ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರೀತಿಸ್ವರೂಪನಾದ ದೇವರನ್ನು ತಿಳಿದುಕೊಳ್ಳುವುದು

ಪ್ರೀತಿಸ್ವರೂಪನಾದ ದೇವರನ್ನು ತಿಳಿದುಕೊಳ್ಳುವುದು

ರಾಜ್ಯ ಘೋಷಕರು ವರದಿ ಮಾಡುತ್ತಾರೆ

ಪ್ರೀತಿಸ್ವರೂಪನಾದ ದೇವರನ್ನು ತಿಳಿದುಕೊಳ್ಳುವುದು

ಬ್ರಸಿಲ್‌ ದೇಶದ ಆ್ಯಂಟೊನಿಯೊ ಎಂಬ ಹೆಸರಿನ ಯುವಕನು ತನ್ನ 16ನೆಯ ವಯಸ್ಸಿನಲ್ಲೇ ಜೀವನದಲ್ಲಿ ಜಿಗುಪ್ಸೆಗೊಂಡನು. ತಾನು ಯಾವ ಕೆಲಸಕ್ಕೂ ಬಾರದವನೆಂಬ ಭಾವನೆಗಳು, ಅಮಲೌಷಧದ ದುರುಪಯೋಗ ಮತ್ತು ಮದ್ಯಪಾನೀಯಗಳ ಅತಿರೇಕ ಸೇವನೆಗೆ ಅವನನ್ನು ನಡೆಸಿದವು. ಅವನು ಆಗಾಗ ಆತ್ಮಹತ್ಯೆಯ ಕುರಿತೂ ಯೋಚಿಸುತ್ತಿದ್ದನು. ಇದೇ ಸಮಯದಲ್ಲಿ, “ದೇವರು ಪ್ರೀತಿಸ್ವರೂಪಿಯು” ಎಂದು ತನ್ನ ತಾಯಿಯು ಹೇಳಿದ ಮಾತುಗಳು ಅವನ ನೆನಪಿಗೆ ಬಂದವು. (1 ಯೋಹಾನ 4:8) ಆದರೆ ಈ ಪ್ರೀತಿಸ್ವರೂಪನಾದ ದೇವರು ಎಲ್ಲಿದ್ದಾನೆ?

ಅಮಲೌಷಧ ಮತ್ತು ಮದ್ಯಸೇವನೆಯ ದುಶ್ಚಟದಿಂದ ಚೇತರಿಸಿಕೊಳ್ಳುವ ಪ್ರಯತ್ನದಲ್ಲಿ, ಆ್ಯಂಟೊನಿಯೊ ಸ್ಥಳೀಯ ಚರ್ಚಿನ ಪಾದ್ರಿಯ ಸಹಾಯವನ್ನು ಪಡೆದುಕೊಳ್ಳಲು ಅವರಲ್ಲಿಗೆ ಹೋದನು. ಆ್ಯಂಟೊನಿಯೊ ಕ್ಯಾಥೊಲಿಕ್‌ ಚರ್ಚಿನಲ್ಲಿ ಬಹಳ ಸಕ್ರಿಯನಾಗಿದ್ದರೂ ಅವನಲ್ಲಿ ಇನ್ನೂ ಅನೇಕ ಪ್ರಶ್ನೆಗಳಿದ್ದವು. ದೃಷ್ಟಾಂತಕ್ಕಾಗಿ, ನೀವು “ಸತ್ಯವನ್ನು ತಿಳಿದುಕೊಳ್ಳುವಿರಿ ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು” ಎಂಬ ಯೇಸುವಿನ ಮಾತುಗಳು ಅವನಲ್ಲಿ ಮಾನಸಿಕ ಗೊಂದಲವನ್ನು ಉಂಟುಮಾಡಿದ್ದವು. (ಯೋಹಾನ 8:32) ಯೇಸು ಯಾವ ರೀತಿಯ ಸ್ವಾತಂತ್ರ್ಯದ ಭರವಸೆಯನ್ನು ಕೊಟ್ಟನು? ಅವನಲ್ಲಿದ್ದ ಇಂತಹ ಅನೇಕ ಪ್ರಶ್ನೆಗಳಿಗೆ ಯಾವುದೇ ತೃಪ್ತಿದಾಯಕವಾದ ಉತ್ತರಗಳನ್ನು ಒದಗಿಸಲು ಚರ್ಚಿನ ಪಾದ್ರಿಗೆ ಸಾಧ್ಯವಾಗಲಿಲ್ಲ. ಕ್ರಮೇಣವಾಗಿ, ಆ್ಯಂಟೊನಿಯೊ ಚರ್ಚಿನಿಂದ ದೂರ ಸರಿದನು ಮತ್ತು ತನ್ನ ಹಳೆಯ ದುಶ್ಚಟಗಳಿಗೆ ಹಿಂದಿರುಗಿದನು. ನಿಜ ಹೇಳಬೇಕೆಂದರೆ, ಅವನ ದುಶ್ಚಟಗಳು ಅತಿರೇಕ ಮಟ್ಟಕ್ಕೇರಿದವು.

ಇದೇ ಸಮಯದಲ್ಲಿ, ಆ್ಯಂಟೊನಿಯೊವಿನ ಪತ್ನಿ ಮಾರೀಯ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸಲು ಆರಂಭಿಸಿದಳು. ಆ್ಯಂಟೊನಿಯೊ ಅವಳ ಅಭ್ಯಾಸವನ್ನು ವಿರೋಧಿಸಲಿಲ್ಲ. ಆದರೆ, ಸಾಕ್ಷಿಗಳು “ಅಮೆರಿಕನ್‌ ಸಾಮ್ರಾಜ್ಯಶಾಹಿ ಸರಕಾರದ ಅಭಿರುಚಿಗಳನ್ನು ಪ್ರವರ್ಧಿಸುವ ಒಂದು ಅಮೆರಿಕನ್‌ ಧರ್ಮದವರಾಗಿದ್ದಾರೆ” ಎಂದು ಹೇಳುತ್ತಾ ಅವರಿಂದ ಆ್ಯಂಟೊನಿಯೊ ದೂರ ಉಳಿದುಬಿಟ್ಟನು.

ಇದರಿಂದ ಮಾರೀಯ ಎದೆಗುಂದಲಿಲ್ಲ. ಆ್ಯಂಟೆನಿಯೊ ಇಷ್ಟಪಡಬಹುದೆಂದು ಆಕೆ ನೆನಸಿದ ವಾಚ್‌ಟವರ್‌ ಮತ್ತು ಅವೇಕ್‌! ಪತ್ರಿಕೆಗಳಲ್ಲಿರುವ ಕೆಲವು ಲೇಖನಗಳನ್ನು ಅವನಿಗೆ ಕಾಣುವಂತೆ ಮನೆಯಲ್ಲಿ ಬಿಟ್ಟಳು. ಆ್ಯಂಟೆನಿಯೊಗೆ ಓದುವುದೆಂದರೆ ತುಂಬ ಇಷ್ಟ, ಆದುದರಿಂದ ತನ್ನ ಹೆಂಡತಿಯು ಮನೆಯಲ್ಲಿಲ್ಲದಿದ್ದಾಗ ಆ ಪತ್ರಿಕೆಗಳನ್ನು ಆಗೊಮ್ಮೆ ಈಗೊಮ್ಮೆ ಓದುತ್ತಿದ್ದನು. ಮೊದಲ ಬಾರಿಗೆ ಅವನು ತನ್ನ ಜೀವಿತದಲ್ಲಿ ಬೈಬಲ್‌ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಂಡನು. ಅದರ ಜೊತೆಗೆ, “ನನ್ನ ಹೆಂಡತಿ ಮತ್ತು ಸಾಕ್ಷಿಗಳು ನನಗೆ ತೋರಿಸುತ್ತಿದ್ದ ಪ್ರೀತಿ ಮತ್ತು ಕನಿಕರವನ್ನು ಸಹ ನಾನು ಗಮನಿಸಲಾರಂಭಿಸಿದೆ” ಎಂದವನು ಜ್ಞಾಪಿಸಿಕೊಳ್ಳುತ್ತಾನೆ.

ಇಸವಿ 1992ರ ಮಧ್ಯಭಾಗದೊಳಗೆ, ಆ್ಯಂಟೊನಿಯೊ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸುವ ನಿರ್ಣಯವನ್ನು ಮಾಡಿದನು. ಹೀಗಿದ್ದರೂ, ಅವನು ಅಮಲೌಷಧದ ದುರುಪಯೋಗವನ್ನು ಮತ್ತು ಅತಿರೇಕವಾಗಿ ಕುಡಿಯುವುದನ್ನು ಮುಂದುವರಿಸಿದನು. ಒಂದು ರಾತ್ರಿ ತೀರ ತಡವಾಗಿ, ಪಟ್ಟಣದ ಕಡೆಯಿಂದ ತನ್ನ ಮನೆಗೆ ಒಬ್ಬ ಸ್ನೇಹಿತನೊಂದಿಗೆ ಹಿಂದಿರುಗುತ್ತಿದ್ದಾಗ, ಪೊಲೀಸರು ಅವನನ್ನು ನಿಲ್ಲಿಸಿದರು. ಆ್ಯಂಟೊನಿಯೊವಿನ ಬಳಿಯಲ್ಲಿ ಕೋಕೇನ್‌ ಎಂಬ ಅಮಲೌಷಧವಿರುವುದನ್ನು ಪೊಲೀಸರು ಕಂಡುಕೊಂಡಾಗ, ಅವನನ್ನು ಹೊಡೆಯಲು ಆರಂಭಿಸಿದರು. ಒಬ್ಬ ಪೊಲೀಸನು ಅವನನ್ನು ನೆಲಕ್ಕೆ ನೂಕಿ, ಪಿಸ್ತೂಲನ್ನು ಅವನ ಮುಖಕ್ಕೆ ತಾಗಿಸಿ ಇಟ್ಟನು. ಇನ್ನೊಬ್ಬ ಪೊಲೀಸನು ಕೂಗಿದ್ದು: “ಅವನನ್ನು ಮುಗಿಸಿಬಿಡು!”

ಆ್ಯಂಟೊನಿಯೊ ನೆಲದ ಮೇಲೆ ಬಿದ್ದಿದ್ದಾಗ, ತಾನು ಈ ಹಿಂದೆ ಮಾಡಿದ್ದ ಎಲ್ಲ ದುಷ್ಕೃತ್ಯಗಳು ಅವನ ನೆನಪಿಗೆ ಬಂದವು. ಅವನ ನೆನಪಿಗೆ ಬಂದ ಎಲ್ಲ ವಿಷಯಗಳಲ್ಲಿ, ತನ್ನ ಕುಟುಂಬ ಮತ್ತು ಯೆಹೋವನ ಕುರಿತು ಕಲಿತಂತಹ ವಿಷಯಗಳ ನೆನಪುಗಳು ಮಾತ್ರ ಒಳ್ಳೆಯವುಗಳಾಗಿದ್ದವು. ಅವನು ಚುಟುಕಾಗಿ ಪ್ರಾರ್ಥಿಸಿದನು ಮತ್ತು ಯೆಹೋವನ ಸಹಾಯಕ್ಕಾಗಿ ಬೇಡಿಕೊಂಡನು. ಇದಾದ ನಂತರ ಪೊಲೀಸರು ಯಾವ ಹಾನಿಯನ್ನೂ ಮಾಡದೆ ಅವನನ್ನು ಬಿಟ್ಟುಬಿಟ್ಟಾಗ, ಅವನು ನೇರವಾಗಿ ಮನೆಗೆ ಹೋದನು. ಯೆಹೋವನು ತನ್ನನ್ನು ಸಂರಕ್ಷಿಸಿದ್ದನೆಂಬ ದೃಢವಿಶ್ವಾಸ ಅವನಿಗಿತ್ತು.

ಆ್ಯಂಟೊನಿಯೊ ನವಚೈತನ್ಯದಿಂದ ಬೈಬಲನ್ನು ಅಭ್ಯಾಸಿಸಲು ಆರಂಭಿಸಿದನು. ಯೆಹೋವನನ್ನು ಮೆಚ್ಚಿಸಲು ಅವನು ತನ್ನ ಜೀವನದಲ್ಲಿ ಸ್ವಲ್ಪ ಸ್ವಲ್ಪವಾಗಿ ಬದಲಾವಣೆಗಳನ್ನು ಮಾಡಿದನು. (ಎಫೆಸ 4:22-24) ತನ್ನ ಭಾವನೆಗಳನ್ನು ಹತೋಟಿಯಲ್ಲಿಡಲು ಕಲಿತುಕೊಳ್ಳುವ ಮೂಲಕ, ಅವನು ತನ್ನ ಅಮಲೌಷಧ ಸೇವನೆಯ ಸಮಸ್ಯೆಗಳನ್ನು ನಿಭಾಯಿಸಲು ಪ್ರಯತ್ನಿಸಿದರೂ, ಅವನಿಗೆ ವೈದ್ಯಕೀಯ ಸಹಾಯದ ಅಗತ್ಯವಿತ್ತು. ಆರೋಗ್ಯ ಚಿಕಿತ್ಸಾಲಯದಲ್ಲಿ ಎರಡು ತಿಂಗಳುಗಳ ವರೆಗೆ ಇದ್ದದ್ದರಿಂದ ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕವನ್ನು ಸೇರಿಸಿ ಅನೇಕ ಬೈಬಲ್‌ ಪ್ರಕಾಶನಗಳನ್ನು ಓದುವ ಅವಕಾಶ ಅವನಿಗೆ ಸಿಕ್ಕಿತು. ಇದಾದ ಮೇಲೆ, ಈ ಪುಸ್ತಕಗಳಿಂದ ಕಲಿತ ವಿಷಯಗಳನ್ನು ಆ್ಯಂಟೊನಿಯೊ ಇತರ ರೋಗಿಗಳಿಗೂ ತಿಳಿಸಲು ಆರಂಭಿಸಿದನು.

ಆ್ಯಂಟೊನಿಯೊ ಚಿಕಿತ್ಸಾಲಯದಿಂದ ಮನೆಗೆ ಹಿಂದಿರುಗಿದ ನಂತರ, ಸಾಕ್ಷಿಗಳೊಂದಿಗೆ ಬೈಬಲ್‌ ಅಭ್ಯಾಸವನ್ನು ಮುಂದುವರಿಸಿದನು. ಇಂದು ಆ್ಯಂಟೊನಿಯೊ, ಮಾರೀಯ, ಅವರ ಇಬ್ಬರು ಹೆಣ್ಣು ಮಕ್ಕಳು ಮತ್ತು ಆ್ಯಂಟೊನಿಯೊವಿನ ತಾಯಿ ಒಟ್ಟಾಗಿ, ಒಂದು ಸಂತೋಷದ ಮತ್ತು ಐಕ್ಯ ಕುಟುಂಬವಾಗಿ ಯೆಹೋವನನ್ನು ಸೇವಿಸುತ್ತಿದ್ದಾರೆ. ಆ್ಯಂಟೊನಿಯೊ ಹೇಳುವುದು: “‘ದೇವರು ಪ್ರೀತಿಸ್ವರೂಪಿ’ ಎಂಬ ಮಾತುಗಳ ನಿಜವಾದ ಅರ್ಥವನ್ನು ನಾನೀಗ ತಿಳಿದುಕೊಂಡಿದ್ದೇನೆ.”

[ಪುಟ 8ರಲ್ಲಿರುವ ಚಿತ್ರ]

ರಿಯೋ ಡೇ ಜನೈರೊವಿನಲ್ಲಿ ಸಾರುವುದು