ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ರಕ್ಷಣೆಯ ನಿರೀಕ್ಷೆಯನ್ನು’ ದೃಢವಾಗಿಟ್ಟುಕೊಳ್ಳಿ!

‘ರಕ್ಷಣೆಯ ನಿರೀಕ್ಷೆಯನ್ನು’ ದೃಢವಾಗಿಟ್ಟುಕೊಳ್ಳಿ!

‘ರಕ್ಷಣೆಯ ನಿರೀಕ್ಷೆಯನ್ನು’ ದೃಢವಾಗಿಟ್ಟುಕೊಳ್ಳಿ!

‘ರಕ್ಷಣೆಯ ನಿರೀಕ್ಷೆಯೆಂಬ ಶಿರಸ್ತ್ರಾಣವನ್ನು ಧರಿಸಿಕೊಂಡಿರಿ.’—1 ಥೆಸಲೊನೀಕ 5:8.

1. ‘ರಕ್ಷಣೆಯ ನಿರೀಕ್ಷೆಯು’ ಕಷ್ಟಕರ ಪರಿಸ್ಥಿತಿಗಳನ್ನು ತಾಳಿಕೊಳ್ಳಲು ಹೇಗೆ ಸಹಾಯಮಾಡುತ್ತದೆ?

ಹಡಗೊಡೆತದಿಂದ ತಪ್ಪಿಸಿಕೊಂಡ ಒಬ್ಬ ವ್ಯಕ್ತಿಯು, ಸಮುದ್ರದಲ್ಲಿ ದಿಮ್ಮಿಯ ಮೇಲೆ ತೇಲುತ್ತಿರುವುದನ್ನು ಕಲ್ಪನೆ ಮಾಡಿಕೊಳ್ಳಿ. ಸಹಾಯವು ಇನ್ನೇನು ಸಿಗಲಿದೆ ಎಂದು ಅವನಿಗೆ ಗೊತ್ತಾಗುವುದಾದರೆ ಅವನು ಎಷ್ಟು ಹೊತ್ತಾದರೂ ತಾಳಿಕೊಳ್ಳುವನು. ಹೌದು, ಒಬ್ಬ ವ್ಯಕ್ತಿಗೆ ತಾನು ರಕ್ಷಿಸಲ್ಪಡುವೆ ಎಂಬ ನಿರೀಕ್ಷೆಯಿರುವುದಾದರೆ, ಪರಿಸ್ಥಿತಿಯು ಎಷ್ಟೇ ಕಷ್ಟಕರವಾಗಿರಲಿ ಅದನ್ನು ಅವನು ತಾಳಿಕೊಳ್ಳುವನು. ಅದೇ ರೀತಿಯಲ್ಲಿ, ಸಾವಿರಾರು ವರ್ಷಗಳಿಂದ ಅನೇಕ ಸ್ತ್ರೀ-ಪುರುಷರು ಕಷ್ಟಗಳ ಸುರಿಮಳೆಯ ಸಮಯದಲ್ಲಿ ‘ಯೆಹೋವನ ರಕ್ಷಣೆಯ’ ನಿರೀಕ್ಷೆಯಲ್ಲಿ ಆಸರೆಯನ್ನು ಪಡೆದುಕೊಂಡಿದ್ದಾರೆ. ಇಂಥ ಒಂದು ನಿರೀಕ್ಷೆಯು ಎಂದೂ ಅವರಿಗೆ ನಿರಾಶೆಯನ್ನು ಉಂಟುಮಾಡಿಲ್ಲ. (ವಿಮೋಚನಕಾಂಡ 14:13; ಕೀರ್ತನೆ 3:8; ರೋಮಾಪುರ 5:5; 9:33) ಆದ್ದರಿಂದಲೇ, ಅಪೊಸ್ತಲ ಪೌಲನು ‘ರಕ್ಷಣೆಯ ನಿರೀಕ್ಷೆಯನ್ನು’ ಕ್ರೈಸ್ತರ ಆತ್ಮಿಕ ಆಯುಧವಾದ ‘ಶಿರಸ್ತ್ರಾಣಕ್ಕೆ’ ಹೋಲಿಸಿದನು. (1 ಥೆಸಲೊನೀಕ 5:8; ಎಫೆಸ 6:17) ಹೌದು, ಶಿರಸ್ತ್ರಾಣವು ಒಬ್ಬ ವ್ಯಕ್ತಿಯ ತಲೆಯನ್ನು ಹೇಗೆ ರಕ್ಷಿಸುತ್ತದೋ ಹಾಗೆಯೇ ದೇವರು ಖಂಡಿತವಾಗಿ ರಕ್ಷಿಸುವನೆಂಬ ಭರವಸೆಯು ವಿರೋಧ, ಶೋಧನೆ ಮತ್ತು ಕಷ್ಟಗಳ ಸಮಯದಲ್ಲಿ ನಮ್ಮ ಆಲೋಚನಾ ಸಾಮರ್ಥ್ಯವನ್ನು ಕಾಪಾಡುವುದು.

2. ‘ರಕ್ಷಣೆಯ ನಿರೀಕ್ಷೆಯು’ ಹೇಗೆ ಸತ್ಯಾರಾಧನೆಯ ಮುಖ್ಯ ಭಾಗವಾಗಿದೆ?

2 “ಭವಿಷ್ಯದ ನಿರೀಕ್ಷೆಯು ಕ್ರೈಸ್ತರಿಗೆ ಮಾತ್ರ ಇತ್ತೇ ವಿನಹ ಅವರ ಸುತ್ತಮುತ್ತಲಿದ್ದ ಜನರಿಗೆ ಇರಲಿಲ್ಲ” ಎಂದು ದಿ ಇಂಟರ್‌ನ್ಯಾಷನಲ್‌ ಸ್ಟ್ಯಾಂಡರ್ಡ್‌ ಬೈಬಲ್‌ ಎನ್‌ಸೈಕ್ಲೊಪೀಡಿಯ ಹೇಳುತ್ತದೆ. (ಎಫೆಸ 2:12; 1 ಥೆಸಲೊನೀಕ 4:13) ಆದರೂ, ‘ರಕ್ಷಣೆಯ ನಿರೀಕ್ಷೆಯು’ ಸತ್ಯಾರಾಧನೆಯ ಒಂದು ಮುಖ್ಯ ಭಾಗವಾಗಿದೆ. ಹೇಗೆ? ಹೇಗೆಂದರೆ, ಯೆಹೋವನ ಹೆಸರು ತಾನೇ ಅದರಲ್ಲಿ ಒಳಗೂಡಿದೆ. ಇದನ್ನೇ ಕೀರ್ತನೆಗಾರನಾದ ಆಸಾಫನು ಪ್ರಾರ್ಥನೆಯಲ್ಲಿ ಹೇಳಿದನು: ‘ನಮ್ಮನ್ನು ರಕ್ಷಿಸುವ ದೇವರೇ, ನಿನ್ನ ನಾಮದ ಘನತೆಗೋಸ್ಕರ ಸಹಾಯಮಾಡು; . . . ನಮ್ಮನ್ನು ಕಾಪಾಡು.’ (ಕೀರ್ತನೆ 79:9, NW; ಯೆಹೆಜ್ಕೇಲ 20:9) ಅಷ್ಟುಮಾತ್ರವಲ್ಲ, ಯೆಹೋವನ ರಕ್ಷಣೆಯ ವಾಗ್ದಾನದಲ್ಲಿ ನಾವು ನಂಬಿಕೆಯನ್ನಿಡದಿದ್ದರೆ ಆತನೊಂದಿಗೆ ಒಂದು ಒಳ್ಳೇ ಸಂಬಂಧವನ್ನು ನಾವು ಇಟ್ಟುಕೊಳ್ಳಲು ಸಾಧ್ಯವಿಲ್ಲ. ಪೌಲನು ಇದರ ಕುರಿತು ಹೇಳುವುದು: “ಆದರೆ ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ; ದೇವರ ಬಳಿಗೆ ಬರುವವನು ದೇವರು ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ.” (ಇಬ್ರಿಯ 11:6) ಇನ್ನೂ ಹೇಳಬೇಕಾದರೆ, ಪಶ್ಚಾತ್ತಾಪಿಗಳ ರಕ್ಷಣೆಗಾಗಿಯೇ ಯೇಸು ಕ್ರಿಸ್ತನು ಭೂಮಿಗೆ ಬಂದನು. ಇದನ್ನೇ ಪೌಲನು ಹೀಗೆ ವಿವರಿಸುತ್ತಾನೆ: “ಕ್ರಿಸ್ತ ಯೇಸು ಪಾಪಿಗಳನ್ನು ರಕ್ಷಿಸುವದಕ್ಕೋಸ್ಕರ ಈ ಲೋಕಕ್ಕೆ ಬಂದನು ಎಂಬ ವಾಕ್ಯವು ನಂಬತಕ್ಕದ್ದಾಗಿಯೂ ಸರ್ವಾಂಗೀಕಾರಕ್ಕೆ ಯೋಗ್ಯವಾದದ್ದಾಗಿಯೂ ಅದೆ.” (1 ತಿಮೊಥೆಯ 1:15) ಅಲ್ಲದೆ, ಅಪೊಸ್ತಲ ಪೇತ್ರನು ರಕ್ಷಣೆಯನ್ನು, ‘ನಮ್ಮ ನಂಬಿಕೆಯ ಅಂತ್ಯಫಲ’ ಎಂದು ಸೂಚಿಸುತ್ತಾನೆ. (1 ಪೇತ್ರ 1:8) ಆದುದರಿಂದಲೇ ರಕ್ಷಣೆಯಾಗುವುದೆಂಬ ನಂಬಿಕೆಯು ಬಹಳ ಪ್ರಾಮುಖ್ಯವಾಗಿರುವುದರಲ್ಲಿ ಸಂದೇಹವೇ ಇಲ್ಲ. ಹಾಗಾದರೆ, ರಕ್ಷಣೆ ಎಂದರೇನು? ನಾವು ರಕ್ಷಿಸಲ್ಪಡಬೇಕಾದರೆ ಏನು ಮಾಡಬೇಕು?

ರಕ್ಷಣೆ ಎಂದರೇನು?

3. ಹಿಂದಿನ ಕಾಲದಲ್ಲಿದ್ದ ಯೆಹೋವನ ಸೇವಕರಿಗೆ ಯಾವ ರೀತಿಯ ರಕ್ಷಣೆಯು ಸಿಕ್ಕಿತು?

3 ಇಬ್ರಿಯ ಭಾಷೆಯಲ್ಲಿರುವ ಶಾಸ್ತ್ರವಚನಗಳಲ್ಲಿ ಸಾಮಾನ್ಯವಾಗಿ “ರಕ್ಷಣೆ” ಎಂಬುದರ ಅರ್ಥವು, ಕಾಪಾಡು ಅಥವಾ ದಬ್ಬಾಳಿಕೆಯಿಂದ ಇಲ್ಲವೇ ಕ್ರೂರ ಹಾಗೂ ಅಕಾಲ ಮರಣದಿಂದ ಬಿಡುಗಡೆಮಾಡುವುದಾಗಿದೆ. ಉದಾಹರಣೆಗೆ, ಯೆಹೋವನನ್ನು ‘ವಿಮೋಚಕನೆಂದು’ ಕರೆಯುತ್ತಾ ದಾವೀದನು ಹೇಳುವುದು: “ಆತನು ನನ್ನ ಆಶ್ರಯಗಿರಿಯಾಗಿರುವ ದೇವರೂ . . . ನನ್ನ ಶರಣನೂ ಬಲಾತ್ಕಾರಿಯಿಂದ ನನ್ನನ್ನು ರಕ್ಷಿಸುವವನೂ ಆಗಿದ್ದಾನೆ. ಯೆಹೋವನು ಸ್ತೋತ್ರಕ್ಕೆ ಅರ್ಹನು; ನಾನು ಆತನಿಗೆ ಮೊರೆಯಿಡಲು ನನ್ನನ್ನು ಶತ್ರುಗಳಿಂದ ರಕ್ಷಿಸುತ್ತಾನೆ.” (2 ಸಮುವೇಲ 22:2-4) ತನ್ನ ಸೇವಕರು ಸಹಾಯಕ್ಕಾಗಿ ಮೊರೆಯಿಡುವಾಗ, ಯೆಹೋವನು ಅವರ ಮೊರೆಯನ್ನು ಕೇಳುವನೆಂದು ದಾವೀದನಿಗೆ ಚೆನ್ನಾಗಿ ಗೊತ್ತಿತ್ತು.—ಕೀರ್ತನೆ 31:22, 23; 145:19.

4. ಕ್ರಿಸ್ತಪೂರ್ವ ಸಮಯಗಳಲ್ಲಿ ಜೀವಿಸಿದ ಯೆಹೋವನ ಸೇವಕರಿಗೆ ಭವಿಷ್ಯದ ಕುರಿತು ಯಾವ ನಿರೀಕ್ಷೆ ಇತ್ತು?

4 ಕ್ರಿಸ್ತಪೂರ್ವ ಸಮಯಗಳಲ್ಲಿ ಜೀವಿಸಿದ ಯೆಹೋವನ ಸೇವಕರಿಗೂ ಭವಿಷ್ಯದಲ್ಲಿ ಒಂದು ಉತ್ತಮ ಜೀವನವಿದೆ ಎಂಬ ನಿರೀಕ್ಷೆ ಇತ್ತು. (ಯೋಬ 14:13-15; ಯೆಶಾಯ 25:8; ದಾನಿಯೇಲ 12:13) ನಿಜ ಹೇಳಬೇಕಾದರೆ, ಇಬ್ರಿಯ ಶಾಸ್ತ್ರವಚನಗಳಲ್ಲಿ ಕಾಪಾಡುವೆನೆಂದು ಯೆಹೋವನು ಕೊಟ್ಟಿರುವ ಅನೇಕ ವಾಗ್ದಾನಗಳು, ನಿತ್ಯ ಜೀವಕ್ಕೆ ನಡೆಸುವ ಒಂದು ಮಹಾ ರಕ್ಷಣೆಯ ಪ್ರವಾದನಾತ್ಮಕ ವಾಗ್ದಾನಗಳಾಗಿದ್ದವು. (ಯೆಶಾಯ 49:6, 8; ಅ. ಕೃತ್ಯಗಳು 13:47; 2 ಕೊರಿಂಥ 6:2) ಯೇಸು ಭೂಮಿಯಲ್ಲಿದ್ದಾಗ ಅನೇಕ ಯೆಹೂದ್ಯರಿಗೂ ನಿತ್ಯಜೀವದ ನಿರೀಕ್ಷೆಯಿತ್ತು. ಆದರೆ, ಆ ನಿರೀಕ್ಷೆಯು ನಿಜವಾಗುವುದಕ್ಕೆ ಮುಖ್ಯ ಕಾರಣಕರ್ತನಾಗಿದ್ದ ಯೇಸುವನ್ನು ಅವರು ಅಂಗೀಕರಿಸಬೇಕಾಗಿತ್ತು. ಆದರೆ ಅವನನ್ನು ಅಂಗೀಕರಿಸಲು ಅವರಿಗೆ ಮನಸ್ಸಿರಲಿಲ್ಲ. ಆದ್ದರಿಂದಲೇ ಯೇಸು ತನ್ನ ಸಮಯದಲ್ಲಿದ್ದ ಧಾರ್ಮಿಕ ಮುಖಂಡರಿಗೆ ಈ ರೀತಿಯಾಗಿ ಹೇಳಿದನು: “ಶಾಸ್ತ್ರಗಳಿಂದ ನಿತ್ಯಜೀವವು ದೊರೆಯುತ್ತದೆಂದು ನೀವು ನೆನಸಿ ಅವುಗಳನ್ನು ವಿಚಾರಿಸುತ್ತೀರಲ್ಲಾ; ಅವುಗಳೂ ನನ್ನ ವಿಷಯದಲ್ಲಿ ಸಾಕ್ಷಿಕೊಡುವವುಗಳಾಗಿವೆ.”—ಯೋಹಾನ 5:39.

5. ಕೊನೆಗೆ ರಕ್ಷಣೆಯಲ್ಲಿ ಏನು ಕೂಡ ಸೇರಿದೆ?

5 ರಕ್ಷಣೆಯಲ್ಲಿ ಏನೆಲ್ಲಾ ಒಳಗೂಡಿದೆ ಎಂಬುದನ್ನು ದೇವರು ಯೇಸುವಿನ ಮೂಲಕ ತಿಳಿಸಿದ್ದಾನೆ. ಉದಾಹರಣೆಗೆ, ಪಾಪದ ಒಡೆತನದಿಂದ, ಸುಳ್ಳು ಧರ್ಮದ ಗುಲಾಮಗಿರಿಯಿಂದ, ಸೈತಾನನ ಹತೋಟಿಯಲ್ಲಿರುವ ಪ್ರಪಂಚದಿಂದ, ಮನುಷ್ಯರ ಭಯದಿಂದ, ಅಷ್ಟೇ ಅಲ್ಲ ಮರಣದ ಭಯದಿಂದಲೂ ಸಹ ಬಿಡುಗಡೆಯಾಗುವುದು ರಕ್ಷಣೆಯಲ್ಲಿ ಒಳಗೂಡಿದೆ. (ಯೋಹಾನ 17:16; ರೋಮಾಪುರ 8:2; ಕೊಲೊಸ್ಸೆ 1:13; ಪ್ರಕಟನೆ 18:2, 4) ದೇವರು ತನ್ನ ನಂಬಿಗಸ್ತ ಸೇವಕರಿಗೆ ಕೊಡುವ ರಕ್ಷಣೆಯಲ್ಲಿ, ದಬ್ಬಾಳಿಕೆ ಮತ್ತು ಸಂಕಟದಿಂದ ವಿಮೋಚನೆಯಾಗುವುದು ಮಾತ್ರವಲ್ಲ, ಕೊನೆಯಲ್ಲಿ ನಿತ್ಯಜೀವವನ್ನು ಅನುಭವಿಸುವ ಅವಕಾಶವು ಕೂಡ ಸೇರಿದೆ. (ಯೋಹಾನ 6:40; 17:3) ‘ಚಿಕ್ಕ ಹಿಂಡಿನವರಿಗೆ’ ಈ ರಕ್ಷಣೆಯ ಅರ್ಥವು ಸ್ವರ್ಗೀಯ ಜೀವನಕ್ಕೆ ಪುನರುತ್ಥಾನ ಹೊಂದಿ ಕ್ರಿಸ್ತನೊಂದಿಗೆ ಜೊತೆಗೂಡಿ ರಾಜ್ಯಭಾರ ಮಾಡುವುದಾಗಿದೆ. (ಲೂಕ 12:32) ಆದರೆ ಉಳಿದ ಮಾನವರಿಗೆ ಪರಿಪೂರ್ಣ ಜೀವನ ಹಾಗೂ ಪಾಪ ಮಾಡುವುದಕ್ಕೆ ಮುಂಚೆ ಏದೆನ್‌ನಲ್ಲಿ ಆದಾಮನು ಮತ್ತು ಹವ್ವಳು ದೇವರೊಂದಿಗೆ ಅನುಭವಿಸಿದ್ದ ಸಂಬಂಧವನ್ನು ಪುನಃ ಪಡೆದುಕೊಳ್ಳುವುದಾಗಿದೆ ಎಂದು ಯೇಸು ಕಲಿಸಿದನು. (ಅ. ಕೃತ್ಯಗಳು 3:21; ಎಫೆಸ 1:9) ಒಂದು ಸುಂದರ ಪ್ರಮೋದವನದಲ್ಲಿ ಮಾನವರು ನಿತ್ಯಜೀವವನ್ನು ಅನುಭವಿಸುವುದೇ ದೇವರ ಮೂಲ ಉದ್ದೇಶವಾಗಿತ್ತು. (ಆದಿಕಾಂಡ 1:28; ಮಾರ್ಕ 10:30) ಆದರೆ, ಈ ರೀತಿಯ ಪರಿಸ್ಥಿತಿಗಳು ಪುನಃ ಈ ಭೂಮಿಯ ಮೇಲೆ ಹೇಗೆ ಬರುವವು?

ಪ್ರಾಯಶ್ಚಿತ್ತ ರಕ್ಷಣೆಗೆ ಆಧಾರ

6, 7. ನಮ್ಮ ರಕ್ಷಣೆಯಲ್ಲಿ ಯೇಸುವಿನ ಪಾತ್ರವೇನು?

6 ಯೇಸುಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದಿಂದ ಮಾತ್ರ ರಕ್ಷಣೆಯು ಸಾಧ್ಯ. ನಾವೇಕೆ ಹಾಗೆ ಹೇಳುತ್ತೇವೆ? ಅದಕ್ಕೆ ಕಾರಣವನ್ನು ಬೈಬಲ್‌ ವಿವರಿಸುತ್ತದೆ. ಆದಾಮನು ಪಾಪಮಾಡಿದಾಗ, ಅವನು ತನ್ನನ್ನು ಮತ್ತು ನಮ್ಮೆಲ್ಲರನ್ನು ಸೇರಿಸಿ ತನ್ನ ಮುಂದಿನ ಪೀಳಿಗೆಯನ್ನು ಪಾಪಕ್ಕೆ “ಮಾರಿಬಿಟ್ಟನು.” ಇದರಿಂದಾಗಿ, ಮಾನವಕುಲಕ್ಕೆ ಭವಿಷ್ಯದ ಕುರಿತು ಯಾವುದೇ ನ್ಯಾಯವಾದ ನಿರೀಕ್ಷೆಯಿರಬೇಕಾದರೆ ಪ್ರಾಯಶ್ಚಿತ್ತವು ಅನಿವಾರ್ಯವಾಗಿತ್ತು. (ರೋಮಾಪುರ 5:14, 15; 7:14) ಇದನ್ನೇ ಮೋಶೆಯ ಧರ್ಮಶಾಸ್ತ್ರದಲ್ಲಿರುವ ಪ್ರಾಣಿ ಬಲಿಗಳಲ್ಲಿ ಮುನ್‌ಚಿತ್ರಿಸಲಾಗಿತ್ತು. ದೇವರು ಮುಂದೆ ಒಂದು ದಿನ ಇಡೀ ಮಾನವಕುಲಕ್ಕಾಗಿ ಒಂದು ಪ್ರಾಯಶ್ಚಿತ್ತ ಯಜ್ಞವನ್ನು ಒದಗಿಸಲಿದ್ದನು ಎಂಬುದನ್ನು ಇವು ಸೂಚಿಸುತ್ತಿದ್ದವು. (ಇಬ್ರಿಯ 10:1-10; 1 ಯೋಹಾನ 2:2) ಆ ಯಜ್ಞವು ಯೇಸು ಕ್ರಿಸ್ತನೇ ಆಗಿದ್ದನು. ಆತನು ತನ್ನನ್ನು ಯಜ್ಞವಾಗಿ ಕೊಡುವ ಮೂಲಕ ಆ ಪ್ರವಾದನಾತ್ಮಕ ಚಿತ್ರಣಗಳನ್ನು ನೆರವೇರಿಸಿದನು. ಇದನ್ನು ಯೆಹೋವನ ದೇವದೂತನೊಬ್ಬನು ಯೇಸು ಹುಟ್ಟುವುದಕ್ಕೆ ಮುಂಚೆಯೇ ಪ್ರಕಟಪಡಿಸಿದನು: “ಆತನೇ ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿಕಾಯುವನು.”—ಮತ್ತಾಯ 1:21; ಇಬ್ರಿಯ 2:10.

7 ಆದರೆ ಎಲ್ಲರನ್ನು ರಕ್ಷಿಸಲು ಯೇಸು ಹೇಗೆ ಅರ್ಹನಾಗಿದ್ದಾನೆ? ಕನ್ಯೆಯಾಗಿದ್ದ ಮರಿಯಳ ಮೂಲಕ ಅವನು ಹುಟ್ಟಿದ್ದು ಒಂದು ಪವಾಡವಾಗಿತ್ತಲ್ಲದೆ, ಅವನು ದೇವರ ಮಗನಾಗಿದ್ದದರಿಂದ ಆದಾಮನಿಂದ ಮರಣವನ್ನು ವಂಶಪಾರಂಪರ್ಯವಾಗಿ ಪಡೆದಿರಲಿಲ್ಲ. ಈ ನಿಜತ್ವದೊಂದಿಗೆ, ಅವನು ತನ್ನ ಕುಂದಿಲ್ಲದ ಸಮಗ್ರತೆಯನ್ನು ಕೊನೆಯವರೆಗೂ ಕಾಪಾಡಿಕೊಂಡಿದ್ದನು. ಈ ಎರಡು ಕಾರಣಗಳಿಂದಾಗಿ ಯೇಸುವಿನ ಜೀವವು, ಮಾನವಕುಲವನ್ನು ಪಾಪ ಮತ್ತು ಮರಣದಿಂದ ಮತ್ತೆ ಖರೀದಿಸಲು ಬೇಕಾಗಿದ್ದ ಮೌಲ್ಯವನ್ನು ಪಡೆದಿತ್ತು. (ಯೋಹಾನ 8:36; 1 ಕೊರಿಂಥ 15:22) ಅಲ್ಲದೆ, ಇತರ ಎಲ್ಲಾ ಮನುಷ್ಯರಂತೆ ಪಾಪದಿಂದ ಸಾವಿಗೆ ಗುರಿಯಾಗುವ ಅವಶ್ಯಕತೆ ಯೇಸುವಿಗಿರಲಿಲ್ಲ. ಆದರೂ “ಅನೇಕರನ್ನು ಬಿಡಿಸಿಕೊಳ್ಳುವುದಕ್ಕಾಗಿ ತನ್ನ ಪ್ರಾಣವನ್ನು ಈಡು ಕೊಡುವ” ಉದ್ದೇಶಕ್ಕಾಗಿಯೇ ಯೇಸು ಭೂಮಿಗೆ ಬಂದನು. (ಮತ್ತಾಯ 20:28) ಈ ಉದ್ದೇಶವನ್ನು ನೆರವೇರಿಸಿರುವ ಯೇಸು ಪುನರುತ್ಥಾನಗೊಂಡು ಈಗ ಸಿಂಹಾಸನಾರೂಢನಾಗಿದ್ದಾನೆ. ಆದುದರಿಂದ ದೇವರ ಆವಶ್ಯಕತೆಗಳನ್ನು ಪೂರೈಸುವ ಪ್ರತಿಯೊಬ್ಬರಿಗೂ ರಕ್ಷಣೆಯನ್ನು ಕೊಡಲು ಯೇಸು ಅರ್ಹನಾಗಿದ್ದಾನೆ.—ಪ್ರಕಟನೆ 12:10.

ರಕ್ಷಣೆಯನ್ನು ಹೊಂದಲು ಒಬ್ಬನು ಏನು ಮಾಡಬೇಕು?

8, 9. (ಎ) ರಕ್ಷಣೆಯ ಕುರಿತ ಯುವ ಅಧಿಪತಿಯ ಪ್ರಶ್ನೆಗೆ ಯೇಸು ಹೇಗೆ ಉತ್ತರಿಸಿದನು? (ಬಿ) ಈ ಸಂದರ್ಭವನ್ನು ಉಪಯೋಗಿಸಿ ಯೇಸು ತನ್ನ ಶಿಷ್ಯರಿಗೆ ಏನನ್ನು ಕಲಿಸಿದನು?

8 ಒಮ್ಮೆ, ತುಂಬ ಧನಿಕನಾಗಿದ್ದ ಒಬ್ಬ ಯುವ ಇಸ್ರಾಯೇಲ್ಯ ಅಧಿಪತಿಯು ಯೇಸುವಿನ ಬಳಿ ಬಂದು, ‘ನಾನು ನಿತ್ಯಜೀವಕ್ಕೆ ಬಾಧ್ಯಸ್ಥನಾಗಬೇಕಾದರೆ ಏನು ಮಾಡಬೇಕು?’ ಎಂದು ಕೇಳಿದನು. (ಮಾರ್ಕ 10:17) ಆ ಸಮಯದಲ್ಲಿ ಯೆಹೂದ್ಯರಲ್ಲಿ ಸಾಮಾನ್ಯವಾಗಿದ್ದ ಅಭಿಪ್ರಾಯಗಳಿಂದ ಪ್ರಭಾವಿತನಾಗಿ ಅವನು ಹಾಗೆ ಕೇಳಿರಬಹುದು. ಯಾಕೆಂದರೆ, ದೇವರನ್ನು ಮೆಚ್ಚಿಸಲಿಕ್ಕಾಗಿ ಕೆಲವೊಂದು ಧರ್ಮಕಾರ್ಯಗಳನ್ನು ಮಾಡಲೇಬೇಕು ಮತ್ತು ಅಂಥ ಧರ್ಮಕಾರ್ಯಗಳನ್ನು ಒಬ್ಬನು ಸಾಕಷ್ಟು ಮಾಡಿದರೆ ಮಾತ್ರ ದೇವರು ರಕ್ಷಣೆಯನ್ನು ಕೊಡುವನು ಎಂದು ಅವರು ನೆನಸುತ್ತಿದ್ದರು. ಆದರೆ ಅಂಥ ಒಂದು ಹೊರತೋರಿಕೆಯ ಭಕ್ತಿಯು ಸ್ವಾರ್ಥದ ಇಚ್ಛೆಗಳಿಂದ ಹೊರಹೊಮ್ಮಿರಬಹುದು. ಆ ರೀತಿಯ ಧರ್ಮಕಾರ್ಯಗಳು, ಒಬ್ಬ ವ್ಯಕ್ತಿಗೆ ಒಂದು ನಿಶ್ಚಯವಾದ ರಕ್ಷಣೆಯ ನಿರೀಕ್ಷೆಯನ್ನು ಕೊಡುವುದರಲ್ಲಿ ವಿಫಲವಾದವು. ಏಕೆಂದರೆ, ದೇವರ ಉಚ್ಚ ಮಟ್ಟಗಳನ್ನು ಯಾವ ಅಪರಿಪೂರ್ಣ ಮನುಷ್ಯನಿಂದಲೂ ಸಂಪೂರ್ಣವಾಗಿ ಪಾಲಿಸಲು ಸಾಧ್ಯವಿರಲಿಲ್ಲ.

9 ಆದರೆ ಯೇಸು ಆ ವ್ಯಕ್ತಿಯ ಪ್ರಶ್ನೆಗೆ ತುಂಬ ಸರಳವಾದ ಉತ್ತರವನ್ನು ನೀಡುತ್ತಾ, ನೀನು ಹೋಗಿ ದೇವರ ಆಜ್ಞೆಗಳನ್ನು ಪಾಲಿಸು ಎಂದು ಅವನಿಗೆ ಹೇಳಿದನು. ಅದಕ್ಕೆ ಕೂಡಲೇ ಆ ಯುವ ಅಧಿಪತಿಯು ನಾನು ಚಿಕ್ಕಂದಿನಿಂದಲೂ ದೇವರ ಆಜ್ಞೆಗಳನ್ನು ಪಾಲಿಸುತ್ತಾ ಬಂದಿದ್ದೇನೆ ಎಂದು ಯೇಸುವಿಗೆ ಭರವಸೆ ನೀಡಿದನು. ಅವನ ಉತ್ತರವನ್ನು ಕೇಳಿ ಯೇಸುವಿಗೆ ಅವನ ಮೇಲೆ ಪ್ರೀತಿಯು ಹುಟ್ಟಿತು. ಆಗ ಯೇಸು ಅವನಿಗೆ ಅಂದದ್ದು: “ನಿನಗೆ ಒಂದು ಕಡಿಮೆಯಾಗಿದೆ; ಹೋಗು, ನಿನ್ನ ಬದುಕನ್ನೆಲ್ಲಾ ಮಾರಿ ಬಡವರಿಗೆ ಕೊಡು; ಪರಲೋಕದಲ್ಲಿ ನಿನಗೆ ಸಂಪತ್ತಿರುವದು; ನೀನು ಬಂದು ನನ್ನನ್ನು ಹಿಂಬಾಲಿಸು.” ಆದರೆ ಅದನ್ನು ಕೇಳಿದೊಡನೆ ಆ ಯುವ ವ್ಯಕ್ತಿಯ ಮುಖವು ಬಾಡಿಹೋಯಿತು ಮತ್ತು ದುಃಖದಿಂದ ಅಲ್ಲಿಂದ ಹೋರಟುಹೋದನು. ಕಾರಣ, ‘ಅವನು ಬಹಳ ಆಸ್ತಿಯುಳ್ಳವನಾಗಿದ್ದನು.’ ತರುವಾಯ ಯೇಸು ಈ ಸಂದರ್ಭವನ್ನು ಉಪಯೋಗಿಸಿ ತನ್ನ ಶಿಷ್ಯರಿಗೆ ಒಂದು ಪ್ರಾಮುಖ್ಯವಾದ ಪಾಠವನ್ನು ಕಲಿಸಿದನು. ಅದೇನೆಂದರೆ, ಧನಸಂಪತ್ತುಗಳ ಮೇಲಿನ ಹೆಚ್ಚಿನ ವ್ಯಾಮೋಹವು ಒಬ್ಬ ವ್ಯಕ್ತಿಯ ರಕ್ಷಣೆಯ ಹಾದಿಗೆ ಮುಳ್ಳಾಗಿರುತ್ತದೆ. ಆದರೆ, ಯಾರೂ ತಮ್ಮ ಸ್ವಂತ ಪ್ರಯತ್ನಗಳಿಂದ ರಕ್ಷಣೆಯನ್ನು ಪಡೆಯಸಾಧ್ಯವಿಲ್ಲ ಎಂದು ಯೇಸು ಹೇಳಿದನು. ಹಾಗಿದ್ದರೂ ಅವನು, “ಇದು ಮನುಷ್ಯರಿಗೆ ಅಸಾಧ್ಯ; ದೇವರಿಗೆ ಅಸಾಧ್ಯವಲ್ಲ; ದೇವರಿಗೆ ಎಲ್ಲವು ಸಾಧ್ಯವೇ” ಎಂದು ಅವರಿಗೆ ಭರವಸೆಯನ್ನು ಕೊಟ್ಟನು. (ಮಾರ್ಕ 10:18-27; ಲೂಕ 18:18-23) ಹಾಗಾದರೆ ರಕ್ಷಣೆಯು ಹೇಗೆ ಸಿಗುವುದು?

10. ರಕ್ಷಣೆಯನ್ನು ಹೊಂದಬೇಕಾದರೆ ನಾವು ಯಾವ ಷರತ್ತುಗಳನ್ನು ಪಾಲಿಸಬೇಕು?

10 ಹೌದು, ರಕ್ಷಣೆಯು ತಾನಾಗಿಯೇ ಸಿಗುವಂಥದ್ದಲ್ಲ. ಬದಲಿಗೆ ಅದು ದೇವರ ಒಂದು ಉಚಿತ ಕೊಡುಗೆಯಾಗಿದೆ. (ರೋಮಾಪುರ 6:23) ಆ ಕೊಡುಗೆಗೆ ಅರ್ಹರಾಗಬೇಕಾದರೆ ನಮ್ಮಲ್ಲಿ ಪ್ರತಿಯೊಬ್ಬರು ಮೂಲತಃ ಕೆಲವೊಂದು ಷರತ್ತುಗಳನ್ನು ಪಾಲಿಸಬೇಕು. ಆ ಷರತ್ತುಗಳ ಕುರಿತು ಯೇಸು ಹೇಳುವುದು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” ಮತ್ತು ಯೋಹಾನನು ಅದಕ್ಕೆ ಕೂಡಿಸುತ್ತಾ ಹೇಳಿದ್ದು: “ಆತನ ಮಗನನ್ನು ನಂಬುವವನಿಗೆ ನಿತ್ಯಜೀವ ಉಂಟು; ಮಗನಿಗೆ ಒಳಗಾಗದವನು [“ಅವಿಧೇಯನಾಗುವವನು,” NW] ಜೀವವನ್ನು ಕಾಣುವದೇ ಇಲ್ಲ.” (ಯೋಹಾನ 3:16, 36) ನಿಸ್ಸಂದೇಹವಾಗಿ, ನಿತ್ಯ ರಕ್ಷಣೆಯನ್ನು ಹೊಂದುವ ನಿರೀಕ್ಷೆಯುಳ್ಳ ಪ್ರತಿಯೊಬ್ಬರು ನಂಬಿಕೆಯನ್ನು ಮತ್ತು ವಿಧೇಯತೆಯನ್ನು ತೋರಿಸಬೇಕೆಂದು ದೇವರು ಅಪೇಕ್ಷಿಸುತ್ತಾನೆ. ಆದರೆ, ಯೇಸುವಿನ ಹೆಜ್ಜೆಜಾಡಿನಲ್ಲಿ ನಡೆಯುವ ಮತ್ತು ಆತನ ಪ್ರಾಯಶ್ಚಿತ್ತದಲ್ಲಿ ನಂಬಿಕೆಯನ್ನು ವ್ಯಕ್ತಪಡಿಸುವ ವಿಷಯದಲ್ಲಿ ಒಬ್ಬ ವ್ಯಕ್ತಿಯು ಸ್ವತಃ ನಿರ್ಧಾರವನ್ನು ಮಾಡಬೇಕು.

11. ಒಬ್ಬ ಅಪರಿಪೂರ್ಣ ವ್ಯಕ್ತಿಯು ಯೆಹೋವನ ಅನುಗ್ರಹಕ್ಕೆ ಹೇಗೆ ಪಾತ್ರನಾಗಬಹುದು?

11 ಆದರೆ ವಿಧೇಯತೆಯನ್ನು ತೋರಿಸುವುದು ಅಪರಿಪೂರ್ಣ ಮಾನವರ ಸ್ವಭಾವವಲ್ಲ ಮತ್ತು ಚಾಚೂತಪ್ಪದೇ ಮಾತನ್ನು ಪಾಲಿಸುವುದಂತೂ ಖಂಡಿತ ಸಾಧ್ಯವಿಲ್ಲ. ಆದ್ದರಿಂದಲೇ ನಾವು ತಪ್ಪು ಮಾಡುವಾಗಲೆಲ್ಲಾ ಅದನ್ನು ಮನ್ನಿಸುವುದಕ್ಕಾಗಿ ಯೆಹೋವನು ಪ್ರಾಯಶ್ಚಿತ್ತವನ್ನು ಒದಗಿಸಿದ್ದಾನೆ. ಹೀಗಿದ್ದರೂ, ದೇವರ ಮಾರ್ಗಗಳಿಗನುಸಾರ ಜೀವಿಸುವುದಕ್ಕಾಗಿ ನಾವು ಸತತವಾದ ಪ್ರಯತ್ನವನ್ನು ಮಾಡುತ್ತಲೇ ಇರಬೇಕು. ಯೇಸು ಆ ಧನಿಕ ಯುವ ಅಧಿಪತಿಗೆ ಹೇಳಿದಂತೆ ನಾವು ದೇವರ ಆಜ್ಞೆಗಳನ್ನು ಪಾಲಿಸಬೇಕು. ನಾವು ಹಾಗೆ ಮಾಡುವುದಾದರೆ ಮಾತ್ರ ದೇವರ ಅನುಗ್ರಹಕ್ಕೆ ಪಾತ್ರರಾಗುವೆವು. ಅಲ್ಲದೆ, ಅದು ಹೆಚ್ಚು ಸಂತೋಷವನ್ನು ಸಹ ತರುವುದು. ಏಕೆಂದರೆ ದೇವರ “ಆಜ್ಞೆಗಳು ಭಾರವಾದವುಗಳಲ್ಲ” ಬದಲಿಗೆ, ಅವು “ಆರೋಗ್ಯವೂ [“ಚೈತನ್ಯಕಾರಿಯೂ,” NW]” ಆಗಿವೆ. (1 ಯೋಹಾನ 5:3; ಜ್ಞಾನೋಕ್ತಿ 3:1, 8) ಹಾಗಿದ್ದರೂ, ರಕ್ಷಣೆಯ ನಿರೀಕ್ಷೆಯನ್ನು ದೃಢವಾಗಿಟ್ಟುಕೊಳ್ಳುವುದು ಸುಲಭವಾದ ವಿಷಯವಲ್ಲ.

‘ನಂಬಿಕೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಹೋರಾಡಬೇಕು’

12. ಅಶ್ಲೀಲ ಪ್ರಭಾವಗಳ ವಿರುದ್ಧ ಹೋರಾಡಲು ರಕ್ಷಣೆಯ ನಿರೀಕ್ಷೆಯು ಒಬ್ಬ ಕ್ರೈಸ್ತನನ್ನು ಹೇಗೆ ಬಲಪಡಿಸುವುದು?

12 ಯೇಸುವಿನ ಶಿಷ್ಯನಾಗಿದ್ದ ಯೂದನು, ಆದಿ ಕ್ರೈಸ್ತರಿಗೆ “ಹುದುವಾಗಿರುವ [“ಅವರೆಲ್ಲರಿಗೂ ಒಂದೇ ಆಗಿದ್ದ,” NW] ರಕ್ಷಣೆಯ” ಕುರಿತು ಬರೆಯಲು ಬಯಸಿದ್ದನು. ಆದರೆ ಅವರ ಮಧ್ಯೆ ಅನೈತಿಕ ವಿಷಯಗಳು ನಡೆಯುತ್ತಿದ್ದದ್ದನ್ನು ನೋಡಿ ಅವರಿಗೆ ಬುದ್ಧಿಹೇಳುವಂತೆ ಒತ್ತಾಯಿಸಲ್ಪಟ್ಟನು. ಆದ್ದರಿಂದ ಅವನು ತನ್ನ ಸಹೋದರರಿಗೆ “ನಂಬಿಕೆಯನ್ನು ಕಾಪಾಡಿಕೊಳ್ಳುವದಕ್ಕೆ ನೀವು ಹೋರಾಡಬೇಕೆಂದು” ಹೇಳಿದನು. ಹೌದು, ರಕ್ಷಣೆಯನ್ನು ಹೊಂದಬೇಕಾದರೆ, ಕೇವಲ ನಂಬಿಕೆ, ಕ್ರೈಸ್ತ ತತ್ವಗಳಿಗೆ ನಿಷ್ಠೆಯಿಂದಿರುವುದು, ಅಥವಾ ಯಾವುದೇ ಸಮಸ್ಯೆಗಳಿಲ್ಲದಿರುವಾಗ ಮಾತ್ರ ವಿಧೇಯತೆಯನ್ನು ತೋರಿಸುವುದಷ್ಟೇ ಸಾಲದು. ಯೆಹೋವನಿಗಾಗಿರುವ ನಮ್ಮ ಭಕ್ತಿಯು ಎಷ್ಟು ಬಲವಾಗಿರಬೇಕೆಂದರೆ, ನಾವು ಯಾವುದೇ ಶೋಧನೆಯನ್ನು ಮತ್ತು ಅಶ್ಲೀಲ ಪ್ರಭಾವಗಳನ್ನು ಎದುರಿಸಿ ನಿಲ್ಲಲು ಅದು ಸಹಾಯಮಾಡಬೇಕು. ಹಾಗಿದ್ದರೂ, ಲೈಂಗಿಕ ವಿಷಯಗಳಲ್ಲಿ ಅತಿರೇಕತೆ, ವಿಕೃತವಾದ ಲೈಂಗಿಕ ಚಟುವಟಿಕೆಗಳು, ಅಧಿಕಾರದಲ್ಲಿರುವವರಿಗೆ ಅಗೌರವ, ಪಂಗಡಗಳು ಮತ್ತು ಸಂಶಯಗಳು ಪ್ರಥಮ ಶತಮಾನದ ಕ್ರೈಸ್ತ ಸಭೆಯಲ್ಲಿದ್ದ ಕ್ರೈಸ್ತರ ಮನಸ್ಸನ್ನು ಮತ್ತು ನೈತಿಕತೆಯನ್ನು ಹಾಳುಮಾಡಿದ್ದವು. ಈ ರೀತಿಯ ಕೆಟ್ಟ ಪ್ರವೃತ್ತಿಗಳ ವಿರುದ್ಧ ಹೋರಾಡಲು ಯೂದನು ತನ್ನ ಜೊತೆ ಕ್ರೈಸ್ತರಿಗೆ ಸಹಾಯಮಾಡಿದನು. ಹೇಗೆ? ಅವರು ತಮ್ಮ ಗುರಿಯನ್ನು ಮನಸ್ಸಿನಲ್ಲಿ ಸ್ಪಷ್ಟವಾಗಿ ಇಟ್ಟುಕೊಳ್ಳುವಂತೆ ಅವನು ಅವರನ್ನು ಪ್ರೋತ್ಸಾಹಿಸಿದನು. ಅವನು ಅದನ್ನು ಹೀಗೆ ಹೇಳಿದನು: “ಪ್ರಿಯರೇ, ನೀವಾದರೋ ನಿಮಗಿರುವ ಅತಿಪರಿಶುದ್ಧವಾದ ಕ್ರಿಸ್ತ ನಂಬಿಕೆಯನ್ನು ಆಧಾರಮಾಡಿಕೊಂಡು ಭಕ್ತಿಯಲ್ಲಿ ಅಭಿವೃದ್ಧಿಯನ್ನು ಹೊಂದುತ್ತಾ ಪವಿತ್ರಾತ್ಮಪ್ರೇರಿತರಾಗಿ ಪ್ರಾರ್ಥನೆಮಾಡುತ್ತಾ ನಿತ್ಯಜೀವಕ್ಕಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಕರುಣೆಯನ್ನು ಎದುರುನೋಡುತ್ತಾ ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ.” (ಯೂದ 3, 4, 8, 19-21) ರಕ್ಷಣೆಯನ್ನು ಪಡೆಯುವೆವು ಎಂಬ ನಿರೀಕ್ಷೆಯು, ಯೆಹೋವನ ನೀತಿ ನಿಯಮಗಳಿಗೆ ನಿಷ್ಠಾವಂತರಾಗಿರಲು ಹೋರಾಡುತ್ತಾ ಇರುವಂತೆ ಅವರನ್ನು ಬಲಪಡಿಸುವುದು.

13. ದೇವರ ಕೃಪೆಯನ್ನು ವ್ಯರ್ಥಮಾಡಿಕೊಳ್ಳುತ್ತಿಲ್ಲವೆಂಬುದನ್ನು ನಾವು ಹೇಗೆ ತೋರಿಸಬಹುದು?

13 ಯೆಹೋವನು ಯಾರಿಗೆಲ್ಲ ರಕ್ಷಣೆಯನ್ನು ಅನುಗ್ರಹಿಸಲಿದ್ದಾನೋ ಅವರೆಲ್ಲರೂ ಸುಶೀಲರಾಗಿರುವಂತೆ ಅಪೇಕ್ಷಿಸುತ್ತಾನೆ. (1 ಕೊರಿಂಥ 6:9, 10) ನಾವು ದೇವರ ಉಚ್ಚ ನೈತಿಕ ಮಟ್ಟಗಳನ್ನು ಅನುಸರಿಸುತ್ತಿರುವುದರಿಂದ, ಮತ್ತೊಬ್ಬರನ್ನು ನಾವು ಖಂಡಿಸಬೇಕೆಂದು ಅರ್ಥವಲ್ಲ. ಮತ್ತೊಬ್ಬರ ಜೀವನದ ಗತಿ ಏನಾಗಲಿಕ್ಕಿದೆ ಎಂಬುದನ್ನು ತೀರ್ಮಾನಿಸುವವರು ನಾವಲ್ಲ. ಬದಲಾಗಿ ಅಪೊಸ್ತಲ ಪೌಲನು ಅಥೆನ್ಯದಲ್ಲಿದ್ದ ಗ್ರೀಕರಿಗೆ ಹೇಳಿದಂತೆ ಅದನ್ನು ದೇವರು ತೀರ್ಮಾನಿಸುವನು. ಏಕೆಂದರೆ “ಆತನು ನಿಷ್ಕರ್ಷೆಮಾಡಿದ ಪುರುಷನ ಕೈಯಿಂದ ನೀತಿಗನುಸಾರವಾಗಿ ಭೂಲೋಕದ ನ್ಯಾಯವಿಚಾರಣೆ ಮಾಡುವದಕ್ಕೆ ಒಂದು ದಿವಸವನ್ನು ಗೊತ್ತುಮಾಡಿದ್ದಾನೆ.” (ಅ. ಕೃತ್ಯಗಳು 17:31; ಯೋಹಾನ 5:22) ಯೇಸುವಿನ ಪ್ರಾಯಶ್ಚಿತ್ತ ಯಜ್ಞದಲ್ಲಿ ನಂಬಿಕೆಯನ್ನಿಟ್ಟು ನಾವು ಜೀವಿಸಬೇಕು. ಹಾಗೆ ಮಾಡುತ್ತಿರುವುದಾದರೆ, ಬರಲಿರುವ ನ್ಯಾಯವಿಚಾರಣೆಯ ದಿನದ ಕುರಿತು ನಾವು ಭಯಪಡಬೇಕಾಗಿರುವುದಿಲ್ಲ. (ಇಬ್ರಿಯ 10:38, 39) ಆದರೆ, ಬಹು ಮುಖ್ಯವಾದ ವಿಷಯವು ನಾವು ‘ಹೊಂದಿದ ದೇವರ ಕೃಪೆಯನ್ನು [ಯೇಸುವಿನ ಪ್ರಾಯಶ್ಚಿತ್ತದ ಮೂಲಕ ದೇವರೊಂದಿಗೆ ನಾವು ರಾಜಿಯಾದುದ್ದನ್ನು] ವ್ಯರ್ಥಮಾಡಿಕೊಳ್ಳಬಾರದು.’ ಹೇಗೆ? ತಪ್ಪಾದ ಆಲೋಚನೆ ಮತ್ತು ನಡತೆಯಲ್ಲಿ ಒಳಗೂಡುವಂತಹ ಶೋಧನೆಗಳು ಬರುವಾಗ ಅವುಗಳಿಗೆ ನಮ್ಮನ್ನು ಬಿಟ್ಟುಕೊಡಬಾರದು. (2 ಕೊರಿಂಥ 6:1) ಎರಡನೆಯದಾಗಿ, ನಾವು ದೇವರ ಕೃಪೆಯನ್ನು ವ್ಯರ್ಥಮಾಡಿಕೊಳ್ಳುತ್ತಿಲ್ಲವೆಂಬುದನ್ನು ತೋರಿಸಬೇಕಾದರೆ, ಇತರರಿಗೆ ಸಹ ರಕ್ಷಣೆಯನ್ನು ಹೊಂದಲು ನಾವು ಸಹಾಯಮಾಡಬೇಕು. ಅದನ್ನು ಹೇಗೆ ಮಾಡುವೆವು?

ರಕ್ಷಣೆಯ ನಿರೀಕ್ಷೆಯನ್ನು ಇತರರೊಂದಿಗೆ ಹಂಚಿಕೊಳ್ಳುವುದು

14, 15. ರಕ್ಷಣೆಯ ಕುರಿತು ಶುಭದ ಸುವಾರ್ತೆಯನ್ನು ಸಾರುವ ಕೆಲಸವನ್ನು ಯೇಸು ಯಾರಿಗೆ ಒಪ್ಪಿಸಿದ್ದಾನೆ?

14 ಯೋವೇಲನ ಪ್ರವಾದನೆಯನ್ನು ಉಲ್ಲೇಖಿಸುತ್ತಾ ಪೌಲನು ಬರೆದದ್ದು: ‘ಕರ್ತನ [“ಯೆಹೋವನ,” NW] ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವುದು.’ ಮತ್ತೆ ಅವನು ಕೂಡಿಸಿ ಹೇಳುವುದು, “ಆದರೆ ತಾವು ಯಾವನನ್ನು ನಂಬಲಿಲ್ಲವೋ ಆತನ ನಾಮವನ್ನು ಹೇಳಿಕೊಳ್ಳುವದು ಹೇಗೆ? ಮತ್ತು ಆತನ ಸುದ್ದಿ ಕೇಳದಿರುವಲ್ಲಿ ಆತನನ್ನು ನಂಬುವದು ಹೇಗೆ? ಸಾರಿ ಹೇಳುವವನಿಲ್ಲದೆ ಕೇಳುವದು ಹೇಗೆ?” ಕೆಲವು ವಚನಗಳ ನಂತರ, ನಂಬಿಕೆ ಅನ್ನುವದು ತನ್ನಷ್ಟಕ್ಕೆ ತಾನೇ ಬರುವಂತಹದ್ದಲ್ಲ ಬದಲಿಗೆ, “ಸಾರಿದ ವಾರ್ತೆಯು ನಂಬಿಕೆಗೆ ಆಧಾರ”ವಾಗಿರುತ್ತದೆ ಮತ್ತು ಆ ವಾರ್ತೆಯು “ಕ್ರಿಸ್ತನ ವಾಕ್ಯವೇ” ಆಗಿದೆ ಎಂದು ಪೌಲನು ಸೂಚಿಸಿ ಹೇಳುತ್ತಾನೆ.—ರೋಮಾಪುರ 10:13, 14, 17; ಯೋವೇಲ 2:32.

15 ಹಾಗಾದರೆ “ಕ್ರಿಸ್ತನ ವಾಕ್ಯ”ವನ್ನು ಜನಾಂಗಗಳಿಗೆ ಕೊಂಡೊಯ್ಯುವವರು ಯಾರು? ನಾವೇ ಆಗಿದ್ದೇವೆ! ಏಕೆಂದರೆ, “ವಾಕ್ಯ”ವನ್ನು ಈಗಾಗಲೇ ಕಲಿತಿರುವ ತನ್ನ ಶಿಷ್ಯರಿಗೆ ಯೇಸು ಆ ಕೆಲಸವನ್ನು ಒಪ್ಪಿಸಿದನು. (ಮತ್ತಾಯ 24:14; 28:19, 20; ಯೋಹಾನ 17:20) ಆದ್ದರಿಂದ, ವಾಕ್ಯವನ್ನು ಕಲಿತಿರುವ ನಾವು ರಾಜ್ಯದ ಕುರಿತು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ತೊಡಗಬೇಕು. ಆಗ ಮಾತ್ರ, ಪೌಲನು ಏನನ್ನು ಬರೆದನೋ ಅದನ್ನೇ ಮಾಡುತ್ತಿರುವೆವು. ಅವನು ಅದನ್ನು ಈ ಸಾರಿ ಯೆಶಾಯನ ಪ್ರವಾದನೆಯಿಂದ ಉಲ್ಲೇಖಿಸಿ ಬರೆಯುತ್ತಾನೆ: “ಶುಭದ ಸುವಾರ್ತೆಯನ್ನು ಸಾರುವವರ ಪಾದಗಳು ಎಷ್ಟೋ ಅಂದವಾಗಿವೆ!” ನಾವು ಸಾರುವ ಶುಭದ ಸುವಾರ್ತೆಯನ್ನು ಅನೇಕರು ಕೇಳಿಸಿಕೊಳ್ಳದೇ ಇದ್ದರೂ ಕೂಡ, ನಮ್ಮ ಪಾದಗಳು ಯೆಹೋವನಿಗೆ ‘ಅಂದವಾಗಿರುವವು.’—ರೋಮಾಪುರ 10:15; ಯೆಶಾಯ 52:7.

16, 17. ನಮ್ಮ ಸಾರುವ ಕೆಲಸವು ಯಾವ ಎರಡು ಉದ್ದೇಶಗಳನ್ನು ಪೂರೈಸುತ್ತದೆ?

16 ಸಾರುವ ಕೆಲಸವನ್ನು ಮಾಡಿಮುಗಿಸುವುದರಿಂದ, ಎರಡು ಬಹು ಮುಖ್ಯ ಉದ್ದೇಶಗಳು ಪೂರೈಸಲ್ಪಡುತ್ತವೆ. ಒಂದು, ದೇವರ ನಾಮವು ಮಹಿಮೆಗೊಳಿಸಲ್ಪಡಬೇಕಾದರೆ ನಾವು ಸುವಾರ್ತೆಯನ್ನು ಸಾರಲೇಬೇಕು. ಇದು, ರಕ್ಷಣೆಯನ್ನು ಬಯಸುವವರಿಗೆ ಕೂಡ ತಾವು ಏನು ಮಾಡಬೇಕೆಂಬುದನ್ನು ತಿಳಿದುಕೊಳ್ಳಲು ಸಹಾಯಮಾಡುವುದು. ಸಾರುವ ಕೆಲಸದ ಈ ಅಂಶವನ್ನು ಪೌಲನು ಚೆನ್ನಾಗಿ ಅರ್ಥಮಾಡಿಕೊಂಡಿದ್ದನು. ಆದ್ದರಿಂದಲೇ ಅವನು ಹೇಳಿದ್ದು: “ಹಾಗೆಯೇ ಕರ್ತನು ನಮಗೆ ಅಪ್ಪಣೆ ಕೊಟ್ಟಿದ್ದಾನೆ; ಹೇಗಂದರೆ—ನೀನು ಲೋಕದ ಕಟ್ಟಕಡೆಯ ವರೆಗೆ ರಕ್ಷಕನಾಗಿರುವಂತೆ ನಿನ್ನನ್ನು ಅನ್ಯಜನಾಂಗಗಳಿಗೂ ಬೆಳಕನ್ನಾಗಿ ನೇಮಿಸಿದ್ದೇನೆ ಎಂದು ದೇವರು ಹೇಳಿದ್ದಾನೆ.” ಹಾಗಾಗಿ, ಕ್ರಿಸ್ತನ ಶಿಷ್ಯರಾಗಿರುವ ನಮ್ಮಲ್ಲಿ ಪ್ರತಿಯೊಬ್ಬರು ಜನರಿಗೆ ರಕ್ಷಣೆಯ ಸಂದೇಶವನ್ನು ಕೊಡುವ ಕೆಲಸದಲ್ಲಿ ಪಾಲ್ಗೊಳ್ಳಬೇಕು.—ಅ. ಕೃತ್ಯಗಳು 13:47; ಯೆಶಾಯ 49:6.

17 ಸಾರುವ ಕೆಲಸವು ನೆರವೇರಿಸುವ ಎರಡನೇ ಉದ್ದೇಶವನ್ನು ನೋಡೋಣ. ಅದು, ದೇವರು ನೀತಿಯುತವಾಗಿ ನ್ಯಾಯತೀರ್ಪನ್ನು ಕೊಡಲು ಒಂದು ಒಳ್ಳೇ ಆಧಾರವನ್ನು ಒದಗಿಸುವುದು. ಅಂಥ ಒಂದು ತೀರ್ಪಿನ ಕುರಿತು ಯೇಸು ಹೀಗೆ ಹೇಳಿದನು: ‘ಮನುಷ್ಯಕುಮಾರನು ತನ್ನ ಮಹಿಮೆಯಿಂದ ಎಲ್ಲಾ ದೇವದೂತರೊಂದಿಗೆ ಕೂಡಿಬರುವಾಗ ತನ್ನ ಮಹಿಮೆಯ ಸಿಂಹಾಸನದಲ್ಲಿ ಕೂತುಕೊಳ್ಳುವನು; ಮತ್ತು ಎಲ್ಲಾ ದೇಶಗಳ ಜನರು ಆತನ ಮುಂದೆ ಕೂಡಿಸಲ್ಪಡುವರು. ಕುರುಬನು ಆಡುಗಳನ್ನೂ ಕುರಿಗಳನ್ನೂ ಬೇರೆಬೇರೆಮಾಡುವ ಪ್ರಕಾರ ಆತನು ಅವರನ್ನು ಬೇರೆಬೇರೆಮಾಡುವನು.’ ತೀರ್ಪುಮಾಡುವ ಮತ್ತು ಬೇರ್ಪಡಿಸುವ ಕೆಲಸವು, ‘ಮನುಷ್ಯಕುಮಾರನು ತನ್ನ ಮಹಿಮೆಯಲ್ಲಿ ಬರುವಾಗ’ ನಡೆಯುವುದಾದರೂ, ಸಾರುವ ಕೆಲಸವು ಇಂದು ಜನರಿಗೆ ಕ್ರಿಸ್ತನ ಆತ್ಮಿಕ ಸಹೋದರರನ್ನು ಗುರುತಿಸಲು ಒಂದು ಉತ್ತಮ ಅವಕಾಶವನ್ನು ಕೊಡುತ್ತದೆ. ಹೀಗೆ, ಆ ಆತ್ಮಿಕ ಸಹೋದರರ ಕೆಲಸದಲ್ಲಿ ಸಹಾಯಮಾಡುವಾಗ ಅವರು ತಮ್ಮ ನಿತ್ಯ ರಕ್ಷಣೆಗಾಗಿಯೂ ಕೂಡ ಪರಿಶ್ರಮಿಸುತ್ತಿರುತ್ತಾರೆ.—ಮತ್ತಾಯ 25:31-46.

‘ನಿಮ್ಮ ನಿರೀಕ್ಷೆಯನ್ನು ದೃಢವಾಗಿ’ ಇಟ್ಟುಕೊಳ್ಳಿ

18. ನಮ್ಮ ‘ರಕ್ಷಣೆಯ ನಿರೀಕ್ಷೆಯನ್ನು’ ನಾವು ಹೇಗೆ ದೃಢವಾಗಿಟ್ಟುಕೊಳ್ಳಬಲ್ಲೆವು?

18 ಸಾರುವ ಕೆಲಸದಲ್ಲಿ ನಾವು ಎಷ್ಟು ಕ್ರಿಯಾಶೀಲರಾಗಿರುತ್ತೇವೋ ನಮ್ಮ ನಿರೀಕ್ಷೆಯು ಕೂಡ ಅಷ್ಟೇ ದೃಢವಾಗಿರುತ್ತದೆ. ಇದನ್ನೇ ಪೌಲನು ಹೀಗೆ ಬರೆಯುತ್ತಾನೆ: “ನಿಮ್ಮ ನಿರೀಕ್ಷೆ ದೃಢ ಮಾಡಿಕೊಂಡು ಕಡೇ ತನಕ ಹಿಡಿಯುವದರಲ್ಲಿಯೂ ನಿಮ್ಮಲ್ಲಿ ಪ್ರತಿಯೊಬ್ಬರು ಅದೇ ಆಸಕ್ತಿಯನ್ನು ತೋರಿಸಬೇಕೆಂದು ಅಪೇಕ್ಷಿಸುತ್ತೇವೆ.” (ಇಬ್ರಿಯ 6:11) ಆದ್ದರಿಂದ ನಮ್ಮಲ್ಲಿ ಪ್ರತಿಯೊಬ್ಬರು ‘ರಕ್ಷಣೆಯ ನಿರೀಕ್ಷೆಯೆಂಬ ಶಿರಸ್ತ್ರಾಣವನ್ನು ಧರಿಸಿಕೊಳ್ಳುವಂತಾಗಲಿ.’ ಹೀಗೆ, “ದೇವರು ನಮ್ಮನ್ನು ತನ್ನ ಕೋಪಕ್ಕೆ ಗುರಿಯಾಗಬೇಕೆಂದು ನೇಮಿಸದೆ ನಾವು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕವಾಗಿ ರಕ್ಷಣೆಯನ್ನು ಸಂಪಾದಿಸಿಕೊಳ್ಳಬೇಕೆಂದು ನೇಮಿಸಿದನು” ಎಂಬುದನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳೋಣ. (1 ಥೆಸಲೊನೀಕ 5:8, 9) ಆದುದರಿಂದ ಪೇತ್ರನ ಎಚ್ಚರಿಕೆಯನ್ನೂ ನಾವು ಮನಸ್ಸಿಗೆ ತೆಗೆದುಕೊಳ್ಳೋಣ: “ನೀವು ಮನಸ್ಸಿನ ನಡುವನ್ನು ಕಟ್ಟಿಕೊಂಡು ಸ್ವಸ್ಥಚಿತ್ತರಾಗಿದ್ದು . . . ನಿಮಗೆ ದೊರಕುವ ಭಾಗ್ಯದ ಮೇಲೆ ನಿಮ್ಮ ನಿರೀಕ್ಷೆಯನ್ನು ಸಂಪೂರ್ಣವಾಗಿ ಇಡಿರಿ.” (1 ಪೇತ್ರ 1:13) ಇದರಂತೆ ನಡೆಯುವ ಪ್ರತಿಯೊಬ್ಬರು ತಮ್ಮ ‘ರಕ್ಷಣೆಯ ನಿರೀಕ್ಷೆಯು’ ಸಂಪೂರ್ಣವಾಗಿ ನೆರವೇರುವುದನ್ನು ನೋಡುವರು!

19. ಮುಂದಿನ ಲೇಖನದಲ್ಲಿ ನಾವು ಯಾವ ಪ್ರಶ್ನೆಗಳಿಗೆ ಉತ್ತರವನ್ನು ನೋಡಲಿದ್ದೇವೆ?

19 ರಕ್ಷಣೆಯ ನಿರೀಕ್ಷೆಯು ನೆರವೇರುವ ವರೆಗೂ, ಈ ವ್ಯವಸ್ಥೆಗೆ ಉಳಿದಿರುವ ಸಮಯವನ್ನು ನಾವು ಯಾವ ರೀತಿಯಲ್ಲಿ ವೀಕ್ಷಿಸುತ್ತೇವೆ? ಈ ಸಮಯವನ್ನು ನಮ್ಮ ಹಾಗೂ ಇತರರ ರಕ್ಷಣೆಗಾಗಿ ನಾವು ಹೇಗೆ ಉಪಯೋಗಿಸಿಕೊಳ್ಳಬಹುದು? ಈ ಪ್ರಶ್ನೆಗಳಿಗೆ ಉತ್ತರವನ್ನು ನಾವು ಮುಂದಿನ ಲೇಖನದಲ್ಲಿ ನೋಡಲಿದ್ದೇವೆ.

ನೀವು ವಿವರಿಸಬಲ್ಲಿರೋ?

• ನಮ್ಮ ‘ನಿರೀಕ್ಷೆಯ ರಕ್ಷಣೆಯನ್ನು’ ಏಕೆ ದೃಢವಾಗಿಟ್ಟುಕೊಳ್ಳಬೇಕು?

• ರಕ್ಷಣೆಯಲ್ಲಿ ಏನೆಲ್ಲಾ ಒಳಗೂಡಿದೆ?

• ರಕ್ಷಣೆಯೆಂಬ ಕೊಡುಗೆಯನ್ನು ಪಡೆದುಕೊಳ್ಳಲು ನಾವು ಹೇಗೆ ಅರ್ಹರಾಗಬಹುದು?

• ನಮ್ಮ ಸಾರುವ ಕೆಲಸವು ದೇವರ ಉದ್ದೇಶವನ್ನು ಯಾವ ರೀತಿಯಲ್ಲಿ ನೆರವೇರಿಸುತ್ತದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 10ರಲ್ಲಿರುವ ಚಿತ್ರಗಳು]

ನಾಶನದ ಸಮಯದಲ್ಲಿ ಕಾಪಾಡಲ್ಪಡುವುದಕ್ಕಿಂತ ಹೆಚ್ಚಿನದ್ದು ರಕ್ಷಣೆಯಲ್ಲಿ ಸೇರಿದೆ