ಸುವಾರ್ತೆಗಳು—ಕೊನೆಯಿಲ್ಲದ ವಾಗ್ವಾದ
ಸುವಾರ್ತೆಗಳು—ಕೊನೆಯಿಲ್ಲದ ವಾಗ್ವಾದ
ಯೇಸು ಕ್ರಿಸ್ತನ ಜನನದ ಕುರಿತಾದ ಸುವಾರ್ತಾ ವೃತ್ತಾಂತಗಳು ಸತ್ಯವಾಗಿವೆಯೋ?
ಅವನು ಪರ್ವತ ಪ್ರಸಂಗವನ್ನು ಕೊಟ್ಟನೋ?
ಯೇಸು ನಿಜವಾಗಿಯೂ ಪುನರುತ್ಥಾನಹೊಂದಿದನೋ?
“ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ” ಎಂದು ಅವನು ನಿಜವಾಗಿಯೂ ಹೇಳಿದನೋ?—ಯೋಹಾನ 14:6.
ಸುಮಾರು 80 ಮಂದಿ ವಿದ್ವಾಂಸರು ಈ ರೀತಿಯ ವಿಷಯಗಳನ್ನು ಜೀಸಸ್ ಸೆಮಿನಾರ್‌ನಲ್ಲಿ ಚರ್ಚಿಸುತ್ತಾರೆ. ಈ ಚರ್ಚಾಕೂಟವು ಇಸವಿ 1985ರಂದಿನಿಂದ ವರ್ಷಕ್ಕೆ ಎರಡು ಬಾರಿ ನಡೆಯುತ್ತಾ ಬಂದಿದೆ. ವಿದ್ವಾಂಸರ ಈ ಗುಂಪು ಇಂತಹ ಪ್ರಶ್ನೆಗಳಿಗೆ ವಿಚಿತ್ರವಾದ ರೀತಿಯಲ್ಲಿ ಉತ್ತರಗಳನ್ನು ನೀಡಿದೆ. ಸುವಾರ್ತೆಗಳಲ್ಲಿ ಕಂಡುಬರುವ ಯೇಸುವಿನ ಪ್ರತಿಯೊಂದು ಹೇಳಿಕೆಯ ಮೇಲೆ ಈ ಸೆಮೀನಾರ್‌ನಲ್ಲಿ ಭಾಗವಹಿಸಿದವರು ಓಟನ್ನು ಹಾಕಿದ್ದಾರೆ. ಕೆಂಪು ಬಣ್ಣದ ಓಟು, ಸ್ವತಃ ಯೇಸುವೇ ಈ ಹೇಳಿಕೆಯನ್ನು ಮಾಡಿದನು ಎಂಬ ಅಭಿಪ್ರಾಯವನ್ನು
ಸೂಚಿಸುತ್ತದೆ. ಗುಲಾಬಿ ಬಣ್ಣದ ಓಟು, ಯೇಸು ಏನನ್ನು ಹೇಳಿರಬಹುದೋ ಅದನ್ನು ಹೋಲುತ್ತದೆ ಎಂಬುದನ್ನು ತಿಳಿಸುತ್ತದೆ. ಬೂದು ಬಣ್ಣದ ಓಟು, ಯೇಸುವಿನ ವಿಚಾರಗಳಿಗೆ ಆ ಹೇಳಿಕೆಯು ಸ್ವಲ್ಪ ಹೋಲುವಂತಿದ್ದರೂ, ಅದನ್ನು ಯೇಸು ನುಡಿಯಲಿಲ್ಲ ಎಂಬುದನ್ನು ತೋರಿಸುತ್ತದೆ. ಕಪ್ಪು ಬಣ್ಣದ ಓಟು ಸಂಪೂರ್ಣವಾಗಿ ನಕಾರಾತ್ಮಕವಾಗಿದ್ದು, ಆ ಹೇಳಿಕೆಯು ತದನಂತರದ ಸಂಪ್ರದಾಯದಿಂದ ಬಂದದ್ದಾಗಿದೆ ಎಂಬುದನ್ನು ಸೂಚಿಸುತ್ತದೆ.ಜೀಸಸ್ ಸೆಮೀನಾರ್‌ನಲ್ಲಿ ಭಾಗವಹಿಸಿದವರು ಈ ವಿಧಾನವನ್ನು ಅನುಸರಿಸುತ್ತಾ, ಈ ಲೇಖನದ ಆರಂಭದಲ್ಲಿ ಪ್ರಶ್ನೆಗಳ ರೂಪದಲ್ಲಿ ಎಬ್ಬಿಸಲ್ಪಟ್ಟ ನಾಲ್ಕೂ ಸುವಾರ್ತೆಯ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ಇವರು ಸುವಾರ್ತೆಗಳಲ್ಲಿ ದಾಖಲಿಸಲ್ಪಟ್ಟಿರುವ ಯೇಸುವಿನ ಮಾತುಗಳಲ್ಲಿ ಸುಮಾರು 82 ಪ್ರತಿಶತಕ್ಕೆ ಕಪ್ಪು ಬಣ್ಣದ ಓಟನ್ನು ಹಾಕಿದ್ದಾರೆ. ಅವರಿಗನುಸಾರ, ಸುವಾರ್ತೆಗಳಲ್ಲಿ ಮತ್ತು ಇತರ ಬರಹಗಳಲ್ಲಿ ಯೇಸುವಿನ ಬಗ್ಗೆ ವಿವರಿಸಿರುವ ಘಟನೆಗಳಲ್ಲಿ, 16 ಪ್ರತಿಶತದಷ್ಟು ಘಟನೆಗಳು ಮಾತ್ರ ವಿಶ್ವಾಸಾರ್ಹವಾಗಿ ಕಂಡುಬರುತ್ತವೆ.
ಸುವಾರ್ತೆಗಳ ಇಂತಹ ಟೀಕಾವಿಮರ್ಶೆಯೇನೂ ಹೊಸತಲ್ಲ. ಸುಮಾರು 1774ರಲ್ಲೇ ಸುವಾರ್ತೆಗಳ ವೃತ್ತಾಂತಗಳ ಮೇಲೆ ಸವಾಲನ್ನು ಒಡ್ಡಲಾಗಿತ್ತು. ಆಗ, ಜರ್ಮನಿಯ ಹ್ಯಾಂಬರ್ಗ್‌ನಲ್ಲಿದ್ದ ಪ್ರಾಚ್ಯ ಭಾಷಾ ಪ್ರೊಫೆಸರರಾದ ಹರ್ಮಾನ್ ರೀಮಾರಸ್ ಎಂಬುವವರ 1,400 ಪುಟದ ಹಸ್ತಪ್ರತಿಯನ್ನು ಅವರ ಮರಣಾನಂತರ ಪ್ರಕಾಶಿಸಲಾಯಿತು. ಆ ಹಸ್ತಪ್ರತಿಯಲ್ಲಿ, ಸುವಾರ್ತೆಗಳ ಐತಿಹಾಸಿಕತೆಯ ಕುರಿತಾದ ಸಂದೇಹಗಳಿಗೆ ರೀಮಾರಸ್ ಇಂಬುಕೊಟ್ಟರು. ಅವರ ನಿರ್ಣಯಗಳು, ಭಾಷಾ ಸಂಬಂಧಿತ ವಿಶ್ಲೇಷಣೆಗಳ ಮೇಲೆ ಮತ್ತು ಯೇಸುವಿನ ಜೀವಿತದ ಬಗ್ಗೆ ನಾಲ್ಕು ಸುವಾರ್ತಾ ವೃತ್ತಾಂತಗಳಲ್ಲಿ ಕಂಡುಬರುವ ವಿರೋಧೋಕ್ತಿಗಳ ಮೇಲೆ ಆಧಾರವಾಗಿದ್ದವು. ಅಂದಿನಿಂದ ವಿಮರ್ಶಕರು ಸುವಾರ್ತೆಗಳ ವಿಶ್ವಾಸಾರ್ಹತೆಯ ಕುರಿತು ಆಗಾಗ್ಗೆ ಸಂದೇಹಗಳನ್ನು ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಹೀಗೆ, ಈ ಬರಹಗಳಲ್ಲಿ ಜನರಿಗಿರುವ ಭರವಸೆಯನ್ನು ಇವರು ದುರ್ಬಲಗೊಳಿಸಿದ್ದಾರೆ.
ಸುವಾರ್ತಾ ವೃತ್ತಾಂತಗಳು, ಬೇರೆ ಬೇರೆ ವ್ಯಕ್ತಿಗಳಿಂದ ದಾಟಿಸಲ್ಪಟ್ಟ ಧಾರ್ಮಿಕ ಕಟ್ಟುಕಥೆಗಳು ಎಂಬುದು ಈ ಎಲ್ಲ ವಿದ್ವಾಂಸರ ಒಮ್ಮತವಾಗಿದೆ. ಸಂದೇಹವನ್ನು ವ್ಯಕ್ತಪಡಿಸುವ ವಿದ್ವಾಂಸರಿಂದ ಎಬ್ಬಿಸಲ್ಪಡುವ ಸಾಮಾನ್ಯವಾದ ಪ್ರಶ್ನೆಗಳು ಹೀಗಿವೆ: ಸುವಾರ್ತೆಯ ನಾಲ್ಕು ಬರಹಗಾರರ ನಂಬಿಕೆಗಳು ವಾಸ್ತವಾಂಶಕ್ಕೆ ಬಣ್ಣಕಟ್ಟಿ ಹೇಳುವಂತೆ ಅವರನ್ನು ಪ್ರಚೋದಿಸಿದವೋ? ಯೇಸುವಿನ ಕಥೆಗೆ ತಿದ್ದುಪಡಿಯನ್ನು ಮಾಡಲು ಅಥವಾ ಅದಕ್ಕೆ ಹೆಚ್ಚನ್ನು ಕೂಡಿಸಲು ಆದಿ ಕ್ರೈಸ್ತರ ಮಧ್ಯೆಯಿದ್ದ ರಾಜಕೀಯವು ಒತ್ತಾಸೆ ಕೊಟ್ಟಿತೋ? ಸುವಾರ್ತೆಗಳ ಪುಸ್ತಕಗಳಲ್ಲಿ ಯಾವ ಭಾಗಗಳು ಪೌರಾಣಿಕವಾಗಿರದೆ ನಿಜವಾದವುಗಳಾಗಿರುವಂತಹ ಸಾಧ್ಯತೆಯಿದೆ?
ನಾಸ್ತಿಕತೆ ಅಥವಾ ಜಾತ್ಯಾತೀತ ಸಮಾಜದಿಂದ ಬಂದಿರುವ ಜನರು, ಸುವಾರ್ತೆಗಳನ್ನೂ ಸೇರಿಸಿ ಬೈಬಲನ್ನು ದಂತಕಥೆಗಳು ಹಾಗೂ ಪೌರಾಣಿಕ ಕಥೆಗಳ ಒಂದು ಪುಸ್ತಕ ಎಂದು ನಂಬುತ್ತಾರೆ. ಇನ್ನಿತರರು ಕ್ರೈಸ್ತಪ್ರಪಂಚದಲ್ಲಿ ನಡೆದಿರುವ ರಕ್ತಪಾತ, ದಬ್ಬಾಳಿಕೆ, ವೈಮನಸ್ಯ ಹಾಗೂ ದುಷ್ಟ ನಡವಳಿಕೆಯನ್ನು ನೋಡಿ ಬೇಸತ್ತಿದ್ದಾರೆ. ಇಂತಹ ಜನರು ಕ್ರೈಸ್ತಪ್ರಪಂಚದಲ್ಲಿ ಪವಿತ್ರವೆಂದೆಣಿಸಲ್ಪಡುವ ಬರಹಗಳಿಗೆ ಯಾವುದೇ ರೀತಿಯ ಗಮನವನ್ನು ನೀಡಲು ಇಷ್ಟಪಡುವುದಿಲ್ಲ. ಒಂದು ಕಪಟ ಧರ್ಮವನ್ನು ಉಂಟುಮಾಡಿರುವ ಕ್ರಿಯೆಗಳು ಖಂಡಿತವಾಗಿಯೂ ಪ್ರಯೋಜನಕ್ಕೆ ಬಾರದ ಕಟ್ಟುಕಥೆಗಳಲ್ಲದೇ ಬೇರೇನೂ ಅಲ್ಲ ಎಂಬುದು ಇವರ ಅಭಿಪ್ರಾಯ.
ಆದರೆ ನಿಮ್ಮ ಅಭಿಪ್ರಾಯವೇನು? ಸುವಾರ್ತೆಯ ಐತಿಹಾಸಿಕತೆಗೆ ಸವಾಲೆಸೆಯುವ ಕೆಲವು ವಿದ್ವಾಂಸರು ನಿಮ್ಮ ಮನಸ್ಸಿನಲ್ಲಿಯೂ ಇದೇ ರೀತಿಯ ಸಂದೇಹಗಳನ್ನು ಬಿತ್ತುವಂತೆ ನೀವು ಅನುಮತಿಸಬೇಕೋ? ಸುವಾರ್ತಾ ಬರಹಗಾರರು ಕಲ್ಪನಾ ಕಥೆಗಳನ್ನು ಬರೆದಿದ್ದಾರೆ ಎಂಬುದನ್ನು ನಿಮಗೆ ಯಾರಾದರೂ ಹೇಳಿದರೆ, ಈ ಬರಹಗಳಲ್ಲಿ ನಿಮಗಿರುವ ಭರವಸೆಯು ಕುಂದಿಹೋಗುವಂತೆ ನೀವು ಬಿಡಬೇಕೋ? ಕ್ರೈಸ್ತಪ್ರಪಂಚದಲ್ಲಿ ನಡೆಯುವ ದುಷ್ಕೃತ್ಯಗಳು ಸುವಾರ್ತೆಯ ಭರವಸಾರ್ಹತೆಯ ಮೇಲೆ ನೀವು ಸಂದೇಹವನ್ನು ವ್ಯಕ್ತಪಡಿಸುವಂತೆ ಮಾಡಬೇಕೋ? ಕೆಲವೊಂದು ವಾಸ್ತವಾಂಶಗಳನ್ನು ಪರೀಕ್ಷಿಸಿ ನೋಡುವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ.
[ಪುಟ 4ರಲ್ಲಿರುವ ಚಿತ್ರ]
ಸುವಾರ್ತೆಗಳು ಕಟ್ಟುಕಥೆಗಳೋ ಇಲ್ಲವೇ ವಾಸ್ತವಾಂಶಗಳೋ?
[ಕೃಪೆ]
ಸಮುದ್ರದ ಮೇಲೆ ನಡೆಯುತ್ತಿರುವ ಯೇಸು/The Doré Bible Illustrations/Dover Publications
[ಪುಟ 3ರಲ್ಲಿರುವ ಚಿತ್ರ ಕೃಪೆ]
ಹಿನ್ನೆಲೆ, ಪುಟಗಳು 3-5 ಮತ್ತು 8: Courtesy of the Freer Gallery of Art, Smithsonian Institution, Washington, D.C.