ವಚನವು, ಆಕಸ್ಮಿಕವಾಗಿ ಹತ್ಯೆಗೈದಿರುವ ಹಂತಕನ ಕುರಿತು ಮಾತಾಡುತ್ತದೆ. ಹೀಗೆ, ಯಾವುದೇ ಗ್ರಂಥಪಾಠದಲ್ಲಿರುವ ತದ್ರೀತಿಯ ಸಂದೇಶಗಳನ್ನು ಕಂಡುಕೊಳ್ಳಲು ಡ್ರಾಸನಿನ್‌ನ ಅವೈಜ್ಞಾನಿಕ ವಿಧಾನಗಳನ್ನು ಉಪಯೋಗಿಸಸಾಧ್ಯವಿದೆ ಎಂದು ಪ್ರತಿಪಾದಿಸುತ್ತಾ, ಅನೇಕರು ಅವನ ಮನಸ್ಸೋ ಇಚ್ಛೆಯ ವಿಧಾನವನ್ನು ಟೀಕಿಸಿದ್ದಾರೆ. ಆದರೆ ಈ ವಿಷಯದಲ್ಲಿ ಡ್ರಾಸ್‌ನಿನ್‌ ತನ್ನ ನಿಲುವನ್ನು ಬಿಟ್ಟುಕೊಡದೆ, ಈ ಪಂಥಾಹ್ವಾನವನ್ನು ಒಡ್ಡಿದನು: “ಮೋಬಿ ಡಿಕ್‌ ಎಂಬ [ಕಾದಂಬರಿಯಲ್ಲಿ] ಪ್ರಧಾನ ಮಂತ್ರಿಯ ಹತ್ಯೆಯ ಕುರಿತು ಸಂಕೇತ ಭಾಷೆಯಲ್ಲಿ ತಿಳಿಸಲ್ಪಟ್ಟಿರುವ ಸಂದೇಶವನ್ನು ನನ್ನ ವಿಮರ್ಶಕರು ಕಂಡುಕೊಳ್ಳುವಾಗ, ನಾನು ಅವರು ಹೇಳುವುದನ್ನು ನಂಬುವೆ.”

ದೈವಪ್ರೇರಣೆಯ ರುಜುವಾತೊ?

ಆಸ್ಟ್ರೇಲಿಯನ್‌ ನ್ಯಾಷನಲ್‌ ಯೂನಿವರ್ಸಿಟಿಯ ಕಂಪ್ಯೂಟರ್‌ ಸೈಯನ್ಸ್‌ ಇಲಾಖೆಯ ಪ್ರೊಫೆಸರರಾದ ಬ್ರೆಂಡನ್‌ ಮ್ಯಾಕೆ, ಡ್ರಾಸ್‌ನಿನ್‌ನ ಪಂಥಾಹ್ವಾನವನ್ನು ಸ್ವೀಕರಿಸಿದರು ಮತ್ತು ಮೋಬಿ ಡಿಕ್‌ ಕಾದಂಬರಿಯ ಇಂಗ್ಲಿಷ್‌ ಗ್ರಂಥಪಾಠದಾದ್ಯಂತ ಕಂಪ್ಯೂಟರ್‌ನ ಮೂಲಕ ಬಹಳಷ್ಟು ಪರಿಶೋಧನೆಯನ್ನು ನಡೆಸಿದರು. * ಡ್ರಾಸ್‌ನಿನ್‌ನಿಂದ ವರ್ಣಿಸಲ್ಪಟ್ಟಿದ್ದ ವಿಧಾನವನ್ನೇ ಉಪಯೋಗಿಸಿ, ಇಂದಿರಾ ಗಾಂಧಿ, ಮಾರ್ಟಿನ್‌ ಲೂಥರ್‌ ಕಿಂಗ್‌, ಜೂನಿಯರ್‌ ಜಾನ್‌ ಎಫ್‌. ಕೆನಡಿ, ಅಬ್ರಹಾಮ್‌ ಲಿಂಕನ್‌ ಹಾಗೂ ಇನ್ನಿತರರ ಹತ್ಯೆಗಳ ಬಗ್ಗೆ “ಭವಿಷ್ಯವಾಣಿ”ಗಳನ್ನು ತಾನು ಕಂಡುಕೊಂಡಿದ್ದೇನೆ ಎಂದು ಮ್ಯಾಕೆ ವಾದಿಸುತ್ತಾರೆ. ಮ್ಯಾಕೆಗನುಸಾರ, ಮೋಬಿ ಡಿಕ್‌ ಕಾದಂಬರಿಯು ಸಹ ಯಿಶಾಕ್‌ ರಬಿನ್‌ರ ಕೊಲೆಯನ್ನು “ಪ್ರವಾದಿಸಿದೆ” ಎಂಬುದನ್ನು ಅವರು ಕಂಡುಹಿಡಿದರು.

ಆದಿಕಾಂಡ ಪುಸ್ತಕದ ಹೀಬ್ರು ಗ್ರಂಥಪಾಠಕ್ಕೆ ಹಿಂದಿರುಗುವಲ್ಲಿ, ಪ್ರೊಫೆಸರ್‌ ಮ್ಯಾಕೆ ಮತ್ತು ಅವನ ಸಂಗಡಿಗರು, ರಿಪ್ಸ್‌ ಹಾಗೂ ಅವನ ಸಂಗಡಿಗರು ಮಾಡಿರುವ ಪ್ರಯೋಗಗಳಿಂದ ಸಿಕ್ಕಿದ ಫಲಿತಾಂಶಗಳಿಗೆ ಸಹ ಪಂಥಾಹ್ವಾನವನ್ನೊಡ್ಡಿದ್ದಾರೆ. ರಿಪ್ಸ್‌ನ ಪ್ರಾಯೋಗಿಕ ಫಲಿತಾಂಶಗಳು ದೈವಪ್ರೇರಿತವಾದ ಸಂಕೇತ ಭಾಷೆಯ ಸಂದೇಶದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿರುವುದಿಲ್ಲ, ಬದಲಾಗಿ ಸಂಶೋಧಕರ ವಿಧಾನದೊಂದಿಗೆ, ಅಂದರೆ ಸಂಶೋಧಕರ ಆಯ್ಕೆಗನುಸಾರ ದತ್ತಾಂಶವನ್ನು ಸರಿಹೊಂದಿಸುವುದರೊಂದಿಗೆ ಹೆಚ್ಚಿನ ಸಂಬಂಧವನ್ನು ಹೊಂದಿವೆ ಎಂಬುದೇ ಅವರ ಆಪಾದನೆಯಾಗಿದೆ. ಈ ಅಂಶದ ಕುರಿತಾದ ವಿದ್ವಾಂಸರ ವಾಗ್ವಾದವು ಇನ್ನೂ ಮುಂದುವರಿಯುತ್ತಿದೆ.

“ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ” ಅಥವಾ “ಮೂಲ” ಹೀಬ್ರು ಭಾಷೆಯ ಗ್ರಂಥಪಾಠದಲ್ಲಿ ಅಂತಹ ನಿಗೂಢ ಸಂದೇಶಗಳು ಉದ್ದೇಶಪೂರ್ವಕವಾಗಿಯೇ ಗುಪ್ತವಾಗಿಡಲ್ಪಟ್ಟಿದ್ದವು ಎಂಬ ಪ್ರತಿಪಾದನೆಗಳು ಮಾಡಲ್ಪಡುವಾಗ, ಇನ್ನೊಂದು ವಿವಾದವು ಏಳುತ್ತದೆ. “ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಹಾಗೂ ಅಂಗೀಕಾರಾರ್ಹವಾದ ಆದಿಕಾಂಡ ಪುಸ್ತಕದ ಗ್ರಂಥಪಾಠ”ವನ್ನು ನಾವು ಪರಿಶೋಧಿಸಿದೆವು ಎಂದು ರಿಪ್ಸ್‌ ಮತ್ತು ಅವನ ಜೊತೆ ಸಂಶೋಧಕರು ಹೇಳುತ್ತಾರೆ. ಡ್ರಾಸ್‌ನಿನ್‌ ಬರೆಯುವುದು: “ಮೂಲ ಹೀಬ್ರು ಭಾಷೆಯಲ್ಲಿರುವ ಎಲ್ಲ ಬೈಬಲುಗಳಲ್ಲಿ ಒಂದೇ ರೀತಿಯ ಅಕ್ಷರಗಳ ಅನುಕ್ರಮವಿದೆ.” ಇದು ನಿಜವೋ? “ಅಂಗೀಕೃತ” ಗ್ರಂಥಪಾಠಕ್ಕೆ ಬದಲಾಗಿ, ಪುರಾತನ ಕಾಲದ ವಿಭಿನ್ನ ಹಸ್ತಪ್ರತಿಗಳ ಮೇಲಾಧಾರಿಸಿ, ಹೀಬ್ರು ಬೈಬಲಿನ ಬೇರೆ ಬೇರೆ ಮುದ್ರಣಗಳು ಇಂದು ಉಪಯೋಗಿಸಲ್ಪಡುತ್ತಿವೆ. ಬೈಬಲ್‌ ಸಂದೇಶವು ಬದಲಾಗುವುದಿಲ್ಲವಾದರೂ, ವೈಯಕ್ತಿಕ ಹಸ್ತಪ್ರತಿಗಳ ಅಕ್ಷರಗಳ ಅನುಕ್ರಮವು ಏಕಪ್ರಕಾರವಾಗಿಲ್ಲ.

ಇಂದಿನ ಅನೇಕ ತರ್ಜುಮೆಗಳು, ಸುಮಾರು ಸಾ.ಶ. 1000 ಇಸವಿಯಲ್ಲಿ ನಕಲುಮಾಡಲ್ಪಟ್ಟ ಲೆನಿನ್‌ಗ್ರ್ಯಾಡ್‌ ಕೋಡೆಕ್ಸ್‌ನ ಮೇಲಾಧಾರಿತವಾಗಿವೆ. ಇದು ಅತ್ಯಂತ ಪುರಾತನಕಾಲದ ಸಂಪೂರ್ಣ ಹೀಬ್ರು ಮ್ಯಾಸೊರೆಟಿಕ್‌ ಹಸ್ತಪ್ರತಿಯಾಗಿದೆ. ಆದರೆ ರಿಪ್ಸ್‌ ಮತ್ತು ಡ್ರಾಸ್‌ನಿನ್‌ ಇಬ್ಬರು ಸಹ ಇದಕ್ಕಿಂತ ಭಿನ್ನವಾದ, ಅಂದರೆ ಕೊರನ್‌ ಎಂಬ ಹೆಸರಿನ ಒಂದು ಗ್ರಂಥಪಾಠವನ್ನು ಉಪಯೋಗಿಸಿದರು. ಒಬ್ಬ ಆರ್ತೊಡಾಕ್ಸ್‌ ರಬ್ಬಿಯೂ ಹಾರ್ವರ್ಡ್‌ ವಿಶ್ವವಿದ್ಯಾನಿಲಯದಲ್ಲಿ ಗಣಿತಶಾಸ್ತ್ರಜ್ಞನೂ ಆಗಿರುವ ಶ್ಲೋಮೋ ಸ್ಟರ್ನ್‌ಬರ್ಗ್‌ “ಡ್ರಾಸ್‌ನಿನ್‌ ಉಪಯೋಗಿಸಿರುವ ಕೊರನ್‌ ಮುದ್ರಣದಲ್ಲಿ, ಧರ್ಮೋಪದೇಶಕಾಂಡ ಪುಸ್ತಕ ಒಂದರಲ್ಲಿಯೇ” ಲೆನಿನ್‌ಗ್ರಾಡ್‌ ಕೋಡೆಕ್ಸ್‌ಗಿಂತ “41 ಅಕ್ಷರಗಳು ಭಿನ್ನವಾಗಿವೆ” ಎಂದು ವಿವರಿಸಿದನು. ಮೃತ ಸಮುದ್ರದ ಸುರುಳಿಗಳಲ್ಲಿ, 2,000ಕ್ಕಿಂತ ಹೆಚ್ಚು ವರ್ಷಗಳ ಹಿಂದೆ ನಕಲುಮಾಡಲ್ಪಟ್ಟ ಬೈಬಲ್‌ ಗ್ರಂಥಪಾಠಗಳು ಇವೆ. ಈ ಸುರುಳಿಗಳಲ್ಲಿರುವ ಕಾಗುಣಿತವು, ತದನಂತರದ ಮ್ಯಾಸೊರೆಟಿಕ್‌ ಗ್ರಂಥಪಾಠಗಳಲ್ಲಿರುವ ಕಾಗುಣಿತಕ್ಕಿಂತ ಬಹಳಷ್ಟು ಭಿನ್ನವಾಗಿವೆ. ಆಗಿನ ಕಾಲದಲ್ಲಿ ಸ್ವರಗಳ ಬಳಕೆಯು ಇನ್ನೂ ಕಂಡುಹಿಡಿಯಲ್ಪಟ್ಟಿರಲಿಲ್ಲವಾದ್ದರಿಂದ, ಕೆಲವು ಸುರುಳಿಗಳಲ್ಲಿ ಸ್ವರಾಕ್ಷರದ ಧ್ವನಿಗಳನ್ನು ಸೂಚಿಸಲಿಕ್ಕಾಗಿ ಕೆಲವೊಂದು ಅಕ್ಷರಗಳನ್ನು ಧಾರಾಳವಾಗಿ ಕೂಡಿಸಲಾಗಿತ್ತು. ಇನ್ನಿತರ ಸುರುಳಿಗಳಲ್ಲಿ ಕೆಲವೇ ಅಕ್ಷರಗಳು ಉಪಯೋಗಿಸಲ್ಪಟ್ಟಿದ್ದವು. ಅಸ್ತಿತ್ವದಲ್ಲಿರುವ ಎಲ್ಲ ಬೈಬಲ್‌ ಹಸ್ತಪ್ರತಿಗಳನ್ನು ಹೋಲಿಸಿ ನೋಡಿದಾಗ, ಬೈಬಲ್‌ ಗ್ರಂಥಪಾಠದ ಅರ್ಥವು ಮಾತ್ರ ಅಖಂಡವಾಗಿ ಉಳಿದಿದೆ ಎಂಬುದು ಕಂಡುಬಂದಿದೆ. ಆದರೂ, ಒಂದು ಹಸ್ತಪ್ರತಿಯ ಗ್ರಂಥಪಾಠದಿಂದ ಇನ್ನೊಂದು ಹಸ್ತಪ್ರತಿಯ ಗ್ರಂಥಪಾಠದಲ್ಲಿರುವ ಕಾಗುಣಿತವು ಮತ್ತು ಅಕ್ಷರಗಳ ಸಂಖ್ಯೆಯು ಭಿನ್ನವಾಗಿರುವುದನ್ನು ಸಹ ಅದು ಸ್ಪಷ್ಟವಾಗಿ ಸೂಚಿಸುತ್ತದೆ.

ಗುಪ್ತವಾದ ಸಂದೇಶವೆಂದು ಭಾವಿಸಲ್ಪಡುವ ವಿಷಯದ ಬಗ್ಗೆ ನಡೆಸಲ್ಪಡುತ್ತಿರುವ ಹುಡುಕಾಟವು, ಯಾವುದೇ ರೀತಿಯಲ್ಲಿ ಬದಲಾವಣೆಗಳಿಲ್ಲದೆ ಸಮಗ್ರವಾಗಿರುವ ಒಂದು ಗ್ರಂಥಪಾಠದ ಮೇಲೆ ಅವಲಂಬಿಸಿದೆ. ಒಂದುವೇಳೆ ಅಂತಹ ಒಂದು ಸಂದೇಶವು ಇರುವುದಾದರೂ, ಒಂದು ಗ್ರಂಥಪಾಠದಲ್ಲಿ ಕೇವಲ ಒಂದು ಅಕ್ಷರವು ಬದಲಾಗಿರುವುದಾದರೂ, ಅದರ ಅನುಕ್ರಮ ಮತ್ತು ಸಂದೇಶವು ಸಂಪೂರ್ಣವಾಗಿ ತಪ್ಪಾಗಸಾಧ್ಯವಿದೆ. ದೇವರು ಬೈಬಲಿನ ಮೂಲಕ ತನ್ನ ಸಂದೇಶವನ್ನು ಜೋಪಾನವಾಗಿಟ್ಟಿದ್ದಾನೆ. ಆದರೆ ಶತಮಾನಗಳಲ್ಲಿ ಕಾಗುಣಿತದ ಬದಲಾವಣೆಗಳಂತಹ ಕ್ಷುಲ್ಲಕ ವಿಚಾರಗಳ ಬಗ್ಗೆಯೇ ಆತನು ಆಸಕ್ತನಾಗಿದ್ದಾನೋ ಎಂಬಂತೆ, ಆತನು ಪ್ರತಿಯೊಂದು ಅಕ್ಷರವನ್ನು ಸಂರಕ್ಷಿಸಿಟ್ಟಿಲ್ಲ. ಆತನು ಬೈಬಲಿನಲ್ಲಿ ಒಂದು ಗುಪ್ತ ಸಂದೇಶವನ್ನು ನಿಗೂಢವಾಗಿಟ್ಟಿಲ್ಲ ಎಂಬುದನ್ನು ಇದು ಸೂಚಿಸುವುದಿಲ್ಲವೊ?—ಯೆಶಾಯ 40:8; 1 ಪೇತ್ರ 1:24, 25.

ನಮಗೆ ಒಂದು ಗುಪ್ತ ಬೈಬಲ್‌ ಸಂಕೇತ ಭಾಷೆಯ ಅಗತ್ಯವಿದೆಯೊ?

“ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ. ಅದರಿಂದ ದೇವರ ಮನುಷ್ಯನು ಪ್ರವೀಣನಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧನಾಗುವನು” ಎಂದು ಅಪೊಸ್ತಲ ಪೌಲನು ಸ್ಪಷ್ಟವಾಗಿ ಬರೆದನು. (2 ತಿಮೊಥೆಯ 3:16, 17) ಬೈಬಲಿನಲ್ಲಿರುವ ಸ್ಪಷ್ಟ ಮತ್ತು ನೇರವಾದ ಸಂದೇಶವು ಅರ್ಥಮಾಡಿಕೊಳ್ಳಲು ಹಾಗೂ ಅನ್ವಯಿಸಿಕೊಳ್ಳಲು ಅಷ್ಟೇನೂ ಕಷ್ಟಕರವಾದದ್ದಾಗಿಲ್ಲ, ಆದರೆ ಅಧಿಕಾಂಶ ಜನರು ಅದನ್ನು ಅಲಕ್ಷಿಸಲು ಬಯಸುತ್ತಾರೆ. (ಧರ್ಮೋಪದೇಶಕಾಂಡ 30:11-14) ಬೈಬಲಿನಲ್ಲಿ ಮುಚ್ಚುಮರೆಯಿಲ್ಲದೆ ಸಾದರಪಡಿಸಲ್ಪಟ್ಟಿರುವ ಪ್ರವಾದನೆಗಳು, ಅದು ದೈವಪ್ರೇರಿತವಾದದ್ದಾಗಿದೆ ಎಂದು ನಂಬಲು ಸದೃಢವಾದ ಆಧಾರವನ್ನು ನೀಡುತ್ತವೆ. * ಗುಪ್ತ ಸಂಕೇತ ಭಾಷೆಗೆ ಅಸದೃಶವಾಗಿ, ಬೈಬಲ್‌ ಪ್ರವಾದನೆಗಳು ಮನಸ್ಸೋ ಇಚ್ಛೆಯಂತಿಲ್ಲ, ಮತ್ತು ಅವು ‘ಯಾವುದೇ ವ್ಯಕ್ತಿಗತ ಅರ್ಥವಿವರಣೆಯಿಂದ ಹುಟ್ಟಿಕೊಳ್ಳುವುದಿಲ್ಲ.’—2 ಪೇತ್ರ 1:19-21, NW.

“ನಮ್ಮ ಕರ್ತನಾದ ಯೇಸು ಕ್ರಿಸ್ತನ ಶಕ್ತಿಯನ್ನೂ ಪ್ರತ್ಯಕ್ಷತೆಯನ್ನೂ ನಿಮಗೆ ತಿಳಿಯಪಡಿಸಿದ್ದರಲ್ಲಿ ಚಮತ್ಕಾರದಿಂದ ಕಲ್ಪಿಸಿದ ಕಥೆಗಳನ್ನು ನಾವು ಅನುಸರಿಸುವವರಾಗಿರಲಿಲ್ಲ” ಎಂದು ಅಪೊಸ್ತಲ ಪೇತ್ರನು ಬರೆದನು. (2 ಪೇತ್ರ 1:16) ಬೈಬಲ್‌ ಸಂಕೇತ ಭಾಷೆಯ ಕಲ್ಪನೆಯು, ಬೈಬಲಿನ ಪ್ರೇರಿತ ಗ್ರಂಥಪಾಠದ ಸರಳಾರ್ಥವನ್ನು ಅಸ್ಪಷ್ಟಗೊಳಿಸುವ ಮತ್ತು ತಿರುಚುವ “ಚಮತ್ಕಾರದಿಂದ ಕಲ್ಪಿಸಿದ” ವಿಧಾನಗಳನ್ನು ಉಪಯೋಗಿಸುತ್ತಾ, ಯೆಹೂದಿ ರಹಸ್ಯವಾದದಲ್ಲಿ ಬೇರೂರಿದೆ. ಅಂತಹ ರಹಸ್ಯವಾದ ವಿಧಾನವನ್ನು ಹೀಬ್ರು ಶಾಸ್ತ್ರವಚನಗಳೇ ಸ್ಪಷ್ಟವಾಗಿ ಖಂಡಿಸಿವೆ.—ಧರ್ಮೋಪದೇಶಕಾಂಡ 13:1-5; 18:9-13.

ದೇವರ ಕುರಿತು ತಿಳಿದುಕೊಳ್ಳಲು ನಮಗೆ ಸಹಾಯ ಮಾಡುವ ಬೈಬಲಿನ ಸ್ಪಷ್ಟವಾದ ಸಂದೇಶ ಹಾಗೂ ಉಪದೇಶಗಳು ನಮ್ಮಲ್ಲಿರುವುದಕ್ಕಾಗಿ ನಾವೆಷ್ಟು ಸಂತೋಷಭರಿತರು! ಇದು, ವ್ಯಕ್ತಿಗತ ಅರ್ಥವಿವರಣೆ ಹಾಗೂ ಕಂಪ್ಯೂಟರ್‌ ಸಹಾಯದಿಂದ ಮಾಡಲ್ಪಟ್ಟಿರುವ ಕಲ್ಪನೆಗಳ ಉತ್ಪನ್ನವಾಗಿರುವ ಗುಪ್ತ ಸಂದೇಶಗಳಿಗೋಸ್ಕರ ಪರದಾಡುವ ಮೂಲಕ ನಮ್ಮ ಸೃಷ್ಟಿಕರ್ತನ ಕುರಿತು ಕಲಿತುಕೊಳ್ಳಲು ಪ್ರಯತ್ನಿಸುವುದಕ್ಕಿಂತಲೂ ಎಷ್ಟೋ ಉತ್ತಮವಾಗಿದೆ.—ಮತ್ತಾಯ 7:24, 25.

[ಪಾದಟಿಪ್ಪಣಿಗಳು]

^ ಪ್ಯಾರ. 9 ಹೀಬ್ರು ಭಾಷೆಯಲ್ಲಿ ಸಂಖ್ಯೆಗಳನ್ನು ಅಕ್ಷರಗಳ ಮೂಲಕವೂ ಬರೆಯಸಾಧ್ಯವಿದೆ. ಆದುದರಿಂದ, ಈ ತಾರೀಖುಗಳು ಸಂಖ್ಯೆಗಳಲ್ಲಿ ಬರೆಯಲ್ಪಡುವುದಕ್ಕೆ ಬದಲಾಗಿ ಹೀಬ್ರು ಗ್ರಂಥಪಾಠದಲ್ಲಿರುವ ಅಕ್ಷರಗಳಿಂದ ನಿರ್ಧರಿಸಲ್ಪಟ್ಟಿದ್ದವು.

^ ಪ್ಯಾರ. 13 ಹೀಬ್ರು ಭಾಷೆಯು ಸ್ವರಾಕ್ಷರಗಳಿಲ್ಲದ ಒಂದು ಭಾಷೆಯಾಗಿದೆ. ಪೂರ್ವಾಪರಕ್ಕನುಸಾರ ಓದುಗನಿಂದ ಸ್ವರಾಕ್ಷರಗಳು ಸೇರಿಸಲ್ಪಡುತ್ತವೆ. ಒಂದುವೇಳೆ ಪೂರ್ವಾಪರವನ್ನು ಅಲಕ್ಷಿಸುವಲ್ಲಿ, ಬೇರೆ ಬೇರೆ ಸ್ವರಾಕ್ಷರಗಳನ್ನು ಸೇರಿಸುವ ಮೂಲಕ ಆ ಪದದ ಅರ್ಥವು ಸಂಪೂರ್ಣವಾಗಿ ಬದಲಾಯಿಸಲ್ಪಡಸಾಧ್ಯವಿದೆ. ಇಂಗ್ಲಿಷ್‌ ಭಾಷೆಯಲ್ಲಿ ನಿಗದಿತ ಸ್ವರಾಕ್ಷರಗಳಿವೆ. ಆದುದರಿಂದ, ಅಂತಹ ಒಂದು ಶಬ್ದವನ್ನು ಹುಡುಕುವುದು ತುಂಬ ಕಷ್ಟಕರವಾಗಿರುತ್ತದೆ ಮತ್ತು ನಿರ್ಬಂಧವನ್ನು ಉಂಟುಮಾಡುತ್ತದೆ.

^ ಪ್ಯಾರ. 19 ಬೈಬಲಿನ ಪ್ರೇರಣೆ ಮತ್ತು ಅದರ ಪ್ರವಾದನೆಗಳ ಕುರಿತಾದ ಹೆಚ್ಚಿನ ಮಾಹಿತಿಗಾಗಿ, ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಿರುವ ಸಕಲ ಜನರಿಗಾಗಿರುವ ಒಂದು ಗ್ರಂಥ ಎಂಬ ಬ್ರೋಷರನ್ನು ನೋಡಿರಿ.