ಯೆಹೋವನ ದೃಷ್ಟಿಯಲ್ಲಿ ಅಮೂಲ್ಯವಾಗಿರುವುದನ್ನು ಕೊಡುವುದು
ಯೆಹೋವನ ದೃಷ್ಟಿಯಲ್ಲಿ ಅಮೂಲ್ಯವಾಗಿರುವುದನ್ನು ಕೊಡುವುದು
ಈ ಮುಂದಿನ ಪತ್ರವು ಮೊಸಾಂಬೀಕ್ನಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸಿಗೆ ಬಂದಿತು:
“ನಾನು ಏಳು ವರ್ಷ ಪ್ರಾಯದವನು. ನಾನು ಇನ್ನೂ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೇನೆ. ಒಂದು ಕೋಳಿಯನ್ನು ಸಾಕಿ ಅದರಿಂದ ಸಂಪಾದಿಸಿದ ಹಣವನ್ನು ನಾನು ಇದರೊಂದಿಗೆ ಕಳುಹಿಸುತ್ತಿದ್ದೇನೆ. ನಾನು ಅದನ್ನು 12,000 ಮೆಟಿಕಿಸ್ [1 ಅಮೆರಿಕನ್ ಡಾಲರ್]ಗೆ ಮಾರಿದೆ. ನಾನು ಬೆಳೆಸಿದ ಮೊದಲ ಕೋಳಿಮರಿಯು ಹುಂಜವಾಗಿ ಬೆಳೆದುದಕ್ಕಾಗಿ ಯೆಹೋವನಿಗೆ ಉಪಕಾರಸಲ್ಲಿಸುತ್ತೇನೆ. ನನ್ನ ಕೊಡುಗೆಯು ಯೆಹೋವನ ರಾಜ್ಯದ ಕೆಲಸಕ್ಕಾಗಿ ಉಪಯೋಗಿಸಲ್ಪಡುವಂತೆ ಬಯಸುತ್ತೇನೆ.
“ಮುಕ್ತಾಯ. ಈ ಪತ್ರವನ್ನು ಬರೆಯಲು ನನ್ನ ತಂದೆಯವರು ನನಗೆ ಸಹಾಯಮಾಡಿದರು.”
ಹೇರಳವಾದ ಭೌತಿಕ ಸಂಪತ್ತಿರುವವರು ಮಾತ್ರ ಉದಾರವಾಗಿ ದಾನಕೊಡಬಹುದೆಂದು ಕೆಲವರು ನೆನಸುತ್ತಾರೆ. ಆದರೆ, “ತೀರ ಕಡಿಮೆ ಮೌಲ್ಯದ ಎರಡು ಚಿಕ್ಕ ಕಾಸುಗಳನ್ನು” ದೇವಾಲಯದ ಬೊಕ್ಕಸಕ್ಕೆ ಹಾಕಿದ ವಿಧವೆಯ ಕುರಿತಾದ ಬೈಬಲ್ ವೃತ್ತಾಂತವನ್ನು ನಾವು ಓದುವಾಗ, ನಾವೆಷ್ಟು ಕೊಡುತ್ತೇವೆ ಎಂಬುದರ ಮೇಲೆ ಉದಾರತೆಯನ್ನು ಅಳೆಯಲಾಗುವುದಿಲ್ಲ, ಬದಲಿಗೆ ಹೃದಯದ ಯೋಗ್ಯಪ್ರವೃತ್ತಿಯ ಮೇಲೆ ಅದನ್ನು ಅಳೆಯಲಾಗುತ್ತದೆ ಎಂಬುದನ್ನು ಗಣ್ಯಮಾಡಲು ಅದರಿಂದ ನಮಗೆ ಸಹಾಯ ಸಿಗುತ್ತದೆ.—ಲೂಕ 21:1-4.
ಕೊಡುಗೆಯು ಎಷ್ಟೇ ಚಿಕ್ಕದ್ದಾಗಿರಲಿ, ಪ್ರೀತಿಯಿಂದ ಪ್ರೇರಿತಗೊಂಡು ಹೃದಯದಾಳದಿಂದ ಕೊಡಲ್ಪಡುವ ಪ್ರತಿಯೊಂದು ಕೊಡುಗೆಯನ್ನು ಯೆಹೋವನು ಗಣ್ಯಮಾಡುತ್ತಾನೆ. ತಮ್ಮ ಸಮಯ, ಶಕ್ತಿ ಇಲ್ಲವೇ ಹಣ, ಆಸ್ತಿಪಾಸ್ತಿಗಳನ್ನು ದೇವರ ರಾಜ್ಯಕ್ಕಾಗಿ ಕೊಡುವ ಮೂಲಕ ತನ್ನ ಉದಾರತೆಯ ಗುಣವನ್ನು ಅನುಕರಿಸುವವರೆಲ್ಲರನ್ನು ಆತನು ಹೇರಳವಾಗಿ ಆಶೀರ್ವದಿಸುತ್ತಾನೆ.—ಮತ್ತಾಯ 6:33; ಇಬ್ರಿಯ 6:10.