ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲ್‌ ಅಧ್ಯಯನದ ಮೂಲಕ ಭಾರತದಲ್ಲಿ ನಂಬಿಕೆಯನ್ನು ಕಟ್ಟುವುದು

ಬೈಬಲ್‌ ಅಧ್ಯಯನದ ಮೂಲಕ ಭಾರತದಲ್ಲಿ ನಂಬಿಕೆಯನ್ನು ಕಟ್ಟುವುದು

ನಾವಾದರೋ ನಂಬುವವರಾಗಿದ್ದೇವೆ

ಬೈಬಲ್‌ ಅಧ್ಯಯನದ ಮೂಲಕ ಭಾರತದಲ್ಲಿ ನಂಬಿಕೆಯನ್ನು ಕಟ್ಟುವುದು

ಭಾರತ ದೇಶವು, ಅದರ ಉತ್ತರದ ಭವ್ಯ ಮತ್ತು ಮಂಜಿನಿಂದ ಆವೃತವಾದ ಹಿಮಾಲಯ ಪರ್ವತಗಳಿಂದ ಹಿಡಿದು, ದಕ್ಷಿಣದಲ್ಲಿರುವ ಹಿಂದೂ ಮಹಾಸಾಗರದ ಬೆಚ್ಚನೆಯ ತೀರಗಳ ವರೆಗೆ, ಭೌಗೋಲಿಕವಾಗಿ ಹಾಗೂ ಧಾರ್ಮಿಕವಾಗಿ ವೈವಿಧ್ಯಮಯವಾಗಿದೆ. ನೂರು ಕೋಟಿಗಿಂತಲೂ ಹೆಚ್ಚಿನ ಜನಸಂಖ್ಯೆಯಿರುವ ಈ ದೇಶದಲ್ಲಿ, ಸುಮಾರು 83 ಪ್ರತಿಶತದಷ್ಟು ಜನರು ಹಿಂದೂಗಳು, 11 ಪ್ರತಿಶತದಷ್ಟು ಜನರು ಮುಸ್ಲಿಮರು ಮತ್ತು ಉಳಿದವರು ಪ್ರಮುಖವಾಗಿ ನಾಮಮಾತ್ರದ ಕ್ರೈಸ್ತರು, ಸಿಕ್‌, ಬೌದ್ಧ ಮತ್ತು ಜೈನ್‌ ಮತದವರಾಗಿದ್ದಾರೆ. ಇಲ್ಲಿ ಎಲ್ಲರಿಗೂ ಆರಾಧನಾ ಸ್ವಾತಂತ್ರ್ಯವಿದೆ. “ಭಾರತೀಯ ಜೀವನ ರೀತಿಯಲ್ಲಿ ಧರ್ಮವು ಒಂದು ಪ್ರಧಾನ ಪಾತ್ರವನ್ನು ವಹಿಸುತ್ತದೆ” ಎಂದು ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲೊಪೀಡಿಯ ಹೇಳುತ್ತದೆ.

ಭಾರತದಲ್ಲಿ 21,200ಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿರುವ ಯೆಹೋವನ ಸಾಕ್ಷಿಗಳು, ತಮ್ಮ ಕ್ರೈಸ್ತ ನಂಬಿಕೆಗನುಸಾರ ಜೀವಿಸುವ ಜನರೆಂಬ ಮಾತಿಗೆ ಸರಿಯಾಗಿ ಹೊಂದಿಕೊಳ್ಳುತ್ತಾರೆ. ಲೋಕದ ಬೇರೆ ಕಡೆಗಳಲ್ಲಿರುವ ತಮ್ಮ ಆತ್ಮಿಕ ಒಡನಾಡಿಗಳಂತೆ ಭಾರತದಲ್ಲಿರುವ ಸಾಕ್ಷಿಗಳು, ದೇವರ ವಾಕ್ಯವಾದ ಪವಿತ್ರ ಬೈಬಲಿನಲ್ಲಿ ತಮ್ಮ ನೆರೆಯವರು ಬಲವಾದ ನಂಬಿಕೆಯನ್ನು ಬೆಳೆಸಿಕೊಳ್ಳುವಂತೆ ಸಹಾಯಮಾಡುತ್ತಾರೆ. ಈ ಸಾಕ್ಷಿಕಾರ್ಯವನ್ನು ಅವರು ಒಂದು ಸುಯೋಗವಾಗಿ ಎಣಿಸುತ್ತಾರೆ. (2 ತಿಮೊಥೆಯ 3:16, 17) ದಕ್ಷಿಣ ಭಾರತದ ಚೆನ್ನೈ ನಗರದಲ್ಲಿರುವ ಒಂದು ಕುಟುಂಬವು, ಬೈಬಲ್‌ ಸತ್ಯದ ಜ್ಞಾನವನ್ನು ಹೇಗೆ ಪಡೆದುಕೊಂಡಿತೆಂಬುದನ್ನು ಪರಿಗಣಿಸಿರಿ.

ಯೆಹೋವನ ಸಾಕ್ಷಿಗಳ ಸಂಪರ್ಕಕ್ಕೆ ಬರುವ ಮುಂಚೆ, ಈ ಕುಟುಂಬವು ಕ್ಯಾಥೊಲಿಕ್‌ ಧರ್ಮದ ಕ್ಯಾರಿಸ್‌ಮ್ಯಾಟಿಕ್‌ (ದಿವ್ಯಶಕ್ತಿಯ) ಚಟುವಟಿಕೆಗಳಲ್ಲಿ ಬಹಳ ಸಕ್ರಿಯವಾಗಿ ಒಳಗೂಡಿತ್ತು. ಆ ಕುಟುಂಬದವರು ದರ್ಶನಗಳನ್ನು ನೋಡುವ, ಅನ್ಯಭಾಷೆಗಳಲ್ಲಿ ಮಾತಾಡುವ ಮತ್ತು ಅಸ್ವಸ್ಥರನ್ನು ಗುಣಪಡಿಸುವ ಪ್ರತಿಪಾದನೆಯನ್ನು ಮಾಡಿದರು. ಅವರು ಚರ್ಚಿನಲ್ಲಿ ಮತ್ತು ಸಮುದಾಯದಲ್ಲಿ ಎಷ್ಟು ಪ್ರಖ್ಯಾತರಾಗಿದ್ದರೆಂದರೆ, ಜನರು ಆ ಕುಟುಂಬದ ಕೆಲವು ಸದಸ್ಯರನ್ನು “ಸ್ವಾಮಿ”ಗಳೆಂದು ಸಂಬೋಧಿಸುತ್ತಿದ್ದರು. ಒಂದು ದಿನ ಸಾಕ್ಷಿಯೊಬ್ಬನು ಆ ಕುಟುಂಬದವರನ್ನು ಭೇಟಿಮಾಡಿ, ಯೇಸು ಸರ್ವಶಕ್ತ ದೇವರಲ್ಲ ಬದಲಿಗೆ ದೇವಕುಮಾರನಾಗಿದ್ದಾನೆ ಎಂದು ಅವನು ಬೈಬಲಿನಿಂದಲೇ ಅವರಿಗೆ ತೋರಿಸಿದನು. ದೇವರ ಹೆಸರು ಯೆಹೋವ ಎಂಬುದನ್ನು ಮತ್ತು ಭೂಮಿಯನ್ನು ಒಂದು ಸುಂದರ ಪ್ರಮೋದವನವನ್ನಾಗಿ ಮಾಡುವುದೇ ಆತನ ಉದ್ದೇಶವಾಗಿದೆ ಎಂಬುದನ್ನು ಸಹ ಸಾಕ್ಷಿಯು ಅವರಿಗೆ ತೋರಿಸಿಕೊಟ್ಟನು.—ಕೀರ್ತನೆ 83:18; ಲೂಕ 23:43; ಯೋಹಾನ 3:16.

ಈ ಕುಟುಂಬದ ಸದಸ್ಯರು ದೇವರ ವಾಕ್ಯಕ್ಕೆ ಗೌರವವನ್ನು ತೋರಿಸುವವರಾಗಿದ್ದು, ತಮಗೆ ಹೇಳಲಾಗುತ್ತಿದ್ದ ವಿಷಯಗಳನ್ನು ಇಷ್ಟಪಟ್ಟದ್ದರಿಂದ, ಯೆಹೋವನ ಸಾಕ್ಷಿಗಳೊಂದಿಗೆ ಕ್ರಮವಾಗಿ ಬೈಬಲ್‌ ಅಧ್ಯಯನವನ್ನು ಮಾಡಲು ಒಪ್ಪಿಕೊಂಡರು. ಇದನ್ನು ನೋಡಿದ ಅವರ ಚರ್ಚಿನ ಪರಿಚಯಸ್ಥರು ಅವರನ್ನು ಗೇಲಿಮಾಡಲು ತೊಡಗಿದರು. ಏನೇ ಆಗಲಿ, ತಮ್ಮ ಬೈಬಲ್‌ ಅಧ್ಯಯನವನ್ನು ಮುಂದುವರಿಸಲು ಈ ಕುಟುಂಬದವರು ದೃಢನಿಶ್ಚಯ ಮಾಡಿಕೊಂಡಿದ್ದರು. ಅವರ ಬೈಬಲ್‌ ಜ್ಞಾನವು ಹೆಚ್ಚಾದಂತೆ ಮತ್ತು ಅವರ ನಂಬಿಕೆಯು ಮತ್ತಷ್ಟು ಬಲಗೊಂಡಂತೆ, ಅವರು ತಮ್ಮ ಸುಳ್ಳು ಧಾರ್ಮಿಕ ಆಚರಣೆಗಳನ್ನೆಲ್ಲ ಬಿಟ್ಟುಬಿಟ್ಟರು. ಇಂದು, ಈ ಕುಟುಂಬದ ಮೂವರು ಸದಸ್ಯರು ದೀಕ್ಷಾಸ್ನಾನ ಪಡೆದ ಹುರುಪುಳ್ಳ ಸಾಕ್ಷಿಗಳಾಗಿದ್ದಾರೆ, ಮತ್ತು ಆ ಕುಟುಂಬದ ತಾಯಿಯು ಸಾಧ್ಯವಾದಾಗಲೆಲ್ಲ ಆಕ್ಸಿಲಿಯರಿ ಪಯನೀಯರರಾಗಿ ಸೇವೆಸಲ್ಲಿಸುತ್ತಾರೆ.

ಅಡೆತಡೆಗಳನ್ನು ಜಯಿಸಲು ನಂಬಿಕೆ

ಪಂಜಾಬಿನ ಒಂದು ಹಳ್ಳಿಯಲ್ಲಿ ಜೀವಿಸುತ್ತಿರುವ ಸುಂದರ್‌ ಲಾಲ್‌ ಎಂಬ ಯುವಕನಿಗೆ, ದೇವರ ರಾಜ್ಯದ ಸುವಾರ್ತೆಯನ್ನು ಇತರರೊಂದಿಗೆ ಹಂಚಿಕೊಳ್ಳಲು ಬಲವಾದ ನಂಬಿಕೆ ಮತ್ತು ಬಹಳಷ್ಟು ಧೈರ್ಯದ ಅಗತ್ಯವಿತ್ತು. (ಮತ್ತಾಯ 24:14) ಒಂದು ಕಾರಣವೇನೆಂದರೆ, ಅವನು ತನ್ನ ಕುಟುಂಬದ ಹಾಗೂ ಹಳ್ಳಿಯ ಜನರಂತೆ ಅನೇಕ ದೇವರುಗಳ ಆರಾಧನೆಯನ್ನು ಬಿಟ್ಟು, ಈಗ ಸತ್ಯ ದೇವರಾದ ಯೆಹೋವನನ್ನು ಆರಾಧಿಸುತ್ತಿದ್ದನು. ಎರಡನೆಯ ಕಾರಣವೇನೆಂದರೆ, ಸುಂದರ್‌ ಲಾಲ್‌ನಿಗೆ ಕಾಲುಗಳಿರಲಿಲ್ಲ.

ಇಸವಿ 1992ರ ವರೆಗೆ, ಸುಂದರ್‌ ಲಾಲ್‌ನು ಬೇರೆ ಎಲ್ಲರಂತೆ ಒಂದು ಸಾಮಾನ್ಯ ಜೀವಿತವನ್ನು ನಡೆಸುತ್ತಿದ್ದನು. ಅವನು ಒಬ್ಬ ವೈದ್ಯನ ಸಹಾಯಕನಾಗಿ ಕೆಲಸಮಾಡುತ್ತಿದ್ದನು ಮತ್ತು ತನ್ನ ಕುಟುಂಬದವರೊಂದಿಗೆ ಸೇರಿ, ತಮ್ಮ ಧಾರ್ಮಿಕ ಗುರುಗಳ ಮಾರ್ಗದರ್ಶನಕ್ಕನುಸಾರ ವಿವಿಧ ದೇವದೇವತೆಗಳ ಆರಾಧನೆಯಲ್ಲಿ ಪಾಲ್ಗೊಳ್ಳುತ್ತಿದ್ದನು. ಒಂದು ರಾತ್ರಿ, ಅವನು ರೈಲು ಕಂಬಿಗಳನ್ನು ದಾಟುತ್ತಿದ್ದಾಗ ಎಡವಿ ಬಿದ್ದುಬಿಟ್ಟನು. ಅವನ ಮೇಲೆ ಹಾದುಹೋದ ಒಂದು ಗಾಡಿಯು ಅವನ ಎರಡೂ ಕಾಲುಗಳನ್ನು ತೊಡೆಯ ವರೆಗೂ ಕತ್ತರಿಸಿಬಿಟ್ಟಿತು. ಅವನು ಬದುಕಿ ಉಳಿದನಾದರೂ, ಅವನ ಜೀವನವು ಆಶಾಹೀನವಾಯಿತು. ಇದರಿಂದ ಭಾರೀ ನಿರುತ್ಸಾಹಕ್ಕೆ ಬಲಿಯಾದ ಸುಂದರ್‌ ಲಾಲ್‌, ಆತ್ಮಹತ್ಯೆಯ ಬಗ್ಗೆ ಆಲೋಚಿಸತೊಡಗಿದನು. ಅವನು ತನ್ನ ಕುಟುಂಬದವರಿಂದ ಸಾಕಷ್ಟು ಬೆಂಬಲವನ್ನು ಪಡೆದನಾದರೂ, ಅವನ ಭವಿಷ್ಯತ್ತು ಕರಾಳವಾಗಿ ಕಂಡಿತು.

ತದನಂತರ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬನು ಸುಂದರ್‌ ಲಾಲ್‌ನನ್ನು ಭೇಟಿಮಾಡಿದನು. ದೇವರು ಈ ಭೂಮಿಯನ್ನು ಒಂದು ಹರ್ಷಭರಿತ ಪ್ರಮೋದವನವನ್ನಾಗಿ ಮಾಡುವ ಮತ್ತು ಆತನನ್ನು ಪ್ರೀತಿಸಿ ಆತನಿಗೆ ಭಯಪಡುವ ಎಲ್ಲರಿಗೂ ಪರಿಪೂರ್ಣವಾದ ಆರೋಗ್ಯವನ್ನು ಕೊಡುವ ವಾಗ್ದಾನವನ್ನು ಮಾಡಿದ್ದಾನೆಂಬುದನ್ನು ಬೈಬಲಿನಿಂದ ಅವನಿಗೆ ತೋರಿಸಿದನು. ಸುಂದರ್‌ ಲಾಲ್‌ ಒಂದು ಬೈಬಲ್‌ ಅಧ್ಯಯನಕ್ಕೆ ಒಪ್ಪಿಕೊಂಡನು, ಮತ್ತು ಒಂದು ವರ್ಷದ ವರೆಗೆ ಶ್ರದ್ಧೆಯಿಂದ ಅಭ್ಯಾಸಿಸಿದನು. ಕ್ರೈಸ್ತ ಕೂಟಗಳಿಗೆ ಹಾಜರಾಗುವಂತೆ ಅವನು ಆಮಂತ್ರಿಸಲ್ಪಟ್ಟಾಗ, ಒಬ್ಬ ಗೆಳೆಯನ ಸೈಕಲಿನ ಹಿಂದೆ ಕುಳಿತುಕೊಂಡು ಹೋದನು. ಈ ರೀತಿಯ ಸವಾರಿಯು ಬಹಳ ವೇದನಾಮಯವಾಗಿತ್ತಾದರೂ, ಅದರಿಂದ ಸಿಕ್ಕ ಪ್ರತಿಫಲವು ಮಹತ್ತರವಾಗಿತ್ತು. ದೇವರ ವಾಕ್ಯದಲ್ಲಿರುವ ವಾಗ್ದಾನಗಳಲ್ಲಿ ನಿಜವಾದ ನಂಬಿಕೆಯಿರುವ ಮತ್ತು ಬೈಬಲ್‌ ಬೋಧನೆಗಳಿಗೆ ಅನುಗುಣವಾಗಿ ಜೀವಿಸುತ್ತಿರುವ ಇನ್ನೂ ಇತರರನ್ನು ಅವನು ಭೇಟಿಮಾಡಿದಾಗ, ವೈಯಕ್ತಿಕ ಬೈಬಲ್‌ ಅಧ್ಯಯನದ ಮೂಲಕ ಅವನು ಕಲಿತಿದ್ದ ವಿಷಯಗಳು ಸರಿಯೆಂಬ ಮನವರಿಕೆಯಾಯಿತು.

ಸುಂದರ್‌ ಲಾಲ್‌ ತನ್ನ ನೆರೆಯವರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳಲಾರಂಭಿಸಿದನು ಮತ್ತು 1995ರಲ್ಲಿ ದೀಕ್ಷಾಸ್ನಾನ ಪಡೆದುಕೊಂಡನು. ಹಳ್ಳಿಯಲ್ಲಿ ಮನೆ ಮನೆಯ ಸೇವೆಯಲ್ಲಿ ಭಾಗವಹಿಸಲು ಅವನು ಮೊದಮೊದಲು ತನ್ನ ಇಡೀ ಶರೀರವನ್ನು ಎಳೆದುಕೊಂಡೇ ಹೋಗಬೇಕಿತ್ತು. ಅವನು ಅತ್ತಿತ್ತ ಹೋಗಲು ಸಾಮಾನ್ಯವಾಗಿ ಹೀಗೆಯೇ ಮಾಡುತ್ತಿದ್ದನು. ಆದರೆ ಈಗ, ಅವನ ಆತ್ಮಿಕ ಸಹೋದರರು ಅವನಿಗೊಂದು ಕೊಡುಗೆಯನ್ನು, ಅಂದರೆ ಕೈಗಳಿಂದಲೇ “ಪೆಡಲ್‌” ಮಾಡುವಂತೆ ವಿಶೇಷವಾಗಿ ತಯಾರಿಸಲ್ಪಟ್ಟ ಮೂರು ಚಕ್ರದ ಸೈಕಲನ್ನು ಕೊಟ್ಟಿದ್ದಾರೆ. ಈ ತ್ರಿಚಕ್ರದ ಸೈಕಲ್‌ ಇರುವುದರಿಂದ, ಅವನು ಯಾರ ಮೇಲೆಯೂ ಹೆಚ್ಚಾಗಿ ಆತುಕೊಳ್ಳಬೇಕಾಗಿಲ್ಲ ಮತ್ತು ತಾನಾಗಿಯೇ ಸಭೆಯ ಕೂಟಗಳಿಗೆ ಹಾಜರಾಗಲು 12 ಕಿಲೊಮೀಟರುಗಳ ಪ್ರಯಾಣವನ್ನು ಮಾಡಶಕ್ತನಾಗಿದ್ದಾನೆ. ಮಳೆಯು ಧಾರಾಕಾರವಾಗಿ ಸುರಿಯುತ್ತಿರಲಿ ಇಲ್ಲವೆ ಅಲ್ಲಿನ ಉಷ್ಣತೆಯು ಧಗಧಗಿಸುವ 43 ಡಿಗ್ರಿ ಸೆಲ್ಸಿಯಸ್‌ ಆಗಿರಲಿ, ಅವನು ಕೂಟಗಳಿಗೆ ತನ್ನ ಸೈಕಲ್‌ನಲ್ಲಿಯೇ ಹೋಗುತ್ತಾನೆ.

ಕೂಟಗಳನ್ನು ಹಾಜರಾಗುವುದರ ಜೊತೆಗೆ, ಸುಂದರ್‌ ಲಾಲ್‌ ಅನೇಕ ಬೈಬಲ್‌ ಅಧ್ಯಯನಗಳನ್ನು ನಡೆಸುತ್ತಾನೆ. ಅವನು ಯಾರೊಂದಿಗೆ ಇಂತಹ ಅಧ್ಯಯನಗಳನ್ನು ನಡೆಸುತ್ತಾನೊ ಅವರು ಸತ್ಯ ದೇವರಾದ ಯೆಹೋವನಲ್ಲಿ ಬಲವಾದ ನಂಬಿಕೆಯನ್ನು ಬೆಳೆಸಿಕೊಳ್ಳಲು ಸಹಾಯವನ್ನು ಕೋರುವಂತಹ ಜನರಾಗಿದ್ದಾರೆ. ಅವನ ಈ ಹಿಂದಿನ ಬೈಬಲ್‌ ವಿದ್ಯಾರ್ಥಿಗಳಲ್ಲಿ ಏಳು ಜನರು ಈಗಾಗಲೇ ದೀಕ್ಷಾಸ್ನಾನ ಪಡೆದುಕೊಂಡಿದ್ದಾರೆ. ಇನ್ನಿತರ ಮೂವರನ್ನು ಸುಂದರ್‌ ಲಾಲ್‌ ಪ್ರಥಮವಾಗಿ ಸಂದರ್ಶಿಸಿದನಾದರೂ, ಬೇರೆ ಸಾಕ್ಷಿಗಳು ಅವರೊಂದಿಗೆ ಅಧ್ಯಯನ ನಡೆಸಿದ ಕಾರಣ, ಅವರೂ ದೀಕ್ಷಾಸ್ನಾನ ಪಡೆದುಕೊಂಡಿದ್ದಾರೆ.

“ಎಲ್ಲರಲ್ಲಿ ಕ್ರಿಸ್ತನಂಬಿಕೆಯಿಲ್ಲ” ಎಂಬುದಾಗಿ ಬೈಬಲು ಹೇಳುತ್ತದೆ. (2 ಥೆಸಲೊನೀಕ 3:2) ಆದರೆ, ಯಾರು ‘ನಿತ್ಯಜೀವಕ್ಕೆ ಯೋಗ್ಯ ಪ್ರವೃತ್ತಿಯುಳ್ಳ’ವರಾಗಿದ್ದಾರೊ, ಅಂತಹವರಲ್ಲಿ ದೇವರ ವಾಕ್ಯದ ಕ್ರಮವಾದ ಅಧ್ಯಯನವು ಬಲವಾದ ನಂಬಿಕೆಯನ್ನು ಕಟ್ಟಬಲ್ಲದು. (ಅ. ಕೃತ್ಯಗಳು 13:48, NW) ಇಂತಹ ಅಧ್ಯಯನದಿಂದ ಲಭಿಸುವ ಅದ್ಭುತಕರ ಭವಿಷ್ಯತ್ತಿನ ನಿರೀಕ್ಷೆಯು ಕಣ್ಣುಗಳಲ್ಲಿ ಹೊಳಪನ್ನು ಉಂಟುಮಾಡುತ್ತದೆ ಮತ್ತು ಈ ನಿರೀಕ್ಷೆಯಲ್ಲಿಯೇ ಭಾರತದ ಹೆಚ್ಚಿನ ಜನರು ನಂಬಿಕೆಯನ್ನು ಇಡುತ್ತಿದ್ದಾರೆ.

[ಪುಟ 30ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಆಫ್ಘಾನಿಸ್ತಾನ್‌

ಪಾಕಿಸ್ತಾನ್‌

ನೇಪಾಲ್‌

ಭೂತಾನ್‌

ಚೀನಾ

ಬಾಂಗ್ಲಾದೇಶ

ಮ್ಯಾನ್ಮಾರ್‌

ಲಾಓಸ

ಥಾಯ್‌ಲೆಂಡ್‌

ವಿಯತನಾಮ

ಕ್ಯಾಂಬೋಡಿಯ

ಶ್ರೀ ಲಂಕ

ಭಾರತ

[ಕೃಪೆ]

Mountain High Maps® Copyright © 1997 Digital Wisdom, Inc.