ಸಾಂತ್ವನದ ಅಗತ್ಯವು ಎಷ್ಟೋ ಹೆಚ್ಚಿದೆ!
ಸಾಂತ್ವನದ ಅಗತ್ಯವು ಎಷ್ಟೋ ಹೆಚ್ಚಿದೆ!
“ಆಹಾ, ಹಿಂಸೆಗೊಂಡವರ ಕಣ್ಣೀರು ಏನೆಂದು ಹೇಳಲಿ! ಸಂತಯಿಸುವವರು ಯಾರೂ ಇರಲಿಲ್ಲ; ಹಿಂಸಕರಿಗೆ ಬಹು ಬಲ; ಸಂತಯಿಸುವವರೋ ಒಬ್ಬರೂ ಇರಲಿಲ್ಲ.”—ಪ್ರಸಂಗಿ 4:1.
ನೀವು ಸಾಂತ್ವನಕ್ಕಾಗಿ ಹಂಬಲಿಸುತ್ತಿದ್ದೀರೋ? ನಿರಾಶೆಯ ಕಪ್ಪು ಮೋಡಗಳ ನಡುವೆ ಸಾಂತ್ವನದ ಒಂದು ಕಿರಣಕ್ಕಾಗಿ ನೀವು ಹಾತೊರೆಯುತ್ತಿದ್ದೀರೋ? ತೀಕ್ಷ್ಣವಾದ ನೋವನ್ನುಂಟುಮಾಡಿರುವ ಮತ್ತು ಅಹಿತಕರವಾದ ಅನುಭವಗಳಿಂದ ತುಂಬಿರುವ ಜೀವನದ ಸಂಕಷ್ಟಗಳನ್ನು ಹಗುರಗೊಳಿಸಲು, ಸಾಂತ್ವನದ ಚಿಕ್ಕ ತುಣುಕಿಗಾಗಿ ನೀವು ಹಂಬಲಿಸುತ್ತಿದ್ದೀರೋ?
ಒಂದಲ್ಲ ಒಂದು ಸಮಯದಲ್ಲಿ, ನಮಗೆಲ್ಲರಿಗೂ ಸಾಂತ್ವನದ ಮತ್ತು ಉತ್ತೇಜನದ ಬಹಳ ಅಗತ್ಯವಿರುತ್ತದೆ. ಯಾಕೆಂದರೆ ಜೀವನದಲ್ಲಿ ಎಷ್ಟೋ ವಿಷಯಗಳು ನಮಗೆ ದುಃಖವನ್ನು ಉಂಟುಮಾಡುತ್ತಿರುತ್ತವೆ. ನಮಗೆಲ್ಲರಿಗೂ ಆಶ್ರಯ ಬೇಕು, ಹಿತಕರವಾದ ವಾತಾವರಣ ಬೇಕು ಮತ್ತು ಇತರರಿಂದ ಆದರವೂ ತೋರಿಸಲ್ಪಡಬೇಕು. ನಮ್ಮಲ್ಲಿ ಕೆಲವರು ಮುದುಕರಾಗಿದ್ದೇವೆ ಮತ್ತು ಅದು ನಮಗೆ ಸಂತೋಷವನ್ನು ತರುವುದಿಲ್ಲ. ಜೀವನದಲ್ಲಿ ತಾವು ಏನನ್ನು ನಿರೀಕ್ಷಿಸಿದರೋ ಅದೆಲ್ಲವೂ ಅವರಿಗೆ ಸಿಗುತ್ತಾ ಇಲ್ಲವೆಂಬುದನ್ನು ನೋಡಿ ಕೆಲವರು ಬಹಳವಾಗಿ ನಿರಾಶೆಗೊಂಡಿದ್ದಾರೆ. ಇನ್ನಿತರರು ರೋಗಪರಿಣತರಿಂದ ಬಂದಿರುವ ವರದಿಯಿಂದ ಬಹಳ ಆಘಾತಗೊಂಡಿದ್ದಾರೆ.
ಅದೂ ಅಲ್ಲದೆ, ನಮ್ಮ ಸಮಯದಲ್ಲಿ ನಡೆಯುತ್ತಿರುವ ಘಟನೆಗಳ ಕಾರಣದಿಂದಾಗಿ ಸಾಂತ್ವನ ಮತ್ತು ನಿರೀಕ್ಷೆಗಾಗಿರುವ ಅಗತ್ಯವು ಇನ್ನಷ್ಟು ಹೆಚ್ಚಾಗಿದೆ ಎಂಬುದನ್ನು ಅನೇಕರು ಒಪ್ಪುತ್ತಾರೆ. ಕಳೆದ ಒಂದು ಶತಮಾನದಲ್ಲಿಯೇ, ಹತ್ತು ಕೋಟಿಗಿಂತಲೂ ಹೆಚ್ಚಿನ ಜನರು ಯುದ್ಧದಲ್ಲಿ ಸತ್ತಿದ್ದಾರೆ. * ಇವರಲ್ಲಿ ಎಲ್ಲರೂ ತಮಗಾಗಿ ದುಃಖಿಸುವ ಕುಟುಂಬವೊಂದನ್ನು ಹಿಂದೆ ಬಿಟ್ಟುಹೋಗಿದ್ದಾರೆ—ಇವರಲ್ಲಿ ತಂದೆ-ತಾಯಂದಿರು, ಅಕ್ಕ-ತಂಗಿಯರು ಮತ್ತು ಅಣ್ಣ-ತಮ್ಮಂದಿರು, ವಿಧವೆಯರು ಮತ್ತು ಅನಾಥರು ಸೇರಿದ್ದಾರೆ. ಇವರೆಲ್ಲರಿಗೆ ಸಾಂತ್ವನದ ಅಗತ್ಯ ಬಹಳವಿದೆ. ಇಂದು, 100 ಕೋಟಿಗಿಂತಲೂ ಹೆಚ್ಚಿನ ಜನರು ಕಡುಬಡತನದಲ್ಲಿ ಜೀವಿಸುತ್ತಿದ್ದಾರೆ. ಲೋಕದ ಜನಸಂಖ್ಯೆಯಲ್ಲಿ ಅರ್ಧಭಾಗದಷ್ಟು ಜನರಿಗೆ ವೈದ್ಯಕೀಯ ಉಪಚಾರ ಮತ್ತು ಅವಶ್ಯವಿರುವ ಔಷಧಿಗಳ ಕ್ರಮವಾದ ಪೂರೈಕೆ ಆಗುತ್ತಾ ಇಲ್ಲ. ತ್ಯಜಿಸಲ್ಪಟ್ಟ ಕೋಟಿಗಟ್ಟಲೆ ಮಕ್ಕಳು, ಮಲಿನತೆಯಿಂದ ತುಂಬಿದ ಮಹಾನಗರಗಳ ಬೀದಿಗಳಲ್ಲಿ ಅಲೆಯುತ್ತಿದ್ದಾರೆ, ಇವರಲ್ಲಿ ಅನೇಕರು ಅಮಲೌಷಧವನ್ನು ಸೇವಿಸುತ್ತಿದ್ದಾರೆ ಮತ್ತು ಸೂಳೆಗಾರಿಕೆಯನ್ನು ಸಹ ನಡೆಸುತ್ತಿದ್ದಾರೆ. ಇನ್ನೂ ಕೋಟಿಗಟ್ಟಲೆ ನಿರಾಶ್ರಿತರು, ಭಯಾನಕವಾದ ಮರಣ ಶಿಬಿರಗಳಲ್ಲಿ ಕಷ್ಟಾನುಭವಿಸುತ್ತಿದ್ದಾರೆ.
ಅದೂ ಅಲ್ಲದೆ, ಈ ಸಂಖ್ಯೆಗಳು ಎಷ್ಟೇ ಭಿನ್ನ ಭಿನ್ನವಾಗಿರಲಿ, ಕೆಲವರು ತಮ್ಮ ವೈಯಕ್ತಿಕ ಜೀವನದಲ್ಲಿ ಅನುಭವಿಸುವ ವ್ಯಕ್ತಿಗತ ನೋವು ಮತ್ತು ವೇದನೆಯನ್ನು ಅವು ತಿಳಿಯಪಡಿಸುವುದಿಲ್ಲ. ದೃಷ್ಟಾಂತಕ್ಕೆ, ಇದನ್ನು ಪರಿಗಣಿಸಿರಿ: ಬಾಲ್ಕಾನ್ಸ್‌ನಲ್ಲಿರುವ ಸ್ವೆಟ್‌ಲೆನಾ ಎಂಬ ಯುವತಿಯು ಅತಿ ದೀನಾವಸ್ಥೆಯ ಬಡತನದಲ್ಲಿಯೇ ಹುಟ್ಟಿದಳು. * ಅವಳು ಹೇಳುವುದು: “ಹಣವನ್ನು ಗಳಿಸುವುದಕೋಸ್ಕರ ನನ್ನ ಹೆತ್ತವರು ನನ್ನನ್ನು ಭಿಕ್ಷೆಬೇಡಲು ಅಥವಾ ಕದಿಯಲು ಕಳುಹಿಸಿದರು. ಕುಟುಂಬ ಜೀವನವು ಎಷ್ಟು ಕೀಳ್ಮಟ್ಟಕ್ಕಿಳಿಯಿತೆಂದರೆ ನಾನು ಅಗಮ್ಯಗಮನದ ಬಲಿಪಶುವಾಗಬೇಕಾಯಿತು. ನನಗೆ ಪರಿಚಾರಿಕೆಯ ಕೆಲಸವು ಸಿಕ್ಕಿತು ಮತ್ತು ಒಂದು ವೇಳೆ ನಾನು ಈ ಉದ್ಯೋಗವನ್ನು ಕಳೆದುಕೊಳ್ಳುವುದಾದರೆ, ನನ್ನ ದುಡಿಮೆಯಿಂದ ಹಣವನ್ನು ಪಡೆದುಕೊಳ್ಳುತ್ತಿದ್ದ ನನ್ನ ತಾಯಿಯು ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೇಳಿದರು. ಇದೆಲ್ಲವೂ ಸೂಳೆಗಾರಿಕೆಯ ಜೀವನಕ್ಕೆ ನನ್ನನ್ನು ನಡೆಸಿತು. ನನಗೆ ಆಗ ಕೇವಲ 13 ವರ್ಷ ಪ್ರಾಯವಾಗಿತ್ತು. ಸಮಯಾನಂತರ, ನಾನು ಗರ್ಭಿಣಿಯಾದೆ ಮತ್ತು ಒಂದು ಗರ್ಭಪಾತವನ್ನು ಮಾಡಿಕೊಂಡೆ. ನಾನು 15 ವರ್ಷ ಪ್ರಾಯದವಳಾಗಿದ್ದಾಗಲೇ, 30 ವರ್ಷ ಪ್ರಾಯದವಳಂತೆ ಕಾಣಿಸುತ್ತಿದ್ದೆ.”
ಲ್ಯಾಟ್‌ವಿಯದ ಲೈಮಿನಸ್ ಎಂಬ ಯುವಕನು ಸಹ ತನ್ನನ್ನು ವ್ಯಾಕುಲಗೊಳಿಸಿದ ಕರಾಳ ನೆನಪುಗಳ ಕುರಿತು ಮತ್ತು ಸಾಂತ್ವನದ ಅಗತ್ಯದ ಕುರಿತು ನಮಗೆ ಹೇಳುತ್ತಾನೆ. ಅವನು 29 ವರ್ಷ ಪ್ರಾಯದವನಾಗಿದ್ದಾಗ, ಕಾರ್ ಅಪಘಾತಕ್ಕೆ ಸಿಲುಕಿದನು ಮತ್ತು ಈ ಅಪಘಾತದಿಂದಾಗಿ ಅವನ ಸೊಂಟದಿಂದ ಕೆಳಗಿನ ಭಾಗಕ್ಕೆ ಲಕ್ವಹೊಡೆಯಿತು. ಅವನು ಸಂಪೂರ್ಣವಾಗಿ ದಿಕ್ಕಿಲ್ಲದವನಾಗಿ ಮದ್ಯಸೇವನೆಯನ್ನು ಮಾಡತೊಡಗಿದನು. ಐದು ವರ್ಷಗಳ ನಂತರ ಅವನ ಆರೋಗ್ಯವು ಸಂಪೂರ್ಣವಾಗಿ ಕೆಟ್ಟಿತು. ಪಾರ್ಶ್ವವಾಯು ಪೀಡಿತನಾದ ಅವನು ಯಾವ ಭವಿಷ್ಯತ್ತಿಲ್ಲದ ವ್ಯಕ್ತಿಯಾದನು. ಅವನು ಸಾಂತ್ವನವನ್ನು ಎಲ್ಲಿಂದ ಪಡೆದುಕೊಳ್ಳಸಾಧ್ಯವಿತ್ತು?
ಅಥವಾ ಆ್ಯಂಜಿಯ ಕುರಿತು ಯೋಚಿಸಿರಿ. ಮೂರು ಮಿದುಳಿನ ಶಸ್ತ್ರಚಿಕಿತ್ಸೆಗೆ ಒಳಗಾದ ಅವಳ ಗಂಡನು ಆಂಶಿಕವಾಗಿ ಪಾರ್ಶ್ವವಾಯುವಿಗೆ ಬಲಿಯಾದನು. ಅನಂತರ, ಕೊನೆಯ ಶಸ್ತ್ರಚಿಕಿತ್ಸೆಯ ಐದು ವರ್ಷಗಳ ನಂತರ, ಅವನು ಬಹಳ ಗಂಭೀರವಾದ ಅಪಘಾತಕ್ಕೆ ಒಳಗಾದನು ಮತ್ತು ಇದು ಅವನನ್ನು ಕೊಲ್ಲಸಾಧ್ಯವಿತ್ತು. ಅವನ ಹೆಂಡತಿಯು ತುರ್ತುನಿಗಾ ವಿಭಾಗದ ಕೋಣೆಯನ್ನು ಪ್ರವೇಶಿಸಿ, ಭಾರೀ ಗಂಭೀರ ತಲೆಪೆಟ್ಟಿನಿಂದಾಗಿ ಈಗ ಕೋಮ (ವಿಸ್ಮೃತಿನಿದ್ರೆ) ಸ್ಥಿತಿಯಲ್ಲಿದ್ದ ತನ್ನ ಗಂಡನನ್ನು ನೋಡಿದಾಗ, ಅನಾಹುತವು ಸಮೀಪದಲ್ಲಿಯೇ ಇದೆಯೆಂದು ಅವಳು ತಿಳಿದುಕೊಂಡಳು. ಅವಳ ಮತ್ತು ಅವಳ ಕುಟುಂಬದ ಭವಿಷ್ಯತ್ತು ಬಹಳ ಕಷ್ಟಕರವಾಗಿರಲಿತ್ತು. ಅವಳು ಬೆಂಬಲ ಮತ್ತು ಸಾಂತ್ವನವನ್ನು ಹೇಗೆ ಪಡೆದುಕೊಳ್ಳಸಾಧ್ಯವಿತ್ತು?
ಪ್ಯಾಟ್‌ಗೆ, ಕೆಲವು ವರ್ಷಗಳ ಹಿಂದಿನ ಚಳಿಗಾಲದ ಒಂದು ದಿನವು ಸಾಮಾನ್ಯವಾಗಿ ಆರಂಭಿಸಿದಂತೆ ತೋರಿತು. ಆದರೂ, ಮುಂದಿನ ಮೂರು ದಿನಗಳು ಅವಳ ಜ್ಞಾಪಕದಿಂದ ಅಳಿದುಹೋಗಿವೆ. ತೀಕ್ಷ್ಣ ಎದೆ ನೋವನ್ನು ಅನುಭವಿಸಿದ ನಂತರ ಅವಳು ಪೂರ್ಣ ಹೃದಯ ಸ್ತಂಭನವನ್ನು ಅನುಭವಿಸಿದ್ದಳು ಎಂದು ಅವಳ ಗಂಡನು ನಂತರ ಅವಳಿಗೆ ಹೇಳಿದನು. ಅವಳ ಉಸಿರಾಟವು ನಿಂತುಹೋಗಿತ್ತು. “ನಾನು ಚಿಕಿತ್ಸಾತ್ಮಕವಾಗಿ ಸತ್ತಿದ್ದೆ (ಅಂದರೆ ನನ್ನ ಹೃದಯ ಮತ್ತು ಶ್ವಾಸಕೋಶಗಳು ಕಾರ್ಯನಡೆಸುತ್ತಿರಲಿಲ್ಲ),” ಎಂದು ಪ್ಯಾಟ್ ಹೇಳುತ್ತಾಳೆ. ಆದರೆ ಅವಳು ಹೇಗೋ ಬದುಕಿ ಉಳಿದಳು. ಆಸ್ಪತ್ರೆಯಲ್ಲಿ ಬಹಳ ಸಮಯವನ್ನು ಕಳೆದ ಕುರಿತು ಅವಳು ಹೇಳುವುದು: “ನನಗೆ ಮಾಡಲಾದ ಅನೇಕ ವೈದ್ಯಕೀಯ ಪರೀಕ್ಷೆಗಳಿಂದ ನಾನು ಭಯಪಟ್ಟೆ, ಅದರಲ್ಲೂ ಮುಖ್ಯವಾಗಿ ಈ ಹಿಂದೆ ಮಾಡಿದಂತೆ ಪುನಃ ನನ್ನ ಹೃದಯದ ಸಣ್ಣತಂತುಗಳು ಹತೋಟಿಮೀರಿ ಕಂಪಿಸುವುದನ್ನು ನಿಲ್ಲಿಸಲು ಅವರು ಪ್ರಯತ್ನಿಸಿದಾಗ ನಾನು ಬಹಳ ಹೆದರಿದ್ದೆ.” ಈ ಸಂಕಷ್ಟದ ಸಮಯದಲ್ಲಿ ಅಗತ್ಯವಿರುವ ಸಾಂತ್ವನ ಮತ್ತು ಉಪಶಮನವನ್ನು ಅವಳಿಗೆ ಯಾವುದು ಒದಗಿಸಸಾಧ್ಯವಿತ್ತು?
ಜೋ ಮತ್ತು ರಿಬೆಕ್ಕ ತಮ್ಮ 19 ವರ್ಷ ಪ್ರಾಯದ ಮಗನನ್ನು ವಾಹನ ಅಪಘಾತದಲ್ಲಿ ಕಳೆದುಕೊಂಡಿದ್ದರು. “ಇಂತಹ ಆಘಾತಕರ ಅನುಭವ ನಮಗೆಂದೂ ಆಗಿರಲಿಲ್ಲ” ಎಂದು ಅವರು ಹೇಳುತ್ತಾರೆ. “ಈ ಹಿಂದೆ ಬೇರೆ ಹೆತ್ತವರು ತಮ್ಮ ಮಕ್ಕಳನ್ನು ಕಳೆದುಕೊಂಡಾಗ ನಾವು ಅತ್ತಿದ್ದೆವು, ಆದರೂ ಈಗ ನಾವು ಅನುಭವಿಸುತ್ತಿರುವ ಹೃದಯದಾಳದ ನೋವಿನ ಅನಿಸಿಕೆಯನ್ನು ನಾವು ನಿಜಕ್ಕೂ ಅನುಭವಿಸಲಿಲ್ಲ.” ನೀವು ಅತಿಯಾಗಿ ಪ್ರೀತಿಸುವ ಯಾರೊಬ್ಬರೂ ಸಾಯುವಾಗ ಅನುಭವಿಸುವ ತೀವ್ರ ವೇದನೆಯಿಂದ ಉಂಟಾಗುವ “ಹೃದಯದಾಳದ ನೋವಿ”ನಿಂದ ಸಾಂತ್ವನವನ್ನು ಹೇಗೆ ಪಡೆದುಕೊಳ್ಳಬಲ್ಲಿರಿ?
ಈ ಎಲ್ಲ ವ್ಯಕ್ತಿಗಳು ಮತ್ತು ಇತರ ಕೋಟ್ಯಂತರ ವ್ಯಕ್ತಿಗಳು, ಸಾಂತ್ವನ ಮತ್ತು ಉಪಶಮನದ ಉತ್ಕೃಷ್ಟ ಮೂಲವನ್ನು ನಿಜವಾಗಿಯೂ ಕಂಡುಕೊಂಡಿದ್ದಾರೆ. ನೀವು ಸಹ ಆ ಮೂಲದಿಂದ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ ಎಂಬುದನ್ನು ತಿಳಿದುಕೊಳ್ಳಲು ದಯವಿಟ್ಟು ಮುಂದೆ ಓದಿ.
[ಪಾದಟಿಪ್ಪಣಿಗಳು]
^ ಪ್ಯಾರ. 5 ಮೃತಪಟ್ಟಿರುವ ಮಿಲಿಟರಿ ಸಿಬ್ಬಂದಿ ಮತ್ತು ನಾಗರಿಕರ ಸರಿಯಾದ ಸಂಖ್ಯೆಯು ನಮಗೆ ತಿಳಿದಿಲ್ಲ. ಉದಾಹರಣೆಗೆ, ಅಮೆರಿಕನ್ ಯುದ್ಧಗಳ ಕುರಿತು ನಿಜಾಂಶಗಳು (ಇಂಗ್ಲಿಷ್) ಎಂಬ ಶೀರ್ಷಿಕೆಯ 1998ರ ಪುಸ್ತಕವು ಕೇವಲ ಎರಡನೆಯ ಲೋಕ ಯುದ್ಧದ ಕುರಿತು ಹೀಗೆ ಗಮನಿಸುತ್ತದೆ: “ಎರಡನೆಯ ಲೋಕ ಯುದ್ಧದಲ್ಲಿ ಸತ್ತವರ (ಮಿಲಿಟರಿ ಮತ್ತು ನಾಗರಿಕರ) ಒಟ್ಟು ಸಂಖ್ಯೆಯು ಐದು ಕೋಟಿಯಾಗಿತ್ತು ಎಂದು ಅನೇಕ ಮೂಲಗಳು ತಿಳಿಸುತ್ತವೆ. ಆದರೆ ಈ ವಿಷಯವನ್ನು ಆಳವಾಗಿ ಅಧ್ಯಯನಮಾಡಿರುವ ಅನೇಕರು, ಸತ್ತವರ ನಿಷ್ಕೃಷ್ಟ ಸಂಖ್ಯೆಯು ಈ ಮೇಲೆ ಕೊಡಲಾದ ಸಂಖ್ಯೆಕ್ಕಿಂತಲೂ ಇಮ್ಮಡಿಯಾಗಿದೆ ಎಂದು ನಂಬುತ್ತಾರೆ.”
^ ಪ್ಯಾರ. 6 ಹೆಸರು ಬದಲಾಯಿಸಲ್ಪಟ್ಟಿದೆ.
[ಪುಟ 3ರಲ್ಲಿರುವ ಚಿತ್ರ ಕೃಪೆ]
UNITED NATIONS/PHOTO BY J. K. ISAAC
UN PHOTO 146150 BY O. MONSEN