ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಈಜಿಯನ್‌ ಸಮುದ್ರದಲ್ಲಿ ಮನುಷ್ಯರನ್ನು ಹಿಡಿಯುವುದು

ಈಜಿಯನ್‌ ಸಮುದ್ರದಲ್ಲಿ ಮನುಷ್ಯರನ್ನು ಹಿಡಿಯುವುದು

ಈಜಿಯನ್‌ ಸಮುದ್ರದಲ್ಲಿ ಮನುಷ್ಯರನ್ನು ಹಿಡಿಯುವುದು

ಈಜಿಯನ್‌ ಸಮುದ್ರವು, ಪೂರ್ವದಿಕ್ಕಿನಲ್ಲಿ ಮೆಡಿಟರೇನಿಯನ್‌ ಸಮುದ್ರದ ಒಂದು ದೊಡ್ಡ ಭಾಗವನ್ನು ಆವರಿಸುತ್ತದೆ. ಅದರ ಉತ್ತರ ಮತ್ತು ಪಶ್ಚಿಮದಿಕ್ಕಿನಲ್ಲಿ ಗ್ರೀಸ್‌ ದೇಶದ ಮುಖ್ಯ ಭೂಭಾಗವಿದೆ, ದಕ್ಷಿಣಕ್ಕೆ ಕ್ರೀಟ್‌ ದ್ವೀಪವಿದೆ ಮತ್ತು ಪೂರ್ವದಿಕ್ಕಿನಲ್ಲಿ ಟರ್ಕಿ ದೇಶವಿದೆ. ಅದು ಕೆಲವೊಂದು ಪುರಾತನಕಾಲದ ಪ್ರಸಿದ್ಧ ನಾಗರಿಕತೆಗಳ ತೊಟ್ಟಿಲಾಗಿದೆ. ಈಜಿಯನ್‌ ಸಮುದ್ರದಲ್ಲೆಲ್ಲಾ ದ್ವೀಪಗಳು ಮತ್ತು ಉಪದ್ವೀಪಗಳು ಚುಕ್ಕೆಚುಕ್ಕೆಯಂತೆ ಹರಡಿಕೊಂಡಿವೆ. ಆ ದ್ವೀಪಗಳ ಏರುಪೇರುಗಳುಳ್ಳ ಪ್ರದೇಶಗಳಲ್ಲಿ ಸೂರ್ಯನ ಬೆಳಕಿನಲ್ಲಿ ಹೊಳೆಯುತ್ತಿರುವ ಪುಟ್ಟ, ಬಿಳೀ ಮನೆಗಳು ಅಲ್ಲಿಲ್ಲಿ ಚದರಿಕೊಂಡಿವೆ. ಇದರಿಂದ ಪ್ರೇರಿತನಾಗಿ ಒಬ್ಬ ಕವಿ ಆ ದ್ವೀಪಗಳನ್ನು “ಹುಲುಸಾದ ಕೇಸರವುಳ್ಳ ಕಲ್ಲಿನ ಕುದುರೆಗಳಿಗೆ” ಹೋಲಿಸಿದನು.

ಆದುದರಿಂದ ಈ ದ್ವೀಪಗಳು ಜಗತ್ತಿನ ಅತಿ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿಬಿಟ್ಟಿರುವುದು ಆಶ್ಚರ್ಯಗೊಳಿಸುವ ಸಂಗತಿಯಲ್ಲ. ಅಲ್ಲಿ ವಾಸಿಸುತ್ತಿದ್ದು ಕೆಲಸಮಾಡುತ್ತಿರುವ ಸ್ತ್ರೀಪುರುಷರ ಅತ್ಯುತ್ಕೃಷ್ಟ ಗುಣಗಳು ಆ ದ್ವೀಪಗಳ ನೈಸರ್ಗಿಕ ಸೌಂದರ್ಯವನ್ನು ಹೆಚ್ಚಿಸುತ್ತವೆ. ಇಲ್ಲಿನ ಜನರು ವ್ಯಾವಹಾರಿಕ ಬುದ್ಧಿಯುಳ್ಳವರು ಮತ್ತು ಅತಿಥಿ ಸತ್ಕಾರಭಾವದವರಾಗಿದ್ದರೂ ಸ್ವಾವಲಂಬಿಗಳಾಗಿದ್ದಾರೆ ಮತ್ತು ಆ ಪ್ರದೇಶದ ಅಪೂರ್ವತೆಗೆ ವಿಶೇಷ ಕಳೆಯನ್ನು ಕೂಡಿಸುತ್ತಾರೆ.

ದ್ವೀಪನಿವಾಸಿಗಳಲ್ಲಿ ಅನೇಕರು ಈಜಿಯನ್‌ ಸಮುದ್ರದಲ್ಲಿ ಮೀನು ಹಿಡಿಯುವ ಮೂಲಕ ತಮ್ಮ ಜೀವನವನ್ನು ಸಾಗಿಸುತ್ತಾರೆ. ಆದರೆ ಆ ಪ್ರದೇಶದಲ್ಲಿ ನಡೆಯುತ್ತಿರುವ ಇನ್ನೊಂದು ರೀತಿಯ ಪ್ರಮುಖ ‘ಮೀನು ಹಿಡಿಯುವಿಕೆಯು’ ಪುಷ್ಕಳ ಪರಿಣಾಮಗಳನ್ನು ತರುತ್ತಿದೆ. ‘ಮನುಷ್ಯರನ್ನು ಹಿಡಿಯುವ ಬೆಸ್ತರು’ ಅಂದರೆ ದೇವರ ರಾಜ್ಯದ ಸುವಾರ್ತೆಯನ್ನು ಸಾರುವವರು, ಈಜಿಯನ್‌ ದ್ವೀಪಗಳಲ್ಲೆಲ್ಲ ಸಂಚರಿಸುತ್ತಾ ಜನರನ್ನು ಕ್ರೈಸ್ತ ಶಿಷ್ಯರನ್ನಾಗಿ ಮಾಡುತ್ತಿದ್ದಾರೆ.—ಮತ್ತಾಯ 4:18, 19; ಲೂಕ 5:10.

ಸುಮಾರು 19 ಶತಮಾನಗಳ ಹಿಂದೆ, ಕ್ರೈಸ್ತ ಸೌವಾರ್ತಿಕರು ಈಜಿಯನ್‌ ಸಮುದ್ರದಲ್ಲಿದ್ದ ದ್ವೀಪಗಳಿಗೆ ಭೇಟಿಯನ್ನಿತ್ತರು. ಸುಮಾರು ಸಾ.ಶ. 56ರಲ್ಲಿ ಅಪೊಸ್ತಲ ಪೌಲನು ತನ್ನ ಮೂರನೆಯ ಮಿಷನೆರಿ ಸಂಚಾರದಿಂದ ಹಿಂದಿರುಗುತ್ತಿದ್ದಾಗ, ಲೆಸ್ವೊಸ್‌, ಖೀಯೊಸ್‌, ಸಾಮೊಸ್‌, ಕೋಸ್‌ ಮತ್ತು ರೋದ ಎಂಬ ದ್ವೀಪಗಳಲ್ಲಿ ಸ್ವಲ್ಪ ಸಮಯವನ್ನು ಕಳೆದಿದ್ದನು. ಯಾವಾಗಲೂ ಒಬ್ಬ ಹುರುಪಿನ ಸೌವಾರ್ತಿಕನಾಗಿದ್ದ ಪೌಲನು, ಕೆಲವು ದ್ವೀಪನಿವಾಸಿಗಳಿಗೆ ಖಂಡಿತವಾಗಿಯೂ ಸುವಾರ್ತೆಯನ್ನು ಸಾರಿದ್ದಿರಬಹುದು. (ಅ. ಕೃತ್ಯಗಳು 20:14, 15, 24; 21:1, 2) ರೋಮ್‌ನಲ್ಲಿ ಎರಡು ವರ್ಷಗಳಷ್ಟು ಸಮಯವನ್ನು ಸೆರೆಮನೆಯಲ್ಲಿ ಕಳೆದ ನಂತರ, ಅವನು ಕ್ರೀಟ್‌ ದ್ವೀಪವನ್ನು ಸಂದರ್ಶಿಸಿ, ಅಲ್ಲಿ ಕ್ರೈಸ್ತ ಚಟುವಟಿಕೆಯಲ್ಲಿ ಒಳಗೂಡಿದ್ದಿರಬಹುದು. ಪ್ರಥಮ ಶತಮಾನವು ಅಂತ್ಯಗೊಳ್ಳುತ್ತಿದ್ದಂತೆ, ಅಪೊಸ್ತಲ ಯೋಹಾನನು “ದೇವರ ವಾಕ್ಯಕ್ಕೋಸ್ಕರವೂ ಯೇಸುವಿನ ವಿಷಯವಾದ ಸಾಕ್ಷಿಗೋಸ್ಕರವೂ” ಪತ್ಮೋಸ್‌ ದ್ವೀಪಕ್ಕೆ ಗಡೀಪಾರುಮಾಡಲ್ಪಟ್ಟನು. (ಪ್ರಕಟನೆ 1:9) ಆಧುನಿಕ ಸಮಯದಲ್ಲಿ ಈ ದ್ವೀಪಗಳಲ್ಲಿ ಸುವಾರ್ತೆಯನ್ನು ಘೋಷಿಸುವವರ ಕೆಲಸವು ಹೇಗೆ ಮುಂದೆ ಸಾಗುತ್ತಿದೆ?

ಸಾರುವಿಕೆಯ ಪ್ರತಿಫಲದಾಯಕ ಕಾರ್ಯಾಚರಣೆಗಳು

ಈ ದ್ವೀಪಗಳಲ್ಲಿ ಸಾರುವುದು ಕಷ್ಟಕರವಾಗಿದೆ ಮಾತ್ರವಲ್ಲ, ಅದು ತುಂಬ ಸಮಯ ಮತ್ತು ಶಕ್ತಿಯನ್ನು ಕೇಳಿಕೊಳ್ಳುತ್ತದೆ. ಬಹಳಷ್ಟು ಪ್ರಯತ್ನ ಮತ್ತು ಸ್ವತ್ಯಾಗವೂ ಅತ್ಯಾವಶ್ಯಕ. ಕೆಲವೊಂದು ದ್ವೀಪಗಳು ದೂರದೂರದಲ್ಲಿವೆ. ಸಮುದ್ರಸಂಚಾರ ಅಥವಾ ವಿಮಾನಯಾನ ವ್ಯವಸ್ಥೆಗೆ ಯಾವುದೇ ನಿಗದಿತ ಸಮಯವಿಲ್ಲದಿರುವುದರಿಂದ ಅದು ಕೆಲವರಿಗೆ ಮಾತ್ರ ಲಭ್ಯವಿದೆ ಮತ್ತು ಇನ್ನಿತರರಿಗೆ ಅದೂ ಇಲ್ಲ. ವಿಶೇಷವಾಗಿ ಚಳಿಗಾಲದಲ್ಲಂತೂ ಇದು ಸತ್ಯ. ಕಾಲಕಾಲಕ್ಕನುಸಾರ, ನಿರ್ದಿಷ್ಟವಾಗಿ ಮೆಲ್ಟೇಮಾಯಾ, ಅಂದರೆ ಬಿರುಸಿನ ಉತ್ತರದ ಗಾಳಿ ಬೀಸುವಾಗ ಸಮುದ್ರವು ಅಲ್ಲೋಲಕಲ್ಲೋಲವಾಗುತ್ತದೆ. ಅಷ್ಟುಮಾತ್ರವಲ್ಲದೆ, ಹೆಚ್ಚಿನ ದ್ವೀಪಗಳಲ್ಲಿರುವ ಹಳ್ಳಿಗಳು ತುಂಬ ದೂರದಲ್ಲಿದ್ದು, ಅವುಗಳನ್ನು ತಲಪುವುದು ಕಷ್ಟವಾಗಿರುತ್ತದೆ, ಯಾಕೆಂದರೆ ಅಲ್ಲಿನ ಧೂಳು ತುಂಬಿದ ಮತ್ತು ನೆಲಗಟ್ಟು ಮಾಡಲ್ಪಟ್ಟಿರದ ರಸ್ತೆಗಳಲ್ಲಿ ಹಾದುಹೋಗುವುದು ಅನೇಕವೇಳೆ ಅಸಾಧ್ಯವಾಗಿದೆ. ಕೆಲವೊಂದು ಹಳ್ಳಿಗಳನ್ನು ಕೇವಲ ಚಿಕ್ಕ ದೋಣಿಗಳಲ್ಲಿ ಹೋಗುವ ಮೂಲಕ ತಲಪಬಹುದು.

ಉದಾಹರಣೆಗಾಗಿ, ಇಕಾರಿಯಾ ಎಂಬ ದ್ವೀಪವನ್ನು ತೆಗೆದುಕೊಳ್ಳಿ. ಅಲ್ಲಿರುವ ಒಂದು ಚಿಕ್ಕ ಸಭೆಯಲ್ಲಿ 11 ಮಂದಿ ಪ್ರಚಾರಕರು ಇದ್ದಾರೆ. ಆ ದ್ವೀಪದಲ್ಲಿ ಮತ್ತು ಹತ್ತಿರದ ಉಪದ್ವೀಪಗಳಲ್ಲಿರುವ ಎಲ್ಲ ಹಳ್ಳಿಗಳಲ್ಲಿ ಸಾರುವುದು ಇವರಿಗೆ ಸಾಧ್ಯವಾಗುವುದಿಲ್ಲ. ಆದುದರಿಂದ, ಇಕಾರಿಯಾ ದ್ವೀಪದಲ್ಲಿ ಹಾಗೂ ಫ್ಯೂರ್ನಿ, ಪತ್ಮೋಸ್‌, ಮತ್ತು ಲಿಪ್ಸೋಸ್‌ ದ್ವೀಪಗಳಲ್ಲಿರುವ ಜನರಿಗೆ ಸಾರುವುದರಲ್ಲಿ ಸಹಾಯಮಾಡಲು ಸಾಮೊಸ್‌ ದ್ವೀಪದಿಂದ ಸಹೋದರ ಸಹೋದರಿಯರು ಬರುತ್ತಾರೆ. ಇತ್ತೀಚೆಗೆ ಅವರು ನಡೆಸಿದ ಎರಡು ದಿನಗಳ ಸಾರುವ ಕಾರ್ಯಾಚರಣೆಯಲ್ಲಿ, ಸಾಕ್ಷಿಗಳು ಬೈಬಲ್‌ ವಿಷಯಗಳ ಕುರಿತಾದ 650 ಪತ್ರಿಕೆಗಳು, 99 ಬ್ರೋಷರುಗಳು, ಮತ್ತು 25 ಪುಸ್ತಕಗಳನ್ನು ನೀಡಲು ಶಕ್ತರಾದರು! ಯೆಹೋವನು ಯಾರೆಂಬುದರ ಕುರಿತು ಏನೂ ತಿಳಿದಿರದ ಮತ್ತು ತಾವು ಅಲ್ಲಿಯೇ ಇದ್ದು ಬೈಬಲಿನಿಂದ ಹೆಚ್ಚು ವಿಷಯಗಳನ್ನು ಕಲಿಸುವಂತೆ ದೈನ್ಯದಿಂದ ಬೇಡುತ್ತಿದ್ದ ಜನರನ್ನು ಭೇಟಿಯಾದಾಗ, ಆ ಸಹೋದರ ಸಹೋದರಿಯರಿಗೆ ಆಶ್ಚರ್ಯವಾಯಿತು. ಒಬ್ಬ ಮಹಿಳೆಯು, ಸಾಕ್ಷಿಯೊಬ್ಬರಿಗೆ ಹೇಳಿದ್ದು: “ನೀವೇನೋ ಇಲ್ಲಿಂದ ಹೋಗಿಬಿಡುತ್ತೀರಿ. ಆದರೆ ಬೈಬಲಿನ ಬಗ್ಗೆ ನನಗೆ ಇನ್ನೂ ಅನೇಕ ಪ್ರಶ್ನೆಗಳಿವೆ. ನನಗೆ ಯಾರು ಸಹಾಯಮಾಡುವರು?” ಟೆಲಿಫೋನಿನ ಮೂಲಕ ತಾನು ಆ ಚರ್ಚೆಯನ್ನು ಮುಂದುವರಿಸುವೆನೆಂದು ಆ ಕ್ರೈಸ್ತ ಸಹೋದರಿ ಮಾತುಕೊಟ್ಟರು ಮತ್ತು ಈ ರೀತಿಯಲ್ಲಿ ಅವರು ಒಂದು ಬೈಬಲ್‌ ಅಭ್ಯಾಸವನ್ನು ಆರಂಭಿಸಿದರು.

ಒಬ್ಬ ಸಂಚರಣ ಮೇಲ್ವಿಚಾರಕರು ಇಕಾರಿಯಾ ದ್ವೀಪವನ್ನು ಸಂದರ್ಶಿಸಿದಾಗ, ಆ ಇಡೀ ದ್ವೀಪವನ್ನು ಒಂದೇ ವಾರಾಂತ್ಯದೊಳಗೆ ಆವರಿಸಲು ಏರ್ಪಾಡುಗಳನ್ನು ಮಾಡಿದರು. ಇದಕ್ಕಾಗಿ ಅವರು ಸಾಮೊಸ್‌ ದ್ವೀಪದಿಂದ ಸುಮಾರು 30 ರಾಜ್ಯ ಪ್ರಚಾರಕರ ಸಹಾಯವನ್ನು ಕೇಳಿಕೊಂಡರು. ಎರಡು ರಾತ್ರಿ ಹೋಟೇಲಿನಲ್ಲಿ ಉಳಿಯಲು ಮತ್ತು ಕಾರುಗಳನ್ನು ಹಾಗೂ ನಾಲ್ಕು ಚಕ್ರ ವಾಹನಗಳನ್ನು ಬಾಡಿಗೆಗೆ ತೆಗೆದುಕೊಳ್ಳಲಿಕ್ಕಾಗಿ ಸಂದರ್ಶಿಸುತ್ತಿದ್ದ ಸಹೋದರರೇ ಹಣವನ್ನು ತೆರಬೇಕಾಗಿತ್ತು. ಎರಡು ದಿನಗಳ ವರೆಗೆ ಭಾರೀ ಮಳೆಯಿತ್ತು, ಮತ್ತು ಆ ವಾರಾಂತ್ಯದ ಕುರಿತಾದ ಹವಾಮಾನ ಮುನ್ಸೂಚನೆಯು ಅಷ್ಟೇನೂ ಒಳ್ಳೇದಿರಲಿಲ್ಲ. ಆದರೆ ಇದು ತಮ್ಮನ್ನು ತಡೆಯುವಂತೆ ಸಹೋದರರು ಬಿಡಲಿಲ್ಲ. ಅವರು ಪ್ರಸಂಗಿ 11:4ರ ಮಾತುಗಳನ್ನು ಜ್ಞಾಪಕಕ್ಕೆ ತಂದರು: “ಗಾಳಿಯನ್ನು ನೋಡುತ್ತಲೇ ಇರುವವನು ಬೀಜಬಿತ್ತನು; ಮೋಡಗಳನ್ನು ಗಮನಿಸುತ್ತಲೇ ಇರುವವನು ಪೈರು ಕೊಯ್ಯನು.” ಕಟ್ಟಕಡೆಗೆ, ಹವಾಮಾನದಲ್ಲಿ ಸ್ವಲ್ಪ ಸುಧಾರಣೆಯಾಯಿತು ಮತ್ತು ಸಹೋದರರು ಇಡೀ ದ್ವೀಪದಲ್ಲಿ ತಮ್ಮ ಮಹತ್ವಪೂರ್ಣ ಸಂದೇಶವನ್ನು ಹಬ್ಬಿಸಿ, ಸಂತೋಷದಿಂದ ಮತ್ತು ತೃಪ್ತಿಯ ಭಾವನೆಯೊಂದಿಗೆ ಮನೆಗೆ ಹಿಂದಿರುಗಿದರು.

ಆ್ಯಂಡ್ರೊಸ್‌ ದ್ವೀಪದಲ್ಲಿರುವ 16 ಮಂದಿ ಪ್ರಚಾರಕರು, ಆ ಇಡೀ ದ್ವೀಪದಲ್ಲಿ ಸುವಾರ್ತೆಯನ್ನು ಹಬ್ಬಿಸಲು ತುಂಬ ಪರಿಶ್ರಮಪಟ್ಟರು. ಇಬ್ಬರು ಸಹೋದರರು ತುಂಬ ದೂರದಲ್ಲಿದ್ದ ಒಂದು ಹಳ್ಳಿಯನ್ನು ತಲಪಿದಾಗ, ಅಲ್ಲಿದ್ದ ಎಲ್ಲಾ ನಿವಾಸಿಗಳಿಗೂ ಸಾರಬೇಕೆಂಬ ದೃಢಸಂಕಲ್ಪವನ್ನು ಮಾಡಿದರು. ಅವರು ಜನರೊಂದಿಗೆ ಮನೆಗಳಲ್ಲಿ, ಬೀದಿಗಳಲ್ಲಿ ಮತ್ತು ಹೊಲಗಳಲ್ಲಿ ಮಾತಾಡಿದರು. ಪೋಲಿಸ್‌ ಠಾಣೆಗೆ ಭೇಟಿನೀಡಿ ಅಲ್ಲಿಯೂ ಸಾಹಿತ್ಯವನ್ನು ಕೊಟ್ಟರು. ತಾವು ಎಲ್ಲ ಹಳ್ಳಿಗರನ್ನು ಸಂಪರ್ಕಿಸಿದ್ದೇವೆಂದು ನೆನಸುತ್ತಾ ಅವರು ಅಲ್ಲಿಂದ ಇನ್ನೇನು ಹೊರಡಲಿದ್ದರು. ಆದರೆ ಅವರು ಸೆಂಟ್ರಲ್‌ ಸ್ಕ್ವೇರ್‌ನಿಂದ ಹೊರಬರುತ್ತಿದ್ದಾಗ, ಅಲ್ಲಿನ ಗ್ರೀಕ್‌ ಆರ್ತೊಡಾಕ್ಸ್‌ ಪಾದ್ರಿಯು ಎದುರಿಗೆ ಬರುತ್ತಿರುವುದನ್ನು ನೋಡಿದರು. ತಾವು ಅವನಿಗೆ ಸಾಕ್ಷಿಯನ್ನು ಕೊಟ್ಟಿಲ್ಲವೆಂದು ಅವರಿಗೆ ಗೊತ್ತಾಯಿತು. ಆದುದರಿಂದ ಅವರು ಅವನಿಗೆ ಒಂದು ಚಿಕ್ಕ ಪ್ರಕಾಶನವನ್ನು ಕೊಟ್ಟರು, ಮತ್ತು ಆ ಪಾದ್ರಿ ಅದನ್ನು ಸಂತೋಷದಿಂದ ಸ್ವೀಕರಿಸಿದನು. ಒಬ್ಬ ವ್ಯಕ್ತಿಯನ್ನೂ ಬಿಡದೆ ತಾವು ಎಲ್ಲರಿಗೂ ಸಾಕ್ಷಿಯನ್ನು ಕೊಟ್ಟಿದ್ದೇವೆಂಬ ಪೂರ್ಣ ಖಾತ್ರಿಯು ಅವರಿಗಿತ್ತು!

ಕ್ರೀಟ್‌ ದ್ವೀಪದ ಒಡಲಿನ ತಳಭಾಗದಲ್ಲಿರುವ, ಗಾವ್ದ್‌ಸ್‌ (ಅಥವಾ ಕ್ಲೌಡ) ಎಂಬ ಉಪದ್ವೀಪದಲ್ಲಿ ಕೇವಲ 38 ಮಂದಿ ನಿವಾಸಿಗಳಿದ್ದಾರೆ. ಈ ಉಪದ್ವೀಪವನ್ನು ಯೂರೋಪಿನ ದಕ್ಷಿಣಭಾಗದ ಕೊನೆಯ ಸ್ಥಾನವೆಂದು ಪರಿಗಣಿಸಲಾಗುತ್ತದೆ. (ಅ. ಕೃತ್ಯಗಳು 27:16) ಒಬ್ಬ ಸಂಚರಣ ಮೇಲ್ವಿಚಾರಕರು ಮತ್ತು ಅವರ ಹೆಂಡತಿ ಹಾಗೂ ಇನ್ನೊಂದು ವಿವಾಹಿತ ದಂಪತಿಯು, ಮೂರು ದಿವಸಗಳ ವರೆಗೆ ಅಲ್ಲಿ ಸಾರಿದರು. ಖರ್ಚನ್ನು ಕಡಿಮೆಮಾಡಲಿಕ್ಕೋಸ್ಕರ ಅವರು ಒಂದು ಗುಡಾರದಲ್ಲಿ ಮಲಗಿದರು. ಅಲ್ಲಿನ ಎಲ್ಲ ನಿವಾಸಿಗಳಿಗೆ ಸುವಾರ್ತೆಯನ್ನು ಸಾರಲಾಯಿತು, ಮತ್ತು ಅಲ್ಲಿದ್ದ ಜನರಿಗೆ ಯೆಹೋವನ ಸಾಕ್ಷಿಗಳ ಬಗ್ಗೆ ಯಾವುದೇ ಪೂರ್ವಕಲ್ಪಿತ ಅಭಿಪ್ರಾಯವಿಲ್ಲದ್ದರಿಂದ ಸಹೋದರರಿಗೆ ಸಂತೋಷವಾಯಿತು. ಈ ಜನರು ಯೆಹೋವನ ಸಾಕ್ಷಿಗಳ ಕುರಿತಾಗಿ ಒಳ್ಳೇದನ್ನಾಗಲಿ ಕೆಟ್ಟದ್ದನ್ನಾಗಲಿ ಕೇಳಿಸಿಕೊಂಡಿರಲಿಲ್ಲ. ಪಾದ್ರಿಯನ್ನು ಸೇರಿಸಿ ಅಲ್ಲಿನ ಜನರು, 19 ಪುಸ್ತಕಗಳು ಮತ್ತು 13 ಬ್ರೋಷರುಗಳನ್ನು ಸ್ವೀಕರಿಸಿದರು. ಈ ಸಾಕ್ಷಿಗಳು ಒಂದು ಚಿಕ್ಕ ದೋಣಿಯಲ್ಲಿ ಕ್ರೀಟ್‌ ದ್ವೀಪಕ್ಕೆ ಹಿಂದಿರುಗುತ್ತಿದ್ದಾಗ, ಸಮುದ್ರವು ಅಲ್ಲೋಲಕಲ್ಲೋಲವಾಗಿ, ಅವರ ಜೀವಗಳು ಅಪಾಯದಲ್ಲಿದ್ದವು. “ನಾವು ಜೀವಂತರಾಗಿ ಮನೆ ಸೇರಿದುದಕ್ಕಾಗಿ ಯೆಹೋವನಿಗೆ ಉಪಕಾರ ಸಲ್ಲಿಸಿದೆವು. ಅಷ್ಟುಮಾತ್ರವಲ್ಲ ಯೂರೋಪಿನ ದಕ್ಷಿಣಭಾಗದ ಕೊನೆಯ ಸ್ಥಾನದಲ್ಲಿ ಆತನ ಹೆಸರನ್ನು ಸನ್ಮಾನಿಸುವ ಅವಕಾಶವನ್ನು ಕೊಟ್ಟದ್ದಕ್ಕಾಗಿ ಸಹ ನಾವು ಆತನನ್ನು ಮಹಿಮೆಪಡಿಸಿದೆವು” ಎಂದು ಅವರು ಹೇಳಿದರು.

ಅಪೊಸ್ತಲ ಯೋಹಾನನು ಬೈಬಲಿನ ಕೊನೆಯ ಪುಸ್ತಕವಾದ ಪ್ರಕಟನೆಯನ್ನು ಪತ್ಮೋಸ್‌ ದ್ವೀಪದಲ್ಲಿ ಬರೆದಿದ್ದನು. ಇತ್ತೀಚಿನ ವರೆಗೆ ಪತ್ಮೋಸ್‌ ದ್ವೀಪದಲ್ಲಿ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನೂ ಇರಲಿಲ್ಲ. ಸಾಮೊಸ್‌ ದ್ವೀಪದಲ್ಲಿದ್ದ ಸಹೋದರರು ಪತ್ಮೊಸ್‌ ದ್ವೀಪದಲ್ಲಿ ಸಾರುವ ಕಾರ್ಯಾಚರಣೆಯನ್ನು ನಡೆಸಲು ಜಾಗರೂಕತೆಯಿಂದ ಯೋಜನೆಗಳನ್ನು ಮಾಡಿದರು. ಆ ದ್ವೀಪದಲ್ಲಿ ಗ್ರೀಕ್‌ ಆರ್ತೊಡಾಕ್ಸ್‌ ಚರ್ಚಿನ ಪ್ರಭಾವವು ತುಂಬ ಪ್ರಬಲವಾಗಿರುವುದರಿಂದ, ಅಲ್ಲಿ ಕಠಿನವಾದ ವಿರೋಧವನ್ನು ನಿರೀಕ್ಷಿಸಸಾಧ್ಯವಿದೆಯೆಂದು ಅವರಿಗೆ ಮುಂಚೆಯೇ ಗೊತ್ತಿತ್ತು. ಇಬ್ಬರು ಸಹೋದರಿಯರು ಒಬ್ಬ ಮಹಿಳೆಗೆ ಸುವಾರ್ತೆಯನ್ನು ಸಾರುತ್ತಿದ್ದಾಗ, ಅವರನ್ನು ಮನೆಯೊಳಗೆ ಬರುವಂತೆ ಆಮಂತ್ರಿಸಲಾಯಿತು. ಆ ಮಹಿಳೆಯ ಗಂಡನು, ನಿಮ್ಮನ್ನು ನಮ್ಮ ಮನೆಗೆ ಕಳುಹಿಸಿದವರು ಯಾರು ಎಂದು ಪುನಃ ಪುನಃ ಕೇಳುತ್ತಾ ಇದ್ದನು. ತಾವು ಪ್ರತಿಯೊಬ್ಬರ ಮನೆಯನ್ನೂ ಸಂದರ್ಶಿಸುತ್ತಿದ್ದೇವೆಂದು ಸಹೋದರಿಯರು ವಿವರಿಸಿದರೂ, ಅವನು ಪುನಃ ಕೇಳಿದ್ದು: “ಖಂಡಿತವಾಗಿಯೂ ನಮ್ಮ ನೆರೆಯವರೊಬ್ಬರು ನಿಮ್ಮನ್ನು ಇಲ್ಲಿಗೆ ಕಳುಹಿಸಲಿಲ್ಲ ತಾನೇ?” ಸಾಯೀರ್‌ನಲ್ಲಿದ್ದಾಗ ಯೆಹೋವನ ಸಾಕ್ಷಿಗಳೊಂದಿಗೆ ಪರಿಚಿತಳಾಗಿದ್ದ ಅವನ ಹೆಂಡತಿಯು, ಅದೇ ದಿನ ಬೆಳಗ್ಗೆ ಏನು ನಡೆಯಿತೆಂಬುದನ್ನು ಸಹೋದರಿಯರಿಗೆ ವಿವರಿಸಿದಳು. ಅವಳಂದದ್ದು: “ನಾನು ಪ್ರತಿದಿನ ಮಾಡುತ್ತಿದ್ದಂತೆಯೇ ಇಂದು ಸಹ ಯೆಹೋವನಿಗೆ ಪ್ರಾರ್ಥಿಸಿ, ಆತನು ಕೆಲವು ಸಾಕ್ಷಿಗಳನ್ನು ಈ ದ್ವೀಪಕ್ಕೆ ಕಳುಹಿಸುವಂತೆ ಬೇಡಿಕೊಂಡೆ. ನನ್ನ ಗಂಡನು ಇದನ್ನು ಕೇಳಿ ನಗಾಡಿದನು. ಆದರೆ ನಿಮ್ಮನ್ನು ಮನೆಬಾಗಿಲಲ್ಲಿ ನೋಡಿದಾಗ, ನನಗೂ ನನ್ನ ಗಂಡನಿಗೂ ಬಹಳ ಆಶ್ಚರ್ಯವಾಯಿತು. ಆದುದರಿಂದಲೇ, ನಿಮ್ಮನ್ನು ನಮ್ಮ ಮನೆಗೆ ಕಳುಹಿಸಿದವರು ಯಾರು ಎಂದು ಅವರು ಕೇಳುತ್ತಾ ಇದ್ದರು.” ಆ ಕೂಡಲೇ ಆ ಮಹಿಳೆಯೊಂದಿಗೆ ಒಂದು ಬೈಬಲ್‌ ಅಭ್ಯಾಸವನ್ನು ಆರಂಭಿಸಲಾಯಿತು. ಹತ್ತು ತಿಂಗಳುಗಳ ವರೆಗೆ ಟೆಲಿಫೋನಿನ ಮೂಲಕ ಅವರೊಂದಿಗೆ ಅಭ್ಯಾಸವನ್ನು ನಡೆಸಲಾಯಿತು ಮತ್ತು ಇದಕ್ಕಾಗಿ ನಮ್ಮ ಸಹೋದರಿಯೂ ಆ ಆಸಕ್ತ ಮಹಿಳೆಯೂ ತುಂಬ ಹಣವನ್ನು ಖರ್ಚುಮಾಡಬೇಕಾಯಿತು. ಆ ಮಹಿಳೆಯು ದೀಕ್ಷಾಸ್ನಾನವನ್ನು ಪಡೆದುಕೊಂಡಳು ಮತ್ತು 1,900 ವರ್ಷಗಳ ಹಿಂದೆ ಅಪೊಸ್ತಲ ಯೋಹಾನನನ್ನು ಎಲ್ಲಿ ಪ್ರತ್ಯೇಕಿಸಿಡಲಾಯಿತೋ ಆ ದ್ವೀಪದಲ್ಲಿ ಇಂದು ಆಕೆಯು ಏಕೈಕ ಸಾಕ್ಷಿಯಾಗಿದ್ದಾಳೆ.

ಬಂದರುಗಳಲ್ಲಿ “ಮೀನು ಹಿಡಿಯುವುದು”

ಪ್ರತಿ ವರ್ಷ ಬೇಸಗೆ ತಿಂಗಳುಗಳಲ್ಲಿ ಈಜಿಯನ್‌ ಸಮುದ್ರಗಳಲ್ಲಿರುವ ಅಸಂಖ್ಯಾತ ಬಂದರುಗಳಿಗೆ ವಿಹಾರನೌಕೆಗಳು ಬರುತ್ತವೆ. ಈ ಹಡಗುಗಳಲ್ಲಿ ರಜೆಯನ್ನು ಕಳೆಯಲು ಅನೇಕ ಸಂದರ್ಶಕರು ಬರುತ್ತಾರೆ. ಹೀಗೆ, ಯೆಹೋವನ ಸಾಕ್ಷಿಗಳಿಗೆ ಅನೇಕ ದೇಶ ಮತ್ತು ಭಾಷೆಗಳ ಜನರಿಗೆ ಸಾಕ್ಷಿಯನ್ನು ನೀಡುವ ಅಪೂರ್ವ ಅವಕಾಶವು ಸಿಗುತ್ತದೆ. ವಿಭಿನ್ನ ಭಾಷೆಗಳಲ್ಲಿನ ಬೈಬಲ್‌ ಸಾಹಿತ್ಯವನ್ನು ಸಭೆಗಳು ಸ್ಟಾಕ್‌ನಲ್ಲಿ ಇಟ್ಟುಕೊಂಡಿರುತ್ತವೆ ಮತ್ತು ಪ್ರಚಾರಕರು ಪ್ರವಾಸಿಗಳಿಗೆ ಸಾವಿರಾರು ಪತ್ರಿಕೆಗಳನ್ನು ಕೊಡುತ್ತಾರೆ. ಕೆಲವೊಂದು ವಿಹಾರನೌಕೆಗಳು ಪ್ರತಿವಾರ ಒಂದೇ ಬಂದರಿಗೆ ಬರುತ್ತವೆ. ಇದು ಆ ಹಡಗುಗಳಲ್ಲಿರುವ ನಾವಿಕ ತಂಡದವರಲ್ಲಿ ಕೆಲವರನ್ನು ಪುನಃ ಭೇಟಿಮಾಡಿ, ಬೈಬಲ್‌ ಅಭ್ಯಾಸಗಳನ್ನೂ ನಡೆಸಲು ಸಹೋದರರಿಗೆ ಒಳ್ಳೆಯ ಅವಕಾಶಗಳನ್ನು ಕೊಡುತ್ತದೆ.

1996ರ ಬೇಸಗೆಕಾಲದಲ್ಲಿ, ರೋದ ದ್ವೀಪದಲ್ಲಿ ಪೂರ್ಣ ಸಮಯದ ಸೌವಾರ್ತಿಕಳಾಗಿರುವ ಸಹೋದರಿಯೊಬ್ಬಳು, ಪ್ರತಿ ವಾರ ಶುಕ್ರವಾರದಂದು ಆ ಬಂದರಿಗೆ ಬರುತ್ತಿದ್ದ ಒಂದು ವಿಹಾರನೌಕೆಯಲ್ಲಿ ಕೆಲಸಮಾಡುತ್ತಿದ್ದ ಜಮೇಕಾದ ಒಬ್ಬ ಯುವಕನಿಗೆ ಸಾಕ್ಷಿಯನ್ನು ಕೊಟ್ಟಳು. ಮುಂದಿನ ಶುಕ್ರವಾರ ಆ ಯುವಕನಿಗೆ, ಆ ದ್ವೀಪದಲ್ಲಿ ನಡೆಯಲಿದ್ದ ಜಿಲ್ಲಾ ಅಧಿವೇಶನಕ್ಕೆ ಹಾಜರಾಗುವಂತೆ ಆಮಂತ್ರಿಸಲಾಯಿತು. ಕೈಯಲ್ಲಿ ಇಂಗ್ಲಿಷ್‌ ಬೈಬಲನ್ನು ಹಿಡಿದುಕೊಂಡು ಆ ಪಯನೀಯರ್‌ ಸಹೋದರಿಯು, ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಲಾದ ಬೈಬಲ್‌ ಸತ್ಯಗಳಲ್ಲಿ ಕೆಲವೊಂದನ್ನು ಅರ್ಥಮಾಡಿಕೊಳ್ಳಲು ಅವನಿಗೆ ಸಹಾಯಮಾಡಿದಳು. ಆ ಅಧಿವೇಶನದಲ್ಲಿ ಸಾಕ್ಷಿಗಳು ತೋರಿಸಿದಂತಹ ಪ್ರೀತಿ ಅನುರಾಗದಿಂದ ಆ ಯುವಕನು ತುಂಬ ಪ್ರಭಾವಿತನಾದನು. ಮುಂದಿನ ಶುಕ್ರವಾರ, ಅವನು ಇಬ್ಬರು ಪಯನೀಯರ್‌ ಸಹೋದರರನ್ನು ಹಡಗಿನೊಳಗೆ ಬರುವಂತೆ ಆಮಂತ್ರಿಸಿದನು. ಆ ಪಯನೀಯರರು ತಮ್ಮೊಂದಿಗೆ ಇಂಗ್ಲಿಷ್‌ ಮತ್ತು ಸ್ಪ್ಯಾನಿಷ್‌ ಭಾಷೆಯಲ್ಲಿ ಸಾಹಿತ್ಯವನ್ನು ಕೊಂಡೊಯ್ದರು. ಒಂದು ತಾಸಿಗಿಂತಲೂ ಕಡಿಮೆ ಸಮಯದಲ್ಲಿ ಅವರ ಸೇವೆಯ ಬ್ಯಾಗುಗಳು ಖಾಲಿಯಾದವು! ಜಮೇಕಾದ ಆ ಯುವಕನು ಆ ಬೇಸಗೆಕಾಲದ ಅಂತ್ಯದವರೆಗೆ ಪ್ರತಿ ಶುಕ್ರವಾರ ಬೈಬಲನ್ನು ಅಭ್ಯಾಸಿಸಿದನು. ಅನಂತರ ಅವನು ಹಿಂದಿರುಗಿ ಹೋಗಿ, ಮುಂದಿನ ವರ್ಷದ ಬೇಸಗೆಕಾಲದಲ್ಲಿ ಪುನಃ ರೋದ ದ್ವೀಪಕ್ಕೆ ಬಂದನು ಮತ್ತು ತನ್ನ ಅಭ್ಯಾಸವನ್ನು ಪುನಃ ಆರಂಭಿಸಲು ಸಿದ್ಧನಾಗಿದ್ದನು. ಆದರೆ, ಆತ್ಮಿಕ ಪ್ರಗತಿಯನ್ನು ಮಾಡಲು ಸಾಧ್ಯವಾಗುವಂತೆ ಅವನು ತನ್ನ ಉದ್ಯೋಗವನ್ನು ಬದಲಾಯಿಸಲು ಈ ಸಲ ನಿರ್ಣಯಿಸಿದನು. ಅವನು ಪುನಃ ಸ್ವದೇಶಕ್ಕೆ ಹೊರಟುಹೋದನು. ಈ ಯುವಕನು 1998ರ ಆರಂಭದಲ್ಲಿ ದೀಕ್ಷಾಸ್ನಾನವನ್ನು ಪಡೆದುಕೊಂಡನೆಂಬುದನ್ನು ತಿಳಿದುಕೊಂಡು, ರೋದ ದ್ವೀಪದಲ್ಲಿದ್ದ ಸಹೋದರರಿಗೆ ಎಷ್ಟು ಸಂತೋಷವಾಗಿರಬೇಕು!

ವಲಸೆಹೋಗುವ ‘ಮೀನನ್ನು’ ಹಿಡಿಯುವುದು

ಈಜಿಯನ್‌ ಸಮುದ್ರವು, ಸಾರ್ಡಿನ್‌ ಮತ್ತು ಕತ್ತಿಮೀನಿನಂತಹ, ಹೇರಳವಾಗಿ ಸಿಗುವ ವಲಸೆಹೋಗುವ ಮೀನಿಗಾಗಿ ಪ್ರಸಿದ್ಧವಾಗಿದೆ. ಈ ಮೀನುಗಳು ಆ ಸಮುದ್ರದ ಮುಖಾಂತರ ದಾಟಿಹೋಗುತ್ತಿರುವಾಗ, ನಿಪುಣ ಬೆಸ್ತರ ಬಲೆಗಳಲ್ಲಿ ಸಿಕ್ಕಿಬೀಳುತ್ತವೆ. ತದ್ರೀತಿಯಲ್ಲೇ, ಪೂರ್ವ ಯೂರೋಪಿನ ಅನೇಕ ದೇಶಗಳಿಂದ ಗ್ರೀಸ್‌ ದೇಶಕ್ಕೆ ಸ್ಥಳಾಂತರಿಸಿರುವ ವಲಸಿಗ ಕಾರ್ಮಿಕರ ಮಧ್ಯೆ ರಾಜ್ಯ ಸೌವಾರ್ತಿಕರು, ಸತ್ಯವನ್ನು ಸ್ವೀಕರಿಸುವ ಹೃದಯಗಳುಳ್ಳ ವ್ಯಕ್ತಿಗಳನ್ನು ಕಂಡುಕೊಂಡಿದ್ದಾರೆ.

ರೇಝಿ ಎಂಬುವಳು ಅಲ್ಬೇನಿಯದಲ್ಲಿ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಲ್ಲಿ ಯೆಹೋವ ಮತ್ತು ಆತನ ಉದ್ದೇಶಗಳ ಕುರಿತಾಗಿ ಪ್ರಥಮವಾಗಿ ಓದಿದಾಗ ಕೇವಲ ಹತ್ತು ವರ್ಷದವಳಾಗಿದ್ದಳು. ಮೂರು ವರ್ಷಗಳ ನಂತರ ತನ್ನ ಕುಟುಂಬದವರೊಂದಿಗೆ ಅವಳು ರೋದ ದ್ವೀಪಕ್ಕೆ ಸ್ಥಳಾಂತರಿಸಿದಳು. ಒಂದು ದಿನ ಅವಳು ಯೆಹೋವನಿಗೆ ಪ್ರಾರ್ಥಿಸುತ್ತಾ, ಈ ಹೊಸ ದೇಶದಲ್ಲಿ ಆತನ ಜನರನ್ನು ಕಂಡುಹಿಡಿಯುವಂತೆ ಸಹಾಯಮಾಡಲು ಕೇಳಿದಳು. ಮರುದಿನವೇ ಅವಳ ತಂದೆಯು, ಕಾವಲಿನಬುರುಜು ಮತ್ತು ಎಚ್ಚರ! ಎಂಬ ಆ ಪರಿಚಿತ ಪತ್ರಿಕೆಗಳನ್ನು ಮನೆಗೆ ತಂದನು. ರೇಝಿಯ ಆನಂದಕ್ಕೆ ಎಣೆಯೇ ಇರಲಿಲ್ಲ. ತನ್ನ ತಂದೆಗೆ ಆ ಪತ್ರಿಕೆಗಳನ್ನು ಕೊಟ್ಟ ಸಹೋದರಿಯನ್ನು ರೇಝಿ ಸಂಪರ್ಕಿಸಲು ಸಾಧ್ಯವಾಯಿತು ಮತ್ತು ಬೇಗನೆ ಅವಳು ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕದಿಂದ ಅಭ್ಯಾಸವನ್ನು ಆರಂಭಿಸಿದಳು. ಕೆಲವೊಮ್ಮೆ ಒಂದೇ ದಿನದಲ್ಲಿ ಮೂರು ಸಲ ಅಭ್ಯಾಸವನ್ನು ನಡೆಸುವಂತೆ ಸಹ ಕೇಳಿಕೊಳ್ಳುತ್ತಿದ್ದಳು! ಎರಡು ತಿಂಗಳುಗಳ ಬಳಿಕ ಅವಳು ಅಸ್ನಾನಿತ ಪ್ರಚಾರಕಳಾದಳು, ಮತ್ತು ಮಾರ್ಚ್‌ 1998ರಲ್ಲಿ, ಅಂದರೆ 14 ವರ್ಷ ಪ್ರಾಯದವಳಾಗಿದ್ದಾಗ ಅವಳು ದೀಕ್ಷಾಸ್ನಾನವನ್ನು ಪಡೆದುಕೊಂಡಳು. ಅದೇ ದಿನ ಅವಳು ಆಕ್ಸಿಲಿಯರಿ ಪಯನೀಯರ್‌ ಸೇವೆಯನ್ನು ಆರಂಭಿಸಿ, ಆರು ತಿಂಗಳುಗಳ ನಂತರ ರೆಗ್ಯುಲರ್‌ ಪಯನೀಯರ್‌ ಅಥವಾ ಪೂರ್ಣ ಸಮಯದ ಶುಶ್ರೂಷಕಿಯಾದಳು.

ಕೋಸ್‌ ದ್ವೀಪದಲ್ಲಿರುವ ಒಬ್ಬ ಸಹೋದರನು, ರಷ್ಯದಿಂದ ಬಂದಿದ್ದ ಕೆಲವು ಜನರೊಂದಿಗೆ ಬೈಬಲ್‌ ಅಭ್ಯಾಸವನ್ನು ನಡೆಸುತ್ತಿದ್ದನು. ಬೈಬಲನ್ನು ಅಭ್ಯಾಸಮಾಡಲು ಇಷ್ಟಪಡುವ ಬೇರೆ ಸ್ನೇಹಿತರು ನಿಮಗಿದ್ದಾರೊ ಎಂದು ಅವರಿಗೆ ಕೇಳಿದನು. ಆಗ ಅವರು ಆ ಸಹೋದರನನ್ನು, ಸುಮಾರು 30 ಕಿಲೋಮೀಟರ್‌ ದೂರದಲ್ಲಿ ಒಂದು ಹಳ್ಳಿಯಲ್ಲಿ ವಾಸಿಸುತ್ತಿದ್ದ ಲೀಯೋನಿದಾಸ್‌ ಮತ್ತು ಅವನ ಪತ್ನಿ ಓಫೀಲಿಯಳ ಬಳಿ ಕರೆದೊಯ್ದರು. ಅಲ್ಲಿ ಸಹೋದರರಿಗೆ ಒಂದು ಆಶ್ಚರ್ಯವು ಕಾದಿತ್ತು. ಅರ್‌ಮೇನಿಯದ ಆ ದಂಪತಿಯು, ಒಂದು ದೊಡ್ಡ ಚೀಲದಲ್ಲಿ ವಾಚ್‌ಟವರ್‌ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ ಅರ್‌ಮೇನಿಯನ್‌ ಮತ್ತು ರಷ್ಯನ್‌ ಭಾಷೆಯ ಬೈಬಲ್‌ ಸಾಹಿತ್ಯವನ್ನು ಹೊರತಂದರು! ಅವರು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸಿದ್ದರು ಮತ್ತು ಅಸ್ನಾನಿತ ಪ್ರಚಾರಕರಾಗುವ ಹಂತದ ವರೆಗೆ ಪ್ರಗತಿಯನ್ನು ಮಾಡಿದ್ದರು ಎಂದು ವಿವರಿಸಿದರು. ರಾಜಕೀಯದಲ್ಲಾದ ಏರುಪೇರುಗಳು ಮತ್ತು ಆರ್ಥಿಕ ತೊಂದರೆಗಳಿಂದಾಗಿ ಅವರು ತಮ್ಮ ಸ್ವದೇಶವನ್ನು ಬಿಟ್ಟುಬರಬೇಕಾಯಿತು. ಅವರು ಕೋಸ್‌ ದ್ವೀಪಕ್ಕೆ ಆಗಮಿಸಿದೊಡನೆ, ಈಗಾಗಲೇ ಅಲ್ಲಿದ್ದ ಲಿಯೋನಿದಾಸ್‌ನ ತಾಯಿ ಮತ್ತು ತಂಗಿಯೊಂದಿಗೆ ಅಭ್ಯಾಸವನ್ನು ಮಾಡಲಾರಂಭಿಸಿದರು. ಒಮ್ಮಿಂದೊಮ್ಮೆಲೆ, ಆ ಸಾಕ್ಷಿಗೆ ಓಫೀಲಿಯಳೊಂದಿಗೆ, ಲಿಯೋನಿದಾಸ್‌ನೊಂದಿಗೆ ಮತ್ತು ಅವನ ತಾಯಿ ಹಾಗೂ ತಂಗಿಯೊಂದಿಗೆ ಹೀಗೆ ಮೂರು ಹೊಸ ಬೈಬಲ್‌ ಅಭ್ಯಾಸಗಳು ಸಿಕ್ಕಿದವು. ಇದಕ್ಕಾಗಿ ಒಂದು ವಾರದಲ್ಲಿ ಮೂರು ಸಲ ಹೋಗಿಬರಲು 60 ಕಿಲೋಮೀಟರುಗಳಷ್ಟು ದೂರದ ವರೆಗೆ ಮೋಟಾರ್‌ಸೈಕಲಿನಲ್ಲಿ ಪ್ರಯಾಣಿಸಬೇಕಾಗುತ್ತಿತ್ತು. ಕೆಲವು ತಿಂಗಳುಗಳ ಬಳಿಕ ಲಿಯೋನಿದಾಸ್‌ ಮತ್ತು ಅವನ ಹೆಂಡತಿಯು ದೀಕ್ಷಾಸ್ನಾನವನ್ನು ಪಡೆದುಕೊಂಡರು. ಸ್ಥಳಿಕ ಸಹೋದರರು ತೋರಿಸಿದ ಸ್ವತ್ಯಾಗದ ಮನೋಭಾವಕ್ಕಾಗಿ ಅವರಿಗೆಷ್ಟು ಒಳ್ಳೆಯ ಪ್ರತಿಫಲವು ದೊರೆಯಿತು!

ಯೆಹೋವನು ಬೆಳೆಯುವಂತೆ ಮಾಡುತ್ತಾನೆ

ಈ ಈಜಿಯನ್‌ ದ್ವೀಪಗಳಲ್ಲಿರುವ 2,000ಕ್ಕಿಂತಲೂ ಹೆಚ್ಚಿನ ಸಕ್ರಿಯ ರಾಜ್ಯ ಘೋಷಕರ ಪರಿಶ್ರಮವನ್ನು ಯೆಹೋವನು ಆಶೀರ್ವದಿಸುತ್ತಿದ್ದಾನೆಂಬುದು ಸ್ಪಷ್ಟ. ಈಗ ಅಲ್ಲಿ ಯೆಹೋವನ ಸಾಕ್ಷಿಗಳ 44 ಸಭೆಗಳು ಮತ್ತು 25 ಗುಂಪುಗಳಿವೆ. ಈ ಗುಂಪುಗಳಲ್ಲಿ 17 ವಿದೇಶೀ ಭಾಷೆಯ ಗುಂಪುಗಳಿವೆ, ಯಾಕೆಂದರೆ “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು” ಯೆಹೋವನ ಚಿತ್ತವಾಗಿದೆ. (1 ತಿಮೊಥೆಯ 2:4) ಇದಕ್ಕೆ ಕೂಡಿಸುತ್ತಾ, ದೂರದಲ್ಲಿರುವ ಈ ಟೆರಿಟೊರಿಗಳಲ್ಲಿ ಇನ್ನೂ ಹೆಚ್ಚಿನ ಜನರನ್ನು ತಲಪಲಿಕ್ಕಾಗಿ 13 ವಿಶೇಷ ಪಯನೀಯರರು ಬಹಳಷ್ಟು ಪ್ರಯಾಸಪಡುತ್ತಿದ್ದಾರೆ.

ಅನೇಕ ಶತಮಾನಗಳಿಂದ ಈಜಿಯನ್‌ ಸಮುದ್ರವು, ಸಾಂಸ್ಕೃತಿಕ ಅಭಿವೃದ್ಧಿ ಮತ್ತು ವ್ಯಾಪಾರಿ ಉದ್ಯಮದ ಕೇಂದ್ರವಾಗಿದೆ. ಇತ್ತೀಚಿನ ದಶಕಗಳಲ್ಲಿ, ಈ ದ್ವೀಪಗಳು ಲಕ್ಷಾಂತರ ಪ್ರವಾಸಿಗರ ಪ್ರಿಯ ತಾಣವಾಗಿಬಿಟ್ಟಿವೆ. ಆದರೆ ಇದೆಲ್ಲಕ್ಕಿಂತಲೂ ಹೆಚ್ಚಾಗಿ, “ಮನುಷ್ಯರನ್ನು ಹಿಡಿಯುವ ಬೆಸ್ತ”ರಾಗಿರುವ ರಾಜ್ಯ ಘೋಷಕರು ಈ ದ್ವೀಪಗಳಲ್ಲಿ ಯೆಹೋವನನ್ನು ಸ್ತುತಿಸಲು ಕಾತುರರಾಗಿರುವ ಪ್ರಾಮಾಣಿಕಹೃದಯದ ಅನೇಕ ಜನರನ್ನು ಕಂಡುಹಿಡಿದಿದ್ದಾರೆ. ಇವರೆಲ್ಲರೂ ಒಟ್ಟುಗೂಡಿ, ಈ ಪ್ರವಾದನಾತ್ಮಕ ಆಮಂತ್ರಣಕ್ಕೆ ಒಂದು ಭವ್ಯವಾದ ರೀತಿಯಲ್ಲಿ ಓಗೊಟ್ಟಿದ್ದಾರೆ: “ಯೆಹೋವನನ್ನು ಘನಪಡಿಸಿ ದ್ವೀಪಾಂತರಗಳಲ್ಲಿ ಆತನ ಸ್ತೋತ್ರವನ್ನು ಹಬ್ಬಿಸಲಿ.”—ಯೆಶಾಯ 42:12.

[ಪುಟ 22ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಈಜಿಯನ್‌ ಸಮುದ್ರ

ಗ್ರೀಸ್‌

ಲೆಸ್ವೊಸ್‌

ಖೀಯೊಸ್‌

ಸಾಮೊಸ್‌

ಇಕಾರಿಯಾ

ಫ್ಯೂರ್ನಿ

ಪತ್ಮೋಸ್‌

ಕೋಸ್‌

ರೋದ

ಕ್ರೀಟ್‌

ಟರ್ಕಿ

[ಪುಟ 23ರಲ್ಲಿರುವ ಚಿತ್ರ]

ಲೆಸ್ವೊಸ್‌ ದ್ವೀಪ

[ಪುಟ 24ರಲ್ಲಿರುವ ಚಿತ್ರ]

ಪತ್ಮೋಸ್‌ ದ್ವೀಪ

[ಪುಟ 24ರಲ್ಲಿರುವ ಚಿತ್ರ]

ಕ್ರೀಟ್‌ ದ್ವೀಪ