ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹಿಂಸಾಚಾರಿಗಳ ಕುರಿತು ದೇವರಿಗಿರುವ ದೃಷ್ಟಿಕೋನವೇ ನಿಮಗೂ ಇದೆಯೊ?

ಹಿಂಸಾಚಾರಿಗಳ ಕುರಿತು ದೇವರಿಗಿರುವ ದೃಷ್ಟಿಕೋನವೇ ನಿಮಗೂ ಇದೆಯೊ?

ಹಿಂಸಾಚಾರಿಗಳ ಕುರಿತು ದೇವರಿಗಿರುವ ದೃಷ್ಟಿಕೋನವೇ ನಿಮಗೂ ಇದೆಯೊ?

ಅಸಾಧಾರಣ ದೇಹಬಲ ಮತ್ತು ಶೌರ್ಯವನ್ನು ಪ್ರದರ್ಶಿಸಿರುವ ಬಲಿಷ್ಠ ವ್ಯಕ್ತಿಗಳನ್ನು ಜನರು ಮುಂಚಿನಿಂದಲೂ ಮೆಚ್ಚಿ ಸನ್ಮಾನಿಸುತ್ತಾ ಬಂದಿದ್ದಾರೆ. ಅಂಥವರಲ್ಲಿ, ಪ್ರಾಚೀನ ಗ್ರೀಸ್‌ ದೇಶದ ಹೆರಾಕ್ಲೀಸ್‌ ಅಥವಾ ರೋಮನರು ಹರ್ಕ್ಯೂಲೀಸ್‌ ಎಂದು ಕರೆಯುತ್ತಿದ್ದ ಪೌರಾಣಿಕ ಕಥೆಯ ವೀರನು ಒಬ್ಬನಾಗಿದ್ದನು.

ಹೆರಾಕ್ಲೀಸನು ಒಬ್ಬ ಸುಪ್ರಸಿದ್ಧ ಮಹಾ ವೀರನಾಗಿದ್ದನು, ಹೋರಾಟಗಾರರಲ್ಲೇ ಅತಿ ಬಲಿಷ್ಠನಾಗಿದ್ದನು. ಪುರಾಣಕಥೆಗನುಸಾರ, ಅವನೊಬ್ಬ ದೇವಮಾನವನಾಗಿದ್ದನು. ಅವನ ತಂದೆ ಗ್ರೀಕ್‌ ದೇವತೆಯಾದ ಸ್ಯೂಸ್‌ ಮತ್ತು ತಾಯಿ ಆಲ್ಕ್‌ಮೀನಿ ಎಂಬ ಮರ್ತ್ಯ ಸ್ತ್ರೀಯಾಗಿದ್ದಳು. ತೊಟ್ಟಿಲಿನ ಶಿಶುವಾಗಿದ್ದಾಗಲೇ ಅವನ ವೀರಕೃತ್ಯಗಳು ಆರಂಭವಾದವು. ಮತ್ಸರದಿಂದಾಗಿ ಒಬ್ಬ ದೇವಿಯು ಅವನನ್ನು ಕೊಂದುಹಾಕಲು ಎರಡು ದೊಡ್ಡ ಸರ್ಪಗಳನ್ನು ಕಳುಹಿಸಿದಾಗ, ಹೆರಾಕ್ಲೀಸನು ಅವುಗಳ ಕತ್ತುಹಿಸುಕಿ ಕೊಂದುಹಾಕಿದನು. ತನ್ನ ಜೀವಿತದ ನಂತರದ ಸಮಯದಲ್ಲಿ ಅವನು ಯುದ್ಧಗಳಲ್ಲಿ ಹೋರಾಡಿದನು, ರಾಕ್ಷಸರನ್ನು ದಮನಮಾಡಿದನು ಮತ್ತು ಒಬ್ಬ ಸ್ನೇಹಿತೆಯನ್ನು ಉಳಿಸಲು ಮೃತ್ಯುದೇವತೆಯೊಂದಿಗೆ ಹೋರಾಡಿದನು. ಅಲ್ಲದೆ ಅವನು ನಗರಗಳನ್ನು ನೆಲಸಮಮಾಡಿದನು, ಹೆಂಗಸರ ಮಾನಭಂಗ ಮಾಡಿದನು, ಒಬ್ಬ ಹುಡುಗನನ್ನು ಒಂದು ಬುರುಜಿನಿಂದ ಕೆಳಕ್ಕೆಸೆದನು, ಮತ್ತು ತನ್ನ ಸ್ವಂತ ಹೆಂಡತಿಮಕ್ಕಳನ್ನೂ ಕೊಂದುಹಾಕಿದನು.

ಅವನೊಬ್ಬ ನಿಜ ವ್ಯಕ್ತಿಯಾಗಿರದಿದ್ದರೂ, ಅನಾದಿಕಾಲದಿಂದಲೂ ಈ ಪೌರಾಣಿಕ ವ್ಯಕ್ತಿಯಾಗಿದ್ದ ಹೆರಾಕ್ಲೀಸನ ಬಗ್ಗೆ, ಪ್ರಾಚೀನ ದೇಶಗಳಲ್ಲಿ ಅನೇಕ ಕಥೆಗಳಿದ್ದವು ಮತ್ತು ಇವು ಗ್ರೀಕರಿಗೆ ಚಿರಪರಿಚಿತವಾಗಿದ್ದವು. ರೋಮನರು ಅವನನ್ನು ಒಬ್ಬ ದೇವತೆಯೆಂದು ಆರಾಧಿಸಿದರು. ವ್ಯಾಪಾರಿಗಳು ಮತ್ತು ಪ್ರಯಾಣಿಕರು ಸಮೃದ್ಧಿಗಾಗಿ ಹಾಗೂ ಅಪಾಯದಿಂದ ರಕ್ಷಣೆಗಾಗಿ ಅವನಲ್ಲಿ ಪ್ರಾರ್ಥಿಸುತ್ತಿದ್ದರು. ಸಾವಿರಾರು ವರ್ಷಗಳಿಂದ ಅವನ ವೀರಕೃತ್ಯಗಳ ಕುರಿತಾದ ಸಾಹಸ ಕಥೆಗಳು ಜನರನ್ನು ಆಕರ್ಷಿಸಿವೆ.

ಆ ಪುರಾಣ ಕಥೆಯ ಮೂಲ

ಹೆರಾಕ್ಲೀಸ್‌ ಮತ್ತು ಇತರ ಪೌರಾಣಿಕ ವೀರಪುರುಷರ ಕಥೆಗಳಲ್ಲಿ ಸ್ವಲ್ಪವಾದರೂ ಸತ್ಯಾಂಶವಿದೆಯೊ? ಒಂದು ರೀತಿಯಲ್ಲಿ ಇರಬಹುದು. ಯಾಕೆಂದರೆ ಮಾನವ ಇತಿಹಾಸದ ಆರಂಭದಲ್ಲಿ, “ದೇವತೆಗಳು” ಮತ್ತು “ದೇವಮಾನವರು” ಭೂಮಿಯಲ್ಲಿ ನಿಜವಾಗಿಯೂ ವಾಸಿಸುತ್ತಿದ್ದ ಒಂದು ಸಮಯದ ಕುರಿತಾಗಿ ಬೈಬಲ್‌ ತಿಳಿಸುತ್ತದೆ.

ಆ ಯುಗವನ್ನು ವರ್ಣಿಸುತ್ತಾ, ಮೋಶೆಯು ಬರೆದುದು: “ಭೂಮಿಯ ಮೇಲೆ ಜನರು ಹೆಚ್ಚುತ್ತಾ ಅವರಿಗೆ ಹೆಣ್ಣು ಮಕ್ಕಳು ಹುಟ್ಟಲು ದೇವಪುತ್ರರು ಮನುಷ್ಯ ಪುತ್ರಿಯರ ಸೌಂದರ್ಯವನ್ನು ನೋಡಿ ತಮಗೆ ಇಷ್ಟರಾದವರನ್ನು ಹೆಂಡರನ್ನಾಗಿ ಮಾಡಿಕೊಂಡರು.”—ಆದಿಕಾಂಡ 6:1, 2.

ಆ “ದೇವಪುತ್ರರು” ಮಾನವರಲ್ಲ, ಬದಲಾಗಿ ದೇವದೂತರಾಗಿದ್ದರು. (ಯೋಬ 1:6; 2:1; 38:4, 6ನ್ನು ಹೋಲಿಸಿರಿ.) ಕೆಲವು ದೇವದೂತರು, ‘ತಮ್ಮ ದೊರೆತನವನ್ನು ಕಾಪಾಡದೆ ತಮಗೆ ತಕ್ಕ ವಾಸಸ್ಥಾನವನ್ನು ಬಿಟ್ಟರು’ ಎಂದು ಬೈಬಲ್‌ ಲೇಖಕ ಯೂದನು ತಿಳಿಸುತ್ತಾನೆ. (ಯೂದ 6) ಬೇರೆ ಮಾತುಗಳಲ್ಲಿ ಹೇಳುವುದಾದರೆ, ದೇವರ ಸ್ವರ್ಗೀಯ ಸಂಸ್ಥೆಯಲ್ಲಿ ಅವರಿಗಿದ್ದ ನೇಮಿತ ಸ್ಥಾನವನ್ನು ಅವರು ತ್ಯಜಿಸಿದರು, ಯಾಕೆಂದರೆ ಅವರು ಈ ಭೂಮಿಯ ಮೇಲಿದ್ದ ಸುಂದರ ಸ್ತ್ರೀಯರೊಂದಿಗೆ ಜೀವಿಸಲು ಇಷ್ಟಪಟ್ಟರು. ಈ ದಂಗೆಕೋರ ದೇವದೂತರು, ‘ತಮ್ಮನ್ನು ಜಾರತ್ವಕ್ಕೆ ಒಪ್ಪಿಸಿಬಿಟ್ಟು ಸ್ವಭಾವವಿರುದ್ಧವಾದ ಭೋಗವನ್ನನುಸರಿಸಿದ’ ಸೊದೋಮ ಗೊಮೋರ ಪಟ್ಟಣಗಳ ಜನರಂತಿದ್ದರೆಂದು ಯೂದನು ಕೂಡಿಸಿ ಹೇಳುತ್ತಾನೆ.—ಯೂದ 7.

ಈ ಅವಿಧೇಯ ದೇವದೂತರ ಚಟುವಟಿಕೆಗಳ ಕುರಿತು ಬೈಬಲು ಸಂಪೂರ್ಣ ವಿವರಗಳನ್ನು ಕೊಡುವುದಿಲ್ಲ. ಆದರೆ ಗ್ರೀಸ್‌ ಮತ್ತು ಇತರ ದೇಶಗಳ ಪೌರಾಣಿಕ ಕಥೆಗಳು, ಮಾನವಕುಲದವರ ನಡುವೆ ಅವರು ದೃಶ್ಯರೂಪದಲ್ಲಿ ಇಲ್ಲವೇ ಅದೃಶ್ಯ ರೂಪದಲ್ಲಿ ಓಡಾಡುತ್ತಿದ್ದದ್ದನ್ನು ವರ್ಣಿಸುತ್ತವೆ. ಅವರು ಮಾನವ ರೂಪದಲ್ಲಿ ಅವತರಿಸಿದಾಗ, ನೋಡಲು ತುಂಬ ಸ್ಫುರದ್ರೂಪಿಗಳಾಗಿದ್ದರು. ಅವರು ತಿಂದು, ಕುಡಿದು, ಮಲಗುತ್ತಿದ್ದರು ಮತ್ತು ಪರಸ್ಪರರೊಂದಿಗೆ ಹಾಗೂ ಮಾನವರೊಂದಿಗೆ ಲೈಂಗಿಕ ಸಂಬಂಧವನ್ನಿಟ್ಟುಕೊಳ್ಳುತ್ತಿದ್ದರು. ತಾವು ಪವಿತ್ರರೂ ಅಮರರೂ ಎಂದು ಹೇಳಿಕೊಳ್ಳುತ್ತಿದ್ದರು. ಆದರೂ ಅವರು ಸುಳ್ಳಾಡುತ್ತಿದ್ದರು, ವಂಚಿಸುತ್ತಿದ್ದರು, ಜಗಳವಾಡುತ್ತಿದ್ದರು, ಹೋರಾಡುತ್ತಿದ್ದರು, ಮರುಳುಗೊಳಿಸುತ್ತಿದ್ದರು ಮತ್ತು ಬಲಾತ್ಕಾರ ಸಂಭೋಗ ನಡೆಸುತ್ತಿದ್ದರು. ಅಂತಹ ಪೌರಾಣಿಕ ವೃತ್ತಾಂತಗಳು ಬೈಬಲಿನ ಆದಿಕಾಂಡ ಪುಸ್ತಕದಲ್ಲಿ ತಿಳಿಸಲ್ಪಟ್ಟಿರುವ ಜಲಪ್ರಳಯಕ್ಕೆ ಮುಂಚೆ ಇದ್ದ ಪರಿಸ್ಥಿತಿಗಳನ್ನು ಪ್ರತಿಬಿಂಬಿಸುತ್ತಿರಬಹುದು. ಆದರೆ ವ್ಯತ್ಯಾಸವೇನೆಂದರೆ, ಆ ಪರಿಸ್ಥಿತಿಗಳ ಕುರಿತು ಈ ಕಥೆಗಳಲ್ಲಿ ಸ್ವಲ್ಪ ಬಣ್ಣ ಹಚ್ಚಿಸಿ ತಿಳಿಸಲಾಗಿದೆ ಮಾತ್ರವಲ್ಲ ಅದನ್ನು ತಿರುಚಿ ಹೇಳಲಾಗಿದೆ.

ಪೂರ್ವದಲ್ಲಿ ಹೆಸರುಗೊಂಡ ಪರಾಕ್ರಮಶಾಲಿಗಳು

ಮಾನವರೂಪವನ್ನು ತಾಳಿದ ಈ ಅವಿಧೇಯ ದೇವದೂತರು, ಸ್ತ್ರೀಯರೊಂದಿಗೆ ಲೈಂಗಿಕ ಸಂಬಂಧವನ್ನಿಟ್ಟುಕೊಂಡರು ಮತ್ತು ಇದರ ಫಲಿತಾಂಶವಾಗಿ ಆ ಸ್ತ್ರೀಯರು ಮಕ್ಕಳನ್ನು ಹೆತ್ತರು. ಇವರು ಸಾಧಾರಣ ಮಕ್ಕಳಾಗಿರಲಿಲ್ಲ. ಅವರು ನೆಫೀಲಿಯರು, ಅಂದರೆ ಅರ್ಧ ಮಾನವ ಮತ್ತು ಅರ್ಧ ದೇವದೂತರಾಗಿದ್ದರು. ಬೈಬಲ್‌ ವೃತ್ತಾಂತವು ಹೇಳುವುದು: “ಆ ಕಾಲದಲ್ಲಿ . . . ಮಹಾಶರೀರಿಗಳು [“ನೆಫೀಲಿಯರು,” ಪಾದಟಿಪ್ಪಣಿ] ಭೂಮಿಯ ಮೇಲಿದ್ದರು; ಅನಂತರದಲ್ಲಿಯೂ ಇದ್ದರು, ಪೂರ್ವದಲ್ಲಿ ಹೆಸರುಗೊಂಡ ಪರಾಕ್ರಮಶಾಲಿಗಳು ಇವರೇ.”—ಆದಿಕಾಂಡ 6:4.

“ನೆಫೀಲಿಯರು” ಎಂಬ ಹೀಬ್ರು ಪದದ ಅಕ್ಷರಾರ್ಥವು, “ಕೆಡಹುವವರು” ಎಂದಾಗಿತ್ತು. ಇವರು ಹಿಂಸಾಕೃತ್ಯಗಳ ಮೂಲಕ ಇತರರನ್ನು ಕೆಡವುತ್ತಿದ್ದರು, ಅಥವಾ ಹೊಡೆದುರುಳಿಸುತ್ತಿದ್ದರು. ಆದುದರಿಂದ “ಅನ್ಯಾಯವು ಲೋಕವನ್ನು ತುಂಬಿಕೊಂಡಿತ್ತು” ಎಂದು ಬೈಬಲ್‌ ವೃತ್ತಾಂತವು ಕೂಡಿಸಿ ಹೇಳಿರುವುದರಲ್ಲಿ ಆಶ್ಚರ್ಯವೇನಿಲ್ಲ. (ಆದಿಕಾಂಡ 6:11) ಹೆರಾಕ್ಲೀಸ್‌ ಮತ್ತು ಬಬಿಲೋನಿನ ವೀರಪುರುಷ ಗಿಲ್ಗಾಮೇಶರಂತಹ ಪೌರಾಣಿಕ ದೇವಮಾನವರಿಗೂ ಈ ನೆಫೀಲಿಯರಿಗೂ ತುಂಬ ಹೋಲಿಕೆಯಿದೆ.

ನೆಫೀಲಿಯರನ್ನು “ಪೂರ್ವದಲ್ಲಿ ಹೆಸರುಗೊಂಡ ಪರಾಕ್ರಮಶಾಲಿಗಳು” ಎಂದು ಕರೆಯಲಾಗಿದೆಯೆಂಬುದನ್ನು ಗಮನಿಸಿರಿ. ಅವರ ಸಮಯದಲ್ಲೇ ಜೀವಿಸುತ್ತಿದ್ದ ನೀತಿವಂತ ಮನುಷ್ಯನಾದ ನೋಹನಂತೆ, ಈ ನೆಫೀಲಿಯರು ಯೆಹೋವನ ಹೆಸರನ್ನು ಪ್ರಸಿದ್ಧಪಡಿಸುವುದರಲ್ಲಿ ಆಸಕ್ತರಾಗಿರಲಿಲ್ಲ. ಅವರು ತಮ್ಮ ಸ್ವಂತ ಪ್ರಸಿದ್ಧಿ, ಮಹಿಮೆ ಮತ್ತು ಖ್ಯಾತಿಯ ಬಗ್ಗೆ ಬಹಳ ಆಸಕ್ತರಾಗಿದ್ದರು. ನಿಸ್ಸಂದೇಹವಾಗಿಯೂ ಹಿಂಸಾಚಾರ ಮತ್ತು ರಕ್ತಪಾತವು ಒಳಗೂಡಿದ್ದ ಪರಾಕ್ರಮಶಾಲಿ ಕೃತ್ಯಗಳ ಮೂಲಕ ಅವರು ತಮ್ಮ ಕಾಲದ ಭಕ್ತಿಹೀನ ಲೋಕದಿಂದ ಹಾತೊರೆಯುತ್ತಿದ್ದ ಕೀರ್ತಿಯನ್ನು ಗಿಟ್ಟಿಸಿಕೊಂಡರು. ಅವರು ತಮ್ಮ ದಿನಗಳಲ್ಲಿನ ಮಹಾ ವೀರರಾಗಿದ್ದರು. ಜನರು ಅವರಿಗೆ ಭಯಪಡುತ್ತಿದ್ದರು, ಗೌರವಿಸುತ್ತಿದ್ದರು ಮತ್ತು ಅವರನ್ನು ಅಜೇಯರೆಂಬಂತೆ ವೀಕ್ಷಿಸುತ್ತಿದ್ದರು.

ಈ ನೆಫೀಲಿಯರು ಮತ್ತು ಅವರ ಕಳಂಕಿತ ದೇವದೂತ ತಂದೆಯರು ಆ ಸಮಯದಲ್ಲಿ ಜೀವಿಸುತ್ತಿದ್ದವರ ದೃಷ್ಟಿಯಲ್ಲಿ ಹೆಸರನ್ನು ಪಡೆದಿರಬಹುದು. ಆದರೆ ಅವರು ಖಂಡಿತವಾಗಿಯೂ ದೇವರ ದೃಷ್ಟಿಯಲ್ಲಿ ಒಂದು ಹೆಸರನ್ನು ಪಡೆದಿರಲಿಲ್ಲ. ಅವರ ಜೀವನ ರೀತಿಯು ಅಸಹ್ಯಕರವಾಗಿತ್ತು. ಆದುದರಿಂದಲೇ ದೇವರು ಆ ಕೀಳ್ಮಟ್ಟಕ್ಕಿಳಿದ ದೇವದೂತರ ವಿರುದ್ಧ ಕ್ರಮ ಕೈಗೊಂಡನು. ಅಪೊಸ್ತಲ ಪೇತ್ರನು ಬರೆದುದು: “ದೇವದೂತರು ಪಾಪಮಾಡಿದಾಗ ದೇವರು ಅವರನ್ನು ಸುಮ್ಮನೆ ಬಿಡದೆ ನರಕಕ್ಕೆ ದೊಬ್ಬಿ ನ್ಯಾಯತೀರ್ಪನ್ನು ಹೊಂದುವದಕ್ಕೆ ಇಡಲ್ಪಟ್ಟವರಾಗಿರಬೇಕೆಂದು ಕತ್ತಲೆ ಗುಂಡಿಗಳಿಗೆ ಒಪ್ಪಿಸಿದನು. ಆತನು ಭಕ್ತಿಹೀನರಾದ ಪುರಾತನರ ಲೋಕವನ್ನು ಸುಮ್ಮನೆ ಬಿಡದೆ ಅವರ ಮೇಲೆ ಜಲಪ್ರಲಯವನ್ನು ಬರಮಾಡಿದನು; ಆದರೆ ಸುನೀತಿಯನ್ನು ಸಾರುವವನಾಗಿದ್ದ ನೋಹನನ್ನೂ ಅವನೊಂದಿಗೆ ಬೇರೆ ಏಳು ಮಂದಿಯನ್ನೂ ಉಳಿಸಿದನು.”—2 ಪೇತ್ರ 2:4, 5.

ಭೌಗೋಲಿಕ ಜಲಪ್ರಳಯದ ಸಮಯದಲ್ಲಿ, ದಂಗೆಕೋರ ದೇವದೂತರು ತಮ್ಮ ಮಾನವ ರೂಪವನ್ನು ತ್ಯಜಿಸಿ, ಕಳಂಕಿತರಾಗಿ ಆತ್ಮ ಜೀವಿಗಳಿರುವ ಸ್ವರ್ಗಕ್ಕೆ ಹಿಂದಿರುಗಿದರು. ಆದರೆ, ಅವರು ಇನ್ನು ಮುಂದೆ ಮಾನವ ಶರೀರಗಳನ್ನು ಧರಿಸಿಕೊಳ್ಳುವುದನ್ನು ನಿಷೇಧಿಸುವ ಮೂಲಕ ದೇವರು ಅವರನ್ನು ಶಿಕ್ಷಿಸಿದನು. ಆ ಅವಿಧೇಯ ದೇವದೂತರ ಮಾನವಾತೀತ ಸಂತಾನವಾಗಿದ್ದ ನೆಫೀಲಿಯರೆಲ್ಲರೂ ನಾಶವಾಗಿಹೋದರು. ಕೇವಲ ನೋಹ ಮತ್ತು ಅವನ ಚಿಕ್ಕ ಕುಟುಂಬವು ಆ ಜಲಪ್ರಳಯದಿಂದ ಪಾರಾಗಿ ಉಳಿಯಿತು.

ಇಂದಿನ ಹೆಸರುವಾಸಿ ಪುರುಷರು

ಇಂದು, ದೇವತೆಗಳು ಅಥವಾ ದೇವಮಾನವರು ಭೂಮಿಯಲ್ಲಿ ಓಡಾಡುತ್ತಿಲ್ಲ. ಆದರೂ ಹಿಂಸಾಚಾರವು ಎಲ್ಲೆಲ್ಲೂ ತುಂಬಿತುಳುಕುತ್ತಿದೆ. ಇಂದಿನ ಪ್ರಸಿದ್ಧ ವ್ಯಕ್ತಿಗಳನ್ನು ಪುಸ್ತಕಗಳಲ್ಲಿ, ಚಲನಚಿತ್ರಗಳಲ್ಲಿ, ಟೆಲಿವಿಷನ್‌ನಲ್ಲಿ ಮತ್ತು ಸಂಗೀತದಲ್ಲಿ ಕೊಂಡಾಡಲಾಗುತ್ತದೆ. ಇಂಥವರು, ತಮ್ಮ ಬಲಗೆನ್ನೆಯ ಮೇಲೆ ಹೊಡೆದಾಗ ಮತ್ತೊಂದು ಕೆನ್ನೆಯನ್ನು ಒಡ್ಡುವುದು, ತಮ್ಮ ವೈರಿಗಳನ್ನು ಪ್ರೀತಿಸುವುದು, ಸಮಾಧಾನವನ್ನು ಹಾರೈಸುವುದು, ಕ್ಷಮಿಸುವುದು ಅಥವಾ ಹಿಂಸಾಚಾರದಿಂದ ದೂರವಿರುವುದು ಮುಂತಾದವುಗಳ ಕುರಿತು ಕನಸಿನಲ್ಲೂ ಯೋಚಿಸಲಾರರು. (ಮತ್ತಾಯ 5:39, 44; ರೋಮಾಪುರ 12:17; ಎಫೆಸ 4:32; 1 ಪೇತ್ರ 3:11) ಅದಕ್ಕೆ ಬದಲಾಗಿ, ಈ ಆಧುನಿಕ ದಿನದ ಪರಾಕ್ರಮಶಾಲಿಗಳನ್ನು ಅವರ ಶಕ್ತಿ ಮತ್ತು ಹೋರಾಡುವ, ಸೇಡು ತೀರಿಸಿಕೊಳ್ಳುವ, ಹಾಗೂ ಹಿಂಸಾಚಾರಕ್ಕೆ ಬದಲಾಗಿ ಇನ್ನೂ ಹೆಚ್ಚಿನ ಹಿಂಸಾಚಾರವನ್ನು ಹಿಂದಿರುಗಿಸುವ ಸಾಮರ್ಥ್ಯಕ್ಕಾಗಿ ಮೆಚ್ಚಲಾಗುತ್ತದೆ. *

ನೋಹನ ದಿನಗಳಲ್ಲಿ ದೇವರಿಗೆ ಇಂಥವರ ಬಗ್ಗೆ ಯಾವ ದೃಷ್ಟಿಕೋನವಿತ್ತೋ ಅದು ಇಂದಿಗೂ ಹಾಗೆಯೇ ಇದೆ. ಹಿಂಸಾಚಾರವನ್ನು ಪ್ರೀತಿಸುವವರನ್ನು ಯೆಹೋವನು ಕಿಂಚಿತ್ತೂ ಮೆಚ್ಚುವುದಿಲ್ಲ ಅಥವಾ ಅವರ ಸಾಹಸಗಳನ್ನು ನೋಡಿ ಖುಷಿಪಡುವುದೂ ಇಲ್ಲ. ಕೀರ್ತನೆಗಾರನು ಹಾಡಿದ್ದು: “ಯೆಹೋವನು ನೀತಿವಂತರನ್ನೂ ಅನೀತಿವಂತರನ್ನೂ ಪರೀಕ್ಷಿಸುತ್ತಾನೆ; ಬಲಾತ್ಕಾರಿಗಳನ್ನು ದ್ವೇಷಿಸುತ್ತಾನೆ.”—ಕೀರ್ತನೆ 11:5.

ಇನ್ನೊಂದು ರೀತಿಯ ಬಲ

ಆ ಹಿಂಸಾತ್ಮಕ ಪರಾಕ್ರಮಶಾಲಿಗಳಿಗೆ ಹೋಲಿಸುವಾಗ ಸಂಪೂರ್ಣವಾಗಿ ಭಿನ್ನವಾಗಿದ್ದ ಒಬ್ಬ ವ್ಯಕ್ತಿಯು, ಜೀವಿಸಿರುವವರಲ್ಲೇ ಅತಿ ಪ್ರಸಿದ್ಧ ಮಾನವನಾದ ಯೇಸು ಕ್ರಿಸ್ತನಾಗಿದ್ದಾನೆ. ಅವನು ಶಾಂತಿಯ ಮನುಷ್ಯನಾಗಿದ್ದನು. ಭೂಮಿಯ ಮೇಲಿದ್ದಾಗ ಅವನು “ಯಾವುದೇ ರೀತಿಯ ಹಿಂಸಾಚಾರವನ್ನು” ಮಾಡಲಿಲ್ಲ. (ಯೆಶಾಯ 53:9, NW) ಗೆತ್ಸೇಮನೆ ತೋಟದಲ್ಲಿ ಅವನ ವೈರಿಗಳು ಅವನನ್ನು ಬಂಧಿಸಲು ಬಂದಾಗ, ಅವನ ಹಿಂಬಾಲಕರಲ್ಲಿ ಕೆಲವರ ಬಳಿ ಕತ್ತಿಗಳಿದ್ದವು. (ಲೂಕ 22:38, 47-51) ಯೆಹೂದ್ಯರು ಅವನನ್ನು ಹಿಡಿಯದಂತೆ ಪ್ರಯತ್ನಿಸಲು ಅವರು ಒಂದು ಗುಂಪನ್ನು ಕಟ್ಟಿ ಹೋರಾಡಬಹುದಿತ್ತು.—ಯೋಹಾನ 18:36.

ವಾಸ್ತವದಲ್ಲಿ, ಅಪೊಸ್ತಲ ಪೇತ್ರನು ಯೇಸುವನ್ನು ರಕ್ಷಿಸಲು ತನ್ನ ಕತ್ತಿಯನ್ನು ಹೊರತೆಗೆದನು, ಆದರೆ ಯೇಸು ಅವನಿಗಂದದ್ದು: “ನಿನ್ನ ಕತ್ತಿಯನ್ನು ತಿರಿಗಿ ಒರೆಯಲ್ಲಿ ಸೇರಿಸು; ಕತ್ತಿಯನ್ನು ಹಿಡಿದವರೆಲ್ಲರು ಕತ್ತಿಯಿಂದ ಸಾಯುವರು.” (ಮತ್ತಾಯ 26:51, 52) ಹೌದು, ಮಾನವ ಇತಿಹಾಸವು ತೋರಿಸಿರುವಂತೆ ಹಿಂಸಾಚಾರವು ಹಿಂಸಾಚಾರವನ್ನೇ ಹಡೆಯುವುದು. ಆಯುಧಗಳನ್ನು ಉಪಯೋಗಿಸಿ ತನ್ನನ್ನೇ ರಕ್ಷಿಸಿಕೊಳ್ಳುವ ಈ ಸಂದರ್ಭ ಮಾತ್ರವಲ್ಲದೆ, ತನ್ನನ್ನು ಇನ್ನೊಂದು ರೀತಿಯಲ್ಲಿ ರಕ್ಷಿಸಿಕೊಳ್ಳುವ ಅವಕಾಶವೂ ಯೇಸುವಿಗಿತ್ತು. ಅವನು ಅನಂತರ ಪೇತ್ರನಿಗೆ ಹೇಳಿದ್ದು: “ನಾನು ನನ್ನ ತಂದೆಯನ್ನು ಬೇಡಿಕೊಳ್ಳಲಾರೆನೆಂದೂ ಬೇಡಿಕೊಂಡರೆ ಆತನು ನನಗೆ ಈಗಲೇ ಹನ್ನೆರಡು ಗಣಗಳಿಗಿಂತ ಹೆಚ್ಚು ಮಂದಿ ದೇವದೂತರನ್ನು ಕಳುಹಿಸಿಕೊಡುವದಿಲ್ಲವೆಂದೂ ನೆನಸುತ್ತೀಯಾ?”—ಮತ್ತಾಯ 26:53.

ಹಿಂಸಾಚಾರದ ಮೂಲಕ ತನ್ನನ್ನು ರಕ್ಷಿಸಿಕೊಳ್ಳುವ ಅಥವಾ ದೇವದೂತರ ಸಂರಕ್ಷಣೆಯನ್ನು ಕೋರುವ ಬದಲಿಗೆ, ಯೇಸು ತನ್ನನ್ನು ಕೊಲ್ಲಲಿದ್ದವರು ತನ್ನನ್ನು ಬಂಧಿಸುವಂತೆ ಬಿಟ್ಟುಬಿಟ್ಟನು. ಏಕೆ? ಒಂದು ಕಾರಣವೇನೆಂದರೆ, ತನ್ನ ತಂದೆಯು ಭೂಮಿಯ ಮೇಲಿನ ದುಷ್ಟತನವನ್ನು ಅಂತ್ಯಗೊಳಿಸುವ ಸಮಯವು ಇನ್ನೂ ಬಂದಿರಲಿಲ್ಲವೆಂದು ಅವನಿಗೆ ತಿಳಿದಿತ್ತು. ಸ್ವತಃ ಮುಂದೆ ಹೋಗಿ ಪರಿಸ್ಥಿತಿಯನ್ನು ಸರಿಪಡಿಸುವ ಬದಲಿಗೆ, ಯೇಸು ಯೆಹೋವನ ಮೇಲೆ ಭರವಸೆಯನ್ನಿಟ್ಟನು.

ಇದು ಅವನ ಬಲಹೀನತೆಯನ್ನಲ್ಲ ಬದಲಾಗಿ ಮಹತ್ತಾದ ಆಂತರಿಕ ಬಲವನ್ನು ತೋರಿಸಿತು. ಯೆಹೋವನು ತನ್ನ ಸ್ವಂತ ಸಮಯದಲ್ಲಿ ಮತ್ತು ತನ್ನದೇ ಆದ ರೀತಿಯಲ್ಲಿ ವಿಷಯಗಳನ್ನು ಸರಿಪಡಿಸುವನೆಂಬ ಬಲವಾದ ನಂಬಿಕೆಯನ್ನು ಅವನು ಪ್ರದರ್ಶಿಸಿದನು. ಅವನು ವಿಧೇಯತೆಯನ್ನು ತೋರಿಸಿದ್ದರಿಂದ, ಅವನನ್ನು ಯೆಹೋವನ ನಂತರದ ಎರಡನೆಯ ಸ್ಥಾನಕ್ಕೆ, ಅಂದರೆ ಕೀರ್ತಿಯ ಸ್ಥಾನಕ್ಕೇರಿಸಲಾಯಿತು. ಯೇಸುವಿನ ಕುರಿತಾಗಿ ಅಪೊಸ್ತಲ ಪೌಲನು ಬರೆದುದು: “ಆತನು . . . ತನ್ನನ್ನು ತಗ್ಗಿಸಿಕೊಂಡು ಮರಣವನ್ನು ಅಂದರೆ ಶಿಲುಬೆಯ ಮರಣವನ್ನಾದರೂ ಹೊಂದುವಷ್ಟು ವಿಧೇಯನಾದನು. ಈ ಕಾರಣದಿಂದ ದೇವರು ಆತನನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿ ಎಲ್ಲಾ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ಆತನಿಗೆ ದಯಪಾಲಿಸಿದ್ದಾನೆ. ಆದದರಿಂದ ಸ್ವರ್ಗ ಮರ್ತ್ಯ ಪಾತಾಳಗಳಲ್ಲಿರುವವರೆಲ್ಲರೂ ಯೇಸುವಿನ ಹೆಸರಿನಲ್ಲಿ ಅಡ್ಡಬಿದ್ದು ಯೇಸು ಕ್ರಿಸ್ತನನ್ನು ಒಡೆಯನೆಂದು ಪ್ರತಿಜ್ಞೆಮಾಡಿ ತಂದೆಯಾದ ದೇವರಿಗೆ ಘನವನ್ನು ಸಲ್ಲಿಸುವರು.”—ಫಿಲಿಪ್ಪಿ 2:8-11.

ಹಿಂಸಾಚಾರವನ್ನು ಅಂತ್ಯಗೊಳಿಸುವ ದೇವರ ವಾಗ್ದಾನ

ಸತ್ಯ ಕ್ರೈಸ್ತರು ತಮ್ಮ ಜೀವಿತಗಳಲ್ಲಿ ಯೇಸುವಿನ ಮಾದರಿ ಮತ್ತು ಬೋಧನೆಗಳನ್ನು ಅನುಕರಿಸುತ್ತಾರೆ. ಅವರು ಪ್ರಸಿದ್ಧ ಹಾಗೂ ಹಿಂಸಾಚಾರಿ ಲೌಕಿಕ ಪುರುಷರನ್ನು ಮೆಚ್ಚುವುದಿಲ್ಲ ಅಥವಾ ಅನುಕರಿಸುವುದಿಲ್ಲ. ನೋಹನ ದಿನಗಳಲ್ಲಿನ ದುಷ್ಟ ಜನರು ನಾಶವಾದಂತೆಯೇ ದೇವರ ತಕ್ಕ ಸಮಯದಲ್ಲಿ ಈ ಎಲ್ಲ ಜನರು ಸದಾಕಾಲಕ್ಕೂ ನಾಶವಾಗುವರೆಂಬುದು ಅವರಿಗೆ ತಿಳಿದಿದೆ.

ಈ ಭೂಮಿ ಮತ್ತು ಮಾನವಕುಲವನ್ನು ಸೃಷ್ಟಿಸಿದವನು ದೇವರಾಗಿದ್ದಾನೆ. ಆತನೇ ನ್ಯಾಯಯುಕ್ತ ಪರಮಾಧಿಕಾರಿಯೂ ಆಗಿದ್ದಾನೆ. (ಪ್ರಕಟನೆ 4:11) ಒಬ್ಬ ಮಾನವ ನ್ಯಾಯಾಧೀಶನಿಗೆ ನ್ಯಾಯತೀರ್ಪುಗಳನ್ನು ಮಾಡುವ ಕಾನೂನುಬದ್ಧ ಹಕ್ಕು ಇರುವಾಗ, ದೇವರಿಗೆ ನ್ಯಾಯತೀರ್ಪುಗಳನ್ನು ಕೊಡುವ ಹಕ್ಕು ಅದಕ್ಕಿಂತಲೂ ಹೆಚ್ಚಿದೆ. ತನ್ನ ಸ್ವಂತ ಮೂಲತತ್ವಗಳಿಗಾಗಿ ಆತನಿಗಿರುವ ಗೌರವವು, ಹಾಗೂ ತನ್ನನ್ನು ಪ್ರೀತಿಸುವವರಿಗಾಗಿ ಆತನಿಗಿರುವ ಪ್ರೀತಿಯು, ಎಲ್ಲಾ ರೀತಿಯ ದುಷ್ಟತನ ಮತ್ತು ದುಷ್ಟಜನರನ್ನು ಅಂತ್ಯಗೊಳಿಸುವಂತೆ ಆತನನ್ನು ಒತ್ತಾಯಿಸುವುದು.—ಮತ್ತಾಯ 13:41, 42; ಲೂಕ 17:26-30.

ಇದು, ನ್ಯಾಯ ಮತ್ತು ನೀತಿಯ ಮೇಲೆ ದೃಢವಾಗಿ ಆಧಾರಿತವಾಗಿರುವ ಶಾಂತಿ, ಅಂದರೆ ಭೂಮಿಯ ಮೇಲೆ ಬಾಳುವ ಶಾಂತಿಯನ್ನು ತರುವುದು. ಯೇಸು ಕ್ರಿಸ್ತನ ಕುರಿತಾದ ಸುಪ್ರಸಿದ್ಧ ಪ್ರವಾದನೆಯಲ್ಲಿ ಇದು ಮುಂತಿಳಿಸಲ್ಪಟ್ಟಿತು: “ಒಂದು ಮಗು ನಮಗಾಗಿ ಹುಟ್ಟಿದೆಯಷ್ಟೆ, ವರದ ಮಗನು ನಮಗೆ ದೊರೆತನು; ಆಡಳಿತವು ಅವನ ಬಾಹುವಿನ ಮೇಲಿರುವದು; ಅದ್ಭುತಸ್ವರೂಪನು, ಆಲೋಚನಾಕರ್ತನು, ಪರಾಕ್ರಮಿಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂಬವು ಅವನ ಹೆಸರು. ಅವನ ಮುಖಾಂತರ ದಾವೀದನ ಸಿಂಹಾಸನದ ಆಡಳಿತವು ಅಭಿವೃದ್ಧಿಯಾಗುವದು, ದಾವೀದನ ರಾಜ್ಯದಲ್ಲಿ ನಿತ್ಯ ಸಮಾಧಾನವಿರುವದು, ಆ ರಾಜ್ಯವು ಇಂದಿನಿಂದ ಯಾವಾಗಲೂ ನೀತಿನ್ಯಾಯಗಳ ಮೂಲಕ ಸ್ಥಾಪಿತವಾಗಿ ಸ್ಥಿರಗೊಳ್ಳುವದು; ಸೇನಾಧೀಶ್ವರನಾದ ಯೆಹೋವನ ಆಗ್ರಹವು ಇದನ್ನು ನೆರವೇರಿಸುವದು.”—ಯೆಶಾಯ 9:6, 7.

ಆದುದರಿಂದ, “ಬಲಾತ್ಕಾರಿಯನ್ನು ನೋಡಿ ಹೊಟ್ಟೆಕಿಚ್ಚುಪಡದಿರು, ಅವನ ನಡತೆಯನ್ನು ಎಷ್ಟು ಮಾತ್ರಕ್ಕೂ ಅನುಸರಿಸಬೇಡ. ವಕ್ರಬುದ್ಧಿಯವನು ಯೆಹೋವನಿಗೆ ಅಸಹ್ಯನು, ಯಥಾರ್ಥರಿಗೆ ಆತನ ಸ್ನೇಹವು ದೊರೆಯುವದು” ಎಂಬ ಪುರಾತನಕಾಲದ ಪ್ರೇರಿತ ಸಲಹೆಗೆ ಗಮನಕೊಡಲು ಕ್ರೈಸ್ತರಿಗೆ ಸಕಾರಣವಿದೆ.—ಜ್ಞಾನೋಕ್ತಿ 3:31, 32.

[ಪಾದಟಿಪ್ಪಣಿಗಳು]

^ ಪ್ಯಾರ. 17 ಅನೇಕ ವಿಡಿಯೋ ಆಟಗಳು ಮತ್ತು ವಿಜ್ಞಾನದ ಕಲ್ಪನಾ ವಿಷಯಗಳುಳ್ಳ ಚಲನಚಿತ್ರಗಳಲ್ಲಿನ ಹಿಂಸಾತ್ಮಕ ಪಾತ್ರಧಾರಿಗಳು, ಅನೇಕವೇಳೆ ಈ ಕೆಟ್ಟ, ಹಿಂಸಾತ್ಮಕ ಗುಣಗಳನ್ನು ಇನ್ನೂ ತೀವ್ರವಾಗಿ ಬಣ್ಣಿಸಿ ಪ್ರದರ್ಶಿಸುತ್ತವೆ.

[ಪುಟ 29ರಲ್ಲಿರುವ ಸಂಕ್ಷಿಪ್ತ ವಿವರಣೆ]

ಆಧುನಿಕ ದಿನದ ಪರಾಕ್ರಮಶಾಲಿಗಳನ್ನು, ಅವರಿಗಿರುವ ಶಕ್ತಿ ಮತ್ತು ಹಿಂಸಾಚಾರಕ್ಕೆ ಬದಲಾಗಿ ಇನ್ನೂ ಹೆಚ್ಚಿನ ಹಿಂಸಾಚಾರವನ್ನು ಹಿಂದಿರುಗಿಸುವ ಸಾಮರ್ಥ್ಯಕ್ಕಾಗಿ ಮೆಚ್ಚಲಾಗುತ್ತದೆ

[ಪುಟ 26ರಲ್ಲಿರುವ ಚಿತ್ರ ಕೃಪೆ]

Alinari/Art Resource, NY