ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬದಲಾಗುತ್ತಿರುವ ‘ಕ್ರೈಸ್ತತ್ವದ’ ಸ್ವರೂಪ—ದೇವರು ಅದನ್ನು ಸ್ವೀಕರಿಸುವನೋ?

ಬದಲಾಗುತ್ತಿರುವ ‘ಕ್ರೈಸ್ತತ್ವದ’ ಸ್ವರೂಪ—ದೇವರು ಅದನ್ನು ಸ್ವೀಕರಿಸುವನೋ?

ಬದಲಾಗುತ್ತಿರುವ ‘ಕ್ರೈಸ್ತತ್ವದ’ ಸ್ವರೂಪ—ದೇವರು ಅದನ್ನು ಸ್ವೀಕರಿಸುವನೋ?

ನಿಮ್ಮ ಭಾವಚಿತ್ರವನ್ನು ಬಿಡಿಸಲು ನೀವು ಒಬ್ಬ ಕಲಾಕಾರನಿಗೆ ಹೇಳಿದ್ದೀರೆಂದು ಭಾವಿಸೋಣ. ಈ ಭಾವಚಿತ್ರವನ್ನು ಬಿಡಿಸಿಯಾದ ಮೇಲೆ ನೀವದನ್ನು ನೋಡಿ ಬೆರಗಾಗುತ್ತೀರಿ; ಅದು ಸಂಪೂರ್ಣವಾಗಿ ನಿಮ್ಮಂತೆಯೇ ತೋರುತ್ತದೆ. ನಿಮ್ಮ ಮಕ್ಕಳು, ಮೊಮ್ಮಕ್ಕಳು ಮತ್ತು ಮರಿಮಕ್ಕಳು ಸಹ ಆ ಚಿತ್ರವನ್ನು ಬಹಳ ಹೆಮ್ಮೆಯಿಂದ ನೋಡುವರೆಂಬುದರ ಕುರಿತು ನೀವು ಯೋಚಿಸುತ್ತೀರಿ.

ಹೀಗಿದ್ದರೂ, ಕೆಲವು ತಲೆಮಾರುಗಳ ನಂತರ, ನಿಮ್ಮ ಸಂತತಿಯಲ್ಲಿ ಒಬ್ಬನಿಗೆ ನಿಮ್ಮ ತಲೆಯ ಮುಂಭಾಗದಲ್ಲಿ ಅಷ್ಟಾಗಿ ಕೂದಲಿಲ್ಲ ಎಂದನಿಸುತ್ತದೆ ಮತ್ತು ಅದಕ್ಕಾಗಿ ಅವನು ಸ್ವಲ್ಪ ಕೂದಲನ್ನು ಸೇರಿಸುತ್ತಾನೆ. ಇನ್ನೊಬ್ಬನಿಗೆ ಮೂಗಿನ ಆಕಾರ ಇಷ್ಟವಾಗದಿದ್ದ ಕಾರಣ ಅದನ್ನು ಬದಲಾಯಿಸುತ್ತಾನೆ. ಮುಂದಿನ ತಲೆಮಾರುಗಳಲ್ಲಿ, ಬೇರೆ ಕೆಲವು “ಸುಧಾರಣೆಗಳು” ಆಗುತ್ತವೆ ಮತ್ತು ಕ್ರಮೇಣ ನಿಮ್ಮ ಚಿತ್ರ ನಿಮ್ಮನ್ನು ಹೋಲುವುದಿಲ್ಲ. ಇದು ಸಂಭವಿಸಲಿತ್ತೆಂದು ತಿಳಿದಿದ್ದಲ್ಲಿ ನಿಮಗೆ ಹೇಗೆ ಅನಿಸುತ್ತಿತ್ತು? ನಿಸ್ಸಂದೇಹವಾಗಿಯೂ ನೀವು ಕೋಪಗೊಳ್ಳುತ್ತಿದ್ದಿರಿ.

ದುಃಖಕರವಾಗಿ, ಈ ಚಿತ್ರದ ಕಥೆಯು ಮೂಲತಃ ನಾಮಾಂಕಿತ ಕ್ರೈಸ್ತ ಚರ್ಚಿನ ಕಥೆಯಾಗಿದೆ. ಬೈಬಲು ಮುಂತಿಳಿಸಿದಂತೆಯೇ, ಕ್ರಿಸ್ತನ ಅಪೊಸ್ತಲರ ಮರಣದ ಸ್ವಲ್ಪ ಸಮಯದೊಳಗೆ, ‘ಕ್ರೈಸ್ತತ್ವದ’ ಅಧಿಕಾರಿಯುತ ಸ್ವರೂಪವು ಬದಲಾಗತೊಡಗಿತು ಎಂದು ಇತಿಹಾಸವು ತೋರಿಸುತ್ತದೆ.—ಮತ್ತಾಯ 13:24-30, 37-43; ಅ. ಕೃತ್ಯಗಳು 20:30. *

ಬೈಬಲ್‌ ಮೂಲತತ್ವಗಳನ್ನು ವಿಭಿನ್ನ ಸಂಸ್ಕೃತಿಗಳಿಗೆ ಮತ್ತು ಯುಗಗಳಿಗೆ ಅನ್ವಯಿಸುವುದು ಯೋಗ್ಯವಾಗಿರುವುದಾದರೂ, ಜನಪ್ರಿಯ ಯೋಚನೆಗಳಿಗೆ ತಕ್ಕಂತೆ ಬೈಬಲ್‌ ಬೋಧನೆಗಳನ್ನು ಬದಲಾಯಿಸುವುದು ಸಂಪೂರ್ಣವಾಗಿ ಬೇರೆಯೇ ಆದ ವಿಷಯವಾಗಿದೆ. ಆದರೆ ಸಂಭವಿಸಿರುವುದು ಇದೇ. ಉದಾಹರಣೆಗೆ, ಕೆಲವು ಪ್ರಮುಖವಾದ ಸಿದ್ಧಾಂತಗಳಲ್ಲಿ ಮಾಡಲಾದ ಕೆಲವು ಬದಲಾವಣೆಗಳನ್ನು ಗಮನಿಸಿರಿ.

ಚರ್ಚು ರಾಜಕೀಯದೊಂದಿಗೆ ಮೈತ್ರಿ ಬೆಳೆಸುತ್ತದೆ

ಯೇಸುವಿನ ಆಳ್ವಿಕೆ ಅಥವಾ ಸರಕಾರವು ಸ್ವರ್ಗೀಯವಾಗಿರುತ್ತದೆ ಎಂದು ಅವನು ತನ್ನ ಶಿಷ್ಯರಿಗೆ ಕಲಿಸಿದನು. ಈ ರಾಜ್ಯವು ತಕ್ಕ ಸಮಯದಲ್ಲಿ ಎಲ್ಲ ಮಾನವ ಆಳ್ವಿಕೆಗಳನ್ನು ನಾಶಪಡಿಸುವುದು ಮತ್ತು ಇಡೀ ಭೂಮಿಯನ್ನು ಆಳುವುದು ಎಂದು ಅವನು ಕಲಿಸಿದನು. (ದಾನಿಯೇಲ 2:44; ಮತ್ತಾಯ 6:9, 10) ಈ ರಾಜ್ಯವು ಮಾನವ ರಾಜಕೀಯ ವ್ಯವಸ್ಥೆಗಳ ಮೂಲಕ ಆಳುವುದಿಲ್ಲ. ಯಾಕೆಂದರೆ “ನನ್ನ ರಾಜ್ಯವು ಈ ಲೋಕದ್ದಲ್ಲ” ಎಂದು ಯೇಸು ಹೇಳಿದನು. (ಯೋಹಾನ 17:16; 18:36) ಹೀಗೆ, ಯೇಸುವಿನ ಶಿಷ್ಯರು ಮಾನವ ಸರಕಾರಗಳ ನಿಯಮವನ್ನು ಪಾಲಿಸುತ್ತಿದ್ದರು. ಆದರೆ ರಾಜಕೀಯದಿಂದ ಮಾತ್ರ ದೂರವಿದ್ದರು.

ಹೀಗಿದ್ದರೂ, ನಾಲ್ಕನೆಯ ಶತಮಾನದಲ್ಲಿ ರೋಮನ್‌ ಚಕ್ರವರ್ತಿಯಾದ ಕಾನ್‌ಸ್ಟೆಂಟೀನ್‌ ಸಮಯದೊಳಗಾಗಿ, ಕ್ರಿಸ್ತನ ಹಿಂದಿರುಗುವಿಕೆಗಾಗಿ ಮತ್ತು ದೇವರ ರಾಜ್ಯದ ಸ್ಥಾಪನೆಗಾಗಿ ಕಾಯುವುದರಲ್ಲಿ ಅನೇಕ ನಾಮಮಾತ್ರದ ಕ್ರೈಸ್ತರು ತಾಳ್ಮೆಯನ್ನು ತೋರಿಸಲಿಲ್ಲ. ಕ್ರಮೇಣವಾಗಿ, ರಾಜಕೀಯದ ಕಡೆಗೆ ಅವರಿಗಿದ್ದ ಮನೋಭಾವವು ಬದಲಾಯಿತು. ಯೂರೋಪ್‌—ಒಂದು ಇತಿಹಾಸ (ಇಂಗ್ಲಿಷ್‌) ಎಂಬ ಪುಸ್ತಕವು ಹೇಳುವಂತೆ, “ಕಾನ್‌ಸ್ಟೆಂಟೀನನಿಗಿಂತ ಮುಂಚೆ, ಕ್ರೈಸ್ತರು ತಮ್ಮ ಉದ್ದೇಶಗಳನ್ನು ಮತ್ತು ನಂಬಿಕೆಗಳನ್ನು ಪ್ರವರ್ಧಿಸುವ ಸಲುವಾಗಿ [ರಾಜಕೀಯ] ಬಲವನ್ನು ಅವಲಂಬಿಸಿರಲಿಲ್ಲ. ಆದರೆ ಕಾನ್‌ಸ್ಟೆಂಟೀನನ ನಂತರ, ಕ್ರೈಸ್ತತ್ವ ಮತ್ತು ಉಚ್ಚಮಟ್ಟದ ರಾಜಕೀಯವು ಜೊತೆಜೊತೆಯಲ್ಲಿ ಸಾಗಿದವು.” ಹೊಸದಾಗಿ ರೂಪುಗೊಂಡಿದ್ದ ಕ್ರೈಸ್ತತ್ವವು, ರೋಮನ್‌ ಸಾಮ್ರಾಜ್ಯದಲ್ಲಿ “ಸಾರ್ವತ್ರಿಕ” ಅಥವಾ “ಕ್ಯಾಥೊಲಿಕ್‌” ಧರ್ಮವಾಗಿ ಅಧಿಕೃತ ಮನ್ನಣೆಯನ್ನು ಪಡೆಯಿತು.

ಗ್ರೇಟ್‌ ಏಜಸ್‌ ಆಫ್‌ ಮ್ಯಾನ್‌ ಎಂಬ ವಿಶ್ವಕೋಶವು ಹೇಳುವುದೇನಂದರೆ, ಚರ್ಚು ಸರಕಾರದೊಂದಿಗೆ ಒಂದುಗೂಡಿದ ಕಾರಣ “ಕ್ರೈಸ್ತರ ಮೇಲೆ ಹಿಂಸೆಯ ದೊಡ್ಡ ಅಲೆಯು ಅಪ್ಪಳಿಸಿದ ಕೇವಲ 80 ವರ್ಷಗಳ ನಂತರ ಅಂದರೆ, ಸಾ.ಶ. 385ರೊಳಗಾಗಿ, ಚರ್ಚು ತಾನೇ ಪಾಷಂಡಿಗಳನ್ನು ವಧಿಸಲು ಆರಂಭಿಸಿತು ಮತ್ತು ಅದರ ಪಾದ್ರಿಗಳು ಹೆಚ್ಚುಕಡಿಮೆ ಸಾಮ್ರಾಟರಿಗೆ ಸಮಾನವಾದ ಅಧಿಕಾರದಿಂದ ಆಳುವುದಕ್ಕೆ ತೊಡಗಿದರು.” ಮನವೊಲಿಸಿ ಅವರನ್ನು ಮತಾಂತರಮಾಡುವ ಬದಲು, ಬಲಪ್ರಯೋಗವನ್ನು ಉಪಯೋಗಿಸುವ ಶಕವೊಂದು ಆರಂಭವಾಯಿತು ಮತ್ತು ಪ್ರಥಮ ಶತಮಾನದ ದೀನ ಸೌವಾರ್ತಿಕರ ಸ್ಥಾನದಲ್ಲಿ ಬಿರುದನ್ನು ಅಪೇಕ್ಷಿಸುವ, ಅಧಿಕಾರದಾಹಿ ಪಾದ್ರಿವರ್ಗದವರು ಬಂದರು. (ಮತ್ತಾಯ 23:9, 10; 28:19, 20) ಇತಿಹಾಸಕಾರ ಏಚ್‌. ಜಿ. ವೆಲ್ಸ್‌ ಎಂಬುವವರು, ನಾಲ್ಕನೆಯ ಶತಮಾನದ ಕ್ರೈಸ್ತತ್ವ ಮತ್ತು “ನಜರೇತಿನ ಯೇಸುವಿನ ಬೋಧನೆಯ ಮಧ್ಯೆಯಿರುವ ಅಗಾಧವಾದ ಭಿನ್ನತೆಗಳ” ಕುರಿತು ಬರೆದಿದ್ದಾರೆ. ಈ ‘ಅಗಾಧವಾದ ಭಿನ್ನತೆಗಳು’ ದೇವರ ಮತ್ತು ಕ್ರಿಸ್ತನ ಕುರಿತಾದ ಮೂಲಭೂತ ಬೋಧನೆಗಳ ಮೇಲೆಯೂ ಪರಿಣಾಮವನ್ನು ಬೀರಿದವು.

ದೇವರಿಗೆ ಹೊಸ ರೂಪವನ್ನು ಕೊಡುವುದು

ಕ್ರಿಸ್ತನು ಮತ್ತು ಅವನ ಶಿಷ್ಯರು “ತಂದೆಯಾದ ಒಬ್ಬ ದೇವರ” ಕುರಿತು ಮತ್ತು ಈ ದೇವರು ಯೆಹೋವ ಎಂಬ ತನ್ನ ವೈಯಕ್ತಿಕ ಹೆಸರಿನಿಂದ ಜನಾಂಗಗಳಿಗೆ ಪ್ರಕಟಿಸಲ್ಪಡುತ್ತಾನೆ ಎಂಬುದರ ಕುರಿತು ಜನರಿಗೆ ಕಲಿಸಿದ್ದಾರೆ. ಈ ಹೆಸರು ಪ್ರಾಚೀನ ಬೈಬಲ್‌ ಹಸ್ತಪ್ರತಿಗಳಲ್ಲಿ ಸುಮಾರು 7,000 ಬಾರಿ ಕಂಡುಬರುತ್ತದೆ. (1 ಕೊರಿಂಥ 8:6, NW; ಕೀರ್ತನೆ 83:18) ಯೇಸು ದೇವರಿಂದಲೇ ಸೃಷ್ಟಿಸಲ್ಪಟ್ಟಿದ್ದನು. ಬೈಬಲಿನ ಕ್ಯಾಥೊಲಿಕ್‌ ಡುಯೆ ವರ್ಷನ್‌ ಕೊಲೊಸ್ಸೆ 1:15ರಲ್ಲಿ ಯೇಸುವು “ಸೃಷ್ಟಿಗೆಲ್ಲಾ ಜ್ಯೇಷ್ಠ ಪುತ್ರನು” ಆಗಿದ್ದಾನೆ ಎಂಬುದಾಗಿ ಹೇಳುತ್ತದೆ. ಹೀಗೆ, ಸ್ಪಷ್ಟಿಸಲ್ಪಟ್ಟ ಜೀವಿಯಾದ ಯೇಸು ಮುಚ್ಚುಮರೆಯಿಲ್ಲದೆ ತಿಳಿಸಿದ್ದು: “ತಂದೆಯು ನನಗಿಂತ ದೊಡ್ಡವನು.”—ಯೋಹಾನ 14:28.

ಆದರೆ ಮೂರನೆಯ ಶತಮಾನದೊಳಗೆ, ವಿಧರ್ಮಿ ತತ್ವಜ್ಞಾನಿಯಾದ ಪ್ಲೇಟೋವಿನ ತ್ರಯೈಕ್ಯ ಸಿದ್ಧಾಂತವನ್ನು ಬಹಳವಾಗಿ ಮೆಚ್ಚಿಕೊಂಡ ಕೆಲವು ಪ್ರಭಾವಶಾಲಿ ಪಾದ್ರಿಗಳು, ದೇವರಿಗೆ ಹೊಸ ರೂಪವನ್ನು ಕೊಟ್ಟು ಆತನನ್ನು ತ್ರಯೈಕ್ಯ ಬೋಧನೆಯೊಳಗೆ ಸೇರಿಸಲಾರಂಭಿಸಿದರು. ಮುಂದಿನ ಶತಮಾನಗಳಲ್ಲಿ, ಯೇಸುವನ್ನು ಯೆಹೋವನಿಗೆ ಸರಿಸಮಾನಮಾಡುವಷ್ಟರ ಮಟ್ಟಿಗೆ ಮತ್ತು ದೇವರ ಪವಿತ್ರಾತ್ಮ ಅಥವಾ ಕ್ರಿಯಾಶೀಲ ಶಕ್ತಿಯನ್ನು ವ್ಯಕ್ತಿಯಾಗಿ ರೂಪಿಸುವಷ್ಟರ ಮಟ್ಟಿಗೆ ಈ ಸಿದ್ಧಾಂತವು ಅಶಾಸ್ತ್ರೀಯವಾಗಿ ಬೆಳೆಯಿತು ಮತ್ತು ಹೀಗೆ, ಕ್ರೈಸ್ತ ಚರ್ಚಿನಲ್ಲಿ ಸಂಪ್ರದಾಯವು ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿತು.

ತ್ರಯೈಕ್ಯ ಸಿದ್ಧಾಂತದ ವಿಧರ್ಮಿ ಕಲ್ಪನೆಯನ್ನು ಚರ್ಚು ಸ್ವೀಕರಿಸಿದುದರ ಬಗ್ಗೆ ಹೇಳಿಕೆಯನ್ನು ನೀಡುತ್ತಾ, ನ್ಯೂ ಕ್ಯಾಥೊಲಿಕ್‌ ಎನ್‌ಸೈಕ್ಲೊಪೀಡಿಯ ಹೇಳುವುದು: “ನಾಲ್ಕನೆಯ ಶತಮಾನದ ಅಂತ್ಯದೊಳಗಾಗಿ, ‘ಮೂರು ವ್ಯಕ್ತಿಗಳು ಸೇರಿ ಒಬ್ಬ ದೇವರು’ ಎಂಬ ನಿರ್ದಿಷ್ಟ ವಿವರಣೆಯು ಬೇರೂರಿಸಲ್ಪಟ್ಟಿರಲಿಲ್ಲ ಮತ್ತು ಕ್ರಿಸ್ತೀಯ ಜೀವನ ಮತ್ತು ಅದರ ನಂಬಿಕೆಗಳಲ್ಲಿ ಅದು ನಿಶ್ಚಯವಾಗಿಯೂ ಸೇರಿಸಲ್ಪಟ್ಟಿರಲಿಲ್ಲ. ಆದರೆ ಈ ಸೇರಿಸುವಿಕೆಯಿಂದಾಗಿಯೇ ಅದಕ್ಕೆ ತ್ರಿತ್ವವಾದಿಗಳ ತತ್ವ ಎಂಬ ಹೆಸರು ಸಿಕ್ಕಿತು ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಕ್ರೈಸ್ತ ಮುಖಂಡರಲ್ಲಿಯೇ ಪ್ರಮುಖರಾಗಿದ್ದವರ ಮಧ್ಯೆ ಈ ಮನೋಭಾವ ಅಥವಾ ವೀಕ್ಷಣೆಗೆ ಎಳ್ಳಷ್ಟೂ ಸಂಬಂಧವಿರುವ ಹಾಗೆ ತೋರುವುದಿಲ್ಲ.”

ತದ್ರೀತಿಯಲ್ಲಿ, ದಿ ಎನ್‌ಸೈಕ್ಲೊಪೀಡಿಯ ಅಮೆರಿಕಾನ ಹೇಳುವುದು: “ನಾಲ್ಕನೆಯ ಶತಮಾನದ ತ್ರಯೈಕ್ಯ ತತ್ವವು ದೇವರ ಸ್ವರೂಪದ ಕುರಿತ ಆದಿ ಕ್ರೈಸ್ತ ಬೋಧನೆಯನ್ನು ನಿಷ್ಕೃಷ್ಟವಾಗಿ ಪ್ರತಿಬಿಂಬಿಸಲಿಲ್ಲ; ಇದಕ್ಕೆ ವ್ಯತಿರಿಕ್ತವಾಗಿ, ಈ ಬೋಧನೆಯು ಕ್ರೈಸ್ತತ್ವದ ಸ್ವೀಕಾರಯೋಗ್ಯ ಮಾರ್ಗದಿಂದ ತನ್ನನ್ನು ಪ್ರತ್ಯೇಕಿಸಿಕೊಂಡಿತು.” ದ ಆಕ್ಸಫರ್ಡ್‌ ಕಂಪ್ಯಾನ್ಯನ್‌ ಟು ದ ಬೈಬಲ್‌ ಎಂಬ ಪುಸ್ತಕವು, ತ್ರಯೈಕ್ಯವನ್ನು “ನಂತರ ಬಂದಿರುವ ಧಾರ್ಮಿಕ ಸಿದ್ಧಾಂತದ ಸೇರಿಸುವಿಕೆ” ಎಂಬುದಾಗಿ ಕರೆಯುತ್ತದೆ. ಆದರೂ, ಚರ್ಚಿನೊಳಗೆ ಸೇರಿಸಲ್ಪಟ್ಟಿರುವ ವಿಧರ್ಮಿ ಸಿದ್ಧಾಂತಗಳಲ್ಲಿ ತ್ರಯೈಕ್ಯ ಸಿದ್ಧಾಂತವು ಮಾತ್ರ ಸೇರಿರುವುದಿಲ್ಲ.

ಆತ್ಮದ ಸಿದ್ಧಾಂತಕ್ಕೆ ಹೊಸ ರೂಪವನ್ನು ಕೊಡುವುದು

ಮನುಷ್ಯನು ಸತ್ತಾಗ ಅವನಲ್ಲಿರುವ ಆತ್ಮ ಸಾಯುವುದಿಲ್ಲ ಎಂಬ ನಂಬಿಕೆಯು ಇಂದು ಸಾಮಾನ್ಯವಾಗಿದೆ. ಈ ಬೋಧನೆಯನ್ನು ಕಾಲಾನಂತರ ಚರ್ಚಿನೊಳಗೆ ಸೇರಿಸಲಾಯಿತು ಎಂಬುದು ನಿಮಗೆ ತಿಳಿದಿದೆಯೋ? ಸತ್ತವರಿಗೆ “ಯಾವ ತಿಳುವಳಿಕೆಯೂ ಇಲ್ಲ” ಎಂಬ ಬೈಬಲಿನ ಸತ್ಯವನ್ನು ಯೇಸುವು ದೃಢೀಕರಿಸಿದನು. ಅವರು ಮರಣವೆಂಬ ನಿದ್ರೆಯಲ್ಲಿ ವಿಶ್ರಾಂತಿಯನ್ನು ಪಡೆದುಕೊಳ್ಳುತ್ತಿದ್ದಾರೆ. (ಪ್ರಸಂಗಿ 9:5; ಯೋಹಾನ 11:11-13) ಪುನರುತ್ಥಾನದ ಮೂಲಕ ಜೀವವನ್ನು ಪೂರ್ವಸ್ಥಿತಿಗೆ ತರಬಹುದು. ಈ ಪದದ ಅರ್ಥವು, ಮರಣವೆಂಬ ನಿದ್ರೆಯಿಂದ ‘ಪುನಃ ಎದ್ದು ಬರುವುದು’ ಆಗಿದೆ. (ಯೋಹಾನ 5:28, 29) ಒಂದು ಅಮರವಾದ ಆತ್ಮವು ಅಸ್ತಿತ್ವದಲ್ಲಿರುತ್ತಿದ್ದರೆ, ಪುನರುತ್ಥಾನದ ಅಗತ್ಯವೇ ಇರುತ್ತಿರಲಿಲ್ಲ ಯಾಕೆಂದರೆ ಅಮರ ವ್ಯಕ್ತಿ ಸಾಯುವುದಿಲ್ಲ.

ಸತ್ತ ವ್ಯಕ್ತಿಗಳನ್ನು ಎಬ್ಬಿಸುವ ಮೂಲಕ ಯೇಸುವು ಸಹ, ಬೈಬಲಿನಲ್ಲಿರುವ ಪುನರುತ್ಥಾನದ ಬೋಧನೆಯನ್ನು ಸತ್ಯವೆಂದು ರುಜುಪಡಿಸಿದನು. ಉದಾಹರಣೆಗೆ, ನಾಲ್ಕು ದಿವಸಗಳ ವರೆಗೆ ಸತ್ತಿದ್ದ ಲಾಜರನನ್ನು ತೆಗೆದುಕೊಳ್ಳಿರಿ. ಯೇಸು ಅವನನ್ನು ಪುನರುತ್ಥಾನಗೊಳಿಸಿದಾಗ, ಲಾಜರನು ಸಮಾಧಿಯಿಂದ ಒಬ್ಬ ಜೀವಂತ, ಉಸಿರಾಡುವ ವ್ಯಕ್ತಿಯಾಗಿ ಹೊರಬಂದನು. ಲಾಜರನು ಮರಣದಿಂದ ಎಬ್ಬಿಸಲ್ಪಟ್ಟಾಗ, ಸ್ವರ್ಗದಲ್ಲಿ ಪರಮಾನಂದವನ್ನು ಅನುಭವಿಸುತ್ತಿದ್ದ ಅವನ ಅಮರ ಆತ್ಮವು ದೇಹದೊಳಗೆ ಸೇರುವ ಮೂಲಕ ಅವನು ಜೀವಂತನಾಗಲಿಲ್ಲ. ಅವನ ಅಮರ ಆತ್ಮವು ಸ್ವರ್ಗದಲ್ಲಿ ಇರುತ್ತಿದ್ದಲ್ಲಿ, ಅವನನ್ನು ಪುನರುತ್ಥಾನಗೊಳಿಸುವ ಮೂಲಕ ಪ್ರೀತಿದಯೆಯನ್ನು ತೋರಿಸುವ ಅಗತ್ಯ ಯೇಸುವಿಗೆ ಖಂಡಿತವಾಗಿಯೂ ಇರುತ್ತಿರಲಿಲ್ಲ.—ಯೋಹಾನ 11:39, 43, 44.

ಹಾಗಾದರೆ, ಮನುಷ್ಯನಿಗೆ ಅಮರ ಆತ್ಮವಿದೆ ಎಂಬ ಸಿದ್ಧಾಂತದ ಮೂಲವು ಯಾವುದು? ದ ವೆಸ್ಟ್‌ಮಿನ್ಸ್‌ಟರ್‌ ಡಿಕ್ಷನೆರಿ ಆಫ್‌ ಕ್ರಿಶ್ಚಿಯನ್‌ ಥಿಯೋಲಜಿ ಹೇಳಿದಂತೆ, ಈ ಸಿದ್ಧಾಂತವು “ಬೈಬಲಿನ ಮೂಲಕ ಬಾರದೆ, ಗ್ರೀಕ್‌ ತತ್ವಜ್ಞಾನದಿಂದಲೇ ಬಂದಿದೆ” ಎಂಬುದು ಸ್ಪಷ್ಟ. ದ ಜ್ಯೂವಿಷ್‌ ಎನ್‌ಸೈಕ್ಲೊಪೀಡಿಯ ಹೀಗೆ ವಿವರಿಸುತ್ತದೆ: “ಮನುಷ್ಯನು ಸತ್ತ ನಂತರ ಅವನ ಆತ್ಮವು ಬದುಕುತ್ತಾ ಇರುತ್ತದೆಂಬ ನಂಬಿಕೆಯು, ತಾತ್ತ್ವಿಕ ಅಥವಾ ದೇವತಾಶಾಸ್ತ್ರದ ಸಿದ್ಧಾಂತವಾಗಿರುವುದಿಲ್ಲ. ಬದಲಾಗಿ ಕಲಬೆರಕೆಯಾದ ನಂಬಿಕೆಯಾಗಿದೆ ಮತ್ತು ಇದನ್ನು ಪವಿತ್ರ ಬೈಬಲಿನಲ್ಲಿ ಎಲ್ಲಿಯೂ ಸ್ಪಷ್ಟವಾಗಿ ಕಲಿಸಲಾಗಿಲ್ಲ.”

ಅನೇಕ ವೇಳೆ, ಒಂದು ಸುಳ್ಳು ಮತ್ತೊಂದು ಸುಳ್ಳಿಗೆ ದಾರಿ ಮಾಡಿಕೊಡುತ್ತದೆ ಮತ್ತು ಇದು ಅಮರ ಆತ್ಮದ ಬೋಧನೆಯ ವಿಷಯದಲ್ಲೂ ಸತ್ಯವಾಗಿದೆ. ಇದು ನರಕಾಗ್ನಿಯಲ್ಲಿ ಅನಂತ ಯಾತನೆಯಿದೆ ಎಂಬಂತಹ ವಿಧರ್ಮಿ ಸಿದ್ಧಾಂತಕ್ಕೆ ದಾರಿಯನ್ನು ಮಾಡಿಕೊಟ್ಟಿತು. * ಆದರೂ, ಬೈಬಲು ಸರಳವಾಗಿ ತಿಳಿಸುವ ಪ್ರಕಾರ, “ಪಾಪವು ಕೊಡುವ ಸಂಬಳ ಮರಣ” ಆಗಿದೆ ಹೊರತು ಅನಂತ ಯಾತನೆಯಲ್ಲ. (ರೋಮಾಪುರ 6:23) ಹೀಗೆ, ಪುನರುತ್ಥಾನವನ್ನು ವರ್ಣಿಸುತ್ತಾ, ಕಿಂಗ್‌ ಜೇಮ್ಸ್‌ ವರ್ಷನ್‌ ತಿಳಿಸುವುದು: “ಸಮುದ್ರವು ತನ್ನಲ್ಲಿ ಸತ್ತಿದ್ದ ಜನರನ್ನು ಒಪ್ಪಿಸಿತು. ಮೃತ್ಯುವೂ ನರಕವೂ ತಮ್ಮಲ್ಲಿದ್ದ ಸತ್ತ ಜನರನ್ನು ಒಪ್ಪಿಸಿದವು.” ತದ್ರೀತಿಯಲ್ಲಿ, ಡುಯೆ ಬೈಬಲ್‌ ಹೇಳುವುದು: “ಸಮುದ್ರ . . . ಮತ್ತು ಮೃತ್ಯು ಮತ್ತು ನರಕವು ಸತ್ತವರನ್ನು ಒಪ್ಪಿಸಿದವು.” ಹೌದು, ಸರಳವಾಗಿ ಹೇಳುವುದಾದರೆ, ನರಕದಲ್ಲಿರುವವರು ಸತ್ತವರಾಗಿದ್ದಾರೆ, ಯೇಸು ಹೇಳಿದಂತೆ ಅವರು ‘ನಿದ್ರಿಸುತ್ತಿದ್ದಾರೆ.’—ಪ್ರಕಟನೆ 20:13.

ನರಕದಲ್ಲಿ ನಿತ್ಯ ಯಾತನೆಯ ಬೋಧನೆಯು, ಜನರನ್ನು ದೇವರ ಕಡೆಗೆ ಸೆಳೆಯುತ್ತದೆ ಎಂಬುದನ್ನು ನೀವು ಯಥಾರ್ಥವಾಗಿ ನಂಬುತ್ತೀರೋ? ಖಂಡಿತವಾಗಿಯೂ ಇಲ್ಲ. ನ್ಯಾಯಕ್ಕಾಗಿ ಹಂಬಲಿಸುವ ಮತ್ತು ಪ್ರೀತಿಯುಳ್ಳ ಜನರ ಮನಸ್ಸಿನಲ್ಲಿ, ಅದು ಹೇಯವಾದ ವಿಚಾರವಾಗಿದೆ! ಇನ್ನೊಂದು ಕಡೆಯಲ್ಲಿ, “ದೇವರು ಪ್ರೀತಿಸ್ವರೂಪಿ”ಯಾಗಿದ್ದಾನೆ ಎಂದೂ ಮತ್ತು ಪ್ರಾಣಿಗಳ ಕಡೆಗೆ ಸಹ ಕ್ರೂರತನವನ್ನು ತೋರಿಸುವುದು ಆತನಿಗೆ ಅಸಹ್ಯವಾಗಿದೆ ಎಂದು ಸಹ ಬೈಬಲ್‌ ಕಲಿಸುತ್ತದೆ.—1 ಯೋಹಾನ 4:8; ಜ್ಞಾನೋಕ್ತಿ 12:10; ಯೆರೆಮೀಯ 7:31; ಯೋನ 4:11.

ಆಧುನಿಕ ಸಮಯಗಳಲ್ಲಿ “ಭಾವಚಿತ್ರವನ್ನು” ವಿರೂಪಗೊಳಿಸುವುದು

ದೇವರು ಮತ್ತು ಕ್ರೈಸ್ತತ್ವದ ಅಂದಗೆಡಿಸುವಿಕೆಯು ಈಗಲೂ ಮುಂದುವರಿಯುತ್ತಿದೆ. ಧರ್ಮದ ಪ್ರೊಫೆಸರರೊಬ್ಬರು ಇತ್ತೀಚೆಗೆ ಹೇಳಿದಂತೆ, ಅವರ ಪ್ರಾಟೆಸ್ಟಂಟ್‌ ಚರ್ಚಿನಲ್ಲಿ ನಡೆಯುವ ಹೋರಾಟವನ್ನು “ಶಾಸ್ತ್ರವಚನ ಮತ್ತು ಪಂಥದ ಅಧಿಕಾರಕ್ಕೆ ಪ್ರತಿಯಾಗಿ ಧಾರ್ಮಿಕವಲ್ಲದ ಮತ್ತು ಮಾನವ ಕಲ್ಪನೆಗಳ ಹೋರಾಟವೆಂದು ವರ್ಣಿಸುವುದರ ಜೊತೆಗೆ, ಕ್ರಿಸ್ತನ ನಾಯಕತ್ವಕ್ಕೆ ಚರ್ಚಿನ ನಂಬಿಗಸ್ತಿಕೆಯ ಪ್ರತಿಯಾಗಿ ಕಾಲಕ್ಕೆ ತಕ್ಕಂತೆ ಕ್ರೈಸ್ತತ್ವವನ್ನು ಬದಲಾಯಿಸಿ ಹೊಂದಿಸಿಕೊಳ್ಳುವ ಹೋರಾಟವೆಂದು ವರ್ಣಿಸಿದರು. ವಿವಾದದ ಸುಳಿಯಲ್ಲಿ ಸಿಕ್ಕಿಕೊಂಡಿರುವ ವಿಷಯವು ಇದು: ಚರ್ಚಿನ ಕಾರ್ಯಸೂಚಿಯನ್ನು ಯಾರು ನಿರ್ಧರಿಸಬೇಕು . . . ಬೈಬಲೋ ಅಥವಾ ಸದ್ಯಕ್ಕೆ ಚಾಲ್ತಿಯಲ್ಲಿರುವ ಪ್ರಭಾವಶಾಲಿ ಸಿದ್ಧಾಂತಗಳೋ?”

ದುಃಖಕರವಾಗಿ, ‘ಚಾಲ್ತಿಯಲ್ಲಿರುವ ಪ್ರಭಾವಶಾಲಿ ಸಿದ್ಧಾಂತಗಳು’ ಈಗಲೂ ಜಯವನ್ನು ಸಾಧಿಸುತ್ತಿವೆ. ಇದರಲ್ಲಿ ಯಾವುದೇ ಗುಟ್ಟಿಲ್ಲ. ದೃಷ್ಟಾಂತಕ್ಕಾಗಿ, ಅನೇಕ ಚರ್ಚುಗಳವರು ತಾವು ಪ್ರಗತಿಪರರು ಮತ್ತು ವಿಶಾಲ ಮನೋಭಾವದವರು ಎಂಬುದನ್ನು ತೋರಿಸಿಕೊಡಲು ಅನೇಕ ವಿಷಯಗಳ ಮೇಲೆ ತಮಗಿದ್ದ ನಿಲುವನ್ನು ಬದಲಾಯಿಸಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವಂತಿದೆ. ಮುಖ್ಯವಾಗಿ ನೈತಿಕ ವಿಷಯಗಳಲ್ಲಿ, ಚರ್ಚುಗಳು ಹೆಚ್ಚು ಸ್ವಾತಂತ್ರ್ಯವನ್ನು ತೋರಿಸುತ್ತಿವೆ. ಇದನ್ನು ನಮ್ಮ ಈ ಲೇಖನವು ಈಗಾಗಲೇ ಆರಂಭದಲ್ಲಿ ತೋರಿಸಿತು. ಆದರೂ, ಜಾರತ್ವ, ವ್ಯಭಿಚಾರ ಮತ್ತು ಸಲಿಂಗೀಕಾಮವು ದೇವರ ದೃಷ್ಟಿಯಲ್ಲಿ ಗಂಭೀರ ಪಾಪಗಳಾಗಿವೆ ಮತ್ತು ಇಂತಹ ಪಾಪಗಳನ್ನು ಮಾಡುವವರು “ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ” ಎಂಬುದನ್ನು ಬೈಬಲ್‌ ಸ್ಪಷ್ಟವಾಗಿ ತೋರಿಸುತ್ತದೆ.—1 ಕೊರಿಂಥ 6:9, 10; ಮತ್ತಾಯ 5:27-32; ರೋಮಾಪುರ 1:26, 27.

ಅಪೊಸ್ತಲ ಪೌಲನು ಈ ಮೇಲಿನ ಮಾತುಗಳನ್ನು ಬರೆದಾಗ, ಅವನ ಸುತ್ತಲಿದ್ದ ಗ್ರೀಕ್‌-ರೋಮನ್‌ ಲೋಕದಲ್ಲಿ ದುಷ್ಟತನದ ಎಲ್ಲ ವಿಧಗಳು ಎಲ್ಲೆಲ್ಲೂ ತುಂಬಿಕೊಂಡಿದ್ದವು. ಪೌಲನು ಹೀಗೆ ತರ್ಕಿಸಸಾಧ್ಯವಿತ್ತು: ‘ಘೋರವಾದ ಲೈಂಗಿಕ ಪಾಪಗಳಿಗಾಗಿ ದೇವರು ಸೊದೋಮ್‌ ಗೊಮೋರದ ಜನರ ಮೇಲೆ ನಾಶನವನ್ನು ತಂದನೆಂಬುದು ನಿಜವೇ, ಆದರೆ ಅದು 2,000 ವರ್ಷಗಳಷ್ಟು ಹಿಂದೆ ನಡೆದದ್ದು! ಅದು ಖಂಡಿತವಾಗಿಯೂ ಈ ಆಧುನಿಕ ಯುಗಕ್ಕೆ ಅನ್ವಯಿಸುವುದಿಲ್ಲ.’ ಆದರೆ, ಈ ತಾರ್ಕಿಕ ವಿವರಣೆಯನ್ನು ಕೊಟ್ಟು ವಿಷಯವನ್ನು ಅವನು ತೇಲಿಸಿಬಿಡಲಿಲ್ಲ, ಅವನು ಬೈಬಲ್‌ ಸತ್ಯವನ್ನು ಭ್ರಷ್ಟಗೊಳಿಸಲು ನಿರಾಕರಿಸಿದನು.—ಗಲಾತ್ಯ 5:19-23.

ಮೂಲ “ಭಾವಚಿತ್ರ”ವನ್ನು ಪುನಃ ನೋಡುವುದು

ಯೇಸುವು ತನ್ನ ದಿನದ ಯೆಹೂದಿ ಧಾರ್ಮಿಕ ಮುಖಂಡರೊಂದಿಗೆ ಮಾತಾಡುತ್ತಾ, ‘ಮನುಷ್ಯರು ಕಲ್ಪಿಸಿದ ಕಟ್ಟಳೆಗಳನ್ನೇ ಬೋಧಿಸುವದರಿಂದ’ ನೀವು ಮಾಡುವ ಆರಾಧನೆಯು ವ್ಯರ್ಥವೆಂದು ಅವರಿಗೆ ಹೇಳಿದನು. (ಮತ್ತಾಯ 15:9) ಆ ವೈದಿಕರು ಮೋಶೆಯ ಮೂಲಕ ನೀಡಲಾದ ಯೆಹೋವನ ನಿಯಮಗಳನ್ನು ಹೇಗೆ ವ್ಯರ್ಥಮಾಡಿದರೋ ಹಾಗೆಯೇ ಇಂದಿರುವ ಕ್ರೈಸ್ತಪ್ರಪಂಚದ ಪಾದ್ರಿವರ್ಗದವರು ಮಾಡಿದ್ದಾರೆ. ಇವರು ಕ್ರಿಸ್ತನ ಬೋಧನೆಗಳನ್ನು ಈಗಲೂ ವ್ಯರ್ಥಮಾಡುತ್ತಾ, ದೈವಿಕ ಸತ್ಯದ ಮೇಲೆ ಸಂಪ್ರದಾಯದ “ಬಣ್ಣ” ಎರಚಿ ಸತ್ಯವನ್ನು ಅಳಿಸಿಹಾಕಿದ್ದಾರೆ. ಆದರೆ ಯೇಸು ಆ ಸುಳ್ಳಿನ ಬಣ್ಣವನ್ನು ಅಳಿಸಿಹಾಕಿದಾಗ ಪ್ರಾಮಾಣಿಕ ಜನರು ಪ್ರಯೋಜನ ಪಡೆದುಕೊಂಡರು. (ಮಾರ್ಕ 7:7-13) ಜನಪ್ರಿಯವಾಗಿರಲಿ ಇಲ್ಲದಿರಲಿ ಯೇಸು ಸತ್ಯವನ್ನೇ ನುಡಿದನು. ಅವನಿಗೆ ದೇವರ ವಾಕ್ಯವು ಯಾವಾಗಲೂ ಒಂದು ಪ್ರಮಾಣಗ್ರಂಥವಾಗಿತ್ತು.—ಯೋಹಾನ 17:17.

ಇಂದಿರುವ ಅನೇಕ ನಾಮಮಾತ್ರದ ಕ್ರೈಸ್ತರಿಗೆ ಹೋಲಿಸುವಾಗ ಯೇಸು ಎಷ್ಟೋ ಭಿನ್ನವಾಗಿದ್ದಾನೆ! ವಾಸ್ತವಾಂಶವೇನಂದರೆ, ಬೈಬಲು ಹೀಗೆ ಮುಂತಿಳಿಸಿತು: “ಜನರು ಬಹಳ ಉತ್ಸುಕತೆಯಿಂದ ಹೊಸತನವನ್ನು ಅಪೇಕ್ಷಿಸುತ್ತಾ ಅದನ್ನು ಹಿಂಬಾಲಿಸುವರು. . . . ಮತ್ತು ಸ್ವಂತ ಪ್ರಯೋಜನಕ್ಕಾಗಿ ಅನೇಕ ಉಪದೇಶಕರನ್ನು ಇಟ್ಟುಕೊಳ್ಳುವರು; ಸತ್ಯಕ್ಕೆ ಕಿವಿಗೊಡುವ ಬದಲಾಗಿ ಅವರು ಕಲ್ಪನಾಕಥೆಗಳನ್ನು ಕೇಳಲು ತಿರುಗುವರು.” (2 ತಿಮೊಥೆಯ 4:3, 4, ದ ಜೆರೂಸಲೇಮ್‌ ಬೈಬಲ್‌) ಈ ‘ಕಲ್ಪನಾಕಥೆಗಳಲ್ಲಿ’ ಕೆಲವನ್ನು ನಾವು ಈ ಲೇಖನದಲ್ಲಿ ಚರ್ಚಿಸಿದ್ದೇವೆ. ಈ ‘ಕಲ್ಪನಾಕಥೆಗಳು’ ಆತ್ಮಿಕವಾಗಿ ವಿನಾಶಕಾರಿಯಾಗಿವೆ, ಆದರೆ ದೇವರ ವಾಕ್ಯದ ಸತ್ಯವು ಭಕ್ತಿವರ್ಧಕವಾಗಿದೆ ಮತ್ತು ನಿತ್ಯಜೀವಕ್ಕೆ ನಡೆಸುತ್ತದೆ. ಇದೇ ಸತ್ಯವನ್ನು ನೀವು ಪರೀಕ್ಷಿಸುವಂತೆ ಯೆಹೋವನ ಸಾಕ್ಷಿಗಳು ನಿಮ್ಮನ್ನು ಉತ್ತೇಜಿಸುತ್ತಾರೆ.—ಯೋಹಾನ 4:24; 8:32; 17:3.

[ಪಾದಟಿಪ್ಪಣಿಗಳು]

^ ಪ್ಯಾರ. 4 ಯೇಸು ಹೇಳಿದ ಗೋದಿ ಮತ್ತು ಹಣಜಿಯ ಸಾಮ್ಯದಲ್ಲಿ ಹಾಗೂ ಅಗಲವಾದ ಮತ್ತು ಇಕ್ಕಟ್ಟಾದ ದಾರಿಗಳ ಕುರಿತು ಅವನು ನೀಡಿದ ದೃಷ್ಟಾಂತದಲ್ಲಿ (ಮತ್ತಾಯ 7:13,14) ಅವನು ಪ್ರಕಟಿಸಿದಂತೆ, ನಿಜ ಕ್ರೈಸ್ತತ್ವವು ಶತಮಾನಗಳಿಂದಲೂ ಕೆಲವೇ ಕೆಲವರಿಂದ ಆಚರಿಸಲ್ಪಡುವುದು. ಇವರು ಹಣಜಿಯಂತಿರುವ ಅಧಿಕಾಂಶ ಜನರಿಂದ ಮರೆಮಾಡಲ್ಪಡಲಿದ್ದರು. ಇವರು ತಮ್ಮನ್ನು ಮತ್ತು ತಮ್ಮ ಬೋಧನೆಗಳನ್ನು ಪ್ರವರ್ಧಿಸುತ್ತಾ, ಇದೇ ಕ್ರೈಸ್ತತ್ವದ ನಿಜ ಸ್ವರೂಪವಾಗಿದೆಯೆಂದು ತೋರಿಸಲಿದ್ದರು. ನಮ್ಮ ಈ ಲೇಖನವು ಕ್ರೈಸ್ತತ್ವದ ಇದೇ ಸ್ವರೂಪದ ಕುರಿತು ಮಾತಾಡುತ್ತದೆ.

^ ಪ್ಯಾರ. 19 “ನರಕ” ಎಂಬ ಪದವು, ಹೀಬ್ರು ಪದವಾದ ಶಿಯೋಲ್‌ ಮತ್ತು ಗ್ರೀಕ್‌ ಪದವಾದ ಹೇಡಿಸ್‌ನ ತರ್ಜುಮೆಯಾಗಿದೆ ಮತ್ತು ಇವೆರಡೂ ಶಬ್ದಗಳ ಅರ್ಥ “ಸಮಾಧಿ” ಎಂದಾಗಿದೆ. ಹೀಗೆ, ಕಿಂಗ್‌ ಜೇಮ್ಸ್‌ ವರ್ಷನ್‌ನ ಇಂಗ್ಲಿಷ್‌ ತರ್ಜುಮೆಗಾರರು ಶಿಯೋಲ್‌ ಅನ್ನು 31 ಬಾರಿ “ನರಕ” ಎಂಬುದಾಗಿ ತರ್ಜುಮೆಮಾಡಿದ್ದಾರೆ, ಮತ್ತು ಅದೇ ಪದವನ್ನು 31 ಬಾರಿ “ಸಮಾಧಿ” ಎಂಬುದಾಗಿ ಉಲ್ಲೇಖಿಸಿದ್ದಾರೆ ಮತ್ತು 3 ಬಾರಿ “ಗುಂಡಿ” ಎಂಬುದಾಗಿ ತಿಳಿಸಿದ್ದಾರೆ. ಹೀಗೆ ಈ ಎಲ್ಲ ಪದಗಳು ಮೂಲತಃ ಒಂದೇ ಅರ್ಥವನ್ನು ಕೊಡುತ್ತವೆ ಎಂಬುದು ಈ ತರ್ಜುಮೆಗಳಿಂದ ಸ್ಪಷ್ಟವಾಗುತ್ತದೆ.

[ಪುಟ 7ರಲ್ಲಿರುವ ಚೌಕ/ಚಿತ್ರ]

ಕ್ರೈಸ್ತ ಎಂಬ ಹೆಸರಿನ ಮೂಲ

ಯೇಸುವಿನ ಮರಣದ ನಂತರ ಅವನ ಹಿಂಬಾಲಕರು, ಕಡಿಮೆಪಕ್ಷ ಹತ್ತು ವರ್ಷಗಳ ವರೆಗೆ ‘ಮಾರ್ಗಕ್ಕೆ’ ಸೇರಿದವರಾಗಿ ಪ್ರಸಿದ್ಧರಾಗಿದ್ದರು. (ಅ. ಕೃತ್ಯಗಳು 9:2; 19:9, 23; 22:4) ಏಕೆ? ಏಕೆಂದರೆ “ಮಾರ್ಗವೂ ಸತ್ಯವೂ ಜೀವವೂ” ಆಗಿರುವ ಯೇಸು ಕ್ರಿಸ್ತನಲ್ಲಿ ನಂಬಿಕೆಯನ್ನಿಡುವುದರ ಸುತ್ತಲೂ ಅವರ ಜೀವನ ಮಾರ್ಗವು ಕೇಂದ್ರೀಕೃತವಾಗಿತ್ತು. (ಯೋಹಾನ 14:6) ಸಾ.ಶ. 44ರ ಸ್ವಲ್ಪ ಸಮಯದ ನಂತರ, ಸಿರಿಯದ ಅಂತಿಯೋಕ್ಯದಲ್ಲಿ, ಯೇಸುವಿನ ಶಿಷ್ಯರಿಗೆ “ಕ್ರೈಸ್ತರೆಂಬ ಹೆಸರು ಮೊದಲು ಬಂತು.” (ಅ. ಕೃತ್ಯಗಳು 11:26) ಈ ಹೆಸರು ಎಲ್ಲರಿಂದ ಸ್ವೀಕರಿಸಲ್ಪಟ್ಟಿತು ಮತ್ತು ಸರಕಾರೀ ಅಧಿಕಾರಿಗಳು ಕೂಡ ಯೇಸುವಿನ ಶಿಷ್ಯರನ್ನು ಈ ಹೊಸ ಹೆಸರಿನಿಂದಲೇ ಕರೆಯಲು ತೊಡಗಿದರು. (ಅ. ಕೃತ್ಯಗಳು 26:28) ಈ ಹೊಸ ಹೆಸರು ಕ್ರೈಸ್ತರ ಜೀವನ ಮಾರ್ಗವನ್ನು ಬದಲಾಯಿಸಲಿಲ್ಲ, ಯಾಕಂದರೆ ಈ ಕ್ರೈಸ್ತ ಮಾರ್ಗದಲ್ಲಿರುವವರು ಕ್ರಿಸ್ತನ ಹೆಜ್ಜೆಜಾಡಿನಲ್ಲಿ ನಡೆಯುತ್ತಾ ಮುಂದುವರೆದರು.—1 ಪೇತ್ರ 2:21.

[ಪುಟ 7ರಲ್ಲಿರುವ ಚಿತ್ರಗಳು]

ಯೆಹೋವನ ಸಾಕ್ಷಿಗಳು ತಮ್ಮ ಬಹಿರಂಗ ಶುಶ್ರೂಷೆಯ ಮೂಲಕ ಜನರನ್ನು ದೇವರ ವಾಕ್ಯವಾದ ಬೈಬಲಿನ ಕಡೆಗೆ ನಿರ್ದೇಶಿಸುತ್ತಾರೆ

[ಪುಟ 4ರಲ್ಲಿರುವ ಚಿತ್ರ ಕೃಪೆ]

ಎಡಬದಿಯಿಂದ ಮೂರನೆಯದ್ದು: United Nations/Photo by Saw Lwin