ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪವಿತ್ರ ಸೇವೆಯನ್ನು ಸಲ್ಲಿಸುವಂತೆ ಗಿಲ್ಯಡ್‌ ಶಾಲೆಯ 108ನೆಯ ತರಗತಿಯವರನ್ನು ಪ್ರೋತ್ಸಾಹಿಸಲಾಯಿತು

ಪವಿತ್ರ ಸೇವೆಯನ್ನು ಸಲ್ಲಿಸುವಂತೆ ಗಿಲ್ಯಡ್‌ ಶಾಲೆಯ 108ನೆಯ ತರಗತಿಯವರನ್ನು ಪ್ರೋತ್ಸಾಹಿಸಲಾಯಿತು

ಪವಿತ್ರ ಸೇವೆಯನ್ನು ಸಲ್ಲಿಸುವಂತೆ ಗಿಲ್ಯಡ್‌ ಶಾಲೆಯ 108ನೆಯ ತರಗತಿಯವರನ್ನು ಪ್ರೋತ್ಸಾಹಿಸಲಾಯಿತು

ಬೈಬಲಿನಲ್ಲಿ ದೇವರ ಆರಾಧನೆಯನ್ನು ಸೂಚಿಸುವಾಗ, ಅನೇಕಸಲ “ಪವಿತ್ರ ಸೇವೆ” (NW) ಎಂಬ ಅಭಿವ್ಯಕ್ತಿಯನ್ನು ಉಪಯೋಗಿಸಲಾಗಿದೆ. ಈ ಅಭಿವ್ಯಕ್ತಿಯು, ದೇವರಿಗೆ ಸೇವೆ ಸಲ್ಲಿಸುವುದನ್ನು ಸೂಚಿಸುವಂತಹ ಒಂದು ಗ್ರೀಕ್‌ ಪದದಿಂದ ಬಂದಿದೆ. (ರೋಮಾಪುರ 9:4) ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನ 108ನೆಯ ತರಗತಿಯ ಪದವಿಪ್ರಾಪ್ತಿ ಕಾರ್ಯಕ್ರಮದಲ್ಲಿ, ಭಾಷಣಕಾರರು ಯೆಹೋವ ದೇವರಿಗೆ ಸ್ವೀಕಾರಾರ್ಹವಾಗಿರುವ ಪವಿತ್ರ ಸೇವೆಯನ್ನು ಸಲ್ಲಿಸುವಂತೆ ಸಹಾಯಮಾಡುವ ಪ್ರಾಯೋಗಿಕ ಸಲಹೆಗಳನ್ನು ಪದವೀಧರರಿಗೆ ನೀಡಿದರು. ಈ ಕಾರ್ಯಕ್ರಮವನ್ನು 5,562 ಮಂದಿ ಕೇಳಿಸಿಕೊಂಡರು. *

ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಒಬ್ಬ ಸದಸ್ಯರಾಗಿರುವ ಥಿಯೊಡರ್‌ ಜಾರಸ್‌ ಕಾರ್ಯಕ್ರಮದ ಅಧ್ಯಕ್ಷರಾಗಿದ್ದರು. “ನಮ್ಮ ತಂದೆಯ ನಾಮ” ಎಂಬ ಗೀತ ನಂ. 52ರೊಂದಿಗೆ ಕಾರ್ಯಕ್ರಮವು ಆರಂಭವಾಯಿತು. ಆ ಹಾಡಿನ ಎರಡನೆಯ ಸಾಲಿನಲ್ಲಿ, “ನಿನ್ನ ಅದ್ವಿತೀಯ ನಾಮವನ್ನು ಪವಿತ್ರೀಕರಿಸಲು ನಾವು ಮಾರ್ಗಗಳನ್ನು ಹುಡುಕುತ್ತೇವೆ” ಎಂದು ಹೇಳಲಾಗಿದೆ. ಈ ಹಾಡಿನ ಪದಗಳು ಪದವಿ ಪಡೆದುಕೊಳ್ಳಲಿದ್ದ (10 ದೇಶಗಳಿಂದ ಬಂದಿದ್ದ) ವಿದ್ಯಾರ್ಥಿಗಳ ಹೃದಯದಾಳದ ಆಸೆಯನ್ನು ವ್ಯಕ್ತಪಡಿಸಿದವು. ಏಕೆಂದರೆ ಅವರು ತಮಗೆ ಸಿಕ್ಕಿದಂತಹ ತರಬೇತಿಯನ್ನು ತಮ್ಮ ಮಿಷನೆರಿ ನೇಮಕಗಳಾಗಿದ್ದ 17 ಭಿನ್ನಭಿನ್ನ ದೇಶಗಳಲ್ಲಿ ಉಪಯೋಗಿಸಲು ಬಯಸಿದ್ದರು.

ಸಹೋದರ ಜಾರಸ್‌ ಮೊದಲ ಭಾಷಣವನ್ನು ನೀಡಿದರು. ಅವರು ತಮ್ಮ ಭಾಷಣದಲ್ಲಿ, ವಿದ್ಯಾರ್ಥಿಗಳ ಐದು ತಿಂಗಳುಗಳ ತೀವ್ರ ಬೈಬಲ್‌ ಅಧ್ಯಯನದ ಕಡೆಗೆ ಗಮನ ಸೆಳೆದರು. ಇದು ಅವರನ್ನು, ವಿದೇಶಿ ಕ್ಷೇತ್ರಗಳಲ್ಲಿ ಸೇವೆಸಲ್ಲಿಸಲು ಸಜ್ಜುಗೊಳಿಸಿತ್ತು. ಅವರು ‘ಎಲ್ಲವನ್ನೂ ಪರಿಶೋಧಿಸುವಂತೆ’ ಅಂದರೆ, ತಾವು ಈ ಹಿಂದೆ ಕಲಿತಿರುವಂಥ ಸಂಗತಿಗಳನ್ನು ದೇವರ ವಾಕ್ಯದ ಬೆಳಕಿನಲ್ಲಿ ಸೂಕ್ಷ್ಮವಾಗಿ ಪರಿಶೀಲಿಸುವಂತೆ ಮತ್ತು ‘ಒಳ್ಳೇದನ್ನು ಭದ್ರವಾಗಿ ಹಿಡಿದುಕೊಳ್ಳುವಂತೆಯೂ’ ಅದು ಅವರಿಗೆ ಸಹಾಯಮಾಡಿತು. (1 ಥೆಸಲೊನೀಕ 5:21) ವಿದ್ಯಾರ್ಥಿಗಳು ಯೆಹೋವನಿಗೆ, ಆತನ ವಾಕ್ಯಕ್ಕೆ ಮತ್ತು ಯಾವುದಕ್ಕಾಗಿ ಅವರನ್ನು ತರಬೇತುಗೊಳಿಸಲಾಗಿದೆಯೋ ಆ ನೇಮಕಗಳಿಗೆ ನಂಬಿಗಸ್ತಿಕೆಯಿಂದ ಅಂಟಿಕೊಳ್ಳುವಂತೆ ಅವರು ಉತ್ತೇಜಿಸಿದರು. ಆದರೆ ಇವೆಲ್ಲವನ್ನು ಮಾಡಲು ಅವರಿಗೆ ಯಾವುದು ಸಹಾಯಮಾಡುವುದು?

ಪವಿತ್ರ ಸೇವೆಯನ್ನು ಸಲ್ಲಿಸಲು ಪ್ರಾಯೋಗಿಕವಾದ ಬುದ್ಧಿವಾದ

ಬೆತೆಲ್‌ ಕಾರ್ಯಾಚರಣೆಗಳ ಕಮಿಟಿಯ ಒಬ್ಬ ಸದಸ್ಯರಾಗಿರುವ ಲಾನ್‌ ಷಿಲಿಂಗ್‌ರವರು, “ನೀವು ವಿವೇಚನಾಶಕ್ತಿಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವಿರೊ?” ಎಂಬ ವಿಷಯದ ಕುರಿತು ಭಾಷಣಕೊಟ್ಟರು. ದೈವಿಕ ವಿವೇಕವನ್ನು ಪ್ರತಿಬಿಂಬಿಸುವ ವಿವೇಚನಾಶಕ್ತಿಯ ಮಹತ್ವವನ್ನು ಅವರು ಒತ್ತಿಹೇಳಿದರು. (ಯಾಕೋಬ 3:17) ವಿವೇಚನಾಶಕ್ತಿಯುಳ್ಳವರಾಗಿರುವುದು ಅಂದರೆ ಮಣಿಯುವವರು, ನಿಷ್ಪಕ್ಷಪಾತಿಗಳು, ಮಿತಭಾವದವರು, ವಿಚಾರಪರರು ಮತ್ತು ಸಹನೆಯಿಂದ ವರ್ತಿಸುವವರು ಆಗಿರುವುದೇ ಆಗಿದೆ. “ವಿವೇಚನಾಶಕ್ತಿಯುಳ್ಳ ಜನರು, ಇತರರೊಂದಿಗೆ ವ್ಯವಹರಿಸುವಾಗ ಸಮತೋಲನವುಳ್ಳವರಾಗಿರುತ್ತಾರೆ. ಮತ್ತು ಅವರು ಯಾವುದೇ ವಿಷಯದಲ್ಲಿ ಅತಿರೇಕಕ್ಕೆ ಹೋಗುವುದಿಲ್ಲ” ಎಂದು ಸಹೋದರ ಷಿಲಿಂಗ್‌ ಹೇಳಿದರು. ಹಾಗಾದರೆ, ವಿವೇಚನಾಶಕ್ತಿಯುಳ್ಳ ವ್ಯಕ್ತಿಯಾಗಿರಲು ಒಬ್ಬ ಮಿಷನೆರಿಗೆ ಯಾವುದು ಸಹಾಯಮಾಡುವುದು? ವಿನಯಶೀಲರಾಗಿರುವುದು, ಇತರರಿಗೆ ಕಿವಿಗೊಟ್ಟು ಅವರಿಂದ ಏನನ್ನಾದರೂ ಕಲಿಯಲಿಕ್ಕಿರುವ ಸಂದರ್ಭಗಳ ಸದುಪಯೋಗವನ್ನು ಮಾಡುವುದು, ಮತ್ತು ದೈವಿಕ ಮೂಲತತ್ವಗಳನ್ನು ರಾಜಿಮಾಡಿಕೊಳ್ಳದೆ ಇತರರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳಲು ಸಿದ್ಧರಾಗಿರುವುದು, ಇದೆಲ್ಲವು ಸಹಾಯಮಾಡುವುದು.—1 ಕೊರಿಂಥ 9:19-23.

ಆಡಳಿತ ಮಂಡಲಿಯ ಇನ್ನೊಬ್ಬ ಸದಸ್ಯರಾದ ಸ್ಯಾಮುವೆಲ್‌ ಹರ್ಡ್‌ರವರು, “ಆಹಾರವನ್ನು ಸೇವಿಸಲು ಮರೆಯಬೇಡಿರಿ!” ಎಂಬ ಆಸಕ್ತಿಯನ್ನು ಕೆರಳಿಸುವ ಶೀರ್ಷಿಕೆಯುಳ್ಳ ಮುಂದಿನ ಭಾಷಣವನ್ನು ಪ್ರಸ್ತುತಪಡಿಸಿದರು. ಪವಿತ್ರ ಸೇವೆಯನ್ನು ಸಲ್ಲಿಸುವಂತೆ ಸಮರ್ಥರಾಗಿರಲು ಒಂದು ಒಳ್ಳೆಯ ಆತ್ಮಿಕ ಆಹಾರಕ್ರಮವಿರುವುದರ ಮಹತ್ವವನ್ನು ಅವರು ಎತ್ತಿತೋರಿಸಿದರು. “ನೀವು ಸಾರುವ ಮತ್ತು ಕಲಿಸುವ ನೇಮಕದಲ್ಲಿ ಮಗ್ನರಾದಂತೆ, ನಿಮ್ಮ ಆತ್ಮಿಕ ಚಟುವಟಿಕೆಯು ಹೆಚ್ಚಾಗುವುದು. ಆದುದರಿಂದ, ನಿಮ್ಮ ಆತ್ಮಿಕ ಶಕ್ತಿಯನ್ನು ಸಮತೂಕವಾಗಿಡಬೇಕಾದರೆ, ಆತ್ಮಿಕ ಆಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕಾಗುವುದು.” ಹೀಗೆ, ಒಬ್ಬ ಮಿಷನೆರಿಯು ನಿರಂತರವಾಗಿ ಆತ್ಮಿಕ ಆಹಾರವನ್ನು ಸೇವಿಸುವಾಗ, ಅವನು ಆತ್ಮಿಕವಾಗಿ ಖಿನ್ನನಾಗುವುದರಿಂದ ಮತ್ತು ಮನೆಯ ಹಂಬಲದಿಂದ ದೂರವಿರುವಂತೆ ಸಹಾಯ ಮಾಡುವುದು. ಅಷ್ಟುಮಾತ್ರವಲ್ಲದೆ, ಸಂತೃಪ್ತರಾಗಿರಲು ಮತ್ತು ಪವಿತ್ರ ಸೇವೆಯ ನೇಮಕಕ್ಕೆ ಅಂಟಿಕೊಳ್ಳುವ ದೃಢನಿಶ್ಚಯವನ್ನು ಹೊಂದಿರಲು ಅದು ನೆರವು ನೀಡುವುದು.—ಫಿಲಿಪ್ಪಿ 4:13.

ಗಿಲ್ಯಡ್‌ ಶಿಕ್ಷಕರಲ್ಲಿ ಒಬ್ಬರಾಗಿರುವ ಲಾರೆನ್ಸ್‌ ಬೋವನ್‌ರವರು, “ಆರಂಭಕ್ಕೆ ಹಿಂದಿರುಗಿರಿ” ಎಂದು ವಿದ್ಯಾರ್ಥಿಗಳನ್ನು ಉತ್ತೇಜಿಸಿದರು. ಅವರ ಮಾತಿನ ಅರ್ಥವೇನಾಗಿತ್ತು? ಸಭಿಕರೆಲ್ಲರು ಜ್ಞಾನೋಕ್ತಿ 1:7ನೆಯ ವಚನವನ್ನು ಬೈಬಲಿನಲ್ಲಿ ತೆರೆಯುವಂತೆ ಅವರು ಹೇಳಿದರು. “ಯೆಹೋವನ ಭಯವೇ ಜ್ಞಾನದ ಆರಂಭ” (NW) ಎಂದು ಅಲ್ಲಿ ಹೇಳಲಾಗಿದೆ. ಭಾಷಣಕರ್ತರು ಆ ವಚನದ ಕುರಿತು ಹೀಗೆ ವಿವರಿಸಿದರು: “ಯೆಹೋವನು ಅಸ್ತಿತ್ವದಲ್ಲಿದ್ದಾನೆಂಬ ಮುಖ್ಯ ವಾಸ್ತವಾಂಶವನ್ನು ಕಡೆಗಣಿಸುವ ಯಾವುದೇ ಮಾಹಿತಿಯನ್ನು ನಿಜವಾದ ಜ್ಞಾನವೆಂದು ಹೇಳಲು ಸಾಧ್ಯವಿಲ್ಲ ಅಥವಾ ಅದು ಸರಿಯಾದ ತಿಳುವಳಿಕೆಯನ್ನು ಕೊಡಲಾರದು.” ಸಹೋದರ ಬೋವನ್‌ರವರು, ದೇವರ ವಾಕ್ಯವಾದ ಬೈಬಲಿನಲ್ಲಿರುವ ವಿವರಗಳನ್ನು ಒಂದು ಚಿತ್ರಬಂಧದ ಭಾಗಗಳಿಗೆ ಹೋಲಿಸಿದರು. ಚಿತ್ರಬಂಧದಲ್ಲಿರುವ ಎಲ್ಲ ತುಂಡುಗಳನ್ನು ಜೋಡಿಸಿ ಒಂದು ಚಿತ್ರವನ್ನು ಮಾಡಬಹುದು. ಭಾಗಗಳು ಅಥವಾ ವಿವರಗಳು ಹೆಚ್ಚಾದಂತೆ, ಆ ಚಿತ್ರ ಸಹ ಹೆಚ್ಚು ದೊಡ್ಡದಾಗುತ್ತದೆ ಮತ್ತು ಹೆಚ್ಚು ಸ್ಪಷ್ಟವಾಗುತ್ತದೆ. ಅಂತೆಯೇ ಬೈಬಲಿನಿಂದ ನಾವು ಹೆಚ್ಚೆಚ್ಚು ವಿವರಗಳನ್ನು ಪಡೆದುಕೊಂಡಂತೆ, ದೇವರ ವಾಕ್ಯದ ಕುರಿತಾದ ನಮ್ಮ ತಿಳುವಳಿಕೆಯು ಹೆಚ್ಚು ಸ್ಪಷ್ಟವಾಗುವುದು. ಮತ್ತು ನಮ್ಮ ತಿಳುವಳಿಕೆಯು ಹೆಚ್ಚಾದಂತೆ, ನಮ್ಮ ಗಣ್ಯತೆಯು ಸಹ ಬೆಳೆಯುವುದು. ಇದು ದೇವರಿಗೆ ಪವಿತ್ರ ಸೇವೆಯನ್ನು ಸಲ್ಲಿಸುವಂತೆ ಎಲ್ಲರಿಗೂ ಸಹಾಯಮಾಡುವುದು.

ಗಿಲ್ಯಡ್‌ ಶಾಲೆಯ ರೆಜಿಸ್ಟ್ರಾರ್‌ ಆಗಿರುವ ವಾಲಸ್‌ ಲಿವರೆನ್ಸ್‌ರವರು ಭಾಷಣಗಳ ಸರಮಾಲೆಯ ಕೊನೆಯ ಭಾಷಣವನ್ನು ಕೊಟ್ಟರು. ಅವರ ಭಾಷಣದ ಶೀರ್ಷಿಕೆಯು, “ಉಪಕಾರಸ್ತುತಿಯನ್ನು ದೇವರಿಗೆ ನಿಮ್ಮ ಯಜ್ಞವಾಗಿ ಸಲ್ಲಿಸಿರಿ” ಎಂಬುದಾಗಿತ್ತು. ಯೇಸು ಹತ್ತು ಮಂದಿ ಕುಷ್ಠ ರೋಗಿಗಳನ್ನು ಗುಣಪಡಿಸಿದಂತಹ ವೃತ್ತಾಂತಕ್ಕೆ ಅವರು ಗಮನ ಸೆಳೆದರು. (ಲೂಕ 17:11-19) ಆ ಹತ್ತು ಮಂದಿಯಲ್ಲಿ, ಕೇವಲ ಒಬ್ಬನು ದೇವರಿಗೆ ಸ್ತುತಿಯನ್ನು ಸಲ್ಲಿಸಲು ಮತ್ತು ಯೇಸುವಿಗೆ ಉಪಕಾರವನ್ನು ಹೇಳಲು ಹಿಂದಿರುಗಿ ಬಂದನು. “ಉಳಿದವರು ಸಹ ತಾವು ಶುದ್ಧರಾದದ್ದಕ್ಕಾಗಿ ತುಂಬ ರೋಮಾಂಚಿತರಾಗಿದ್ದಿರಬಹುದು ಎಂಬುದರಲ್ಲಿ ಸಂದೇಹವಿಲ್ಲ. ತಮ್ಮ ದೇಹವು ಈಗ ಶುದ್ಧವಾಗಿರುವುದನ್ನು ಕಂಡು ಅವರಿಗೆ ಸಂತೋಷವಾಗಿದ್ದಿರಬಹುದು. ಆದರೆ ಯಾಜಕನು ಅವರನ್ನು ಶುದ್ಧರೆಂದು ಹೇಳುವುದನ್ನು ಮಾತ್ರವೇ ಕೇಳಲು ಅವರು ಆತುರರಾಗಿದ್ದರೆಂದು ತೋರುತ್ತದೆ,” ಎಂದು ಸಹೋದರ ಲಿವರೆನ್ಸ್‌ ಹೇಳಿದರು. ಸತ್ಯವನ್ನು ಕಲಿಯುವುದರಿಂದ ನಾವು ಆತ್ಮಿಕವಾಗಿ ಶುದ್ಧರಾಗುತ್ತೇವೆ. ಇದರೊಂದಿಗೆ ನಮಗೆ ಕೃತಜ್ಞತೆ ಇರುವಲ್ಲಿ, ದೇವರು ನಮಗಾಗಿ ಮಾಡಿರುವ ಒಳ್ಳೆಯದಕ್ಕಾಗಿ ಆತನಿಗೆ ಉಪಕಾರವನ್ನು ಹೇಳುವಂತೆ ನಾವು ಪ್ರಚೋದಿಸಲ್ಪಡುವೆವು. 108ನೆಯ ಗಿಲ್ಯಡ್‌ ಶಾಲೆಯ ವಿದ್ಯಾರ್ಥಿಗಳು, ದೇವರ ಪ್ರತಿಯೊಂದು ಕಾರ್ಯದ ಕುರಿತು ಮತ್ತು ಆತನ ಒಳ್ಳೇತನದ ಕುರಿತು ಮನನ ಮಾಡುವಂತೆ ಉತ್ತೇಜಿಸಲ್ಪಟ್ಟರು. ಹೀಗೆ ಮನನಮಾಡುವಾಗ, ದೇವರಿಗಾಗಿರುವ ತಮ್ಮ ಕೃತಜ್ಞತೆಯನ್ನು ಅವರು ತಮ್ಮ ಸೇವೆ ಮತ್ತು ತ್ಯಾಗಗಳಲ್ಲಿ ತೋರಿಸಲು ಶಕ್ತರಾಗುವರು.—ಕೀರ್ತನೆ 50:14, 23; 116:12, 17.

ಅದನ್ನು ಹೇಗೆ ಮಾಡಬಹುದೆಂಬುದರ ಬಗ್ಗೆ ಅನುಭವಗಳು ಮತ್ತು ಇಂಟರ್‌ವ್ಯೂಗಳು

ಗಿಲ್ಯಡ್‌ ಶಾಲೆಯ ಇನ್ನೊಬ್ಬ ಶಿಕ್ಷಕರಾದ ಮಾರ್ಕ್‌ ನೂಮರ್‌ರವರು, ಕಾರ್ಯಕ್ರಮದ ಮುಂದಿನ ಭಾಗವನ್ನು ನಿರ್ವಹಿಸಿದರು. ಇದರಲ್ಲಿ, ವಿದ್ಯಾರ್ಥಿಗಳು ತಮ್ಮ ತರಬೇತಿಯ ಅವಧಿಯಲ್ಲಿ ಆನಂದಿಸಿದ ಕ್ಷೇತ್ರ ಸೇವೆಯ ಅನುಭವಗಳನ್ನು ಹೇಳಿದರು. ವಿದ್ಯಾರ್ಥಿಗಳು ಗಿಲ್ಯಡ್‌ ಶಾಲೆಗೆ ಬರುವ ಮುಂಚೆ ಪೂರ್ಣ ಸಮಯದ ಶುಶ್ರೂಷೆಯಲ್ಲಿ ಸರಾಸರಿ ಸುಮಾರು 12 ವರ್ಷಗಳನ್ನು ಕಳೆದಿದ್ದರು. ಗಿಲ್ಯಡ್‌ ಶಾಲೆಯಲ್ಲಿರುವಾಗ, ಅವರು ವಿಭಿನ್ನ ಹಿನ್ನೆಲೆಗಳುಳ್ಳ ಜನರೊಂದಿಗೆ ಅನೇಕ ಬೈಬಲ್‌ ಅಭ್ಯಾಸಗಳನ್ನು ಆರಂಭಿಸಿದ್ದರು. ಮತ್ತು ‘ಯಾರಾರಿಗೆ ಎಂಥೆಂಥವರಾಗಬೇಕೋ ಅಂಥಂಥವರಾಗುವ’ ವಿಧವು ಅವರಿಗೆ ಈಗಾಗಲೇ ತಿಳಿದಿತ್ತೆಂಬುದನ್ನು ಇದು ತೋರಿಸಿತು.—1 ಕೊರಿಂಥ 9:22.

ವಿದ್ಯಾರ್ಥಿಗಳು ಅನುಭವಗಳನ್ನು ಹೇಳಿ ಮುಗಿಸಿದ ನಂತರ, ಚಾರ್ಲ್ಸ್‌ ಮಾಲಹನ್‌ ಮತ್ತು ವಿಲ್ಯಮ್‌ ಸ್ಯಾಮುವೆಲ್‌ಸನ್‌ರವರು, ಹಿಂದೆ ಗಿಲ್ಯಡ್‌ ಶಾಲೆಗೆ ಹಾಜರಾಗಿದ್ದ ಬೆತೆಲ್‌ ಕುಟುಂಬದ ಕೆಲವೊಂದು ಸದಸ್ಯರನ್ನು ಮತ್ತು ಸಂಚರಣ ಮೇಲ್ವಿಚಾರಕರನ್ನು ಇಂಟರ್‌ವ್ಯೂ ಮಾಡಿದರು. ಇಂಟರ್‌ವ್ಯೂ ಮಾಡಲ್ಪಟ್ಟಿದ್ದ ಸಹೋದರರಲ್ಲಿ ಒಬ್ಬರಾದ ರಾಬರ್ಟ್‌ ಪೆವಿ, ಗಿಲ್ಯಡ್‌ ಶಾಲೆಯ 51ನೆಯ ತರಗತಿಯಲ್ಲಿ ಪದವಿ ಪಡೆದುಕೊಂಡಿದ್ದರು. ಅನಂತರ ಅವರು ಫಿಲಿಪ್ಪೀನ್ಸ್‌ನಲ್ಲಿ ಸೇವೆ ಸಲ್ಲಿಸಿದರು. ಅವರು ಈ ಸಂಗತಿಯನ್ನು ತರಗತಿಯ ಜ್ಞಾಪಕಕ್ಕೆ ತಂದರು: “ಯಾವುದೇ ಒಂದು ಸಮಸ್ಯೆ ಏಳುವಲ್ಲಿ, ಅದನ್ನು ಬಗೆಹರಿಸುವ ವಿಷಯದಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯ ಸಲಹೆಯನ್ನು ಕೊಡುತ್ತಿರುತ್ತಾರೆ. ನಿಮಗಿಂತಲೂ ಹುಷಾರಾಗಿರುವ ಯಾರಾದರೊಬ್ಬರು ಇದ್ದೇ ಇರುತ್ತಾರೆ. ಅಂಥವರು ನಿಮಗಿಂತಲೂ ಹೆಚ್ಚು ಒಳ್ಳೆಯ ಸಲಹೆಯನ್ನು ನೀಡುವವರಾಗಿರುತ್ತಾರೆ. ಆದರೆ ನೀವು ದೇವರ ದೃಷ್ಟಿಕೋನ ಏನೆಂಬುದನ್ನು ಬೈಬಲಿನಲ್ಲಿ ಕಂಡುಹಿಡಿಯಲು ಪ್ರಯತ್ನಿಸುವಲ್ಲಿ, ಅದು ಸರಿಸಾಟಿಯಿಲ್ಲದ್ದು. ಏಕೆಂದರೆ ಅದು ಕೊಡುವ ಉತ್ತರವು ಯಾವಾಗಲೂ ಸರಿಯಾಗಿರುತ್ತದೆ.”

ಈ ಉತ್ತಮವಾದ ಆತ್ಮಿಕ ಕಾರ್ಯಕ್ರಮವನ್ನು ಪೂರ್ಣಗೊಳಿಸುತ್ತಾ, ಆಡಳಿತ ಮಂಡಲಿಯ ಸದಸ್ಯರಾದ ಜಾನ್‌ ಬಾರ್‌ರವರು, “ಯೆಹೋವನು ಸ್ವೀಕರಿಸುವಂತಹ ಪವಿತ್ರ ಸೇವೆಯನ್ನು ಸಲ್ಲಿಸುವುದು” ಎಂಬ ಮುಖ್ಯ ವಿಷಯವುಳ್ಳ ಭಾಷಣವನ್ನು ಕೊಟ್ಟರು. ನಾವು ಶುಶ್ರೂಷೆಯಲ್ಲಿ ನಮ್ಮ ಪವಿತ್ರ ಸೇವೆಯನ್ನು ಹೇಗೆ ಸಲ್ಲಿಸಬಹುದೆಂಬುದನ್ನು ಅವರು ತೋರಿಸಿದರು. ಅದು ಹೇಗೆಂದರೆ, ದೇವರು ಸ್ವೀಕರಿಸುವಂತಹ ಆರಾಧನೆಯನ್ನು ಸಲ್ಲಿಸುವಂತೆ ಸಹೃದಯವುಳ್ಳ ವ್ಯಕ್ತಿಗಳಿಗೆ ಸಹಾಯಮಾಡುವ ಮೂಲಕವೇ. ಮತ್ತಾಯ 4:10ರಲ್ಲಿರುವ ಯೇಸುವಿನ ಮಾತುಗಳನ್ನು ಓದಿದ ನಂತರ, ಸಹೋದರ ಬಾರ್‌ ಹೇಳಿದ್ದು: “ನಾವು ಯೆಹೋವನೊಬ್ಬನನ್ನೇ ಆರಾಧಿಸಬೇಕಾದರೆ, ಎಲ್ಲ ರೀತಿಯ ವಂಚಕ ವಿಗ್ರಹಾರಾಧನೆಯಿಂದ ದೂರವಿರಬೇಕು. ಇದರಲ್ಲಿ ಅತ್ಯಾಸೆ, ಐಶ್ವರ್ಯದ ಮೋಹ, ಮತ್ತು ಯಾವಾಗಲೂ ತನ್ನನ್ನೇ ಹೊಗಳಿಕೊಳ್ಳುವುದು ಸೇರಿರುತ್ತದೆ. ಈ ವಿಷಯದಲ್ಲಿ, 1940ರ ದಶಕದ ಆರಂಭದಿಂದ ಹಿಡಿದು, ಈ ವರೆಗೂ ನಮ್ಮ ಮಿಷನೆರಿಗಳು ಸ್ಥಾಪಿಸಿರುವ ಒಳ್ಳೆಯ ದಾಖಲೆಯ ಕುರಿತಾಗಿ ಯೋಚಿಸುವಾಗ ನಮಗೆ ಎಂಥ ಆನಂದವಾಗುತ್ತದೆ! ಗಿಲ್ಯಡ್‌ ಶಾಲೆಯ ಈ 108ನೆಯ ತರಗತಿಯ ಪದವೀಧರರಾಗಿರುವ ನೀವು ಸಹ ಅವರ ಒಳ್ಳೆಯ ಮಾದರಿಯನ್ನು ಅನುಸರಿಸುವಿರಿ ಎಂಬ ದೃಢಭರವಸೆ ನಮಗಿದೆ. ನೀವು ಯೆಹೋವನಿಗೆ ಪವಿತ್ರ ಸೇವೆಯನ್ನು ಸಲ್ಲಿಸಲಿರುವಿರಿ. ಏಕೆಂದರೆ ಕೇವಲ ಆತನೊಬ್ಬನೇ ಅದನ್ನು ಸ್ವೀಕರಿಸಲು ಅರ್ಹನು.”

ಈ ಭಾಷಣವು ಭಕ್ತಿವೃದ್ಧಿಯನ್ನುಂಟುಮಾಡುವ ಇಡೀ ಕಾರ್ಯಕ್ರಮಕ್ಕೆ ಅದು ಒಂದು ಒಳ್ಳೆಯ ಸಮಾಪ್ತಿಯಾಗಿತ್ತು. ಉಳಿದ ಸಮಯದಲ್ಲಿ, ಲೋಕದ ಸುತ್ತಲಿರುವ ಹಿತೈಷಿಗಳಿಂದ ಬಂದಂತಹ ಅಭಿವಂದನೆಗಳನ್ನು ತಿಳಿಸುವುದಕ್ಕೆ ಸಮಯವಾಗಿತ್ತು. ಮತ್ತು ವಿದ್ಯಾರ್ಥಿಗಳಿಗೆ ಪದವಿ ಪತ್ರಗಳನ್ನು ಕೊಡಲಾಯಿತು. ಅಷ್ಟುಮಾತ್ರವಲ್ಲದೆ, ತರಗತಿಯ ವಿದ್ಯಾರ್ಥಿಗಳು ತಾವು ಪಡೆದಂತಹ ತರಬೇತಿಗಾಗಿ ಗಣ್ಯತೆಯನ್ನು ವ್ಯಕ್ತಪಡಿಸುತ್ತಾ ಬರೆದಂತಹ ಒಂದು ಪತ್ರವನ್ನೂ ಓದಲಾಯಿತು. ಪದವಿ ಪಡೆಯುತ್ತಿದ್ದ ವಿದ್ಯಾರ್ಥಿಗಳಿಗೆ, ಅವರು ತಮ್ಮ ನೇಮಕಗಳ ವಿಷಯದಲ್ಲಿ ಮತ್ತು ಯೆಹೋವನ ಸೇವೆಮಾಡುವ ವಿಷಯದಲ್ಲಿ ನಂಬಿಗಸ್ತಿಕೆಯ ಗುಣವನ್ನು ತೋರಿಸುವಂತೆ ಪ್ರೋತ್ಸಾಹಿಸಲಾಯಿತು. ಅನಂತರ, 25 ದೇಶಗಳಿಂದ ಬಂದಿದ್ದ ಅತಿಥಿಗಳು ಮತ್ತು ಹಾಜರಿದ್ದವರೆಲ್ಲರೂ, ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದ ಸಂಗೀತ ಮತ್ತು ಪ್ರಾರ್ಥನೆಯಲ್ಲಿ ಜೊತೆಗೂಡಿದರು.

[ಪಾದಟಿಪ್ಪಣಿ]

^ ಪ್ಯಾರ. 2 ಈ ಕಾರ್ಯಕ್ರಮವು 2000ದ ಮಾರ್ಚ್‌ 11ರಂದು, ನ್ಯೂ ಯಾರ್ಕಿನ ಪ್ಯಾಟರ್‌ಸನ್‌ನಲ್ಲಿರುವ ವಾಚ್‌ಟವರ್‌ ಎಡ್ಯೂಕೇಷನಲ್‌ ಸೆಂಟರ್‌ನಲ್ಲಿ ನಡೆಯಿತು.

[ಪುಟ 23ರಲ್ಲಿರುವ ಚೌಕ]

ತರಗತಿಯ ಸಂಖ್ಯಾಸಂಗ್ರಹಣಗಳು

ಪ್ರತಿನಿಧಿಸಲ್ಪಟ್ಟ ದೇಶಗಳ ಸಂಖ್ಯೆ: 10

ನೇಮಿಸಲ್ಪಟ್ಟ ದೇಶಗಳ ಸಂಖ್ಯೆ: 17

ವಿದ್ಯಾರ್ಥಿಗಳ ಸಂಖ್ಯೆ: 46

ಸರಾಸರಿ ಪ್ರಾಯ: 34

ಸತ್ಯದಲ್ಲಿ ಸರಾಸರಿ ವರ್ಷಗಳು: 16

ಪೂರ್ಣ ಸಮಯದ ಶುಶ್ರೂಷೆಯಲ್ಲಿ ಸರಾಸರಿ ವರ್ಷಗಳು: 12

[ಪುಟ 24ರಲ್ಲಿರುವ ಚಿತ್ರ]

ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನಿಂದ ಪದವಿ ಪಡೆದ 108ನೆಯ ತರಗತಿ

ಈ ಕೆಳಗಿರುವ ಪಟ್ಟಿಯಲ್ಲಿ, ಸಾಲುಗಳು ಮುಂದಿನಿಂದ ಹಿಂದಕ್ಕೆ ಎಣಿಸಲ್ಪಟ್ಟು, ಪ್ರತಿ ಸಾಲಿನಲ್ಲಿ ಹೆಸರುಗಳು ಎಡದಿಂದ ಬಲಕ್ಕೆ ಪಟ್ಟಿಮಾಡಲ್ಪಟ್ಟಿವೆ.

(1) ಅಮಡೊರೀ, ಇ.; ಕೂಕ್‌, ಓ.; ಬರ್ನ್‌, ಎಮ್‌.; ಲೀ, ಎ. (2) ನೂಸಮ್‌, ಡಿ.; ಪಡೆರ್ಟ್‌ಸೊಲೀ, ಎ.; ಬಿಗ್ರಾ, ಎಚ್‌.; ಕಾಟೋ, ಟಿ.; ಗೇಟ್‌ವುಡ್‌, ಡಿ. (3) ಈಡ್‌, ಡಿ.; ಈಡ್‌, ಜೆ.; ವೆಲ್ಸ್‌, ಎಸ್‌.; ಜೇಮಿಸನ್‌, ಜೆ.; ಗೊನ್ಸಾಲೀಸ್‌, ಎಮ್‌.; ಗೊನ್ಸಾಲೀಸ್‌, ಜೆ. (4) ಕಾಟೋ, ಟಿ.; ಲೋನ್‌, ಡಿ.; ನಿಕ್ಲಾಸ್‌, ವೈ.; ಪ್ರೀಸ್‌, ಎಸ್‌.; ಫಾಸ್ಟರ್‌, ಪಿ.; ಈಬಾರಾ, ಜೆ. (5) ಅಮಡೊರೀ, ಎಮ್‌.; ಮ್ಯಾನಿಂಗ್‌, ಎಮ್‌.; ಜೇಮ್ಸ್‌, ಎಮ್‌.; ಬೋಸ್‌ಟ್ರೊಯೀಮ್‌, ಎ.; ಗೇಟ್‌ವುಡ್‌, ಬಿ.; ನೂಸಮ್‌, ಡಿ. (6) ಫಾಸ್ಟರ್‌, ಬಿ.; ಜೇಮಿಸನ್‌, ಆರ್‌.; ಹಿಫಿಂಗರ್‌, ಎ.; ಕೋಫೆಲ್‌, ಸಿ.; ಕೋಫೆಲ್‌, ಟಿ.; ಬರ್ನ್‌, ಜಿ. (7) ಹಿಫಿಂಗರ್‌, ಕೆ.; ಮ್ಯಾನಿಂಗ್‌, ಸಿ.; ಕುಕ್‌, ಜೆ.; ಬೋಸ್‌ಟ್ರೊಯೀಮ್‌, ಜೆ.; ಲೋನ್‌, ಇ.; ಪೇಡರ್ಟ್‌ಸೊಲೀ, ಎ. (8) ಜೇಮ್ಸ್‌, ಎ.; ವೆಲ್ಸ್‌, ಎಲ್‌.; ಪ್ರೀಸ್‌, ಡಿ.; ನಿಕ್ಲಾಸ್‌, ಇ.; ಲೀ, ಎಮ್‌.; ಈಬಾರಾ, ಪಿ.; ಬಿಗ್ರಾ, ವೈ.