ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾಟದ ಕುರಿತು ನಿಮಗೆ ತಿಳಿದಿರಲೇಬೇಕಾದ ಸಂಗತಿಗಳು

ಮಾಟದ ಕುರಿತು ನಿಮಗೆ ತಿಳಿದಿರಲೇಬೇಕಾದ ಸಂಗತಿಗಳು

ಮಾಟದ ಕುರಿತು ನಿಮಗೆ ತಿಳಿದಿರಲೇಬೇಕಾದ ಸಂಗತಿಗಳು

ಆಧುನಿಕ ಕಾಲದ ಮಾಟ ಏನಾಗಿದೆಯೆಂದು ಅರ್ಥನಿರೂಪಿಸುವುದು ಬಹಳ ಕಷ್ಟ. ಏಕೆಂದರೆ ಮಾಟಮಾಡುವವರೊಳಗೇ ಭಿನ್ನಭಿನ್ನವಾದ ಅಭಿಪ್ರಾಯಗಳಿವೆ. ತಮ್ಮೆಲ್ಲರ ನಂಬಿಕೆಗಳು ಒಂದೇ ರೀತಿಯದ್ದಾಗಿರುವಂತೆ ಮಾಡಲು, ಅವರು ಯಾವುದೇ ಒಬ್ಬ ಅಧಿಕಾರಿ ಅಥವಾ ಒಂದು ತತ್ವ ಇಲ್ಲವೆ ಪವಿತ್ರ ಗ್ರಂಥವನ್ನು ಅಂಗೀಕರಿಸುವುದಿಲ್ಲ. ಸಂಪ್ರದಾಯ, ಸಂಸ್ಥೆ, ಸಂಸ್ಕಾರ, ಮತ್ತು ಯಾವ ದೇವರುಗಳನ್ನು ಸನ್ಮಾನಿಸಬೇಕೆಂಬುದರ ಕುರಿತೂ ಅವರಿಗೆ ಭಿನ್ನಾಭಿಪ್ರಾಯಗಳಿವೆ. ಒಬ್ಬ ಲೇಖಕಿಯು ಹೇಳುವುದು: “ಈ ಮಾಂತ್ರಿಕ ಜಗತ್ತು ಒಬ್ಬ ವ್ಯಕ್ತಿಗೆ, ವಿಚಾರಗಳ ‘ಮುಕ್ತ ಮಾರುಕಟ್ಟೆಯನ್ನು’ ನೀಡುತ್ತದೆ.” ಇನ್ನೊಬ್ಬ ಲೇಖಕಿಯು ಹೇಳುವುದು: “ಹೆಚ್ಚಿನ ನವ ವಿಧರ್ಮಿಗಳು (ನಿಯೋಪೇಗನರು), ಬಹುಮಟ್ಟಿಗೆ ಎಲ್ಲ ಸಂಗತಿಗಳಲ್ಲೂ ಅಸಮ್ಮತಿಯನ್ನು ಸೂಚಿಸುತ್ತಾರೆ.”

ಅನೇಕರಿಗೆ ಈ ವಿರೋಧೋಕ್ತಿಗಳು ಒಂದು ಸಮಸ್ಯೆಯಾಗಿರುವುದಿಲ್ಲ. ಮಾಟಗಾರರಾಗಲು ಬಯಸುವವರಿಗಾಗಿರುವ ಒಂದು ಮಾರ್ಗದರ್ಶಿ ಪುಸ್ತಕವು ತಿಳಿಸುವುದು: “ವಿರೋಧೋಕ್ತಿಯಾಗಿರುವಂತೆ ಕಂಡುಬರುವ ಮಾಹಿತಿಯಿಂದ ನಿಮಗೆ ಯಾವುದನ್ನು ಸ್ವೀಕರಿಸುವುದು ಮತ್ತು ಯಾವುದನ್ನು ಬಿಡುವುದು ಎಂಬ ಸಮಸ್ಯೆ ಉಂಟಾಗುವಾಗ, ಈ ಮಾಹಿತಿಯನ್ನು ಪರೀಕ್ಷಿಸಿ, ಯಾವುದನ್ನು ಅನುಸರಿಸಬೇಕೆಂಬುದರ ಬಗ್ಗೆ ಒಂದು ನಿರ್ಣಯವನ್ನು ಮಾಡಿರಿ. ನಿಮ್ಮ ಅಂತಃಪ್ರಜ್ಞೆಯು ಏನ್ನನ್ನು ಹೇಳುತ್ತದೊ ಅದಕ್ಕೆ ಕಿವಿಗೊಡಿರಿ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಯಾವುದು ಸರಿಯಾದುದು ಎಂದು ಅನಿಸುತ್ತದೊ ಅದನ್ನು ನಿರ್ಣಯಿಸಲಿಕ್ಕಾಗಿ ಮುದ್ರಿಸಲ್ಪಟ್ಟಿರುವ ಸಂಸ್ಕಾರಗಳು ಮತ್ತು ಸಂಸ್ಕಾರಗಳ ಪಠ್ಯಪುಸ್ತಕಗಳಿಂದ ನಿಮಗೆ ಇಷ್ಟವಾದದ್ದನ್ನು ಆರಿಸಿಕೊಳ್ಳಲು ಹಿಂಜರಿಯಬೇಡಿರಿ.”

ಆದರೆ ಯಾರು ಸತ್ಯದ ಸ್ವರೂಪವನ್ನು ಗ್ರಹಿಸುತ್ತಾರೊ ಅವರಿಗೆ, ಅಂತಹ ವಿರೋಧೋಕ್ತಿಗಳು ಸಮಸ್ಯೆಯನ್ನೊಡ್ಡುತ್ತವೆ. ಸತ್ಯವು ವಾಸ್ತವವಾದದ್ದೂ ನೈಜವಾದದ್ದೂ ಆಗಿದೆ. ಕೆಲವು ವಿಷಯಗಳು ಸತ್ಯವಾಗಿವೆಯೆಂದು ಒಬ್ಬ ವ್ಯಕ್ತಿಯು ಕೇವಲ ಭಾವಿಸುವುದರಿಂದ ಅಥವಾ ನಿರೀಕ್ಷಿಸುವುದರಿಂದ ಅಥವಾ ನಂಬುವುದರಿಂದ ಅದು ಸತ್ಯವಾಗುವುದಿಲ್ಲ. ಉದಾಹರಣೆಗಾಗಿ, ಜೀವಂತವಾಗಿರುವ ಒಂದು ಕೋಳಿಯನ್ನು ಎರಡು ತುಂಡುಗಳಾಗಿ ಕತ್ತರಿಸಿ, ನ್ಯುಮೋನಿಯ ರೋಗಿಯ ಎದೆಯ ಮೇಲೆ ಇಡುವುದರಿಂದ ಅವನನ್ನು ಗುಣಪಡಿಸಬಹುದೆಂದು ಒಂದು ಸಮಯದಲ್ಲಿ ನೆನಸಲಾಗುತ್ತಿತ್ತು. ಇಂಥ ಚಿಕಿತ್ಸೆಯು ತಮ್ಮನ್ನು ಗುಣಪಡಿಸಬಲ್ಲದೆಂದು ಅನೇಕ ರೋಗಿಗಳು ನಿಜವಾಗಿಯೂ ನಂಬಿದರೆಂಬುದರಲ್ಲಿ ಸಂದೇಹವೇ ಇಲ್ಲ. ಆದರೆ, ಅವರು ನಂಬುತ್ತಿದ್ದ ಸಂಗತಿಗಳು ಮತ್ತು ನಿರೀಕ್ಷೆಗಳು ವಾಸ್ತವಾಂಶದೊಂದಿಗೆ ಹೊಂದಿಕೆಯಲ್ಲಿರಲಿಲ್ಲ. ಹಾಗೆ ಮಾಡುವುದು ನ್ಯುಮೋನಿಯ ರೋಗವನ್ನು ಗುಣಪಡಿಸುವುದಿಲ್ಲ. ಜನರು ಸತ್ಯವನ್ನು ಸೃಷ್ಟಿಸಲಾರರು, ಬದಲಾಗಿ ಅವರದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು ಅಷ್ಟೇ.

ಆತ್ಮಿಕ ವಿಷಯಗಳ ಕುರಿತಾದ ಸತ್ಯವು ಬೈಬಲಿನಲ್ಲಿದೆಯೆಂದು ಅದು ಸ್ವತಃ ಹೇಳಿಕೊಳ್ಳುತ್ತದೆ. ಭೂಮಿಯಲ್ಲಿದ್ದಾಗ ಯೇಸು ಕ್ರಿಸ್ತನು ಪ್ರಾರ್ಥನೆಮಾಡುತ್ತಾ ತನ್ನ ತಂದೆಗೆ ಹೇಳಿದ್ದು: “ನಿನ್ನ ವಾಕ್ಯವೇ ಸತ್ಯವು.” (ಯೋಹಾನ 17:17) ಅಪೊಸ್ತಲ ಪೌಲನು ಬರೆದುದು: “ಪ್ರತಿಯೊಂದು ಶಾಸ್ತ್ರವು ದೈವಪ್ರೇರಿತವಾಗಿದೆ.” (2 ತಿಮೊಥೆಯ 3:16, NW) ಆದರೆ ಮಾಟಮಾಡುವ ಅನೇಕರು ಇದನ್ನು ಒಪ್ಪಿಕೊಳ್ಳುವುದಿಲ್ಲ. ಅದಕ್ಕೆ ಬದಲಾಗಿ, ಅವರು ಸ್ಫೂರ್ತಿ ಮತ್ತು ಮಾರ್ಗದರ್ಶನಕ್ಕಾಗಿ, ಮಿಥಕಗಳಲ್ಲಿ, ಪುರಾತನ ಧರ್ಮಗಳಲ್ಲಿ, ಮತ್ತು ವಿಜ್ಞಾನದ ಕಾಲ್ಪನಿಕ ಕಥೆಗಳಲ್ಲಿ ಹುಡುಕುತ್ತಾರೆ. ಆದುದರಿಂದ, ಬೈಬಲ್‌ ಏನನ್ನು ಹೇಳುತ್ತದೆಂಬುದನ್ನು ಕಡಿಮೆಪಕ್ಷ ಪರಿಗಣಿಸಿ ನೋಡುವುದು ನ್ಯಾಯಬದ್ಧವಾಗಿರುವುದಿಲ್ಲವೊ? ಎಷ್ಟೆಂದರೂ, ಅದು ಬಹುಮಟ್ಟಿಗೆ ಇಡೀ ವಿಶ್ವದಲ್ಲಿ ಒಂದು ಪವಿತ್ರ ಗ್ರಂಥವಾಗಿ ಅಂಗೀಕರಿಸಲ್ಪಟ್ಟಿದೆಯಲ್ಲವೇ. ಇಂದಿನ ವರೆಗೂ ಉಳಿದಿರುವ ಅತಿ ಹಳೆಯ ಧಾರ್ಮಿಕ ಮೂಲಪಾಠಗಳಲ್ಲೂ ಅದು ಒಂದಾಗಿದೆ. ಬೈಬಲನ್ನು ಬರೆಯಲು ಸುಮಾರು 1,600 ವರ್ಷಗಳು ತಗಲಿದವಾದರೂ ಅದರ ಬೋಧನೆಗಳು ಸುಸಂಗತವಾಗಿವೆ. ಮಾಟವನ್ನು ಪ್ರವರ್ಧಿಸುವವರಿಂದ ಈಗ ವ್ಯಕ್ತಪಡಿಸಲ್ಪಡುವ ಕೆಲವೊಂದು ಸಾಮಾನ್ಯ ನಂಬಿಕೆಗಳನ್ನು ಬೈಬಲಿನ ಬೋಧನೆಗಳೊಂದಿಗೆ ನಾವು ಹೋಲಿಸಿ ನೋಡೋಣ.

ಆತ್ಮಜೀವಿಗಳ ಲೋಕದಲ್ಲಿ ಯಾರು ವಾಸಿಸುತ್ತಾರೆ?

ಆತ್ಮಿಕ ತಿಳುವಳಿಕೆಗಾಗಿರುವ ಅನ್ವೇಷಣೆಯಲ್ಲಿ ಒಂದು ಮೂಲಭೂತ ಪ್ರಶ್ನೆಯು, ಆತ್ಮಜೀವಿಗಳ ಲೋಕದಲ್ಲಿ ಯಾರು ವಾಸಿಸುತ್ತಾರೆ? ಎಂಬುದೇ ಆಗಿದೆ. ಆಧುನಿಕ ಮಾಟಗಾರರಲ್ಲಿ ಹೆಚ್ಚಿನವರು, ಪ್ರಕೃತಿ-ಸಂಬಂಧಿತ, ಬಹುದೇವತಾ ಧರ್ಮವನ್ನು ಅನುಸರಿಸುವವರಾಗಿರುವಾಗ, ಕೆಲವರು ಒಬ್ಬ ಮಹಾ ದೇವಿಯನ್ನು ಆರಾಧಿಸುತ್ತಾರೆ. ಅವಳನ್ನು ಜೀವಿತದ ಮೂಲಭೂತ ಹಂತಗಳನ್ನು ಪ್ರತಿನಿಧಿಸುವ ಕನ್ಯೆ, ತಾಯಿ ಮತ್ತು ಹಣ್ಣುಹಣ್ಣು ಮುದುಕಿಯಂತಹ ಮೂರು ಪಾತ್ರಗಳಲ್ಲಿ ವೀಕ್ಷಿಸಲಾಗುತ್ತದೆ. ಅವಳ ಪ್ರಿಯಕರನು, ಕೊಂಬುಗಳುಳ್ಳ ಒಬ್ಬ ದೇವನಾಗಿದ್ದಾನೆ. ಬೇರೆ ಮಾಟಗಾರರು, ಒಬ್ಬ ದೇವತೆ ಮತ್ತು ದೇವಿಯನ್ನು ಒಟ್ಟಿಗೆ ಆರಾಧಿಸುತ್ತಾರೆ. ಒಬ್ಬ ಲೇಖಕನು ಹೇಳುವುದು: “ಈ ದೇವಿದೇವತೆಯನ್ನು, ನಿಸರ್ಗದ ಸ್ತ್ರೀಶಕ್ತಿ ಮತ್ತು ಪುರುಷ ಶಕ್ತಿಗಳ ಸಾಕ್ಷಾತ್ಕಾರದೋಪಾದಿ ಪರಿಗಣಿಸಲಾಗುತ್ತದೆ. ಈ ಸ್ತ್ರೀಶಕ್ತಿ ಮತ್ತು ಪುರುಷ ಶಕ್ತಿಗಳಿಗೆ ತನ್ನದೇ ಆದ ಅಪೂರ್ವ ವೈಶಿಷ್ಟ್ಯಗಳಿವೆ. ಇವುಗಳು ಒಂದುಗೂಡಿಸಲ್ಪಟ್ಟಾಗ ಅವು ಜೀವಿತದ ಸುಸಂಗತವಾದ ಸೃಷ್ಟಿಯಲ್ಲಿ ಫಲಿಸುತ್ತವೆ.” ಇನ್ನೊಬ್ಬ ಅಧಿಕಾರಿಯು ಬರೆಯುವುದು: “ನೀವು ಯಾರೊಂದಿಗೆ ಒಟ್ಟುಗೂಡಿ ಕೆಲಸಮಾಡಲು ಬಯಸುತ್ತೀರೋ ಆ ದೇವತೆಗಳ (ದೇವಿ/ದೇವತೆಗಳು) ಆಯ್ಕೆಯು ಮಾಟದಲ್ಲಿ ಬಹು ಮುಖ್ಯವಾದ ಆಯ್ಕೆಯಾಗಿದೆ. . . . ಈ ಮಾಟವಿದ್ಯೆಯು, ನೀವು ನಿಮ್ಮ ಸ್ವಂತ ದೇವರ ರೂಪಗಳನ್ನು ಆರಿಸಿಕೊಂಡು, ಅವುಗಳನ್ನು ಸನ್ಮಾನಿಸುವ ಸ್ವಾತಂತ್ರ್ಯವನ್ನು ಕೊಡುತ್ತದೆ.”

ಈ ವಿಚಾರಗಳಲ್ಲಿ ಯಾವುದನ್ನೂ ಬೈಬಲ್‌ ಬೆಂಬಲಿಸುವುದಿಲ್ಲ. ಯೇಸು ಕ್ರಿಸ್ತನು ತನ್ನ ಇಡೀ ಶುಶ್ರೂಷೆಯ ಸಮಯವನ್ನು “ಒಬ್ಬನೇ ಸತ್ಯ ದೇವರಾಗಿರುವ” ಯೆಹೋವನ ಕುರಿತಾಗಿ ಕಲಿಸುವುದರಲ್ಲಿ ಕಳೆದನು. (ಯೋಹಾನ 17:3) ಬೈಬಲ್‌ ಹೇಳುವುದು: “ಯೆಹೋವನು ದೊಡ್ಡವನೂ ಬಹಳವಾಗಿ ಸ್ತುತ್ಯನೂ ಆಗಿದ್ದಾನೆ; ಎಲ್ಲಾ ದೇವತೆಗಳಲ್ಲಿ ಆತನೇ ಭಯಂಕರನು. ಜನಾಂಗಗಳ ದೇವತೆಗಳೆಲ್ಲಾ ಬೊಂಬೆಗಳೇ.”—1 ಪೂರ್ವಕಾಲವೃತ್ತಾಂತ 16:25, 26.

ಪಿಶಾಚನ ಕುರಿತೇನು? ವೆಬ್‌ಸ್ಟರ್ಸ್‌ ನೈನ್ತ್‌ ನ್ಯೂ ಕಾಲಿಜಿಯೆಟ್‌ ಡಿಕ್ಷನೆರಿಯು ಮಾಟವನ್ನು “ಪಿಶಾಚನೊಂದಿಗಿನ ಸಂವಾದ” ಎಂದು ಅರ್ಥವಿವರಣೆ ನೀಡುತ್ತದೆ. ಈ ಅರ್ಥವಿವರಣೆಯನ್ನು ಒಪ್ಪಿಕೊಳ್ಳುವ ಒಬ್ಬ ಮಾಟಗಾರನನ್ನು ಇಂದು ಕಂಡುಕೊಳ್ಳುವುದು ಕಷ್ಟ. ಯಾಕೆಂದರೆ ಅವರಲ್ಲಿ ಅನೇಕರು ಪಿಶಾಚನಾದ ಸೈತಾನನು ಅಸ್ತಿತ್ವದಲ್ಲಿದ್ದಾನೆಂಬುದನ್ನೇ ಅಂಗೀಕರಿಸುವುದಿಲ್ಲ. ದ ಐರಿಷ್‌ ಟೈಮ್ಸ್‌ ಎಂಬ ವಾರ್ತಾಪತ್ರಿಕೆಯಲ್ಲಿ, “ಉಚ್ಚ ಪದವಿಯ ಮಾಟಗಾತಿ ಮತ್ತು ಐರ್ಲೆಂಡಿನ ಅತಿ ಪ್ರಮುಖ ಮಾಂತ್ರಿಕ ಕೂಟಗಳ ನಾಯಕಿ” ಎಂದು ವರ್ಣಿಸಲ್ಪಟ್ಟಿರುವ ಒಬ್ಬ ಯುವ ಸ್ತ್ರೀ ಈ ರೀತಿಯಲ್ಲಿ ತರ್ಕಿಸುತ್ತಾಳೆ: “ಪಿಶಾಚನಲ್ಲಿ ನಂಬಿಕೆಯಿಡುವುದು ಕ್ರೈಸ್ತತ್ವವನ್ನು ಅಂಗೀಕರಿಸಿದಂತಾಗುತ್ತದೆ . . . ದೇವರೇ ಇಲ್ಲದಿರುವ ಒಂದು ವಿಶ್ವದಲ್ಲಿ [ಪಿಶಾಚನು] ಇರಲು ಸಾಧ್ಯವೇ ಇಲ್ಲ.”

ಪಿಶಾಚನು ಅಸ್ತಿತ್ವದಲ್ಲಿದ್ದಾನೆಂಬುದನ್ನು ಬೈಬಲು ದೃಢೀಕರಿಸುತ್ತದೆ ಮತ್ತು ಭೂಮಿಯ ಮೇಲಿರುವ ಹೆಚ್ಚಿನ ಕಷ್ಟಾನುಭವ ಮತ್ತು ಕ್ಷೋಭೆಗೆ ಅವನೇ ಕಾರಣನೆಂದು ಹೇಳುತ್ತದೆ. (ಪ್ರಕಟನೆ 12:12) ಪಿಶಾಚನು ಅಸ್ತಿತ್ವದಲ್ಲಿದ್ದಾನೆ ಎಂಬುದನ್ನು ಮಾತ್ರವಲ್ಲ, ನಮಗೆ ಅರಿವಿಲ್ಲದೇ ನಾವು ಪಿಶಾಚನ ಚಿತ್ತವನ್ನು ಮಾಡುತ್ತಿರುವ ಸಾಧ್ಯತೆಯಿದೆಯೆಂದೂ ಯೇಸು ಕಲಿಸಿದನು. ಉದಾಹರಣೆಗೆ, ಪ್ರಥಮ ಶತಮಾನದ ಸ್ವನೀತಿವಂತ ಧಾರ್ಮಿಕ ಮುಖಂಡರು, ತಾವು ದೇವರ ಪುತ್ರರಾಗಿದ್ದೇವೆಂದು ಹೇಳಿಕೊಳ್ಳುತ್ತಿದ್ದರು, ಮತ್ತು ತಾವು ದೇವರ ಚಿತ್ತವನ್ನು ಮಾಡುತ್ತಿದ್ದೇವೆಂದು ನೆನಸಿಕೊಳ್ಳುತ್ತಿದ್ದರು. ಅವರ ಹೃದಯಗಳಲ್ಲಿ ಏನಿದೆಯೆಂಬುದನ್ನು ಬಲ್ಲವನಾಗಿದ್ದ ಯೇಸು, ಇದು ನಿಜವಲ್ಲವೆಂಬುದನ್ನು ತಿಳಿದಿದ್ದನು. ಅವನು ಅವರಿಗೆ ನೇರವಾಗಿ ಹೇಳಿದ್ದು: “ಸೈತಾನನು ನಿಮ್ಮ ತಂದೆ; ನೀವು ಆ ತಂದೆಯಿಂದ ಹುಟ್ಟಿದವರಾಗಿದ್ದು ನಿಮ್ಮ ತಂದೆಯ ದುರಿಚ್ಛೆಗಳನ್ನೇ ನಡಿಸಬೇಕೆಂದಿದ್ದೀರಿ.” (ಯೋಹಾನ 8:44) ಅಷ್ಟುಮಾತ್ರವಲ್ಲದೆ, ಪಿಶಾಚನು “ಭೂಲೋಕದವರನ್ನೆಲ್ಲಾ ಮರುಳುಗೊಳಿಸು”ತ್ತಿದ್ದಾನೆಂದು ಬೈಬಲಿನ ಪ್ರಕಟನೆ ಪುಸ್ತಕವು ಹೇಳುತ್ತದೆ.—ಪ್ರಕಟನೆ 12:9.

ಕೆಲವೊಂದು ರೀತಿಯ ಮಾಟವಿದ್ಯೆಯು ಲಾಭಕರವೊ?

ಮಂತ್ರವಿದ್ಯೆಯನ್ನು ಯಾವಾಗಲೂ ಭೂತಾರಾಧನೆಯೊಂದಿಗೆ ಸಂಬಂಧಿಸಲಾಗಿದೆ. ಮಾಟಗಾತಿಯರು ಮಂತ್ರವಿದ್ಯೆಯನ್ನು ಇತರರಿಗೆ ಹಾನಿಯನ್ನು ಉಂಟುಮಾಡಲಿಕ್ಕಾಗಿಯೇ ಉಪಯೋಗಿಸುತ್ತಾರೆ ಎಂದು ಹಿಂದಿನ ಕಾಲದಲ್ಲಿ ಅನೇಕರು ನಂಬುತ್ತಿದ್ದರು ಮತ್ತು ಈಗಲೂ ನಂಬುತ್ತಾರೆ. ಮಂತ್ರವಿದ್ಯೆಯ ಮೂಲಕ ಮಾಟಗಾತಿಯರು ಇತರರಿಗೆ ಬಾಧೆಯನ್ನು ಮತ್ತು ಮರಣವನ್ನೂ ಬರಮಾಡುವಷ್ಟು ಶಕ್ತಿಯುಳ್ಳವರಾಗಿದ್ದಾರೆಂದು ಹೇಳಲಾಗುತ್ತದೆ. ಅಸ್ವಸ್ಥತೆ, ಮರಣ, ಮತ್ತು ಕೊಯ್ಲಿನ ನಷ್ಟಗಳನ್ನು ಒಳಗೂಡಿಸಿ, ಬಹುಮಟ್ಟಿಗೆ ಲೆಕ್ಕವಿಲ್ಲದಷ್ಟು ದುರ್ಘಟನೆಗಳಿಗೆ ಕಾರಣರಾಗಿದ್ದಾರೆಂದು ಸಾಮಾನ್ಯವಾಗಿ ಮಾಟಗಾರರನ್ನು ದೂಷಿಸಲಾಗಿದೆ.

ಇಂದಿನ ಮಾಟಗಾರರು ಇಂತಹ ಅಪವಾದಗಳನ್ನು ಖಡಾಖಂಡಿತವಾಗಿ ಅಲ್ಲಗಳೆಯುತ್ತಾರೆ. ಯಾವಾಗಲಾದರೊಮ್ಮೆ ಒಬ್ಬ ವಂಚಕ ಮಾಟಗಾರನು ಕೆಟ್ಟ ಕೆಲಸಗಳನ್ನು ಮಾಡುತ್ತಿರಬಹುದೆಂದು ಅವರು ಒಪ್ಪಿಕೊಳ್ಳುತ್ತಾರೆ. ಆದರೆ ಅದೇ ಸಮಯದಲ್ಲಿ ಅಧಿಕಾಂಶ ಮಾಟಗಾರರು ತಮ್ಮ ಮಂತ್ರವಿದ್ಯೆಯನ್ನು ಹಾನಿಯನ್ನಲ್ಲ ಬದಲಾಗಿ ಪ್ರಯೋಜನಗಳನ್ನು ತರಲಿಕ್ಕಾಗಿ ಉಪಯೋಗಿಸುತ್ತಾರೆಂದು ಅವರು ಹೇಳುತ್ತಾರೆ. ಯಾರು ಮಂತ್ರವಿದ್ಯೆಯನ್ನು ಉಪಯೋಗಿಸುತ್ತಾರೊ, ಸ್ವತಃ ಅವರೇ ಅದರ ಮೂರುಪಟ್ಟು ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ. ಆದುದರಿಂದ ಅವರು ಇತರರ ಮೇಲೆ ಶಾಪ ಹಾಕುವುದರಿಂದ ಅವರನ್ನು ತಡೆಗಟ್ಟುವ ಒಂದು ದೊಡ್ಡ ಕಾರಣ ಇದಾಗಿದೆಯೆಂದು ವಿಕನರು ಕಲಿಸುತ್ತಾರೆ. ಒಳ್ಳೇ ಕೆಲಸಕ್ಕಾಗಿ ಎಂದು ಹೇಳಲಾಗುವ ಮಂತ್ರವಿದ್ಯೆಯ ಕೆಲವು ಉದಾಹರಣೆಗಳಲ್ಲಿ ಇವು ಕೆಲವಾಗಿವೆ: ನಿಮ್ಮನ್ನು ಸಂರಕ್ಷಿಸಿಕೊಳ್ಳಲಿಕ್ಕಾಗಿ, ನಿಮ್ಮ ಮನೆಯಲ್ಲಿದ್ದ ಬಾಡಿಗೆದಾರರು ಬಿಟ್ಟುಹೋಗಿರುವ ಹಾನಿಕಾರಕ ಶಕ್ತಿಗಳನ್ನು ತೊಲಗಿಸಲಿಕ್ಕಾಗಿ, ಒಬ್ಬ ವ್ಯಕ್ತಿಯು ನಿಮ್ಮನ್ನು ಪ್ರೀತಿಸುವಂತೆ ಮಾಡಲಿಕ್ಕಾಗಿ, ಗುಣಪಡಿಸುವಿಕೆ ಮತ್ತು ಒಳ್ಳೇ ಆರೋಗ್ಯಕ್ಕಾಗಿ, ನಿಮ್ಮ ಉದ್ಯೋಗವನ್ನು ಕಳೆದುಕೊಳ್ಳದಿರುವಂತೆ ಮತ್ತು ಹಣವನ್ನು ಗಳಿಸಲಿಕ್ಕಾಗಿ ಮಂತ್ರಗಳು ಮುಂತಾದವುಗಳು. ಮಾಟಕ್ಕೆ ಇಷ್ಟೊಂದು ಶಕ್ತಿಯಿದೆಯೆಂದು ಹೇಳಲಾಗುವುದರಿಂದ, ಅದು ತುಂಬ ಜನಪ್ರಿಯವಾಗಿರುವುದು ಆಶ್ಚರ್ಯವನ್ನುಂಟುಮಾಡುವ ಸಂಗತಿಯೇನಾಗಿರುವುದಿಲ್ಲ.

ಆದರೆ ಒಳ್ಳೆಯ ಮಾಟ ಮತ್ತು ಕೆಟ್ಟ ಮಾಟ ಎಂಬ ಯಾವುದೇ ಭೇದ ಬೈಬಲಿನಲ್ಲಿಲ್ಲ. ಮೋಶೆಗೆ ಕೊಡಲ್ಪಟ್ಟಿರುವ ನಿಯಮಶಾಸ್ತ್ರದಲ್ಲಿ ದೇವರು ತನ್ನ ನಿಲುವನ್ನು ಸ್ಪಷ್ಟವಾಗಿ ತಿಳಿಸಿದನು. ಆತನಂದದ್ದು: “ಯಂತ್ರಮಂತ್ರಗಳನ್ನು ಮಾಡಬಾರದು.” (ಯಾಜಕಕಾಂಡ 19:26) ನಾವು ಹೀಗೂ ಓದುತ್ತೇವೆ: “ಯಂತ್ರಮಂತ್ರಗಳನ್ನು ಮಾಡುವವರು, ಮಾಟಗಾರರು, ತಂತ್ರಗಾರರು, ಸತ್ತವರನ್ನು ವಿಚಾರಿಸುವವರು, ಬೇತಾಳಕರು, ಪ್ರೇತಸಿದ್ಧರು ಇಂಥವರು ಯಾರೂ ನಿಮ್ಮಲ್ಲಿ ಇರಬಾರದು.”—ಧರ್ಮೋಪದೇಶಕಾಂಡ 18:10, 11.

ದೇವರು ಹೀಗೇಕೆ ಹೇಳಿದನು? ನಮಗೆ ಪ್ರಯೋಜನಕರವಾಗಿರುವಂಥದ್ದನ್ನು ಆತನು ನಮಗೆ ಕೊಡಲು ಬಯಸದಿರುವ ಕಾರಣದಿಂದಲ್ಲ. ಯೆಹೋವನು ತನ್ನ ಜನರನ್ನು ಪ್ರೀತಿಸಿದ್ದರಿಂದ, ಮತ್ತು ಅವರು ಭಯ ಹಾಗೂ ಮೂಢನಂಬಿಕೆಗೆ ದಾಸರಾಗಿರಬಾರದೆಂದು ಆತನು ಬಯಸಿದ್ದರಿಂದಲೇ ಆತನು ಈ ನಿಯಮಗಳನ್ನು ಕೊಟ್ಟನು. ಇದಕ್ಕೆ ಬದಲಾಗಿ, ತಮಗೆ ಅಗತ್ಯವಿರುವ ವಿಷಯಗಳನ್ನು ಪಡೆದುಕೊಳ್ಳಲಿಕ್ಕಾಗಿ ತನ್ನ ಬಳಿಗೆ ಬರುವಂತೆ ಆತನು ತನ್ನ ಸೇವಕರನ್ನು ಆಮಂತ್ರಿಸುತ್ತಾನೆ. ಆತನು ‘ಎಲ್ಲಾ ಒಳ್ಳೇ ದಾನಗಳ ಕುಂದಿಲ್ಲದ ಎಲ್ಲಾ ವರಗಳ’ ದಾತನಾಗಿದ್ದಾನೆ. (ಯಾಕೋಬ 1:17) ಅಪೊಸ್ತಲ ಯೋಹಾನನು ಜೊತೆ ವಿಶ್ವಾಸಿಗಳಿಗೆ ಈ ಆಶ್ವಾಸನೆಯನ್ನಿತ್ತನು: “ನಾವು ಆತನ ಆಜ್ಞೆಗಳನ್ನು ಕೈಕೊಂಡು ಆತನ ಎಣಿಕೆಯಲ್ಲಿ ಮೆಚ್ಚಿಕೆಯಾದ ಕಾರ್ಯಗಳನ್ನು ಮಾಡುವವರಾಗಿರುವದರಿಂದ ಏನು ಬೇಡಿಕೊಂಡರೂ ಆತನಿಂದ [ದೇವರಿಂದ] ಹೊಂದುವೆವು.”—1 ಯೋಹಾನ 3:22.

ದುರಾತ್ಮಗಳ ಕುರಿತೇನು?

ಅನೇಕ ಮಾಟಗಾರರು ಈ ವಿಷಯದ ಕುರಿತು ಬೈಬಲು ಏನು ಹೇಳುತ್ತದೋ ಅದನ್ನು ಒಪ್ಪಿಕೊಳ್ಳುತ್ತಾರೆ. ಅದೇನೆಂದರೆ, ದುರಾತ್ಮಗಳು ನಿಜವಾಗಿಯೂ ಅಸ್ತಿತ್ವದಲ್ಲಿವೆ. ಮಾಟಮಂತ್ರಗಳ ಪ್ರವರ್ತಕನೊಬ್ಬನು ಒಂದು ಪ್ರಬಂಧದಲ್ಲಿ ಎಚ್ಚರಿಸುವುದು: “ಪ್ರೇತಗಳಿವೆ: ಅವು ಜೀವಂತ ಸೃಷ್ಟಿಜೀವಿಗಳಿಂದ ತುಂಬಿರುವ ನಮ್ಮ ಜಗತ್ತಿನಂತಹದ್ದೇ ಒಂದು ಅದೃಶ್ಯ ಜಗತ್ತಿನಲ್ಲಿ ಜೀವಿಸುತ್ತವೆ. . . . ‘ಚಿಕ್ಕ ದೆವ್ವ,’ ‘ದುರಾತ್ಮ’ ಮತ್ತು ‘ದೆವ್ವ’ದಂತಹ ಪದಗಳು ಪೂರ್ತಿಯಾಗಿ ನಿಷ್ಕೃಷ್ಟವಾಗಿವೆ. ಅವು ತುಂಬ ಶಕ್ತಿಶಾಲಿಯಾಗಿವೆ. . . . ಅತಿ ಬುದ್ಧಿವಂತ ಜಾತಿ . . . (ಯಾರಾದರೂ ಅವುಗಳಿಗೆ ಪ್ರವೇಶಿಸಲು ಅನುಮತಿಸಿದರೆ ಸಾಕು) ನಮ್ಮ ಜಗತ್ತನ್ನು ಪ್ರವೇಶಿಸಲು ಸಮರ್ಥವಾಗಿವೆ. . . . ಅವು ನಿಮ್ಮ ದೇಹವನ್ನು ಪ್ರವೇಶಿಸಬಲ್ಲವು . . . , ನಿಮ್ಮ ಮೇಲೆ ಒಂದಿಷ್ಟು ನಿಯಂತ್ರಣವನ್ನೂ ಚಲಾಯಿಸಬಲ್ಲವು. ಹೌದು, ಇದು ಭೂತಚೇಷ್ಟೆಯ ಪ್ರಾಚೀನ ಕತೆಗಳಲ್ಲಿರುವಂತೆಯೇ ಇದೆ.”

ಬೈಬಲ್‌ ಸಮಯಗಳಲ್ಲಿ ದೆವ್ವಹಿಡಿಯುವಿಕೆಯಿಂದ ಜನರು ನಾನಾ ರೀತಿಗಳಲ್ಲಿ ಬಾಧಿಸಲ್ಪಟ್ಟರು. ಕೆಲವರು ಮಾತಾಡಲು ಅಶಕ್ತರಾಗಿದ್ದರು, ಕೆಲವರು ಕುರುಡರಾಗಿದ್ದರು, ಕೆಲವರು ಹುಚ್ಚರಂತೆ ವರ್ತಿಸುತ್ತಿದ್ದರು, ಮತ್ತು ಕೆಲವರಲ್ಲಿ ಅತಿಮಾನುಷ ಶಕ್ತಿಯಿರುತ್ತಿತ್ತು. (ಮತ್ತಾಯ 9:32; 12:22; 17:15, 18; ಮಾರ್ಕ 5:2-5; ಲೂಕ 8:29; 9:42; 11:14; ಅ. ಕೃತ್ಯಗಳು 19:16) ಕೆಲವೊಮ್ಮೆ ಒಂದೇ ಸಮಯದಲ್ಲಿ ಅನೇಕ ದೆವ್ವಗಳು ಒಬ್ಬ ವ್ಯಕ್ತಿಯನ್ನು ಹಿಡಿದುಕೊಂಡಾಗ ಅವನ ಸಂಕಟವು ಹೇಳತೀರದ್ದಾಗಿರುತ್ತಿತ್ತು. (ಲೂಕ 8:2, 30) ಆದುದರಿಂದ, ಮಾಟ ಮತ್ತು ಇನ್ನಿತರ ಯಕ್ಷಿಣಿ ವಿದ್ಯೆಗಳಿಂದ ದೂರವಿರುವಂತೆ ಯೆಹೋವನು ಜನರಿಗೆ ಎಚ್ಚರಿಕೆಯನ್ನು ನೀಡಲು ನಿಜವಾಗಿಯೂ ಸಕಾರಣವಿದೆ.

ಸತ್ಯಾಧಾರಿತ ಧರ್ಮ

ಮಾಟವು ಹಾನಿರಹಿತ, ಸೌಮ್ಯವಾದ, ಪ್ರಕೃತಿ ಧರ್ಮದಂತೆ ತೋರುವುದರಿಂದ, ಅನೇಕರು ಅದರೆಡೆಗೆ ಆಕರ್ಷಿತರಾಗಿದ್ದಾರೆ. ಕೆಲವೊಂದು ಸಮುದಾಯಗಳಲ್ಲಿ ಅದು ಅಂಗೀಕೃತವಾಗಿಬಿಟ್ಟಿದೆ. ಅದರ ಕುರಿತಾಗಿ ಯಾವುದೇ ಭಯವಿಲ್ಲ. ಬಹುಮಟ್ಟಿಗೆ ಅದು ಒಂದು ಸರ್ವಸಾಧಾರಣವಾದ ಸಂಗತಿಯಾಗಿದೆ. ಎಲ್ಲಿ ಧಾರ್ಮಿಕ ಸಹಿಷ್ಣುತೆಯು ಅನೇಕರು ಅತಿ ವಿಚಿತ್ರವಾದ ಸಂಗತಿಯನ್ನೂ ಸ್ವೀಕರಿಸುವಂತೆ ಮಾಡುತ್ತದೊ ಅಂತಹ ಪರಿಸರದಲ್ಲಿ ಮಾಟವು ತುಂಬ ಮಾನ್ಯತೆಯನ್ನು ಪಡೆದಿದೆ.

ಹೌದು, ಧರ್ಮಗಳ ಜಗತ್ತು ಒಂದು ದೊಡ್ಡ ಮಾರುಕಟ್ಟೆಯಂತಾಗಿಬಿಟ್ಟಿರುವುದರಿಂದ, ಜನರು ಒಂದು ಜೋಡಿ ಶೂಗಳನ್ನು ಆರಿಸಿಕೊಂಡು ಖರೀದಿಸುವಂತೆಯೇ, ತಮ್ಮ ಅಗತ್ಯಗಳಿಗೆ ಹೊಂದಿಕೊಳ್ಳುವಂತಹ ಒಂದು ಧರ್ಮವನ್ನು ಆರಿಸಿಕೊಳ್ಳಲು ಸ್ವತಂತ್ರರಾಗಿದ್ದಾರೆ. ಆದರೆ ಯೇಸು ಕೇವಲ ಎರಡು ಆಯ್ಕೆಗಳ ಕುರಿತಾಗಿ ಮಾತಾಡಿದನು. ಅವನಂದದ್ದು: “ಇಕ್ಕಟ್ಟಾದ ಬಾಗಲಿನಿಂದ ಒಳಕ್ಕೆ ಹೋಗಿರಿ. ನಾಶಕ್ಕೆ ಹೋಗುವ ಬಾಗಲು ದೊಡ್ಡದು, ದಾರಿ ಅಗಲವು; ಅದರಲ್ಲಿ ಹೋಗುವವರು ಬಹು ಜನ. ನಿತ್ಯಜೀವಕ್ಕೆ ಹೋಗುವ ಬಾಗಲು ಇಕ್ಕಟ್ಟು, ದಾರಿ ಬಿಕ್ಕಟ್ಟು; ಅದನ್ನು ಕಂಡುಹಿಡಿಯುವವರು ಸ್ವಲ್ಪ ಜನ.” (ಮತ್ತಾಯ 7:13, 14) ಸಹಜವಾಗಿಯೇ, ನಮಗೆ ಬೇಕಾದಂತಹ ಮಾರ್ಗವನ್ನು ಆರಿಸಿಕೊಳ್ಳಲು ನಾವು ಸ್ವತಂತ್ರರಾಗಿದ್ದೇವೆ. ಆದರೆ ನಮ್ಮ ನಿತ್ಯ ಕ್ಷೇಮವು ನಾವು ಯಾವ ಆಯ್ಕೆಯನ್ನು ಮಾಡುತ್ತೇವೊ ಅದರ ಮೇಲೆ ಅವಲಂಬಿಸಿರುವುದರಿಂದ, ನಾವು ಮಾಡುವಂತಹ ಆಯ್ಕೆಯು ಮಹತ್ವಪೂರ್ಣವಾಗಿದೆ. ಆತ್ಮಿಕ ಜ್ಞಾನೋದಯಕ್ಕಾಗಿ, ನಾವು ಸತ್ಯದ ಮಾರ್ಗವನ್ನು ಬೆನ್ನಟ್ಟಬೇಕು. ಮತ್ತು ಈ ಮಾರ್ಗವನ್ನು ಕೇವಲ ದೇವರ ವಾಕ್ಯವಾದ ಬೈಬಲಿನಲ್ಲಿ ಮಾತ್ರ ಕಂಡುಕೊಳ್ಳಸಾಧ್ಯವಿದೆ.

[ಪುಟ 5ರಲ್ಲಿರುವ ಚಿತ್ರ]

ಇಂದು ಅನೇಕರು ಮಾಟವನ್ನು ಒಂದು ಹಾನಿರಹಿತ ಪ್ರಕೃತಿ ಧರ್ಮವೆಂಬಂತೆ ವೀಕ್ಷಿಸುತ್ತಾರೆ

[ಪುಟ 6ರಲ್ಲಿರುವ ಚಿತ್ರ]

ಮಂತ್ರವಿದ್ಯೆಯನ್ನು ಯಾವಾಗಲೂ ಭೂತಾರಾಧನೆಯೊಂದಿಗೆ ಸಂಬಂಧಿಸಲಾಗಿದೆ

[ಪುಟ 6ರಲ್ಲಿರುವ ಚಿತ್ರ]

ಮಾಟಮಾಡುವವರು ತಮಗರಿವಿಲ್ಲದೆಯೇ ಪಿಶಾಚನ ಚಿತ್ತವನ್ನು ನೆರವೇರಿಸುತ್ತಿರಬಹುದೊ?

[ಪುಟ 7ರಲ್ಲಿರುವ ಚಿತ್ರಗಳು]

ಬೈಬಲು ಸತ್ಯದ ಮಾರ್ಗವನ್ನು ಪ್ರಕಟಪಡಿಸುತ್ತದೆ