ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪವಿತ್ರಾತ್ಮದ ಕತ್ತಿಯಿಂದ ಭ್ರಷ್ಟಾಚಾರದ ವಿರುದ್ಧ ಹೋರಾಡುವುದು

ಪವಿತ್ರಾತ್ಮದ ಕತ್ತಿಯಿಂದ ಭ್ರಷ್ಟಾಚಾರದ ವಿರುದ್ಧ ಹೋರಾಡುವುದು

ಪವಿತ್ರಾತ್ಮದ ಕತ್ತಿಯಿಂದ ಭ್ರಷ್ಟಾಚಾರದ ವಿರುದ್ಧ ಹೋರಾಡುವುದು

“ನಿಜ ನೀತಿ ಮತ್ತು ನಿಷ್ಠೆಯಲ್ಲಿ ದೇವರ ಚಿತ್ತಾನುಸಾರವಾಗಿ ಸೃಷ್ಟಿಸಲ್ಪಟ್ಟ ನೂತನ ವ್ಯಕ್ತಿತ್ವವನ್ನು ಧರಿಸಿಕೊಳ್ಳಿರಿ.”—ಎಫೆಸ 4:24, NW.

ರೋಮನ್‌ ಸಾಮ್ರಾಜ್ಯವು ತನ್ನ ಸಾಧನೆಯ ಉನ್ನತ ಶಿಖರದಲ್ಲಿದ್ದಾಗ, ಲೋಕವು ಹಿಂದೆಂದೂ ಕಂಡಿರದಂತಹ ಅತಿ ಶ್ರೇಷ್ಠ ಮಾನವ ಆಡಳಿತವಾಗಿತ್ತು. ರೋಮನ್‌ ಶಾಸನವು ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ, ಈಗಲೂ ಅನೇಕ ದೇಶಗಳು ತಮ್ಮ ಕಾನೂನುಗಳನ್ನು ಮಾಡುವಾಗ ಅದನ್ನೇ ಆಧಾರವಾಗಿ ಉಪಯೋಗಿಸುತ್ತವೆ. ರೋಮ್‌ ಇಷ್ಟೆಲ್ಲಾ ಸಾಧನೆಗಳನ್ನು ಮಾಡಿತ್ತಾದರೂ, ಕಪಟ ಶತ್ರುವಾಗಿದ್ದ ಭ್ರಷ್ಟಾಚಾರದ ಮೇಲೆ ಮಾತ್ರ ಜಯಗಳಿಸಲು ಅವಳ ಸೈನ್ಯಗಳಿಗೆ ಸಾಧ್ಯವಾಗಲಿಲ್ಲ. ಕೊನೆಗೂ, ರೋಮ್‌ ತ್ವರಿತವಾಗಿ ಪತನಗೊಳ್ಳಲು ಭ್ರಷ್ಟಾಚಾರವೇ ಮುಖ್ಯ ಕಾರಣವಾಯಿತು.

ಭ್ರಷ್ಟ ರೋಮನ್‌ ಅಧಿಕಾರಿಗಳ ಕೆಳಗೆ ಕಷ್ಟವನ್ನು ಅನುಭವಿಸಿದವರಲ್ಲಿ ಅಪೊಸ್ತಲ ಪೌಲನು ಒಬ್ಬನಾಗಿದ್ದನು. ಅವನನ್ನು ವಿಚಾರಣೆಮಾಡಿದ ರೋಮನ್‌ ಅಧಿಪತಿಯಾದ ಫೆಲಿಕ್ಸನಿಗೆ, ಪೌಲನು ನಿರಪರಾಧಿಯೆಂಬುದು ಸ್ಪಷ್ಟವಾಗಿ ತಿಳಿದಿತ್ತು. ಆದರೂ ಅವನ ದಿನಗಳ ಅತಿ ಭ್ರಷ್ಟ ಅಧಿಪತಿಗಳಲ್ಲಿ ಒಬ್ಬನಾಗಿದ್ದ ಈ ಫೆಲಿಕ್ಸನು ಪೌಲನ ವಿಚಾರಣೆಯನ್ನು ಮುಂದೂಡುತ್ತಾ ಹೋದನು, ಯಾಕೆಂದರೆ ಪೌಲನು ತನ್ನನ್ನು ಸೆರೆಮನೆಯಿಂದ ಬಿಡಿಸಿಕೊಳ್ಳಲು ಲಂಚವನ್ನು ಕೊಡಬಹುದೆಂದು ಅವನು ನಿರೀಕ್ಷಿಸಿದನು.—ಅ. ಕೃತ್ಯಗಳು 24:22-26.

ಫೆಲಿಕ್ಸನಿಗೆ ಲಂಚಕೊಡುವ ಬದಲು, ಪೌಲನು ‘ಸುನೀತಿ ಮತ್ತು ದಮೆ’ಯ ಕುರಿತು ಅವನೊಂದಿಗೆ ಮುಚ್ಚುಮರೆಯಿಲ್ಲದೆ ಮಾತಾಡಿದನು. ಫೆಲಿಕ್ಸನು ತನ್ನ ದುರ್ಮಾರ್ಗವನ್ನು ಬಿಡಲಿಲ್ಲ ಮತ್ತು ಪೌಲನು ಲಂಚಕೊಟ್ಟು ಕಾನೂನಿನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಬದಲು ಸೆರೆಮನೆಯಲ್ಲಿಯೇ ಉಳಿದನು. ಅವನು ಸತ್ಯ ಮತ್ತು ಪ್ರಾಮಾಣಿಕತೆಯ ಸಂದೇಶವನ್ನು ಸಾರಿದನು ಮತ್ತು ಅದಕ್ಕನುಸಾರವಾಗಿ ಜೀವಿಸಿದನು. ಅವನು ಯೆಹೂದಿ ಕ್ರೈಸ್ತರಿಗೆ ಹೀಗೆ ಬರೆದನು: “ನಾವು ಒಳ್ಳೇ ಮನಸ್ಸಾಕ್ಷಿ ಹೊಂದಿದ್ದೇವೆಂದು ನಂಬುತ್ತೇವೆ. ನಾವು ಎಲ್ಲಾ ವಿಷಯಗಳಲ್ಲಿ ಪ್ರಾಮಾಣಿಕರಾಗಿ ನಡೆದುಕೊಳ್ಳಬೇಕೆಂದು ಅಪೇಕ್ಷಿಸುತ್ತೇವೆ.”—ಇಬ್ರಿಯ 13:18, NW.

ಆ ಸಮಯದಲ್ಲಿದ್ದ ನೈತಿಕ ಮಟ್ಟಗಳಿಗೆ ಹೋಲಿಸುವಾಗ, ಅಂತಹ ಒಂದು ಮಟ್ಟವು ಇಂದು ಇಲ್ಲವೆಂಬುದು ತೀರ ಸ್ಪಷ್ಟ. ಫೆಲಿಕ್ಸನ ಸಹೋದರನಾದ ಪಾಲಸನು ಆಗಿನ ಲೋಕದಲ್ಲಿ ಅತ್ಯಂತ ಧನವಂತರಲ್ಲಿ ಒಬ್ಬನಾಗಿದ್ದನು ಮತ್ತು 193.5 ಕೋಟಿ ರೂಪಾಯಿಗಳಷ್ಟು ಧನಸಂಪತ್ತು ಅವನ ಬಳಿ ಇತ್ತೆಂದು ಲೆಕ್ಕಹಾಕಿದ್ದಾರೆ ಮತ್ತು ಇಷ್ಟೆಲ್ಲ ಹಣವನ್ನು ಅವನು ಪೂರ್ಣವಾಗಿ ಲಂಚ ಮತ್ತು ಸುಲಿಗೆ ಮಾಡಿಯೇ ಶೇಖರಿಸಿದ್ದನು. ಹೀಗಿದ್ದರೂ, ಅವನ ಬಳಿ ಇದ್ದ ಧನಸಂಪತ್ತನ್ನು, ನಮ್ಮ 20ನೇ ಶತಮಾನದ ಭ್ರಷ್ಟ ಅಧಿಕಾರಿಗಳು ಗುಪ್ತ ಬ್ಯಾಂಕ್‌ ಖಾತೆಗಳಲ್ಲಿ ಅಡಗಿಸಿಟ್ಟಿರುವ ಸಾವಿರಾರು ಕೋಟಿಗಳಷ್ಟು ಹಣಕ್ಕೆ ಹೋಲಿಸುವಾಗ, ಅವನ ಸಂಪತ್ತು ಯಾವ ಲೆಕ್ಕಕ್ಕೂ ಬರುವುದಿಲ್ಲ. ಸ್ಪಷ್ಟವಾಗಿ, ಭ್ರಷ್ಟಾಚಾರದ ಮೇಲೆ ಇಂದಿನ ಸರಕಾರಗಳು ಜಯವನ್ನು ಗಳಿಸಿವೆ ಎಂದು ಹೇಳಿದರೆ, ಕೇವಲ ಲೌಕಿಕ ಜ್ಞಾನವಿಲ್ಲದ ಮುಗ್ಧರು ಮಾತ್ರವೇ ನಂಬುವರು.

ಹಾಗಾದರೆ ಭ್ರಷ್ಟಾಚಾರವು ಇಷ್ಟೊಂದು ದೀರ್ಘ ಕಾಲದಿಂದ ಬಲವಾಗಿ ಬೇರೂರಿ, ಸಮಾಜದಲ್ಲಿ ಸ್ಥಿರವಾಗಿ ನಿಂತಿರುವುದರಿಂದ, ಅದು ಕೇವಲ ಮಾನವ ಸ್ವಭಾವದ ಒಂದು ಲಕ್ಷಣವಾಗಿದೆಯೆಂದು ತಿಳಿದು ಅದನ್ನು ಬಿಟ್ಟುಬಿಡಬೇಕೋ? ಅಥವಾ ಭ್ರಷ್ಟಾಚಾರವನ್ನು ಕಿತ್ತೆಸೆಯಲು ಏನನ್ನಾದರೂ ಮಾಡಬಹುದೋ?

ಭ್ರಷ್ಟಾಚಾರವನ್ನು ಹೇಗೆ ಕಿತ್ತೆಸೆಯಬಹುದು?

ಭ್ರಷ್ಟಾಚಾರವನ್ನು ಕಿತ್ತೆಸೆಯುವುದರಲ್ಲಿರುವ ಮೊದಲ ಹೆಜ್ಜೆಯು, ಭ್ರಷ್ಟಾಚಾರವು ವಿನಾಶಕಾರಿಯಾಗಿದೆ ಮತ್ತು ತಪ್ಪಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದೇ ಆಗಿದೆ. ಇದು ನಿಜವಾಗಿದೆ, ಯಾಕೆಂದರೆ ಲಂಚವು ಭ್ರಷ್ಟ ವ್ಯಕ್ತಿಗಳಿಗೆ ಪ್ರಯೋಜನವನ್ನು ತರುವುದಾದರೂ, ಇತರರಿಗೆ ಹಾನಿಯನ್ನು ಉಂಟುಮಾಡುತ್ತದೆ. ಈ ದಿಶೆಯಲ್ಲಿ ಸ್ವಲ್ಪಮಟ್ಟಿಗೆ ಪ್ರಗತಿಯನ್ನು ಮಾಡಲಾಗಿದೆ ಎಂಬುದರಲ್ಲಿ ಸಂಶಯವಿಲ್ಲ. ಅಮೆರಿಕದ ಡೆಪ್ಯುಟಿ ಸೆಕ್ರಿಟರಿ ಆಫ್‌ ಸ್ಟೇಟ್‌ನ ಜೇಮ್ಸ್‌ ಫಾಲೀ ಹೇಳಿದ್ದು: “ಲಂಚದಿಂದ ಆಗುವ ಹಾನಿಯು ವಿಪರೀತವೆಂಬುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಲಂಚವು ಒಳ್ಳೆಯ ಸರಕಾರಗಳ ತಳಪಾಯವನ್ನು ಅಲುಗಾಡಿಸಿ, ಆರ್ಥಿಕ ದಕ್ಷತೆಗೆ ಮತ್ತು ಅಭಿವೃದ್ಧಿಗೆ ಕುಂದನ್ನು ಉಂಟುಮಾಡಿ, ವ್ಯಾಪಾರವನ್ನು ಹಾಳುಮಾಡುತ್ತದೆ ಮಾತ್ರವಲ್ಲ ಲೋಕದ ಸುತ್ತಲಿರುವ ಪ್ರಜೆಗಳನ್ನು ಗಂಭೀರ ಬಿಕ್ಕಟ್ಟಿಗೆ ಸಿಲುಕಿಸುತ್ತದೆ.” ಅನೇಕರು ಈ ವ್ಯಕ್ತಿಯ ಮಾತನ್ನು ಒಪ್ಪುತ್ತಾರೆ. 1997ರ ಡಿಸೆಂಬರ್‌ 17ರಂದು 34 ದೊಡ್ಡ ದೇಶಗಳು “ಲಂಚಗಾರಿಕೆಯ ಒಪ್ಪಂದ”ಕ್ಕೆ ಸಹಿಹಾಕಿದವು. ಈ ಒಪ್ಪಂದವು “ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ಲೋಕವ್ಯಾಪಕವಾದ ಹೋರಾಟದ ಮೇಲೆ ಮಹತ್ತರವಾದ ಪರಿಣಾಮವನ್ನು ಉಂಟುಮಾಡುವುದಕ್ಕಾಗಿ” ರೂಪಿಸಲಾಗಿತ್ತು. “ಅಂತಾರಾಷ್ಟ್ರೀಯ ವ್ಯಾಪಾರ ಸಂಧಾನಗಳನ್ನು ಪಡೆದುಕೊಳ್ಳಲು ಅಥವಾ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗುವಂತೆ, ಒಬ್ಬ ವಿದೇಶಿ ಪ್ರತಿನಿಧಿಯಾಗಿರುವ ಅಧಿಕಾರಿಗೆ ಲಂಚವನ್ನು ನೀಡುವುದು ಅಥವಾ ಲಂಚದ ಭರವಸೆಯನ್ನು ಕೊಡುವುದು ಅಪರಾಧವಾಗಿದೆ” ಎಂಬುದನ್ನು ಆ ಒಪ್ಪಂದವು ಸ್ಪಷ್ಟಪಡಿಸಿತು.

ಹೀಗಿದ್ದರೂ, ಬೇರೆ ದೇಶಗಳಲ್ಲಿ ವ್ಯಾಪಾರ ಒಪ್ಪಂದಗಳನ್ನು ಗಳಿಸಲು ಲಂಚಕೊಡುವುದು ಭ್ರಷ್ಟಾಚಾರದ ಒಂದು ಚಿಕ್ಕಭಾಗವಾಗಿದೆ ಅಷ್ಟೇ. ಎಲ್ಲ ರೀತಿಯ ಭ್ರಷ್ಟಾಚಾರವನ್ನು ಕಿತ್ತೊಗೆಯಬೇಕಾದರೆ ಇನ್ನೊಂದು ಹೆಜ್ಜೆಯನ್ನು ತೆಗೆದುಕೊಳ್ಳುವ ಅಗತ್ಯವಿದೆ. ಈ ಹೆಜ್ಜೆಯು ಇನ್ನೂ ಹೆಚ್ಚು ಕಷ್ಟಕರವಾಗಿದೆ. ಇದು ಯಾವುದೆಂದರೆ, ಹೃದಯದ ಪರಿವರ್ತನೆ ಅಥವಾ ಅನೇಕ ಹೃದಯಗಳ ಪರಿವರ್ತನೆಯಾಗಿದೆ. ಎಲ್ಲ ಕಡೆಗಳಲ್ಲಿರುವ ಜನರು ಲಂಚವನ್ನು ಮತ್ತು ಭ್ರಷ್ಟಾಚಾರವನ್ನು ದ್ವೇಷಿಸಲು ಕಲಿತುಕೊಳ್ಳಬೇಕು. ಆಗ ಮಾತ್ರವೇ ಈ ರೀತಿಯ ಅನ್ಯಾಯದ ಸಂಪಾದನೆಯು ಇಲ್ಲದೆ ಹೋಗುವುದು. ಇದನ್ನು ಸಾಧಿಸಲು, ನ್ಯೂಸ್‌ವೀಕ್‌ ಪತ್ರಿಕೆಯು ಹೇಳಿದಂತೆ, ನಾಗರಿಕರಲ್ಲಿ “ಸರಕಾರಗಳು ಪೌರ ಗುಣವನ್ನು ಮೂಡಿಸಬೇಕೆಂದು” ಕೆಲವರಿಗೆ ಅನಿಸುತ್ತದೆ. ಟ್ರಾನ್ಸ್‌ಪರನ್ಸಿ ಇಂಟರ್‌ನ್ಯಾಷನಲ್‌ ಎಂಬ ಹೆಸರಿನ, ಭ್ರಷ್ಟಾಚಾರದ ವಿರುದ್ಧ ಶಾಸಕರನ್ನು ಪ್ರಭಾವಿಸುವ ಬೆಂಬಲಿಗರ ತಂಡವೊಂದು (ಲಾಬಿಯಿಂಗ್‌ ಗ್ರೂಪ್‌) ಕೂಡ, “ಪ್ರಾಮಾಣಿಕತೆಯ ಬೀಜವನ್ನು” ಕೆಲಸಮಾಡುವ ಸ್ಥಳಗಳಲ್ಲಿ ಬಿತ್ತಬೇಕೆಂದು ತನ್ನ ಬೆಂಬಲಿಗರಿಗೆ ಶಿಫಾರಸ್ಸು ಮಾಡುತ್ತದೆ.

ಭ್ರಷ್ಟಾಚಾರದ ವಿರುದ್ಧ ನಡೆಸುವ ಹೋರಾಟವು ನೈತಿಕವಾದದ್ದಾಗಿದೆ ಮತ್ತು ಅದನ್ನು ಶಾಸನದಿಂದಲೋ ಕಾನೂನು ದಂಡನೆಯೆಂಬ “ಕತ್ತಿ”ಯಿಂದಲೋ ಜಯಿಸಲು ಸಾಧ್ಯವೇ ಇಲ್ಲ. (ರೋಮಾಪುರ 13:4, 5) ಸದ್ಗುಣ ಮತ್ತು ಪ್ರಾಮಾಣಿಕತೆಯ ಬೀಜಗಳು ಜನರ ಹೃದಯಗಳಲ್ಲಿ ಬಿತ್ತಲ್ಪಡಬೇಕು. ಅಪೊಸ್ತಲ ಪೌಲನು ಯಾವುದನ್ನು “ಪವಿತ್ರಾತ್ಮದ ಕತ್ತಿ” ಎಂಬುದಾಗಿ ಕರೆದನೋ, ಆ ದೇವರ ವಾಕ್ಯವಾದ ಬೈಬಲನ್ನು ಉಪಯೋಗಿಸುವ ಮೂಲಕ ನಾವು ಭ್ರಷ್ಟಾಚಾರದ ಮೇಲೆ ಬಹಳ ಉತ್ತಮವಾದ ರೀತಿಯಲ್ಲಿ ಜಯವನ್ನು ಸಾಧಿಸಬಲ್ಲೆವು.—ಎಫೆಸ 6:17, NW.

ಬೈಬಲು ಭ್ರಷ್ಟಾಚಾರವನ್ನು ಖಂಡಿಸುತ್ತದೆ

ಪೌಲನು ಭ್ರಷ್ಟಾಚಾರವನ್ನು ಮನ್ನಿಸಲು ಯಾಕೆ ನಿರಾಕರಿಸಿದನು? ಯಾಕೆಂದರೆ ‘ದಾಕ್ಷಿಣ್ಯವನ್ನು ನೋಡದ ಮತ್ತು ಲಂಚವನ್ನು ತೆಗೆದುಕೊಳ್ಳ’ದಿರುವ ದೇವರ ಚಿತ್ತವನ್ನು ಮಾಡಲು ಅವನು ಬಯಸಿದನು. (ಧರ್ಮೋಪದೇಶಕಾಂಡ 10:17) ಅಷ್ಟು ಮಾತ್ರವಲ್ಲ, ಮೋಶೆಯ ಧರ್ಮಶಾಸ್ತ್ರದಲ್ಲಿ ಕಂಡುಬರುವ ನಿರ್ದಿಷ್ಟ ಉಪದೇಶವನ್ನು ಪೌಲನು ಖಂಡಿತವಾಗಿಯೂ ನೆನಪಿಸಿಕೊಂಡನು. ಆ ನಿಯಮವು ಹೀಗಿತ್ತು: “ನೀವು . . . ಪಕ್ಷಪಾತಮಾಡಬಾರದು; ಲಂಚತೆಗೆದುಕೊಳ್ಳಬಾರದು. ಲಂಚವು ಬುದ್ಧಿವಂತರನ್ನೂ ಕುರುಡರಂತೆ ಮಾಡುತ್ತದೆ; ನಿರಪರಾಧಿಗಳ ನ್ಯಾಯವನ್ನು ಕೆಡಿಸುತ್ತದೆ.” (ಧರ್ಮೋಪದೇಶಕಾಂಡ 16:19) ಯೆಹೋವನು ಭ್ರಷ್ಟಾಚಾರವನ್ನು ದ್ವೇಷಿಸುತ್ತಾನೆ ಎಂಬುದನ್ನು ರಾಜ ದಾವೀದನು ಸಹ ತಿಳಿದುಕೊಂಡಿದ್ದನು ಮತ್ತು ಯಾರ “ಬಲಗೈಯು ಲಂಚದಿಂದ ತುಂಬಿದೆ”ಯೋ ಅಂತಹ ಪಾಪಿಗಳೊಂದಿಗೆ ತನ್ನನ್ನು ಲೆಕ್ಕಿಸಬಾರದೆಂದು ಅವನು ದೇವರಲ್ಲಿ ವಿನಂತಿಸಿಕೊಂಡನು.—ಕೀರ್ತನೆ 26:10.

ದೇವರನ್ನು ಯಥಾರ್ಥ ಹೃದಯದಿಂದ ಆರಾಧಿಸಲು ಬಯಸುವವರಿಗಾದರೋ ಭ್ರಷ್ಟಾಚಾರವನ್ನು ತ್ಯಜಿಸುವುದಕ್ಕೆ ಇನ್ನೂ ಹೆಚ್ಚಿನ ಕಾರಣಗಳು ಇವೆ. ಸೊಲೊಮೋನನು ಬರೆದದ್ದು: “ರಾಜನು ನ್ಯಾಯವಂತನಾದರೆ ದೇಶವು ಸ್ಥಿರತೆಯಿಂದಿರುವುದು, ಆದರೆ ಅವನು ಲಂಚಕ್ಕಾಗಿ ದುರಾಶೆಪಡುವವನಾದರೆ ದೇಶವನ್ನು ಹಾಳುಮಾಡುವನು.” (ಜ್ಞಾನೋಕ್ತಿ 29:4, ನ್ಯೂ ಇಂಟರ್‌ನ್ಯಾಷನಲ್‌ ವರ್ಷನ್‌) ವಿಶೇಷವಾಗಿ ಅಧಿಕಾರದ ಅತ್ಯುನ್ನತ ಸ್ಥಾನದಲ್ಲಿರುವ ಅಧಿಕಾರಿಯಿಂದ ಹಿಡಿದು ಕೆಳಸ್ಥಾನದಲ್ಲಿರುವ ಜವಾನನ ವರೆಗೆ ಎಲ್ಲರೂ ನ್ಯಾಯವನ್ನು ಪಾಲಿಸುವುದಾದರೆ, ಅದು ಸ್ಥಿರತೆಯನ್ನು ತರುವುದು. ಆದರೆ ಭ್ರಷ್ಟಾಚಾರವು ದೇಶವನ್ನು ಬಡತನಕ್ಕೆ ತಳ್ಳುವುದು. ಆಸಕ್ತಿಕರವಾಗಿ, ನ್ಯೂಸ್‌ವೀಕ್‌ ಪತ್ರಿಕೆಯು ಹೇಳಿದಂತೆ, “ಪ್ರತಿಯೊಬ್ಬನು ಭ್ರಷ್ಟಾಚಾರದಿಂದ ಬರುವ ಹಣದಲ್ಲಿ ತನಗೂ ಒಂದು ಪಾಲು ಸಿಗಬೇಕೆಂದು ಬಯಸುವ ಮತ್ತು ಅದನ್ನು ಹೇಗೆ ಪಡೆದುಕೊಳ್ಳಬೇಕೆಂದು ತಿಳಿದಿರುವ ಒಂದು ವ್ಯವಸ್ಥೆಯಲ್ಲಿ, ಆರ್ಥಿಕತೆಯು ಖಂಡಿತವಾಗಿಯೂ ಕುಸಿದುಬೀಳುವುದು.”

ಆರ್ಥಿಕತೆಯು ಸಂಪೂರ್ಣವಾಗಿ ಕುಸಿದುಬೀಳದಿದ್ದರೂ, ಭ್ರಷ್ಟಾಚಾರವು ಬೆಳೆಯುತ್ತಿರುವುದನ್ನು ನೋಡಿಯೂ ಏನೂ ಮಾಡದೆ ಇದ್ದಾಗ, ನ್ಯಾಯವನ್ನು ಪ್ರೀತಿಸುವವರಿಗೆ ಆಶಾಭಂಗವಾಗುತ್ತದೆ. (ಕೀರ್ತನೆ 73:3, 13) ನ್ಯಾಯಕ್ಕಾಗಿ ನೈಜ ಬಯಕೆಯನ್ನು ನಮ್ಮಲ್ಲಿ ಇಟ್ಟಿರುವ ನಮ್ಮ ಸೃಷ್ಟಿಕರ್ತನು ಕೂಡ ಅನ್ಯಾಯವಾಗಿ ನೋವನ್ನು ಅನುಭವಿಸುತ್ತಿದ್ದಾನೆ. ಹಿಂದೆ, ಲಜ್ಜಾಹೀನ ಭ್ರಷ್ಟಾಚಾರವನ್ನು ಅಳಿಸಿಹಾಕುವುದಕ್ಕೆ ಯೆಹೋವನು ಕ್ರಿಯೆಗೈದಿದ್ದನು. ಉದಾಹರಣೆಗೆ, ಯೆರೂಸಲೇಮಿನ ನಿವಾಸಿಗಳನ್ನು ತ್ಯಜಿಸಿ ಅವರನ್ನು ಶತ್ರುಗಳ ಕೈಗೆ ಏಕೆ ಒಪ್ಪಿಸಿಕೊಡುವನೆಂಬುದನ್ನು ಆತನು ಅವರಿಗೆ ಖಡಾಖಂಡಿತವಾಗಿ ಹೇಳಿದನು.

ತನ್ನ ಪ್ರವಾದಿಯಾದ ಮೀಕನ ಮೂಲಕ ದೇವರು ಹೇಳಿದ್ದು: “ನ್ಯಾಯಕ್ಕೆ ಅಸಹ್ಯಪಟ್ಟು ನೆಟ್ಟಗಿರುವದನ್ನು ಸೊಟ್ಟಗೆ ಮಾಡುವ ಯಾಕೋಬ್‌ವಂಶದ ಮುಖಂಡರೇ, ಇಸ್ರಾಯೇಲ್‌ ಮನೆತನದ ಅಧ್ಯಕ್ಷರೇ, ಮುಖಂಡರು ಲಂಚಕ್ಕೆ ನ್ಯಾಯತೀರಿಸುತ್ತಾರೆ, ಯಾಜಕರು ಸಂಬಳಕ್ಕಾಗಿ ಉಪದೇಶಿಸುತ್ತಾರೆ, ಪ್ರವಾದಿಗಳು ಹಣಕ್ಕೋಸ್ಕರ ಕಣಿಹೇಳುತ್ತಾರೆ. . . . ಹೀಗಿರಲು ನಿಮ್ಮ ದೆಸೆಯಿಂದ ಚೀಯೋನ್‌ ಪಟ್ಟಣವು ಹೊಲದಂತೆ ಗೇಯಲ್ಪಡುವದು, ಯೆರೂಸಲೇಮು ಹಾಳುದಿಬ್ಬಗಳಾಗುವದು.” ಭ್ರಷ್ಟಾಚಾರವು ಇಸ್ರಾಯೇಲ್ಯರ ಸಮಾಜವನ್ನು ಹಾಳುಗೆಡಹಿದಂತೆಯೇ ಅದು ಶತಮಾನಗಳ ನಂತರ ರೋಮಿನ ಸಮಾಜವನ್ನು ಸಹ ತಿಂದುಹಾಕಿತು. ದೇವರ ಎಚ್ಚರಿಕೆಗೆ ಸರಿಯಾಗಿಯೇ, ಮೀಕನು ಈ ಮಾತುಗಳನ್ನು ಬರೆದ ಸುಮಾರು ನೂರು ವರ್ಷಗಳ ನಂತರ, ಯೆರೂಸಲೇಮ್‌ ನಾಶಗೊಳಿಸಲ್ಪಟ್ಟಿತು ಮತ್ತು ತ್ಯಜಿಸಲ್ಪಟ್ಟಿತು.—ಮೀಕ 3:9, 11, 12.

ಆದುದರಿಂದ, ಯಾವ ಮನುಷ್ಯನಾಗಲಿ ಜನಾಂಗವಾಗಲಿ ಭ್ರಷ್ಟವಾಗಿರುವ ಅಗತ್ಯವಿಲ್ಲ. ಯಾಕೆಂದರೆ ದುಷ್ಟರು ತಮ್ಮ ದುಷ್ಟ ಜೀವನಮಾರ್ಗವನ್ನು ಬಿಟ್ಟುಬಿಡುವಂತೆ ಮತ್ತು ತಮ್ಮ ದುರಾಲೋಚನೆಗಳನ್ನು ಬದಲಾಯಿಸಿಕೊಳ್ಳುವಂತೆ ದೇವರು ಉತ್ತೇಜಿಸುತ್ತಾನೆ. (ಯೆಶಾಯ 55:7) ನಮ್ಮಲ್ಲಿ ಪ್ರತಿಯೊಬ್ಬರೂ ಲೋಭದ ಬದಲು ನಿಸ್ವಾರ್ಥ ಗುಣವನ್ನು ಮತ್ತು ಭ್ರಷ್ಟಾಚಾರದ ಬದಲು ನೀತಿಯ ಗುಣವನ್ನು ಬೆಳೆಸಿಕೊಳ್ಳಬೇಕೆಂದು ಆತನು ಬಯಸುತ್ತಾನೆ. ಯೆಹೋವನು ನಮಗೆ ಜ್ಞಾಪಿಸುವುದು: “ಬಡವರನ್ನು ಹಿಂಸಿಸುವವನು ಸೃಷ್ಟಿಕರ್ತನನ್ನು ಹೀನೈಸುವನು; ಗತಿಯಿಲ್ಲದವರನ್ನು ಕರುಣಿಸುವವನು ಆತನನ್ನು ಘನಪಡಿಸುವನು.”—ಜ್ಞಾನೋಕ್ತಿ 14:31.

ಬೈಬಲ್‌ ಸತ್ಯದಿಂದ ಭ್ರಷ್ಟಾಚಾರದ ವಿರುದ್ಧವಾಗಿರುವ ನಮ್ಮ ಹೋರಾಟದಲ್ಲಿ ಸಫಲರಾಗುವುದು

ಇಂತಹ ಒಂದು ಪರಿವರ್ತನೆಯನ್ನು ಮಾಡಲು ಒಬ್ಬ ವ್ಯಕ್ತಿಗೆ ಯಾವುದು ಸಹಾಯ ಮಾಡುವುದು? ಪೌಲನು ಒಬ್ಬ ಫರಿಸಾಯನ ಜೀವನವನ್ನು ತ್ಯಜಿಸಿ, ಯೇಸು ಕ್ರಿಸ್ತನ ಧೈರ್ಯದ ಸಾಕ್ಷಿಯಾಗುವಂತೆ ಪ್ರೇರಿಸಿದ ಅದೇ ಶಕ್ತಿಯಿಂದ ಇಂತಹ ಪರಿವರ್ತನೆ ಸಾಧ್ಯವಾಗುವುದು. “ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು” ಎಂದು ಅವನು ಬರೆದನು. (ಇಬ್ರಿಯ 4:12) ಇಂದಿಗೂ ಶಾಸ್ತ್ರೀಯ ಸತ್ಯವು ಪ್ರಾಮಾಣಿಕತೆಯನ್ನು ಉತ್ತೇಜಿಸುತ್ತದೆ. ಭ್ರಷ್ಟಾಚಾರದಲ್ಲಿ ಆಳವಾಗಿ ಮುಳುಗಿರುವವರಿಗೂ ಪರಿವರ್ತನೆ ಮಾಡಲು ಉತ್ತೇಜನ ಕೊಡಲಾಗಿದೆ. ಒಂದು ದೃಷ್ಟಾಂತವನ್ನು ಪರಿಗಣಿಸಿರಿ.

ಪೂರ್ವ ಯೂರೋಪಿನಲ್ಲಿ ವಾಸವಾಗಿರುವ ಅಲೆಕ್ಸಾಂಡರ್‌, ತನ್ನ ಮಿಲಿಟರಿ ಸೇವೆಯ ಸ್ವಲ್ಪ ಸಮಯದ ನಂತರ, ಮೋಸದ ವ್ಯಾಪಾರ ಮಾಡುವ, ಹಣ ಲೂಟಿಮಾಡುವ ಮತ್ತು ಲಂಚವನ್ನು ತೆಗೆದುಕೊಳ್ಳುವ ತಂಡದಲ್ಲಿ ಸೇರಿದನು. * ಅವನು ವಿವರಿಸುವುದು: “ಧನಿಕ ವ್ಯಾಪಾರಿಗಳಿಂದ ರಕ್ಷಣಾಶುಲ್ಕವನ್ನು ಬಲಾತ್ಕಾರದಿಂದ ತೆಗೆದುಕೊಳ್ಳುವುದು ನನ್ನ ಕೆಲಸವಾಗಿತ್ತು. ಒಬ್ಬ ವ್ಯಾಪಾರಿಯ ವಿಶ್ವಾಸವನ್ನು ಗಳಿಸಿದ ನಂತರ, ನಮ್ಮ ತಂಡದ ಇತರ ಸದಸ್ಯರು ಅವನನ್ನು ಹಿಂಸಿಸಿ ಬೆದರಿಸುತ್ತಿದ್ದರು. ಆಗ ನಾನು ಭಾರೀ ಮೊತ್ತದ ಹಣವನ್ನು ಕೇಳುವ ಮೂಲಕ ಆ ಸಂಗತಿಯನ್ನು ನೋಡಿಕೊಳ್ಳುತ್ತೇನೆಂಬ ಪ್ರಸ್ತಾಪವನ್ನು ಅವನ ಮುಂದೆ ಇಡುತ್ತಿದ್ದೆ. ನನ್ನ ‘ಗಿರಾಕಿಗಳು’ ತಮ್ಮ ಸಮಸ್ಯೆಯನ್ನು ನಿಭಾಯಿಸಲು ಸಹಾಯಮಾಡಿದ್ದಕ್ಕೆ ನನಗೆ ಉಪಕಾರ ಹೇಳುತ್ತಿದ್ದರು. ಆದರೆ ನಾನೇ ಆ ಸಮಸ್ಯೆಗೆ ಮೂಲ ಕಾರಣನಾಗಿದ್ದೆನೆಂಬುದು ಅವರಿಗೆ ಗೊತ್ತಾಗುತ್ತಿರಲಿಲ್ಲ. ಇದು ವಿಚಿತ್ರವಾಗಿ ತೋರುವುದಾದರೂ, ನಾನು ಇಷ್ಟಪಟ್ಟ ಕೆಲಸವಾಗಿತ್ತು.

“ಈ ರೀತಿಯ ಜೀವನಶೈಲಿಯಿಂದ ನನಗೆ ಸಿಗುತ್ತಿದ್ದ ಖುಷಿ ಮತ್ತು ಹಣದಿಂದ ನಾನು ಮಜಾಮಾಡುತ್ತಿದ್ದೆ. ದುಬಾರಿಯಾದ ಕಾರನ್ನು ಓಡಿಸುತ್ತಿದ್ದೆ, ಒಳ್ಳೆಯ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದೆ ಮತ್ತು ಬಯಸಿದ್ದೆಲ್ಲವನ್ನೂ ಖರೀದಿಸುವುದಕ್ಕೆ ನನ್ನಲ್ಲಿ ಹಣವು ಸಹ ಇತ್ತು. ಜನರು ನನ್ನನ್ನು ನೋಡಿ ಹೆದರುತ್ತಿದ್ದುದರಿಂದ, ನಾನೊಬ್ಬ ದೊಡ್ಡ ವ್ಯಕ್ತಿಯೆಂಬ ಅನಿಸಿಕೆಯನ್ನು ಇದು ನನ್ನಲ್ಲಿ ಉಂಟುಮಾಡಿತು. ನನಗೆ ಯಾರೂ ಕಾನೂನಿನಿಂದ ಕೇಡನ್ನುಂಟುಮಾಡಲು ಸಾಧ್ಯವಿರಲಿಲ್ಲ ಮತ್ತು ಕಾನೂನು ಸಹ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂಬ ಭಾವನೆಯು ನನ್ನಲ್ಲಿ ಮೂಡಿತು. ಪೊಲೀಸರೊಂದಿಗೆ ಯಾವುದೇ ಸಮಸ್ಯೆಯಾಗುವುದಾದರೂ ಅದನ್ನು ನಿಪುಣ ವಕೀಲನಿಂದ ಪರಿಹರಿಸಸಾಧ್ಯವಿತ್ತು, ಯಾಕೆಂದರೆ ನ್ಯಾಯ ವ್ಯವಸ್ಥೆಯಿಂದ ಜಾರಿಕೊಳ್ಳುವ ಮಾರ್ಗ ಅವರಲ್ಲಿರುತ್ತಿತ್ತು ಅಥವಾ ತಕ್ಕ ವ್ಯಕ್ತಿಗೆ ಲಂಚವನ್ನು ಕೊಡುವ ಮೂಲಕ ಅದನ್ನು ಸರಿಪಡಿಸಸಾಧ್ಯವಿತ್ತು.

“ಹೀಗಿದ್ದರೂ, ಭ್ರಷ್ಟಾಚಾರದ ಹಣದಲ್ಲಿಯೇ ಜೀವನೋಪಾಯ ಮಾಡುವವರಲ್ಲಿ ನಿಷ್ಠೆಯು ಬಹಳ ವಿರಳವಾಗಿರುತ್ತದೆ. ನಮ್ಮ ತಂಡದ ಒಬ್ಬನಿಗೆ ನನ್ನನ್ನು ಕಂಡರೆ ಆಗುತ್ತಿರಲಿಲ್ಲ ಮತ್ತು ನಾನು ನನ್ನ ಜನಪ್ರಿಯತೆಯನ್ನು ಕಳೆದುಕೊಂಡಿದ್ದೇನೆಂಬುದು ಸ್ವಲ್ಪದರಲ್ಲೇ ನನಗೆ ಗೊತ್ತಾಯಿತು. ಇದ್ದಕ್ಕಿದ್ದಂತೆ, ನಾನು ನನ್ನ ಆಡಂಬರದ ಕಾರನ್ನು ಮತ್ತು ನನ್ನ ಹಣವನ್ನೆಲ್ಲಾ ಕಳೆದುಕೊಂಡೆ. ಅಷ್ಟೇ ಅಲ್ಲ, ಬಹಳ ದುಬಾರಿಯಾದ ಜೀವನಶೈಲಿಯನ್ನು ಬಯಸುತ್ತಿದ್ದ ನನ್ನ ಪ್ರೇಯಸಿಯನ್ನೂ ಕಳೆದುಕೊಂಡೆ. ನನ್ನನ್ನು ಚೆನ್ನಾಗಿ ಹೊಡೆದು ಥಳಿಸಿಬಿಟ್ಟರು. ಹೀಗೆ ಇದ್ದಕ್ಕಿದ್ದಂತೆ ನನ್ನ ಜೀವನವು ತಲೆಕೆಳಗಾದಾಗ, ಜೀವನದ ಉದ್ದೇಶದ ಕುರಿತು ನಾನು ಗಂಭೀರವಾಗಿ ಯೋಚಿಸ ತೊಡಗಿದೆ.

“ಕೆಲವು ತಿಂಗಳುಗಳ ಹಿಂದೆಯಷ್ಟೇ ನನ್ನ ತಾಯಿ ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿ ಪರಿಣಮಿಸಿದ್ದರು ಮತ್ತು ನಾನು ಅವರ ಸಾಹಿತ್ಯವನ್ನು ಓದಲು ಆರಂಭಿಸಿದೆ. ಜ್ಞಾನೋಕ್ತಿ 4:14, 15ರ ವಚನವು, ನಾನು ಗಂಭೀರವಾಗಿ ಚಿಂತಿಸುವಂತೆ ಮಾಡಿತು: “ದುಷ್ಟರ ಮಾರ್ಗದಲ್ಲಿ ಸೇರದಿರು; ಕೆಟ್ಟವರ ದಾರಿಯಲ್ಲಿ ನಡೆಯಬೇಡ. ಅದಕ್ಕೆ ದೂರವಾಗಿರು, ಅದರಲ್ಲಿ ನಡೆಯದೆ ಓರೆಯಾಗು; ಮುಂದೆ ಮುಂದೆ ನಡೆ.” ಪಾತಕದ ಜೀವನವನ್ನು ನಡೆಸಲು ಬಯಸುವವರಿಗೆ ಯಾವುದೇ ನಿಜ ಭವಿಷ್ಯತ್ತು ಇಲ್ಲವೆಂಬುದು ಇಂತಹ ಬೈಬಲ್‌ ವಚನಗಳಿಂದ ನನಗೆ ಮನವರಿಕೆಯಾಯಿತು. ನಾನು ಯೆಹೋವನಿಗೆ ಪ್ರಾರ್ಥಿಸಲು ಆರಂಭಿಸಿದೆ ಮತ್ತು ನನ್ನನ್ನು ಸರಿಯಾದ ಮಾರ್ಗದಲ್ಲಿ ನಡೆಸುವಂತೆ ನಾನು ಆತನಲ್ಲಿ ಮೊರೆಯಿಟ್ಟೆ. ನಾನು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸಿದೆ ಮತ್ತು ಕೊನೆಗೆ, ನಾನು ದೇವರಿಗೆ ನನ್ನ ಜೀವನವನ್ನು ಸಮರ್ಪಿಸಿದೆ. ಆ ಸಮಯದಿಂದ ಹಿಡಿದು ಇಂದಿನ ವರೆಗೆ ನಾನು ಪ್ರಾಮಾಣಿಕವಾಗಿ ಜೀವಿಸುತ್ತಾ ಬಂದಿದ್ದೇನೆ.

“ನಿಜ, ಪ್ರಾಮಾಣಿಕನಾಗಿ ಜೀವಿಸುವುದರ ಕಾರಣದಿಂದಾಗಿ ನಾನು ಮುಂಚೆ ಸಂಪಾದಿಸುತ್ತಿದ್ದಷ್ಟು ಹಣವನ್ನು ಈಗ ಸಂಪಾದಿಸುತ್ತಿಲ್ಲ. ಆದರೆ ಈಗ ನನಗೊಂದು ಉಜ್ವಲ ಭವಿಷ್ಯವಿರುವುದರಿಂದ ನನ್ನ ಜೀವನಕ್ಕೆ ನಿಜವಾಗಿಯೂ ಅರ್ಥವಿದೆ ಎಂದು ನನಗೆ ಅನಿಸುತ್ತದೆ. ಮೇಲುಸಂಪಾದನೆಯಿಂದ ಅಲಂಕೃತಗೊಂಡಿದ್ದ ಬಹಳ ದುಬಾರಿಯಾದ ನನ್ನ ಹಿಂದಿನ ಜೀವನಶೈಲಿಯು, ರಟ್ಟಿನಿಂದ ಕಟ್ಟಿದ್ದ ಮನೆಯಂತಿದ್ದು ಯಾವುದೇ ಕ್ಷಣದಲ್ಲಿ ಬಿದ್ದುಹೋಗುವಂತಿತ್ತು ಎಂಬುದನ್ನು ನಾನು ಗ್ರಹಿಸಿದೆ. ಆ ಸಮಯದಲ್ಲಿ ನನ್ನ ಮನಸ್ಸಾಕ್ಷಿಯು ಕಲ್ಲಾಗಿತ್ತು. ಆದರೆ ಬೈಬಲ್‌ ಅಭ್ಯಾಸ ಮಾಡಿರುವುದರಿಂದ, ಈಗ ಚಿಕ್ಕ ವಿಷಯಗಳಲ್ಲಿ ಮೋಸಮಾಡುವಂತೆ ಶೋಧನೆಯಾಗುವಾಗ ನನ್ನ ಮನಸ್ಸಾಕ್ಷಿಯು ನನ್ನನ್ನು ಚುಚ್ಚುತ್ತದೆ. ನಾನು ಕೀರ್ತನೆ 37:3ಕ್ಕೆ ಹೊಂದಿಕೆಯಲ್ಲಿ ಜೀವಿಸಲು ಪ್ರಯತ್ನಿಸುತ್ತಿದ್ದೇನೆ. ಅದು ಹೀಗೆ ಹೇಳುತ್ತದೆ: ‘ಯೆಹೋವನಲ್ಲಿ ಭರವಸವಿಟ್ಟು ಒಳ್ಳೆಯ ಕಾರ್ಯಗಳನ್ನು ಮಾಡು; ದೇಶದಲ್ಲಿ ವಾಸವಾಗಿದ್ದು ನಂಬಿಕೆಯನ್ನು ಅನುಸರಿಸು.’”

ಲಂಚವನ್ನು ದ್ವೇಷಿಸುವವನು ಸುಖವಾಗಿ ಬಾಳುತ್ತಾನೆ

ಅಲೆಕ್ಸಾಂಡರನು ಮನಗಂಡಂತೆ, ಬೈಬಲ್‌ ಸತ್ಯವು ಭ್ರಷ್ಟಾಚಾರದಿಂದ ಹೊರಬರಲು ಅಥವಾ ಅದನ್ನು ಬಿಟ್ಟುಬಿಡಲು ಒಬ್ಬ ವ್ಯಕ್ತಿಯನ್ನು ಪ್ರಚೋದಿಸಬಲ್ಲದು. ಎಫೆಸದವರಿಗೆ ಅಪೊಸ್ತಲ ಪೌಲನು ತನ್ನ ಪತ್ರದಲ್ಲಿ ಏನನ್ನು ಹೇಳಿದನೋ ಅದಕ್ಕನುಸಾರವಾಗಿ ತನ್ನ ಜೀವನವನ್ನು ಅವನು ಬದಲಾಯಿಸಿಕೊಂಡನು. ಅವನು ಹೇಳಿದ್ದು: “ನೀವು ನಿಮ್ಮ ಹಿಂದಿನ ನಡತೆಯನ್ನು ಅನುಸರಿಸದೆ ಪೂರ್ವಸ್ವಭಾವವನ್ನು ತೆಗೆದುಹಾಕಿಬಿಡಬೇಕು; ಅದು ಮೋಸಕರವಾದ ದುರಾಶೆಗಳಿಂದ ಕೆಟ್ಟುಹೋಗುವಂಥದು. ನೀವು ನಿಮ್ಮ ಆಂತರ್ಯದಲ್ಲಿ ಹೊಸಬರಾಗಿ ನೂತನಸ್ವಭಾವವನ್ನು ಧರಿಸಿಕೊಳ್ಳಿರಿ. ಆ ಸ್ವಭಾವವು ದೇವರ ಹೋಲಿಕೆಯ ಮೇರೆಗೆ ಸತ್ಯಾನುಗುಣವಾದ ನೀತಿಯುಳ್ಳದ್ದಾಗಿಯೂ ದೇವಭಯವುಳ್ಳದ್ದಾಗಿಯೂ ನಿರ್ಮಿಸಲ್ಪಟ್ಟಿದೆ. ಆದಕಾರಣ ಸುಳ್ಳಾಡುವದನ್ನು ಬಿಟ್ಟುಬಿಟ್ಟು ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ಸತ್ಯವನ್ನೇ ಆಡಲಿ; ಯಾಕಂದರೆ ನಾವು ಒಬ್ಬರಿಗೊಬ್ಬರು ಅಂಗಗಳಾಗಿದ್ದೇವಲ್ಲಾ. ಕಳವು ಮಾಡುವವನು ಇನ್ನು ಮೇಲೆ ಕಳವುಮಾಡದೆ ಕೈಯಿಂದ ಯಾವದೊಂದು ಒಳ್ಳೇ ಉದ್ಯೋಗವನ್ನು ಮಾಡಿ ದುಡಿಯಲಿ; ಆಗ ಕಷ್ಟದಲ್ಲಿರುವವರಿಗೆ ಕೊಡುವದಕ್ಕೆ ಅವನಿಂದಾಗುವದು.” (ಎಫೆಸ 4:22-25, 28) ಮಾನವಕುಲದ ಭವಿಷ್ಯವು ಇಂತಹ ಪರಿವರ್ತನೆಗಳ ಮೇಲೆಯೇ ಅವಲಂಬಿತವಾಗಿದೆ.

ಲೋಭ ಮತ್ತು ಭ್ರಷ್ಟಾಚಾರವನ್ನು ಹತೋಟಿಯಲ್ಲಿಡದಿದ್ದರೆ ಅವು ರೋಮನ್‌ ಸಾಮ್ರಾಜ್ಯದ ಪತನಕ್ಕೆ ಕಾರಣವಾದಂತೆಯೇ, ಒಂದು ದಿನ ಅವು ನಮ್ಮ ಭೂಮಿಯನ್ನು ಧ್ವಂಸಮಾಡುವವು. ಆದರೂ ಮನುಷ್ಯರನ್ನು ಸೃಷ್ಟಿಮಾಡಿದ ಸೃಷ್ಟಿಕರ್ತನು, ಇಂತಹ ಸಂಗತಿಗಳು ಸಂಭವಿಸುವಂತೆ ಬಿಡಲಾರನು ಎಂಬುದನ್ನು ತಿಳಿದುಕೊಳ್ಳುವುದು ನಮಗೆ ಸಂತೋಷವನ್ನು ನೀಡುವ ಸಂಗತಿಯಾಗಿದೆ. “ಲೋಕನಾಶಕರನ್ನು ನಾಶ”ಮಾಡಲು ಆತನು ತೀರ್ಮಾನಿಸಿದ್ದಾನೆ. (ಪ್ರಕಟನೆ 11:18) ಭ್ರಷ್ಟಾಚಾರದಿಂದ ಮುಕ್ತವಾಗಿರುವ ಲೋಕಕ್ಕಾಗಿ ಹಾತೊರೆಯುವವರಿಗೆ “ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ” ಬೇಗನೆ ತರುವನೆಂಬ ಭರವಸೆಯನ್ನು ಯೆಹೋವನು ಕೊಟ್ಟಿದ್ದಾನೆ ಮತ್ತು “ಅವುಗಳಲ್ಲಿ ನೀತಿಯು ವಾಸವಾಗಿರುವದು.”—2 ಪೇತ್ರ 3:13.

ನಿಜ, ಇಂದಿನ ಲೋಕದಲ್ಲಿ ಪ್ರಾಮಾಣಿಕವಾಗಿ ಜೀವಿಸುವುದು ಸುಲಭವಲ್ಲ. ಹಾಗಿದ್ದರೂ, ಯೆಹೋವನು ಭರವಸೆ ಕೊಟ್ಟಂತೆ, ಕಾಲಕ್ರಮೇಣ “ಲಂಚ ತೆಗೆದುಕೊಳ್ಳುವವನು ತನ್ನ ಕುಟುಂಬಕ್ಕೆ ಆಪತ್ತನ್ನು ತರುತ್ತಾನೆ. ಲಂಚವನ್ನು ದ್ವೇಷಿಸುವವನು ಸುಖವಾಗಿ ಬಾಳುವನು.” * (ಜ್ಞಾನೋಕ್ತಿ 15:27, NIV) ಭ್ರಷ್ಟಾಚಾರದ ಜೀವನ ರೀತಿಯನ್ನು ತ್ಯಜಿಸುವ ಮೂಲಕ, ದೇವರಿಗೆ ಮಾಡುವ ನಮ್ಮ ಪ್ರಾರ್ಥನೆಯಲ್ಲಿ ನಾವು ಯಥಾರ್ಥರಾಗಿದ್ದೇವೆ ಎಂಬುದನ್ನು ತೋರಿಸುತ್ತೇವೆ. “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.”—ಮತ್ತಾಯ 6:10.

ಆ ರಾಜ್ಯವು ಭ್ರಷ್ಟಾಚಾರದ ವಿರುದ್ಧ ಕ್ರಿಯೆಗೈಯುವಂತೆ ನಾವು ಎದುರುನೋಡುತ್ತಿರುವಾಗ, ನಮ್ಮಲ್ಲಿ ಪ್ರತಿಯೊಬ್ಬರೂ ಭ್ರಷ್ಟಾಚಾರವನ್ನು ಅನುಸರಿಸದೇ ಇರುವುದರಿಂದ ಅಥವಾ ಅದನ್ನು ಮನ್ನಿಸದೇ ಇರುವುದರಿಂದ ‘ನೀತಿಯ ಬೀಜವನ್ನು ಬಿತ್ತ’ಸಾಧ್ಯವಿದೆ. (ಹೋಶೇಯ 10:12) ನಾವು ಹೀಗೆ ಮಾಡುವುದಾದರೆ, ದೇವರ ಪ್ರೇರಿತ ವಾಕ್ಯವು ಶಕ್ತಿಶಾಲಿಯಾಗಿದೆ ಎಂಬುದಕ್ಕೆ ನಮ್ಮ ಜೀವಿತಗಳು ರುಜುವಾತನ್ನು ಕೊಡುವವು. ಪವಿತ್ರಾತ್ಮದ ಕತ್ತಿಯಿಂದ ಭ್ರಷ್ಟಾಚಾರದ ಮೇಲೆ ಜಯವನ್ನು ಸಾಧಿಸಬಲ್ಲೆವು.

[ಪಾದಟಿಪ್ಪಣಿಗಳು]

^ ಪ್ಯಾರ. 20 ಇವನ ಹೆಸರು ಬದಲಾಯಿಸಲ್ಪಟ್ಟಿದೆ.

^ ಪ್ಯಾರ. 28 ಲಂಚ ಮತ್ತು ಬಕ್ಷೀಸಿನ ನಡುವೆ ವ್ಯತ್ಯಾಸವಿದೆಯೆಂಬುದು ನಿಜವೇ. ನ್ಯಾಯವನ್ನು ತಿರುಚಲಿಕ್ಕಾಗಿ ಅಥವಾ ಬೇರೆ ಅಪ್ರಾಮಾಣಿಕ ವಿಷಯಗಳಿಗಾಗಿ ಲಂಚವು ಕೊಡಲಾಗುತ್ತದೆ. ಆದರೆ ಬಕ್ಷೀಸು, ಸಲ್ಲಿಸಲ್ಪಟ್ಟ ಸೇವೆಗಳಿಗಾಗಿ ತೋರಿಸುವ ಗಣ್ಯತೆಯ ಅಭಿವ್ಯಕ್ತಿಯಾಗಿದೆ. ಕಾವಲಿನಬುರುಜು (ಇಂಗ್ಲಿಷ್‌) ಪತ್ರಿಕೆಯ ಅಕ್ಟೋಬರ್‌ 1, 1986ರ ಸಂಚಿಕೆಯಲ್ಲಿ “ವಾಚಕರಿಂದ ಪ್ರಶ್ನೆಗಳು” ಎಂಬ ಲೇಖನದಲ್ಲಿ ಇದನ್ನು ಚರ್ಚಿಸಲಾಗಿದೆ.

[ಪುಟ 7ರಲ್ಲಿರುವ ಚಿತ್ರ]

ಬೈಬಲಿನ ಸಹಾಯದಿಂದ, ನಾವು “ನೂತನ ವ್ಯಕ್ತಿತ್ವ”ವನ್ನು ಬೆಳೆಸಿಕೊಳ್ಳಬಲ್ಲೆವು ಮತ್ತು ಭ್ರಷ್ಟಾಚಾರದಿಂದ ದೂರವಿರಬಲ್ಲೆವು