ಅವನು ಒಂದು ಮೂಲತತ್ವಕ್ಕಾಗಿ ತನ್ನ ಪ್ರಾಣವನ್ನು ಕಳಕೊಂಡನು
ಅವನು ಒಂದು ಮೂಲತತ್ವಕ್ಕಾಗಿ ತನ್ನ ಪ್ರಾಣವನ್ನು ಕಳಕೊಂಡನು
ಒಂದು ಸಮಯದಲ್ಲಿ ಕೂಟ ಶಿಬಿರವಾಗಿದ್ದ ಸ್ಯಾಕ್ಸನ್‌ಹಾಸೆನ್‌ನಲ್ಲಿ ಇತ್ತೀಚೆಗೆ ಕಂಡುಹಿಡಿಯಲಾದ ಫಲಕದ ಕೆತ್ತನೆಯು (ಇಲ್ಲಿ ತೋರಿಸಲಾಗಿದೆ) ಈ ಮಾತುಗಳಿಂದ ಆರಂಭವಾಗುತ್ತದೆ: “ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾದ ಔಗುಸ್ಟ್ ಡಿಕ್‌ಮನ್‌ರನ್ನು (1910ರಲ್ಲಿ ಜನಿಸಿದ್ದು) ನಾವು ಸ್ಮರಿಸುತ್ತೇವೆ.” ಯೆಹೋವನ ಸಾಕ್ಷಿಗಳಲ್ಲಿ ಒಬ್ಬರು ಈ ರೀತಿಯ ಫಲಕವನ್ನು ಪಡೆಯುವುದಕ್ಕೆ ಅರ್ಹರಾಗಿರಲು ಕಾರಣವೇನು? ಕೆತ್ತನೆಯ ಉಳಿದ ಭಾಗವು ಕಥೆಯನ್ನು ಮುಂದುವರಿಸುತ್ತದೆ: “[ಅವರು] ತಮ್ಮ ಆತ್ಮಸಾಕ್ಷಿಯಂತೆ ನಡೆದು, ಯುದ್ಧದಲ್ಲಿ ಭಾಗವಹಿಸದ ಕಾರಣ 1939ರ ಸೆಪ್ಟೆಂಬರ್ 15ರಂದು ಎಸೆಸ್ ಪಡೆಯವರಿಂದ ಬಹಿರಂಗವಾಗಿ ಗುಂಡಿಕ್ಕಿ ಕೊಲ್ಲಲ್ಪಟ್ಟಿದ್ದರು.”
ಔಗುಸ್ಟ್ ಡಿಕ್‌ಮನ್‌ರನ್ನು 1937ರಲ್ಲಿ ಸ್ಯಾಕ್ಸನ್‌ಹಾಸೆನ್ ಕೂಟ ಶಿಬಿರದಲ್ಲಿ ಬಂಧಿಸಲಾಗಿತ್ತು. 1939ರಲ್ಲಿ ಎರಡನೆಯ ಲೋಕ ಯುದ್ಧವು ಆರಂಭವಾಗಿ ಮೂರು ದಿನಗಳ ನಂತರ, ಮಿಲಿಟರಿ ಆಜ್ಞೆಯ ಚೀಟಿಯೊಂದಕ್ಕೆ ಸಹಿ ಹಾಕುವಂತೆ ಅವರಿಗೆ ಆದೇಶ ನೀಡಲಾಯಿತು. ಅವರು ಅದಕ್ಕೆ ನಿರಾಕರಿಸಿದರು. ಆ ಸಮಯದಲ್ಲಿ ಶಿಬಿರದ ಸೇನಾನಿಯು, ಎಸೆಸ್‌ನ (ಶೂಟ್ಸ್‌ಸ್ಟಾಫೆಲ್, ಹಿಟ್ಲರನ ಉತ್ಕೃಷ್ಟ ಕಾವಲುಪಡೆ) ಮುಖ್ಯಸ್ಥನಾಗಿದ್ದ ಹೆನ್‌ರಿಕ್ ಹಿಮ್ಲರ್‌ನನ್ನು ಸಂಪರ್ಕಿಸಿದನು ಮತ್ತು ಶಿಬಿರದ ಇತರ ಎಲ್ಲ ಸೆರೆವಾಸಿಗಳ ಎದುರು ಡಿಕ್‌ಮನ್‌ರನ್ನು ವಧಿಸುವುದಕ್ಕೆ ಅನುಮತಿಯನ್ನು ಕೇಳಿಕೊಂಡನು. 1939ರ ಸೆಪ್ಟೆಂಬರ್ 17ರಂದು, ದ ನ್ಯೂ ಯಾರ್ಕ್ ಟೈಮ್ಸ್ ವಾರ್ತಾಪತ್ರಿಕೆಯು ಜರ್ಮನಿಯಿಂದ ವರದಿಸಿದ್ದು: “29 ವರ್ಷ ಪ್ರಾಯದ ಔಗುಸ್ಟ್ ಡಿಕ್‌ಮನ್‌ರು, . . . ಗುಂಡು ಹಾರಿಸುವ ಪಡೆಯವರಿಂದ ಇಲ್ಲಿಯೇ ಕೊಲ್ಲಲ್ಪಟ್ಟಿದ್ದಾರೆ.” ಅವರು ತಮ್ಮ ಆತ್ಮಸಾಕ್ಷಿಯಂತೆ ನಡೆದುಕೊಳ್ಳುತ್ತಾ ಆ ಯುದ್ಧದಲ್ಲಿ ಭಾಗವಹಿಸದ ಮೊದಲ ಜರ್ಮನ್ ವ್ಯಕ್ತಿಯಾಗಿದ್ದರೆಂದು ಸಹ ಆ ವಾರ್ತಾಪತ್ರಿಕೆಯು ಹೇಳಿತು.
ಅರವತ್ತು ವರ್ಷಗಳ ನಂತರ, ಅಂದರೆ 1999ರ ಸೆಪ್ಟೆಂಬರ್ 18ರಂದು ಡಿಕ್‌ಮನ್‌ರ ಮರಣವನ್ನು ಬ್ರ್ಯಾನ್‌ಡೆನ್ಬರ್ಗ್ ಸ್ಮಾರಕಭವನದಲ್ಲಿ ಸ್ಮರಿಸಲಾಯಿತು ಮತ್ತು ಆ ಸ್ಮಾರಕ ಫಲಕವು, ಅವರ ಧೈರ್ಯ ಮತ್ತು ಬಲವಾದ ನಂಬಿಕೆಯ ಕುರಿತು ಸಂದರ್ಶಕರಿಗೆ ಈಗಲೂ ಜ್ಞಾಪಕ ಹುಟ್ಟಿಸುತ್ತದೆ. ಆ ಹಿಂದಿನ ಶಿಬಿರದ ಹೊರಗೋಡೆಯ ಮೇಲಿರುವ ಎರಡನೆಯ ಫಲಕವು, ತಮ್ಮ ನಂಬಿಕೆಗಳಿಗಾಗಿ ಸ್ಯಾಕ್ಸನ್‌ಹಾಸೆನ್‌ನಲ್ಲಿ ಹಿಂಸೆಯನ್ನು ಅನುಭವಿಸಿದ ಸುಮಾರು 900ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಯೆಹೋವನ ಸಾಕ್ಷಿಗಳಲ್ಲಿ ಡಿಕ್‌ಮನ್‌ರು ಕೇವಲ ಒಬ್ಬರಾಗಿದ್ದರು ಎಂಬುದನ್ನು ಸಂದರ್ಶಕರಿಗೆ ನೆನಪು ಹುಟ್ಟಿಸುತ್ತದೆ. ಇನ್ನೂ ಅನೇಕರು ಬೇರೆ ಶಿಬಿರಗಳಲ್ಲಿ ಕಷ್ಟವನ್ನು ಅನುಭವಿಸಿದ್ದರು. ಹೌದು, ಕೂಟ ಶಿಬಿರಗಳ ಭೀಕರ ಪರಿಸ್ಥಿತಿಗಳ ಕೆಳಗೂ ಅನೇಕರು ತಾವು ಕಲಿತಿದ್ದ ದೈವಿಕ ಮೂಲತತ್ವಗಳಿಗೆ ನಂಬಿಗಸ್ತರಾಗಿ ಉಳಿದರು.
ತಮ್ಮ “ಮೇಲಿರುವ ಅಧಿಕಾರಿಗಳಿಗೆ [ಸರಕಾರಕ್ಕೆ] ಅಧೀನ”ರಾಗುವುದು ಯೆಹೋವನ ಸಾಕ್ಷಿಗಳಿಗಿರುವ ಒಂದು ಕ್ರಿಸ್ತೀಯ ಕರ್ತವ್ಯವಾಗಿದೆ. (ರೋಮಾಪುರ 13:1) ಹೀಗಿದ್ದರೂ, ದೇವರ ನಿಯಮಗಳನ್ನು ಮೀರುವಂತೆ ಸರಕಾರದವರು ಅವರನ್ನು ಒತ್ತಾಯಿಸುವಾಗ, ಅವರು ಕ್ರಿಸ್ತನ ಅಪೊಸ್ತಲರ ಮಾದರಿಯನ್ನು ಅನುಸರಿಸುತ್ತಾರೆ. ಅವರು ಹೇಳಿದ್ದು: “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕಲ್ಲಾ.” (ಅ. ಕೃತ್ಯಗಳು 5:29) ಇದರ ಪರಿಣಾಮವಾಗಿ, ಪಂಗಡಗಳ ನಡುವೆ ಕಲಹಗಳು ಸಂಭವಿಸಿವೆ ಮತ್ತು ವಿವಿಧ ಕುಲಸಂಬಂಧಿತ ದ್ವೇಷಗಳು ಆಘಾತವನ್ನುಂಟುಮಾಡುವ ಘೋರ ಕೃತ್ಯಗಳಿಗೆ ನಡೆಸಿವೆ. ಇಂತಹ ಒಂದು ಲೋಕದಲ್ಲಿ ಯೆಹೋವನ ಸಾಕ್ಷಿಗಳು ಜೀವಿಸುತ್ತಾರಾದರೂ, ಅವರು ಎಲ್ಲ ಕಡೆಗಳಲ್ಲಿ ಔಗುಸ್ಟ್ ಡಿಕ್‌ಮನ್‌ರಂತೆ ಶಾಂತಿಯನ್ನು ಬೆನ್ನಟ್ಟುತ್ತಾರೆ. ಅವರು ಬೈಬಲಿನ ಈ ಬುದ್ಧಿವಾದವನ್ನು ಅನುಸರಿಸುತ್ತಾರೆ: “ಕೆಟ್ಟತನಕ್ಕೆ ಸೋತುಹೋಗದೆ ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸು.”—ರೋಮಾಪುರ 12:21.