ವಾಚಕರಿಂದ ಪ್ರಶ್ನೆಗಳು
ವಾಚಕರಿಂದ ಪ್ರಶ್ನೆಗಳು
ಯೇಸು ಬೆಲೆಬಾಳುವ ಸುಗಂಧ ತೈಲದಿಂದ ಅಭಿಷೇಕಿಸಲ್ಪಟ್ಟದ್ದರ ಕುರಿತಾದ ಆಪಾದನೆಯನ್ನು ಮೂರು ಸುವಾರ್ತೆಗಳು ತಿಳಿಸುತ್ತವೆ. ಈ ಆಪಾದನೆಯನ್ನು ಅಪೊಸ್ತಲರಲ್ಲಿ ಅನೇಕರು ಮಾಡಿದರೋ ಅಥವಾ ಯೂದನು ಮಾತ್ರವೇ ಮಾಡಿದನೊ?
ಮತ್ತಾಯ, ಮಾರ್ಕ, ಮತ್ತು ಯೋಹಾನರಿಂದ ಬರೆಯಲ್ಪಟ್ಟ ಸುವಾರ್ತೆಗಳಲ್ಲಿ ಈ ಘಟನೆಯು ದಾಖಲಿಸಲ್ಪಟ್ಟಿರುವುದನ್ನು ನಾವು ನೋಡುತ್ತೇವೆ. ಕನಿಷ್ಠಪಕ್ಷ ಕೆಲವು ಅಪೊಸ್ತಲರು ಯೂದನೊಂದಿಗೆ ಸಮ್ಮತಿಸಿದರಾದರೂ, ಆಪಾದನೆ ಹೊರಿಸುವುದರಲ್ಲಿ ಅವನೇ ನಾಯಕತ್ವ ವಹಿಸಿದಂತೆ ತೋರುತ್ತದೆ. ನಾಲ್ಕು ಸುವಾರ್ತಾ ವೃತ್ತಾಂತಗಳನ್ನು ಹೊಂದಿರುವುದಕ್ಕೆ ನಾವು ಏಕೆ ಆಭಾರಿಗಳಾಗಿರಸಾಧ್ಯವಿದೆ ಎಂಬುದನ್ನು ಈ ಘಟನೆಯು ದೃಷ್ಟಾಂತಿಸುತ್ತದೆ. ಪ್ರತಿಯೊಬ್ಬ ಬರಹಗಾರನು ಏನನ್ನು ಬರೆದನೋ ಅದು ನಿಷ್ಕೃಷ್ಟವಾಗಿದೆಯಾದರೂ, ಅವರೆಲ್ಲರೂ ಒಂದೇ ರೀತಿಯ ವಿವರಗಳನ್ನು ಒದಗಿಸುವುದಿಲ್ಲ. ಸಮಾಂತರ ವೃತ್ತಾಂತಗಳನ್ನು ಹೋಲಿಸುವ ಮೂಲಕ, ಅನೇಕ ಘಟನೆಗಳ ಕುರಿತು ನಾವು ಹೆಚ್ಚು ಸಮಗ್ರವಾದ, ಹೆಚ್ಚು ಸವಿಸ್ತಾರವಾದ ದೃಷ್ಟಿಕೋನವನ್ನು ಪಡೆದುಕೊಳ್ಳುವೆವು.
ಮತ್ತಾಯ 26:6-13ರಲ್ಲಿರುವ ವೃತ್ತಾಂತವು ಆ ಸ್ಥಳದ ಕುರಿತಾದ ಮಾಹಿತಿಯನ್ನು ಕೊಡುತ್ತದೆ. ಅದು ಬೇಥಾನ್ಯದಲ್ಲಿ ಒಬ್ಬ ಕುಷ್ಠ ರೋಗಿಯಾಗಿದ್ದ ಸೀಮೋನನ ಮನೆಯಾಗಿತ್ತು ಎಂದು ವೃತ್ತಾಂತವು ತಿಳಿಸುತ್ತದಾದರೂ, ಯೇಸುವಿನ ತಲೆಯ ಮೇಲೆ ಸುಗಂಧ ತೈಲವನ್ನು ಸುರಿಯಲಾರಂಭಿಸಿದ ಸ್ತ್ರೀಯ ಹೆಸರನ್ನು ಅದು ತಿಳಿಸುವುದಿಲ್ಲ. “ಶಿಷ್ಯರು ಇದನ್ನು ಕಂಡು ಕೋಪಗೊಂಡರು” ಮತ್ತು ತೈಲವನ್ನು ಮಾರಿ ಅದರಿಂದ ದೊರಕಿದ ಹಣಕಾಸನ್ನು ಬಡವರಿಗೆ ಕೊಡಸಾಧ್ಯವಿತ್ತಲ್ಲ ಎಂದು ಆಪಾದಿಸಿದರೆಂದು ಮತ್ತಾಯನು ದಾಖಲಿಸುತ್ತಾನೆ.
ಈ ವಿವರಗಳಲ್ಲಿ ಹೆಚ್ಚಿನವು ಮಾರ್ಕನ ವೃತ್ತಾಂತದಲ್ಲಿ ಒಳಗೂಡಿವೆ. ಆದರೆ ಅವಳು ತೈಲದ ಭರಣಿಯನ್ನು ಒಡೆದಳು ಎಂದು ಅವನು ಕೂಡಿಸುತ್ತಾನೆ. ಭಾರತದಿಂದ ಆಮದು ಮಾಡಿರಬಹುದಾದಂಥ ಬಹು ಬೆಲೆಯುಳ್ಳ “ಅಚ್ಚ ಜಟಾಮಾಂಸಿ ತೈಲ”ವು ಅದರಲ್ಲಿತ್ತು. ಆಪಾದನೆಯ ವಿಷಯದಲ್ಲಿ ಮಾರ್ಕನು ವರದಿಸುವುದೇನೆಂದರೆ, ‘ಕೆಲವರು ತಮ್ಮೊಳಗೆ ಕೋಪಗೊಂಡರು’ ಮತ್ತು ‘ಆಕೆಗೆ ಛೀ ಹಾಕಿದರು.’ (ಮಾರ್ಕ 14:3-9) ಆದುದರಿಂದ, ಆಪಾದನೆ ಹೊರಿಸುವುದರಲ್ಲಿ ಒಬ್ಬರಿಗಿಂತಲೂ ಹೆಚ್ಚು ಅಪೊಸ್ತಲರು ಒಳಗೂಡಿದ್ದರು ಎಂಬುದನ್ನು ಎರಡು ವೃತ್ತಾಂತಗಳು ತೋರಿಸುತ್ತವೆ. ಹಾಗಾದರೆ ಈ ಆಪಾದನೆಯು ಹೇಗೆ ಆರಂಭವಾಯಿತು?
ಪ್ರತ್ಯಕ್ಷ ಸಾಕ್ಷಿಯಾಗಿದ್ದ ಯೋಹಾನನು ಸಂಬಂಧಿತ ವಿವರಗಳನ್ನು ಕೂಡಿಸಿದನು. ಅವನು ಆ ಸ್ತ್ರೀಯ ಹೆಸರು ಮರಿಯಳೆಂದು ಮತ್ತು ಅವಳು ಮಾರ್ಥ ಹಾಗೂ ಲಾಜರನ ಸಹೋದರಿಯಾಗಿದ್ದಳೆಂದು ತಿಳಿಸುತ್ತಾನೆ. ವಿರೋಧಾತ್ಮಕವಾಗಿರುವುದಕ್ಕಿಂತಲೂ ಹೆಚ್ಚಾಗಿ ಸ್ವಾರಸ್ಯಕರವಾಗಿ ಪರಿಗಣಿಸಸಾಧ್ಯವಿರುವ ಇನ್ನೊಂದು ವಿವರವನ್ನು ಸಹ ಯೋಹಾನನು ಒದಗಿಸಿದನು: “ಆಗ ಮರಿಯಳು ಬಹು ಬೆಲೆಯುಳ್ಳ ಅಚ್ಚ ಜಟಾಮಾಂಸಿ ತೈಲವನ್ನು ಒಂದು ಸೇರಷ್ಟು ತಂದು ಯೇಸುವಿನ ಪಾದಕ್ಕೆ ಹಚ್ಚಿ ತನ್ನ ತಲೇಕೂದಲಿನಿಂದ ಆತನ ಪಾದಗಳನ್ನು ಒರಸಿದಳು.” (ಓರೆ ಅಕ್ಷರಗಳು ನಮ್ಮವು.) ಎಲ್ಲ ವೃತ್ತಾಂತಗಳನ್ನು ಒಟ್ಟುಗೂಡಿಸುವಾಗ, ಯೋಹಾನನು “ಅಚ್ಚ ಜಟಾಮಾಂಸಿ ತೈಲ”ವೆಂದು ದೃಢೀಕರಿಸುವ ಸುಗಂಧ ತೈಲವನ್ನು ಮರಿಯಳೇ ಯೇಸುವಿನ ತಲೆ ಮತ್ತು ಪಾದದ ಮೇಲೆ ಸುರಿದಿರಬೇಕು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬಲ್ಲೆವು. ಯೋಹಾನನು ಯೇಸುವಿಗೆ ತುಂಬ ಆತ್ಮೀಯನಾಗಿದ್ದನು ಮತ್ತು ಯೇಸುವನ್ನು ಯಾರಾದರೂ ತಾತ್ಸಾರಮಾಡುವಲ್ಲಿ ಅವನು ತುಂಬ ಕೋಪಗೊಳ್ಳುವ ಪ್ರವೃತ್ತಿಯವನಾಗಿದ್ದನು. ನಾವು ಹೀಗೆ ಓದುತ್ತೇವೆ: “ಆತನ ಶಿಷ್ಯರಲ್ಲಿ ಒಬ್ಬನು ಅಂದರೆ ಆತನನ್ನು [“ಇನ್ನೇನು,” NW] ಹಿಡುಕೊಡುವದಕ್ಕಿದ್ದ ಇಸ್ಕರಿಯೋತ ಯೂದನೆಂಬವನು—ಯಾಕೆ ಈ ತೈಲವನ್ನು ಮುನ್ನೂರು ಹಣಕ್ಕೆ ಮಾರಿ ಬಡವರಿಗೆ ಕೊಡಲಿಲ್ಲ ಅಂದನು.”—ಯೋಹಾನ 12:2-8.
ಯೂದನು “ಆತನ ಶಿಷ್ಯರಲ್ಲಿ ಒಬ್ಬ”ನಾಗಿದ್ದನು ಎಂಬುದಂತೂ ನಿಜ. ಆದರೆ ಈ ಸ್ಥಾನದಲ್ಲಿದ್ದ ಒಬ್ಬ ವ್ಯಕ್ತಿಯು, ಯೇಸುವನ್ನು ಹಿಡಿದುಕೊಡಲು ಯೋಜಿಸುತ್ತಿದ್ದನು ಎಂಬುದನ್ನು ತಿಳಿದು ಯೋಹಾನನಿಗೆ ಎಷ್ಟು ಕೋಪಬಂದಿದ್ದಿರಬಹುದು ಎಂಬುದನ್ನು ನೀವು ಗ್ರಹಿಸಬಹುದು. ಭಾಷಾಂತರಕಾರರಾದ ಡಾ. ಸಿ. ಹೌವಾರ್ಡ್ ಮ್ಯಾಥನಿ ಅವರು ಯೋಹಾನ 12:4ರ ಕುರಿತು ಹೀಗೆ ದಾಖಲಿಸಿದರು: “‘ಹಿಡಿದುಕೊಡುವದಕ್ಕಿದ್ದ’ ಎಂಬ ವರ್ತಮಾನ ಕೃದಂತ ಮತ್ತು ‘ಇನ್ನೇನು’ ಎಂಬ ವರ್ತಮಾನ ಕರ್ತೃ, ಇವೆರಡೂ ಅನುಕ್ರಮವಾಗಿ ಬರುವ ಅಥವಾ ಮುಂದುವರಿಯುತ್ತಿರುವ ಕ್ರಿಯೆಗಳನ್ನು ಸೂಚಿಸುತ್ತವೆ. ಯೂದನು ಯೇಸುವನ್ನು ಹಿಡಿದುಕೊಡಲು ಪ್ರಯತ್ನಿಸಿದ್ದು, ಪೂರ್ವಾಲೋಚನೆಯಿಲ್ಲದೆ ಗೈದ ಒಂದು ಕೃತ್ಯವಾಗಿರಲಿಲ್ಲ, ಬದಲಾಗಿ ಅದು ತುಂಬ ದಿನಗಳಿಂದ ಆಲೋಚಿಸಿ ಯೋಜಿಸಲ್ಪಟ್ಟ ಒಂದು ಒಳಸಂಚಾಗಿತ್ತು ಎಂಬುದನ್ನು ಇದು ತೋರಿಸುತ್ತದೆ.” ಯೂದನು ಆಪಾದನೆ ಹೊರಿಸಿದ ಕಾರಣದ ಕುರಿತು ಒಳನೋಟವನ್ನು ಒದಗಿಸುತ್ತಾ, ಯೋಹಾನನು ಹೇಳಿದ್ದು, ಅವನು “ಬಡವರಿಗೋಸ್ಕರ ಚಿಂತಿಸಿ ಇದನ್ನು ಹೇಳಲಿಲ್ಲ; ಅವನು ಕಳ್ಳನಾಗಿದ್ದು ತನ್ನ ವಶದಲ್ಲಿದ್ದ ಅವರ ಹಣದ ಚೀಲದಲ್ಲಿ ಹಾಕಿದ್ದನ್ನು ತಕ್ಕೊಳ್ಳುವವನಾಗಿದ್ದದರಿಂದಲೇ.”
ಆದುದರಿಂದ, ಬಹು ಬೆಲೆಯುಳ್ಳ ಸುಗಂಧ ತೈಲವನ್ನು ಮಾರಿ, ಅದರಿಂದ ಸಿಕ್ಕಿದ ಹಣವನ್ನು ಯೂದನ ಬಳಿಯಿದ್ದ ಹಣದ ಚೀಲದಲ್ಲಿ ಹಾಕುವುದಾದರೆ, ಕಳ್ಳನಾದ ಯೂದನಿಗೆ ಕದಿಯಲು ಹೆಚ್ಚು ಹಣವು ಸಿಗಸಾಧ್ಯವಿದ್ದುದರಿಂದ, ಅವನೇ ಈ ಆಪಾದನೆಯನ್ನು ಮೊದಲು ಹೊರಿಸಿದ್ದು ಎಂಬುದು ತರ್ಕಬದ್ಧವಾಗಿ ಕಂಡುಬರುತ್ತದೆ. ಯೂದನು ಒಮ್ಮೆ ಹೀಗೆ ಹೇಳಲು ಆರಂಭಿಸಿದೊಡನೆ, ಅವನು ಹೇಳಿದ್ದು ಸೂಕ್ತವಾಗಿದೆ ಎಂದು ಭಾವಿಸುತ್ತಾ ಇನ್ನಿತರ ಅಪೊಸ್ತಲರು ಸಹ ಅವನೊಂದಿಗೆ ಗುಣುಗುಟ್ಟಿದ್ದಿರಬಹುದು. ಆದುದರಿಂದ, ಈ ಆಪಾದನೆಯನ್ನು ಮೊದಲು ಆರಂಭಿಸಿದವನು ಯೂದನೇ ಆಗಿದ್ದನು.