ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಪ್ರವಾದನ ವಾಕ್ಯದಲ್ಲಿ ನಂಬಿಕೆಯಿಡಿರಿ!

ದೇವರ ಪ್ರವಾದನ ವಾಕ್ಯದಲ್ಲಿ ನಂಬಿಕೆಯಿಡಿರಿ!

ದೇವರ ಪ್ರವಾದನ ವಾಕ್ಯದಲ್ಲಿ ನಂಬಿಕೆಯಿಡಿರಿ!

“ಇದಲ್ಲದೆ ಪ್ರವಾದನವಾಕ್ಯವು ನಮಗೆ ಮತ್ತೂ ದೃಢವಾಗಿದೆ.”—2 ಪೇತ್ರ 1:19.

1, 2. ದಾಖಲಿಸಲ್ಪಟ್ಟ ಮೊದಲನೆಯ ಪ್ರವಾದನೆ ಯಾವುದಾಗಿತ್ತು, ಮತ್ತು ಅದು ಯಾವ ಒಂದು ಪ್ರಶ್ನೆಯನ್ನು ಎಬ್ಬಿಸಿತು?

ಯೆಹೋವನು ದಾಖಲಿಸಲ್ಪಟ್ಟಿರುವ ಮೊದಲನೆಯ ಪ್ರವಾದನೆಯ ಮೂಲನು. ಆದಾಮಹವ್ವರು ಪಾಪಗೈದ ಬಳಿಕ, ದೇವರು ಆ ಸರ್ಪಕ್ಕೆ ಹೇಳಿದ್ದು: “ನಿನಗೂ ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ.” (ಆದಿಕಾಂಡ 3:1-7, 14, 15) ಈ ಪ್ರವಾದನೆಯ ಮಾತುಗಳನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳುವ ಮೊದಲು ಅನೇಕ ಶತಮಾನಗಳು ಗತಿಸಲಿದ್ದವು.

2 ಆ ಮೊದಲನೆಯ ಪ್ರವಾದನೆಯು ಪಾಪಪೂರ್ಣ ಮಾನವಕುಲಕ್ಕೆ ನಿಜವಾದ ನಿರೀಕ್ಷೆಯನ್ನು ನೀಡಿತು. ಪಿಶಾಚನಾದ ಸೈತಾನನೇ ಆ “ಪುರಾತನ ಸರ್ಪ”ವೆಂದು ಶಾಸ್ತ್ರವಚನಗಳು ತದನಂತರ ಗುರುತಿಸಿದವು. (ಪ್ರಕಟನೆ 12:9) ಆದರೆ, ದೇವರ ವಾಗ್ದತ್ತ ಸಂತಾನವು ಯಾರಾಗಿರಲಿದ್ದನು?

ಸಂತಾನಕ್ಕಾಗಿ ನಡೆದ ಹುಡುಕಾಟ

3. ಹೇಬೆಲನು ಮೊದಲನೆಯ ಪ್ರವಾದನೆಯಲ್ಲಿ ನಂಬಿಕೆಯಿಟ್ಟಿದ್ದನೆಂಬುದನ್ನು ಯಾವುದು ತೋರಿಸುತ್ತದೆ?

3 ದೈವಭಕ್ತಿಯುಳ್ಳ ಹೇಬೆಲನು ತನ್ನ ತಂದೆಯಂತೆ ಅಪನಂಬಿಗಸ್ತನಾಗಿರಲಿಲ್ಲ. ಅವನು ಮೊದಲನೆಯ ಪ್ರವಾದನೆಯಲ್ಲಿ ನಂಬಿಕೆಯಿಟ್ಟನು. ಪಾಪವನ್ನು ಮುಚ್ಚಲಿಕ್ಕಾಗಿ ರಕ್ತವನ್ನು ಸುರಿಸುವುದು ತೀರ ಅಗತ್ಯವೆಂದು ಅವನು ಗ್ರಹಿಸಿದ್ದಿರಬೇಕು. ಆದುದರಿಂದಲೇ ಒಂದು ಪ್ರಾಣಿಯ ಬಲಿಯನ್ನು ಅರ್ಪಿಸುವಂತೆ ನಂಬಿಕೆಯು ಅವನನ್ನು ಪ್ರಚೋದಿಸಿತು. ಮತ್ತು ಆ ಬಲಿಯನ್ನು ದೇವರು ಸ್ವೀಕರಿಸಿದನು. (ಆದಿಕಾಂಡ 4:2-4) ಆದರೂ, ವಾಗ್ದತ್ತ ಸಂತಾನದ ಗುರುತು ಒಂದು ರಹಸ್ಯವಾಗಿಯೇ ಉಳಿಯಿತು.

4. ದೇವರು ಅಬ್ರಹಾಮನಿಗೆ ಯಾವ ವಾಗ್ದಾನವನ್ನು ಮಾಡಿದನು, ಮತ್ತು ವಾಗ್ದತ್ತ ಸಂತಾನದ ಬಗ್ಗೆ ಅದು ಏನನ್ನು ಸೂಚಿಸಿತು?

4 ಹೇಬೆಲನ ದಿನಗಳು ಮುಗಿದು ಸುಮಾರು 2,000 ವರ್ಷಗಳ ನಂತರ, ಮೂಲಪಿತೃವಾದ ಅಬ್ರಹಾಮನಿಗೆ ಯೆಹೋವನು ಈ ಪ್ರವಾದನಾತ್ಮಕ ವಾಗ್ದಾನವನ್ನು ಕೊಟ್ಟನು: “ನಿನ್ನ ಸಂತತಿಯನ್ನು ಹೆಚ್ಚಿಸೇ ಹೆಚ್ಚಿಸುವೆನು; ಅದನ್ನು ಆಕಾಶದ ನಕ್ಷತ್ರಗಳಂತೆಯೂ ಸಮುದ್ರತೀರದಲ್ಲಿರುವ ಉಸುಬಿನಂತೆಯೂ ಅಸಂಖ್ಯವಾಗಿ ಮಾಡುವೆನು; . . . ಭೂಮಿಯ ಎಲ್ಲಾ ಜನಾಂಗಗಳಿಗೂ ನಿನ್ನ ಸಂತತಿಯ ಮೂಲಕ ಆಶೀರ್ವಾದವುಂಟಾಗುವದು.” (ಆದಿಕಾಂಡ 22:17, 18) ಈ ಮಾತುಗಳು ಅಬ್ರಹಾಮನನ್ನು ಮೊದಲನೆಯ ಪ್ರವಾದನೆಯ ನೆರವೇರಿಕೆಯೊಂದಿಗೆ ಜೋಡಿಸಿದವು. ಸೈತಾನನ ಕೆಲಸಗಳನ್ನು ನಿರರ್ಥಕಗೊಳಿಸಲಿರುವ ಸಂತಾನವು ಅಬ್ರಹಾಮನ ವಂಶಾವಳಿಯಲ್ಲಿ ಬರುವನೆಂದು ಅವು ಸೂಚಿಸಿದವು. (1 ಯೋಹಾನ 3:8) “ದೇವರು ಮಾಡಿದ ವಾಗ್ದಾನದ ವಿಷಯದಲ್ಲಿ [ಅಬ್ರಹಾಮನು] ಅಪನಂಬಿಕೆಯಿಂದ ಚಂಚಲಚಿತ್ತನಾಗಲಿಲ್ಲ.” ಅವನಂತೆಯೇ ಯೆಹೋವನ ಇತರ ಕ್ರೈಸ್ತಪೂರ್ವ ಸಾಕ್ಷಿಗಳು, “ವಾಗ್ದಾನದ ಫಲವನ್ನು ಹೊಂದ”ದಿದ್ದರೂ ಅಪನಂಬಿಗಸ್ತರಾಗಿರಲಿಲ್ಲ. (ರೋಮಾಪುರ 4:20, 21; ಇಬ್ರಿಯ 11:39) ಬದಲಿಗೆ, ಅವರು ದೇವರ ಪ್ರವಾದನ ವಾಕ್ಯದಲ್ಲಿ ನಂಬಿಕೆಯನ್ನು ಕಾಪಾಡಿಕೊಂಡರು.

5. ಸಂತಾನದ ಕುರಿತು ದೇವರು ಮಾಡಿದ ವಾಗ್ದಾನವು ಯಾರಲ್ಲಿ ನೆರವೇರಿತು, ಮತ್ತು ನೀವು ಹಾಗೆಂದು ಉತ್ತರಿಸುವುದೇಕೆ?

5 ಅಪೊಸ್ತಲ ಪೌಲನು ಹೀಗೆ ಬರೆದಾಗ, ದೇವರ ವಾಗ್ದತ್ತ ಸಂತಾನವನ್ನು ಗುರುತಿಸಿದನು: “ದೇವರು ಅಬ್ರಹಾಮನಿಗೂ ಅವನ ಸಂತತಿಗೂ ವಾಗ್ದಾನಗಳನ್ನು ಮಾಡಿದನು. ಆತನು ನಿನ್ನ ಸಂತತಿಗಳಿಗೆ ಎಂದು ಹೇಳಿ ಅನೇಕರನ್ನು ಸೂಚಿಸದೆ ನಿನ್ನ ಸಂತತಿಗೆ ಎಂದು ಹೇಳಿ ಒಬ್ಬನನ್ನೇ ಸೂಚಿಸುತ್ತಾನೆ. ಆ ಒಬ್ಬನು ಕ್ರಿಸ್ತನೇ.” (ಗಲಾತ್ಯ 3:16) ಯಾವ ಸಂತಾನದ ಮೂಲಕ ಭೂಮಿಯ ಎಲ್ಲ ಜನಾಂಗಗಳು ಆಶೀರ್ವಾದವನ್ನು ಪಡೆಯಲಿದ್ದವೊ ಅದು ಅಬ್ರಹಾಮನ ಇಡೀ ಸಂತಾನವನ್ನು ಒಳಗೊಳ್ಳಲಿಲ್ಲ. ಅವನ ಮಗನಾದ ಇಷ್ಮಾಯೇಲನ ಹಾಗೂ ಕೆಟೂರಳಿಂದ ಅವನಿಗಾದ ಪುತ್ರರ ಸಂತತಿಯವರು, ಮಾನವಕುಲವನ್ನು ಆಶೀರ್ವದಿಸಲಿಕ್ಕಾಗಿ ಉಪಯೋಗಿಸಲ್ಪಡಲಿಲ್ಲ. ಅದರ ಬದಲು, ಆ ಸಂತಾನವು ಅವನ ಮಗನಾದ ಇಸಾಕ ಮತ್ತು ಮೊಮ್ಮಗನಾದ ಯಾಕೋಬನಿಂದಲೇ ಬರಲಿಕ್ಕಿತ್ತು. (ಆದಿಕಾಂಡ 21:12; 25:23, 31-34; 27:18-29, 37; 28:14) ಯೆಹೂದನ ಗೋತ್ರದಲ್ಲಿ ಬರಲಿದ್ದ ಶಿಲೋವಿಗೆ ‘ಜನಗಳು’ ವಿಧೇಯರಾಗಿರುವರೆಂದು ಯಾಕೋಬನು ಹೇಳಿದನಾದರೂ, ತದನಂತರ ಆ ಸಂತಾನವು ದಾವೀದನ ವಂಶಾವಳಿಯಿಂದಲೇ ಬರುವುದೆಂದು ತಿಳಿಸಲಾಯಿತು. (ಆದಿಕಾಂಡ 49:10; 2 ಸಮುವೇಲ 7:12-16) ಪ್ರಥಮ ಶತಮಾನದ ಯೆಹೂದ್ಯರು ಸಹ ಮೆಸ್ಸೀಯ ಇಲ್ಲವೆ ಕ್ರಿಸ್ತನಾಗಿ ಬರಬೇಕಾಗಿದ್ದ ಒಬ್ಬ ವ್ಯಕ್ತಿಯ ನಿರೀಕ್ಷೆಯಲ್ಲಿದ್ದರು. (ಯೋಹಾನ 7:41, 42) ಸಂತಾನದ ಕುರಿತಾದ ದೇವರ ಈ ಪ್ರವಾದನೆಯು, ಆತನ ಮಗನಾದ ಯೇಸು ಕ್ರಿಸ್ತನಲ್ಲಿ ನೆರವೇರಿಕೆಯನ್ನು ಕಂಡುಕೊಂಡಿತು.

ಮೆಸ್ಸೀಯನು ಕಾಣಿಸಿಕೊಳ್ಳುತ್ತಾನೆ!

6. (ಎ) ಎಪ್ಪತ್ತು ವಾರಗಳ ಪ್ರವಾದನೆಯನ್ನು ನಾವು ಹೇಗೆ ಅರ್ಥಮಾಡಿಕೊಳ್ಳಬೇಕಾಗಿದೆ? (ಬಿ) ಯೇಸು ಯಾವಾಗ ಮತ್ತು ಹೇಗೆ ‘ಪಾಪವನ್ನು ತೀರಿಸಿದನು’?

6 ಮೆಸ್ಸೀಯನಿಗೆ ಸಂಬಂಧಿಸಿದ ಒಂದು ಪ್ರಮುಖವಾದ ಪ್ರವಾದನೆಯನ್ನು ಪ್ರವಾದಿಯಾದ ದಾನಿಯೇಲನು ದಾಖಲಿಸಿದನು. ಮೇದ್ಯನಾದ ದಾರ್ಯಾವೇಷನ ಪ್ರಥಮ ವರ್ಷದಲ್ಲಿ, ಯೆರೂಸಲೇಮಿನ 70 ವರ್ಷಗಳ ನಿರ್ಜನ ಸ್ಥಿತಿಯು ಇನ್ನೇನು ಕೊನೆಗೊಳ್ಳಲಿತ್ತು ಎಂಬುದನ್ನು ದಾನಿಯೇಲನು ಗ್ರಹಿಸಿದನು. (ಯೆರೆಮೀಯ 29:10; ದಾನಿಯೇಲ 9:1-4) ದಾನಿಯೇಲನು ಪ್ರಾರ್ಥಿಸುತ್ತಿದ್ದಾಗ, ಗಬ್ರಿಯೇಲ ದೇವದೂತನು ಬಂದು, ‘ಪಾಪಗಳನ್ನು ತೀರಿಸಲು ಎಪ್ಪತ್ತು ವಾರಗಳು ನಿಷ್ಕರ್ಷಿಸಲ್ಪಟ್ಟಿವೆ’ ಎಂದು ಅವನಿಗೆ ತಿಳಿಸಿದನು. 70ನೇ ವಾರದ ಮಧ್ಯದಲ್ಲಿ ಮೆಸ್ಸೀಯನು ಛೇದಿಸಲ್ಪಡಲಿದ್ದನು. ‘ಯೆರೂಸಲೇಮು ಪುನಃ ಕಟ್ಟಲ್ಪಡಲಿ’ ಎಂಬ ಆಜ್ಞೆಯನ್ನು ಪಾರಸಿಯ ರಾಜನಾದ ಒಂದನೇ ಅರ್ತಷಸ್ತನು ನೀಡಿದಾಗ, “ಎಪ್ಪತ್ತು ವಾರಗಳ ವರ್ಷಗಳು” ಸಾ.ಶ.ಪೂ. 455ರಲ್ಲಿ ಆರಂಭಗೊಂಡವು. (ದಾನಿಯೇಲ 9:20-27; ಮೋಫೆಟ್‌; ನೆಹೆಮೀಯ 2:1-8) ಮೆಸ್ಸೀಯನು 69 ವಾರಗಳ ನಂತರ ಬರಲಿದ್ದನು. ಈ 483 ವರ್ಷಗಳು, ಸಾ.ಶ.ಪೂ. 455ರಿಂದ ಸಾ.ಶ. 29ನೇ ವರ್ಷದ ವರೆಗಿನ ಕಾಲಾವಧಿಯನ್ನು ಆವರಿಸಿದವು. ಆ ಸಮಯದಲ್ಲಿ ಯೇಸು ದೀಕ್ಷಾಸ್ನಾನ ಪಡೆದು, ದೇವರಿಂದ ಮೆಸ್ಸೀಯ ಇಲ್ಲವೆ ಕ್ರಿಸ್ತನಾಗಿ ಅಭಿಷೇಕಿಸಲ್ಪಟ್ಟನು. (ಲೂಕ 3:21, 22) ಸಾ.ಶ. 33ರಲ್ಲಿ ತನ್ನ ಜೀವವನ್ನು ಪ್ರಾಯಶ್ಚಿತ್ತವಾಗಿ ಕೊಡುವ ಮೂಲಕ ಯೇಸು ‘ಪಾಪವನ್ನು ತೀರಿಸಿದನು.’ (ಮಾರ್ಕ 10:45) ದೇವರ ಪ್ರವಾದನ ವಾಕ್ಯದಲ್ಲಿ ನಂಬಿಕೆಯಿಡಲು ನಮಗೆಂತಹ ಬಲವಾದ ಕಾರಣಗಳು! *

7. ಶಾಸ್ತ್ರವಚನಗಳನ್ನು ಉಪಯೋಗಿಸುತ್ತಾ, ಯೇಸು ಮೆಸ್ಸೀಯ ಸಂಬಂಧಿತ ಪ್ರವಾದನೆಯನ್ನು ಹೇಗೆ ನೆರವೇರಿಸಿದನೆಂದು ತಿಳಿಸಿರಿ.

7 ನಮಗೆ ದೇವರ ಪ್ರವಾದನ ವಾಕ್ಯದಲ್ಲಿ ನಂಬಿಕೆಯಿದ್ದರೆ, ಮೆಸ್ಸೀಯನನ್ನು ಗುರುತಿಸಲು ನಾವು ಶಕ್ತರಾಗುತ್ತೇವೆ. ಹೀಬ್ರು ಶಾಸ್ತ್ರವಚನಗಳಲ್ಲಿ ದಾಖಲಾಗಿರುವ ಮೆಸ್ಸೀಯ ಸಂಬಂಧಿತ ಪ್ರವಾದನೆಗಳಲ್ಲಿ ಹೆಚ್ಚಿನವುಗಳನ್ನು, ಕ್ರೈಸ್ತ ಗ್ರೀಕ್‌ ಶಾಸ್ತ್ರವಚನಗಳ ಬರಹಗಾರರು ನೇರವಾಗಿ ಯೇಸುವಿಗೆ ಅನ್ವಯಿಸಿದರು. ಉದಾಹರಣೆಗೆ: ಬೇತ್ಲೆಹೇಮಿನ ಒಬ್ಬ ಕನ್ಯೆಯು ಯೇಸುವಿಗೆ ಜನ್ಮ ನೀಡಿದಳು. (ಯೆಶಾಯ 7:14; ಮೀಕ 5:2; ಮತ್ತಾಯ 1:18-23; ಲೂಕ 2:4-11) ಅವನನ್ನು ಐಗುಪ್ತ ದೇಶದೊಳಗಿಂದ ಕರೆಯಲಾಯಿತು, ಮತ್ತು ಅವನ ಜನ್ಮದ ನಂತರ ಗಂಡುಕೂಸುಗಳನ್ನೆಲ್ಲಾ ಕೊಲ್ಲಲಾಯಿತು. (ಯೆರೆಮೀಯ 31:15; ಹೋಶೇಯ 11:1; ಮತ್ತಾಯ 2:13-18) ಯೇಸು ನಮ್ಮ ರೋಗಗಳನ್ನು ಹೊತ್ತುಕೊಂಡನು. (ಯೆಶಾಯ 53:4; ಮತ್ತಾಯ 8:16, 17) ಮುಂತಿಳಿಸಲ್ಪಟ್ಟಂತೆ, ಅವನು ಕತ್ತೆಮರಿಯ ಮೇಲೆ ಕುಳಿತು ಯೆರೂಸಲೇಮನ್ನು ಪ್ರವೇಶಿಸಿದನು. (ಜೆಕರ್ಯ 9:9; ಯೋಹಾನ 12:12-15) ಯೇಸು ಶೂಲಕ್ಕೇರಿಸಲ್ಪಟ್ಟ ತರುವಾಯ, ಸೈನಿಕರು ಅವನ ಬಟ್ಟೆಯನ್ನು ತಮ್ಮಲ್ಲಿ ಪಾಲುಮಾಡಿಕೊಂಡು, ಅವನ ಅಂಗಿಗೋಸ್ಕರ ಚೀಟುಹಾಕಿದಾಗ, ಕೀರ್ತನೆಗಾರನ ಮಾತುಗಳು ನೆರವೇರಿದವು. (ಕೀರ್ತನೆ 22:18; ಯೋಹಾನ 19:23, 24) ಯೇಸುವಿನ ಎಲುಬುಗಳು ಮುರಿಯಲ್ಪಡಲಿಲ್ಲ ಮತ್ತು ಅವನು ಇರಿಯಲ್ಪಟ್ಟನೆಂಬ ನಿಜತ್ವವು ಕೂಡ ನೆರವೇರಿತು. (ಕೀರ್ತನೆ 34:20; ಜೆಕರ್ಯ 12:10; ಯೋಹಾನ 19:33-37) ಇವು, ದೇವಪ್ರೇರಿತ ಬೈಬಲ್‌ ಬರಹಗಾರರು ಯೇಸುವಿಗೆ ಅನ್ವಯಿಸಿದ ಮೆಸ್ಸೀಯ ಸಂಬಂಧಿತ ಪ್ರವಾದನೆಗಳಲ್ಲಿ ಕೆಲವೇ ಆಗಿವೆ. *

ಮೆಸ್ಸೀಯ ರಾಜನಿಗೆ ತಲೆಬಾಗಿರಿ!

8. ಮಹಾವೃದ್ಧನು ಯಾರು, ಮತ್ತು ದಾನಿಯೇಲ 7:9-14ರಲ್ಲಿ ದಾಖಲಿಸಲ್ಪಟ್ಟಿರುವ ಪ್ರವಾದನೆಯು ಹೇಗೆ ನೆರವೇರಿತು?

8 ಬಾಬೆಲಿನ ಅರಸನಾದ ಬೇಲ್ಶಚ್ಚರನ ಆಳ್ವಿಕೆಯ ಮೊದಲನೆಯ ವರ್ಷದಲ್ಲಿ, ಯೆಹೋವನು ತನ್ನ ಪ್ರವಾದಿಯಾದ ದಾನಿಯೇಲನಿಗೆ ಒಂದು ಕನಸನ್ನು ಮತ್ತು ಅಸಾಧಾರಣವಾದ ದರ್ಶನಗಳನ್ನು ದಯಪಾಲಿಸಿದನು. ಮೊದಲಾಗಿ, ಪ್ರವಾದಿಯು ನಾಲ್ಕು ದೊಡ್ಡ ಮೃಗಗಳನ್ನು ನೋಡುತ್ತಾನೆ. ಇವುಗಳನ್ನು “ನಾಲ್ಕು ಅರಸರು” ಎಂದು ಗುರುತಿಸಿದ ದೇವದೂತನು, ಒಂದರ ಹಿಂದೊಂದು ಬರಲಿರುವ ಲೋಕ ಶಕ್ತಿಗಳು ಇವೇ ಎಂಬುದಾಗಿ ಸೂಚಿಸುತ್ತಾನೆ. (ದಾನಿಯೇಲ 7:1-8, 17, NW) ನಂತರ, “ಮಹಾವೃದ್ಧನಾದ” ಯೆಹೋವನು ನ್ಯಾಯಾಸನವನ್ನೇರಿ ಮಹಾ ವೈಭವದಿಂದ ಕುಳಿತುಕೊಂಡಿರುವುದನ್ನು ದಾನಿಯೇಲನು ನೋಡುತ್ತಾನೆ. ಮೃಗಗಳಿಗೆ ಪ್ರತಿಕೂಲ ನ್ಯಾಯತೀರ್ಪನ್ನು ವಿಧಿಸುತ್ತಾ, ಆತನು ಅವುಗಳಿಂದ ದೊರೆತನವನ್ನು ತೆಗೆದುಬಿಟ್ಟು, ನಾಲ್ಕನೆಯ ಮೃಗವನ್ನು ನಾಶಮಾಡಿದನು. “ಸಕಲಜನಾಂಗ ಕುಲಭಾಷೆಗಳವರ” ಮೇಲೆ ಶಾಶ್ವತವಾದ ದೊರೆತನವನ್ನು ಮಾಡುವಂತೆ, ಅಧಿಕಾರವು “ಮನುಷ್ಯ ಕುಮಾರನಂತಿರು”ವವನಿಗೆ ನಂತರ ಕೊಡಲಾಯಿತು. (ದಾನಿಯೇಲ 7:9-14) ಇದು 1914ರಲ್ಲಿ, ಸ್ವರ್ಗದಲ್ಲಿ ‘ಮನುಷ್ಯಕುಮಾರನಾದ’ ಯೇಸು ಕ್ರಿಸ್ತನ ಸಿಂಹಾಸನಾರೋಹಣಕ್ಕೆ ಸಂಬಂಧಿಸುವ ಎಂತಹ ಅದ್ಭುತಕರವಾದ ಪ್ರವಾದನೆಯಾಗಿದೆ!—ಮತ್ತಾಯ 16:13.

9, 10. (ಎ) ಕನಸಿನ ಪ್ರತಿಮೆಯ ವಿಭಿನ್ನ ಭಾಗಗಳು ಏನನ್ನು ಪ್ರತಿನಿಧಿಸಿದವು? (ಬಿ) ದಾನಿಯೇಲ 2:44ರ ನೆರವೇರಿಕೆಯನ್ನು ನೀವು ಹೇಗೆ ವಿವರಿಸುವಿರಿ?

9 ದೇವರು “ರಾಜರನ್ನು ತಳ್ಳುತ್ತಾನೆ, ನಿಲ್ಲಿಸುತ್ತಾನೆ” ಎಂಬ ವಿಷಯವು ದಾನಿಯೇಲನಿಗೆ ಗೊತ್ತಿತ್ತು. (ದಾನಿಯೇಲ 2:21) ಈ ಪ್ರವಾದಿಗೆ ‘ರಹಸ್ಯಗಳನ್ನು ತಿಳಿಯಪಡಿಸುವ’ ಯೆಹೋವನಲ್ಲಿ ನಂಬಿಕೆಯಿದ್ದ ಕಾರಣ, ಬಾಬೆಲಿನ ಅರಸ ನೆಬೂಕದ್ನೆಚ್ಚರನಿಗೆ ಬಿದ್ದ ಆ ಭಾರೀ ಪ್ರತಿಮೆಯ ಕನಸಿನ ಅರ್ಥವನ್ನು ತಿಳಿಸಿಹೇಳಲು ಅವನು ಶಕ್ತನಾದನು. ಅದರ ವಿಭಿನ್ನ ಭಾಗಗಳು, ಬಬಿಲೋನ್‌, ಮೇದ್ಯಪಾರಸಿಯ, ಗ್ರೀಸ್‌ ಮತ್ತು ರೋಮ್‌ನಂತಹ ಲೋಕ ಶಕ್ತಿಗಳ ಏಳುಬೀಳುಗಳನ್ನು ಸೂಚಿಸಿದವು. ನಮ್ಮ ಸಮಯಗಳಲ್ಲಿ ಮತ್ತು ಮುಂದೆ ನಡೆಯಲಿರುವ ಲೋಕ ಘಟನೆಗಳನ್ನು ಬರೆದಿಡಲು ಸಹ ದೇವರು ದಾನಿಯೇಲನನ್ನು ಉಪಯೋಗಿಸಿದನು.—ದಾನಿಯೇಲ 2:24-30.

10 ಪ್ರವಾದನೆಯು ಹೇಳುವುದು: “ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.” (ದಾನಿಯೇಲ 2:44) ‘ಅನ್ಯದೇಶಗಳವರ ನೇಮಿತ ಸಮಯವು’ 1914ರಲ್ಲಿ ಕೊನೆಗೊಂಡಾಗ, ದೇವರು ಕ್ರಿಸ್ತನ ಕೆಳಗೆ ಸ್ವರ್ಗೀಯ ರಾಜ್ಯವನ್ನು ಸ್ಥಾಪಿಸಿದನು. (ಲೂಕ 21:24, NW; ಪ್ರಕಟನೆ 12:1-5) ದೈವಿಕ ಶಕ್ತಿಯಿಂದ ಈ ಮೆಸ್ಸೀಯ ರಾಜ್ಯವೆಂಬ ‘ಬಂಡೆಯು’ ದೇವರ ವಿಶ್ವ ಪರಮಾಧಿಕಾರವೆಂಬ “ಬೆಟ್ಟ”ದೊಳಗಿಂದ ಸಿಡಿದು ಬಂದಿತು. ಅರ್ಮಗೆದೋನ್‌ ಯುದ್ಧದಲ್ಲಿ, ಈ ಬಂಡೆಯು ಆ ಪ್ರತಿಮೆಯನ್ನು ಬಡಿದು, ಅದನ್ನು ಪುಡಿಪುಡಿ ಮಾಡುವುದು. ತದನಂತರ, ಈ ಮೆಸ್ಸೀಯ ರಾಜ್ಯವು, “ಲೋಕದಲ್ಲೆಲ್ಲಾ” ತನ್ನ ಪ್ರಭಾವಬೀರುವ ಒಂದು ಸರಕಾರಿ ಬೆಟ್ಟದಂತೆ ಶಾಶ್ವತವಾಗಿ ನಿಲ್ಲುವುದು.—ದಾನಿಯೇಲ 2:35, 45; ಪ್ರಕಟನೆ 16:14, 16. *

11. ಯೇಸುವಿನ ರೂಪಾಂತರವು ಯಾವುದರ ಪೂರ್ವನೋಟವಾಗಿತ್ತು, ಮತ್ತು ಆ ದರ್ಶನವು ಪೇತ್ರನ ಮೇಲೆ ಯಾವ ಪರಿಣಾಮವನ್ನು ಬೀರಿತು?

11 ಯೇಸು ತನ್ನ ರಾಜ್ಯದಾಳಿಕೆಯ ಕುರಿತು ಮಾತಾಡುತ್ತಾ, ತನ್ನ ಶಿಷ್ಯರಿಗೆ ಹೇಳಿದ್ದು: “ಇಲ್ಲಿ ನಿಂತವರೊಳಗೆ ಕೆಲವರು, ಮನುಷ್ಯಕುಮಾರನು ತನ್ನ ರಾಜ್ಯದಲ್ಲಿ ಬರುವದನ್ನು ನೋಡುವ ತನಕ ಮರಣಹೊಂದುವದಿಲ್ಲ.” (ಮತ್ತಾಯ 16:28) ಯೇಸು ಆರು ದಿನಗಳ ತರುವಾಯ, ಪೇತ್ರ, ಯಾಕೋಬ ಮತ್ತು ಯೋಹಾನರನ್ನು ಒಂದು ಎತ್ತರವಾದ ಬೆಟ್ಟಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ಅವರ ಮುಂದೆ ರೂಪಾಂತರಗೊಂಡನು. ಅಪೊಸ್ತಲರನ್ನು ಒಂದು ಕಾಂತಿಯುಳ್ಳ ಮೋಡವು ಕವಿದಂತೆ, ದೇವರು ಘೋಷಿಸಿದ್ದು: “ಈತನು ಪ್ರಿಯನಾಗಿರುವ ನನ್ನ ಮಗನು; ಈತನನ್ನು ನಾನು ಮೆಚ್ಚಿದ್ದೇನೆ; ಈತನ ಮಾತನ್ನು ಕೇಳಿರಿ.” (ಮತ್ತಾಯ 17:1-9; ಮಾರ್ಕ 9:1-9) ಕ್ರಿಸ್ತನ ರಾಜ್ಯವೈಭವದ ಎಂತಹ ಪೂರ್ವನೋಟ! ಆ ವಿಸ್ಮಯಕಾರಿ ದರ್ಶನದ ಕುರಿತು ಸೂಚಿಸುತ್ತಾ, “ಇದಲ್ಲದೆ, ಪ್ರವಾದನವಾಕ್ಯವು ನಮಗೆ ಮತ್ತೂ ದೃಢವಾಗಿದೆ” ಎಂದು ಪೇತ್ರನು ಹೇಳಿದುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.—2 ಪೇತ್ರ 1:16-19. *

12. ದೇವರ ಪ್ರವಾದನ ವಾಕ್ಯದಲ್ಲಿ ನಂಬಿಕೆಯನ್ನು ಪ್ರದರ್ಶಿಸುವ ಸೂಕ್ತ ಸಮಯವು ಇದೇ ಆಗಿದೆ ಏಕೆ?

12 ‘ಪ್ರವಾದನ ವಾಕ್ಯವು,’ ಮೆಸ್ಸೀಯನ ಕುರಿತು ಹೀಬ್ರು ಶಾಸ್ತ್ರದಲ್ಲಿರುವ ಪ್ರವಾದನೆಗಳನ್ನು ಮಾತ್ರವಲ್ಲ, “ಬಲದಿಂದಲೂ ಬಹು ಮಹಿಮೆಯಿಂದಲೂ” ಬರುವೆನೆಂಬುದಾಗಿ ಯೇಸು ಹೇಳಿದ ಮಾತನ್ನೂ ಒಳಗೊಳ್ಳುತ್ತದೆ. (ಮತ್ತಾಯ 24:30) ಕ್ರಿಸ್ತನು ಮಹಿಮೆಯಿಂದ ಕೂಡಿದವನಾಗಿ ರಾಜ್ಯಾಧಿಕಾರದಲ್ಲಿ ಬರುವನೆಂಬ ಪ್ರವಾದನ ವಾಕ್ಯವನ್ನು ರೂಪಾಂತರ ದರ್ಶನವು ಸತ್ಯವೆಂದು ದೃಢಪಡಿಸಿತು. ಬಹು ಬೇಗನೆ, ಅವನು ಮಹಿಮಾಭರಿತನಾಗಿ ಪ್ರಕಟಗೊಳ್ಳುವಾಗ, ಅಪನಂಬಿಗಸ್ತರಿಗೆ ನಾಶನವನ್ನು ಮತ್ತು ನಂಬಿಕೆಯುಳ್ಳವರಿಗೆ ಆಶೀರ್ವಾದಗಳನ್ನು ತರುವನು. (2 ಥೆಸಲೊನೀಕ 1:6-10) ಇವು ‘ಕಡೇ ದಿವಸಗಳು’ ಎಂಬುದನ್ನು ಬೈಬಲ್‌ ಪ್ರವಾದನೆಯ ನೆರವೇರಿಕೆಯು ತೋರಿಸುತ್ತದೆ. (2 ತಿಮೊಥೆಯ 3:1-5, 16, 17; ಮತ್ತಾಯ 24:3-14) ಯೆಹೋವನ ಮುಖ್ಯ ವಧಕಾರನಾಗಿರುವ ಮಿಕಾಯೇಲನು, ಅಂದರೆ ಯೇಸು ಕ್ರಿಸ್ತನು, ಮಹಾ ‘ಸಂಕಟದ’ ಮೂಲಕ ಈ ದುಷ್ಟ ವಿಷಯಗಳ ವ್ಯವಸ್ಥೆಗೆ ಅಂತ್ಯವನ್ನು ತರಲು ಸಿದ್ಧನಾಗಿ ನಿಂತಿದ್ದಾನೆ. (ಮತ್ತಾಯ 24:21; ದಾನಿಯೇಲ 12:1) ಹಾಗಾದರೆ, ನಮಗೆ ದೇವರ ಪ್ರವಾದನ ವಾಕ್ಯದಲ್ಲಿ ನಂಬಿಕೆಯಿದೆ ಎಂಬುದನ್ನು ತೋರಿಸಲು ಇದೇ ತಕ್ಕ ಸಮಯವಾಗಿದೆ.

ದೇವರ ಪ್ರವಾದನ ವಾಕ್ಯದಲ್ಲಿ ನಂಬಿಕೆಯನ್ನು ಕಾಪಾಡಿಕೊಳ್ಳಿರಿ

13. ದೇವರಿಗಾಗಿರುವ ನಮ್ಮ ಪ್ರೀತಿಯನ್ನು ಕಾಪಾಡಿಕೊಂಡು, ಆತನ ವಾಕ್ಯದಲ್ಲಿ ನಮಗಿರುವ ನಂಬಿಕೆಯನ್ನು ಸಜೀವವಾಗಿಡಲು ಯಾವುದು ಸಹಾಯ ಮಾಡಬಲ್ಲದು?

13 ದೇವರ ಪ್ರವಾದನ ವಾಕ್ಯಗಳ ನೆರವೇರಿಕೆಗಳ ಬಗ್ಗೆ ನಮಗೆ ಮೊದಮೊದಲು ತಿಳಿದುಬಂದಾಗ ನಾವು ಖಂಡಿತವಾಗಿಯೂ ರೋಮಾಂಚಿತರಾದೆವು. ಆದರೆ ಸಮಯ ದಾಟಿದ ಹಾಗೆ, ನಮ್ಮ ನಂಬಿಕೆಯು ಕಡಿಮೆಯಾಗಿ, ನಮ್ಮ ಪ್ರೀತಿಯು ತಣ್ಣಗಾಗಿ ಹೋಗಿದೆಯೊ? ‘ಮೊದಲಲ್ಲಿದ್ದ ಪ್ರೀತಿಯನ್ನು ಬಿಟ್ಟುಬಿಟ್ಟ’ ಎಫೆಸದ ಕ್ರೈಸ್ತರಂತೆ ನಾವು ಎಂದಿಗೂ ಆಗದಿರೋಣ. (ಪ್ರಕಟನೆ 2:1-4) ನಾವು ಯೆಹೋವನನ್ನು ಎಷ್ಟೇ ವರ್ಷಗಳಿಂದಲೂ ಸೇವಿಸುತ್ತಾ ಬಂದಿರಲಿ, ಸ್ವರ್ಗದಲ್ಲಿ ಗಂಟುಮಾಡಿಟ್ಟುಕೊಳ್ಳಲಿಕ್ಕಾಗಿ ನಾವು ‘ದೇವರ ರಾಜ್ಯಕ್ಕಾಗಿ ಮತ್ತು ಆತನ ನೀತಿಗಾಗಿ’ ಹುಡುಕಬೇಕು. ಇಲ್ಲದಿದ್ದರೆ, ನಾವು ಸಹ ಮೊದಲಲ್ಲಿದ್ದ ಪ್ರೀತಿಯನ್ನು ಬಿಟ್ಟುಬಿಡಸಾಧ್ಯವಿದೆ. (ಮತ್ತಾಯ 6:19-21, 31-33) ಯೆಹೋವನಿಗಾಗಿ, ಆತನ ಮಗನಿಗಾಗಿ ಮತ್ತು ಶಾಸ್ತ್ರವಚನಗಳಿಗಾಗಿ ನಮ್ಮ ಪ್ರೀತಿಯನ್ನು ಕಾಪಾಡಿಕೊಳ್ಳಲು, ಶ್ರದ್ಧಾಪೂರ್ವಕವಾದ ಬೈಬಲ್‌ ಅಧ್ಯಯನವು, ಕ್ರೈಸ್ತ ಕೂಟಗಳಲ್ಲಿ ಕ್ರಮವಾದ ಭಾಗವಹಿಸುವಿಕೆಯು ಮತ್ತು ಹುರುಪುಳ್ಳ ರಾಜ್ಯ ಸಾರುವ ಚಟುವಟಿಕೆಯು ನಮಗೆ ಸಹಾಯ ಮಾಡುವವು. (ಕೀರ್ತನೆ 119:105; ಮಾರ್ಕ 13:10; ಇಬ್ರಿಯ 10:24, 25) ಮೇಲೆ ತಿಳಿಸಲ್ಪಟ್ಟ ಈ ಎಲ್ಲ ಕಾರ್ಯಗಳು, ದೇವರ ವಾಕ್ಯದಲ್ಲಿರುವ ನಮ್ಮ ನಂಬಿಕೆಯನ್ನು ಸಜೀವವಾಗಿಡುವವು.—ಕೀರ್ತನೆ 106:12.

14. ಯೆಹೋವನ ಪ್ರವಾದನ ವಾಕ್ಯದಲ್ಲಿ ನಂಬಿಕೆಯನ್ನು ಪ್ರದರ್ಶಿಸಿರುವುದಕ್ಕಾಗಿ ಅಭಿಷಿಕ್ತ ಕ್ರೈಸ್ತರು ಹೇಗೆ ಬಹುಮಾನಿಸಲ್ಪಡುತ್ತಾರೆ?

14 ದೇವರ ಪ್ರವಾದನ ವಾಕ್ಯವು ಗತಕಾಲದಲ್ಲಿ ಹೇಗೆ ನೆರವೇರಿತೊ ಹಾಗೆಯೇ ಭವಿಷ್ಯತ್ತಿನ ಬಗ್ಗೆ ಮುಂತಿಳಿಸಿದ ವಿಷಯಗಳು ಸಹ ನೆರವೇರುವವು ಎಂಬ ನಂಬಿಕೆಯು ನಮಗಿರಸಾಧ್ಯವಿದೆ. ಉದಾಹರಣೆಗೆ, ರಾಜ್ಯ ಮಹಿಮೆಯಲ್ಲಿ ಬರಲಿರುವ ಕ್ರಿಸ್ತನ ಸಾನ್ನಿಧ್ಯವು ಈಗ ಒಂದು ನಿಜತ್ವವಾಗಿದೆ ಮತ್ತು ಮರಣದ ವರೆಗೆ ನಂಬಿಗಸ್ತರಾಗಿದ್ದ ಅಭಿಷಿಕ್ತ ಕ್ರೈಸ್ತರು, ಈ ಮುಂದಿನ ಪ್ರವಾದನಾ ವಾಗ್ದಾನದ ನೆರವೇರಿಕೆಯನ್ನು ಅನುಭವಿಸಿದ್ದಾರೆ: “ಯಾವನು ಜಯಹೊಂದುತ್ತಾನೋ ಅವನಿಗೆ ದೇವರ ಪರದೈಸಿನಲ್ಲಿರುವ ಜೀವದಾಯಕ ವೃಕ್ಷದ ಹಣ್ಣನ್ನು ತಿನ್ನುವದಕ್ಕೆ ಕೊಡುವೆನು.” (ಪ್ರಕಟನೆ 2:7, 10; 1 ಥೆಸಲೊನೀಕ 4:14-17) ಸ್ವರ್ಗದಲ್ಲಿರುವ “ದೇವರ ಪರದೈಸಿನಲ್ಲಿ ಜೀವದಾಯಕ ವೃಕ್ಷದ ಹಣ್ಣನ್ನು ತಿನ್ನುವ” ಸುಯೋಗವನ್ನು ಯೇಸು ಈ ಜಯಶಾಲಿಗಳಿಗೆ ನೀಡುತ್ತಾನೆ. ಪುನರುತ್ಥಾನದಿಂದಾಗಿ ಮತ್ತು ಯೇಸು ಕ್ರಿಸ್ತನ ಮೂಲಕ, ಅವರು “ಸರ್ವಯುಗಗಳ ಅರಸನೂ ನಿರ್ಲಯನೂ ಅದೃಶ್ಯನೂ ಆಗಿರುವ ಏಕದೇವ”ರಾದ ಯೆಹೋವನಿಂದ ಅನುಗ್ರಹಿಸಲ್ಪಟ್ಟ ಅಮರತ್ವ ಹಾಗೂ ನಿರ್ಲಯತ್ವಗಳನ್ನು ಪಡೆದುಕೊಳ್ಳುವರು. (1 ತಿಮೊಥೆಯ 1:17; 1 ಕೊರಿಂಥ 15:50-54; 2 ತಿಮೊಥೆಯ 1:10) ದೇವರಿಗಾಗಿ ಅವರು ಹೊಂದಿರುವ ಅಮರವಾದ ಪ್ರೀತಿ ಹಾಗೂ ಆತನ ಪ್ರವಾದನ ವಾಕ್ಯದಲ್ಲಿ ಅವರಿಗಿರುವ ನಿಶ್ಚಲವಾದ ನಂಬಿಕೆಗಾಗಿ ಎಂತಹ ಮಹಾನ್‌ ಪ್ರತಿಫಲ!

15. ಯಾರು “ನೂತನಭೂಮಂಡಲದ” ಅಸ್ತಿವಾರವಾದರು, ಮತ್ತು ಅವರ ಸಹವಾಸಿಗಳು ಯಾರಾಗಿದ್ದಾರೆ?

15 ನಂಬಿಗಸ್ತರಾಗಿ ಮರಣಹೊಂದಿದ ಅಭಿಷಿಕ್ತ ಜನರು ಸ್ವರ್ಗದಲ್ಲಿರುವ “ದೇವರ ಪರದೈಸಿನಲ್ಲಿ” ಪುನರುತ್ಥಾನಗೊಂಡ ಸ್ವಲ್ಪ ಸಮಯದ ನಂತರ, ಭೂಮಿಯ ಮೇಲಿದ್ದ ಆತ್ಮಿಕ ಇಸ್ರಾಯೇಲಿನ ಉಳಿಕೆಯವರು ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾಗಿರುವ ‘ಮಹಾ ಬಾಬೆಲಿನಿಂದ’ ಬಿಡುಗಡೆ ಹೊಂದಿದರು. (ಪ್ರಕಟನೆ 14:8; ಗಲಾತ್ಯ 6:16) ಇವರು ‘ನೂತನಭೂಮಂಡಲದ’ ಅಸ್ತಿವಾರವಾದರು. (ಪ್ರಕಟನೆ 21:1) ಹೀಗೆ ಒಂದು “ರಾಷ್ಟ್ರವು” ಹುಟ್ಟಿಕೊಂಡಿತು, ಮತ್ತು ಇದು ಇಂದು ಲೋಕವ್ಯಾಪಕವಾಗಿ ಅಭಿವೃದ್ಧಿ ಹೊಂದುತ್ತಿರುವ ಒಂದು ಆತ್ಮಿಕ ಪರದೈಸವಾಗಿ ಕಟ್ಟಲ್ಪಟ್ಟಿದೆ. (ಯೆಶಾಯ 66:8) ಈ “ಅಂತ್ಯಕಾಲದಲ್ಲಿ,” ಆತ್ಮಿಕ ಇಸ್ರಾಯೇಲಿನ ಕುರಿಗಳಂತಹ ಸಹವಾಸಿಗಳು ಈಗಲೂ ಅದರೊಳಗೆ ಪ್ರವಾಹದಂತೆ ನುಗ್ಗಿ ಬರುತ್ತಿದ್ದಾರೆ.—ಯೆಶಾಯ 2:2-4; ಜೆಕರ್ಯ 8:23; ಯೋಹಾನ 10:16; ಪ್ರಕಟನೆ 7:9.

ದೇವರ ಪ್ರವಾದನ ವಾಕ್ಯದಲ್ಲಿ ಮಾನವಕುಲದ ಭವಿಷ್ಯತ್ತು ಮುಂತಿಳಿಸಲಾಗಿದೆ

16. ಅಭಿಷಿಕ್ತರ ನಿಷ್ಠಾವಂತ ಬೆಂಬಲಿಗರಿಗೆ ಯಾವ ಪ್ರತೀಕ್ಷೆಗಳಿವೆ?

16 ಈ ಅಭಿಷಿಕ್ತರ ನಿಷ್ಠಾವಂತ ಬೆಂಬಲಿಗರಿಗೆ ಯಾವ ಪ್ರತೀಕ್ಷೆಗಳಿವೆ? ಇವರಿಗೂ ದೇವರ ಪ್ರವಾದನ ವಾಕ್ಯದಲ್ಲಿ ನಂಬಿಕೆಯಿದೆ ಮತ್ತು ಭೂಪ್ರಮೋದವನದಲ್ಲಿ ಜೀವಿಸುವ ನಿರೀಕ್ಷೆಯಿದೆ. (ಲೂಕ 23:39-43) ಅಲ್ಲಿ ಇವರು ಜೀವವನ್ನು ಪೋಷಿಸುವಂತಹ “ಜೀವಜಲದ ನದಿ”ಯಿಂದ ನೀರು ಕುಡಿಯುವರು ಮತ್ತು ಅದರ ಅಕ್ಕಪಕ್ಕದಲ್ಲಿ ನೆಡಲ್ಪಟ್ಟಿರುವ ‘ಮರಗಳ ಎಲೆಗಳಿಂದ’ ಗುಣಮುಖರಾಗುವರು. (ಪ್ರಕಟನೆ 22:1, 2) ನಿಮಗೆ ಅಂತಹ ಅದ್ಭುತಕರವಾದ ನಿರೀಕ್ಷೆಯಿರುವಲ್ಲಿ, ನೀವು ಯೆಹೋವನಿಗಾಗಿ ಆಳವಾದ ಪ್ರೀತಿಯನ್ನು ಮತ್ತು ಆತನ ಪ್ರವಾದನ ವಾಕ್ಯದಲ್ಲಿ ನಂಬಿಕೆಯನ್ನು ಪ್ರದರ್ಶಿಸುತ್ತಾ ಇರುವಂತಾಗಲಿ. ಪ್ರಮೋದವನ ಭೂಮಿಯಲ್ಲಿ ಸದಾಕಾಲ ಜೀವಿಸುವ ಅತ್ಯಾನಂದವನ್ನು ಅನುಭವಿಸುವವರಲ್ಲಿ ನೀವೂ ಒಬ್ಬರಾಗಿರುವಂತಾಗಲಿ.

17. ಭೂಪ್ರಮೋದವನದಲ್ಲಿನ ಜೀವಿತವು ಯಾವ ಆಶೀರ್ವಾದಗಳನ್ನು ಹೊಂದಿರುವುದು?

17 ಬರಲಿರುವ ಭೂಪ್ರಮೋದವನದಲ್ಲಿ ಜೀವನವು ಹೇಗಿರುವುದು ಎಂಬುದನ್ನು ಪೂರ್ಣವಾಗಿ ವಿವರಿಸಲು ಅಪರಿಪೂರ್ಣ ಮನುಷ್ಯರಿಗೆ ಸಾಧ್ಯವಿಲ್ಲದಿದ್ದರೂ, ವಿಧೇಯ ಮಾನವಕುಲಕ್ಕಾಗಿರುವ ಆಶೀರ್ವಾದಗಳ ಒಳನೋಟವನ್ನು ದೇವರ ಪ್ರವಾದನ ವಾಕ್ಯವು ನಮಗೆ ನೀಡುತ್ತದೆ. ದೇವರ ರಾಜ್ಯವು ಯಾವ ವಿರೋಧವೂ ಇಲ್ಲದೆ ಆಳ್ವಿಕೆ ನಡೆಸುವಾಗ ಮತ್ತು ದೇವರ ಚಿತ್ತವು ಪರಲೋಕದಲ್ಲಿ ನೆರವೇರಿರುವಂತೆ ಭೂಮಿಯಲ್ಲೂ ನೆರವೇರುವಾಗ, ಯಾವ ದುಷ್ಟ ಮನುಷ್ಯರು ಮತ್ತು ಪ್ರಾಣಿಗಳು ಕೂಡ “ಕೇಡು ಮಾಡುವದಿಲ್ಲ, ಯಾರೂ ಹಾಳುಮಾಡುವದಿಲ್ಲ.” (ಯೆಶಾಯ 11:9; ಮತ್ತಾಯ 6:9, 10) ದೀನರು ಭೂಮಿಯಲ್ಲಿ ವಾಸವಾಗಿರುವರು, “ಅವರು ಮಹಾಸೌಖ್ಯದಿಂದ ಆನಂದಿಸುವರು.” (ಕೀರ್ತನೆ 37:11) “ದೇಶದಲ್ಲಿ ಬೆಟ್ಟಗಳ ಮೇಲೆಲ್ಲಾ ಬೆಳೆಯ ಸಮೃದ್ಧಿ” ಇರುವುದರಿಂದ, ಯಾರೂ ಉಪವಾಸದಿಂದಿರುವುದಿಲ್ಲ. (ಕೀರ್ತನೆ 72:16) ಯಾರೂ ದುಃಖದ ಕಣ್ಣೀರನ್ನು ಸುರಿಸಲಾರರು. ಅನಾರೋಗ್ಯವೂ ಮರಣವೂ ಇಲ್ಲದೆ ಹೋಗುವವು. (ಯೆಶಾಯ 33:24; ಪ್ರಕಟನೆ 21:4) ವೈದ್ಯರು, ಔಷಧಿಗಳು, ಆಸ್ಪತ್ರೆಗಳು, ಮಾನಸಿಕ ಚಿಕಿತ್ಸಾಲಯಗಳು ಮತ್ತು ಶವಸಂಸ್ಕಾರಗಳು ಇಲ್ಲದಿರುವುದನ್ನು ನೀವು ಊಹಿಸಿಕೊಳ್ಳಸಾಧ್ಯವೊ? ಎಂತಹ ಸೊಗಸಾದ ಪ್ರತೀಕ್ಷೆಗಳು!

18. (ಎ) ದಾನಿಯೇಲನಿಗೆ ಯಾವ ಆಶ್ವಾಸನೆ ನೀಡಲಾಯಿತು? (ಬಿ) ದಾನಿಯೇಲನ “ಸ್ವಾಸ್ತ್ಯ” ಏನಾಗಿರುವುದು?

18 ಮರಣದ ಬದಲು ಪುನರುತ್ಥಾನವಾಗುವುದರಿಂದ, ಮಾನವಕುಲದ ಸಮಾಧಿಯು ಸಹ ಬರಿದಾಗುವುದು. ನೀತಿವಂತನಾದ ಯೋಬನಿಗೆ ಇಂತಹದ್ದೇ ನಿರೀಕ್ಷೆಯಿತ್ತು. (ಯೋಬ 14:14, 15) ಪ್ರವಾದಿಯಾದ ದಾನಿಯೇಲನಿಗೂ ಇದೇ ನಿರೀಕ್ಷೆಯಿತ್ತು. ಯೆಹೋವನ ದೂತನು ಅವನಿಗೆ ಈ ಸಾಂತ್ವನದಾಯಕ ಆಶ್ವಾಸನೆಯನ್ನು ನೀಡಿದನು: “ನೀನು ಹೋಗಿ ಅಂತ್ಯದ ವರೆಗೆ ಇರು; ನೀನು ದೀರ್ಘನಿದ್ರೆಯನ್ನು ಹೊಂದಿ ಯುಗಸಮಾಪ್ತಿಯಲ್ಲಿ ಎದ್ದು ನಿನಗಾಗುವ ಸ್ವಾಸ್ತ್ಯದೊಳಗೆ ನಿಲ್ಲುವಿ.” (ದಾನಿಯೇಲ 12:13) ದಾನಿಯೇಲನು ಮರಣದ ವರೆಗೆ ನಂಬಿಗಸ್ತಿಕೆಯಿಂದ ದೇವರಿಗೆ ಸೇವೆಸಲ್ಲಿಸಿದನು. ಈಗ ಅವನು ಮರಣದಲ್ಲಿ ನಿದ್ರಿಸುತ್ತಿದ್ದಾನೆ, ಆದರೆ ಕ್ರಿಸ್ತನ ಸಹಸ್ರ ವರ್ಷದಾಳಿಕೆಯಲ್ಲಿ ನಡೆಯಲಿರುವ ‘ನೀತಿವಂತರ ಪುನರುತ್ಥಾನದಲ್ಲಿ’ ‘ಎದ್ದು ನಿಲ್ಲುವನು.’ (ಲೂಕ 14:14, NW) ದಾನಿಯೇಲನ ‘ಸ್ವಾಸ್ತ್ಯವು’ ಏನಾಗಿರುವುದು? ಪ್ರಮೋದವನದ ಕುರಿತು ಯೆಹೆಜ್ಕೇಲನ ಪ್ರವಾದನೆಯು ನೆರವೇರುವಾಗ, ಯೆಹೋವನ ಎಲ್ಲ ಜನರಿಗೆ ಅವರವರ ಪಾಲಿನ ಭೂಪ್ರದೇಶವಿರುವುದೆಂದು ಆ ಪ್ರವಾದನೆಯು ಸೂಚಿಸುತ್ತದೆ. ಅಷ್ಟೇ ಅಲ್ಲ, ಆ ಜಮೀನು ಸರಿಯಾಗಿ ಹಾಗೂ ಕ್ರಮಬದ್ಧವಾಗಿ ಹಂಚಲ್ಪಡುವುದೆಂದೂ ಹೇಳಲಾಗಿದೆ. (ಯೆಹೆಜ್ಕೇಲ 47:13–48:35) ಆದುದರಿಂದ, ದಾನಿಯೇಲನಿಗೆ ಪ್ರಮೋದವನದಲ್ಲಿ ಒಂದು ಜಮೀನು ಮಾತ್ರವಲ್ಲ, ಅದಕ್ಕಿಂತಲೂ ಹೆಚ್ಚಿನದ್ದು ಸ್ವಾಸ್ತ್ಯವಾಗಿ ದೊರೆಯಲಿದೆ. ಅವನು ಯೆಹೋವನ ಉದ್ದೇಶದಲ್ಲಿ ಒಂದು ಸ್ಥಾನವನ್ನೂ ಹೊಂದಲಿದ್ದಾನೆ.

19. ಭೂಪ್ರಮೋದವನದಲ್ಲಿ ಜೀವಿಸುವುದಕ್ಕೆ ಏನು ಅಗತ್ಯವಾಗಿದೆ?

19 ನಿಮ್ಮ ಹಾಗೂ ನಿಮ್ಮ ಸ್ವಾಸ್ತ್ಯದ ಕುರಿತೇನು? ನಿಮಗೆ ದೇವರ ವಾಕ್ಯವಾದ ಬೈಬಲಿನಲ್ಲಿ ನಂಬಿಕೆಯಿದ್ದರೆ, ನೀವು ಭೂಪ್ರಮೋದವನದಲ್ಲಿ ಜೀವಿಸಲಿಕ್ಕಾಗಿ ಹಾತೊರೆಯುವಿರಿ ಎಂಬುದರಲ್ಲಿ ಸಂದೇಹವೇ ಇಲ್ಲ. ನೀವು ಅಲ್ಲಿದ್ದು, ಅದರ ಅನೇಕ ಆಶೀರ್ವಾದಗಳನ್ನು ಅನುಭವಿಸುತ್ತಾ, ಭೂಮಿಯನ್ನು ನೋಡಿಕೊಳ್ಳುತ್ತಾ ಮತ್ತು ಸತ್ತವರನ್ನು ಜೀವಿತಕ್ಕೆ ಸ್ವಾಗತಿಸುತ್ತಾ ಇರುವುದನ್ನು ಊಹಿಸಿಕೊಳ್ಳಬಲ್ಲಿರಿ. ಎಷ್ಟೆಂದರೂ, ಮಾನವಜಾತಿಯು ಇರಬೇಕಾದದ್ದು ಪ್ರಮೋದವನದಲ್ಲೇ. ಇಂತಹ ಒಂದು ಸ್ಥಳದಲ್ಲೇ ಜೀವಿಸಬೇಕೆಂದು ದೇವರು ಪ್ರಥಮ ಮಾನವ ಜೋಡಿಯನ್ನು ಸೃಷ್ಟಿಸಿದನು. (ಆದಿಕಾಂಡ 2:7-9) ಮತ್ತು ವಿಧೇಯ ಮಾನವರು ಅಂತಹ ಪ್ರಮೋದವನದಲ್ಲಿ ಎಂದೆಂದಿಗೂ ಬಾಳಬೇಕೆಂದು ಆತನು ಬಯಸುತ್ತಾನೆ. ಇಂತಹ ಪ್ರಮೋದವನ ಭೂಮಿಯಲ್ಲಿ ಕಟ್ಟಕಡೆಗೆ ಜೀವಿಸಲಿರುವ ನೂರಾರು ಕೋಟಿ ಜನರಲ್ಲಿ ನೀವೂ ಒಬ್ಬರಾಗಿರುವಂತೆ, ಶಾಸ್ತ್ರವಚನಗಳಿಗನುಸಾರ ನೀವು ಜೀವಿಸುವಿರೊ? ನಿಮಗೆ ನಮ್ಮ ಸ್ವರ್ಗೀಯ ತಂದೆಯಾದ ಯೆಹೋವನಲ್ಲಿ ನಿಜವಾದ ಪ್ರೀತಿಯಿದ್ದರೆ ಮತ್ತು ದೇವರ ಪ್ರವಾದನ ವಾಕ್ಯದಲ್ಲಿ ಅಚಲವಾದ ನಂಬಿಕೆಯಿದ್ದರೆ, ನೀವು ಖಂಡಿತವಾಗಿಯೂ ಅಲ್ಲಿರುವಿರಿ.

[ಪಾದಟಿಪ್ಪಣಿಗಳು]

^ ಪ್ಯಾರ. 6 ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ, ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ! ಪುಸ್ತಕದ 11ನೇ ಅಧ್ಯಾಯವನ್ನು ಮತ್ತು ಶಾಸ್ತ್ರಗಳ ಒಳನೋಟ (ಇಂಗ್ಲಿಷ್‌) ಪುಸ್ತಕದಲ್ಲಿ “ಎಪ್ಪತ್ತು ವಾರಗಳು” ಎಂಬ ವಿಷಯವನ್ನು ನೋಡಿರಿ.

^ ಪ್ಯಾರ. 7 ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ, “ಆಲ್‌ ಸ್ಕ್ರಿಪ್ಚ್‌ರ್‌ ಇಸ್‌ ಇನ್‌ಸ್ಪೈಅರ್ಡ್‌ ಆಫ್‌ ಗಾಡ್‌ ಆ್ಯಂಡ್‌ ಬೆನಿಫೀಷಿಯಲ್‌” ಪುಸ್ತಕದ 343-4ನೇ ಪುಟಗಳನ್ನು ನೋಡಿರಿ.

^ ಪ್ಯಾರ. 11 ಏಪ್ರಿಲ್‌ 1, 2000ದ ಕಾವಲಿನಬುರುಜು ಪತ್ರಿಕೆಯಲ್ಲಿ ಕಾಣಿಸಿಕೊಳ್ಳುವ, “ದೇವರ ಪ್ರವಾದನ ವಾಕ್ಯಕ್ಕೆ ಗಮನಕೊಡಿರಿ” ಎಂಬ ಶೀರ್ಷಿಕೆಯುಳ್ಳ ಲೇಖನವನ್ನು ನೋಡಿರಿ.

ನೀವು ಹೇಗೆ ಉತ್ತರಿಸುವಿರಿ?

• ಮೊದಲನೆಯ ಪ್ರವಾದನೆಯು ಏನಾಗಿತ್ತು, ಮತ್ತು ವಾಗ್ದತ್ತ ಸಂತಾನವು ಯಾರಾಗಿದ್ದನು?

• ಯೇಸುವಿನಲ್ಲಿ ನೆರವೇರಿದ ಕೆಲವು ಮೆಸ್ಸೀಯ ಸಂಬಂಧಿತ ಪ್ರವಾದನೆಗಳಾವುವು?

ದಾನಿಯೇಲ 2:44, 45 ಹೇಗೆ ನೆರವೇರುವವು?

• ದೇವರ ಪ್ರವಾದನ ವಾಕ್ಯವು ವಿಧೇಯ ಮಾನವಕುಲಕ್ಕಾಗಿ ಯಾವ ಭವಿಷ್ಯತ್ತನ್ನು ಮುಂತಿಳಿಸುತ್ತದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 18ರಲ್ಲಿರುವ ಚಿತ್ರ]

ಭೂಪ್ರಮೋದವನದಲ್ಲಿ ಜೀವಿಸುವ ನಿರೀಕ್ಷೆ ನಿಮಗಿದೆಯೊ?