ಯೆಹೋವನನ್ನು ಘನಪಡಿಸುವ ಸಂತೋಷದ ವಿವಾಹಗಳು
ಯೆಹೋವನನ್ನು ಘನಪಡಿಸುವ ಸಂತೋಷದ ವಿವಾಹಗಳು
ವೆಲ್ಷ್ ಮತ್ತು ಎಲ್‌ತೀಯರ ವಿವಾಹವು, 1985ರಲ್ಲಿ ದಕ್ಷಿಣ ಆಫ್ರಿಕದ ಸೊವೆಟೊದಲ್ಲಿ ನಡೆಯಿತು. ಆಗಾಗ ಅವರು ತಮ್ಮ ಮಗಳು ಸಿನ್ಸೀಯೊಂದಿಗೆ ತಮ್ಮ ವಿವಾಹದ ಆಲ್ಬಮ್ ಅನ್ನು ನೋಡುವಾಗ, ಆ ಸಂತೋಷದ ದಿನವನ್ನು ಪುನಃ ನೆನಪಿಸಿಕೊಳ್ಳುತ್ತಾರೆ. ವಿವಾಹಕ್ಕೆ ಕೂಡಿಬಂದಿದ್ದ ಅತಿಥಿಗಳನ್ನು ಆ ಆಲ್ಬಮ್‌ನಲ್ಲಿ ಗುರುತಿಸಲು ಮತ್ತು ಬಹಳಷ್ಟು ಸುಂದರವಾಗಿ ಸಿಂಗರಿಸಿಕೊಂಡಿದ್ದ ತನ್ನ ತಾಯಿಯ ಚಿತ್ರಗಳನ್ನು ನೋಡಲು ಸಿನ್ಸೀಗೆ ತುಂಬ ಆನಂದವಾಗುತ್ತದೆ.
ಸೊವೆಟೊವಿನ ಸಮುದಾಯ ಭವನ (ಕಮ್ಯೂನಿಟಿ ಹಾಲ್)ದಲ್ಲಿ ನಡೆದ ಆ ವಿವಾಹೋತ್ಸವವು, ಒಂದು ಭಾಷಣದೊಂದಿಗೆ ಆರಂಭವಾಯಿತು. ಅದರ ನಂತರ, ಕ್ರೈಸ್ತ ಯುವ ಜನರ ಒಂದು ಗಾಯಕವೃಂದವು ಚತುರ್ದನಿಯಲ್ಲಿ ದೇವರಿಗೆ ಸ್ತೋತ್ರ ಗೀತೆಗಳನ್ನು ಹಾಡಿತು. ಇದಾದ ಮೇಲೆ, ಅತಿಥಿಗಳು ಮದುವೆಯೂಟವನ್ನು ಆಸ್ವಾದಿಸುತ್ತಿದ್ದಂತೆ, ಹಿನ್ನೆಲೆಯಲ್ಲಿ ರಾಜ್ಯ ಸಂಗೀತವು ಇಂಪಾಗಿ ಕೇಳಿಬಂತು. ಮದ್ಯಸಾರದ ಪಾನೀಯಗಳು ಒದಗಿಸಲ್ಪಡಲಿಲ್ಲ, ಮತ್ತು ಉಚ್ಚ ಸ್ವರದಲ್ಲಿ ಸಂಗೀತವಾಗಲಿ ಇಲ್ಲವೆ ನೃತ್ಯವಾಗಲಿ ಯೋಜಿಸಲ್ಪಡಲಿಲ್ಲ. ಇದರ ಬದಲು, ಅತಿಥಿಗಳು ಒಬ್ಬರು ಇನ್ನೊಬ್ಬರೊಂದಿಗೆ ಸಹವಾಸಿಸುತ್ತಾ ಮತ್ತು ನವದಂಪತಿಗಳಿಗೆ ಶುಭ ಹಾರೈಸುತ್ತಾ ಸಮಯ ಕಳೆದರು. ಈ ಎಲ್ಲ ಕಾರ್ಯಗಳು ಸುಮಾರು ಮೂರು ತಾಸುಗಳ ವರೆಗೆ ನಡೆದವು. “ಇದು ಯಾವಾಗಲೂ ನನ್ನ ಸ್ಮರಣೆಗೆ ಸವಿನೆನಪುಗಳನ್ನು ತರಬಲ್ಲ ಒಂದು ವಿವಾಹವಾಗಿತ್ತು” ಎಂದು ಕ್ರೈಸ್ತ ಹಿರಿಯರಾದ ರೇಮಂಡ್ ಜ್ಞಾಪಿಸಿಕೊಂಡರು.
ವೆಲ್ಷ್ ಮತ್ತು ಎಲ್‌ತೀಯರ ವಿವಾಹವಾದಾಗ, ಅವರು ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ದಕ್ಷಿಣ ಆಫ್ರಿಕದ ಬ್ರಾಂಚ್ ಆಫೀಸಿನಲ್ಲಿ ಸ್ವಯಂಸೇವಕರಾಗಿದ್ದರು. ತಮ್ಮ ವಿವಾಹವನ್ನು ಆಡಂಬರದಿಂದ ಆಚರಿಸಲು ಅವರಿಂದ ಸಾಧ್ಯವಿರಲಿಲ್ಲ. ಆದರೆ ಕೆಲವು ಕ್ರೈಸ್ತರಾದರೊ, ಆಡಂಬರದ ವಿವಾಹಕ್ಕೆ ತಗಲುವ ಖರ್ಚನ್ನು ಸರಿದೂಗಿಸಲು ಪೂರ್ಣ ಸಮಯದ ಶುಶ್ರೂಷೆಯನ್ನು ಬಿಟ್ಟು, ಐಹಿಕ ಕೆಲಸಗಳಲ್ಲಿ ತೊಡಗಲು ಇಷ್ಟಪಟ್ಟಿದ್ದಾರೆ. ಆದರೆ, ಸರಳವಾಗಿ ವಿವಾಹವಾಗಲು ಆರಿಸಿಕೊಂಡ ವೆಲ್ಷ್ ಮತ್ತು ಎಲ್‌ತೀಯರು ಇದಕ್ಕಾಗಿ ವಿಷಾದಿಸುವುದಿಲ್ಲ, ಏಕೆಂದರೆ ಸಿನ್ಸೀಯ ಜನನದ ವರೆಗೆ ಅವರು ಪೂರ್ಣ ಸಮಯದ ಶುಶ್ರೂಷಕರಾಗಿಯೇ ದೇವರಿಗೆ ಸೇವೆ ಸಲ್ಲಿಸುವುದನ್ನು ಮುಂದುವರಿಸಲು ಇದರಿಂದ ಅವರಿಗೆ ಸಾಧ್ಯವಾಯಿತು.
ಆದರೆ, ದಂಪತಿಗಳು ತಮ್ಮ ವಿವಾಹದಲ್ಲಿ ಲೌಕಿಕ ಸಂಗೀತ ಹಾಗೂ ನೃತ್ಯವನ್ನು ಯೋಜಿಸಲು ಇಷ್ಟಪಟ್ಟರೆ ಆಗೇನು? ಅವರು ದ್ರಾಕ್ಷಾರಸ ಇಲ್ಲವೆ ಮದ್ಯಸಾರದ ಬೇರೆ ಪಾನೀಯಗಳನ್ನು ಒದಗಿಸಲು ನಿರ್ಧರಿಸಿದರೆ ಆಗೇನು? ಅವರು ಒಂದು ದೊಡ್ಡ ಹಾಗೂ ಆಡಂಬರದ ವಿವಾಹಕ್ಕೆ ಹಣ ಒದಗಿಸಲು ಶಕ್ತರಾಗಿರುವುದಾದರೆ ಆಗೇನು? ಈ ಸಮಾರಂಭವು ದೇವರ ಆರಾಧಕರಿಗೆ ತಕ್ಕದಾದ ಸಂತೋಷಕರ ಸಂದರ್ಭವಾಗಿ ಪರಿಣಮಿಸುವುದೆಂಬ ವಿಷಯದಲ್ಲಿ ಅವರು ಹೇಗೆ ನಿಶ್ಚಿತರಾಗಿರಸಾಧ್ಯವಿದೆ? ಇಂತಹ ಪ್ರಶ್ನೆಗಳನ್ನು ಜಾಗರೂಕವಾಗಿ ಪರಿಗಣಿಸುವ ಅಗತ್ಯವಿದೆ, ಏಕೆಂದರೆ ಬೈಬಲು ಹೀಗೆ ಆಜ್ಞಾಪಿಸುತ್ತದೆ: “ಹೀಗಿರಲಾಗಿ ನೀವು ಉಂಡರೂ ಕುಡಿದರೂ ಇನ್ನೇನೂ ಮಾಡಿದರೂ ಎಲ್ಲವನ್ನೂ ದೇವರ ಘನತೆಗಾಗಿ ಮಾಡಿರಿ.”—1 ಕೊರಿಂಥ 10:31.
ಮೋಜಿನಿಂದ ದೂರವಿರುವುದು
ನೀರಸ ವಿವಾಹದ ಕಲ್ಪನೆಯನ್ನು ಮಾಡಿಕೊಳ್ಳುವುದು ಸಹ ಕಷ್ಟಕರವಾಗಿದೆ. ಆದರೆ ತೀರ ವಿಪರೀತಕ್ಕೆ ಹೋಗುತ್ತಾ, ಅನಿರ್ಬಂಧಿತ ಮೋಜಿನಲ್ಲಿ ಒಳಗೂಡುವುದರಲ್ಲೂ ಬಹಳಷ್ಟು ಗಂಡಾಂತರವಿದೆ. ಸಾಕ್ಷಿಗಳಲ್ಲದವರ ಅನೇಕ ವಿವಾಹಗಳಲ್ಲಿ, ದೇವರಿಗೆ ಅಗೌರವವನ್ನು ತರುವಂತಹ ವಿಷಯಗಳು ನಡೆಯುತ್ತವೆ. ಉದಾಹರಣೆಗೆ, ಮತ್ತೇರುವ ಮಟ್ಟಿಗೆ ಮದ್ಯವನ್ನು ಸೇವಿಸುವುದು ಸರ್ವಸಾಧಾರಣ ವಿಷಯವಾಗಿಬಿಟ್ಟಿದೆ. ವಿಷಾದದ ಸಂಗತಿ ಏನೆಂದರೆ, ಇದು ಕೆಲವು ಕ್ರೈಸ್ತ ವಿವಾಹಗಳಲ್ಲಿಯೂ ನಡೆದಿದೆ.
“ಮತ್ತೇರಿಸುವ ಮದ್ಯವು ಅಬ್ಬರಿಸುವಂತಹದ್ದಾಗಿದೆ” ಎಂದು ಬೈಬಲ್ ಎಚ್ಚರಿಸುತ್ತದೆ. (ಜ್ಞಾನೋಕ್ತಿ 20:1, NW) “ಅಬ್ಬರಿಸು” ಎಂಬುದಾಗಿ ಭಾಷಾಂತರಿಸಲ್ಪಟ್ಟ ಹೀಬ್ರು ಪದದ ಅರ್ಥ “ಗದ್ದಲಮಾಡು” ಎಂದಾಗಿದೆ. ಒಬ್ಬ ವ್ಯಕ್ತಿಯು ಬಹಳಷ್ಟು ಗದ್ದಲವನ್ನು ಎಬ್ಬಿಸುವಂತೆ ಮದ್ಯವು ಪ್ರೇರಿಸಸಾಧ್ಯವಾದಲ್ಲಿ, ಒಟ್ಟಿಗೆ ಸೇರಿ ಮಿತಿಮೀರಿ ಕುಡಿಯುವಂತಹ ಒಂದು ದೊಡ್ಡ ಗುಂಪಿಗೆ ಅದು ಏನು ಮಾಡಸಾಧ್ಯವೆಂಬುದನ್ನು ಸ್ವಲ್ಪ ಊಹಿಸಿಕೊಳ್ಳಿರಿ! ಇಂತಹ ಸಂದರ್ಭಗಳು, ಬೈಬಲಿನಲ್ಲಿ “ಶರೀರಭಾವದ ಕರ್ಮಗಳು” ಎಂಬುದಾಗಿ ಪಟ್ಟಿಮಾಡಲ್ಪಟ್ಟಿರುವ “ಕುಡಿಕತನ ದುಂದೌತನ” ಮುಂತಾದ ಕೀಳ್ಮಟ್ಟ ಸ್ಥಿತಿಗಿಳಿಯಲು ಬಹಳ ಸಮಯ ಹಿಡಿಯಲಾರದು. ಮತ್ತು ಇಂತಹ ರೂಢಿಗಳು, ದೇವರ ರಾಜ್ಯದಾಳಿಕೆಯ ಕೆಳಗೆ ನಿತ್ಯ ಜೀವವನ್ನು ಪಡೆದುಕೊಳ್ಳುವುದರಿಂದ ಒಬ್ಬ ವ್ಯಕ್ತಿಯನ್ನು ಅನರ್ಹಗೊಳಿಸುತ್ತವೆ.—ಗಲಾತ್ಯ 5:19-21.
“ಮೋಜಿ”ಗಾಗಿರುವ ಗ್ರೀಕ್ ಪದವು, ಕುಡಿದು ಮತ್ತರಾಗಿ ಹಾಡುತ್ತಾ, ಕುಣಿಯುತ್ತಾ, ಮತ್ತು ಸಂಗೀತವನ್ನು ನುಡಿಸುತ್ತಿದ್ದ ಯುವಕರ ಗದ್ದಲಮಯ ಮೆರವಣಿಗೆಯನ್ನು ವರ್ಣಿಸಲು ಬಳಸಲ್ಪಟ್ಟಿತು. ವಿವಾಹವೊಂದರಲ್ಲಿ ಮದ್ಯಸಾರದ ಬಳಕೆಗೆ ಕಡಿವಾಣವಿಲ್ಲದಿದ್ದರೆ, ಮತ್ತು ಉಚ್ಚ ಸ್ವರದಲ್ಲಿ ಸಂಗೀತವೂ ಹುಚ್ಚು ಕುಣಿತವೂ ಇದ್ದರೆ, ಆ ಸಮಾರಂಭವು ಒಂದು ಮೋಜಾಗಿ ಬದಲಾಗುವ ಅಪಾಯವಿದೆ. ಇಂತಹ ವಾತಾವರಣದಲ್ಲಿ, ದುರ್ಬಲರು ಸುಲಭವಾಗಿ ಶೋಧನೆಗೆ ಒಳಗಾಗಿ, “ಜಾರತ್ವ ಬಂಡುತನ ನಾಚಿಕೆಗೇಡಿತನ . . . ಸಿಟ್ಟು” ಎಂಬಂತಹ ಶರೀರಭಾವದ ಕರ್ಮಗಳನ್ನು ಮಾಡುವವರಾಗಬಹುದು. ಒಂದು ಕ್ರೈಸ್ತ ವಿವಾಹದ ಆನಂದವನ್ನು ಕೆಡಿಸುವಂತಹ ಶರೀರಭಾವದ ಇಂತಹ ಕರ್ಮಗಳನ್ನು ತಡೆಗಟ್ಟಲು ಏನನ್ನು ಮಾಡಸಾಧ್ಯವಿದೆ? ಆ ಪ್ರಶ್ನೆಗೆ ಉತ್ತರ ನೀಡಲು, ಒಂದು ನಿರ್ದಿಷ್ಟ ವಿವಾಹದ ಕುರಿತು ಬೈಬಲ್ ಹೇಳುವುದನ್ನು ನಾವು ಪರಿಗಣಿಸೋಣ.
ಯೇಸು ಹಾಜರಾದ ಒಂದು ವಿವಾಹ
ಯೇಸು ಮತ್ತು ಅವನ ಶಿಷ್ಯರು ಗಲಿಲಾಯದ ಕಾನಾ ಊರಿನಲ್ಲಿ ನಡೆದ ಒಂದು ವಿವಾಹಕ್ಕೆ ಆಮಂತ್ರಿಸಲ್ಪಟ್ಟಿದ್ದರು. ಅವರು ಆ ಕರೆಯೋಲೆಗೆ ಓಗೊಟ್ಟರಲ್ಲದೆ, ಯೇಸು ಆ ಸಮಾರಂಭದ ಆನಂದವನ್ನು ಮತ್ತಷ್ಟೂ ಹೆಚ್ಚಿಸಿದನು. ದ್ರಾಕ್ಷಾರಸದ ಕೊರತೆಯುಂಟಾದಾಗ, ಅವನು ಅದ್ಭುತಕರವಾಗಿ ಅತ್ಯುತ್ತಮ ಗುಣಮಟ್ಟದ ದ್ರಾಕ್ಷಾರಸವನ್ನು ಒದಗಿಸಿದನು. ಅದಕ್ಕೆ ಕೃತಜ್ಞನಾಗಿದ್ದ ವರನೂ ಅವನ ಕುಟುಂಬದವರೂ, ಮಿಕ್ಕಿ ಉಳಿದ ದ್ರಾಕ್ಷಾರಸವನ್ನು ವಿವಾಹದ ನಂತರ ಸ್ವಲ್ಪ ದಿನ ಉಪಯೋಗಿಸಿದ್ದಿರಬಹುದೆಂಬುದರಲ್ಲಿ ಸಂದೇಹವೇ ಇಲ್ಲ.—ಯೋಹಾನ 2:3-11.
ಯೇಸು ಹಾಜರಾದ ವಿವಾಹದಿಂದ ನಾವು ಹಲವಾರು ಪಾಠಗಳನ್ನು ಕಲಿತುಕೊಳ್ಳಸಾಧ್ಯವಿದೆ. ಮೊದಲನೆಯದಾಗಿ, ಯೇಸು ಮತ್ತು ಅವನ ಶಿಷ್ಯರು ಆಹ್ವಾನವಿಲ್ಲದೆ ಆ ವಿವಾಹದ ಔತಣಕ್ಕೆ ನುಗ್ಗಲಿಲ್ಲ. ಅವರು ಆಮಂತ್ರಿಸಲ್ಪಟ್ಟಿದ್ದರೆಂದು ಬೈಬಲು ನಿರ್ದಿಷ್ಟವಾಗಿ ಹೇಳುತ್ತದೆ. (ಯೋಹಾನ 2:1, 2) ಅಂತೆಯೇ, ವಿವಾಹದ ಔತಣಗಳ ಎರಡು ದೃಷ್ಟಾಂತಗಳಲ್ಲಿ, ತಾವು ಆಮಂತ್ರಿಸಲ್ಪಟ್ಟಿದ್ದ ಕಾರಣದಿಂದಲೇ ಅತಿಥಿಗಳು ಹಾಜರಾದರೆಂಬ ವಿಷಯದ ಕುರಿತು ಯೇಸು ಪುನಃ ಪುನಃ ಹೇಳಿದನು.—ಮತ್ತಾಯ 22:2-4, 8, 9; ಲೂಕ 14:8-10.
ಕೆಲವೊಂದು ದೇಶಗಳಲ್ಲಿ, ಸಮುದಾಯದಲ್ಲಿರುವ ಎಲ್ಲರೂ ವಿವಾಹದ ಔತಣಕ್ಕೆ ಕರೆಯಲ್ಪಡಲಿ ಇಲ್ಲದಿರಲಿ ಅಲ್ಲಿಗೆ ಹೋಗುವುದು ವಾಡಿಕೆಯಾಗಿದೆ. ಆದರೆ ಇದು, ಹಣಕಾಸಿನ ತೊಂದರೆಗೆ ನಡೆಸಬಹುದು. ಒಂದು ದೊಡ್ಡ ಗುಂಪಿಗೆ ಸಾಕಷ್ಟು ಅನ್ನಪಾನಗಳನ್ನು ಒದಗಿಸುವ ಸಲುವಾಗಿ ಸಿರಿವಂತರಾಗಿರದ ದಂಪತಿಗಳು ಸಾಲದಲ್ಲಿ ಸಿಲುಕಿಕೊಳ್ಳಬಹುದು. ಆದುದರಿಂದ, ಕ್ರೈಸ್ತ ದಂಪತಿಗಳು ನಿರ್ದಿಷ್ಟ ಸಂಖ್ಯೆಯ ಅತಿಥಿಗಳಿಗೆ ಮಾತ್ರ ಒಂದು ಸರಳವಾದ ಔತಣವನ್ನು ಇಟ್ಟುಕೊಳ್ಳಲು ನಿರ್ಧರಿಸುವುದಾದರೆ, ಆಮಂತ್ರಿಸಲ್ಪಡದಿರುವ ಜೊತೆ ಕ್ರೈಸ್ತರು ಆ ಏರ್ಪಾಡನ್ನು ಅರ್ಥಮಾಡಿಕೊಂಡು ಅದಕ್ಕೆ ಗೌರವ ಸಲ್ಲಿಸಬೇಕು. ದಕ್ಷಿಣ ಆಫ್ರಿಕದ ಕೇಪ್ ಟೌನ್‌ನಲ್ಲಿ ವಿವಾಹವಾದ ಒಬ್ಬ ವ್ಯಕ್ತಿಯು ತನ್ನ ವಿವಾಹಕ್ಕೆ 200 ಅತಿಥಿಗಳನ್ನು ಆಮಂತ್ರಿಸಿದ್ದನು. ಆದರೆ ವಿವಾಹಕ್ಕೆ ಆಗಮಿಸಿದವರ ಸಂಖ್ಯೆ 600 ಆಗಿತ್ತು, ಮತ್ತು ಬೇಗನೆ ಆಹಾರವೆಲ್ಲವೂ ಮುಗಿದುಹೋಯಿತು. ಆಹ್ವಾನಿತರಲ್ಲದವರಲ್ಲಿ, ಒಂದು ಬಸ್ಸಿನಲ್ಲಿ ಹಿಡಿಸುವಷ್ಟು ಜನರು ಸೇರಿದ್ದರು. ಇವರು, ವಿವಾಹವು ಜರುಗಿದ ವಾರಾಂತ್ಯದಲ್ಲಿ ಕೇಪ್ ಟೌನ್‌ಗೆ ಭೇಟಿನೀಡುತ್ತಿದ್ದ ಸಂದರ್ಶಕರಾಗಿದ್ದರು. ಆ ಸಂದರ್ಶಕರ ಗೈಡ್ ಆಗಿದ್ದವನು ವಧೂವಿನ ದೂರದ ನೆಂಟನಾಗಿದ್ದು, ವಧು ಇಲ್ಲವೆ ವರನ ಅಭಿಪ್ರಾಯವನ್ನೂ ಕೇಳದೆ ಆ ಇಡೀ ಗುಂಪನ್ನು ಔತಣಕ್ಕೆ ಕರೆತರುವುದು ನ್ಯಾಯವಾದದ್ದೆಂದು ಎಣಿಸಿದ್ದನು!
ಔತಣಕ್ಕೆ ಎಲ್ಲರೂ ಸ್ವಾಗತಿಸಲ್ಪಟ್ಟಿದ್ದಾರೆಂದು ಹೇಳಿರದಿದ್ದಲ್ಲಿ, ಯೇಸುವಿನ ನಿಜ ಹಿಂಬಾಲಕನೊಬ್ಬನು ವಿವಾಹದ ಔತಣಕ್ಕೆ ಆಹ್ವಾನಿಸಲ್ಪಡದೆ ಹೋಗುವುದರಿಂದ ಮತ್ತು ಆಮಂತ್ರಿತ ಅತಿಥಿಗಳಿಗಾಗಿ ಸಿದ್ಧಗೊಳಿಸಲ್ಪಟ್ಟ ಅನ್ನಪಾನಗಳಲ್ಲಿ ಭಾಗವಹಿಸುವುದರಿಂದ ದೂರವಿರುವನು. ಆಹ್ವಾನಿಸಲ್ಪಡದೆ ಹೋಗಲಿಚ್ಛಿಸುವವರು ಹೀಗೆ ಸ್ವತಃ ಕೇಳಿಕೊಳ್ಳಬೇಕು: ‘ಈ ವಿವಾಹದ ಔತಣಕ್ಕೆ ಹಾಜರಾಗುವ ಮೂಲಕ ನಾನು ನವದಂಪತಿಗಳ ಕಡೆಗೆ ಪ್ರೀತಿಯ ಕೊರತೆಯನ್ನು ವ್ಯಕ್ತಪಡಿಸಲಾರೆನೊ? ನಾನು ಆ ಸಂತೋಷದ ಸಮಾರಂಭಕ್ಕೆ ತೊಂದರೆಯನ್ನುಂಟುಮಾಡಿ, ಅದರ ಸಂತೋಷವನ್ನು ಕುಂದಿಸಲಾರೆನೊ?’ ಸನ್ನಿವೇಶವನ್ನು ಅರ್ಥಮಾಡಿಕೊಳ್ಳುವ ಕ್ರೈಸ್ತನೊಬ್ಬನು, ತಾನು ಆಮಂತ್ರಿಸಲ್ಪಡದಿದ್ದ ಕಾರಣ ಬೇಸರಪಟ್ಟುಕೊಳ್ಳುವ ಬದಲು ದಂಪತಿಗಳಿಗೆ ಶುಭಹಾರೈಸಲು ಪ್ರೀತಿಯಿಂದ ಒಂದು ಸಂದೇಶವನ್ನು ಕಳುಹಿಸಿ, ಅವರ ಮೇಲೆ ಯೆಹೋವನ ಆಶೀರ್ವಾದವನ್ನು ಕೋರಬಹುದು. ಆ ದಂಪತಿಗಳಿಗೆ ಸಹಾಯವಾಗುವಂತೆ ಅವರಿಗೊಂದು ಕೊಡುಗೆಯನ್ನು ಕಳುಹಿಸುವ ಮೂಲಕವೂ ಅವರ ವಿವಾಹದಿನದ ಸಂತೋಷಕ್ಕೆ ಹೆಚ್ಚನ್ನು ಕೂಡಿಸಲು ಅವನು ಯೋಜಿಸಬಹುದು.—ಪ್ರಸಂಗಿ 7:9; ಎಫೆಸ 4:28.
ಯಾರು ಹೊಣೆಗಾರರು?
ಆಫ್ರಿಕದ ಕೆಲವು ಭಾಗಗಳಲ್ಲಿ, ವಿವಾಹದ ಏರ್ಪಾಡುಗಳ ಹೊಣೆಯನ್ನು ಹಿರಿಯ ಸಂಬಂಧಿಕರು ವಹಿಸಿಕೊಳ್ಳುವುದು ವಾಡಿಕೆಯಾಗಿದೆ. ಇದು ದಂಪತಿಗಳ ಹಣಕಾಸಿನ ಹೊರೆಯನ್ನು ಕಡಿಮೆಮಾಡುವುದರಿಂದ, ಇದಕ್ಕಾಗಿ ಅವರು ಕೃತಜ್ಞರಾಗಿರಬಹುದು. ಅದೂ ಅಲ್ಲದೆ, ಆ ಸಂದರ್ಭದಲ್ಲಿ ನಡೆಯಬಹುದಾದ ಯಾವುದೇ ಘಟನೆಯ ಹೊಣೆಯಿಂದಲೂ ಅದು ತಮ್ಮನ್ನು ಪಾರುಮಾಡುತ್ತದೆಂದು ಅವರು ನೆನಸಬಹುದು. ಆದರೆ, ಸದುದ್ದೇಶವುಳ್ಳ ಸಂಬಂಧಿಕರಿಂದ ಯಾವುದೇ ರೀತಿಯ ಸಹಾಯವನ್ನು ಸ್ವೀಕರಿಸಿಕೊಳ್ಳುವ ಮೊದಲು, ತಮ್ಮ ವೈಯಕ್ತಿಕ ಕೋರಿಕೆಗಳು ಗೌರವಿಸಲ್ಪಡುವವೊ ಎಂಬುದನ್ನು ದಂಪತಿಗಳು ಖಚಿತಪಡಿಸಿಕೊಳ್ಳಬೇಕು.
ಯೇಸು “ಪರಲೋಕದಿಂದ ಇಳಿದುಬಂದ” ದೇವಕುಮಾರನಾಗಿದ್ದರೂ, ಅವನು ಕಾನಾದಲ್ಲಿ ನಡೆದ ವಿವಾಹದ ಹೊಣೆಗಾರಿಕೆಯನ್ನು ವಹಿಸಿಕೊಂಡು ಅದರ ಹೆಚ್ಚಿನ ಕಾರ್ಯಗಳನ್ನು ತಾನೇ ನಿರ್ದೇಶಿಸಿದನೆಂಬ ಸೂಚನೆ ಎಲ್ಲಿಯೂ ಕಂಡುಬರುವುದಿಲ್ಲ. (ಯೋಹಾನ 6:41) ಅದರ ಬದಲು, ಬೇರೆ ಯಾರೊ ಒಬ್ಬರು “ಔತಣದ ಪಾರುಪತ್ಯಗಾರ”ನಾಗಿ ಕಾರ್ಯವಹಿಸಲು ನೇಮಿಸಲ್ಪಟ್ಟಿದ್ದರೆಂದು ಬೈಬಲಿನ ವೃತ್ತಾಂತವು ನಮಗೆ ಹೇಳುತ್ತದೆ. (ಯೋಹಾನ 2:8) ಸರದಿಯಾಗಿ ಈ ಪಾರುಪತ್ಯಗಾರನು, ಹೊಸ ಕುಟುಂಬದ ತಲೆಯಾಗಿರುವ ವರನಿಗೆ ಲೆಕ್ಕ ಒಪ್ಪಿಸಬೇಕಾಗಿತ್ತು.—ಯೋಹಾನ 2:9, 10.
ಕೊಲೊಸ್ಸೆ 3:18-20) ತನ್ನ ವಿವಾಹದಲ್ಲಿ ಏನು ಸಂಭವಿಸುತ್ತದೊ ಅದಕ್ಕೆ ಅವನೇ ಹೊಣೆಗಾರನಾಗಿರಬೇಕು. ಆದುದರಿಂದಲೇ ವರನು ವಿವೇಚನೆಯುಳ್ಳವನಾಗಿದ್ದು, ಸಾಧ್ಯವಾದಲ್ಲಿ ತನ್ನ ವಧುವಿನ, ತನ್ನ ಹೆತ್ತವರ ಮತ್ತು ವಧುವಿನ ಹೆತ್ತವರ ಕೋರಿಕೆಗಳಿಗೆ ಒಪ್ಪಿಕೊಳ್ಳಬೇಕು. ಹಾಗಿದ್ದರೂ, ದಂಪತಿಗಳ ಕೋರಿಕೆಗಳಿಗೆ ವಿರುದ್ಧವಾಗಿ ವಿಷಯಗಳನ್ನು ಏರ್ಪಡಿಸಲು ಸಂಬಂಧಿಕರು ಒತ್ತಾಯಿಸಿದರೆ, ದಂಪತಿಗಳು ನಮ್ರತೆಯಿಂದ ಅವರ ಸಹಾಯವನ್ನು ನಿರಾಕರಿಸಿ, ತಮ್ಮ ಸರಳವಾದ ವಿವಾಹಕ್ಕೆ ದಂಪತಿಗಳೇ ಹಣ ಒದಗಿಸಿಕೊಳ್ಳಬಹುದು. ಈ ರೀತಿಯಲ್ಲಿ, ದಂಪತಿಗಳು ನಂತರ ವಿಷಾದಿಸಬಹುದಾದ ಯಾವುದೇ ಅಪ್ರಿಯ ಘಟನೆಗಳು ಅಲ್ಲಿ ನಡೆಯಲಾರವು. ಉದಾಹರಣೆಗೆ ಆಫ್ರಿಕದಲ್ಲಿ ನಡೆದ ಒಂದು ಕ್ರೈಸ್ತ ವಿವಾಹದಲ್ಲಿ, ಆ ಸಮಾರಂಭದ ವ್ಯವಸ್ಥಾಪಕನಾಗಿ ಕಾರ್ಯಮಾಡುತ್ತಿದ್ದ ಒಬ್ಬ ಅವಿಶ್ವಾಸಿ ಸಂಬಂಧಿಕನು ಮೃತ ಪೂರ್ವಿಕರ ಹೆಸರಿನಲ್ಲಿ ಸ್ವಸ್ತಿಪಾನಮಾಡಿದನು!
ಈ ಹೊಸ ಕುಟುಂಬದ ದೇವನೇಮಿತ ತಲೆಯನ್ನು ಕ್ರೈಸ್ತ ಸಂಬಂಧಿಕರು ಗೌರವಿಸಬೇಕು. (ಕೆಲವೊಮ್ಮೆ ವಿವಾಹದ ಸಮಾರಂಭವು ಕೊನೆಗೊಳ್ಳುವ ಮುಂಚೆಯೇ ದಂಪತಿಗಳು ತಮ್ಮ ಮಧುಚಂದ್ರಕ್ಕೆ ತೆರಳುತ್ತಾರೆ. ಇಂತಹ ಸಂದರ್ಭದಲ್ಲಿ, ಬೈಬಲ್ ಮಟ್ಟಗಳು ಕಾಪಾಡಲ್ಪಡುವವು ಎಂಬುದನ್ನು ಮತ್ತು ಸಮಾರಂಭವು ಯೋಗ್ಯವಾದ ಸಮಯಕ್ಕೆ ಕೊನೆಗೊಳ್ಳುವುದೆಂಬುದನ್ನು ಜವಾಬ್ದಾರಿಯುಳ್ಳವರು ನಿಶ್ಚಯಿಸುವಂತೆ ವರನು ಏರ್ಪಡಿಸಬೇಕು.
ಜಾಗರೂಕವಾದ ಯೋಜನೆ ಮತ್ತು ಸಮತೂಕ
ಯೇಸು ಹಾಜರಾದ ವಿವಾಹೋತ್ಸವದಲ್ಲಿ ಒಳ್ಳೆಯ ಆಹಾರವು ಯಥೇಷ್ಟವಾಗಿತ್ತೆಂಬುದು ವ್ಯಕ್ತ, ಏಕೆಂದರೆ ಬೈಬಲು ಆ ಸಮಾರಂಭವನ್ನು ವಿವಾಹದ ಔತಣವೆಂಬುದಾಗಿ ವರ್ಣಿಸುತ್ತದೆ. ಈಗಾಗಲೇ ಗಮನಿಸಿರುವಂತೆ, ಸಾಕಷ್ಟು ದ್ರಾಕ್ಷಾರಸವೂ ಇತ್ತು. ಅಲ್ಲಿ ಯೋಗ್ಯವಾದ ಸಂಗೀತ ಹಾಗೂ ಗಾಂಭೀರ್ಯವುಳ್ಳ ನೃತ್ಯವು ಇತ್ತೆಂಬುದರಲ್ಲಿ ಸಂದೇಹವಿಲ್ಲ, ಏಕೆಂದರೆ ಇವೆಲ್ಲ ಯೆಹೂದಿ ಸಾಮಾಜಿಕ ಜೀವನದ ಸಾಮಾನ್ಯ ವೈಶಿಷ್ಟ್ಯಗಳಾಗಿದ್ದವು. ಯೇಸು ಪೋಲಿಹೋದ ಮಗನ ಕುರಿತಾದ ತನ್ನ ಜನಪ್ರಿಯ ಸಾಮ್ಯವನ್ನು ಹೇಳಿದಾಗ, ಈ ಎಲ್ಲ ಅಂಶವನ್ನು ಅದರಲ್ಲಿ ಸ್ಪಷ್ಟಪಡಿಸಿದನು. ಆ ಕಥೆಯಲ್ಲಿರುವ ಶ್ರೀಮಂತ ತಂದೆಯು, ತನ್ನ ಪಶ್ಚಾತ್ತಾಪಿ ಮಗನ ಹಿಂದಿರುಗುವಿಕೆಯಿಂದ ಎಷ್ಟೊಂದು ಆನಂದಿತನಾಗಿದ್ದನೆಂದರೆ, ಅವನಂದದ್ದು: “ಹಬ್ಬಮಾಡೋಣ, ಉಲ್ಲಾಸಪಡೋಣ.” ಯೇಸು ಹೇಳಿದ ಸಾಮ್ಯಕ್ಕನುಸಾರ, ಆ ಉತ್ಸವದಲ್ಲಿ “ವಾದ್ಯನರ್ತನ”ಗಳೂ ಸೇರಿದ್ದವು.—ಲೂಕ 15:23, 25.
ಆದರೆ ಕಾನಾದಲ್ಲಿ ನಡೆದ ವಿವಾಹೋತ್ಸವದಲ್ಲಿ ಸಂಗೀತ ಹಾಗೂ ನೃತ್ಯವಿತ್ತೆಂಬುದನ್ನು ಬೈಬಲು ನಿರ್ದಿಷ್ಟವಾಗಿ ಸೂಚಿಸದೇ ಇರುವುದು ಆಸಕ್ತಿಯ ವಿಷಯವಾಗಿದೆ. ವಾಸ್ತವದಲ್ಲಿ, ವಿವಾಹಗಳ ಕುರಿತಾದ ಯಾವುದೇ ಬೈಬಲ್ ವೃತ್ತಾಂತಗಳಲ್ಲಿ ನೃತ್ಯದ ಸೂಚನೆ ಇಲ್ಲ. ಬೈಬಲ್ ಸಮಯಗಳಲ್ಲಿ ಜೀವಿಸಿದ ದೇವರ ನಂಬಿಗಸ್ತ ಸೇವಕರಲ್ಲಿ, ನೃತ್ಯವು ಯಾವಾಗಲಾದರೊಮ್ಮೆ ನಡೆಯುತ್ತಿತ್ತೇ ವಿನಃ ಅದು ಅವರ ವಿವಾಹಗಳ ಮುಖ್ಯಾಂಶವಾಗಿರಲಿಲ್ಲವೆಂದು ತೋರುತ್ತದೆ. ಇದರಿಂದ ನಾವು ಯಾವ ಪಾಠವನ್ನಾದರೂ ಕಲಿಯಸಾಧ್ಯವಿದೆಯೊ?
ಆಫ್ರಿಕದಲ್ಲಿ ನಡೆಯುವ ಕೆಲವು ಕ್ರೈಸ್ತ ವಿವಾಹಗಳಲ್ಲಿ, ಶಕ್ತಿಶಾಲಿ ಇಲೆಕ್ಟ್ರಾನಿಕ್ ಧ್ವನಿ ವ್ಯವಸ್ಥೆಗಳು ಉಪಯೋಗಿಸಲ್ಪಡುತ್ತವೆ. ಸಂಗೀತವು ಎಷ್ಟೊಂದು ಉಚ್ಚಸ್ವರದಲ್ಲಿ ಇರುತ್ತದೆಂದರೆ, ಅತಿಥಿಗಳು ನೆಮ್ಮದಿಯಿಂದ ಮಾತಾಡಲೂ ಸಾಧ್ಯವಿಲ್ಲ. ಕೆಲವೊಮ್ಮೆ ಆಹಾರವು ಕಡಿಮೆಯಾದರೂ, ಸುಲಭವಾಗಿ ನಿಯಂತ್ರಣವನ್ನು ಕಳೆದುಕೊಳ್ಳುವ ನೃತ್ಯಕ್ಕೆ ಅಲ್ಲಿ ಕೊರತೆಯೇ ಇರುವುದಿಲ್ಲ. ಇಂತಹ ಸಮಾರಂಭಗಳು ಒಂದು ವಿವಾಹೋತ್ಸವವಾಗಿರದೆ, ಡಾನ್ಸ್ ಪಾರ್ಟಿಗೆ ಕೇವಲ ಒಂದು ನೆವವಾಗಿರಬಹುದು. ಅದೂ ಅಲ್ಲದೆ, ಉಚ್ಚಸ್ವರದಲ್ಲಿರುವ ಸಂಗೀತವು ಅನೇಕವೇಳೆ ತೊಂದರೆಯನ್ನು ಉಂಟುಮಾಡುವ, ಆಹ್ವಾನವಿಲ್ಲದೆ ಬರುವಂತಹ ಅಪರಿಚಿತರನ್ನು ಅಲ್ಲಿಗೆ ಆಕರ್ಷಿಸುತ್ತದೆ.
ವಿವಾಹಗಳ ಕುರಿತಾದ ಬೈಬಲ್ ವೃತ್ತಾಂತವು ಸಂಗೀತ ಹಾಗೂ ನೃತ್ಯಕ್ಕೆ ಹೆಚ್ಚಿನ ಒತ್ತನ್ನು ನೀಡದಿರುವುದರಿಂದ, ಯೆಹೋವನನ್ನು ಘನಪಡಿಸುವಂತಹ ವಿವಾಹವೊಂದನ್ನು ಯೋಜಿಸುವ ದಂಪತಿಗಳಿಗೆ ಇದು ಮಾರ್ಗದರ್ಶನವನ್ನು ನೀಡಬಾರದೊ? ಹಾಗಿದ್ದರೂ, ದಕ್ಷಿಣ ಆಫ್ರಿಕದಲ್ಲಿ ಇತ್ತೀಚೆಗೆ ನಡೆದ ಹಲವಾರು ವಿವಾಹಗಳ ಸಿದ್ಧತೆ ನಡೆಸುತ್ತಿದ್ದಾಗ, ವಿವಾಹ ತಂಡದ ಭಾಗವಾಗಿರಲು ಆರಿಸಿಕೊಳ್ಳಲ್ಪಟ್ಟ ಕ್ರೈಸ್ತ ಯುವಕರು, ನೃತ್ಯದ ಜಟಿಲವಾದ ಹೆಜ್ಜೆಗಳನ್ನು ಪ್ರ್ಯಾಕ್ಟೀಸ್ ಮಾಡುತ್ತಾ ಅನೇಕ ತಾಸುಗಳನ್ನು ಕಳೆದರು. ತಿಂಗಳುಗಟ್ಟಲೆ ಅವರು ತಮ್ಮ ಹೆಚ್ಚಿನ ಸಮಯವನ್ನು ಈ ರೀತಿಯಲ್ಲಿ ಕಳೆದರು. ಆದರೆ ಕ್ರೈಸ್ತರು, ಸುವಾರ್ತಾ ಕೆಲಸ, ವೈಯಕ್ತಿಕ ಅಧ್ಯಯನ, ಮತ್ತು ಕ್ರೈಸ್ತ ಕೂಟಗಳಿಗೆ ಹಾಜರಾಗುವಂತಹ ‘ಪ್ರಮುಖ ಕಾರ್ಯಗಳಿಗೆ’ ‘ಸಮಯವನ್ನು ಕೊಂಡುಕೊಳ್ಳ’ಬೇಕಾಗಿದೆ.—ಎಫೆಸ 5:16; ಫಿಲಿಪ್ಪಿ 1:10.
ಕಾನಾದಲ್ಲಿ ನಡೆದ ವಿವಾಹವು ಒಂದು ದೊಡ್ಡ, ಆಡಂಬರದ ವಿವಾಹವಾಗಿತ್ತೆಂಬುದು, ಯೇಸು ಒದಗಿಸಿಕೊಟ್ಟ ದ್ರಾಕ್ಷಾರಸದ ಪ್ರಮಾಣದಿಂದ ತಿಳಿದುಬರುತ್ತದೆ. ಹಾಗಿದ್ದರೂ ಆ ಸಮಾರಂಭವು ಗದ್ದಲಮಯವಾಗಿರಲಿಲ್ಲವೆಂದು ಮತ್ತು ಕೆಲವೊಂದು ಯೆಹೂದಿ ವಿವಾಹಗಳಲ್ಲಿ ನಡೆಯುವಂತೆ ಅತಿಥಿಗಳು ಮದ್ಯಪಾನದ ದುರುಪಯೋಗವನ್ನು ಅಲ್ಲಿ ಮಾಡಲಿಲ್ಲವೆಂಬುದರ ಖಾತ್ರಿಯು ನಮಗಿರಸಾಧ್ಯವಿದೆ. (ಯೋಹಾನ 2:10) ಈ ವಿಷಯವು ನಮಗೆ ಹೇಗೆ ತಿಳಿದುಬರುತ್ತದೆ? ಏಕೆಂದರೆ ಕರ್ತನಾದ ಯೇಸು ಕ್ರಿಸ್ತನು ಅಲ್ಲಿ ಉಪಸ್ಥಿತನಾಗಿದ್ದನು. ಕೂಡಿಬಂದಿದ್ದ ಎಲ್ಲ ಮನುಷ್ಯರಲ್ಲಿ ಯೇಸು, “ಕುಡುಕರಲ್ಲಿ . . . ಸೇರದಿರು” ಎಂಬುದಾಗಿ ದೇವರು ದುಸ್ಸಹವಾಸದ ಕುರಿತು ನೀಡಿದ್ದ ಆಜ್ಞೆಗೆ ವಿಧೇಯನಾಗಲು ಅತ್ಯಂತ ಜಾಗ್ರತೆ ವಹಿಸಿದ್ದಿರಬೇಕು.—ಜ್ಞಾನೋಕ್ತಿ 23:20.
ಆದುದರಿಂದ, ದಂಪತಿಗಳು ತಮ್ಮ ವಿವಾಹದಲ್ಲಿ ದ್ರಾಕ್ಷಾರಸವನ್ನಾಗಲಿ ಮದ್ಯಸಾರದ ಬೇರೆ ಪಾನೀಯಗಳನ್ನಾಗಲಿ ಒದಗಿಸಲು ನಿರ್ಧರಿಸಿದರೆ, ಅದು ಜವಾಬ್ದಾರಿಯುತ ವ್ಯಕ್ತಿಗಳ ಕಟ್ಟುನಿಟ್ಟಿನ ನಿಯಂತ್ರಣದಲ್ಲಿರುವಂತೆ ಅವರು ಏರ್ಪಡಿಸಬೇಕು. ಮತ್ತು ಸಂಗೀತದ ಪರವಾಗಿ ಅವರು ನಿರ್ಧರಿಸಿದರೆ, ಯೋಗ್ಯವಾದ ಸಂಗೀತವನ್ನು ಆರಿಸಿ, ಒಬ್ಬ ಜವಾಬ್ದಾರಿಯುತ ವ್ಯಕ್ತಿಯು ಅದರ ಧ್ವನಿಯನ್ನು ನಿಯಂತ್ರಿಸುವಂತೆ ಏರ್ಪಡಿಸಬೇಕು. ಆ ಜವಾಬ್ದಾರಿಯನ್ನು ಅತಿಥಿಗಳು ವಹಿಸಿಕೊಂಡು, ಸಂದೇಹಾಸ್ಪದವಾದ ಸಂಗೀತವನ್ನು ನುಡಿಸುವಂತೆ ಇಲ್ಲವೆ ಅನುಚಿತವಾದ ಮಟ್ಟಕ್ಕೆ ಧ್ವನಿಯನ್ನು ಏರಿಸುವಂತೆ ಅನುಮತಿಸಬಾರದು. ನೃತ್ಯವು ಯೋಜಿಸಲ್ಪಡುವಲ್ಲಿ, ಅದು ಗಾಂಭೀರ್ಯವುಳ್ಳದ್ದೂ ನಿಯಂತ್ರಿತವಾದದ್ದೂ ಆಗಿರಬೇಕು. ಅವಿಶ್ವಾಸಿ ಸಂಬಂಧಿಕರು ಇಲ್ಲವೆ ಪ್ರೌಢರಾಗಿರದ ಕ್ರೈಸ್ತರು ಅಸಭ್ಯವಾದ ಅಥವಾ ಕಾಮುಕವಾದ ನೃತ್ಯದ ಚಲನೆಗಳಲ್ಲಿ ತೊಡಗುವುದಾದರೆ, ವರನು ಸಂಗೀತವನ್ನು ಬದಲಿಸಬೇಕಾಗುವುದು ಇಲ್ಲವೆ ನೃತ್ಯವನ್ನು ನಿಲ್ಲಿಸುವಂತೆ ಜಾಣ್ಮೆಯಿಂದ ವಿನಂತಿಸಿಕೊಳ್ಳಬಹುದು. ಇಲ್ಲದಿದ್ದರೆ, ವಿವಾಹವು ಕೋಲಾಹಲದ ಘಟನೆಯಾಗಿ ಪರಿಣಮಿಸಿ, ಮುಗ್ಗರಿಸುವುದಕ್ಕೆ ಕಾರಣವಾಗಬಹುದು.—ಕೆಲವು ರೀತಿಯ ಆಧುನಿಕ ನೃತ್ಯ, ಉಚ್ಚಸ್ವರದ ಸಂಗೀತ, ಮತ್ತು ಮದ್ಯಸಾರದ ಅನಿಯಂತ್ರಿತ ಬಳಕೆಯಲ್ಲಿ ಒಳಗೂಡಿರುವ ಅಪಾಯಗಳ ಕಾರಣ, ಅನೇಕ ಕ್ರೈಸ್ತ ವರರು ತಮ್ಮ ವಿವಾಹದಲ್ಲಿ ಈ ಮೇಲಿನ ಅಂಶಗಳನ್ನು ಸೇರಿಸದಿರಲು ನಿಶ್ಚಯಿಸಿದ್ದಾರೆ. ಇದಕ್ಕಾಗಿ ಕೆಲವರು ಟೀಕಿಸಲ್ಪಟ್ಟಿದ್ದಾರೆ. ಆದರೆ ವಾಸ್ತವದಲ್ಲಿ, ದೇವರ ಪರಿಶುದ್ಧ ನಾಮಕ್ಕೆ ಕಳಂಕವನ್ನು ತರಬಲ್ಲ ಯಾವುದೇ ವಿಷಯವನ್ನು ತ್ಯಜಿಸಿಬಿಡುವ ತಮ್ಮ ಅಪೇಕ್ಷೆಗಾಗಿ ಅವರು ಶ್ಲಾಘಿಸಲ್ಪಡಬೇಕು. ಮತ್ತೊಂದು ಕಡೆಯಲ್ಲಿ, ಕೆಲವು ವರರು ಯೋಗ್ಯವಾದ ಸಂಗೀತ, ನೃತ್ಯಕ್ಕಾಗಿ ನಿರ್ದಿಷ್ಟ ಸಮಯ, ಮತ್ತು ಮಿತವಾದ ಪ್ರಮಾಣದಲ್ಲಿ ಮದ್ಯಸಾರವನ್ನು ಒದಗಿಸುವ ಏರ್ಪಾಡನ್ನು ಮಾಡುತ್ತಾರೆ. ವಿಷಯವು ಏನೇ ಆಗಿರಲಿ, ವರನು ತನ್ನ ವಿವಾಹದಲ್ಲಿ ಏನನ್ನು ಅನುಮತಿಸುತ್ತಾನೊ ಅದಕ್ಕೆ ಅವನೇ ಜವಾಬ್ದಾರನಾಗಿದ್ದಾನೆ.
ಆಫ್ರಿಕದಲ್ಲಿ ಪ್ರೌಢರಲ್ಲದ ಕೆಲವರು ಘನಗಾಂಭೀರ್ಯವುಳ್ಳ ಕ್ರೈಸ್ತ ವಿವಾಹಗಳನ್ನು ಕ್ಷುಲ್ಲಕವೆಂದೆಣಿಸಿ, ಅವು ಶವಸಂಸ್ಕಾರಕ್ಕೆ ಹಾಜರಾಗುವುದಕ್ಕೆ ಸಮಾನವಾಗಿವೆ ಎಂದು ಹೇಳುತ್ತಾರೆ. ಆದರೆ ಇದು ಒಂದು ಸಮತೂಕದ ನೋಟವಲ್ಲ. ಶರೀರದ ಪಾಪಪೂರ್ಣ ಕರ್ಮಗಳು ತಾತ್ಕಾಲಿಕ ಸುಖವನ್ನು ಕೊಡುವುದಾದರೂ, ಅವು ಕ್ರೈಸ್ತರ ಮನಸ್ಸಾಕ್ಷಿಗಳನ್ನು ಘಾಸಿಗೊಳಿಸಿ, ದೇವರ ನಾಮದ ಮೇಲೆ ಕಳಂಕವನ್ನು ತರುತ್ತವೆ. (ರೋಮಾಪುರ 2:24) ಆದರೆ ಮತ್ತೊಂದು ಕಡೆಯಲ್ಲಿ, ದೇವರ ಪವಿತ್ರಾತ್ಮವು ನಿಜವಾದ ಆನಂದವನ್ನು ಉಂಟುಮಾಡುತ್ತದೆ. (ಗಲಾತ್ಯ 5:22) ತಮ್ಮ ವಿವಾಹ ದಿನವು ಒಂದು ಸಂತೋಷದ ಸಮಾರಂಭವಾಗಿತ್ತೆಂದು ಮತ್ತು ‘ಮುಗ್ಗರಿಕೆಗೆ ಕಾರಣ’ವಾಗಿರಲಿಲ್ಲವೆಂದು ಅನೇಕ ಕ್ರೈಸ್ತ ದಂಪತಿಗಳಿಗೆ ತಿಳಿದಿರುವುದರಿಂದ, ಅದನ್ನು ಅವರು ಹೆಮ್ಮೆಯಿಂದ ಜ್ಞಾಪಿಸಿಕೊಳ್ಳುತ್ತಾರೆ.—2 ಕೊರಿಂಥ 6:3, NW.
ವೆಲ್ಷ್ ಮತ್ತು ಎಲ್‌ತೀಯ, ತಮ್ಮ ವಿವಾಹಕ್ಕೆ ಬಂದಿದ್ದ ಅವಿಶ್ವಾಸಿ ಸಂಬಂಧಿಕರ ಅನೇಕ ಒಳ್ಳೆಯ ಹೇಳಿಕೆಗಳನ್ನು ಈಗಲೂ ಜ್ಞಾಪಿಸಿಕೊಳ್ಳುತ್ತಾರೆ. ಒಬ್ಬ ಸಂಬಂಧಿಕನು ಹೇಳಿದ್ದು: “ಈ ದಿನಗಳಲ್ಲಿ ನಡೆಯುವಂತಹ ಗದ್ದಲಮಯ ವಿವಾಹಗಳಿಂದ ನಮಗೆ ಬೇಸರ ಹಿಡಿದಿದೆ. ಅಪರೂಪಕ್ಕೊಮ್ಮೆ ಒಂದು ಸಭ್ಯವಾದ ವಿವಾಹದಲ್ಲಿ ಪಾಲ್ಗೊಳ್ಳುವುದು ಎಷ್ಟೊಂದು ಹಿತಕರವಾಗಿತ್ತು.”
ಎಲ್ಲಕ್ಕಿಂತಲೂ ಮಿಗಿಲಾಗಿ, ಸಂತೋಷದ ಮತ್ತು ಗಾಂಭೀರ್ಯವುಳ್ಳ ಕ್ರೈಸ್ತ ವಿವಾಹಗಳು, ವಿವಾಹದ ಮೂಲನಾದ ಯೆಹೋವ ದೇವರನ್ನು ಘನಪಡಿಸುತ್ತವೆ.
[ಪುಟ 22ರಲ್ಲಿರುವ ಚೌಕ/ಚಿತ್ರ]
ವಿವಾಹದ ಸಮಾರಂಭಕ್ಕಾಗಿರುವ ಚೆಕ್‌ಲಿಸ್ಟ್
• ನೀವು ಒಬ್ಬ ಅವಿಶ್ವಾಸಿ ಸಂಬಂಧಿಕನನ್ನು ಭಾಷಣ ನೀಡಲು ಆಹ್ವಾನಿಸುವುದಾದರೆ, ಅವನು ಯಾವುದಾದರೊಂದು ಅಕ್ರೈಸ್ತ ಸಂಪ್ರದಾಯವನ್ನು ಪರಿಚಯಪಡಿಸಲಾರನೆಂಬುದನ್ನು ನಿಶ್ಚಿತ ಮಾಡಿಕೊಂಡಿದ್ದೀರೊ?
• ಸಂಗೀತವು ನುಡಿಸಲ್ಪಡುವಲ್ಲಿ, ಯೋಗ್ಯವಾದ ಗೀತೆಗಳನ್ನೇ ನೀವು ಆರಿಸಿಕೊಂಡಿದ್ದೀರೊ?
• ಸಂಗೀತದ ಧ್ವನಿಯು ನ್ಯಾಯವಾದ ಮಟ್ಟದಲ್ಲಿ ಇಡಲಾಗುವುದೊ?
• ನೃತ್ಯಕ್ಕೆ ಅನುಮತಿಯಿದ್ದರೆ, ಅದು ಗಾಂಭೀರ್ಯವುಳ್ಳದ್ದಾಗಿರುವುದೊ?
• ಮದ್ಯವನ್ನು ಮಿತವಾದ ಪ್ರಮಾಣದಲ್ಲಿ ಮಾತ್ರ ಒದಗಿಸಲಾಗುವುದೊ?
• ಜವಾಬ್ದಾರಿಯುಳ್ಳವರು ಅದರ ವಿತರಣೆಯನ್ನು ನಿಯಂತ್ರಿಸುವರೊ?
• ವಿವಾಹದ ಸಮಾರಂಭವು ಯೋಗ್ಯವಾದ ಸಮಯಕ್ಕೆ ಕೊನೆಗೊಳ್ಳುವಂತೆ ಏರ್ಪಡಿಸಿದ್ದೀರೊ?
• ಕೊನೆಯ ವರೆಗೂ ಅಲ್ಲಿ ಕ್ರಮಬದ್ಧತೆ ಇರುವುದನ್ನು ಖಚಿತಪಡಿಸಿಕೊಳ್ಳಲು ಜವಾಬ್ದಾರಿಯುಳ್ಳವರು ಅಲ್ಲಿರುವರೊ?