ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಮೇಲೆ ಅಧಿಕಾರವಿರುವವರಿಗೆ ಗೌರವವನ್ನು ತೋರಿಸಿರಿ

ನಿಮ್ಮ ಮೇಲೆ ಅಧಿಕಾರವಿರುವವರಿಗೆ ಗೌರವವನ್ನು ತೋರಿಸಿರಿ

ನಿಮ್ಮ ಮೇಲೆ ಅಧಿಕಾರವಿರುವವರಿಗೆ ಗೌರವವನ್ನು ತೋರಿಸಿರಿ

“ಜನರೆಲ್ಲರಿಗೂ ಗೌರವವನ್ನು ತೋರಿಸಿರಿ. ದೇವರ ಕುಟುಂಬದ ಸಹೋದರ ಸಹೋದರಿಯ ರೆಲ್ಲರನ್ನು ಪ್ರೀತಿಸಿರಿ. ದೇವರಿಗೆ ಭಯಪಡಿರಿ ಮತ್ತು ರಾಜನನ್ನು ಗೌರವಿಸಿರಿ.”—1 ಪೇತ್ರ 2:17, ಪರಿಶುದ್ಧ ಬೈಬಲ್‌.*

1, 2. ಇಂದು ಜನರು ಅಧಿಕಾರದಲ್ಲಿರುವವರನ್ನು ಹೇಗೆ ನೋಡುತ್ತಾರೆ? ಅದಕ್ಕೆ ಕಾರಣವೇನು?

ಇಂದು ಯಾರಿಗೆ ಯಾರೂ ಅಧೀನರಾಗಿರಲು ಇಷ್ಟಪಡದಿರುವುದು ಎಲ್ಲೆಲ್ಲೂ ಸರ್ವಸಾಮಾನ್ಯವಾಗಿರುವ ಒಂದು ವಿಷಯವಾಗಿದೆ. ಆದ್ದರಿಂದಲೇ ಹೆತ್ತವರಿಗೆ, ಶಿಕ್ಷಕರಿಗೆ, ಮಾಲಿಕರಿಗೆ ಮತ್ತು ಸರ್ಕಾರಿ ಅಧಿಕಾರಿಗಳಿಗೆ ಯಾರೂ ಮರ್ಯಾದೆಯನ್ನು ಕೊಡುವುದಿಲ್ಲ. ಕೆಲವೊಮ್ಮೆ ಅಧಿಕಾರವನ್ನು ಪ್ರಶ್ನಿಸುವ ರೀತಿಯಲ್ಲಿ ಬರೆದಿರುವ ಸ್ಟಿಕ್ಕರುಗಳನ್ನು ಅಂಟಿಸಿರುವುದನ್ನು ನೀವು ನೋಡಿರಬಹುದು. ಲೋಕದ ಈ ಪರಿಸ್ಥಿತಿಯನ್ನು ನೋಡಿ ತಾಯಿಯೊಬ್ಬಳು ಹೀಗೆ ಮರುಗುತ್ತಾಳೆ: “ಈಗಿನ ಕಾಲದ ಮಕ್ಕಳಿಗೆ ಎಲ್ಲ ಅಧಿಕಾರವೂ ಉಂಟು. ಆದರೆ, ಹೆತ್ತವರಿಗೆ ಮಾತ್ರ ಸ್ವಲ್ಪವೂ ಮರ್ಯಾದೆಯನ್ನು ಕೊಡುವುದಿಲ್ಲ.”

2 ಇನ್ನೂ ಕೆಲವರು ಉದಾಸೀನವಾಗಿ ಹೀಗೆ ಹೇಳಬಹುದು, ‘ಅಧಿಕಾರದಲ್ಲಿರುವವರು ತಮ್ಮ ಯೋಗ್ಯತೆಗೆ ತಕ್ಕ ಕೆಲಸಗಳನ್ನು ಮಾಡದಿರುವಾಗ, ಅವರನ್ನು ಯಾರು ತಾನೆ ಗೌರವಿಸುತ್ತಾರೆ?’ ಕೆಲವೊಮ್ಮೆ ಅವರು ಹಾಗೆ ಹೇಳುವುದರಲ್ಲಿ ನಿಜವಿದೆ ಎಂದನಿಸಬಹುದು. ಏಕೆಂದರೆ, ದಿನಬೆಳಗಾದರೆ ವಾರ್ತಾಪತ್ರಿಕೆಗಳಲ್ಲಿ ಭ್ರಷ್ಟ ಸರ್ಕಾರಿ ಅಧಿಕಾರಿಗಳ, ದುರಾಶೆಯ ಮಾಲಿಕರ, ಅಸಮರ್ಥರಾದ ಶಿಕ್ಷಕರ ಮತ್ತು ನಿಂದಿಸುವ ಹೆತ್ತವರ ಕುರಿತು ಸುದ್ದಿಗಳನ್ನು ಓದುತ್ತಲೇ ಇರುತ್ತೇವೆ. ಆದರೆ, ನಿಜ ಕ್ರೈಸ್ತರ ವಿಷಯದಲ್ಲಿ ನೋಡುವಾಗ ಅದು ಭಿನ್ನವಾಗಿದೆ. ಏಕೆಂದರೆ, ಕ್ರೈಸ್ತ ಸಭೆಯಲ್ಲಿ ಅಧಿಕಾರದ ಸ್ಥಾನದಲ್ಲಿರುವವರಿಗೆ ಅವರು ಗೌರವವನ್ನು ಕೊಡುತ್ತಾರೆಂಬುದು ಸಂತೋಷದ ವಿಷಯವಾಗಿದೆ.—ಮತ್ತಾಯ 24:45-47.

3, 4. ಅಧಿಕಾರದಲ್ಲಿರುವವರನ್ನು ಕ್ರೈಸ್ತರು ಏಕೆ ಗೌರವಿಸಬೇಕಾಗಿದೆ?

3 ನಿಜ ಕ್ರೈಸ್ತರು ಎಲ್ಲರಿಗೂ ಗೌರವವನ್ನು ಕೊಡುತ್ತಾರೆ. ಸರ್ಕಾರಿ ಅಧಿಕಾರಿಗಳಿಗೆ ಮರ್ಯಾದೆಯನ್ನು ಕೊಡುವುದು “ಅವಶ್ಯ” ಎಂದು ಅವರಿಗೆ ತಿಳಿದಿದೆ. ಆದ್ದರಿಂದಲೇ, “ಪ್ರತಿ ಮನುಷ್ಯನು ತನ್ನ ಮೇಲಿರುವ ಅಧಿಕಾರಿಗಳಿಗೆ ಅಧೀನನಾಗಿರಲಿ; ಯಾಕಂದರೆ ದೇವರಿಂದ ಹೊರತು ಒಬ್ಬರಿಗೂ ಅಧಿಕಾರವಿರುವದಿಲ್ಲ; ಇರುವ ಅಧಿಕಾರಿಗಳು ದೇವರಿಂದ ನೇಮಿಸಲ್ಪಟ್ಟವರು” ಎಂದು ಅಪೊಸ್ತಲ ಪೌಲನು ಕ್ರೈಸ್ತರಿಗೆ ಬುದ್ಧಿವಾದ ಹೇಳಿದನು. (ರೋಮಾಪುರ 13:1, 2, 5; 1 ಪೇತ್ರ 2:13-15) ಎರಡನೆಯದಾಗಿ, ಕುಟುಂಬದಲ್ಲಿ ಅಧಿಕಾರ ವಹಿಸಿಕೊಂಡಿರುವವರಿಗೆ ಕೂಡ ವಿಧೇಯತೆಯನ್ನು ತೋರಿಸುವುದು ಅವಶ್ಯಕವಾಗಿದೆ. ಅದಕ್ಕೆ ನ್ಯಾಯಬದ್ಧವಾದ ಕಾರಣವನ್ನು ಪೌಲನು ನೀಡುತ್ತಾನೆ: “ಸ್ತ್ರೀಯರೇ, ನಿಮ್ಮ ಗಂಡಂದಿರಿಗೆ ಅಧೀನರಾಗಿರಿ; ಇದು ಕರ್ತನಲ್ಲಿರುವವರಿಗೆ ಯೋಗ್ಯವಾಗಿದೆ. ಮಕ್ಕಳೇ, ಎಲ್ಲಾ ವಿಷಯಗಳಲ್ಲಿ ನಿಮ್ಮ ತಂದೆತಾಯಿಗಳ ಮಾತನ್ನು ಕೇಳಿರಿ; ಇದು ಕರ್ತನ ದೃಷ್ಟಿಯಲ್ಲಿ ಮೆಚ್ಚಿಕೆಯಾಗಿದೆ.” (ಕೊಲೊಸ್ಸೆ 3:18, 20) ಸಭೆಯಲ್ಲಿರುವ ಹಿರಿಯರು ಸಹ ನಮ್ಮ ಗೌರವಕ್ಕೆ ಪಾತ್ರರಾಗಿದ್ದಾರೆ. ಕಾರಣ, ‘ದೇವರ . . . ಸಭೆಯನ್ನು ಪರಿಪಾಲಿಸುವುದಕ್ಕಾಗಿ ಪವಿತ್ರಾತ್ಮನು ಅವರನ್ನು ಆ ಹಿಂಡಿನಲ್ಲಿ ಅಧ್ಯಕ್ಷರಾಗಿ ಇಟ್ಟಿದ್ದಾನೆ.’ (ಅ. ಕೃತ್ಯಗಳು 20:28) ಹೀಗೆ, ನಾವು ಈ ಮೇಲೆ ತಿಳಿಸಿರುವವರಿಗೆಲ್ಲಾ ಗೌರವವನ್ನು ಕೊಡುವಾಗ, ವಾಸ್ತವದಲ್ಲಿ ನಾವು ಯೆಹೋವನಿಗೇ ಗೌರವವನ್ನು ಕೊಡುವವರಾಗಿರುತ್ತೇವೆ. ಏಕೆಂದರೆ, ಅಧಿಕಾರದಲ್ಲಿರುವವರನ್ನು ಗೌರವಿಸುವಂತೆ ಯೆಹೋವನೇ ಹೇಳುತ್ತಾನೆ. ಆದರೆ, ನಮ್ಮ ಜೀವನದಲ್ಲಿ ಗೌರವಕ್ಕೆ ಪಾತ್ರನಾಗಿರುವ ಮೊದಲ ವ್ಯಕ್ತಿ ಯೆಹೋವನೇ ಆಗಿದ್ದಾನೆ.—ಅ. ಕೃತ್ಯಗಳು 5:29.

4 ಯೆಹೋವನ ಪರಮಾಧಿಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಂಡು, ಅಧಿಕಾರದಲ್ಲಿದ್ದವರಿಗೆ ಗೌರವವನ್ನು ತೋರಿಸಿದ ಹಾಗೂ ತೋರಿಸದಿದ್ದ ಕೆಲವರ ಉದಾಹರಣೆಗಳನ್ನು ನಾವು ನೋಡೋಣ.

ಅಗೌರವದ ಪರಿಣಾಮ

5. ಮೀಕಲಳು ದಾವೀದನಿಗೆ ಯಾವ ರೀತಿಯಲ್ಲಿ ಅವಮರ್ಯಾದೆಯನ್ನು ತೋರಿಸಿದಳು, ಅದರ ಪರಿಣಾಮವೇನಾಯಿತು?

5 ದೇವದತ್ತ ಅಧಿಕಾರವನ್ನು ಕೀಳಾಗಿ ನೋಡುವವರನ್ನು ಯೆಹೋವನು ಹೇಗೆ ವೀಕ್ಷಿಸುತ್ತಾನೆ ಎಂಬುದನ್ನು ನಾವು ರಾಜ ದಾವೀದನ ಜೀವನಚರಿತ್ರೆಯಿಂದ ತಿಳಿದುಕೊಳ್ಳಬಹುದು. ದಾವೀದನು ಒಡಂಬಡಿಕೆಯ ಮಂಜೂಷದೊಂದಿಗೆ ಯೆರೂಸಲೇಮಿಗೆ ಬರುತ್ತಿದ್ದಾಗ, ಅವನ ಹೆಂಡತಿಯಾದ ಮೀಕಲಳು “ಕಿಟಿಕಿಯಿಂದ ಹಣಿಕಿ ನೋಡಿ ದಾವೀದನು ಯೆಹೋವನ ಮುಂದೆ ಜಿಗಿಯುತ್ತಾ ಕುಣಿಯುತ್ತಾ ಇರುವದನ್ನು ಕಂಡು ಮನಸ್ಸಿನಲ್ಲಿ ಅವನನ್ನು ತಿರಸ್ಕರಿಸಿದಳು.” ಆ ಸಂದರ್ಭದಲ್ಲಿ, ದಾವೀದನು ಬರೀ ಕುಟುಂಬದ ಯಜಮಾನನಷ್ಟೇ ಅಲ್ಲ, ಇಡೀ ದೇಶಕ್ಕೆ ರಾಜನೂ ಆಗಿದ್ದಾನೆ ಎಂಬುದು ಮೀಕಲಳಿಗೆ ತಿಳಿದಿರಬೇಕಾಗಿತ್ತು. ಅದಕ್ಕೆ ಬದಲಾಗಿ, ಅವಳು ತನ್ನ ಭಾವನೆಗಳನ್ನು ಹಂಗಿಸುವ ಮಾತುಗಳಲ್ಲಿ ವ್ಯಕ್ತಪಡಿಸಿದಳು. “ಈ ಹೊತ್ತು ಇಸ್ರಾಯೇಲ್ಯರ ಅರಸನು ಎಂಥ ಗೌರವದಿಂದ ನಡೆದುಕೊಂಡನು! ನೀಚರಲ್ಲೊಬ್ಬನಂತೆ ತನ್ನ ಜನರ ದಾಸಿಯರ ಮುಂದೆ ಬೆತ್ತಲೆಯಾಗಿದ್ದನಲ್ಲಾ ಅಂದಳು.” ಈ ಅವಮರ್ಯಾದೆಯ ವರ್ತನೆಯಿಂದಾಗಿ ಮೀಕಲಳಿಗೆ ಕೊನೆಯವರೆಗೂ ಮಕ್ಕಳೇ ಆಗಲಿಲ್ಲ.—2 ಸಮುವೇಲ 6:14-23.

6. ತನ್ನ ಅಭಿಷಿಕ್ತನೊಂದಿಗೆ ಅಗೌರವವದಿಂದ ನಡೆದುಕೊಂಡ ಕೋರಹನನ್ನು ಯೆಹೋವನು ಹೇಗೆ ನೋಡಿದನು?

6 ಅಧಿಕಾರಕ್ಕೆ ಅಗೌರವವನ್ನು ತೋರಿಸಿದ ಅತಿರೇಕದ ಉದಾಹರಣೆಯೆಂದರೆ ಕೋರಹನದ್ದು. ಅವನು ದೇವರು ನೇಮಿಸಿದ ದೇವಪ್ರಭುತ್ವ ನಾಯಕತ್ವಕ್ಕೆ ಅಗೌರವವನ್ನು ತೋರಿಸಿದನು. ಕೆಹಾತ್ಯನಾಗಿದ್ದ ಕೋರಹನು ದೇವಗುಡಾರದಲ್ಲಿ ಯೆಹೋವನ ಸೇವೆಯನ್ನು ಮಾಡುತ್ತಿದ್ದನು. ಅದು ಅವನಿಗೆ ಎಂಥ ದೊಡ್ಡ ಸುಯೋಗವಾಗಿತ್ತು! ಆದರೆ, ಅವನು ಅಷ್ಟಕ್ಕೇ ತೃಪ್ತನಾಗದೆ, ಇಸ್ರಾಯೇಲ್ಯರ ಅಭಿಷಿಕ್ತ ನಾಯಕರಾಗಿದ್ದ ಮೋಶೆ ಮತ್ತು ಆರೋನರ ಮೇಲೆ ತಪ್ಪನ್ನು ಹುಡುಕುತ್ತಿದ್ದನು. ಕೋರಹನು ಇಸ್ರಾಯೇಲಿನ ಇನ್ನಿತರ ಮುಖ್ಯಸ್ಥರೊಂದಿಗೆ ಗುಂಪನ್ನು ಕಟ್ಟಿಕೊಂಡು, ನಿರ್ಲಜ್ಜನಾಗಿ ಮೋಶೆ ಮತ್ತು ಆರೋನರಿಗೆ ಹೇಳಿದ್ದು: ‘ಈ ಸಮೂಹದವರಲ್ಲಿ ಪ್ರತಿಯೊಬ್ಬನೂ ದೇವರಿಗೆ ಪ್ರತಿಷ್ಠಿತನೇ; ಯೆಹೋವನು ಇವರೆಲ್ಲರ ಮಧ್ಯದಲ್ಲಿ ಇದ್ದಾನಲ್ಲವೇ; ಹೀಗಿರಲಾಗಿ ಯೆಹೋವನ ಸಮೂಹದವರಿಗಿಂತಲೂ ನಿಮ್ಮನ್ನು ನೀವೇ ಹೆಚ್ಚಿಸಿಕೊಳ್ಳುವದೇನು?’ ಕೋರಹ ಮತ್ತು ಅವನ ಬೆಂಬಲಿಗರ ಈ ವರ್ತನೆಯನ್ನು ಯೆಹೋವನು ಹೇಗೆ ನೋಡಿದನು? ತನಗೇ ಅಗೌರವವನ್ನು ತೋರಿಸಿದಂಥ ರೀತಿಯಲ್ಲಿ ನೋಡಿದನು. ಇದರ ಪರಿಣಾಮವಾಗಿ, ಕೋರಹನ ಪಕ್ಷದವರೆಲ್ಲರನ್ನು ಭೂಮಿಯು ಬಾಯ್ದೆರೆದು ನುಂಗಿಬಿಟ್ಟಿತು. ಆ ಬಳಿಕ, ಕೋರಹನನ್ನು ಮತ್ತು ಅವನ 250 ಮುಖ್ಯಸ್ಥರನ್ನು ಯೆಹೋವನು ಬೆಂಕಿಯಿಂದ ನಾಶಮಾಡಿದನು.—ಅರಣ್ಯಕಾಂಡ 16:1-3, 28-35.

7. ಪೌಲನ ಅಧಿಕಾರವನ್ನು ಟೀಕಿಸಲು “ಅತಿಶ್ರೇಷ್ಠ ಅಪೊಸ್ತಲ”ರಿಗೆ ಯಾವುದಾದರೂ ಕಾರಣವಿತ್ತೇ?

7 ಪ್ರಥಮ ಶತಮಾನದ ಕ್ರೈಸ್ತ ಸಭೆಯಲ್ಲಿ ಕೂಡ, ದೇವಪ್ರಭುತ್ವ ಅಧಿಕಾರಕ್ಕೆ ತಾತ್ಸಾರವನ್ನು ತೋರಿಸಿದ ಕೆಲವು ವ್ಯಕ್ತಿಗಳು ಇದ್ದರು. ಅವರು, ಕೊರಿಂಥ ಸಭೆಯಲ್ಲಿದ್ದ “ಅತಿಶ್ರೇಷ್ಠರಾದ ಅಪೊಸ್ತಲ”ರಾಗಿದ್ದರು. ಈ ಅತಿಶ್ರೇಷ್ಠ ಅಪೊಸ್ತಲರು ಪೌಲನನ್ನು ಅಗೌರವದಿಂದ ಕಾಣುವ ಭಾವನೆಯನ್ನು ಹೊಂದಿದ್ದರು. ಪೌಲನ ವಾಕ್‌ ಚಾತುರ್ಯವನ್ನು ಟೀಕಿಸುತ್ತಾ, “ಅವನು ಸಾಕ್ಷಾತ್ತಾಗಿ ಬಂದರೆ ಅವನು ನಿರ್ಬಲನು, ಅವನ ಮಾತು ಗಣನೆಗೆ ಬಾರದ್ದು” ಅಂದರು. (2 ಕೊರಿಂಥ 10:10; 11:5) ಪೌಲನು ಒಬ್ಬ ಅತ್ಯುತ್ತಮ ಭಾಷಣಗಾರನಾಗಿದ್ದನೋ ಇಲ್ಲವೋ ಅನ್ನುವುದು ಬೇರೆ ವಿಷಯ. ಆದರೆ, ಅವನೊಬ್ಬ ಅಪೊಸ್ತಲನಾಗಿದ್ದರಿಂದ ಅವನನ್ನು ಗೌರವಿಸುವುದು ಪ್ರಾಮುಖ್ಯವಾಗಿತ್ತು. ಆದರೆ, ಪೌಲನ ವಾಕ್‌ ಶಕ್ತಿಯು ನಿಜವಾಗಿಯೂ ಗಣನೆಗೆ ಬಾರದ್ದಾಗಿತ್ತೋ? ಬೈಬಲ್‌ನಲ್ಲಿ ದಾಖಲಾಗಿರುವ ಅವನ ಸಾರ್ವಜನಿಕ ಭಾಷಣಗಳೇ, ಅವನು ಎಂಥ ಉತ್ತಮ ಭಾಷಣಗಾರನಾಗಿದ್ದನು ಎಂಬುದಕ್ಕೆ ಪುರಾವೆಯನ್ನು ಕೊಡುತ್ತವೆ. ಅಷ್ಟೇ ಏಕೆ, ‘ಯೆಹೂದ್ಯರಲ್ಲೇ ಎಲ್ಲವನ್ನು . . . ಚೆನ್ನಾಗಿ ಬಲ್ಲವನಾಗಿದ್ದ’ ಹೆರೋದ ಅಗ್ರಿಪ್ಪ IIನೊಂದಿಗೆ ಪೌಲನು ಒಂದು ಚುಟುಕಾದ ಚರ್ಚೆಯನ್ನು ಮಾಡಿದನು. ಅದರ ಪರಿಣಾಮವಾಗಿ, ಹೆರೋದ ಅಗ್ರಿಪ್ಪನು, “ಇನ್ನು ಸ್ವಲ್ಪ ಸಮಯದಲ್ಲಿ ನೀನು ನನ್ನನ್ನು ಕ್ರೈಸ್ತನಾಗಿ ಮತಾಂತರಗೊಳ್ಳುವಂತೆ ಒಡಂಬಡಿಸಿಬಿಡುವೆ” (NW) ಎಂದು ಹೇಳುವ ಮಟ್ಟಿಗೆ ಪೌಲನು ಅವನನ್ನು ತನ್ನ ವಾಕ್‌ ಚಾತುರ್ಯದಿಂದ ಸೆಳೆದಿದ್ದನು. (ಅ. ಕೃತ್ಯಗಳು 13:15-43; 17:22-34; 26:1-28) ಆದರೂ, ಕೊರಿಂಥದಲ್ಲಿದ್ದ ಅತಿಶ್ರೇಷ್ಠರಾದ ಅಪೊಸ್ತಲರು ಅವನ ಮಾತು ಗಣನೆಗೆ ಬಾರದ್ದು ಎಂದು ಪೌಲನನ್ನು ನಿಂದಿಸಿದರು! ಅವರ ಈ ವರ್ತನೆಯನ್ನು ಯೆಹೋವನು ಹೇಗೆ ವೀಕ್ಷಿಸಿದನು? ಇದನ್ನು ಎಫೆಸ ಸಭೆಯ ಮೇಲ್ವಿಚಾರಕರಿಗೆ ಕಳುಹಿಸಿದ ಸಂದೇಶವೊಂದರಲ್ಲಿ ಯೇಸು ಕ್ರಿಸ್ತನು ಹೇಳಿದ ಮಾತುಗಳಿಂದ ತಿಳಿದುಕೊಳ್ಳಬಹುದು. ಆ ಸಭೆಯಲ್ಲಿ “ಅಪೊಸ್ತಲರಲ್ಲದಿದ್ದರೂ ತಮ್ಮನ್ನು ಅಪೊಸ್ತಲರೆಂದು ಹೇಳಿಕೊಳ್ಳುವವರ” ಬಲೆಗೆ ಬೀಳದವರನ್ನು ಯೇಸು ಹೊಗಳಿ ಮಾತಾಡಿದನು.—ಪ್ರಕಟನೆ 2:2.

ಅಪರಿಪೂರ್ಣರಾಗಿದ್ದರೂ ಗೌರವವನ್ನು ಕೊಡುವುದು

8. ಯೆಹೋವನು ಸೌಲನಿಗೆ ಕೊಟ್ಟಿದ್ದ ಅಧಿಕಾರವನ್ನು ದಾವೀದನು ಯಾವ ರೀತಿಯಲ್ಲಿ ಗೌರವಿಸಿದನು?

8 ಅಧಿಕಾರದಲ್ಲಿರುವವರು ತಮ್ಮ ಅಧಿಕಾರದ ದುರುಪಯೋಗವನ್ನು ಮಾಡಿದ್ದರೂ, ಅಂಥವರಿಗೆ ಗೌರವವನ್ನು ತೋರಿಸಿದ ವ್ಯಕ್ತಿಗಳ ಅನೇಕ ಉದಾಹರಣೆಗಳು ಬೈಬಲಿನಲ್ಲಿವೆ. ಅಂಥವರಲ್ಲಿ ದಾವೀದನ ಉದಾಹರಣೆಯು ಒಂದು ಉತ್ತಮ ಉದಾಹರಣೆಯಾಗಿದೆ. ತನ್ನ ಕೆಳಗೆ ಕೆಲಸಮಾಡುತ್ತಿದ್ದ ದಾವೀದನ ಸಾಧನೆಗಳನ್ನು ನೋಡಿ ಮತ್ಸರಗೊಂಡ ಅರಸನಾದ ಸೌಲನು, ಅವನನ್ನು ಕೊಲ್ಲಲು ಅವಕಾಶಗಳಿಗಾಗಿ ಹುಡುಕುತ್ತಿದ್ದನು. (1 ಸಮುವೇಲ 18:8-12; 19:9-11; 23:26) ಆದರೆ, ಸೌಲನನ್ನು ಕೊಲ್ಲುವ ಅವಕಾಶ ದಾವೀದನಿಗೆ ಸಿಕ್ಕಿದಾಗ ಅವನು ಹೇಳಿದ್ದು: “ಯೆಹೋವನ ದೃಷ್ಟಿಕೋನದಲ್ಲಿ ಆತನ ಅಭಿಷಿಕ್ತನ ಮೇಲೆ ಕೈಮಾಡುವುದು ನನಗೆ ಯೋಚಿಸಲಸಾಧ್ಯವಾದ ವಿಚಾರವಾಗಿದೆ” (NW). (1 ಸಮುವೇಲ 24:3-6; 26:7-13) ಸೌಲನು ಮಾಡುತ್ತಿರುವುದು ತಪ್ಪೆಂದು ದಾವೀದನಿಗೆ ಗೊತ್ತಿತ್ತು. ಆದರೂ ಅವನು ನ್ಯಾಯವನ್ನು ತನ್ನ ಕೈಯಲ್ಲಿ ತೆಗೆದುಕೊಳ್ಳಲಿಲ್ಲ. ಅದಕ್ಕೆ ಬದಲಾಗಿ ತೀರ್ಪು ಮಾಡುವುದನ್ನು ಯೆಹೋವನಿಗೆ ಬಿಟ್ಟುಬಿಟ್ಟನು. (1 ಸಮುವೇಲ 24:12, 15; 26:22-24) ಅಷ್ಟೇ ಅಲ್ಲ, ದಾವೀದನು ಸೌಲನ ಎದುರಿಗೋ ಅಥವಾ ಬೆನ್ನಹಿಂದೆಯೋ ಅವನ ಕುರಿತು ನಿಂದನೆಯ ಮಾತುಗಳನ್ನು ಆಡಲಿಲ್ಲ.

9. (ಎ) ಸೌಲನು ದಾವೀದನನ್ನು ದುರುಪಚರಿಸುತ್ತಿದ್ದಾಗ ಅವನಿಗೆ ಹೇಗನಿಸಿತು? (ಬಿ) ಸೌಲನ ಮೇಲೆ ದಾವೀದನಿಗೆ ನಿಜವಾದ ಗೌರವವಿತ್ತೆಂದು ನಾವು ಹೇಗೆ ಹೇಳಬಹುದು?

9 ಸೌಲನು ದಾವೀದನನ್ನು ದುರುಪಚರಿಸುತ್ತಿದ್ದಾಗ ಅವನು ದುಃಖಿತನಾದನೋ? ಹೌದು! “ಬಲಾತ್ಕಾರಿಗಳು ನನ್ನ ಪ್ರಾಣವನ್ನು ತೆಗೆಯಬೇಕೆಂದಿದ್ದಾರೆ” ಎಂದು ದಾವೀದನು ಯೆಹೋವನಿಗೆ ಮೊರೆಯಿಟ್ಟನು. (ಕೀರ್ತನೆ 54:3) ತನ್ನ ಹೃದಯವನ್ನು ಯೆಹೋವನ ಮುಂದೆ ತೆರೆದಿಡುತ್ತಾ ಹೇಳಿದ್ದು: “ನನ್ನ ದೇವರೇ, ಶತ್ರುಗಳ ಕೈಯಿಂದ ನನ್ನನ್ನು ಬಿಡಿಸು; . . . ಬಲಿಷ್ಠರು ನನಗೆ ವಿರೋಧವಾಗಿ ಗುಂಪುಕೂಡಿದ್ದಾರೆ. ಯೆಹೋವನೇ, ನಾನು ನಿರ್ದೋಷಿಯೂ ನಿರಪರಾಧಿಯೂ ಅಲ್ಲವೇ! ನಿಷ್ಕಾರಣವಾಗಿ ನನ್ನ ಮೇಲೆ ಬೀಳಲು ಓಡಿಬಂದು ನಿಂತಿದ್ದಾರೆ; ಎದ್ದು ಬಂದು ಪರಾಂಬರಿಸಿ ನನಗೆ ಸಹಾಯಮಾಡು.” (ಕೀರ್ತನೆ 59:1-4) ಕೆಲವೊಮ್ಮೆ ಅಧಿಕಾರದಲ್ಲಿರುವ ಒಬ್ಬ ವ್ಯಕ್ತಿಗೆ ನೀವು ಏನೂ ಕೆಟ್ಟದ್ದನ್ನು ಮಾಡದೇ ಇದ್ದರೂ, ಅವರು ನಿಮಗೆ ತೊಂದರೆಗಳನ್ನು ಕೊಡುತ್ತಲೇ ಇರುವಾಗ ನಿಮಗೂ ಹಾಗನಿಸಿದೆಯೇ? ಸೌಲನು ಎಷ್ಟೇ ಕಷ್ಟಗಳನ್ನು ಕೊಟ್ಟರೂ, ದಾವೀದನು ಅವನಿಗೆ ಅಗೌರವವನ್ನು ತೋರಿಸಲಿಲ್ಲ. ಅಷ್ಟೇ ಏಕೆ, ಸೌಲನು ಸತ್ತಾಗಲು ಸಹ ಸಂತೋಷಿಸುವುದಕ್ಕೆ ಬದಲಾಗಿ ದಾವೀದನು ಒಂದು ಶೋಕಗೀತೆಯನ್ನು ರಚಿಸಿದನು: “ಸೌಲಯೋನಾತಾನರು ಪ್ರಿಯರೂ ಮನೋಹರರೂ ಆಗಿದ್ದರು. ಅವರು ಜೀವಿಸುವಾಗಲೂ . . . ಅವರು ಹದ್ದುಗಳಿಗಿಂತಲೂ ವೇಗವುಳ್ಳವರು; ಸಿಂಹಗಳಿಗಿಂತಲೂ ಬಲವುಳ್ಳವರು. ಇಸ್ರಾಯೇಲ್‌ಸ್ತ್ರೀಯರೇ, ಸೌಲನಿಗಾಗಿ ಗೋಳಾಡಿರಿ.” (2 ಸಮುವೇಲ 1:23, 24) ದಾವೀದನು ವಿನಾಕಾರಣ ಕಷ್ಟವನ್ನನುಭವಿಸುವುದಕ್ಕೆ ಸೌಲನು ಕಾರಣನಾಗಿದ್ದರೂ ಯೆಹೋವನ ಅಭಿಷಿಕ್ತನಿಗೆ ಅವನು ನಿಜವಾದ ಗೌರವವನ್ನು ತೋರಿಸಿದನು. ಅಧಿಕಾರದಲ್ಲಿರುವವರಿಗೆ ಗೌರವವನ್ನು ತೋರಿಸಿದ ದಾವೀದನ ಮಾದರಿಯು ಎಂಥ ಒಂದು ಅತ್ಯುತ್ತಮ ಮಾದರಿಯಾಗಿದೆ!

10. ಆಡಳಿತ ಮಂಡಳಿಯವರ ದೇವದತ್ತ ಅಧಿಕಾರಕ್ಕೆ ಗೌರವವನ್ನು ತೋರಿಸುವುದರಲ್ಲಿ ಪೌಲನು ಯಾವ ಉತ್ತಮ ಮಾದರಿಯನ್ನಿಟ್ಟನು ಮತ್ತು ಅದರ ಪರಿಣಾಮವೇನಾಯಿತು?

10 ದೇವದತ್ತ ಅಧಿಕಾರಕ್ಕೆ ಗೌರವವನ್ನು ತೋರಿಸಿದ ಎದ್ದುಕಾಣುವ ಉದಾಹರಣೆಗಳನ್ನು ನಾವು ಕ್ರಿಸ್ತ ಶಕದಲ್ಲೂ ನೋಡಸಾಧ್ಯವಿದೆ. ಉದಾಹರಣೆಗೆ, ಪೌಲನನ್ನೇ ತೆಗೆದುಕೊಳ್ಳಿ. ಅವನು ಪ್ರಥಮ ಶತಮಾನದಲ್ಲಿದ್ದ ಆಡಳಿತ ಮಂಡಳಿಯವರ ನಿರ್ಣಯಗಳಿಗೆ ಗೌರವವನ್ನು ತೋರಿಸಿದನು. ಪೌಲನು ಯೆರೂಸಲೇಮಿಗೆ ತನ್ನ ಕೊನೆಯ ಭೇಟಿಯನ್ನು ನೀಡುತ್ತಿದ್ದಾಗ, ಆಡಳಿತ ಮಂಡಳಿಯವರು ಅವನಿಗೆ ಬುದ್ಧಿವಾದ ಹೇಳಿದರು. ಅದೇನೆಂದರೆ, ಮೋಶೆಯ ಧರ್ಮಶಾಸ್ತ್ರದ ಮೇಲೆ ಪೌಲನಿಗೆ ಯಾವುದೇ ರೀತಿಯ ದ್ವೇಷದ ಭಾವನೆಗಳಿಲ್ಲವೆಂಬುದನ್ನು ಇತರರಿಗೆ ತೋರಿಸುವ ಸಲುವಾಗಿ ಸಾಂಪ್ರದಾಯಿಕವಾಗಿ ಶುದ್ಧಿಗೊಳಗಾಗುವಂತೆ ಅವನಿಗೆ ಹೇಳಿದರು. ಆಗ ಪೌಲನು ಅವರೊಂದಿಗೆ ಹೀಗೆ ತರ್ಕಿಸಬಹುದಾಗಿತ್ತು: ‘ನನ್ನ ಜೀವವು ಗಂಡಾಂತರದಲ್ಲಿದ್ದಾಗ ಆ ಸಹೋದರರು ಯೆರೂಸಲೇಮನ್ನು ಬಿಟ್ಟುಹೋಗುವಂತೆ ನನಗೆ ಹೇಳಿದರು. ಈಗ ಅವರೇ, ನಾನು ಮೋಶೆಯ ಧರ್ಮಶಾಸ್ತ್ರವನ್ನು ಗೌರವಿಸುತ್ತೇನೆ ಎಂಬುದನ್ನು ಎಲ್ಲರ ಮುಂದೆ ತೋರಿಸುವಂತೆ ಹೇಳುತ್ತಿದ್ದಾರಲ್ಲ! ಅಲ್ಲದೆ, ಮೋಶೆಯ ಧರ್ಮಶಾಸ್ತ್ರವನ್ನು ಪಾಲಿಸುವುದರಿಂದ ದೂರವಿರಿ ಎಂದು ಗಲಾತ್ಯದವರಿಗೆ ಬುದ್ಧಿವಾದ ಹೇಳಿ ಈಗಾಗಲೇ ನಾನು ಪತ್ರವನ್ನು ಬರೆದಿದ್ದೇನೆ. ನಾನು ಈಗ ದೇವಾಲಯಕ್ಕೆ ಹೋದರೆ, ಸುನ್ನತಿಯಾದ ವರ್ಗದವರೊಂದಿಗೆ ಸೇರಿ ನಾನು ರಾಜಿಮಾಡಿಕೊಳ್ಳುತ್ತಿದ್ದೇನೆಂದು ಇತರರು ನನ್ನನ್ನು ತಪ್ಪಾಗಿ ತಿಳಿದುಕೊಳ್ಳುವುದಿಲ್ಲವೇ?’ ಆದರೆ, ಪೌಲನು ಹಾಗೆ ತರ್ಕ ಮಾಡಲಿಲ್ಲ. ಏಕೆಂದರೆ, ಕ್ರೈಸ್ತ ಸಿದ್ಧಾಂತಗಳೊಂದಿಗೆ ರಾಜಿಯಾಗುವಂತಹ ಯಾವುದೇ ವಿಷಯವು ಅದರಲ್ಲಿ ಇರಲಿಲ್ಲ. ಆದ್ದರಿಂದ ಅವನು ಪ್ರಥಮ ಶತಮಾನದ ಆಡಳಿತ ಮಂಡಳಿಯವರ ಸಲಹೆಯನ್ನು ಸ್ವೀಕರಿಸಿದನು ಮತ್ತು ಅದನ್ನು ಪಾಲಿಸಿದನು. ಆ ಕ್ಷಣ ಏನು ಸಂಭವಿಸಿತು? ಅವನನ್ನು ಕೊಲ್ಲುವುದಕ್ಕಾಗಿ ಯೆಹೂದ್ಯರ ದೊಡ್ಡ ಗುಂಪೇ ಕೂಡಿಬಂತು. ಅವರಿಂದ ಪೌಲನನ್ನು ರಕ್ಷಿಸಬೇಕಾಯಿತು. ಅನಂತರ, ಅವನು ಎರಡು ವರ್ಷ ಜೈಲಿನಲ್ಲಿ ಕಳೆಯಬೇಕಾಯಿತು. ಆದರೆ, ಕೊನೆಯಲ್ಲಿ ದೇವರ ಚಿತ್ತವು ನೆರವೇರಿಸಲ್ಪಟ್ಟಿತು. ಹೇಗೆಂದರೆ, ಕೈಸರೈಯದಲ್ಲಿದ್ದ ಉಚ್ಚ ಅಧಿಕಾರಿಗಳ ಮುಂದೆ ಸಾಕ್ಷಿನೀಡುವ ಅವಕಾಶ ಪೌಲನಿಗೆ ಸಿಕ್ಕಿತು ಮತ್ತು ಅಲ್ಲಿಂದ ಸರ್ಕಾರದ ಖರ್ಚಿನಲ್ಲೇ ಸ್ವತಃ ಕೈಸರನ ಮುಂದೆ ಸಾಕ್ಷಿಕೊಡುವುದಕ್ಕಾಗಿ ಅವನನ್ನು ರೋಮಿಗೆ ಕರೆದೊಯ್ಯಲಾಯಿತು.—ಅ. ಕೃತ್ಯಗಳು 9:26-30; 21:20-26; 23:11; 24:27; ಗಲಾತ್ಯ 2:12; 4:9, 10.

ನೀವು ಗೌರವವನ್ನು ಕೊಡುತ್ತೀರೋ?

11. ಸರ್ಕಾರಿ ಅಧಿಕಾರಿಗಳಿಗೆ ನಾವು ಯಾವ ರೀತಿಯಲ್ಲಿ ಗೌರವವನ್ನು ತೋರಿಸಬಹುದು?

11 ನೀವು ಸರ್ಕಾರಿ ಅಧಿಕಾರಿಗಳಿಗೆ ಕೊಡಬೇಕಾದ ಮರ್ಯಾದೆಯನ್ನು ಕೊಡುತ್ತೀರೋ? ಏಕೆಂದರೆ, “ಅವರವರಿಗೆ ಸಲ್ಲಿಸತಕ್ಕದ್ದನ್ನು ಸಲ್ಲಿಸಿರಿ . . . ಯಾರಿಗೆ ಮರ್ಯಾದೆಯೋ ಅವರಿಗೆ ಮರ್ಯಾದೆಯನ್ನು ಸಲ್ಲಿಸಿರಿ” ಎಂದು ಕ್ರೈಸ್ತರು ಆಜ್ಞಾಪಿಸಲ್ಪಟ್ಟಿದ್ದಾರೆ. ಹೌದು, “ಮೇಲಿರುವ ಅಧಿಕಾರಿಗಳಿಗೆ” ಅಂದರೆ, ಸರ್ಕಾರಿ ಅಧಿಕಾರಿಗಳಿಗೆ ಅಧೀನರಾಗಿದ್ದೇವೆಂಬುದನ್ನು ಕೇವಲ ಕಂದಾಯ ಕಟ್ಟುವ ಮೂಲಕ ಮಾತ್ರ ತೋರಿಸಿದರೆ ಸಾಲದು. ನಮ್ಮ ನಡೆನುಡಿಗಳಿಂದಲೂ ನಾವು ಅವರಿಗೆ ಗೌರವವನ್ನು ತೋರಿಸಬೇಕು. (ರೋಮಾಪುರ 13:1-7) ಒರಟಾಗಿ ವರ್ತಿಸುವ ಒಬ್ಬ ಅಧಿಕಾರಿಯನ್ನು ಸಂದರ್ಶಿಸುವ ಸಂದರ್ಭ ಬಂದಾಗ, ಅವರ ಮುಂದೆ ನಾವು ಹೇಗೆ ನಡೆದುಕೊಳ್ಳಬೇಕು? ಉದಾಹರಣೆಗೆ, ಮೆಕ್ಸಿಕೋದ ಕಿಯಾಪಸ್‌ ರಾಜ್ಯದಲ್ಲಿ ನಡೆದ ಘಟನೆಯೊಂದನ್ನು ಗಮನಿಸಿ. ಅಲ್ಲಿ ಯೆಹೋವನ ಸಾಕ್ಷಿಗಳು ಕೆಲವೊಂದು ಧಾರ್ಮಿಕ ಹಬ್ಬಗಳಲ್ಲಿ ಭಾಗವಹಿಸದಿದ್ದ ಕಾರಣ, 57 ಸಾಕ್ಷಿಗಳ ಕುಟುಂಬಗಳಿಗೆ ಸೇರಿದ್ದ ಒಂದು ತೋಟದ ನೆಲವನ್ನು ಅಲ್ಲಿನ ಸಮುದಾಯದ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಈ ವಿವಾದವನ್ನು ಇತ್ಯರ್ಥ ಮಾಡುವುದಕ್ಕಾಗಿ ಒಂದು ಮೀಟಿಂಗ್‌ ಅನ್ನು ಏರ್ಪಡಿಸಲಾಗಿತ್ತು. ಅಲ್ಲಿಗೆ ಬಂದಿದ್ದ ಸಾಕ್ಷಿಗಳು ಸ್ವಚ್ಛವಾದ ಹಾಗೂ ಶಿಸ್ತಿನ ಉಡುಪನ್ನು ಧರಿಸಿದ್ದರು ಮತ್ತು ಅವರು ಆದರಣೀಯವಾಗಿ ನಡೆದುಕೊಂಡರು. ಇದರ ಪರಿಣಾಮವಾಗಿ, ಒಂದು ವರ್ಷವಾದ ಮೇಲೆ ಸಾಕ್ಷಿಗಳ ಪರವಾಗಿ ತೀರ್ಪಾಯಿತು. ಏಕೆಂದರೆ, ಸಾಕ್ಷಿಗಳ ನಡವಳಿಕೆಯು ಅಲ್ಲಿ ಗಮನಿಸುತ್ತಿದ್ದ ಕೆಲವರ ಗೌರವವನ್ನು ಸಂಪಾದಿಸಿಕೊಟ್ಟಿತು. ಅದು ಎಷ್ಟರ ಮಟ್ಟಿಗೆಂದರೆ ಅವರು ಕೂಡ ಯೆಹೋವನ ಸಾಕ್ಷಿಗಳಾಗಲು ಬಯಸಿದರು!

12. ಅವಿಶ್ವಾಸಿ ಗಂಡನಿಗೆ ‘ಆಳವಾದ ಗೌರವವನ್ನು’ ತೋರಿಸುವುದು ಏಕೆ ಪ್ರಾಮುಖ್ಯವಾಗಿದೆ?

12 ಕುಟುಂಬದಲ್ಲಿ ದೇವದತ್ತ ಅಧಿಕಾರವನ್ನು ಹೊಂದಿರುವವರಿಗೆ ನಾವು ಹೇಗೆ ಗೌರವವನ್ನು ತೋರಿಸಬಹುದು? ಕೆಡುಕನ್ನು ಅನುಭವಿಸಿದ ಯೇಸುವಿನ ಮಾದರಿಯ ಕುರಿತು ಚರ್ಚಿಸಿದ ಬಳಿಕ ಅಪೊಸ್ತಲ ಪೇತ್ರನು ಹೇಳಿದ್ದು: “ಅದೇ ರೀತಿಯಾಗಿ ಸ್ತ್ರೀಯರೇ, ನಿಮ್ಮ ಗಂಡಂದಿರಿಗೆ ಅಧೀನರಾಗಿರಿ. ಅವರಲ್ಲಿ ಕೆಲವರು ದೇವರ ವಾಕ್ಯಕ್ಕೆ ಅವಿಧೇಯರಾಗಿದ್ದರೂ ನೀವು ನಿರ್ಮಲರಾಗಿಯೂ ಭಯಭರಿತರಾಗಿಯೂ [“ಆಳವಾದ ಗೌರವದಿಂದಲೂ,” NW] ನಡೆದುಕೊಳ್ಳುವದನ್ನು ಅವರು ನೋಡಿ ವಾಕ್ಯೋಪದೇಶವಿಲ್ಲದೆ ತಮ್ಮ ಹೆಂಡತಿಯರಾದ ನಿಮ್ಮ ನಡತೆಯಿಂದಲೇ ಸನ್ಮಾರ್ಗಕ್ಕೆ ಬಂದಾರು.” (1 ಪೇತ್ರ 3:1, 2; ಎಫೆಸ 5:22-24) ಇಲ್ಲಿ ಪೇತ್ರನು, ಕೆಲವು ಗಂಡಂದಿರು ತಮ್ಮ ಹೆಂಡತಿಯರ ಗೌರವಕ್ಕೆ ಪಾತ್ರರಾಗಿರದಿದ್ದರೂ, ಹೆಂಡತಿಯರು ಅವರಿಗೆ ‘ಆಳವಾದ ಗೌರವದಿಂದ’ ಕೂಡಿದ ಅಧೀನತೆಯನ್ನು ತೋರಿಸುವುದು ಎಷ್ಟು ಪ್ರಾಮುಖ್ಯವಾಗಿದೆ ಎಂಬುದಕ್ಕೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡುತ್ತಾನೆ. ಅವಿಶ್ವಾಸಿ ಗಂಡನಿಗೆ, ಒಬ್ಬ ಹೆಂಡತಿಯು ಆಳವಾದ ಗೌರವವನ್ನು ತೋರಿಸುವಾಗ, ಅದು ಅವಳ ಗಂಡನ ಮನಸ್ಸನ್ನು ಗೆಲ್ಲಲು ಸಹಾಯಮಾಡಬಹುದು.

13. ಹೆಂಡತಿಯರು ತಮ್ಮ ಗಂಡಂದಿರಿಗೆ ಹೇಗೆ ಗೌರವವನ್ನು ತೋರಿಸಬಹುದು?

13 ಸತ್ಯದಲ್ಲಿರುವ ಗಂಡಂದಿರನ್ನು ಹೊಂದಿರುವ ಹೆಂಡತಿಯರ ಕುರಿತೇನು? ಹಿಂದೆ ಸೂಚಿಸಿರುವ ವಚನಗಳ ಪೂರ್ವಾಪರದಲ್ಲಿ, ಪೇತ್ರನು ಸಾರಳ ಮಾದರಿಯನ್ನು ನಮ್ಮ ಗಮನಕ್ಕೆ ತರುತ್ತಾನೆ. ಆಕೆಯ ಗಂಡನಾಗಿದ್ದ ಅಬ್ರಹಾಮನು, ನಂಬಿಕೆಯುಳ್ಳವರಲ್ಲಿ ಎದ್ದುಕಾಣುವ ಉದಾಹರಣೆಯಾಗಿದ್ದನು. (ರೋಮಾಪುರ 4:16, 17; ಗಲಾತ್ಯ 3:6-9; 1 ಪೇತ್ರ 3:6) ಸತ್ಯದಲ್ಲಿರುವ ಹೆಂಡತಿಯರು ಅವಿಶ್ವಾಸಿ ಗಂಡಂದಿರಿಗೆ ಕೊಡುವ ಗೌರವಕ್ಕಿಂತ, ವಿಶ್ವಾಸಿಗಳಾಗಿರುವ ಗಂಡಂದಿರಿಗೆ ಅವರ ಹೆಂಡತಿಯರು ಕೊಡುವ ಗೌರವವು ಹೆಚ್ಚಾಗಿರಬೇಕಲ್ಲವೇ? ಹೌದು, ವಿಶ್ವಾಸಿಗಳಾಗಿರುವ ಗಂಡಂದಿರಿಗೆ ಅವರ ಹೆಂಡತಿಯರು ಹೆಚ್ಚು ಮರ್ಯಾದೆಯನ್ನು ಕೊಡಬೇಕು. ಆದರೆ, ಯಾವುದೋ ಒಂದು ವಿಷಯದಲ್ಲಿ ನೀವು ನಿಮ್ಮ ಗಂಡನೊಂದಿಗೆ ಸಹಮತಿಸದಿದ್ದಾಗ ಏನು ಮಾಡುವಿರಿ? ಯೇಸು ಕೊಟ್ಟ ಕೆಲವು ಸಲಹೆಗಳನ್ನು ಇಲ್ಲಿ ಸಾಮಾನ್ಯ ವಿಷಯಗಳಿಗೆ ಅನ್ವಯಿಸಬಹುದು: “ಒಬ್ಬನು ಒಂದು ಮೈಲು ದೂರ ಬಾ ಎಂದು ನಿನ್ನನ್ನು ಬಿಟ್ಟೀ ಹಿಡಿದರೆ ಅವನ ಸಂಗಡ ಎರಡು ಮೈಲು ಹೋಗು.” (ಮತ್ತಾಯ 5:41) ನಿಮ್ಮ ಗಂಡನ ಇಚ್ಛೆಗಳನ್ನು ಅನುಸರಿಸಿಕೊಂಡು ಹೋಗುವ ಮೂಲಕ ನೀವು ಅವರಿಗೆ ಗೌರವವನ್ನು ತೋರಿಸಬಹುದು. ಒಂದು ವೇಳೆ, ನಿಮಗೆ ಹಾಗೆ ಮಾಡುವುದು ತುಂಬ ಕಷ್ಟಕರವಾಗಿರುವ ಹಾಗೆ ಕಾಣುವಲ್ಲಿ, ನಿಮ್ಮ ಮನಸ್ಸಿನಲ್ಲಿರುವುದನ್ನು ಅವರಿಗೆ ಹೇಳಿ. ಅವರಿಗೆ ನಿಮ್ಮ ಭಾವನೆಗಳೆಲ್ಲಾ ಗೊತ್ತು ಎಂದು ಭಾವಿಸಬೇಡಿ. ಆದರೆ, ಅದನ್ನು ಹೇಳುವಾಗ ಹೆಚ್ಚು ನಯವಿನಯದಿಂದ ಹೇಳಿ. ಏಕೆಂದರೆ ಬೈಬಲ್‌ ನಮಗೆ ಬುದ್ಧಿಹೇಳುವುದೇನೆಂದರೆ, “ನಿಮ್ಮ ಸಂಭಾಷಣೆ ಯಾವಾಗಲೂ ಇಂಪಾಗಿಯೂ ರಸವತ್ತಾಗಿಯೂ ಇರಲಿ; ಹೀಗೆ ನೀವು ಯಾರಾರಿಗೆ ಯಾವಾವ ರೀತಿಯಲ್ಲಿ ಉತ್ತರಹೇಳಬೇಕೋ ಅದನ್ನು ತಿಳುಕೊಳ್ಳುವಿರಿ.”—ಕೊಲೊಸ್ಸೆ 4:6.

14. ಹೆತ್ತವರಿಗೆ ಗೌರವವನ್ನು ತೋರಿಸುವುದರಲ್ಲಿ ಏನು ಒಳಗೂಡಿದೆ?

14 ಮಕ್ಕಳೇ, ನಿಮ್ಮ ವಿಷಯದಲ್ಲಿ ಏನು? ದೇವರ ವಾಕ್ಯವು ಆಜ್ಞಾಪಿಸುವುದೇನೆಂದರೆ, “ಮಕ್ಕಳೇ, ನೀವು ಕರ್ತನಲ್ಲಿರುವವರಿಗೆ ತಕ್ಕ ಹಾಗೆ ನಿಮ್ಮ ತಂದೆತಾಯಿಗಳ ಮಾತನ್ನು ಕೇಳಬೇಕು; ಇದು ಧರ್ಮ. ವಾಗ್ದಾನಸಹಿತವಾದ ಮೊದಲನೆಯ ಆಜ್ಞೆಯನ್ನು ಕೇಳಿರಿ—ನಿನ್ನ ತಂದೆತಾಯಿಗಳನ್ನೂ ಸನ್ಮಾನಿಸಬೇಕು.” (ಎಫೆಸ 6:1-3) ಹೆತ್ತವರಿಗೆ ವಿಧೇಯತೆಯನ್ನು ತೋರಿಸುವುದು ಮತ್ತು ‘ತಂದೆತಾಯಿಗಳನ್ನು ಸನ್ಮಾನಿಸುವುದು’ ಎಂಬ ಈ ಎರಡೂ ಪದಗಳು ಒಂದೇ ಅರ್ಥವನ್ನು ಹೊಂದಿರುವುದನ್ನು ಗಮನಿಸಿ. ಗ್ರೀಕ್‌ ಭಾಷೆಯಲ್ಲಿ “ಸನ್ಮಾನಿಸು” ಎಂಬ ಪದವು “ಬೆಲೆಕಟ್ಟು” ಅಥವಾ “ಮೌಲ್ಯವನ್ನು ಗೊತ್ತುಮಾಡು” ಎಂಬ ಅರ್ಥವನ್ನು ಹೊಂದಿದೆ. ಆದ್ದರಿಂದ, ಹೆತ್ತವರಿಗೆ ವಿಧೇಯತೆಯಿಂದಿರುವುದು, ನಿಮಗೆ ಅನ್ಯಾಯವಾಗಿ ತೋರಬಹುದಾದ ಅವರ ನಿಯಮಗಳನ್ನು ಅರೆಮನಸ್ಸಿನಿಂದ ಪಾಲಿಸುವುದಕ್ಕಿಂತಲೂ ಹೆಚ್ಚಾಗಿದೆ. ನಿಮ್ಮ ಹೆತ್ತವರನ್ನು ತುಂಬ ಗೌರವಿಸಬೇಕೆಂದು ಮತ್ತು ಅವರು ಕೊಡುವ ಮಾರ್ಗದರ್ಶನವನ್ನು ಬೆಲೆಯುಳ್ಳದ್ದಾಗಿ ಎಣಿಸಬೇಕೆಂದು ಯೆಹೋವನು ನಿಮ್ಮಿಂದ ಬಯಸುತ್ತಾನೆ.—ಜ್ಞಾನೋಕ್ತಿ 15:5.

15. ಹೆತ್ತವರು ತಪ್ಪು ಮಾಡಿದ್ದಾರೆಂದು ಮಕ್ಕಳಿಗೆ ಅನಿಸುವುದಾದರೂ ಕೂಡ, ಹೆತ್ತವರಿಗಾಗಿರುವ ತಮ್ಮ ಗೌರವವನ್ನು ಅವರು ಹೇಗೆ ಕಾಪಾಡಿಕೊಳ್ಳಬಹುದು?

15 ಹೆತ್ತವರ ಮೇಲೆ ನಿಮಗಿರುವ ಗೌರವಕ್ಕೆ ಕುಂದನ್ನು ತರುವಂತಹ ರೀತಿಯಲ್ಲಿ ಅವರು ತಪ್ಪು ಮಾಡುವಾಗ ಆಗೇನು ಮಾಡುವಿರಿ? ಅವರು ಯಾಕೆ ಹಾಗೆ ಮಾಡಿರಬಹುದು ಎಂಬುದನ್ನು ಅವರ ಸ್ಥಾನದಿಂದ ನೋಡಲು ಪ್ರಯತ್ನಿಸಿ. ಏನೇ ಆದರೂ, ಅವರು ನಿಮ್ಮನ್ನು ‘ಹೆತ್ತು’ ಹೊತ್ತು ಸಾಕಿಸಲಹಿದವರಲ್ಲವೇ? (ಜ್ಞಾನೋಕ್ತಿ 23:22) ಅವರು ನಿಮಗಾಗಿ ಮಾಡುವುದೆಲ್ಲವೂ ನಿಮ್ಮ ಮೇಲಿರುವ ಪ್ರೀತಿಯಿಂದಲೇ ಅಲ್ಲವೇ? (ಇಬ್ರಿಯ 12:7-11) ಆದ್ದರಿಂದ, ಅವರೊಂದಿಗೆ ಮಾತಾಡುವಾಗ ಮರ್ಯಾದೆ ಕೊಟ್ಟು ಮಾತಾಡಿ, ನಿಮ್ಮ ಅನಿಸಿಕೆಗಳನ್ನು ಹೇಳುವಾಗ ಕೋಪದಿಂದ ರೇಗದೆ, ಶಾಂತಭಾವದಿಂದ ವಿವರಿಸಿ. ಒಂದು ವೇಳೆ ಅವರು ನಿಮಗಿಷ್ಟವಾಗದ ಉತ್ತರವನ್ನು ಕೊಡುವುದಾದರೂ, ಅವಮರ್ಯಾದೆಯಿಂದ ವರ್ತಿಸಬೇಡಿ. (ಜ್ಞಾನೋಕ್ತಿ 24:29) ದಾವೀದನ ಮಾದರಿಯನ್ನು ನೆನಪಿನಲ್ಲಿಟ್ಟುಕೊಳ್ಳಿ. ದೇವರ ಸಲಹೆಯನ್ನು ಸೌಲನು ಪಾಲಿಸದಿದ್ದಾಗಲೂ ದಾವೀದನು ಅವನಿಗೆ ಸಲ್ಲತಕ್ಕ ಮರ್ಯಾದೆಯನ್ನು ಕೊಟ್ಟನು. ನಿಮ್ಮ ಭಾವನೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳಲು ಸಹಾಯಮಾಡುವಂತೆ ಯೆಹೋವನಲ್ಲಿ ಮೊರೆಯಿಡಿ. ಈ ವಿಷಯದ ಕುರಿತು “ನಿಮ್ಮ ಹೃದಯವನ್ನು ಆತನ ಮುಂದೆ ಬಿಚ್ಚಿರಿ” ಎಂದು ದಾವೀದನು ಹೇಳಿದನು. ಏಕೆಂದರೆ ‘ದೇವರು ನಮ್ಮ ಆಶ್ರಯವಾಗಿದ್ದಾನೆ.’—ಕೀರ್ತನೆ 62:8; ಪ್ರಲಾಪಗಳು 3:25-27.

ಮುಂದಾಳತ್ವವನ್ನು ವಹಿಸಿಕೊಂಡಿರುವವರನ್ನು ಗೌರವಿಸಿ

16. ಸುಳ್ಳು ಬೋಧಕರು ಹಾಗೂ ದೇವದೂತರ ವಿಷಯದಲ್ಲಿ ನಾವು ಯಾವ ಪಾಠವನ್ನು ಕಲಿಯಬಹುದು?

16 ಈಗ ಕ್ರೈಸ್ತ ಸಭೆಯಲ್ಲಿರುವ ಹಿರಿಯರ ಕುರಿತು ನೋಡೋಣ. ಸಭೆಯಲ್ಲಿರುವ ಹಿರಿಯರು ಪವಿತ್ರಾತ್ಮದಿಂದ ನೇಮಿಸಲ್ಪಟ್ಟಿದ್ದಾರೆ. ಆದ್ದರಿಂದ ಅವರಿಗೆ ನಾವು ಗೌರವವನ್ನು ಕೊಡಬೇಕು. ಆದರೆ, ಅವರು ಇನ್ನೂ ಅಪರಿಪೂರ್ಣರಾಗಿರುವುದರಿಂದ ಖಂಡಿತ ತಪ್ಪನ್ನು ಮಾಡುವರು. (ಕೀರ್ತನೆ 130:3; ಪ್ರಸಂಗಿ 7:20; ಅ. ಕೃತ್ಯಗಳು 20:28; ಯಾಕೋಬ 3:2) ಹಿರಿಯರು ತಪ್ಪು ಮಾಡುವಾಗ, ಸಭೆಯಲ್ಲಿರುವ ಕೆಲವರಿಗೆ ಅವರ ಮೇಲೆ ಅತೃಪ್ತಿಯುಂಟಾಗಬಹುದು. ಸಭೆಯಲ್ಲಿ ಯಾವುದೋ ಒಂದು ವಿಷಯವನ್ನು ಹಿರಿಯರು ಸರಿಯಾಗಿ ನಿರ್ವಹಿಸದಿದ್ದಾಗ ಅಥವಾ ನಿರ್ವಹಿಸುತ್ತಿಲ್ಲ ಎಂದು ನಮಗೆ ಅನಿಸುವಾಗ ನಾವೇನು ಮಾಡಬೇಕು? ಮೊದಲನೇ ಶತಮಾನದಲ್ಲಿದ್ದ ಸುಳ್ಳು ಬೋಧಕರ ಮತ್ತು ದೇವದೂತರ ವರ್ತನೆಯಲ್ಲಿದ್ದ ವ್ಯತ್ಯಾಸವನ್ನು ಗಮನಿಸಿ: “ಇವರು [ಸುಳ್ಳು ಬೋಧಕರು] ಯಾರಿಗೂ ಹೆದರದೆ ಸ್ವೇಚ್ಛಾಪರರಾಗಿದ್ದು ಮಹಾಪದವಿಯವರನ್ನು ನಿರ್ಭಯವಾಗಿ ದೂಷಿಸುತ್ತಾರೆ. ದೇವದೂತರು ಬಲದಲ್ಲಿಯೂ ಮಹತ್ತಿನಲ್ಲಿಯೂ ಶ್ರೇಷ್ಠರಾಗಿದ್ದರೂ ಕರ್ತನ ಮುಂದೆ [ಯೆಹೋವನಿಗಾಗಿರುವ ಗೌರವದಿಂದಾಗಿ,” NW] ಮಹಾಪದವಿಯವರ ಮೇಲೆ ದೂಷಣಾಭಿಪ್ರಾಯವನ್ನು ಹೇಳುವದಿಲ್ಲವಲ್ಲಾ.” (2 ಪೇತ್ರ 2:10-13) ಮೊದಲನೇ ಶತಮಾನದ ಕ್ರೈಸ್ತ ಸಭೆಯಲ್ಲಿದ್ದ ಹಿರಿಯರಿಗೆ ಅಧಿಕಾರವು ಕೊಡಲ್ಪಟ್ಟಿತ್ತು. ಆದರೆ ಸುಳ್ಳು ಬೋಧಕರು ಈ “ಮಹಾಪದವಿಯವರ” ಕುರಿತು ದೂಷಣೆಯ ಮಾತುಗಳನ್ನಾಡಿದರು. ಮಾತ್ರವಲ್ಲ, ಈ ಸುಳ್ಳು ಬೋಧಕರು ಸಭೆಯಲ್ಲಿದ್ದ ಸಹೋದರರ ಮಧ್ಯೆ ಒಡಕನ್ನುಂಟುಮಾಡುತ್ತಿದ್ದರು. ದೇವದೂತರಾದರೋ ಅವರ ಕುರಿತು ದೂಷಣೆಯ ಮಾತುಗಳನ್ನು ಆಡಲಿಲ್ಲ. ಅಷ್ಟೇ ಅಲ್ಲ, ಮಾನವರಿಗಿಂತ ಮೇಲ್ದರ್ಜೆಯಲ್ಲಿರುವ ದೇವದೂತರಿಗೆ ನ್ಯಾಯದ ಹೆಚ್ಚು ಸೂಕ್ಷ್ಮ ಪರಿಜ್ಞಾನವೂ ಇತ್ತು ಹಾಗೂ ಸಭೆಯಲ್ಲಿ ನಡೆಯುತ್ತಿರುವುದೆಲ್ಲವೂ ಅವರಿಗೆ ಚೆನ್ನಾಗಿ ಗೊತ್ತಿತ್ತು. ಆದರೂ “ಯೆಹೋವನಿಗಾಗಿರುವ ಗೌರವದಿಂದಾಗಿ” ನ್ಯಾಯತೀರಿಸುವುದನ್ನು ಯೆಹೋವನಿಗೆ ಬಿಟ್ಟುಬಿಟ್ಟರು.—ಇಬ್ರಿಯ 2:6, 7; ಯೂದ 9.

17. ಸಮಸ್ಯೆಗಳನ್ನು ನಿರ್ವಹಿಸುವಾಗ ಹಿರಿಯರು ತಪ್ಪು ಮಾಡಿದ್ದಾರೆಂದು ನಿಮಗನಿಸುವಾಗ, ನಿಮ್ಮ ನಂಬಿಕೆಯು ಹೇಗೆ ಅದರ ಮೇಲೆ ಪ್ರಭಾವಬೀರುತ್ತದೆ?

17 ಸಮಸ್ಯೆಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸದೇ ಇದ್ದಾಗಲೂ ಕೂಡ, ಕ್ರೈಸ್ತ ಸಭೆಯ ಜೀವಂತ ತಲೆಯಾಗಿರುವ ಯೇಸು ಕ್ರಿಸ್ತನಲ್ಲಿ ನಾವು ನಂಬಿಕೆಯನ್ನಿಡಬೇಕು. ಏಕೆಂದರೆ, ತನ್ನ ಲೋಕವ್ಯಾಪಕ ಸಭೆಗಳಲ್ಲಿ ಏನು ನಡೆಯುತ್ತಿದೆ ಎಂದು ಅವನಿಗೆ ಗೊತ್ತಿದೆ. ಆತನು ಸನ್ನಿವೇಶಗಳನ್ನು ನಿರ್ವಹಿಸುವ ರೀತಿಯನ್ನು ಗೌರವಿಸಬೇಕು ಮತ್ತು ವಿಷಯಗಳನ್ನು ಹತೋಟಿಯಲ್ಲಿಡುವ ಆತನ ದಕ್ಷತೆಯನ್ನು ಅಂಗೀಕರಿಸಬೇಕು. ಅಷ್ಟು ಮಾತ್ರವಲ್ಲ, ‘ನಮ್ಮ ನೆರೆಯವರ ವಿಷಯದಲ್ಲಿ ತೀರ್ಪುಮಾಡಲು ನಾವು ಯಾರು?’ (ಯಾಕೋಬ 4:12; 1 ಕೊರಿಂಥ 11:3; ಕೊಲೊಸ್ಸೆ 1:18) ಆದ್ದರಿಂದ, ನೀವು ಪ್ರಾರ್ಥನೆಮಾಡುವಾಗ ನಿಮ್ಮ ಚಿಂತೆಗಳನ್ನು ನೀವು ಏಕೆ ಯೆಹೋವನ ಮುಂದೆ ಇಡಬಾರದು?

18, 19. ಒಬ್ಬ ಹಿರಿಯನು ತಪ್ಪು ಮಾಡಿದ್ದಾನೆ ಎಂದು ನಿಮಗನಿಸುವಲ್ಲಿ ನೀವೇನು ಮಾಡಬಹುದು?

18 ಮಾನವ ಅಪರಿಪೂರ್ಣತೆಯ ನಿಮಿತ್ತ ಸಮಸ್ಯೆಗಳು ಏಳಬಹುದು. ಕೆಲವೊಮ್ಮೆ ಹಿರಿಯನು ತಪ್ಪುಮಾಡುವ ಸಂದರ್ಭಗಳು ಬರಬಹುದು. ಅದು, ಕೆಲವರ ಮನಶ್ಶಾಂತಿಯನ್ನು ಕದಡಸಾಧ್ಯವಿದೆ. ಅಂಥ ಸಂದರ್ಭಗಳಲ್ಲಿ, ದುಡುಕಿ ಕ್ರಿಯೆಗೈಯಬಾರದು. ಹಾಗೆ ಮಾಡಿದರೆ ಪರಿಸ್ಥಿತಿಯು ಸುಧಾರಿಸುವ ಬದಲು ಇನ್ನೂ ಹದಗೆಡಬಹುದು. ಆತ್ಮಿಕ ವಿವೇಚನೆಯನ್ನು ಹೊಂದಿರುವವರು ಯೆಹೋವನು ಕ್ರಿಯೆಗೈಯುವ ವರೆಗೂ ಮತ್ತು ಆತನು ತನ್ನದೇ ಆದ ಸಮಯದಲ್ಲಿ ಮತ್ತು ತನ್ನದೇ ಆದ ರೀತಿಯಲ್ಲಿ ತಿದ್ದುಪಾಟನ್ನು ನೀಡುವ ವರೆಗೂ ಕಾಯುವರು.—2 ತಿಮೊಥೆಯ 3:16; ಇಬ್ರಿಯ 12:7-11.

19 ಯಾವುದೋ ಒಂದು ವಿಷಯವು ನಿಮಗೆ ದುಃಖವನ್ನುಂಟುಮಾಡಿದೆ ಎಂದು ನೆನಸಿಕೊಳ್ಳಿ. ಆಗ ಏನು ಮಾಡುವಿರಿ? ಇತರರ ಬಳಿ ಹೋಗುವಿರೋ? ಅಥವಾ ಹಿರಿಯರ ಬಳಿ ಹೋಗುವಿರೋ? ಆ ವಿಷಯವನ್ನು ಸಭೆಯಲ್ಲಿರುವ ಇತರರೊಂದಿಗೆ ಮಾತಾಡುವುದಕ್ಕಿಂತ, ಸಹಾಯಕ್ಕಾಗಿ ಹಿರಿಯರ ಬಳಿಗೆ ಹೋಗುವುದು ಒಳ್ಳೇದು. ಯಾವುದೇ ರೀತಿಯ ಅಸಮಾಧಾನವಿಲ್ಲದೆ, ನಡೆದ ವಿಷಯದಿಂದ ನೀವು ಹೇಗೆ ಬಾಧಿಸಲ್ಪಟ್ಟಿದ್ದೀರಿ ಎಂಬುದನ್ನು ಅವರಿಗೆ ವಿವರಿಸಿ. ಯಾವಾಗಲೂ “ಪರರ ಸುಖದುಃಖಗಳಲ್ಲಿ ಸೇರುವವರಾಗಿರಿ.” ಅಂದರೆ, ಹಿರಿಯರಿಗೆ ಅನುಕಂಪವನ್ನು ತೋರಿಸುತ್ತಾ ನಿಮ್ಮ ಅಂತರಂಗದ ಗುಟ್ಟನ್ನು ಬಿಚ್ಚಿಡುವಾಗ ನಿಮ್ಮ ಮನಸ್ಸಿನಲ್ಲಿ ಅವರಿಗಿರುವ ಗೌರವವನ್ನು ಕಾಪಾಡಿಕೊಳ್ಳಿ. (1 ಪೇತ್ರ 3:8) ಚುಚ್ಚುನುಡಿಗಳನ್ನು ಹೇಳುವುದಕ್ಕಾಗಿ ಮಾರ್ಗವನ್ನು ಹುಡುಕಬೇಡಿ. ಅದಕ್ಕೆ ಬದಲಾಗಿ, ಅವರ ಕ್ರೈಸ್ತ ಪ್ರೌಢತೆಯಲ್ಲಿ ಭರವಸೆಯನ್ನಿಡಿರಿ. ಶಾಸ್ತ್ರವಚನಗಳಿಂದ ಪ್ರೋತ್ಸಾಹವನ್ನು ಕೊಡುವಾಗ ಅದಕ್ಕೆ ಗಣ್ಯತೆಯನ್ನು ತೋರಿಸಿರಿ. ಇನ್ನೂ ಕೆಲವು ಸರಿಪಡಿಸಬೇಕಾದ ಕ್ರಮಗಳನ್ನು ಅವರು ತೆಗೆದುಕೊಳ್ಳಬೇಕೆಂದು ನಿಮಗೆ ಅನಿಸುವುದಾದರೆ, ಸರಿಯಾದುದನ್ನು ಮತ್ತು ಒಳ್ಳೆಯದನ್ನು ಮಾಡಲು ಯೆಹೋವನು ಅವರನ್ನು ಮಾರ್ಗದರ್ಶಿಸುವನು ಎಂಬ ವಿಷಯದಲ್ಲಿ ಭರವಸೆಯುಳ್ಳವರಾಗಿರಿ.—ಗಲಾತ್ಯ 6:10; 2 ಥೆಸಲೊನೀಕ 3:13.

20. ಮುಂದಿನ ಲೇಖನದಲ್ಲಿ ನಾವೇನನ್ನು ಪರೀಕ್ಷಿಸಲಿಕ್ಕಿದ್ದೇವೆ?

20 ಹಾಗಿದ್ದರೂ, ಅಧಿಕಾರದಲ್ಲಿರುವವರಿಗೆ ಸನ್ಮಾನವನ್ನು ಮತ್ತು ಗೌರವವನ್ನು ತೋರಿಸುವ ವಿಷಯದಲ್ಲಿ ಇನ್ನೊಂದು ಅಂಶವನ್ನು ತಿಳಿದುಕೊಳ್ಳಬೇಕಾಗಿದೆ. ಅಧಿಕಾರದಲ್ಲಿರುವವರು ತಮ್ಮ ಪರಾಮರಿಕೆಯಲ್ಲಿರುವವರಿಗೆ ಗೌರವವನ್ನು ತೋರಿಸಬೇಕೋ? ಹೌದು, ಖಂಡಿತವಾಗಿಯೂ ತೋರಿಸಬೇಕು. ಅದನ್ನು ನಾವು ಮುಂದಿನ ಲೇಖನದಲ್ಲಿ ಪರೀಕ್ಷಿಸೋಣ.

ನೀವು ಹೇಗೆ ಉತ್ತರಿಸುವಿರಿ?

• ಅಧಿಕಾರದಲ್ಲಿರುವವರಿಗೆ ಗೌರವವನ್ನು ತೋರಿಸಲು ನಮಗೆ ಯಾವ ಸಕಾರಣವಿದೆ?

• ದೇವದತ್ತ ಅಧಿಕಾರಕ್ಕೆ ಮರ್ಯಾದೆಯನ್ನು ತೋರಿಸದವರನ್ನು ಯೆಹೋವ ಮತ್ತು ಯೇಸು ಹೇಗೆ ವೀಕ್ಷಿಸುತ್ತಾರೆ?

• ಅಧಿಕಾರದಲ್ಲಿದ್ದವರಿಗೆ ಗೌರವವನ್ನು ತೋರಿಸಿದವರ ಯಾವ ಉತ್ತಮ ಉದಾಹರಣೆಗಳು ನಮ್ಮ ಬಳಿ ಇವೆ?

• ನಮ್ಮ ಮೇಲೆ ಅಧಿಕಾರವನ್ನು ಹೊಂದಿರುವವರು ತಪ್ಪು ಮಾಡಿದ್ದಾರೆಂದು ನಮಗನಿಸುವಾಗ ನಾವೇನು ಮಾಡಬಹುದು?

[ಅಧ್ಯಯನ ಪ್ರಶ್ನೆಗಳು]

[ಪಾದಟಿಪ್ಪಣಿ]

*Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

[ಪುಟ 12ರಲ್ಲಿರುವ ಚಿತ್ರ]

ಸಾರಳು ಅಬ್ರಹಾಮನ ಅಧಿಕಾರಕ್ಕೆ ಆಳವಾದ ಗೌರವವನ್ನು ತೋರಿಸಿದಳು ಮತ್ತು ಅದನ್ನು ಮಾಡುವುದರಲ್ಲಿ ಸಂತೋಷಿದಳು

[ಪುಟ 13ರಲ್ಲಿರುವ ಚಿತ್ರ]

ಕುಟುಂಬ ಯಜಮಾನನಾಗಿ ಮತ್ತು ರಾಜನಾಗಿ ದಾವೀದನಿಗಿದ್ದ ಅಧಿಕಾರವನ್ನು ಗೌರವಿಸುವುದರಲ್ಲಿ ಮೀಕಲಳು ವಿಫಲಳಾದಳು

[ಪುಟ 15ರಲ್ಲಿರುವ ಚಿತ್ರ]

“ಯೆಹೋವನ ದೃಷ್ಟಿಕೋನದಲ್ಲಿ ಆತನ ಅಭಿಷಿಕ್ತನ ಮೇಲೆ ಕೈಮಾಡುವುದು ನನಗೆ ಯೋಚಿಸಲಸಾಧ್ಯವಾದ ವಿಚಾರವಾಗಿದೆ”

[ಪುಟ 16ರಲ್ಲಿರುವ ಚಿತ್ರ]

ನೀವು ಪ್ರಾರ್ಥನೆ ಮಾಡುವಾಗ ನಿಮ್ಮ ಚಿಂತೆಗಳನ್ನು ಯೆಹೋವನ ಮುಂದೆ ಏಕೆ ಇಡಬಾರದು?