ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಣ್ಣಿಗೆ ಕಾಣಿಸದಿರುವುದನ್ನು ನೀವು ನಂಬುತ್ತೀರೋ?

ಕಣ್ಣಿಗೆ ಕಾಣಿಸದಿರುವುದನ್ನು ನೀವು ನಂಬುತ್ತೀರೋ?

ಕಣ್ಣಿಗೆ ಕಾಣಿಸದಿರುವುದನ್ನು ನೀವು ನಂಬುತ್ತೀರೋ?

‘ನಾನು ಕಣ್ಣಿಗೆ ಕಾಣುವುದನ್ನು ಮಾತ್ರ ನಂಬುತ್ತೇನೆ’ ಎಂದು ಯಾರಾದರೂ ಹೇಳುವಾಗ, ಅವರು ಅಕ್ಷರಾರ್ಥವಾಗಿ ಹೇಳುತ್ತಿಲ್ಲವೆಂದು ನಮಗೆ ಗೊತ್ತು. ಏಕೆಂದರೆ, ವಾಸ್ತವದಲ್ಲಿ ನಾವೆಲ್ಲರೂ ಕಣ್ಣಿಗೆ ಕಾಣಿಸದಿರುವ ಅನೇಕ ವಿಷಯಗಳನ್ನು ನಂಬುತ್ತೇವೆ.

ಉದಾಹರಣೆಗೆ, ಅಯಸ್ಕಾಂತದ ಪ್ರಭಾವವನ್ನು ತಿಳಿದುಕೊಳ್ಳಲು ಶಾಲೆಯಲ್ಲಿ ನೀವು ಪ್ರಯೋಗವನ್ನು ಮಾಡಿರಬಹುದು. ಆ ಪ್ರಯೋಗವು ಈ ರೀತಿಯಾಗಿ ಇರಬಹುದು: ಒಂದು ಕಾಗದದ ಹಾಳೆಯ ಮೇಲೆ ಕಬ್ಬಿಣದ ರಜಗಳನ್ನು (ಪುಡಿಗಳನ್ನು) ಹರಡಿರಿ, ಆ ಹಾಳೆಯನ್ನು ಅಯಸ್ಕಾಂತದ ಮೇಲೆ ಇಡಿ. ನಂತರ ಹಾಳೆಯನ್ನು ಹೊರಳಿಸಿದಾಗ, ಮ್ಯಾಜಿಕ್‌ ಮಾಡಿದಂತೆ ಕಬ್ಬಿಣದ ರಜಗಳು ಅಯಸ್ಕಾಂತದ ತುದಿಗಳ ಬಳಿ ಇರುವ ಕಾಂತಧ್ರುವಗಳ ಹತ್ತಿರ ಕೇಂದ್ರೀಕೃತವಾಗುತ್ತವೆ. ಕಾಂತಕ್ಷೇತ್ರದ ಪ್ರಭಾವವಿರುವ ಆಕಾರವನ್ನು ಉಂಟುಮಾಡುತ್ತವೆ. ಒಂದು ವೇಳೆ ನೀವು ಈ ಪ್ರಯೋಗವನ್ನು ಮಾಡಿರುವುದಾದರೆ, ನಿಮಗೆ ಅಯಸ್ಕಾಂತದ ಪ್ರಭಾವವನ್ನು ನೋಡಲು ಸಾಧ್ಯವಾಯಿತೆ? ಇಲ್ಲ. ಆದರೆ ಕಬ್ಬಿಣದ ರಜಗಳ ಮೇಲಿನ ಅಯಸ್ಕಾಂತದ ಪ್ರಭಾವವು ಮಾತ್ರ ನಿಮಗೆ ಸ್ಪಷ್ಟವಾಗಿ ಕಾಣಿಸುತ್ತದೆ. ಇದೇ ಅಯಸ್ಕಾಂತದ ಪ್ರಭಾವವಿರುವುದರ ಪುರಾವೆಯನ್ನು ನಿಮಗೆ ಕೊಡುತ್ತದೆ.

ನಮಗೆ ಕಾಣಿಸದಿರುವ ಇನ್ನೂ ಕೆಲವು ವಸ್ತುಗಳ ಅಸ್ತಿತ್ವವನ್ನು ನಾವು ಕಿಂಚಿತ್ತೂ ಸಂದೇಹಿಸದೆ ಒಪ್ಪಿಕೊಳ್ಳುತ್ತೇವೆ. ಉದಾಹರಣೆಗೆ, ನಾವು ಒಂದು ಸುಂದರವಾದ ಚಿತ್ರಕಲೆಯನ್ನೋ ಅಥವಾ ಒಂದು ಅತ್ಯುತ್ತಮವಾದ ವಾಸ್ತುಶಿಲ್ಪವನ್ನೋ ನೋಡುವಾಗ, ಅದನ್ನು ಒಬ್ಬ ಕಲಾಕಾರನೋ ಅಥವಾ ಶಿಲ್ಪಿಯೋ ರಚಿಸಿದ್ದಾನೆ ಎಂಬ ವಿಷಯದಲ್ಲಿ ಕಿಂಚಿತ್ತೂ ಸಂದೇಹಿಸುವುದಿಲ್ಲ. ಹಾಗೆಯೇ, ಒಂದು ಜಲಪಾತವನ್ನೋ ಅಥವಾ ಸೂರ್ಯಾಸ್ತಮಾನವನ್ನೋ ದೃಷ್ಟಿಸಿ ನೋಡುವಾಗಲೂ ಕೂಡ, ಅವು ಒಬ್ಬ ಮಹಾನ್‌ ಕಲಾಕಾರನ ಅಥವಾ ಶಿಲ್ಪಿಯ ಕೈಕೆಲಸವಾಗಿ ಯಾಕೆ ಇರಬಾರದು ಎಂದು ಪ್ರಶ್ನಿಸುವಂತೆ ನಾವು ಪ್ರಚೋದಿಸಲ್ಪಡುವುದಿಲ್ಲವೇ?

ಕೆಲವರು ಏಕೆ ನಂಬುವುದಿಲ್ಲ?

ಕೆಲವರು ದೇವರಲ್ಲಿ ನಂಬಿಕೆಯನ್ನು ಕಳೆದುಕೊಂಡಿರುವುದು ವಿಪರ್ಯಾಸದ ಸಂಗತಿಯಾಗಿದೆ. ಯಾಕೆಂದರೆ, ಚರ್ಚಿನಲ್ಲಿ ಅವರಿಗೆ ದೇವರ ಕುರಿತು ಆ ರೀತಿಯಲ್ಲಿ ಕಲಿಸಲಾಗಿದೆ. ಇದು ನಾರ್ವೆಯ ಒಬ್ಬ ವ್ಯಕ್ತಿಯ ವಿಷಯದಲ್ಲಿ ನಿಜವಾಗಿತ್ತು. ಏಕೆಂದರೆ ದೇವರು ದುಷ್ಟರನ್ನು ನರಕದಲ್ಲಿ ಉರಿಯುವ ಬೆಂಕಿಯಲ್ಲಿ ಹಾಕಿ ಸುಡುತ್ತಾನೆ ಎಂದು ಚರ್ಚಿನಲ್ಲಿ ಅವನಿಗೆ ಹೇಳಲಾಗಿತ್ತು. ಜನರನ್ನು ಈ ರೀತಿಯಲ್ಲಿ ಹಿಂಸಿಸುವ ದೇವರು ಎಂಥ ದೇವರಾಗಿರಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ಅವನಿಗೆ ಸಾಧ್ಯವಾಗಲೇ ಇಲ್ಲ. ಇದರಿಂದಾಗಿ ಅವನು ದೇವರಲ್ಲಿ ನಂಬಿಕೆಯನ್ನು ಕಳೆದುಕೊಂಡನು.

ಆದರೆ ಕಾಲಾನಂತರ, ಆ ವ್ಯಕ್ತಿಯು ಒಬ್ಬ ಯೆಹೋವನ ಸಾಕ್ಷಿಯ ಸಹಾಯದೊಂದಿಗೆ ಬೈಬಲಿನ ಬೋಧನೆಗಳನ್ನು ಪರೀಕ್ಷಿಸಲು ಒಪ್ಪಿಕೊಂಡನು. ದುಷ್ಟರನ್ನು ನರಕದಲ್ಲಿ ಉರಿಯುವ ಬೆಂಕಿಯಲ್ಲಿ ಸುಡುವುದನ್ನು ಬೈಬಲ್‌ ಕಲಿಸುವುದಿಲ್ಲ, ಅದಕ್ಕೆ ಬದಲಾಗಿ ಅದು ಮರಣವನ್ನು ನಿದ್ರೆಗೆ ಹೋಲಿಸುತ್ತದೆ. ಅಷ್ಟೇ ಅಲ್ಲದೆ, ಸಮಾಧಿಯಲ್ಲಿ ನಮಗೆ ಯಾವುದೇ ರೀತಿಯ ನೋವಿನ ಅನುಭವವಾಗುವುದಿಲ್ಲ. ಏಕೆಂದರೆ ಅಲ್ಲಿ ನಮಗೆ ಯಾವುದರ ಪ್ರಜ್ಞೆಯೂ ಇರುವುದಿಲ್ಲ ಎಂಬುದನ್ನು ಕಲಿತಾಗ ಅವನು ಬೆರಗಾದನು. (ಪ್ರಸಂಗಿ 9:5, 10) ಯಾರನ್ನು ತಿದ್ದಲು ಸಾಧ್ಯವೇ ಇಲ್ಲವೆಂದು ದೇವರು ತೀರ್ಪುಮಾಡುವನೋ ಅಂಥ ದುಷ್ಟರು ಸಮಾಧಿಯಲ್ಲೇ ಉಳಿಯುವರು ಎಂಬುದನ್ನು ಕೂಡ ಆ ವ್ಯಕ್ತಿಯು ಕಲಿತುಕೊಂಡನು. (ಮತ್ತಾಯ 12:31, 32) ಉಳಿದ ಮಾನವರಿಗೆ ದೇವರ ತಕ್ಕ ಸಮಯದಲ್ಲಿ ಪುನರುತ್ಥಾನವಾಗುವುದು. ಮತ್ತು ಅವರಿಗೆ ಪ್ರಮೋದವನ ಪರಿಸ್ಥಿತಿಯ ಕೆಳಗೆ ನಿತ್ಯಜೀವವನ್ನು ಆನಂದಿಸುವ ಅವಕಾಶವಿರುವುದು. (ಯೋಹಾನ 5:28, 29; 17:3) ಈ ವಿವರಣೆಯು ಒಪ್ಪತಕ್ಕದ್ದಾಗಿತ್ತು ಮಾತ್ರವಲ್ಲ ಬೈಬಲಿನಲ್ಲಿ ಹೇಳಿರುವ “ದೇವರು ಪ್ರೀತಿಸ್ವರೂಪಿ” ಎಂಬ ಹೇಳಿಕೆಗೆ ಹೊಂದಿಕೆಯಲ್ಲಿತ್ತು. (1 ಯೋಹಾನ 4:8) ಈ ಯಥಾರ್ಥ ವ್ಯಕ್ತಿಯು ದೇವರ ವಾಕ್ಯದ ಅಭ್ಯಾಸವನ್ನು ಮುಂದುವರಿಸಿದನು. ಮತ್ತು ಸ್ವಲ್ಪ ಸಮಯದೊಳಗಾಗಿ ಅವನು ದೇವರನ್ನು ಮತ್ತು ಆತನ ವಾಕ್ಯವನ್ನು ಪ್ರೀತಿಸತೊಡಗಿದನು.

ಇನ್ನೂ ಕೆಲವರು, ಸಂಕಷ್ಟ ಮತ್ತು ಅನ್ಯಾಯವನ್ನು ನೋಡುವಾಗ ಒಬ್ಬ ಪ್ರೀತಿಯುಳ್ಳ ಸೃಷ್ಟಿಕರ್ತನ ಅಸ್ತಿತ್ವವನ್ನೇ ಅಲ್ಲಗಳೆಯುತ್ತಾರೆ. ಇಂಥವರು ಸ್ವೀಡನ್ನಿನ ಒಬ್ಬ ವ್ಯಕ್ತಿಯ ಮಾತನ್ನು ಒಪ್ಪಿಕೊಳ್ಳುತ್ತಾರೆ. ಆ ವ್ಯಕ್ತಿಯು ಒಮ್ಮೆ ಆಕಾಶದ ಕಡೆಗೆ ಕೈ ತೋರಿಸುತ್ತಾ ಈ ಪ್ರಶ್ನೆಯನ್ನು ಕೇಳಿದನು: “ಈ ಭೂಮಿಯ ಮೇಲೆ ಇಷ್ಟೊಂದು ಭ್ರಷ್ಟಾಚಾರ ಮತ್ತು ದುಷ್ಟತನವು ಇರುವಾಗ, ಒಬ್ಬ ಸರ್ವಶಕ್ತನು ಹಾಗೂ ಸರ್ವಸ್ವವನ್ನು ಹೊಂದಿರುವ ದೇವರೊಬ್ಬನು ಹೇಗೆ ಇರಲು ಸಾಧ್ಯವಿದೆ?” ಅವನ ಈ ಪ್ರಶ್ನೆಗೆ ಯಾರಿಂದಲೂ ಉತ್ತರಿಸಲು ಆಗಲಿಲ್ಲ. ಇದರಿಂದಾಗಿ ಅವನೊಬ್ಬ ನಾಸ್ತಿಕನಾಗಿಬಿಟ್ಟನು. ಸಮಯಾನಂತರ ಅವನು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್‌ ಅಭ್ಯಾಸ ಮಾಡಲು ಪ್ರಾರಂಭಿಸಿದನು. ದೇವರು ಯಾಕೆ ದುಷ್ಟತನಕ್ಕೆ ಅನುಮತಿಯನ್ನು ನೀಡಿದ್ದಾನೆಂದು ಬಹುಕಾಲದಿಂದಲೂ ಜನರನ್ನು ಕಾಡುತ್ತಿದ್ದ ಪ್ರಶ್ನೆಗೆ, ದೇವರ ವಾಕ್ಯವು ಉತ್ತರವನ್ನು ಕೊಡುತ್ತದೆ ಎಂಬುದನ್ನು ಅವನು ಕಲಿತುಕೊಂಡನು. *

ಇಂದು ಭೂಮಿಯ ಮೇಲೆ ದುಷ್ಟತನವು ಇದೆ ಎಂದ ಮಾತ್ರಕ್ಕೆ ದೇವರೇ ಇಲ್ಲ ಎಂಬ ಅರ್ಥವನ್ನು ಇದು ಕೊಡುವುದಿಲ್ಲ ಎಂಬುದನ್ನು ಈ ಯಥಾರ್ಥ ವ್ಯಕ್ತಿಯು ಕಲಿತುಕೊಂಡನು. ದೃಷ್ಟಾಂತಕ್ಕಾಗಿ: ಮಾಂಸವನ್ನು ಕತ್ತರಿಸುವುದಕ್ಕಾಗಿ ಒಬ್ಬನು ಕತ್ತಿಯನ್ನು ತಯಾರಿಸಿದ್ದಿರಬಹುದು. ಆದರೆ ಕತ್ತಿಯನ್ನು ಕೊಂಡುಕೊಳ್ಳುವವನು, ಮಾಂಸವನ್ನು ಕತ್ತರಿಸುವುದಕ್ಕೆ ಬದಲಾಗಿ ಕೊಲೆ ಮಾಡುವುದಕ್ಕಾಗಿ ಅದನ್ನು ಉಪಯೋಗಿಸಬಹುದು. ಕತ್ತಿಯು ದುರುಪಯೋಗವಾದ ಮಾತ್ರಕ್ಕೆ ಅದನ್ನು ಯಾರೂ ತಯಾರಿಸಲೇ ಇಲ್ಲವೆಂದು ಹೇಳಲು ಸಾಧ್ಯವಿಲ್ಲ. ಅದೇ ರೀತಿಯಲ್ಲಿ, ಈ ಭೂಮಿಯು ಯಾವ ಉದ್ದೇಶಕ್ಕಾಗಿ ಮಾಡಲ್ಪಟ್ಟಿತೋ ಆ ಉದ್ದೇಶಕ್ಕನುಸಾರವಾಗಿ ಉಪಯೋಗಿಸಲ್ಪಡುತ್ತಿಲ್ಲ ಎಂದ ಮಾತ್ರಕ್ಕೆ ಅದನ್ನು ಯಾರೂ ಸೃಷ್ಟಿಯೇ ಮಾಡಿಲ್ಲ ಎಂದು ಹೇಳಸಾಧ್ಯವಿಲ್ಲ.

ದೇವರ ಕೆಲಸವು ಕುಂದಿಲ್ಲದ್ದೆಂದು, ‘ಆತನು ನಿರ್ವಂಚಕನು . . . ನೀತಿಯುಳ್ಳವನೂ ಯಥಾರ್ಥನೂ ಆಗಿದ್ದಾನೆ’ ಎಂದು ಬೈಬಲ್‌ ಕಲಿಸುತ್ತದೆ. (ಧರ್ಮೋಪದೇಶಕಾಂಡ 32:4) ದೇವರು ಮನುಷ್ಯನಿಗೆ ಒಳ್ಳೇ ಉಡುಗೊರೆಗಳನ್ನೇ ಕೊಟ್ಟಿದ್ದಾನೆ. ಆದರೆ ಅವುಗಳಲ್ಲಿ ಕೆಲವು ದುರುಪಯೋಗಿಸಲ್ಪಟ್ಟಿವೆ. ಇದು ವರ್ಣಿಸಲಸಾಧ್ಯವಾದ ಸಂಕಷ್ಟವನ್ನು ಉಂಟುಮಾಡಿದೆ. (ಯಾಕೋಬ 1:17) ಆದರೆ ದೇವರು ಸಂಕಷ್ಟಗಳಿಗೆ ಕೊನೆಯನ್ನು ತರುವನು. ಅದಾದ ಮೇಲೆ “ದೀನರು ದೇಶವನ್ನು ಅನುಭವಿಸುವರು; . . . ಅದರಲ್ಲಿ ಶಾಶ್ವತವಾಗಿ ವಾಸಿಸುವರು.”—ಕೀರ್ತನೆ 37:11, 29.

ಈ ಹಿಂದೆ ತಿಳಿಸಲಾಗಿದ್ದ ಆ ಸ್ವೀಡನ್ನಿನ ವ್ಯಕ್ತಿಗೆ, ತನ್ನ ಸಹಮಾನವರು ಕಷ್ಟಪಡುವುದನ್ನು ನೋಡಿದಾಗ ಹೃದಯ ಹಿಂಡಿದಂತಾಗುತ್ತಿತ್ತು. ನಿಜವಾಗಿಯೂ ಇತರರಿಗಾಗಿರುವ ಅವನ ಕೋಮಲ ಭಾವನೆಗಳು ದೇವರು ಅಸ್ತಿತ್ವದಲ್ಲಿದ್ದಾನೆಂಬುದನ್ನು ರುಜುಪಡಿಸುತ್ತವೆ. ಅದು ಹೇಗೆ?

ಇಂದು ದೇವರನ್ನು ನಂಬದಿರುವ ಅನೇಕ ಜನರಿಗೆ ಉಳಿದಿರುವ ಒಂದೇ ಒಂದು ಮಾರ್ಗವು, ವಿಕಾಸವಾದದಲ್ಲಿ ನಂಬಿಕೆಯಿಡುವುದಾಗಿದೆ. ವಿಕಾಸವಾದಿಗಳು ಕಲಿಸುವುದೇನೆಂದರೆ, “ಅತ್ಯಂತ ಸಮರ್ಥ ಜೀವಿಗಳು ಉಳಿಯುತ್ತವೆ.” ಅಂದರೆ, ಮಾನವರು ಮತ್ತು ಪ್ರಾಣಿಗಳು ತಮ್ಮ ತಮ್ಮ ಸಂತಾನಗಳೊಳಗೆ ಉಳಿವಿಗಾಗಿ ಹೋರಾಟ ಮಾಡುತ್ತವೆ. ಅತ್ಯಂತ ಸಮರ್ಥ ಜೀವಿಯು ಉಳಿಯುತ್ತದೆ ಮತ್ತು ಅಸಮರ್ಥ ಜೀವಿಯು ನಶಿಸಿಹೋಗುತ್ತದೆ. ಕೆಲವು ಜೀವಿಗಳನ್ನು ಸಂತಾನೋತ್ಪತ್ತಿಮಾಡಲು ಪ್ರಕೃತಿಯೇ ಆಯ್ಕೆಮಾಡುತ್ತದೆ ಎಂದು ಹೇಳುತ್ತಾರೆ. ಆದರೆ ಸಮರ್ಥ ಜೀವಿಯ ಉಳಿವಿಗಾಗಿ ಅಸಮರ್ಥ ಜೀವಿಯು ನಶಿಸಿಹೋಗುವುದೇ “ಪ್ರಕೃತಿಯ” ನಿಯಮವಾಗಿರುವುದಾದರೆ, ಕೆಲವು ಸಮರ್ಥ ಮಾನವರ ಉಳಿವಿಗಾಗಿ ಅಸಮರ್ಥರಾಗಿರುವ ಸಹಮಾನವರು ಸಂಕಷ್ಟವನ್ನು ಅನುಭವಿಸುವಾಗ, ಅದನ್ನು ನೋಡಿ ಸ್ವೀಡನಿನ ವ್ಯಕ್ತಿಗಾದಂತೆ ಇತರರಿಗೆ ಮನಸ್ಸು ಕದಡಿದಂತಾಗಲು ಕಾರಣವೇನು ಎಂಬುದನ್ನು ನಾವು ಹೇಗೆ ವಿವರಿಸಬಲ್ಲೆವು?

ದೇವರನ್ನು ಸರಿಯಾಗಿ ತಿಳಿದುಕೊಳ್ಳುವುದು

ನಿಜ, ದೇವರಿಗೆ ನಮ್ಮ ಹಾಗೆ ಮಾನವ ಶರೀರವಿಲ್ಲದಿರುವುದರಿಂದ ಆತನನ್ನು ನಾವು ನೋಡಸಾಧ್ಯವಿಲ್ಲ. ಆದರೂ, ನಾವು ಆತನನ್ನು ಸರಿಯಾಗಿ ತಿಳಿದುಕೊಳ್ಳುವಂತೆ ದೇವರು ಬಯಸುತ್ತಾನೆ. ಆತನನ್ನು ತಿಳಿದುಕೊಳ್ಳುವ ಒಂದು ವಿಧಾನವು, ಆತನ ಅಸಾಮಾನ್ಯವಾದ ಕ್ರಿಯೆಗಳಾಗಿರುವ ನಿಸರ್ಗದ “ಚಿತ್ರಕಲೆಗಳು” ಮತ್ತು “ವಾಸ್ತುಶಿಲ್ಪಗಳನ್ನು” ನಿಕಟವಾಗಿ ಗಮನಿಸುವುದೇ ಆಗಿದೆ. ಈ ಮೂಲಕ ನಮಗೆ ಆತನ ಪರಿಚಯವಾಗುವುದು. ರೋಮಾಪುರ 1:20ರಲ್ಲಿ ಬೈಬಲ್‌ ಹೇಳುವುದು: “ಕಣ್ಣಿಗೆ ಕಾಣದಿರುವ ಆತನ [ದೇವರ] ಗುಣಲಕ್ಷಣಗಳು ಅಂದರೆ ಆತನ ನಿತ್ಯಶಕ್ತಿಯೂ ದೇವತ್ವವೂ ಜಗದುತ್ಪತ್ತಿ ಮೊದಲುಗೊಂಡು ಆತನು ಮಾಡಿದ ಸೃಷ್ಟಿಗಳ ಮೂಲಕ ಬುದ್ಧಿಗೆ ಗೊತ್ತಾಗಿ ಕಾಣಬರುತ್ತವೆ.” ಹೌದು, ಒಂದು ಚಿತ್ರಕಲೆಯನ್ನೋ ಅಥವಾ ಒಂದು ವಾಸ್ತುಶಿಲ್ಪವನ್ನೋ ಸೂಕ್ಷ್ಮವಾಗಿ ಗಮನಿಸುವಾಗ, ಅದನ್ನು ಕೆತ್ತಿರುವ ಕಲಾಕಾರನ ವ್ಯಕ್ತಿತ್ವವನ್ನು ನಾವು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಹಾಗೆಯೇ ದೇವರ ಬೆರಗುಗೊಳಿಸುವ ಸೃಷ್ಟಿಕಾರ್ಯಗಳ ಕುರಿತು ಮನನಮಾಡುವಾಗ ಆತನ ವ್ಯಕ್ತಿತ್ವವು ನಿಮಗೆ ಚಿರಪರಿಚಿತವಾಗುವುದು.

ನಿಜ, ಕೇವಲ ದೇವರ ಸೃಷ್ಟಿಕಾರ್ಯಗಳನ್ನು ಪರಿಶೀಲಿಸುವ ಮೂಲಕ ಜೀವನದಲ್ಲಿ ನಮ್ಮನ್ನು ಕಾಡುವ ಪ್ರಶ್ನೆಗಳಿಗೆಲ್ಲಾ ನಾವು ಉತ್ತರವನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ಆದರೆ, ದೇವರ ವಾಕ್ಯವಾದ ಬೈಬಲಿನಲ್ಲಿ ಉತ್ತರಗಳನ್ನು ಹುಡುಕುವ ಮೂಲಕ ಕಂಡುಕೊಳ್ಳಬಹುದು. ಬೈಬಲನ್ನು ಬಿಚ್ಚುಮನಸ್ಸಿನಿಂದ ಓದಿದ ಕಾರಣವೇ ಈ ಹಿಂದೆ ಉಲ್ಲೇಖಿಸಿದ ಆ ಇಬ್ಬರು ವ್ಯಕ್ತಿಗಳು, ದೇವರೊಬ್ಬನು ಇದ್ದಾನೆ ಮತ್ತು ನಮಗೆ ಸಂಭವಿಸುವ ವಿಷಯಗಳ ಕುರಿತು ಆತನು ಚಿಂತಿಸುವವನಾಗಿದ್ದಾನೆ ಎಂಬ ತೀರ್ಮಾನಕ್ಕೆ ಬಂದರು.

[ಪಾದಟಿಪ್ಪಣಿ]

^ ಪ್ಯಾರ. 8 ದೇವರು ಯಾಕೆ ದುಷ್ಟತನಕ್ಕೆ ಅನುಮತಿಯನ್ನು ನೀಡಿದ್ದಾನೆ ಎಂಬುದರ ಕುರಿತು ಇನ್ನೂ ಹೆಚ್ಚಿನ ಮಾಹಿತಿಗಾಗಿ, ನಿಮ್ಮ ಕುರಿತು ಚಿಂತಿಸುವ ಒಬ್ಬ ಸೃಷ್ಟಿಕರ್ತನಿದ್ದಾನೋ? (ಇಂಗ್ಲಿಷ್‌) ಎಂಬ ಪುಸ್ತಕದಲ್ಲಿರುವ ಅಧ್ಯಾಯ 10ನ್ನು ದಯವಿಟ್ಟು ನೋಡಿ. ಇದು ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಿದೆ.

[ಪುಟ 29ರಲ್ಲಿರುವ ಚಿತ್ರ ಕೃಪೆ]

J. Hester and P. Scowen (AZ State Univ.), NASA