ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಇತರರ ಮುಂದೆ ಯೋಗ್ಯರಾಗಿ ನಡೆದುಕೊಳ್ಳುತ್ತಿದ್ದೀರೊ?

ನೀವು ಇತರರ ಮುಂದೆ ಯೋಗ್ಯರಾಗಿ ನಡೆದುಕೊಳ್ಳುತ್ತಿದ್ದೀರೊ?

ನೀವು ಇತರರ ಮುಂದೆ ಯೋಗ್ಯರಾಗಿ ನಡೆದುಕೊಳ್ಳುತ್ತಿದ್ದೀರೊ?

‘ಯಾರು ಏನು ಬೇಕಾದರೂ ನೆನಸಿಕೊಳ್ಳಲಿ ನನಗೆ ಅದರ ಬಗ್ಗೆ ಚಿಂತೆಯಿಲ್ಲ!’ ಎಂದು ಕೋಪ ಅಥವಾ ಹತಾಶೆಯ ಕ್ಷಣದಲ್ಲಿ, ನೀವು ಸ್ವಲ್ಪವೂ ಹಿಂಜರಿಯದೇ ಧೈರ್ಯದಿಂದ ಹೇಳಿರಬಹುದು. ಆದರೆ ಈ ಹುಚ್ಚುಧೈರ್ಯದ ಆವೇಶವು ಕಡಿಮೆಯಾದಾಗ, ನಿಮಗೆ ಒಂದು ರೀತಿಯ ಕಳವಳದ ಅನಿಸಿಕೆಯಾಗಬಹುದು. ಏಕೆ? ಏಕೆಂದರೆ ನಮ್ಮಲ್ಲಿ ಹೆಚ್ಚಿನವರು ಇತರರು ನಮ್ಮ ಕುರಿತಾಗಿ ಏನು ನೆನಸುತ್ತಾರೆಂಬುದರ ಬಗ್ಗೆ ಖಂಡಿತವಾಗಿಯೂ ಚಿಂತಿಸುತ್ತೇವೆ.

ನಮ್ಮ ಬಗ್ಗೆ ಬೇರೆಯವರಿಗಿರುವ ಅನಿಸಿಕೆಗಳಿಗೆ ನಾವು ಖಂಡಿತವಾಗಿಯೂ ಬೆಲೆಕೊಡಬೇಕು. ಅದರಲ್ಲೂ ಮುಖ್ಯವಾಗಿ ನಾವು ಯೆಹೋವ ದೇವರ ನೇಮಿತ ಶುಶ್ರೂಷಕರು ಮತ್ತು ಕ್ರೈಸ್ತರೂ ಆಗಿರುವುದರಿಂದ, ಇತರರು ನಮ್ಮನ್ನು ಯಾವ ದೃಷ್ಟಿಯಿಂದ ನೋಡುತ್ತಾರೆಂಬುದರ ಬಗ್ಗೆ ವಿಶೇಷವಾಗಿ ನಮಗೆ ಯೋಗ್ಯ ರೀತಿಯ ಚಿಂತೆ ಇರಲೇಬೇಕು. ಎಷ್ಟೆಂದರೂ ನಾವು “ಜಗತ್ತಿಗೆಲ್ಲಾ ನೋಟ”ವಾಗಿದ್ದೇವಲ್ಲವೇ. (1 ಕೊರಿಂಥ 4:9) 2 ಕೊರಿಂಥ 6:3, 4ರಲ್ಲಿ (NW) ಅಪೊಸ್ತಲ ಪೌಲನು ಈ ಯುಕ್ತ ಸಲಹೆಯನ್ನು ನಮಗೆ ಕೊಡುತ್ತಾನೆ: “ನಮ್ಮ ಶುಶ್ರೂಷೆಯ ಕುರಿತು ಇತರರು ದೋಷವನ್ನು ಕಂಡುಹಿಡಿಯದಿರಲು, ನಾವು ಮುಗ್ಗರಿಸುವುದಕ್ಕೆ ಯಾವುದೇ ರೀತಿಯ ಕಾರಣವನ್ನು ಕೊಡುವುದಿಲ್ಲ; ಅದಕ್ಕೆ ಬದಲಾಗಿ ನಾವು ಪ್ರತಿಯೊಂದು ವಿಷಯದಲ್ಲೂ ದೇವರ ಶುಶ್ರೂಷಕರಾಗಿ ಯೋಗ್ಯ ರೀತಿಯಲ್ಲಿ ನಡೆದುಕೊಳ್ಳುತ್ತೇವೆ.”

ಆದರೆ, ಇತರರ ಮುಂದೆ ಯೋಗ್ಯರಾಗಿ ನಡೆದುಕೊಳ್ಳುವುದರ ಅರ್ಥವೇನು? ಇತರರ ಮುಂದೆ ನಾವು ನಮ್ಮನ್ನೇ ಹೆಚ್ಚಿಸಿಕೊಳ್ಳುವುದು ಇಲ್ಲವೇ ನಮ್ಮ ಕಡೆಗೆ ಅಥವಾ ನಮ್ಮ ಸಾಮರ್ಥ್ಯಗಳ ಕಡೆಗೆ ಅನುಚಿತವಾದ ಗಮನವನ್ನು ಸೆಳೆಯುವುದು ಇದರರ್ಥವೊ? ಇಲ್ಲ. ಬದಲಿಗೆ ನಾವು 1 ಪೇತ್ರ 2:12ರ ಮಾತುಗಳನ್ನು ಅನ್ವಯಿಸಿಕೊಳ್ಳುವಂತೆ ಅದು ಕೇಳಿಕೊಳ್ಳುತ್ತದೆ: “ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯದಲ್ಲಿ ಯೋಗ್ಯವಾಗಿರಲಿ; ಆಗ ಅವರು . . . ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು ವಿಚಾರಣೆಯ ದಿನದಲ್ಲಿ ದೇವರನ್ನು ಕೊಂಡಾಡುವರು.” ಕ್ರೈಸ್ತರು ತಮ್ಮ ನಡತೆಯ ಮೂಲಕವೇ ಇತರರ ಮುಂದೆ ತಾವು ಯೋಗ್ಯರಾಗಿ ನಡೆದುಕೊಳ್ಳುತ್ತಿದ್ದೇವೆಂಬ ಪುರಾವೆಯನ್ನು ಕೊಡುತ್ತಾರೆ! ಇದು ಕಟ್ಟಕಡೆಗೆ, ನಮಗಲ್ಲ ಬದಲಿಗೆ ದೇವರಿಗೆ ಸ್ತುತಿಯನ್ನು ತರುತ್ತದೆ. ಹಾಗಿದ್ದರೂ ನಾವು ಇತರರ ಮುಂದೆ ಯೋಗ್ಯರಾಗಿ ನಡೆದುಕೊಳ್ಳುವಾಗ ಅದು ಸ್ವತಃ ನಮಗೆ ಪ್ರಯೋಜನಗಳನ್ನು ತರುತ್ತದೆ. ನಿಮಗೆ ಅನ್ವಯವಾಗಬಹುದಾದ ಮೂರು ಕ್ಷೇತ್ರಗಳನ್ನು ನಾವೀಗ ಪರೀಕ್ಷಿಸೋಣ.

ಒಬ್ಬ ಭಾವೀ ವಿವಾಹ ಸಂಗಾತಿಯಾಗಿ

ಉದಾಹರಣೆಗಾಗಿ ವಿವಾಹದ ವಿಷಯವನ್ನೇ ತೆಗೆದುಕೊಳ್ಳಿ. ವಿವಾಹವು ಯೆಹೋವ ದೇವರ ಒಂದು ಕೊಡುಗೆಯಾಗಿದೆ. ಆತನಿಂದಲೇ ‘ಭೂಪರಲೋಕಗಳಲ್ಲಿರುವ ಪ್ರತಿಯೊಂದು ಕುಟುಂಬವು ಹೆಸರು ಪಡೆದುಕೊಳ್ಳುತ್ತದೆ.’ (ಎಫೆಸ 3:15, NW) ಎಂದಾದರೂ ಒಂದು ದಿನ ಮದುವೆಯಾಗುವ ಆಸೆ ನಿಮಗಿರಬಹುದು. ಹಾಗಿರುವಲ್ಲಿ, ಒಬ್ಬ ಭಾವೀ ವಿವಾಹ ಸಂಗಾತಿಯೋಪಾದಿ ನೀವು ಎಷ್ಟರ ಮಟ್ಟಿಗೆ ಯೋಗ್ಯರಾಗಿ ನಡೆದುಕೊಳ್ಳುತ್ತಿದ್ದೀರಿ? ಒಬ್ಬ ಅವಿವಾಹಿತ ಕ್ರೈಸ್ತ ಪುರುಷ ಅಥವಾ ಸ್ತ್ರೀಯೋಪಾದಿ ನೀವು ಎಂತಹ ಹೆಸರನ್ನು ಗಳಿಸಿದ್ದೀರಿ?

ಕೆಲವೊಂದು ದೇಶಗಳಲ್ಲಿ ಇದರ ಬಗ್ಗೆ ಕುಟುಂಬಗಳು ತುಂಬ ಚಿಂತಿಸುತ್ತವೆ. ದೃಷ್ಟಾಂತಕ್ಕಾಗಿ, ಘಾನ ದೇಶದಲ್ಲಿ ಇಬ್ಬರು ವ್ಯಕ್ತಿಗಳು ಮದುವೆಯಾಗಲು ಬಯಸುವಾಗ, ಅದನ್ನು ಅವರು ತಮ್ಮ ಹೆತ್ತವರಿಗೆ ತಿಳಿಸುವುದು ಪದ್ಧತಿಯಾಗಿದೆ. ಅನಂತರ ಹೆತ್ತವರು ಅದನ್ನು ಕುಟುಂಬದ ಬೇರೆ ಸದಸ್ಯರಿಗೆ ತಿಳಿಸುವರು. ಆಗ ಗಂಡಿನ ಕುಟುಂಬದವರು, ನೆರೆಹೊರೆಯಲ್ಲಿ ಹೆಣ್ಣಿಗೆ ಎಂತಹ ರೀತಿಯ ಹೆಸರಿದೆಯೆಂಬುದನ್ನು ತಿಳಿದುಕೊಳ್ಳಲು ಆರಂಭಿಸುತ್ತಾರೆ. ಹೆಣ್ಣು ತಕ್ಕವಳಾಗಿದ್ದಾಳೆಂದು ಹೆತ್ತವರಿಗೆ ಮನವರಿಕೆಯಾದಾಗ, ತಮ್ಮ ಮಗನು ಅವರ ಮಗಳನ್ನು ಮದುವೆಯಾಗಲು ಬಯಸುತ್ತಾನೆಂದು ಹೆಣ್ಣಿನ ಕುಟುಂಬದವರಿಗೆ ಅವರು ತಿಳಿಸುತ್ತಾರೆ. ಈಗ ಹೆಣ್ಣಿನ ಕುಟುಂಬದವರು ಮದುವೆಗೆ ಒಪ್ಪಿಗೆಯನ್ನು ಕೊಡುವ ಮುಂಚೆ, ಗಂಡಿಗೆ ಯಾವ ರೀತಿಯ ಹೆಸರಿದೆಯೆಂಬುದನ್ನು ವಿಚಾರಿಸಿ ತಿಳಿದುಕೊಳ್ಳುತ್ತಾರೆ. ಘಾನದ ಒಂದು ನಾಣ್ನುಡಿಯು ಹೀಗೆ ಹೇಳುತ್ತದೆ: “ಮದುವೆಯಾಗುವ ಮುಂಚೆ ನಿಮ್ಮ ಭಾವೀ ಸಂಗಾತಿಯ ಪರಿಚಯವಿರುವವರ ಬಳಿ ವಿಚಾರಿಸಿನೋಡಿ.”

ಎಲ್ಲಿ ಪ್ರತಿಯೊಬ್ಬರು ತಮಗಿಷ್ಟವಾದವರನ್ನು ವಿವಾಹವಾಗುತ್ತಾರೊ ಆ ಪಾಶ್ಚಾತ್ಯ ದೇಶಗಳ ಕುರಿತೇನು? ಅಂಥ ಸ್ಥಳಗಳಲ್ಲೂ ಒಬ್ಬ ಪ್ರೌಢ ಕ್ರೈಸ್ತ ಪುರುಷ ಅಥವಾ ಸ್ತ್ರೀಯು, ಒಬ್ಬ ಭಾವೀ ಸಂಗಾತಿಯೊಂದಿಗೆ ಚೆನ್ನಾಗಿ ಪರಿಚಿತರಾಗಿರುವವರಿಂದ, ಅಂದರೆ ಹೆತ್ತವರಿಂದಲೋ ಪ್ರೌಢ ಸ್ನೇಹಿತರಿಂದಲೋ ಪ್ರಾಮಾಣಿಕವಾದ ಅಭಿಪ್ರಾಯವನ್ನು ಪಡೆದುಕೊಳ್ಳುವುದು ಬುದ್ಧಿವಂತಿಕೆಯಾಗಿದೆ. ಕುಟುಂಬ ಸಂತೋಷದ ರಹಸ್ಯ ಎಂಬ ಪುಸ್ತಕಕ್ಕನುಸಾರ, ಒಬ್ಬ ಯುವತಿಯು ಹೀಗೆ ಕೇಳಿಕೊಳ್ಳಬಹುದು: “‘ಈ ವ್ಯಕ್ತಿಗೆ ಯಾವ ರೀತಿಯ ಖ್ಯಾತಿಯಿದೆ? ಅವನ ಸ್ನೇಹಿತರು ಯಾರು? ಅವನು ಆತ್ಮಸಂಯಮವನ್ನು ಪ್ರದರ್ಶಿಸುತ್ತಾನೆಯೆ? ವೃದ್ಧ ವ್ಯಕ್ತಿಗಳನ್ನು ಅವನು ಹೇಗೆ ಉಪಚರಿಸುತ್ತಾನೆ? ಅವನು ಯಾವ ರೀತಿಯ ಕುಟುಂಬದಿಂದ ಬಂದಿದ್ದಾನೆ? ಅವನು ಅವರೊಂದಿಗೆ ಹೇಗೆ ವರ್ತಿಸುತ್ತಾನೆ? ಹಣದ ಕಡೆಗೆ ಅವನ ಮನೋಭಾವವೇನು? ಅವನು ಮದ್ಯಪಾನೀಯಗಳನ್ನು ದುರುಪಯೋಗಿಸುತ್ತಾನೊ? ಅವನು ಕೆರಳುವ ಪ್ರಕೃತಿಯವನಾಗಿದ್ದು ಹಿಂಸಾಚಾರಿಯಾಗಿದ್ದಾನೊ? ಅವನಿಗೆ ಯಾವ ಸಭಾ ಜವಾಬ್ದಾರಿಗಳಿವೆ, ಮತ್ತು ಅವನು ಅವುಗಳನ್ನು ಹೇಗೆ ನಿರ್ವಹಿಸುತ್ತಾನೆ? ನಾನು ಅವನನ್ನು ಆಳವಾಗಿ ಗೌರವಿಸಬಲ್ಲೆನೊ?’—ಯಾಜಕಕಾಂಡ 19:32; ಜ್ಞಾನೋಕ್ತಿ 22:29; 31:23; ಎಫೆಸ 5:3-5, 33; 1 ತಿಮೊಥೆಯ 5:8; 6:10; ತೀತ 2:6, 7.” *

ಇದೇ ರೀತಿಯಲ್ಲಿ ಒಬ್ಬ ಕ್ರೈಸ್ತ ಪುರುಷನು ತಾನು ಮದುವೆಯಾಗಲು ಯೋಚಿಸುತ್ತಿರುವ ಸ್ತ್ರೀಯ ಕುರಿತಾಗಿ ವಿಚಾರಿಸಿಕೊಳ್ಳಬಹುದು. ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ಪ್ರಕಾರ, ಬೋವಜನು ತದನಂತರ ಮದುವೆಯಾದ ರೂತಳೆಂಬ ಸ್ತ್ರೀಯಲ್ಲಿ ಅಂಥ ಆಸಕ್ತಿಯನ್ನು ತೋರಿಸಿದನು. “ಪರದೇಶಿಯಾದ ನಾನು ನಿಮ್ಮ ಅನುಗ್ರಹಕ್ಕೆ ಪಾತ್ರಳಾದದ್ದು ಹೇಗೆ?” ಎಂದು ರೂತಳು ಕೇಳಿದಾಗ, ಬೋವಜನು ಉತ್ತರಿಸಿದ್ದು: “ನೀನು ಏನೇನು ಮಾಡಿದ್ದೀಯೋ ಅದೆಲ್ಲದ್ದರ ಬಗ್ಗೆ ನನಗೆ ವರದಿಯು ಸಿಕ್ಕಿದೆ.” (ರೂತ್‌ 2:10-12, NW) ಹೌದು, ರೂತಳು ಒಬ್ಬ ನಿಷ್ಠಾವಂತ, ಸಮರ್ಪಿತ ಮತ್ತು ಪರಿಶ್ರಮಿ ಸ್ತ್ರೀಯಾಗಿದ್ದಾಳೆಂಬುದನ್ನು ಬೋವಜನು ವ್ಯಕ್ತಿಗತವಾಗಿ ಗಮನಿಸಿದ್ದನು ಮಾತ್ರವಲ್ಲ, ಅವಳ ಬಗ್ಗೆ ಅವನು ಇತರರಿಂದಲೂ ಒಳ್ಳೆಯ ಅಭಿಪ್ರಾಯವನ್ನು ಪಡೆದುಕೊಂಡಿದ್ದನು.

ಹಾಗೆಯೇ, ನೀವು ಒಬ್ಬ ಯೋಗ್ಯ ವಿವಾಹ ಸಂಗಾತಿಯಾಗಿದ್ದೀರೋ ಇಲ್ಲವೊ ಎಂಬುದನ್ನು ನಿಮ್ಮ ನಡತೆಯು ಇತರರಿಗೆ ಸ್ಪಷ್ಟವಾಗಿ ತೋರಿಸುವುದು. ಈ ವಿಷಯದಲ್ಲಿ ನೀವು ಇತರರ ಮುಂದೆ ಹೇಗೆ ನಡೆದುಕೊಳ್ಳುತ್ತಿದ್ದೀರಿ?

ಒಬ್ಬ ಉದ್ಯೋಗಿಯಾಗಿ

ಒಳ್ಳೆಯ ನಡತೆಯಿಂದಾಗಿ ಸ್ವತಃ ನಿಮಗೆ ಪ್ರಯೋಜನವಾಗಲಿರುವ ಇನ್ನೊಂದು ಕ್ಷೇತ್ರವು ಕೆಲಸದ ಸ್ಥಳವಾಗಿದೆ. ಉದ್ಯೋಗಗಳಿಗಾಗಿ ತೀವ್ರ ಪ್ರತಿಸ್ಪರ್ಧೆಯು ಇರಬಹುದು. ಅವಿಧೇಯರೂ, ತಡವಾಗಿ ಬರುವ ವಾಡಿಕೆಯಿರುವವರೂ, ಅಪ್ರಾಮಾಣಿಕರೂ ಆಗಿರುವ ಉದ್ಯೋಗಿಗಳನ್ನು ಅನೇಕ ವೇಳೆ ಕೆಲಸದಿಂದ ತೆಗೆದುಹಾಕಲಾಗುತ್ತದೆ. ಅಥವಾ, ಖರ್ಚುಗಳನ್ನು ಕಡಿಮೆಮಾಡಲಿಕ್ಕಾಗಿಯೂ ಕಂಪೆನಿಗಳು ಅನುಭವೀ ಉದ್ಯೋಗಿಗಳನ್ನು ತೆಗೆದುಹಾಕುತ್ತಾರೆ. ನಿರುದ್ಯೋಗಿಗಳು ಹೊಸ ಉದ್ಯೋಗವನ್ನು ಹುಡುಕುವಾಗ, ಆ ಕಂಪೆನಿಗಳು, ಈ ನಿರುದ್ಯೋಗಿಗಳ ಹಳೆಯ ಧಣಿಗಳ ಬಳಿ ಅವರ ಕೆಲಸಮಾಡುವ ರೂಢಿಗಳು, ಮನೋಭಾವ ಮತ್ತು ಅನುಭವದ ಕುರಿತು ವಿಚಾರಿಸಿ ತಿಳಿದುಕೊಳ್ಳುತ್ತಾರೆ. ಅನೇಕ ಕ್ರೈಸ್ತರು ತಮ್ಮ ಮರ್ಯಾದಸ್ಥ ನಡವಳಿಕೆ, ಸಭ್ಯ ಉಡುಪು, ಹಿತವಾದ ವರ್ತನೆ, ಮತ್ತು ಗಮನಾರ್ಹವಾದ ಕ್ರೈಸ್ತ ಗುಣಗಳ ಮೂಲಕ ತಮ್ಮ ಧಣಿಗಳ ಮುಂದೆ ಯೋಗ್ಯರಾಗಿ ನಡೆದುಕೊಳ್ಳುವುದರಲ್ಲಿ ಸಫಲರಾಗಿದ್ದಾರೆ.

ಆ ಗಮನಾರ್ಹವಾದ ಕ್ರೈಸ್ತ ಗುಣಗಳಲ್ಲಿ ಒಂದು, ಪ್ರಾಮಾಣಿಕತೆಯಾಗಿದೆ. ಹೆಚ್ಚಿನ ಧಣಿಗಳು ಈ ಗುಣಕ್ಕೆ ತುಂಬ ಮಹತ್ವವನ್ನು ಕೊಡುತ್ತಾರೆ. ಅಪೊಸ್ತಲ ಪೌಲನಂತೆ, ನಾವು ‘ಎಲ್ಲಾ ವಿಷಯಗಳಲ್ಲಿ ಸಜ್ಜನರಾಗಿ [“ಪ್ರಾಮಾಣಿಕರಾಗಿ,” NW] ನಡೆದುಕೊಳ್ಳಲು’ ಬಯಸುತ್ತೇವೆ. (ಇಬ್ರಿಯ 13:18) ಘಾನದಲ್ಲಿರುವ ಒಂದು ಗಣಿ ಕಾರ್ಖಾನೆಯಲ್ಲಿ, ವಸ್ತುಗಳು ಕಳುವಾಗುತ್ತಿವೆಯೆಂದು ವರದಿಸಲಾಯಿತು. ಆ ಸಂಸ್ಕರಣ ಕೇಂದ್ರದಲ್ಲಿ ಒಬ್ಬ ಸಾಕ್ಷಿಯಾಗಿದ್ದ ಸೂಪರ್‌ವೈಸರ್‌ನನ್ನು ಬಿಟ್ಟು ಉಳಿದವರೆಲ್ಲರನ್ನು ಕೆಲಸದಿಂದ ತೆಗೆದುಹಾಕಲಾಯಿತು. ಏಕೆ? ಅಲ್ಲಿನ ಮ್ಯಾನೇಜ್‌ಮೆಂಟ್‌ ಅನೇಕ ವರ್ಷಗಳಿಂದ ಅವನ ಪ್ರಾಮಾಣಿಕತೆಯನ್ನು ಗಮನಿಸಿತ್ತು. ಅವನ ಕಠಿನ ಪರಿಶ್ರಮ ಮತ್ತು ಅಧಿಕಾರದಲ್ಲಿದ್ದವರ ಕಡೆಗೆ ಅವನಿಗಿದ್ದ ಗೌರವದ ಕುರಿತು ಸಹ ಎಲ್ಲರಿಗೆ ತಿಳಿದಿತ್ತು. ಹೌದು, ಅವನ ಒಳ್ಳೆಯ ನಡತೆಯ ಕಾರಣದಿಂದಲೇ ಅವನ ಉದ್ಯೋಗವು ಉಳಿಯಿತು!

ಉದ್ಯೋಗದ ಮಾರುಕಟ್ಟೆಯಲ್ಲಿ ಕ್ರೈಸ್ತನೊಬ್ಬನು ತನ್ನನ್ನು ಯೋಗ್ಯನನ್ನಾಗಿ ಮಾಡಿಕೊಳ್ಳಲು ಬೇರೇನನ್ನು ಮಾಡಬಹುದು? ನಿಮಗೆ ಯಾವುದೇ ಕೆಲಸವು ಕೊಡಲ್ಪಟ್ಟಿರಲಿ, ಅದನ್ನು ಚೆನ್ನಾಗಿ ಮಾಡಲು ಕಲಿಯಿರಿ. (ಜ್ಞಾನೋಕ್ತಿ 22:29) ಶ್ರದ್ಧೆಯಿಂದ ಮತ್ತು ನಿಷ್ಠೆಯಿಂದ ಕೆಲಸಮಾಡಿರಿ. (ಜ್ಞಾನೋಕ್ತಿ 10:4; 13:4) ನಿಮ್ಮ ಧಣಿ ಮತ್ತು ಕೆಲಸದ ಸೂಪರ್‌ವೈಸರ್‌ರೊಂದಿಗೆ ವ್ಯವಹರಿಸುವಾಗ ಗೌರವವನ್ನು ತೋರಿಸಿರಿ. (ಎಫೆಸ 6:5) ಕಾಲನಿಷ್ಠೆ, ಪ್ರಾಮಾಣಿಕತೆ, ಕಾರ್ಯದಕ್ಷತೆ, ಮತ್ತು ಕಠಿನ ಪರಿಶ್ರಮದಂತಹ ಗುಣಗಳನ್ನು ಧಣಿಗಳು ತುಂಬ ಮೆಚ್ಚುತ್ತಾರೆ, ಮತ್ತು ಉದ್ಯೋಗದ ಅಭಾವವಿರುವಾಗಲೂ ಉದ್ಯೋಗವನ್ನು ಪಡೆಯುವಂತೆ ಈ ಗುಣಗಳೇ ನಿಮಗೆ ಸಹಾಯಮಾಡಬಲ್ಲವು.

ಸಭೆಯಲ್ಲಿ ಸುಯೋಗಗಳು

ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು ಸಭೆಯಲ್ಲಿ ಮುಂದಾಳುತ್ವವನ್ನು ವಹಿಸಲಿಕ್ಕಾಗಿ ಪ್ರೌಢ ಪುರುಷರ ಅಗತ್ಯವಿದೆ. ಏಕೆ? ಯೆಶಾಯನು ಪ್ರವಾದಿಸಿದ್ದು: “ನಿನ್ನ ಗುಡಾರದ ಸ್ಥಳವನ್ನು ವಿಸ್ತರಿಸು, ನಿನ್ನ ನಿವಾಸದ ಪರದೆಗಳು ಹರಡಲಿ.” (ಯೆಶಾಯ 54:2) ಈ ಪ್ರವಾದನೆಯ ನೆರವೇರಿಕೆಯಲ್ಲಿ, ಯೆಹೋವನ ಲೋಕವ್ಯಾಪಕ ಸಭೆಯು ವಿಸ್ತರಿಸುತ್ತಾ ಇದೆ.

ಆದುದರಿಂದ ನೀವೊಬ್ಬ ಕ್ರೈಸ್ತ ಪುರುಷರಾಗಿರುವಲ್ಲಿ, ಒಂದು ನೇಮಿತ ಸ್ಥಾನದಲ್ಲಿ ಸೇವೆಸಲ್ಲಿಸಲು ಅರ್ಹರಾಗಿರುವವರೋಪಾದಿ ನೀವು ಯೋಗ್ಯರಾಗಿ ಹೇಗೆ ನಡೆದುಕೊಳ್ಳಬಹುದು? ಯುವ ತಿಮೊಥೆಯನ ಉದಾಹರಣೆಯನ್ನು ಪರಿಗಣಿಸಿರಿ. ತಿಮೊಥೆಯನ ವಿಷಯವಾಗಿ, “ಲುಸ್ತ್ರದಲ್ಲಿಯೂ ಇಕೋನ್ಯದಲ್ಲಿಯೂ ಇದ್ದ ಸಹೋದರರು ಒಳ್ಳೇ ಸಾಕ್ಷಿಹೇಳುತ್ತಿದ್ದರು” ಎಂದು ಲೂಕನು ವರದಿಸುತ್ತಾನೆ. ಹೌದು, ಅವನ ಒಳ್ಳೆಯ ನಡತೆಯಿಂದಾಗಿ ಈ ಯುವ ವ್ಯಕ್ತಿಯು ಎರಡು ವಿಭಿನ್ನ ನಗರಗಳಲ್ಲಿ ಇತರರ ಮುಂದೆ ಯೋಗ್ಯವಾಗಿ ನಡೆದುಕೊಂಡಿದ್ದನು. ಆದುದರಿಂದಲೇ ಪೌಲನು ಅವನನ್ನು ಸಂಚರಣ ಶುಶ್ರೂಷೆಯಲ್ಲಿ ತನ್ನೊಂದಿಗೆ ಜೊತೆಗೂಡಲು ಆಮಂತ್ರಿಸಿದನು.—ಅ. ಕೃತ್ಯಗಳು 16:1-4.

ಇಂದು ಒಬ್ಬ ವ್ಯಕ್ತಿಯು, ಯೋಗ್ಯವಾದ ಹಾಗೂ ದೈವಿಕ ರೀತಿಯಲ್ಲಿ ‘ಮೇಲ್ವಿಚಾರಣೆಯ ಸ್ಥಾನವನ್ನು’ ಹೇಗೆ ‘ಎಟುಕಿಸಿಕೊಳ್ಳಲು ಯತ್ನಿಸಬಹುದು?’ ಆ ಸ್ಥಾನಕ್ಕೆ ನೇಮಿಸಲ್ಪಡುವಂತೆ ಸಭೆಯಲ್ಲಿರುವವರನ್ನು ಅನುಚಿತ ರೀತಿಯಲ್ಲಿ ಪ್ರಭಾವಿಸುವ ಮೂಲಕವಂತೂ ಅಲ್ಲ, ಬದಲಾಗಿ ಅಂತಹ ಜವಾಬ್ದಾರಿಗಳಿಗಾಗಿ ಆವಶ್ಯಕವಾಗಿರುವ ಗುಣಗಳನ್ನು ಬೆಳೆಸಿಕೊಳ್ಳುವ ಮೂಲಕವೇ. (1 ತಿಮೊಥೆಯ 3:1-10, 12, 13, NW; ತೀತ 1:5-9) ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಪೂರ್ಣವಾಗಿ ಪಾಲ್ಗೊಳ್ಳುವ ಮೂಲಕವೂ, ಅವನು “ಒಳ್ಳೇ ಕೆಲಸವನ್ನು ಅಪೇಕ್ಷಿಸುವವನಾಗಿದ್ದಾನೆಂಬ”ದನ್ನು ತೋರ್ಪಡಿಸಿಕೊಳ್ಳಬಹುದು. (ಮತ್ತಾಯ 24:14; 28:19, 20) ಜವಾಬ್ದಾರಿಯುಳ್ಳ ಕ್ರೈಸ್ತ ಪುರುಷರಾಗಿ ಯೋಗ್ಯ ರೀತಿಯಲ್ಲಿ ನಡೆದುಕೊಳ್ಳುವವರು, ತಮ್ಮ ಆತ್ಮಿಕ ಸಹೋದರರ ಕ್ಷೇಮಾಭಿವೃದ್ಧಿಯಲ್ಲಿ ನಿಜವಾದ ಆಸಕ್ತಿಯನ್ನು ಸಹ ತೋರಿಸುತ್ತಾರೆ. ಅವರು ಅಪೊಸ್ತಲ ಪೌಲನ ಬುದ್ಧಿವಾದವನ್ನು ಪಾಲಿಸುತ್ತಾರೆ: “ದೇವಜನರಿಗೆ ಕೊರತೆಬಂದಾಗ ಸಹಾಯ ಮಾಡಿರಿ. ಅತಿಥಿಸತ್ಕಾರವನ್ನು ಅಭ್ಯಾಸಿಸಿರಿ.” (ರೋಮಾಪುರ 12:13) ಇದೆಲ್ಲವನ್ನು ಮಾಡುವ ಮೂಲಕ ಒಬ್ಬ ಕ್ರೈಸ್ತ ಪುರುಷನು ನಿಜವಾಗಿಯೂ ‘ದೇವರ ಶುಶ್ರೂಷಕನೋಪಾದಿ ಯೋಗ್ಯನಾಗಿ ನಡೆದುಕೊಳ್ಳಸಾಧ್ಯವಿದೆ.’

ಎಲ್ಲ ಸಮಯಗಳಲ್ಲಿ ಯೋಗ್ಯರಾಗಿ ನಡೆದುಕೊಳ್ಳುವುದು

ಇತರರ ಮುಂದೆ ಯೋಗ್ಯರಾಗಿ ನಡೆದುಕೊಳ್ಳುವುದರ ಅರ್ಥ, ನಾವು ಒಂದು ಸೋಗನ್ನು ಹಾಕಿಕೊಳ್ಳಬೇಕು ಅಥವಾ “ಮನುಷ್ಯರನ್ನು ಮೆಚ್ಚಿಸುವವರು” ಆಗಿರಬೇಕೆಂದಾಗಿರುವುದಿಲ್ಲ. (ಎಫೆಸ 6:6) ಮೂಲಭೂತವಾಗಿ ಇದರರ್ಥ, ನಾವು ದೇವರ ನಿಯಮಗಳು ಮತ್ತು ತತ್ವಗಳನ್ನು ನಿಷ್ಠೆಯಿಂದ ಅನುಸರಿಸುವ ಮೂಲಕ ನಮ್ಮ ಸೃಷ್ಟಿಕರ್ತನಾದ ಯೆಹೋವ ದೇವರ ಮುಂದೆ ಯೋಗ್ಯ ರೀತಿಯಲ್ಲಿ ನಡೆದುಕೊಳ್ಳಬೇಕೆಂಬುದೇ ಆಗಿದೆ. ನೀವು ನಿಮ್ಮ ಆತ್ಮಿಕತೆಯನ್ನು ಹೆಚ್ಚಿಸುತ್ತಾ, ಯೆಹೋವ ದೇವರೊಂದಿಗಿನ ನಿಮ್ಮ ಸಂಬಂಧವನ್ನು ಬಲಪಡಿಸುವಲ್ಲಿ, ನೀವು ನಿಮ್ಮ ಕುಟುಂಬದವರೊಂದಿಗೆ, ಸಹೋದ್ಯೋಗಿಗಳೊಂದಿಗೆ ಮತ್ತು ಜೊತೆ ಕ್ರೈಸ್ತರೊಂದಿಗೆ ವ್ಯವಹರಿಸುವ ರೀತಿಯಲ್ಲಿ ಅಭಿವೃದ್ಧಿಯನ್ನು ಮಾಡಿದ್ದೀರೆಂಬುದನ್ನು ಇತರರು ಗಮನಿಸುವರು. ಅವರು ನಿಮ್ಮ ಸ್ಥಿರತೆ ಮತ್ತು ಸಮಚಿತ್ತತೆ, ನಿಮ್ಮ ಒಳ್ಳೆಯ ತೀರ್ಮಾನಶಕ್ತಿ, ಜವಾಬ್ದಾರಿಯನ್ನು ನಿರ್ವಹಿಸುವ ನಿಮ್ಮ ಸಾಮರ್ಥ್ಯ ಮತ್ತು ನಿಮ್ಮ ನಮ್ರತೆಯನ್ನೂ ಗಮನಿಸುವರು. ಇದರಿಂದ ನೀವು ಅವರ ಪ್ರೀತಿಗೌರವವನ್ನು ಸಂಪಾದಿಸಬಹುದು ಮಾತ್ರವಲ್ಲ, ಹೆಚ್ಚು ಪ್ರಾಮುಖ್ಯವಾಗಿ ದೇವರ ಸಮ್ಮತಿಯನ್ನು ಗಳಿಸುವಿರಿ, ಯಾಕೆಂದರೆ ನೀವು ಇತರರ ಮುಂದೆ ಯೋಗ್ಯರಾಗಿ ನಡೆದುಕೊಳ್ಳುತ್ತಿದ್ದೀರಿ!

[ಪಾದಟಿಪ್ಪಣಿಗಳು]

^ ಪ್ಯಾರ. 8 ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿತ.

[ಪುಟ 19ರಲ್ಲಿರುವ ಚಿತ್ರ]

ತಮ್ಮ ಮಗ ಅಥವಾ ಮಗಳು ಯಾರನ್ನು ಮದುವೆಯಾಗಲು ಇಷ್ಟಪಡುತ್ತಾರೊ ಅವರಿಗೆ ಯಾವ ರೀತಿಯ ಹೆಸರಿದೆ ಎಂಬುದರ ಕುರಿತಾಗಿ ಅನೇಕ ಹೆತ್ತವರು ಬುದ್ಧಿವಂತಿಕೆಯಿಂದ ವಿಚಾರಿಸಿ ತಿಳಿದುಕೊಳ್ಳುತ್ತಾರೆ

[ಪುಟ 20ರಲ್ಲಿರುವ ಚಿತ್ರ]

ಇತರರೊಂದಿಗೆ ದಯಾಪರನಾಗಿರುವ ಮೂಲಕ ಒಬ್ಬ ಸಹೋದರನು ತಾನು ಸೇವಾ ಸುಯೋಗಗಳಿಗೆ ಯೋಗ್ಯನಾಗಿದ್ದೇನೆಂಬುದನ್ನು ತೋರಿಸಿಕೊಡುತ್ತಾನೆ