“ನೀವೆಲ್ಲರು ಸಹೋದರರು”
“ನೀವೆಲ್ಲರು ಸಹೋದರರು”
“ನೀವು ಬೋಧಕರನ್ನಿಸಿಕೊಳ್ಳಬೇಡಿರಿ; ಒಬ್ಬನೇ ನಿಮ್ಮ ಬೋಧಕನು, ನೀವೆಲ್ಲರು ಸಹೋದರರು.”—ಮತ್ತಾಯ 23:8.
1. ನಾವು ಯಾವ ವಿಷಯದ ಕುರಿತು ತಿಳಿದುಕೊಳ್ಳಬೇಕಾಗಿದೆ?
“ಮಿಷನೆರಿ ಅಥವಾ ಬೆತೆಲ್ ಸೇವಕ, ಇವರಲ್ಲಿ ಗೌರವಕ್ಕೆ ಹೆಚ್ಚು ಪಾತ್ರರಾಗಿರುವವರು ಯಾರು?” ಎಂದು ಪೂರ್ವ ದೇಶದ ಮಹಿಳೆಯೊಬ್ಬಳು ಆಸ್ಟ್ರೇಲಿಯದಿಂದ ಬಂದಿದ್ದ ಮಿಷನೆರಿಯೊಬ್ಬರನ್ನು ಮುಗ್ಧವಾಗಿ ಕೇಳಿದಳು. ಮತ್ತೊಂದು ದೇಶದಿಂದ ಬಂದಿರುವ ಒಬ್ಬ ಮಿಷನೆರಿ ಹೆಚ್ಚೋ ಅಥವಾ ತನ್ನ ದೇಶದ ವಾಚ್‌ಟವರ್ ಸೊಸೈಟಿಯ ಬ್ರಾಂಚ್ ಆಫೀಸಿನಲ್ಲಿ ಕೆಲಸಮಾಡುತ್ತಿರುವ ಬೆತೆಲ್ ಸೇವಕನು ಹೆಚ್ಚೋ? ಇವರಲ್ಲಿ ಯಾರಿಗೆ ಹೆಚ್ಚು ಗೌರವವನ್ನು ಕೊಡಬೇಕು ಎಂಬುದನ್ನು ಅವಳು ತಿಳಿದುಕೊಳ್ಳಲು ಬಯಸಿದ್ದಳು. ಆ ಮಹಿಳೆಯು ಕೇಳಿದ ಮುಗ್ಧ ಪ್ರಶ್ನೆಯು, ಮಿಷನೆರಿಗೆ ಆಶ್ಚರ್ಯವನ್ನು ಉಂಟುಮಾಡಿತು. ಏಕೆಂದರೆ, ಅವಳು ಅಧಿಕಾರ ಮತ್ತು ಪದವಿಯೆಂಬ ವರ್ಗಭೇದಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡಲಾಗುತ್ತಿದ್ದ ಸಮಾಜದವಳಾಗಿದ್ದಳು. ಈ ರೀತಿಯ ಸಮಾಜದ ಜನರು, ಯಾರಿಗೆ ಹೆಚ್ಚು ಅಧಿಕಾರವಿದೆ ಎಂಬುದನ್ನು ತಿಳಿದುಕೊಳ್ಳಲು ಆಸ್ತಕರಾಗಿರುವುದು ವಿಶೇಷವೇನಲ್ಲ. ಆದರೆ ಈ ವಿಷಯದಲ್ಲಿ ನಮ್ಮ ಮನೋಭಾವವೇನಾಗಿರಬೇಕು?
2. ನಮ್ಮ ಜೊತೆ ಆರಾಧಕರನ್ನು ನಾವು ಯಾವ ದೃಷ್ಟಿಕೋನದಲ್ಲಿ ನೋಡಬೇಕು?
2 ಆದರೆ ಈ ರೀತಿಯ ಆಸಕ್ತಿಯು ಹೊಸದೇನಲ್ಲ. ಏಕೆಂದರೆ, ಯೇಸುವಿನ ಶಿಷ್ಯರಲ್ಲಿ ಕೂಡ ತಮ್ಮಲ್ಲಿ ಯಾರು ಹೆಚ್ಚಿನವರೆಂಬ ವಿಷಯದಲ್ಲಿ ಬಿಡುವಿಲ್ಲದ ತರ್ಕವು ನಡೆಯುತ್ತಿತ್ತು. (ಮತ್ತಾಯ 20:20-24; ಮಾರ್ಕ 9:33-37; ಲೂಕ 22:24-27) ಅವರು ಸಹ, ಅಧಿಕಾರ ಮತ್ತು ಪದವಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡಲಾಗುತ್ತಿದ್ದ ವರ್ಗಭೇದ ಸಮಾಜದಿಂದ ಬಂದವರಾಗಿದ್ದರು. ಆ ಸಮಾಜವು ಪ್ರಥಮ ಶತಮಾನದ ಯೆಹೂದಿ ಧರ್ಮವಾಗಿತ್ತು. ಇಂಥ ಒಂದು ಸಮಾಜವನ್ನು ಮನಸ್ಸಿನಲ್ಲಿಟ್ಟುಕೊಂಡೇ ಯೇಸು ತನ್ನ ಶಿಷ್ಯರಿಗೆ ಈ ಬುದ್ಧಿವಾದನ್ನು ನೀಡಿದನು: “ನೀವು ಬೋಧಕರನ್ನಿಸಿಕೊಳ್ಳಬೇಡಿರಿ; ಒಬ್ಬನೇ ನಿಮ್ಮ ಬೋಧಕನು, ನೀವೆಲ್ಲರು ಸಹೋದರರು.” (ಮತ್ತಾಯ 23:8) “ರಬ್ಬೀ” ಅಥವಾ “ಬೋಧಕ” ಎಂಬ ಪದವಿಯನ್ನು ಧಾರ್ಮಿಕ ಗುರುಗಳಿಗೆ ಕೊಡುವಾಗ, ಅದು ಅವರಲ್ಲಿ ತಾವು “ಹೆಚ್ಚಿನವರೆಂಬ ಭಾವನೆಯನ್ನು ಮತ್ತು ಹೆಮ್ಮೆಯನ್ನು ಉಂಟುಮಾಡುತ್ತದೆ. ಮತ್ತು ಅಂಥ ಪದವಿಯು ಇಲ್ಲದಿರುವವರಲ್ಲಿ ಅದು ಹೊಟ್ಟೆಕಿಚ್ಚನ್ನು ಹಾಗೂ ಕೀಳು ಭಾವನೆಯನ್ನು ಉಂಟುಮಾಡುತ್ತದೆ. ಈ ರೀತಿಯ ಮನೋವೃತ್ತಿಯು, ‘ಯೇಸುವಿನ ಸರಳ ಬೋಧನೆಗೆ ಸಂಪೂರ್ಣವಾಗಿ ತದ್ವಿರುದ್ಧವಾಗಿದೆ’” ಎಂದು ಬೈಬಲ್ ವಿದ್ವಾಂಸರಾದ ಆಲ್ಬರ್ಟ್ ಬಾರ್ನ್ಸ್ ಹೇಳುತ್ತಾರೆ. ಹೌದು, ಕ್ರೈಸ್ತರು ತಮ್ಮ ಮೇಲ್ವಿಚಾರಕರನ್ನು ಕರೆಯುವಾಗ, “ಹಿರಿಯರಾದ ಇಂಥವರು” ಎಂಬ ಬಿರುದನ್ನು ಉಪಯೋಗಿಸುವುದಿಲ್ಲ. ಏಕೆಂದರೆ “ಹಿರಿಯ” ಎಂಬ ಪದವು ಮುಖಸ್ತುತಿ ಮಾಡುವಂಥದ್ದಾಗಿದೆ. (ಯೋಬ 32:21, 22) ಆದರೆ, ಹಿರಿಯರು ಯೆಹೋವನ ಮತ್ತು ಯೇಸುವಿನ ಮಾದರಿಯನ್ನು ಅನುಸರಿಸಬೇಕು. ಏಕೆಂದರೆ, ಯೆಹೋವನು ತನ್ನ ನಿಷ್ಠಾವಂತ ಆರಾಧಕರನ್ನು ಗೌರವಿಸುತ್ತಾನೆ ಹಾಗೂ ಯೇಸು ತನ್ನ ನಿಷ್ಠಾವಂತ ಹಿಂಬಾಲಕರನ್ನು ಗೌರವಿಸುತ್ತಾನೆ. ಹೀಗಿರುವಾಗ, ಹಿರಿಯರು ಸಭೆಯಲ್ಲಿರುವ ತಮ್ಮ ಜೊತೆ ಆರಾಧಕರನ್ನು ಅವರಿಗಿಂತಲೂ ಹೆಚ್ಚಾಗಿ ಗೌರವಿಸಬೇಕಲ್ಲವೇ?
ಯೆಹೋವನ ಮತ್ತು ಯೇಸು ಕ್ರಿಸ್ತನ ಮಾದರಿ
3. ಯೆಹೋವನು ಸ್ವರ್ಗದಲ್ಲಿರುವ ತನ್ನ ದೇವದೂತರಿಗೆ ಹೇಗೆ ಗೌರವವನ್ನು ತೋರಿಸಿದನು?
3 ಯೆಹೋವನು ವಿಶ್ವದ ‘ಸರ್ವೋನ್ನತನಾಗಿದ್ದಾನೆ.’ ಆದರೂ ಆರಂಭದಿಂದಲೂ ಇತರ ಸೃಷ್ಟಿಜೀವಿಗಳನ್ನು ತನ್ನ ಸೃಷ್ಟಿಕಾರ್ಯದಲ್ಲಿ ಒಳಗೂಡಿಸುವ ಮೂಲಕ ಅವನು ಅವರಿಗೆ ಗೌರವವನ್ನು ತೋರಿಸಿದ್ದಾನೆ. (ಕೀರ್ತನೆ 83:18) ಅವನು ಪ್ರಥಮ ಮಾನವನನ್ನು ಸೃಷ್ಟಿಮಾಡುವಾಗ, ಆ ಕೆಲಸದಲ್ಲಿ “ಶಿಲ್ಪಿ”ಯಾಗಿದ್ದ ತನ್ನ ಒಬ್ಬನೇ ಪುತ್ರನನ್ನು ಒಳಗೂಡಿಸುವ ಮೂಲಕ ಅವನನ್ನು ಗೌರವಿಸಿದನು. (ಜ್ಞಾನೋಕ್ತಿ 8:27-30; ಆದಿಕಾಂಡ 1:26) ಅಷ್ಟೇ ಅಲ್ಲ, ಯೆಹೋವನು ದುಷ್ಟ ಅರಸನಾಗಿದ್ದ ಅಹಾಬನನ್ನು ನಾಶಮಾಡಬೇಕೆಂದು ನಿರ್ಣಯಿಸಿದಾಗ, ಅದನ್ನು ಹೇಗೆ ಮಾಡಬಹುದು ಎಂಬುದರ ಕುರಿತು ಸ್ವರ್ಗದಲ್ಲಿರುವ ತನ್ನ ದೇವದೂತರು ತಮ್ಮ ಸಲಹೆಗಳನ್ನು ವ್ಯಕ್ತಪಡಿಸುವಂತೆ ಕೇಳುವ ಮೂಲಕ ಅವರಿಗೆ ಗೌರವವನ್ನು ತೋರಿಸಿದನು.—1 ಅರಸು 22:19-23.
4, 5. ಯೆಹೋವನು ಮಾನವರನ್ನು ಹೇಗೆ ಗೌರವಿಸುತ್ತಾನೆ?
4 ಯೆಹೋವನಿಗೆ ಮಾನವರ ಬಳಿ ಸಲಹೆಗಳನ್ನು ಕೇಳುವ ಅವಶ್ಯಕತೆಯಿಲ್ಲ. ಏಕೆಂದರೆ ಅವನು ವಿಶ್ವಕ್ಕೆ ಸಾರ್ವಭೌಮನಾಗಿದ್ದಾನೆ. (ಧರ್ಮೋಪದೇಶಕಾಂಡ 3:23) ಆದರೂ, ಆತನು ಭೂಮಿಯಲ್ಲಿರುವ ಮಾನವರ ಕಡೆಗೆ ಬಾಗಿ ನೋಡುತ್ತಿದ್ದಾನೋ ಎಂಬಂತೆ, ಮಾನವರ ಅನಿಸಿಕೆಗಳನ್ನು ಕೇಳುವ ಮೂಲಕ ಅವರನ್ನು ತನ್ನ ಲಕ್ಷ್ಯಕ್ಕೆ ತೆಗೆದುಕೊಳ್ಳುತ್ತಾನೆ. ಇದನ್ನೇ ಕೀರ್ತನೆಗಾರನು ಹೀಗೆ ಹಾಡಿನ ರೂಪದಲ್ಲಿ ಹೇಳಿದನು: “ನಮ್ಮ ಯೆಹೋವದೇವರಿಗೆ ಸಮಾನರು ಯಾರು? ಆತನು ಉನ್ನತಲೋಕದಲ್ಲಿ ಆಸನಾರೂಢನಾಗಿ ಆಕಾಶವನ್ನೂ ಭೂಮಿಯನ್ನೂ ನೋಡಲಿಕ್ಕೆ ಬಾಗುತ್ತಾನೆ. ಆತನು ದೀನರನ್ನು ಧೂಳಿಯಿಂದ ಎಬ್ಬಿಸಿ ಬಡವರನ್ನು ತಿಪ್ಪೆಯಿಂದ ಎತ್ತುತ್ತಾನೆ.”—ಕೀರ್ತನೆ 113:5-8.
5 ಇದನ್ನು ಯೆಹೋವನು ಅಬ್ರಹಾಮನೊಂದಿಗೆ ವ್ಯವಹರಿಸಿದ ರೀತಿಯಿಂದ ನಾವು ತಿಳಿದುಕೊಳ್ಳಬಹುದು. ಯೆಹೋವನು ಸೊದೋಮ್ ಮತ್ತು ಗೊಮೋರ ಪಟ್ಟಣಗಳನ್ನು ನಾಶಮಾಡಬೇಕೆಂದಿದ್ದಾಗ, ಅಬ್ರಹಾಮನು ಬಹಳ ಚಿಂತಿತನಾದನು. ಏಕೆಂದರೆ, ನ್ಯಾಯವು ಸರಿಯಾಗಿ ನೀಡಲ್ಪಡುವುದೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗಿತ್ತು. ಅದಕ್ಕಾಗಿ ಅವನು ಯೆಹೋವನಿಗೆ ಅನೇಕ ಪ್ರಶ್ನೆಗಳನ್ನು ಕೇಳಿದನು. (ಆದಿಕಾಂಡ 18:23-33) ಅವನ ಪ್ರಶ್ನೆಗಳ ಅಂತಿಮ ಫಲವು ಏನಾಗಿರುವುದು ಎಂದು ಯೆಹೋವನಿಗೆ ಗೊತ್ತಿತ್ತು. ಆದರೂ ಅವನ ಪ್ರಶ್ನೆಗಳನ್ನು ಆತನು ತಾಳ್ಮೆಯಿಂದ ಕೇಳಿಸಿಕೊಂಡನು ಮತ್ತು ನ್ಯಾಯವು ಖಂಡಿತವಾಗಿ ನೀಡಲ್ಪಡುವುದು ಎಂಬ ಆಶ್ವಾಸನೆಯನ್ನು ಕೊಡುವ ಮೂಲಕ ಅವನಿಗೆ ಗೌರವವನ್ನು ತೋರಿಸಿದನು.
6. ಹಬಕ್ಕೂಕನು ಪ್ರಶ್ನಿಸಿದಾಗ ಯೆಹೋವನು ಅವನಿಗೆ ತೋರಿಸಿದ ಗೌರವದ ಪರಿಣಾಮವೇನಾಯಿತು?
6 ಪ್ರವಾದಿಯಾಗಿದ್ದ ಹಬಕ್ಕೂಕನ ಪ್ರಶ್ನೆಗಳಿಗೆ ಸಹ ಯೆಹೋವನು ಕಿವಿಗೊಟ್ಟನು. “ಯೆಹೋವನೇ, ನಾನು ಮೊರೆಯಿಡುತ್ತಿದ್ದರೂ ನೀನು ಎಷ್ಟು ಕಾಲ ಕೇಳದೇ ಇರುವಿ?” ಎಂದು ಹಬಕ್ಕೂಕನು ಯೆಹೋವನನ್ನು ಕೇಳಿದನು. ಆಗ ಯೆಹೋವನು ಅವನ ಸಂದೇಹಾಸ್ಪದ ಪ್ರಶ್ನೆಗಳನ್ನು ತನ್ನ ಅಧಿಕಾರಕ್ಕೆ ಸವಾಲಾಗಿ ತೆಗೆದುಕೊಂಡನೋ? ಇಲ್ಲ! ಬದಲಿಗೆ ಅವನ ಪ್ರಶ್ನೆಗಳು ನ್ಯಾಯವಾದವುಗಳಾಗಿವೆ ಎಂದು ಆತನಿಗೆ ಗೊತ್ತಿತ್ತು. ಆದುದರಿಂದ, ನ್ಯಾಯವನ್ನು ತೀರಿಸುವುದಕ್ಕಾಗಿ ಕಸ್ದೀಯರನ್ನು ಎಬ್ಬಿಸುವುದಾಗಿ ಹಬಕ್ಕೂಕನಿಗೆ ತಿಳಿಸಿದನು. ‘ಮುಂತಿಳಿಸಲ್ಪಟ್ಟಿರುವ ನ್ಯಾಯತೀರ್ಪು ಬಂದೇ ಬರುವುದು’ ಎಂಬುದಾಗಿ ಯೆಹೋವನು ಹಬಕ್ಕೂಕನಿಗೆ ಆಶ್ವಾಸನೆಯನ್ನು ನೀಡಿದನು. (ಹಬಕ್ಕೂಕ 1:1, 2, 5, 6, 13, 14; 2:2, 3) ಹೀಗೆ, ಯೆಹೋವನು ಹಬಕ್ಕೂಕನ ಪ್ರಶ್ನೆಯನ್ನು ಗಂಭೀರವಾಗಿ ತೆಗೆದುಕೊಂಡದ್ದು ಮಾತ್ರವಲ್ಲ, ಅದಕ್ಕೆ ಉತ್ತರವನ್ನು ಸಹ ಕೊಟ್ಟನು. ಹೀಗೆ ಮಾಡುವ ಮೂಲಕ ಯೆಹೋವನು ಹಬಕ್ಕೂಕನಿಗೆ ಗೌರವವನ್ನು ತೋರಿಸಿದನು. ಇದರ ಪರಿಣಾಮವಾಗಿ, ತಳಮಳಗೊಂಡಿದ್ದ ಪ್ರವಾದಿಯ ಮುಖವು ಗೆಲುವಿನಿಂದ ತುಂಬಿತು ಮತ್ತು ಹರ್ಷಭರಿತನಾದನು. ತನ್ನ ರಕ್ಷಣೆಯ ದೇವರಲ್ಲಿ ಪ್ರವಾದಿಯ ಭರವಸೆಯು ದೃಢಗೊಂಡಿತು. ಹಬಕ್ಕೂಕನ ಭಾವನೆಗಳನ್ನು ನಾವು ಅವನ ಪ್ರೇರಿತ ಪುಸ್ತಕದಲ್ಲಿ ಓದಬಹುದು. ಅದು ಇಂದಿಗೂ ಯೆಹೋವನ ಮೇಲಿರುವ ನಮ್ಮ ಭರವಸೆಯನ್ನು ಬಲಪಡಿಸುತ್ತದೆ.—ಹಬಕ್ಕೂಕ 3:18, 19.
7. ಪಂಚಾಶತ್ತಮದಂದು ಪೇತ್ರನ ವಿಶೇಷ ಪಾತ್ರಕ್ಕೆ ಯಾವುದು ಕಾರಣವಾಗಿತ್ತು?
7 ಇತರರಿಗೆ ಗೌರವವನ್ನು ತೋರಿಸುವುದರಲ್ಲಿ ಯೇಸು ಕ್ರಿಸ್ತನು ಮತ್ತೊಂದು ಉತ್ತಮ ಮಾದರಿಯಾಗಿದ್ದಾನೆ. ಅವನು ಅದನ್ನು ತನ್ನ ಶಿಷ್ಯನೊಬ್ಬನ ವಿಷಯದಲ್ಲಿ ಹೇಗೆ ತೋರಿಸಿದನೆಂದು ನೋಡೋಣ. ಅವನು ತನ್ನ ಶಿಷ್ಯರಿಗೆ ಮೊದಲೇ ಹೀಗೆ ಹೇಳಿದ್ದನು: “ಯಾವನು ಮನುಷ್ಯರ ಮುಂದೆ ತಾನು ಯೇಸುವಿನವನಲ್ಲವೆಂದು ಹೇಳುವನೋ ಅವನನ್ನು ನಾನು ಸಹ ಪರಲೋಕದಲ್ಲಿರುವ ನನ್ನ ತಂದೆಯ ಮುಂದೆ ನನ್ನವನಲ್ಲವೆಂದು ಹೇಳುವೆನು.” (ಮತ್ತಾಯ 10:32, 33) ಹಾಗಿದ್ದರೂ, ಯೇಸುವನ್ನು ಹಿಡುಕೊಟ್ಟ ರಾತ್ರಿಯಂದು ಶಿಷ್ಯರೆಲ್ಲರೂ ಅವನನ್ನು ಬಿಟ್ಟು ಓಡಿಹೋದರು. ಅಷ್ಟೇ ಅಲ್ಲ, ಅಪೊಸ್ತಲ ಪೇತ್ರನು ಯೇಸು ಯಾರೆಂದು ತನಗೆ ಗೊತ್ತಿಲ್ಲವೆಂದು ಮೂರು ಸಾರಿ ಹೇಳಿದ್ದನು. (ಮತ್ತಾಯ 26:34, 35, 69-75) ಪೇತ್ರನು ಇಷ್ಟೆಲ್ಲಾ ಮಾಡಿದ್ದರೂ, ಯೇಸು ಅವನಿಗೆ ಅಗೌರವವನ್ನು ತೋರಿಸಲಿಲ್ಲ. ಏಕೆಂದರೆ, ಪೇತ್ರನ ಹೊರತೋರಿಕೆಗಿಂತ ಹೆಚ್ಚಿನದ್ದನ್ನು ಯೇಸು ಅವನಲ್ಲಿ ನೋಡಿದ್ದನು ಮತ್ತು ಅವನ ಹೃದಯದಾಳದಲ್ಲಿರುವ ಭಾವನೆಗಳನ್ನು ಮತ್ತು ಅವನು ತೋರಿಸಿದ ಆಳವಾದ ಪಶ್ಚಾತ್ತಾಪವನ್ನು ಅರಿತಿದ್ದನು. (ಲೂಕ 22:61, 62) ಅದರಿಂದಾಗಿ, ಯೇಸು ಕ್ರಿಸ್ತನು ಪುನರುತ್ಥಾನವಾಗಿ ಕೇವಲ 51 ದಿನಗಳೊಳಗಾಗಿ, ತನ್ನ ಪಶ್ಚಾತ್ತಾಪಿ ಶಿಷ್ಯನನ್ನು ಘನಪಡಿಸಿದನು. ಹೇಗೆಂದರೆ, ಯೇಸುವಿನ 120 ಶಿಷ್ಯರನ್ನು ಪಂಚಾಶತ್ತಮದಂದು ಪೇತ್ರನು ಪ್ರತಿನಿಧಿಸುವಂತೆ ಹಾಗೂ ‘ಪರಲೋಕರಾಜ್ಯದ ಬೀಗದ ಕೈಗಳಲ್ಲಿ’ ಮೊದಲನೆ ಬೀಗದ ಕೈಯನ್ನು ಉಪಯೋಗಿಸುವಂತೆ ಅವನಿಗೆ ಅನುಮತಿಯನ್ನು ಕೊಟ್ಟನು. (ಮತ್ತಾಯ 16:19; ಅ. ಕೃತ್ಯಗಳು 2:14-40) ಮಾತ್ರವಲ್ಲ, ‘ತಿರುಗಿಕೊಂಡ ಮೇಲೆ ಸಹೋದರರನ್ನು ದೃಢಪಡಿಸುವ’ ಅವಕಾಶವನ್ನು ಕೊಡುವ ಮೂಲಕ ಯೇಸು ಅವನನ್ನು ಘನಪಡಿಸಿದನು.—ಲೂಕ 22:31-33.
ಕುಟುಂಬದ ಸದಸ್ಯರಿಗೆ ಗೌರವವನ್ನು ಕೊಡುವುದು
8, 9. ತನ್ನ ಹೆಂಡತಿಗೆ ಗೌರವವನ್ನು ತೋರಿಸುವ ಮೂಲಕ ಒಬ್ಬ ಗಂಡನು ಯೆಹೋವನನ್ನು ಮತ್ತು ಯೇಸುವನ್ನು ಹೇಗೆ ಅನುಕರಿಸಬಹುದು?
8 ಕುಟುಂಬದಲ್ಲಿ ದೇವದತ್ತ ಗೌರವವನ್ನು ತೋರಿಸುವುದರ ಕುರಿತೇನು? ದೇವದತ್ತ ಅಧಿಕಾರವನ್ನು ಚಲಾಯಿಸುವಾಗ ಗಂಡಂದಿರು ಹಾಗೂ ಹೆತ್ತವರು, ಯೆಹೋವನ ಮತ್ತು ಯೇಸು ಕ್ರಿಸ್ತನ ಮಾದರಿಯನ್ನು ಅನುಕರಿಸಬೇಕು. ಉದಾಹರಣೆಗೆ, ನಿಮ್ಮ ಬಳಿ ಒಂದು ನಾಜೂಕಾದ ಪಿಂಗಾಣಿ ಬಟ್ಟಲು ಇದೆಯೆಂದು ಊಹಿಸಿಕೊಳ್ಳಿ. ಅದು ಮರದ ಪಾತ್ರೆಗಿಂತ 1 ಪೇತ್ರ 3:7) ಕುಟುಂಬಕ್ಕೆ ಸಂಬಂಧಿಸಿದ ವಿಷಯಗಳನ್ನು ನಿರ್ಣಯಿಸುವಾಗ ಗಂಡನು ಹೆಂಡತಿಯ ಅಭಿಪ್ರಾಯಗಳನ್ನು ಕೇಳಬೇಕು. ಹಾಗೆ ಮಾಡುವಾಗ ಅವನು ಯೆಹೋವನನ್ನು ಅನುಕರಿಸುವವನಾಗಿರುತ್ತಾನೆ. ಅಬ್ರಹಾಮನ ಪ್ರಶ್ನೆಗಳಿಗೆ ಕಿವಿಗೊಡಲು ಯೆಹೋವನು ಸಮಯವನ್ನು ತೆಗೆದುಕೊಂಡದ್ದನ್ನು ನೆನಪುಮಾಡಿಕೊಳ್ಳಿ. ಗಂಡನು ಅಪರಿಪೂರ್ಣನಾಗಿರುವುದರಿಂದ ಕೆಲವೊಮ್ಮೆ ವಿಷಯಗಳನ್ನು ಪೂರ್ತಿಯಾಗಿ ಅರ್ಥಮಾಡಿಕೊಳ್ಳದೇ ಇರಬಹುದು. ಆದ್ದರಿಂದ ತನ್ನ ಹೆಂಡತಿಯ ಅಭಿಪ್ರಾಯವನ್ನು ಯಥಾರ್ಥವಾಗಿ ಕೇಳುವ ಮೂಲಕ ಗಂಡನು ಅವಳಿಗೆ ಗೌರವವನ್ನು ತೋರಿಸುತ್ತಾನೆ ಮಾತ್ರವಲ್ಲ, ಅದು ಬುದ್ಧಿವಂತಿಕೆಯೂ ಆಗಿದೆ.
ಹೆಚ್ಚು ನಾಜೂಕಾಗಿರುತ್ತದೆ ಎಂದು ನಿಮಗೆ ಗೊತ್ತಿರುತ್ತದೆ. ಆದ್ದರಿಂದ ನೀವು ಅದನ್ನು ಉಪಯೋಗಿಸುವಾಗ ಬಹಳ ಜಾಗ್ರತೆ ವಹಿಸುತ್ತೀರಿ ಅಲ್ಲವೇ? ಹಾಗೆಯೇ, ಗಂಡಂದಿರು ತಮ್ಮ ಹೆಂಡತಿಯರೊಂದಿಗೆ ಅದೇ ರೀತಿಯಲ್ಲಿ ವರ್ತಿಸಬೇಕೆಂದು ಪೇತ್ರನು ಬುದ್ಧಿವಾದವನ್ನು ಕೊಡುತ್ತಾ ಹೇಳಿದ್ದು: “ಅದೇ ರೀತಿಯಾಗಿ ಪುರುಷರೇ, ಸ್ತ್ರೀಯು ಪುರುಷನಿಗಿಂತ ಬಲಹೀನಳೆಂಬದನ್ನು ಜ್ಞಾಪಕಮಾಡಿಕೊಂಡು ನಿಮ್ಮ ಹೆಂಡತಿಯರ ಸಂಗಡ ವಿವೇಕದಿಂದ ಒಗತನಮಾಡಿರಿ.” (9 ಪುರುಷ ಪ್ರಧಾನ ಸಮಾಜಗಳಲ್ಲಿ ವಾಸಿಸುವ ಹೆಂಡತಿಗೆ ತನ್ನ ಮನಸ್ಸಿನಾಳದಲ್ಲಿರುವ ಭಾವನೆಗಳನ್ನು ವ್ಯಕ್ತಪಡಿಸಲು ಬಹಳ ಕಠಿನವಾಗಿರಬಹುದು. ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಗಂಡನು ಯೇಸು ಕ್ರಿಸ್ತನ ಮಾದರಿಯನ್ನು ಅನುಕರಿಸಬೇಕು. ಭೂಮಿಯಲ್ಲಿದ್ದಾಗ ಅವನು ತನ್ನ ಭಾವಿ ಮದಲಗಿತ್ತಿ ವರ್ಗದ ಭಾಗವಾಗಿದ್ದ ಶಿಷ್ಯರೊಂದಿಗೆ ವರ್ತಿಸಿದ ರೀತಿಯನ್ನು ಗಮನದಲ್ಲಿಟ್ಟುಕೊಳ್ಳಿ. ಅವರನ್ನು ಅವನು ತುಂಬ ಪ್ರೀತಿಸಿದನು ಮತ್ತು ಅವರು ತಮ್ಮ ಅಗತ್ಯಗಳನ್ನು ಹೇಳುವುದಕ್ಕೆ ಮುಂಚೆಯೇ ಅವರ ಶಾರೀರಿಕ ಹಾಗೂ ಆತ್ಮಿಕ ಇತಿಮಿತಿಗಳನ್ನು ಗಣನೆಗೆ ತೆಗೆದುಕೊಂಡಿದ್ದನು. (ಮಾರ್ಕ 6:31; ಯೋಹಾನ 16:12, 13; ಎಫೆಸ 5:28-30) ಅದೇ ರೀತಿಯಲ್ಲಿ ನೀವು ಕೂಡ ಇರ್ರಿ. ನಿಮ್ಮ ಹೆಂಡತಿಯು ನಿಮಗಾಗಿಯೂ ಮತ್ತು ಕುಟುಂಬಕ್ಕಾಗಿಯೂ ಮಾಡುವ ಕೆಲಸಗಳನ್ನು ಗಮನಿಸಿ. ಅವುಗಳಿಗಾಗಿ ನಿಮ್ಮ ಗಣ್ಯತೆಯನ್ನು ನಡೆನುಡಿಯಲ್ಲಿ ವ್ಯಕ್ತಪಡಿಸಿ. ಏಕೆಂದರೆ, ಯೆಹೋವನು ಮತ್ತು ಯೇಸು ಕ್ರಿಸ್ತನು ಪ್ರಶಂಸೆಗೆ ಅರ್ಹರಾದವರನ್ನು ಪ್ರಶಂಸಿಸಿದರು ಮತ್ತು ಅವರನ್ನು ಹೊಗಳಿದರು ಹಾಗೂ ಆಶೀರ್ವದಿಸಿದರು. (1 ಅರಸು 3:10-14; ಯೋಬ 42:12-15; ಮಾರ್ಕ 12:41-44; ಯೋಹಾನ 12:3-8) ಇಂಥ ಒಂದು ಉದಾಹರಣೆಯನ್ನು ಗಮನಿಸಿ. ಪೂರ್ವ ದೇಶದಲ್ಲಿರುವ ಒಬ್ಬ ಮಹಿಳೆಯು ತನ್ನ ಗಂಡನ ಕುರಿತು ಹೇಳುವುದು, ನನ್ನ ಗಂಡ ಯೆಹೋವ ಸಾಕ್ಷಿಯಾಗುವುದಕ್ಕೆ ಮುಂಚೆ, “ನಾವು ಅಂಗಡಿಗೆ ಹೋಗಿ ಬರುವಾಗಲೆಲ್ಲಾ ಯಾವಾಗಲೂ ಅವರು ನನಗಿಂತ ಮೂರು ಅಥವಾ ನಾಲ್ಕು ಹೆಜ್ಜೆ ಮುಂದೆ ನಡೆಯುತ್ತಿದ್ದರು. ನಾನೊಬ್ಬಳೇ ಚೀಲಗಳನ್ನೆಲ್ಲಾ ಹಿಡಿದುಕೊಂಡು ಬರಬೇಕಾಗಿತ್ತು. ಆದರೆ ಈಗ ಅವರು ಹಾಗಿಲ್ಲ! ಅವರು ನನಗೆ ಸಹಾಯಮಾಡುತ್ತಾರೆ. ಅಷ್ಟೇ ಅಲ್ಲದೇ, ನಾನು ಮನೆಯಲ್ಲಿ ಮಾಡುವ ಕೆಲಸಗಳಿಗಾಗಿಯು ಕೂಡ ಗಣ್ಯತೆಯನ್ನು ತೋರಿಸುತ್ತಾರೆ!” ಮನದಾಳದಿಂದ ಹೇಳಲ್ಪಡುವ ಗಣ್ಯತೆಯ ಮಾತುಗಳು, ಇತರರಿಗೆ ತನ್ನ ಅಗತ್ಯವಿದೆ ಮತ್ತು ಅವರು ತನ್ನನ್ನು ಗೌರವಿಸುತ್ತಾರೆ ಎಂಬ ಭಾವನೆಯನ್ನು ಹೆಂಡತಿಯಲ್ಲಿ ಉಂಟುಮಾಡುವುದು.—ಜ್ಞಾನೋಕ್ತಿ 31:28.
10, 11. ಯೆಹೋವನು ದಂಗೆಕೋರ ಇಸ್ರಾಯೇಲ್ ಜನಾಂಗದವರೊಂದಿಗೆ ವ್ಯವಹರಿಸಿದ ರೀತಿಯಿಂದ ಹೆತ್ತವರು ಯಾವ ಪಾಠವನ್ನು ಕಲಿಯಬಹುದು?
10 ಹೆತ್ತವರು ತಮ್ಮ ಮಕ್ಕಳೊಂದಿಗೆ ವ್ಯವಹರಿಸುವಾಗಲೂ ಯೆಹೋವನ ಮಾದರಿಯನ್ನು ಅನುಕರಿಸಬೇಕು. ವಿಶೇಷವಾಗಿ ಮಕ್ಕಳಿಗೆ ಶಿಸ್ತನ್ನು ಕಲಿಸುವಾಗ ಅದು ಬಹಳ ಪ್ರಾಮುಖ್ಯವಾಗಿದೆ. “ಯೆಹೋವನು . . . ಇಸ್ರಾಯೇಲ್ಯಯೆಹೂದ್ಯರಿಗೆ” ತಮ್ಮ ದುರಾಚಾರದ ಮಾರ್ಗವನ್ನು ತೊರೆಯುವಂತೆ ‘ಖಂಡಿತವಾಗಿ ಹೇಳಿದನು.’ ಆದರೆ, ಅವರು “ಆತನ ಆಜ್ಞೆಗಳಿಗೆ ಮಣಿಯದೆ” ಇದ್ದರು. (2 ಅರಸು 17:13-15) ಅಷ್ಟೇ ಅಲ್ಲದೇ, “ಆತನ ಮುಂದೆ ಅವರ ಬಾಯಿ ವಂಚಿಸಿ ನಾಲಿಗೆ ಸುಳ್ಳಾಡಿತು.” ಈ ಇಸ್ರಾಯೇಲ್ಯರಂತೆ ಕೆಲವೊಮ್ಮೆ ತಮ್ಮ ಮಕ್ಕಳು ವರ್ತಿಸುತ್ತಾರೆಂದು ಅನೇಕ ಹೆತ್ತವರಿಗೆ ಅನಿಸಬಹುದು. ಇಸ್ರಾಯೇಲ್ಯರು ದೇವರನ್ನು “ಪದೇಪದೇ ಪರೀಕ್ಷಿಸಿ” ಆತನ ಮನಸ್ಸನ್ನು ನೋಯಿಸಿದರು ಹಾಗೂ ಆತನಿಗೆ ವ್ಯಥೆಯನ್ನುಂಟುಮಾಡಿದರು. ಆದರೆ, ಯೆಹೋವನು ಅವರೊಂದಿಗೆ ಹೇಗೆ ವರ್ತಿಸಿದನು? ಯೆಹೋವನು “ಕರುಣಾಳುವೂ ಅಪರಾಧಿಗಳನ್ನು ಸಂಹರಿಸದೆ ಕ್ಷಮಿಸುವವನೂ” ಆಗಿದ್ದನು.—ಕೀರ್ತನೆ 78:36-41.
11 ಅಷ್ಟು ಮಾತ್ರವಲ್ಲ, ಯೆಹೋವನು ಇಸ್ರಾಯೇಲ್ಯರನ್ನು “ಬನ್ನಿರಿ, ವಾದಿಸುವ . . . ನಿಮ್ಮ ಪಾಪಗಳು ಕಡು ಕೆಂಪಾಗಿದ್ದರೂ ಹಿಮದ ಹಾಗೆ ಬಿಳುಪಾಗುವವು; ಕಿರಮಂಜಿಬಣ್ಣವಾಗಿದ್ದರೂ ಉಣ್ಣೆಯಂತೆ ಬೆಳ್ಳಗಾಗುವವು” ಎಂದು ಅಂಗಲಾಚಿದನು ಸಹ. (ಯೆಶಾಯ 1:18) ಯೆಹೋವನು ಯಾವುದೇ ತಪ್ಪನ್ನು ಮಾಡದಿದ್ದರೂ, ವಿಷಯಗಳನ್ನು ಸರಿಪಡಿಸುವುದಕ್ಕಾಗಿ ಇಸ್ರಾಯೇಲ್ ಜನಾಂಗದವರನ್ನು ಬನ್ನಿರಿ, ಇತ್ಯರ್ಥ ಮಾಡೋಣ ಎಂದು ಹೇಳುವ ಮೂಲಕ ಕರೆದನು. ತಮ್ಮ ಮಕ್ಕಳೊಂದಿಗೆ ಯಾವ ರೀತಿಯಲ್ಲಿ ವ್ಯವಹರಿಸಬೇಕು ಎಂಬ ವಿಷಯದಲ್ಲಿ ಯೆಹೋವನು ಎಂಥ ಒಂದು ಉತ್ತಮ ಮಾದರಿಯನ್ನು ಇಟ್ಟಿದ್ದಾನೆ! ಒಂದು ವೇಳೆ ಮಕ್ಕಳು ತಪ್ಪು ಮಾಡಿದ್ದರೆ, ಅಂಥ ಸಮಯಗಳಲ್ಲಿ ಕೇವಲ ನೀವೊಬ್ಬರೇ ಮಾತಾಡದೇ, ಅವರು ಏನು ಹೇಳಲಿದ್ದಾರೆಂಬುದನ್ನು ಸಹ ಕೇಳಿ. ಮತ್ತು ಅವರು ಏಕೆ ಬದಲಾಗಬೇಕೆಂಬ ಕಾರಣವನ್ನು ಅವರೊಂದಿಗೆ ಚರ್ಚಿಸಿ. ಹೀಗೆ ಮಾಡುವ ಮೂಲಕ ನೀವು ಅವರಿಗೆ ಘನತೆಯನ್ನು ನೀಡುತ್ತೀರಿ.
12. (ಎ) ಹೆತ್ತವರು ತಮ್ಮ ಮಕ್ಕಳನ್ನು ಯೆಹೋವನಿಗಿಂತ ಹೆಚ್ಚಾಗಿ ಗೌರವಿಸಬಾರದು ಏಕೆ? (ಬಿ) ಮಕ್ಕಳಿಗೆ ತಿದ್ದುಪಾಟನ್ನು ನೀಡುವ ಸಮಯದಲ್ಲಿ ಅವರ ಸ್ವಗೌರವವನ್ನು ಏಕೆ ಮನಸ್ಸಿನಲ್ಲಿಟ್ಟುಕೊಳ್ಳಬೇಕು?
12 ಹೌದು, ಕೆಲವೊಮ್ಮೆ ಮಕ್ಕಳಿಗೆ ಕಠಿನವಾದ ಶಿಸ್ತಿನ ಅಗತ್ಯವಿರುತ್ತದೆ. ಹೆತ್ತವರು ಏಲಿಯನಂತಿರಲು ಇಷ್ಟಪಡಲಾರರು. ಏಕೆಂದರೆ ಅವನು ‘ಯೆಹೋವನನ್ನು ಗೌರವಿಸುವುದಕ್ಕಿಂತ ಹೆಚ್ಚಾಗಿ ತನ್ನ ಮಕ್ಕಳನ್ನು ಗೌರವಿಸುತ್ತಿದ್ದನು’ (1 ಸಮುವೇಲ 2:29) ಆದರೂ, ಹೆತ್ತವರು ತಮ್ಮನ್ನು ತಿದ್ದುವಾಗ ಅದರ ಹಿಂದಿರುವ ಒಳ್ಳೇ ಉದ್ದೇಶವನ್ನು ಮಕ್ಕಳು ನೋಡಬೇಕು. ತಮ್ಮ ಹೆತ್ತವರು ತಮ್ಮನ್ನು ಪ್ರೀತಿಸುವುದರಿಂದಲೇ ತಿದ್ದುಪಾಟನ್ನು ಕೊಡುತ್ತಾರೆ ಎಂಬುದನ್ನು ಅವರು ಗಣ್ಯಮಾಡಬೇಕು. ಆದ್ದರಿಂದಲೇ ಪೌಲನು, “ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ ಕರ್ತನಿಗೆ [“ಯೆಹೋವನಿಗೆ,” NW] ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ ಮಾಡುತ್ತಾ ಅವರನ್ನು ಸಾಕಿಸಲಹಿರಿ” ಎಂದು ತಂದೆಯರಿಗೆ ಬುದ್ಧಿಹೇಳಿದನು. (ಎಫೆಸ 6:4) ಇಲ್ಲಿ ಪೌಲನು ಸೂಚಿಸಿ ಹೇಳುವುದೇನೆಂದರೆ, ಹೆತ್ತವರಿಗೆ ತಮ್ಮ ಮಕ್ಕಳ ಮೇಲೆ ಅಧಿಕಾರವು ಕೊಡಲ್ಪಟ್ಟಿರುವುದಾದರೂ, ಅವರು ತಮ್ಮ ಮಕ್ಕಳೊಂದಿಗೆ ತೀರ ಒರಟಾಗಿ ವರ್ತಿಸುವ ಮೂಲಕ ಅವರಿಗೆ ಕೋಪ ಬರುವಂತೆ ಮಾಡಬಾರದು. ಏಕೆಂದರೆ, ಮಕ್ಕಳಿಗೂ ಸ್ವಗೌರವವಿದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಮಕ್ಕಳಿಗಿರುವ ಸ್ವಗೌರವವನ್ನು ಗಂಭೀರವಾಗಿ ತೆಗೆದುಕೊಳ್ಳಲು ಹೆತ್ತವರಿಗೆ ಸಮಯ ಮತ್ತು ಪ್ರಯತ್ನವು ಬೇಕಾಗಿರುತ್ತದೆ. ಆದರೆ, ಅವರು ಮಕ್ಕಳಿಗೆ ಘನತೆಯನ್ನು ತೋರಿಸುವಾಗ ಅದರಿಂದ ಸಿಗುವ ಪ್ರತಿಫಲವು ಯಾವುದೇ ತ್ಯಾಗಕ್ಕಿಂತ ಮಿಗಿಲಾಗಿರುತ್ತದೆ.
13. ಕುಟುಂಬದಲ್ಲಿರುವ ವೃದ್ಧರ ಕುರಿತು ಬೈಬಲಿನ ದೃಷ್ಟಿಕೋನವೇನು?
13 ಕುಟುಂಬ ಸದಸ್ಯರಿಗೆ ಗೌರವವನ್ನು ತೋರಿಸುವುದರಲ್ಲಿ, ಕೇವಲ ಒಬ್ಬನು ಹೆಂಡತಿ ಮತ್ತು ಮಕ್ಕಳಿಗೆ ಕೊಡುವ ಗೌರವಕ್ಕಿಂತಲೂ ಹೆಚ್ಚಿನದ್ದು ಸೇರಿರುತ್ತದೆ. “ಮುದಿಪ್ರಾಯದಲ್ಲಿ ನಿನ್ನ ಮಕ್ಕಳ ಮಾತನ್ನು ಕೇಳು” ಎಂದು ಜಪಾನಿನ ಒಂದು ನಾಣ್ಣುಡಿಯು ಹೇಳುತ್ತದೆ. ಆ ನಾಣ್ಣುಡಿಯ ಅರ್ಥವೇನೆಂದರೆ, ಹೆತ್ತವರು ತಮ್ಮ ಅಧಿಕಾರವನ್ನು ಅತಿಯಾಗಿ ಚಲಾಯಿಸದೆ ತಮ್ಮ ಬೆಳೆದ ಮಕ್ಕಳು ಏನು ಹೇಳಲು ಬಯಸುತ್ತಾರೆಂಬುದನ್ನು ಕೂಡ ಗಮನಕ್ಕೆ ತೆಗೆದುಕೊಳ್ಳಬೇಕು. ಮಕ್ಕಳು ಮಾತಾಡುವಾಗ ಅದನ್ನು ಹೆತ್ತವರು ಕೇಳಿಸಿಕೊಳ್ಳುವ ಮೂಲಕ ಮಕ್ಕಳಿಗೆ ಗೌರವವನ್ನು ಕೊಡುವುದು ಶಾಸ್ತ್ರೀಯವಾಗಿದೆ. ಆದರೆ, ಮಕ್ಕಳು ಕುಟುಂಬದಲ್ಲಿರುವ ಹಿರಿಯರನ್ನು ಕೀಳಾಗಿ ಕಾಣಬಾರದು. ಏಕೆಂದರೆ “ಹೆತ್ತ ತಂದೆಯ ಮಾತಿಗೆ ಕಿವಿಗೊಡು; ಮುಪ್ಪಿನಲ್ಲಿಯೂ ತಾಯಿಯನ್ನು ಅಸಡ್ಡೆಮಾಡಬೇಡ” ಎಂದು ಜ್ಞಾನೋಕ್ತಿ 23:22 ಹೇಳುತ್ತದೆ. ಅರಸನಾದ ಸೊಲೊಮೋನನು ಈ ಜ್ಞಾನೋಕ್ತಿಗೆ ತಕ್ಕಂತೆ ಜೀವಿಸಿದನು. ಅವನ ತಾಯಿಯು ತನ್ನ ಬಿನ್ನಹದೊಂದಿಗೆ ಸೊಲೊಮೋನನನ್ನು ಸಂಧಿಸಲು ಬಂದಾಗ ಅವನು ತನ್ನ ತಾಯಿಯನ್ನು ಗೌರವಿಸಿದನು. ಸೊಲೊಮೋನನು ತನ್ನ ಸಿಂಹಾಸನದ ಬಲಗಡೆಯಲ್ಲಿ ತನ್ನ ತಾಯಿಗಾಗಿ ಒಂದು ಸಿಂಹಾಸನವನ್ನು ಮಾಡಿಸಿದ್ದನು. ತನ್ನ ವೃದ್ಧ ತಾಯಿಯಾಗಿದ್ದ ಬತ್ಷೆಬೆಯು ಹೇಳುವುದನ್ನು ಗಮನವಿಟ್ಟು ಕೇಳಿಸಿಕೊಂಡನು.—1 ಅರಸು 2:19, 20.
14. ಸಭೆಯಲ್ಲಿರುವ ವೃದ್ಧರಿಗೆ ನಾವು ಹೇಗೆ ಗೌರವವನ್ನು ತೋರಿಸಬಹುದು?
14 ನಮ್ಮ ದೊಡ್ಡ ಆತ್ಮಿಕ ಪರಿವಾರವಾಗಿರುವ ಸಭೆಯಲ್ಲಿ ಕೂಡ ವೃದ್ಧರಿಗೆ ನಾವು ಗೌರವವನ್ನು ತೋರಿಸುವಾಗ, ನಾವು ‘ಒಬ್ಬರಿಗಿಂತ ಒಬ್ಬರು ಮುಂದಾಗಿರುತ್ತೇವೆ.’ (ರೋಮಾಪುರ 12:10) ಈ ವೃದ್ಧರಿಗೆ, ತಾವು ಹಿಂದೆ ಮಾಡುತ್ತಿದ್ದಷ್ಟು ಈಗ ಮಾಡಲಾಗುತ್ತಿಲ್ಲವಲ್ಲ ಎಂಬ ಭಾವನೆಯು ಹತಾಶೆಯನ್ನು ಉಂಟುಮಾಡಬಹುದು. (ಪ್ರಸಂಗಿ 12:1-7) ಇಂಥ ಒಂದು ಉದಾಹರಣೆಯನ್ನು ನೋಡೋಣ. ಒಬ್ಬ ವಯಸ್ಸಾದ ಅಭಿಷಿಕ್ತ ಸಾಕ್ಷಿಯು ಸಣ್ಣ ಚಿಕಿತ್ಸಾಲಯದಲ್ಲಿ ಹಾಸಿಗೆಯನ್ನು ಹಿಡಿದಿದ್ದರು. ಅವರು ಹತಾಶೆಯಿಂದ ಒಮ್ಮೆ ಹೇಳಿದ್ದು: “ನಾನು ಸಾವಿಗಾಗಿ ಕಾಯುತ್ತಿದ್ದೇನೆ. ಏಕೆಂದರೆ ನಾನು ಸತ್ತರೆ ಸ್ವರ್ಗದಲ್ಲಿ ಕೆಲಸಕ್ಕೆ ಪುನಃ ಹಿಂದಿರುಗಬಹುದು.” ಅಂಥ ವಯಸ್ಸಾದ ವ್ಯಕ್ತಿಗಳಿಗೆ ನಾವು ಸಲ್ಲತಕ್ಕ ಮನ್ನಣೆ ಮತ್ತು ಗೌರವವನ್ನು ನೀಡುವಾಗ, ಅದು ಹತಾಶೆಯ ಭಾವನೆಯನ್ನು ಜಯಿಸಲು ಅವರಿಗೆ ಸಹಾಯಮಾಡುವುದು. ಈ ವಿಷಯದಲ್ಲಿ ಇಸ್ರಾಯೇಲ್ಯರು ಹೀಗೆ ಆದೇಶಿಸಲ್ಪಟ್ಟಿದ್ದರು: “ತಲೆನೆರೆತ ವೃದ್ಧರ ಮುಂದೆ ಎದ್ದು ನಿಂತು ಅವರನ್ನು ಸನ್ಮಾನಿಸಬೇಕು.” (ಯಾಜಕಕಾಂಡ 19:32) ಆದ್ದರಿಂದ, ವಯಸ್ಸಾದವರಿಗೆ ಕನಿಕರವನ್ನು ತೋರಿಸುವ ಮೂಲಕ, ಅವರ ಅಗತ್ಯ ನಮಗಿದೆ ಮತ್ತು ಅವರು ಗಣ್ಯಮಾಡಲ್ಪಡುತ್ತಾರೆ ಎಂಬ ಭಾವನೆಯನ್ನು ಅವರಲ್ಲಿ ಉಂಟುಮಾಡಿರಿ. ವೃದ್ದರ ಮುಂದೆ ‘ಎದ್ದು ನಿಲ್ಲುವುದು’ ಎಂದರೆ ಅವರೊಂದಿಗೆ ಕುಳಿತು ಅವರು ತಮ್ಮ ಯುವ ವರ್ಷಗಳಲ್ಲಿ ಮಾಡಿರುವ ಸಾಧನೆಗಳ ಕುರಿತು ವಿವರಿಸುವಂತೆ ಕೇಳುವುದು ಕೂಡ ಒಳಗೂಡಿರಬಹುದು. ಹಾಗೆ ಮಾಡುವಾಗ, ಅದು ವೃದ್ಧರನ್ನು ಘನಪಡಿಸಿದಂತಾಗುವುದು ಮತ್ತು ನಮ್ಮ ಸ್ವಂತ ಆತ್ಮಿಕ ಜೀವನವನ್ನು ಹೆಚ್ಚು ಸಂಪದ್ಭರಿತವನ್ನಾಗಿ ಮಾಡುವುದು.
“ಮಾನಮರ್ಯಾದೆಯನ್ನು ತೋರಿಸುವದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ”
15. ಸಭೆಯಲ್ಲಿರುವ ಸದಸ್ಯರಿಗೆ ಗೌರವವನ್ನು ತೋರಿಸುವುದರಲ್ಲಿ ಹಿರಿಯರು ಏನು ಮಾಡಬಹುದು?
15 ಸಭೆಯಲ್ಲಿರುವ ಸದಸ್ಯರಿಗೆ ಗೌರವವನ್ನು ತೋರಿಸುವುದರಲ್ಲಿ ಹಿರಿಯರು ಉತ್ತಮ ಮಾದರಿಯನ್ನು ಇಡುವಾಗ, ಮಂದೆಯವರು ಕೂಡ ಹೆಚ್ಚು ಪ್ರಗತಿಯನ್ನು ಮಾಡುತ್ತಾರೆ. (1 ಪೇತ್ರ 5:2, 3) ಅಕ್ಕರೆಯುಳ್ಳ ಹಿರಿಯರು ಎಷ್ಟೇ ಕಾರ್ಯಮಗ್ನ ಶೆಡ್ಯೂಲನ್ನು ಹೊಂದಿರುವುದಾದರೂ ಸಭೆಯಲ್ಲಿರುವ ಯುವಜನರು ಮತ್ತು ಕುಟುಂಬದ ಯಜಮಾನರು, ಒಂಟಿ ತಾಯಂದಿರು ಹಾಗೂ ಗೃಹಿಣಿಯರು ಮತ್ತು ವೃದ್ಧರು, ಇವರು ಸಮಸ್ಯೆಯನ್ನು ಹೊಂದಿರಲಿ, ಇಲ್ಲದಿರಲಿ ಅವರನ್ನು ಮಾತನಾಡಿಸಲು ಮುಂದಾಗುತ್ತಾರೆ. ಅವರು ಹಾಗೆ ಮಾತಾಡುವಾಗ, ಸಭೆಯ ಸದಸ್ಯರು ಹೇಳಲು ಬಯಸುವುದನ್ನು ಕೇಳಿಸಿಕೊಳ್ಳಬಹುದು ಮತ್ತು ಅವರಿಂದ ಮಾಡಸಾಧ್ಯವಿರುವ ಸೇವೆಗಾಗಿ ಹಿರಿಯರು ಅವರನ್ನು ಪ್ರಶಂಸಿಸಬಹುದು. ಒಬ್ಬ ಸಹೋದರನೋ ಅಥವಾ ಸಹೋದರಿಯೋ ಮಾಡುವ ಕೆಲಸಗಳನ್ನು ಶ್ರದ್ಧೆಯಿಂದ ಗಮನಿಸುವ ಹಿರಿಯನೊಬ್ಬನು ಅವರನ್ನು ಪ್ರಶಂಸಿಸುತ್ತಾನೆ. ಆಗ, ಭೂಮಿಯಲ್ಲಿರುವ ಜೀವಿಗಳು ಒಳ್ಳೆಯದನ್ನು ಮಾಡುವಾಗ ಅವರನ್ನು ಪ್ರಶಂಸಿಸುವ ಯೆಹೋವನನ್ನು ಅನುಕರಿಸುತ್ತಾನೆ.
16. ಸಭೆಯ ಹಿರಿಯರೊಂದಿಗೆ ಇತರರು ಕೂಡ ಗೌರವಕ್ಕೆ ಪಾತ್ರರಾಗಿದ್ದಾರೆಂಬುದನ್ನು ನಾವು ಯಾಕೆ ಅರಿತಿರಬೇಕು?
16 ಹೀಗೆ, ಯೆಹೋವನನ್ನು ಅನುಕರಿಸುವ ಮೂಲಕ ಹಿರಿಯರು ಒಂದು ಉತ್ತಮ ಮಾದರಿಯನ್ನು ಇಡುತ್ತಾರೆ. ಅವರು ಪೌಲನ ಬುದ್ಧಿವಾದವನ್ನು ಅನುಸರಿಸುತ್ತಾರೆ: “ಕ್ರೈಸ್ತ ಸಹೋದರರು ಅಣ್ಣತಮ್ಮಂದಿರೆಂದು ಒಬ್ಬರನ್ನೊಬ್ಬರು ಪ್ರೀತಿಸಿರಿ. ಮಾನಮರ್ಯಾದೆಯನ್ನು ತೋರಿಸುವದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ.” (ರೋಮಾಪುರ 12:10) ಆದರೆ, ಪದವಿ ಮತ್ತು ಅಧಿಕಾರಕ್ಕೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡುವುದು ಸರ್ವಸಾಮಾನ್ಯವಾಗಿರುವಂಥ ವರ್ಗಭೇದ ರಾಷ್ಟ್ರಗಳಲ್ಲಿರುವ ಹಿರಿಯರಿಗೆ ಇದು ಹೆಚ್ಚು ಕಷ್ಟಕರವಾಗಿರಬಲ್ಲದು. ಉದಾಹರಣೆಗೆ, ಒಂದು ಪೂರ್ವ ದೇಶದಲ್ಲಿ “ಸಹೋದರ” ಎಂಬ ಶಬ್ದಕ್ಕೆ ಎರಡು ಪದಗಳಿವೆ. ಒಂದು ಗೌರವಾರ್ಥಕ ಸೂಚಕವಾಗಿ ಬಳಸುವಂಥದ್ದು, ಇನ್ನೊಂದು ಸಾಧಾರಣವಾಗಿ ಬಳಸುವಂಥದ್ದಾಗಿದೆ. ಇತ್ತೀಚಿನ ವರೆಗೂ ಸಭೆಯ ಸದಸ್ಯರು, ಹಿರಿಯರಿಗೆ ಮತ್ತು ವೃದ್ಧರಿಗೆ ಗೌರವಾರ್ಥಕ ಸೂಚಕ ಪದವನ್ನು ಉಪಯೋಗಿಸುತ್ತಿದ್ದರು. ಇತರರಿಗೆ ಸಾಧಾರಣವಾದ ಪದವನ್ನು ಉಪಯೋಗಿಸುತ್ತಿದ್ದರು. ಆದರೆ, ಸಾಧಾರಣವಾಗಿ ಉಪಯೋಗಿಸುವಂಥ ಸಹೋದರ ಎಂಬ ಪದವನ್ನೇ ಎಲ್ಲರೂ ಉಪಯೋಗಿಸುವಂತೆ ಪ್ರೋತ್ಸಾಹಿಸಲಾಯಿತು. ಏಕೆಂದರೆ ಯೇಸು ತನ್ನ ಹಿಂಬಾಲಕರಿಗೆ “ನೀವೆಲ್ಲರು ಸಹೋದರರು” ಎಂದು ಹೇಳಿದ್ದನು. (ಮತ್ತಾಯ 23:8) ಬೇರೆ ದೇಶಗಳಲ್ಲಿ ವರ್ಗಭೇದವು ಇಷ್ಟೊಂದು ಎದ್ದುಕಾಣುವ ಮಟ್ಟದಲ್ಲಿ ಇರದಿದ್ದರೂ, ಪದವಿ ಮತ್ತು ಅಧಿಕಾರದ ಮೇಲೆ ವರ್ಗಭೇದ ಮಾಡುವುದು ಮಾನವ ಪ್ರವೃತ್ತಿಯಾಗಿದೆ ಎಂಬುದನ್ನು ನಾವೆಲ್ಲರೂ ಅರಿತಿರಬೇಕಾಗಿದೆ.—ಯಾಕೋಬ 2:4.
17. (ಎ) ಹಿರಿಯರು ಏಕೆ ಸ್ನೇಹಪರರಾಗಿರಬೇಕು? (ಬಿ) ಸಭೆಯಲ್ಲಿರುವವರೊಂದಿಗೆ ವ್ಯವಹರಿಸುವಾಗ ಹಿರಿಯರು ಯೆಹೋವನ ಮಾದರಿಯನ್ನು ಹೇಗೆ ಅನುಕರಿಸಬಹುದು?
17 ಹಾಗಾದರೆ, ಕೆಲವು ಹಿರಿಯರಿಗೆ “ಇಮ್ಮಡಿಯಾದ ಮಾನ”ವನ್ನು ಕೊಡಬೇಕೆಂದು ಪೌಲನು ಹೇಳಲಿಲ್ಲವೆ? ಹೌದು! ಆದರೂ ಅವರು ಸಹೋದರರೇ ಆಗಿದ್ದಾರೆ. (1 ತಿಮೊಥೆಯ 5:17) “ಧೈರ್ಯದಿಂದ ಕೃಪಾಸನದ ಮುಂದೆ” ಅಂದರೆ ಸಾರ್ವಭೌಮನಾದ ಯೆಹೋವನ ಸನ್ನಿಧಿಗೆ ನಾವು ಹೋಗಲು ಸಾಧ್ಯವಿರುವಾಗ, ಅಂಥ ಯೆಹೋವನನ್ನು ಅನುಕರಿಸುವ ಹಿರಿಯರನ್ನು ಸಮೀಪಿಸುವುದಕ್ಕೆ ನಾವು ಯಾಕೆ ಹಿಂಜರಿಯಬೇಕು? (ಇಬ್ರಿಯ 4:16; ಎಫೆಸ 5:1) ಆದ್ದರಿಂದ, ಸಲಹೆಗಳಿಗಾಗಿ ಇಲ್ಲವೇ ಸೂಚನೆಗಳನ್ನು ಕೊಡುವುದಕ್ಕಾಗಿ ಇತರರು ತಮ್ಮ ಬಳಿಗೆ ಎಷ್ಟು ಸಾರಿ ಬರುತ್ತಾರೆಂಬುದನ್ನು ಪರಿಗಣಿಸುವ ಮೂಲಕ ಮೇಲ್ವಿಚಾರಕರು ತಮ್ಮ ಸ್ನೇಹಪರತೆಯನ್ನು ತಾವೇ ತೂಗಿನೋಡಬೇಕು. ಯೆಹೋವನು ತನ್ನ ಕೆಲಸಗಳಲ್ಲಿ ಇತರರನ್ನು ಹೇಗೆ ಒಳಗೂಡಿಸುತ್ತಾನೆ ಎಂಬುದರ ಮೂಲಕ ಪಾಠ ಕಲಿಯಿರಿ. ಇತರರಿಗೆ ಜವಾಬ್ದಾರಿಗಳನ್ನು ವಹಿಸಿಕೊಡುವ ಮೂಲಕ ಆತನು ಅವರನ್ನು ಸನ್ಮಾನಿಸುತ್ತಾನೆ. ಮತ್ತು ಅಬ್ರಹಾಮನ ತಲೆಯಲ್ಲಿ ಕೊರೆಯುತ್ತಿದ್ದ ಪ್ರಶ್ನೆಗಳನ್ನು ಮತ್ತು ಹಬಕ್ಕೂಕನ ಸಂಕಟದ ಕೂಗನ್ನು ಕೇಳಿ ಅವರೊಂದಿಗೆ ಆತನು ಹೇಗೆ ವರ್ತಿಸಿದನು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಅದೇ ರೀತಿಯಲ್ಲಿ ಹಿರಿಯರು ಕೂಡ, ಕಾರ್ಯರೂಪಕ್ಕೆ ತರಲಾಗದಂತೆ ತೋರುವ ಸಲಹೆಯನ್ನು ಇನೊಬ್ಬ ಸಾಕ್ಷಿಯು ಕೊಡುವಾಗ, ಅವರಿಗಿರುವ ಚಿಂತೆಗಾಗಿ ಖಂಡಿತವಾಗಿಯೂ ಗಣ್ಯತೆಯನ್ನು ತೋರಿಸಬೇಕು.
18. ತಪ್ಪು ಮಾಡಿರುವವರಿಗೆ ಸಹಾಯವು ಬೇಕಾಗಿರುವಾಗ ಹಿರಿಯರು ಯೆಹೋವನ ಮಾದರಿಯನ್ನು ಹೇಗೆ ಅನುಕರಿಸಬಹುದು?
18 ಕೆಲವೊಮ್ಮೆ ಕೆಲವು ಕ್ರೈಸ್ತರಿಗೆ ತಿದ್ದುಪಾಟಿನ ಅಗತ್ಯವಿರುತ್ತದೆ. (ಗಲಾತ್ಯ 6:1) ಆದರೂ, ಅವರು ಯೆಹೋವನ ದೃಷ್ಟಿಯಲ್ಲಿ ಅಮೂಲ್ಯರಾಗಿದ್ದಾರೆ ಮತ್ತು ಅವರು ಗೌರವಕ್ಕೆ ಪಾತ್ರರಾಗಿದ್ದಾರೆ. ಇದರ ಕುರಿತು ಒಬ್ಬ ಸಾಕ್ಷಿಯು ಹೇಳುವುದೇನೆಂದರೆ, “ನನ್ನೊಂದಿಗೆ ಗೌರವದಿಂದ ವರ್ತಿಸುತ್ತಾ ಒಬ್ಬ ವ್ಯಕ್ತಿಯು ಬುದ್ಧಿಹೇಳುವುದಾದರೆ, ಆ ವ್ಯಕ್ತಿಯ ಬಳಿ ಮತ್ತೆ ಹೋಗಲು ನಾನು ಹಿಂಜರಿಯಲಾರೆ.” ಆದ್ದರಿಂದ, ಒಂದು ವಿಷಯವನ್ನು ಗಮನದಲ್ಲಿಡಬೇಕು. ವ್ಯಕ್ತಿಗಳನ್ನು ಗೌರವದಿಂದ ನಡೆಸಿಕೊಳ್ಳುತ್ತಾ ಅವರಿಗೆ ಬುದ್ಧಿಹೇಳುವಾಗ, ಅನೇಕರು ಅಂಥ ಬುದ್ಧಿಮಾತಿಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತಾರೆ. ಆ ರೀತಿಯಲ್ಲಿ ವರ್ತಿಸಲು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಆದರೆ ತಪ್ಪು ಮಾಡಿರುವವರು ಹೇಳುವುದನ್ನು ಹಿರಿಯರು ಆಲಿಸುವಾಗ, ಅವರು ಕೊಡುವ ಯಾವುದೇ ಸಲಹೆಯನ್ನು ಸ್ವೀಕರಿಸಲು ತಪ್ಪಿತಸ್ಥರಿಗೆ ಸುಲಭವಾಗುತ್ತದೆ. ಆದ್ದರಿಂದ ಯೆಹೋವನು ಇಸ್ರಾಯೇಲ್ಯರೊಂದಿಗೆ ಸಮಾಲೋಚನೆ ಮಾಡಿದ ರೀತಿಯನ್ನು ನೆನಪಿನಲ್ಲಿಟ್ಟುಕೊಳ್ಳಿ. ಆತನು ಅವರ ಮೇಲಿನ ಕನಿಕರ ಭಾವದಿಂದಾಗಿ ಪದೇ ಪದೇ ಕಿವಿಗೊಟ್ಟನು. (2 ಪೂರ್ವಕಾಲವೃತ್ತಾಂತ 36:15; ತೀತ 3:2) ಹಾಗಾಗಿ, ಅನುಭೂತಿ ಮತ್ತು ಸಹಾನುಭೂತಿಯೊಂದಿಗೆ ಕೊಡಲ್ಪಡುವ ಸಲಹೆಯು ಸಹಾಯದ ಅಗತ್ಯವಿರುವ ವ್ಯಕ್ತಿಯ ಹೃದಯವನ್ನು ಸ್ಪರ್ಶಿಸುವುದು.—ಜ್ಞಾನೋಕ್ತಿ 17:17; ಫಿಲಿಪ್ಪಿ 2:2, 3; 1 ಪೇತ್ರ 3:8.
19. ನಾವು ನಂಬುವ ವಿಷಯಗಳನ್ನು ವಿಶ್ವಾಸಿಸದಿರುವ ಜನರನ್ನು ನಾವು ಹೇಗೆ ವೀಕ್ಷಿಸಬೇಕು?
19 ನಾವು ಇತರರಿಗೆ ಗೌರವವನ್ನು ತೋರಿಸುವುದು ಕೇವಲ ಸಭೆಯಲ್ಲಿರುವವರಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ಅವರೊಂದಿಗೆ ನಮ್ಮ ಭಾವೀ ಸಹೋದರರಿಗೂ ಕೂಡ ತೋರಿಸಬೇಕಾಗಿದೆ. ಏಕೆಂದರೆ, ಅಂಥವರು ನಮ್ಮ ಸಂದೇಶವನ್ನು ಅಂಗೀಕರಿಸುವುದರಲ್ಲಿ ಈಗ ನಿಧಾನರಾಗಿರಬಹುದು. ಆದರೂ ನಾವು ಅವರೊಂದಿಗೆ ತಾಳ್ಮೆಯಿಂದಿರಬೇಕು ಮತ್ತು ಅವರು ಮಾನವರಾಗಿದ್ದಾರೆಂಬ ಘನತೆಯನ್ನು ಗ್ರಹಿಸಬೇಕು. ಅಷ್ಟು ಮಾತ್ರವಲ್ಲ, ಯೆಹೋವನು ‘ಯಾವನಾದರೂ ನಾಶವಾಗುವದರಲ್ಲಿ . . . ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುವವನಾಗಿದ್ದಾನೆ.’ (2 ಪೇತ್ರ 3:9) ಹಾಗಾದರೆ, ಯೆಹೋವನಿಗಿರುವಂಥ ದೃಷ್ಟಿಕೋನವು ನಮ್ಮಲ್ಲೂ ಇರಬೇಕಲ್ಲವೇ? ಹಾಗಿರುವುದಾದರೆ, ನಾವು ಜನಸಾಮಾನ್ಯರೊಂದಿಗೆ ಯಾವಾಗಲೂ ಸ್ನೇಹಪರರಾಗಿರುವೆವು. ಅದು ಅವರಿಗೆ ಸಾಕ್ಷಿನೀಡಲು ನಮಗೆ ಮಾರ್ಗವನ್ನು ಕಲ್ಪಿಸಿಕೊಡುವುದು. ಆದರೆ, ಅದೇ ಸಮಯದಲ್ಲಿ ನಮ್ಮ ಆತ್ಮಿಕತೆಯನ್ನು ಅಪಾಯದಲ್ಲಿ ಒಡ್ಡುವಂಥ ಸಹವಾಸದಿಂದ ದೂರವಿರಬೇಕು. (1 ಕೊರಿಂಥ 15:33) ಹಾಗಿದ್ದರೂ, ನಾವು ನಂಬುವ ವಿಷಯಗಳನ್ನು ವಿಶ್ವಾಸಿಸದಿರುವ ಜನರನ್ನು ತುಚ್ಛವಾಗಿ ಕಾಣದೆ, ನಾವು ಮಾನವ “ದಯೆಯನ್ನು” ತೋರಿಸುವೆವು.—ಅ. ಕೃತ್ಯಗಳು 27:3.
20. ಯೆಹೋವನ ಮತ್ತು ಯೇಸು ಕ್ರಿಸ್ತನ ಮಾದರಿಯು ನಮ್ಮನ್ನು ಏನು ಮಾಡುವಂತೆ ಪ್ರಚೋದಿಸಬೇಕು?
20 ಹೌದು, ಯೆಹೋವ ಮತ್ತು ಯೇಸು ಕ್ರಿಸ್ತರು ನಮ್ಮಲ್ಲಿ ಪ್ರತಿಯೊಬ್ಬರನ್ನು ಗೌರವಕ್ಕೆ ಪಾತ್ರರಾಗಿ ಎಣಿಸುತ್ತಾರೆ. ಆದ್ದರಿಂದ ಅವರಿಬ್ಬರೂ ಹೇಗೆ ವರ್ತಿಸುತ್ತಾರೆಂದು ನೆನಪಿನಲ್ಲಿಟ್ಟುಕೊಳ್ಳೋಣ. ಹಾಗೆಯೇ, ನಾವು ಕೂಡ ಒಬ್ಬರಿಗೊಬ್ಬರು ಸನ್ಮಾನವನ್ನು ತೋರಿಸುವುದರಲ್ಲಿ ಮುಂದಿರೋಣ. ನಮ್ಮ ಕರ್ತನಾದ ಯೇಸು ಕ್ರಿಸ್ತನು ಹೇಳಿದ, “ನೀವೆಲ್ಲರೂ ಸಹೋದರರು” ಎಂಬ ಮಾತನ್ನು ನಮ್ಮ ಮನಸ್ಸಿನಲ್ಲಿ ಯಾವಾಗಲೂ ಇಟ್ಟುಕೊಳ್ಳೋಣ.—ಮತ್ತಾಯ 23:8.
ನೀವು ಹೇಗೆ ಉತ್ತರಿಸುವಿರಿ?
• ಜೊತೆ ಆರಾಧಕರನ್ನು ನೀವು ಹೇಗೆ ನೋಡಬೇಕು?
• ಯೆಹೋವ ಮತ್ತು ಯೇಸು ಕ್ರಿಸ್ತನ ಮಾದರಿಯು ಇತರರನ್ನು ಗೌರವಿಸುವಂತೆ ನಿಮ್ಮನ್ನು ಹೇಗೆ ಪ್ರಚೋದಿಸುತ್ತದೆ?
• ಹೆತ್ತವರು ಮತ್ತು ಗಂಡಂದಿರು ಇತರರನ್ನು ಹೇಗೆ ಗೌರವಿಸಬಹುದು?
• ಹಿರಿಯರು ಜೊತೆ ಕ್ರೈಸ್ತರನ್ನು ತಮ್ಮ ಸಹೋದರರಾಗಿ ನೋಡುವಾಗ, ಯಾವ ವಿಧಗಳಲ್ಲಿ ಅದು ಅವರನ್ನು ಕ್ರಿಯೆಗೈಯುವಂತೆ ಪ್ರಚೋದಿಸುವುದು?
[ಅಧ್ಯಯನ ಪ್ರಶ್ನೆಗಳು]
[ಪುಟ 18ರಲ್ಲಿರುವ ಚಿತ್ರ]
ಮೆಚ್ಚುಗೆಯ ಮಾತುಗಳನ್ನು ಹೇಳುವ ಮೂಲಕ ನಿಮ್ಮ ಪತ್ನಿಯನ್ನು ಗೌರವಿಸಿ
[ಪುಟ 18ರಲ್ಲಿರುವ ಚಿತ್ರ]
ನಿಮ್ಮ ಮಕ್ಕಳಿಗೆ ಕಿವಿಗೊಡುವ ಮೂಲಕ ಅವರನ್ನು ಘನಪಡಿಸಿರಿ
[ಪುಟ 18ರಲ್ಲಿರುವ ಚಿತ್ರ]
ಸಭೆಯ ಸದಸ್ಯರಿಗೆ ಸಲ್ಲತಕ್ಕ ಘನತೆಯನ್ನು ಸಲ್ಲಿಸಿರಿ