ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಮನೆಯಲ್ಲಿ ಸೊಗಸಾಗಿ ಬೆಳೆದ ಆಲಿವ್‌ ಮರ

ದೇವರ ಮನೆಯಲ್ಲಿ ಸೊಗಸಾಗಿ ಬೆಳೆದ ಆಲಿವ್‌ ಮರ

ದೇವರ ಮನೆಯಲ್ಲಿ ಸೊಗಸಾಗಿ ಬೆಳೆದ ಆಲಿವ್‌ ಮರ

ಇಸ್ರಾಯೇಲ್‌ ದೇಶದಲ್ಲಿ, ಅವಿನಾಶಿ ಎಂದೇ ಕರೆಯಬಹುದಾದ ಒಂದು ಮರವು ಬೆಳೆಯುತ್ತದೆ. ಈ ಮರವನ್ನು ಕಡಿದುಹಾಕಿದಾಗಲೂ, ಹೊಸ ರೆಂಬೆಗಳು ಬೇಗನೆ ಚಿಗುರುವಂತೆ ಅದರ ಬೇರುಗಳು ಸಹಾಯಮಾಡುತ್ತವೆ. ಕೊಯ್ಲಿನ ಸಮಯದಲ್ಲಿ ಅದು ತನ್ನ ಯಜಮಾನನಿಗೆ ಹೇರಳವಾದ ಪ್ರತಿಫಲವನ್ನು, ಎಣ್ಣೆಯ ರೂಪದಲ್ಲಿ ನೀಡುತ್ತದೆ. ಈ ಎಣ್ಣೆಯನ್ನು ಅಡಿಗೆಮಾಡಲು, ದೀಪ ಉರಿಸಲು, ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಕಾಂತಿವರ್ಧಕಗಳಿಗಾಗಿಯೂ ಉಪಯೋಗಿಸಸಾಧ್ಯವಿದೆ.

ಬೈಬಲಿನ ನ್ಯಾಯಸ್ಥಾಪಕರು ಎಂಬ ಪುಸ್ತಕದಲ್ಲಿ ದಾಖಲಿಸಲ್ಪಟ್ಟಿರುವ ಒಂದು ಪುರಾತನ ಸಾಮ್ಯಕ್ಕನುಸಾರ, ಒಂದಾನೊಂದು ಕಾಲದಲ್ಲಿ “ಮರಗಳು ತಮಗೋಸ್ಕರ ಒಬ್ಬ ಅರಸನನ್ನು ಅಭಿಷೇಕಿಸಬೇಕೆಂದು” ಹೊರಟವು. ಕಾಡಿನ ಯಾವ ಮರವನ್ನು ಅವು ಪ್ರಥಮವಾಗಿ ಆರಿಸಿದವು? ಧಾರಾಳವಾಗಿ ಫಲಕೊಡುವ ಈ ಗಟ್ಟಿಮುಟ್ಟಾದ ಆಲಿವ್‌ ಮರವನ್ನೇ ಅವು ಆರಿಸಿದವು.—ನ್ಯಾಯಸ್ಥಾಪಕರು 9:8.

ಸುಮಾರು 3,500ಕ್ಕಿಂತಲೂ ಹೆಚ್ಚಿನ ವರ್ಷಗಳ ಹಿಂದೆ, ಮೋಶೆ ಎಂಬ ಪ್ರವಾದಿಯು, ಇಸ್ರಾಯೇಲ್‌ ಅನ್ನು ‘ಒಂದು ಉತ್ತಮದೇಶ . . . ಎಣ್ಣೆ (ಆಲಿವ್‌) ಮರಗಳ’ ದೇಶವೆಂದು ವರ್ಣಿಸಿದನು. (ಧರ್ಮೋಪದೇಶಕಾಂಡ 8:7, 8) ಇಂದಿನ ವರೆಗೂ, ಉತ್ತರದಲ್ಲಿರುವ ಹೆರ್ಮೋನ್‌ ಪರ್ವತದ ಬುಡದಿಂದ ಹಿಡಿದು ದಕ್ಷಿಣದಲ್ಲಿರುವ ಬೇರ್ಷೆಬದ ಹೊರವಲಯಗಳ ವರೆಗೆ, ಆಲಿವ್‌ ತೋಪುಗಳು ಅಲ್ಲಲ್ಲಿ ಹರಡಿಕೊಂಡಿವೆ. ಅವು ಈಗಲೂ, ಶಾರೋನಿನ ಕರಾವಳಿಗೆ, ಸಮಾರ್ಯದ ಕಲ್ಲು ಬೆಟ್ಟಗಳ ತಪ್ಪಲುಗಳಿಗೆ ಮತ್ತು ಗಲಿಲಾಯದ ಫಲವತ್ತಾದ ಕಣಿವೆಗಳಿಗೆ ಸೊಬಗನ್ನು ನೀಡುತ್ತವೆ.

ಬೈಬಲ್‌ ಬರಹಗಾರರು ಈ ಆಲಿವ್‌ ಮರವನ್ನು ಅನೇಕ ಬಾರಿ ಸಾಂಕೇತಿಕ ಅರ್ಥದಲ್ಲಿ ಉಪಯೋಗಿಸಿದರು. ಈ ಮರದ ವಿವಿಧ ವೈಶಿಷ್ಟ್ಯಗಳು, ದೇವರ ಕರುಣೆಯನ್ನು, ಪುನರುತ್ಥಾನದ ವಾಗ್ದಾನವನ್ನು ಮತ್ತು ಸಂತೋಷಕರ ಕುಟುಂಬ ಜೀವಿತವನ್ನು ದೃಷ್ಟಾಂತಿಸಲು ಬಳಸಲ್ಪಟ್ಟವು. ಈ ಆಲಿವ್‌ ಮರವನ್ನು ಹತ್ತಿರದಿಂದ ಪರೀಕ್ಷಿಸುವುದರ ಮೂಲಕ, ನಾವು ಮೇಲ್ಕಂಡ ಶಾಸ್ತ್ರೀಯ ಉಲ್ಲೇಖಗಳನ್ನು ತಿಳಿದುಕೊಳ್ಳಬಹುದು. ಅಲ್ಲದೆ, ಈ ಅಪೂರ್ವವಾದ ಮರವು ಉಳಿದ ಸೃಷ್ಟಿಜೀವಿಗಳೊಂದಿಗೆ ತನ್ನ ರಚಕನನ್ನು ಸ್ತುತಿಸುವುದರಲ್ಲಿ ಜೊತೆಗೂಡುವಾಗ, ಆ ಮರಕ್ಕಾಗಿರುವ ನಮ್ಮ ಗಣ್ಯತೆಯನ್ನು ಹೆಚ್ಚಿಸಲು ಸಹ ನಮಗೆ ಸಹಾಯ ಸಿಗುವುದು.—ಕೀರ್ತನೆ 148:7, 9.

ಒಡ್ಡೊಡ್ಡಾಗಿರುವ ಆಲಿವ್‌ ಮರ

ಆಲಿವ್‌ ಮರವನ್ನು ನೋಡಿದಾಕ್ಷಣ ಅದು ನಮ್ಮ ಮೇಲೆ ಭಾರೀ ಪರಿಣಾಮವನ್ನೇನೂ ಬೀರುವುದಿಲ್ಲ. ಅದು ಲೆಬನೋನಿನ ಕೆಲವು ದೇವದಾರು ವೃಕ್ಷಗಳಂತೆ ಎತ್ತರವಾಗಿ ಬೆಳೆದು, ಆಕಾಶವನ್ನು ಮುಟ್ಟುವುದಿಲ್ಲ. ಅದರ ದಿಮ್ಮಿಯು ತುರಾಯಿ ಮರದ ದಿಮ್ಮಿಯಷ್ಟು ಬೆಲೆಬಾಳುವಂತಹದ್ದಾಗಿರುವುದಿಲ್ಲ, ಮತ್ತು ಅದರ ಹೂವುಗಳು ಬಾದಾಮಿ ಮರದ ಹೂವುಗಳಂತೆ ಕಣ್ಣನ್ನು ತಣಿಸುವುದಿಲ್ಲ. (ಪರಮ ಗೀತ 1:17; ಆಮೋಸ 2:9) ಆಲಿವ್‌ ಮರದ ಅತಿ ಪ್ರಾಮುಖ್ಯವಾದ ಭಾಗವು, ಕಣ್ಣಿಗೆ ಕಾಣದಂತೆ ಭೂಭಾಗದೊಳಗೆ ಅಡಗಿಕೊಂಡಿರುತ್ತದೆ. ಭೂಭಾಗದೊಳಗೆ ಆರು ಮೀಟರುಗಳಷ್ಟು ಉದ್ದವಾಗಿ ಬೆಳೆಯುವ ಅದರ ವಿಸ್ತಾರವಾದ ಬೇರುಗಳು, ತದನಂತರ ಸಮತಲದಲ್ಲಿ ಬೆಳೆದು ಮರದ ಸಮೃದ್ಧಿ ಹಾಗೂ ಬದುಕಿ ಉಳಿಯುವಿಕೆಗೆ ಕಾರಣವಾಗಿರುತ್ತವೆ.

ತಗ್ಗಾದ ಕಣಿವೆಯಲ್ಲಿರುವ ಮರಗಳು ನೀರಿನ ಕೊರತೆಯಿಂದ ಆಗಲೇ ಬಾಡಿ ನಶಿಸಿಹೋಗಿದ್ದರೂ, ಕಲ್ಲುಬೆಟ್ಟಗಳ ತಪ್ಪಲಿನಲ್ಲಿರುವ ಆಲಿವ್‌ ಮರಗಳು ಬದುಕಿ ಉಳಿಯುವಂತೆ ಅದರ ಬೇರುಗಳು ಸಹಾಯಮಾಡುತ್ತವೆ. ಶತಮಾನಗಳ ವರೆಗೆ ಆಲಿವ್‌ ಮರವು ಹಣ್ಣುಗಳನ್ನು ಉತ್ಪಾದಿಸುತ್ತಾ ಇರುವಂತೆ ಬೇರುಗಳು ಅದಕ್ಕೆ ಶಕ್ತಿನೀಡುತ್ತವಾದರೂ, ಆ ಮರದ ಹೊರತೋರಿಕೆಯು ಅಂದರೆ ಅದರ ಗಂಟುಗಂಟಾದ ಕಾಂಡವು ಉರುವಲಿಗಾಗಿ ಮಾತ್ರ ಯೋಗ್ಯವಾದದ್ದಾಗಿ ಕಾಣಿಸುತ್ತದೆ. ಈ ಒಡ್ಡೊಡ್ಡಾದ ಮರಕ್ಕೆ ಬೆಳೆಯಲು ಸ್ಥಳಾವಕಾಶ ಮತ್ತು ಅದು ಉಸಿರಾಡಸಾಧ್ಯವಾಗುವಂತೆ ಅನಿಲಗೂಡಿದ ಮಣ್ಣಿದ್ದರೆ ಸಾಕು, ಅದು ಸೊಗಸಾಗಿ ಬೆಳೆಯುತ್ತದೆ. ಈ ಮಣ್ಣು, ಹಾನಿಕಾರಕ ಕ್ರಿಮಿಕೀಟಗಳಿಗೆ ಅವಕಾಶ ನೀಡಬಹುದಾದ ಕಳೆಗಳಿಂದ ಅಥವಾ ಬೇರೆ ಸಸ್ಯಗಳಿಂದ ಮುಕ್ತವಾಗಿರಬೇಕು. ಈ ಸರಳವಾದ ಬೇಡಿಕೆಗಳನ್ನು ಪೂರೈಸಿದರೆ, ಒಂದು ಮರವು ವರ್ಷಕ್ಕೆ 57 ಲೀಟರುಗಳಷ್ಟು ಎಣ್ಣೆಯನ್ನು ಒದಗಿಸುವುದು.

ಇಸ್ರಾಯೇಲ್ಯರು ಆಲಿವ್‌ ಮರವನ್ನು ಅದರ ಅಮೂಲ್ಯ ಎಣ್ಣೆಗಾಗಿ ಬಹಳ ಮೆಚ್ಚಿಕೊಂಡರೆಂಬುದರಲ್ಲಿ ಸಂದೇಹವೇ ಇಲ್ಲ. ಆಲಿವ್‌ ಎಣ್ಣೆಯಿಂದ ಉರಿಯುತ್ತಿದ್ದ ದೀಪಗಳು ಅವರ ಮನೆಗಳನ್ನು ಬೆಳಗಿದವು. (ಯಾಜಕಕಾಂಡ 24:2) ಆಲಿವ್‌ ಎಣ್ಣೆಯಿಲ್ಲದೆ ಅಡಿಗೆ ಆಗುತ್ತಿರಲಿಲ್ಲ. ಅದು ತ್ವಚ್ಛೆಯನ್ನು ಸೂರ್ಯನ ಕಿರಣಗಳಿಂದ ರಕ್ಷಿಸಿತು ಮತ್ತು ಬಟ್ಟೆ ಒಗೆಯಲು ಇಸ್ರಾಯೇಲ್ಯರಿಗೆ ಬೇಕಾದ ಸೋಪನ್ನು ಒದಗಿಸಿತು. ಆ ದೇಶದ ಮುಖ್ಯ ಬೆಳೆಗಳು, ಧಾನ್ಯ, ದ್ರಾಕ್ಷಾರಸ ಮತ್ತು ಆಲಿವ್‌ಗಳಾಗಿದ್ದವು. ಹೀಗೆ, ಆಲಿವ್‌ ಮರವು ಸಾಕಷ್ಟು ಫಲವನ್ನು ಕೊಡದಿದ್ದಲ್ಲಿ, ಅದು ಇಸ್ರಾಯೇಲಿನ ಕುಟುಂಬಕ್ಕೆ ಭಾರೀ ನಷ್ಟವನ್ನು ಉಂಟುಮಾಡುತ್ತಿತ್ತು.—ಧರ್ಮೋಪದೇಶಕಾಂಡ 7:13; ಹಬಕ್ಕೂಕ 3:17.

ಆದರೆ ಸಾಮಾನ್ಯವಾಗಿ, ಆಲಿವ್‌ ಎಣ್ಣೆಯು ಹೇರಳವಾಗಿ ದೊರೆಯುತ್ತಿತ್ತು. ವಾಗ್ದತ್ತ ದೇಶದ ಆಸುಪಾಸಿನ ಕ್ಷೇತ್ರದಲ್ಲಿ ಅತ್ಯಂತ ಸಾಮಾನ್ಯವಾಗಿ ಬೆಳೆಸಲ್ಪಡುವ ಮರವು ಆಲಿವ್‌ ಮರವಾಗಿದ್ದರಿಂದ, ಮೋಶೆಯು ಆ ದೇಶವನ್ನು ‘ಎಣ್ಣೆ ಮರಗಳ’ ದೇಶವೆಂದು ಕರೆದಿದ್ದಿರಬಹುದು. ಹತ್ತೊಂಬತ್ತನೆಯ ಶತಮಾನದ ಏಚ್‌. ಬಿ. ಟ್ರಿಸ್‌ಟ್ರಮ್‌ ಎಂಬ ಸಸ್ಯವಿಜ್ಞಾನಿಯು, ಆಲಿವ್‌ ಮರವನ್ನು “ಆ ದೇಶದ ವಿಶಿಷ್ಟ ಮರ” ಎಂದು ವರ್ಣಿಸಿದನು. ಅದರ ಮೌಲ್ಯ ಹಾಗೂ ಸಮೃದ್ಧಿಗಾಗಿ, ಆಲಿವ್‌ ಎಣ್ಣೆಯು ಭೂಮಧ್ಯ ಕ್ಷೇತ್ರದ ಎಲ್ಲೆಡೆಯೂ ಅಂತಾರಾಷ್ಟ್ರೀಯ ವಿನಿಮಯ ಮಾಧ್ಯಮವಾಗಿಯೂ ಕಾರ್ಯಮಾಡಿತು. ಸ್ವತಃ ಯೇಸು ಕ್ರಿಸ್ತನೇ ಹೇಳಿದಂತಹ ಒಂದು ಸಾಲದ ಮೊತ್ತವು “ನೂರು ಬುದ್ದಲಿ ಎಣ್ಣೆ”ಯಾಗಿತ್ತೆಂದು ಲೆಕ್ಕಮಾಡಲಾಯಿತು.—ಲೂಕ 16:5, 6.

‘ಎಣ್ಣೇಮರದ ಸಸಿಗಳಂತೆ’

ಬಹುಪಯೋಗಿಯಾದ ಆಲಿವ್‌ ಮರವು, ಸೂಕ್ತವಾಗಿಯೇ ದೈವಿಕ ಆಶೀರ್ವಾದಗಳನ್ನು ದೃಷ್ಟಾಂತಿಸುತ್ತದೆ. ದೇವರಿಗೆ ಭಯಪಡುವ ಒಬ್ಬನು ಹೇಗೆ ಬಹುಮಾನಿಸಲ್ಪಡುವನು? “ಅಂತಃಪುರದಲ್ಲಿರುವ ನಿನ್ನ ಹೆಂಡತಿಯು ಫಲಭರಿತವಾದ ದ್ರಾಕ್ಷಾಲತೆಯಂತಿರುವಳು; ನಿನ್ನ ಸಂಗಡ ಊಟದ ಮಣೆಯ ಸುತ್ತಲೂ ಕೂತುಕೊಳ್ಳುವ ನಿನ್ನ ಮಕ್ಕಳು ಎಣ್ಣೇಮರದ ಸಸಿಗಳಂತಿರುವರು” ಎಂದು ಕೀರ್ತನೆಗಾರನು ಹಾಡಿದನು. (ಕೀರ್ತನೆ 128:3) ಈ “ಎಣ್ಣೇಮರದ ಸಸಿ”ಗಳು ಏನಾಗಿವೆ ಮತ್ತು ಕೀರ್ತನೆಗಾರನು ಇವುಗಳನ್ನು ಮಕ್ಕಳಿಗೆ ಏಕೆ ಹೋಲಿಸುತ್ತಾನೆ?

ಆಲಿವ್‌ ಮರವು ಒಂದು ಅಸಾಧಾರಣವಾದ ಮರವಾಗಿದೆ ಏಕೆಂದರೆ, ಅದರ ಕಾಂಡದಿಂದ ಹೊಸ ರೆಂಬೆಗಳು ನಿರಂತರವಾಗಿ ಚಿಗುರುತ್ತಾ ಇರುತ್ತವೆ. * ಮರದ ಮುಖ್ಯ ಕಾಂಡವು ಮುಪ್ಪಿನ ಕಾರಣ ಮೊದಲಿನಂತೆ ಹಣ್ಣು ಬಿಡದಿದ್ದರೆ, ಹಲವಾರು ಹೊಸ ರೆಂಬೆಗಳು ಇಲ್ಲವೆ ಸಸಿಗಳು ಬೆಳೆದು ಆ ಮರದೊಂದಿಗೆ ಒಂದಾಗುವಂತೆ ಬೇಸಾಯಗಾರರು ಬಿಡಬಹುದು. ಸ್ವಲ್ಪ ಸಮಯದ ನಂತರ, ಆ ಮೂಲ ಮರದ ಸುತ್ತಲೂ ಮೂರ್ನಾಲ್ಕು ಎಳೆಯ, ಸೊಗಸಾಗಿ ಬೆಳೆದ ಕಾಂಡಗಳು ಇರುವವು. ಇವು ಒಂದು ಮೇಜಿನ ಸುತ್ತಲೂ ಕುಳಿತುಕೊಂಡಿರುವ ಮಕ್ಕಳಂತಿರುವವು. ಈ ಸಸಿಗಳ ಬೇರಿನ ಮೂಲ ಒಂದೇ ಆಗಿರುತ್ತದೆ ಮತ್ತು ಇವು ಆಲಿವ್‌ ಹಣ್ಣುಗಳ ಸಮೃದ್ಧವಾದ ಬೆಳೆಯನ್ನು ನೀಡುವುದರಲ್ಲಿ ಸಹಾಯಮಾಡುತ್ತವೆ.

ಪುತ್ರಪುತ್ರಿಯರು ತಮ್ಮ ಹೆತ್ತವರ ಬಲವಾದ ಆತ್ಮಿಕ ಬೇರುಗಳ ಕಾರಣ ನಂಬಿಕೆಯಲ್ಲಿ ಹೇಗೆ ದೃಢರಾಗಿ ಬೆಳೆಯಬಲ್ಲರೆಂಬುದನ್ನು ಆಲಿವ್‌ ಮರದ ಈ ವೈಶಿಷ್ಟ್ಯವು ಸೂಕ್ತವಾಗಿ ದೃಷ್ಟಾಂತಿಸುತ್ತದೆ. ಮಕ್ಕಳು ದೊಡ್ಡವರಾದಂತೆ, ಅವರು ಕೂಡ ಫಲಕೊಡುವುದರಲ್ಲಿ ಮತ್ತು ತಮ್ಮ ಹೆತ್ತವರನ್ನು ಬೆಂಬಲಿಸುವುದರಲ್ಲಿ ಪಾಲಿಗರಾಗುತ್ತಾರೆ. ಹೀಗೆ, ಮಕ್ಕಳು ತಮ್ಮೊಂದಿಗೆ ಯೆಹೋವನನ್ನು ಸೇವಿಸುತ್ತಿರುವುದನ್ನು ನೋಡಿ, ಈ ಹೆತ್ತವರು ಬಹಳ ಸಂತೋಷಿಸುತ್ತಾರೆ.—ಜ್ಞಾನೋಕ್ತಿ 15:20.

‘ಕಡಿದ ಮರಕ್ಕೂ ನಿರೀಕ್ಷೆಯಿದೆ’

ಯೆಹೋವನನ್ನು ಸೇವಿಸುವ ಒಬ್ಬ ವಯಸ್ಸಾದ ತಂದೆಯು ತನ್ನ ಧರ್ಮನಿಷ್ಠ ಮಕ್ಕಳಲ್ಲಿ ಆನಂದಿಸುತ್ತಾನೆ. ಆದರೆ ಈ ವಯಸ್ಸಾದ ತಂದೆಯು “ಭೂಲೋಕದವರೆಲ್ಲರೂ ಹೋಗುವ ದಾರಿ”ಯಲ್ಲೇ ಕಟ್ಟಕಡೆಗೆ ಹೋಗುವಾಗ, ಆ ಮಕ್ಕಳು ಅವನಿಗಾಗಿ ದುಃಖಿಸುತ್ತಾರೆ. (1 ಅರಸು 2:2) ಕುಟುಂಬದಲ್ಲಿ ನಡೆಯುವ ಇಂತಹ ಒಂದು ದುರಂತವನ್ನು ನಿಭಾಯಿಸುವಂತೆ ಸಹಾಯಮಾಡಲು, ಬೈಬಲ್‌ ಪುನರುತ್ಥಾನದ ಆಶ್ವಾಸನೆಯನ್ನು ನೀಡುತ್ತದೆ.—ಯೋಹಾನ 5:28, 29; 11:25.

ಅನೇಕ ಮಕ್ಕಳಿಗೆ ತಂದೆಯಾಗಿದ್ದ ಯೋಬನು, ಮನುಷ್ಯನ ಅಲ್ಪಾಯುಷ್ಯದ ಬಗ್ಗೆ ತಿಳಿದುಕೊಂಡಿದ್ದನು. ಅವನು ಅದನ್ನು, ಬೇಗನೆ ಬಾಡಿಹೋಗುವಂತಹ ಹೂವಿಗೆ ಹೋಲಿಸಿದನು. (ಯೋಬ 1:2; 14:1, 2) ತನಗುಂಟಾದ ವೇದನೆಯಿಂದ ತಪ್ಪಿಸಿಕೊಳ್ಳಲು ಯೋಬನು ಮರಣಕ್ಕಾಗಿ ಹಂಬಲಿಸಿದನು. ಅವನು ಸಮಾಧಿಯನ್ನು ಒಂದು ಮರೆಮಾಡುವ ಸ್ಥಳವಾಗಿ ವೀಕ್ಷಿಸಿ, ಅಲ್ಲಿಂದ ತಾನು ಹಿಂದಿರುಗಸಾಧ್ಯವೆಂದು ನಂಬಿದ್ದನು. “ಒಬ್ಬ ಮನುಷ್ಯನು ಸತ್ತು ಪುನಃ ಬದುಕಾನೇ?” ಎಂದು ಕೇಳಿದ ಯೋಬನು, ಆತ್ಮಭರವಸೆಯಿಂದ ಹೀಗೆ ಉತ್ತರಿಸಿದನು: “ಹಾಗಾಗುವದಾದರೆ ನನಗೆ ಬಿಡುಗಡೆಯಾಗುವವರೆಗೆ ನನ್ನ ವಾಯಿದೆಯ ದಿನಗಳಲ್ಲೆಲ್ಲಾ ಕಾದುಕೊಂಡಿರುವೆನು; ನೀನು [ಯೆಹೋವನು] ಕರೆದರೆ ಉತ್ತರಕೊಡುವೆನು, ನೀನು ಸೃಷ್ಟಿಸಿದ ನನ್ನ ಮೇಲೆ ನಿನಗೆ ಹಂಬಲಿಕೆ ಹುಟ್ಟೀತು.”—ಯೋಬ 14:13-15.

ದೇವರು ತನ್ನನ್ನು ಸಮಾಧಿಯಿಂದ ಕರೆಯುವನೆಂಬುದರ ಕುರಿತು ತನಗಿದ್ದ ದೃಢವಿಶ್ವಾಸವನ್ನು ಯೋಬನು ಹೇಗೆ ದೃಷ್ಟಾಂತಿಸಿದನು? ಒಂದು ಮರದ ಸಹಾಯದಿಂದಲೇ. ಅವನು ಬಹುಶಃ ಆಲಿವ್‌ ಮರವನ್ನೇ ಸೂಚಿಸುತ್ತಿದ್ದಿರಬೇಕೆಂಬುದನ್ನು ಅಲ್ಲಿ ಕೊಡಲ್ಪಟ್ಟಿರುವ ವರ್ಣನೆಯು ತೋರಿಸುತ್ತದೆ. ಯೋಬನು ಹೇಳಿದ್ದು: “ಕಡಿದ ಮರವೂ ತಾನು ಮೊಳೆಯುವದನ್ನು ನಿಲ್ಲಿಸದೆ ಮತ್ತೆ ಚಿಗುರೇನೆಂದು ನಿರೀಕ್ಷಿಸುತ್ತದಲ್ಲವೇ!” (ಯೋಬ 14:7) ಒಂದು ಆಲಿವ್‌ ಮರವನ್ನು ಕಡಿದುಹಾಕಿದರೂ, ಅದು ನಾಶವಾಗುವುದಿಲ್ಲ. ಮರವನ್ನು ಬುಡಸಮೇತ ಕಿತ್ತೆಸೆದರೆ ಮಾತ್ರ ಅದು ನಾಶವಾಗುತ್ತದೆ. ಬೇರುಗಳಿಗೆ ಯಾವ ಹಾನಿಯೂ ಆಗದ ವರೆಗೆ, ಮರವು ಹೊಸ ಬಲದೊಂದಿಗೆ ಪುನಃ ಚಿಗುರುವುದು.

ಸುದೀರ್ಘವಾದ ನೀರಿನ ಕೊರತೆಯಿಂದ ಒಂದು ವಯಸ್ಸಾದ ಆಲಿವ್‌ ಮರವು ಬಾಡಿ ಬೆಂಡಾಗಿ ಹೋದರೂ, ಅದರ ಒಣಗಿದ ಮೋಟು ಪುನಃ ಚಿಗುರಬಲ್ಲದು. “ನೆಲದಲ್ಲಿ ಅದರ ಬುಡವು ಮುದಿಯಾದರೂ, ಮಣ್ಣಿನಲ್ಲಿ ಬೇರು ಸತ್ತರೂ, ನೀರಿನ ವಾಸನೆಯಿಂದಲೇ ಅದು ಮೊಳೆತು ಗಿಡದ ಹಾಗೆ ಕವಲೊಡೆಯುವದು.” (ಯೋಬ 14:8, 9) ಯೋಬನು ಶುಷ್ಕ ಹಾಗೂ ಧೂಳು ತುಂಬಿದ ದೇಶದಲ್ಲಿ ವಾಸಿಸುತ್ತಿದ್ದ ಕಾರಣ, ಪೂರ್ತಿ ಒಣಗಿಹೋಗಿ, ನಿರ್ಜೀವವಾಗಿ ತೋರುವ ಅನೇಕ ಆಲಿವ್‌ ಮರದ ಮೋಟುಗಳನ್ನು ಗಮನಿಸಿದ್ದಿರಬೇಕು. ಆದರೆ ಮಳೆ ಬಂದಾಗ, ಇಂತಹ ಒಂದು “ಸತ್ತ” ಮರವು ಮೊಳೆತು, ಒಂದು ಹೊಸ ಕಾಂಡವು “ಗಿಡದ” ಹಾಗೆ ಬೇರುಗಳಿಂದ ಚಿಗುರುವುದು. ಈ ರೀತಿಯಲ್ಲಿ ಪುನಃ ಚೇತರಿಸಿಕೊಳ್ಳುವ ಆಲಿವ್‌ ಮರದ ವಿಶೇಷ ಗುಣವನ್ನು ಗಮನಿಸಿ, ಟ್ಯೂನೇಷಿಯದ ಒಬ್ಬ ತೋಟಗಾರನು ಹೀಗೆ ಹೇಳಿದನು: “ಆಲಿವ್‌ ಮರಗಳು ಅಮರವಾದವುಗಳೆಂದು ಹೇಳಿದರೆ, ಅದು ತಪ್ಪಾಗಲಾರದು.”

ತನ್ನ ಒಣಗಿದ ಆಲಿವ್‌ ಮರವು ಪುನಃ ಚಿಗುರುವುದನ್ನು ನೋಡಲು ಬೇಸಾಯಗಾರನೊಬ್ಬನು ಹಾತೊರೆಯುವಂತೆಯೇ, ಯೆಹೋವನು ತನ್ನ ನಂಬಿಗಸ್ತ ಸೇವಕರನ್ನು ಪುನರುತ್ಥಾನಗೊಳಿಸಲು ಹಾತೊರೆಯುತ್ತಾನೆ. ಅಬ್ರಹಾಮ ಮತ್ತು ಸಾರಳು, ಇಸಾಕ ಮತ್ತು ರೆಬೆಕ್ಕಳು, ಮತ್ತು ಇನ್ನೂ ಅನೇಕ ನಂಬಿಗಸ್ತರನ್ನು ಪುನಃ ಜೀವಿತಗೊಳಿಸುವ ಸಮಯಕ್ಕಾಗಿ ಆತನು ಎದುರುನೋಡುತ್ತಾನೆ. (ಮತ್ತಾಯ 22:31, 32) ಸತ್ತವರನ್ನು ಸ್ವಾಗತಿಸಿ, ಅವರು ಮತ್ತೊಮ್ಮೆ ಪರಿಪೂರ್ಣ ಹಾಗೂ ಫಲಭರಿತವಾದ ಜೀವಿತಗಳನ್ನು ನಡೆಸುವುದನ್ನು ನೋಡುವುದು ಎಷ್ಟು ಅದ್ಭುತಕರವಾಗಿರುವುದು!

ಸಾಂಕೇತಿಕ ಆಲಿವ್‌ ಮರ

ದೇವರ ನಿಷ್ಪಕ್ಷಪಾತ ಗುಣದಿಂದ ಹಾಗೂ ಪುನರುತ್ಥಾನಕ್ಕಾಗಿ ಆತನು ಮಾಡಿರುವ ಒದಗಿಸುವಿಕೆಯಿಂದ, ಆತನ ಕರುಣೆಯನ್ನು ತಿಳಿದುಕೊಳ್ಳಬಹುದು. ಅಪೊಸ್ತಲ ಪೌಲನು ಆಲಿವ್‌ ಮರವನ್ನು ಉಪಯೋಗಿಸಿ, ಹೇಗೆ ಯೆಹೋವನು ಜನರ ಕುಲ ಇಲ್ಲವೆ ಹಿನ್ನೆಲೆಯನ್ನು ಲೆಕ್ಕಿಸದೆ ಅವರೆಲ್ಲರಿಗೆ ಕರುಣೆ ತೋರಿಸುತ್ತಾನೆಂಬುದನ್ನು ದೃಷ್ಟಾಂತಿಸಿದನು. ಆದರೆ ಯೆಹೂದ್ಯರಾದರೊ, ತಾವೇ ದೇವರಾದುಕೊಂಡ ಜನರೆಂದು, ‘ಅಬ್ರಹಾಮನ ಸಂತಾನದವರೆಂದು’ ಅನೇಕ ಶತಮಾನಗಳಿಂದಲೂ ಜಂಬಕೊಚ್ಚಿಕೊಳ್ಳುತ್ತಿದ್ದರು.—ಯೋಹಾನ 8:33; ಲೂಕ 3:8.

ದೈವಿಕ ಅನುಗ್ರಹವನ್ನು ಗಿಟ್ಟಿಸಿಕೊಳ್ಳಲು, ಒಬ್ಬನು ಯೆಹೂದಿ ಜನಾಂಗದಲ್ಲೇ ಹುಟ್ಟಬೇಕೆಂದಿರಲಿಲ್ಲ. ಹಾಗಿದ್ದರೂ, ಯೇಸುವಿನ ಆದಿ ಶಿಷ್ಯರೆಲ್ಲರೂ ಯೆಹೂದ್ಯರಾಗಿದ್ದರು, ಮತ್ತು ಅಬ್ರಹಾಮನ ವಾಗ್ದತ್ತ ಸಂತಾನದವರಾಗಲು ದೇವರಿಂದಲೇ ಆರಿಸಿಕೊಳ್ಳಲ್ಪಟ್ಟ ಮಾನವರಲ್ಲಿ ಪ್ರಥಮರಾಗಿರುವ ಸುಯೋಗವನ್ನು ಪಡೆದುಕೊಂಡಿದ್ದರು. (ಆದಿಕಾಂಡ 22:18; ಗಲಾತ್ಯ 3:29) ಈ ಯೆಹೂದಿ ಶಿಷ್ಯರನ್ನು, ಪೌಲನು ಒಂದು ಸಾಂಕೇತಿಕ ಆಲಿವ್‌ ಮರದ ಕೊಂಬೆಗಳಿಗೆ ಹೋಲಿಸಿದನು.

ಸ್ವಾಭಾವಿಕ ಯೆಹೂದ್ಯರಲ್ಲಿ ಅನೇಕರು ಯೇಸುವನ್ನು ತಿರಸ್ಕರಿಸಿದಾಗ, ತಾವು ಆ ‘ಚಿಕ್ಕ ಹಿಂಡು’ ಇಲ್ಲವೆ ‘ದೇವರ ಇಸ್ರಾಯೇಲಿನ’ ಭಾವೀ ಸದಸ್ಯರಾಗಲು ಅನರ್ಹರೆಂಬುದನ್ನು ತೋರಿಸಿಕೊಟ್ಟರು. (ಲೂಕ 12:32; ಗಲಾತ್ಯ 6:16) ಹೀಗೆ, ಅವರು ಕಡಿದುಹಾಕಲ್ಪಟ್ಟ ಸಾಂಕೇತಿಕ ಆಲಿವ್‌ ಕೊಂಬೆಗಳಂತಿದ್ದರು. ಅವರ ಸ್ಥಾನವನ್ನು ಯಾರು ವಹಿಸಿಕೊಳ್ಳಲಿದ್ದರು? ಸಾ.ಶ. 33ರಲ್ಲಿ ಅನ್ಯರನ್ನು ಆರಿಸಿಕೊಳ್ಳಲಾಯಿತು, ಮತ್ತು ಇವರು ಅಬ್ರಹಾಮನ ಸಂತಾನದ ಭಾಗವಾದರು. ಇದು, ಯೆಹೋವನು ಒಳ್ಳೆಯ ಆಲಿವ್‌ ಮರಕ್ಕೆ ಕಾಡುಜಾತಿಯ ಆಲಿವ್‌ ಕೊಂಬೆಗಳನ್ನು ಜೋಡಿಸಿದನೊ ಎಂಬಂತಿತ್ತು. ಅಬ್ರಹಾಮನ ವಾಗ್ದತ್ತ ಸಂತಾನದಲ್ಲಿ ಅನ್ಯಜನಾಂಗದವರು ಸಹ ಸೇರಲಿದ್ದರು. ಆಗ ಈ ಅನ್ಯ ಕ್ರೈಸ್ತರು, “ಊರೆಣ್ಣೇಮರದ ರಸವತ್ತಾದ ಬೇರಿನಲ್ಲಿ ಪಾಲುಹೊಂದಿರ”ಸಾಧ್ಯವಿತ್ತು.—ರೋಮಾಪುರ 11:17.

ಒಳ್ಳೆಯ ಆಲಿವ್‌ ಮರಕ್ಕೆ ಕಾಡುಜಾತಿಯ ಆಲಿವ್‌ ಕೊಂಬೆಯನ್ನು ಜೋಡಿಸುವುದು, ಒಬ್ಬ ಬೇಸಾಯಗಾರನಿಗೆ ಯೋಚಿಸಲಸಾಧ್ಯವಾದದ್ದೂ ‘ಅಸಹಜವಾದದ್ದೂ’ ಆಗಿದೆ. (ರೋಮಾಪುರ 11:24) “ಕಾಡುಜಾತಿಯ ಮರಕ್ಕೆ ಒಳ್ಳೆಯ ಮರವನ್ನು ಜೋಡಿಸಿರಿ, ಆಗ ಅದು ಕಾಡುಜಾತಿಯನ್ನು ನಿಗ್ರಹಿಸುವುದು, ಎಂದು ಅರಬ್‌ ದೇಶದವರು ಹೇಳುತ್ತಾರೆ. ಆದರೆ ಈ ಕ್ರಿಯೆಯನ್ನು ತಿರುಗುಮುರುಗು ಮಾಡಿದರೆ, ಯಾವ ಪ್ರಯೋಜನವೂ ಸಿಗದು” ಎಂದು ದ ಲ್ಯಾಂಡ್‌ ಆ್ಯಂಡ್‌ ದ ಬುಕ್‌ ಎಂಬ ಪುಸ್ತಕವು ವಿವರಿಸುತ್ತದೆ. ಅಂತೆಯೇ, ಯೆಹೋವನು ‘ಮೊದಲಲ್ಲಿ ಅನ್ಯಜನರನ್ನು ಕಟಾಕ್ಷಿಸಿನೋಡಿ ತನ್ನ ಹೆಸರಿಗಾಗಿ ಅವರೊಳಗಿಂದ ಒಂದು ಪ್ರಜೆಯನ್ನು ಆರಿಸಿಕೊಂಡಾಗ’ ಯೆಹೂದಿ ಕ್ರೈಸ್ತರು ದಿಗ್ಭ್ರಾಂತರಾದರು. (ಅ. ಕೃತ್ಯಗಳು 10:44-48; 15:14) ದೇವರ ಉದ್ದೇಶದ ನೆರವೇರಿಕೆಯು ಯಾವುದೇ ಒಂದು ಜನಾಂಗದ ಮೇಲೆ ಅವಲಂಬಿಸಿರಲಿಲ್ಲ ಎಂಬುದಕ್ಕೆ ಇದು ಸ್ಪಷ್ಟವಾದ ಸೂಚನೆಯಾಗಿತ್ತು. ಯಾಕೆಂದರೆ, “ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆ.”—ಅ. ಕೃತ್ಯಗಳು 10:35.

ಆಲಿವ್‌ ಮರದ ಅಪನಂಬಿಗಸ್ತ ಯೆಹೂದಿ “ಕೊಂಬೆಗಳು” ಹೇಗೆ ಕಡಿದುಹಾಕಲ್ಪಟ್ಟವೋ ಅದೇ ರೀತಿಯಲ್ಲಿ ದುರಭಿಮಾನ ಹಾಗೂ ಅವಿಧೇಯತೆಯಿಂದಾಗಿ ಯೆಹೋವನ ಅನುಗ್ರಹದಲ್ಲಿ ಉಳಿಯದವರು ಸಹ ಕಡಿದುಹಾಕಲ್ಪಡುವರೆಂದು ಪೌಲನು ಸೂಚಿಸಿದನು. (ರೋಮಾಪುರ 11:19, 20) ದೇವರ ಅಪಾತ್ರ ದಯೆಯನ್ನು ಎಂದಿಗೂ ಕ್ಷುಲ್ಲಕವೆಂದೆಣಿಸಬಾರದೆಂದು ಇದು ಸ್ಪಷ್ಟವಾಗಿ ದೃಷ್ಟಾಂತಿಸುತ್ತದೆ.—2 ಕೊರಿಂಥ 6:1.

ಎಣ್ಣೆ ಹಚ್ಚುವುದು

ಆಲಿವ್‌ ಎಣ್ಣೆಯ ಉಪಯೋಗದ ಬಗ್ಗೆ, ಶಾಸ್ತ್ರವಚನಗಳು ಅಕ್ಷರಾರ್ಥವಾದ ಹಾಗೂ ಸಾಂಕೇತಿಕವಾದ ಉಲ್ಲೇಖಗಳನ್ನು ಮಾಡುತ್ತವೆ. ಪುರಾತನ ಸಮಯಗಳಲ್ಲಿ, ಗಾಯಗಳು ಬೇಗನೆ ಗುಣವಾಗುವಂತೆ ಅವುಗಳ ಮೇಲೆ ‘ಎಣ್ಣೇ ಸವರಿ ಮೃದು’ಮಾಡಲಾಗುತ್ತಿತ್ತು. (ಯೆಶಾಯ 1:6) ಯೇಸುವಿನ ಒಂದು ದೃಷ್ಟಾಂತದಲ್ಲಿ, ಯೆರಿಕೋವಿಗೆ ಹೋಗುತ್ತಿದ್ದ ದಾರಿಯಲ್ಲಿ ತಾನು ಎದುರುಗೊಂಡ ಮನುಷ್ಯನ ಗಾಯಗಳಿಗೆ, ಆ ಸ್ನೇಹಮಯಿ ಸಮಾರ್ಯದವನು ಆಲಿವ್‌ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹೊಯ್ದನು.—ಲೂಕ 10:34.

ಆಲಿವ್‌ ಎಣ್ಣೆಯನ್ನು ತಲೆಗೆ ಹಚ್ಚುವುದು, ಚೈತನ್ಯಕರವೂ ಶಾಂತಗೊಳಿಸುವಂತಹದ್ದೂ ಆಗಿದೆ. (ಕೀರ್ತನೆ 141:5) ಆತ್ಮಿಕ ಅನಾರೋಗ್ಯದ ವಿಷಯದಲ್ಲಿ, ಕ್ರೈಸ್ತ ಹಿರಿಯರು ‘ಸಭೆಯ ಸದಸ್ಯನಿಗೆ ಯೆಹೋವನ ಹೆಸರಿನಿಂದ ಎಣ್ಣೆ ಹಚ್ಚ’ಬಹುದು. (ಯಾಕೋಬ 5:14) ಆತ್ಮಿಕವಾಗಿ ಅಸ್ವಸ್ಥನಾಗಿರುವ ತಮ್ಮ ಜೊತೆ ವಿಶ್ವಾಸಿಗೆ ಹಿರಿಯರು ನೀಡುವ ಶಾಸ್ತ್ರೀಯ ಸಲಹೆಯನ್ನು ಮತ್ತು ಅವನ ಪರವಾಗಿ ಅವರು ಮಾಡುವ ಹೃತ್ಪೂರ್ವಕ ಪ್ರಾರ್ಥನೆಗಳನ್ನು, ಉಪಶಮನನೀಡುವ ಆಲಿವ್‌ ಎಣ್ಣೆಗೆ ಹೋಲಿಸಲಾಗಿದೆ. ಉದಾಹರಣೆಗೆ, ಹೀಬ್ರು ಭಾಷೆಯಲ್ಲಿ, ಒಬ್ಬ ಒಳ್ಳೆಯ ಮನುಷ್ಯನನ್ನು ಕೆಲವೊಮ್ಮೆ “ಶುದ್ಧ ಆಲಿವ್‌ ಎಣ್ಣೆ” ಎಂದು ವರ್ಣಿಸಲಾಗುತ್ತದೆ.

“ದೇವರ ಮನೆಯಲ್ಲಿ ಸೊಗಸಾಗಿ ಬೆಳೆದ ಆಲಿವ್‌ ಮರ”

ಮೇಲೆ ತಿಳಿಸಲಾದ ಈ ಎಲ್ಲ ವಿಷಯಗಳ ನೋಟದಲ್ಲಿ, ದೇವರ ಸೇವಕರನ್ನು ಆಲಿವ್‌ ಮರಗಳಿಗೆ ಹೋಲಿಸಸಾಧ್ಯವಿದೆ ಎಂಬುದರಲ್ಲಿ ಆಶ್ಚರ್ಯವೇನೂ ಇಲ್ಲ. ದಾವೀದನು “ದೇವರ ಮನೆಯಲ್ಲಿ ಸೊಗಸಾಗಿ ಬೆಳೆದ ಆಲಿವ್‌ ಮರ”ದಂತಿರಲು ಬಯಸಿದನು. (ಕೀರ್ತನೆ 52:8, NW) ಹೇಗೆ ಇಸ್ರಾಯೇಲ್ಯ ಕುಟುಂಬದವರ ಮನೆಗಳ ಹತ್ತಿರ ಆಲಿವ್‌ ಮರಗಳು ಇರುತ್ತಿದ್ದವೋ, ಹಾಗೆಯೇ ದಾವೀದನು ಯೆಹೋವನಿಗೆ ಹತ್ತಿರವಾಗಿರಲು ಮತ್ತು ಸ್ತುತಿಯೆಂಬ ಫಲವನ್ನು ಉತ್ಪಾದಿಸಲು ಬಯಸಿದನು.—ಕೀರ್ತನೆ 52:9.

ಯೆಹೂದದ ಎರಡು ಗೋತ್ರಗಳ ರಾಜ್ಯವು ಎಲ್ಲಿಯ ವರೆಗೆ ಯೆಹೋವನಿಗೆ ನಂಬಿಗಸ್ತಿಕೆಯನ್ನು ತೋರಿಸಿತೊ, ಅಲ್ಲಿಯ ವರೆಗೆ “ಸುಂದರಫಲದಿಂದ ಅಂದವಾದ ಹಚ್ಚನೆಯ ಒಲೀವಮರ”ದಂತಿತ್ತು. (ಯೆರೆಮೀಯ 11:15, 16) ಆದರೆ ಯೆಹೂದದ ಜನರು ‘ಯೆಹೋವನ ಮಾತುಗಳನ್ನು ಕೇಳದೆ ಅನ್ಯ ದೇವತೆಗಳನ್ನು ಹಿಂಬಾಲಿಸಿ ಸೇವಿಸಿದಾಗ’ ತಮಗಿದ್ದ ಸುಯೋಗವನ್ನು ಕಳೆದುಕೊಂಡರು.—ಯೆರೆಮೀಯ 11:10.

ದೇವರ ಮನೆಯಲ್ಲಿರುವ ಸೊಗಸಾದ ಆಲಿವ್‌ ಮರದಂತಾಗಬೇಕಾದರೆ, ನಾವು ಯೆಹೋವನಿಗೆ ವಿಧೇಯರಾಗಬೇಕು ಮತ್ತು ಕ್ರೈಸ್ತರೋಪಾದಿ ಹೆಚ್ಚಿನ ಫಲವನ್ನು ಕೊಡಸಾಧ್ಯವಾಗುವಂತೆ ನಮ್ಮನ್ನು ‘ಸಮರಲಿಕ್ಕೆ’ ಆತನು ನೀಡುವ ಶಿಸ್ತನ್ನು ಸ್ವೀಕರಿಸಲು ಇಚ್ಛೆಯುಳ್ಳವರಾಗಬೇಕು. (ಇಬ್ರಿಯ 12:5, 6) ನೀರಿನ ಕೊರತೆಯುಂಟಾದಾಗ, ಬದುಕಿ ಉಳಿಯಲು ಒಂದು ಆಲಿವ್‌ ಮರಕ್ಕೆ ವಿಸ್ತಾರವಾದ ಬೇರುಗಳು ಹೇಗೆ ಅಗತ್ಯವೊ ಹಾಗೆಯೇ ಸಂಕಷ್ಟಗಳನ್ನು ಮತ್ತು ಹಿಂಸೆಯನ್ನು ತಾಳಿಕೊಳ್ಳಲು ನಾವು ನಮ್ಮ ಆತ್ಮಿಕ ಬೇರುಗಳನ್ನು ಬಲಪಡಿಸಿಕೊಳ್ಳಬೇಕು.—ಮತ್ತಾಯ 13:21; ಕೊಲೊಸ್ಸೆ 2:6, 7.

ಲೋಕಕ್ಕೆ ಅಪರಿಚಿತರಾಗಿದ್ದರೂ ದೇವರಿಂದ ಗುರುತಿಸಲ್ಪಡುವ ನಂಬಿಗಸ್ತ ಕ್ರೈಸ್ತರನ್ನು ಈ ಆಲಿವ್‌ ಮರವು ಚೆನ್ನಾಗಿ ಪ್ರತಿನಿಧಿಸುತ್ತದೆ. ಅಂತಹ ಒಬ್ಬ ವ್ಯಕ್ತಿಯು ಈ ವ್ಯವಸ್ಥೆಯಲ್ಲಿ ಸತ್ತುಹೋದರೂ, ಬರಲಿರುವ ಹೊಸ ಲೋಕದಲ್ಲಿ ಪುನಃ ಜೀವಿಸುವನು.—2 ಕೊರಿಂಥ 6:9; 2 ಪೇತ್ರ 3:13.

ವರ್ಷಾನುವರ್ಷ ಫಲವನ್ನು ಕೊಡುತ್ತಾ ಇರುವ, ಅವಿನಾಶಿ ಎಂದೇ ಕರೆಯಬಹುದಾದ ಈ ಆಲಿವ್‌ ಮರವು, ದೇವರ ವಾಗ್ದಾನವನ್ನು ನಮ್ಮ ಜ್ಞಾಪಕಕ್ಕೆ ತರುತ್ತದೆ: “ನನ್ನ ಜನರ ಆಯುಸ್ಸು ವೃಕ್ಷದ ಆಯುಸ್ಸಿನಂತಿರುವದು; ನನ್ನ ಆಪ್ತರು ತಮ್ಮ ಕೈಕೆಲಸದ ಆದಾಯವನ್ನು ಪೂರಾ ಅನುಭವಿಸುವರು.” (ಯೆಶಾಯ 65:22) ಈ ಪ್ರವಾದನಾತ್ಮಕ ವಾಗ್ದಾನವು ದೇವರ ಹೊಸ ಲೋಕದಲ್ಲಿ ನೆರವೇರುವುದು.—2 ಪೇತ್ರ 3:13.

[ಪಾದಟಿಪ್ಪಣಿ]

^ ಪ್ಯಾರ. 13 ಈ ಹೊಸ ರೆಂಬೆಗಳು ಮೂಲ ಮರದ ಬಲವನ್ನೆಲ್ಲ ಹೀರಿಬಿಡದಂತೆ, ಸಾಮಾನ್ಯವಾಗಿ ಪ್ರತಿ ವರ್ಷ ಅವುಗಳನ್ನು ಸಮರಲಾಗುತ್ತದೆ.

[ಪುಟ 25ರಲ್ಲಿರುವ ಚಿತ್ರ]

ಸ್ಪೇನಿನ ಅಲಿಕಾಂಟೆ ಪ್ರಾಂತದಲ್ಲಿರುವ ಜೇವಿಯದಲ್ಲಿ ಕಂಡುಕೊಳ್ಳಲ್ಪಟ್ಟ ಒಂದು ಪುರಾತನ ಗಂಟುಗಂಟಾದ ಕಾಂಡ

[ಪುಟ 26ರಲ್ಲಿರುವ ಚಿತ್ರ]

ಸ್ಪೇನಿನ ಗ್ರನಾಡ ಪ್ರಾಂತದಲ್ಲಿರುವ ಆಲಿವ್‌ ತೋಪುಗಳು

[ಪುಟ 26ರಲ್ಲಿರುವ ಚಿತ್ರ]

ಯೆರೂಸಲೇಮಿನ ಗೋಡೆಗಳ ಹೊರಗಿರುವ ಒಂದು ಪುರಾತನ ಆಲಿವ್‌ ಮರ

[ಪುಟ 26ರಲ್ಲಿರುವ ಚಿತ್ರ]

ಆಲಿವ್‌ ಮರಕ್ಕೆ ರೆಂಬೆಗಳ ಜೋಡನೆಯ ಕುರಿತು ಬೈಬಲ್‌ ತಿಳಿಸುತ್ತದೆ

[ಪುಟ 26ರಲ್ಲಿರುವ ಚಿತ್ರ]

ಈ ಮುಪ್ಪಾದ ಆಲಿವ್‌ ಮರದ ಸುತ್ತಲೂ ಚಿಗುರಿರುವ ಹೊಸ ರೆಂಬೆಗಳು