ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮುಂತಿಳಿಸಲ್ಪಟ್ಟಂತೆ ಎಲ್ಲವನ್ನು ಹೊಸದುಮಾಡುವುದು

ಮುಂತಿಳಿಸಲ್ಪಟ್ಟಂತೆ ಎಲ್ಲವನ್ನು ಹೊಸದುಮಾಡುವುದು

ಮುಂತಿಳಿಸಲ್ಪಟ್ಟಂತೆ ಎಲ್ಲವನ್ನು ಹೊಸದುಮಾಡುವುದು

“ಸಿಂಹಾಸನದ ಮೇಲೆ ಕೂತಿದ್ದವನು—ಇಗೋ ಎಲ್ಲವನ್ನು ಹೊಸದುಮಾಡುತ್ತೇನೆ ಅಂದನು. . . . ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ ಎಂದು ಹೇಳಿದನು.”—ಪ್ರಕಟನೆ 21:5.

1, 2. ಭವಿಷ್ಯತ್ತಿನಲ್ಲಿ ಏನು ಕಾದಿರಿಸಲ್ಪಟ್ಟಿದೆ ಎಂಬುದನ್ನು ಪರಿಗಣಿಸಲು ಅನೇಕ ಜನರು ಏಕೆ ಹಿಂಜರಿಯುತ್ತಾರೆ?

‘ನಾಳೆ ಏನಾಗುತ್ತದೋ ಯಾರಿಗೆ ಗೊತ್ತು’ ಎಂದು ನೀವು ಎಂದಾದರೂ ಹೇಳಿದ್ದೀರೊ ಅಥವಾ ನೀವು ಎಂದಾದರೂ ಹಾಗೆ ಯೋಚಿಸಿದ್ದೀರೋ? ಭವಿಷ್ಯತ್ತಿನಲ್ಲಿ ಏನು ಕಾದಿದೆ ಎಂಬುದನ್ನು ಊಹಿಸಲು ಅಥವಾ ಮುಂದೆ ಏನು ನಡೆಯಲಿದೆ ಎಂಬುದನ್ನು ಮುಂತಿಳಿಸುತ್ತೇವೆಂದು ದುಡುಕಿನಿಂದ ಹೇಳಿಕೊಳ್ಳುವವರಲ್ಲಿ ಭರವಸೆಯಿಡಲು ಜನರು ಏಕೆ ಹಿಂಜರಿಯುತ್ತಾರೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಸಾಧ್ಯವಿದೆ. ಬರಲಿರುವ ತಿಂಗಳುಗಳಲ್ಲಿ ಅಥವಾ ವರ್ಷಗಳಲ್ಲಿ ಏನು ಸಂಭವಿಸುವುದು ಎಂಬುದನ್ನು ನಿಷ್ಕೃಷ್ಟವಾಗಿ ಮುಂತಿಳಿಸುವಂತಹ ಸಾಮರ್ಥ್ಯ ಮಾನವರಿಗೆ ಖಂಡಿತವಾಗಿಯೂ ಇಲ್ಲ.

2ಫೋರ್‌ಬ್ಸ್‌ ಏಎಸ್‌ಏಪಿ ಎಂಬ ಪತ್ರಿಕೆಯು, ಕಾಲದ ಕುರಿತು ವಿವರಿಸಲಿಕ್ಕಾಗಿಯೇ ಒಂದು ಸಂಚಿಕೆಯನ್ನು ಮೀಸಲಾಗಿಟ್ಟಿತು. ಅದರಲ್ಲಿ, ಟಿವಿ ಸಾಕ್ಷ್ಯಚಿತ್ರದ ನಿರೂಪಕನಾದ ರಾಬರ್ಟ್‌ ಕ್ರಿಂಜ್‌ಲಿ ಬರೆದುದು: “ಸಮಯವು ಕೊನೆಯಲ್ಲಿ ನಮ್ಮೆಲ್ಲರಿಗೆ ಅವಮಾನಮಾಡುತ್ತದೆ, ಆದರೆ ಸಮಯದ ಕೈಗಳಲ್ಲಿ ಭವಿಷ್ಯನುಡಿಯುವವರು ಅನುಭವಿಸುವಷ್ಟು ಕಷ್ಟವನ್ನು ಬೇರೆ ಯಾರೂ ಅನುಭವಿಸುವುದಿಲ್ಲ. ಭವಿಷ್ಯತ್ತಿನಲ್ಲಿ ಏನು ಸಂಭವಿಸಲಿದೆ ಎಂಬುದನ್ನು ಊಹಿಸಿಕೊಳ್ಳಲು ಪ್ರಯತ್ನಿಸುವುದು ಒಂದು ಆಟವಾಗಿದೆ. ಅದರಲ್ಲಿ ನಾವು ಬಹುಮಟ್ಟಿಗೆ ಯಾವಾಗಲೂ ಸೋಲುತ್ತೇವೆ. . . . ಆದರೂ, ಪರಿಣತರೆಂದು ಕರೆಸಿಕೊಳ್ಳುವವರು ಭವಿಷ್ಯವಾಣಿಗಳನ್ನು ನುಡಿಯುವುದನ್ನು ಮುಂದುವರಿಸುತ್ತಿದ್ದಾರೆ.”

3, 4. (ಎ) ಹೊಸ ಸಹಸ್ರಮಾನದ ಕುರಿತು ಕೆಲವರಿಗೆ ಯಾವ ಆಶಾವಾದವಿದೆ? (ಬಿ) ಭವಿಷ್ಯತ್ತಿನ ಕುರಿತು ಯಾವ ವಾಸ್ತವಿಕ ನಿರೀಕ್ಷೆಯು ಇತರರಿಗಿದೆ?

3 ಹೊಸ ಸಹಸ್ರಮಾನಕ್ಕೆ ಅತ್ಯಧಿಕ ಗಮನವು ಕೊಡಲ್ಪಟ್ಟಿರುವುದನ್ನು ನೀವು ಗಮನಿಸಿರಬಹುದು. ಇದರಿಂದಾಗಿ ಹೆಚ್ಚೆಚ್ಚು ಜನರು ಭವಿಷ್ಯತ್ತಿನ ಕುರಿತು ಚಿಂತಿಸುತ್ತಿರುವಂತೆ ತೋರಬಹುದು. ಕಳೆದ ವರ್ಷದ ಆರಂಭದಲ್ಲಿ ಮಕ್ಲೀನ್ಸ್‌ ಪತ್ರಿಕೆಯು ಹೇಳಿದ್ದು: “2000 ಇಸವಿಯು, ಕೆನಡದ ಅಧಿಕಾಂಶ ಜನರಿಗೆ ಕೇವಲ ಕ್ಯಾಲೆಂಡರ್‌ನ ಇನ್ನೊಂದು ವರ್ಷವಾಗಿರಬಹುದು, ಆದರೆ ಇದು ನಿಜವಾಗಿಯೂ ಒಂದು ಹೊಸ ಆರಂಭದೊಂದಿಗೆ ಕಾಕತಾಳೀಯವಾಗಿರಬಹುದು.” ಯಾರ್ಕ್‌ ವಿಶ್ವವಿದ್ಯಾನಿಲಯದ ಪ್ರೊಫೆಸರ್‌ ಕ್ರಿಸ್‌ ಡ್ಯೂಡ್ನೆ ಅವರು ಆಶಾವಾದಕ್ಕೆ ಈ ಕಾರಣವನ್ನು ಕೊಟ್ಟರು: “ಸಹಸ್ರಮಾನದ ಅರ್ಥವು, ನಿಜವಾಗಿಯೂ ಭೀಕರವಾಗಿದ್ದ ಒಂದು ಶತಮಾನದೊಂದಿಗೆ ನಾವು ಸಂಬಂಧವನ್ನು ಕಡಿದುಕೊಳ್ಳುವುದೇ ಆಗಿದೆ.”

4 ಇದು ಕೇವಲ ಒಂದು ಹಾರೈಕೆಯಾಗಿ ಕಂಡುಬರುತ್ತದೋ? ಕೆನಡದಲ್ಲಿ, ಒಂದು ಮತಗಣನೆಗೆ ಪ್ರತಿಕ್ರಿಯಿಸಿದವರಲ್ಲಿ 22 ಪ್ರತಿಶತ ಮಂದಿ ಮಾತ್ರ “2000 ಇಸವಿಯು ಲೋಕಕ್ಕೆ ಒಂದು ಹೊಸ ಆರಂಭವನ್ನು ತರುವುದು ಎಂದು ನಂಬುತ್ತಾರೆ.” ವಾಸ್ತವದಲ್ಲಿ, ಅವರಲ್ಲಿ ಸುಮಾರು ಅರ್ಧದಷ್ಟು ಜನರು 50 ವರ್ಷಗಳೊಳಗೆ “ಇನ್ನೊಂದು ಜಾಗತಿಕ ಹೋರಾಟವನ್ನು,” ಅಂದರೆ ಲೋಕ ಯುದ್ಧವನ್ನು “ನಿರೀಕ್ಷಿಸುತ್ತಾರೆ.” ಸ್ಪಷ್ಟವಾಗಿಯೇ, ಎಲ್ಲವನ್ನೂ ಹೊಸದು ಮಾಡುವ ಮೂಲಕ, ಹೊಸ ಸಹಸ್ರಮಾನವು ನಮ್ಮ ಸಮಸ್ಯೆಗಳನ್ನು ತೆಗೆದುಹಾಕಲಾರದು ಎಂಬುದನ್ನು ಅಧಿಕಾಂಶ ಮಂದಿ ಅರ್ಥಮಾಡಿಕೊಳ್ಳುತ್ತಾರೆ. ಬ್ರಿಟನ್ಸ್‌ ರಾಯಲ್‌ ಸೊಸೈಟಿಯ ಮಾಜಿ ಅಧ್ಯಕ್ಷರಾದ ಸರ್‌ ಮೈಕಲ್‌ ಏಟೀಆ ಅವರು ಬರೆದುದು: “ಬದಲಾವಣೆಯ ತೀವ್ರಗತಿಯು . . . ನಮ್ಮ ಇಡೀ ನಾಗರಿಕತೆಗೆ ಇಪ್ಪತ್ತೊಂದನೆಯ ಶತಮಾನವು ನಿರ್ಣಾಯಕ ಪಂಥಾಹ್ವಾನಗಳನ್ನು ತರುವುದನ್ನು ಅರ್ಥೈಸುತ್ತದೆ. ಜನಸಂಖ್ಯಾಭಿವೃದ್ಧಿ, ಸಂಪನ್ಮೂಲಗಳ ಕೊರತೆ, ಪರಿಸರೀಯ ಮಾಲಿನ್ಯ ಮತ್ತು ವ್ಯಾಪಕವಾದ ಬಡತನದಂತಹ ಸಮಸ್ಯೆಗಳನ್ನು ನಾವು ಈಗಾಗಲೇ ಅನುಭವಿಸುತ್ತಿದ್ದೇವೆ ಮತ್ತು ಇವುಗಳನ್ನು ಬಗೆಹರಿಸಲು ತುರ್ತಿನಿಂದ ಕಾರ್ಯನಿರ್ವಹಿಸಬೇಕಾಗಿದೆ.”

5. ಮುಂದೆ ಏನು ಕಾದಿರಿಸಲ್ಪಟ್ಟಿದೆ ಎಂಬುದರ ಕುರಿತು ನಾವು ವಿಶ್ವಾಸಾರ್ಹವಾದ ಮಾಹಿತಿಯನ್ನು ಎಲ್ಲಿ ಕಂಡುಕೊಳ್ಳಸಾಧ್ಯವಿದೆ?

5 ‘ನಮ್ಮ ಭವಿಷ್ಯತ್ತು ಏನು ಎಂಬುದನ್ನು ಮನುಷ್ಯರು ಮುಂತಿಳಿಸಲು ಸಾಧ್ಯವಿಲ್ಲದಿರುವುದರಿಂದ, ನಾವು ಅದರ ಬಗ್ಗೆ ಚಿಂತಿಸದಿರುವುದೇ ಒಳಿತಲ್ಲವೋ?’ ಎಂದು ನಿಮಗನಿಸಬಹುದು. ಇಲ್ಲ ಎಂಬುದೇ ಇದಕ್ಕೆ ಉತ್ತರವಾಗಿದೆ! ಭವಿಷ್ಯತ್ತಿನಲ್ಲಿ ಏನಾಗಲಿದೆ ಎಂಬುದನ್ನು ಮನುಷ್ಯರು ನಿಷ್ಕೃಷ್ಟವಾಗಿ ಮುಂತಿಳಿಸಲು ಅಸಮರ್ಥರಾಗಿದ್ದಾರೆಂಬುದೇನೋ ನಿಜವೇ. ಆದರೆ ಯಾರೊಬ್ಬರಿಗೂ ಅದರ ಬಗ್ಗೆ ತಿಳಿಸಲು ಸಾಧ್ಯವಿಲ್ಲ ಎಂದು ನಾವು ನೆನಸಬಾರದು. ಹಾಗಾದರೆ, ಯಾರು ಭವಿಷ್ಯತ್ತನ್ನು ಮುಂತಿಳಿಸಬಲ್ಲರು ಮತ್ತು ಅದರ ಕುರಿತು ನಾವು ಏಕೆ ಆಶಾವಾದಿಗಳಾಗಿರಬೇಕು? ವಿಶಿಷ್ಟವಾದ ನಾಲ್ಕು ಭವಿಷ್ಯವಾಣಿಗಳಲ್ಲಿ ನೀವು ಸಂತೃಪ್ತಿಕರ ಉತ್ತರಗಳನ್ನು ಕಂಡುಕೊಳ್ಳಸಾಧ್ಯವಿದೆ. ಅತ್ಯಧಿಕ ಜನರ ಬಳಿಯಿರುವ ಹಾಗೂ ಹೆಚ್ಚು ವ್ಯಾಪಕವಾಗಿ ಓದಲ್ಪಡುವ, ಮತ್ತು ಅದೇ ಸಮಯದಲ್ಲಿ ಎಲ್ಲೆಡೆಯೂ ಅಪಾರ್ಥಮಾಡಿಕೊಳ್ಳಲ್ಪಟ್ಟಿರುವ ಹಾಗೂ ಅಲಕ್ಷಿಸಲ್ಪಟ್ಟಿರುವ ಪುಸ್ತಕವಾದ ಬೈಬಲಿನಲ್ಲಿ ಈ ಭವಿಷ್ಯವಾಣಿಗಳು ದಾಖಲಿಸಲ್ಪಟ್ಟಿವೆ. ಬೈಬಲಿನ ಕುರಿತು ನಿಮ್ಮ ಅನಿಸಿಕೆ ಏನೇ ಆಗಿರಲಿ ಹಾಗೂ ನೀವು ಅದರೊಂದಿಗೆ ಎಷ್ಟೇ ಚಿರಪರಿಚಿತರಾಗಿರಲಿ, ಈ ನಾಲ್ಕು ಮೂಲಭೂತ ವಚನಗಳನ್ನು ಪರಿಗಣಿಸುವುದು ನಿಮಗೆ ಪ್ರಯೋಜನದಾಯಕವಾಗಿರುವುದು. ನಿಜವಾಗಿಯೂ ಇವು ತುಂಬ ಉಜ್ವಲವಾದ ಒಂದು ಭವಿಷ್ಯತ್ತನ್ನು ಮುಂತಿಳಿಸುತ್ತವೆ. ಅಷ್ಟುಮಾತ್ರವಲ್ಲ, ನಿಮ್ಮ ಹಾಗೂ ನಿಮ್ಮ ಪ್ರಿಯ ಜನರ ಭವಿಷ್ಯತ್ತು ಏನಾಗಿರಸಾಧ್ಯವಿದೆ ಎಂಬುದನ್ನು ಈ ನಾಲ್ಕು ಪ್ರಮುಖ ಪ್ರವಾದನೆಗಳು ವಿವರಿಸುತ್ತವೆ.

6, 7. ಯೆಶಾಯನು ಯಾವಾಗ ಪ್ರವಾದಿಸಿದನು, ಮತ್ತು ಅವನ ಭವಿಷ್ಯವಾಣಿಗಳು ಹೇಗೆ ಆಶ್ಚರ್ಯಕರ ರೀತಿಯಲ್ಲಿ ನೆರವೇರಿದವು?

6ಯೆಶಾಯ 65ನೆಯ ಅಧ್ಯಾಯದಲ್ಲಿ ಮೊದಲನೆಯ ಭವಿಷ್ಯವಾಣಿಯನ್ನು ಕಂಡುಕೊಳ್ಳಸಾಧ್ಯವಿದೆ. ಅದನ್ನು ಓದುವುದಕ್ಕೆ ಮೊದಲು ಅದರ ಸನ್ನಿವೇಶವನ್ನು, ಅಂದರೆ ಈ ವಿಷಯವು ಯಾವಾಗ ಬರೆಯಲ್ಪಟ್ಟಿತು ಮತ್ತು ಆಗ ಯಾವ ಪರಿಸ್ಥಿತಿಯು ಇತ್ತು ಎಂಬುದನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳಿರಿ. ಈ ಮಾತುಗಳನ್ನು ಬರೆದ ದೇವರ ಪ್ರವಾದಿಯಾದ ಯೆಶಾಯನು, ಯೆಹೂದ ರಾಜ್ಯವು ಕೊನೆಗೊಳ್ಳುವ ಒಂದು ಶತಮಾನಕ್ಕಿಂತಲೂ ಹೆಚ್ಚು ಸಮಯಕ್ಕೆ ಮುಂಚೆ ಜೀವಿಸಿದ್ದನು. ಬಾಬೆಲಿನವರು ಯೆರೂಸಲೇಮನ್ನು ಸೂರೆಮಾಡಿ, ಅದರ ಜನರನ್ನು ದೇಶಭ್ರಷ್ಟರಾಗಿ ಕೊಂಡೊಯ್ಯುವಂತೆ ಅನುಮತಿಸುವ ಮೂಲಕ ಯೆಹೋವನು ಅಪನಂಬಿಗಸ್ತ ಯೆಹೂದ್ಯರಿಂದ ತನ್ನ ಸಂರಕ್ಷಣೆಯನ್ನು ಹಿಂದೆಗೆದುಕೊಂಡಾಗ, ಅಂತ್ಯವು ಸಂಭವಿಸಿತು. ಯೆಶಾಯನು ಈ ಭವಿಷ್ಯವಾಣಿಯನ್ನು ಮುಂತಿಳಿಸಿ ನೂರು ವರ್ಷಗಳಿಗಿಂತಲೂ ಹೆಚ್ಚು ಸಮಯ ಕಳೆದ ಬಳಿಕ ಇದು ಸಂಭವಿಸಿತು.—2 ಪೂರ್ವಕಾಲವೃತ್ತಾಂತ 36:15-21.

7 ಇದರ ನೆರವೇರಿಕೆಯ ಐತಿಹಾಸಿಕ ಹಿನ್ನೆಲೆಯ ವಿಷಯದಲ್ಲಿ ಹೇಳುವುದಾದರೆ, ದೇವರ ಮಾರ್ಗದರ್ಶನದಿಂದ ಯೆಶಾಯನು, ಕಟ್ಟಕಡೆಗೆ ಬಾಬೆಲನ್ನು ಸೋಲಿಸಲಿಕ್ಕಿದ್ದ ಪಾರಸಿಯ ಅರಸನಾದ ಕೋರೆಷನ ಹೆಸರನ್ನು ಅವನು ಜನಿಸುವುದಕ್ಕೆ ಮೊದಲೇ ಮುಂತಿಳಿಸಿದ್ದನು. (ಯೆಶಾಯ 45:1) ಸಾ.ಶ.ಪೂ. 537ರಲ್ಲಿ, ಯೆಹೂದ್ಯರು ಸ್ವದೇಶಕ್ಕೆ ಹಿಂದಿರುಗಸಾಧ್ಯವಾಗುವಂತೆ ಕೋರೆಷನು ದಾರಿಮಾಡಿಕೊಟ್ಟನು. ಆಶ್ಚರ್ಯಕರವಾಗಿಯೇ, ಆ ಪುನಸ್ಸ್ಥಾಪನೆಯ ಕುರಿತು ಯೆಶಾಯನು ಮುಂತಿಳಿಸಿದ್ದನ್ನು ನಾವು 65ನೆಯ ಅಧ್ಯಾಯದಲ್ಲಿ ಓದುತ್ತೇವೆ. ಇಸ್ರಾಯೇಲ್ಯರು ಸ್ವದೇಶದಲ್ಲಿ ಆನಂದಿಸಸಾಧ್ಯವಿದ್ದಂತಹ ಸನ್ನಿವೇಶದ ಮೇಲೆ ಅವನು ಗಮನವನ್ನು ಕೇಂದ್ರೀಕರಿಸಿದನು.

8. ಯೆಶಾಯನು ಯಾವ ಸಂತೋಷಕರ ಭವಿಷ್ಯತ್ತನ್ನು ಮುಂತಿಳಿಸಿದನು, ಮತ್ತು ಯಾವ ಅಭಿವ್ಯಕ್ತಿಯು ವಿಶೇಷವಾಗಿ ಆಸಕ್ತಿಕರವಾದದ್ದಾಗಿದೆ?

8ಯೆಶಾಯ 65:17-19ರಲ್ಲಿ ನಾವು ಓದುವುದು: “ಇಗೋ, ನೂತನಾಕಾಶಮಂಡಲವನ್ನೂ ನೂತನ ಭೂಮಂಡಲವನ್ನೂ ಸೃಷ್ಟಿಸುವೆನು; ಮೊದಲಿದ್ದದ್ದನ್ನು ಯಾರೂ ಜ್ಞಾಪಿಸಿಕೊಳ್ಳರು, ಅದು ನೆನಪಿಗೆ ಬಾರದು, ನಾನು ಮಾಡುವ ಸೃಷ್ಟಿ ಕಾರ್ಯದಲ್ಲಿಯೇ ಹರ್ಷಗೊಂಡು ಸದಾ ಉಲ್ಲಾಸಿಸಿರಿ; ಆಹಾ, ನಾನು ಯೆರೂಸಲೇಮನ್ನು ಉಲ್ಲಾಸದ ನಿವಾಸವನ್ನಾಗಿಯೂ ಅದರ ಜನರನ್ನು ಹರ್ಷಭರಿತರನ್ನಾಗಿಯೂ ಮಾಡುವೆನು. ನಾನೂ ಯೆರೂಸಲೇಮನ್ನು ದೃಷ್ಟಿಸುತ್ತಾ ಉಲ್ಲಾಸಿಸುವೆನು, ಅದರ ಜನರನ್ನು ಈಕ್ಷಿಸುತ್ತಾ ಹರ್ಷಗೊಳ್ಳುವೆನು. ರೋದನಶಬ್ದವೂ ಪ್ರಲಾಪಧ್ವನಿಯೂ ಅಲ್ಲಿ ಇನ್ನು ಕೇಳಿಸವು.” ನಿಶ್ಚಯವಾಗಿಯೂ, ಬಾಬೆಲಿನಲ್ಲಿ ಯೆಹೂದ್ಯರು ಯಾವ ಪರಿಸ್ಥಿತಿಗಳ ಕೆಳಗೆ ಜೀವಿಸಿದ್ದರೋ ಅದಕ್ಕಿಂತಲೂ ಅತ್ಯುತ್ತಮವಾಗಿದ್ದ ಪರಿಸ್ಥಿತಿಗಳನ್ನು ಯೆಶಾಯನು ವರ್ಣಿಸಿದನು. ಆನಂದ ಹಾಗೂ ಹರ್ಷಮಯ ಸ್ಥಿತಿಯನ್ನು ಅವನು ಮುಂತಿಳಿಸಿದನು. ಈಗ ‘ನೂತನಾಕಾಶಮಂಡಲ ಮತ್ತು ನೂತನಭೂಮಂಡಲ’ ಎಂಬ ಅಭಿವ್ಯಕ್ತಿಯನ್ನು ಗಮನಿಸಿರಿ. ಬೈಬಲಿನಲ್ಲಿ ಕಂಡುಬರುವ ಇಂತಹ ನಾಲ್ಕು ವಾಕ್ಸರಣಿಗಳಲ್ಲಿ ಇದು ಮೊದಲನೆಯದ್ದಾಗಿದ್ದು, ಈ ನಾಲ್ಕು ಉದ್ಧೃತ ಭಾಗಗಳು ನಮ್ಮ ಭವಿಷ್ಯತ್ತಿನೊಂದಿಗೆ ನೇರವಾದ ಸಂಬಂಧವನ್ನು ಹೊಂದಿವೆ ಮಾತ್ರವಲ್ಲ, ಅವು ನಮ್ಮ ಭವಿಷ್ಯತ್ತನ್ನೂ ಮುಂತಿಳಿಸುತ್ತವೆ.

9. ಯೆಶಾಯ 65:17-19ರ ನೆರವೇರಿಕೆಯಲ್ಲಿ ಪುರಾತನ ಯೆಹೂದ್ಯರೂ ಹೇಗೆ ಒಳಗೂಡಿದ್ದರು?

9ಯೆಶಾಯ 65:17-19ರ ಆರಂಭದ ನೆರವೇರಿಕೆಯು ಪುರಾತನ ಯೆಹೂದ್ಯರನ್ನು ಒಳಗೊಂಡಿತ್ತು. ಯೆಶಾಯನು ನಿಷ್ಕೃಷ್ಟವಾಗಿ ಮುಂತಿಳಿಸಿದಂತೆಯೇ, ಇವರು ಸ್ವದೇಶಕ್ಕೆ ಹಿಂದಿರುಗಿ ಅಲ್ಲಿ ನೆಲೆಸಿದರಲ್ಲದೆ, ಶುದ್ಧಾರಾಧನೆಯನ್ನು ಸಹ ಪುನಸ್ಸ್ಥಾಪಿಸಿದರು. (ಎಜ್ರ 1:1-4; 3:1-4) ಅವರು ವಿಶ್ವಮಂಡಲದ ಬೇರೆ ಯಾವುದೋ ಸ್ಥಳಕ್ಕೆ ಹಿಂದಿರುಗಲಿಲ್ಲ, ಬದಲಾಗಿ ಅದೇ ಭೂಗ್ರಹದ ಮೇಲಿದ್ದ ಸ್ವದೇಶಕ್ಕೆ ಹಿಂದಿರುಗಿದರು ಎಂಬುದನ್ನು ನೀವು ಗ್ರಹಿಸುತ್ತೀರಿ ಎಂಬುದು ನಿಶ್ಚಯ. ಈ ಅರಿವು, ಯೆಶಾಯನು ನೂತನಾಕಾಶಮಂಡಲ ಮತ್ತು ನೂತನಭೂಮಂಡಲ ಎಂದು ಹೇಳಿದಾಗ, ಅವನು ಹೇಳಿದ್ದರ ಅರ್ಥವೇನಾಗಿತ್ತು ಎಂಬುದನ್ನು ವಿಶ್ಲೇಷಿಸಲು ನಮಗೆ ಸಹಾಯಮಾಡಸಾಧ್ಯವಿದೆ. ಕೆಲವರಂತೆ ನಾವು ನಾಸ್ಟ್ರಡ್ಯಾಮಸ್‌ ಅಥವಾ ಭವಿಷ್ಯನುಡಿಯುವ ಇತರ ಜನರ ಅಸ್ಪಷ್ಟ ಪ್ರವಾದನೆಗಳ ಕುರಿತು ಊಹಿಸುವ ಅಗತ್ಯವಿಲ್ಲ. ಯೆಶಾಯನು ಹೇಳಿದ್ದರ ಅರ್ಥವೇನಾಗಿತ್ತು ಎಂಬುದನ್ನು ಬೈಬಲೇ ಸ್ಪಷ್ಟೀಕರಿಸುತ್ತದೆ.

10. ಯೆಶಾಯನು ಮುಂತಿಳಿಸಿರುವ ನೂತನ ‘ಭೂಮಂಡಲ’ ಎಂಬ ಪದವನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕು?

10 ಬೈಬಲಿನಲ್ಲಿ, “ಭೂಮಂಡಲ” ಎಂಬ ಪದವು ಯಾವಾಗಲೂ ನಮ್ಮ ಭೂಗೋಳವನ್ನೇ ಸೂಚಿಸುವುದಿಲ್ಲ. ಉದಾಹರಣೆಗೆ, ಹೀಬ್ರು ಭಾಷೆಯಲ್ಲಿ ಕೀರ್ತನೆ 96:1 ಅಕ್ಷರಶಃ ಹೀಗೆ ಹೇಳುತ್ತದೆ: ‘ಇಡೀ ಭೂಮಿಯೇ, ಯೆಹೋವನಿಗೆ ಹಾಡನ್ನು ಹಾಡು.’ ಒಣನೆಲ ಹಾಗೂ ವಿಶಾಲವಾದ ಮಹಾಸಾಗರಗಳನ್ನು ಒಳಗೊಂಡಿರುವ ನಮ್ಮ ಭೂಗ್ರಹವು ಹಾಡನ್ನು ಹಾಡಲು ಸಾಧ್ಯವಿಲ್ಲವೆಂಬುದು ನಮಗೆ ಗೊತ್ತು. ಆದರೆ ಜನರು ಹಾಡುತ್ತಾರೆ. ಹೌದು, ಕೀರ್ತನೆ 96:1ನೆಯ ವಚನವು ಭೂನಿವಾಸಿಗಳನ್ನು ಸೂಚಿಸಿ ಮಾತಾಡುತ್ತದೆ. * ಆದರೆ ಯೆಶಾಯ 65:17ರಲ್ಲಿ ‘ನೂತನಾಕಾಶಮಂಡಲದ’ ಉಲ್ಲೇಖವೂ ಇದೆ. ‘ಭೂಮಂಡಲ’ ಎಂಬ ಪದವು, ಯೆಹೂದ್ಯರ ಸ್ವದೇಶದಲ್ಲಿದ್ದ ಜನರ ಒಂದು ಹೊಸ ಸಮಾಜವನ್ನು ಪ್ರತಿನಿಧಿಸುವಲ್ಲಿ, ‘ನೂತನಾಕಾಶಮಂಡಲವು’ ಯಾವುದನ್ನು ಪ್ರತಿನಿಧಿಸುತ್ತದೆ?

11. ‘ನೂತನಭೂಮಂಡಲ’ ಎಂಬ ವಾಕ್ಸರಣಿಯು ಯಾವುದನ್ನು ಸೂಚಿಸುತ್ತದೆ?

11 ಮಕ್ಲಿಂಟಕ್‌ ಮತ್ತು ಸ್ಟ್ರಾಂಗ್‌ರ, ಸೈಕ್ಲೊಪೀಡಿಯ ಆಫ್‌ ಬಿಬ್ಲಿಕಲ್‌, ತಿಯಲಾಜಿಕಲ್‌, ಆ್ಯಂಡ್‌ ಎಕ್ಲೀಸೀಯಾಸ್ಟಿಕಲ್‌ ಲಿಟ್‌ರೇಚರ್‌ ಎಂಬ ಗ್ರಂಥವು ಹೇಳುವುದು: “ಎಲ್ಲೆಲ್ಲಿ ಒಂದು ಪ್ರವಾದನ ದರ್ಶನದ ಚಿತ್ರಣವು ನೀಡಲ್ಪಟ್ಟಿದೆಯೋ ಅಲ್ಲೆಲ್ಲ ಆಕಾಶವು . . . ಆಳುವ ಆಧಿಪತ್ಯಗಳ ಒಕ್ಕೂಟವನ್ನು ಸೂಚಿಸುತ್ತದೆ . . . ನೈಸರ್ಗಿಕ ಆಕಾಶವು ಹೇಗೆ ಭೂಮಿಗಿಂತಲೂ ಉನ್ನತ ಸ್ಥಾನದಲ್ಲಿದ್ದುಕೊಂಡು ಆಳುತ್ತದೋ ಅದೇ ರೀತಿಯಲ್ಲಿ ಆಳುವ ಶಕ್ತಿಗಳು ಪ್ರಜೆಗಳಿಗಿಂತಲೂ ಉನ್ನತ ಸ್ಥಾನದಲ್ಲಿ ಇದ್ದುಕೊಂಡು ಆಳುತ್ತವೆ.” “ಆಕಾಶ ಮತ್ತು ಭೂಮಂಡಲ” ಎಂಬ ಜೋಡಿ ವಾಕ್ಸರಣಿಯ ಕುರಿತು ಸೈಕ್ಲೊಪೀಡಿಯವು ವಿವರಿಸುವುದೇನೆಂದರೆ, ‘ಪ್ರವಾದನ ಭಾಷೆಯಲ್ಲಿ, ಈ ವಾಕ್ಸರಣಿಯು ವಿಭಿನ್ನ ಶ್ರೇಣಿಗಳಲ್ಲಿರುವ ವ್ಯಕ್ತಿಗಳ ರಾಜಕೀಯ ಸ್ಥಾನಮಾನಗಳನ್ನು ಸೂಚಿಸುತ್ತದೆ. ಆಕಾಶವು ಪರಮಾಧಿಕಾರವಾಗಿದ್ದರೆ, ಭೂಮಂಡಲವು ಜನಸಾಮಾನ್ಯರನ್ನು, ಅಂದರೆ ಉನ್ನತ ಅಧಿಕಾರದಲ್ಲಿರುವವರಿಂದ ಆಳಲ್ಪಡುವ ಜನರನ್ನು ಸೂಚಿಸುತ್ತದೆ.’

12. ಪುರಾತನ ಯೆಹೂದ್ಯರು ‘ನೂತನಾಕಾಶಮಂಡಲ ಮತ್ತು ನೂತನಭೂಮಂಡಲ’ವನ್ನು ಹೇಗೆ ಅನುಭವಿಸಿದರು?

12 ಯೆಹೂದ್ಯರು ಸ್ವದೇಶಕ್ಕೆ ಹಿಂದಿರುಗಿದಾಗ, ಯಾವುದನ್ನು ಹೊಸ ವಿಷಯಗಳ ವ್ಯವಸ್ಥೆ ಎಂದು ಕರೆಯಬಹುದಾಗಿತ್ತೋ ಅದನ್ನು ಪಡೆದುಕೊಂಡರು. ಅವರಿಗಾಗಿ ಒಂದು ಹೊಸ ಆಡಳಿತ ವರ್ಗವಿತ್ತು. ರಾಜ ದಾವೀದನ ಸಂತತಿಯವನಾಗಿದ್ದ ಜೆರುಬ್ಬಾಬೆಲನು ದೇಶಾಧಿಪತಿಯಾಗಿದ್ದನು ಮತ್ತು ಯೆಹೋಶುವನು ಮಹಾಯಾಜಕನಾಗಿದ್ದನು. (ಹಗ್ಗಾಯ 1:1, 12; 2:21; ಜೆಕರ್ಯ 6:11) ಇವರು “ನೂತನಾಕಾಶಮಂಡಲವನ್ನು” ಸೂಚಿಸಿದರು. ಅದು ಯಾವುದರ ಮೇಲಿರುವುದು? ‘ನೂತನಾಕಾಶಮಂಡಲವು’ ‘ನೂತನಭೂಮಂಡಲದ’ ಮೇಲೆ ಅಧಿಕಾರ ನಡಿಸಿತು. ಅಂದರೆ ಯೆಹೋವನನ್ನು ಆರಾಧಿಸಲಿಕ್ಕಾಗಿ ಯೆರೂಸಲೇಮನ್ನು ಮತ್ತು ಅದರ ದೇವಾಲಯವನ್ನು ಪುನಃ ಕಟ್ಟಲು ತಮ್ಮ ದೇಶಕ್ಕೆ ಹಿಂದಿರುಗಿದ್ದ ಶುದ್ಧೀಕರಿಸಲ್ಪಟ್ಟ ಜನರಿಂದ ಕೂಡಿದ್ದ ಸಮಾಜದ ಮೇಲೆ ಅಧಿಕಾರ ನಡಿಸಿತು. ಈ ನಿಜಾರ್ಥದಲ್ಲಿ, ಆ ಸಮಯದಲ್ಲಿ ಯೆಹೂದ್ಯರನ್ನು ಒಳಗೊಂಡಿದ್ದ ನೆರವೇರಿಕೆಯಲ್ಲಿ ನೂತನಾಕಾಶಮಂಡಲ ಮತ್ತು ನೂತನಭೂಮಂಡಲವು ಅಸ್ತಿತ್ವದಲ್ಲಿತ್ತು.

13, 14. (ಎ) ‘ನೂತನಾಕಾಶಮಂಡಲ ಮತ್ತು ನೂತನಭೂಮಂಡಲ’ ಎಂಬ ವಾಕ್ಸರಣಿಯ ಕುರಿತಾದ ಇನ್ನೂ ಯಾವ ಸಂಭವವನ್ನು ನಾವು ಪರಿಗಣಿಸಬೇಕು? (ಬಿ) ಈ ಸಮಯದಲ್ಲಿ ಪೇತ್ರನ ಪ್ರವಾದನೆಯು ಏಕೆ ವಿಶೇಷವಾಗಿ ಆಸಕ್ತಿದಾಯಕವಾದದ್ದಾಗಿದೆ?

13 ಆದರೆ, ಈಗ ನಾವು ಚರ್ಚಿಸುತ್ತಿರುವ ವಿಷಯದ ಮುಖ್ಯಾಂಶವನ್ನು ಗ್ರಹಿಸಲು ಮಾತ್ರ ಮರೆಯದಿರಿ. ಇದು ಬೈಬಲ್‌ ಸಂಬಂಧಿತ ಅರ್ಥವಿವರಣೆಯ ಒಂದು ಅಭ್ಯಾಸವೂ ಅಲ್ಲ, ಪ್ರಾಚೀನ ಇತಿಹಾಸದ ಕಡೆಗೆ ಒಂದು ಕ್ಷಿಪ್ರನೋಟವೂ ಅಲ್ಲ. “ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ” ಎಂಬ ವಾಕ್ಸರಣಿಯಿರುವ ಇನ್ನೊಂದು ಉದ್ಧೃತ ಭಾಗವನ್ನು ಪರಿಶೀಲಿಸುವ ಮೂಲಕ ನೀವು ಇದನ್ನು ಗಮನಿಸಸಾಧ್ಯವಿದೆ. 2 ಪೇತ್ರ 3ನೆಯ ಅಧ್ಯಾಯದಲ್ಲಿ ನೀವು ಇದೇ ವಿಷಯವನ್ನು ನೋಡುವಿರಿ ಮತ್ತು ಇದರಲ್ಲಿ ನಮ್ಮ ಭವಿಷ್ಯತ್ತು ಒಳಗೂಡಿದೆ ಎಂಬುದನ್ನು ನೀವು ತಿಳಿದುಕೊಳ್ಳುವಿರಿ.

14 ಯೆಹೂದ್ಯರು ಸ್ವದೇಶಕ್ಕೆ ಹಿಂದಿರುಗಿ 500 ವರ್ಷಗಳಾದ ಬಳಿಕ, ಅಪೊಸ್ತಲ ಪೇತ್ರನು ತನ್ನ ಪತ್ರವನ್ನು ಬರೆದನು. ಯೇಸುವಿನ ಅಪೊಸ್ತಲರಲ್ಲಿ ಒಬ್ಬನಾಗಿದ್ದ ಪೇತ್ರನು, 2 ಪೇತ್ರ 3:2ರಲ್ಲಿ ತಿಳಿಸಲ್ಪಟ್ಟಿರುವ “ಕರ್ತನ,” ಅಂದರೆ ಕ್ರಿಸ್ತನ ಹಿಂಬಾಲಕರಿಗೆ ಈ ಪತ್ರವನ್ನು ಬರೆಯುತ್ತಿದ್ದನು. 4ನೆಯ ವಚನದಲ್ಲಿ ಪೇತ್ರನು, ಯೇಸುವಿನ “ವಾಗ್ದಾನಿಸಲ್ಪಟ್ಟ ಸಾನ್ನಿಧ್ಯದ” (NW) ಬಗ್ಗೆ ಉಲ್ಲೇಖಿಸುತ್ತಾನೆ. ಇದು ಪ್ರವಾದನೆಯನ್ನು ಇಂದು ಬಹಳ ಸಮಂಜಸವಾದದ್ದಾಗಿ ಮಾಡುತ್ತದೆ. ಒಂದನೆಯ ಲೋಕ ಯುದ್ಧದ ಸಮಯದಂದಿನಿಂದ ಯೇಸು ದೇವರ ಸ್ವರ್ಗೀಯ ರಾಜ್ಯದಲ್ಲಿ ರಾಜನೋಪಾದಿ ಅಧಿಕಾರವನ್ನು ವಹಿಸಿಕೊಂಡಿರುವ ಅರ್ಥದಲ್ಲಿ ಪ್ರತ್ಯಕ್ಷನಾಗಿದ್ದಾನೆಂಬುದನ್ನು ಸಾಕಷ್ಟು ಪುರಾವೆಗಳು ತೋರಿಸುತ್ತವೆ. (ಪ್ರಕಟನೆ 6:1-8; 11:15, 18) ಈ ಅಧ್ಯಾಯದಲ್ಲಿ ಪೇತ್ರನು ಮುಂತಿಳಿಸಿದ ಬೇರೆ ಯಾವುದೋ ವಿಷಯದ ನೋಟದಲ್ಲಿ ಇದು ವಿಶೇಷವಾದ ಅರ್ಥವನ್ನು ಪಡೆದುಕೊಳ್ಳುತ್ತದೆ.

15. ‘ನೂತನಾಕಾಶಮಂಡಲದ’ ಕುರಿತಾದ ಪೇತ್ರನ ಪ್ರವಾದನೆಯು ಹೇಗೆ ನೆರವೇರಿಕೆಯನ್ನು ಹೊಂದುತ್ತಿದೆ?

15ಎರಡನೆಯ ಪೇತ್ರ 3:13ರಲ್ಲಿ ನಾವು ಓದುವುದು: “ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರುನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.” ಸ್ವರ್ಗದಲ್ಲಿರುವ ಯೇಸುವು ‘ನೂತನಾಕಾಶಮಂಡಲದ’ ಪ್ರಧಾನ ಅರಸನೆಂಬುದು ನಿಮಗೆ ಈಗಾಗಲೇ ತಿಳಿದಿರಬಹುದು. (ಲೂಕ 1:32, 33) ಆದರೂ, ಅವನೊಬ್ಬನೇ ಆಳ್ವಿಕೆ ನಡೆಸುವುದಿಲ್ಲವೆಂದು ಬೇರೆ ಬೈಬಲ್‌ ವಚನಗಳು ತೋರಿಸುತ್ತವೆ. ಅಪೊಸ್ತಲರಿಗೆ ಮತ್ತು ಅವರಂತಿರುವ ಇತರರಿಗೆ ಸ್ವರ್ಗದಲ್ಲಿ ಒಂದು ಸ್ಥಾನವಿರುವುದೆಂದು ಯೇಸು ವಾಗ್ದಾನಿಸಿದನು. ಇಬ್ರಿಯರಿಗೆ ಬರೆಯಲ್ಪಟ್ಟ ಪುಸ್ತಕದಲ್ಲಿ ಅಪೊಸ್ತಲ ಪೌಲನು ಅಂತಹವರನ್ನು ‘ಪರಲೋಕಸ್ವಾಸ್ಥ್ಯಕ್ಕಾಗಿ ಕರೆಯಲ್ಪಟ್ಟವರು’ ಎಂದು ವರ್ಣಿಸಿದನು. ಮತ್ತು ಈ ಗುಂಪಿನವರು ತನ್ನೊಂದಿಗೆ ಸ್ವರ್ಗದಲ್ಲಿ ಸಿಂಹಾಸನಗಳ ಮೇಲೆ ಕುಳಿತುಕೊಳ್ಳುವರೆಂದು ಯೇಸು ಹೇಳಿದನು. (ಇಬ್ರಿಯ 3:1; ಮತ್ತಾಯ 19:28; ಲೂಕ 22:28-30; ಯೋಹಾನ 14:2, 3) ಇತರರು ನೂತನಾಕಾಶಮಂಡಲದ ಭಾಗದೋಪಾದಿ ಯೇಸುವಿನೊಂದಿಗೆ ಆಳುವರು ಎಂಬುದೇ ಇದರ ಮುಖ್ಯಾಂಶವಾಗಿದೆ. ಹಾಗಾದರೆ, ‘ನೂತನಭೂಮಂಡಲ’ ಎಂಬ ಶಬ್ದದಿಂದ ಪೇತ್ರನು ಏನನ್ನು ಅರ್ಥೈಸಿದನು?

16. ಯಾವ ‘ನೂತನಭೂಮಂಡಲ’ವು ಈಗಾಗಲೇ ಅಸ್ತಿತ್ವದಲ್ಲಿದೆ?

16 ಯೆಹೂದ್ಯರು ಸ್ವದೇಶಕ್ಕೆ ಹಿಂದಿರುಗಿದಾಗಿನ ಪುರಾತನ ನೆರವೇರಿಕೆಯಂತೆಯೇ, 2 ಪೇತ್ರ 3:13ರ ಪ್ರಚಲಿತ ನೆರವೇರಿಕೆಯು, ನೂತನಾಕಾಶಮಂಡಲದ ಆಳ್ವಿಕೆಗೆ ಅಧೀನರಾಗುವ ಜನರನ್ನು ಒಳಗೊಳ್ಳುತ್ತದೆ. ಇಂದು ಈ ರೀತಿಯ ಆಳ್ವಿಕೆಗೆ ಸಂತೋಷದಿಂದ ಅಧೀನರಾಗುತ್ತಿರುವ ಲಕ್ಷಾಂತರ ಮಂದಿಯನ್ನು ನೀವು ಕಂಡುಕೊಳ್ಳಸಾಧ್ಯವಿದೆ. ಅವರು ಅದರ ಶೈಕ್ಷಣಿಕ ಕಾರ್ಯಕ್ರಮದಿಂದ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ ಮತ್ತು ಬೈಬಲಿನಲ್ಲಿ ಕಂಡುಬರುವ ಅದರ ನಿಯಮಗಳನ್ನು ಅನುಸರಿಸಲು ಪ್ರಯಾಸಪಡುತ್ತಿದ್ದಾರೆ. (ಯೆಶಾಯ 54:13) ಈ ಜನರೇ ‘ನೂತನಭೂಮಂಡಲದ’ ಮೊತ್ತಮೊದಲ ನಿವಾಸಿಗಳಾಗುತ್ತಾರೆ, ಅಂದರೆ ಇವರು ಸಕಲ ರಾಷ್ಟ್ರಗಳು, ಭಾಷೆಗಳು ಮತ್ತು ಕುಲಗಳಿಂದ ಬಂದ ಭೌಗೋಲಿಕ ಸಮಾಜವಾಗಿ ರೂಪುಗೊಳ್ಳುತ್ತಾ, ಆಳುತ್ತಿರುವ ಅರಸನಾದ ಯೇಸು ಕ್ರಿಸ್ತನಿಗೆ ಅಧೀನರಾಗುತ್ತಾ ಐಕ್ಯಭಾವದಿಂದ ಕೆಲಸಮಾಡುತ್ತಾರೆ. ನೀವು ಸಹ ಈ ಗುಂಪಿನ ಭಾಗವಾಗಸಾಧ್ಯವಿದೆ ಎಂಬುದೇ ಗಮನಾರ್ಹ ಸಂಗತಿಯಾಗಿದೆ!—ಮೀಕ 4:1-4.

17, 18. ಎರಡನೆಯ ಪೇತ್ರ 3:13ರಲ್ಲಿರುವ ಮಾತುಗಳು ನಮಗೆ ಭವಿಷ್ಯತ್ತಿನ ಕಡೆಗೆ ನೋಡುವಂತೆ ಏಕೆ ಕಾರಣವನ್ನು ಕೊಡುತ್ತವೆ?

17 ಆದರೆ ಎಲ್ಲವೂ ಇಲ್ಲಿಗೇ ಮುಗಿಯಿತೆಂದು, ಮತ್ತು ಭವಿಷ್ಯದ ಕುರಿತು ನಮಗೆ ಯಾವುದೇ ರೀತಿಯ ಸವಿವರವಾದ ಒಳನೋಟವು ಒದಗಿಸಲ್ಪಟ್ಟಿಲ್ಲವೆಂದು ಭಾವಿಸಬೇಡಿರಿ. ವಾಸ್ತವದಲ್ಲಿ, ನೀವು 2 ಪೇತ್ರ 3ನೆಯ ಅಧ್ಯಾಯದ ಪೂರ್ವಾಪರವನ್ನು ಪರೀಕ್ಷಿಸುವಾಗ, ಮುಂದೆ ಸಂಭವಿಸಲಿರುವ ಮಹಾ ಬದಲಾವಣೆಯ ಸೂಚನೆಗಳನ್ನು ಕಂಡುಕೊಳ್ಳುವಿರಿ. 5 ಮತ್ತು 6ನೆಯ ವಚನಗಳಲ್ಲಿ, ಪೇತ್ರನು ನೋಹನ ದಿನದ ಜಲಪ್ರಳಯದ ಕುರಿತು ಬರೆಯುತ್ತಾನೆ. ಆ ಪ್ರಳಯವು ಆಗಿನ ದುಷ್ಟ ಲೋಕವನ್ನು ಕೊನೆಗೊಳಿಸಿತ್ತು. 7ನೆಯ ವಚನದಲ್ಲಿ ಪೇತ್ರನು “ಈಗಿರುವ ಭೂಮ್ಯಾಕಾಶಗಳು,” ಅಂದರೆ ಪ್ರಭುತ್ವಗಳು ಹಾಗೂ ಜನಸಮೂಹಗಳು “ಭಕ್ತಿಹೀನರ ಶಿಕ್ಷಾವಿಧಿಯೂ ನಾಶವೂ ಉಂಟಾಗುವ ದಿನಕ್ಕಾಗಿ” ಕಾದಿರಿಸಲ್ಪಟ್ಟಿವೆ ಎಂದು ತಿಳಿಯಪಡಿಸುತ್ತಾನೆ. “ಈಗಿರುವ ಭೂಮ್ಯಾಕಾಶಗಳು” ಎಂಬ ವಾಕ್ಸರಣಿಯು ನಮ್ಮ ಭೌತಿಕ ವಿಶ್ವಮಂಡಲವನ್ನಲ್ಲ, ಬದಲಾಗಿ ಮನುಷ್ಯರನ್ನು ಮತ್ತು ಅವರ ಪ್ರಭುತ್ವಗಳನ್ನು ಸೂಚಿಸುತ್ತದೆ ಎಂಬುದನ್ನು ಇದು ದೃಢಪಡಿಸುತ್ತದೆ.

18ನಂತರ 13ನೆಯ ವಚನದಲ್ಲಿ ಉಲ್ಲೇಖಿಸಲ್ಪಟ್ಟಿರುವ ನೂತನಾಕಾಶಮಂಡಲ ಮತ್ತು ನೂತನಭೂಮಂಡಲಕ್ಕೆ ದಾರಿಮಾಡಿಕೊಡುತ್ತಾ, ಬರಲಿಕ್ಕಿರುವ ಯೆಹೋವನ ದಿನವು ಮಹಾ ಶುದ್ಧೀಕರಣವನ್ನು ಉಂಟುಮಾಡುವುದು ಎಂದು ಪೇತ್ರನು ವಿವರಿಸುತ್ತಾನೆ. “ಅವುಗಳಲ್ಲಿ ನೀತಿಯು ವಾಸವಾಗಿರುವದು” ಎಂಬ ಆ ವಚನದ ಕೊನೆಯಲ್ಲಿ ತಿಳಿಸಲಾದ ವಿಷಯವನ್ನು ಗಮನಿಸಿ. ಪರಿಸ್ಥಿತಿಗಳು ಉತ್ತಮಗೊಳ್ಳಲು ಕೆಲವು ದೊಡ್ಡ ಬದಲಾವಣೆಗಳು ಸಂಭವಿಸಬೇಕು ಎಂಬುದನ್ನು ಇದು ಸೂಚಿಸುವುದಿಲ್ಲವೊ? ಇದು ನಿಜವಾಗಿಯೂ ಹೊಸ ವಿಷಯಗಳ ಪ್ರತೀಕ್ಷೆಯನ್ನು, ಅಂದರೆ ಮನುಷ್ಯರು ಇಂದು ಜೀವಿಸುವುದರಲ್ಲಿ ಕಂಡುಕೊಳ್ಳುವ ಸಂತೋಷಕ್ಕಿಂತಲೂ ಅತ್ಯಧಿಕ ಸಂತೋಷದ ಪ್ರತೀಕ್ಷೆಯನ್ನು ನಮ್ಮ ಮುಂದೆ ಇಡುವುದಿಲ್ಲವೋ? ನೀವು ಇದನ್ನು ನೋಡಸಾಧ್ಯವಿರುವಲ್ಲಿ, ಬೈಬಲು ಮುಂತಿಳಿಸುವ ವಿಷಯದ ಒಳನೋಟವನ್ನು ನೀವು ಪಡೆದುಕೊಂಡಿದ್ದೀರಿ. ಇಂತಹ ಒಳನೋಟವು ಕೇವಲ ಕೆಲವರಿಗೆ ಮಾತ್ರವೇ ಇರುತ್ತದೆ.

19. ಯಾವ ಹಿನ್ನೆಲೆಯಲ್ಲಿ ಪ್ರಕಟನೆ ಪುಸ್ತಕವು ಇನ್ನೂ ಬರಲಿಕ್ಕಿರುವ ‘ನೂತನಾಕಾಶಮಂಡಲ ಮತ್ತು ನೂತನಭೂಮಂಡಲ’ದ ಕಡೆಗೆ ಕೈತೋರಿಸುತ್ತದೆ?

19 ಈ ವಿಷಯವನ್ನು ನಾವು ಇನ್ನಷ್ಟು ಮುಂದೆ ಚರ್ಚಿಸೋಣ. ‘ನೂತನಾಕಾಶಮಂಡಲ ಮತ್ತು ನೂತನಭೂಮಂಡಲ’ ಎಂಬ ವಾಕ್ಸರಣಿಯ ಪ್ರಥಮ ಉಲ್ಲೇಖವನ್ನು ನಾವು ಯೆಶಾಯ 65ನೆಯ ಅಧ್ಯಾಯದಲ್ಲಿ ಮತ್ತು ಇನ್ನೊಂದು ಉಲ್ಲೇಖವನ್ನು 2 ಪೇತ್ರ 3ನೆಯ ಅಧ್ಯಾಯದಲ್ಲಿ ನೋಡಿದ್ದೇವೆ. ಈಗ ಪ್ರಕಟನೆ 21ನೆಯ ಅಧ್ಯಾಯವನ್ನು ತೆರೆಯಿರಿ; ಅಲ್ಲಿ ಈ ಅಭಿವ್ಯಕ್ತಿಯು ಇನ್ನೊಂದು ಬಾರಿ ಕಂಡುಬರುತ್ತದೆ. ಪುನಃ ಒಮ್ಮೆ ಅದರ ಹಿನ್ನೆಲೆಯನ್ನು ತಿಳಿದುಕೊಳ್ಳುವುದು ಸಹಾಯಕರವಾಗಿರುವುದು. ಎರಡು ಅಧ್ಯಾಯಗಳಿಗೆ ಮೊದಲು, ಅಂದರೆ ಪ್ರಕಟನೆ 19ನೆಯ ಅಧ್ಯಾಯದಲ್ಲಿ, ಸ್ಪಷ್ಟವಾದ ವರ್ಣನೆಯೊಂದಿಗೆ ಸಾಂಕೇತಿಕ ಭಾಷೆಯಲ್ಲಿ ವರ್ಣಿಸಲ್ಪಟ್ಟ ಒಂದು ಯುದ್ಧದ ಕುರಿತು ನಾವು ಓದುತ್ತೇವೆ. ಆದರೆ ಅದು ಎರಡು ವೈರಿ ರಾಷ್ಟ್ರಗಳ ನಡುವಣ ಯುದ್ಧವಾಗಿರುವುದಿಲ್ಲ. ಈ ಯುದ್ಧದ ಒಂದು ಪಕ್ಷದಲ್ಲಿ “ದೇವರ ವಾಕ್ಯ” ಎಂಬಾತನು ಇದ್ದಾನೆ. ಈ ಬಿರುದು ಯೇಸು ಕ್ರಿಸ್ತನಿಗೆ ಸೂಚಿತವಾದದ್ದಾಗಿದೆ ಎಂಬುದನ್ನು ಬಹುಶಃ ನೀವು ಗ್ರಹಿಸುತ್ತೀರಿ. (ಯೋಹಾನ 1:1, 14) ಅವನು ಸ್ವರ್ಗದಲ್ಲಿದ್ದಾನೆ, ಮತ್ತು ತನ್ನ ಸ್ವರ್ಗೀಯ ಸೇನೆಗಳೊಂದಿಗೆ ಅವನಿರುವ ಚಿತ್ರಣವನ್ನು ಈ ದರ್ಶನವು ನೀಡುತ್ತದೆ. ಆದರೆ ಅವನು ಯಾರ ವಿರುದ್ಧ ಯುದ್ಧಮಾಡುತ್ತಿದ್ದಾನೆ? ಈ ಅಧ್ಯಾಯವು, ‘ರಾಜರು,’ ‘ಪರಾಕ್ರಮಶಾಲಿಗಳು,’ ಮತ್ತು ‘ದೊಡ್ಡವರೂ ಚಿಕ್ಕವರೂ’ ಆಗಿರುವ ವಿವಿಧ ವರ್ಗದ ಜನರ ಕುರಿತು ತಿಳಿಸುತ್ತದೆ. ಈ ಯುದ್ಧವು, ಬರಲಿಕ್ಕಿರುವ ಯೆಹೋವನ ದಿನವನ್ನು, ಅಂದರೆ ದುಷ್ಟತನದ ನಾಶನವನ್ನು ಒಳಗೊಳ್ಳುತ್ತದೆ. (2 ಥೆಸಲೊನೀಕ 1:6-10) ಹಾಗೆಯೇ ಮುಂದುವರಿಯುತ್ತಾ, ಪ್ರಕಟನೆ ಪುಸ್ತಕದ 20ನೆಯ ಅಧ್ಯಾಯವು, “ಪಿಶಾಚನೂ ಸೈತಾನನೂ ಆಗಿರುವ ಪುರಾತನಸರ್ಪನೆಂಬ ಘಟಸರ್ಪನ” ತೆಗೆದುಹಾಕುವಿಕೆಯ ವರ್ಣನೆಯೊಂದಿಗೆ ಆರಂಭವಾಗುತ್ತದೆ. ಇದು ನಾವು ಪ್ರಕಟನೆ ಪುಸ್ತಕದ 21ನೆಯ ಅಧ್ಯಾಯವನ್ನು ಪರಿಗಣಿಸಲು ಸೂಕ್ತವಾದ ಹಿನ್ನೆಲೆಯನ್ನು ನೀಡುತ್ತದೆ.

20. ಯಾವ ಗಮನಾರ್ಹ ಬದಲಾವಣೆಯು ಮುಂದೆ ಕಾದಿರಿಸಲ್ಪಟ್ಟಿದೆಯೆಂದು ಪ್ರಕಟನೆ 21:1 ಸೂಚಿಸುತ್ತದೆ?

20 ಅಪೊಸ್ತಲ ಯೋಹಾನನು ಈ ರೋಮಾಂಚಕರ ಮಾತುಗಳಿಂದ ಆರಂಭಿಸುತ್ತಾನೆ: “ತರುವಾಯ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಕಂಡೆನು. ಮೊದಲಿದ್ದ ಆಕಾಶಮಂಡಲವೂ ಮೊದಲಿದ್ದ ಭೂಮಂಡಲವೂ ಇಲ್ಲದೆ ಹೋದವು; ಇನ್ನು ಸಮುದ್ರವೂ ಇಲ್ಲ.” ಯೆಶಾಯ 65ನೆಯ ಅಧ್ಯಾಯದಲ್ಲಿ ಮತ್ತು 2 ಪೇತ್ರ 3ನೆಯ ಅಧ್ಯಾಯದಲ್ಲಿ ನಾವು ನೋಡಿರುವ ವಿಷಯಗಳ ಆಧಾರದ ಮೇಲೆ, ಇದು ಅಕ್ಷರಾರ್ಥ ಆಕಾಶ ಮತ್ತು ನಮ್ಮ ಗ್ರಹವಾದ ಭೂಮಿ ಮತ್ತು ಅದರಲ್ಲಿರುವ ಜಲರಾಶಿಗಳನ್ನು ಸ್ಥಾನಪಲ್ಲಟಗೊಳಿಸುವುದನ್ನು ಅರ್ಥೈಸುವುದಿಲ್ಲ ಎಂದು ನಾವು ಖಚಿತವಾಗಿ ಹೇಳಸಾಧ್ಯವಿದೆ. ಹಿಂದಿನ ಅಧ್ಯಾಯಗಳು ತೋರಿಸಿದಂತೆ, ಅದೃಶ್ಯ ಅರಸನಾದ ಸೈತಾನನ್ನೂ ಸೇರಿಸಿ, ಎಲ್ಲ ದುಷ್ಟರು ಮತ್ತು ಅವರ ಪ್ರಭುತ್ವಗಳು ತೆಗೆದುಹಾಕಲ್ಪಡುವವು. ಹೌದು, ಭೂಮಿಯ ಮೇಲಿರುವ ಜನರನ್ನು ಒಳಗೊಡಿರುವ ಒಂದು ಹೊಸ ವಿಷಯಗಳ ವ್ಯವಸ್ಥೆಯ ಕುರಿತು ಇಲ್ಲಿ ವಾಗ್ದಾನಿಸಲಾಗಿದೆ.

21, 22. ಯಾವ ಆಶೀರ್ವಾದಗಳ ಕುರಿತು ಯೋಹಾನನು ನಮಗೆ ಆಶ್ವಾಸನೆ ನೀಡುತ್ತಾನೆ, ಮತ್ತು ಕಣ್ಣೀರನ್ನು ಒರಸಿಬಿಡುವುದು ಏನನ್ನು ಅರ್ಥೈಸುತ್ತದೆ?

21 ಈ ಅದ್ಭುತಕರವಾದ ಪ್ರವಾದನೆಯನ್ನು ನಾವು ಇನ್ನೂ ಅಭ್ಯಾಸಿಸುತ್ತಾ ಮುಂದುವರಿದಂತೆ, ಹೊಸ ವಿಷಯಗಳ ವ್ಯವಸ್ಥೆಯ ಕುರಿತು ನಾವು ಆಶ್ವಾಸನೆಯನ್ನು ಪಡೆದುಕೊಳ್ಳುತ್ತೇವೆ. ದೇವರು ಮನುಷ್ಯರೊಂದಿಗೆ ಇರುವಂತಹ, ಹಾಗೂ ತನ್ನ ಚಿತ್ತವನ್ನು ಮಾಡುತ್ತಿರುವ ಜನರಿಗೆ ಪ್ರಯೋಜನವಾಗುವಂತಹ ರೀತಿಯಲ್ಲಿ ಗಮನ ಹರಿಸುವಂತಹ ಸಮಯದ ಕುರಿತು 3ನೆಯ ವಚನದ ಕೊನೆಯ ಭಾಗವು ತಿಳಿಸುತ್ತದೆ. (ಯೆಹೆಜ್ಕೇಲ 43:7) 4 ಮತ್ತು 5ನೆಯ ವಚನದಲ್ಲಿ ಯೋಹಾನನು ಹೀಗೆ ಮುಂದುವರಿಸಿದನು: “[ಯೆಹೋವನು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು . . . ಆಗ ಸಿಂಹಾಸನದ ಮೇಲೆ ಕೂತಿದ್ದವನು—ಇಗೋ, ಎಲ್ಲವನ್ನು ಹೊಸದುಮಾಡುತ್ತೇನೆ ಅಂದನು. ಮತ್ತು ಒಬ್ಬನು ನನಗೆ—ಇದನ್ನು ಬರೆ; ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ ಎಂದು ಹೇಳಿದನು.” ಆತ್ಮೋನ್ನತಿಮಾಡುವ ಎಂತಹ ಉತ್ತೇಜನದಾಯಕ ಪ್ರವಾದನೆ!

22 ಬೈಬಲು ಮುಂತಿಳಿಸುತ್ತಿರುವ ವಿಷಯಗಳಲ್ಲಿ ಆನಂದವನ್ನು ಕಂಡುಕೊಳ್ಳಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಿರಿ. ‘ದೇವರು ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು.’ ನಮ್ಮ ಸೂಕ್ಷ್ಮ ಕಣ್ಣುಗಳನ್ನು ಸ್ವಚ್ಛಗೊಳಿಸುವ ಸಹಜ ಕಣ್ಣೀರನ್ನಾಗಲಿ ಅಥವಾ ಆನಂದ ಬಾಷ್ಪವನ್ನಾಗಲಿ ಅದು ಸೂಚಿಸಸಾಧ್ಯವಿಲ್ಲ. ಕಷ್ಟಾನುಭವ, ದುಃಖ, ನಿರಾಶೆ, ನೋವು ಮತ್ತು ಕಳವಳದಿಂದ ಉಂಟಾಗುವ ಕಣ್ಣೀರನ್ನು ದೇವರು ಒರಸಿಬಿಡಲಿದ್ದಾನೆ. ನಾವು ಈ ವಿಷಯದಲ್ಲಿ ಹೇಗೆ ಖಾತ್ರಿಯಿಂದಿರಬಲ್ಲೆವು? ದೇವರ ಈ ಗಮನಾರ್ಹ ವಾಗ್ದಾನವು, ‘ಮರಣ, ದುಃಖ, ಗೋಳಾಟ, ಮತ್ತು ಕಷ್ಟವು ಇಲ್ಲದಂತಹ’ ರೀತಿಯಲ್ಲಿ ಕಣ್ಣೀರನ್ನು ಒರಸುವುದರೊಂದಿಗೆ ಸಂಬಂಧಿಸಿದೆ.—ಯೋಹಾನ 11:35.

23. ಯೋಹಾನನ ಪ್ರವಾದನೆಯಿಂದ ಯಾವ ಪರಿಸ್ಥಿತಿಗಳ ಅಂತ್ಯದ ಖಾತ್ರಿಯು ನೀಡಲ್ಪಟ್ಟಿದೆ?

23 ಕ್ಯಾನ್ಸರ್‌, ಪಾರ್ಶ್ವವಾಯು, ಹೃದಯಾಘಾತಗಳು, ಮತ್ತು ಮರಣವು ಸಹ ಸಂಪೂರ್ಣವಾಗಿ ತೆಗೆದುಹಾಕಲ್ಪಡುವುದು ಎಂಬುದನ್ನು ಇದು ರುಜುಪಡಿಸುವುದಿಲ್ಲವೊ? ನಮ್ಮಲ್ಲಿ ಯಾರು ತಾನೇ ಒಬ್ಬ ಪ್ರಿಯ ವ್ಯಕ್ತಿಯನ್ನು ಯಾವುದೋ ಕಾಯಿಲೆ, ಅಪಘಾತ ಇಲ್ಲವೆ ವಿಪತ್ತಿನ ಕಾರಣದಿಂದಾಗಿ ಕಳೆದುಕೊಂಡಿಲ್ಲ? ಇನ್ನು ಮುಂದೆ ಮರಣವಿರುವುದಿಲ್ಲ ಎಂದು ದೇವರು ಇಲ್ಲಿ ವಾಗ್ದಾನಿಸುತ್ತಾನೆ. ಅಂದರೆ ಆ ಸಮಯದಲ್ಲಿ ಜನಿಸಬಹುದಾದ ಮಕ್ಕಳು, ಬೆಳೆದು ದೊಡ್ಡವರಾಗಿ, ವೃದ್ಧರಾಗಿ ಕೊನೆಗೆ ಮರಣದಲ್ಲಿ ಅಂತ್ಯಗೊಳ್ಳುವ ಪ್ರತೀಕ್ಷೆಯನ್ನು ಎದುರಿಸುವ ಅಗತ್ಯವಿರುವುದಿಲ್ಲ ಎಂಬುದನ್ನು ಇದು ಸೂಚಿಸುತ್ತದೆ. ಅಲ್ಸೈಮರ್‌ ರೋಗ, ಎಲುಬುತೂತು ರೋಗ, ನಾರುಗೆಡ್ಡೆ, ಗ್ಲೂಕೋಮ, ಅಥವಾ ವೃದ್ಧಾಪ್ಯದಲ್ಲಿ ಸಾಮಾನ್ಯವಾಗಿರುವಂತಹ ಕ್ಯಾಟರಾಕ್ಟ್‌ ರೋಗಗಳು ಸಹ ಆಗ ಇರಲಾರವು ಎಂಬರ್ಥವನ್ನೂ ಈ ಪ್ರವಾದನೆಯು ಕೊಡುತ್ತದೆ.

24. ‘ನೂತನಾಕಾಶಮಂಡಲ ಮತ್ತು ನೂತನಭೂಮಂಡಲವು’ ಹೇಗೆ ಒಂದು ಆಶೀರ್ವಾದವಾಗಿ ಪರಿಣಮಿಸುವುದು, ಮತ್ತು ನಾವು ಇನ್ನೂ ಯಾವ ವಿಷಯವನ್ನು ಪರಿಗಣಿಸಲಿದ್ದೇವೆ?

24 ಮರಣ, ವೃದ್ಧಾಪ್ಯ ಮತ್ತು ರೋಗಗಳು ತೆಗೆದುಹಾಕಲ್ಪಡುವುದರಿಂದ, ದುಃಖ ಮತ್ತು ಗೋಳಾಟವು ಕಡಿಮೆಯಾಗುವುದು ಎಂಬುದನ್ನು ನೀವು ಒಪ್ಪಿಕೊಳ್ಳುವಿರಿ ಎಂಬುದರಲ್ಲಿ ಸಂಶಯವೇ ಇಲ್ಲ. ಆದರೂ, ಕಡುಬಡತನ, ಮಕ್ಕಳ ಅಪಪ್ರಯೋಗ, ಮತ್ತು ವ್ಯಕ್ತಿಗಳ ಹಿನ್ನೆಲೆ ಅಥವಾ ಮೈಬಣ್ಣದ ಮೇಲೆ ಆಧಾರಿತವಾಗಿರುವ ವರ್ಣಭೇದದಿಂದಾಗುವ ದಬ್ಬಾಳಿಕೆಯ ಕುರಿತೇನು? ಇಂಥ ವಿಷಯಗಳು ಇಂದು ಸರ್ವಸಾಮಾನ್ಯವಾಗಿರುವಂಥ ಸ್ಥಳಗಳಲ್ಲಿ ಈ ವಿಷಯಗಳು ಮುಂದುವರಿಯುವಲ್ಲಿ, ನಾವು ದುಃಖ ಮತ್ತು ಗೋಳಾಟಗಳಿಂದ ಸಂಪೂರ್ಣವಾಗಿ ಮುಕ್ತರಾಗಿರುವುದಿಲ್ಲ. ಹೀಗೆ, ‘ನೂತನಾಕಾಶಮಂಡಲ ಮತ್ತು ನೂತನಭೂಮಂಡಲದ’ ಕೆಳಗಿನ ಜೀವಿತವು, ಇಂದು ಅಸ್ತಿತ್ವದಲ್ಲಿರುವ ದುಃಖದ ಕಾರಣಗಳಿಂದ ಭಂಗವಾಗುವುದಿಲ್ಲ. ಇದು ಎಂತಹ ಬದಲಾವಣೆಯಾಗಿರುವುದು! ಆದರೂ, ಬೈಬಲಿನಲ್ಲಿ ಕಂಡುಬರುವ ‘ನೂತನಾಕಾಶಮಂಡಲ ಮತ್ತು ನೂತನಭೂಮಂಡಲ’ ಎಂಬ ವಾಕ್ಸರಣಿಯ ನಾಲ್ಕು ಸಂಭವಗಳಲ್ಲಿ ಇಷ್ಟರ ತನಕ ನಾವು ಕೇವಲ ಮೂರನ್ನು ಮಾತ್ರ ಪರಿಗಣಿಸಿದ್ದೇವೆ. ನಾವು ಈಗಾಗಲೇ ಪರೀಕ್ಷಿಸಿರುವ ವಿಷಯಕ್ಕೆ ಸಂಬಂಧಿಸಿರುವ ಹಾಗೂ ‘ಎಲ್ಲವನ್ನೂ ಹೊಸದುಮಾಡುವ’ ದೇವರ ವಾಗ್ದಾನವನ್ನು ಆತನು ಯಾವಾಗ ಮತ್ತು ಹೇಗೆ ನೆರವೇರಿಸುವನು ಎಂಬುದನ್ನು ಎದುರುನೋಡಲು ನಮಗೆ ಏಕೆ ಸಕಾರಣವಿದೆ ಎಂದು ಒತ್ತಿಹೇಳುವಂತಹ ಇನ್ನೊಂದು ವಚನವು ಇದೆ. ಆ ಪ್ರವಾದನೆಯ ಕುರಿತು ಮತ್ತು ನಮ್ಮ ಸಂತೋಷಕ್ಕೆ ಅದು ಏನನ್ನು ಅರ್ಥೈಸುತ್ತದೆ ಎಂಬುದರ ಕುರಿತು ಮುಂದಿನ ಲೇಖನವು ನಮಗೆ ತಿಳಿಯಪಡಿಸುವುದು.

[ಪಾದಟಿಪ್ಪಣಿಗಳು]

^ ಪ್ಯಾರ. 10 ನಾವು ಉಪಯೋಗಿಸುವ ಸತ್ಯವೇದ ಬೈಬಲು ಈ ವಚನವನ್ನು ಹೀಗೆ ತರ್ಜುಮೆ ಮಾಡುತ್ತದೆ: “ಎಲ್ಲಾ ಭೂನಿವಾಸಿಗಳೇ, ಯೆಹೋವನಿಗೆ ಹಾಡಿರಿ.” ದ ಕಂಟೆಂಪರರಿ ಇಂಗ್ಲಿಷ್‌ ವರ್ಷನ್‌ ಹೀಗೆ ಹೇಳುತ್ತದೆ: “ಭೂಮಿಯಲ್ಲಿರುವ ಸಕಲ ಜನರೇ, ಕರ್ತನಿಗೆ ಸ್ತುತಿಗಳನ್ನು ಹಾಡಿರಿ.” “ನೂತನಭೂಮಂಡಲ” ಎಂದು ಹೇಳುವ ಮೂಲಕ ಯೆಶಾಯನು ಸ್ವದೇಶದಲ್ಲಿದ್ದ ದೇವಜನರನ್ನು ಸೂಚಿಸುತ್ತಿದ್ದನೆಂಬ ಅರ್ಥಕ್ಕೆ ಇದು ಹೊಂದಿಕೆಯಲ್ಲಿದೆ.

ನೀವು ಏನನ್ನು ಜ್ಞಾಪಿಸಿಕೊಳ್ಳುವಿರಿ?

• ‘ನೂತನಾಕಾಶಮಂಡಲ ಮತ್ತು ನೂತನಭೂಮಂಡಲದ’ ಕುರಿತು ಬೈಬಲು ಮುಂತಿಳಿಸುವಂತಹ ಮೂರು ಸಂಭವಗಳು ಯಾವುವು?

• ‘ನೂತನಾಕಾಶಮಂಡಲ ಮತ್ತು ನೂತನಭೂಮಂಡಲದ’ ಕುರಿತಾದ ನೆರವೇರಿಕೆಯಲ್ಲಿ ಪುರಾತನ ಯೆಹೂದ್ಯರು ಹೇಗೆ ಒಳಗೂಡಿದ್ದರು?

• ಪೇತ್ರನಿಂದ ಉಲ್ಲೇಖಿಸಲ್ಪಟ್ಟ ‘ನೂತನಾಕಾಶಮಂಡಲ ಮತ್ತು ನೂತನಭೂಮಂಡಲ’ಕ್ಕೆ ಯಾವ ನೆರವೇರಿಕೆಗಳಿವೆ ಎಂದು ಅರ್ಥಮಾಡಿಕೊಳ್ಳಲಾಗಿದೆ?

ಪ್ರಕಟನೆ 21ನೆಯ ಅಧ್ಯಾಯವು ಹೇಗೆ ಒಂದು ಉಜ್ವಲ ಭವಿಷ್ಯತ್ತಿನ ಕಡೆಗೆ ಕೈತೋರಿಸುತ್ತದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 10ರಲ್ಲಿರುವ ಚಿತ್ರ]

ಯೆಹೋವನು ಮುಂತಿಳಿಸಿದಂತೆಯೇ, ಸಾ.ಶ.ಪೂ. 537ರಲ್ಲಿ ಯೆಹೂದ್ಯರು ಸ್ವದೇಶಕ್ಕೆ ಹಿಂದಿರುಗುವುದಕ್ಕಾಗಿ ಕೋರೆಷನು ದಾರಿಮಾಡಿಕೊಟ್ಟನು