ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ನಿನ್ನ ಹೃದಯವನ್ನು ಕಾಪಾಡಿಕೋ’

‘ನಿನ್ನ ಹೃದಯವನ್ನು ಕಾಪಾಡಿಕೋ’

‘ನಿನ್ನ ಹೃದಯವನ್ನು ಕಾಪಾಡಿಕೋ’

ಯೆಹೋವನು ಪ್ರವಾದಿಯಾದ ಸಮುವೇಲನಿಗೆ ಹೇಳಿದ್ದು: “ಯೆಹೋವನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ನೋಡದೆ ಹೃದಯವನ್ನೇ ನೋಡುವವನಾಗಿದ್ದಾನೆ.” (1 ಸಮುವೇಲ 16:7) ಸಾಂಕೇತಿಕ ಹೃದಯದ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಾ, ಕೀರ್ತನೆಗಾರನಾದ ದಾವೀದನು ಹಾಡಿದ್ದು: “ನೀನು [ಯೆಹೋವನು] ನನ್ನ ಹೃದಯವನ್ನು ಪರೀಕ್ಷಿಸಿದರೂ ರಾತ್ರಿವೇಳೆ ವಿಚಾರಿಸಿದರೂ ನನ್ನನ್ನು ಪುಟಕ್ಕೆ ಹಾಕಿ ಶೋಧಿಸಿದರೂ ಯಾವ ದುರಾಲೋಚನೆಯಾದರೂ ನನ್ನಲ್ಲಿ ದೊರೆಯುವದಿಲ್ಲ.”—ಕೀರ್ತನೆ 17:3.

ಹೌದು, ನಾವು ಯಾವ ರೀತಿಯ ವ್ಯಕ್ತಿಗಳಾಗಿದ್ದೇವೆಂಬುದನ್ನು ನಿರ್ಧರಿಸಲಿಕ್ಕಾಗಿ, ಯೆಹೋವನು ನಮ್ಮ ಹೃದಯಗಳನ್ನು ಪರೀಕ್ಷಿಸುತ್ತಾನೆ. (ಜ್ಞಾನೋಕ್ತಿ 17:3) ಆದುದರಿಂದಲೇ, ಪುರಾತನ ಇಸ್ರಾಯೇಲಿನ ರಾಜ ಸೊಲೊಮೋನನು ಸಲಹೆಯಿತ್ತದ್ದು: “ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ; ಅದರೊಳಗಿಂದ ಜೀವಧಾರೆಗಳು ಹೊರಡುವವು.” (ಜ್ಞಾನೋಕ್ತಿ 4:23) ನಾವು ನಮ್ಮ ಸಾಂಕೇತಿಕ ಹೃದಯವನ್ನು ಹೇಗೆ ಕಾಪಾಡಿಕೊಳ್ಳಬಹುದು? ಈ ಪ್ರಶ್ನೆಗೆ, ಜ್ಞಾನೋಕ್ತಿಯ 4ನೆಯ ಅಧ್ಯಾಯವು ಉತ್ತರವನ್ನೀಡುತ್ತದೆ.

ತಂದೆಯ ಬೋಧನೆಯನ್ನು ಕೇಳಿರಿ

ಜ್ಞಾನೋಕ್ತಿಯ 4ನೆಯ ಅಧ್ಯಾಯವು ಈ ಮಾತುಗಳೊಂದಿಗೆ ಆರಂಭವಾಗುತ್ತದೆ: “ಮಕ್ಕಳಿರಾ, ತಂದೆಯ ಶಿಕ್ಷಣವನ್ನು [“ಬೋಧನೆಯನ್ನು,” NW] ಕೇಳಿರಿ, ವಿವೇಕವನ್ನು ಗ್ರಹಿಸಲಿಕ್ಕೆ ಕಿವಿಗೊಡಿರಿ. ನಾನು ನಿಮಗೆ ಸುಬೋಧೆಯನ್ನು ಮಾಡುವೆನು, ನನ್ನ ಉಪದೇಶವನ್ನು ಬಿಡಬೇಡಿರಿ.”ಜ್ಞಾನೋಕ್ತಿ 4:1, 2.

ಯುವ ಜನರು ತಮ್ಮ ದೇವಭಕ್ತಿಯ ಹೆತ್ತವರಿಗೆ, ಅದರಲ್ಲೂ ಮುಖ್ಯವಾಗಿ ಒಬ್ಬ ತಂದೆಯ ಸುಬೋಧೆಗೆ ಕಿವಿಗೊಡುವಂತೆ ಕೇಳಿಕೊಳ್ಳಲ್ಪಟ್ಟಿದ್ದಾರೆ. ಏಕೆಂದರೆ, ತಂದೆಗೆ ತನ್ನ ಕುಟುಂಬದವರ ಶಾರೀರಿಕ ಹಾಗೂ ಆತ್ಮಿಕ ಅಗತ್ಯಗಳನ್ನು ಪೂರೈಸುವ ಶಾಸ್ತ್ರೀಯ ಜವಾಬ್ದಾರಿಯಿದೆ. (ಧರ್ಮೋಪದೇಶಕಾಂಡ 6:6, 7; 1 ತಿಮೊಥೆಯ 5:8) ಇಂತಹ ಮಾರ್ಗದರ್ಶನವಿಲ್ಲದೆ, ಒಬ್ಬ ಯುವಕನು ಪ್ರೌಢಾವಸ್ಥೆಯನ್ನು ತಲಪುವುದು ಭಾರೀ ಪ್ರಯಾಸದ ಕೆಲಸವೇ ಸರಿ! ಹೀಗಿರುವಾಗ, ಒಂದು ಮಗುವು ತನ್ನ ತಂದೆಯ ಬೋಧನೆಯನ್ನು ಗೌರವಪೂರ್ಣವಾಗಿ ಸ್ವೀಕರಿಸಬಾರದೊ?

ಆದರೆ, ಇಂತಹ ಉಪದೇಶವನ್ನು ನೀಡಲು ಒಬ್ಬ ಯುವಕನಿಗೆ ತಂದೆಯೇ ಇಲ್ಲದಿದ್ದರೆ ಆಗೇನು? ಉದಾಹರಣೆಗೆ, ಹನ್ನೊಂದು ವರ್ಷ ಪ್ರಾಯದ ಜೇಸನ್‌, ತನ್ನ ನಾಲ್ಕನೇ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡನು. * ತನ್ನ ಜೀವಿತದ ಅತ್ಯಂತ ದುಃಖಕರ ಸಂಗತಿಯು ಯಾವುದೆಂದು ಒಬ್ಬ ಕ್ರೈಸ್ತ ಹಿರಿಯನು ಅವನನ್ನು ಕೇಳಿದಾಗ, ಜೇಸನ್‌ ಕೂಡಲೇ ಉತ್ತರಿಸಿದ್ದು: “ಒಬ್ಬ ತಂದೆಯ ಅನುಪಸ್ಥಿತಿ ನನಗೆ ಬಹಳ ಖೇದವನ್ನುಂಟುಮಾಡುತ್ತದೆ. ಇದರಿಂದ ನಾನು ಕೆಲವೊಮ್ಮೆ ತೀರ ಹತಾಶನಾಗಿಬಿಡುತ್ತೇನೆ.” ಆದರೂ, ಹೆತ್ತವರ ಮಾರ್ಗದರ್ಶನವಿರದ ಯುವಕರಿಗೆ ಸಾಂತ್ವನದಾಯಕ ಬುದ್ಧಿವಾದವು ಸದಾ ಲಭ್ಯವಿರುತ್ತದೆ. ಜೇಸನ್‌ ಮತ್ತು ಅವನಂತಿರುವ ಇತರರು, ಕ್ರೈಸ್ತ ಸಭೆಯಲ್ಲಿರುವ ಹಿರಿಯರಿಂದ ಮತ್ತು ಪ್ರೌಢ ಕ್ರೈಸ್ತರಿಂದ ಪಿತೃಸಮಾನವಾದ ಸಲಹೆಯನ್ನು ಕೇಳಿ ಪಡೆದುಕೊಳ್ಳಸಾಧ್ಯವಿದೆ.—ಯಾಕೋಬ 1:27.

ಸೊಲೊಮೋನನು ತನ್ನ ಸ್ವಂತ ಪರಾಮರಿಕೆಯ ಕುರಿತು ಜ್ಞಾಪಿಸಿಕೊಳ್ಳುತ್ತಾ, ಹೀಗೆ ಹೇಳುತ್ತಾನೆ: “ನಾನೂ ನನ್ನ ತಂದೆಗೆ [ಅಧೀನನಾದ] ಮಗನೂ, ತಾಯಿಯ ದೃಷ್ಟಿಗೆ ಕೋಮಲನಾದ ಏಕಪುತ್ರನೂ ಆಗಿದ್ದೆನು.” (ಜ್ಞಾನೋಕ್ತಿ 4:3) ಚಿಕ್ಕಂದಿನಲ್ಲಿ ಪರಾಮರಿಸಲ್ಪಟ್ಟ ವಿಧದ ಕುರಿತು ರಾಜನು ಅಕ್ಕರೆಯಿಂದ ಜ್ಞಾಪಿಸಿಕೊಂಡನು. ತಂದೆಯ ಬುದ್ಧಿವಾದಕ್ಕೆ ಕಿವಿಗೊಟ್ಟ ಒಬ್ಬ “ಅಧೀನನಾದ” ಮಗನಂತೆ, ಯುವ ಸೊಲೊಮೋನನಿಗೆ ತನ್ನ ತಂದೆಯಾದ ದಾವೀದನೊಂದಿಗೆ ಹೃತ್ಪೂರ್ವಕ ಹಾಗೂ ಆಪ್ತ ಸಂಬಂಧವಿದ್ದಿರಬೇಕು. ಅಲ್ಲದೆ, ಸೊಲೊಮೋನನು “ಏಕಪುತ್ರ” ಇಲ್ಲವೆ ಬಹಳವಾಗಿ ಪ್ರೀತಿಸಲ್ಪಟ್ಟವನಾಗಿದ್ದನು. ಹಾಗಾಗಿ, ಆದರದ ವಾತಾವರಣವಿರುವ ಮತ್ತು ಹೆತ್ತವರೊಂದಿಗೆ ಮುಕ್ತವಾಗಿ ಮಾತುಕತೆ ನಡೆಸಸಾಧ್ಯವಿರುವ ಮನೆಯಲ್ಲಿ ಒಂದು ಮಗು ಬೆಳೆಯುವುದು ಎಷ್ಟೊಂದು ಪ್ರಾಮುಖ್ಯವಾದದ್ದಾಗಿದೆ!

ವಿವೇಕ ಮತ್ತು ತಿಳಿವಳಿಕೆಯನ್ನು ಪಡೆದುಕೋ

ತನ್ನ ತಂದೆಯ ಪ್ರೀತಿಪೂರ್ಣ ಬುದ್ಧಿವಾದವನ್ನು ನೆನಸಿಕೊಳ್ಳುತ್ತಾ, ಸೊಲೊಮೋನನು ತಿಳಿಸುವುದು: “ತಂದೆಯು ನನಗೆ ಉಪದೇಶ ನೀಡಿ, ಹೀಗೆ ಹೇಳುವರು—‘ನಿನ್ನ ಮನಸ್ಸು ನನ್ನ ಮಾತುಗಳನ್ನು ಹಿಡಿದುಕೊಳ್ಳಲಿ. ನನ್ನ ಆಜ್ಞೆಗಳನ್ನು ಕೈಕೊಂಡು, ಬಾಳುತ್ತಾ ಇರು. ವಿವೇಕವನ್ನು ಪಡೆದುಕೋ, ತಿಳಿವಳಿಕೆಯನ್ನು ಪಡೆದುಕೋ. ಮರೆಯಬೇಡ, ನನ್ನ ಮಾತುಗಳಿಗೆ ಓರೆಯಾಗಬೇಡ. ವಿವೇಕವನ್ನು ಬಿಡಬೇಡ, ಅದು ನಿನ್ನನ್ನು ಕಾಪಾಡುವದು. ಅದನ್ನು ಪ್ರೀತಿಸು, ಅದು ನಿನ್ನನ್ನು ಕಾಯುವದು. ವಿವೇಕವು ಪ್ರಮುಖವಾದದ್ದು. ವಿವೇಕವನ್ನು ಪಡೆದುಕೋ; ಮತ್ತು ನೀನು ಪಡೆದುಕೊಳ್ಳುವ ಎಲ್ಲ ವಿಷಯಗಳೊಂದಿಗೆ ತಿಳಿವಳಿಕೆಯನ್ನು ಪಡೆದುಕೋ.’”—ಜ್ಞಾನೋಕ್ತಿ 4:4-7, NW.

ವಿವೇಕವು ಏಕೆ ‘ಪ್ರಮುಖವಾದದ್ದಾಗಿದೆ’? ಏಕೆಂದರೆ, ವಿವೇಕದ ಸಹಾಯದಿಂದ, ನಾವು ಜ್ಞಾನ ಮತ್ತು ತಿಳಿವಳಿಕೆಗಳನ್ನು ಕಾರ್ಯರೂಪಕ್ಕೆ ಹಾಕಿ ಒಳ್ಳೇ ಫಲಿತಾಂಶಗಳನ್ನು ಪಡೆದುಕೊಳ್ಳಸಾಧ್ಯವಿದೆ. ಈ ಜ್ಞಾನ, ಅಂದರೆ ವೀಕ್ಷಣೆ ಮತ್ತು ಅನುಭವದಿಂದ, ಇಲ್ಲವೆ ವಾಚನ ಮತ್ತು ಅಧ್ಯಯನದಿಂದ ತಿಳಿದುಕೊಳ್ಳಲ್ಪಟ್ಟ ನಿಜಾಂಶಗಳು, ವಿವೇಕಕ್ಕೆ ಅತ್ಯಾವಶ್ಯಕವಾಗಿವೆ. ಆದರೆ ಈ ಜ್ಞಾನವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವ ಸಾಮರ್ಥ್ಯ ನಮಗಿರದಿದ್ದರೆ, ಅದಕ್ಕೆ ಯಾವ ಬೆಲೆಯೂ ಇರುವುದಿಲ್ಲ. ನಾವು ಬೈಬಲನ್ನು ಮತ್ತು “ನಂಬಿಗಸ್ತನೂ ವಿವೇಕಿಯೂ ಆದಂಥ ಆಳು” ವರ್ಗದಿಂದ ಒದಗಿಸಲ್ಪಡುವ ಬೈಬಲ್‌ ಆಧಾರಿತ ಪ್ರಕಾಶನಗಳನ್ನು ಕ್ರಮವಾಗಿ ಓದಬೇಕು ಮಾತ್ರವಲ್ಲ, ಅವುಗಳಿಂದ ಕಲಿತುಕೊಂಡ ವಿಷಯಗಳನ್ನು ಅನ್ವಯಿಸಿಕೊಳ್ಳಲು ಸಹ ಪ್ರಯತ್ನಿಸಬೇಕು.—ಮತ್ತಾಯ 24:45.

ತಿಳಿವಳಿಕೆಯನ್ನು ಪಡೆದುಕೊಳ್ಳುವುದು ಕೂಡ ಅತ್ಯಾವಶ್ಯಕವಾಗಿದೆ. ಅದಿಲ್ಲದೆ, ನಿಜಾಂಶಗಳು ಒಂದಕ್ಕೊಂದು ಹೇಗೆ ಸಂಬಂಧಿಸುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಮತ್ತು ಪರಿಗಣಿಸಲ್ಪಡುತ್ತಿರುವ ವಿಷಯವನ್ನು ಪೂರ್ತಿಯಾಗಿ ತಿಳಿದುಕೊಳ್ಳಲು ಸಾಧ್ಯವಿದೆಯೊ? ನಮ್ಮಲ್ಲಿ ತಿಳಿವಳಿಕೆಯ ಕೊರತೆಯಿರುವುದಾದರೆ, ಪ್ರತಿಯೊಂದು ವಿಷಯಕ್ಕಿರುವ ಕಾರಣಗಳನ್ನು ಅರಿತು, ಒಳನೋಟ ಹಾಗೂ ವಿವೇಚನೆಯನ್ನು ಹೇಗೆ ತಾನೇ ಪಡೆದುಕೊಳ್ಳಬಲ್ಲೆವು? ಹೌದು, ತಿಳಿದಿರುವ ನಿಜಾಂಶಗಳನ್ನು ಉಪಯೋಗಿಸಿ ತರ್ಕಮಾಡಲು ಮತ್ತು ಸರಿಯಾದ ತೀರ್ಮಾನಕ್ಕೆ ಬರಲು ನಮಗೆ ತಿಳಿವಳಿಕೆಯ ಅಗತ್ಯವಿದೆ.—ದಾನಿಯೇಲ 9:22, 23.

ಸೊಲೊಮೋನನು ತನ್ನ ತಂದೆಯ ಮಾತುಗಳನ್ನು ತಿಳಿಸುವುದನ್ನು ಮುಂದುವರಿಸುತ್ತಾನೆ. ಅವನು ಹೇಳುವುದು: “ಜ್ಞಾನ [“ವಿವೇಕ,” NW]ವೆಂಬಾಕೆಯು ಶ್ರೇಷ್ಠಳು ಎಂದು ನೀನು ಭಾವಿಸಿದರೆ ಆಕೆಯು ನಿನ್ನನ್ನು ಉನ್ನತಿಗೆ ತರುವಳು; ಆಕೆಯನ್ನು ಅಪ್ಪಿಕೊಂಡರೆ ನಿನ್ನನ್ನು ಘನಪಡಿಸುವಳು. ಆಕೆಯು ನಿನ್ನ ತಲೆಗೆ ಅಂದದ ಪುಷ್ಪಮಾಲೆಯನ್ನಿಟ್ಟು ಸುಂದರ ಕಿರೀಟವನ್ನು ನಿನಗೆ ಒಪ್ಪಿಸುವಳು.” (ಜ್ಞಾನೋಕ್ತಿ 4:8, 9) ಯಾರು ದೈವಿಕ ವಿವೇಕವನ್ನು ಅಪ್ಪಿಕೊಳ್ಳುತ್ತಾರೊ, ಅಂತಹವರನ್ನು ಅದು ಸಂರಕ್ಷಿಸುತ್ತದೆ. ಅಲ್ಲದೆ ಅದು ಅವನಿಗೆ ಕೀರ್ತಿಯನ್ನು ತಂದು, ಅವನನ್ನು ಸುಂದರಗೊಳಿಸುತ್ತದೆ. ಆದುದರಿಂದ, ವಿವೇಕವನ್ನು ಪಡೆದುಕೊಳ್ಳಲು ನಾವು ಸಕಲ ಪ್ರಯತ್ನವನ್ನು ಮಾಡೋಣ.

‘ಸದುಪದೇಶವನ್ನು ಹಿಡಿದುಕೋ’

ತನ್ನ ತಂದೆಯ ಉಪದೇಶವನ್ನು ಪುನರುಚ್ಚರಿಸುತ್ತಾ, ಇಸ್ರಾಯೇಲಿನ ರಾಜನು ಮುಂದೆ ಹೇಳುವುದು: “ಕಂದಾ, ಆಲಿಸಿ ನನ್ನ ಮಾತುಗಳನ್ನು ಕೇಳು; ಕೇಳಿದರೆ, ನಿನ್ನ ಜೀವಮಾನದ ವರುಷಗಳು ಹೆಚ್ಚುವವು. ನಾನು ಜ್ಞಾನಮಾರ್ಗವನ್ನು ಉಪದೇಶಿಸಿ ಧರ್ಮಮಾರ್ಗದಲ್ಲಿ ನಿನ್ನನ್ನು ನಡಿಸುವೆನು. ನೀನು ನಡೆಯುವಾಗ ನಿನ್ನ ಹೆಜ್ಜೆಗೆ ಇಕ್ಕಟ್ಟಾಗದು, ಓಡಿದರೆ, ಮುಗ್ಗರಿಸುವದಿಲ್ಲ. ಸದುಪದೇಶವನ್ನು ಹಿಡಿ, ಸಡಿಲಬಿಡಬೇಡ; ಅದನ್ನು ಕಾಪಾಡಿಕೋ, ಅದೇ ನಿನ್ನ ಜೀವವು.”ಜ್ಞಾನೋಕ್ತಿ 4:10-13.

ಸೊಲೊಮೋನನು ತನ್ನ ತಂದೆಗೆ ಅಧೀನನಾದ ಮಗನೋಪಾದಿ, ಉಪದೇಶಿಸುವ ಮತ್ತು ತಿದ್ದಿ ಸರಿಪಡಿಸುವ ಪ್ರೀತಿಪರ ಶಿಸ್ತು ಇಲ್ಲವೆ ಸದುಪದೇಶವನ್ನು ಬಹಳವಾಗಿ ಗಣ್ಯಮಾಡಿದ್ದಿರಲೇಬೇಕು. ಸಮತೂಕದ ಶಿಸ್ತು ಇಲ್ಲದೆ, ಆತ್ಮಿಕ ಪ್ರೌಢತೆಗೆ ಬೆಳೆಯುವ ಇಲ್ಲವೆ ನಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸುವ ನಿರೀಕ್ಷೆಯನ್ನು ನಾವು ಹೇಗೆ ತಾನೆ ಹೊಂದಿರಸಾಧ್ಯವಿದೆ? ನಮ್ಮ ತಪ್ಪುಗಳಿಂದ ನಾವು ಸರಿಯಾದ ಪಾಠವನ್ನು ಕಲಿತುಕೊಳ್ಳದಿದ್ದರೆ ಇಲ್ಲವೆ ನಮ್ಮಲ್ಲಿರುವ ತಪ್ಪು ವಿಚಾರಗಳನ್ನು ಸರಿಪಡಿಸಿಕೊಳ್ಳದಿದ್ದರೆ, ನಾವು ಮಾಡುವ ಆತ್ಮಿಕ ಪ್ರಗತಿಯು ವ್ಯರ್ಥವಾಗಿರುವುದು. ನಾವು ದೇವರ ಮಟ್ಟಕ್ಕನುಸಾರ ನಡೆದುಕೊಳ್ಳುವಂತೆ ನ್ಯಾಯೋಚಿತವಾದ ಶಿಸ್ತು ಸಾಧ್ಯಮಾಡುತ್ತದೆ ಮಾತ್ರವಲ್ಲ, ‘ಧರ್ಮಮಾರ್ಗದಲ್ಲಿ ನಡೆಯುವಂತೆ’ಯೂ ನಮಗೆ ಸಹಾಯಮಾಡುತ್ತದೆ.

ನೀಡಲ್ಪಡುವ ಮತ್ತೊಂದು ವಿಧದ ಶಿಸ್ತಿನ ಕಾರಣ ‘ನಮ್ಮ ಜೀವಮಾನದ ವರುಷಗಳು ಹೆಚ್ಚುವವು.’ ಹೇಗೆ? ಹೇಗೆಂದರೆ, ಯೇಸು ಕ್ರಿಸ್ತನು ಹೇಳಿದ್ದು: “ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾದವನು ಬಹಳವಾದದ್ದರಲ್ಲಿಯೂ ನಂಬಿಗಸ್ತನಾಗುವನು; ಸ್ವಲ್ಪವಾದದ್ದರಲ್ಲಿ ಅನ್ಯಾಯಗಾರನಾದವನು ಬಹಳವಾದದ್ದರಲ್ಲಿಯೂ ಅನ್ಯಾಯಗಾರನಾಗುವನು.” (ಲೂಕ 16:10) ನಾವು ಚಿಕ್ಕಪುಟ್ಟ ವಿಷಯಗಳಲ್ಲಿ ಶಿಸ್ತನ್ನು ಕಾಪಾಡಿಕೊಂಡರೆ, ಯಾವುದರ ಮೇಲೆ ನಮ್ಮ ಜೀವಗಳೇ ಹೊಂದಿಕೊಂಡಿವೆಯೊ ಅಂತಹ ದೊಡ್ಡ ವಿಷಯಗಳಲ್ಲಿಯೂ ಶಿಸ್ತುಳ್ಳವರಾಗಿರುವುದಕ್ಕೆ ಸುಲಭವಾಗಿರುವುದಲ್ಲವೇ? ಉದಾಹರಣೆಗೆ, ‘ಪರಸ್ತ್ರೀಯನ್ನು ನೋಡಿ ಮೋಹಿಸ’ದಂತೆ ನಾವು ನಮ್ಮ ಕಣ್ಣಿಗೆ ಬೇಕಾದ ತರಬೇತಿಯನ್ನು ನೀಡಿದರೆ, ಅನೈತಿಕತೆ ಎಂಬ ಬಲೆಗೆ ತುತ್ತಾಗುವ ಸಾಧ್ಯತೆ ತುಂಬ ಕಡಿಮೆಯಾಗುತ್ತದೆ. (ಮತ್ತಾಯ 5:28) ಈ ಮೂಲತತ್ವವು ಸ್ತ್ರೀಪುರುಷರಿಬ್ಬರಿಗೂ ಅನ್ವಯಿಸುತ್ತದೆ. ‘ಎಲ್ಲಾ ಯೋಚನೆಗಳನ್ನು ಸೆರೆಹಿಡಿಯುವ’ ಉದ್ದೇಶದಿಂದ ನಾವು ನಮ್ಮ ಮನಸ್ಸುಗಳನ್ನು ಶಿಸ್ತಿಗೊಳಪಡಿಸಿದರೆ, ನಡೆನುಡಿಗಳಲ್ಲಿ ಘೋರವಾದ ಪಾಪವನ್ನು ಮಾಡುವ ಸಾಧ್ಯತೆಯಿರುವುದಿಲ್ಲ.—2 ಕೊರಿಂಥ 10:5.

ಶಿಸ್ತನ್ನು ಸ್ವೀಕರಿಸುವುದು ಸಾಮಾನ್ಯವಾಗಿ ಕಷ್ಟಕರವಾಗಿರುತ್ತದಲ್ಲದೆ, ಅದು ತುಂಬ ನಿರ್ಬಂಧಕವಾಗಿಯೂ ಇರುವಂತೆ ತೋರಬಹುದು. (ಇಬ್ರಿಯ 12:11) ಹಾಗಿದ್ದರೂ, ನಾವು ಸದುಪದೇಶವನ್ನು ಹಿಡಿದುಕೊಂಡರೆ, ಅದು ನಮ್ಮ ಪ್ರಗತಿಯ ಪಥವನ್ನು ಸುಗಮಗೊಳಿಸುವುದೆಂದು ವಿವೇಕಿ ರಾಜನು ಆಶ್ವಾಸನೆ ನೀಡುತ್ತಾನೆ. ಒಬ್ಬ ಓಟಗಾರನು ಶರವೇಗದಲ್ಲಿ ಓಡಿದರೂ ಕೆಳಗೆ ಬೀಳದಂತೆ ಇಲ್ಲವೆ ಬಿದ್ದು ಗಾಯಮಾಡಿಕೊಳ್ಳದಂತೆ ಹೇಗೆ ಸರಿಯಾದ ತರಬೇತಿಯು ಅವನಿಗೆ ಸಹಾಯಮಾಡುತ್ತದೊ, ಅದೇ ರೀತಿಯಲ್ಲಿ ನಾವು ಜೀವಕ್ಕೆ ನಡೆಸುವ ಪಥದಲ್ಲಿ ಎಡವಿ ಬೀಳದೆ ಸ್ಥಿರವಾದ ಹೆಜ್ಜೆಗಳನ್ನಿಡುತ್ತಾ ಮುಂದುವರಿಯುವಂತೆ ಸಹಾಯಮಾಡಲು ಸದುಪದೇಶವನ್ನು ಹಿಡಿದುಕೊಳ್ಳಬೇಕು. ಆದರೂ, ನಾವು ಆರಿಸಿಕೊಳ್ಳುವಂತಹ ಮಾರ್ಗದ ವಿಷಯದಲ್ಲಿ ಜಾಗರೂಕರಾಗಿರತಕ್ಕದ್ದು.

‘ದುಷ್ಟನ ಮಾರ್ಗದಿಂದ’ ದೂರವಿರು

ತುರ್ತಿನ ಪ್ರಜ್ಞೆಯೊಂದಿಗೆ ಸೊಲೊಮೋನನು ಎಚ್ಚರಿಸಿದ್ದು: “ದುಷ್ಟರ ಮಾರ್ಗದಲ್ಲಿ ಸೇರದಿರು; ಕೆಟ್ಟವರ ದಾರಿಯಲ್ಲಿ ನಡೆಯಬೇಡ. ಅದಕ್ಕೆ ದೂರವಾಗಿರು, ಅದರಲ್ಲಿ ನಡೆಯದೆ ಓರೆಯಾಗು; ಮುಂದೆ ಮುಂದೆ ನಡೆ. ಕೇಡುಮಾಡದಿದ್ದರೆ ಅವರಿಗೆ ನಿದ್ರೆಹತ್ತದು; ಯಾರನ್ನಾದರೂ ಎಡವಿಬೀಳಿಸದಿದ್ದರೆ ಅವರ ನಿದ್ರೆಗೆ ಭಂಗವಾಗುವದು. ದುಷ್ಟತನವೇ ಅವರ ಅನ್ನ; ಬಲಾತ್ಕಾರವೇ ಅವರ ದ್ರಾಕ್ಷಾರಸಪಾನ.”ಜ್ಞಾನೋಕ್ತಿ 4:14-17.

ಈ ದುಷ್ಟರು ತಮ್ಮ ದುಷ್ಕೃತ್ಯಗಳಿಂದಲೇ ಬೇಕಾದ ಪೋಷಣೆಯನ್ನು ಪಡೆದುಕೊಳ್ಳುತ್ತಾರೆ. ಇಂತಹವರ ಮಾರ್ಗಗಳಿಂದ ನಾವು ದೂರವಿರಬೇಕೆಂದು ಸೊಲೊಮೋನನು ಬಯಸುತ್ತಾನೆ. ಕೆಟ್ಟದ್ದನ್ನು ಮಾಡುವುದೇ ಇವರಿಗೆ ಅನ್ನಪಾನಗಳಂತಿವೆ. ಹಿಂಸಾಕೃತ್ಯಗಳಲ್ಲಿ ತೊಡಗದಿದ್ದರೆ ಇವರಿಗೆ ನಿದ್ರೆಯೇ ಬಾರದು. ಅವರ ವ್ಯಕ್ತಿತ್ವವು ಪೂರ್ತಿ ಭ್ರಷ್ಟಗೊಂಡಿದೆ! ಇಂತಹವರ ಸಹವಾಸ ಮಾಡುತ್ತಾ ನಾವು ನಮ್ಮ ಹೃದಯಗಳನ್ನು ನಿಜವಾಗಿಯೂ ಕಾಪಾಡಿಕೊಳ್ಳಬಲ್ಲೆವೊ? ಇಂದಿನ ಲೋಕದ ಹೆಚ್ಚಿನ ಮನೋರಂಜನೆಯಲ್ಲಿ ಚಿತ್ರಿಸಲ್ಪಡುವ ಹಿಂಸಾಚಾರಕ್ಕೆ ತಮ್ಮನ್ನು ಒಡ್ಡಿಕೊಳ್ಳುವ ಮೂಲಕ, ‘ಕೆಟ್ಟವರ ದಾರಿಯಲ್ಲಿ ನಡೆಯುವುದು’ ಎಂತಹ ಮೂರ್ಖತನವಾಗಿದೆ! ನೀವು ಕೋಮಲ ಸಹಾನುಭೂತಿಯನ್ನು ತೋರಿಸಲು ಪ್ರಯಾಸಪಡುತ್ತಿದ್ದೀರೆಂದು ನೆನಸಿಕೊಳ್ಳಿರಿ. ಆದರೆ, ಅದರೊಂದಿಗೆ ನೀವು ಸಂವೇದನಾಶಕ್ತಿಯನ್ನು ಕುಂದಿಸುವಂತಹ ಅಸಹ್ಯ ದೃಶ್ಯಗಳನ್ನು ಟಿವಿಯಲ್ಲಿ ಇಲ್ಲವೆ ಚಲನಚಿತ್ರಗಳಲ್ಲಿ ನೋಡುತ್ತಿದ್ದರೆ, ಅದು ಸುಸಂಗತವಾದ ವಿಷಯವಾಗಿರಲಾರದು.

ಬೆಳಕಿನಲ್ಲಿ ಉಳಿಯಿರಿ

ಒಂದು ಮಾರ್ಗದ ದೃಷ್ಟಾಂತವನ್ನು ಈಗಲೂ ಉಪಯೋಗಿಸುತ್ತಾ, ಸೊಲೊಮೋನನು ಪ್ರಕಟಿಸುವುದು: “ನೀತಿವಂತರ ಮಾರ್ಗವು ಮಧ್ಯಾಹ್ನದ ವರೆಗೂ ಹೆಚ್ಚುತ್ತಾ ಬರುವ ಬೆಳಗಿನ ಬೆಳಕಿನಂತಿದೆ.” (ಜ್ಞಾನೋಕ್ತಿ 4:18) ಬೈಬಲಿನ ಅಧ್ಯಯನದಲ್ಲಿ ತೊಡಗಿ, ಅದು ಹೇಳುವ ವಿಷಯಗಳನ್ನು ನಮ್ಮ ಜೀವಿತದಲ್ಲಿ ಅನ್ವಯಿಸಲು ಪ್ರಯತ್ನಿಸುವುದನ್ನು, ನಸುಕಿನ ಅಂಧಕಾರದಲ್ಲಿ ಪ್ರಯಾಣವನ್ನು ಆರಂಭಿಸುವುದಕ್ಕೆ ಹೋಲಿಸಬಹುದು. ರಾತ್ರಿಯ ಅಂಧಕಾರವು ಕಡು ನೀಲಿ ಬಣ್ಣಕ್ಕೆ ತಿರುಗಿದಾಗ, ನಮ್ಮ ಕಣ್ಣಿಗೆ ಏನೂ ಗೋಚರಿಸದು. ಆದರೆ ಅರುಣೋದಯವಾದಂತೆ, ನಾವು ನಮ್ಮ ಸುತ್ತಮುತ್ತಲಿರುವ ವಿಷಯಗಳನ್ನು ನಿಧಾನವಾಗಿ ಗ್ರಹಿಸಲಾರಂಭಿಸುತ್ತೇವೆ. ಕೊನೆಗೆ, ಸೂರ್ಯನು ಪ್ರಕಾಶಮಾನವಾಗಿ ಬೆಳಗುವಾಗ, ನಾವು ಎಲ್ಲವನ್ನೂ ಸುಸ್ಪಷ್ಟವಾಗಿ ನೋಡುತ್ತೇವೆ. ಹಾಗೆಯೇ, ನಾವು ಪಟ್ಟುಬಿಡದೆ ಶಾಸ್ತ್ರವಚನಗಳನ್ನು ತಾಳ್ಮೆಯಿಂದ ಹಾಗೂ ಶ್ರದ್ಧಾಪೂರ್ವಕವಾಗಿ ಅಭ್ಯಾಸಿಸುತ್ತಾ ಮುಂದುವರಿದರೆ, ಸತ್ಯವು ಹಂತಹಂತವಾಗಿ ಸ್ಪಷ್ಟವಾಗುತ್ತಾ ಬರುವುದು. ನಮ್ಮ ಹೃದಯವನ್ನು ಸುಳ್ಳು ವಿಚಾರಗಳಿಂದ ಕಾಪಾಡಬೇಕಾದರೆ, ಅದಕ್ಕೆ ಆತ್ಮಿಕ ಪೋಷಣೆಯನ್ನು ಅಗತ್ಯವಾಗಿ ಕೊಡಬೇಕು.

ಬೈಬಲ್‌ ಪ್ರವಾದನೆಗಳ ಅರ್ಥ ಇಲ್ಲವೆ ಮಹತ್ವವು ಸಹ ಪ್ರಗತಿಪರವಾಗಿ ಅನಾವರಣಗೊಳ್ಳುತ್ತದೆ. ಯೆಹೋವನ ಪವಿತ್ರಾತ್ಮವು ಪ್ರವಾದನೆಗಳ ಮೇಲೆ ಬೆಳಕನ್ನು ಚೆಲ್ಲಿದಾಗ ಮತ್ತು ಅವು ಲೋಕದ ಘಟನೆಗಳಲ್ಲಿ ಇಲ್ಲವೆ ದೇವಜನರ ಅನುಭವಗಳಲ್ಲಿ ನೆರವೇರಿಕೆಯನ್ನು ಕಂಡುಕೊಂಡಾಗ, ಅವುಗಳನ್ನು ನಾವು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುತ್ತೇವೆ. ನಾವು ತಾಳ್ಮೆತಪ್ಪಿ, ಪ್ರವಾದನೆಗಳ ನೆರವೇರಿಕೆಯ ಬಗ್ಗೆ ಊಹೆಗಳನ್ನು ಮಾಡುವ ಬದಲು, ‘ಹೆಚ್ಚುತ್ತಾ ಬರುವ ಬೆಳಕಿಗಾಗಿ’ ಕಾಯಬೇಕು.

ಬೆಳಕಿನಲ್ಲಿ ನಡೆಯಲು ನಿರಾಕರಿಸುವ ಮೂಲಕ ದೇವರ ಮಾರ್ಗದರ್ಶನವನ್ನು ತಳ್ಳಿಬಿಡುವವರ ಕುರಿತೇನು? ಸೊಲೊಮೋನನು ಹೇಳುವುದು: “ದುಷ್ಟರ ಮಾರ್ಗವೋ ಕತ್ತಲಿನಂತಿದೆ; ತಾವು ಯಾವದಕ್ಕೆ ಎಡವಿಬಿದ್ದೆವೆಂದು ಅವರಿಗೆ ಗೊತ್ತಾಗದು.” (ಜ್ಞಾನೋಕ್ತಿ 4:19) ದುಷ್ಟರು, ಕತ್ತಲಿನಲ್ಲಿ ಮುಗ್ಗರಿಸುವ ವ್ಯಕ್ತಿಯಂತಿದ್ದಾರೆ. ಅವನು ಮುಗ್ಗರಿಸುವಂತೆ ಮಾಡಿದ ವಸ್ತುವು ಯಾವುದೆಂದು ಅವನಿಗೆ ಗೊತ್ತೇ ಇರುವುದಿಲ್ಲ. ಹಾಗೆಯೇ, ಇಂದು ಭಕ್ತಿಹೀನರು ತಮ್ಮ ಅನೀತಿಯ ಕಾರಣ ಅಭಿವೃದ್ಧಿ ಹೊಂದುತ್ತಿರುವಂತೆ ತೋರಿದರೂ, ಅವರ ಯಶಸ್ಸು ತಾತ್ಕಾಲಿಕವಾದದ್ದೇ. ಅಂತಹವರ ಬಗ್ಗೆ ಕೀರ್ತನೆಗಾರನು ಹಾಡಿದ್ದು: “ಹೌದು, ನೀನು [ಯೆಹೋವ] ಅವರನ್ನು ಅಪಾಯಕರ ಸ್ಥಳದಲ್ಲಿಟ್ಟು ಬೀಳಿಸಿ ನಾಶಮಾಡಿಬಿಡುತ್ತೀ.”—ಕೀರ್ತನೆ 73:18.

ಎಚ್ಚರವಾಗಿರಿ

ಇಸ್ರಾಯೇಲಿನ ರಾಜನು ಹೀಗೆ ಮುಂದುವರಿಸಿ ಹೇಳುತ್ತಾನೆ: “ಕಂದಾ, ನನ್ನ ಮಾತುಗಳನ್ನು ಆಲಿಸು, ನನ್ನ ನುಡಿಗಳಿಗೆ ಕಿವಿಗೊಡು. ನಿನ್ನ ದೃಷ್ಟಿಯು ಅವುಗಳ ಮೇಲೆ ತಪ್ಪದಿರಲಿ, ಅವುಗಳನ್ನು ನಿನ್ನ ಹೃದಯದೊಳಗೆ ಇಟ್ಟುಕೋ. ಅವುಗಳನ್ನು ಹೊಂದುವವರಿಗೆ ಅವು ಜೀವವು, ದೇಹಕ್ಕೆಲ್ಲಾ ಅವೇ ಆರೋಗ್ಯವು. ನಿನ್ನ ಹೃದಯವನ್ನು ಬಹು ಜಾಗರೂಕತೆಯಿಂದ ಕಾಪಾಡಿಕೋ; ಅದರೊಳಗಿಂದ ಜೀವಧಾರೆಗಳು ಹೊರಡುವವು.”ಜ್ಞಾನೋಕ್ತಿ 4:20-23.

ಹೃದಯವನ್ನು ಕಾಪಾಡಿಕೊಳ್ಳಬೇಕೆಂಬ ಸಲಹೆಯು ಬಹಳ ಮಹತ್ವವಾದದ್ದು ಎಂಬುದನ್ನು ಸೊಲೊಮೋನನ ಉದಾಹರಣೆಯಿಂದಲೇ ನಾವು ತಿಳಿದುಕೊಳ್ಳಸಾಧ್ಯವಿದೆ. ಅವನು ಯುವಕನಾಗಿದ್ದಾಗ ತನ್ನ ತಂದೆಗೆ “ಅಧೀನನಾದ” ಮಗನಾಗಿದ್ದು, ಯೆಹೋವನಿಗೆ ಅನೇಕ ವರ್ಷಗಳ ವರೆಗೆ ನಂಬಿಗಸ್ತನಾಗಿದ್ದನು ನಿಜ. ಹಾಗಿದ್ದರೂ, ಬೈಬಲು ಹೇಳುವುದು: “ಅವನು ವೃದ್ಧನಾದಾಗ ಇವರು [ಅನ್ಯ ದೇಶದ ಪತ್ನಿಯರು] ಅವನ ಹೃದಯವನ್ನು ಅನ್ಯ ದೇವತೆಗಳ ಕಡೆಗೆ ತಿರುಗಿಸಿದರು. ಈ ಕಾರಣದಿಂದ ಅವನು ತನ್ನ ದೇವರಾದ ಯೆಹೋವನಲ್ಲಿಟ್ಟಿದ್ದ ಯಥಾರ್ಥಭಕ್ತಿಯನ್ನು ಕಳೆದುಕೊಂಡನು. ತನ್ನ ತಂದೆಯಾದ ದಾವೀದನಂತೆ ನಡಿಯಲಿಲ್ಲ.” (1 ಅರಸುಗಳು 11:4) ನಾವು ನಿರಂತರವಾದ ಎಚ್ಚರಿಕೆಗೆ ಕಿವಿಗೊಡದಿದ್ದರೆ, ಅತ್ಯುತ್ತಮವಾದ ಹೃದಯವು ಕೂಡ ಕೆಟ್ಟದ್ದನ್ನು ಮಾಡುವ ಪಾಶಕ್ಕೆ ಒಳಗಾಗಬಹುದು. (ಯೆರೆಮೀಯ 17:9) ನಾವು ದೇವರ ಮರುಜ್ಞಾಪನಗಳನ್ನು ನಮ್ಮ ‘ಹೃದಯದೊಳಗೆ’ ಇಟ್ಟುಕೊಳ್ಳಬೇಕು. ಈ ಮರುಜ್ಞಾಪನಗಳಲ್ಲಿ ಜ್ಞಾನೋಕ್ತಿಯ 4ನೆಯ ಅಧ್ಯಾಯದಲ್ಲಿರುವ ಮಾರ್ಗದರ್ಶನವು ಸೇರಿದೆ.

ನಿಮ್ಮ ಹೃದಯದ ಸ್ಥಿತಿಯನ್ನು ಪರಿಶೀಲಿಸಿರಿ

ನಾವು ನಮ್ಮ ಸಾಂಕೇತಿಕ ಹೃದಯವನ್ನು ಯಶಸ್ವಿಕರವಾಗಿ ಕಾಪಾಡಿಕೊಳ್ಳುತ್ತಿದ್ದೇವೊ? ನಮ್ಮ ಅಂತರಂಗದ ಸ್ಥಿತಿಯನ್ನು ನಾವು ಹೇಗೆ ತಿಳಿದುಕೊಳ್ಳಬಲ್ಲೆವು? “ಹೃದಯದಲ್ಲಿ ತುಂಬಿರುವದೇ ಬಾಯಲ್ಲಿ ಹೊರಡುವದು” ಎಂದು ಯೇಸು ಕ್ರಿಸ್ತನು ಹೇಳಿದನು. (ಮತ್ತಾಯ 12:34) ಅವನು ಮತ್ತೂ ಹೇಳಿದ್ದು: “ಹೇಗಂದರೆ ಮನಸ್ಸಿನೊಳಗಿಂದ ಕೆಟ್ಟ ಆಲೋಚನೆ ಕೊಲೆ ಹಾದರ ಸೂಳೆಗಾರಿಕೆ ಕಳ್ಳತನ ಸುಳ್ಳುಸಾಕ್ಷಿ ಬೈಗಳು ಹೊರಟು ಬರುತ್ತವೆ.” (ಮತ್ತಾಯ 15:19, 20) ಹೌದು, ನಾವು ಅಂತರಂಗದಲ್ಲಿ ಏನಾಗಿದ್ದೇವೊ ಅದಕ್ಕೆ ನಮ್ಮ ನಡೆನುಡಿಗಳು ಯಥೇಷ್ಟ ನಿದರ್ಶನವಾಗಿವೆ.

ಸೂಕ್ತವಾಗಿಯೇ, ಸೊಲೊಮೋನನು ನಮಗೆ ಬುದ್ಧಿವಾದ ನೀಡುವುದು: “ಸೊಟ್ಟಮಾತುಗಳನ್ನು ನಿನ್ನಿಂದ ತೊಲಗಿಸಿಬಿಡು, ತುಟಿಗಳ ವಕ್ರತೆಯನ್ನು ದೂರಮಾಡು. ನೆಟ್ಟಗೆ ದೃಷ್ಟಿಸು; ನಿನ್ನ ಕಣ್ಣುಗಳು ನಿನ್ನ ಮುಂದೆಯೇ ಇರಲಿ. ನೀನು ನಡೆಯುವ ದಾರಿಯನ್ನು ಸಮಮಾಡು; ನಿನ್ನ ಮಾರ್ಗಗಳೆಲ್ಲಾ ದೃಢವಾಗಿರಲಿ. ಎಡಕ್ಕಾಗಲಿ ಬಲಕ್ಕಾಗಲಿ ತಿರುಗಬೇಡ; ನಿನ್ನ ಕಾಲನ್ನು ಕೇಡಿಗೆ ದೂರಮಾಡು.”ಜ್ಞಾನೋಕ್ತಿ 4:24-27.

ಸೊಲೊಮೋನನ ಬುದ್ಧಿವಾದಕ್ಕನುಸಾರ, ನಾವು ನಮ್ಮ ನಡೆನುಡಿಗಳನ್ನು ಪರಿಶೀಲಿಸುವ ಅಗತ್ಯವಿದೆ. ನಾವು ನಮ್ಮ ಹೃದಯವನ್ನು ಕಾಪಾಡಿಕೊಂಡು, ಯೆಹೋವನನ್ನು ಮೆಚ್ಚಿಸಬೇಕಾದರೆ, ಸೊಟ್ಟಮಾತುಗಳಿಂದ ಮತ್ತು ವಕ್ರತೆಯಿಂದ ದೂರವಿರಬೇಕು. (ಜ್ಞಾನೋಕ್ತಿ 3:32) ನಮ್ಮ ನಡೆನುಡಿಗಳು, ನಮ್ಮ ಬಗ್ಗೆ ಏನನ್ನು ತಿಳಿಯಪಡಿಸುತ್ತವೆ ಎಂಬುದರ ಕುರಿತು ನಾವು ಪ್ರಾರ್ಥನಾಪೂರ್ವಕವಾಗಿ ಚಿಂತಿಸಬೇಕು. ವಿಷಯವು ಹಾಗಿರುವಲ್ಲಿ, ನಾವು ಕಂಡುಕೊಳ್ಳುವ ಯಾವುದೇ ಬಲಹೀನತೆಗಳನ್ನು ಸರಿಪಡಿಸಲು ಯೆಹೋವನ ಸಹಾಯಕ್ಕಾಗಿ ಬೇಡಿಕೊಳ್ಳೋಣ.—ಕೀರ್ತನೆ 139:23, 24.

ಎಲ್ಲಕ್ಕಿಂತಲೂ ಮಿಗಿಲಾಗಿ, ನಮ್ಮ ಕಣ್ಣುಗಳು ‘ನೆಟ್ಟಗೆ ದೃಷ್ಟಿಸಲಿ.’ ಅವುಗಳನ್ನು ನಮ್ಮ ಸ್ವರ್ಗೀಯ ತಂದೆಗೆ ಹೃತ್ಪೂರ್ವಕ ಸೇವೆಯನ್ನು ಸಲ್ಲಿಸುವ ಗುರಿಯ ಮೇಲೆ ಭದ್ರವಾಗಿ ಕೇಂದ್ರೀಕರಿಸೋಣ. (ಕೊಲೊಸ್ಸೆ 3:23) ಇಂತಹ ಪ್ರಾಮಾಣಿಕವಾದ ಮಾರ್ಗವನ್ನು ನೀವು ಬೆನ್ನಟ್ಟಿದಂತೆ, ಯೆಹೋವನು ‘ನಿಮ್ಮ ಮಾರ್ಗಗಳಲ್ಲೆಲ್ಲ’ ನಿಮಗೆ ಸಫಲತೆಯನ್ನು ದಯಪಾಲಿಸುವನು ಮತ್ತು ‘ನಿಮ್ಮ ಹೃದಯವನ್ನು ಕಾಪಾಡಿಕೊಳ್ಳಬೇಕೆಂಬ’ ಪ್ರೇರಿತ ಸಲಹೆಗೆ ಕಿವಿಗೊಟ್ಟದ್ದಕ್ಕಾಗಿ ನಿಮ್ಮನ್ನು ಹೇರಳವಾಗಿ ಆಶೀರ್ವದಿಸುವನು.

[ಪಾದಟಿಪ್ಪಣಿ]

^ ಪ್ಯಾರ. 7 ಅವನ ನಿಜವಾದ ಹೆಸರಲ್ಲ.

[ಪುಟ 22ರಲ್ಲಿರುವ ಸಂಕ್ಷಿಪ್ತ ವಿವರಣೆ]

ಹಿಂಸಾಚಾರವನ್ನು ಚಿತ್ರಿಸುವ ಮನೋರಂಜನೆಯಿಂದ ನೀವು ದೂರವಿರುತ್ತೀರೊ?

[ಪುಟ 21ರಲ್ಲಿರುವ ಚಿತ್ರ]

ಅನುಭವಸ್ಥರ ಬುದ್ಧಿವಾದದಿಂದ ಪ್ರಯೋಜನ ಪಡೆದುಕೊಳ್ಳಿರಿ

[ಪುಟ 23ರಲ್ಲಿರುವ ಚಿತ್ರ]

ಶಿಸ್ತು ನಿಮ್ಮ ಪ್ರಗತಿಯ ವೇಗವನ್ನು ನಿಧಾನಗೊಳಿಸುವುದಿಲ್ಲ

[ಪುಟ 24ರಲ್ಲಿರುವ ಚಿತ್ರ]

ಬೈಬಲಿನ ಅಧ್ಯಯನವನ್ನು ಪಟ್ಟುಬಿಡದೆ ಮುಂದುವರಿಸಿರಿ