ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೊಸ ಲೋಕ—ನೀವು ಅಲ್ಲಿರುವಿರೊ?

ಹೊಸ ಲೋಕ—ನೀವು ಅಲ್ಲಿರುವಿರೊ?

ಹೊಸ ಲೋಕನೀವು ಅಲ್ಲಿರುವಿರೊ?

“ಮನುಷ್ಯರು ತಮ್ಮ ಜೀವಮಾನದಲ್ಲೆಲ್ಲಾ ಉಲ್ಲಾಸವಾಗಿ ಸುಖವನ್ನನುಭವಿಸುವದಕ್ಕಿಂತ ಇನ್ನೇನೂ ಅವರಿಗೆ ಮೇಲಿಲ್ಲವೆಂದು ನಾನು ಗ್ರಹಿಸಿದ್ದೇನೆ. ಇದಲ್ಲದೆ ಪ್ರತಿಯೊಬ್ಬನು ಅನ್ನಪಾನಗಳನ್ನು ತೆಗೆದುಕೊಂಡು ತನ್ನ ನಾನಾ ಪ್ರಯಾಸಗಳಲ್ಲಿಯೂ ಸುಖವನ್ನನುಭವಿಸುವದು ದೇವರ ಅನುಗ್ರಹವೇ.”ಪ್ರಸಂಗಿ 3:12, 13.

1. ಭವಿಷ್ಯತ್ತಿನ ಕುರಿತು ನಾವು ಏಕೆ ಆಶಾವಾದಿಗಳಾಗಿರಬಹುದು?

ಸರ್ವಶಕ್ತನಾದ ದೇವರು ತುಂಬ ಕಟ್ಟುನಿಟ್ಟು ಮತ್ತು ನಿರ್ದಯಿ ಎಂದು ಅನೇಕರು ನೆನಸುತ್ತಾರೆ. ಆದರೂ, ಈ ಮೇಲಿನ ಶಾಸ್ತ್ರವಚನವು ಸತ್ಯವಾಗಿದ್ದು, ಇದನ್ನು ಆತನ ಪ್ರೇರಿತ ವಾಕ್ಯದಲ್ಲಿ ನೀವು ಕಂಡುಕೊಳ್ಳುವಿರಿ. ಆತನೊಬ್ಬ “ಸಂತೋಷಭರಿತನಾದ ದೇವರಾ”ಗಿದ್ದು, ನಮ್ಮ ಪ್ರಥಮ ಹೆತ್ತವರನ್ನು ಭೂಪ್ರಮೋದವನದಲ್ಲಿ ಇಟ್ಟಿರುವುದರೊಂದಿಗೆ ಇದು ಸರಿಹೊಂದುತ್ತದೆ. (1 ತಿಮೊಥೆಯ 1:11, NW; ಆದಿಕಾಂಡ 2:7-9) ದೇವರು ತನ್ನ ಜನರಿಗಾಗಿ ವಾಗ್ದಾನಿಸಿರುವ ಭವಿಷ್ಯತ್ತಿನ ಕುರಿತು ಒಳನೋಟವನ್ನು ಪಡೆದುಕೊಳ್ಳಲು ಪ್ರಯತ್ನಿಸುವಾಗ, ನಮಗೆ ಶಾಶ್ವತವಾದ ಆನಂದವನ್ನು ನೀಡುವಂತಹ ಪರಿಸ್ಥಿತಿಗಳ ಕುರಿತು ಕಲಿಯಲು ನಾವು ಆಶ್ಚರ್ಯಪಡಬಾರದು.

2. ನೀವು ಮುನ್ನೋಡಸಾಧ್ಯವಿರುವ ಕೆಲವು ವಿಷಯಗಳು ಯಾವುವು?

2 ಹಿಂದಿನ ಲೇಖನದಲ್ಲಿ, ‘ನೂತನಾಕಾಶಮಂಡಲ ಮತ್ತು ನೂತನಭೂಮಂಡಲದ’ ಕುರಿತು ಬೈಬಲು ಮುಂತಿಳಿಸಿರುವ ನಾಲ್ಕು ಉಲ್ಲೇಖಗಳಲ್ಲಿ ಮೂರನ್ನು ನಾವು ಪರೀಕ್ಷಿಸಿದೆವು. (ಯೆಶಾಯ 65:17) ಆ ವಿಶ್ವಾಸಾರ್ಹ ಭವಿಷ್ಯವಾಣಿಗಳಲ್ಲಿ ಒಂದು, ಪ್ರಕಟನೆ 21:1ರಲ್ಲಿ ದಾಖಲಿಸಲ್ಪಟ್ಟಿದೆ. ಸರ್ವಶಕ್ತನಾದ ದೇವರು ಭೂಮಿಯ ಪರಿಸ್ಥಿತಿಗಳನ್ನು ಸಂಪೂರ್ಣವಾಗಿ ಬದಲಾಯಿಸಿ, ಉತ್ತಮವಾದ ಪರಿಸ್ಥಿತಿಯನ್ನು ತರುವಂತಹ ಒಂದು ಸಮಯದ ಕುರಿತು ಮುಂದಿನ ವಚನಗಳು ತಿಳಿಸುತ್ತವೆ. ಆತನು ದುಃಖದ ಕಣ್ಣೀರನ್ನು ಒರಸಿಬಿಡುವನು. ಜನರು ಇನ್ನೆಂದಿಗೂ ವೃದ್ಧಾಪ್ಯ, ಅನಾರೋಗ್ಯ ಅಥವಾ ಅಪಘಾತಗಳಿಂದ ಸಾಯಲಾರರು. ಶೋಕ, ವಿಲಾಪ ಮತ್ತು ವೇದನೆಯೂ ಇಲ್ಲದೇ ಹೋಗುವುದು. ಎಂತಹ ಆನಂದಮಯ ಪ್ರತೀಕ್ಷೆ! ಆದರೆ ಅಂತಹ ಒಂದು ಸ್ಥಿತಿಯು ಖಂಡಿತವಾಗಿಯೂ ಬರುವುದೆಂಬ ಖಾತ್ರಿ ನಮಗಿರಸಾಧ್ಯವಿದೆಯೊ, ಮತ್ತು ಆ ಪ್ರತೀಕ್ಷೆಯು ಈಗ ನಮ್ಮ ಮೇಲೆ ಯಾವ ಪ್ರಭಾವವನ್ನು ಬೀರಸಾಧ್ಯವಿದೆ?

ದೃಢಭರವಸೆಯಿಡಲು ಕಾರಣಗಳು

3. ಭವಿಷ್ಯತ್ತಿನ ಕುರಿತಾದ ಬೈಬಲ್‌ ವಾಗ್ದಾನಗಳ ಮೇಲೆ ನಾವು ಏಕೆ ಭರವಸೆಯಿಡಸಾಧ್ಯವಿದೆ?

3 ಈ ವಿಷಯವನ್ನು ಪ್ರಕಟನೆ 21:5 ಹೇಗೆ ಮುಂದುವರಿಸುತ್ತದೆ ಎಂಬುದನ್ನು ಗಮನಿಸಿರಿ. ತನ್ನ ಸ್ವರ್ಗೀಯ ಸಿಂಹಾಸನದ ಮೇಲೆ ಕುಳಿತುಕೊಂಡಿರುವ ದೇವರು, “ಇಗೋ, ಎಲ್ಲವನ್ನು ಹೊಸದುಮಾಡುತ್ತೇನೆ” ಎಂದು ಪ್ರಕಟಿಸುತ್ತಿರುವುದಾಗಿ ಅಲ್ಲಿ ತಿಳಿಸಲ್ಪಟ್ಟಿದೆ. ಆ ದೈವಿಕ ವಾಗ್ದಾನವು, ಯಾವುದೇ ರಾಷ್ಟ್ರವು ಮಾಡುವ ಸ್ವಾತಂತ್ರ್ಯದ ಘೋಷಣೆ, ಪ್ರಚಲಿತ ದಿನದ ಹಕ್ಕುಗಳ ಮಸೂದೆ, ಇಲ್ಲವೆ ಭವಿಷ್ಯತ್ತಿಗಾಗಿರುವ ಯಾವುದೇ ಮಾನವ ಹಾರೈಕೆಗಿಂತಲೂ ಎಷ್ಟೋ ಮಿಗಿಲಾಗಿದೆ. ಇದು ‘ಸುಳ್ಳಾಡಸಾಧ್ಯವಿರದ’ ದೇವರು ಎಂದು ಬೈಬಲು ಯಾರ ಕುರಿತಾಗಿ ಹೇಳುತ್ತದೋ ಆ ದೇವರಿಂದ ತಿಳಿಸಲ್ಪಟ್ಟ ಸಂಪೂರ್ಣ ವಿಶ್ವಾಸಾರ್ಹವಾದ ಒಂದು ಪ್ರಕಟನೆಯಾಗಿದೆ. (ತೀತ 1:2) ನಾವು ಚರ್ಚೆಯನ್ನು ಈ ಹಂತದಲ್ಲಿ ನಿಲ್ಲಿಸಿ, ಈ ಅತ್ಯಂತ ಉತ್ಕೃಷ್ಟವಾದ ಪ್ರತೀಕ್ಷೆಯಲ್ಲೇ ಆನಂದಿಸುತ್ತಾ, ದೇವರಲ್ಲಿ ಭರವಸೆಯಿಡುತ್ತಾ ಇರಸಾಧ್ಯವಿದೆಯೆಂದು ನಿಮಗೆ ಅನಿಸುವುದಾದರೆ, ಅದರಲ್ಲಿ ಆಶ್ಚರ್ಯವೇನೂ ಇಲ್ಲ. ಆದರೆ ನಾವು ಈ ಹಂತಕ್ಕೇ ನಿಲ್ಲಿಸುವ ಅಗತ್ಯವಿಲ್ಲ. ನಮ್ಮ ಭವಿಷ್ಯತ್ತಿನ ಕುರಿತು ನಾವು ಇನ್ನೂ ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲಿಕ್ಕಿದೆ.

4, 5. ಈಗಾಗಲೇ ಪರಿಗಣಿಸಲ್ಪಟ್ಟಿರುವ ಯಾವ ಬೈಬಲ್‌ ಪ್ರವಾದನೆಗಳು, ಮುಂದೆ ನಡೆಯಲಿರುವ ಸಂಗತಿಗಳ ಕುರಿತಾದ ನಮ್ಮ ದೃಢಭರವಸೆಗೆ ಇನ್ನಷ್ಟು ಪ್ರೋತ್ಸಾಹವನ್ನು ನೀಡಬಲ್ಲವು?

4 ನೂತನಾಕಾಶಮಂಡಲ ಮತ್ತು ನೂತನಭೂಮಂಡಲದ ಕುರಿತಾದ ಬೈಬಲ್‌ ವಾಗ್ದಾನಗಳ ವಿಷಯದಲ್ಲಿ ಹಿಂದಿನ ಲೇಖನವು ಏನನ್ನು ದೃಢಪಡಿಸಿತು ಎಂಬುದರ ಕುರಿತು ಆಲೋಚಿಸಿರಿ. ಇಂತಹ ಒಂದು ಹೊಸ ವ್ಯವಸ್ಥೆಯನ್ನು ಯೆಶಾಯನು ಮುಂತಿಳಿಸಿದನು, ಮತ್ತು ಯೆಹೂದ್ಯರು ಸ್ವದೇಶಕ್ಕೆ ಹಿಂದಿರುಗಿ, ಸತ್ಯಾರಾಧನೆಯನ್ನು ಪುನಸ್ಸ್ಥಾಪಿಸಿದಾಗ, ಅವನ ಪ್ರವಾದನೆಯು ನೆರವೇರಿಕೆಯನ್ನು ಕಂಡಿತು. (ಎಜ್ರ 1:1-3; 2:1, 2; 3:12, 13) ಆದರೂ, ಯೆಶಾಯನ ಪ್ರವಾದನೆಯು ಇಷ್ಟನ್ನೇ ಸೂಚಿಸುತ್ತಿತ್ತೋ? ಖಂಡಿತವಾಗಿಯೂ ಇಲ್ಲ! ಅವನು ಮುಂತಿಳಿಸಿದ ಸಂಗತಿಗಳು, ದೂರದ ಭವಿಷ್ಯತ್ತಿನಲ್ಲಿ ಹೆಚ್ಚು ಭವ್ಯವಾದ ರೀತಿಯಲ್ಲಿ ನೆರವೇರಲಿದ್ದವು. ನಾವು ಏಕೆ ಈ ತೀರ್ಮಾನಕ್ಕೆ ಬರುತ್ತೇವೆ? 2 ಪೇತ್ರ 3:13 ಮತ್ತು ಪ್ರಕಟನೆ 21:1-5ರಲ್ಲಿ ನಾವು ಓದುವ ವಿಷಯಗಳಿಂದಾಗಿಯೇ. ಆ ಉಲ್ಲೇಖಗಳು ನೂತನಾಕಾಶಮಂಡಲ ಮತ್ತು ನೂತನಭೂಮಂಡಲವನ್ನು ಸೂಚಿಸುತ್ತಿದ್ದು, ಭೌಗೋಲಿಕ ಪ್ರಮಾಣದಲ್ಲಿ ಕ್ರೈಸ್ತರಿಗೆ ಪ್ರಯೋಜನವನ್ನು ಉಂಟುಮಾಡುವವು.

5 ಈ ಮುಂಚೆಯೇ ತಿಳಿಸಲ್ಪಟ್ಟಂತೆ, ಬೈಬಲು ‘ನೂತನಾಕಾಶಮಂಡಲ ಮತ್ತು ನೂತನಭೂಮಂಡಲ’ ಎಂಬ ವಾಕ್ಸರಣಿಯನ್ನು ನಾಲ್ಕು ಬಾರಿ ಉಪಯೋಗಿಸುತ್ತದೆ. ಇವುಗಳಲ್ಲಿ ಮೂರನ್ನು ನಾವು ಈಗಾಗಲೇ ಪರಿಗಣಿಸಿದ್ದೇವೆ ಮತ್ತು ಉತ್ತೇಜನದಾಯಕ ತೀರ್ಮಾನಗಳಿಗೆ ಬಂದಿದ್ದೇವೆ. ದೇವರು ದುಷ್ಟತನವನ್ನು ಮತ್ತು ಕಷ್ಟಾನುಭವದ ಇತರ ಕಾರಣಗಳನ್ನು ಸಂಪೂರ್ಣವಾಗಿ ತೆಗೆದುಹಾಕಿ, ತಾನು ವಾಗ್ದಾನಮಾಡಿರುವ ಹೊಸ ವ್ಯವಸ್ಥೆಯಲ್ಲಿ ಮಾನವಕುಲವನ್ನು ಮತ್ತಷ್ಟು ಆಶೀರ್ವದಿಸುವನೆಂದು ಬೈಬಲು ಸ್ಪಷ್ಟವಾಗಿ ಮುಂತಿಳಿಸುತ್ತದೆ.

6. ‘ನೂತನಾಕಾಶಮಂಡಲ ಮತ್ತು ನೂತನಭೂಮಂಡಲದ’ ಕುರಿತು ಉಲ್ಲೇಖಿಸುವ ನಾಲ್ಕನೆಯ ಪ್ರವಾದನೆಯು ಏನನ್ನು ಮುಂತಿಳಿಸಿತು?

6 ‘ನೂತನಾಕಾಶಮಂಡಲ ಮತ್ತು ನೂತನಭೂಮಂಡಲ’ ಎಂಬ ಅಭಿವ್ಯಕ್ತಿಯ ಉಳಿದ ಉಲ್ಲೇಖವನ್ನು ನಾವು ಈಗ ಪರೀಕ್ಷಿಸೋಣ. ಇದು ಯೆಶಾಯ 66:22-24ರಲ್ಲಿದೆ: “ನಾನು ಸೃಷ್ಟಿಸುವ ನೂತನಾಕಾಶಮಂಡಲವೂ ನೂತನಭೂಮಂಡಲವೂ ನನ್ನ ಮುಂದೆ ಸ್ಥಿರವಾಗಿ ನಿಲ್ಲುವ ಪ್ರಕಾರ ನಿಮ್ಮ ಸಂತತಿಯೂ ನಿಮ್ಮ ಹೆಸರೂ ಸ್ಥಿರವಾಗಿ ನಿಲ್ಲುವವು. ಪ್ರತಿಯೊಂದು ಅಮಾವಾಸ್ಯೆಯಲ್ಲಿಯೂ ಒಂದೊಂದು ಸಬ್ಬತ್‌ ದಿನದಲ್ಲಿಯೂ ಸಕಲ ನರಜನ್ಮದವರೂ ನನ್ನ ಸನ್ನಿಧಿಯಲ್ಲಿ ಎರಗುವದಕ್ಕೆ ಬರುವರು; ಇದು ಯೆಹೋವನ ನುಡಿ. ಅವರು ಆಚೆ ಹೋಗಿ ನನಗೆ ದ್ರೋಹಮಾಡಿದವರ ಹೆಣಗಳನ್ನು ನೋಡುವರು; ಅವುಗಳನ್ನು ಕಡಿಯುವ ಹುಳವು ಸಾಯುವದಿಲ್ಲ; ಸುಡುವ ಬೆಂಕಿಯು ಆರುವದಿಲ್ಲ; ಅವು ಲೋಕದವರಿಗೆಲ್ಲಾ ಅಸಹ್ಯವಾಗಿರುವವು.”

7. ಯೆಶಾಯ 66:22-24ರಲ್ಲಿರುವ ಪ್ರವಾದನೆಯು ಬರಲಿರುವ ದಿನಗಳಲ್ಲಿ ನೆರವೇರಲಿಕ್ಕಿದೆಯೆಂಬ ತೀರ್ಮಾನಕ್ಕೆ ನಾವು ಏಕೆ ಬರಬೇಕು?

7 ತಮ್ಮ ದೇಶದಲ್ಲಿ ಪುನಃ ನೆಲೆಸಿದ ಯೆಹೂದ್ಯರಿಗೆ ಈ ಪ್ರವಾದನೆ ಅನ್ವಯಿಸಿತಾದರೂ, ಇದಕ್ಕೆ ಇನ್ನೊಂದು ನೆರವೇರಿಕೆಯಿರುವುದು. ಅದು, ಪೇತ್ರನ ಎರಡನೆಯ ಪತ್ರ ಹಾಗೂ ಪ್ರಕಟನೆ ಪುಸ್ತಕವು ಬರೆಯಲ್ಪಟ್ಟ ಅನೇಕ ವರ್ಷಗಳ ನಂತರ ನೆರವೇರಲಿಕ್ಕಿತ್ತು. ಏಕೆಂದರೆ ಅವು ಭವಿಷ್ಯತ್ತಿನ ‘ನೂತನಾಕಾಶಮಂಡಲ ಮತ್ತು ಭೂಮಂಡಲ’ಕ್ಕೆ ಕೈತೋರಿಸಿದವು. ಹೊಸ ವ್ಯವಸ್ಥೆಯಲ್ಲಿ ಆ ಪ್ರವಾದನೆಯ ಭವ್ಯ ಹಾಗೂ ಸಂಪೂರ್ಣ ನೆರವೇರಿಕೆಗಾಗಿ ನಾವು ಎದುರುನೋಡಸಾಧ್ಯವಿದೆ. ನಾವು ಆನಂದಿಸಲಿಕ್ಕಾಗಿ ಎದುರುನೋಡಸಾಧ್ಯವಿರುವ ಕೆಲವು ಪರಿಸ್ಥಿತಿಗಳನ್ನು ಪರಿಗಣಿಸಿರಿ.

8, 9. (ಎ) ಯಾವ ಅರ್ಥದಲ್ಲಿ ದೇವಜನರು “ಸ್ಥಿರವಾಗಿ ನಿಲ್ಲು”ವರು? (ಬಿ) ಯೆಹೋವನ ಸೇವಕರು “ಪ್ರತಿಯೊಂದು ಅಮಾವಾಸ್ಯೆಯಲ್ಲಿಯೂ ಒಂದೊಂದು ಸಬ್ಬತ್‌ ದಿನದಲ್ಲಿಯೂ” ಆರಾಧಿಸುವರು ಎಂಬ ಪ್ರವಾದನೆಯ ಅರ್ಥವೇನು?

8 ಇನ್ನುಮುಂದೆ ಮರಣವು ಇರುವುದಿಲ್ಲ ಎಂದು ಪ್ರಕಟನೆ 21:4 ಸೂಚಿಸಿತು. ಯೆಶಾಯ 66ನೆಯ ಅಧ್ಯಾಯದಲ್ಲಿರುವ ಉಲ್ಲೇಖವು ಅದರೊಂದಿಗೆ ಸಮ್ಮತಿಸುತ್ತದೆ. ನೂತನಾಕಾಶಮಂಡಲ ಮತ್ತು ನೂತನಭೂಮಂಡಲವು ತಾತ್ಕಾಲಿಕವಾಗಿರುವುದಿಲ್ಲ, ಅಂದರೆ ಸೀಮಿತ ಕಾಲಾವಧಿಯುಳ್ಳದ್ದಾಗಿರುವುದಿಲ್ಲ ಎಂಬುದು ಯೆಹೋವನಿಗೆ ತಿಳಿದಿದೆ ಎಂಬುದನ್ನು ನಾವು 22ನೆಯ ವಚನದಿಂದ ಅರ್ಥಮಾಡಿಕೊಳ್ಳಸಾಧ್ಯವಿದೆ. ಅಷ್ಟುಮಾತ್ರವಲ್ಲ, ಆತನ ಜನರು ತಾಳಿಕೊಳ್ಳುವರು; ಆತನ ಮುಂದೆ ಅವರು “ಸ್ಥಿರವಾಗಿ ನಿಲ್ಲು”ವರು. ದೇವರು ತಾನಾದುಕೊಂಡ ಜನರಿಗೆ ಈಗಾಗಲೇ ಮಾಡಿರುವ ವಿಷಯಗಳು, ನಾವು ಆತನ ಮೇಲೆ ದೃಢಭರವಸೆಯಿಡಲು ಕಾರಣವನ್ನು ಕೊಡುತ್ತವೆ. ನಿಜ ಕ್ರೈಸ್ತರು ಕ್ರೂರವಾದ ಹಿಂಸೆಯನ್ನು ಅನುಭವಿಸಿದ್ದಾರೆ, ಹಾಗೂ ಅವರನ್ನು ಸಂಪೂರ್ಣವಾಗಿ ನಿರ್ಮೂಲಮಾಡುವುದಕ್ಕಾಗಿ ಮಾಡಲ್ಪಡುವ ಮತಾಂಧರರ ಪ್ರಯತ್ನಗಳನ್ನೂ ಎದುರಿಸಿದ್ದಾರೆ. (ಯೋಹಾನ 16:2; ಅ. ಕೃತ್ಯಗಳು 8:1) ಆದರೂ, ರೋಮನ್‌ ಚಕ್ರವರ್ತಿಯಾದ ನೀರೊ ಮತ್ತು ಅಡಾಲ್ಫ್‌ ಹಿಟ್ಲರ್‌ಗಳಂತಹ ದೇವಜನರ ಶಕ್ತಿಶಾಲಿ ವೈರಿಗಳು ಸಹ, ದೇವರ ನಾಮವನ್ನು ಧರಿಸಿಕೊಂಡಿರುವ ಆತನ ನಿಷ್ಠಾವಂತ ಜನರನ್ನು ಸಂಪೂರ್ಣವಾಗಿ ನಿರ್ಮೂಲಮಾಡಲು ಶಕ್ತರಾಗಲಿಲ್ಲ. ಯೆಹೋವನು ತಾನಾದುಕೊಂಡ ಜನರ ಸಭೆಯನ್ನು ಈ ದಿನದ ವರೆಗೂ ಕಾಪಾಡಿಕೊಂಡು ಬಂದಿದ್ದಾನೆ, ಮತ್ತು ಅದನ್ನು ಎಂದೆಂದಿಗೂ ಸ್ಥಿರವಾಗಿ ನಿಲ್ಲುವಂತೆ ಮಾಡುವನು ಎಂಬ ಭರವಸೆ ನಮಗಿದೆ.

9 ತದ್ರೀತಿಯಲ್ಲಿ, ನೂತನಭೂಮಂಡಲದ ಭಾಗದೋಪಾದಿ ದೇವರಿಗೆ ನಂಬಿಗಸ್ತರಾಗಿರುವವರು, ಅಂದರೆ ಹೊಸ ಲೋಕದಲ್ಲಿರುವ ಸತ್ಯಾರಾಧಕರ ಸಮಾಜಕ್ಕೆ ಸೇರಿದವರು, ವ್ಯಕ್ತಿಗತವಾಗಿ ಸ್ಥಿರವಾಗಿ ನಿಲ್ಲುವರು. ಏಕೆಂದರೆ ಸರ್ವಸ್ವವನ್ನೂ ಸೃಷ್ಟಿಸಿದ ಸೃಷ್ಟಿಕರ್ತನಿಗೆ ಅವರು ಶುದ್ಧವಾದ ಆರಾಧನೆಯನ್ನು ಸಲ್ಲಿಸುತ್ತಿರುವರು. ಆ ಆರಾಧನೆಯು ಯಾವಾಗಲೋ ಒಮ್ಮೆ ಅಥವಾ ಗೊತ್ತುಗುರಿಯಿಲ್ಲದೆ ನಡೆಯುವಂತಹದ್ದಲ್ಲ. ಮೋಶೆಯ ಮೂಲಕ ಇಸ್ರಾಯೇಲ್ಯರಿಗೆ ಕೊಡಲ್ಪಟ್ಟಿದ್ದ ದೇವರ ಧರ್ಮಶಾಸ್ತ್ರವು, ಪ್ರತಿ ತಿಂಗಳು ಅಮಾವಾಸ್ಯೆಯಂದು ಮತ್ತು ಪ್ರತಿವಾರ ಸಬ್ಬತ್‌ ದಿನದಂದು ನಿರ್ದಿಷ್ಟ ರೀತಿಯ ಆರಾಧನಾ ವಿಧಾನಗಳನ್ನು ಅಗತ್ಯಪಡಿಸಿತು. (ಯಾಜಕಕಾಂಡ 24:5-9; ಅರಣ್ಯಕಾಂಡ 10:10; 28:9, 10; 2 ಕೊರಿಂಥ 2:4) ಆದುದರಿಂದ, ಯೆಶಾಯ 66:23ನೆಯ ವಚನವು, ಪ್ರತಿ ವಾರವೂ ಪ್ರತಿ ತಿಂಗಳೂ ನಡೆಯುವ ದೇವರ ಕ್ರಮವಾದ ಹಾಗೂ ನಿರಂತರವಾದ ಆರಾಧನೆಯನ್ನು ಸೂಚಿಸುತ್ತದೆ. ಆಗ ನಾಸ್ತಿಕತೆ ಮತ್ತು ಧಾರ್ಮಿಕ ಕಪಟತನವು ಇರಲಾರದು. “ಸಕಲ ನರಜನ್ಮದವರೂ” ಯೆಹೋವನ “ಸನ್ನಿಧಿಯಲ್ಲಿ ಎರಗುವದಕ್ಕೆ ಬರುವರು.”

10. ಹೊಸ ಲೋಕವು ದುಷ್ಟರಿಂದ ಶಾಶ್ವತವಾಗಿ ಹಾಳಾಗುವುದಿಲ್ಲ ಎಂದು ನಾವು ಏಕೆ ದೃಢಭರವಸೆಯಿಂದಿರಸಾಧ್ಯವಿದೆ?

10 ಹೊಸ ಲೋಕದ ಶಾಂತಿ ಹಾಗೂ ನೀತಿಯು ಎಂದಿಗೂ ಅಪಾಯಕ್ಕೊಳಗಾಗದು ಎಂದು ಯೆಶಾಯ 66:24 ನಮಗೆ ಆಶ್ವಾಸನೆ ನೀಡುತ್ತದೆ. ದುಷ್ಟರು ಅದನ್ನು ಕೆಡಿಸಲಾರರು. “ಭಕ್ತಿಹೀನರ ಶಿಕ್ಷಾವಿಧಿಯೂ ನಾಶವೂ ಉಂಟಾಗುವ ದಿನ”ವು ನಮ್ಮ ಮುಂದೆ ಇದೆಯೆಂದು 2 ಪೇತ್ರ 3:7 ಹೇಳುತ್ತದೆ ಎಂಬುದನ್ನು ಜ್ಞಾಪಿಸಿಕೊಳ್ಳಿರಿ. ಭಕ್ತಿಹೀನರಾದ ಜನರು ತಮ್ಮ ಅಂತ್ಯವನ್ನು ಕಾಣುವರು. ಮಾನವ ಯುದ್ಧಗಳಲ್ಲಿ ಅನೇಕವೇಳೆ ಏನು ಸಂಭವಿಸುತ್ತದೆಂದರೆ, ಸೈನಿಕರಿಗಿಂತಲೂ ಸಾಮಾನ್ಯ ನಾಗರಿಕರಿಗೇ ಹೆಚ್ಚು ಹಾನಿಯುಂಟಾಗಿರುತ್ತದೆ, ಆದರೆ ದೇವರ ಯುದ್ಧದಲ್ಲಿ ನಿರ್ದೋಷಿಗಳಿಗೆ ಯಾವ ಹಾನಿಯೂ ತಟ್ಟುವುದಿಲ್ಲ. ತನ್ನ ದಿನವು ಭಕ್ತಿಹೀನರ ನಾಶನದ ದಿನವಾಗಿರುವುದು ಎಂದು ಮಹಾನ್‌ ನ್ಯಾಯಾಧೀಶನು ನಮಗೆ ಖಾತ್ರಿನೀಡುತ್ತಾನೆ.

11. ದೇವರ ಹಾಗೂ ಆತನ ಆರಾಧನೆಯ ವಿರುದ್ಧವಾಗಿ ಏಳುವ ಯಾವುದೇ ವ್ಯಕ್ತಿಯ ಭವಿಷ್ಯತ್ತು ಏನಾಗಿರುವುದೆಂದು ಯೆಶಾಯನು ತೋರಿಸುತ್ತಾನೆ?

11 ದೇವರ ಪ್ರವಾದನ ವಾಕ್ಯವು ಸತ್ಯವಾಗಿದೆ ಎಂಬುದನ್ನು ಪಾರಾಗಿ ಉಳಿಯುವ ನೀತಿವಂತರು ಗ್ರಹಿಸುವರು. ಯೆಹೋವನಿಗೆ ‘ದ್ರೋಹಮಾಡಿದವರ ಹೆಣಗಳು’ ಆತನ ನ್ಯಾಯತೀರ್ಪಿನ ರುಜುವಾತಾಗಿರುವವು ಎಂದು 24ನೆಯ ವಚನವು ಮುಂತಿಳಿಸುತ್ತದೆ. ಯೆಶಾಯನು ಉಪಯೋಗಿಸಿದ ವರ್ಣನಾತ್ಮಕ ಭಾಷೆಯು ಆಘಾತಕರವಾಗಿ ತೋರಬಹುದು. ಆದರೂ, ಐತಿಹಾಸಿಕ ನಿಜತ್ವದೊಂದಿಗೆ ಅದು ಹೊಂದಿಕೆಯಲ್ಲಿದೆ. ಪುರಾತನ ಯೆರೂಸಲೇಮಿನ ಗೋಡೆಗಳ ಹೊರಗೆ, ಕಸಕಡ್ಡಿಯನ್ನು ಮತ್ತು ಕೆಲವೊಮ್ಮೆ ಸಭ್ಯವಾದ ಶವಸಂಸ್ಕಾರಕ್ಕೆ ಅಯೋಗ್ಯರೆಂದು ತೀರ್ಮಾನಿಸಲ್ಪಡುತ್ತಿದ್ದ ದುಷ್ಟ ಅಪರಾಧಿಗಳ ಶವಗಳನ್ನು ಹಾಕಲು ತಿಪ್ಪೆ ಗುಂಡಿಗಳಿದ್ದವು. * ಅಲ್ಲಿದ್ದ ಕ್ರಿಮಿಗಳು ಮತ್ತು ಸುಟ್ಟುಬೂದಿಮಾಡಿಬಿಡುವಂತಹ ಬೆಂಕಿಯು, ಕಸಕಡ್ಡಿಯನ್ನು ಮಾತ್ರವಲ್ಲ ಆ ಶವಗಳನ್ನು ಸಹ ಸಂಪೂರ್ಣವಾಗಿ ಸುಟ್ಟು ಬೂದಿಮಾಡಿಬಿಡುತ್ತಿತ್ತು. ಸುವ್ಯಕ್ತವಾಗಿಯೇ, ಯೆಶಾಯನ ವರ್ಣನೆಯು ದ್ರೋಹಮಾಡುವವರ ಮೇಲೆ ಯೆಹೋವನು ಬರಮಾಡುವ ನ್ಯಾಯತೀರ್ಪಿನ ಅಂತ್ಯವನ್ನು ದೃಷ್ಟಾಂತಿಸುತ್ತದೆ.

ಆತನು ವಾಗ್ದಾನಿಸಿರುವ ವಿಷಯಗಳು

12. ಹೊಸ ಲೋಕದಲ್ಲಿನ ಜೀವನದ ಕುರಿತು ಯೆಶಾಯನು ಯಾವ ಹೆಚ್ಚಿನ ಸೂಚನೆಗಳನ್ನು ಕೊಡುತ್ತಾನೆ?

12 ಬರಲಿರುವ ಹೊಸ ವ್ಯವಸ್ಥೆಯಲ್ಲಿ ಇನ್ನು ಮುಂದೆ ಅಸ್ತಿತ್ವದಲ್ಲಿ ಇರದಂತಹ ಕೆಲವು ಸಂಗತಿಗಳನ್ನು ಪ್ರಕಟನೆ 21:4 ನಮಗೆ ತಿಳಿಸುತ್ತದೆ. ಹಾಗಾದರೆ, ಯಾವ ಸಂಗತಿಗಳು ಅಸ್ತಿತ್ವದಲ್ಲಿ ಇರುವವು? ಆಗ ಜೀವನವು ಹೇಗಿರುವುದು? ನಾವು ಯಾವುದೇ ರೀತಿಯ ವಿಶ್ವಾಸಾರ್ಹ ಸುಳಿವುಗಳನ್ನು ಪಡೆದುಕೊಳ್ಳಸಾಧ್ಯವಿದೆಯೊ? ಹೌದು. ನೂತನಾಕಾಶಮಂಡಲ ಮತ್ತು ನೂತನಭೂಮಂಡಲವನ್ನು ಯೆಹೋವನು ಅಂತಿಮ ಅರ್ಥದಲ್ಲಿ ಸೃಷ್ಟಿಸುವಾಗ, ಅಲ್ಲಿ ಜೀವಿಸಲು ನಮಗೆ ಆತನ ಸಮ್ಮತಿಯಿರುವುದಾದರೆ, ನಾವು ಅನುಭವಿಸಲಿರುವ ಪರಿಸ್ಥಿತಿಗಳನ್ನು ಯೆಶಾಯ 65ನೆಯ ಅಧ್ಯಾಯವು ಪ್ರವಾದನಾತ್ಮಕವಾಗಿ ವರ್ಣಿಸುತ್ತದೆ. ನೂತನಾಕಾಶಮಂಡಲದಲ್ಲಿ ಶಾಶ್ವತ ಸ್ಥಾನದ ಆಶೀರ್ವಾದವನ್ನು ಪಡೆದುಕೊಂಡವರು, ವೃದ್ಧರಾಗುವುದೂ ಇಲ್ಲ ಅನಿವಾರ್ಯವಾಗಿ ಸಾಯುವುದೂ ಇಲ್ಲ. ಯೆಶಾಯ 65:20 ನಮಗೆ ಹೀಗೆ ಆಶ್ವಾಸನೆ ನೀಡುತ್ತದೆ: “ಕೆಲವು ದಿವಸ ಮಾತ್ರ ಬದುಕತಕ್ಕ ಕೂಸಾಗಲಿ ವಯಸ್ಸಾಗದೆ ಮುದುಕನಾದವನಾಗಲಿ ಅಲ್ಲಿ ಇರುವದಿಲ್ಲ; ಯುವಕನು ನೂರು ವರುಷದೊಳಗೆ ಸಾಯನು, ಪಾಪಿಷ್ಠನಿಗೂ ನೂರು ವರುಷದೊಳಗೆ ಶಾಪತಗಲದು.”

13. ದೇವಜನರು ಭದ್ರತೆಯನ್ನು ಅನುಭವಿಸುವರು ಎಂಬ ವಿಷಯದಲ್ಲಿ ಯೆಶಾಯ 65:20 ನಮಗೆ ಹೇಗೆ ಆಶ್ವಾಸನೆ ನೀಡುತ್ತದೆ?

13 ಈ ಪ್ರವಾದನೆಯು ಯೆಶಾಯನ ದಿನದಲ್ಲಿದ್ದ ಜನರ ವಿಷಯದಲ್ಲಿ ಪ್ರಥಮವಾಗಿ ನೆರವೇರಿದಾಗ, ಆ ದೇಶದ ಶಿಶುಗಳು ಸುರಕ್ಷಿತವಾಗಿದ್ದವು ಎಂಬುದನ್ನು ಇದು ಅರ್ಥೈಸಿತು. ಬಾಬೆಲಿನವರು ಒಂದು ಸಮಯದಲ್ಲಿ ಮಾಡುತ್ತಿದ್ದಂತೆ, ಅವರ ಶಿಶುಗಳನ್ನು ಕೊಂದುಹಾಕಲು ಇಲ್ಲವೆ ಎತ್ತಿಕೊಂಡುಹೋಗಲು ಅಥವಾ ಯುವ ಪ್ರಾಯದ ಪುರುಷರನ್ನು ಸಂಹರಿಸಲು ಈಗ ಯಾವ ವೈರಿಗಳೂ ಅವರನ್ನು ಆಕ್ರಮಿಸಲಿಲ್ಲ. (2 ಪೂರ್ವಕಾಲವೃತ್ತಾಂತ 36:17, 20) ಬರಲಿರುವ ಹೊಸ ಲೋಕದಲ್ಲಿ ಜನರು ಸುರಕ್ಷಿತರೂ, ಭದ್ರತೆಯುಳ್ಳವರೂ ಆಗಿದ್ದು, ತಮ್ಮ ಜೀವಿತದಲ್ಲಿ ಆನಂದವನ್ನು ಕಂಡುಕೊಳ್ಳುವರು. ಒಬ್ಬ ವ್ಯಕ್ತಿಯು ದೇವರ ವಿರುದ್ಧ ದಂಗೆಯೇಳುವ ಆಯ್ಕೆಮಾಡುವಲ್ಲಿ, ಅಂಥವನಿಗೆ ಇನ್ನು ಮುಂದೆ ಜೀವಿಸುವ ಅನುಮತಿಯಿರಲಾರದು. ದೇವರು ಅವನನ್ನು ತೆಗೆದುಹಾಕುವನು. ದಂಗೆಕೋರನಾದ ಆ ಪಾಪಿಯು ನೂರು ವರ್ಷ ಪ್ರಾಯದವನಾಗಿದ್ದರೆ ಆಗೇನು? ನಿತ್ಯಜೀವವನ್ನು ಹೊಂದಿರುವುದಕ್ಕೆ ಹೋಲಿಸುವಾಗ ಅವನು “ಯುವಕ”ನಾಗಿಯೇ ಸಾವನ್ನಪ್ಪುವನು.—1 ತಿಮೊಥೆಯ 1:19, 20; 2 ತಿಮೊಥೆಯ 2:16-19.

14, 15. ಯೆಶಾಯ 65:21, 22ರ ಮೇಲಾಧಾರಿಸಿ, ಯಾವ ಪ್ರತಿಫಲದಾಯಕ ಚಟುವಟಿಕೆಗಳನ್ನು ನೀವು ಮುನ್ನೋಡಸಾಧ್ಯವಿದೆ?

14 ಉದ್ದೇಶಪೂರ್ವಕವಾಗಿ ಪಾಪಮಾಡುವ ಒಬ್ಬ ವ್ಯಕ್ತಿಯನ್ನು ಹೇಗೆ ತೆಗೆದುಹಾಕಬಹುದೆಂಬ ವಿಷಯಕ್ಕೆ ಹೆಚ್ಚು ಗಮನಕೊಡುವ ಬದಲು, ಹೊಸ ಲೋಕದಲ್ಲಿ ಎಲ್ಲೆಡೆಯೂ ನೆಲಸುವ ಜೀವನ ಪರಿಸ್ಥಿತಿಗಳನ್ನು ಯೆಶಾಯನು ವರ್ಣಿಸುತ್ತಾನೆ. ಈ ದೃಶ್ಯದಲ್ಲಿ ನಿಮ್ಮನ್ನು ಕಲ್ಪಿಸಿಕೊಳ್ಳಲು ಪ್ರಯತ್ನಿಸಿರಿ. ನಿಮ್ಮ ಮನಪಟಲದಲ್ಲಿ ಪ್ರಥಮವಾಗಿ ಮೂಡುವ ಚಿತ್ರಗಳು ನಿಮಗೆ ವೈಯಕ್ತಿಕವಾಗಿ ಸಂಬಂಧಿಸಿದ ವಿಷಯಗಳಾಗಿರಬಹುದು. ಯೆಶಾಯನು 21 ಮತ್ತು 22ನೆಯ ವಚನಗಳಲ್ಲಿ ಇದರ ಕುರಿತೇ ಪ್ರಸ್ತಾಪಿಸುತ್ತಾನೆ: “ಅಲ್ಲಿನ ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು. ಒಬ್ಬನು ಕಟ್ಟಿದ ಮನೆಯಲ್ಲಿ ಬೇರೊಬ್ಬನು ವಾಸಿಸನು; ಒಬ್ಬನು ಮಾಡಿದ ತೋಟದ ಫಲವು ಇನ್ನೊಬ್ಬನಿಗೆ ವಶವಾಗದು; ನನ್ನ ಜನರ ಆಯುಸ್ಸು ವೃಕ್ಷದ ಆಯುಸ್ಸಿನಂತಿರುವದು; ನನ್ನ ಆಪ್ತರು ತಮ್ಮ ಕೈಕೆಲಸದ ಆದಾಯವನ್ನು ಪೂರಾ ಅನುಭವಿಸುವರು.”

15 ಇಷ್ಟರ ತನಕ ನಿಮಗೆ ಕಟ್ಟಡ ಕಟ್ಟುವ ಅನುಭವವಿಲ್ಲದಿರುವಲ್ಲಿ ಅಥವಾ ನೀವು ತೋಟದ ಕೆಲಸವನ್ನು ಮಾಡಿರದಿದ್ದಲ್ಲಿ, ಇದರ ಬಗ್ಗೆ ನಿಮಗೆ ಶಿಕ್ಷಣವು ಕೊಡಲ್ಪಡುವುದು ಎಂದು ಯೆಶಾಯನ ಪ್ರವಾದನೆಯು ಸೂಚಿಸುತ್ತದೆ. ಆದರೆ ಸಮರ್ಥ ಶಿಕ್ಷಕರಿಂದ ಮತ್ತು ಸಂತೋಷದಿಂದ ಸಹಾಯ ಹಸ್ತವನ್ನು ನೀಡಬಹುದಾದ ನೆರೆಯವರ ಸಹಾಯದಿಂದ ಇದನ್ನು ಕಲಿತುಕೊಳ್ಳಲು ನೀವು ಇಷ್ಟಪಡಲಿಕ್ಕಿಲ್ಲವೊ? ನೀವು ಉಷ್ಣವಲಯದ ತಂಗಾಳಿಯನ್ನು ಅನುಭವಿಸುವಂತೆ ನಿಮ್ಮ ಮನೆಗೆ ಗಾಜುಗಳಿಲ್ಲದ ದೊಡ್ಡ ದೊಡ್ಡ ತೆರೆಗಳಿರುವ ಕಿಟಕಿಗಳು ಇರುವವೊ ಅಥವಾ ಬದಲಾಗುವ ಋತುಗಳನ್ನು ನೀವು ನೋಡಸಾಧ್ಯವಾಗುವಂತೆ ಮುಚ್ಚಿದ ಗಾಜಿನ ಕಿಟಕಿಗಳು ಇರುವವೊ ಎಂಬುದನ್ನು ಯೆಶಾಯನು ಹೇಳುವುದಿಲ್ಲ. ಮಳೆಯ ನೀರು ಹರಿದುಹೋಗುವಂತೆ ಮತ್ತು ಹಿಮವು ಕೆಳಗೆ ಜಾರಿಹೋಗುವಂತೆ ನಿಮ್ಮ ಮನೆಗೆ ಇಳಿಜಾರಾದ ಛಾವಣಿಯನ್ನು ಹಾಕಿಸುವಿರೊ? ಅಥವಾ ಸ್ಥಳಿಕ ಹವಾಮಾನವು ಅಗತ್ಯಪಡಿಸುವುದಾದರೆ, ನೀವು ನಿಮ್ಮ ಕುಟುಂಬದೊಂದಿಗೆ ಸೇರಿ ಸಂತೋಷಕರ ಭೋಜನಗಳಲ್ಲಿ ಮತ್ತು ಸಂಭಾಷಣೆಯಲ್ಲಿ ಪಾಲ್ಗೊಳ್ಳಸಾಧ್ಯವಾಗುವಂತೆ, ಮಧ್ಯಪೂರ್ವದಲ್ಲಿರುವ ಮನೆಗಳಲ್ಲಿರುವಂತಹ ಒಂದು ಚಪ್ಪಟೆಯಾದ ಛಾವಣಿಯು ನಿಮ್ಮ ಮನೆಗೂ ಇರುವುದೋ?—ಧರ್ಮೋಪದೇಶಕಾಂಡ 22:8; ನೆಹೆಮೀಯ 8:16.

16. ಹೊಸ ಲೋಕವು ಶಾಶ್ವತವಾಗಿ ಸಂತೃಪ್ತಿದಾಯಕವಾಗಿರುವುದೆಂದು ನಾವೇಕೆ ನಿರೀಕ್ಷಿಸಸಾಧ್ಯವಿದೆ?

16 ಅಂತಹ ವಿವರಗಳನ್ನು ತಿಳಿದುಕೊಳ್ಳುವುದಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾದ ಸಂಗತಿಯು, ನಿಮಗೆ ನಿಮ್ಮ ಸ್ವಂತ ಮನೆಯಿರುವುದು ಎಂಬುದೇ ಆಗಿದೆ. ಅದು ನಿಮ್ಮದೇ ಆದ ಸ್ವಂತ ಮನೆಯಾಗಿರುವುದು. ನೀವು ಒಂದು ಮನೆಯನ್ನು ಕಟ್ಟಲು ಕಷ್ಟಪಟ್ಟು ದುಡಿದರೂ, ಮತ್ತೊಬ್ಬನು ಅದರ ಲಾಭವನ್ನು ಪಡೆದುಕೊಳ್ಳುವ ಇಂದಿನ ಪರಿಸ್ಥಿತಿಯಂತೆ ಆಗ ಇರಲಾರದು. ನೀವು ನೆಟ್ಟಿರುವ ತೋಟಗಳ ಫಲವನ್ನು ನೀವೇ ಅನುಭವಿಸುವಿರಿ ಎಂದು ಯೆಶಾಯ 65:21 ಹೇಳುತ್ತದೆ. ಸ್ಪಷ್ಟವಾಗಿಯೇ, ಅದು ಸಾಮಾನ್ಯವಾಗಿ ಅಸ್ತಿತ್ವದಲ್ಲಿರುವ ಪರಿಸ್ಥಿತಿಯನ್ನು ಸಾರಾಂಶಿಸುತ್ತದೆ. ನಿಮ್ಮ ಸ್ವಂತ ದುಡಿಮೆಯ ಫಲಗಳಿಂದ ನೀವು ಅತ್ಯಧಿಕ ಸಂತೃಪ್ತಿಯನ್ನು ಕಂಡುಕೊಳ್ಳುವಿರಿ. ನೀವು ಅದನ್ನು ದೀರ್ಘಕಾಲದ ವರೆಗೂ, ಅಂದರೆ ‘ವೃಕ್ಷದ ಆಯುಸ್ಸಿನಷ್ಟು’ ದೀರ್ಘಾವಧಿಯ ವರೆಗೂ ಮಾಡಲು ಶಕ್ತರಾಗುವಿರಿ. ‘ಎಲ್ಲವೂ ಹೊಸದು’ ಎಂಬ ವರ್ಣನೆಗೆ ಇದು ಖಂಡಿತವಾಗಿಯೂ ಸೂಕ್ತವಾದದ್ದಾಗಿದೆ!—ಕೀರ್ತನೆ 92:12-14.

17. ಹೆತ್ತವರು ಯಾವ ವಾಗ್ದಾನವನ್ನು ಹೆಚ್ಚು ಪ್ರೋತ್ಸಾಹದಾಯಕವಾದದ್ದಾಗಿ ಕಂಡುಕೊಳ್ಳುವರು?

17 ನೀವು ಒಬ್ಬ ಹೆತ್ತವರಾಗಿರುವಲ್ಲಿ, ಈ ಮಾತುಗಳು ನಿಮ್ಮ ಹೃದಯವನ್ನು ಸ್ಪರ್ಶಿಸುವವು: “ಅವರು ವ್ಯರ್ಥವಾಗಿ ದುಡಿಯರು, ಅವರಿಗೆ ಹುಟ್ಟುವ ಮಕ್ಕಳು ಘೋರವ್ಯಾಧಿಗೆ ಗುರಿಯಾಗರು. ಅವರು ಯೆಹೋವನ ಆಶೀರ್ವಾದವನ್ನು ಹೊಂದಿದವರ ಸಂತಾನವಷ್ಟೆ; ಅವರ ಸಂತತಿಯವರು ಅವರೊಂದಿಗೆ ಬಹುದಿನವಿರುವರು. ಆಗ ಅವರು ಬೇಡುವದರೊಳಗೆ ಸದುತ್ತರವನ್ನು ದಯಪಾಲಿಸುವೆನು; ಅವರು ಹೇಳುತ್ತಿರುವಾಗಲೇ ಕೇಳುವೆನು.” (ಯೆಶಾಯ 65:23, 24) ‘ಘೋರವ್ಯಾಧಿಗೆ ಗುರಿಯಾಗುವ ಮಕ್ಕಳನ್ನು ಹುಟ್ಟಿಸುವುದರ’ ವೇದನೆಯ ಅನುಭವ ನಿಮಗಿದೆಯೊ? ಹೆತ್ತವರ ಮತ್ತು ಇನ್ನಿತರರ ನೆಮ್ಮದಿಯನ್ನು ಹಾಳುಮಾಡುವಂತಹ ಮಕ್ಕಳ ಸಮಸ್ಯೆಗಳ ದೊಡ್ಡ ಪಟ್ಟಿಯನ್ನು ನಿಮ್ಮ ಮುಂದೆ ಸಾದರಪಡಿಸುವ ಅಗತ್ಯವಿಲ್ಲ. ಇದಕ್ಕೆ ಸಂಬಂಧಿಸಿ, ತಮ್ಮ ಸ್ವಂತ ವೃತ್ತಿಗಳು, ಚಟುವಟಿಕೆಗಳು, ಅಥವಾ ಸುಖಭೋಗಗಳಲ್ಲಿ ಸಂಪೂರ್ಣವಾಗಿ ತಲ್ಲೀನರಾಗಿದ್ದು, ತಮ್ಮ ಮಕ್ಕಳೊಂದಿಗೆ ಸಮಯವನ್ನೇ ಕಳೆಯಲಸಾಧ್ಯವಾದಷ್ಟು ಕಾರ್ಯಮಗ್ನರಾಗಿರುವ ಹೆತ್ತವರನ್ನು ನಾವೆಲ್ಲರೂ ಗಮನಿಸಿದ್ದೇವೆ. ಇದಕ್ಕೆ ವ್ಯತಿರಿಕ್ತವಾಗಿ, ನಮ್ಮ ಆವಶ್ಯಕತೆಗಳಿಗೆ ಕಿವಿಗೊಟ್ಟು, ಅವುಗಳಿಗೆ ಪ್ರತಿಕ್ರಿಯಿಸುವುದು ಮಾತ್ರವಲ್ಲ, ಅವುಗಳಿಗಾಗಿ ಎದುರುನೋಡುವೆನು ಎಂದು ಸಹ ಯೆಹೋವನು ನಮಗೆ ಆಶ್ವಾಸನೆ ನೀಡುತ್ತಾನೆ.

18. ಹೊಸ ಲೋಕದಲ್ಲಿ ಪ್ರಾಣಿಗಳೊಂದಿಗೆ ಆನಂದಿಸಲು ನೀವು ಏಕೆ ನಿರೀಕ್ಷಿಸಸಾಧ್ಯವಿದೆ?

18 ಹೊಸ ಲೋಕದಲ್ಲಿ ನೀವು ಏನೆಲ್ಲಾ ಅನುಭವಿಸಬಹುದು ಎಂಬುದರ ಕುರಿತು ನೀವು ಆಲೋಚಿಸುತ್ತಿರುವಾಗ, ದೇವರ ಪ್ರವಾದನ ವಾಕ್ಯವು ತಿಳಿಸುವ ದೃಶ್ಯವನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿರಿ: “ತೋಳವು ಕುರಿಯ ಸಂಗಡ ಮೇಯುವದು, ಸಿಂಹವು ಎತ್ತಿನಂತೆ ಹುಲ್ಲು ತಿನ್ನುವದು, ಹಾವಿಗೆ ದೂಳೇ ಆಹಾರವಾಗುವದು. ನನ್ನ ಪರಿಶುದ್ಧಪರ್ವತದಲ್ಲೆಲ್ಲಾ ಯಾರೂ ಕೇಡುಮಾಡುವದಿಲ್ಲ, ಯಾರೂ ಹಾಳುಮಾಡುವದಿಲ್ಲ ಎಂದು ಯೆಹೋವನು ಅನ್ನುತ್ತಾನೆ.” (ಯೆಶಾಯ 65:25) ಮಾನವ ಚಿತ್ರಕಾರರು ಈ ದೃಶ್ಯವನ್ನು ಚಿತ್ರಿಸಲು ಪ್ರಯತ್ನಿಸಿದ್ದಾರೆ. ಆದರೆ ಇದು ಕಲಾತ್ಮಕ ಸ್ವಾತಂತ್ರ್ಯದೊಂದಿಗೆ ಬಿಡಿಸಿರುವ ಕೇವಲ ಕಲ್ಪನಾತೀತ ವರ್ಣನೆಯಾಗಿರುವುದಿಲ್ಲ. ಬದಲಿಗೆ ಈ ದೃಶ್ಯವು ಒಂದು ನೈಜ ದೃಶ್ಯವಾಗಿರುವುದು. ಮಾನವರ ಮಧ್ಯೆ ಶಾಂತಿಯಿರುವುದು ಮತ್ತು ಅದೇ ರೀತಿಯ ಶಾಂತಿಯು ಪ್ರಾಣಿಗಳೊಂದಿಗೂ ಇರುವುದು. ಅನೇಕ ಜೀವಶಾಸ್ತ್ರಜ್ಞರು ಮತ್ತು ಪ್ರಾಣಿಪ್ರಿಯರು, ಕೆಲವೊಂದು ವಿಧದ ಪ್ರಾಣಿಗಳ ಕುರಿತು ಅಥವಾ ಕೇವಲ ಒಂದು ನಿರ್ದಿಷ್ಟ ಜಾತಿ ಇಲ್ಲವೆ ತಳಿಯ ಕುರಿತು ಕಲಿಯುವುದರಲ್ಲೇ ತಮ್ಮ ಜೀವಿತದ ಅತ್ಯುತ್ತಮ ವರ್ಷಗಳನ್ನೇ ವಿನಿಯೋಗಿಸುತ್ತಾರೆ. ಇದಕ್ಕೆ ವಿರುದ್ಧವಾಗಿ, ಪ್ರಾಣಿಗಳು ಮನುಷ್ಯರ ಭಯದಿಂದ ನಿಯಂತ್ರಿಸಲ್ಪಡದಂತಹ ಸಮಯದಲ್ಲಿ ನೀವು ಎಷ್ಟೆಲ್ಲ ವಿಷಯಗಳನ್ನು ಕಲಿತುಕೊಳ್ಳಸಾಧ್ಯವಿದೆ ಎಂಬುದರ ಬಗ್ಗೆ ಸ್ವಲ್ಪ ಯೋಚಿಸಿ ನೋಡಿ. ಆಗ ನೀವು ಕಾಡು ಇಲ್ಲವೆ ಅಡವಿಗಳಲ್ಲಿ ವಾಸಿಸುತ್ತಿರುವ ಪಕ್ಷಿಗಳು ಮತ್ತು ಚಿಕ್ಕಪುಟ್ಟ ಜೀವಿಗಳನ್ನು ಸಹ ಸಮೀಪಿಸಿ, ಅವುಗಳನ್ನು ಗಮನಿಸಿ, ಅವುಗಳಿಂದ ಪಾಠವನ್ನು ಕಲಿತುಕೊಳ್ಳಲು ಮತ್ತು ಅವುಗಳೊಂದಿಗೆ ಆನಂದಿಸಲು ಶಕ್ತರಾಗುವಿರಿ. (ಯೋಬ 12:7-9) ಮನುಷ್ಯನಿಂದ ಅಥವಾ ಪ್ರಾಣಿಯಿಂದ ಯಾವುದೇ ಅಪಾಯದ ಭಯವಿಲ್ಲದೆ, ಸುರಕ್ಷಿತವಾಗಿ ಇದನ್ನು ಮಾಡಲು ನೀವು ಶಕ್ತರಾಗುವಿರಿ. ಯೆಹೋವನು ಹೇಳುವುದು: “ನನ್ನ ಪರಿಶುದ್ಧಪರ್ವತದಲ್ಲೆಲ್ಲಾ ಯಾರೂ ಕೇಡುಮಾಡುವದಿಲ್ಲ, ಯಾರೂ ಹಾಳುಮಾಡುವದಿಲ್ಲ.” ಇಂದು ನಾವು ನೋಡುವ ಮತ್ತು ಅನುಭವಿಸುವ ವಿಷಯಗಳಿಗೆ ಹೋಲಿಸುವಾಗ, ಅದು ಎಂತಹ ಒಂದು ಬದಲಾವಣೆಯಾಗಿರುವುದು!

19, 20. ಇಂದಿನ ಅಧಿಕಾಂಶ ಜನರಿಗಿಂತಲೂ ದೇವಜನರು ಏಕೆ ತುಂಬ ಭಿನ್ನರಾಗಿದ್ದಾರೆ?

19 ಈ ಮುಂಚೆ ತಿಳಿಸಲ್ಪಟ್ಟಂತೆ, ಒಂದು ಹೊಸ ಸಹಸ್ರಮಾನಕ್ಕೆ ಸಂಬಂಧಿಸಿದ ವ್ಯಾಪಕವಾದ ಚಿಂತೆಗಳ ಎದುರಿನಲ್ಲೂ, ಮಾನವರು ಭವಿಷ್ಯತ್ತನ್ನು ನಿಷ್ಕೃಷ್ಟವಾಗಿ ಮುಂತಿಳಿಸಲು ಅಶಕ್ತರಾಗಿದ್ದಾರೆ. ಇದರಿಂದಾಗಿ ಅನೇಕರು ನಿರಾಶೆಗೊಂಡಿದ್ದಾರೆ, ಗಲಿಬಿಲಿಗೊಂಡಿದ್ದಾರೆ ಅಥವಾ ಹತಾಶೆಗೊಂಡಿದ್ದಾರೆ. ಕೆನಡದ ಒಂದು ವಿಶ್ವವಿದ್ಯಾನಿಲಯದ ನಿರ್ದೇಶಕರಾದ ಪೀಟರ್‌ ಎಂಬರ್ಲಿ ಬರೆದುದು: “ಅನೇಕ [ವಯಸ್ಕರು] ಕೊನೆಗೂ ಅಸ್ತಿತ್ವದ ಕುರಿತಾದ ಮೂಲ ಪ್ರಶ್ನೆಗಳನ್ನು ಎದುರಿಸುತ್ತಿದ್ದಾರೆ. ನಾನು ಯಾರು? ನಾನು ಯಾವುದಕ್ಕಾಗಿ ಹೆಣಗಾಡುತ್ತಿದ್ದೇನೆ? ನಾನು ಮುಂದಿನ ಸಂತತಿಗಾಗಿ ಯಾವ ಪರಂಪರೆಯನ್ನು ಬಿಟ್ಟುಹೋಗುತ್ತಿದ್ದೇನೆ? ಅವರು ತಮ್ಮ ಜೀವಿತಗಳಲ್ಲಿ ಕ್ರಮ ಹಾಗೂ ಅರ್ಥವನ್ನು ಪಡೆದುಕೊಳ್ಳಲಿಕ್ಕಾಗಿ ಈ ಮಧ್ಯವಯಸ್ಸಿನಲ್ಲಿ ಹೆಣಗಾಡುತ್ತಿದ್ದಾರೆ.”

20 ಇದು ಅನೇಕರ ವಿಷಯದಲ್ಲಿ ಏಕೆ ಸತ್ಯವಾಗಿದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಲ್ಲಿರಿ. ಹವ್ಯಾಸಗಳು ಮತ್ತು ರೋಮಾಂಚನೀಯವಾದ ಮನೋರಂಜನಾ ವಿಧಾನಗಳ ಮೂಲಕ ಜೀವನದಲ್ಲಿ ಆನಂದವನ್ನು ಕಂಡುಕೊಳ್ಳಲು ಅವರು ಪ್ರಯತ್ನಿಸಬಹುದು. ಆದರೂ, ಭವಿಷ್ಯತ್ತಿನಲ್ಲಿ ಏನು ಸಂಭವಿಸಲಿದೆ ಎಂಬುದು ಅವರಿಗೆ ತಿಳಿಯದು, ಆದುದರಿಂದ ಅವರ ಜೀವಿತದಲ್ಲಿ ಯಾವ ಮಹತ್ವವೂ, ಕ್ರಮಬದ್ಧತೆಯೂ, ನಿಜವಾದ ಅರ್ಥವೂ ಇರುವುದಿಲ್ಲ. ಆದರೆ ನಾವು ಇದುವರೆಗೂ ಪರಿಗಣಿಸಿರುವ ವಿಷಯದ ಬೆಳಕಿನಲ್ಲಿ, ಜೀವಿತದ ಕುರಿತಾದ ನಿಮ್ಮ ದೃಷ್ಟಿಕೋನವನ್ನು ಈಗ ಹೋಲಿಸಿ ನೋಡಿರಿ. ಯೆಹೋವನ ವಾಗ್ದತ್ತ ನೂತನಾಕಾಶಮಂಡಲ ಮತ್ತು ನೂತನಭೂಮಂಡಲದಲ್ಲಿ, ನಾವು ಸುತ್ತಲೂ ನೋಡಿ, ‘ನಿಜವಾಗಿಯೂ ದೇವರು ಎಲ್ಲವನ್ನು ಹೊಸದುಮಾಡಿದ್ದಾನೆ’ ಎಂದು ಹೃತ್ಪೂರ್ವಕವಾಗಿ ಹೇಳಶಕ್ತರಾಗಿರುವೆವು! ಆ ಸಮಯದಲ್ಲಿ ನಾವು ಎಷ್ಟು ಆನಂದಿಸುವೆವು!

21. ಯೆಶಾಯ 65:25ರಲ್ಲಿ ಮತ್ತು ಯೆಶಾಯ 11:9ರಲ್ಲಿ ನಾವು ಯಾವ ಸಾಮಾನ್ಯ ಅಂಶವನ್ನು ಕಂಡುಕೊಳ್ಳುತ್ತೇವೆ?

21 ದೇವರ ಹೊಸ ಲೋಕದಲ್ಲಿ ನಾವು ಜೀವಿಸುತ್ತಿರುವುದನ್ನು ಊಹಿಸಿಕೊಳ್ಳುವುದು, ಮಿತಿಮೀರಿದ ಭರವಸೆಯನ್ನು ಇಟ್ಟುಕೊಂಡಿರುವ ಸಂಗತಿಯಾಗಿರುವುದಿಲ್ಲ. ನಾವು ಆತನನ್ನು ಸತ್ಯದಿಂದ ಆರಾಧಿಸಿ, ‘ಆತನ ಪರಿಶುದ್ಧಪರ್ವತದಲ್ಲೆಲ್ಲಾ ಯಾರೂ ಕೇಡುಮಾಡದ ಮತ್ತು ಹಾಳುಮಾಡದಂತಹ’ ಸಮಯದಲ್ಲಿ ಜೀವಿಸಲಿಕ್ಕಾಗಿ ಅರ್ಹರಾಗುವಂತೆ ದೇವರು ನಮ್ಮನ್ನು ಆಮಂತ್ರಿಸುತ್ತಾನೆ ಮತ್ತು ಉತ್ತೇಜಿಸುತ್ತಾನೆ. (ಯೆಶಾಯ 65:25) ಆದರೂ, ಈ ಮುಂಚೆ ಯೆಶಾಯನು ತನ್ನ ಬರಹಗಳಲ್ಲಿ ತದ್ರೀತಿಯ ಹೇಳಿಕೆಗಳನ್ನು ನೀಡಿದ್ದನು, ಹಾಗೂ ನಾವು ಹೊಸ ಲೋಕದಲ್ಲಿ ನಿಜವಾಗಿಯೂ ಆನಂದಿಸಲು ಬಹು ಮುಖ್ಯವಾದ ಒಂದು ಅಂಶವನ್ನು ಸೇರಿಸಿದ್ದನು ಎಂಬುದರ ಬಗ್ಗೆ ನಿಮಗೆ ತಿಳಿದಿತ್ತೊ? ಯೆಶಾಯ 11:9 ಹೇಳುವುದು: “ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ ಕೇಡು ಮಾಡುವದಿಲ್ಲ, ಯಾರೂ ಹಾಳುಮಾಡುವದಿಲ್ಲ; ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.”

22. ನಾಲ್ಕು ಬೈಬಲ್‌ ಪ್ರವಾದನೆಗಳ ಕುರಿತಾದ ನಮ್ಮ ಪರಿಗಣನೆಯು, ಏನನ್ನು ಮಾಡುವ ನಮ್ಮ ನಿರ್ಧಾರವನ್ನು ಹೆಚ್ಚು ಬಲಗೊಳಿಸಬೇಕು?

22 “ಯೆಹೋವನ ಜ್ಞಾನ.” ದೇವರು ಎಲ್ಲವನ್ನೂ ಹೊಸದುಮಾಡುವಾಗ, ಭೂಮಿಯ ನಿವಾಸಿಗಳು ಆತನ ಮತ್ತು ಆತನ ಚಿತ್ತದ ಕುರಿತು ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಂಡಿರುವರು. ಪ್ರಾಣಿಜೀವಿಗಳಿಂದ ಕಲಿತುಕೊಳ್ಳುವುದಕ್ಕಿಂತಲೂ ಹೆಚ್ಚಿನದ್ದು ಇದರಲ್ಲಿ ಒಳಗೂಡಿರುವುದು. ಅದರಲ್ಲಿ ಆತನ ಪ್ರೇರಿತ ವಾಕ್ಯವು ಒಳಗೂಡಿರುವುದು. ಉದಾಹರಣೆಗೆ, ‘ನೂತನಾಕಾಶಮಂಡಲ ಮತ್ತು ನೂತನಭೂಮಂಡಲದ’ ಕುರಿತು ಉಲ್ಲೇಖಿಸುವ ಕೇವಲ ನಾಲ್ಕು ಪ್ರವಾದನೆಗಳನ್ನು ಪರೀಕ್ಷಿಸುವುದರಿಂದ ನಾವು ಎಷ್ಟೊಂದು ವಿಷಯಗಳನ್ನು ತಿಳಿದುಕೊಂಡಿದ್ದೇವೆ ಎಂಬುದರ ಕುರಿತು ಮನನಮಾಡಿರಿ. (ಯೆಶಾಯ 65:17; 66:22; 2 ಪೇತ್ರ 3:13; ಪ್ರಕಟನೆ 21:1) ಪ್ರತಿ ದಿನವೂ ಬೈಬಲನ್ನು ಓದಲು ನಿಮಗೆ ಸಕಾರಣವಿದೆ. ಇದನ್ನು ನೀವು ದಿನಾಲೂ ಕ್ರಮವಾಗಿ ಮಾಡುತ್ತಿದ್ದೀರೊ? ಇಲ್ಲದಿರುವಲ್ಲಿ, ಪ್ರತಿ ದಿನ ದೇವರು ಹೇಳಲಿಕ್ಕಿರುವ ವಿಷಯಗಳಲ್ಲಿ ಕೆಲವನ್ನು ನೀವು ಓದುವಂತೆ ನೀವು ಯಾವ ಹೊಂದಾಣಿಕೆಗಳನ್ನು ಮಾಡಸಾಧ್ಯವಿದೆ? ಹೊಸ ಲೋಕದಲ್ಲಿ ಆನಂದಿಸುವುದನ್ನು ಎದುರುನೋಡುವುದಕ್ಕಿಂತಲೂ ಹೆಚ್ಚಾಗಿ, ಕೀರ್ತನೆಗಾರನಂತೆ ಈಗಲೇ ನೀವು ಅತ್ಯಧಿಕ ಆನಂದವನ್ನು ಪಡೆದುಕೊಳ್ಳುವಿರಿ ಎಂಬುದು ಇದರಿಂದ ನಿಮಗೆ ಅರ್ಥವಾಗುವುದು.—ಕೀರ್ತನೆ 1:1, 2.

[ಪಾದಟಿಪ್ಪಣಿಗಳು]

ನೀವು ಹೇಗೆ ಉತ್ತರಿಸುವಿರಿ?

ಯೆಶಾಯ 66:22-24ನೆಯ ವಚನವು ಮುಂದೆ ಸಂಭವಿಸಲಿರುವ ಸಂಗತಿಯನ್ನು ಮುಂತಿಳಿಸುತ್ತದೆ ಎಂಬ ತೀರ್ಮಾನಕ್ಕೆ ನಾವು ಏಕೆ ಬರಸಾಧ್ಯವಿದೆ?

ಯೆಶಾಯ 66:22-24 ಮತ್ತು ಯೆಶಾಯ 65:20-25ರಲ್ಲಿರುವ ಪ್ರವಾದನೆಗಳಲ್ಲಿ ಉಲ್ಲೇಖಿಸಲ್ಪಟ್ಟಿರುವ ವಿಷಯಗಳಲ್ಲಿ, ನೀವು ವಿಶೇಷವಾಗಿ ಯಾವುದಕ್ಕಾಗಿ ಮುನ್ನೋಡುತ್ತೀರಿ?

• ನಿಮ್ಮ ಭವಿಷ್ಯತ್ತಿನ ಕುರಿತು ದೃಢನಿಶ್ಚಯದಿಂದಿರಲು ನಿಮಗೆ ಯಾವ ಸಕಾರಣಗಳು ಇವೆ?

[ಅಧ್ಯಯನ ಪ್ರಶ್ನೆಗಳು]

[ಪುಟ 15ರಲ್ಲಿರುವ ಚಿತ್ರಗಳು]

ಯೆಶಾಯ, ಪೇತ್ರ ಮತ್ತು ಯೋಹಾನರು, ‘ನೂತನಾಕಾಶಮಂಡಲ ಮತ್ತು ನೂತನಭೂಮಂಡಲದ’ ಕುರಿತಾದ ಪ್ರತೀಕ್ಷೆಗಳನ್ನು ಮುಂತಿಳಿಸಿದರು