ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ನಮ್ಮ ಹೃದಯಕ್ಕಿಂತ ದೊಡ್ಡವನು

ಯೆಹೋವನು ನಮ್ಮ ಹೃದಯಕ್ಕಿಂತ ದೊಡ್ಡವನು

ಯೆಹೋವನು ನಮ್ಮ ಹೃದಯಕ್ಕಿಂತ ದೊಡ್ಡವನು

“ಯೆಹೋವನು ತನಗೆ ಭಯಪಡುವ ಜನರಲ್ಲಿ ಸಂತೋಷಪಡುತ್ತಾನೆ” ಎಂಬುದಾಗಿ ಕೀರ್ತನೆಗಾರನು ಬರೆದಿದ್ದಾನೆ. ತನ್ನ ಮಾನವ ಸೇವಕರಲ್ಲಿ ಪ್ರತಿಯೊಬ್ಬರು ಆತನ ನೀತಿಯುತ ಮಟ್ಟಗಳನ್ನು ಎತ್ತಿಹಿಡಿಯಲು ಪ್ರಯಾಸಪಡುತ್ತಿರುವುದನ್ನು ನೋಡುವಾಗ ಸೃಷ್ಟಿಕರ್ತನಿಗೆ ಖಂಡಿತವಾಗಿಯೂ ಸಂತೋಷವಾಗುತ್ತದೆ. ದೇವರು ತನ್ನ ನಿಷ್ಠಾವಂತ ಸೇವಕರನ್ನು ಆಶೀರ್ವದಿಸುತ್ತಾನೆ, ಅವರನ್ನು ಉತ್ತೇಜಿಸುತ್ತಾನೆ ಮತ್ತು ಹತಾಶೆಯ ಸಮಯದಲ್ಲಿ ಅವರನ್ನು ಸಂತೈಸುತ್ತಾನೆ. ತನ್ನ ಆರಾಧಕರು ಅಪರಿಪೂರ್ಣರಾಗಿದ್ದಾರೆ ಎಂಬುದು ಆತನಿಗೆ ಗೊತ್ತಿದೆ. ಆದುದರಿಂದ ಅವರು ಕೊಡಲು ಸಾಧ್ಯವಿದ್ದದಕ್ಕಿಂತಲೂ ಹೆಚ್ಚನ್ನು ಅವರಿಂದ ಆತನು ಕೇಳುವುದಿಲ್ಲ, ಯಾಕೆಂದರೆ ಅವರ ಸೀಮಿತ ಸಾಮರ್ಥ್ಯದ ಅರಿವು ಆತನಿಗಿದೆ.—ಕೀರ್ತನೆ 147:11, NW.

ಯೆಹೋವನಿಗೆ ತನ್ನ ಸೇವಕರ ಕಡೆಗೆ ಅಪಾರವಾದ ಪ್ರೀತಿಯಿದೆಯೆಂಬುದನ್ನು ನಂಬುವುದರಲ್ಲಿ ನಮಗೆ ಯಾವ ಸಮಸ್ಯೆಯಿಲ್ಲದಿರಬಹುದು. ಆದರೂ, ಕೆಲವರು ತಮ್ಮ ಸ್ವಂತ ಕುಂದುಕೊರತೆಗಳಲ್ಲೇ ತೀರ ಚಿಂತಿತರಾಗಿರುತ್ತಾರೆ. ಹಾಗಾಗಿ, ಯೆಹೋವನು ತಮ್ಮನ್ನು ಎಂದೂ ಪ್ರೀತಿಸಲು ಸಾಧ್ಯವೇ ಇಲ್ಲವೆಂಬ ನಿರ್ಧಾರವನ್ನು ಮಾಡಿಬಿಡುತ್ತಾರೆ. “ನಾನು ಎಷ್ಟು ದೊಡ್ಡ ಪಾಪಿಯೆಂದರೆ, ಯೆಹೋವನು ನನ್ನನ್ನು ಪ್ರೀತಿಸಲು ಸಾಧ್ಯವೇ ಇಲ್ಲ” ಎಂಬ ತೀರ್ಮಾನಕ್ಕೆ ಅವರು ಬರಬಹುದು. ನಕಾರಾತ್ಮಕ ಭಾವನೆಗಳು ನಮ್ಮಲ್ಲಿ ಆಗಾಗ ಬರುತ್ತವೆಂಬುದು ನಿಜ. ಆದರೆ ಕೆಲವರಿಗಾದರೋ ನಿಷ್ಪ್ರಯೋಜಕತೆಯ ಅನಿಸಿಕೆಗಳ ವಿರುದ್ಧ ಜೀವನಪೂರ್ತಿ ಹೋರಾಡುತ್ತಾ ಇರಬೇಕಾಗುತ್ತದೆ.

ಖಿನ್ನತೆಯ ಅನಿಸಿಕೆಗಳು

ಬೈಬಲ್‌ ಸಮಯಗಳಲ್ಲಿ ಅನೇಕ ನಂಬಿಗಸ್ತ ವ್ಯಕ್ತಿಗಳು ತೀವ್ರವಾದ ಕುಗ್ಗಿದ ಭಾವನೆಗಳಿಂದ ತೊಳಲಾಡಿದ್ದಾರೆ. ಯೋಬನು ಜೀವನವನ್ನೇ ದ್ವೇಷಿಸಿದನು ಮತ್ತು ದೇವರು ತನ್ನನ್ನು ತೊರೆದಿದ್ದಾನೆಂಬ ಅನಿಸಿಕೆ ಅವನಿಗಾಯಿತು. ಸಮುವೇಲನ ತಾಯಿಯಾದ ಹನ್ನಳು ಸಹ ಒಂದು ಸಮಯದಲ್ಲಿ ತನ್ನ ಬಂಜೆತನಕ್ಕಾಗಿ ತೀವ್ರವಾದ ಮನೋವ್ಯಥೆಯನ್ನು ಅನುಭವಿಸಿದಳು ಮತ್ತು ಬಹು ದುಃಖದಿಂದ ಕಣ್ಣೀರು ಸುರಿಸಿದಳು. ದಾವೀದನು ‘ಬಹಳವಾಗಿ ಬಾಗಿ ಕುಗ್ಗಿದ್ದನು.’ ಎಪಫ್ರೊದೀತನು ಅಸೌಖ್ಯದಿಂದಿರುವ ಸಮಾಚಾರವನ್ನು ಅವನ ಸಹೋದರರು ಕೇಳಿ ದುಃಖಪಟ್ಟರೆಂಬುದನ್ನು ತಿಳಿದು ಅವನು ಬಹಳವಾಗಿ ವ್ಯಥೆಪಟ್ಟನು.—ಕೀರ್ತನೆ 38:6; 1 ಸಮುವೇಲ 1:7, 10; ಯೋಬ 29:2, 4, 5; ಫಿಲಿಪ್ಪಿ 2:25, 26.

ಇಂದು ಕ್ರೈಸ್ತರ ಕುರಿತೇನು? ಕೆಲವರಿಗಾದರೋ ಅಸೌಖ್ಯ, ವೃದ್ಧಾಪ್ಯ ಅಥವಾ ಇತರ ವೈಯಕ್ತಿಕ ಸನ್ನಿವೇಶಗಳ ಕಾರಣದಿಂದಾಗಿ ಪವಿತ್ರ ಸೇವೆಯಲ್ಲಿ ತಾವು ಮಾಡಲು ಬಯಸುವುದನ್ನು ಮಾಡಲಿಕ್ಕಾಗದೆ ಇರಬಹುದು. ಯೆಹೋವನಿಗಾಗಿ ಮತ್ತು ತಮ್ಮ ಜೊತೆ ವಿಶ್ವಾಸಿಗಳಿಗಾಗಿ ತಾವು ಏನನ್ನು ಮಾಡಲು ಬಯಸುತ್ತಾರೋ ಅದನ್ನು ಮಾಡಲಿಕ್ಕಾಗುತ್ತಿಲ್ಲವೆಂಬ ತೀರ್ಮಾನಕ್ಕೆ ಇದು ಅವರನ್ನು ನಡೆಸಬಹುದು. ಅಥವಾ ಇನ್ನೂ ಕೆಲವರು ತಮ್ಮ ಹಿಂದಿನ ತಪ್ಪುಗಳಿಗೆ ತಮ್ಮನ್ನು ದೂಷಿಸಿಕೊಳ್ಳುತ್ತಾ ಯೆಹೋವನು ತಮ್ಮನ್ನು ಕ್ಷಮಿಸಿದ್ದಾನೋ ಎಂದು ಸಂದೇಹಿಸಬಹುದು. ಇನ್ನಿತರರು ಪ್ರೀತಿಯೇ ತೋರಿಸಲ್ಪಡದ ಕುಟುಂಬದಿಂದ ಬಂದವರಾದುದರಿಂದ ತಾವು ಪ್ರೀತಿಗೆ ಯೋಗ್ಯರಲ್ಲ ಎಂಬ ಖಚಿತವಾದ ತೀರ್ಮಾನವನ್ನು ಮಾಡುತ್ತಾರೆ. ಹೀಗಾಗಲು ಕಾರಣವೇನು?

ಪ್ರೀತಿಯ ಬದಲು ಸ್ವಾರ್ಥ, ಕೆಣುಕುವ ನುಡಿ ಮತ್ತು ಭಯವೇ ಹೆಚ್ಚಾಗಿ ತೋರಿಸಲ್ಪಡುವ ಕುಟುಂಬದಲ್ಲಿ ಕೆಲವರು ಬೆಳೆಸಲ್ಪಡುತ್ತಾರೆ. ತಮ್ಮನ್ನು ಆಳವಾಗಿ ಪ್ರೀತಿಸುವ, ಶ್ಲಾಘಿಸಲು ಮತ್ತು ಉತ್ತೇಜಿಸಲು ಅವಕಾಶವನ್ನು ಹುಡುಕುವ, ಚಿಕ್ಕಪುಟ್ಟ ತಪ್ಪುಗಳನ್ನು ಮನ್ನಿಸುವ ಹಾಗೂ ಇನ್ನೂ ಗಂಭೀರ ತಪ್ಪುಗಳನ್ನು ಕ್ಷಮಿಸಲು ತಯಾರಾಗಿರುವ, ಇಡೀ ಕುಟುಂಬಕ್ಕೆ ಹೆಚ್ಚು ಸುರಕ್ಷತೆಯ ಅನಿಸಿಕೆಯನ್ನು ಕೊಡುವ ಆದರಪೂರ್ಣ ಪ್ರೀತಿಯ ಒಬ್ಬ ತಂದೆಯನ್ನು ಇಂಥವರು ಎಂದೂ ಅರ್ಥಮಾಡಿಕೊಳ್ಳದೇ ಇರಬಹುದು. ಅವರಿಗೆ ಮನೆಯಲ್ಲಿ ಒಬ್ಬ ಪ್ರೀತಿಯ ತಂದೆಯೇ ಇಲ್ಲದಿದ್ದ ಕಾರಣ, ಒಬ್ಬ ಪ್ರೀತಿಪರ ಸ್ವರ್ಗೀಯ ತಂದೆಯನ್ನು ಹೊಂದಿರುವುದರ ಅರ್ಥವೇನೆಂಬುದನ್ನು ತಿಳಿದುಕೊಳ್ಳಲು ಕಷ್ಟವಾಗಿರಬಹುದು.

ದೃಷ್ಟಾಂತಕ್ಕೆ, ಫ್ರಿಟ್ಸ್‌ ಬರೆಯುವುದು: “ನನ್ನ ಬಾಲ್ಯ ಮತ್ತು ಯೌವನವು ನನ್ನ ತಂದೆಯ ಪ್ರೀತಿರಹಿತ ನಡವಳಿಕೆಯಿಂದ ಬಹಳವಾಗಿ ಪ್ರಭಾವಿಸಲ್ಪಟ್ಟಿತು. * ಅವರು ನನಗೆ ಎಂದೂ ಉತ್ತೇಜನವನ್ನು ಕೊಡುತ್ತಿರಲಿಲ್ಲ ಮತ್ತು ನನಗೆ ಅವರೊಂದಿಗೆ ಆಪ್ತನಾಗಿರುವಂಥ ಅನಿಸಿಕೆ ಎಂದೂ ಬರುತ್ತಿರಲಿಲ್ಲ. ನಿಜ ಹೇಳಬೇಕಾದರೆ, ಹೆಚ್ಚಿನ ಸಮಯಗಳಲ್ಲಿ ನಾನು ಅವರಿಗೆ ಭಯಪಡುತ್ತಿದ್ದೆ.” ಇದರ ಪರಿಣಾಮವಾಗಿ ಫ್ರಿಟ್ಸ್‌ಗೆ ಈಗಲೂ ಅಂದರೆ ತಮ್ಮ 50ನೇ ಪ್ರಾಯದಲ್ಲಿಯೂ ಅಸಮರ್ಥತೆಯ ಭಾವನೆಗಳಿವೆ. ಇನ್ನೊಂದೆಡೆ, ಮಾರ್ಗರೆಟ್‌ ವಿವರಿಸುವುದು: “ನನ್ನ ಹೆತ್ತವರು ಭಾವಶೂನ್ಯರು ಮತ್ತು ಪ್ರೀತಿರಹಿತರು ಆಗಿದ್ದರು. ನಾನು ಬೈಬಲನ್ನು ಅಭ್ಯಾಸಿಸಲು ಆರಂಭಿಸಿದಾಗ, ಒಬ್ಬ ಪ್ರೀತಿಯುಳ್ಳ ತಂದೆಯು ಹೇಗೆ ಇರುವನೆಂಬುದನ್ನು ಕಲ್ಪಿಸಿನೋಡಲು ನನಗೆ ಕಷ್ಟವಾಗಿತ್ತು.”

ಕಾರಣಗಳು ಏನೇ ಆಗಿರಲಿ, ಇಂತಹ ಭಾವನೆಗಳು ಕೆಲವೊಮ್ಮೆ ದೇವರಿಗೆ ಮಾಡುವ ನಮ್ಮ ಸೇವೆಯು ಮುಖ್ಯವಾಗಿ ಪ್ರೀತಿಯಿಂದ ಪ್ರೇರಿಸಲ್ಪಡದೆ, ಬಹಳಮಟ್ಟಿಗೆ ಅಪರಾಧಿಭಾವ ಅಥವಾ ಭಯದಿಂದ ಪ್ರೇರಿಸಲ್ಪಟ್ಟಿದೆ ಎಂಬ ಅರ್ಥವನ್ನು ಕೊಡಬಲ್ಲವು. ನಾವು ಮಾಡಿರುವ ಅತ್ಯುತ್ತಮ ವಿಷಯಗಳು ಸಹ ನಮಗೆ ಎಂದೂ ತೃಪ್ತಿಯನ್ನು ಕೊಡಲಾರವು. ಯೆಹೋವನನ್ನು ಮತ್ತು ನಮ್ಮ ಜೊತೆ ವಿಶ್ವಾಸಿಗಳನ್ನು ಮೆಚ್ಚಿಸುವ ಆಕಾಂಕ್ಷೆಯು, ನಾವು ಬಯಸಿದ್ದನ್ನೆಲ್ಲಾ ಮಾಡಲು ನಮಗೆ ಸಾಧ್ಯವೇ ಆಗುತ್ತಿಲ್ಲವಲ್ಲಾ ಎಂಬ ಅನಿಸಿಕೆಯನ್ನು ನಮ್ಮಲ್ಲಿ ಉಂಟುಮಾಡಬಲ್ಲದು. ಇದರ ಪರಿಣಾಮವಾಗಿ, ನಮ್ಮ ಗುರಿಗಳನ್ನು ಮುಟ್ಟುವುದರಲ್ಲಿ ನಾವು ತಪ್ಪಿಬೀಳಬಹುದು, ನಮ್ಮನ್ನು ನಾವೇ ದೂಷಿಸಿಕೊಳ್ಳಬಹುದು ಮತ್ತು ಆಶಾಹೀನರೂ ಆಗಬಹುದು.

ಇದರ ಕುರಿತು ನಾವೇನು ಮಾಡಸಾಧ್ಯವಿದೆ? ಪ್ರಾಯಶಃ ಯೆಹೋವನು ಎಷ್ಟೊಂದು ವಿಶಾಲಹೃದಯದವನಾಗಿದ್ದಾನೆ ಎಂಬುದನ್ನು ಸ್ವತಃ ನಾವು ಜ್ಞಾಪಿಸಿಕೊಳ್ಳುವ ಆವಶ್ಯಕತೆ ಇರಬಹುದು. ದೇವರ ವ್ಯಕ್ತಿತ್ವದ ಈ ಪ್ರೀತಿಯುಳ್ಳ ಅಂಶವನ್ನು ಅರ್ಥಮಾಡಿಕೊಂಡವರಲ್ಲಿ ಅಪೊಸ್ತಲ ಯೋಹಾನನು ಒಬ್ಬನಾಗಿದ್ದನು.

‘ದೇವರು ನಮ್ಮ ಹೃದಯಕ್ಕಿಂತ ದೊಡ್ಡವನು’

ಸಾ. ಶ. ಮೊದಲ ಶತಮಾನದ ಅಂತ್ಯದಲ್ಲಿ, ಯೋಹಾನನು ತನ್ನ ಜೊತೆ ವಿಶ್ವಾಸಿಗಳಿಗೆ ಹೀಗೆ ಬರೆದನು: “ನಾವು ಸತ್ಯಕ್ಕೆ ಸೇರಿದವರೆಂಬದು ಇದರಿಂದಲೇ ನಮಗೆ ತಿಳಿಯುತ್ತದೆ. ಮತ್ತು ನಮ್ಮ ಹೃದಯವು ಯಾವ ವಿಷಯದಲ್ಲಿಯಾದರೂ ನಮ್ಮನ್ನು ದೋಷಿಗಳೆಂದು ನಿರ್ಣಯಿಸಿದರೂ ದೇವರು ನಮ್ಮ ಹೃದಯಕ್ಕಿಂತ ದೊಡ್ಡವನಾಗಿದ್ದು ಎಲ್ಲವನ್ನೂ ಬಲ್ಲವನಾಗಿದ್ದಾನೆಂದು ನಾವು ತಿಳಿದು ದೇವರ ಸಮಕ್ಷಮದಲ್ಲಿ ನಮ್ಮ ಹೃದಯವನ್ನು ಸಮಾಧಾನಪಡಿಸುವೆವು. (“ಹೃದಯಕ್ಕೆ ಆಶ್ವಾಸನೆಯನ್ನು ನೀಡುವೆವು,” NW)” ಈ ಮಾತುಗಳನ್ನು ಯೋಹಾನನು ಯಾಕೆ ಬರೆದನು?—1 ಯೋಹಾನ 3:19, 20.

ಯೆಹೋವನ ಒಬ್ಬ ಸೇವಕನಿಗೆ ತನ್ನನ್ನು ತಾನೇ ಖಂಡಿಸಿಕೊಳ್ಳುವ ಭಾವನೆಗಳು ಬರಸಾಧ್ಯವಿದೆ ಎಂಬುದು ಯೋಹಾನನಿಗೆ ಸ್ಪಷ್ಟವಾಗಿ ತಿಳಿದಿತ್ತು. ಸ್ವತಃ ಯೋಹಾನನು ತಾನೇ ಇಂತಹ ಭಾವನೆಗಳನ್ನು ಅನುಭವಿಸಿದ್ದಿರಬೇಕು. ಅವನು ಯುವಕನಾಗಿದ್ದಾಗ ಇತರರ ಮೇಲೆ ಸಿಡಿದೇಳುವಷ್ಟು ಮುಂಗೋಪಿಯಾಗಿದ್ದನು. ಹೀಗಾಗಿ ಒಂದು ಸಂದರ್ಭದಲ್ಲಿ ಇತರರೊಂದಿಗೆ ವ್ಯವಹರಿಸುವುದರಲ್ಲಿ ತೀರ ಕಠೋರನಾಗಿ ವರ್ತಿಸಿದುದ್ದಕ್ಕಾಗಿ ಯೇಸುಕ್ರಿಸ್ತನು ಅವನನ್ನು ತಿದ್ದಿದನು. ವಾಸ್ತವದಲ್ಲಿ ಯೇಸು, ಯೋಹಾನನಿಗೆ ಮತ್ತು ಅವನ ತಮ್ಮನಾದ ಯಾಕೋಬನಿಗೆ “ಬೊವನೆರ್ಗೆಸ್‌ ಅಂದರೆ ಗುಡುಗಿನ ಮರಿಗಳು” ಎಂಬ ಉಪನಾಮವನ್ನು ಕೊಟ್ಟನು.—ಮಾರ್ಕ 3:17; ಲೂಕ 9:49-56.

ಮುಂದಿನ ಅರವತ್ತು ವರ್ಷಗಳಲ್ಲಿ, ಅವನು ಪ್ರಾಯ ಮತ್ತು ಅನುಭವದಿಂದ ಪರಿಪಕ್ವಗೊಂಡನು ಮತ್ತು ಸಮಚಿತ್ತನು, ಪ್ರೀತಿಪರನು ಹಾಗೂ ಕರುಣಾಭರಿತ ಕ್ರೈಸ್ತನಾದನು. ಬದುಕುಳಿದ ಕೊನೆಯ ಅಪೊಸ್ತಲನಾಗಿದ್ದ ಅಪೊಸ್ತಲ ಯೋಹಾನನು ತನ್ನ ಮೊದಲ ಪ್ರೇರಿತ ಪತ್ರಿಕೆಯನ್ನು ಬರೆಯುವ ಮುಂಚೆಯೇ, ಯೆಹೋವನು ಎಲ್ಲ ಸೇವಕರ ಪ್ರತಿಯೊಂದು ಚಿಕ್ಕಪುಟ್ಟ ತಪ್ಪುಗಳಿಗಾಗಿ ಅವರನ್ನು ದಂಡಿಸುವುದಿಲ್ಲ ಎಂಬ ಸತ್ಯಾಂಶವನ್ನು ಅರಿತಿದ್ದನು. ಅದಕ್ಕೆ ಬದಲಾಗಿ ತನ್ನನ್ನು ಪ್ರೀತಿಸುವವರೆಲ್ಲರ ಕಡೆಗೆ ಮತ್ತು ಸತ್ಯದಲ್ಲಿ ಆತನನ್ನು ಆರಾಧಿಸುವ ಪ್ರತಿಯೊಬ್ಬರ ಕಡೆಗೆ ಆಳವಾದ ಪ್ರೀತಿಯನ್ನು ತೋರಿಸುವ ವಾತ್ಸಲ್ಯ ಸ್ವರೂಪಿಯೂ, ವಿಶಾಲಹೃದಯಿಯೂ, ಉದಾರಿಯೂ, ಮತ್ತು ಕರುಣಾಭರಿತನೂ ಆಗಿರುವ ತಂದೆಯಾಗಿದ್ದಾನೆ. ಯೋಹಾನನು ಬರೆದದ್ದು: “ದೇವರು ಪ್ರೀತಿಸ್ವರೂಪಿಯು.”—1 ಯೋಹಾನ 4:8.

ನಾವು ಸಲ್ಲಿಸುವ ಸೇವೆಯಲ್ಲಿ ಯೆಹೋವನು ಸಂತೋಷಿಸುತ್ತಾನೆ

ನಮ್ಮಲ್ಲಿರುವ ಸ್ವಭಾವಸಿದ್ಧ ಬಲಹೀನತೆಗಳು ಮತ್ತು ಕುಂದುಕೊರತೆಗಳು ಯೆಹೋವನಿಗೆ ಗೊತ್ತಿವೆ ಮತ್ತು ಅವುಗಳನ್ನು ಆತನು ತನ್ನ ಗಮನಕ್ಕೆ ತೆಗೆದುಕೊಳ್ಳುತ್ತಾನೆ. ದಾವೀದನು ಬರೆದದ್ದು: “ಆತನು ನಮ್ಮ ಪ್ರಕೃತಿಯನ್ನು ಬಲ್ಲನು; ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ.” ನಮ್ಮ ಕುಟುಂಬದ ಹಿನ್ನೆಲೆಯು ನಮ್ಮನ್ನು ರೂಪಿಸುವುದರಲ್ಲಿ ಬಲವಾದ ಪ್ರಭಾವವನ್ನು ಬೀರುತ್ತದೆ ಎಂಬುದು ಯೆಹೋವನಿಗೆ ತಿಳಿದಿರುತ್ತದೆ. ನೈಜತೆಯಲ್ಲಿ, ನಮ್ಮ ಬಗ್ಗೆ ನಮಗೆ ಎಷ್ಟು ತಿಳಿದಿದೆಯೋ ಅದಕ್ಕಿಂತಲೂ ಎಷ್ಟೋ ಹೆಚ್ಚು ಉತ್ತಮವಾಗಿ ಯೆಹೋವನಿಗೆ ನಮ್ಮ ಬಗ್ಗೆ ತಿಳಿದಿದೆ.—ಕೀರ್ತನೆ 103:14.

ನಮ್ಮಲ್ಲಿ ಅನೇಕರು ಭಿನ್ನರಾಗಿರಲು ಬಯಸುತ್ತೇವಾದರೂ ನಮ್ಮ ಅಪರಿಪೂರ್ಣತೆಯನ್ನು ಜಯಿಸಲು ನಾವು ಅಶಕ್ತರಾಗಿದ್ದೇವೆಂದು ಆತನಿಗೆ ಚೆನ್ನಾಗಿ ಗೊತ್ತಿದೆ. ನಮ್ಮ ಸ್ಥಿತಿಯನ್ನು ಅಪೊಸ್ತಲ ಪೌಲನ ಸ್ಥಿತಿಗೆ ಹೋಲಿಸಬಹುದು, ಯಾಕೆಂದರೆ ಅವನು ಬರೆದದ್ದು: “ನಾನು ಮೆಚ್ಚುವ ಒಳ್ಳೇ ಕಾರ್ಯವನ್ನು ಮಾಡದೆ ಮೆಚ್ಚದಿರುವ ಕೆಟ್ಟ ಕಾರ್ಯವನ್ನೇ ಮಾಡುವವನಾಗಿದ್ದೇನೆ.” ನಮ್ಮಲ್ಲಿ ಎಲ್ಲರೂ ಅದೇ ರೀತಿಯ ಹೋರಾಟದಲ್ಲಿ ಒಳಗೂಡಿದ್ದೇವೆ. ಕೆಲವು ಸಂದರ್ಭಗಳಲ್ಲಿ ಇದು ತನ್ನನ್ನು ತಾನೇ ಖಂಡಿಸಿಕೊಳ್ಳುವ ಸ್ಥಿತಿಗೆ ಕಾರಣವಾಗಿರಬಹುದು.—ರೋಮಾಪುರ 7:19.

ಯಾವಾಗಲೂ ಇದನ್ನು ಜ್ಞಾಪಕದಲ್ಲಿಡಿರಿ: ನಾವು ನಮ್ಮನ್ನು ವೀಕ್ಷಿಸುವುದಕ್ಕಿಂತಲೂ ಯೆಹೋವನು ನಮ್ಮನ್ನು ಹೇಗೆ ವೀಕ್ಷಿಸುತ್ತಾನೆಂಬುದೇ ಪ್ರಾಮುಖ್ಯವಾಗಿರುತ್ತದೆ. ಆತನನ್ನು ಮೆಚ್ಚಿಸಲು ನಾವು ಪ್ರಯತ್ನಿಸುತ್ತಿರುವುದನ್ನು ಆತನು ನೋಡುವಾಗಲೆಲ್ಲಾ, ಆತನು ಕೇವಲ ತೃಪ್ತಿಯ ಭಾವನೆಯನ್ನು ಮಾತ್ರ ತೋರಿಸುವುದಿಲ್ಲ. ಇನ್ನೂ ಹೆಚ್ಚಾಗಿ, ಅದರಲ್ಲಿ ಆತನು ಸಂತೋಷಿಸುತ್ತಾನೆ. (ಜ್ಞಾನೋಕ್ತಿ 27:11) ನಾವು ಸಾಧಿಸುವ ವಿಷಯಗಳು ನಮ್ಮ ಸ್ವಂತ ದೃಷ್ಟಿಯಲ್ಲಿ ತುಲನಾತ್ಮಕವಾಗಿ ಕಡಿಮೆ ಇರುವಂತೆ ತೋರುವುದಾದರೂ, ನಮ್ಮ ಸಿದ್ಧಮನಸ್ಸು ಮತ್ತು ಒಳ್ಳೆಯ ಉದ್ದೇಶವು ಆತನಿಗೆ ಸಂತೋಷವನ್ನು ತರುತ್ತದೆ. ನಾವು ಮಾಡುವುದಕ್ಕಿಂತಲೂ ಹೆಚ್ಚನ್ನು ಆತನು ನೋಡುತ್ತಾನೆ. ನಾವು ಏನನ್ನು ಮಾಡಲು ಬಯಸುತ್ತೇವೆಂಬುದು ಆತನಿಗೆ ಗೊತ್ತಿದೆ; ನಮ್ಮ ಬಯಕೆಗಳ ಮತ್ತು ಆಕಾಂಕ್ಷೆಗಳ ಅರಿವು ಆತನಿಗಿದೆ. ನಮ್ಮ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಯೆಹೋವನು ತಿಳಿದುಕೊಳ್ಳಬಲ್ಲನು.—ಯೆರೆಮೀಯ 12:3; 17:10.

ಉದಾಹರಣೆಗೆ, ಅನೇಕ ಯೆಹೋವನ ಸಾಕ್ಷಿಗಳು ಸ್ವಾಭಾವಿಕವಾಗಿ ಹೆದರುವ ಮತ್ತು ಸಂಕೋಚ ಸ್ವಭಾವವುಳ್ಳವರಾಗಿದ್ದಾರೆ. ಇವರು ಇತರರ ಗಮನವನ್ನು ಸೆಳೆಯಲು ಬಯಸದೇ ಇರುವ ಜನರಾಗಿದ್ದಾರೆ. ಇಂತಹವರಿಗೆ ಮನೆಯಿಂದ ಮನೆಗೆ ಸುವಾರ್ತೆ ಸಾರುವುದು ಎದೆಗುಂದಿಸುವ ಸವಾಲಾಗಿರಬಲ್ಲದು. ಆದರೂ, ದೇವರನ್ನು ಸೇವಿಸುವ ಅಪೇಕ್ಷೆಯಿಂದ ಪ್ರೇರಿಸಲ್ಪಟ್ಟವರಾಗಿ ಮತ್ತು ತಮ್ಮ ನೆರೆಯವರಿಗೆ ಸಹಾಯನೀಡಲು ಬಯಸುವವರಾಗಿ ಈ ಹೆದರುವ ಸ್ವಭಾವದವರು ಕೂಡ ತಮ್ಮ ನೆರೆಹೊರೆಯವರನ್ನು ಭೇಟಿಮಾಡಲು ಮತ್ತು ಬೈಬಲಿನ ಕುರಿತು ಅವರೊಂದಿಗೆ ಮಾತಾಡಲು ಕಲಿತುಕೊಳ್ಳುತ್ತಾರೆ. ತಾವು ತೀರ ಕಡಿಮೆ ಸೇವೆಯನ್ನು ಮಾಡುತ್ತಿದ್ದೇವೆಂದು ಅವರು ಭಾವಿಸಿಕೊಳ್ಳಬಹುದು ಮತ್ತು ಈ ಭಾವನೆಯು ಅವರ ಸಂತೋಷವನ್ನು ಕಸಿದುಕೊಳ್ಳಬಲ್ಲದು. ಅವರ ಬಹಿರಂಗ ಶುಶ್ರೂಷೆಯು ಸಾರ್ಥಕವಾದದ್ದಲ್ಲವೆಂದು ಅವರ ಹೃದಯವು ಹೇಳಬಹುದು. ಇಂತಹವರು ತಮ್ಮ ಸೇವೆಯಲ್ಲಿ ಮಾಡುವ ಮಹಾ ಪ್ರಯತ್ನಗಳನ್ನು ನೋಡಿ ಯೆಹೋವನು ನಿಜವಾಗಿಯೂ ಸಂತೋಷಿಸುತ್ತಾನೆ. ಇನ್ನೂ ಹೆಚ್ಚಾಗಿ, ಸತ್ಯದ ಬೀಜಗಳು ಎಲ್ಲಿ ಮತ್ತು ಯಾವಾಗ ಮೊಳಕೆಯೊಡೆದು, ಫಲವನ್ನು ಕೊಡುವವೆಂಬುದು ಅವರಿಗೆ ನಿಶ್ಚಿತವಾಗಿ ತಿಳಿದಿರಸಾಧ್ಯವಿಲ್ಲ.—ಪ್ರಸಂಗಿ 11:6; ಮಾರ್ಕ 12:41-44; 2 ಕೊರಿಂಥ 8:12.

ಇನ್ನಿತರ ಸಾಕ್ಷಿಗಳು ದೀರ್ಘಕಾಲದಿಂದ ಅಸೌಖ್ಯದಿಂದ ಕಷ್ಟವನ್ನು ಅನುಭವಿಸುತ್ತಾರೆ ಅಥವಾ ವಯಸ್ಸಾಗುತ್ತಿರಬಹುದು. ಇಂಥವರಿಗೆ, ರಾಜ್ಯ ಸಭಾಗೃಹದಲ್ಲಿ ಕೂಟಗಳಿಗೆ ಕ್ರಮವಾಗಿ ಹಾಜರಾಗುವುದೇ ನೋವು ಮತ್ತು ವ್ಯಾಕುಲತೆಯನ್ನು ಉಂಟುಮಾಡುತ್ತದೆ. ಸಾರುವ ಕೆಲಸದ ಕುರಿತು ಭಾಷಣವನ್ನು ಆಲಿಸುತ್ತಿರುವಾಗ, ಅವರು ಈ ಹಿಂದೆ ಮಾಡುತ್ತಿದ್ದಂತಹ ಸೇವೆ ಮತ್ತು ಈಗಲೂ ಅಂತಹ ಸೇವೆಯನ್ನು ಮಾಡಲು ಇಚ್ಚಿಸುವುದಾದರೂ ದೌರ್ಬಲ್ಯಗಳು ಅವರನ್ನು ನಿರ್ಬಂಧಿಸುತ್ತಿವೆ ಎಂಬ ನೆನಪು ಅವರನ್ನು ಕಾಡಬಹುದು. ಕೊಡಲ್ಪಟ್ಟ ಸಲಹೆಯನ್ನು ಅವರು ಬಯಸುವಂಥ ರೀತಿಯಲ್ಲಿ ಪಾಲಿಸಲು ಸಾಧ್ಯವಾಗದೇ ಇರುವುದಕ್ಕಾಗಿ ಇಂಥವರು ದೋಷಿಭಾವನೆಯಿಂದಾಗುವ ತೀವ್ರ ಯಾತನೆಯನ್ನು ಅನುಭವಿಸಬಹುದು. ಆದರೂ, ಯೆಹೋವನು ಅವರ ನಿಷ್ಠೆ ಮತ್ತು ತಾಳ್ಮೆಯನ್ನು ಖಂಡಿತವಾಗಿಯೂ ಅತ್ಯಮೂಲ್ಯವೆಂದೆಣಿಸುತ್ತಾನೆ. ಅವರು ಎಷ್ಟರ ವರೆಗೆ ಕರ್ತವ್ಯನಿಷ್ಠರಾಗಿ ಉಳಿಯುತ್ತಾರೋ ಅಷ್ಟರ ವರೆಗೆ ಯೆಹೋವನು ಅವರ ನಂಬಿಗಸ್ತ ದಾಖಲೆಯನ್ನು ಎಂದೂ ಮರೆಯಲಾರನು.—ಕೀರ್ತನೆ 18:25; 37:28.

“ನಮ್ಮ ಹೃದಯಕ್ಕೆ ಆಶ್ವಾಸನೆಯನ್ನು ನೀಡುವುದು”

ಯೋಹಾನನು ತನ್ನ ಮುದಿಪ್ರಾಯವನ್ನು ತಲುಪಿದ ಸಮಯದೊಳಗಾಗಿ, ದೇವರ ವಿಶಾಲಹೃದಯವನ್ನು ಅವನು ಖಂಡಿತವಾಗಿಯೂ ಅರ್ಥಮಾಡಿಕೊಂಡಿದ್ದಿರಬೇಕು. ಅವನು ಬರೆದದ್ದನ್ನು ಜ್ಞಾಪಿಸಿಕೊಳ್ಳಿರಿ: “ದೇವರು ನಮ್ಮ ಹೃದಯಕ್ಕಿಂತ ದೊಡ್ಡವನಾಗಿದ್ದು ಎಲ್ಲವನ್ನೂ ಬಲ್ಲವನಾಗಿದ್ದಾನೆ.” ಇನ್ನೂ ಹೆಚ್ಚಾಗಿ, ‘ನಮ್ಮ ಹೃದಯಕ್ಕೆ ಆಶ್ವಾಸನೆಯನ್ನು ನೀಡುವಂತೆ’ (NW) ಯೋಹಾನನು ನಮ್ಮನ್ನು ಉತ್ತೇಜಿಸುತ್ತಾನೆ. ಈ ಮಾತುಗಳಿಂದ ಯೋಹಾನನು ಏನನ್ನು ಅರ್ಥೈಸಿದನು?

ವೈನ್ಸ್‌ ಎಕ್ಸ್‌ಪಾಸಿಟರಿ ಡಿಕ್ಷ್‌ನೆರಿ ಆಫ್‌ ಓಲ್ಡ್‌ ಆ್ಯಂಡ್‌ ನ್ಯೂ ಟೆಸ್ಟಮೆಂಟ್‌ ವರ್ಡ್ಸ್‌ನ ಪ್ರಕಾರ, “ಆಶ್ವಾಸನೆ” ಎಂಬುದಾಗಿ ತರ್ಜುಮೆಮಾಡಲಾದ ಗ್ರೀಕ್‌ ಕ್ರಿಯಾಪದವು, “ಮನವೊಲಿಸುವಂತೆ ಮಾಡುವುದು, ಒಡಂಬಡಿಸುವುದು ಅಥವಾ ಒಲಿಸಿಕೊಳ್ಳುವುದು, ಮನವೊಪ್ಪಿಸುವುದು” ಎಂಬ ಅರ್ಥವನ್ನು ಕೊಡುತ್ತದೆ. ಇನ್ನೊಂದು ಮಾತಿನಲ್ಲಿ, ನಮ್ಮ ಹೃದಯಕ್ಕೆ ಆಶ್ವಾಸನೆಯನ್ನು ನೀಡಬೇಕಾದರೆ ನಾವು ನಮ್ಮ ಮನಸ್ಸನ್ನು ಒಲಿಸಿಕೊಳ್ಳಬೇಕು, ಯೆಹೋವನು ನಮ್ಮನ್ನು ಪ್ರೀತಿಸುತ್ತಾನೆಂಬುದನ್ನು ನಂಬುವಂತೆ ನಮ್ಮ ಹೃದಯವನ್ನು ನಾವು ಮನಗಾಣಿಸಬೇಕು. ಹೇಗೆ?

ಲೇಖನದ ಆರಂಭದಲ್ಲಿ ತಿಳಿಸಲಾದ ಫ್ರಿಟ್ಸ್‌, ಯೆಹೋವನ ಸಾಕ್ಷಿಗಳ ಸಭೆಗಳಲ್ಲೊಂದರಲ್ಲಿ 25 ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಹಿರಿಯರಾಗಿ ಸೇವೆಸಲ್ಲಿಸುತ್ತಿದ್ದಾರೆ ಮತ್ತು ವೈಯಕ್ತಿಕ ಅಭ್ಯಾಸವು, ಯೆಹೋವನ ಪ್ರೀತಿಯ ಕುರಿತು ತಮ್ಮ ಹೃದಯಕ್ಕೆ ಪುನರಾಶ್ವಾಸನೆಯನ್ನು ಕೊಡಸಾಧ್ಯವಿದೆ ಎಂಬುದನ್ನು ಅವರು ಕಂಡುಕೊಂಡಿದ್ದಾರೆ. “ನಾನು ಬೈಬಲನ್ನು ಮತ್ತು ನಮ್ಮ ಪ್ರಕಾಶನಗಳನ್ನು ಕ್ರಮವಾಗಿ ಮತ್ತು ಜಾಗರೂಕತೆಯಿಂದ ಅಭ್ಯಾಸಿಸುತ್ತೇನೆ. ನನ್ನ ಜೀವನದಲ್ಲಿ ನಡೆದುಹೋದ ವಿಷಯಗಳ ಮೇಲೆ ನನ್ನ ಮನಸ್ಸನ್ನು ಕೇಂದ್ರೀಕರಿಸುವುದರ ಬದಲು, ನಮ್ಮ ಅದ್ಭುತಕರವಾದ ಭವಿಷ್ಯತ್ತಿನ ಸ್ಪಷ್ಟ ನೋಟವನ್ನು ಹೊಂದಿರುವಂತೆ ಇದು ನನಗೆ ಸಹಾಯಮಾಡುತ್ತದೆ. ಕೆಲವು ಸಲ ನನ್ನ ಹಿಂದಿನ ಜೀವಿತವು ನನ್ನನ್ನು ಸಂಪೂರ್ಣವಾಗಿ ಮುಳುಗಿಸಿಬಿಡುತ್ತದೆ, ಅಂಥ ಸಮಯಗಳಲ್ಲಿ ದೇವರು ನನ್ನನ್ನು ಎಂದೂ ಪ್ರೀತಿಸಲಾರನು ಎಂಬ ಅನಿಸಿಕೆಯುಂಟಾಗುತ್ತದೆ. ಆದರೆ, ಸಾಮಾನ್ಯವಾಗಿ ಕ್ರಮದ ಅಭ್ಯಾಸವು ನನ್ನ ಹೃದಯವನ್ನು ಬಲಗೊಳಿಸುತ್ತದೆ, ನನ್ನ ನಂಬಿಕೆಯನ್ನು ಬೆಳೆಸುತ್ತದೆ ಮತ್ತು ಸಂತೋಷದಿಂದಿರಲು ಹಾಗೂ ಸಮಚಿತ್ತದಿಂದಿರಲು ಅದು ನನಗೆ ಸಹಾಯಮಾಡುತ್ತದೆ.”

ನಿಜ, ಬೈಬಲ್‌ ಓದುವುದರಿಂದ ಮತ್ತು ಓದಿದ ವಿಷಯಗಳನ್ನು ಮನನ ಮಾಡುವುದರಿಂದ ನಿಮ್ಮ ನಿಜವಾದ ಸನ್ನಿವೇಶವು ಬದಲಾಗಲಿಕ್ಕಿಲ್ಲ. ಆದರೂ ನಾವು ನಮ್ಮ ಸನ್ನಿವೇಶವನ್ನು ಹೇಗೆ ವೀಕ್ಷಿಸುತ್ತೇವೆಂಬುದರ ಮೇಲೆ ಪರಿಣಾಮ ಬೀರಿ, ನಮ್ಮ ಆಲೋಚನಾರೀತಿಯನ್ನು ಅದು ಬದಲಾಯಿಸಬಲ್ಲದು. ದೇವರ ವಾಕ್ಯದಲ್ಲಿರುವ ಆಲೋಚನೆಗಳನ್ನು ಮನಸ್ಸಿಗೆ ತೆಗೆದುಕೊಳ್ಳುವುದು ಆತನು ಯೋಚಿಸುವ ರೀತಿಯಲ್ಲಿಯೇ ನಾವು ಯೋಚಿಸುವಂತೆ ಸಹಾಯಮಾಡುತ್ತದೆ. ಇನ್ನೂ ಹೆಚ್ಚಾಗಿ, ಅಭ್ಯಾಸವು ದೇವರ ವಿಶಾಲಹೃದಯವನ್ನು ಅರ್ಥಮಾಡಿಕೊಳ್ಳುವುದರ ಕುರಿತಾದ ತಿಳುವಳಿಕೆಯಲ್ಲಿ ಬೆಳೆಯುತ್ತಾ ಹೋಗುವಂತೆ ಶಕ್ತರನ್ನಾಗಿಸುತ್ತದೆ. ನಮ್ಮ ಬಾಲ್ಯಾವಸ್ಥೆಯಲ್ಲಿದ್ದ ಪರಿಸ್ಥಿತಿಗಳ ಕಾರಣಕ್ಕಾಗಿ ಯೆಹೋವನು ನಮ್ಮನ್ನು ದೂಷಿಸುವುದಿಲ್ಲ. ಅಷ್ಟೇ ಅಲ್ಲ, ನಮ್ಮ ದೌರ್ಬಲ್ಯಗಳಿಗಾಗಿಯೂ ಸಹ ಆತನು ನಮ್ಮನ್ನು ದೂಷಿಸುವುದಿಲ್ಲ ಎಂಬುದನ್ನು ನಾವು ಕ್ರಮೇಣವಾಗಿ ಅಂಗೀಕರಿಸಬಹುದು. ನಮ್ಮಲ್ಲಿ ಅನೇಕರಿಗೆ ಅನೇಕ ಭಾವನಾತ್ಮಕ ಅಥವಾ ಶಾರೀರಿಕ ಹೊರೆಗಳು ಇವೆ ಮತ್ತು ಇವು ಅನೇಕ ವೇಳೆ ನಾವೇ ಮಾಡಿಕೊಂಡದ್ದಾಗಿರುವುದಿಲ್ಲ ಎಂಬುದಾಗಿ ಆತನಿಗೆ ಗೊತ್ತಿದೆ ಮಾತ್ರವಲ್ಲ, ಈ ನಿಜತ್ವವನ್ನು ಆತನು ಪ್ರೀತಿಯಿಂದ ಅರ್ಥಮಾಡಿಕೊಳ್ಳುತ್ತಾನೆ.

ಈ ಹಿಂದೆ ತಿಳಿಸಲಾದ ಮಾರ್ಗರೆಟ್‌ಳ ಕುರಿತಾಗಿ ಏನು? ಯೆಹೋವನ ಕುರಿತು ತಿಳಿದುಕೊಳ್ಳುತ್ತಾ ಹೋದಂತೆ, ಬೈಬಲನ್ನು ಅಭ್ಯಾಸಿಸುವುದು ಅವಳಿಗೂ ಸಹ ಬಹಳ ಪ್ರಯೋಜನವನ್ನು ತಂದಿತು. ಫ್ರಿಟ್ಸ್‌ರಂತೆ ಮಾರ್ಗರೆಟ್‌ಳಿಗೂ ಸಹ ತಂದೆಯೊಬ್ಬನ ಕುರಿತು ತನಗಿದ್ದ ಮಾನಸಿಕ ದೃಷ್ಟಿಕೋನವನ್ನು ಸರಿಪಡಿಸಿಕೊಳ್ಳಬೇಕಾಗಿತ್ತು. ಅಭ್ಯಾಸದಿಂದ ತಾನು ಕಲಿತಿದ್ದ ವಿಷಯಗಳನ್ನು ತನ್ನ ಜೀವಿತದಲ್ಲಿ ಅಳವಡಿಸಿಕೊಳ್ಳಲು ಮಾರ್ಗರೆಟ್‌ಳಿಗೆ ಪ್ರಾರ್ಥನೆಯು ಸಹಾಯಮಾಡಿತು. ಮಾರ್ಗರೆಟ್‌ ಹೇಳುವುದು: “ಆರಂಭದಿಂದಲೂ ನಾನು ಯೆಹೋವನನ್ನು ಒಬ್ಬ ಆಪ್ತ ಸ್ನೇಹಿತನಾಗಿ ಪರಿಗಣಿಸಿದೆ, ಯಾಕೆಂದರೆ ನನಗೆ ಪ್ರೀತಿಯುಳ್ಳ ತಂದೆಗಿಂತಲೂ ಪ್ರೀತಿಯುಳ್ಳ ಸ್ನೇಹಿತರೊಂದಿಗೆ ಸಹವಾಸಿಸುವುದರ ಹೆಚ್ಚಿನ ಅನುಭವವಿತ್ತು. ಕ್ರಮೇಣವಾಗಿ ನಾನು ನನ್ನ ಭಾವನೆಗಳನ್ನು, ಸಂದೇಹಗಳನ್ನು, ಆತಂಕಗಳನ್ನು ಮತ್ತು ಕಷ್ಟಗಳನ್ನು ಯೆಹೋವನ ಮುಂದೆ ಮನಬಿಚ್ಚಿ ಹೇಳಲು ಕಲಿತುಕೊಂಡೆ. ನಾನು ಪುನಃ ಪುನಃ ಆತನೊಂದಿಗೆ ಪ್ರಾರ್ಥನೆಯಲ್ಲಿ ಮಾತಾಡುತ್ತಿದ್ದೆ. ಅದೇ ಸಮಯದಲ್ಲಿ ನಾನಾ ಬಣ್ಣದ ಸಣ್ಣ ಕಲ್ಲು ಚೂರುಗಳನ್ನು ಜೋಡಿಸಿ ಮಾಡುವ ಸುಂದರ ಚಿತ್ರಕಲೆಯಂತೆಯೇ ಆತನ ಕುರಿತು ಕಲಿಯುತ್ತಿದ್ದ ಎಲ್ಲ ಹೊಸ ವಿಷಯಗಳನ್ನು ನನ್ನ ಜೀವನದಲ್ಲಿ ಜೋಡಿಸುತ್ತಿದ್ದೆ ಅಥವಾ ನನ್ನಲ್ಲಿ ಅಳವಡಿಸಿಕೊಳ್ಳುತ್ತಿದ್ದೆ. ಕೆಲವು ಸಮಯದ ನಂತರ, ಯೆಹೋವನ ಕಡೆಗೆ ನನ್ನ ಭಾವನೆಗಳು ಎಷ್ಟರ ಮಟ್ಟಿಗೆ ಬೆಳೆಯಿತೆಂದರೆ, ನನಗೀಗ ಆತನನ್ನು ಒಬ್ಬ ಪ್ರೀತಿಯುಳ್ಳ ತಂದೆಯಾಗಿ ಪರಿಗಣಿಸುವುದರಲ್ಲಿ ಯಾವ ಕಷ್ಟವೂ ಆಗುವುದಿಲ್ಲ.”

ಎಲ್ಲ ರೀತಿಯ ವ್ಯಾಕುಲದಿಂದ ಮುಕ್ತಿ

ಈ ದುಷ್ಟ, ಹಳೇ ವ್ಯವಸ್ಥೆಯು ಎಷ್ಟರ ವರೆಗೆ ಇರುತ್ತದೋ ಅಷ್ಟರ ವರೆಗೆ ಯಾರೊಬ್ಬರು ವ್ಯಾಕುಲಗಳಿಂದ ಮುಕ್ತರಾಗುವುದನ್ನು ನಿರೀಕ್ಷಿಸಲು ಸಾಧ್ಯವೇ ಇಲ್ಲ. ಕೆಲವು ಕ್ರೈಸ್ತರಿಗೆ ವ್ಯಾಕುಲ ಅಥವಾ ತಮ್ಮ ಮೇಲೆಯೇ ಸಂದೇಹಪಡುವ ಪ್ರವೃತ್ತಿಯು ಪುನಃ ಪುನಃ ಬಂದು ಮಾನಸಿಕ ವ್ಯಥೆಯನ್ನು ಉಂಟುಮಾಡಬಹುದು. ಆದರೆ ಯೆಹೋವನು ನಮ್ಮ ಒಳ್ಳೆಯ ಉದ್ದೇಶವನ್ನು ಬಲ್ಲನು ಮತ್ತು ಆತನ ಸೇವೆಯಲ್ಲಿ ನಾವು ಪಡುವ ಪ್ರಯಾಸವನ್ನು ಸಹ ಆತನು ಬಲ್ಲನು ಎಂಬ ಆಶ್ವಾಸನೆಯು ನಮಗಿರಸಾಧ್ಯವಿದೆ. ಆತನ ನಾಮಕ್ಕಾಗಿ ನಾವು ತೋರಿಸುವ ಪ್ರೀತಿಯನ್ನು ಆತನು ಎಂದೂ ಮರೆಯುವುದಿಲ್ಲ.—ಇಬ್ರಿಯ 6:10.

ಮೆಸ್ಸೀಯನ ರಾಜ್ಯದ ಕೆಳಗೆ ಬರಲಿರುವ ಹೊಸ ಲೋಕದಲ್ಲಿ, ಸೈತಾನನ ವ್ಯವಸ್ಥೆಯ ಹೊರೆಗಳಿಂದ ಮುಕ್ತವಾಗುವುದನ್ನು ಎಲ್ಲ ನಂಬಿಗಸ್ತ ಮಾನವರು ನಿರೀಕ್ಷಿಸಬಹುದು. ಅದು ಎಂತಹ ಮಹಾ ಬಿಡುಗಡೆಯಾಗಿರುವುದು! ಆ ಸಮಯದಲ್ಲಿ, ಯೆಹೋವನು ಎಷ್ಟೊಂದು ವಿಶಾಲಹೃದಯದವನಾಗಿದ್ದಾನೆ ಎಂಬುದಕ್ಕೆ ಇನ್ನೂ ಹೆಚ್ಚಿನ ಪುರಾವೆಯನ್ನು ನಾವು ನೋಡಲಿರುವೆವು. ಅಲ್ಲಿಯ ವರೆಗೆ, “ದೇವರು ನಮ್ಮ ಹೃದಯಕ್ಕಿಂತ ದೊಡ್ಡವನಾಗಿದ್ದು ಎಲ್ಲವನ್ನೂ ಬಲ್ಲವನಾಗಿದ್ದಾನೆ” ಎಂಬುದರ ಆಶ್ವಾಸನೆ ನಮ್ಮೆಲ್ಲರಲ್ಲಿ ಇರುವಂತಾಗಲಿ.—1 ಯೋಹಾನ 3:20.

[ಪಾದಟಿಪ್ಪಣಿ]

^ ಪ್ಯಾರ. 8 ಹೆಸರುಗಳು ಬದಲಾಯಿಸಲಾಗಿವೆ.

[ಪುಟ 30ರಲ್ಲಿರುವ ಸಂಕ್ಷಿಪ್ತ ವಿವರಣೆ]

ಯೆಹೋವನು ಕಠೋರವಾದ ನಿರಂಕುಶ ಪ್ರಭುವಾಗಿರದೆ ವಾತ್ಸಲ್ಯ ಸ್ವರೂಪಿಯೂ, ವಿಶಾಲಹೃದಯದ ಮತ್ತು ಸಹಾನುಭೂತಿಯುಳ್ಳ ತಂದೆಯೂ ಆಗಿದ್ದಾನೆ

[ಪುಟ 31ರಲ್ಲಿರುವ ಚಿತ್ರ]

ದೇವರು ಯೋಚಿಸುವಂತೆ ನಾವು ಯೋಚಿಸಲು ದೇವರ ವಾಕ್ಯದ ಅಭ್ಯಾಸವು ನಮಗೆ ಸಹಾಯಮಾಡುತ್ತದೆ