ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಯೆಹೋವನೇ, ನಿನ್ನ ಯಜ್ಞವೇದಿಯನ್ನು ಪ್ರದಕ್ಷಿಣೆಮಾಡುವೆನು’

‘ಯೆಹೋವನೇ, ನಿನ್ನ ಯಜ್ಞವೇದಿಯನ್ನು ಪ್ರದಕ್ಷಿಣೆಮಾಡುವೆನು’

‘ಯೆಹೋವನೇ, ನಿನ್ನ ಯಜ್ಞವೇದಿಯನ್ನು ಪ್ರದಕ್ಷಿಣೆಮಾಡುವೆನು’

“ಯೆಹೋವನೇ, ನಾನು ನಿಷ್ಕಳಂಕತೆಯಲ್ಲಿ ಕೈಗಳನ್ನು ತೊಳೆದುಕೊಂಡವನಾಗಿ . . . ನಿನ್ನ ಯಜ್ಞವೇದಿಯನ್ನು ಪ್ರದಕ್ಷಿಣೆಮಾಡುವೆನು.” (ಕೀರ್ತನೆ 26:6, 7, NW) ಈ ರೀತಿಯಲ್ಲಿ, ಗತಕಾಲದ ರಾಜ ದಾವೀದನು, ಯೆಹೋವನ ಕಡೆಗೆ ತನಗಿರುವ ಭಕ್ತಿಯನ್ನು ವರ್ಣಿಸಿದನು. ಆದರೆ, ಅವನೇಕೆ ಯೆಹೋವನ ಯಜ್ಞವೇದಿಯನ್ನು ‘ಪ್ರದಕ್ಷಿಣೆಮಾಡುವನು’ ಮತ್ತು ಅದು ಏನನ್ನು ಅರ್ಥೈಸಿತು?

ದಾವೀದನಿಗೆ, ತಾಮ್ರದ ಯಜ್ಞವೇದಿಯನ್ನು ಒಳಗೊಂಡಿದ್ದ ದೇವಗುಡಾರದಲ್ಲಿ ಯೆಹೋವನನ್ನು ಆರಾಧಿಸುವುದು ಅವನ ಜೀವಿತದ ಮುಖ್ಯ ಭಾಗವಾಗಿತ್ತು. ಅವನ ಆಳ್ವಿಕೆಯ ಸಮಯದಲ್ಲಿ, ಈ ದೇವಗುಡಾರವು ಯೆರೂಸಲೇಮಿನ ಉತ್ತರ ದಿಕ್ಕಿನಲ್ಲಿದ್ದ ಗಿಬ್ಯೋನಿನಲ್ಲಿತ್ತು. (1 ಅರಸು 3:4) ಈ ಯಜ್ಞವೇದಿಯು ಕೇವಲ 2.2 ಮೀಟರುಗಳಷ್ಟಿತ್ತು. ಇದು ಸೊಲೊಮೋನನು ಕಟ್ಟಲಿದ್ದ ದೇವಾಲಯದಲ್ಲಿನ ವೈಭವಯುತವಾದ ಯಜ್ಞವೇದಿಗಿಂತಲೂ ತುಂಬ ಚಿಕ್ಕದಾಗಿತ್ತು. * ಹಾಗಿದ್ದರೂ, ಇಸ್ರಾಯೇಲಿನಲ್ಲಿ ಶುದ್ಧಾರಾಧನೆಯ ಮುಖ್ಯ ಭಾಗವಾಗಿದ್ದ ಯಜ್ಞವೇದಿಯನ್ನು ಒಳಗೊಂಡ ಈ ದೇವಗುಡಾರದಲ್ಲಿಯೇ, ದಾವೀದನು ಬಹಳ ಆನಂದವನ್ನು ಕಂಡುಕೊಂಡನು.—ಕೀರ್ತನೆ 26:8.

ಈ ಯಜ್ಞವೇದಿಯ ಮೇಲೆ ಸರ್ವಾಂಗಹೋಮಗಳನ್ನು, ಸಮಾಧಾನಯಜ್ಞಗಳನ್ನು ಮತ್ತು ಪ್ರಾಯಶ್ಚಿತ್ತಯಜ್ಞಗಳನ್ನು ಅರ್ಪಿಸಲಾಯಿತು. ವಾರ್ಷಿಕ ದೋಷಪರಿಹಾರಕ ದಿನದಂದು, ಇಡೀ ಜನಾಂಗದ ಪರವಾಗಿ ಬಲಿಗಳು ಅರ್ಪಿಸಲ್ಪಟ್ಟವು. ಇಂದು ಕ್ರೈಸ್ತರಿಗೆ, ಈ ಯಜ್ಞವೇದಿ ಮತ್ತು ಅದರ ಮೇಲೆ ಅರ್ಪಿಸಲಾದ ಬಲಿಗಳು ವಿಶೇಷ ಅರ್ಥವನ್ನು ಹೊಂದಿವೆ. ಈ ಯಜ್ಞವೇದಿಯು ದೇವರ ಚಿತ್ತವನ್ನು ಪ್ರತಿನಿಧಿಸಿತೆಂದು ಅಪೊಸ್ತಲ ಪೌಲನು ವಿವರಿಸಿದನು. ಆ ಚಿತ್ತಕ್ಕನುಸಾರ, ಮಾನವಕುಲದ ವಿಮೋಚನೆಗಾಗಿ ಅರ್ಪಿಸಲ್ಪಟ್ಟ ಒಂದು ಯೋಗ್ಯವಾದ ಬಲಿಯನ್ನು ದೇವರು ಸ್ವೀಕರಿಸಿಕೊಂಡನು. ಪೌಲನು ಹೇಳಿದ್ದು: “ಯೇಸು ಕ್ರಿಸ್ತನು ಒಂದೇ ಸಾರಿ ದೇಹಸಮರ್ಪಣೆಮಾಡಿ ದೇವರ ಚಿತ್ತವನ್ನು ನೆರವೇರಿಸಿದದರಿಂದಲೇ ನಾವು ಶುದ್ಧರಾದೆವು.”—ಇಬ್ರಿಯ 10:5-10.

ಯಾಜಕರು ಯಜ್ಞವೇದಿಯ ಬಳಿ ಸೇವೆಸಲ್ಲಿಸಲು ಹೋಗುವ ಮುಂಚೆ, ನೀರಿನಲ್ಲಿ ತಮ್ಮ ಕೈಗಳನ್ನು ತೊಳೆದುಕೊಳ್ಳುವುದು ವಾಡಿಕೆಯಾಗಿತ್ತು. ಹಾಗೆಯೇ, ‘ಯಜ್ಞವೇದಿಯ ಪ್ರದಕ್ಷಿಣೆಮಾಡುವ’ ಮೊದಲು, ರಾಜ ದಾವೀದನು ತನ್ನ ಕೈಗಳನ್ನು “ನಿಷ್ಕಳಂಕತೆಯಲ್ಲಿ” ತೊಳೆದುಕೊಂಡಿರುವುದು ಸೂಕ್ತವಾದದ್ದಾಗಿದೆ. ಅವನು “ಪೂರ್ಣಮನಸ್ಸಿನಿಂದಲೂ ಯಥಾರ್ಥಚಿತ್ತದಿಂದಲೂ” ನಡೆದುಕೊಂಡನು. (1 ಅರಸು 9:4) ಅವನು ಈ ರೀತಿಯಲ್ಲಿ ತನ್ನ ಕೈಗಳನ್ನು ತೊಳೆದುಕೊಳ್ಳದೆ ಇರುತ್ತಿದ್ದಲ್ಲಿ, ಅವನ ಆರಾಧನೆ ಅಂದರೆ, ‘ಯಜ್ಞವೇದಿಯ ಪ್ರದಕ್ಷಿಣೆ’ ಸ್ವೀಕಾರಯೋಗ್ಯವಾಗಿರುತ್ತಿರಲಿಲ್ಲ. ನಿಜ, ದಾವೀದನು ಲೇವಿಯರ ಕುಲದಿಂದ ಬಂದವನಾಗಿರಲಿಲ್ಲ, ಆದುದರಿಂದ ಯಜ್ಞವೇದಿಯ ಬಳಿ ಯಾಜಕರಂತೆ ಸೇವೆಸಲ್ಲಿಸುವ ಸುಯೋಗ ಅವನಿಗಿರಲಿಲ್ಲ. ಅವನೊಬ್ಬ ರಾಜನಾಗಿದ್ದರೂ, ದೇವಗುಡಾರದ ಅಂಗಣದೊಳಗೆ ಕಾಲಿರಿಸುವ ಅನುಮತಿ ಅವನಿಗಿರಲಿಲ್ಲ. ಆದರೂ, ಒಬ್ಬ ನಂಬಿಗಸ್ತ ಇಸ್ರಾಯೇಲ್ಯನೋಪಾದಿ, ಅವನು ಮೋಶೆಯ ಧರ್ಮಶಾಸ್ತ್ರಕ್ಕೆ ಅಧೀನನಾದನು ಮತ್ತು ಕ್ರಮವಾಗಿ ಬಲಿಗಳನ್ನು ಯಜ್ಞವೇದಿಯ ಮೇಲೆ ಅರ್ಪಿಸಲಿಕ್ಕಾಗಿ ತಂದನು. ಅವನು ತನ್ನ ಜೀವನದಲ್ಲಿ ಶುದ್ಧಾರಾಧನೆಗೆ ಮುಖ್ಯ ಸ್ಥಾನವನ್ನು ನೀಡಿದ್ದನು. ಈ ಅರ್ಥದಲ್ಲಿ, ಅವನು ಯಜ್ಞವೇದಿಯ ಪ್ರದಕ್ಷಿಣೆ ಮಾಡಿದನು.

ಇಂದು ನಾವು ದಾವೀದನ ಮಾದರಿಯನ್ನು ಅನುಕರಿಸಬಲ್ಲೆವೊ? ಹೌದು. ನಾವು ಯೇಸುವಿನ ಯಜ್ಞದಲ್ಲಿ ನಂಬಿಕೆಯನ್ನಿಟ್ಟು, ‘ನಿಷ್ಕಳಂಕಹಸ್ತ ಹಾಗೂ ನಿರ್ಮಲಮನಸ್ಸಿನಿಂದ’ ಯೆಹೋವನಿಗೆ ಹೃತ್ಪೂರ್ವಕ ಸೇವೆಯನ್ನು ಸಲ್ಲಿಸಿದರೆ, ನಾವು ಕೂಡ ನಮ್ಮ ಕೈಗಳನ್ನು ನಿಷ್ಕಳಂಕತೆಯಲ್ಲಿ ತೊಳೆದು, ಯಜ್ಞವೇದಿಯ ಪ್ರದಕ್ಷಿಣೆ ಮಾಡಸಾಧ್ಯವಿದೆ.—ಕೀರ್ತನೆ 24:4, NW.

[ಪಾದಟಿಪ್ಪಣಿ]

^ ಪ್ಯಾರ. 3 ಸೊಲೊಮೋನನು ಕಟ್ಟಿದ ಯಜ್ಞವೇದಿಯು ಸುಮಾರು 9 ಮೀಟರುಗಳಷ್ಟಿತ್ತು.

[ಪುಟ 23ರಲ್ಲಿರುವ ಚಿತ್ರ]

ಯಜ್ಞವೇದಿಯು ಯೆಹೋವನ ಚಿತ್ತವನ್ನು ಪ್ರತಿನಿಧಿಸಿತು. ಆ ಚಿತ್ತಕ್ಕನುಸಾರ, ಮಾನವಕುಲದ ವಿಮೋಚನೆಗಾಗಿ ಅರ್ಪಿಸಲ್ಪಟ್ಟ ಒಂದು ಯೋಗ್ಯವಾದ ಬಲಿಯನ್ನು ಆತನು ಸ್ವೀಕರಿಸಿಕೊಂಡನು