ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೈವಿಕ ಬೋಧನೆಯನ್ನು ದೃಢವಾಗಿ ಎತ್ತಿಹಿಡಿಯಿರಿ

ದೈವಿಕ ಬೋಧನೆಯನ್ನು ದೃಢವಾಗಿ ಎತ್ತಿಹಿಡಿಯಿರಿ

ದೈವಿಕ ಬೋಧನೆಯನ್ನು ದೃಢವಾಗಿ ಎತ್ತಿಹಿಡಿಯಿರಿ

“ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.”ಜ್ಞಾನೋಕ್ತಿ 3:5, 6.

1. ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಾನವ ಜ್ಞಾನಕ್ಕೆ ನಾವು ಯಾವ ರೀತಿಯಲ್ಲಿ ಒಡ್ಡಲ್ಪಟ್ಟಿದ್ದೇವೆ?

ಸದ್ಯಕ್ಕೆ, ಲೋಕದಾದ್ಯಂತ ಸುಮಾರು 9,000 ದಿನಪತ್ರಿಕೆಗಳು ಚಲಾವಣೆಯಲ್ಲಿವೆ. ಪ್ರತಿ ವರ್ಷ ಕೇವಲ ಅಮೆರಿಕವೊಂದರಲ್ಲೇ ಸುಮಾರು 2,00,000 ಹೊಸ ಪುಸ್ತಕಗಳು ಪ್ರಕಾಶಿಸಲ್ಪಡುತ್ತವೆ. ಒಂದು ಅಂದಾಜಿಗನುಸಾರ, 1998ರ ಮಾರ್ಚ್‌ ತಿಂಗಳಿನಷ್ಟಕ್ಕೆ ಇಂಟರ್‌ನೆಟ್‌ನಲ್ಲಿ 27.5 ಕೋಟಿ ವೆಬ್‌ ಪುಟಗಳಿದ್ದವು. ಈ ಸಂಖ್ಯೆಯು, ಪ್ರತಿ ತಿಂಗಳಿಗೆ ಎರಡು ಕೋಟಿ ಪುಟಗಳಷ್ಟು ಹೆಚ್ಚುತ್ತಿದೆ ಎಂದು ಹೇಳಲಾಗಿದೆ. ಇಂದು, ಹಿಂದೆಂದಿಗಿಂತಲೂ ಹೆಚ್ಚಾಗಿ ಜನರು ಯಾವುದೇ ವಿಷಯದ ಕುರಿತಾಗಲಿ ಬಹಳ ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ. ಇದರಲ್ಲಿ ಸಕಾರಾತ್ಮಕವಾದ ಅಂಶಗಳಿರುವುದಾದರೂ, ಈ ಹೇರಳವಾದ ಮಾಹಿತಿಯು ಸಮಸ್ಯೆಗಳನ್ನು ತಂದೊಡ್ಡಿದೆ.

2. ಅತಿ ಹೇರಳವಾದ ಮಾಹಿತಿಯಿಂದ ಯಾವ ಸಮಸ್ಯೆಗಳು ಉಂಟಾಗಬಹುದು?

2 ಕೆಲವರು ಮಾಹಿತಿ ವ್ಯಸನಿಗಳಾಗಿದ್ದಾರೆ. ಅಂದರೆ, ಇವರು ಅತಿ ಮುಖ್ಯವಾದ ವಿಷಯಗಳನ್ನು ಕಡೆಗಣಿಸುತ್ತಾ ಸದ್ಯೋಚಿತ ಮಾಹಿತಿಯನ್ನು ಪಡೆದುಕೊಳ್ಳುವ ಅತ್ಯಾಸೆಯನ್ನು ತಣಿಸಲು ಯಾವಾಗಲೂ ಪ್ರಯತ್ನಿಸುತ್ತಿರುತ್ತಾರೆ. ಇನ್ನಿತರರು ಅತಿ ಜಟಿಲವಾದ ಜ್ಞಾನದ ಕುರಿತು ಆಂಶಿಕ ಮಾಹಿತಿಯನ್ನು ಪಡೆದುಕೊಂಡು, ತಾವೇ ಪರಿಣತರು ಎಂದು ನೆನಸಿಕೊಳ್ಳುತ್ತಾರೆ. ಈ ಅಲ್ಪ ಜ್ಞಾನವನ್ನೇ ಆಧಾರವಾಗಿಟ್ಟುಕೊಂಡು, ತಮಗೆ ಅಥವಾ ಇನ್ನಿತರರಿಗೆ ಹಾನಿಯನ್ನು ಉಂಟುಮಾಡುವಂತಹ ಪ್ರಾಮುಖ್ಯ ನಿರ್ಣಯಗಳನ್ನು ಅವರು ಮಾಡಬಹುದು. ಅಷ್ಟುಮಾತ್ರವಲ್ಲದೆ, ತಪ್ಪಾದ ಅಥವಾ ನಿಷ್ಕೃಷ್ಟವಾಗಿರದ ಮಾಹಿತಿಗೆ ಒಡ್ಡಲ್ಪಡುವ ಅಪಾಯವು ಯಾವಾಗಲೂ ಇದೆ. ಈ ಮಾಹಿತಿಯ ಮಹಾಪೂರವು ನಿಷ್ಕೃಷ್ಟವೂ ಸ್ಥಿರತೆಯುಳ್ಳದ್ದೂ ಆಗಿದೆ ಎಂಬುದನ್ನು ಅನೇಕ ವೇಳೆ ಪರೀಕ್ಷಿಸಿ ನೋಡಲು ಯಾವುದೇ ಭರವಸಾರ್ಹ ಮಾರ್ಗವಿರುವುದಿಲ್ಲ.

3. ಮಾನವ ವಿವೇಕವನ್ನು ಬೆನ್ನಟ್ಟುವುದರ ಕುರಿತಾಗಿ ಯಾವ ಎಚ್ಚರಿಕೆಗಳು ಬೈಬಲಿನಲ್ಲಿವೆ?

3 ಕುತೂಹಲವೆನ್ನುವುದು ಬಹಳ ಹಿಂದಿನಿಂದಲೂ ಮಾನವನ ಸಹಜ ಗುಣವಾಗಿದೆ. ನಿಷ್ಪ್ರಯೋಜಕ ಅಥವಾ ಹಾನಿಕರವಾದ ಮಾಹಿತಿಯನ್ನು ಪಡೆದುಕೊಳ್ಳುವ ಪ್ರಯತ್ನದಲ್ಲಿ ತೀರ ಹೆಚ್ಚು ಸಮಯವನ್ನು ಹಾಳುಮಾಡುವುದರ ಅಪಾಯಗಳ ಕುರಿತು ರಾಜ ಸೊಲೊಮೋನನ ದಿನಗಳಲ್ಲಿಯೇ ಗ್ರಹಿಸಲಾಗಿತ್ತು. ಅವನು ಹೇಳಿದ್ದು: “ಎಚ್ಚರದಿಂದಿರು; ಬಹುಗ್ರಂಥಗಳ ರಚನೆಗೆ ಮಿತಿಯಿಲ್ಲ; ಅತಿವ್ಯಾಸಂಗವು ದೇಹಕ್ಕೆ ಆಯಾಸ.” (ಪ್ರಸಂಗಿ 12:12) ಶತಮಾನಗಳ ಅನಂತರ ಅಪೊಸ್ತಲ ಪೌಲನು ತಿಮೊಥೆಯನಿಗೆ ಬರೆದುದು: “ಜ್ಞಾನೋಪದೇಶವೆಂದು ಸುಳ್ಳಾಗಿ ಹೇಳಿಕೊಳ್ಳುವ ಬೋಧನೆಗೆ ಸಂಬಂಧಪಟ್ಟ ಪ್ರಾಪಂಚಿಕವಾದ ಆ ಹರಟೆಮಾತುಗಳಿಗೂ ವಿವಾದಗಳಿಗೂ ನೀನು ದೂರವಾಗಿದ್ದು ನಿನ್ನ ವಶಕ್ಕೆ ಕೊಟ್ಟಿರುವದನ್ನೇ ಕಾಪಾಡು. ಕೆಲವರು ಆ ಸುಳ್ಳಾದ ಜ್ಞಾನವನ್ನು ಅವಲಂಬಿಸಿ ಕ್ರಿಸ್ತನಂಬಿಕೆಯಿಂದ ಭ್ರಷ್ಟರಾದರು.” (1 ತಿಮೊಥೆಯ 6:20, 21) ಹೌದು, ಇಂದು ಕ್ರೈಸ್ತರು ಹಾನಿಕರವಾದ ವಿಚಾರಗಳಿಗೆ ತಮ್ಮನ್ನೇ ಅನಾವಶ್ಯಕವಾಗಿ ಒಡ್ಡಿಕೊಳ್ಳುವುದರಿಂದ ದೂರವಿರುವ ಅಗತ್ಯವಿದೆ.

4. ಯೆಹೋವನಲ್ಲಿ ಮತ್ತು ಆತನ ಬೋಧನೆಗಳಲ್ಲಿ ನಮ್ಮ ನಂಬಿಕೆಯನ್ನು ತೋರಿಸಸಾಧ್ಯವಿರುವ ಒಂದು ವಿಧವು ಯಾವುದಾಗಿದೆ?

4 ಯೆಹೋವನ ಸಾಕ್ಷಿಗಳು ಜ್ಞಾನೋಕ್ತಿ 3:5, 6ರ ನುಡಿಗಳನ್ನು ಸಹ ಪಾಲಿಸಬೇಕು. ಅದು ಹೇಳುವುದು: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.” ಯೆಹೋವನಲ್ಲಿ ಭರವಸೆಯನ್ನಿಡುವುದರಲ್ಲಿ, ನಮ್ಮ ಸ್ವಂತ ತರ್ಕದಿಂದಲೇ ಆಗಿರಲಿ ಇಲ್ಲವೇ ನಮ್ಮ ಜೊತೆಮಾನವರ ತರ್ಕದಿಂದಲೇ ಆಗಿರಲಿ, ದೇವರ ವಾಕ್ಯಕ್ಕೆ ವಿರುದ್ಧವಾಗಿರುವ ಯಾವುದೇ ವಿಚಾರವನ್ನು ತಿರಸ್ಕರಿಸುವುದನ್ನು ಒಳಗೂಡಿರುತ್ತದೆ. ನಮ್ಮ ಆತ್ಮಿಕತೆಯನ್ನು ಕಾಪಾಡಲು ನಮ್ಮ ಗ್ರಹಣಶಕ್ತಿಗಳನ್ನು ತರಬೇತುಗೊಳಿಸುವುದು ಅತಿ ಪ್ರಾಮುಖ್ಯವಾಗಿದೆ. ಹೀಗೆ ಮಾಡುವುದರಿಂದ ನಾವು ಹಾನಿಕರವಾದ ಮಾಹಿತಿಯನ್ನು ಗುರುತಿಸಿ, ಅದರಿಂದ ದೂರವಿರಬಲ್ಲೆವು. (ಇಬ್ರಿಯ 5:14) ಅಂತಹ ಹಾನಿಕರ ಮಾಹಿತಿಯ ಕೆಲವೊಂದು ಮೂಲಗಳನ್ನು ನಾವು ಚರ್ಚಿಸೋಣ.

ಸೈತಾನನ ಸ್ವಾಧೀನದಲ್ಲಿರುವ ಒಂದು ಲೋಕ

5. ಹಾನಿಕರ ವಿಚಾರಗಳ ಒಂದು ಮೂಲವೇನಾಗಿದೆ ಮತ್ತು ಅದರ ಹಿಂದೆ ಯಾರ ಕೈವಾಡವಿದೆ?

5 ಯಥೇಚ್ಛವಾದ ಹಾನಿಕರ ವಿಚಾರಗಳ ಒಂದು ಮೂಲವು ಈ ಲೋಕವಾಗಿದೆ. (1 ಕೊರಿಂಥ 3:19) ಯೇಸು ಕ್ರಿಸ್ತನು ತನ್ನ ಶಿಷ್ಯರ ಕುರಿತಾಗಿ ದೇವರಿಗೆ ಹೀಗೆ ಪ್ರಾರ್ಥಿಸಿದನು: “ಇವರನ್ನು ಲೋಕದೊಳಗಿಂದ ತೆಗೆದುಕೊಂಡು ಹೋಗಬೇಕೆಂದು ನಾನು ಕೇಳಿಕೊಳ್ಳುವದಿಲ್ಲ; ಕೆಡುಕನಿಂದ ತಪ್ಪಿಸಿ ಕಾಪಾಡಬೇಕೆಂದು ಕೇಳಿಕೊಳ್ಳುತ್ತೇನೆ.” (ಯೋಹಾನ 17:15) ತನ್ನ ಶಿಷ್ಯರನ್ನು “ಕೆಡುಕನಿಂದ” ಕಾಪಾಡಬೇಕೆಂದು ಯೇಸು ವಿಜ್ಞಾಪಿಸಿದಾಗ, ಈ ಲೋಕದ ಮೇಲೆ ಸೈತಾನನ ಪ್ರಭಾವವಿದೆ ಎಂಬುದನ್ನು ಅವನು ಅಂಗೀಕರಿಸಿದನು. ಕೇವಲ ನಾವು ಕ್ರೈಸ್ತರಾಗಿರುವುದರಿಂದ, ನಮಗೆ ಈ ಲೋಕದ ಕೆಟ್ಟ ಪ್ರಭಾವಗಳಿಂದ ಸಂರಕ್ಷಣೆ ಸಿಗುತ್ತದೆ ಎಂದು ಹೇಳಸಾಧ್ಯವಿಲ್ಲ. ಯೋಹಾನನು ಬರೆದುದು: “ನಾವು ದೇವರಿಂದ ಹುಟ್ಟಿದವರೆಂದೂ ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ ಎಂದೂ ನಮಗೆ ಗೊತ್ತದೆ.” (1 ಯೋಹಾನ 5:19) ಅದರಲ್ಲೂ ವಿಶೇಷವಾಗಿ ಕಡೇ ದಿವಸಗಳ ಈ ಕೊನೆಯ ಭಾಗದಲ್ಲಿ, ಸೈತಾನನು ಮತ್ತು ಅವನ ದೆವ್ವಗಳು ಈ ಲೋಕವನ್ನು ಹಾನಿಕರ ಮಾಹಿತಿಯಿಂದ ತುಂಬಿಸುವರೆಂಬುದನ್ನು ನಾವು ನಿರೀಕ್ಷಿಸಬಹುದು.

6. ಮನೋರಂಜನಾ ಜಗತ್ತು ನೈತಿಕ ಸಂವೇದನಶಕ್ತಿಯನ್ನು ಹೇಗೆ ಕುಗ್ಗಿಸಬಲ್ಲದು?

6 ಈ ಹಾನಿಕರವಾದ ಮಾಹಿತಿಯಲ್ಲಿ ಕೆಲವೊಂದು ಮಾಹಿತಿಯು ಹಾನಿರಹಿತವಾಗಿ ತೋರಬಹುದು ಎಂಬುದನ್ನು ಸಹ ನಿರೀಕ್ಷಿಸತಕ್ಕದ್ದು. (2 ಕೊರಿಂಥ 11:14, 15) ಉದಾಹರಣೆಗೆ, ಟಿವಿ ಕಾರ್ಯಕ್ರಮಗಳು, ಚಲನಚಿತ್ರಗಳು, ಸಂಗೀತ ಮತ್ತು ಸಾಹಿತ್ಯಪತ್ರಿಕೆಗಳಿಂದ ತುಂಬಿರುವ ಮನೋರಂಜನಾ ಜಗತ್ತನ್ನು ತೆಗೆದುಕೊಳ್ಳಿರಿ. ಹೆಚ್ಚಿನ ಸಂದರ್ಭಗಳಲ್ಲಿ ನಿರ್ದಿಷ್ಟವಾದ ಕೆಲವೊಂದು ರೀತಿಯ ಮನೋರಂಜನೆಯು ಅನೈತಿಕತೆ, ಹಿಂಸಾಕೃತ್ಯ ಹಾಗೂ ಅಮಲೌಷಧದ ದುರುಪಯೋಗದಂತಹ ಕೀಳ್ಮಟ್ಟದ ನಡವಳಿಕೆಯನ್ನು ಪ್ರೋತ್ಸಾಹಿಸುತ್ತದೆ ಎಂಬುದನ್ನು ಅನೇಕರು ಒಪ್ಪಿಕೊಳ್ಳುತ್ತಾರೆ. ತೀರ ಕೀಳ್ಮಟ್ಟದ ಮನೋರಂಜನೆಯೊಂದನ್ನು ಪ್ರಥಮ ಬಾರಿ ನೋಡುವಾಗ ಅಥವಾ ಕೇಳಿಸಿಕೊಳ್ಳುವಾಗ, ವೀಕ್ಷಕರು ಇಲ್ಲವೇ ಕೇಳುಗರು ದಿಗಿಲುಗೊಳ್ಳಬಹುದು. ಆದರೆ ಪದೇಪದೇ ಅದಕ್ಕೆ ಒಡ್ಡಲ್ಪಡುವಾಗ ಇದು ಒಬ್ಬನ ಸಂವೇದನಶಕ್ತಿಯನ್ನು ಇಲ್ಲವಾಗಿಸಸಾಧ್ಯವಿದೆ. ಹಾನಿಕರ ವಿಚಾರಗಳನ್ನು ಪ್ರೋತ್ಸಾಹಿಸುವ ಮನೋರಂಜನೆಯನ್ನು ನಾವೆಂದಿಗೂ ಸ್ವೀಕಾರಯೋಗ್ಯ ಇಲ್ಲವೇ ಹಾನಿರಹಿತವಾದದ್ದೆಂದು ವೀಕ್ಷಿಸಬಾರದು.—ಕೀರ್ತನೆ 119:37.

7. ಯಾವ ರೀತಿಯ ಮಾನವ ವಿವೇಕವು ಬೈಬಲಿನಲ್ಲಿರುವ ನಮ್ಮ ಭರವಸೆಯನ್ನು ಸವೆಯಿಸಬಲ್ಲದು?

7 ಹಾನಿಯನ್ನು ತರುವ ಸಾಧ್ಯತೆಯಿರುವ ಮಾಹಿತಿಯ ಇನ್ನೊಂದು ಮೂಲವನ್ನು ತೆಗೆದುಕೊಳ್ಳಿರಿ. ಇದು ಬೈಬಲಿನ ವಿಶ್ವಾಸಾರ್ಹತೆಗೆ ಸವಾಲನ್ನೆಸೆಯುವ ಕೆಲವು ವಿಜ್ಞಾನಿಗಳ ಮತ್ತು ವಿದ್ವಾಂಸರ ವಿಚಾರಧಾರೆಗಳೇ ಆಗಿದೆ. (ಹೋಲಿಸಿ ಯಾಕೋಬ 3:15.) ಇಂತಹ ವಿಷಯಗಳು ಆಗಿಂದಾಗ್ಗೆ ಪ್ರಮುಖ ಪತ್ರಿಕೆಗಳಲ್ಲಿ ಮತ್ತು ಜನಪ್ರಿಯ ಪುಸ್ತಕಗಳಲ್ಲಿ ಬರುತ್ತವೆ ಮತ್ತು ಇವು ಬೈಬಲಿನ ಮೇಲಿರುವ ಭರವಸೆಯನ್ನು ಸವೆಯಿಸಬಲ್ಲವು. ಅಂತ್ಯವಿಲ್ಲದ ಊಹಾಪೋಹಗಳಿಂದ ದೇವರ ವಾಕ್ಯದ ಅಧಿಕಾರವನ್ನು ದುರ್ಬಲಗೊಳಿಸುವದರಿಂದ ಕೆಲವರಿಗೆ ಸಂತೋಷ ಸಿಗುತ್ತದೆ. ಇಂತಹದ್ದೇ ಅಪಾಯವು ಅಪೊಸ್ತಲರ ದಿನಗಳಲ್ಲೂ ಇತ್ತು. ಇದು ಅಪೊಸ್ತಲ ಪೌಲನ ಈ ಮಾತುಗಳಿಂದ ವ್ಯಕ್ತವಾಗುತ್ತದೆ: “ಕ್ರಿಸ್ತನನ್ನು ಅನುಸರಿಸದೆ ಮನುಷ್ಯರ ಸಂಪ್ರದಾಯಗಳನ್ನೂ ಪ್ರಾಪಂಚಿಕಬಾಲಬೋಧೆಯನ್ನೂ ಅನುಸರಿಸುವವರು ನಿಮ್ಮಲ್ಲಿ ಬಂದು ಮೋಸವಾದ ನಿರರ್ಥಕ ತತ್ವಜ್ಞಾನಬೋಧನೆಯಿಂದ ನಿಮ್ಮ ಮನಸ್ಸನ್ನು ಕೆಡಿಸಿ ನಿಮ್ಮನ್ನು ವಶಮಾಡಿಕೊಂಡಾರು, ಎಚ್ಚರಿಕೆಯಾಗಿರ್ರಿ.”—ಕೊಲೊಸ್ಸೆ 2:8.

ಸತ್ಯದ ಶತ್ರುಗಳು

8, 9. ಇಂದು ಧರ್ಮಭ್ರಷ್ಟತೆಯು ಹೇಗೆ ಕಾಣಿಸಿಕೊಳ್ಳುತ್ತಿದೆ?

8 ನಮ್ಮ ಆತ್ಮಿಕತೆಗೆ ಇನ್ನೊಂದು ಬೆದರಿಕೆಯನ್ನು, ಧರ್ಮಭ್ರಷ್ಟರು ಒಡ್ಡಸಾಧ್ಯವಿದೆ. ಕ್ರೈಸ್ತರೆನಿಸಿಕೊಳ್ಳುವವರ ಮಧ್ಯೆ ಧರ್ಮಭ್ರಷ್ಟತೆಯು ಉಂಟಾಗುವುದು ಎಂದು ಅಪೊಸ್ತಲ ಪೌಲನು ಮುಂತಿಳಿಸಿದನು. (ಅ. ಕೃತ್ಯಗಳು 20:29, 30; 2 ಥೆಸಲೊನೀಕ 2:3) ಅವನ ಮಾತುಗಳಿಗನುಸಾರವಾಗಿಯೇ, ಅಪೊಸ್ತಲರ ಮರಣಾನಂತರ ಬೃಹತ್‌ ಪ್ರಮಾಣದ ಧರ್ಮಭ್ರಷ್ಟತೆಯು ಕ್ರೈಸ್ತಪ್ರಪಂಚವು ಬೆಳೆಯುವುದಕ್ಕೆ ಎಡೆಮಾಡಿಕೊಟ್ಟಿತು. ಇಂದು ದೇವಜನರ ಮಧ್ಯೆ ಬೃಹತ್‌ ಪ್ರಮಾಣದ ಧರ್ಮಭ್ರಷ್ಟತೆಯು ಇಲ್ಲ. ಆದರೂ ಕೆಲವರು ನಮ್ಮ ಸಂಸ್ಥೆಯನ್ನು ಬಿಟ್ಟುಹೋಗಿದ್ದಾರೆ ಮತ್ತು ಅವರಲ್ಲಿ ಕೆಲವರು ಯೆಹೋವನ ಸಾಕ್ಷಿಗಳ ಬಗ್ಗೆ ಸುಳ್ಳುಗಳನ್ನು ಮತ್ತು ತಪ್ಪು ಮಾಹಿತಿಯನ್ನು ಹಬ್ಬಿಸುವ ಮೂಲಕ ಅವರ ಹೆಸರಿಗೆ ಮಸಿಬಳಿಯಲು ದೃಢನಿಶ್ಚಯಮಾಡಿದ್ದಾರೆ. ಕೆಲವರು ಶುದ್ಧಾರಾಧನೆಗೆ ಸಂಘಟಿತ ರೀತಿಯಲ್ಲಿ ಪ್ರತಿಭಟಿಸುವುದರಲ್ಲಿ ಒಳಗೂಡಿರುವ ಇತರ ಗುಂಪುಗಳೊಡನೆ ಜೊತೆಗೂಡಿ ಕಾರ್ಯನಡೆಸುತ್ತಿದ್ದಾರೆ. ಹೀಗೆ ಮಾಡುವ ಮೂಲಕ, ಇವರು ಪ್ರಪ್ರಥಮ ಧರ್ಮಭ್ರಷ್ಟನಾದ ಸೈತಾನನ ಪಕ್ಷವಹಿಸುತ್ತಾರೆ.

9 ಕೆಲವು ಧರ್ಮಭ್ರಷ್ಟರು ಯೆಹೋವನ ಸಾಕ್ಷಿಗಳ ಕುರಿತು ತಪ್ಪಾದ ಮಾಹಿತಿಯನ್ನು ಹಬ್ಬಿಸಲಿಕ್ಕಾಗಿ, ಇಂಟರ್‌ನೆಟ್‌ನ ಜೊತೆಗೆ, ಸಮೂಹ ಮಾಧ್ಯಮದ ಬೇರೆ ಬೇರೆ ವಿಧಗಳನ್ನು ಹೆಚ್ಚೆಚ್ಚು ಬಳಸುತ್ತಿದ್ದಾರೆ. ಇದರಿಂದಾಗಿ, ನಮ್ಮ ನಂಬಿಕೆಗಳ ಬಗ್ಗೆ ಸಂಶೋಧನೆ ಮಾಡಲು ಬಯಸುವ ಪ್ರಾಮಾಣಿಕ ಹೃದಯದ ಜನರು, ಆಕಸ್ಮಿಕವಾಗಿ ಧರ್ಮಭ್ರಷ್ಟ ಸಮಾಚಾರವನ್ನು ಪಡೆದುಕೊಳ್ಳಬಹುದು. ಕೆಲವೊಂದು ಸಾಕ್ಷಿಗಳು ಸಹ ತಮಗರಿವಿಲ್ಲದೆಯೇ ಈ ಹಾನಿಕರ ವಿಷಯಕ್ಕೆ ತಮ್ಮನ್ನು ಒಡ್ಡಿಕೊಂಡಿದ್ದಾರೆ. ಅಷ್ಟುಮಾತ್ರವಲ್ಲ, ಧರ್ಮಭ್ರಷ್ಟರು ಆಗಾಗ್ಗೆ ಟೆಲಿವಿಷನ್‌ ಅಥವಾ ರೇಡಿಯೋ ಕಾರ್ಯಕ್ರಮಗಳಲ್ಲಿಯೂ ಪಾಲ್ಗೊಳ್ಳುತ್ತಾರೆ. ಇದೆಲ್ಲವನ್ನೂ ಮನಸ್ಸಿನಲ್ಲಿಟ್ಟುಕೊಂಡು, ಯಾವ ಮಾರ್ಗಕ್ರಮವನ್ನು ಅನುಸರಿಸುವುದು ವಿವೇಕಯುತವಾಗಿದೆ?

10. ಧರ್ಮಭ್ರಷ್ಟ ಪ್ರಚಾರಕ್ಕೆ ಯಾವ ವಿವೇಕಯುತ ಪ್ರತಿಕ್ರಿಯೆಯನ್ನು ತೋರಿಸಬಹುದು?

10 ಧರ್ಮಭ್ರಷ್ಟರನ್ನು ತಮ್ಮ ಮನೆಗಳೊಳಗೆ ಸೇರಿಸಿಕೊಳ್ಳಬಾರದೆಂದು ಅಪೊಸ್ತಲ ಯೋಹಾನನು ಕ್ರೈಸ್ತರಿಗೆ ಹೇಳಿದನು. ಅವನು ಬರೆದುದು: “ಈ ಉಪದೇಶಕ್ಕೆ ಒಪ್ಪದಿರುವ ಯಾವನಾದರೂ ನಿಮ್ಮ ಬಳಿಗೆ ಬಂದರೆ ಅವನನ್ನು ಮನೆಯೊಳಗೆ ಸೇರಿಸಿಕೊಳ್ಳಬೇಡಿರಿ, ಅವನಿಗೆ ಶುಭವಾಗಲಿ ಎಂದು ಹೇಳಬೇಡಿರಿ. ಅವನಿಗೆ ಶುಭವಾಗಲಿ ಎಂದು ಹೇಳುವವನು ಅವನ ದುಷ್ಕೃತ್ಯಗಳಲ್ಲಿ ಪಾಲುಗಾರನಾಗುತ್ತಾನೆ.” (2 ಯೋಹಾನ 10, 11) ಇಂತಹ ಎದುರಾಳಿಗಳೊಂದಿಗೆ ಯಾವುದೇ ರೀತಿಯ ಸಂಪರ್ಕವನ್ನಿಟ್ಟುಕೊಳ್ಳದೇ ಇರುವ ಮೂಲಕ ನಾವು ಅವರ ಭ್ರಷ್ಟ ಆಲೋಚನಾರೀತಿಯಿಂದ ನಮ್ಮನ್ನೇ ಕಾಪಾಡಿಕೊಳ್ಳುವೆವು. ವಿವಿಧ ರೀತಿಯ ಆಧುನಿಕ ಸಂಪರ್ಕ ಮಾಧ್ಯಮದಿಂದ ಸಿಗುವ ಧರ್ಮಭ್ರಷ್ಟ ಬೋಧನೆಗಳಿಗೆ ನಮ್ಮನ್ನು ಒಡ್ಡಿಕೊಳ್ಳುವುದು, ಧರ್ಮಭ್ರಷ್ಟನನ್ನು ನಮ್ಮ ಮನೆಗಳೊಳಗೆ ಸ್ವಾಗತಿಸುವಷ್ಟೇ ಅಪಾಯಕಾರಿಯಾಗಿದೆ. ಆದುದರಿಂದ, ನಮ್ಮ ಕುತೂಹಲವು, ನಮ್ಮನ್ನು ಇಂತಹ ವಿಪತ್ಕಾರಕ ದಾರಿಗೆಳೆಯುವಂತೆ ನಾವೆಂದಿಗೂ ಅನುಮತಿಸದಿರೋಣ!—ಜ್ಞಾನೋಕ್ತಿ 22:3.

ಸಭೆಯೊಳಗೆ

11, 12. (ಎ) ಪ್ರಥಮ ಶತಮಾನದ ಸಭೆಯಲ್ಲಿ ಯಾವುದು ಹಾನಿಕರ ವಿಚಾರಗಳ ಮೂಲವಾಗಿತ್ತು? (ಬಿ) ದೈವಿಕ ಬೋಧನೆಗಳನ್ನು ದೃಢವಾಗಿ ಎತ್ತಿಹಿಡಿಯುವುದರಲ್ಲಿ ಕೆಲವು ಕ್ರೈಸ್ತರು ಹೇಗೆ ತಪ್ಪಿಹೋದರು?

11 ಹಾನಿಕರ ವಿಚಾರಗಳ ಮತ್ತೊಂದು ಸಂಭಾವ್ಯ ಮೂಲವನ್ನು ಪರಿಗಣಿಸಿರಿ. ಒಬ್ಬ ಸಮರ್ಪಿತ ಕ್ರೈಸ್ತನಿಗೆ ಅಸತ್ಯಗಳನ್ನು ಕಲಿಸುವ ಉದ್ದೇಶವಿಲ್ಲದಿರುವುದಾದರೂ, ಅವನು ದುಡುಕಿ ಮಾತಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಸಾಧ್ಯವಿದೆ. (ಜ್ಞಾನೋಕ್ತಿ 12:18) ನಾವು ಅಪರಿಪೂರ್ಣರಾಗಿರುವುದರಿಂದ, ಕೆಲವೊಮ್ಮೆ ನಮ್ಮ ಮಾತುಗಳಿಂದ ನಾವೆಲ್ಲರೂ ತಪ್ಪನ್ನು ಮಾಡುತ್ತೇವೆ. (ಜ್ಞಾನೋಕ್ತಿ 10:19; ಯಾಕೋಬ 3:8) ಅಪೊಸ್ತಲ ಪೌಲನ ದಿನದಲ್ಲಿ, ತಮ್ಮ ನಾಲಿಗೆಗೆ ಕಡಿವಾಣಹಾಕಲು ತಪ್ಪಿಹೋದ ಮತ್ತು ವಾಗ್ವಾದಮಾಡುತ್ತಾ ಕಲಹವನ್ನೆಬ್ಬಿಸಿದ ಕೆಲವು ಜನರು ಸಭೆಯಲ್ಲಿದ್ದರು. (1 ತಿಮೊಥೆಯ 2:8) ತಮ್ಮ ಸ್ವಂತ ಅಭಿಪ್ರಾಯಗಳಿಗೆ ಹೆಚ್ಚು ಮಹತ್ತ್ವವನ್ನು ಕೊಟ್ಟ ಮತ್ತು ಪೌಲನ ಅಧಿಕಾರಕ್ಕೆ ಸವಾಲನ್ನೆಸೆಯುವಷ್ಟರ ಮಟ್ಟಿಗೂ ಮುಂದೆ ಹೋದ ಜನರು ಸಹ ಇದ್ದರು. (2 ಕೊರಿಂಥ 10:10-12) ಅಂತಹ ಆತ್ಮವು ಅನಾವಶ್ಯಕವಾದ ಕಲಹಗಳನ್ನು ಎಬ್ಬಿಸಿತು.

12 ಕೆಲವೊಮ್ಮೆ ಇಂತಹ ಭಿನ್ನಾಭಿಪ್ರಾಯಗಳು, “ಕೆಲಸಕ್ಕೆ ಬಾರದ ವಿಷಯದ ಕುರಿತು ಹಿಂಸಾತ್ಮಕ ಜಗಳಗಳಲ್ಲಿ” ಕೊನೆಗೊಳ್ಳುತ್ತಿದ್ದವು. ಮತ್ತು ಇದು ಸಭೆಯ ಶಾಂತಿಯನ್ನು ಕದಡಿಹಾಕುತ್ತಿದ್ದವು. (1 ತಿಮೊಥೆಯ 6:5, NW; ಗಲಾತ್ಯ 5:15) ಈ ರೀತಿಯ ವಾಗ್ವಾದಗಳನ್ನು ಎಬ್ಬಿಸಿದವರ ಕುರಿತು ಪೌಲನು ಬರೆದುದು: “ಯಾವನಾದರೂ ಬೇರೆ ವಿಧವಾದ ಉಪದೇಶವನ್ನು ಮಾಡಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಸ್ವಸ್ಥವಾದ ಮಾತುಗಳಿಗೂ ಭಕ್ತ್ಯನುಸಾರವಾದ ಉಪದೇಶಕ್ಕೂ ಸಮ್ಮತಿಸದೆ ಹೋದರೆ ಅವನು ಒಂದನ್ನೂ ತಿಳಿಯದೆ ಕುತರ್ಕ ವಾಗ್ವಾದಗಳನ್ನು ಮಾಡುವ ಭ್ರಾಂತಿಯಲ್ಲಿದ್ದು ಮದದಿಂದ ಕಣ್ಣುಗಾಣದವನಾಗಿದ್ದಾನೆ. ಇವುಗಳಿಂದ ಹೊಟ್ಟೇಕಿಚ್ಚು ಜಗಳ ದೂಷಣೆ ದುಸ್ಸಂಶಯ ಇವುಗಳು ಉಂಟಾಗುತ್ತವೆ.”—1 ತಿಮೊಥೆಯ 6:3, 4.

13. ಪ್ರಥಮ ಶತಮಾನದಲ್ಲಿದ್ದ ಅಧಿಕಾಂಶ ಕ್ರೈಸ್ತರ ನಡವಳಿಕೆಯು ಹೇಗಿತ್ತು?

13 ಸಂತೋಷಕರವಾದ ವಿಷಯವೇನೆಂದರೆ, ಅಪೊಸ್ತಲರ ಸಮಯಗಳಲ್ಲಿ ಅಧಿಕಾಂಶ ಕ್ರೈಸ್ತರು ನಂಬಿಗಸ್ತರಾಗಿದ್ದುಕೊಂಡು, ದೇವರ ರಾಜ್ಯದ ಸುವಾರ್ತೆಯನ್ನು ಘೋಷಿಸುವ ಕೆಲಸದ ಮೇಲೆ ಗಮನವನ್ನು ಕೇಂದ್ರೀಕರಿಸಿದರು. “ಸಂಕಟದಲ್ಲಿ ಬಿದ್ದ ದಿಕ್ಕಿಲ್ಲದವರನ್ನೂ ವಿಧವೆಯರನ್ನೂ” ನೋಡಿಕೊಳ್ಳುವುದರಲ್ಲಿ ಅವರು ಕಾರ್ಯಮಗ್ನರಾಗಿದ್ದು, ನಿಷ್ಪ್ರಯೋಜಕ ವಾಗ್ವಾದಗಳಲ್ಲಿ ಸುಮ್ಮನೆ ಸಮಯವನ್ನು ಹಾಳುಮಾಡದೆ ‘ಪ್ರಪಂಚದ ದೋಷವು ಹತ್ತದಂತೆ ನೋಡಿಕೊಂಡರು.’ (ಯಾಕೋಬ 1:27) ತಮ್ಮ ಆತ್ಮಿಕತೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಅವರು ಕ್ರೈಸ್ತ ಸಭೆಯೊಳಗೆ ಕೂಡ “ದುಸ್ಸಹವಾಸ”ದಿಂದ ದೂರವಿದ್ದರು.—1 ಕೊರಿಂಥ 15:33; 2 ತಿಮೊಥೆಯ 2:20, 21.

14. ನಾವು ಜಾಗರೂಕರಾಗಿರದ ಪಕ್ಷದಲ್ಲಿ, ಸಾಮಾನ್ಯ ವಿಚಾರವಿನಿಮಯಗಳು ಹೇಗೆ ಹಾನಿಕರ ವಾಗ್ವಾದಗಳಾಗಿ ಪರಿಣಮಿಸಸಾಧ್ಯವಿದೆ?

14 ತದ್ರೀತಿಯಲ್ಲಿ, ಪ್ಯಾರಗ್ರಾಫ್‌ 11ರಲ್ಲಿ ಬಣ್ಣಿಸಲ್ಪಟ್ಟಿರುವ ಪರಿಸ್ಥಿತಿಗಳು ಇಂದು ಯೆಹೋವನ ಸಾಕ್ಷಿಗಳ ಸಭೆಗಳಲ್ಲಿ ಇರಲಿಕ್ಕಿಲ್ಲ. ಆದರೂ, ಅಂತಹ ನಿಷ್ಪ್ರಯೋಜಕ ವಾಗ್ವಾದಗಳು ಉಂಟಾಗುವ ಸಾಧ್ಯತೆಯಿದೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು. ಬೈಬಲ್‌ ವೃತ್ತಾಂತಗಳ ಕುರಿತು ಚರ್ಚಿಸುವುದು ಅಥವಾ ವಾಗ್ದತ್ತ ಹೊಸ ಲೋಕದ ಕುರಿತಾಗಿ ಇನ್ನೂ ಪ್ರಕಟಗೊಳ್ಳದ ಅಂಶಗಳ ಬಗ್ಗೆ ಕೌತುಕಪಡುವುದು ಸಹಜವೆಂಬುದು ಒಪ್ಪತಕ್ಕದ್ದೇ. ಮತ್ತು ಉಡುಪು, ಕೇಶಾಲಂಕಾರ ಅಥವಾ ಮನೋರಂಜನೆಯ ಆಯ್ಕೆಯಂತಹ ವೈಯಕ್ತಿಕ ವಿಷಯಗಳ ಕುರಿತು ವಿಚಾರವಿನಿಮಯ ಮಾಡಿಕೊಳ್ಳುವುದರಲ್ಲಿ ತಪ್ಪೇನಿಲ್ಲ. ಆದರೆ, ನಾವು ನಮ್ಮ ವಿಚಾರಗಳನ್ನು ಉದ್ಧಟತನದಿಂದ ಹೇರುವುದಾದರೆ ಮತ್ತು ಅವುಗಳನ್ನು ಬೇರೆಯವರು ಒಪ್ಪದಿದ್ದಾಗ ಅಸಮಾಧಾನಗೊಳ್ಳುವುದಾದರೆ, ಚಿಕ್ಕಪುಟ್ಟ ವಿಷಯಗಳಿಗೂ ಸಭೆಯು ಇಬ್ಭಾಗವಾಗಬಹುದು. ಯಾವುದು ಹಾನಿರಹಿತವಾದ ಚಿಕ್ಕ ಮಾತಾಗಿ ಪ್ರಾರಂಭವಾಗುತ್ತದೋ ಅದು ಹಾನಿಕರವಾದ ವಿಷಯವಾಗಿ ಅಂತ್ಯಗೊಳ್ಳಬಹುದು.

ನಮ್ಮ ವಶಕ್ಕೆ ಕೊಡಲ್ಪಟ್ಟಿರುವುದನ್ನು ಕಾಪಾಡುವುದು

15. ‘ದೆವ್ವಗಳ ಬೋಧನೆಗಳು’ ಎಷ್ಟರ ಮಟ್ಟಿಗೆ ನಮ್ಮ ಆತ್ಮಿಕತೆಗೆ ಹಾನಿಯನ್ನು ತರಬಹುದು ಮತ್ತು ಶಾಸ್ತ್ರವಚನಗಳಲ್ಲಿ ಯಾವ ಸಲಹೆಯು ನೀಡಲ್ಪಟ್ಟಿದೆ?

15 ಅಪೊಸ್ತಲ ಪೌಲನು ಎಚ್ಚರಿಕೆಯನ್ನು ನೀಡುವುದು: “ಮುಂದಣ ದಿನಗಳಲ್ಲಿ ಕೆಲವರು ವಂಚಿಸುವ ಆತ್ಮಗಳ ನುಡಿಗಳಿಗೂ ದೆವ್ವಗಳ ಬೋಧನೆಗಳಿಗೂ ಲಕ್ಷ್ಯಕೊಟ್ಟು ಕ್ರಿಸ್ತನಂಬಿಕೆಯಿಂದ ಭ್ರಷ್ಟರಾಗುವರೆಂದು ದೇವರಾತ್ಮನು ಸ್ಪಷ್ಟವಾಗಿ ಹೇಳುತ್ತಾನೆ.” (1 ತಿಮೊಥೆಯ 4:1) ಹೌದು, ಹಾನಿಕರ ವಿಚಾರಗಳು ನಿಜವಾಗಿಯೂ ಬೆದರಿಕೆಯನ್ನೊಡ್ಡುತ್ತವೆ. ಆದುದರಿಂದಲೇ, ಪೌಲನು ತನ್ನ ಪ್ರಿಯ ಮಿತ್ರನಾದ ತಿಮೊಥೆಯನನ್ನು ಭಿನ್ನಹಿಸಿದ್ದು: “ಎಲೈ ತಿಮೊಥೆಯನೇ, ಜ್ಞಾನೋಪದೇಶವೆಂದು ಸುಳ್ಳಾಗಿ ಹೇಳಿಕೊಳ್ಳುವ ಬೋಧನೆಗೆ ಸಂಬಂಧಪಟ್ಟ ಪ್ರಾಪಂಚಿಕವಾದ ಆ ಹರಟೆಮಾತುಗಳಿಗೂ ವಿವಾದಗಳಿಗೂ ನೀನು ದೂರವಾಗಿದ್ದು ನಿನ್ನ ವಶಕ್ಕೆ ಕೊಟ್ಟಿರುವದನ್ನೇ ಕಾಪಾಡು. ಕೆಲವರು ಆ ಸುಳ್ಳಾದ ಜ್ಞಾನವನ್ನು ಅವಲಂಬಿಸಿ ಕ್ರಿಸ್ತನಂಬಿಕೆಯಿಂದ ಭ್ರಷ್ಟರಾದರು.”—1 ತಿಮೊಥೆಯ 6:20, 21.

16, 17. ದೇವರು ನಮ್ಮ ವಶಕ್ಕೆ ಏನನ್ನು ಕೊಟ್ಟಿದ್ದಾನೆ, ಮತ್ತು ಅದನ್ನು ನಾವು ಹೇಗೆ ಕಾಪಾಡಬೇಕು?

16 ಪ್ರೀತಿಯಿಂದ ನೀಡಲ್ಪಟ್ಟಿರುವ ಈ ಎಚ್ಚರಿಕೆಯಿಂದ ಇಂದು ನಾವು ಯಾವ ರೀತಿಯಲ್ಲಿ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ? ಗಮನಕೊಡಲು ಮತ್ತು ಸಂರಕ್ಷಿಸಲಿಕ್ಕಾಗಿ ಅಮೂಲ್ಯವಾದ ಯಾವುದೋ ಒಂದು ವಿಷಯವು ತಿಮೊಥೆಯನ ವಶಕ್ಕೆ ಕೊಡಲ್ಪಟ್ಟಿತು. ಅದೇನಾಗಿತ್ತು? ಪೌಲನು ವಿವರಿಸುವುದು: “ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯೂ ಪ್ರೀತಿಯೂ ಉಳ್ಳವನಾಗಿ ನನ್ನಿಂದ ಕೇಳಿದ ಸ್ವಸ್ಥಬೋಧನಾವಾಕ್ಯಗಳನ್ನು ಮಾದರಿಮಾಡಿಕೊಂಡು ಅನುಸರಿಸು. ನಿನ್ನ ವಶಕ್ಕೆ ಕೊಡಲ್ಪಟ್ಟಿರುವದನ್ನು ಶ್ರೇಷ್ಠವೆಂದು ತಿಳಿದು ನಮ್ಮಲ್ಲಿ ವಾಸವಾಗಿರುವ ಪವಿತ್ರಾತ್ಮನ ಮೂಲಕ ಕಾಪಾಡು.” (2 ತಿಮೊಥೆಯ 1:13, 14) ಹೌದು, ತಿಮೊಥೆಯನ ವಶಕ್ಕೆ ಕೊಡಲ್ಪಟ್ಟದ್ದರಲ್ಲಿ ‘ಸ್ವಸ್ಥವಾದ ಮಾತುಗಳು,’ ‘ಭಕ್ತ್ಯನುಸಾರವಾದ ಉಪದೇಶವು’ ಸೇರಿದ್ದವು. (1 ತಿಮೊಥೆಯ 6:3) ಈ ಮಾತುಗಳಿಗೆ ಹೊಂದಿಕೆಯಲ್ಲಿ, ಇಂದು ಕ್ರೈಸ್ತರು ತಮ್ಮ ನಂಬಿಕೆ ಹಾಗೂ ತಮ್ಮ ವಶಕ್ಕೆ ಕೊಡಲ್ಪಟ್ಟಿರುವ ಸತ್ಯವನ್ನು ಸಂರಕ್ಷಿಸಲು ದೃಢನಿಶ್ಚಯಮಾಡಿದ್ದಾರೆ.

17 ನಮ್ಮ ವಶಕ್ಕೆ ಕೊಡಲ್ಪಟ್ಟಿರುವುದನ್ನು ಕಾಪಾಡುವುದು, ಒಳ್ಳೆಯ ಬೈಬಲ್‌ ಅಧ್ಯಯನದ ರೂಢಿಗಳು ಮತ್ತು ಪ್ರಾರ್ಥನೆಯಲ್ಲಿ ಪಟ್ಟುಹಿಡಿಯುವುದರಂತಹ ವಿಷಯಗಳನ್ನು ಬೆಳೆಸಿಕೊಳ್ಳುವುದು ಹಾಗೂ ಅದೇ ಸಮಯದಲ್ಲಿ ‘ಎಲ್ಲರಿಗೆ . . . ಮುಖ್ಯವಾಗಿ ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರಿಗೆ’ “ಒಳ್ಳೇದನ್ನು” ಮಾಡುತ್ತಾ ಇರುವುದನ್ನು ಒಳಗೊಳ್ಳುತ್ತದೆ. (ಗಲಾತ್ಯ 6:10; ರೋಮಾಪುರ 12:11-17) ಪೌಲನು ಇನ್ನೂ ಬುದ್ಧಿವಾದವನ್ನು ನೀಡುವುದು: “ನೀತಿ ಭಕ್ತಿ ನಂಬಿಕೆ ಪ್ರೀತಿ ಸ್ಥಿರಚಿತ್ತ ಸಾತ್ವಿಕತ್ವ ಇವುಗಳನ್ನು ಸಂಪಾದಿಸುವದಕ್ಕೆ ಪ್ರಯಾಸಪಡು. ಕ್ರಿಸ್ತನಂಬಿಕೆಯುಳ್ಳವರು ಮಾಡತಕ್ಕ ಶ್ರೇಷ್ಠ ಹೋರಾಟವನ್ನು ಮಾಡು, ನಿತ್ಯಜೀವವನ್ನು ಹಿಡಿದುಕೋ; ಅದಕ್ಕಾಗಿ ದೇವರು ನಿನ್ನನ್ನು ಕರೆದನು, ಮತ್ತು ನೀನು ಅನೇಕಸಾಕ್ಷಿಗಳ ಮುಂದೆ ಒಳ್ಳೇ ಪ್ರತಿಜ್ಞೆಯನ್ನು ಮಾಡಿದಿಯಲ್ಲಾ.” (1 ತಿಮೊಥೆಯ 6:11, 12) ಪೌಲನು ಉಪಯೋಗಿಸಿದ, “ಶ್ರೇಷ್ಠ ಹೋರಾಟವನ್ನು ಮಾಡು” ಮತ್ತು “ಹಿಡಿದುಕೋ” ಎಂಬಂತಹ ವಾಕ್ಸರಣಿಗಳು ಆತ್ಮಿಕ ರೀತಿಯಲ್ಲಿ ಹಾನಿಯನ್ನು ತರುವ ಪ್ರಭಾವಗಳನ್ನು ನಾವು ಸಕ್ರಿಯವಾಗಿ ಹಾಗೂ ದೃಢಸಂಕಲ್ಪದಿಂದ ವಿರೋಧಿಸಬೇಕು ಎಂಬುದನ್ನು ಸ್ಪಷ್ಟಪಡಿಸುತ್ತವೆ.

ವಿವೇಚನಾಶಕ್ತಿ ಆವಶ್ಯಕ

18. ಲೌಕಿಕ ಮಾಹಿತಿಯನ್ನು ಪಡೆದುಕೊಳ್ಳುವುದರಲ್ಲಿ ನಾವು ಕ್ರೈಸ್ತ ಸಮಚಿತ್ತವನ್ನು ಹೇಗೆ ತೋರಿಸಸಾಧ್ಯವಿದೆ?

18 ನಂಬಿಕೆಯ ಶ್ರೇಷ್ಠ ಹೋರಾಟವನ್ನು ಮಾಡುವದಕ್ಕೆ ವಿವೇಚನೆಯು ಆವಶ್ಯಕ ಎಂಬುದು ಖಂಡಿತ. (ಜ್ಞಾನೋಕ್ತಿ 2:11; ಫಿಲಿಪ್ಪಿ 1:9) ಉದಾಹರಣೆಗೆ, ಯಾವುದೇ ರೀತಿಯ ಲೌಕಿಕ ಮಾಹಿತಿಯಲ್ಲಿ ನಂಬಿಕೆಯನ್ನಿಡದೇ ಹೋಗುವುದು ಅಸಮಂಜಸವಾದದ್ದಾಗಿರುವುದು. (ಫಿಲಿಪ್ಪಿ 4:5; ಯಾಕೋಬ 3:17) ಎಲ್ಲ ಮಾನವ ವಿಚಾರಗಳು ದೇವರ ವಾಕ್ಯಕ್ಕೆ ವಿರುದ್ಧವಾಗಿರುವುದಿಲ್ಲ. ಅಸ್ವಸ್ಥರು ಒಬ್ಬ ಅರ್ಹ ವೈದ್ಯನ ಬಳಿ ಹೋಗಬೇಕು ಎಂದು ಯೇಸು ಸೂಚಿಸಿದನು. ಇದು ಒಂದು ಐಹಿಕ ಕಸುಬು ಆಗಿತ್ತು. (ಲೂಕ 5:31) ಯೇಸುವಿನ ದಿನದಲ್ಲಿ ಸಿಗುತ್ತಿದ್ದ ವೈದ್ಯಕೀಯ ಚಿಕಿತ್ಸೆಯು ಹಳೆಯ ಕಾಲದ್ದಾಗಿದ್ದರೂ, ವೈದ್ಯನೊಬ್ಬನ ಸಹಾಯದಿಂದ ಒಂದಿಷ್ಟು ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿತ್ತು ಎಂಬುದನ್ನು ಅವನು ಅಂಗೀಕರಿಸಿದನು. ಲೌಕಿಕ ಮಾಹಿತಿಯ ವಿಷಯದಲ್ಲಿ ಕ್ರೈಸ್ತರು ಇಂದು ಸಮಚಿತ್ತವನ್ನು ತೋರಿಸುತ್ತಾರಾದರೂ, ತಮಗೆ ಆತ್ಮಿಕವಾಗಿ ಹಾನಿಯನ್ನು ಉಂಟುಮಾಡಬಹುದಾದ ಯಾವುದೇ ವಿಷಯವನ್ನು ಅವರು ಪ್ರತಿರೋಧಿಸುತ್ತಾರೆ.

19, 20. (ಎ) ಅವಿವೇಕತನದಿಂದ ಮಾತಾಡುವವರಿಗೆ ಸಹಾಯವನ್ನು ನೀಡುವಾಗ ಹಿರಿಯರು ವಿವೇಚನೆಯಿಂದ ಹೇಗೆ ನಡೆದುಕೊಳ್ಳುತ್ತಾರೆ? (ಬಿ) ಸುಳ್ಳು ಬೋಧನೆಗಳನ್ನು ಪ್ರವರ್ಧಿಸುತ್ತಾ ಹೋಗಲು ಇಷ್ಟಪಡುವವರೊಂದಿಗೆ ಸಭೆಯು ಯಾವ ರೀತಿ ವ್ಯವಹರಿಸುತ್ತದೆ?

19 ಅವಿವೇಕತನದಿಂದ ಮಾತಾಡುವವರಿಗೆ ಸಹಾಯವನ್ನು ನೀಡುವಾಗಲೂ ಹಿರಿಯರು ವಿವೇಚನೆಯನ್ನು ಉಪಯೋಗಿಸುವುದು ಪ್ರಾಮುಖ್ಯವಾಗಿದೆ. (2 ತಿಮೊಥೆಯ 2:7) ಕೆಲವೊಮ್ಮೆ, ಸಭೆಯ ಸದಸ್ಯರು ಕೆಲಸಕ್ಕೆ ಬಾರದ ಚರ್ಚೆಗಳಲ್ಲಿ ಮತ್ತು ಊಹಾಪೋಹಗಳನ್ನು ಒಳಗೊಂಡ ವಾಗ್ವಾದಗಳಲ್ಲಿ ಸಿಕ್ಕಿಕೊಳ್ಳಬಹುದು. ಸಭೆಯ ಐಕ್ಯವನ್ನು ಕಾಪಾಡುವುದಕ್ಕಾಗಿ, ಹಿರಿಯರು ಅಂತಹ ಸಮಸ್ಯೆಗಳಿಗೆ ಬೇಗನೆ ಗಮನಕೊಡತಕ್ಕದ್ದು. ಅದೇ ಸಮಯದಲ್ಲಿ, ತಮ್ಮ ಸಹೋದರರ ಮೇಲೆ ತಪ್ಪಾದ ಹೇತುಗಳನ್ನು ಹೊರಿಸುವುದರಿಂದ ದೂರವಿರುತ್ತಾರೆ ಮತ್ತು ಅವರನ್ನು ಧರ್ಮಭ್ರಷ್ಟರೋಪಾದಿ ನೋಡುವುದರಲ್ಲಿ ದುಡುಕುವುದಿಲ್ಲ.

20 ಸಹಾಯ ನೀಡುವುದರಲ್ಲಿ ತೋರಿಸಲ್ಪಡಬೇಕಾದ ಭಾವವನ್ನು ಪೌಲನು ವರ್ಣಿಸಿದನು. ಅವನು ಹೇಳಿದ್ದು: “ಸಹೋದರರೇ, ನಿಮ್ಮಲ್ಲಿ ಯಾರಾದರೂ ಯಾವದೋ ಒಂದು ದೋಷದಲ್ಲಿ ಸಿಕ್ಕಿದರೆ ಅಂಥವನನ್ನು ಆತ್ಮನಿಂದ ನಡಿಸಿಕೊಳ್ಳುವ ನೀವು ಶಾಂತಭಾವದಿಂದ ತಿದ್ದಿ ಸರಿಮಾಡಿರಿ.” (ಗಲಾತ್ಯ 6:1) ಸಂದೇಹಗಳೊಂದಿಗೆ ಹೋರಾಡುತ್ತಿರುವ ಕ್ರೈಸ್ತರ ಕುರಿತು ನಿರ್ದಿಷ್ಟವಾಗಿ ಮಾತಾಡುತ್ತಾ, ಯೂದನು ಬರೆದುದು: “ಸಂದೇಹಪಡುವ ಕೆಲವರಿಗೆ ಕರುಣೆಯನ್ನು ತೋರಿಸಿರಿ; ಅವರನ್ನು ಬೆಂಕಿಯ ಬಾಯೊಳಗಿಂದ ಎಳಕೊಂಡು ರಕ್ಷಿಸಿರಿ.” (ಯೂದ 22, 23) ಪದೇಪದೇ ಬುದ್ಧಿವಾದಗಳನ್ನು ಕೊಟ್ಟ ನಂತರವೂ ಒಬ್ಬನು ಸುಳ್ಳು ಬೋಧನೆಗಳನ್ನು ಪ್ರವರ್ಧಿಸುತ್ತಾ ಹೋಗುವುದಾದರೆ, ಆಗ ಸಭೆಯನ್ನು ಕಾಪಾಡಲಿಕ್ಕಾಗಿ ಹಿರಿಯರು ಖಂಡಿತವಾಗಿಯೂ ನಿರ್ಣಾಯಕ ಕ್ರಮವನ್ನು ತೆಗೆದುಕೊಳ್ಳುವ ಅಗತ್ಯವಿದೆ.—1 ತಿಮೊಥೆಯ 1:19ಬಿ, 20; ತೀತ 3:10, 11.

ಸ್ತುತ್ಯಾರ್ಹ ವಿಷಯಗಳಿಂದ ನಮ್ಮ ಮನಸ್ಸುಗಳನ್ನು ತುಂಬಿಸುವುದು

21, 22. ಯಾವುದರ ಕುರಿತು ನಾವು ಎಚ್ಚರಿಕೆಯುಳ್ಳವರಾಗಿರಬೇಕು, ಮತ್ತು ಯಾವುದರಿಂದ ನಮ್ಮ ಮನಸ್ಸುಗಳನ್ನು ತುಂಬಿಸಬೇಕು?

21 “ಕೊಳಕು ಹುಣ್ಣಿನಂತೆ ಹರಡಿಕೊಳ್ಳುವ” ಹಾನಿಕರ ಮಾತುಗಳಿಂದ ಕ್ರೈಸ್ತ ಸಭೆಯು ದೂರವಿರುತ್ತದೆ. (2 ತಿಮೊಥೆಯ 2:16, 17; ತೀತ 3:9) ಇಂತಹ ಮಾತುಗಳು, ತಪ್ಪುದಾರಿಗೆ ನಡೆಸುವ ಲೌಕಿಕ “ವಿವೇಕ,” ಧರ್ಮಭ್ರಷ್ಟರ ಪ್ರಚಾರ ಅಥವಾ ಸಭೆಯೊಳಗೆ ನಡೆಯುತ್ತಿರುವ ದುಡುಕಿನ ಮಾತುಕತೆಯನ್ನು ಪ್ರತಿಬಿಂಬಿಸುತ್ತಿರುವಲ್ಲಿ ಇವು ಹಾನಿಕರವಾಗಿವೆ. ಹೊಸ ಸಂಗತಿಗಳನ್ನು ಕಲಿತುಕೊಳ್ಳುವುದಕ್ಕಿರುವ ಒಳ್ಳೆಯ ಅಭಿಲಾಷೆಯು ಪ್ರಯೋಜನಕಾರಿಯಾಗಿರಬಲ್ಲದು, ಆದರೆ ಅದೇ ಸಮಯದಲ್ಲಿ ಹುಚ್ಚು ಕುತೂಹಲವು ಹಾನಿಕರ ವಿಚಾರಗಳಿಗೆ ನಮ್ಮನ್ನು ಒಡ್ಡಬಲ್ಲದು. ನಾವು ಸೈತಾನನ ಕುತಂತ್ರಗಳನ್ನು ಅರಿಯದವರಾಗಿರುವುದಿಲ್ಲ. (2 ಕೊರಿಂಥ 2:11) ನಾವು ದೇವರಿಗೆ ಸಲ್ಲಿಸುವ ಸೇವೆಯಲ್ಲಿ ನಿಧಾನರಾಗಬೇಕೆಂದು ಅವನು ಬಯಸುತ್ತಾನೆ. ಮತ್ತು ಅದಕ್ಕೋಸ್ಕರ ನಮ್ಮನ್ನು ಅಪಕರ್ಷಿಸಲು ಅವನು ಶತಪ್ರಯತ್ನಗಳನ್ನು ಮಾಡುತ್ತಿದ್ದಾನೆಂಬುದು ನಮಗೆ ತಿಳಿದಿದೆ.

22 ಒಳ್ಳೆಯ ಸೇವಕರೋಪಾದಿ, ನಾವು ದೈವಿಕ ಬೋಧನೆಯನ್ನು ದೃಢವಾಗಿ ಎತ್ತಿಹಿಡಿಯೋಣ. (1 ತಿಮೊಥೆಯ 4:6) ನಾವು ತಿಳಿದುಕೊಳ್ಳಲು ಬಯಸುವ ಮಾಹಿತಿಯನ್ನು ಎಚ್ಚರಿಕೆಯಿಂದ ಆಯ್ಕೆ ಮಾಡುವ ಮೂಲಕ ನಾವು ನಮ್ಮ ಸಮಯವನ್ನು ವಿವೇಕಯುತವಾಗಿ ಉಪಯೋಗಿಸುವಂತಾಗಲಿ. ಆಗ ನಾವು ಸೈತಾನನಿಂದ ಪ್ರಚೋದಿಸಲ್ಪಟ್ಟ ಪ್ರಚಾರದಿಂದ ಸುಲಭವಾಗಿ ಕದಲದೇ ಇರುವೆವು. ಹೌದು, “ಯಾವಾವದು ಸತ್ಯವೂ ಮಾನ್ಯವೂ ನ್ಯಾಯವೂ ಶುದ್ಧವೂ ಪ್ರೀತಿಕರವೂ ಮನೋಹರವೂ ಆಗಿದೆಯೋ, ಯಾವದು ಸದ್ಗುಣವಾಗಿದೆಯೋ, ಯಾವದು ಕೀರ್ತಿಗೆ ಯೋಗ್ಯವೋ, ಅವೆಲ್ಲವುಗಳನ್ನೂ” ನಾವು ಪರಿಗಣಿಸುತ್ತಾ ಇರೋಣ. ನಾವು ನಮ್ಮ ಹೃದಮನಗಳನ್ನು ಇಂತಹ ವಿಷಯಗಳಿಂದ ತುಂಬಿಸುವುದಾದರೆ ಶಾಂತಿದಾಯಕನಾದ ದೇವರು ನಮ್ಮೊಂದಿಗಿರುವನು.—ಫಿಲಿಪ್ಪಿ 4:8, 9.

ನಾವೇನನ್ನು ಕಲಿತೆವು?

• ಲೌಕಿಕ ವಿವೇಕವು ನಮ್ಮ ಆತ್ಮಿಕತೆಗೆ ಯಾವ ರೀತಿಯಲ್ಲಿ ಬೆದರಿಕೆಯನ್ನೊಡ್ಡಬಹುದು?

• ಹಾನಿಕರ ಧರ್ಮಭ್ರಷ್ಟ ಮಾಹಿತಿಯಿಂದ ನಮ್ಮನ್ನು ಕಾಪಾಡಿಕೊಳ್ಳಲು ನಾವು ಏನು ಮಾಡಸಾಧ್ಯವಿದೆ?

• ಸಭೆಯೊಳಗೆ ಯಾವ ರೀತಿಯ ಮಾತುಗಳನ್ನು ಆಡುವುದರಿಂದ ದೂರವಿರತಕ್ಕದ್ದು?

• ಇಂದು ಲಭ್ಯವಿರುವ ಅತಿ ಹೇರಳವಾದ ಮಾಹಿತಿಯೊಂದಿಗೆ ವ್ಯವಹರಿಸುವಾಗ ಕ್ರೈಸ್ತ ಸಮಚಿತ್ತವು ಹೇಗೆ ತೋರಿಸಲ್ಪಡುತ್ತದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 9ರಲ್ಲಿರುವ ಚಿತ್ರ]

ಅನೇಕ ಜನಪ್ರಿಯ ಪತ್ರಿಕೆಗಳು ಹಾಗೂ ಪುಸ್ತಕಗಳು ನಮ್ಮ ಕ್ರೈಸ್ತ ಮೌಲ್ಯಗಳಿಗೆ ವಿರುದ್ಧವಾಗಿವೆ

[ಪುಟ 10ರಲ್ಲಿರುವ ಚಿತ್ರ]

ವಿಚಾರಗಳನ್ನು ಉದ್ಧಟತನದಿಂದ ಹೇರದೆ ಕ್ರೈಸ್ತರು ವಿಚಾರವಿನಿಮಯ ಮಾಡಿಕೊಳ್ಳಸಾಧ್ಯವಿದೆ