ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಿಪೂರ್ಣತಾವಾದವನ್ನು ಏಕೆ ತೊರೆದುಬಿಡಬೇಕು?

ಪರಿಪೂರ್ಣತಾವಾದವನ್ನು ಏಕೆ ತೊರೆದುಬಿಡಬೇಕು?

ಪರಿಪೂರ್ಣತಾವಾದವನ್ನು ಏಕೆ ತೊರೆದುಬಿಡಬೇಕು?

ಯಾವುದೇ ಕೆಲಸವಾಗಿರಲಿ ಅದನ್ನು ಚೆನ್ನಾಗಿ ಮಾಡಬೇಕೆಂಬ ಬಯಕೆಯಿಂದ ನೀವು ಯಾವಾಗಲೂ ಕಷ್ಟಪಟ್ಟು ಪ್ರಯತ್ನಿಸುತ್ತೀರೊ? ಕೆಲಸವನ್ನು ಚೆನ್ನಾಗಿ ಮಾಡುವುದರಿಂದ ನಿಮಗೂ ಇತರರಿಗೂ ಖಂಡಿತವಾಗಿಯೂ ಪ್ರಯೋಜನವಾಗುವುದು. ಆದರೆ ಅದೇ ಸಮಯದಲ್ಲಿ ಕೆಲವು ಜನರು ಅತಿರೇಕಕ್ಕೆ ಹೋಗಿ, ಪರಿಪೂರ್ಣತಾವಾದಿಗಳು ಆಗಿದ್ದಾರೆ. ಇದರರ್ಥವೇನು?

“ಪರಿಪೂರ್ಣತಾವಾದ” ಎಂಬ ಪದದ ಒಂದು ಅರ್ಥವು, “ಯಾವುದೇ ಒಂದು ವಿಷಯವು ಪರಿಪೂರ್ಣವಾಗಿರದೇ ಇದ್ದರೆ ಅದನ್ನು ಸ್ವೀಕರಿಸಲು ಸಾಧ್ಯವಿಲ್ಲವೆಂಬ ಮನೋಭಾವವೇ” ಆಗಿದೆ. ಇಂತಹ ಮನೋಭಾವವುಳ್ಳ ಜನರನ್ನು ನೀವು ಭೇಟಿಯಾಗಿರಬಹುದು. ಇಂಥವರು ಇತರರ ಮೇಲೆ ವಿಪರೀತ ಬೇಡಿಕೆಗಳನ್ನು ಹಾಕುತ್ತಾರೆ. ಇದರಿಂದಾಗಿ ಅನೇಕ ಸಮಸ್ಯೆಗಳು ಉಂಟಾಗುತ್ತಾ, ಅತೃಪ್ತಿ ಮತ್ತು ನಿರುತ್ಸಾಹದ ವಾತಾವರಣವು ರೂಪುಗೊಳ್ಳುವುದನ್ನು ನೀವು ನೋಡಬಹುದು. ಯಾರೂ ನಿಜವಾಗಿಯೂ ಪರಿಪೂರ್ಣತಾವಾದವನ್ನು ಬಯಸುವುದಿಲ್ಲ, ಯಾಕೆಂದರೆ ಇದು ಜೀವಿತದ ಪ್ರತಿಯೊಂದೂ ವಿಷಯದಲ್ಲಿ ಅತಿರೇಕದ ಮತ್ತು ಅನುಚಿತವಾದ ಬೇಡಿಕೆಗಳನ್ನು ಮಾಡುತ್ತದೆ ಎಂದು ಸಮಚಿತ್ತವುಳ್ಳ ಹೆಚ್ಚಿನ ಜನರು ಅಂಗೀಕರಿಸುತ್ತಾರೆ. ಈ ರೀತಿಯ ಮನೋಭಾವವನ್ನು ತೊರೆದುಬಿಡಬೇಕಾಗಿದೆ. ಆದರೆ ಸಮಸ್ಯೆಯೇನೆಂದರೆ, ನಮ್ಮಲ್ಲೇ ಪರಿಪೂರ್ಣತಾವಾದದ ಮನೋಭಾವ ಅಥವಾ ಮನೋವೃತ್ತಿ ಇರುವಾಗ ಅದನ್ನು ಗುರುತಿಸುವುದು ಕಷ್ಟಕರ. ಆದುದರಿಂದ ಅದನ್ನು ತೊರೆದುಬಿಡುವುದು ಒಂದು ದೊಡ್ಡ ಸವಾಲಾಗಿಬಿಡುತ್ತದೆ.

ನೆಲ್ಸನ್‌ ಎಂಬ ವ್ಯಕ್ತಿಯ ಮೇಲೆ ದೊಡ್ಡ ಜವಾಬ್ದಾರಿಯಿದೆ ಮತ್ತು ಬಗೆಹರಿಸಬೇಕಾದ ಅನೇಕ ಸಮಸ್ಯೆಗಳಿವೆ. ಅವನು ಕ್ರಮವಾಗಿ ತನ್ನ ಕಂಪನಿಯ ಅಂಕಿಅಂಶಗಳನ್ನು ಪರಿಶೀಲಿಸುತ್ತಾ ಇರುತ್ತಾನೆ ಮತ್ತು ಅವನ ಮುಖ್ಯ ಚಿಂತೆ, ಕಂಪನಿಯ ಉತ್ಪಾದನೆಯೇ ಆಗಿದೆ. ಉದ್ಯೋಗ ಮಾರುಕಟ್ಟೆಯಲ್ಲಿ ಬಹಳಷ್ಟು ಸ್ಪರ್ಧೆಯಿರುವುದರಿಂದ ಯಶಸ್ಸನ್ನು ಗಳಿಸಲಿಕ್ಕಾಗಿ ಪರಿಪೂರ್ಣತೆಯನ್ನು ಸಾಧಿಸುವ ದೃಢಸಂಕಲ್ಪವು ಇರಬೇಕೆಂದು ಹೆಚ್ಚಿನವರು ನೆನಸುತ್ತಾರೆ. ನೆಲ್ಸನನ ದಕ್ಷತೆಯನ್ನು ಕೆಲವರು ಗಣ್ಯಮಾಡುತ್ತಾರೆ. ಆದರೆ ಕೆಲಸದಲ್ಲಿ ಪರಿಪೂರ್ಣತೆಯನ್ನು ಸಾಧಿಸಬೇಕೆಂಬ ಅವನ ಅಭಿಪ್ರಾಯವು, ಅವನಿಗೆ ತಲೆನೋವಿನಂತಹ ಶಾರೀರಿಕ ತೊಂದರೆಗಳನ್ನು ಮತ್ತು ಮಾನಸಿಕ ಒತ್ತಡವನ್ನು ಉಂಟುಮಾಡಿದೆ. ನಿಮ್ಮಲ್ಲಿಯೂ ನೆಲ್ಸನ್‌ನಲ್ಲಿರುವಂತಹ ಲಕ್ಷಣಗಳಿವೆಯೊ?

ಯುವ ಜನರಲ್ಲೂ ಪರಿಪೂರ್ಣತೆಯನ್ನು ಸಾಧಿಸುವ ದೃಢಸಂಕಲ್ಪವಿರುತ್ತದೆ. ರಿಯೊ ಡೇ ಜನೆರೋದವಳಾಗಿರುವ ರೀಟಾ, ಚಿಕ್ಕವಳಾಗಿದ್ದಾಗ ಶಾಲೆಗೆ ಹೋಗಲು ತುಂಬ ಇಷ್ಟಪಡುತ್ತಿದ್ದಳು. ತನಗೆ ಯಾವುದೇ ರೀತಿಯ ಮಹತ್ವಾಕಾಂಕ್ಷೆ ಇಲ್ಲವೆಂದು ಅವಳು ತೋರಿಸಿಕೊಳ್ಳುತ್ತಿದ್ದರೂ, ಪರೀಕ್ಷೆಯಲ್ಲಿ ಎಲ್ಲರಿಗಿಂತಲೂ ಹೆಚ್ಚು ಅಂಕಗಳು ಸಿಗದಿದ್ದಾಗ ಅವಳಿಗೆ ತುಂಬ ನಿರಾಶೆಯಾಗುತ್ತಿತ್ತು. ರೀಟಾ ಹೇಳುತ್ತಾಳೆ: “ನಾನು ಯಾವಾಗಲೂ ಒತ್ತಡದ ಕೆಳಗಿರುತ್ತಿದ್ದೆ. ನಾನು ಅವಸರ ಅವಸರವಾಗಿ ನನ್ನ ಕೆಲಸಮಾಡಲು ಪ್ರಯತ್ನಿಸುತ್ತಿರುವಾಗ, ಬೇರೆಯವರು ತುಂಬ ಪುರುಸೊತ್ತಿನಲ್ಲಿರುವುದನ್ನು ನೋಡುತ್ತಿದ್ದೆ. ಹೀಗೆ ಚಿಕ್ಕಂದಿನಿಂದಲೂ ನಾನು ಬೇರೆಯವರೊಂದಿಗೆ ನನ್ನನ್ನು ಹೋಲಿಸಿಕೊಳ್ಳುತ್ತಿದ್ದೆ. ನನಗೆ ಯಾವಾಗಲೂ ಮಾಡಲು ಒಂದಲ್ಲ ಒಂದು ಕೆಲಸವಿರುತ್ತಿದ್ದ ಕಾರಣದಿಂದ ಸ್ವಲ್ಪ ಹೊತ್ತು ವಿಶ್ರಮಿಸಲೂ ಸಮಯ ಸಿಗುವುದಿಲ್ಲವೆಂದು ನನಗನಿಸುತ್ತಿತ್ತು.”

ಚಿಕ್ಕವಳಾಗಿದ್ದಾಗ ಮಾರಿಯಳಿಗೆ ಇತರರಂತೆ ಚೆನ್ನಾಗಿ ಚಿತ್ರ ಬಿಡಿಸಲು ಬರುತ್ತಿರಲಿಲ್ಲ. ಆಗ ಅವಳು ಹತಾಶೆಯಿಂದ ಕಣ್ಣೀರು ಸುರಿಸುತ್ತಿದ್ದಳು. ಅಷ್ಟುಮಾತ್ರವಲ್ಲದೆ, ಅವಳು ಸಂಗೀತದಲ್ಲಿ ಪರಿಪೂರ್ಣತೆಯನ್ನು ಸಾಧಿಸಲು ಪ್ರಯತ್ನಪಡುತ್ತಿದ್ದಳು. ಆದುದರಿಂದ ಅನೇಕ ಸಲ ತನ್ನ ವಾದ್ಯ ನುಡಿಸುವಿಕೆ ಮತ್ತು ಹಾಡುವಿಕೆಯಲ್ಲಿ ಆನಂದವನ್ನು ಕಂಡುಕೊಳ್ಳುತ್ತಿರಲಿಲ್ಲ. ಅದಕ್ಕೆ ಬದಲು ಅವಳು ಮಾನಸಿಕ ಒತ್ತಡಕ್ಕೆ ಒಳಗಾಗಿ ಚಿಂತಿತಳಾಗುತ್ತಿದ್ದಳು. ಬ್ರಸಿಲಿನ ಇನ್ನೊಬ್ಬ ಹುಡುಗಿ ಟಾನ್ಯಾ, ಇತರರೊಂದಿಗೆ ಸ್ಪರ್ಧಿಸುವುದರಿಂದ ದೂರವಿರಲು ಪ್ರಯತ್ನಿಸಿದಳು. ಆದರೂ ಶಾಲೆಯಲ್ಲಿ ಮತ್ತು ಮನೆಯಲ್ಲಿ ಅವಳು ತೀರ ಉಚ್ಚ ಮಟ್ಟಗಳನ್ನು ಇಟ್ಟುಕೊಂಡಿದ್ದಳೆಂಬುದನ್ನು ಒಪ್ಪಿಕೊಂಡಳು. ತಾನು ಮಾಡುವ ಯಾವುದೇ ಕೆಲಸವು ಪರಿಪೂರ್ಣವಾಗಿರದಿದ್ದರೆ, ಜನರು ತನ್ನನ್ನು ಇಷ್ಟಪಡಲಿಕ್ಕಿಲ್ಲವೆಂದು ಅವಳಿಗನಿಸುತ್ತಿತ್ತು. ಅಷ್ಟುಮಾತ್ರವಲ್ಲದೆ ಅವಳು ಇತರರಿಂದಲೂ ತೀರ ಹೆಚ್ಚನ್ನು ನಿರೀಕ್ಷಿಸುತ್ತಿದ್ದಳು. ಈ ನಿರೀಕ್ಷೆಗಳು ಕೈಗೂಡದಿದ್ದಾಗ ಅವಳಿಗೆ ತುಂಬ ನಿರಾಶೆಯಾಗುತ್ತಿತ್ತು ಮತ್ತು ದುಃಖವಾಗುತ್ತಿತ್ತು.

ಯಾವುದೇ ಕೆಲಸವನ್ನು ಮಾಡುವುದಕ್ಕಾಗಿ ಸಾಮರ್ಥ್ಯ, ಶ್ರದ್ಧೆ, ಮತ್ತು ಅದನ್ನು ಪೂರೈಸಿದಾಗ ಸಿಗುವ ಆತ್ಮತೃಪ್ತಿಯ ಭಾವನೆಯು ಪ್ರಾಮುಖ್ಯವಾಗಿರುವುದಾದರೂ, ಕೈಗೆಟುಕಲಾರದಂತಹ ಗುರಿಗಳನ್ನಿಡುವುದರಿಂದ ವಿಫಲರಾಗುವ ಭಯದಂತಹ ನಕಾರಾತ್ಮಕ ಭಾವನೆಗಳು ಫಲಿಸಬಹುದು. ಹೆತ್ತವರು ಅಥವಾ ಇತರರು, ಶಾಲಾಕೆಲಸದಲ್ಲಿ ಅಥವಾ ಕ್ರೀಡೆಯಲ್ಲಿ ಪರಿಪೂರ್ಣತೆಯನ್ನು ನಿರೀಕ್ಷಿಸುತ್ತಾರೆ. ಆದರೆ ಯುವ ಜನರಿಗೆ ಈ ನಿರೀಕ್ಷೆಯನ್ನು ಸಾಕಾರಗೊಳಿಸುವುದು ಕಷ್ಟವಾಗಬಹುದು. ಉದಾಹರಣೆಗೆ, ರಿಕಾರ್ಡೋವಿನ ತಾಯಿ ಅವನ ಬಗ್ಗೆ ತುಂಬ ಆಸೆಗಳನ್ನಿಟ್ಟುಕೊಂಡಿದ್ದರು. ಅವನು ಒಬ್ಬ ವೈದ್ಯನಾಗಬೇಕು, ಪಿಯಾನೋ ನುಡಿಸಬೇಕು, ಮತ್ತು ಹಲವಾರು ಭಾಷೆಗಳನ್ನಾಡಬೇಕು ಎಂಬುದು ಅವರ ಬಯಕೆಯಾಗಿತ್ತು. ಈ ರೀತಿಯ ಮನೋಭಾವವು ಅತಿರೇಕಕ್ಕೆ ಹೋದಾಗ, ಅದು ಎಷ್ಟೊಂದು ಸಮಸ್ಯೆಗಳನ್ನು ಅಥವಾ ನಿರಾಶೆಗಳನ್ನು ಉಂಟುಮಾಡುತ್ತದೆಂಬುದನ್ನು ನೀವು ಕಲ್ಪಿಸಿಕೊಳ್ಳಬಲ್ಲಿರೊ?

ಪರಿಪೂರ್ಣತಾವಾದವನ್ನು ಏಕೆ ತೊರೆದುಬಿಡಬೇಕು?

ಇಂದು ಶ್ರೇಷ್ಠಮಟ್ಟದ, ಅಂದರೆ ನಿಷ್ಕೃಷ್ಟವಾದ ಮತ್ತು ಉತ್ಕೃಷ್ಟವಾಗಿರುವ ಕೆಲಸಕ್ಕೆ ತುಂಬ ಬೇಡಿಕೆಯಿದೆ. ಆದುದರಿಂದಲೇ ಜನರು ಉದ್ಯೋಗದ ಮಾರುಕಟ್ಟೆಯಲ್ಲಿ ಸ್ಪರ್ಧಿಸಬೇಕಾಗುತ್ತದೆ. ಅನೇಕರನ್ನು ತುಂಬ ಶ್ರಮಪಡುವಂತೆ ಮಾಡುವ ಇನ್ನೊಂದು ಅಂಶವು, ತಾವು ತಮ್ಮ ಆದಾಯದ ಮೂಲವನ್ನು ಕಳೆದುಕೊಳ್ಳುವ ಭಯವೇ ಆಗಿದೆ. ಕೆಲವು ಕಾರ್ಮಿಕರು, ಒಂದು ಹೊಸ ದಾಖಲೆಯನ್ನು ಸ್ಥಾಪಿಸಲಿಕ್ಕಾಗಿ ಬಹಳಷ್ಟು ತ್ಯಾಗಗಳನ್ನು ಮಾಡುವ ಒಬ್ಬ ಕ್ರೀಡಾಪಟುವಿನಂತಿದ್ದಾರೆ. ಏಕೆಂದರೆ ಈ ಕ್ರೀಡಾಪಟು ತೀವ್ರವಾದ ಪ್ರತಿಸ್ಪರ್ಧೆಯನ್ನು ಎದುರಿಸುವಾಗ, ತಾನು ಇನ್ನೂ ಹೆಚ್ಚು ಸಾಧನೆಮಾಡಬೇಕೆಂಬ ಛಲ ಅವನಲ್ಲಿ ಉಂಟಾಗುತ್ತದೆ. ಹೆಚ್ಚು ಉತ್ತಮಗೊಳ್ಳಲಿಕ್ಕಾಗಿ ಮತ್ತು ವಿಜಯಿಯಾಗಲಿಕ್ಕಾಗಿ ಅವನು ಪ್ರಾಯಶಃ ಅಮಲೌಷಧಗಳನ್ನು ಸಹ ಉಪಯೋಗಿಸುತ್ತಾನೆ. ಜನರಲ್ಲಿ ಪರಿಪೂರ್ಣತಾವಾದವು ಇರುವಾಗ, ಅದು ಅವರನ್ನು ಒಂದು ಕೆಲಸದಲ್ಲಿ ಪ್ರಾವೀಣ್ಯತೆಯನ್ನು ಪಡೆಯಲಿಕ್ಕಾಗಿ ಸರಿಯಾದ ಮಾರ್ಗವನ್ನು ಬೆನ್ನಟ್ಟುವಂತೆ ಮಾಡುವುದರ ಬದಲು, “ವಿಫಲರಾಗುವ ಭಯದಿಂದ ಪ್ರಚೋದಿಸಲ್ಪಡುವಂತೆ” ಅಥವಾ “ಒಂದನೆಯ ಸ್ಥಾನದಲ್ಲಿರಬೇಕೆಂಬ ಆಸೆಯಿಂದ ಪ್ರಚೋದಿಸಲ್ಪಡುವಂತೆ” ಮಾಡುತ್ತದೆ.—ದ ಫೀಲಿಂಗ್‌ ಗುಡ್‌ ಹ್ಯಾಂಡ್‌ಬುಕ್‌.

ಕಲಾಕೌಶಲದಲ್ಲಿ ಅಥವಾ ಕ್ರೀಡೆಯಲ್ಲಿ ಯಾವಾಗಲೂ ಇನ್ನೂ ಹೆಚ್ಚು ಅಭಿವೃದ್ಧಿಯನ್ನು ಮಾಡುವ ಸಾಧ್ಯತೆ ಇದೆಯೆಂದು ಕೆಲವರಿಗನಿಸಬಹುದು ನಿಜ. ಆದರೂ, ಡಾ. ರಾಬರ್ಟ್‌ ಎಸ್‌. ಇಲ್ಯಟ್‌ರಿಗನುಸಾರ, “ಪರಿಪೂರ್ಣತಾವಾದವು, ಎಂದೂ ಕೈಗೂಡದಂತಹ ನಿರೀಕ್ಷೆ ಆಗಿದೆ.” ಅವರು ಕೂಡಿಸುವುದು: “ಅದರಲ್ಲಿ ತಪ್ಪಿತಸ್ಥ ಭಾವನೆ, ತನ್ನನ್ನೇ ರಕ್ಷಿಸಿಕೊಳ್ಳುವ ಸ್ವಭಾವ, ಮತ್ತು ಅಪಹಾಸ್ಯಕ್ಕೀಡಾಗುವ ಭಯವು ಸಹ ಸೇರಿರುತ್ತದೆ.” ಆದುದರಿಂದ, “ಸಮಸ್ತಪ್ರಯಾಸವನ್ನೂ ಕೈಗೂಡುವ ಸಕಲ ಕಾರ್ಯವನ್ನೂ ನೋಡಿ ಇವು ಪರಸ್ಪರ ಮತ್ಸರಕ್ಕೆ ಆಸ್ಪದವೆಂದು ಗ್ರಹಿಸಿಕೊಂಡೆನು. ಇದೂ ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥ” ಎಂಬ ವಿವೇಕಿ ಅರಸನಾದ ಸೊಲೊಮೋನನ ಮಾತುಗಳು ಎಷ್ಟು ಸತ್ಯವಾಗಿವೆ!—ಪ್ರಸಂಗಿ 4:4.

ನಿಮ್ಮಲ್ಲಿ ಪರಿಪೂರ್ಣತೆಯನ್ನು ಸಾಧಿಸುವ ದೃಢಸಂಕಲ್ಪವಿರುವಲ್ಲಿ ನೀವೇನು ಮಾಡಬಹುದು? ನಾವು ಹೆಚ್ಚು ಕಷ್ಟಪಟ್ಟಷ್ಟು, ಆಶಾಭಂಗಗಳು ಹೆಚ್ಚುತ್ತವೆ ಎಂಬ ಮಾತು ಸತ್ಯವೊ? ನೀವು ಇತರರ ಮೇಲೆ ಅತಿರೇಕ ಬೇಡಿಕೆಗಳನ್ನು ಹಾಕುವವರಾಗಿರದೆ, ಚಿಕ್ಕಪುಟ್ಟ ವಿಷಯಗಳಲ್ಲೂ ತೀರ ಕಟ್ಟುನಿಟ್ಟಿನವರಾಗಿರದೆ ಇರಲು ಬಯಸುತ್ತೀರೊ? ಪರಿಪೂರ್ಣರಾಗಿರುವುದರ ಅರ್ಥವೇನು? ಪರಿಪೂರ್ಣತೆಯನ್ನು ಸಾಧಿಸುವ ಅಭಿಪ್ರಾಯವನ್ನು ತೊರೆದು, ನಿಮ್ಮ ಕೆಲಸದಲ್ಲಿ ನಿಮ್ಮ ಎಲ್ಲ ಸಾಮರ್ಥ್ಯವನ್ನು ಉಪಯೋಗಿಸಲು ನೀವು ಹಾತೊರೆಯುತ್ತೀರೊ? ಅಪರಿಪೂರ್ಣ ಮಾನವರೇ ಇತರರಿಗೆ ಪ್ರಯೋಜನವನ್ನು ತರುವಂತಹ ವಿಷಯಗಳನ್ನು ಕಂಡುಹಿಡಿಯಲು ತಮ್ಮ ದೇವದತ್ತ ಸಾಮರ್ಥ್ಯಗಳನ್ನು ಉಪಯೋಗಿಸಲು ಸಾಧ್ಯವಿರುವಾಗ, ಪರಿಪೂರ್ಣ ಪರಿಸ್ಥಿತಿಗಳಲ್ಲಿ ಮತ್ತು ದೈವಿಕ ಮಾರ್ಗದರ್ಶನದ ಕೆಳಗೆ ಅವರು ಇನ್ನೂ ಏನೇನನ್ನು ಸಾಧಿಸಬಹುದೆಂಬುದನ್ನು ಸ್ವಲ್ಪ ಊಹಿಸಿನೋಡಿರಿ!

[ಪುಟ 4ರಲ್ಲಿರುವ ಚಿತ್ರ]

ಹೆತ್ತವರು ಅಥವಾ ಇತರರು ಪರಿಪೂರ್ಣತೆಯನ್ನು ನಿರೀಕ್ಷಿಸುವಾಗ, ಎಳೆಯರಿಗೆ ಆ ನಿರೀಕ್ಷೆಯನ್ನು ಸಾಕಾರಗೊಳಿಸಲು ಸಾಧ್ಯವಿರಲಿಕ್ಕಿಲ್ಲ