ಪರಿಪೂರ್ಣ ಜೀವನ—ಒಂದು ಸ್ವಪ್ನವೋ?
ಪರಿಪೂರ್ಣ ಜೀವನ—ಒಂದು ಸ್ವಪ್ನವೋ?
ಪರಿಪೂರ್ಣ ಜಗತ್ತು—ಅದು ಹೇಗಿರಬಹುದೆಂದು ನೀವು ನೆನಸುತ್ತೀರಿ? ಇಂತಹ ಒಂದು ಸಮಾಜವನ್ನು ಸ್ವಲ್ಪ ಕಲ್ಪಿಸಿಕೊಳ್ಳಿ: ಅಲ್ಲಿ ಪಾತಕ, ಅಮಲೌಷಧದ ದುರುಪಯೋಗ, ಕ್ಷಾಮ, ಬಡತನ ಅಥವಾ ಅನ್ಯಾಯವಿಲ್ಲ. ಎಲ್ಲರೂ ಒಳ್ಳೆಯ ಭಾವನಾತ್ಮಕ ಮತ್ತು ಶಾರೀರಿಕ ಆರೋಗ್ಯದಿಂದಾಗಿ ಆನಂದದಿಂದಿದ್ದಾರೆ. ಮರಣ ಸಹ ಇಲ್ಲದಿರುವುದರಿಂದ ಎಲ್ಲಿಯೂ ದುಃಖ ಅಥವಾ ಅಸಂತೋಷದ ಸುಳಿವೇ ಇಲ್ಲ. ಆದರೆ, ಇಂತಹ ಒಂದು ಜಗತ್ತಿಗಾಗಿ ಹಾತೊರೆಯುವುದು ಪ್ರಾಯೋಗಿಕವೊ?
ವಿಜ್ಞಾನ ಮತ್ತು ತಾಂತ್ರಿಕತೆಯು ಮಾಡಿರುವ ಪ್ರಗತಿಯನ್ನು ನಮ್ಮಲ್ಲಿ ಯಾರೂ ಅಲ್ಲಗಳೆಯಸಾಧ್ಯವಿಲ್ಲ. ಆದರೆ ಅದೇ ಸಮಯದಲ್ಲಿ, ಮಾನವರು ತಮ್ಮ ಬುದ್ಧಿ ಅಥವಾ ಜ್ಞಾನವನ್ನು ಉಪಯೋಗಿಸಿ, ಎಲ್ಲರೂ ಸುಖಶಾಂತಿಯಿಂದ ಜೀವಿಸುವ ಒಂದು ಪರಿಪೂರ್ಣ ಜಗತ್ತನ್ನು ತರಸಾಧ್ಯವಿಲ್ಲವೆಂಬುದು ಹೆಚ್ಚಿನ ಜನರ ನಂಬಿಕೆಯಾಗಿದೆ. ಇನ್ನೊಂದು ಕಡೆ, ಅಭಿವೃದ್ಧಿಮಾಡುವುದು ಮತ್ತು ಅಪರಿಪೂರ್ಣತೆಗಳನ್ನು ಸರಿಪಡಿಸುವುದು ಮನುಷ್ಯನ ಸ್ವಭಾವವಾಗಿದೆಯೆಂಬುದು ನಿರಾಕರಿಸಲಾಗದ ಸಂಗತಿಯಾಗಿದೆ. ಸುಮ್ಮನೆ ಕನಸು ಕಾಣುತ್ತಾ ಇರುವುದರಿಂದ, ಮನೆಯಿಲ್ಲದವರಿಗೆ ಮನೆ ಸಿಗದು ಮತ್ತು ಬಡವರಿಗೆ ಏನೂ ಸಹಾಯವಾಗದು ಅಥವಾ ಕಷ್ಟಾನುಭವದಿಂದ ಉಪಶಮನವನ್ನು ಪಡೆಯಲು ಹಾತೊರೆಯುತ್ತಿರುವ ಅಶಕ್ತರಿಗೆ ಮತ್ತು ಅಸ್ವಸ್ಥರಿಗೆ ಏನೂ ಪ್ರಯೋಜನವಾಗದು ಎಂಬುದಂತೂ ಖಂಡಿತ. ಮನುಷ್ಯನು ತನ್ನ ಸ್ವಂತ ಪ್ರಯತ್ನದಿಂದ ಒಂದು ಪರಿಪೂರ್ಣ ಜಗತ್ತನ್ನು ತರಲು ಸಾಧ್ಯವೇ ಇಲ್ಲ. ಆದರೆ, ಸದ್ಯದ ದುರವಸ್ಥೆ ಮತ್ತು ದಬ್ಬಾಳಿಕೆಯ ಎದುರಿನಲ್ಲೂ, ಪರಿಪೂರ್ಣವೆಂದು ಕರೆಯಸಾಧ್ಯವಿರುವ ಒಂದು ಜಗತ್ತು ನಿಜವಾಗಿಯೂ ಬೇಗನೆ ಬರಲಿದೆ ಎಂಬುದನ್ನು ನಂಬಲು ಬಲವಾದ ಕಾರಣಗಳಿವೆ.
ಪರಿಪೂರ್ಣ ಜೀವನದ ಕುರಿತಾಗಿ ಯೋಚಿಸುವಾಗ, ಯೇಸು ಕ್ರಿಸ್ತನ ಜೀವನವು ನಿಮಗೆ ನೆನಪಾಗಬಹುದು. ಯೇಸುವೊಬ್ಬನೇ ಈ ಭೂಮಿಯಲ್ಲಿ ಜೀವಿಸಿದ ಏಕೈಕ ಪರಿಪೂರ್ಣ ಮನುಷ್ಯನಾಗಿರಲಿಲ್ಲ. ದೇವರ ಪ್ರತಿರೂಪದಲ್ಲಿ ಸೃಷ್ಟಿಸಲ್ಪಟ್ಟಿದ್ದ ಆದಾಮಹವ್ವರು, ಪ್ರಮೋದವನದಲ್ಲಿ ಪರಿಪೂರ್ಣ ಜೀವನದಲ್ಲಿ ಆನಂದಿಸಿದ್ದರು. ಆದರೆ ತಮ್ಮ ಸ್ವರ್ಗೀಯ ತಂದೆಯ ವಿರುದ್ಧ ಅವರು ದಂಗೆಯೆದ್ದದ್ದರಿಂದ ಈ ಉತ್ತಮವಾದ ಸ್ಥಿತಿಯನ್ನು ಕಳೆದುಕೊಂಡರು. (ಆದಿಕಾಂಡ 3:1-6) ಆದರೆ ಸೃಷ್ಟಿಕರ್ತನು ಮನುಷ್ಯರ ಹೃದಯದಲ್ಲಿ ಸದಾಕಾಲ ಜೀವಿಸುವ ಒಂದು ಆಸೆಯನ್ನು ಬೇರೂರಿಸಿದ್ದನು. ಇದಕ್ಕೆ ಪ್ರಸಂಗಿ 3:11 ಸಾಕ್ಷ್ಯವನ್ನು ಕೊಡುತ್ತಾ ಹೀಗನ್ನುತ್ತದೆ: “ಒಂದೊಂದು ವಸ್ತುವನ್ನು [ದೇವರು] ಸಮಯಕ್ಕೆ ತಕ್ಕ ಹಾಗೆ ಅಂದವಾಗಿ ನಿರ್ಮಿಸಿದ್ದಾನೆ; ಇದಲ್ಲದೆ ಮನುಷ್ಯರ ಹೃದಯದಲ್ಲಿ ಅನಂತಕಾಲದ ಯೋಚನೆಯನ್ನು ಇಟ್ಟಿದ್ದಾನೆ; ಆದರೂ ದೇವರು ಆದ್ಯಂತವಾಗಿ ನಡಿಸುತ್ತಿರುವ ಕೆಲಸವನ್ನು ಅವರು ಗ್ರಹಿಸಲಾರದಂತೆ ಮಾಡಿದ್ದಾನೆ.”
ಅಪರಿಪೂರ್ಣತೆ ಮತ್ತು ಪಾಪಗಳು, ಮಾನವಕುಲವನ್ನು “ವ್ಯರ್ಥತ್ವ” ಮತ್ತು ‘ನಾಶದ ವಶಕ್ಕೆ’ ತಳ್ಳಿದವು. ಆದರೆ ಅಪೊಸ್ತಲ ಪೌಲನ ಈ ಸಾಂತ್ವನದಾಯಕ ಮಾತುಗಳನ್ನು ಗಮನಿಸಿರಿ: “ದೇವಪುತ್ರರ ಮಹಿಮೆಯು ಯಾವಾಗ ಪ್ರತ್ಯಕ್ಷವಾದೀತೆಂದು ಜಗತ್ತು ಬಹು ಲವಲವಿಕೆಯಿಂದ ಎದುರು ನೋಡುತ್ತಿರುವದು. ಜಗತ್ತು ವ್ಯರ್ಥತ್ವಕ್ಕೆ ಒಳಗಾಯಿತು; ಹೀಗೆ ಒಳಗಾದದ್ದು ಸ್ವೇಚ್ಛೆಯಿಂದಲ್ಲ, ರೋಮಾಪುರ 8:19-21) ಪರಿಪೂರ್ಣ ಮಾನವ ಜೀವನವನ್ನು ಪುನಸ್ಸ್ಥಾಪಿಸಲಿಕ್ಕಾಗಿರುವ ದೇವರ ಏರ್ಪಾಡುಗಳು, ಯೇಸು ಕ್ರಿಸ್ತನ ಮೂಲಕ ಲಭ್ಯಗೊಳಿಸಲ್ಪಡುತ್ತವೆಂದು ಬೈಬಲ್ ಸ್ಪಷ್ಟವಾಗಿ ತೋರಿಸುತ್ತದೆ.—ಯೋಹಾನ 3:16; 17:3.
ಅದನ್ನು ಒಳಪಡಿಸಿದವನ ಸಂಕಲ್ಪದಿಂದಲೇ. ಆದರೂ ಅದಕ್ಕೊಂದು ನಿರೀಕ್ಷೆಯುಂಟು; ಏನಂದರೆ ಆ ಜಗತ್ತು ಕೂಡ ನಾಶದ ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲುಹೊಂದುವದೇ.” (ಭವಿಷ್ಯತ್ತಿಗಾಗಿರುವ ಈ ಅದ್ಭುತಕರವಾದ ನಿರೀಕ್ಷೆಯ ಜೊತೆಗೆ, ಆತ್ಮಿಕವಾಗಿ ಅಭಿವೃದ್ಧಿಮಾಡುವ ಮತ್ತು ಈಗಲೂ ನಮ್ಮ ಪ್ರಗತಿಯನ್ನು ತೋರಿಸುವ ಸಾಮರ್ಥ್ಯ ನಮಗಿದೆ.
ನ್ಯಾಯಸಮ್ಮತರಾಗಿರಲು ಪ್ರಯತ್ನಿಸಿರಿ
ಪರಿಪೂರ್ಣತೆಯು ತುಂಬ ಪ್ರಾಮುಖ್ಯವಾಗಿದೆಯೆಂದು ಯೇಸು ಕ್ರಿಸ್ತನು ಮನಗಂಡನು. ಆದುದರಿಂದ ಸಭಿಕರ ಒಂದು ದೊಡ್ಡ ಗುಂಪಿಗೆ ಅವನು ಹೇಳಿದ್ದು: “ಪರಲೋಕದಲ್ಲಿರುವ ನಿಮ್ಮ ತಂದೆಯು ಪರಿಪೂರ್ಣನಾಗಿರುವಂತೆಯೇ ನೀವೂ ಪರಿಪೂರ್ಣರಾಗಿರಬೇಕು.” (ಮತ್ತಾಯ 5:48, ಪರಿಶುದ್ಧ ಬೈಬಲ್ *) ಈ ದುಷ್ಟ ವ್ಯವಸ್ಥೆಯಲ್ಲಿ ನಾವು ಯಾವುದೇ ಕುಂದಿಲ್ಲದವರಾಗಿರುವಂತೆ ಯೇಸು ನಿರೀಕ್ಷಿಸಿದನೊ? ಇಲ್ಲ. ನಾವು ಉದಾರಭಾವ, ದಯೆ ಮತ್ತು ನಮ್ಮ ಜೊತೆ ಮಾನವರ ಕಡೆಗೆ ಪ್ರೀತಿಯನ್ನು ತೋರಿಸುವಂತಹ ಗುಣಗಳನ್ನು ಬೆಳೆಸಿಕೊಳ್ಳಲು ನಿಶ್ಚಯವಾಗಿಯೂ ಪ್ರಯತ್ನಿಸಬೇಕು. ಆದರೂ ನಾವು ಅನೇಕವೇಳೆ ಈ ಗುಣಗಳನ್ನು ಬೆಳೆಸಿಕೊಳ್ಳುವುದರಲ್ಲಿ ತಪ್ಪಿಬೀಳುತ್ತೇವೆ. ಯೇಸುವಿನ ಒಬ್ಬ ಅಪೊಸ್ತಲನು ಸಹ ಹೀಗೆ ಬರೆದನು: “ನಮ್ಮ ಪಾಪಗಳನ್ನು ಒಪ್ಪಿಕೊಂಡು ಅರಿಕೆ ಮಾಡಿದರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವದರಿಂದ ನಮ್ಮ ಪಾಪಗಳನ್ನು ಕ್ಷಮಿಸಿಬಿಟ್ಟು ಸಕಲ ಅನೀತಿಯನ್ನು ಪರಿಹರಿಸಿ ನಮ್ಮನ್ನು ಶುದ್ಧಿಮಾಡುವನು. ನಾವು ಪಾಪಮಾಡಲಿಲ್ಲವೆಂದು ಹೇಳಿದರೆ ಆತನನ್ನು ಸುಳ್ಳುಗಾರನನ್ನಾಗಿ ಮಾಡುತ್ತೇವೆ, ಮತ್ತು ಆತನ ವಾಕ್ಯವು ನಮ್ಮಲ್ಲಿ ಇಲ್ಲ.”—1 ಯೋಹಾನ 1:9, 10.
ಹೀಗಿದ್ದರೂ ನಾವು ಅತಿರೇಕಕ್ಕೆ ಹೋಗದೆ, ನಮ್ಮ ಬಗ್ಗೆ ನಮಗಿರುವ ಅಭಿಪ್ರಾಯದಲ್ಲಿ ಮತ್ತು ನಾವು ಇತರರನ್ನು ಉಪಚರಿಸುವ ರೀತಿಯಲ್ಲಿ ಸುಧಾರಣೆಯನ್ನು ಮಾಡಬಹುದು. ದೇವರ ವಾಕ್ಯವಾದ ಬೈಬಲಿನಲ್ಲಿ, ಸಮಚಿತ್ತವಾದ ಮತ್ತು ನ್ಯಾಯಸಮ್ಮತ ವ್ಯಕ್ತಿತ್ವಕ್ಕಾಗಿ ಲಿಖಿತ ಮಾರ್ಗದರ್ಶನವಿದೆ. ಇದಕ್ಕಿಂತಲೂ ಉತ್ತಮವಾದ ಮಾರ್ಗದರ್ಶನವು ನಮಗೆ ಇನ್ನೆಲ್ಲಿ ಸಿಗಬಹುದು? ನಾವು ಆನಂದ ಮತ್ತು ಮಿತಭಾವದಂತಹ ಗುಣಗಳನ್ನು ಬೆಳೆಸಿಕೊಳ್ಳುವುದಾದರೆ, ಉದ್ಯೋಗದ ಸ್ಥಳದಲ್ಲಿ ಇತರರೊಂದಿಗೆ, ನಮ್ಮ ವಿವಾಹ ಸಂಗಾತಿಯೊಂದಿಗೆ, ಮತ್ತು ನಮ್ಮ ಹೆತ್ತವರು ಅಥವಾ ಮಕ್ಕಳೊಂದಿಗೆ ವ್ಯವಹರಿಸುವಾಗ, ಚೆನ್ನಾಗಿ ಹೊಂದಿಕೊಂಡು ಹೋಗಲು ಇವು ಸಹಾಯಮಾಡುವವು. ಅಪೊಸ್ತಲ ಪೌಲನು ಕ್ರೈಸ್ತರಿಗೆ ಬುದ್ಧಿಹೇಳಿದ್ದು: “ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ; ಸಂತೋಷಪಡಿರಿ ಎಂದು ತಿರಿಗಿ ಹೇಳುತ್ತೇನೆ. ನಿಮ್ಮ ಸೈರಣೆಯು [“ನ್ಯಾಯಸಮ್ಮತೆಯು,” NW] ಎಲ್ಲಾ ಮನುಷ್ಯರಿಗೆ ಗೊತ್ತಾಗಲಿ.”—ಫಿಲಿಪ್ಪಿ 4:4, 5.
ನ್ಯಾಯಸಮ್ಮತೆಯಿಂದ ಸಿಗುವ ಪ್ರಯೋಜನಗಳು
ನೀವು ಇತರರಿಂದ ಏನನ್ನು ನಿರೀಕ್ಷಿಸುತ್ತೀರೊ ಅದರಲ್ಲಿ ನ್ಯಾಯಸಮ್ಮತರಾಗಿರುವ ಮೂಲಕ ಹಾಗೂ ನಿಮ್ಮನ್ನು ಪೀಡಿಸುವ ಮತ್ತು ನಿರಾಶೆಗೊಳಿಸುವಂತಹ ರೀತಿಯ ಪರಿಪೂರ್ಣತಾವಾದದಿಂದ ದೂರವಿರುವಾಗ, ನಿಮಗೆ ಮಾತ್ರವಲ್ಲ ಇತರರಿಗೂ ಪ್ರಯೋಜನಗಳು ಸಿಗುತ್ತವೆ. ನಿಮ್ಮ ನಿಜವಾದ ಸಾಮರ್ಥ್ಯವು ನಿಮಗೆ ತಿಳಿದಿರುವಾಗ, ನೀವೇನನ್ನು ಮಾಡಬಯಸುತ್ತೀರೋ ಅದರ ಕುರಿತು ನೀವು ವಾಸ್ತವಿಕ ದೃಷ್ಟಿಯುಳ್ಳವರೂ ನ್ಯಾಯಸಮ್ಮತರೂ ಆಗಿರುತ್ತೀರಿ. ನಾವು ಭೂಮಿಯ ಮೇಲೆ ಜೀವಿಸಿ, ನಮಗೂ ಇತರರಿಗೂ ಪ್ರಯೋಜನವನ್ನು ತರುವಂತಹ ರೀತಿಯ ಅರ್ಥಪೂರ್ಣ ಕೆಲಸಗಳನ್ನು ಮಾಡುವುದರಲ್ಲಿ ತೃಪ್ತಿಯನ್ನು ಪಡೆದುಕೊಳ್ಳಲಿಕ್ಕಾಗಿಯೇ ದೇವರು ನಮ್ಮನ್ನು ಸೃಷ್ಟಿಸಿದನೆಂಬುದನ್ನು ನೆನಪಿನಲ್ಲಿಡಿರಿ.—ಆದಿಕಾಂಡ 2:7-9.
ನಿಮ್ಮ ವಿಷಯದಲ್ಲೇ ನೀವು ಅತಿ ಕಟ್ಟುನಿಟ್ಟಿನವರಾಗಿರುವಲ್ಲಿ, ನೀವು ಯೆಹೋವನಿಗೆ ಏಕೆ ಪ್ರಾರ್ಥಿಸಬಾರದು? ದೇವರ ಅನುಗ್ರಹವನ್ನು ಪಡೆದುಕೊಳ್ಳುವುದರಿಂದ ನಿಮಗೆ ಮಹತ್ತರವಾದ ರೀತಿಯಲ್ಲಿ ಉಪಶಮನವು ಸಿಗುವುದು. ಯೆಹೋವನಿಗೆ ನಮ್ಮ ಸ್ವಭಾವ ಮತ್ತು ನಮ್ಮ ಅಪರಿಪೂರ್ಣ ಸ್ಥಿತಿ ಗೊತ್ತಿದೆ. ಆದುದರಿಂದ ಆತನು ನ್ಯಾಯಸಮ್ಮತವಲ್ಲದ ಬೇಡಿಕೆಗಳನ್ನು ನಮ್ಮ ಮುಂದಿಡುವುದಿಲ್ಲ ಅಥವಾ ಮೆಚ್ಚಿಸಲಾಗದ ವ್ಯಕ್ತಿಯಾಗಿರುವುದಿಲ್ಲ. ಕೀರ್ತನೆಗಾರನು ನಮಗೆ ಆಶ್ವಾಸನೆ ಕೊಡುವುದು: “ತಂದೆಯು ಮಕ್ಕಳನ್ನು ಕನಿಕರಿಸುವಂತೆ ಯೆಹೋವನು ತನ್ನಲ್ಲಿ ಭಯಭಕ್ತಿಯುಳ್ಳವರನ್ನು ಕನಿಕರಿಸುತ್ತಾನೆ. ಆತನು ನಮ್ಮ ಪ್ರಕೃತಿಯನ್ನು ಬಲ್ಲನು; ನಾವು ಧೂಳಿಯಾಗಿದ್ದೇವೆಂಬದನ್ನು ನೆನಪುಮಾಡಿಕೊಳ್ಳುತ್ತಾನೆ.” (ಕೀರ್ತನೆ 103:13, 14) ದೇವರು ಮಾನವರೊಂದಿಗೆ ಇಷ್ಟೊಂದು ಕರುಣಾಭರಿತನಾಗಿ ವ್ಯವಹರಿಸುತ್ತಿರುವುದಕ್ಕಾಗಿ ನಾವು ಎಷ್ಟು ಆಭಾರಿಗಳಾಗಿರಬೇಕು! ಆತನಿಗೆ ನಮ್ಮ ಇತಿಮಿತಿಗಳ ಕುರಿತು ಗೊತ್ತಿರುವುದಾದರೂ, ನಾವು ಆತನ ದೃಷ್ಟಿಯಲ್ಲಿ ಆತನ ಪ್ರಿಯ ಮಕ್ಕಳಂತೆ ಅಮೂಲ್ಯರಾಗಿರಬಲ್ಲೆವು.
ಪರಿಪೂರ್ಣತೆಯನ್ನು ಸಾಧಿಸುವ ಅಭಿಪ್ರಾಯದ ಬದಲಿಗೆ, ಆತ್ಮಿಕ ವಿವೇಚನಾಶಕ್ತಿ ಮತ್ತು ಸಮಚಿತ್ತದ ದೃಷ್ಟಿಕೋನವನ್ನು ವಿಕಸಿಸಿಕೊಳ್ಳುವುದು ಎಷ್ಟು ಹೆಚ್ಚು ವಿವೇಕಯುತವಾದ ಸಂಗತಿಯಾಗಿದೆ! ಅಲ್ಲದೆ, ಯೆಹೋವನು ತನ್ನ ರಾಜ್ಯದ ಕೆಳಗೆ ಮಾನವಕುಲವನ್ನು ಪರಿಪೂರ್ಣತೆಗೇರಿಸುವ ತನ್ನ ಉದ್ದೇಶವನ್ನು ಪೂರೈಸುವುದರಿಂದ ಯಾರೂ ತಡೆಯಲಾರರು ಎಂಬ ಖಾತ್ರಿ ನಮಗಿರಸಾಧ್ಯವಿದೆ. ಆದರೆ ಪರಿಪೂರ್ಣರಾಗಿರುವುದು ಅಂದರೇನು?
ಪರಿಪೂರ್ಣತಾವಾದಕ್ಕಿಂತಲೂ ಪರಿಪೂರ್ಣ ಜೀವನವೇ ಉತ್ತಮ
ಪರಿಪೂರ್ಣತೆಯ ಅರ್ಥ ಪರಿಪೂರ್ಣತಾವಾದಿಗಳಾಗಿರಬೇಕು ಎಂದಲ್ಲ. ದೇವರ ರಾಜ್ಯದಾಳಿಕೆಯ ಕೆಳಗೆ ಭೂಪ್ರಮೋದವನದಲ್ಲಿ ಜೀವಿಸುವ ಸುಯೋಗವನ್ನು ಪಡೆದುಕೊಳ್ಳುವವರು, ಖಂಡಿತವಾಗಿಯೂ ಕಟ್ಟುನಿಟ್ಟಿನ, ಸ್ವ-ನೀತಿವಂತ ವ್ಯಕ್ತಿಗಳಾಗಿರುವುದಿಲ್ಲ. ಅದರ ಬದಲು, ಮಹಾ ಸಂಕಟದಿಂದ ಪಾರಾಗಲಿಕ್ಕಾಗಿ ಒಬ್ಬನಿಗೆ ಪ್ರಾಯಶ್ಚಿತ್ತ ಯಜ್ಞಕ್ಕಾಗಿ ಹೃತ್ಪೂರ್ವಕ ಗಣ್ಯತೆಯಿರಬೇಕು. ಅಪೊಸ್ತಲ ಯೋಹಾನನು ವರ್ಣಿಸಿದ ಅಂತಾರಾಷ್ಟ್ರೀಯ ಮಹಾ ಸಮೂಹವು ಅದನ್ನು ಹೀಗೆ ವ್ಯಕ್ತಪಡಿಸಿತು: “ಸಿಂಹಾಸನಾಸೀನನಾಗಿರುವ ನಮ್ಮ ದೇವರಿಗೂ ಯಜ್ಞದ ಕುರಿಯಾದಾತನಿಗೂ ನಮಗೆ ರಕ್ಷಣೆಯುಂಟಾದದ್ದಕ್ಕಾಗಿ ಸ್ತೋತ್ರ.” (ಪ್ರಕಟನೆ 7:9, 10, 14) ತ್ವರಿತಗತಿಯಿಂದ ಸಮೀಪಿಸುತ್ತಿರುವ ಮಹಾ ಸಂಕಟವನ್ನು ಪಾರಾಗುವವರೆಲ್ಲರೂ, ಕ್ರಿಸ್ತನು ತಮಗಾಗಿ ಮತ್ತು ಅವನಲ್ಲಿ ನಂಬಿಕೆಯನ್ನಿಡುವ ಎಲ್ಲರಿಗಾಗಿ ತನ್ನ ಪ್ರಾಣವನ್ನು ಕೊಟ್ಟಿರುವುದಕ್ಕಾಗಿ ಆಭಾರಿಗಳಾಗಿರುವರು. ಯಾಕೆಂದರೆ ಕೇವಲ ಕ್ರಿಸ್ತನ ಪ್ರೀತಿಪೂರ್ಣ ಯಜ್ಞದ ಆಧಾರದ ಮೇಲೆಯೇ, ಅವರಿಗೆ ತಮ್ಮ ಅಪರಿಪೂರ್ಣತೆಗಳಿಂದ ಮತ್ತು ಬಲಹೀನತೆಗಳಿಂದ ಶಾಶ್ವತವಾದ ಪರಿಹಾರವು ಸಿಗಲಿಕ್ಕಿದೆ.—ಯೋಹಾನ 3:16; ರೋಮಾಪುರ 8:21, 22.
ಪರಿಪೂರ್ಣ ಜೀವನವು ಹೇಗಿರುವುದು? ಮನುಷ್ಯರ ನಡುವೆ ಸ್ಪರ್ಧೆ ಮತ್ತು ಸ್ವಾರ್ಥ ಮಹತ್ವಾಕಾಂಕ್ಷೆಯ ಬದಲಿಗೆ ಪ್ರೀತಿದಯೆ ಇರುವುದು. ಚಿಂತೆ ಮತ್ತು ಕೀಳರಿಮೆಯು ತೆಗೆದುಹಾಕಲ್ಪಟ್ಟು ಬದುಕು ಸಾರ್ಥಕವಾಗುವುದು. ಆದರೂ, ಪರಿಪೂರ್ಣ ಜೀವನವು ಬೇಸರಹಿಡಿಸುವಂಥದ್ದು ಇಲ್ಲವೇ ಚಿಟ್ಟುಹಿಡಿಸುವಂಥದ್ದಾಗಿರುವುದಿಲ್ಲ. ದೇವರ ವಾಕ್ಯವು ಪ್ರಮೋದವನದ ಕುರಿತು ಪ್ರತಿಯೊಂದು ಚಿಕ್ಕಪುಟ್ಟ ವಿವರವನ್ನು ಕೊಡದಿದ್ದರೂ, ನಾವು ನಿರೀಕ್ಷಿಸಬಹುದಾದ ಜೀವಿತವನ್ನು ಅದು ಖಂಡಿತವಾಗಿಯೂ ವರ್ಣಿಸುತ್ತದೆ. ಅದು ಹೇಳುವುದು: “ಅಲ್ಲಿನ ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು. ಒಬ್ಬನು ಕಟ್ಟಿದ ಮನೆಯಲ್ಲಿ ಬೇರೊಬ್ಬನು ವಾಸಿಸನು; ಒಬ್ಬನು ಮಾಡಿದ ತೋಟದ ಫಲವು ಇನ್ನೊಬ್ಬನಿಗೆ ವಶವಾಗದು; ನನ್ನ ಜನರ ಆಯುಸ್ಸು ವೃಕ್ಷದ ಆಯುಸ್ಸಿನಂತಿರುವದು; ನನ್ನ ಆಪ್ತರು ತಮ್ಮ ಕೈಕೆಲಸದ ಆದಾಯವನ್ನು ಪೂರಾ ಅನುಭವಿಸುವರು. ಅವರು ವ್ಯರ್ಥವಾಗಿ ದುಡಿಯರು, ಅವರಿಗೆ ಹುಟ್ಟುವ ಮಕ್ಕಳು ಘೋರವ್ಯಾಧಿಗೆ ಗುರಿಯಾಗರು. ಅವರು ಯೆಹೋವನ ಆಶೀರ್ವಾದವನ್ನು ಹೊಂದಿದವರ ಸಂತಾನವಷ್ಟೆ; ಅವರ ಸಂತತಿಯವರು ಅವರೊಂದಿಗೆ ಬಹುದಿನವಿರುವರು.”—ಯೆಶಾಯ 65:21-23.
ದೇವರ ರಾಜ್ಯದಲ್ಲಿ ಯಾವ ರೀತಿಯ ಮನೋರಂಜನೆ, ಶಾಪಿಂಗ್ ಸೌಕರ್ಯಗಳು, ತಾಂತ್ರಿಕತೆ ಅಥವಾ ಸಾರಿಗೆವ್ಯವಸ್ಥೆಯ ಏರ್ಪಾಡುಗಳಿರುವವು ಎಂಬುದರ ಬಗ್ಗೆ ಯೋಚಿಸುತ್ತಾ ಇರುವ ಬದಲಿಗೆ, ಈ ಮುಂದಿನ ಮಾತುಗಳ ನೆರವೇರಿಕೆಯಲ್ಲಿ ನೀವು ಆನಂದಿಸುತ್ತಿರುವುದನ್ನು ಮನಸ್ಸಿನಲ್ಲೇ ಕಲ್ಪಿಸಿಕೊಳ್ಳಿರಿ: “ತೋಳವು ಕುರಿಯ ಸಂಗಡ ಮೇಯುವದು, ಸಿಂಹವು ಎತ್ತಿನಂತೆ ಹುಲ್ಲು ತಿನ್ನುವದು, ಹಾವಿಗೆ ದೂಳೇ ಆಹಾರವಾಗುವದು. ನನ್ನ ಪರಿಶುದ್ಧಪರ್ವತದಲ್ಲೆಲ್ಲಾ ಯಾರೂ ಕೇಡುಮಾಡುವದಿಲ್ಲ, ಯಾರೂ ಹಾಳುಮಾಡುವದಿಲ್ಲ ಎಂದು ಯೆಹೋವನು ಅನ್ನುತ್ತಾನೆ.” (ಯೆಶಾಯ 65:25) ಆ ಪರಿಪೂರ್ಣ ಜೀವನವು ಇಂದಿನ ಬದುಕಿಗೆ ಹೋಲಿಸುವಾಗ ಎಷ್ಟು ಭಿನ್ನವಾಗಿರುವುದು! ಆ ಸಮಯದಲ್ಲಿ ಜೀವಿಸುವವರ ಪೈಕಿ ನೀವು ಒಬ್ಬರಾಗಿರಲು ಅರ್ಹರಾಗುವಲ್ಲಿ, ನಿಮ್ಮ ಪ್ರೀತಿಯ ಸ್ವರ್ಗೀಯ ತಂದೆಯು, ನಿಮ್ಮಲ್ಲಿ ಮತ್ತು ನಿಮ್ಮ ಕುಟುಂಬದಲ್ಲಿ ಆಸಕ್ತಿಯನ್ನು ತೋರಿಸುವನೆಂದು ಭರವಸೆಯಿಡಲು ಸಕಾರಣವಿದೆ. “ಆಗ ಯೆಹೋವನಲ್ಲಿ ಸಂತೋಷಿಸುವಿ; ಮತ್ತು ಆತನು ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುವನು.”—ಕೀರ್ತನೆ 37:4.
ಪರಿಪೂರ್ಣ ಜೀವನವು ಕೇವಲ ಒಂದು ಸ್ವಪ್ನವಲ್ಲ, ಅದು ವಾಸ್ತವವಾಗಿರುವುದು. ಮಾನವಕುಲಕ್ಕಾಗಿ ಯೆಹೋವನಿಗಿರುವ ಪ್ರೀತಿಪೂರ್ಣ ಉದ್ದೇಶವು ಪೂರ್ಣವಾಗಿ ನೆರವೇರುವುದು. ದೇವರ ಹೊಸ ಲೋಕದಲ್ಲಿ ಪರಿಪೂರ್ಣತೆಗೆ ಏರಿಸಲ್ಪಟ್ಟು, ಸದಾಕಾಲ ಜೀವಿಸುವವರ ನಡುವೆ ನೀವೂ ನಿಮ್ಮ ಕುಟುಂಬವೂ ಇರಸಾಧ್ಯವಿದೆ. ಬೈಬಲ್ ಮುಂತಿಳಿಸುವುದು: “ನೀತಿವಂತರೋ ದೇಶವನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”—ಕೀರ್ತನೆ 37:29.
[ಪಾದಟಿಪ್ಪಣಿ]
^ ಪ್ಯಾರ. 8 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.
[ಪುಟ 6ರಲ್ಲಿರುವ ಚಿತ್ರ]
ಪರಿಪೂರ್ಣತಾವಾದದಿಂದ ಅಥವಾ ಚಿಕ್ಕಪುಟ್ಟ ವಿಷಯಗಳಿಗೂ ತೀರ ಹೆಚ್ಚು ಗಮನಕೊಡುವುದರಿಂದ ದೂರವಿದ್ದು, ನಮ್ಮ ಕುರಿತು ಹಾಗೂ ಇತರರ ಕುರಿತು ನಮಗಿರುವ ಅಭಿಪ್ರಾಯವನ್ನು ಉತ್ತಮಗೊಳಿಸಸಾಧ್ಯವಿದೆ
[ಪುಟ 7ರಲ್ಲಿರುವ ಚಿತ್ರ]
ಪ್ರಮೋದವನದಲ್ಲಿ ಶಾಂತಿಪೂರ್ಣ ಮತ್ತು ನೀತಿಯುತ ಪರಿಸ್ಥಿತಿಗಳಲ್ಲಿ ಆನಂದಿಸುತ್ತಿರುವುದನ್ನು ನೀವು ಈಗಲೇ ಏಕೆ ಮನದಲ್ಲಿ ಚಿತ್ರಿಸಿಕೊಳ್ಳಬಾರದು?