ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸುವಾರ್ತೆಗಳು—ಐತಿಹಾಸಿಕವೋ ಪೌರಾಣಿಕವೋ?

ಸುವಾರ್ತೆಗಳು—ಐತಿಹಾಸಿಕವೋ ಪೌರಾಣಿಕವೋ?

ಸುವಾರ್ತೆಗಳು—ಐತಿಹಾಸಿಕವೋ ಪೌರಾಣಿಕವೋ?

ಮಾನವ ಇತಿಹಾಸದ ದಿಕ್ಕನ್ನೇ ಬದಲಾಯಿಸಿದ ಒಬ್ಬ ಯುವ ಪುರುಷ, ಅಂದರೆ ನಜರೇತಿನ ಯೇಸುವಿನ ಕಥೆ ಜಗಜ್ಜಾಹೀರಾಗಿದೆ. ಜನರು ಇದರ ಬಗ್ಗೆ ವಿಧಿವತ್ತಾಗಿಯೋ ಸಾಮಾನ್ಯ ರೀತಿಯಲ್ಲಿಯೋ ತಿಳಿದುಕೊಂಡಿದ್ದಾರೆ. ಈ ಸುವಾರ್ತೆಗಳಲ್ಲಿ ಅನಂತ ಸತ್ಯಗಳಿವೆ ಹಾಗೂ “ನಿಮ್ಮ ಮಾತು ಹೌದಾದರೆ ಹೌದು, ಅಲ್ಲವಾದರೆ ಅಲ್ಲ, ಎಂದಿರಲಿ” ಎಂಬಂತಹ ನಾಣ್ನುಡಿಗಳ ಚಿಲುಮೆಗಳು ಇವುಗಳಾಗಿವೆ ಎಂದು ಅನೇಕರು ನೆನಸುತ್ತಾರೆ. (ಮತ್ತಾಯ 5:37) ನಿಮ್ಮ ಹೆತ್ತವರು ಕ್ರೈಸ್ತರಾಗಿರಲಿ ಇಲ್ಲದಿರಲಿ, ಈ ಸುವಾರ್ತೆಗಳಿಂದಲೇ ಅವರು ನಿಮಗೆ ಪಾಠಗಳನ್ನು ಕಲಿಸಿಕೊಟ್ಟಿದ್ದಿರಬಹುದು.

ಕ್ರಿಸ್ತನ ಕೋಟ್ಯಂತರ ನಿಷ್ಠಾವಂತ ಹಿಂಬಾಲಕರಿಗೆ, ಅವರು ಯಾರಿಗಾಗಿ ಕಷ್ಟಾನುಭವಗಳನ್ನು ಸಹಿಸಿಕೊಂಡು ಸಾಯಲು ಸಿದ್ಧರಾಗಿದ್ದರೋ ಆ ವ್ಯಕ್ತಿಯ ವರ್ಣನೆಯನ್ನು ಈ ಸುವಾರ್ತೆಗಳು ಒದಗಿಸಿವೆ. ಅಲ್ಲದೆ ಧೈರ್ಯ, ತಾಳ್ಮೆ, ನಂಬಿಕೆ ಹಾಗೂ ನಿರೀಕ್ಷೆಗೂ ಇವುಗಳು ಆಧಾರವನ್ನೂ ಸ್ಫೂರ್ತಿಯನ್ನೂ ನೀಡಿವೆ. ಹಾಗಾದರೆ, ಇವುಗಳು ಕೇವಲ ಕಾಲ್ಪನಿಕ ಕಥೆಗಳಾಗಿವೆ ಎಂದು ತಳ್ಳಿಹಾಕಲಿಕ್ಕಾಗಿ ಬಲವಾದ ಪುರಾವೆಯು ತೀರ ಅಗತ್ಯವೆಂಬುದನ್ನು ನೀವು ಒಪ್ಪಲಾರಿರೋ? ಈ ಸುವಾರ್ತಾ ವೃತ್ತಾಂತಗಳು ಮಾನವರ ಆಲೋಚನೆ ಹಾಗೂ ನಡವಳಿಕೆಯ ಮೇಲೆ ಮಹತ್ತಾದ ಪ್ರಭಾವವನ್ನು ಬೀರಿರುವುದನ್ನು ನೋಡುವಾಗ, ಅವುಗಳ ವಿಶ್ವಾಸಾರ್ಹತೆಯ ಮೇಲೆ ಸಂದೇಹವನ್ನು ವ್ಯಕ್ತಪಡಿಸುವ ವ್ಯಕ್ತಿಯೊಬ್ಬನಿಂದ, ಮನಗಾಣಿಸುವಂತಹ ರುಜುವಾತನ್ನು ನೀವು ಕೇಳಿಕೊಳ್ಳಲಾರಿರೋ?

ಈ ಸುವಾರ್ತೆಗಳ ಕುರಿತಾದ ಅನೇಕ ಆಲೋಚನಾ ಪ್ರೇರಕ ಪ್ರಶ್ನೆಗಳನ್ನು ಪರಿಗಣಿಸುವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ. ಈ ಸುವಾರ್ತೆಗಳ ಅಧ್ಯಯನ ಮಾಡುತ್ತಿರುವ ನಿರ್ದಿಷ್ಟ ವಿದ್ಯಾರ್ಥಿಗಳು—ಇವರಲ್ಲಿ ಕೆಲವರು ಕ್ರೈಸ್ತರಾಗಿರದಿದ್ದರೂ—ಈ ವಿವಾದಾಂಶಗಳ ಕುರಿತಾಗಿ ಏನು ನೆನಸುತ್ತಾರೆ ಎಂಬುದನ್ನು ನೀವೇ ನೋಡಿರಿ. ತರುವಾಯ, ಅದರ ಕುರಿತು ಚೆನ್ನಾಗಿ ತಿಳಿದುಕೊಂಡ ಬಳಿಕ ನೀವೇ ಅದರ ಬಗ್ಗೆ ಒಂದು ತೀರ್ಮಾನಕ್ಕೆ ಬರಸಾಧ್ಯವಿದೆ.

ಪರಿಗಣಿಸಬೇಕಾದ ಪ್ರಶ್ನೆಗಳು

ಸುವಾರ್ತೆಗಳು ಬಹಳ ಚಾಲಾಕಿನಿಂದ ಹೆಣೆದ ಸುಳ್ಳುಕಥೆಗಳೋ?

ಜೀಸಸ್‌ ಸೆಮೀನಾರ್‌ನ ಸ್ಥಾಪಕನಾದ ರಾಬರ್ಟ್‌ ಫಂಕ್‌ ಹೇಳುವುದು: “ಯೇಸುವಿನ ಮರಣಾನಂತರ ವಿಕಾಸನಗೊಂಡ ಕ್ರೈಸ್ತ ಸಿದ್ಧಾಂತಕ್ಕೆ ಅವನನ್ನು ಸರಿಹೊಂದಿಸಲಿಕ್ಕಾಗಿ ಮತ್ತಾಯ, ಮಾರ್ಕ, ಲೂಕ ಮತ್ತು ಯೋಹಾನರು ‘ಮೆಸ್ಸೀಯನ ನಿರೂಪಣೆಮಾಡಿದರು.’” ಆದರೆ ಸುವಾರ್ತೆಗಳ ಪುಸ್ತಕಗಳನ್ನು ಬರೆಯುವ ಅವಧಿಯಲ್ಲಿ, ಯೇಸುವಿನ ಮಾತುಗಳನ್ನು ಕೇಳಿಸಿಕೊಂಡಿದ್ದ, ಅವನ ಕೃತ್ಯಗಳನ್ನು ಅವಲೋಕಿಸಿದ್ದ ಮತ್ತು ಅವನ ಪುನರುತ್ಥಾನದ ನಂತರ ಅವನನ್ನು ಕಣ್ಣಾರೆ ನೋಡಿದ್ದ ಅನೇಕರು ಇನ್ನೂ ಜೀವಂತವಾಗಿದ್ದರು. ಸುವಾರ್ತಾ ಲೇಖಕರು ವಂಚನೆಮಾಡಿದ್ದಾರೆ ಎಂಬ ಆರೋಪವನ್ನು ಇವರು ಹೊರಿಸಲಿಲ್ಲ.

ಕ್ರಿಸ್ತನ ಮರಣ ಮತ್ತು ಪುನರುತ್ಥಾನದ ವಿಷಯವನ್ನು ತೆಗೆದುಕೊಳ್ಳಿರಿ. ಯೇಸುವಿನ ಮರಣ ಮತ್ತು ಪುನರುತ್ಥಾನದ ಕುರಿತ ವಿಶ್ವಾಸಾರ್ಹ ವೃತ್ತಾಂತಗಳು ಕೇವಲ ಸುವಾರ್ತೆಗಳಲ್ಲಿ ಮಾತ್ರವಲ್ಲ, ಪುರಾತನ ಕೊರಿಂಥದಲ್ಲಿದ್ದ ಕ್ರೈಸ್ತರಿಗೆ ಪೌಲನು ಬರೆದ ಪ್ರಥಮ ಅಂಗೀಕೃತ ಪತ್ರಗಳಲ್ಲಿಯೂ ಇವೆ. ಅವನು ಬರೆದುದು: “ನಾನು ನಿಮಗೆ ತಿಳಿಸಿದ ಮೊದಲನೆಯ ಸಂಗತಿಗಳೊಳಗೆ ಒಂದು ಸಂಗತಿಯನ್ನು ನಿಮಗೆ ತಿಳಿಸಿಕೊಟ್ಟೆನು. ಅದು ನಾನು ಸಹ ಕಲಿತುಕೊಂಡದ್ದೇ. ಅದೇನಂದರೆ ಶಾಸ್ತ್ರದಲ್ಲಿ ಮುಂತಿಳಿಸಿರುವ ಪ್ರಕಾರ ಕ್ರಿಸ್ತನು ನಮ್ಮ ಪಾಪಗಳ ನಿವಾರಣೆಗಾಗಿ ಸತ್ತನು; ಹೂಣಲ್ಪಟ್ಟನು; ಶಾಸ್ತ್ರದ ಪ್ರಕಾರವೇ ಮೂರನೆಯ ದಿನದಲ್ಲಿ ಎಬ್ಬಿಸಲ್ಪಟ್ಟನು. ಕೇಫನಿಗೂ ಆ ಮೇಲೆ ಹನ್ನೆರಡು ಮಂದಿ ಅಪೊಸ್ತಲರಿಗೂ ಕಾಣಿಸಿಕೊಂಡನು. ತರುವಾಯ ಒಂದೇ ಸಮಯದಲ್ಲಿ ಐನೂರು ಮಂದಿಗಿಂತ ಹೆಚ್ಚು ಸಹೋದರರಿಗೆ ಕಾಣಿಸಿಕೊಂಡನು. ಇವರಲ್ಲಿ ಹೆಚ್ಚು ಜನರು ಇಂದಿನ ವರೆಗೂ ಇದ್ದಾರೆ. ಕೆಲವರು ನಿದ್ರೆಹೋಗಿದ್ದಾರೆ. ತರುವಾಯ ಆತನು ಯಾಕೋಬನಿಗೂ ಆ ಮೇಲೆ ಅಪೊಸ್ತಲರೆಲ್ಲರಿಗೂ ಕಾಣಿಸಿಕೊಂಡನು. ಕಟ್ಟಕಡೆಗೆ ದಿನತುಂಬದೆ ಹುಟ್ಟಿದವನಂತಿರುವ ನನಗೂ ಕಾಣಿಸಿಕೊಂಡನು.” (1 ಕೊರಿಂಥ 15:3-8) ಇಂತಹ ಪ್ರತ್ಯಕ್ಷದರ್ಶಿಗಳು ಯೇಸುವಿನ ಜೀವನದ ಕುರಿತಾದ ಐತಿಹಾಸಿಕ ಸತ್ಯಗಳನ್ನು ಜೋಪಾನವಾಗಿಟ್ಟರು.

ಆಧುನಿಕ ವಿಮರ್ಶಕರಿಂದ ಆಪಾದಿಸಲ್ಪಟ್ಟಿರುವ ಕಲ್ಪನಾಕಥೆಯು ಕ್ರೈಸ್ತ ಗ್ರೀಕ್‌ ಶಾಸ್ತ್ರವಚನಗಳಲ್ಲಿ ಕಂಡುಬರುವುದಿಲ್ಲ. ಅದಕ್ಕೆ ಬದಲಾಗಿ, ಇದು ಸಾ.ಶ. ಎರಡನೇ ಶತಮಾನದ ದಾಖಲೆಗಳಲ್ಲಿ ಕಂಡುಬರುತ್ತದೆ. ಆದುದರಿಂದ, ಅಪೊಸ್ತಲರ ಸಭೆಯಿಂದ ವಿಮುಖಗೊಂಡ ಜನರು ಸತ್ಯ ಕ್ರೈಸ್ತತ್ವದಿಂದ ದೂರಸರಿದು ಧರ್ಮಭ್ರಷ್ಟತೆಗೆ ದಾರಿಮಾಡಿಕೊಟ್ಟರು. ಆಗ ಕ್ರಿಸ್ತನ ಕುರಿತಾಗಿ ಕೆಲವು ಅಶಾಸ್ತ್ರೀಯ ಕಥಾನಿರೂಪಣೆಗಳು ಹುಟ್ಟಿಕೊಂಡವು.—ಅ. ಕೃತ್ಯಗಳು 20:28-30.

ಸುವಾರ್ತೆಗಳು ದಂತಕಥೆಗಳಾಗಿರಸಾಧ್ಯವೋ?

ಸುವಾರ್ತೆಗಳನ್ನು ಕೇವಲ ದಂತಕಥೆಗಳಾಗಿ ಪರಿಗಣಿಸುವುದು ಅಸಾಧ್ಯವೆಂದು ಲೇಖಕರೂ ವಿಮರ್ಶಕರೂ ಆಗಿರುವ ಸಿ. ಎಸ್‌. ಲೂಯಿಸ್‌ ಹೇಳಿದರು. “ಸುವಾರ್ತೆಗಳು ಖಂಡಿತವಾಗಿಯೂ ದಂತಕಥೆಗಳಾಗಿಲ್ಲ ಎಂಬುದನ್ನು, ಒಬ್ಬ ಸಾಹಿತ್ಯ ಚರಿತ್ರಕಾರನಾಗಿರುವ ನಾನು ಸಂಪೂರ್ಣವಾಗಿ ಮನಗಂಡಿದ್ದೇನೆ. ಏಕೆಂದರೆ ಇವು ದಂತಕಥೆಗಳಷ್ಟು ಕಲಾತ್ಮಕವಾಗಿಲ್ಲ. . . . ಯೇಸುವಿನ ಅಧಿಕಾಂಶ ಜೀವನದ ಬಗ್ಗೆ ನಮಗೆ ಏನೂ ಗೊತ್ತಿಲ್ಲ ಹಾಗೂ ದಂತಕಥೆಯನ್ನು ಹೆಣೆಯುವ ಯಾರೊಬ್ಬರೂ ಕಥೆಯನ್ನು ಹೀಗೆಯೇ ಅಪೂರ್ಣವಾಗಿ ಇರುವಂತೆ ಬಿಡಲಾರರೆಂದು” ಅವರು ಬರೆದರು. ಪ್ರಸಿದ್ಧ ಇತಿಹಾಸಕಾರನಾದ ಏಚ್‌. ಜಿ. ವೆಲ್ಸ್‌ ಕ್ರೈಸ್ತನಾಗಿರಲಿಲ್ಲವಾದರೂ, “ನಾಲ್ಕು [ಸುವಾರ್ತಾ ಬರಹಗಾರರು] ಒಂದು ಅತ್ಯಂತ ನಿಶ್ಚಿತ ವ್ಯಕ್ತಿತ್ವ ಚಿತ್ರವನ್ನು ನಮಗೆ ಕೊಡುವುದರಲ್ಲಿ ಸಹಮತದಿಂದಿದ್ದಾರೆ; ಅವರು . . . ಒಂದು ವಾಸ್ತವಿಕತೆಯ ನಿಶ್ಚಿತಾಭಿಪ್ರಾಯವನ್ನು ಕೊಡುತ್ತಾರೆ” ಎಂದು ಒಪ್ಪಿಕೊಂಡಿರುವುದು ಸ್ವಾರಸ್ಯಕರವಾದ ಸಂಗತಿಯಾಗಿದೆ.

ಪುನರುತ್ಥಿತ ಯೇಸು ತನ್ನ ಶಿಷ್ಯರಿಗೆ ಕಾಣಿಸಿಕೊಂಡಾಗ ಸಂಭವಿಸಿದ ಒಂದು ಘಟನೆಯನ್ನು ಪರಿಗಣಿಸಿರಿ. ಯೇಸು ವೈಭವಯುತವಾಗಿ ಹಿಂದಿರುಗಿ, ಮನತಾಕುವ ಭಾಷಣವನ್ನು ನೀಡಿ, ಅಥವಾ ಪ್ರಕಾಶಮಾನವಾಗಿ ಬೆಳಗುತ್ತಿರುವ ವ್ಯಕ್ತಿಯಾಗಿ ತೋರುವಂತೆ, ಒಬ್ಬ ಒಳ್ಳೆಯ ಕಥೆಗಾರನು ಅವನನ್ನು ಚಿತ್ರಿಸುತ್ತಿದ್ದನು. ಆದರೆ ಸುವಾರ್ತಾ ಬರಹಗಾರರು, ಯೇಸುವನ್ನು ತನ್ನ ಶಿಷ್ಯರ ಮುಂದೆ ನಿಂತುಕೊಂಡಿರುವ ಒಬ್ಬ ವ್ಯಕ್ತಿಯೋಪಾದಿ ಸರಳವಾದ ರೀತಿಯಲ್ಲಿ ಚಿತ್ರಿಸಿದರು. ಮತ್ತು ಅವನು “ಮಕ್ಕಳಿರಾ, ಊಟಕ್ಕೆ ನಿಮಗೆ ಏನೂ ಇಲ್ಲವೇ” ಎಂದು ಕೇಳಿದನು. (ಯೋಹಾನ 21:5) ವಿದ್ವಾಂಸನಾದ ಗ್ರೆಗ್‌ ಈಸ್ಟರ್‌ಬ್ರೂಕ್‌ ಹೇಳುವುದು: “ಸುವಾರ್ತೆಗಳು ಪೌರಾಣಿಕವಲ್ಲ, ನಿಜವಾದ ವೃತ್ತಾಂತಗಳೆಂದು ಈ ರೀತಿಯ ವಿವರಗಳು ಸೂಚಿಸುತ್ತವೆ.”

ಸುವಾರ್ತೆಗಳು ದಂತಕಥೆಗಳಾಗಿಲ್ಲ ಎಂಬುದಕ್ಕೆ ಮತ್ತೊಂದು ಕಾರಣವಿದೆ. ಆ ಸಮಯದಲ್ಲಿ ಶಿಕ್ಷಣಾ ವಿಧಾನವು ಕಂಠಪಾಠಮಾಡುವುದಾಗಿತ್ತು. ಈ ವಿಧದ ಕಲಿಸುವಿಕೆಯನ್ನು ರಬ್ಬಿಗಳು ಕಟ್ಟುನಿಟ್ಟಾಗಿ ಬೆಂಬಲಿಸಿದರು. ಎಲ್ಲ ವಿದ್ಯಾರ್ಥಿಗಳು ಈ ರೀತಿಯಲ್ಲಿ ಅಂದರೆ, ಪದೇ ಪದೇ ಹೇಳುವ ಮೂಲಕ ಜ್ಞಾಪಕದಲ್ಲಿಟ್ಟುಕೊಂಡು ವಿಷಯಗಳನ್ನು ಕಲಿಯಬೇಕಿತ್ತು. ಇದು ಯೇಸುವಿನ ಹೇಳಿಕೆಗಳು ಹಾಗೂ ಕೃತ್ಯಗಳು ನಿಷ್ಕೃಷ್ಟವಾದವುಗಳೂ ನೇರವಾದವುಗಳೂ ಎಂಬ ನಿರೂಪಣೆಗೆ ಇಂಬುಕೊಡುತ್ತದೆ ಮಾತ್ರವಲ್ಲ, ಇದು ಬಣ್ಣಕಟ್ಟಿ ಬರೆದಂತಹ ವಿಷಯವಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ.

ಸುವಾರ್ತೆಗಳು ದಂತಕಥೆಗಳಾಗಿರುತ್ತಿದ್ದಲ್ಲಿ, ಯೇಸುವಿನ ಮರಣಾನಂತರ ಅವುಗಳನ್ನು ಅಷ್ಟು ಬೇಗನೆ ಒಟ್ಟುಗೂಡಿಸಸಾಧ್ಯವಿತ್ತೋ?

ಲಭ್ಯವಿರುವ ಪುರಾವೆಗನುಸಾರ, ಸುವಾರ್ತೆಗಳು ಸಾ.ಶ 41ರಿಂದ 98ನೇ ವರ್ಷಗಳ ಮಧ್ಯೆ ಬರೆಯಲ್ಪಟ್ಟವು. ಯೇಸು ಸಾ.ಶ. 33ರಲ್ಲಿ ಮೃತಪಟ್ಟನು. ಅಂದರೆ, ಅವನ ಜೀವನ ಚರಿತ್ರೆಯು ಅವನ ಶುಶ್ರೂಷೆಯು ಕೊನೆಗೊಂಡ ಸ್ವಲ್ಪವೇ ಸಮಯದ ನಂತರ ಒಟ್ಟುಗೂಡಿಸಲ್ಪಟ್ಟಿತ್ತು. ಸುವಾರ್ತಾ ಕಥಾನಿರೂಪಣೆಗಳು ದಂತಕಥೆಗಳಾಗಿವೆ ಎಂಬ ವಾಗ್ವಾದಕ್ಕೆ ಇದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಕಥೆಗಳನ್ನು ಹೆಣೆಯಲು ಸಮಯವು ಅಗತ್ಯ. ಉದಾಹರಣೆಗೆ, ಪುರಾತನ ಗ್ರೀಕ್‌ ಕವಿಯಾದ ಹೋಮರ್‌ನ ಇಲಿಯಡ್‌ ಮತ್ತು ಒಡಿಸ್ಸಿ ಅನ್ನು ತೆಗೆದುಕೊಳ್ಳಿರಿ. ಆ ಎರಡು ಮಹಾಕಾವ್ಯಗಳ ಮೂಲಪಾಠವು ರೂಪುಗೊಂಡು, ನೆಲೆನಿಲ್ಲಲು ಸುಮಾರು ನೂರಕ್ಕಿಂತಲೂ ಹೆಚ್ಚಿನ ವರ್ಷಗಳು ತಗಲಿದವು ಎಂಬುದು ಕೆಲವರ ಅಭಿಪ್ರಾಯ. ಹಾಗಾದರೆ ಸುವಾರ್ತೆಗಳ ಬಗ್ಗೆ ಏನು?

ಕೈಸರನು ಮತ್ತು ಕ್ರಿಸ್ತನು (ಇಂಗ್ಲಿಷ್‌) ಎಂಬ ತನ್ನ ಪುಸ್ತಕದಲ್ಲಿ, ಇತಿಹಾಸಕಾರನಾದ ವಿಲ್‌ ಡೂರಾಂಟ್‌ ಬರೆಯುವುದು: “ಅಂಥ ಬಲಶಾಲಿಯಾದ ಮತ್ತು ಆಕರ್ಷಕ ವ್ಯಕ್ತಿತ್ವವನ್ನು, ನೈತಿಕತೆಯಲ್ಲಿ ಅಷ್ಟು ಉನ್ನತವಾದ ಮತ್ತು ಮಾನವ ಸಹೋದರತ್ವದ ಅಷ್ಟೊಂದು ಪ್ರೇರಕವಾದ ಒಂದು ನೋಟವನ್ನು . . . ಕೇವಲ ಕೆಲವೇ ಸರಳ ಮನುಷ್ಯರು ರಚಿಸುವುದು ತಾನೇ, ಸುವಾರ್ತೆಗಳಲ್ಲಿ ದಾಖಲೆಯಾದ ಯಾವುದೇ ಅದ್ಭುತಕ್ಕಿಂತ ಹೆಚ್ಚು ನಂಬಲಸಾಧ್ಯವಾದ ಒಂದು ಅದ್ಭುತವಾಗಬಹುದು. ಎರಡು ಶತಮಾನಗಳ ವರೆಗೆ ಬೈಬಲಿನ ಮೂಲಪಾಠವನ್ನು ವಿಮರ್ಶಿಸಿದ ಬಳಿಕವೂ, ಕ್ರಿಸ್ತನ ಜೀವನ, ನಡತೆ ಮತ್ತು ಬೋಧನೆಗಳು ನ್ಯಾಯಸಮ್ಮತವಾದ ರೀತಿಯಲ್ಲಿ ಸ್ಪಷ್ಟವಾಗಿ ಉಳಿದಿವೆ ಮತ್ತು ಪಾಶ್ಚಾತ್ಯ ಮನುಷ್ಯನ ಇತಿಹಾಸದಲ್ಲಿ ಅತ್ಯಾಕರ್ಷಕ ಅಂಶವನ್ನು ರೂಪಿಸಿವೆ.”

ಆದಿ ಕ್ರೈಸ್ತರ ಅಗತ್ಯಗಳಿಗನುಸಾರ ಸುವಾರ್ತೆಗಳು ನಂತರ ತಿದ್ದಲ್ಪಟ್ಟವೋ?

ಆದಿ ಕ್ರೈಸ್ತರ ಮಧ್ಯೆಯಿದ್ದ ರಾಜಕೀಯವು, ಯೇಸುವಿನ ಕಥೆಯಲ್ಲಿ ತಿದ್ದುಪಡಿಯನ್ನು ಮಾಡುವಂತೆ ಇಲ್ಲವೇ ಅದಕ್ಕೆ ಹೆಚ್ಚನ್ನು ಸೇರಿಸುವಂತೆ ಸುವಾರ್ತಾ ಲೇಖಕರನ್ನು ಪ್ರೋತ್ಸಾಹಿಸಿತು ಎಂದು ಕೆಲವು ವಿಮರ್ಶಕರು ವಾದಿಸುತ್ತಾರೆ. ಆದರೆ, ಸುವಾರ್ತೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವಾಗ, ಅಂತಹ ಯಾವುದೇ ಮೋಸವು ನಡೆದಿಲ್ಲ ಎಂಬುದು ತಿಳಿದುಬರುತ್ತದೆ. ಪ್ರಥಮ ಶತಮಾನದ ಕ್ರೈಸ್ತರ ಒಳಸಂಚಿನಿಂದ ಯೇಸುವಿನ ಕುರಿತಾದ ಸುವಾರ್ತಾ ವೃತ್ತಾಂತಗಳು ಬದಲಾಯಿಸಲ್ಪಟ್ಟಿದ್ದರೆ, ಬರಹದಲ್ಲಿ ಯೆಹೂದ್ಯರ ಹಾಗೂ ಅನ್ಯಜನಾಂಗದವರ ತಪ್ಪುಗಳು ಅದರಲ್ಲಿ ಈಗಲೂ ಏಕೆ ಕಂಡುಬರುತ್ತವೆ?

ಒಂದು ಉದಾಹರಣೆಯು ಮತ್ತಾಯ 6:5-7ರಲ್ಲಿ ಕಂಡುಬರುತ್ತದೆ. ಅಲ್ಲಿ ಯೇಸು ಹೀಗೆ ಹೇಳುತ್ತಾನೆ: “ನೀವು ಪ್ರಾರ್ಥನೆಮಾಡುವಾಗ ಕಪಟಿಗಳ ಹಾಗೆ ಮಾಡಬೇಡಿರಿ. ಜನರು ನೋಡಬೇಕೆಂದು ಅವರು ಸಭಾಮಂದಿರಗಳಲ್ಲಿಯೂ ಬೀದೀಚೌಕಗಳಲ್ಲಿಯೂ ನಿಂತುಕೊಂಡು ಪ್ರಾರ್ಥನೆಮಾಡುವದಕ್ಕೆ ಇಷ್ಟಪಡುತ್ತಾರೆ. ಅವರು ತಮಗೆ ಬರತಕ್ಕ ಫಲವನ್ನು ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.” ಯೆಹೂದಿ ಧಾರ್ಮಿಕ ಮುಖಂಡರನ್ನು ಅವನು ಖಂಡಿಸುತ್ತಿದ್ದನೆಂಬುದು ಇದರಿಂದ ಸ್ಪಷ್ಟವಾಗುತ್ತದೆ. ಯೇಸು ಮುಂದೆ ಹೇಳಿದ್ದು: “ಪ್ರಾರ್ಥನೆಮಾಡುವಾಗ ಅಜ್ಞಾನಿಗಳ ಹಾಗೆ ಹೇಳಿದ್ದನ್ನೇ ಸುಮ್ಮಸುಮ್ಮನೆ ಹೇಳಬೇಡ; ಅವರು [ಅನ್ಯಜನಾಂಗದವರು] ಬಹಳ ಮಾತುಗಳನ್ನಾಡಿದರೆ ತಮ್ಮ ಪ್ರಾರ್ಥನೆಯನ್ನು ದೇವರು ಕೇಳುತ್ತಾನೆಂದು ನೆನಸುತ್ತಾರೆ.” ಯೇಸುವನ್ನು ಈ ರೀತಿಯಲ್ಲಿ ಉದ್ಧರಿಸುವ ಮೂಲಕ, ಸುವಾರ್ತಾ ಲೇಖಕರು ಇನ್ನೂ ಹೆಚ್ಚಿನ ಜನರನ್ನು ತಮ್ಮ ಕಡೆಗೆ ಸೇರಿಸಿಕೊಳ್ಳಲು ಪ್ರಯತ್ನಿಸುತ್ತಿರಲಿಲ್ಲ. ಬದಲಾಗಿ ಅವರು ಯೇಸು ಕ್ರಿಸ್ತನ ಹೇಳಿಕೆಗಳನ್ನು ದಾಖಲಿಸುತ್ತಿದ್ದರು ಅಷ್ಟೇ.

ಯೇಸುವಿನ ಸಮಾಧಿಗೆ ಹೋಗಿ, ಅದು ಬರಿದಾಗಿರುವುದನ್ನು ಕಂಡ ಸ್ತ್ರೀಯರ ಕುರಿತಾಗಿ ಹೇಳುವ ಸುವಾರ್ತಾ ವೃತ್ತಾಂತವನ್ನು ತೆಗೆದುಕೊಳ್ಳಿರಿ. (ಮಾರ್ಕ 16:1-8) ಗ್ರೆಗ್‌ ಈಸ್ಟರ್‌ಬ್ರೂಕ್‌ ಅವರಿಗನುಸಾರ, “ಪುರಾತನ ಮಧ್ಯಪೂರ್ವದ ಸಮಾಜಗಳಲ್ಲಿ, ಸ್ತ್ರೀಯರ ಸಾಕ್ಷ್ಯವನ್ನು ಅವಿಶ್ವಸನೀಯವಾಗಿ ಪರಿಗಣಿಸಲಾಗುತ್ತಿತ್ತು; ಉದಾಹರಣೆಗೆ, ಇಬ್ಬರು ಪುರುಷ ಸಾಕ್ಷಿಗಳು ಒಬ್ಬ ಸ್ತ್ರೀಯ ಮೇಲೆ ವ್ಯಭಿಚಾರದ ಅಪವಾದವನ್ನು ಹೊರಿಸಸಾಧ್ಯವಿತ್ತು, ಆದರೆ ಅದೇ ಒಬ್ಬ ಸ್ತ್ರೀಯ ಸಾಕ್ಷ್ಯವು, ಪುರುಷನೊಬ್ಬನ ಮೇಲೆ ಅಪವಾದವನ್ನು ಹೊರಿಸಸಾಧ್ಯವಿರಲಿಲ್ಲ.” ಯೇಸುವಿನ ಸ್ವಂತ ಶಿಷ್ಯರು ಕೂಡ ಈ ಸ್ತ್ರೀಯರನ್ನು ನಂಬಲಿಲ್ಲ! (ಲೂಕ 24:11) ಹಾಗಿದ್ದಲ್ಲಿ, ಇದು ಬೇಕುಬೇಕೆಂದೇ ಹೆಣೆಯಲ್ಪಟ್ಟ ಕಥೆಯಾಗಿರಲು ಸಾಧ್ಯವೇ ಇಲ್ಲ.

ಪತ್ರಿಕೆಗಳಲ್ಲಿ ಮತ್ತು ಅಪೊಸ್ತಲರ ಕೃತ್ಯಗಳು ಪುಸ್ತಕದಲ್ಲಿ ಕಾಣಸಿಗದೇ ಇರುವಂತಹ ಸಾಮ್ಯಗಳು ಸುವಾರ್ತೆಗಳಲ್ಲಿ ಕಂಡುಬರುವುದರಿಂದ, ಅವುಗಳನ್ನು ಆದಿ ಕ್ರೈಸ್ತರು ಸೇರಿಸಲಿಲ್ಲ ಬದಲಾಗಿ ಸ್ವತಃ ಯೇಸುವೇ ಅವುಗಳನ್ನು ನುಡಿದನು ಎಂಬುದಕ್ಕೆ ಬಲವಾದ ಪ್ರಮಾಣವನ್ನು ನೀಡುತ್ತವೆ. ಅಷ್ಟುಮಾತ್ರವಲ್ಲ, ಸುವಾರ್ತೆಗಳನ್ನು ಪತ್ರಿಕೆಗಳೊಂದಿಗೆ ಜಾಗರೂಕವಾಗಿ ಹೋಲಿಸಿ ನೋಡುವಾಗ, ಪೌಲನು ಇಲ್ಲವೇ ಗ್ರೀಕ್‌ ಶಾಸ್ತ್ರಗಳ ಇತರ ಲೇಖಕರು ವಿಷಯಗಳನ್ನು ಬರೆದು, ಅನಂತರ ಇವು ಯೇಸುವೇ ಹೇಳಿದ ಮಾತುಗಳು ಎಂಬ ಪ್ರತಿಪಾದನೆಯನ್ನು ಮಾಡಲಿಲ್ಲ ಎಂಬುದು ತಿಳಿದುಬರುತ್ತದೆ. ಒಂದುವೇಳೆ, ಆದಿ ಕ್ರೈಸ್ತರು ಹೀಗೆ ಪ್ರತಿಪಾದಿಸಿದ್ದಲ್ಲಿ, ಪತ್ರಿಕೆಗಳಲ್ಲಿನ ಕೆಲವೊಂದು ವಿಷಯಗಳು ಸುವಾರ್ತಾ ವೃತ್ತಾಂತಗಳಲ್ಲಿ ಇದ್ದಿರಬೇಕಾಗಿತ್ತು. ಅಂತಹ ವಿಷಯಗಳು ಇಲ್ಲದಿರುವುದರಿಂದ, ಸುವಾರ್ತೆಯಲ್ಲಿ ಅಡಕವಾಗಿರುವ ವಿಷಯಗಳು ಮೂಲಪ್ರತಿಯಾಗಿದ್ದು, ವಿಶ್ವಾಸಾರ್ಹವಾದದ್ದಾಗಿವೆ ಎಂದು ಗಂಟಾಘೋಷವಾಗಿ ಹೇಳಸಾಧ್ಯವಿದೆ.

ಸುವಾರ್ತೆಗಳಲ್ಲಿ ವಿರೋಧೋಕ್ತಿಗಳಂತೆ ತೋರುವ ವಿಷಯಗಳ ಕುರಿತೇನು?

ಸುವಾರ್ತೆಗಳಲ್ಲಿ ವಿರೋಧೋಕ್ತಿಗಳೇ ತುಂಬಿವೆ ಎಂದು ಬಹಳ ಹಿಂದಿನಿಂದ ವಿಮರ್ಶಕರು ಹೇಳುತ್ತಾ ಬಂದಿದ್ದಾರೆ. ಇತಿಹಾಸಕಾರನಾದ ಡೂರಾಂಟ್‌, ಸುವಾರ್ತಾ ವೃತ್ತಾಂತವನ್ನು ಸಂಪೂರ್ಣವಾಗಿ ವಾಸ್ತವಿಕ ದೃಷ್ಟಿಕೋನದಿಂದ, ಅಂದರೆ ಐತಿಹಾಸಿಕ ದಾಖಲೆಗಳ ದೃಷ್ಟಿಕೋನದಿಂದ ಪರಿಶೀಲಿಸಿದನು. ಅವುಗಳಲ್ಲಿ ಕೆಲವು ಕಡೆ ವಿರೋಧೋಕ್ತಿಗಳಿವೆ ಎಂದು ಅವನು ಹೇಳುವುದಾದರೂ, ಅವನ ತೀರ್ಮಾನವು ಇದಾಗಿದೆ: “ವಿರೋಧೋಕ್ತಿಗಳು ಅಮುಖ್ಯವಾದವುಗಳು [ಕ್ಷುಲ್ಲಕ ವಿವರಗಳು] ಆಗಿದ್ದು, ತಿರುಳಿಲ್ಲದವುಗಳಾಗಿವೆ; ಆದರೆ ಮುಖ್ಯ ವಿಷಯಗಳಲ್ಲಿ ಸುವಾರ್ತಾ ಲೇಖಕರು ಸಹಮತದಿಂದಿದ್ದು, ಎಲ್ಲರೂ ಕ್ರಿಸ್ತನನ್ನು ಒಂದೇ ರೀತಿಯಲ್ಲಿ ವರ್ಣಿಸಿದ್ದಾರೆ.”

ಸುವಾರ್ತೆಗಳಲ್ಲಿ ಅಲ್ಲಿಲ್ಲಿ ಕಂಡುಬರುವ ವಿರೋಧೋಕ್ತಿಗಳು ಸುಲಭವಾಗಿ ಬಗೆಹರಿಸಲ್ಪಡುವಂತಹ ವಿಷಯಗಳಾಗಿವೆ. ಉದಾಹರಣೆಗೆ, ತನ್ನ ಆಳನ್ನು ವಾಸಿಮಾಡುವಂತೆ ಕೇಳಿಕೊಳ್ಳಲು ‘ದಂಡಿನ ಶತಾಧಿಪತಿಯು [ಯೇಸುವಿನ] ಬಳಿಗೆ ಬಂದನು’ ಎಂದು ಮತ್ತಾಯ 8:5 ಹೇಳುತ್ತದೆ. ಲೂಕ 7:3ರಲ್ಲಿ, ಶತಾಧಿಪತಿಯು “ನನ್ನ ಆಳನ್ನು ಸ್ವಸ್ಥಮಾಡಬೇಕೆಂದು [ಯೇಸುವನ್ನು] ಬೇಡಿಕೊಳ್ಳುವ ಹಾಗೆ ಯೆಹೂದ್ಯರ ಹಿರಿಯರನ್ನು ಕಳುಹಿಸಿದನು” ಎಂದು ನಾವು ಓದುತ್ತೇವೆ. ಇಲ್ಲಿ ಶತಾಧಿಪತಿಯು ತನ್ನ ಪ್ರತಿನಿಧಿಗಳೋಪಾದಿ ಹಿರಿಯರನ್ನು ಕಳುಹಿಸಿದನು. ತನ್ನ ಪರವಾಗಿ ಮಾತಾಡಿದ ಹಿರಿಯರ ಮುಖಾಂತರ ಅವನು ತನ್ನ ಭಿನ್ನಹವನ್ನು ವ್ಯಕ್ತಪಡಿಸಿದ್ದರಿಂದ ಈ ದಂಡಿನ ಶತಾಧಿಪತಿಯೇ ಯೇಸುವಿನ ಬಳಿಗೆ ಹೋದನು ಎಂದು ಮತ್ತಾಯನು ಹೇಳುತ್ತಾನೆ. ಸುವಾರ್ತೆಗಳಲ್ಲಿ ಕಂಡುಬರುವ ವ್ಯತ್ಯಾಸಗಳನ್ನು ಬಗೆಹರಿಸಸಾಧ್ಯವಿದೆ ಎಂಬುದಕ್ಕೆ ಇದು ಕೇವಲ ಒಂದು ಉದಾಹರಣೆಯಾಗಿದೆ.

ಸುವಾರ್ತೆಗಳು ನಿಜವಾದ ಇತಿಹಾಸದ ಮಟ್ಟಕ್ಕೆ ಬರುವುದಿಲ್ಲ ಅನ್ನುವ ಉನ್ನತ ವಿಮರ್ಶಕರ ಹೇಳಿಕೆಗಳ ವಿಷಯದಲ್ಲೇನು? ಡೂರಾಂಟ್‌ ಹೇಳುವುದು: “ಉನ್ನತ ಟೀಕೆಯಿಂದ ಕಂಡುಹಿಡಿದ ವಿಷಯಗಳ ಭರದಲ್ಲಿ ಹೊಸ ಒಡಂಬಡಿಕೆಯ ವಿಶ್ವಾಸಾರ್ಹತೆಯ ಮೇಲೆ ಪ್ರಯೋಗ ಮಾಡಲ್ಪಟ್ಟಿರುವ ಪರೀಕ್ಷೆಗಳು ಎಷ್ಟೊಂದು ಕಠಿನವಾಗಿವೆಯೆಂದರೆ, ಇವು ಹಳೆಯ ಕಾಲದ ನೂರಾರು ಗಣ್ಯ ವ್ಯಕ್ತಿಗಳನ್ನು—ಉದಾಹರಣೆಗೆ, ಹಮ್ಮುರಾಬಿ, ಡೇವಿಡ್‌, ಸಾಕ್ರೇಟಿಸ್‌ರನ್ನು—ಕಥಾಪಾತ್ರರನ್ನಾಗಿ ಮಾಡಿವೆ. ಸೌವಾರ್ತಿಕರ ಬಗ್ಗೆ ಪೂರ್ವಕಲ್ಪಿತ ಅಭಿಪ್ರಾಯವಿತ್ತು ಮತ್ತು ಇವರು ದೇವತಾಶಾಸ್ತ್ರಜ್ಞರು ಎಂಬ ಭಾವನೆಗಳಿತ್ತು. ಆದರೂ, ಕಥೆಕಟ್ಟುವವರು ಮುಚ್ಚಿಟ್ಟಿದ್ದಿರಸಾಧ್ಯವಿದ್ದ ಅನೇಕ ಘಟನೆಗಳನ್ನು, ಅಂದರೆ ರಾಜ್ಯದಲ್ಲಿ ಉಚ್ಚ ಸ್ಥಾನಗಳಿಗಾಗಿ ಅಪೊಸ್ತಲರ ಪ್ರತಿಸ್ಪರ್ಧೆ, ಯೇಸುವಿನ ಬಂಧನದ ಅನಂತರ ಅವರ ಪಲಾಯನ, ಪೇತ್ರನ ಅಲ್ಲಗಳೆಯುವಿಕೆ . . . ಮುಂತಾದ ವಿಷಯಗಳನ್ನು ಇವರು ದಾಖಲಿಸಿದ್ದಾರೆ. ಈ ವೃತ್ತಾಂತಗಳನ್ನು ಓದುವ ಯಾರೊಬ್ಬರೂ ಇದರ ಹಿಂದೆ ಇರುವ ಗಣ್ಯ ಪುರುಷನ ನಿಜತ್ವವನ್ನು ಸಂದೇಹಿಸಲಾರರು.”

ಸುವಾರ್ತೆಗಳಲ್ಲಿರುವ ಯೇಸುವನ್ನು ಆಧುನಿಕ ದಿನದ ಕ್ರೈಸ್ತತ್ವವು ಪ್ರತಿನಿಧಿಸುತ್ತದೋ?

ಸುವಾರ್ತೆಗಳ ಕುರಿತಾಗಿ ಮಾಡಲ್ಪಟ್ಟಿರುವ ಸಂಶೋಧನೆಯು “ಚರ್ಚಿನ ಧರ್ಮಸಭೆಗಳ ಆದೇಶದ ಮೇರೆಗೆ” ಮಾಡಲ್ಪಟ್ಟಿಲ್ಲ ಎಂದು ಜೀಸಸ್‌ ಸೆಮಿನಾರ್‌ ಘೋಷಿಸಿದೆ. ಆದರೆ, ಸುವಾರ್ತೆಗಳಲ್ಲಿ ತಿಳಿಸಲ್ಪಟ್ಟಿರುವ ಯೇಸುವಿನ ಬೋಧನೆಗಳಿಗೂ ಕ್ರೈಸ್ತಪ್ರಪಂಚದಲ್ಲಿರುವ ಬೋಧನೆಗಳಿಗೂ ಅಜಗಜಾಂತರವಿದೆ ಎಂದು ಇತಿಹಾಸಕಾರನಾದ ವೆಲ್ಸ್‌ ಗ್ರಹಿಸಿದನು. ಅವನು ಬರೆದುದು: “ಯೇಸುವಿನ ಅಪೊಸ್ತಲರು ತ್ರಯೈಕ್ಯದ ಬಗ್ಗೆ ಕೇಳಿಸಿಕೊಂಡ ಅಥವಾ ಖುದ್ದಾಗಿ ಯೇಸುವಿನಿಂದಲೇ ಕೇಳಿಸಿಕೊಂಡ ವಿಷಯಗಳಿಗೆ ಯಾವುದೇ ಪುರಾವೆಯಿಲ್ಲ. . . . ಇಲ್ಲವೇ [ಯೇಸು] ಐಸಿಸ್‌ನ ರೂಪದಲ್ಲಿರುವ ಸ್ವರ್ಗದ ರಾಣಿಯ ಅಂದರೆ, ತನ್ನ ತಾಯಿಯಾದ ಮರಿಯಳ ಆರಾಧನೆಯ ಬಗ್ಗೆ ಒಂದು ಮಾತನ್ನೂ ಆಡಲಿಲ್ಲ. ಕ್ರೈಸ್ತಪ್ರಪಂಚದಲ್ಲಿ ಆರಾಧಿಸಲ್ಪಡುವ ಮತ್ತು ಬಳಕೆಯಲ್ಲಿರುವ ಬೋಧನೆಗಳ ಚಕಾರವನ್ನೇ ಅವನು ಎತ್ತಲಿಲ್ಲ.” ಆದುದರಿಂದ, ವ್ಯಕ್ತಿಯೊಬ್ಬನು ಕ್ರೈಸ್ತಪ್ರಪಂಚದ ಬೋಧನೆಗಳ ಮೇಲಾಧಾರಿಸಿ ಸುವಾರ್ತೆಗಳ ಮೌಲ್ಯವನ್ನು ನಿರ್ಣಯಿಸಸಾಧ್ಯವಿಲ್ಲ.

ನಿಮ್ಮ ಅಭಿಪ್ರಾಯವೇನು?

ಈ ಮೇಲ್ಕಂಡ ನಿಜಾಂಶಗಳನ್ನು ಪರಿಗಣಿಸಿದ ಬಳಿಕ, ನೀವೇನು ನೆನಸುತ್ತೀರಿ? ಸುವಾರ್ತೆಗಳು ಬರಿಯ ಪುರಾಣ ಕಥೆಗಳಾಗಿವೆ ಎಂದು ತೋರಿಸಲು ಯಾವುದಾದರೂ ನಿಜವಾದ, ಮನಗಾಣಿಸುವ ರುಜುವಾತಿದೆಯೋ? ಸುವಾರ್ತೆಗಳ ವಿಶ್ವಾಸಾರ್ಹತೆಯ ಕುರಿತಾಗಿ ಎಬ್ಬಿಸಲ್ಪಡುವ ಪ್ರಶ್ನೆಗಳು ಹಾಗೂ ಸಂದೇಹಗಳು, ನಂಬಲಸಾಧ್ಯ ಹಾಗೂ ಮನಗಾಣಿಸಲಸಾಧ್ಯವಾದ ವಿಷಯಗಳಾಗಿವೆ ಎಂಬುದು ಅನೇಕರ ಅಭಿಪ್ರಾಯವಾಗಿದೆ. ಆದರೆ ನಿಮ್ಮ ಅಭಿಪ್ರಾಯವೇನಾಗಿದೆ ಎಂಬುದನ್ನು ತಿಳಿದುಕೊಳ್ಳಲು, ನೀವು ಸುವಾರ್ತೆಗಳನ್ನು ನಿಷ್ಪಕ್ಷಪಾತವಾಗಿ ಓದಬೇಕಾಗಿದೆ. (ಅ. ಕೃತ್ಯಗಳು 17:11) ಯೇಸುವಿನ ವ್ಯಕ್ತಿತ್ವವನ್ನು ಸುಸಂಗತವಾಗಿ, ಪ್ರಾಮಾಣಿಕವಾಗಿ ಹಾಗೂ ನಿಷ್ಕೃಷ್ಟವಾಗಿ ಪ್ರಸ್ತುತಪಡಿಸುವ ಸುವಾರ್ತೆಗಳನ್ನು ನೀವು ಓದುವಾಗ, ಇವುಗಳು ಖಂಡಿತವಾಗಿಯೂ ದಂತಕಥೆಗಳ ಒಂದು ಸಂಗ್ರಹವಾಗಿಲ್ಲ ಎಂಬುದನ್ನು ನೀವು ಕಂಡುಕೊಳ್ಳುವಿರಿ. *

ನೀವು ಬೈಬಲನ್ನು ಜಾಗರೂಕತೆಯಿಂದ ಪರೀಕ್ಷಿಸಿ, ಅದರ ಸಲಹೆಯನ್ನು ಅನ್ವಯಿಸುವಲ್ಲಿ, ಇದು ನಿಮ್ಮ ಜೀವಿತವನ್ನು ಎಷ್ಟರ ಮಟ್ಟಿಗೆ ಉತ್ತಮಗೊಳಿಸಬಲ್ಲದು ಎಂಬುದನ್ನು ನೀವು ನೋಡುವಿರಿ. (ಯೋಹಾನ 6:68) ಮತ್ತು ಸುವಾರ್ತೆಗಳಲ್ಲಿ ದಾಖಲಿಸಲ್ಪಟ್ಟಿರುವ ಯೇಸುವಿನ ನುಡಿಗಳನ್ನು ಅನ್ವಯಿಸುವುದರಿಂದಲೂ ನಿಮ್ಮ ಜೀವಿತವು ಉತ್ತಮಗೊಳ್ಳುವುದು ಎಂಬುದರಲ್ಲಿ ಸಂದೇಹವೇ ಇಲ್ಲ. ಇನ್ನೂ ಹೆಚ್ಚಾಗಿ, ವಿಧೇಯ ಮಾನವಕುಲದ ಮುಂದಿರುವ ಉಜ್ವಲವಾದ ಭವಿಷ್ಯತ್ತಿನ ಕುರಿತು ಸಹ ನೀವು ತಿಳಿದುಕೊಳ್ಳಸಾಧ್ಯವಿದೆ.—ಯೋಹಾನ 3:16; 17:3, 17.

[ಪಾದಟಿಪ್ಪಣಿ]

^ ಪ್ಯಾರ. 29 ಬೈಬಲ್‌—ದೇವರ ವಾಕ್ಯವೊ ಮನುಷ್ಯನದ್ದೊ? (ಇಂಗ್ಲಿಷ್‌) ಪುಸ್ತಕದ 5ರಿಂದ 7ನೆಯ ಅಧ್ಯಾಯಗಳನ್ನು ಮತ್ತು ಸಕಲ ಜನರಿಗಾಗಿರುವ ಒಂದು ಗ್ರಂಥ ಎಂಬ ಬ್ರೋಷರನ್ನು ಓದಿರಿ. ಇವೆರಡೂ ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಿವೆ.

[ಪುಟ 7ರಲ್ಲಿರುವ ಚೌಕ]

ವಿಶ್ವಾಸಾರ್ಹ ವರದಿಯ ಪುರಾವೆ

ಆಸ್ಟ್ರೇಲಿಯ ದೇಶದ ಹಸ್ತಪ್ರತಿಯನ್ನು ಬರೆಯುವವನು ಮತ್ತು ಬೈಬಲಿನ ಮಾಜಿ ವಿಮರ್ಶಕನಾದ ಒಬ್ಬ ವ್ಯಕ್ತಿಯು ಕೆಲವು ವರ್ಷಗಳ ಹಿಂದೆ ಹೀಗೆ ತಪ್ಪೊಪ್ಪಿಕೊಂಡನು: “ನನ್ನ ಜೀವಿತದಲ್ಲೇ ನಾನು ಪ್ರಥಮ ಬಾರಿ, ಒಬ್ಬ ವರದಿಗಾರನು ಮೊದಲು ಏನು ಮಾಡಬೇಕೋ ಅದನ್ನು ಮಾಡಿದೆ. ಅದೇನೆಂದರೆ, ವಾಸ್ತವಾಂಶಗಳನ್ನು ನಾನು ಪರಿಶೀಲಿಸಿದೆ. . . . ಆಗ [ಸುವಾರ್ತಾ ವೃತ್ತಾಂತಗಳಲ್ಲಿ] ನಾನು ಓದುತ್ತಿದ್ದ ವಿಷಯಗಳು ದಂತಕಥೆಗಳಲ್ಲ ಮತ್ತು ಕಲ್ಪನಾಕಥೆಗಳ ಯಥಾಚಿತ್ರಣವಲ್ಲ ಎಂಬುದನ್ನು ಕಂಡುಕೊಂಡಾಗ, ನಿಬ್ಬೆರಗಾದೆ. ಅದು ಅಸಾಧಾರಣವಾದ ಘಟನೆಗಳ ಪ್ರತ್ಯಕ್ಷ ಹಾಗೂ ಪರೋಕ್ಷ ವೃತ್ತಾಂತಗಳ ವರದಿಯನ್ನು ನೀಡುವಂತ್ತಿತ್ತು. . . . ಮತ್ತು ವರದಿಗೆ ತನ್ನದೇ ಆದ ಶೈಲಿಯಿದೆ ಮತ್ತು ಅಂತಹ ಶೈಲಿಯನ್ನು ಸುವಾರ್ತೆಗಳಲ್ಲಿ ಕಂಡುಕೊಳ್ಳಸಾಧ್ಯವಿದೆ.”

ಅದೇ ರೀತಿಯಲ್ಲಿ, ಆಕ್‌ಲ್ಯಾಂಡ್‌ ವಿಶ್ವವಿದ್ಯಾನಿಲಯದಲ್ಲಿ ಪುರಾತನ ಗ್ರೀಕ್‌ ಹಾಗೂ ರೋಮನ್‌ ಸಾಹಿತ್ಯಗಳ ಪ್ರೊಫೆಸರರಾಗಿರುವ ಈ. ಎಮ್‌. ಬ್ಲೇಕ್ಲಾಕ್‌ ವಾದಿಸಿದ್ದು: “ನಾನೊಬ್ಬ ಇತಿಹಾಸಕಾರನಾಗಿದ್ದೇನಾದ್ದರಿಂದ, ಸಾಹಿತ್ಯಗಳನ್ನು ಐತಿಹಾಸಿಕ ದೃಷ್ಟಿಕೋನದಿಂದ ನೋಡುತ್ತೇನೆ. ಕ್ರಿಸ್ತನ ಜೀವನ, ಮರಣ ಹಾಗೂ ಪುನರುತ್ಥಾನದ ಕುರಿತಾದ ಪುರಾವೆಯು, ಪುರಾತನ ಇತಿಹಾಸದಲ್ಲಿ ಸಿಗುವ ಅನೇಕ ವಾಸ್ತವಾಂಶಕ್ಕಿಂತಲೂ ಎಷ್ಟೋ ಹೆಚ್ಚು ವಿಶ್ವಾಸಾರ್ಹವಾದದ್ದಾಗಿದೆ ಎಂಬ ಖಾತ್ರಿಯನ್ನು ನಾನು ನೀಡಬಲ್ಲೆ.”

[ಪುಟ 8, 9ರಲ್ಲಿರುವ ಭೂಪಟ/ಚಿತ್ರಗಳು]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಫೊಯಿನೀಕೆ

ಗಲಿಲಾಯ

ಯೋರ್ದನ್‌ ನದಿ

ಯೂದಾಯ

[ಚಿತ್ರಗಳು]

“ಕ್ರಿಸ್ತನ ಜೀವನ, ಮರಣ ಹಾಗೂ ಪುನರುತ್ಥಾನದ ಕುರಿತಾದ ಪುರಾವೆಯು, ಪುರಾತನ ಇತಿಹಾಸದಲ್ಲಿ ಸಿಗುವ ಅನೇಕ ವಾಸ್ತವಾಂಶಕ್ಕಿಂತಲೂ ಎಷ್ಟೋ ಹೆಚ್ಚು ವಿಶ್ವಾಸಾರ್ಹವಾದದ್ದಾಗಿದೆ.”—ಪ್ರೊಫೆಸರ್‌ ಈ. ಎಮ್‌. ಬ್ಲೇಕ್ಲಾಕ್‌

[ಕೃಪೆ]

ಹಿನ್ನೆಲೆ ಭೂಪಟಗಳು: Based on a map copyrighted by Pictorial Archive (Near Eastern History) Est. and Survey of Israel.